Saturday, December 31, 2016

ಅಕ್ಕ(ಅ)ಣ್ಣ ... ಜನುಮದಿನಗಳ ಶುಭಾಶಯಗಳು

ಹೀಗೊಂದು ಸಂಭ್ರಮದ ನೆನಪು.. 

೧೯೭೯ಇಸವಿ .. ಕರುನಾಡಿನಲ್ಲಿ ಅನಂತ್ ನಾಗ್ ಮತ್ತು ಲಕ್ಷ್ಮಿ ಅದ್ಭುತ ಜೋಡಿಯಾಗುವತ್ತ ಹೆಜ್ಜೆ ಹಾಕಿದ್ದ ಕಾಲ. ಕನ್ನಡ ಚಿತ್ರದ ಇತಿಹಾಸದಲ್ಲಿಯೇ ಒಂದು ವಿಭಿನ್ನ ಚಿತ್ರ ಬಿಡುಗಡೆಯಾಗಿತ್ತು. ಅದುವೇ ನಾ ನಿನ್ನ ಬಿಡಲಾರೆ. ಯಶ್ವಸಿಯಾಗಿತ್ತು. ಶಿವಮೊಗ್ಗದ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಆರಂಭಿಕ ದೃಶ್ಯಗಳು ಪ್ರೇಮಮಯವಾಗಿದ್ದವು ,ಹಾಸ್ಯಮಯವಾಗಿದ್ದವು. ಬರು ಬರುತ್ತಾ ದೆವ್ವ ಭೂತಗಳ ಚೇಷ್ಟೆ ಜಾಸ್ತಿಯಾಗಿ ಹೆದರಿಕೆಯಿಂದ ಅನೇಕ ಮಹಿಳೆಯರು ಮಕ್ಕಳು ಚಿತ್ರಮಂದಿರದಿಂದ ಓಡಿಹೋಗಿದ್ದ  ಉದಾಹರಣೆಗಳು ಇದ್ದವು. ಒಂದೆರಡು ಪ್ರದರ್ಶನಗಳಲ್ಲಿ ತುಂಬು ಗರ್ಭಿಣಿಯರಿಗೆ ಹೆದರಿಕೆಯಾಗಿ ಹೆತ್ತ ಘಟನೆಗಳು ನೆಡೆದಿದ್ದವು. ಹೀಗೆ ಒಂದು ರೀತಿಯಲ್ಲಿ ಹಾಡುಗಳಿಂದ, ಅಭಿನಯದಿಂದ ದಕ್ಷ ನಿರ್ದೇಶನದಿಂದ ಚಿತ್ರ ದುಡ್ಡನ್ನು ಬಾಚುತ್ತಿತ್ತು. ಇನ್ನೊಂದು ಕಡೆ ವೀಕ್ಷಕರನ್ನು ಭಯಪೀಡಿತರನ್ನಾಗಿ ಮಾಡುತ್ತಿತ್ತು. 

"ಎಂದೆಂದಿಗೂ ನಾ ನಿನ್ನ ಬಿಡಲಾರೆ ಬಾ ಚಿನ್ನ" ಹಾಡಿನಲ್ಲಿ ಉಪಯೋಗಿಸುವ ಟಿಕ್ ಟಿಕ್ ಚಿಟಿಕೆಯ ವಸ್ತು ಬಹಳ ಪ್ರಸಿದ್ಧವಾಗಿತ್ತು. 

ಅಕ್ಕ ನನ್ನನ್ನು ಮತ್ತು ನನ್ನ ತಮ್ಮನನ್ನು ನಮ್ಮ ಮನೆಯ ಅಕ್ಕ ಪಕ್ಕದವರ ಜೊತೆಯಲ್ಲಿ ಆ ಚಿತ್ರಕ್ಕೆ ಕರೆದೊಯ್ದಳು. ನಮಗೂ ಖುಷಿ ಚಿತ್ರ ನೋಡುವುದೆಂದರೆ. ಆಗ ನನಗೆ ಆರು ವರ್ಷ.. ತಮ್ಮನಿಗೆ ೪ ವರ್ಷ.  ಜೋಶ್ ನಲ್ಲಿ ಚಿತ್ರ ನೋಡಲು ಶುರುಮಾಡಿದೆವು. ಆ ಕಾಲಕ್ಕೆ ಎಷ್ಟು ಅರ್ಥವಾಗಿತ್ತೋ ಬಿಟ್ಟಿತೋ ದೇವರಿಗೆ ಗೊತ್ತು. ಆದರೆ ಎಲ್ಲವೂ ಚೆನ್ನಾಗಿ ಇತ್ತು. ಅನಂತ್ ನಾಗ್ ಆಸ್ಪತ್ರೆಯಿಂದ ಅರ್ಧ ರಾತ್ರಿಯಲ್ಲಿ ಎದ್ದು ಹೊರಗೆ ಹೋಗುತ್ತಾರೆ.. ಅವರನ್ನೇ ಅನುಸರಿಸಿಕೊಂಡು ಲಕ್ಷ್ಮಿ ಹೋಗುತ್ತಾರೆ. ಒಂದು ಸ್ಮಶಾನವನ್ನು ಹೊಕ್ಕ ಅನಂತ್.. ಹಾಗೆ ನಿಲ್ಲುತ್ತಾರೆ .. ಲಕ್ಷ್ಮಿ ಹಿಂದಿನಿಂದ ಬಂದು ರೀ ಎನ್ನುತ್ತಾ ಬೆನ್ನು ಮುಟ್ಟುತ್ತಾರೆ.. ಸರ್ರನೆ ತಿರುಗುವ ಅನಂತ್... 

ಚಿತ್ರಮಂದಿರಲ್ಲಿ ಹೋ ಎಂದು ಕೂಗಾಟ.. ಚೀರಾಟ.. ದೆವ್ವ ಅನಂತ್ ಮೈಮೇಲೆ ಬಂದಿರುತ್ತೆ.. 

ಆಗ ನನ್ನ ಅಕ್ಕ ತೊಡೆಯ ಮೇಲೆ ಕೂರಿಸಿಕೊಂಡಿದ್ದ ನನ್ನನ್ನು ಮತ್ತು ನನ್ನ ತಮ್ಮನನ್ನು ಸೀಟ್ ಕೆಳಗೆ ಕೂರಿಸಿ ಕಿವಿ ಮುಚ್ಚುತ್ತಾಳೆ.. ಹೆದರಿಕೆಯಾಗಬಾರದು ಎಂದು.. ದೆವ್ವದ ದೃಶ್ಯ ಮುಗಿದ ನಂತರ ಮತ್ತೆ ಸೀಟ್ ಮೇಲೆ ಕೂರಿಸುತ್ತಾಳೆ (ಆಗ.. ಚಿಕ್ಕವರಿದ್ದ ಕಾರಣ ಟಿಕೆಟ್ ಇರುತ್ತಿರಲಿಲ್ಲ) ಹೀಗೆ ಚಿತ್ರ ಮುಗಿಯುವವರೆಗೂ ನೆಡೆಯುತ್ತದೆ. ಚಿತ್ರ ಮುಗಿದಮೇಲೆ, ಬೆವರನ್ನು ಒರೆಸಿ ಮನೆಗೆ ಕರೆತರುತ್ತಾಳೆ. ಇದು ಅಕ್ಕನ ಪ್ರೀತಿ ಮಮತೆ. 

ಈ ಘಟನೆ ಏತಕ್ಕೆ ಉಲ್ಲೇಖ ಮಾಡಿದೆ ಎಂದರೆ.. ಪುಟ್ಟ ಘಟನೆ ಆದರೆ ತನ್ನ ತಮ್ಮಂದಿರ ಮೇಲಿನ ಕಾಳಜಿ ವ್ಯಕ್ತವಾಗುತ್ತದೆ. ಇದೆ ಅಕ್ಕ ತಾನು ಬೆಳೆದು ನಮ್ಮನ್ನು ಬೆಳೆಸಿದಳು.. ಹಬ್ಬ ಹರಿದಿನ ಎಂದರೆ... ನಾನು ಮತ್ತು ನನ್ನ ತಮ್ಮ ವಠಾರದ ತುದಿಯಲ್ಲಿ ಅಕ್ಕ ಕೆಲಸ ಮುಗಿಸಿಕೊಂಡು ಬರುವುದನ್ನೇ ಕಾಯುತ್ತಿದ್ದೆವು. ಅದೆಷ್ಟೇ ಹೊತ್ತು ಆಗಲಿ ಅಕ್ಕ ನಮ್ಮನ್ನು ನಿರಾಶೆಗೊಳಿಸುತ್ತಿರಲಿಲ್ಲ.. ಹಾಗೆಯೇ ನಾವು ಕೂಡ ಅಕ್ಕನನ್ನು ಬಾಗಿಲ ಬಳಿಯೇ ಕಾಯುವುದು ಬಿಡುತ್ತಿರಲಿಲ್ಲ.. 

ಇಂತಹ ಅಕ್ಕನ ಜನುಮದಿನವಿಂದು.. ಇಡೀ ವಿಶ್ವವೇ ಈ ದಿನವನ್ನು ಆಚರಿಸುತ್ತದೆ ಕಾರಣ.. ಕ್ಯಾಲೆಂಡರ್ ವರ್ಷ ಇಂದಿಗೆ ಮುಗಿಯುತ್ತದೆ .. ನಾವೂ ಹಾಗೆ ಶುಭ ಕೋರೋಣ ಅಲ್ಲವೇ.. :-)

ಅಕ್ಕ ಜನುಮದಿನದ ಶುಭಾಶಯಗಳು... 

*****

ಅಣ್ಣ ಶಾಲಾ ಕಾಲೇಜುದಿನಗಳಲ್ಲಿ ಓದಿನಲ್ಲಿ ಮುಂದು.. ತಾನು ಓದಿದ್ದನ್ನು ಸರಿಯಾಗಿ ಗ್ರಹಿಸುವುದರಲ್ಲಿ ಎತ್ತಿದ ಕೈ .. ಚಿಕ್ಕ ವಯಸ್ಸಿನಿಂದಲೂ ಓದುವ ಅಭ್ಯಾಸವಿದ್ದ ಇವನಿಗೆ.. ದೊಡ್ಡ ಕಾದಂಬರಿಗಳು ನೀರು ಕುಡಿದಷ್ಟು ಸುಲಭವಾಗಿ ಇವನ ಪಕ್ಕಕ್ಕೆ ಕೂತುಬಿಡುತ್ತಿದ್ದವು. ಇವನು ಕೂಡ ಒಮ್ಮೆ ಅದರ ಮೈ ತಡವಿ ಓದಲು ಕುಳಿತನೆಂದರೆ ಊಟ ತಿಂಡಿ ಯಾವುದು ಬೇಕಿಲ್ಲ.. ಒಮ್ಮೆ ಒಂದು ಪುಸ್ತಕ ಹಿಡಿದನೆಂದರೆ ಮುಗಿಯಿತು.. ಅದು ಓದಿ ಮುಗಿಸಿಯೇ ಏಳುತ್ತಿದ್ದ.. ಆ ಪಾಟಿ ಓದುವ ಹಸಿವು ..  

ಅಕ್ಕ ಕಾಲೇಜಿನ ಪಠ್ಯ ಪುಸ್ತಕವಾಗಿದ್ದ ವಿಷಯಗಳನ್ನು ಅಕ್ಕನ ಸಹಪಾಠಿಗಳು ಇವನ ಹತ್ತಿರ ಬಂದು ಪಾಠ ಹೇಳಿಸಿಕೊಳ್ಳುತ್ತಿದ್ದರು. ಪಾಠ ಅಂದರೆ.. ಆ ದಿನಗಳ ನೋಟ್ಸ್ ನಲ್ಲಿನ ಸಂದೇಹಗಳನ್ನು ನಿವಾರಿಸಿಕೊಳ್ಳುತ್ತಿದ್ದರು. 
ಕಾಲೇಜು ದಿನಗಳಲ್ಲಿ ಅಕ್ಕನ ಸಹಪಾಠಿಗಳಿಗೆ "ಲಾಜಿಕ್" ವಿಷಯ ಕಬ್ಬಿಣದ ಕಡಲೆಯಾಗಿತ್ತು. ನನ್ನ ಅಣ್ಣ ಅಕ್ಕನಿಗಿಂತ ಕೆಳತರಗತಿಯಲ್ಲಿ ಓದುತ್ತಿದ್ದರೂ, ಇವನಿಗೆ "ಲಾಜಿಕ್" ವಿಷಯ ಇವನಿಗೆ ಕರತಲಾಮಲಕ.. ಈ ವಿಷಯವನ್ನು ಅಕ್ಕ ತನ್ನ ಸಹಪಾಠಿಗಳಿಗೆ ಹೇಳಿದ್ದರಿಂದ, ಇವನು ಕಿರಿಯನಾಗಿದ್ದರೂ ಅವರಿಗೆ ಗುರುವಾಗಿ ಬಿಟ್ಟಿದ್ದ. 

ಬಾಲ್ಯದಲ್ಲಿ ಪಟ್ಟ ಅವಮಾನಗಳು, "ಅಪ್ಪನ ಕೆಲಸವೂ ಸಿಗೋಲ್ಲ" ಎಂದು ಮೂದಲಿಕೆ ಕೇಳಿದ್ದ ಈ ಹುಡುಗ ಇಂದು ತನ್ನ ಕಾಲಮೇಲೆ ತಾನು ನಿಂತಿದ್ದು ಅಷ್ಟೇ ಅಲ್ಲದೆ, ತನ್ನದೇ ಒಂದು ಆಫೀಸ್ ಶುರುಮಾಡಿ, ಅನೇಕರಿಗೆ ಕೆಲಸ ಕೊಟ್ಟಿರುವುದು ಸಾಧನೆಯೇ ಹೌದು. 

ನಮ್ಮ ಮನೆಯಲ್ಲಿ ಇವನ ಮಾತು ವೇದವಾಕ್ಯ . ಇವನು ಆಯೋಜಿಸುವ ಕಾರ್ಯಕ್ರಮಗಳಿಗೆ ನಾನು ಮತ್ತು ನನ್ನ ತಮ್ಮ ಓಕೆ ಎಂದು ಹೇಳುವುದಷ್ಟೇ ಕೆಲಸ.,. ಅವನಿಗೆ ಹೆಗಲಿಗೆ ಹೆಗಲು ಕೊಟ್ಟು ಅವನ ಜೊತೆಯಲ್ಲಿ ನಿಂತರೆ ಸಾಕು.. ಹೂವಿನ ಸರ ಎತ್ತಿದಷ್ಟು ಸಲೀಸು ಎಲ್ಲಾ ಕಾರ್ಯಕ್ರಮಗಳು. 

ಡಿಸೆಂಬರ್ ೨೬ ರಂದು ಜನುಮದಿನ ಆಚರಿಸಿಕೊಂಡ ಇವನಿಗೆ ಆ ತಿಮ್ಮಪ್ಪನ ಆಶೀರ್ವಾದವೇ ಸಿಕ್ಕಿದೆ. ಕಾರಣ ಅಂದು ನಮ್ಮ ಇಡೀ ಪರಿವಾರ ಇವನ ಜನುಮದಿನವನ್ನು ಆಚರಿಸಲು ನಿರ್ಧರಿಸಿದ್ದು ತಿಮ್ಮಪ್ಪನ ಆವಾಸ ಸ್ಥಾನ ತಿರುಪತಿಯಲ್ಲಿ.. 

ವಿಜಯ ನಿನ್ನ ಹೆಸರಿನಂತೆ ನಿನ್ನ ಪ್ರತಿ ಕೆಲಸ, ಕನಸು, ಪರಿಶ್ರಮ ನಿನ್ನ ಹೆಸರಿನಂತೆಯೇ ಆಗಲಿ.. 

ಜನುಮದಿನದ ಶುಭಾಶಯಗಳು ವಿಜಯ... !!!!
*****

ಇದು ಡಬಲ್ ಧಮಾಕ.. ಡಿಸೆಂಬರ್ ನಲ್ಲಿ ಎರಡು ಎರಡು ಸಂಭ್ರಮಗಳು.. ಅಕ್ಕನದು ಡಿಸೆಂಬರ್ ೩೧, ಅಣ್ಣನದು ಡಿಸೆಂಬರ್ ೨೬.. ಇಬ್ಬರಿಗೂ ಒಂದೇ ಶುಭಾಷಯ ಒಟ್ಟಿಗೆ ಹೇಳುವ ಸಂಭ್ರಮ ನನ್ನದು ಮತ್ತು ನಮ್ಮೆಲ್ಲರದು. 

Sunday, December 11, 2016

ಸ್ಮಶಾನ.. ಪಾಠ ಕಲಿಸುವ "ಪಾಕ"ಶಾಲೆ

ಒಂದು ವಿಚಿತ್ರ ಮನಸ್ಸು.. ವಿಚಿತ್ರ ಆಸೆ.. ವಿಚಿತ್ರವಾಗಿ ಯೋಚಿಸುವ ಹೃದಯ..

ಅರಿವಿಲ್ಲ..

ಗೊತ್ತಾಗೊಲ್ಲ

ಕಾರಣ ಹೀಗೆ ಅಂತ ಹೇಳೋಕೆ ಆಗೋಲ್ಲ.. ನಾ ಯಾವಾಗಲೂ ತಮಾಷೆಯಾಗಿ ಹೇಳುತ್ತಿದ್ದೆ..

ಹೋಟೆಲಿನಲ್ಲಿ ಯಾರಾದರೂ ಸಿಕ್ಕರೆ.. ತಮ್ಮ ಕುರ್ಚಿಯ ಪಕ್ಕದಲ್ಲಿಯೇ ಇನ್ನೊಂದು ಕುರ್ಚಿ ಹಾಕಿ.. ಅಥವಾ ಬೆಂಚಾದರೆ ಸ್ವಲ್ಪ ಜರುಗಿಕೊಂಡು ಜಾಗ ಕೊಡುತ್ತಾರೆ..

ಬಸ್ ನಿಲ್ದಾಣದಲ್ಲಿ ಸಿಕ್ಕರೆ.. ಕೂರಲು ಪಕ್ಕಕ್ಕೆ ಒತ್ತಿ ಜಾಗ ಕೊಡುತ್ತಾರೆ..

ಮದುವೆ ಮುಂಜಿ ಮಾಡುವ ಛತ್ರದಲ್ಲಿ ಸಿಕ್ಕರೆ.. ಪಕ್ಕದಲ್ಲಿ ಅಥವಾ ಯಾವುದೋ ಮೂಲೆಯಲ್ಲಿ ಖಾಲಿ ಇರುವ ಚೇರ್ ಹುಡುಕಿ ಅದನ್ನು ತಂದು ತಮಗೆ ಇಷ್ಟವಾದವರ ಜೊತೆ ಹರಟುತ್ತಾರೆ..

ಆಸ್ಪತ್ರೆ, ದೇವಸ್ಥಾನ ಇಲ್ಲಿಯೂ ಕೂಡ ಇದೆ ಪುನರ್ವಾರ್ತನೆ ಆಗುತ್ತದೆ..

ಆದರೆ ನನ್ನ ಕುತೂಹಲ ಒಂದು ವಿಚಿತ್ರ ಹಂತ ಮುಟ್ಟಿತ್ತು.. ಸ್ಮಶಾನದಲ್ಲಿ ಬೇರೆಯವರ ಶವ ಸಂಸ್ಕಾರಕ್ಕೆ ಹೋದಾಗ ಅಲ್ಲಿ ನಮ್ಮ ಪರಿಚಯಸ್ತರು ಸಿಕ್ಕಾಗ ಹೇಗೆ ಇರುತ್ತದೆ.. ?

ಶವಸಂಸ್ಕಾರದ ಪದ್ಧತಿ ಮಣ್ಣು ಮಾಡುವುದು ಆದರೆ.. ಗೋರಿಗಳನ್ನು ಅಥವಾ ಸ್ಮಾರಕಗಳನ್ನು ಕಟ್ಟಿರುತ್ತಾರೆ.. ಆಗ ಯಾವುದಾದರೂ ಒಂದು ಸಮಾಧಿಯ ಮೇಲೆ ಕೂತು.. ಇನ್ನೊಂದು ಸಮಾಧಿಯ ಧೂಳನ್ನು ಕೈಯಲ್ಲಿ ಒರೆಸಿ ಕೂರಲು ಹೇಳುತ್ತಾರೆ.. ಆದರೆ ಶವಸಂಸ್ಕಾರದ ಪದ್ಧತಿ ಅಗ್ನಿಗೆ ಆಹುತಿ ಮಾಡುವುದು ಎಂದರೆ.. ಕೊಂಚ ಕಷ್ಟ.. ಆದರೂ ಬೆಂಗಳೂರಿನಂತಹ ಮಹಾನಗರಗಳಲ್ಲಿ... ವಾಸಿಸಲು ಕಡಿಮೆ ಆಗುತ್ತಿರುವ ಸನ್ನಿವೇಶದಲ್ಲಿ ಈ ರೀತಿಯ ಕಟ್ಟಿಗೆಯಲ್ಲಿ ಸುಡುವ ಪದ್ದತಿ ಕಡಿಮೆ.. ವಿದ್ಯುತ್ ಚಿತಾಗಾರ ಬಹಳವಾಗಿದೆ  .. ಆದರೂ ಕಟ್ಟಿಗೆಯಲ್ಲಿ ಸುಡುವ ಶಾಸ್ತ್ರ ಬದ್ಧ ಸಂಸ್ಕಾರ ನೋಡಲು ಚೆನ್ನ (ಕ್ಷಮೆ ಇರಲಿ) ಅಥವಾ ಆ ಶಾಸ್ತ್ರ ಸಂಪ್ರದಾಯದ ಪರಿ ಮನೆಯವರಿಗೆ ಕೊಂಚ ತೃಪ್ತಿ ತರುವುದು ಸಹಜ.. (ಇದು ನನ್ನ ವೈಯುಕ್ತಿಕ ಅಭಿಪ್ರಾಯ.. ಕಾರಣ ಅಪ್ಪನ ಸಂಸ್ಕಾರ.. ಕಣ್ಣು ಮುಚ್ಚಿ ಕಣ್ಣು ತೆರೆಯುದರ ಒಳಗೆ ವಿದ್ಯುತ್ ಚಿತಾಗಾರದಲ್ಲಿ ಮುಗಿದು ಹೋಗಿತ್ತು)..

ಇಂದು ನನ್ನ ಅಣ್ಣನ ಮನೆಯ ನೆರೆಹೊರೆಯವರ ಮನೆಯಲ್ಲಿ ಹಿರಿಯರು ಕಾಲನ ಕರೆಗೆ ಓಗೊಟ್ಟು ತಮ್ಮನ್ನು ಪ್ರೀತಿಸುವ ಪರಿವಾರವನ್ನು ತ್ಯಜಿಸಿ ಹೊರನೆಡೆದಿದ್ದರು.. ತುಂಬು ಸಂಸಾರದಿಂದ ಬಂದಿದ್ದ ಅವರು.. ಸುಮಾರು ೬೦ ವಸಂತಗಳ ಸುವರ್ಣ ವೈವಾಹಿಕ ಜೀವನವನ್ನು ಪೂರೈಸಿ ತಮ್ಮ ಕುಟುಂಬದ ಏಳು ಬೀಳುಗಳನ್ನು ಸಮನಾಗಿ ಕಂಡು ಅದರ ಏಳಿಗೆಗೆ ಶ್ರಮಿಸಿದ ಜೀವ ಇಂದು ಎಲ್ಲರ ಹೃದಯಕಮಲದಲ್ಲಿ  ನೆನಪುಗಳನ್ನು ಬಿಟ್ಟು ಹೊರಟಿದ್ದರು.

ಅವರ ದುಃಖ ಅವರಿಗೆ..ಮಡದಿ, ಅಮ್ಮ, ತಂಗಿ, ಚಿಕ್ಕಮ್ಮ, ದೊಡ್ಡಮ್ಮ, ಅಜ್ಜಿ,  ಆಂಟಿ ಹೀಗೆ ಹಲವಾರು ಬಂಧಗಳ ಹ್ಯಾಟ್ ಧರಿಸಿದ್ಧ ಆ ಹಿರಿಯ ಜೀವ ಇಂದು ಬರಿ ನೆನಪಾಗಿ ಉಳಿದದ್ದು ಎಲ್ಲರಲ್ಲೂ ದುಃಖವನ್ನು ಒತ್ತರಿಸಿ ತರುತ್ತಿತ್ತು..

ಚಿತಾಗಾರಕ್ಕೆ ಹೋದಾಗ.. ಸಹಜವಾಗಿಯೇ ನನ್ನ ಮನಸ್ಸು ಕದಡಿದ ಸರೋವರವಾಗಿತ್ತು.. ಸಾವು ಮನುಷ್ಯನನ್ನು ಹೇಗೆ ಬದಲಿಸುತ್ತೆ (ಕ್ಷಣ ಮಾತ್ರ.. ಆದರೂ ಸರಿ) ಸ್ಮಶಾನ ವೈರಾಗ್ಯ.. ಅಯ್ಯೋ ಬದುಕು ಇಷ್ಟೇ.. ಇಂದು ಅವರು ನಾಳೆ ನಾವು.. ಈ ರೀತಿಯ ಮಾತುಗಳು ಸಹಜವಾಗಿಯೇ ಕೇಳಿಬರುತ್ತಿದ್ದವು.. ಇಲ್ಲಿಯೂ ಅದಕ್ಕೆ ಹೊರತೇನೂ ಆಗಿರಲಿಲ್ಲ.. ಆದರೆ ನನ್ನ ವಿಚಿತ್ರ ಕಣ್ಣುಗಳಿಗೆ ಕಂಡ ಕೆಲವು ದೃಶ್ಯಗಳು ಅಕ್ಷರ ರೂಪದಲ್ಲಿ ಬರಲು ಶ್ರಮಿಸಿದವು.. ಹಾಗಾಗಿ ಈ ಲೇಖನ ನಿಮ್ಮ ಮುಂದೆ..

ಒಳಗೆ ಹೋಗುತ್ತಲೇ.. ಒಂದು ಮಾರುತಿ ವ್ಯಾನ್.. ಅದರೊಳಗೆ ಕೂರಲು ಆಗದಷ್ಟು ಮಡಿಕೆ ಕುಡಿಕೆಗಳು ಮತ್ತು ಸಂಸ್ಕಾರಕ್ಕೆ ಬೇಕಾಗುವ ಪದಾರ್ಥಗಳು.. ಅಚ್ಚರಿ ಎನಿಸಿತು.. ಆದರೂ ಈ ಮಹಾನಗರದಲ್ಲಿ ಈ ರೀತಿಯ ದುಃಖತಪ್ತ ಸಂದರ್ಭದಲ್ಲಿ ಬೇಕಾಗುವ ಪರಿಕರಗಳನ್ನು ಹುಡುಕಿಕೊಂಡು  ಅಲೆಯುವುದನ್ನು ಕಡಿಮೆ ಮಾಡಲು ಸಿದ್ಧತೆಕಂಡು ಮನಸ್ಸಿಗೆ ಆಹ್ ಎಲ್ಲವೂ ಪೂರ್ವಸಿದ್ಧತಾಮಯ ಎನ್ನಿಸಿತು..
ಎಲ್ಲವೂ ಸಿದ್ಧ.. ಈ ಕ್ಷಣಿಕ ಜಗತ್ತಿನಲ್ಲಿ ಓಡಾಡಲು ಸಮಯವಿಲ್ಲ.. ಹಾಗಾಗಿ ನಾ ಸಿದ್ಧ !!!

ಅಲ್ಲಿನ ಸಿಬ್ಬಂಧಿಗಳಿಗೆ ಸಾವು, ಕಳೇಬರ, ಡೆಡ್ ಬಾಡಿ, ಸಂಸ್ಕಾರ ಇವೆಲ್ಲವೂ ನಾವು ದಿನನಿತ್ಯ ಕಚೇರಿಗೆ ಹೋಗಿ ಫೈಲ್, ಲ್ಯಾಪ್ಟಾಪ್, ಪ್ರಾಜೆಕ್ಟ್ ಅನ್ನುವಂತೆ ಅದು ಅವರ ಕೆಲಸ ಅಲ್ಲವೇ.. ನಾವುಗಳು ಅಲ್ಲಿಗೆ ಹೋಗಿ ಬಂದ ಮೇಲೆ ಸ್ನಾನ ಮಾಡುತ್ತೇವೆ .. ಅವರು ಸ್ನಾನ ಮಾಡಿಕೊಂಡು ಅಲ್ಲಿಗೆ ಬರುತ್ತಾರೆ.. ಅಷ್ಟೇ ವ್ಯತ್ಯಾಸ..

ಒಬ್ಬೊಬ್ಬರದು ಒಂದೊಂದು ರೀತಿಯ ಸಂಪ್ರದಾಯ.. ಕೆಲವರು ಮಂತ್ರಘೋಷಗಳ ನಡುವೆ ಕಾರ್ಯ ನೆಡೆಸಿದರೆ.. ಕೆಲವರದು ತಮಟೆ ಸದ್ದಿನ ಜೊತೆಯಲ್ಲಿ.. ಇನ್ನೂ ಕೆಲವರದು ಆಗಲೇ ಮೈಯಲ್ಲಿ ತುಂಬಿಕೊಂಡ ಪರಮಾತ್ಮನ ವರಪ್ರಸಾದದಿಂದ ತೂರಾಡುತ್ತಾ ತಮಗೆ ಬಂದ ರೀತಿಯಲ್ಲಿ ಶವಸಂಸ್ಕಾರ ಮಾಡುವ ಪದ್ಧತಿ.. ಏನೇ ಆದರೂ ಅವರವರ ಭಾವಕ್ಕೆ ಅವರವರ ಭಕುತಿಗೆ ... !
ತಾವು ಬದಕಲು... ಬದುಕಿ ಬಾಳಿದ ಜೀವಿಗೆಕಾಯುತ್ತಿರುವ ಕ್ಷಣ 

ಆ ರುದ್ರಭೂಮಿಯ ಒಬ್ಬ ಕೆಲಸಗಾರ ಅಕ್ಷರಶಃ  ತೂರಾಡುತ್ತಾ ಬಂದ.. ಎಲ್ಲವೂ ಸಿದ್ಧವಾಗಿದೆಯೇ.. ಏನಾದರೂ ಬೇಕಿತ್ತೆ.. ಹೇಳಿ.. ಅಂದಾಗ.. ಯಾರೂ ಮಾತಾಡದೆ ಇದ್ದದ್ದು ನೋಡಿ.. ಆಗಲಿ.. ಬಾಡಿ ಬರಲಿ, ಪೂಜಾರಪ್ಪ ಬರಲಿ, ಸೌದೆ ಬರಲಿ.. ಬರಲಿ ಬರಲಿ ಬರಲಿ ಬರಲಿ.. ಹೀಗೆ ಏನೇನೂ ಬಡಬಡಿಸುತ್ತಾ ಹೋದ..

ಹಿರಿಯ ಚೇತನವನ್ನು ಕಳೆದುಕೊಂಡ ನೋವು ಒಬ್ಬರಿಗೆ.. ಆ ಸಮಯದಲ್ಲಿಯೂ ತಮ್ಮ ವೃತ್ತಿಪರತೆ, ತಮ್ಮ ಹೊಟ್ಟೆ ಪಾಡು ನೋಡಿಕೊಳ್ಳುವ ತವಕ ಇನ್ನೊಬ್ಬರಿಗೆ.. ನಗು ಬರುತ್ತೆ ಆದರೂ ಇದು ಸಹಜಧರ್ಮ.. ನಮ್ಮ ನೋವು ನಮಗೆ.. ಅವರ ಹೊಟ್ಟೆ ಪಾಡು ಅವರಿಗೆ.. ತಪ್ಪಿಲ್ಲ..

ಚಿತೆ ಸಿದ್ಧಮಾಡುವ ಸಿಬ್ಬಂದಿ ಕೂಡ.. "ಅಯ್ಯೋ ಬಿಡಿ ಅಣ್ಣ.. ದಿನಕ್ಕೆ ಎಷ್ಟು ನೋಡ್ತೀವಿ.. ನಮಗೇನೂ ಹೊಸದೇ.. ನಮಗೆ ಇಷ್ಟು ಕೊಡಿ.. ಸರಿಯಾಗಿ ಚಿತೆ ಉರಿದು ಬೂದಿಯಾಗುವವರೆಗೂ ನಾವು ನೋಡಿಕೊಳ್ಳುತ್ತೇವೆ.. ಆಫೀಸ್ ಕಟ್ಟುವ ಹಣಕ್ಕೂ ನಮಗೂ ಸಂಬಂಧ ಇಲ್ಲ.. ನಾವು ತಾನೇ ಇದನ್ನು ಮೆಂಟೇನ್ ಮಾಡೋದು .. ಇಲ್ಲಿ ಚೌಕಾಸಿ ಮಾಡಬಾರದ್ ಅಲ್ಲವೇ ಅಣ್ಣ .. " ಮಾತಿರಲಿಲ್ಲ ನನ್ನ ಬಳಿ..

ಎಲ್ಲವೂ ಸರಿ.. ಎಲ್ಲವೂ ತಪ್ಪು.. ಯಾವುದು ಸರಿ ಯಾವುದು ತಪ್ಪು.. ಅರಿವಿಲ್ಲ.. ಆ ಕ್ಷಣಕ್ಕೆ ಎಲ್ಲವೂ ಸರಿ ಎನ್ನಿಸತೊಡಗಿತು ಅವರವರ ದೃಷ್ಟಿಕೋನದಲ್ಲಿ.. :-)

ಕೇಶಮುಂಡನ ಮಾಡುವ ವ್ಯಕ್ತಿ.. ಅಲ್ಲಿಯೇ ಬಿದ್ದಿದ್ದ ಇದ್ದಲಿನಲ್ಲಿ ತನ್ನ ಮೊಬೈಲ್ ಸಂಖ್ಯೆ ಬರೆದದ್ದು ನನಗೆ ಮೊದಲು ನಗು ತಂದರೂ.. ನಂತರ ಅಬ್ಬಾ ಇಂತಹ ಅಡ್ವಟೈಸ್ಮೆಂಟ್ / ಮಾರ್ಕೆಟಿಂಗ್ ಅನ್ನಿಸಿತು..  ಆತನಿಗೂ ಇದು ತನ್ನ ಕೆಲಸ.. ಸರಿ ಎನ್ನಿಸಿತು.. ಹೌದು ಕೆಲವು ದೊಡ್ಡ / ಪುಟ್ಟ ವಿಷಯಗಳು ಭೂತಾಕಾರವಾಗಿ ಕಾಡುವುದೇ ಇಂತಹ ಸನ್ನಿವೇಶದಲ್ಲಿ.. ಎಲ್ಲವೂ ಇದ್ದರೂ.. ಕೇಶ ಮುಂಡನ ಮಾಡುವವ ಇಲ್ಲದೆ ಹೋದರೇ.. ರೇ ರೇ ರೇ ರೇ... !
ಕಾಗುಣಿತ ಹೇಗೆ ಇರಲಿ.. ಆದರೆ ವೃತ್ತಿಪರತೆ ಮೆಚ್ಚುವ ಅಂಶ.. 
ಹೀಗೆ ನನ್ನ ಮಾನಸ ಸರೋವರದಲ್ಲಿ ಅಲೆಅಲೆಯಾಗಿ ಏಳುತ್ತಿದ್ದ ಅನೇಕ ಪ್ರಶ್ನೆ ಉತ್ತರಗಳ ನಡುವೆ.. ಆ ಬಿರುಬಿಸಿಲಿಗೆ ತಲೆ ನೋವು ಶುರುವಾಗಿ.. ಹಾಗೆ ಕಂಬಕ್ಕೆ ಒರಗಿ ಕೂತಿದ್ದೆ.. ಆ ಕಡೆ ಕೇಶ ಮುಂಡನ ಕಾರ್ಯ ತುಸು ತಡವಾಗಿತ್ತು.. ಕಾರಣ ಕೇಶ ಮುಂಡನ ಮಾಡುವವ ಇನ್ನೊಂದು ಕಡೆ ಬ್ಯುಸಿ.. ಕಾಯುತ್ತಿದ್ದ ಕೂತಿದ್ದವರು ಹಲವರು ಇಲ್ಲಿ.. ಕಾಯುತ್ತಾ ಕಾಯುತ್ತಾ ಹಾಗೆ ಕಂಬಕ್ಕೆ ಒರಗಿ ಕೂತಿದ್ದ ನನಗೆ, ಯೋಚನಾ ಲಹರಿಯ ಅಲೆಗಳು ಮನದ ಕಡಲಿಗೆ ಬಡಿದು ಬಡಿದು ಹಾಗೆ ಕಣ್ಣುಗಳು ತಮ್ಮ ಕೋಣೆಯ ಕದವನ್ನ ಮುಚ್ಚಿಕೊಂಡ ಹೊತ್ತು..

ಏನಿಲ್ಲಾ ಎಂದರೂ ಸುಮಾರು ಇಪ್ಪತ್ತು ಇಪ್ಪತೈದು ನಿಮಿಷ ಮನಸ್ಸು ಆ ಸ್ಥಳದಿಂದ ಆಗಸ ಮಾರ್ಗದಲ್ಲಿ ದೇವಲೋಕದಲ್ಲೆಲ್ಲಾ ಓಡಾಡುತ್ತಿತ್ತು.. ಭುವಿಯಲ್ಲಿ ನೆಡೆಯುತ್ತಿದ್ದ ಕಾರ್ಯಕ್ರಮಗಳು ನನ್ನನ್ನು ಅಲ್ಲಿಂದ ಕರೆತರಲು ಸೋತಿದ್ದವು..

ಟಪಕ್ .. ಧಪ್.. ಮಡಿಕೆ ಒಡೆದ ಸದ್ದಿಗೆ.. ಅಚಾನಕ್ ನನ್ನ ಮನಸ್ಸು ಭುವಿಗೆ ಇಳಿಯಿತು.. ಅರೆ ಇದೇನಿದು.. ಸ್ಮಶಾನದಲ್ಲಿ ನಿದ್ದೆಯೇ.. ಅಯ್ಯೋ ದೇವರೇ.. ಅನ್ನಿಸಿತು.. ಯಾರು ಗಮನಿಸಿದ್ದರೋ ಇಲ್ಲವೋ ತಿಳಿಯದು.. ಆದರೆ ನಾ ಇಪ್ಪತ್ತು ಇಪ್ಪತ್ತೈದು ನಿಮಿಷ ನಿದ್ರಿಸಿದ್ದು ಮಾತ್ರ ಸುಳ್ಳಲ್ಲ.. {ನನಗೆ ಅರಿವಿಲ್ಲದೆ ಒಂದು ಆಸೆ ಕಾಡುತ್ತಿತ್ತು... ಸ್ಮಶಾನದಲ್ಲಿ ನಿದ್ದೆ ಮಾಡಬಹುದೇ.. ಮಾಡಿದರೆ ಅದರ ಸವಿ ಹೇಗೆ ಇರುತ್ತದೆ.. ಅದು ನೆರೆವೇರಿತು.. ವಿಚಿತ್ರ ಆಸೆ.. ಆದರೆ ನಿಜ :-)}

ಕಣ್ಣು ಬಿಟ್ಟು ನೋಡಿದೆ.. ಆಗಲೇ ಮುಂದಿನ ಕಾರ್ಯಗಳು ನೆರೆವೇರುತ್ತಿದ್ದವು... ಇನ್ನೇನು ಸಂಸ್ಕಾರದ ಅಂತಿಮ ಹಂತ ತಲುಪಿತ್ತು.. ಬಂದವರೆಲ್ಲ ತಮ್ಮ ಅಂತ್ಯ ನಮನಗಳನ್ನು ಆ ಹಿರಿಯ ಜೀವಕ್ಕೆ ಸಲ್ಲಿಸಿದ್ದು ಆಗಿತ್ತು.. ಕೆಲವೇ ಕ್ಷಣಗಳು ದೇವರು ಮಾಡಿದ ಈ ಜೀವವೆಂಬ ಮಡಿಕೆ ಅಗ್ನಿಯ ಜೊತೆಯಲ್ಲಿ ಆಲಿಂಗನಕ್ಕೇ ಸಿದ್ಧವಾಗಿತ್ತು.. ಧಗ ಧಗ ಉರಿಯುತ್ತಿದ್ದ ಅಗ್ನಿ ತನ್ನ ಕೆನ್ನಾಲಿಗೆಯನ್ನು ಚಾಚಿಕೊಂಡು ಆ ಹಿರಿಯ ಜೀವವನ್ನು ತನ್ನ ಮಡಿಲಿಗೆ ಸೇರಿಸಿಕೊಂಡ.. ಇನ್ನೊಂದು ಐದಾರು ತಾಸುಗಳು.. ಹಲವಾರು ವಸಂತಗಳನ್ನು ಕಂಡ ಆ ಬ್ರಹ್ಮನ ಕೃತಿ ಒಂದು ಮಡಿಕೆಯೊಳಗೆ ಬೂದಿಯಾಗಿ.. ಕಾವೇರಿ ಮಡಿಲನ್ನು ಸೇರುವ ಕ್ಷಣಗಳು ದೂರವಿರಲಿಲ್ಲ..

ಸುಮಾರು ಹೊತ್ತು ಆ ಚಿತೆಯನ್ನೇ ನೋಡುತ್ತಾ ನಿಂತಿದ್ದೆ.. ಕಾಲುಗಳು ನೋಯುತ್ತಿದ್ದವು.. ತಲೆ ಸಿಕ್ಕಾ ಪಟ್ಟೆ ಸಿಡಿಯುತ್ತಿತ್ತು.. ತಲೆಯ ಮೇಲೆ ಯಾರೋ ಗದಾಪ್ರಹಾರ ಮಾಡುತ್ತಿರುವಂತೆ.. . ಮನಸ್ಸು ಭಾರವಾಗಿತ್ತು.. ಪಕ್ಕದಲ್ಲಿ ನೋಡಿದೆ.. ಇನ್ನೊಂದು ದೇಹದ ಅಂತ್ಯಸಂಸ್ಕಾರಕ್ಕೆ ಕಾಯುತ್ತಿದ್ದ ಚಿತೆಯ ಮೇಲೆ ಬಾಳಿ ಬದುಕಬೇಕಾದ ಪಾರಿವಾಳ ಕೂತಿತ್ತು..

ತನ್ನ ನಿತ್ಯ ಬದುಕಿಗೆ ಆಹಾರ ಹುಡುಕುತ್ತಿರುವ ಪಾರಿವಾಳ!!!

ಒಂದರ ಸಾಹಸಿ ಬದುಕಿನ ಅಂತ್ಯ.. ಇನ್ನೊಂದರದ್ದು ಬದುಕಲು ಪಡುತ್ತಿದ್ದ ಸಾಹಸ  :-(

Tuesday, December 6, 2016

ಕಣ್ಣಂಚಿನ ನೋಟ - 360° ಕೋನದಲ್ಲಿ

ಕಣ್ಣಂಚಿನ ನೋಟ - 90° ಕೋನದಲ್ಲಿ
ಕಣ್ಣಂಚಿನ ನೋಟ - 180° ಕೋನದಲ್ಲಿ
ಕಣ್ಣಂಚಿನ ನೋಟ - 270° ಕೋನದಲ್ಲಿ

ತನ್ನ ಮನಗೆದ್ದ ಹುಡುಗಿ ವೀಣಾ.. ಬಂದಳು.. ನೋಡಿದಳು.. ಮಾತಾಡಿದಳು.. ಒಮ್ಮೆ ಜೋರಾಗಿ ಚಿಗುಟಿಕೊಂಡ.. ಹೌದು ಕನಸಲ್ಲ ಇದು.. ಉದಯ ಮ್ಯೂಸಿಕ್ ನಲ್ಲಿ ಕಿಲಾಡಿಜೋಡಿ ಚಿತ್ರದ "ಕನಸಿನಲಿ ನೋಡಿದೆನು ಕನವರಿಸಿ ಕೂಗಿದೆನು" ಹಾಡು ಬಂದಾಗಲಂತೂ.. ಅರೆ ಕನಸಲ್ಲ ಇದು ನನಸು.. ಎಂದಿತು ಕೃಷ್ಣಕಾಂತನ ಮನಸ್ಸು..

ಹೋದವಾರವಷ್ಟೇ ತಂದಿದ್ದ ನೀಲಿ ಜೀನ್ಸ್ ಪ್ಯಾಂಟನ್ನು ಮನೆಯ ಹತ್ತಿರವಿದ್ದ ಟೇಲರ್ ಬಳಿಕೊಂಡೊಯ್ದು ಉದ್ದ ಸರಿಮಾಡಿಸಿಕೊಂಡು ಬರಲು ಹೊರಟ.. ಮನಸ್ಸು ಹಗುರಾಗಿತ್ತು.. "ನಾಳಿನ ಭಾಗ್ಯಕೆ ಕಾದಿದೆ ಮಡಿಲು" ಬಭೃವಾಹನ ಚಿತ್ರದ ಹಾಡಿನ ಒಂದು ಎಳೆ ಮನದಲ್ಲಿ ಹರಿದಾಡಿತು..  ಬೆಳಿಗ್ಗೆ ಪಾರ್ಕಿನ ಬಳಿ ಮಾತಾಡಿದಾಗಿನಿಂದ .. ಊಟ ತಿಂಡಿ ಏನೂ ಬೇಕಿರಲಿಲ್ಲ.. ಆದರೆ ಎಷ್ಟು ಹೊತ್ತು ಆ ನಶೆಯಲ್ಲಿ ಇರೋಕಾಗುತ್ತೆ ಅಲ್ವೇ.. ಹೊಟ್ಟೆಯಲ್ಲಿದ್ದ ಹುಳಗಳು.. ಬೇಕೇ ಬೇಕು ಊಟ ಬೇಕು ಅಂತ ಕೂಗಲು ಶುರುಮಾಡಿತು..

ಟೇಲರ್ ಅಂಗಡಿಗೆ ಪ್ಯಾಂಟ್ ಕೊಟ್ಟು.. ಹತ್ತು ನಿಮಿಷ ಬರುತ್ತೇನೆ ಎಂದು ಹೇಳಿ. ಹತ್ತಿರದಲ್ಲಿಯೇ ಇದ್ದ ಪಾನಿಪುರಿ ಗಾಡಿಯ ಬಳಿ ಹೆಜ್ಜೆ ಹಾಕಿದ.. ಪಾನಿಪುರಿ ಗಾಡಿಯವನಿಗೆ ಒಂದು ಸಲ್ಯೂಟ್ ಹೊಡೆದ.. "ಸರ್ ನಮಸ್ಕಾರ.. ಒಂದೈದು ನಿಮಿಷ ನಿಮ್ಮ ಬ್ರಾಂಡ್ ರೆಡಿ ಆಗುತ್ತೆ"

ವಾರದಲ್ಲಿ ಕನಿಷ್ಠ ಎರಡು ಮೂರು ಬಾರಿಯಾದರೂ ಅಲ್ಲಿ ಪಾನಿ ಪುರಿ ತಿನ್ನುತ್ತಿದ್ದರಿಂದ ಚಿರಪರಿಚಿತನಾಗಿದ್ದ .. ಮತ್ತೆ ಅದೇ ಗುಂಗಿಗೆ ಶರಣಾದ..ಏನೋ ಒಂದು ರೀತಿಯ ಸುಖ ಸಿಗುತ್ತಿತ್ತು..

"ಸರ್ .. ಗುರುಗಳೇ.. ಯಜಮಾನರೇ.." ಎಂದು ಹೇಳಿ.. ಗಾಡಿಯವ ಅವನ ಕೈ ಮುಟ್ಟಿದಾಗಲೇ.. ಮತ್ತೆ ಭುವಿಗೆ ಬಂದದ್ದು..
ಒಂದು ರಾಶಿ ಮಾತಾಡುವ ಇವರು ಯಾಕೆ ಸೈಲೆಂಟ್.. ಈ ಪ್ರಶ್ನೆ ಗಾಡಿಯವನ ಮನದಲ್ಲಿ ಮೂಡಿದ್ದರೂ, ಸವಿಯಾದ ಪಾನಿಪುರಿ ಕಾಲೇಜು ಯುವತಿಯರ ಬಾಯಲ್ಲಿ ಮಾಯವಾಗುವಂತೆ, ಗಾಡಿಯವನ ಮನದಲ್ಲಿ ಹಾಗೆ ಮರೆಯಾಯಿತು.. ಕಾರಣ ಸಂಜೆ.. ಅವನ ಗಾಡಿಗೆ ಗ್ರಾಹಕರು ಹೆಚ್ಚು.. :-)

ತನ್ನ ಯಥಾಪ್ರಕಾರದ ಖೋಟಾ ಮುಗಿಸಿ.. ಟೇಲರ್ ಅಂಗಡಿಯಿಂದ ಪ್ಯಾಂಟ್ ಪಡೆದು ಮನೆಗೆ ಬಂದ.. ಗಡಿಯಾರ ನೋಡಿದಾಗ ಒಂಭತ್ತು ಮೂವತ್ತಾಗಿತ್ತು.. ತನ್ನ ಇಷ್ಟದ ಕಾರ್ಯಕ್ರಮ "ಥಟ್ ಅಂತ ಹೇಳಿ" ಕಾರ್ಯಕ್ರಮ ನೋಡುತ್ತಾ ಹಾಗೆ ಮಂಚದ ಮೇಲೆ ಉರುಳಿಕೊಂಡ.. ನಿದ್ರಾದೇವಿ ಯಾವಾಗ ಅವರಿಸಿಕೊಂಡಿದ್ದಳೋ ಅರಿವಿಲ್ಲ..

ಬೆಳಿಗ್ಗೆ ಎದ್ದಾಗ ಹತ್ತು ಘಂಟೆ.. ಅಲ್ಲಿಯ ತನಕ ರಾತ್ರಿ ಹಾಕಿದ್ದ ಟಿವಿ ಓಡುತ್ತಲೇ ಇತ್ತು.. ಯಥಾ ಪ್ರಕಾರ .. ತನ್ನ ಕಾರ್ಯಕ್ರಮ ಮುಗಿಸಿ..  ಆಂಜನೇಯ ದೇವಸ್ಥಾನಕ್ಕೆ ಹೋದ.. ಕೆಲ ಹೊತ್ತು ಅಲ್ಲಿಯೇ ಕೂತು ಜಪ ಮಾಡಿಕೊಂಡು ಕಣ್ಣು ತೆಗೆದಾಗ ಮನಸ್ಸು ತಹಬದಿಗೆ ಬಂದಿತ್ತು.. ಚಪ್ಪಲಿ ಮೆಟ್ಟಿಕೊಂಡು ತನ್ನ ಬೈಕ್ ಹತ್ತಿರ ಬಂದಾಗ.. ಒಂದು ಚೀಟಿ ಕನ್ನಡಿಗೆ ಮೆತ್ತಿಕೊಂಡದ್ದು ಕಾಣಿಸಿತು..ಯಾವುದೋ ಜಾಹಿರಾತಿನ ಚೀಟಿ ಎಂದು ಬಿಸಾಕಲು ಹೋದವನಿಗೆ ಕಂಡದ್ದು.. "ಸರ್ .. ಕ್ಷಮಿಸಿ.. ಸಮಯ ಹೇಳೋದು ಮರೆತಿದ್ದೆ.. ಸಂಜೆ ಏಳು ಘಂಟೆಗೆ ನ್ಯೂ ಶಾಂತಿ ಸಾಗರ್ ಹತ್ತಿರ ಬನ್ನಿ.. ಒಂದು ಟೇಬಲ್ ಕಾದಿರಿಸುತ್ತೇನೆ.. "

ಏನಪ್ಪಾ ಇದು... ಏನು ನೆಡೆಯುತ್ತಿದೆ.. ಈಕೆ ಹುಡುಗಿಯೇ.. ಪತ್ತೇದಾರಳೆ.. ಏನೂ ಅರಿವಾಗುತ್ತಿಲ್ಲ.. ಗೊಂದಲದ ಗೂಡಾಗಿದ್ದ ಕೃಷ್ಣಕಾಂತ ಒಮ್ಮೆ ಜೋರಾಗಿ ಉಸಿರು ಒಳಗೆ ತೆಗೆದುಕೊಂಡು ಹೊರಕ್ಕೆ ಹಾಕಿದ.. ತಾಳ್ಮೆ, ಪ್ರಶಾಂತತೆ.. ಯಾವುದೇ ವಿಷಮ ಪರಿಸ್ಥಿತಿಯಲ್ಲೂ ವಿವೇಕದಿಂದ ವರ್ತಿಸುತ್ತಿದ್ದ ಅವನಿಗೆ.. ತನ್ನ ಮನಸ್ಸು ಕೊಂಚ ಗಲಿಬಿಲಿಗೊಂಡಿದ್ದರೂ, ಬೆಳಗಿನ ದೇವಸ್ಥಾನದ ಭೇಟಿ ಅವನಿಗೆ ಹಿತ ನೀಡಿ ಮನಸ್ಸನ್ನು ಶಾಂತಗೊಳಿಸಿತ್ತು

"ನೀರಲ್ಲಿ ಮುಳುಗಿದವನಿಗೆ ಮಳೆಯೇನು ಚಳಿಯೇನು"  ಎಂಬ ಗಾದೆಯಂತೆ, ಅದೇನಾಗುತ್ತೋ ನೋಡಿಯೇ ಬಿಡೋಣ.. ಎಂದು ಯೋಚಿಸುತ್ತಾ ಮನೆಗೆ ಬಂದ..

ಕಚೇರಿಯ ಕೆಲಸ ಒಂದು ಖಂಡುಗ ಇತ್ತು.. ನಿಧಾನಕ್ಕೆ ತನ್ನ ಕೆಲಸದ ಮತ್ತಿನ ಲೋಕಕ್ಕೆ ಜಾರಿದ.. ಮಧ್ಯಾನ್ಹದ ಊಟದ ಅರಿವಿಲ್ಲ... ತನ್ನ ಕೋಣೆಯಲ್ಲಿ ಬೆಳಕು ಕಡಿಮೆಯಾದಾಗಲೇ ಅವನಿಗೆ ಅರಿವಾದದ್ದು.. ಸಂಜೆಯಾಗಿದೆ ಎಂದು!

ಸಮಯನೋಡಿಕೊಂಡ ಸಂಜೆ ೬. ೨೫ ಆಗಿದೆ.. ಅರೆ ಅರೆ ಏನಾಯ್ತು ಇದು.. ಎಂದು ಗಡಿಬಿಡಿಯಿಂದ ಎದ್ದು.. ಮೋರೆ ತೊಳೆದುಕೊಂಡು.. ಆ ಹುಡುಗಿ ಹೇಳಿದ್ದ ಬಿಳಿ ಶರ್ಟ್ ಮತ್ತು ನೀಲಿ ಜೀನ್ಸ್ ತೊಟ್ಟು.. ಉರಿಯುತ್ತಿದ್ದ ದೇವರ ದೀಪಕ್ಕೆ ಇನ್ನಷ್ಟು ಎಣ್ಣೆ ಹಾಕಿ... ದೇವರಿಗೆ ಕೈಮುಗಿದು ಹೊರಟ..

ನ್ಯೂ ಶಾಂತಿಸಾಗರ್ ಹತ್ತಿರ ಬಂದಾಗ ೬.೫೫ ಆಗಿತ್ತು.. ಅಬ್ಬಾ ಇನ್ನೂ ಐದು ನಿಮಿಷ ಇದೆ.. ಸದ್ಯ ಸಮಯಕ್ಕಿಂತ ಮುಂಚೆಯೇ ಬಂದೆ.. ಎಂದು ನಿಡಿದಾದ ಉಸಿರು ಬಿಟ್ಟು ಬೈಕನ್ನು ಪಕ್ಕದಲ್ಲಿಯೇ ನಿಲ್ಲಿಸಿ, ಹೆಲ್ಮೆಟ್ ಸಿಕ್ಕಿಸಿ ಬೀಗ ಹಾಕಿಕೊಂಡು ಹೋಟೆಲ್ ಬಾಗಿಲ ಬಳಿ ನೆಡೆದ..

"ನಮಸ್ಕಾರ್ ಕೃಷ್ಣಕಾಂತ್.. ಹೇಗಿದ್ದೀರಾ.. " ಅಪರಿಚಿತ ಧ್ವನಿಗೆ ಚಕ್ ಅಂತ ಹಿಂದೆ ತಿರುಗಿ ನೋಡಿದ..

ಏಕ್ ದಂ ಅಪರಚತ ವ್ಯಕ್ತಿ.. ಅಪರಿಚಿತ ಧ್ವನಿ..

"ಸರ್ ನೀವು?"

"ಅದೆಲ್ಲಾ ಆಮೇಲೆ .. ಮೊದಲು ಬನ್ನಿ ಒಳಗೆ ಹೋಗೋಣ.. ನಿಮಗಾಗಿ ಒಬ್ಬರು ಕಾಯುತ್ತಿದ್ದಾರೆ.. "

ಹೃದಯ ಬಾಯಿಗೆ ಬಂದಿತ್ತು.. ಯಾರಪ್ಪ ಇದು.. ನೋಡಲು ಚೆಲುವಾಂತ ಚೆನ್ನಿಗನೇ ಆಗಿದ್ದರೂ.. ಇವ ಯಾರೂ ಅನ್ನುವ ಪ್ರಶ್ನೆ.. ಬಸ್ ನಿಲ್ದಾಣಕ್ಕೆ ಬಂದು.. ಯಾವ ಆಟೋ ನಾ ಹೋಗುವ ಜಾಗಕ್ಕೆ ಬರುತ್ತಾನೆ ಎನ್ನುವ ಗೊಂದಲದ ತರಹವೇ ಕೃಷ್ಣಕಾಂತನಿಗೂ ಕಾಡುತ್ತಿತ್ತು..

ಹೃದಯದ ಬಡಿತ ಜೋರಾಗಿಯೇ ನಗಾರಿ ಬಾರಿಸಲು ಶುರುಮಾಡಿತ್ತು..

"ಸರ್ ನೀವು ಯಾರೂ ಅಂತ ಹೇಳಲಿಲ್ಲ.. ಬೇರೇ ಯಾರನ್ನೋ ತಪ್ಪಾಗಿ ತಿಳಿದುಕೊಂಡಿದ್ದೀರಿ ಅನ್ನಿಸುತ್ತದೆ" ಕೃಷ್ಣಕಾಂತ್ ಬಡಬಡಿಸುತ್ತಲೇ ಇದ್ದಾ..

".... .. ನೀವೇ ಕೃಷ್ಣಕಾಂತ್ ತಾನೇ.. ನಾ ಸರಿಯಾಗಿಯೇ ಗುರುತಿಸಿದ್ದೇನೆ.. ಮೊದಲು ಬನ್ನಿ.. "

"ಸರ್.. .ನಾ ಇಲ್ಲಿ ಒಬ್ಬರಿಗೆ ಕಾಯುತ್ತಿದ್ದೇನೆ.. ಅವರು ಬಂದ ಮೇಲೆ ಒಳಗೆ ಹೋಗಬೇಕು.. ನೀವು ಕನ್ಫ್ಯೂಸ್ ಮಾಡಿಕೊಂಡಿದ್ದೀರಾ ಅನ್ಸುತ್ತೆ"

ತುಸು ಗಡಸು ದನಿಯಲ್ಲಿ ಆತ "ಕೃಷ್ಣಕಾಂತ್.. ನೀವು ಬರದೇ ಹೋದರೇ.. ನಾನು ನಿಮ್ಮನ್ನು ಎತ್ತಿಕೊಂಡು ಒಳಗೆ ಹೋಗುತ್ತೇನೆ.. ಕೂಸುಮರಿ ಮಾಡಿಕೊಂಡು.. ನಡೀರಿ ಸರ್ ಒಳಗೆ"

ಬೇರೆ ದಾರಿಯಿಲ್ಲದೆ "ಸರ್.. ಅದು.. ನೋಡಿ.. ದಯವಿ.. ಸರ್.. ಪ್ಲೀಸ್... ಛೆ... ನೋಡಿ ಸರ್.. "

"ಕೃಷ್ಣಕಾಂತ್ ಮಾತು ಆಮೇಲೆ.. ಮೊದಲು ಒಳಗೆ ನೆಡೆಯಿರಿ" ತುಸು ಗದರಿದ ದನಿಯಲ್ಲಿ ಹಾಗೆ ಕೃಷ್ಣಕಾಂತನನ್ನು ತಳ್ಳಿಕೊಂಡೇ ಒಳಗೆ ಹೊರಟ...

ಬೇರೆ ದಾರಿ ಕಾಣದೆ.. ಕೃಷ್ಣಕಾಂತ್ ದೇವರ ಮೇಲೆ ಭಾರ ಹಾಕಿ... ಹೋಟೆಲ್ ಒಳಗೆ ಕಾಲಿಟ್ಟ..

ಟೇಬಲ್ ನಂಬರ್ ೮ ಖಾಲಿ ಇತ್ತು.... . ಮಂದ ಬೆಳಕು ಸ್ಪಷ್ಟವಾಗಿ ಕಾಣುತ್ತಿರಲಿಲ್ಲ.. ನಿಧಾನಕ್ಕೆ ಆ ಟೇಬಲ್ ಕಡೆ ಇಬ್ಬರೂ ಹೆಜ್ಜೆ ಇಟ್ಟರು..

ಕೃಷ್ಣಕಾಂತನಿಗೆ.. ಪಾಪ ಆ ಹುಡುಗಿ ಹೊರಗೆ ಕಾಯುತ್ತಿರುತ್ತಾಳೆ.. ಈ ಮಂಗಮನುಷ್ಯ ನೋಡಿದರೆ ನನ್ನನ್ನು ಯಾರೋ ಅಂದುಕೊಂಡು ಬಲವಂತವಾಗಿ ಕರೆದೊಯ್ಯುತ್ತಿದ್ದಾನೆ..  ಆಕೆಯ ಮೊಬೈಲ್ ನಂಬರ್ ಇದ್ದಿದ್ದ್ರೆ.. ಒಂದು ಸಂದೇಶ ಆದರೂ ಕಳಿಸಬಹುದಿತ್ತು ಛೆ.. ಕೋಪ ಉಕ್ಕುತ್ತಿತ್ತು.. ಆದರೆ ಏನೂ ಮಾಡುವಂತೆ ಇರಲಿಲ್ಲ..

ಟೇಬಲ್ ಎಂಟರಲ್ಲಿ ಒಂದು ಫಲಕ ಇತ್ತು "R E S E R V E D"

"ಕೃಷ್ಣಕಾಂತ್.. ಇಲ್ಲಿಯೇ ಕೂತಿರೀ.. ಎರಡು ನಿಮಿಷ ಬಂದೆ.. "

ಮಾಯಾಬಜಾರ್ ಚಿತ್ರ ನೋಡಿದ ಅನುಭವ.. ಏನಾಗುತ್ತಿದೆ ಅರಿವಾಗುತ್ತಿಲ್ಲ.. ಏನಾಗಬೇಕಿತ್ತೋ ಆಗುತ್ತಿಲ್ಲ  .. ಪಾಪ ಆ ಹುಡುಗಿ ಹೊರಗೆ ಕಾಯುತ್ತಿರುತ್ತಾಳೆ.. ಓಕೆ ಓಕೆ ಈ ವ್ಯಕ್ತಿ ಬಂದ ಕೂಡಲೇ ಸ್ವಲ್ಪ ದಬಾಯಿಸಿ.. ಹೊರಟು ಬಿಡಬೇಕು.. ಪಾಪ ಆ ಹುಡುಗಿಯನ್ನು ಕಾಯಿಸುವುದು ಸರಿಯಲ್ಲ.. ಮನಸ್ಸನ್ನು ಸಿದ್ಧಮಾಡಿಕೊಂಡು ಒಂದು ಲೋಟ ನೀರು ಕುಡಿದು.. ಸುಮ್ಮನೆ ಕುಳಿತಿದ್ದ..

ಒಂದೆರಡು  ಕ್ಷಣಗಳು ಯುಗಗಳ ತರಹ ಉರುಳಿತು ..

".. ನಮಸ್ಕಾರ ಕೃಷ್ಣಕಾಂತ್ ಹೇಗಿದ್ದೀರಾ"

ಕೋಗಿಲೆ ಧ್ವನಿ.. ನಾ ಕೇಳಿದ ಧ್ವನಿ.. ತಾನಿಷ್ಟ ಪಟ್ಟ ಧ್ವನಿ ..

ಕುತ್ತಿಗೆ ನೋವಾಗುತ್ತೆ ಎಂದು ಗೊತ್ತಿದ್ದರೂ.. ೨೭೦ ಡಿಗ್ರಿ ತಿರುಗಿದ...

ಕಣ್ಣು ಊರಗಲವಾಯಿತು.. ಮೈ ಮೆಲ್ಲನೆ ಬೆವರಲು ಶುರುಮಾಡಿತು.. ಅಯ್ಯೋ ಈ ಹುಡುಗಿ ಯಾರನ್ನೋ ಕರೆತಂದಿದ್ದಾಳೆ.. ಏನೂ ಗ್ರಹಚಾರವೋ ನಾನೇಕೆ ಒಪ್ಪಿಕೊಂಡೆ ಇಲ್ಲಿಗೆ ಬರಲು.. ಅರೆ ನಾನೆಲ್ಲಿ ಒಪ್ಪಿಕೊಂಡೆ.. ಅವಳು ಹೇಳಿದಳು.. ನಾ ಕುರಿಯಂತೆ ಇಲ್ಲಿಗೆ ಬಂದಿದ್ದೇನೆ.. ಛೆ ಯೋಚಿಸಬೇಕಿತ್ತು.. ದುಡುಕಿಬಿಟ್ಟೆ..ಸುತ್ತಮುತ್ತಲು ಒಳ್ಳೆ ಘನತೆ ಗೌರವ ಕಾಪಾಡಿಕೊಂಡಿದ್ದೇನೆ... ಈಗ ಏನಾಗುತ್ತೋ.. ಗಣಪ.. ನನ್ನ ಮಾನ ಮರ್ಯಾದೆ ಎಲ್ಲವೂ ನಿನ್ನ ಕೈಯಲ್ಲಿ.. ಒಂದೆರಡು ಅರೆ ಘಳಿಗೆಗಳಲ್ಲಿ ಕಣ್ಣು  ಮುಚ್ಚಿ ಹಾಗೆ ಧ್ಯಾನಿಸಿದ...

"ವೀಣಾ.. ಇವರೇ ನಿನ್ನನ್ನು ಕಾಡುತ್ತಿದ್ದ ಕೃಷ್ಣಕಾಂತ್.. .. ಏನ್ರಿ.. ನಮ್ಮ ಹುಡುಗೀನೇ ಬೇಕಿತ್ತಾ ನಿಮಗೆ.. ನಿಮಗೆ ಸ್ವಲ್ಪವೂ ಬೇಸರವಾಗುವುದಿಲ್ಲವೇ.. ಏನ್ರಿ ಆಗಿಂದ ನೋಡುತ್ತಿದ್ದೇನೆ.. ಏನೂ ಮಾತಾಡುತ್ತಿಲ್ಲ.. ದಿನಾ ಕಣ್ಣರಳಿಸಿಕೊಂಡು ನೋಡೋಕೆ ಆಗುತ್ತೆ.. ಮಾತಾಡೋಕೆ ಆಗೋಲ್ವಾ.. ಸುಮ್ಮನೆ ಯಾಕ್ರೀ ಕೂತಿದ್ದೀರಾ ಮಾತಾಡ್ರಿ ಕೃಷ್ಣಕಾಂತ್.. " ತೀಕ್ಷ್ಣ ನುಡಿಗಳು ಮೊದಲೇ ಗಾಬರಿಯಾಗಿ ಜೇನುಗೂಡಾಗಿದ್ದ ಮನಸ್ಸು..  ಕಲ್ಲು ಬಿದ್ದ ಜೇನು ಗೂಡಾಗಿತ್ತು..

ಬಾಯಲ್ಲಿ ನೀರಿನ ಪಸೆ .. ಕೆ ಆರ್ ಎಸ್ ಅಣೆಕಟ್ಟಿನ ರೀತಿಯಲ್ಲಿ ಒಣಗಿದ ವಾಟೆಗರಿಯಾಗಿತ್ತು.. ನಾಲಿಗೆಯಿಂದ ತುಟಿಯನ್ನು ಒಮ್ಮೆ ಸವರಿಕೊಂಡು .. ಸುತ್ತಲೂ ನೋಡಿದ.. ಯಾರೂ ಗಮನಿಸುತ್ತಿಲ್ಲ ಎಂದು ಅರಿತ ಮೇಲೆ.. ಟೇಬಲ್ ಮೇಲಿದ್ದ ನೀರಿನ ಲೋಟವನ್ನ ಎತ್ತಿಕೊಳ್ಳಲು ಹೋದ..

"ಸರ್ ಕ್ಷಮಿಸಿ.. ನೀವು  ಗಾಬರಿಯಾಗಿದ್ದೀರಾ.. ದಯಮಾಡಿ ಕ್ಷಮಿಸಿ.. ಇವರು ಸುಮ್ಮನೆ ನಿಮ್ಮನ್ನು ಗೋಳು ಹುಯ್ದುಕೊಳ್ಳುತ್ತಿದ್ದಾರೆ.. ತಗೋಳಿ ನೀರು ಕುಡಿಯಿರಿ.. " ಜೇನುದನಿ ಬಂದ ಕಡೆ ಮತ್ತೆ ಕಣ್ಣು ಅರಳಿಸಿದ..

ಇಬ್ಬರೂ ಜೋರಾಗಿ ನಗಲು ಶುರುಮಾಡಿದರು.. ಇಬ್ಬರೂ "ಕೃಷ್ಣಕಾಂತ್ ದಯಮಾಡಿ  ಕ್ಷಮಿಸಿ.. ಇದು ಇವಳದೆ ಪ್ಲಾನ್.. ನಮ್ಮನ್ನು ಕ್ಷಮಿಸಿ.. ಪ್ಲೀಸ್ ರಿಲ್ಯಾಕ್ಸ್ ಆಗಿ.. ಕಾಫಿ ಹೇಳಲೇ.. ನಿಮಗೆ"

ಪೇಲವ ನಗೆ ಬಿಸಾಕಿ "ಹೂ ಸರ್" ಎಂದ ಕೃಷ್ಣಕಾಂತ್..

"ಓಕೆ.. ವಿಷಯಕ್ಕೆ ಬರುತ್ತೇನೆ.. ನೋಡಿ ಕೃಷ್ಣಕಾಂತ್.. ನಾನು ರೇವ್.. ಸಾರಿ ರೇವಂತ್ ಅಂತ.. ಇವಳಿದ್ದಾಳಲ್ಲ ಇವಳ ತರಲೆ ಸಹಿಸಿಕೊಳ್ಳಲು ಈಕೆಯನ್ನು ಕೈ ಹಿಡಿಯುತ್ತಿರುವವನು.. ಇನ್ನೂ ಎಷ್ಟು ಕೀಟಲೆ ಸಹಿಸಿಕೊಳ್ಳಬೇಕು ಗೊತ್ತಿಲ್ಲ.. ನೀವು ಒಡವೆ ಅಂಗಡಿಯಿಂದ ಇವಳು ಹೊರಬಂದಿದ್ದನ್ನು ನೋಡಿದ್ದಿರಲ್ಲ.... ನೋಡಿ ಈ ಉಂಗುರ ತರಲು ಹೋಗಿದ್ದಳು.. ಇದು ನಮ್ಮಿಬ್ಬರ ನಿಶ್ಚಿತಾರ್ಥದ ಸಂಕೇತ.. ಇನ್ನೊಮ್ಮೆ ತರಕಾರಿ ಅಂಗಡಿಯ ಬಳಿ ಸಿಕ್ಕಾಗ.. ಮಿಂಚಿನಂತೆ ಬಂದು ಮಾಯವಾಗಿದ್ದಳಲ್ವ.. ಅಂದು ನಮ್ಮಿಬ್ಬರ ನಿಶ್ಚಿತಾರ್ಥದ ಹಿಂದಿನ ದಿನವಾಗಿತ್ತು.. ಇವಳ ಮನೆಯಲ್ಲಿಯೇ ಆ ಕಾರ್ಯಕ್ರಮ ನೆಡೆದಿತ್ತು  ಆದ್ದರಿಂದ..ಕಡೆ ಘಳಿಗೆಯಲ್ಲಿ ಅಡಿಗೆ ಭಟ್ಟರು ಹೇಳಿದ ಕೆಲವು ತರಕಾರಿಗಳನ್ನು ತರಲು ಇವಳು ಬಂದಿದ್ದಳು.. ಮತ್ತು ಸೀರೆಗೆ ಜಿಗ್ ಜಾಗ್, ಕುಚ್ಚು ಕಟ್ಟಲು ಕೊಟ್ಟಿದ್ದು, ಬ್ಲೌಸ್ ಅದಕ್ಕೆ ಹೊಂದುವಂತಹ ಬಳೆಗಳು ಇದನ್ನೆಲ್ಲಾ ತರಲು ಹೋಗಿದ್ದಳು.. ಅವಾಗ ನೀವು ಅಚಾನಕ್ ಇವಳ ಎದುರಿಗೆ ಬಂದಿರಿ.. ಆದರೆ ಇಬ್ಬರಿಗೂ ಆ ಮಂದಬೆಳಕಲ್ಲಿ ಏನು ಮಾಡಬೇಕು ಎಂದು ತೋಚದೆ.. ನಿಮ್ಮ ಪಾಡಿಗೆ ನೀವು ಹೋದಿರಿ.. ಅವಳ ಪಾಡಿಗೆ ಅವಳು ಹೋದಳು.."

ಮಂತ್ರ  ಮುಗ್ಧನಾಗಿ ಕೇಳುತ್ತಲೇ ಇದ್ದಾ ಕೃಷ್ಣಕಾಂತ್..

"ಆಮೇಲೆ.. ಸುಮಾರು  ದಿನಗಳು ನಿಮಗೆ ಇವಳು ಕಾಣಲಿಲ್ಲ .. ಇವಳಿಗೆ ನೀವು ಕಾಣಲಿಲ್ಲ.. ಕಾರಣ.. ಇವಳ ಆಫೀಸ್ ವಿಳಾಸ ಬದಲಾಗಿದ್ದು. .. ಕೆಲಸ ಒತ್ತಡ ಹೆಚ್ಚಿದ್ದು.. ಜೊತೆಯಲ್ಲಿ ನಮ್ಮಿಬ್ಬರ ಓಡಾಟ.. ಇವೆಲ್ಲವೂ ನಿಮ್ಮ ಕಣ್ಣಿಂದ  ಈ ಸುಂದರಿಯನ್ನು ಕೊಂಚ ದೂರ ಇರಿಸಿತ್ತು.. ಹಾಗೆಯೇ ಈ ಸುಂದರಿಯೂ ಕೂಡ ನಿಮ್ಮನ್ನು ಮಿಸ್ ಮಾಡಿಕೊಂಡದ್ದು ಇದೆ ಕಾರಣಕ್ಕೆ.. ಇಂದು ನಾವು ಮೂವರು ಒಂದೇ ಸೂರಿನಡಿ ಕೂತಿದ್ದೇವೆ.. ಈಗ ನನ್ನ ಮಾತು ಮುಗಿಯಿತು.. ನಿಮ್ಮ ಸರದಿ.. "

ರೇವಂತ್ ಉಫ್ ಇಂದು ಉಸಿರು ಬಿಟ್ಟು.. ಒಂದು ಲೋಟ ತಣ್ಣಗಿನ ನೀರನ್ನು ಗಟಗಟ ಕುಡಿದು.. ವೀಣಾಳ ಕಡೆ ನಗೆ ಬೀರಿ ಕಣ್ಣು ಹೊಡೆದ..

"ಸರ್.. ನಾ.. ಏನೂ.... ಹೇಗೆ.. ಛೆ.. ಉಫ್.. ಏನೂ ಗೊತ್ತಾಗು.. ಛೆ.. "

"ಕೃಷ್ಣಕಾಂತ್.. ದಯಮಾಡಿ ಗಾಬರಿ ಮಾಡಿಕೊಳ್ಳಬೇಡಿ.. ನಿಮ್ಮ ಗೊಂದಲ ನನಗೆ ಅರ್ಥವಾಗುತ್ತೆ.. ಇದೆಲ್ಲ ನಾ ಇವರಿಗೆ ಹೇಳಿದ್ದೆ.. ಗಾಬರಿ ಮಾಡಿಕೊಳ್ಳಬೇಡಿ.. ನಿಮ್ಮ ಬಗ್ಗೆ ಎಲ್ಲವನ್ನು ಹೇಳಿದ್ದೇನೆ.. ನಿಮ್ಮ ನಡೆನುಡಿ ನನಗೆ ಇಷ್ಟವಾಗಿದೆ.. ನಿಮ್ಮಂತಹ ಅದ್ಭುತ ವ್ಯಕ್ತಿಯ ಸ್ನೇಹದ ವಲಯದಲ್ಲಿ ನಾನಿರಬೇಕು ಎಂದು ಬಯಸುತ್ತೇನೆ.... ಛೆ.. ನಾವಿಬ್ಬರೂ ಬಯಸುತ್ತೇವೆ.. ನಿಮ್ಮ ಸ್ನೇಹದ ಬಂಧನ ನಮಗೆ ಸಿಗಬಹುದೇ.. "

ಕೃಷ್ಣಕಾಂತನಿಗೆ ಏನೂ ಹೇಳಬೇಕೋ ತೋಚದೆ.. ಸುಮ್ಮನೆ ಕೂತುಕೊಂಡ.. ಇನ್ನೊಂದು ಲೋಟ ನೀರು ಒಳಗೆ ಹೋಯಿತು..

ಅಷ್ಟರಲ್ಲಿ ಕಾಫಿ ಬಂತು.. ಗಾಬರಿಗೊಂಡಿದ್ದ ದೇಹ.. ಹೋಟೆಲಿನ ಎಸಿ.. ಕೊಂಚ ತಲೆನೋವು ತಂದಿತ್ತು.. ಕಾಫಿ ಕುಡಿದು ಮತ್ತೊಮ್ಮೆ ನೀರನ್ನು ಕುಡಿದು.. ಜೋರಾಗಿ ನಿಟ್ಟುಸಿರು ಬಿಟ್ಟ..

ವೀಣಾ ಮತ್ತು ರೇವಂತ್ ಮುಸಿ ಮುಸಿ ನಗುತ್ತಲೇ ಇದ್ದರು..

"ಕೃಷ್ಣಕಾಂತ್.. ನಿಮ್ಮ ಗೊಂದಲ ನಮಗೆ ಅರ್ಥವಾಗುತ್ತೆ.. ನೋಡಿ.. ನಾವಿಬ್ಬರೂ ಯಾಕೆ ಇಷ್ಟು ಓಪನ್ ಮೈಂಡೆಡ್ ಅಂದ್ರೆ..ನಮ್ಮಿಬ್ಬರ ಮಧ್ಯೆ ನಮಗೆ ನಂಬಿಕೆ ಇದೆ.. ಅಪಾರ ನಂಬಿಕೆ ಇದೆ.. ನಮಗಿಬ್ಬರಿಗೂ ನಮ್ಮ ಮೇಲೆ ನಂಬಿಕೆ ಇದೆ.. ತಪ್ಪು, ಅನುಮಾನ, ಸಂಶಯ, ದುರಾಸೆ, ಶಂಕೆ ಇದು ಯಾವುದೂ ನಮಗೆ ಗೊತ್ತಿಲ್ಲ.. ಪ್ರೀತಿಯೇ ನಮ್ಮುಸಿರು ಇದು ನಮ್ಮ ಬಾಳಿನ ಧ್ಯೇಯ.. ಒಂದು ವರ್ಷದಿಂದ ನೀವು ಇವಳನ್ನು ನೋಡುತ್ತಿದ್ದರೂ, ಒಮ್ಮೆಯೂ ಕೆಟ್ಟ ನೋಟದಿಂದ ನೀವು ನೋಡಿಲ್ಲ ಎಂದು ಇವಳೇ ಹಲವಾರು ಬಾರಿ ಹೇಳಿದ್ದಾಳೆ .. ಜೊತೆಯಲ್ಲಿ ಇವಳು ಕೂಡ ನಿಮ್ಮ ಬಗ್ಗೆ ಆಗಾಗ ಏನು ಬಂತು.. ನಾವು ಭೇಟಿಯಾದಾಗೆಲ್ಲ ನನಗೆ ಹೇಳುತ್ತಲೇ ಇದ್ದಳು.. ಹಾಗಾಗಿ ನಿಮಗೆ ಅರಿವಿಲ್ಲದೆ .. ಎಷ್ಟೋ ದಿನ ನಾ ಕೂಡ ನಿಮ್ಮನ್ನು ಗಮನಿಸಿದ್ದೇನೆ.. ಸಂಜೆ ನೀವು ಆಫೀಸಿನಿಂದ ಮನೆಗೆ ಬರುವಾಗ.. .. ನೀವು ಎಲ್ಲರನ್ನು ಹಾಗೆ ಗಮನಿಸುವುದಿಲ್ಲ ಎಂದು ತಿಳಿಯಿತು..  ನಿಮ್ಮ ಸುತ್ತಲ ಮುತ್ತಲ ಪ್ರದೇಶದಲ್ಲಿ ನಿಮ್ಮ ಬಗ್ಗೆ ಒಳ್ಳೆಯ ಬಹಳ ಒಳ್ಳೆಯ ಅಭಿಪ್ರಾಯವಿದೆ ಎಂದು ಈ ಬಡಾವಣೆಯ ಜನರಿಂದ ತಿಳಿಯಿತು.. .. ಇದೆಲ್ಲ ತಿಳಿದ ಮೇಲೆ, ವೀಣಾ ಕೂಡ ನಿಮ್ಮಂತಹ ಸ್ನೇಹಿತ ನಮ್ಮ ಬಾಳಿನಲ್ಲಿ ಇದ್ದರೇ  ಚೆನ್ನಾ ಅಂದಳು.. ನನಗೆ ನಾವು ಮೂವರು ಒಂದು ಅದ್ಭುತ ಸ್ನೇಹಿತರಾಗಬಹುದು ಎನ್ನಿಸಿತು.. ಹಾಗಾಗಿ ನೀವು ಇಲ್ಲಿದ್ದೀರಿ.. " ಎಂದು ತಮ್ಮ ಹೃದಯವನ್ನು ಮುಟ್ಟಿ ತೋರಿಸಿದಾಗ... ಕೃಷ್ಣಕಾಂತ್ ಮೂಕವಿಸ್ಮಿತನಾಗಿದ್ದ..

ವೀಣಾ ತನ್ನ ಕುರ್ಚಿಯಿಂದ ಎದ್ದು .ಕೈ ಚಾಚಿ . "ಕೃಷ್ಣಕಾಂತ್ ನಮ್ಮ ಸ್ನೇಹದ ಬಂಧನಕ್ಕೆ ಸ್ವಾಗತ ಶುಭ ಸ್ವಾಗತ.."  ಎಂದಾಗ ಅರಿವಿಲ್ಲದೆ ತನ್ನ ಕೈಯನ್ನು ಚಾಚಿದ.. ಪುಸಕ್ ಅಂತ ರೇವಂತ್ ಕೃಷ್ಣಕಾಂತನ ಕೈ ಎಳೆದುಕೊಂಡು "ಒಯೆ ಇವನು ನನ್ನ ಸ್ನೇಹಿತ.. ಅಲ್ವೇನೋ ಕಾಂತಾ"

ಸೋಲೊಪ್ಪಿಕೊಳ್ಳದ ವೀಣಾ "ಕಾಂತಾ ನಾ ತಾನೇ ನಿನ್ನ ಮೊದಲು  ನೋಡಿದ್ದು.. ಹಾಗಾಗಿ ನಾನೇ ತಾನೇ ನಿನ್ನ ಮೊದಲ ಸ್ನೇಹಿತೆ.. "

ಮಕ್ಕಳ ಜಗಳ ಕೃಷ್ಣಕಾಂತನಿಗೆ ಮಜಾ ಕೊಡುತ್ತಿತ್ತು..

ಇಷ್ಟು ಹೊತ್ತಾದರೂ.. ಪೂರ್ಣವಾಗಿ ಮಾತಾಡಲು ಅವಕಾಶ ಸಿಕ್ಕದ ಕೃಷ್ಣಕಾಂತ್ ಧೈರ್ಯ ಮಾಡಿ.. ವೀಣಾಳ ಕೈಯನ್ನು ಹಿಡಿದುಕೊಂಡು.. ಅದರ ಮೇಲೆ ರೇವಂತ್ ಕೈ ಇಟ್ಟು. "ವೀಣಾ- ರೇವಂತ್ ಇಂದಿನಿಂದ ನಾವು ಒಂದೇ ಪ್ರಾಣ.. ಮೂರು ದೇಹ .. ನಿಮಗಿಬ್ಬರಿಗೂ ಶುಭವಾಗಲಿ.. ಮದುವೆಗೆ ಈ ನಿಮ್ಮ ಸ್ನೇಹಿತನ ಕರೆಯೋದು ಮರೆಯಬೇಡಿ.. "

ಅಚಾನಕ್ ಕೃಷ್ಣಕಾಂತ್ ಅಷ್ಟೊಂದು ಸಲುಗೆಯಿಂದ ಮಾತಾಡಿದ್ದು ವೀಣಾ ಮತ್ತು ರೇವಂತ್ ಇಬ್ಬರಿಗೂ ಆಶ್ಚರ್ಯವಾಯಿತು.. ಆದರೂ ಕೃಷ್ಣಕಾಂತನ ಸ್ನೇಹಪರ ಮನಸ್ಸು ಅರಿತಿದ್ದ ಇಬ್ಬರಿಗೂ ಅವನ ಮಾತು ಮತ್ತು ಕೃತಿ ಮೆಚ್ಚುಗೆಗೆ ಪಾತ್ರವಾಯಿತು..

"ಹೌದು ರೇವಂತ್.. ಒಂದು ಮಾತು ನಿನ್ನಲ್ಲಿ.. ಮುಚ್ಚು ಮರೆಯಿಲ್ಲದೆ ಹೇಳುತ್ತೀಯಾ"

"ಹಾ ಕೃಷ್ಣಕಾಂತ್.. ನಿನ್ನ ಪ್ರಶ್ನೆ ನನಗೆ ಗೊತ್ತು .. ವೀಣಾಳನ್ನು ಮದುವೆಯಾಗುವ ಗಂಡು ನಾನು.. ನನಗೆ ಏಕೆ ನಿನ್ನ ಮೇಲೆ ಅನುಮಾನ, ಅಸೂಯೆ ಬರದೆ.. ನಿನ್ನನ್ನು ಸ್ನೇಹಿತನಂತೆ ಕಾಣುತ್ತಿದ್ದೇನೆ ಎನ್ನುವ ಸಂದೇಹ ತಾನೇ.. ನೋಡು.. ನನಗೆ ವೀಣಾಳ ಬಗ್ಗೆ ನನ್ನ ಪರಿಚಯಿಸ್ಥರಿಂದ ತಿಳಿದಿತ್ತು.. ಅವಳು ಹೇಗೆ.. ಅವಳ ಮಾತುಕತೆ ಹೇಗೆ.. ಎಲ್ಲವೂ ತಿಳಿದಿತ್ತು.. ಅವಳ ರೂಪಕ್ಕೆ ಅಷ್ಟೇ ಅಲ್ಲಾ ನಾ ಮರುಳಾಗಿದ್ದು.. ಅವಳ ಗುಣಕ್ಕೂ ಮಾರುಹೋಗಿದ್ದೆ.. ಮದುವೆ ಆದರೆ ಇವಳನ್ನೇ ಎಂದು ನಿರ್ಧರಿಸಿದೆ..ನಾನು ಈ ನಿರ್ಧಾರಕ್ಕೆ ಬಂದ ಮೇಲೆ ಅಲ್ಲಿ ಸಂಶಯಕ್ಕೆ ಅವಕಾಶವೇ ಇಲ್ಲ ಅಲ್ಲವೇ.. ನಿನ್ನ ಬಗ್ಗೆ ತಿಳಿಯಬೇಕಾದರೆ ನಾ ಬಹಳ ಶ್ರಮ ಪಡಬೇಕಾಯಿತು ಕಾರಣ.. ನೀ ಯಾರು ಎಂದು ತಿಳಿಯುದಕ್ಕಿಂತ ನೀ ಹೇಗೆ ಎಂದು ತಿಳಿಯಬೇಕಿತ್ತು. ಬಡಾವಣೆಯ ಸಮಿತಿಯ ಕಾರ್ಯಕ್ರಮದ ಬಗ್ಗೆ ಭಾಗವಹಿಸಲು ವೀಣಾ ಹೋಗಿದ್ದಳು.. ಆಗ ನಾ ಅವಳ ಮನೆಗೆ ಬಂದಿದ್ದೆ.. ಅವಳನ್ನು ಹುಡುಕಿಕೊಂಡು ಬಡಾವಣೆಯ ಸಮಿತಿಯ ಸದನಕ್ಕೆ ಬಂದಾಗ.. ನೀ ನೆಡೆದುಹೋಗುತ್ತಿರುವುದು ಕಂಡು ಬಂತು.. ಅಲ್ಲಿದ್ದ ಅಧ್ಯಕ್ಷರು ನಿನ್ನ ಬಗ್ಗೆ, ನಿನ್ನ ವ್ಯಕ್ತಿತ್ವದ ಬಗ್ಗೆ ಕೆಲವು ಮಾತನ್ನು ಹೇಳಿದರು. ನನಗೆ ಬಲು ಇಷ್ಟವಾಯಿತ್ತು.. ನನಗೆ ಅಲ್ಲಾ ವೀಣಾಳಿಗೂ ಕೂಡ.. ಅಲ್ಲಿಂದ ನಿನ್ನ ಬಗ್ಗೆ ತಿಳಿಯುವ ಕುತೂಹಲ ಶುರುವಾಗಿತ್ತು.. ಜೊತೆಯಲ್ಲಿ ನಿನ್ನ ಬಗ್ಗೆ ಕಿವಿ ತೂತಾಗುವಷ್ಟು ಇವಳು ಹೇಳಿದ್ದರಿಂದ ನನಗೂ ನಿನ್ನ ಮೇಲೆ ಒಂದು ರೀತಿಯ ಕ್ರಶ್ ಆಗಿತ್ತು!.. ಹಾಗಾಗಿ ನಾವು ಇಲ್ಲಿ"

"ಸೂಪರ್ ಕಣೋ.. .. ರೇವಂತ್" ಒಂದು ಹೈ ಫೈವ್ ಹೊಡೆದು.. ಗಟ್ಟಿಯಾಗಿ ತಬ್ಬಿಕೊಂಡ... ವೀಣಾಳನ್ನೇ ನೋಡುತ್ತಾ ಕಣ್ಣು ಮಿಟುಕಿಸಿದ..

"ಹಹಹಹಃ.. ಕಾಂತಾ.. ನಿನ್ನ ಇನ್ನೊಂದು ಪ್ರಶ್ನೆ ಏನು ಗೊತ್ತಾ.. ನಾ ಯಾಕೆ ನಿನ್ನ ಸತಾಯಿಸಿದೆ ಅಂತ ಅಲ್ವೇ.. ನಾಳೆ ಸಂಜೆ ಸಿಗೋಣ ಅನ್ನೋ ಮಾತನ್ನು.. ನಿನ್ನೆ ಬೆಳಿಗ್ಗೆ ನೀನು ಪಾರ್ಕ್ ಹತ್ತಿರ ಸಿಕ್ಕಾಗಲೇ ಹೇಳಬಹುದಿತ್ತು ಅಂತ ತಾನೇ.. ಇದೆಲ್ಲಾ ಈ ರೇವಂತನಾದೆ ಕಿತಾಪತಿ.. ಸುಮ್ಮನೆ ಒಂದು ಸ್ವಲ್ಪ ನಿನ್ನ ಗೋಳು ಹುಯ್ದುಕೊಳ್ಳೋಣ ಅಂತ ಪ್ಲಾನ್ ಮಾಡಿದ... ಪ್ಲೀಸ್ ನನ್ನ ಕ್ಷಮಿಸು.. ಮತ್ತೆ ನಾ ರೇವಂತನ ಮಾತನ್ನೇ ಹೇಳುತ್ತೇನೆ.. ಈ ಬಡಾವಣೆಯಲ್ಲಿ ನೆಡೆಯುವ ಕಾರ್ಯಕ್ರಮಕ್ಕೆ ನೀ ಬರುವುದು, ಗೌರವದಿಂದ ನೆಡೆದುಕೊಳ್ಳುವುದು, ನಿನ್ನನ್ನು ಹಿರಿಯರು ಕಿರಿಯರು ಎನ್ನದೆ ಅಭಿಮಾನದಿಂದ ನೋಡುವುದು.. ಇದೆಲ್ಲವೂ ನನಗೆ ತುಂಬಾ ಇಷ್ಟವಾಗಿತ್ತು.. ರೇವಂತ್ ಪರಿಚಯವಾದ ಮೇಲೆ ನಿನ್ನ ಬಗ್ಗೆ ಎಲ್ಲವನ್ನು ಹೇಳಿದ್ದೆ.. ಹಾಗಾಗಿ ನಮ್ಮಿಬ್ಬರ ಮಧ್ಯೆ ಯಾವುದೇ ರೀತಿಯ ಅಡ್ಡಿ ಆತಂಕಗಳೂ ಇರಲಿಲ್ಲ.. ನಿನ್ನಂತಹ ಸ್ನೇಹಿತ ನಮಗೆ ಬೇಕಿತ್ತು ಅನ್ನಿಸಿತು. .ಹಾಗೆ ಇವತ್ತು ನಾವು ಮೂವರು ಇಲ್ಲಿದ್ದೇವೆ.. ನೀ ದೇವಸ್ಥಾನಕ್ಕೆ ಹೋಗೋದನ್ನು ಇವನು ನೋಡಿದ.. ಇವನೇ ನಿನ್ನ  ಬೈಕಿಗೆ ಆ ಚೀಟಿ ಸಿಕ್ಕಿಸಿದ್ದು.. "


"ನಾ ಏನು ಹೇಳಲಿ ನಿಮ್ಮ ಪ್ರೀತಿಗೆ. ನನಗೆ ಅರಿವಿಲ್ಲದೆ ನಾ ವೀಣಾಳ ಬಗ್ಗೆ ಆಕರ್ಷಿತನಾಗಿದ್ದೆ.. ಆದರೆ ನೀವಿಬ್ಬರೂ ಜಾಸೂಸಿ ಕೆಲಸ ಮಾಡಿ.. ನನ್ನ ಬಗ್ಗೆ ವಿವರ ಕಲೆಹಾಕಿದ್ದು ಮಾತ್ರವಲ್ಲದೆ.. ನನ್ನನ್ನು ನಿಮ್ಮ ಸ್ನೇಹಿತ ಎಂದು ಗುರುತಿಸಿದಿರಿ.. ಅದು ಖುಷಿಯಾಯಿತು.. ಗೆಳೆತನ ಎಂದರೆ ಇದೆ ಅಲ್ಲವೇ.. " ಕೃಷ್ಣಕಾಂತ್ ಕಣ್ಣಲ್ಲಿ ನೀರು.

"ನೋಡು ಕಾಂತ.. ಗೆಳೆತನಕ್ಕೆ ಹೆಣ್ಣು ಗಂಡು ಭೇದವಿಲ್ಲ.. ಒಳ್ಳೆಯ ಮನಸ್ಸುಗಳು ಒಳ್ಳೆಯದನ್ನೇ ನೋಡುತ್ತವೆ ಎನ್ನುವುದಕ್ಕೆ ನಾವು ಮೂವರು ಉದಾಹರಣೆ.. ಹೌದು ನಿನ್ನ ಮನದಲ್ಲಿ ಒಂದು ಸಂದೇಹ ಇನ್ನೂ ಇದೆ ಎನ್ನಿಸುತ್ತದೆ.. ನಿಜ  ತಾನೇ"

"ಹೌದು ರೇವಂತ.. ನೀ ಅಸೂಯೆ ಪಡಬೇಕಾದ ಸಂದರ್ಭ.. ಅನುಮಾನ ಪಡುವ ಎಲ್ಲಾ ಸಾಧ್ಯತೆಗಳು ಇದ್ದರೂ ಕೂಡ.. ನೀ ಇಷ್ಟು ಕೂಲ್ ಆಗಿ ವರ್ತಿಸಿದ್ದು... ವೀಣಾಳ ಮನದಲ್ಲಿ ಇದ್ದ ಗೊಂದಲ ತುಂಬಿದ ಸ್ನೇಹದ ಮಾಲೆಯ ನೂಲಿಗೆ ನೀ ಇನ್ನಷ್ಟು ಬಲ ಕೊಟ್ಟಿದ್ದು ಆಶ್ಚರ್ಯ ಎನ್ನಿಸುತ್ತದೆ.. ನಾವೆಲ್ಲರೂ ಮನುಷ್ಯರೇ ಅಲ್ಲವೇ.. ಅನುಮಾನ, ಅಸೂಯೆ, ನಾನು ನನ್ನದು ಎನ್ನುವ ಮೋಹ ಯಾರನ್ನೂ ಬಿಡುವುದಿಲ್ಲ.. ಹಾಗಾಗಿ ಈ ಪ್ರಶ್ನೆ ಅಷ್ಟೇ.. "

"ಕಾಂತಾ.. ನಮ್ಮ ಕುಟುಂಬದಲ್ಲಿ ನೆಡೆದ ಒಂದು ಘಟನೆ.. ನನ್ನ ಮನಸ್ಸನ್ನು ಈ ರೀತಿ ಕೂಲ್ ಆಗಿ ಇರಲು, ಮತ್ತು ಜಗತ್ತನ್ನು ಪ್ರೀತಿಸಲು ಅವಕಾಶ ಮಾಡಿಕೊಟ್ಟಿತು.. ನಮ್ಮ ಚಿಕ್ಕಪ್ಪನ ಮಗನ ಜೀವನದಲ್ಲಿ ಸರಿ ಸುಮಾರು ಹೀಗೆ ಒಂದು ಘಟನೆ.. ಸುಂದರ ಹೆಂಡತಿ, ಗೌರವಯುಕ್ತ  ಕೆಲಸ, ಕೈತುಂಬಾ ಸಂಬಳ, ಮುದ್ದಾದ ಮಕ್ಕಳು.. ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರೂ ಕೂಡ.. ವಾರದ ಕೊನೆಯಲ್ಲಿ ಊರು ಸುತ್ತೋದು, ಪ್ರವಾಸ, ಎಲ್ಲವೂ ಇತ್ತು.. ಹೆಂಡತಿ ತುಂಬಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಳು. ಸಹಜವಾಗಿಯೇ ಅಂತರ್ಜಾಲ ತಾಣದಲ್ಲಿ ತುಂಬಾ ಹೆಸರುವಾಸಿಯಾಗಿದ್ದಳು.. ಮೊದಲು ಮೊದಲು ಗಂಡ ಇದನ್ನೆಲ್ಲಾ ಇಷ್ಟಪಡುತ್ತಿದ್ದ.. ಆದರೆ ಬರುಬರುತ್ತಾ.. ಅವನಿಗೆ ಸಂದೇಹ ಮೂಡಲು ಶುರುವಾಯಿತು.. ತನ್ನ ಹೆಂಡತಿ ತನಗೆ ಮೋಸ ಮಾಡುತ್ತಿರಬಹುದೇ ಎಂಬ ಅನುಮಾನ.. ಅದಕ್ಕೆ ತಕ್ಕಂತೆ.. ಹೆಂಡತಿಯ ಫೋನ್ ಸದಾ ಬ್ಯುಸಿ.. ಫೇಸ್ಬುಕ್, ವಾಟ್ಸಾಪ್ ಗಳಲ್ಲಿ ಸಂದೇಶಗಳ ಸುರಿಮಳೆ.. ಹೀಗಿದ್ದರೂ ಹೆಂಡತಿ ಎಂದೂ ತನ್ನ ಮನೆಯನ್ನು, ಮನದಾತನನ್ನು, ಮಕ್ಕಳನ್ನು ಪಕ್ಕಕ್ಕೆ ಸರಿಸಿರಲಿಲ್ಲ.. ಆದರೆ ಗಂಡನಿಗೆ ಶುರುವಾದ ಅನುಮಾನ ಪಿಶಾಚಿ.. ಅವಳ ಸಂಸಾರವನ್ನೇ ಬಲಿ ತೆಗೆದುಕೊಂಡಿತು.. ಒಂದು ಕೆಟ್ಟ ಘಳಿಗೆಯಲ್ಲಿ ಹೆಂಡತಿ ಮಾಡಿದ ಅಡಿಗೆಗೆ ವಿಷ ಬೆರೆಸಿದ.. ಎಲ್ಲರೂ ತಿಂದು  ಸಾಯಬೇಕೆಂಬುದು ಅವನ ಪ್ಲಾನ್ ಆಗಿತ್ತು.. ಆದರೆ ಅದೇನಾಯಿತೋ ಏನೋ.. ದುರದುಷ್ಟಕರ.. ಆಫೀಸಿನಿಂದ ಕರೆಬಂತು  ಎಂದು.. ವಾರಾಂತ್ಯದಲ್ಲಿ ಆಫೀಸಿಗೆ ಹೋದ.. ಬರುವಷ್ಟರಲ್ಲಿ ಊಟ ಮಾಡಿ,ಮಲಗಿಕೊಂಡ ಮಕ್ಕಳು, ಹೆಂಡತಿ ಮರಳಿ ಬಾರದ ಲೋಕಕ್ಕೆ ಹೋಗಿಯೇ ಬಿಟ್ಟಿದ್ದರು.. ಅವನಿಗೆ ಹುಚ್ಚು ಹಿಡಿಯಿತು.. ಈಗಲೂ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.. " ರೇವಂತ್ ಕಣ್ಣೀರು ಒರೆಸಿಕೊಂಡ.. ವೀಣಾ ಅವನ ಭುಜದ ಮೇಲೆ ಕೈಯಿಟ್ಟು.. ಒಮ್ಮೆ ತಟ್ಟಿದಳು..

"ಸಾರೀ ಕಾಂತ ಸ್ವಲ್ಪ ಭಾವುಕನಾಗಿ ಬಿಟ್ಟೆ.. .. ವೀಣಾ ನಿನ್ನ ಬಗ್ಗೆ ಎಲ್ಲಾ ಹೇಳಿದಾಗ.. ನನಗೆ ಮೊದಲು ಅಸೂಯೆ ಬಂದರೂ ಕೂಡ.. ಮೇಲಿನ ಘಟನೆ ನನ್ನ ಮನಸ್ಸನ್ನು ತಿಳಿಮಾಡಿತು.. ಹಾಗಾಗಿ ನಾ ವೀಣಾಳಿಗೆ ಸಪೋರ್ಟ್ ಮಾಡಿದೆ.. ಹಾಗಾಗಿ ಇಂದು ನಾವು ಇಲ್ಲಿ :-)

ಇಷ್ಟು ಕೇಳಿ.. ಕೃಷ್ಣಕಾಂತ್ ಕಣ್ಣಲ್ಲಿ ನೀರು..

"ಯಾಕೋ ಏನಾಯಿತು".. ವೀಣಾ-ರೇವಂತ್ ಇಬ್ಬರೂ ಗಾಬರಿಯಾಗಿ ಕೇಳಿದರು,,

"ಇದು ಕಣ್ಣೀರಲ್ಲ ಪನ್ನೀರು ಪನ್ನೀರು.. ಚಿನ್ನದಂಥ ಸ್ನೇಹಿತರಿರುವಾಗ ಕಣ್ಣೀರೇತಕೆ ಮನಸನು ಅರಿತು ನಗುತಾ ಇರಲು ಚಿಂತೆಯ ಮಾತೇಕೆ.. ನೀವ್ ಜೊತೆಯಿರಲು ನಮ್ಮಿ ಜಗಕೆ ಆ ಸ್ವರ್ಗವೇ ಜಾರಿದಂತೆ"

"ವಾಹ್.. ಅಣ್ಣಾವ್ರ ಭಕ್ತ.. ಕಣೋ ನೀನು.. " ರೇವಂತ್ ಆಲಂಗಿಸಿಕೊಂಡ..

ಕೃಷ್ಣಕಾಂತ್ ಎರಡು ಕೈಯನ್ನು ಚಾಚಿದ.. ವೀಣಾ ಮತ್ತು ರೇವಂತ್ ಇಬ್ಬರೂ ಕೃಷ್ಣಕಾಂತನಿಗೆ ಒಂದು ಹಗ್ ಕೊಟ್ಟರು..
ಸ್ನೇಹದ ಕಂಗಳು - ಅಂತರ್ಜಾಲದಲ್ಲಿ ಕಂಡದ್ದು 

ಹೋಟೆಲಿನಲ್ಲಿ ಮೆಲ್ಲಗೆ ಹಾಡು ಬರುತ್ತಿತ್ತು .. "ಕಣ್ಣಂಚಿನ ಈ ಮಾತಲಿ ಏನೇನೂ ತುಂಬಿದೆ"

Monday, November 28, 2016

ಮೊದಲ ಮೊದಲ ಢವ ಢವ .... :-)

"ಬೊಂಬೆಯಾಟವಯ್ಯ.. ಇದು ಬೊಂಬೆಯಾಟವಯ್ಯ.. ನೀ ಸೂತ್ರಧಾರಿ ನಾ ಪಾತ್ರಧಾರಿ ದಡವ ಸೇರಿಸಯ್ಯ" ಅಂದು ಬೆಳಿಗ್ಗೆಯಿಂದ ಅಣ್ಣಾವ್ರ ಈ ಹಾಡು ಬೇಡವೆಂದರೂ ಪದೇ ಪದೇ ತುಟಿಯ ಮೇಲೆ ಬರುತ್ತಲೇ ಇತ್ತು. ಕಾರಣ ಆಗ ಗೊತ್ತಿರಲಿಲ್ಲ, ಆದರೆ ಅದು ಗೊತ್ತಾದ ಹೊತ್ತು.. ವಾಹ್ ಸುಂದರ ಅನುಭವ...

"ನೀ ನನ್ನ ಗೆಲ್ಲಲಾರೆ" ಚಿತ್ರದಲ್ಲಿ ಕ್ಲೈಮಾಕ್ಸ್ ದೃಶ್ಯದಲ್ಲಿ ಪ್ರಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ರಾಜ್ ಅವರಿಗೆ ಸವಾಲು ಹಾಕುತ್ತಾ, "ನೋಡಿದೆಯಾ ಹೇಗಿದೆ ನನ್ನ ಮಾಸ್ಟರ್ ಪ್ಲಾನ್" ಎಂದಾಗ, ಅಣ್ಣಾವ್ರು ತಮ್ಮದೇ ಶೈಲಿಯಲ್ಲಿ "ತಿಪ್ಪೆ ಮೇಲಿರುವ ಹುಳಾನಾ ನುಂಗೋಕೆ ಕಪ್ಪೆ ಬಾಯಿ ಬಿಟ್ಟುಕೊಂಡಿರುತ್ತಂತೆ, ಕಪ್ಪೆನಾ ನುಂಗೋಕೆ ಹಾವು ಕಾಯ್ತಾ ಇರುತ್ತಂತೆ, ಹಾವನ್ನ ಹಿಡಿಯೋಕೆ ಗರುಡ ಹಾರಾಡ್ತಾ ಇರುತ್ತಂತೆ, ಗರುಡನ ಮೇಲೊಬ್ಬ ಕೂತಿರ್ತಾನಂತೆ... ಮಾಸ್ಟರ್ ಪ್ಲಾನ್ ಅವನ್ದು ಕಣೋ.. " ಹಾಗೆ ನಮ್ಮದು ಏನೇ ಪ್ಲಾನ್ ಇದ್ದರೂ, ಕಡೆಯಲ್ಲಿ ನೆಡೆಯುವುದು ಆ ಪರಮಾತ್ಮನ ಪುಸ್ತಕದ ಚಿತ್ರಕಥೆ ಹೇಗಿದೆಯೋ ಹಾಗೆ..

ಈ ಪೀಠಿಕೆಗೆ ಕಾರಣ, ೩ಕೆ ತಂಡ ಆಯೋಜಿಸಿದ್ದ ಕರುನಾಡ ರಾಜ್ಯೋತ್ಸವ ಸಮಾರಂಭಕ್ಕೆ ಸರಿಯಾಗಿ ಮೂರು ಘಂಟೆಗೆ ಅಲ್ಲಿರಬೇಕಿದ್ದ ನಾನು, ಸಮಯ ೨. ೧೫ ಆಗಿದ್ದರೂ ನಾ ಇದ್ದದ್ದು ಅಲ್ಲಿಂದ ಸರಿ ಸುಮಾರು ಐವತ್ತು ಕಿಮಿ ದೂರದಲ್ಲಿರುವ ನನ್ನ ಆಫೀಸ್ನಲ್ಲಿ.. ಹೇಗೋ ತರಾತುರಿಯಲ್ಲಿ ಕೆಲಸ ಮುಗಿಸಿ ನನ್ನ ಬಾಸ್ ಕಾರಿನಲ್ಲಿ ಯಶವಂತಪುರಕ್ಕೆ ಬಂದು ನನ್ನ ಕಾರನ್ನು ತೆಗೆದು ಹೊರಟೆ.. "ಶ್ರೀಕಾಂತಣ್ಣ ನಾ ವಿಜಯನಗರದ ಹತ್ತಿರ ಇದ್ದೇನೆ.. ಈಗ ಹೆಂಗೆ ಹೋಗಬೇಕು".. ತಕ್ಷಣ ಹೇಳಿದೆ "ಒಂದು ಹತ್ತೈದು ನಿಮಿಷ ನೀವು ಇರುವ ಕಡೆಯೇ ಇರಿ ನಾ ಬರುತ್ತಿದ್ದೇನೆ, ಜೊತೆಯಲ್ಲಿಯೇ ಹೋಗೋಣ"..

ಮೊದಲೇ ಹೆದರಿದ್ದವನಿಗೆ ಜೊತೆಗಾರ ಸಿಕ್ಕಿದ್ದು ಸ್ವಲ್ಪ ಸಮಾಧಾನ ತಂದಿತು. ಹೇಳಿದ ಸ್ಥಳದಲ್ಲಿ ಕಾಯುತ್ತಿದ್ದ ಕಡೆ ಹೋಗಿ ಅವರ ಜೊತೆಯಲ್ಲಿ ಸಭಾಂಗಣಕ್ಕೆ ಬಂದಾಗ.. ಆಗಲೇ ಕಾರ್ಯಕ್ರಮ ಶುರವಾಗಿತ್ತು.. ಇತ್ತ ಕಡೆ ಮಗಳು ಆಗಲೇ ಒಂದೆರಡು ಕರೆ, ಸಂದೇಶಗಳನ್ನು ಮಾಡಿ ನನ್ನಲ್ಲಿನ ಎದೆಬಡಿತವನ್ನು ಇನ್ನಷ್ಟು ಹೆಚ್ಚಿಸಿದ್ದಳು.

ಕಾರು ನಿಲ್ಲಿಸಿ, ಅಂಗಣಕ್ಕೆ ಹೋಗಿ, ಯಾರು ಇದ್ದಾರೆ, ಯಾರೂ ಇಲ್ಲ, ಯಾವುದನ್ನು ಗಮನಿಸದೆ, ಸದ್ದಿಲ್ಲದೇ ನನ್ನ ಕ್ಯಾಮೆರಾ ಹಿಡಿದು ಹಿಂದಿನ ಸಾಲಿಗೆ ಹೋಗಿ ತಣ್ಣಗೆ ಕೂತು ಬಿಡುವ ಪ್ಲಾನ್ ಮಾಸ್ಟರ್ ಪ್ಲಾನ್ ನನ್ನದಾಗಿತ್ತು.  ಆದರೆ ಅಣ್ಣಾವ್ರು ಹೇಳುವ ಮಾಸ್ಟರ್ ಪ್ಲಾನ್ ಕತೃ.. ತನ್ನದೇ ಒಂದು ಪ್ಲಾನ್ ಮಾಡಿದ್ದ..

"ಕವನ ವಾಚಿಸಿದ ಕವಿಗೆ ಧನ್ಯವಾದ ಹೇಳುತ್ತಾ.. ಈಗ ಮುಂದಿನ ಕವಿತೆಯನ್ನು ಓದಲು ಬರುತ್ತಿದ್ದರೆ ಶ್ರೀಕಾಂತ್ ಮಂಜುನಾಥ್" ನನ್ನ ಗೆಳೆಯ ಅರುಣ್ ಶೃಂಗೇರಿ ಹಿಡಿದಿದ್ದ ಮೈಕಿಂದ ಹೊರಗೆ ಬಂದ ಮಾತುಗಳನ್ನು ಕೇಳಿ, ಒಮ್ಮೆಲೇ ಗಾಬರಿಯಾಗಿ, ಸ್ವಲ್ಪ ಹೊತ್ತು ಆಮೇಲೆ ಹೇಳುತ್ತೇನೆ ಅಂದೇ. ಆವಾಗ ಅರಿವಾಯಿತು, ನನ್ನ ಸರದಿ ಇನ್ನೂ ಮುಗಿದಿಲ್ಲ, ಹಾಗೆ ಮಾಸ್ಟರ್ ಪ್ಲಾನ್ ನಲ್ಲಿ ನನ್ನ ಸೀನ್ ಇನ್ನೂ ಬಂದಿಲ್ಲ ಅಂತ :-(

ಬಂದಿದ್ದ ಒಂದಷ್ಟು ಗೆಳೆಯರನ್ನು ಮಾತಾಡಿಸಿ, ಒಂದೆರಡು ಫೋಟೋಗಳನ್ನು ಕ್ಲಿಕ್ಕಿಸಿ, ಹೇಗೋ ಕೆಲ ಕ್ಷಣಗಳನ್ನು ತಳ್ಳಿದೆ.. "ಶ್ರೀಕಾಂತ್ ಮಂಜುನಾಥ್ ರವರು ಈಗ ತಮ್ಮ ಕವಿತೆಯನ್ನು ವಾಚಿಸಲಿದ್ದಾರೆ" ಬೇರೆ ಏನೂ ದಾರಿಯಿರಲಿಲ್ಲ, ಈಗ ಮತ್ತೆ ನಖರ ಮಾಡಿದರೆ, ಅಹಂಕಾರವಾಗುತ್ತದೆ.. ಜೊತೆಯಲ್ಲಿ ಅಲ್ಲಿದ್ದ ಮಹಾನ್ ದೈತ್ಯ ಪ್ರತಿಭೆಗಳ ಮುಂದೆ ನಾನು ಏನೂ ಅಲ್ಲಾ.. ಬಭೃವಾಹನದಲ್ಲಿ ಹೇಳುವ ರೀತಿಯಲ್ಲಿ "ತೃಣಕ್ಕೆ ಸಮಾನ" ಆಗಿ ಬಿಡುತ್ತೇನೆ ಎಂದು, ಢವ ಢವ ಗುಟ್ಟುತ್ತಿದ್ದ ಎದೆಯನ್ನು ಒಮ್ಮೆ ಹಾಗೆ ಸವರಿ "ಆಲ್ ವಿಲ್ ಬಿ ವೆಲ್" ಅಂತ ಸಮಾಧಾನ ಹೇಳಿ, ಹೊತ್ತು ತಂದಿದ್ದ ಕವಿತೆಯ ಪ್ರತಿಯನ್ನು ತೆಗೆದುಕೊಳ್ಳಲು ಹೋದೆ.. ಆಗ ಗೆಳೆಯ ಅರುಣ್ "ಶ್ರೀ ನಿಮ್ಮ ಕವಿತೆ ಇಲ್ಲಿದೆ ತೆಗೆದುಕೊಳ್ಳಿ" ಆಗ ಶುರುವಾಯಿತು..

ಹಾಗೆ ಮೇಲೆ ಒಮ್ಮೆ ನೋಡಿದೆ.. ಮಾಸ್ಟರ್ ಪ್ಲಾನ್ ಕತೃ ಹೇಳಿದ "ಲೈಟ್ಸ್, ಕ್ಯಾಮೆರಾ.. ಆಕ್ಷನ್"

"ಎಲ್ಲರಿಗೂ ನಮಸ್ಕಾರ"  ಧ್ವನಿ ನನಗೆ ಕೇಳಲಿಲ್ಲ
"ಶ್ರೀ ಮೈಕ್ ಆನ್ ಮಾಡಿಕೊಳ್ಳಿ".. ಪಕ್ಕದಿಂದ ಅಶರೀರವಾಣಿ ಬಂತು

"ನೋಡಿ ಪ್ರಾಬ್ಲಮ್ ಇಲ್ಲಿಂದ ಶುರುವಾಗಿದೆ.. " ಎಲ್ಲರೂ ಗೊಳ್ ಎಂದು ನಕ್ಕರು..
ಎದೆ ಬಡಿತದ ಒಂದೆರಡು ತಾಳಗಳು ಕಮ್ಮಿಯಾದವು.. ದೀರ್ಘ ಉಸಿರು ಎಳೆದುಕೊಂಡು..
"ನಾ ಮದುವೆ ಆಗುವಾಗಲೂ ಇಷ್ಟು ಹೆದರಿಕೆ ಆಗಿರಲಿಲ್ಲ" ಮತ್ತೆ ಸಭಿಕರು ನಕ್ಕರು..
ಇನ್ನೊಂದೆರಡು ತಾಳಗಳು ಕಮ್ಮಿಯಾದವು..
"ಇದನ್ನು ಓದುವಾಗ.. ನಾ ತೊದಲಿದರೆ, ಗಂಟಲು ಗಟ್ಟಿ ಬಂದರೆ. ಇದು ನನ್ನ ಹೆದರಿಕೆಗಿಂತ.. ನಾ ಆಯ್ದುಕೊಂಡ ವಸ್ತುವಿನ ಭಾರವೇ ಕಾರಣ"

ಮತ್ತೆ ಸಭೆಯಲ್ಲಿ ಲೈಟ್ ಆಗಿ ನಗು ಜೊತೆಯಲ್ಲಿ ಕೆಲವರ ಹುಬ್ಬು ಎರಡನೇ ಮಹಡಿ ಹತ್ತಿತ್ತು .. "ಈ ಪ್ರಾಣಿ ಬ್ಲಾಗ್ ನಲ್ಲಿ ಮಾತ್ರ ಪೀಠಿಕೆ ಅಲ್ಲಾ .. ಮಾತಾಡುವಾಗಲೂ ಹೀಗೆನಾ.. "

ಮುಂದುವರಿಸಿದೆ ....

"ಆಯ್ದುಕೊಂಡ ವಸ್ತು ಮಹಾಭಾರತ.. ಈ ಮಹಾಭಾರತದಲ್ಲಿ ಗಂಗೆ, ಜಲ ಎಷ್ಟು ಪ್ರಾಮುಖ್ಯತೆ ಪಡೆದಿದೆ ಎಂದು ಹೇಳುವ ಒಂದು ಪ್ರಯತ್ನ ನನ್ನದು"




"ಕಮಾನ್ ಶ್ರೀ" ನನಗೆ ದೇವರು ಕೊಟ್ಟ ಸ್ನೇಹಿತೆ ರೂಪ ಸತೀಶ್ ಅವರ ಪ್ರೋತ್ಸಾಹದ ಮಾತುಗಳು, ಸ್ಟೇಜ್ ಇಂದ ನಾನು ಯಾರನ್ನು ನೋಡದೆ ಇದ್ದರೂ, ನನ್ನ ಅದ್ಭುತ ಸ್ನೇಹಿತೆ ನಿವೇದಿತಾ ಚಿರಂತನ ಅವರ ಪ್ರೋತ್ಸಾಹ.. ಇದಕ್ಕಿಂತ ಮಿಗಿಲಾಗಿ ನನ್ನ ಮಡದಿ ಸವಿತಾ.. (ಹೊರಗಡೆ ಒಂದು ಮಣ ಮಾತಾಡುವ ಇವರು.. ಹೇಗೆ ಮಾತಾಡುತ್ತಾರೆ ಎಂಬ ಆತಂಕ ಒಂದು ಕಡೆ, ಇನ್ನೊಂದು ಕಡೆ.. ಈ ಪ್ರಾಣಿ ಏನಾದರೂ ಮಾತಾಡುತ್ತೆ.. ಸರಿಯಾಗುತ್ತೆ ಎನ್ನುವ ವಿಶ್ವಾಸ).. ಜೊತೆಯಲ್ಲಿ "ಅಪ್ಪ ನನ್ನ ಹೀರೋ.. ಯು ಕ್ಯಾನ್ ಡು ಇಟ್.. ಯು ವಿಲ್ ಡು ಇಟ್"  ಎಂದು ಸದಾ ನನಗೆ ಎನರ್ಜಿ ಕೊಡುವ ನನ್ನ ಮಗಳು ಅರ್ಥಾತ್ ನನ್ನ ಸ್ನೇಹಿತೆ ಶೀತಲ್ ಮುಂದಿನ ಸಾಲಿನಲ್ಲಿ ಕೂತಿದ್ದು ನನಗೆ ಆನೆ ಬಲ ಬಂದಷ್ಟು ಆಯಿತು.. ಅಶರೀರವಾಣಿಯಾಗಿ "ಶ್ರೀ ನಾನಿದ್ದೇನೆ ಜೊತೆಯಲ್ಲಿ ಯು ಗೋ ಅಂಡ್ ಹ್ಯಾವ್ ಏ ಬ್ಲಾಸ್ಟ್" ಎಂದ ಅರ್ಪಿತಾ.... ಜೊತೆಯಲ್ಲಿ ನನ್ನ ಕುಟುಂಬ ಸದಸ್ಯರು.. ಇವರ ಜೊತೆಯಲ್ಲಿ ಬಲಗೈನಲ್ಲಿ ಕೈ ಗಡಿಯಾರದ ರೂಪದಲ್ಲಿ ವಿರಾಜಿಸಿದ್ದ ನನ್ನ ಸ್ಫೂರ್ತಿ, ಒಳಗಿನ ಪರಮಾತ್ಮ ನನ್ನ ಅಪ್ಪ..

ಧೈರ್ಯ ಮಾಡಿ ಶುರುಮಾಡಿಯೇ ಬಿಟ್ಟೆ

"ಗಂಗಾಜಲಭಾರತ"

ಕಾಯುತ್ತಿದ್ದ ಶಂತನು
ಒಂದಾಯಿತು ಎರಡಾಯಿತು
ಸಿಗಲೇ ಇಲ್ಲ ಕಂದಮ್ಮನ ಮುದ್ದು ಅಪ್ಪುಗೆ 
ತಡೆಯಲಾಗದ ಶಂತನು 
ಧರೆಗಿಳಿದನು ದೇವವ್ರತ 
ಭಾರತ ಮಹಾಭಾರತವಾಗಲು ಒಂದು ಕುರುಹಾದ
ಗಂಗೆಯ ಕಂದನಾದ ದೇವವ್ರತ
ಅವನ ಮಡಿಲಲ್ಲಿ ಅರಳಿತು ಮಹಾಭಾರತದ ಸಂಸ್ಕೃತಿ!

ಕೊಟ್ಟ ವರವನ್ನು ಮರ್ಕಟ ಮನದ ಕುಂತಿ 
ಇಟ್ಟೆ ಬಿಟ್ಟಳು ಪರೀಕ್ಷೆಗೆ
ನಿಗಿ ನಿಗಿ ಹೊಳೆಯುವ ಕಂದಮ್ಮ 
ದಿನಕರನ ಕೊಡುಗೆಯಾಗಿ 
ಮರದ ತೊಟ್ಟಿಲಿನಲ್ಲಿ ಗಂಗೆಯಲ್ಲಿ ಹೊರಟೇ ಬಿಟ್ಟಿತು
ರಾಧೇಯನಾದ ಕರ್ಣ 
ಭಾರತಕ್ಕೆ ಇನ್ನಷ್ಟು ತೂಕ ಸಿಗುವಂತೆ ಮಾಡಿದ 
ಅವನ ಜನ್ಮದಿಂದ ತೂಗಿತು ಮಹಾಭಾರತದ ಸಂಸ್ಕೃತಿ!

ಪಾಪಿ ಗಂಗೆ ಎಂದು ಕೂಗಿದಳು ಜ್ವಾಲೆ  
(ಅಣ್ಣಾವ್ರ ಬಭೃವಾಹನ ಚಿತ್ರ ನೋಡಿದವರಿಗೆ ಇದು ಗೊತ್ತಿರುತ್ತದೆ.. ಎಂದೇ ಉಪ ಪೀಠಿಕೆ ಹಾಕಿದೆ.. ಮತ್ತೊಮ್ಮೆ ಎಲ್ಲರೂ ನಕ್ಕರು)
ಕುಪಿತಗೊಂಡಳು ಗಂಗೆ 
ಕಾರಣ ಕೇಳಲು ಗಂಗೆ 
ಜ್ವಾಲೆ ಇಟ್ಟಳು ಗಂಗೆಯ ಒಡಲಿಗೆ ಮತ್ಸರದ ಬೆಂಕಿ 
ಒಡನೆ ಮೂಡಿತು ಮತ್ತೊಂದು ಅಸ್ತ್ರ 
ಬಭೃವಾಹನನಿಂದ ಹರಿಯಿತು ಕಿರೀಟಿ ಅಭಿಮಾನದ ವಸ್ತ್ರ 
ಭರತನ ಕಥೆಗೆ ಇನ್ನೊಂದು ಗರಿ ಮೂಡಿತು ಗಂಗೆಯ ಮುನಿಸಿನಿಂದ 
ಆ ಜ್ವಾಲೆಯಿಂದ ನುಗ್ಗಿತು ಮಹಾಭಾರತದ ಸಂಸ್ಕೃತಿ!

ಮಹಾಭಾರತದಲ್ಲಿ ತಮಗರಿವಿಲ್ಲದೆ ಭುವಿಗಳಿದ 
ಜೀವಿಗಳು ಭರತ ವಂಶದ ಕಥೆಗೆ 
ಬಲವಾದ ತಿರುವು ಕೊಡಲು ಕಾರಣವಾಗಿದ್ದು ಜಲ ಸಂಸ್ಕೃತಿ
ತನ್ನ ಒಡಲಿಗೆ ಬಿಟ್ಟ ಯಾವುದೇ ವಸ್ತುವನ್ನು 
ಜತನದಿಂದ ಕಾಪಾಡಿ ಅದಕ್ಕೊಂದು 
ತಿರುವು ನೀಡಿ ಕಥೆಗೆ ಮಹತ್ ಪಾತ್ರ ಕೊಡುವ ಗಂಗೆ 
ಗಂಗಾಜಲ ಸಂಸ್ಕೃತಿ ಕೊಟ್ಟ ತಿರುವು ಭಾರತಕ್ಕೆ ಭಾರವಾಯಿತು!!!

ಉಪಸಂಹಾರ : "ಭೀಷ್ಮ, ಕರ್ಣ, ಬಭೃವಾಹನ ಮಹಾಭಾರತದ ಕತೆಗೆ ಕೊಟ್ಟ ತಿರುವುದು ಬಲು ದೊಡ್ಡದು..
ಈ ಪದ್ಯದ ರೂಪದ ಕವಿತೆಯನ್ನು ಗದ್ಯದ ರೂಪದಲ್ಲಿ ನಾ ಓದಿದ್ದರೆ.. ನನ್ನ ಅನುಭವ ಎಷ್ಟು ದೊಡ್ಡದು ಎಂದು ನೀವೇ ಊಹಿಸಿಕೊಳ್ಳಿ.. ಎಲ್ಲರಿಗೂ ನಮಸ್ಕಾರ"

ಚಪ್ಪಾಳೆಗಳು ಬಿತ್ತು . ಖುಷಿಯಾಯಿತು..

ಕೂತಿದ್ದವರು "ಅಣ್ಣ ಸೂಪರ್ ಅಣ್ಣ ಚೆನ್ನಾಗಿದೆ.. ಚೆನ್ನಾಗಿತ್ತು ಅಂದರು"

ಇನ್ನಷ್ಟು ಖುಷಿಯಾಯಿತು.. ಭಾರವಾಗಿದ್ದ ಮನಸ್ಸು ಹಕ್ಕಿಯ ಹಾಗೆ ಹಾರಾಡ ತೊಡಗಿತು..

(ಕವಿತೆಯನ್ನು ವಾಚನ ಮಾಡುವಾಗ ಅಲ್ಪ ಪ್ರಾಣಗಳು ಮಹಾ ಪ್ರಾಣಗಳು ಬಹಳ ತೊಂದರೆ ಕೊಟ್ಟವು.. ಭಾರತ "ಬಾರತ" ವಾಯಿತು, ಭಾರ "ಬಾರಾ" ವಾಯಿತು, ಭರತ "ಬರತ"ವಾಯಿತು.. ಯಾಕೆ ಗೊತ್ತೇ.. ಅಲ್ಲಿ ನಿಂತು ಓದುವಾಗ, ನನ್ನ ಮಹಾಪ್ರಾಣವೇ ಸ್ವಲ್ಪ ಅಲ್ಪವಾಗಿ ಹೋಗಿತ್ತು :-)

ಈ ಒಂದು ಸುಂದರ ಅವಕಾಶಕ್ಕೆ ಅನುವು ಮಾಡಿಕೊಟ್ಟ ೩ಕೆ ತಂಡಕ್ಕೆ ಮತ್ತೆ ನನ್ನನ್ನು ಪ್ರೋತ್ಸಾಹಿಸಿದ ಮೇಲೆ ಹೆಸರು ಕಾಣಿಸಿದ ಸುಂದರ ಮನದ ಜೀವಿಗಳಿಗೂ.. ಅಣ್ಣಾವ್ರ ಸ್ಟೈಲ್ ನಲ್ಲಿ "ಧನ್ಯವಾದಗಳು"

ಕವಿಗಳಿಗೆ ಅಭಿನಂದನಾ ಪತ್ರ ಕೊಡುವಾಗ ನಾ ಎಲ್ಲರ ಚಿತ್ರ ತೆಗೆಯುತ್ತಿದ್ದೆ, ನನ್ನ ಸರದಿ ಬಂದಾಗ, ನನ್ನ ಕ್ಯಾಮೆರಾ ಅಲ್ಲಿಯೇ ಕೂತಿದ್ದವರಿಗೆ ಕೊಟ್ಟು ನಾ ವೇದಿಕೆಗೆ ಜಂಪ್ ಹೊಡೆದೆ.. ಎದುರಿಗೆ ಪ್ರಖರವಾದ ದೀಪ.. ನನ್ನ ಭ್ರಮೆ, ಯಾರೋ ಫೋಟೋ ತೆಗೆಯುತ್ತಾರೆ ಎಂದು.. ವೇದಿಕೆ ಮೇಲಿದ್ದ ಗಣ್ಯ ವ್ಯಕ್ತಿಗಳು ನನಗೆ ಹಸ್ತ ಲಾಘವ ಕೊಡಲು ಕೈ ಚಾಚಿದರೆ, ಗಾಬರಿಯಾಗಿದ್ದ ನಾನು ಅವರ ಕೈ ನೋಡದೆ, ಫೋಟೋಗೆ ಪೋಸ್ ಕೊಡ್ತಾ ಇದ್ದೆ, ಅಲ್ಲಿ ಫೋಟೋ ತೆಗೆದರೋ ಇಲ್ಲವೋ ಗೊತ್ತಿಲ್ಲ.. ಕ್ಷಣ ಕಾಲ.. ಕವಿ ಬದಲು ಕಪಿಯಾಗಿದ್ದೆ.. .... :-)
ಅಭಿನಂದನಾ ಪಾತ್ರ 
ವೇದಿಕೆಯಿಂದ ಇಳಿದಾಗ.. ಅಲ್ಲಿದ್ದವರು.. ಅಣ್ಣಾ ಅವರು ಶೇಕ್ ಹ್ಯಾಂಡ್ ಮಾಡಲು ಕೈ ಕೊಟ್ಟರೆ.. ನೀವು ಫೋಟೋಗೆ ಪೋಸ್ ಕೊಡ್ತಾ ಇದ್ದೀರಾ. ಅಂತ ಜೋರಾಗಿ ನಗುತ್ತಿದ್ದರು.. ನಾ ನನ್ನ ಹಲ್ಲನ್ನು ಬಿಟ್ಟು ಬಿಡದೆ ಬೇರೆ ದಾರಿಯಿರಲಿಲ್ಲ :-)

ಈ ಕಾರ್ಯಕ್ರಮಕ್ಕೆ ನನ್ನ ಜೊತೆಯಲ್ಲಿ ಒಬ್ಬರು ಬಂದರು ಅಂದೆನಲ್ಲ ಅವರ ಹೆಸರು "ಪ್ರಶಸ್ತಿ ಪ್ರಭಾಕರ್" .. ಈ ಕಾರ್ಯಕ್ರಮ ಮುಗಿದ ಮೇಲೆ ಅನುಭವಕ್ಕೆ ಬಂತು "ಅರೆ ಪ್ರಶಸ್ತಿ ಜೊತೆಯಲ್ಲಿ ನಾ ಬಂದಿದ್ದೇನೆ.. ನನ್ನ ಜೊತೆಯಲ್ಲಿ ಪ್ರಶಸ್ತಿ ಬಂದ ಮೇಲೆ ಅದೇ ನನಗೆ ಸಿಕ್ಕ ಮೊದಲ ಪ್ರಶಸ್ತಿ ಎಂದು ಅರಿವಾಯಿತು... ಈ ಸುಂದರ ಮೊಗದ ನನ್ನ ಲೇಖನದ ಮೂಲಕ ಸರದಾರನಿಗೆ ಧನ್ಯವಾದಗಳು!!!

Thursday, November 24, 2016

ಕಣ್ಣಂಚಿನ ನೋಟ - 270° ಕೋನದಲ್ಲಿ



ಮುಂದುವರಿದ ನೋಟ!!!

ತನ್ನ ಮ್ಯಾನೇಜರ್ ಗೆ ಎರಡು ದಿನ ಮನೆಯಿಂದಲೇ ಕೆಲಸ ಮಾಡುತ್ತೇನೆ ಎಂದು ಹೇಳಿದಾಗ.. ಆತ ಕರೆಮಾಡಿ ತುಸು ಗೊಣಗುಟ್ಟಿದರೂ, ರಜೆ ತುಂಬಾ ತುಂಬಾ ಕಡಿಮೆ ಹಾಕುತ್ತಿದ್ದ, ಮತ್ತು ತನ್ನ ಅತ್ಯಂತ ಶಿಸ್ತುಬದ್ಧ ಸ್ಟಾಫ್ ಗಳಲ್ಲಿ ಒಬ್ಬಳಾಗಿದ್ದ ವೀಣಾಳ ಅಪರೂಪದ ಕೋರಿಕೆಯನ್ನು ಇಲ್ಲ ಎನ್ನುವುದಕ್ಕೆ ಮನಸ್ಸು ಬಾರದೆ ಒಪ್ಪಿಕೊಂಡಿದ್ದ.. 

ತನ್ನ ಮ್ಯಾನೇಜರ್ "ವಾರಾಂತ್ಯ ಶುಭಪ್ರದವಾಗಿರಲಿ" ಎಂಬ ಸಂದೇಶ ಕೂಡಿದ್ದ ಇಮೇಲ್ ನೋಡಿ ವೀಣಾಳಿಗೆ ಬಲು ಸಂತಸವಾಗಿತ್ತು.  

ರೇವಂತ್ ಮನೆಗೆ ಬಿಟ್ಟು ಹೋಗಿದ್ದರಿಂದ, ಮತ್ತು ಹೋಟೆಲ್ನಲ್ಲಿ ಹೊಟ್ಟೆ ತುಂಬಾ ತಿಂದಿದ್ದರಿಂದ, ಮನೆಯಲ್ಲಿ ಮಾಡಬೇಕಾದ ಕೆಲಸವೇನು ಇರಲಿಲ್ಲ. ಮನೆಗೆ ಬಂದಾಗ, ಅಮ್ಮ ಅಪ್ಪ ಕಾಲು ನೀಡಿಕೊಂಡು ಕೂತಿದ್ದರು. ವೀಣಾ ತನ್ನ ನಿತ್ಯದ ಅಭ್ಯಾಸದಂತೆ ಅಮ್ಮನ ಹತ್ತಿರ ಬಂದು.. ಹಾಗೆ ಒಮ್ಮೆ ಆಲಂಗಿಸಿಕೊಂಡು, ಅಮ್ಮನ ಕೆನ್ನೆಗೆ ಮುತ್ತು ಕೊಟ್ಟಳು, ಅಮ್ಮನೂ ಕೂಡ ತನ್ನ ಮುದ್ದಿನ ಮಗಳ ಸಂತಸವನ್ನು ಕಂಡು, ಒಮ್ಮೆ ಕೈಬೆರಳುಗಳಿಂದ ದೃಷ್ಟಿ ತೆಗೆದರು. ಲಟಲಟ ಎಂದು ಬೆರಳುಗಳು ಸದ್ದು ಮಾಡಿದ್ದನ್ನು ಕಂಡು "ಲೇ ವೀಣಾ ಏನೇ ಇದು ಈ ಪಾಟಿ ದೃಷ್ಟಿಯಾಗಿದೆ .. ಹೋಗು.. ಕಾಲು ಕೈ ತೊಳೆದು ಬೆಳವಾಡಿ ಗಣಪನಿಗೆ ಕೈಮುಗಿದು ಬಾ". 

"ಅಮ್ಮ ನನ್ನ ಮುದ್ದು ಅಮ್ಮ" ಎಂದು ಮತ್ತೊಮ್ಮೆ ಮುತ್ತು ಕೊಟ್ಟು..ಅಪ್ಪನಿಗೆ ಹೈ ಫೈವ್ ಹೊಡೆದು.. ತನ್ನ ಕೋಣೆಗೆ ಓಡಿದಳು.. ಅಮ್ಮ ಹೇಳಿದಂತೆ.. ಗಣಪನಿಗೆ ಕೈಮುಗಿದು ಬಂದು.. ಟಿವಿ ನೋಡುತ್ತಿದ್ದ ಅಪ್ಪ ಅಮ್ಮನ ಜೊತೆಯಲ್ಲಿ ಕೂತಳು..  

ಉದಯ ಮೂವೀಸ್ ನಲ್ಲಿ ಅಣ್ಣಾವ್ರ ಚಿತ್ರ "ಶಂಕರ್ ಗುರು" ಅಣ್ಣಾವ್ರು ಪದ್ಮಪ್ರಿಯಾಳನ್ನು ರೇಗಿಸುವ ದೃಶ್ಯ.. ಅಣ್ಣಾವ್ರ ಅಭಿನಯದಲ್ಲಿ ಮುಳುಗಿಹೋಗಿದ್ದಳು.. ಮತ್ತೆ ತನ್ನ ಮಾರನೇ ದಿನದ ಮುಖ್ಯ ಕಾರ್ಯ ನೆನಪಿಗೆ ಬಂದು.. ಅಮ್ಮ ಬೆಳಿಗ್ಗೆ ಸ್ವಲ್ಪ ತಡವಾಗಿ ವಾಕಿಂಗಿಗೆ ಹೋಗುತ್ತೇನೆ.. ನನ್ನನ್ನು ಬೇಗ ಎಬ್ಬಿಸಬೇಡ.. ಸರಿ ನಾ ಮಲಗುತ್ತೇನೆ ಎಂದು ಹೇಳಿ ಅಪ್ಪ ಅಮ್ಮನಿಗೆ ಒಂದೊಂದು ಮುತ್ತನ್ನು ನೀಡಿ-ಪಡೆದು ತನ್ನ ಕೋಣೆಗೆ ಜಿಂಕೆಯಂತೆ ಓಡಿದಳು. 

ನಿದ್ದೆ ಬರದೇ ಹೊರಳಾಡುತ್ತಲೇ ಇದ್ದಳು.. ಶಂಕರ್ ಗುರು ಚಿತ್ರದ "ಏನೇನೋ ಆಸೆ ನೀ ತ೦ದಾ ಭಾಷೆ ಇ೦ದು ಹೊಸತನ ತ೦ದು ತನು ಮನ ಕೂಗುತಿದೆ ಬಾ ಎ೦ದು ನಿನ್ನ" ಹಾಡು ಬೇಡವೆಂದರೂ ಮತ್ತೆ ಮತ್ತೆ ಬಂದು ಕಾಡುತ್ತಿತ್ತು.. 

"ಕರಾಗ್ರೇ ವಸತೇ ಲಕ್ಷ್ಮಿ... " ಮೊಬೈಲ್ ನಲ್ಲಿ ಇಟ್ಟಿದ್ದ ಅಲಾರಾಂ ಹೊಡೆದುಕೊಳ್ಳತೊಡಗಿತು.. ದಿಗ್ಗನೆ ಎದ್ದು.. ಮೋರೆ ತೊಳೆದು.. ಕೈಯಲ್ಲಿಯೇ ತಲೆಗೂದಲನ್ನು ಸರಿಮಾಡಿಕೊಂಡು.. ಅಮ್ಮ ಕಾಫಿ ಕುಡಿದು ಹೋಗು ವೀಣಾ ಎಂದಿದ್ದನ್ನು ಕೇಳಿಸಿಕೊಳ್ಳದೆ ಪಾರ್ಕ್ ಕಡೆಗೆ ಚಿಗರೆಯಂತೆ ಓಡಿದಳು.. 

ಇಂದು ವಾಕಿಂಗ್ ಮಾಡುವ ಮೂಡ್ ಇರಲಿಲ್ಲ.. ಅಕಸ್ಮಾತ್ ತಾನು ಅವನನ್ನು ನೋಡದೆ ಹೋದರೆ.. ಅಥವಾ ಅವ ಇಂದು ಬರದೇ ಹೋದರೆ.. ಅಥವಾ ಅವನು ನನ್ನ ತರಹ ಸಮಯ ಬದಲಿಸಿಕೊಂಡಿದ್ದರೇ.. ಹೀಗೆ ರೇ... ಪ್ರಪಂಚದಲ್ಲಿಯೇ ನೀರಿಗೆ ಬಿದ್ದ ಮಂಜುಗಲ್ಲಿನಂತೆ ಮುಳುಗದೇ.. ತೇಲದೇ ಒದ್ದಾಡುತ್ತಿದ್ದಳು.. ನಿಧಾನವಾಗಿ ಮೈಯೆಲ್ಲಾ ಕಣ್ಣಾಗಿ ಮಕ್ಕಳು ಹೆಜ್ಜೆ ಇಡುವಂತೆ ತನ್ನ ವಾಕಿಂಗ್ ಶುರುಮಾಡಿದಳು... ಅವನು ಬರುವ ಸಮಯವಾಯಿತು.. ಕಣ್ಣುಗಳು ದುರ್ಬಿನುಗಳಾಗಿದ್ದವು.. 
ಐದು ಸುತ್ತಾಯಿತು.. ಹತ್ತು ಸುತ್ತಾಯಿತು.. ಉಹೂಂ.. ಅವನ ಸುಳಿವಿಲ್ಲ.. ಎಂದಿಗಿಂತ ಇನ್ನೂ ಹತ್ತು ರೌಂಡ್ ಹೆಚ್ಚಿಗೆ ಹಾಕಿದಳು.. ಅವನು ಆಫೀಸಿಗೆ ಹೋಗುವ ಸಮಯ ಮೀರಿತ್ತು ಅನ್ನಿಸಿತು.. ಬೇಸರದಿಂದ ಮನೆ ಕಡೆಗೆ ಹೆಜ್ಜೆ ಹಾಕಿದಳು.. ಅವಳು ಮನೆಯ ಕಡೆ ತಿರುಗಬೇಕು.. ಯಾವುದೋ ಒಂದು ಅದೃಶ್ಯ ಶಕ್ತಿ ಅವಳನ್ನು ಬಲವಂತವಾಗಿ ತಿರುಗಿ ನೋಡುವಂತೆ ಮಾಡಿತು.. ಗರ್ ಅಂತ ಹಾಗೆ ತಲೆ ತಿರುಗಿಸಿನೋಡಿದಳು.. ಅರೆ ಚಿರಪರಿಚಿತ ತನ್ನ ಇಷ್ಟದ ಬಿಳಿ ಶರ್ಟ್..! 

ಆವನು ಒಂದು ತುಸು ತಡವಾಗಿ ಹೊರಟಿದ್ದ ಅನ್ನಿಸುತ್ತದೆ.. ವೀಣಾ ತನ್ನ ತಲೆಯನ್ನು ತಾನೇ ಬಡಿದುಕೊಂಡು.. ಛೆ ಇನ್ನೊಂದು ರೌಂಡ್ ಹೊಡೆದಿದ್ದರೆ ಸಿಕ್ಕಿಯೇ ಬಿಡುತ್ತಿದ್ದ ಅನ್ನಿಸಿತು. ತನ್ನ ಮನೆಯ ಗೇಟ್ ಹತ್ತಿರ ಬಂದು.. ಒಳಗೆ ಹೋಗದೆ ಗೇಟನ್ನು ಹಿಡಿದು.. ಯೋಚಿಸತೊಡಗಿದಳು.. "ಅವನ ಬಣ್ಣ ತುಸು ಕಪ್ಪು.. ಆದರೆ ರೇಷ್ಮೆಯಂತಹ ಅವನ ತಲೆಗೂದಲು .. ಭಕ್ತಿ ಭಾವ ತುಸು ಹೆಚ್ಚು ಎನ್ನಿಸುವ ಅವನ ಹಣೆಯಲ್ಲಿನ ಕುಂಕುಮ, ಕೈಗೆ ಬೆಳ್ಳಿಯ ಬಳೆ.. ಬಲಗೈಗೆ ವಾಚು.. ಒಂದು ರೀತಿಯಲ್ಲಿ ಸಾಧಾರಣ ಎನಿಸಿದರೂ, ಇನ್ನೊಮ್ಮೆ ನೋಡಬೇಕು ಎಂದು ಅವಳಲ್ಲಿ ಆಸೆ ಹುಟ್ಟಿಸುತ್ತಿತ್ತು.. ಮುಂಚೆ ಪ್ರತಿದಿನವೂ ಅವನನ್ನು ನೋಡುತಿದ್ದಾಗ, ಅವನ ವಸ್ತ್ರ ವಿನ್ಯಾಸ, ಅಭಿರುಚಿ ಇಷ್ಟವಾಗುತ್ತಿತ್ತು.. ಅವಳ ಸೂಕ್ಷಮತಿ ಅವನ ಡ್ರೆಸ್ ಕೋಡ್ ಬಗ್ಗೆ ತುಸು ನಿಖರವಾದ ಅಭಿಪ್ರಾಯಕ್ಕೆ ಬಂದಿದ್ದಳು. ಅವನದು ವಾರದ ದಿನಕ್ಕೆ ತಕ್ಕಂತೆ ಒಂದು ರೀತಿಯಲ್ಲಿ ಬಣ್ಣ ಬಣ್ಣದ ವಸ್ತ್ರಗಳನ್ನು ಹಾಕಿಕೊಳ್ಳುತ್ತಿದ್ದ. ಸೋಮವಾರ ನೀಲಿ, ಮಂಗಳವಾರ ತುಸು ಕಡುನೀಲಿ, ಬುಧವಾರ ಪಿಂಕ್, ಗುರುವಾರ ಕ್ರೀಮ್, ಶುಕ್ರವಾರ ಬಿಳಿ ಶರ್ಟ್ ಮತ್ತು  ಕಡು ನೀಲಿ ಜೀನ್ಸ್.. ಕೃಷ್ಣಕಾಂತನಿಗೆ ಬಿಳಿ ಶರ್ಟ್ ಮತ್ತು ಕಡು ನೀಲಿ ಜೀನ್ಸ್ ಎಂದರೆ ಪ್ರಾಣ ಎಂದು ಅವಳಿಗೆ ಅನ್ನಿಸುತಿತ್ತು. .. ಅವಳಿಗೆ ಗೊತ್ತಿತ್ತು ಈ ಕಾಂಬಿನೇಶನ್ ಚೆನ್ನಾಗಿ ಒಪ್ಪುತ್ತದೆ ಎಂದು.. ಹಾಗಾಗಿ ಸಾಮಾನ್ಯ ಶುಕ್ರವಾರದಂದು ಆ ಕಾಂಬಿನೇಶನಿಗೆ ಮೊರೆ ಹೋಗುತ್ತಿದ್ದ ಎಂಬುದು ಅವಳ ಗಮನಿಸುವಿಕೆಯ ಮೂಲಕ ಅರಿವಾಗಿತ್ತು. .. ಅರಿವಿಲ್ಲದ ಅವನ ಈ ಅಭ್ಯಾಸ ವೀಣಾಳಿಗೆ ಇಷ್ಟವಾಗಿತ್ತು. 

"ಅಯ್ಯೋ ಒಂದು ದಿನ ಅನ್ಯಾಯವಾಗಿ ಮಿಸ್ ಮಾಡಿಕೊಂಡೆ.. ನಾಳೆ ತುಸು ಬೇಗನೆ ಹೋಗಿ ಪಾರ್ಕ್ ನಲ್ಲಿ ಕಾಯುತ್ತೇನೆ.. ಆವ ಬರುವ ತನಕ ಪಾರ್ಕಿನಿಂದ ಹೋಗುವುದು ಬೇಡ" ಎಂದು ವೀರ ಭೀಷ್ಮ ಶಪಥ ಮಾಡಿ.. ತನ್ನ ನಿತ್ಯ ಕಾಯಕಕ್ಕೆ ತೊಡಗಿಕೊಂಡಳು.. 

ರೇವಂತ್ ಗೆ ಮೆಸೇಜ್ ಮಾಡುವುದು ಮರೆಯಲಿಲ್ಲ 

"ರೇವ್.. ಜಸ್ಟ್ ಮಿಸ್ ಆಯ್ತು ಕಣೋ.. ನಾಳೆ ಬೆಳಿಗ್ಗೆ ಖಂಡಿತಾ ಮೀಟ್ ಮಾಡುತ್ತೇನೆ.. :-) "
ಆ ಕಡೆಯಿಂದ "ಮುದ್ದು ಮೈ ಲವ್.. ಆಲ್ ದಿ ಬೆಸ್ಟ್ ಕಣೋ"..  
"ಥ್ಯಾಂಕ್ ಯು ರೇವ್.. ಹ್ಯಾವ್ ಏ ಗುಡ್ ಡೇ"
"ಯೂ ಟೂ ಮೈ ಲವ್ :-)" 

ನಿರಾಳವಾಗಿ ತನ್ನ ಕೆಲಸ ಮುಗಿಸಿ... ಮಧ್ಯಾಹ್ನ ಒಂದು ಪುಟ್ಟ ನಿದ್ದೆ ಮುಗಿಸಿ.. ಸಂಜೆ ದೇವರಮನೆಯಲ್ಲಿ ದೀಪ ಹಚ್ಚಿ.. ಮನೆಯ ಹತ್ತಿರವೇ ಇದ್ದ ಹನುಮನ ಗುಡಿಗೆ ಹೋಗಿ ಬಂದಳು.. ಮನಸ್ಸು ಅರಿವಿಲ್ಲದೆ ಒಂದು  ರೀತಿಯ ಸುಖದ ನಶೆಯಲ್ಲಿ ತೇಲಾಡುತ್ತಿತ್ತು.. 

ಸಂಜೆಯಿಂದ ರಾತ್ರಿಯಾಯಿತು.. ರಾತ್ರಿಯಿಂದ ಬೆಳಗಾಯಿತು.. ತಾನು ಕಾಯುತ್ತಿದ್ದ ಆ ಸವಿ ಘಳಿಗೆ ಇನ್ನೇನೂ ಹತ್ತಿರದಲ್ಲಿಯೇ ಇತ್ತು...  ಪ್ರತಿದಿನಕ್ಕಿಂತಲೂ ತುಸು ಬೇಗನೆ ಪಾರ್ಕ್ ಒಳಗೆ ಹೋಗಿ.. ಅವನು ಬರುವ ಹಾದಿ ಕಾಣುವಂತೆ ಒಂದು ಕಲ್ಲು ಬೆಂಚಿನ ಮೇಲೆ ಕೂತಳು.. 

ಅವನು ಬಂದಾಗ ಹೇಗೆ ಮಾತಾಡುವುದು.. ಏನು ಮಾತಾಡುವುದು.. ಈ ಪಾರ್ಕಿನಲ್ಲಿ ಎಲ್ಲರೂ ಚಿರಪರಿಚಿತರು.. ಅವರ ಮುಂದೆ ಈ ಹುಡುಗನ ಹತ್ತಿರ ಮಾತಾಡಿದರೆ ಹೇಗೆ ಇರುತ್ತದೆ.. ನೂರಾರು ಯೋಚನೆಗಳು ಬೆಂಗಳೂರಿನ ಏರ್ ಪೋರ್ಟ್ ರಸ್ತೆಯ ಮೇಲಿನ ವಾಹನ ದಟ್ಟಣೆಯಂತೆ ಅವಳ ಮನದ ಪಟಲದಲ್ಲಿ ದಟ್ಟೈಸುತ್ತಿತ್ತು.. 

"ಏನೇ ವೀಣಾ.. ಸುತ್ತು ಹೊಡೆಯೋದು ಬಿಟ್ಟು. .ಸುಸ್ತಾಗಿ ಕೂತುಬಿಟ್ಟಿದ್ದೀಯ.. ಯಾಕೆ ಮೈಗೆ ಹುಷಾರಿಲ್ಲವೇ.. ಈ ಚಳಿಗೆ ಯಾಕೆ ಬರುತ್ತೀಯ.. ಹೋಗು ಮನೆಗೆ ಹೋಗಿ ಬೆಚ್ಚನೆ ಮಲಗಿಕೊ" ಪಕ್ಕದ ಮನೆಯ ವನಜ ಆಂಟಿ ಕೂಗಿದಾಗ ಮತ್ತೆ ವಾಸ್ತವಕ್ಕೆ ಬಂದಳು ವೀಣಾ. 

"ಇಲ್ಲ ಆಂಟಿ.. ಹಾಗೆ ಕೂತು ಜಪ ಮಾಡುತ್ತಿದ್ದೇನೆ.. ನಾ ಆರಾಮಾಗಿದ್ದೀನಿ.. ನೀವು ಯೋಚನೆ ಮಾಡಬೇಡಿ.. ಒಂದು ಹತ್ತು ನಿಮಿಷ ಜಪ ಮುಗಿಸಿ ಬರುತ್ತೇನೆ.. "

"ಮುದ್ದು ವೀಣಾ.. " ಆಂಟಿ ಹತ್ತಿರ ಬಂದು.. ವೀಣಾಳ ಕೆನ್ನೆಯನ್ನು ಸವರಿ ಮುಂದಕ್ಕೆ ಹೋದರು. 

ಈ ಕಡೆ ಇದರ ಯಾವುದೇ ಸುಳಿವಿಲ್ಲದ  ಕೃಷ್ಣಕಾಂತ್ ಪ್ರತಿದಿನದಂತೆ, ನಿತ್ಯ ಕರ್ಮ ಮುಗಿಸಿ.. ಆಫೀಸ್ ಕ್ಯಾಬ್ ಕಡೆ ಹೆಜ್ಜೆ ಹಾಕುತ್ತಿದ್ದ.. ತಾನು ಕಿವಿಗೆ ಹಾಕಿಕೊಂಡಿದ್ದ ಹ್ಯಾಂಡ್ಸ್ ಫ್ರೀ ನಲ್ಲಿ ಹಾಡು ಬರುತ್ತಿತ್ತು.. ಅಣ್ಣಾವ್ರ ಪರಮ ಅಭಿಮಾನಿಯಾಗಿದ್ದ ಅವನಿಗೆ ಅವರ ಹಾಡುಗಳು ಬಂದರೆ ಏಕ್ ದಂ ಮಂಜಿನ ಹನಿಗಳಿಂದ ಮೋರೆ ತೊಳೆದುಕೊಂಡ ಉದ್ಯಾನವನದ ಗರಿಕೆಯಂತಾಗಿಬಿಡುತ್ತಿದ್ದ.. 

"ಹೃದಯದಲಿ ಇದೇನಿದು.. ನದಿಯೊಂದು ಓಡಿದೆ" ಮನಸ್ಸು ಹಕ್ಕಿಯ ಹಾಗೆ ಹಾರುತಿತ್ತು.. ಅಣ್ಣಾವ್ರ ಚಿತ್ರಗಳು, ಹಾಡುಗಳು, ಸಂಭಾಷಣೆಗಳ ಶಕ್ತಿ ಇದೇ ಅಲ್ಲವೇ.. 

"ಸರ್ ಒಂದು ನಿಮಿಷ"  ಎಫ್ ಎಂ ಹಾಡು ಬದಲಾಗಿತ್ತು.. "ಕೋಗಿಲೆ ಹಾಡಿದೆ ಕೇಳಿದೆಯಾ" ಧ್ವನಿ ಬಂದ ಕಡೆ ತಿರುಗಿದ.. ಹೃದಯದ ಬಡಿತ "ಒಂದು ಕ್ಷಣ ಇರೋ ಈಗ ಬಂದೆ" ಎನ್ನುವ ಹಾಗೆ ಧಡಕ್ ಅಂತ ನಿಂತು ಮತ್ತೆ ಹೊಡೆದುಕೊಳ್ಳತೊಡಗಿತು.. 

ತನ್ನ ಕಣ್ಣನ್ನೇ ತಾ ನಂಬದಾದ.. ತಾನು ಇಷ್ಟಪಡುವ, ಮನದಲ್ಲಿಯೇ ಆರಾಧಿಸುವ, ಯಾವುದೇ ನಿಷ್ಕಲ್ಮಶ ಭಾವ ಇಲ್ಲದ ಗೆಳತಿ ತನ್ನ ಕಣ್ಣ ಮುಂದೆ.. ಹಾಗೆ ಒಮ್ಮೆ ನೋಡಿದ.. 

ಘಟ್ಟ ಪ್ರದೇಶದ ಅಂಕು ಡೊಂಕಿನ ರಸ್ತೆಯಂತಿದ್ದ ಆಕೆಯ ಬೈತಲೆ.. ಇಳಿ ಬಿದ್ದಿದ್ದ ನೀಳಗೂದಲು.. ಮಕ್ಕಳಿಗೆ ಕೂಕ್ ಕೂಕ್ ಎಂದು ಕಣ್ಣಾ ಮುಚ್ಚಾಲೆ ಆಡುವಂತೆ, ಬೆಳಗಿನ ತಂಗಾಳಿಗೆ  ಸೊಂಟದ ಬದಿಯಿಂದ ಇಣುಕುತ್ತಿತ್ತು.. ಚಳಿಗೆ ಧರಿಸಿದ್ದ ತುಂಬು ತೋಳಿನ ಸ್ವೆಟರ್ .. ಮುಖ ನೋಡಲು ಧೈರ್ಯ ಬರುತ್ತಿಲ್ಲ.. 

"ಸರ್ ಸರ್ ಒಂದು ನಿಮಿಷ" ಮತ್ತೆ ಕೋಗಿಲೆ ಧ್ವನಿ.. 

ಧರೆಗಿಳಿದು ಬಂದ ಕೃಷ್ಣಕಾಂತ್.. 

ಹಾಗೆ ಆಕೆಯ ಮೊಗವನ್ನು ದಿಟ್ಟಿಸಿ ನೋಡಿದ.. ಅದ್ಭುತವಾದ ಹೊಳೆಯುವ ಕಂಗಳು.. ಸೂಪರ್ ಮೂನನ್ನು ನಾಚಿಸುತಿತ್ತು... ಸುಂದರವಾಗಿ ತಿದ್ದಿ ತೀಡಿದಂತಹ ತುಸು ತೆಳುವಾದ ಹುಬ್ಬುಗಳು, ಆ ಕಣ್ಣುಗಳಿಗೆ ಬಾಲಕ ಕೃಷ್ಣ ಗೋವರ್ಧನಗಿರಿಯನ್ನು ಎತ್ತಿ ಹಿಡಿದು ಊರ ಜನರಿಗೆ ರಕ್ಷಣೆ ಮಾಡಿದಂತೆ ಇತ್ತು.  ಆ ಹೊಳೆಯುವ ಕಂಗಳಿಗೆ ಸವಾಲು ಎನ್ನುವಂತೆ, ಆಕೆಯ ಮುದ್ದಾದ ಮೂಗಿಗೆ ಸರಿಯಾಗಿ ಅಲಂಕರಿಸಿಕೊಂಡಿತ್ತು ಫಳ ಫಳ ಹೊಳೆಯುವ ಮೂಗುತಿ.  ತುಟಿಯ ಮೇಲೆ ಸದಾ ಜಿನುಗುತ್ತಿದ್ದ ತಾ ಇಷ್ಟಪಡುವ ಮಂದಹಾಸ "ಕೃಷ್ಣಕಾಂತ್ ನೀ ಬಂದೆ.. ನನ್ನ ಮಂದಹಾಸಕ್ಕೆ ಒಂದು ನೂರು ಗ್ರಾಂ ತೂಕ ಜಾಸ್ತಿ ಬಂತು" ಎನ್ನುವಂತಿತ್ತು. 
ಚಿತ್ರಕೃಪೆ : ಗೂಗಲ್ ನೋಟದಲ್ಲಿ ಸಿಕ್ಕಿದ್ದು 

"ಸರ್ ನಿಮ್ಮ ಹತ್ತಿರ ಸ್ವಲ್ಪ ಮಾತಾಡಬೇಕಿತ್ತು"

ಜೋರಾಗಿ ಎದೆಯೊಳಗೆ ನಗಾರಿ ಬಾರಿಸುತ್ತಿತ್ತು.. ಇವೆಲ್ಲವೂ ಕೆಲವೇ ಕ್ಷಣಗಳಲ್ಲಿ ನೆಡೆದರೂ, ಯಾಕೋ ಅರಿವಿಲ್ಲದೆ ಕೃಷ್ಣಕಾಂತನಿಗೆ ಯುಗ ಯುಗದಿಂದ ಅಲ್ಲೇ ನಿಂತಿದ್ದೇನೆ ಎನ್ನುವಂತಿತ್ತು. ಮೊಬೈಲ್ ಹೊಡೆದುಕೊಳ್ಳುತ್ತಿತ್ತು, ಅದಕ್ಕೆ ಸವಾಲ್ ಎನ್ನುವಂತೆ ಅವನ ಹೃದಯದ ಬಡಿತವೂ ಕೂಡ !!!

"ಮೇಡಂ.. ನೀವು... ನನ್ನನ್ನು.. ಆಹಾ.. ಏನು ಸಮಾಚಾರ.. ಹೇಳಿ.. "

"ಸರ್.. ಇಂದು ಸಂಜೆ ಏಳು ಘಂಟೆಗೆ ನೀವು  ಇಲ್ಲಿಯೇ ಸಿಗಬಹುದೇ.. ನಿಮ್ಮ ಬಳಿ ಮಾತಾಡುವುದಿದೆ" ಇವನ ಉತ್ತರಕ್ಕೆ ಕಾಯದೆ ಹಾಗೆ ಅವನನ್ನು ಬಳಸಿ ಮುಂದೆ ಹೋಗಿ ಒಮ್ಮೆ ತಿರುಗಿ ಅವಳ ಹೊಳೆಯುವ ಕಂಗಳನ್ನು ಒಮ್ಮೆ ಮಿಟುಕಿಸಿ ಹೊರಟೆ ಬಿಟ್ಟಳು.. 

ಜೀವ ಡಗ್ ಎಂದಿತು.. ಅಚಾನಕ್ ಅವಳು ಬಂದು ನಿಂತದ್ದು.. ಮಾತಾಡಿದ್ದು.. ಈಗ ಸಂಜೆ ಇಲ್ಲಿಯೇ ಸಿಗೋಣ ಎಂದಿದ್ದು..ಎಲ್ಲವೂ ಯಾವುದೋ ಯಕ್ಷ ಲೋಕದ ಯಕ್ಷಿಣಿ ಎನ್ನುವಂತಿತ್ತು.. 

ಕೈಯಲ್ಲಿದ್ದ ಮೊಬೈಲ್ ಮತ್ತೆ ಕೂಗತೊಡಗಿತು.. "ಬಂದೆ ಬಂದೆ ಒಂದೆರಡು ನಿಮಿಷ" ಎಂದು ಹೇಳಿ ದಪ ದಪ ಕಾಲು ಹಾಕುತ್ತಾ .. ತನ್ನ ಕ್ಯಾಬ್ ಕಡೆಗೆ ಹೊರಟ ಕೃಷ್ಣಕಾಂತ್ ... 

ಆಹ್.. ಮನಸು ಉಯ್ಯಾಲೆಯಂತೆ ತೂಗಾಡತೊಡಗಿತ್ತು .. ಮೊಬೈಲ್ ನ ಸೌಂಡನ್ನು ಜಾಸ್ತಿ ಮಾಡಿದ.. "ನಿನ್ನ ರೂಪು ಎದೆಯ ಕಲಕಿ ಕಣ್ಣು ಮಿಂದಾಗ.. ನಿನ್ನ ನೋಟ ಕೂಡಿದಾಗ ಕಂಡೆ ಅನುರಾಗ" ಈ ಹಾಡು ಪ್ರೇಮಮಯವಾಗಿದ್ದರೂ.. ತನ್ನ ಕಲ್ಮಶವಿಲ್ಲದ ಗೆಳೆತನಕ್ಕೆ ಒಂದು ಸುಂದರ ಆತ್ಮೀಯತೆಯ ರಂಗು ಕೊಟ್ಟಿತ್ತು. 

ಆಫೀಸ್ ನಲ್ಲಿ ಕೃಷ್ಣಕಾಂತ್ ಗೆ ಹೊತ್ತೇ ಹೋಗುತ್ತಿಲ್ಲ.. "ಆ ಮೋಡ ಬಾನಲ್ಲಿ ತೇಲಾಡುತ್ತಾ.. ನಿನಗಾಗಿ ನಾ ಬಂದೆ ನೋಡೆನ್ನುತಾ.. ನಲ್ಲೆ ನಿನ್ನ ಸಂದೇಶವಾ ನನಗೆ ಹೇಳಿದೆ" ಹೀಗೆ ಮನಸ್ಸು ಹಕ್ಕಿಯ ರೂಪ ಪಡೆದುಕೊಂಡು ಗರಿಬಿಚ್ಚಿ ಹಾರತೊಡಗಿತು. ವೀಣಾಳನ್ನು ಹತ್ತಿರದಿಂದ ನೋಡಿದ್ದು, ಅವಳ ಜೇನುಧ್ವನಿಯನ್ನು ಕೇಳಿದ್ದು, ಅವಳು ಹೋಗುವಾಗ ಕಣ್ಣು ಮಿಟುಕಿಸಿ ನಕ್ಕಿದ್ದು.. ಒಂದು ಹೇಳಿಕೊಳ್ಳಲಾಗದ ಅನುಭವ ನೀಡಿತ್ತು.. ಉತ್ಸಾಹದಿಂದ ಕೆಲಸಗಳು ಸಲೀಸಾಗಿ ಮುಗಿಯುತ್ತಿದ್ದವು, ಆದರೆ ಅವನ ಬಲಗೈಗೆ ಕಟ್ಟಿದ್ದ ಕೈಗಡಿಯಾರ ಮಾತ್ರ ಮುಷ್ಕರ ಹೂಡಿ ಕುಳಿತಿರುವಂತೆ ಭಾಸವಾಗುತ್ತಿತ್ತು.. ಎಷ್ಟೋ ಬಾರಿ ನಿಂತು ಹೋಗಿದೆಯೇ ಎಂದು ಕಿವಿಗೆ ಆನಿಸಿಕೊಂಡು, ಮೊಬೈಲ್ ನಲ್ಲಿ ಸಮಯ ನೋಡಿಕೊಳ್ಳುತ್ತಲೇ, ಆಫೀಸ್ ನಲ್ಲಿ ಇದ್ದ ಗಡಿಯಾರ, ತನ್ನ ಲ್ಯಾಪ್ಟಾಪ್ನ ಸಮಯದ ಗೆರೆ... ಹೀಗೆ... ತನ್ನ ನಿರಪರಾಧಿ ಕಕ್ಷಿದಾರನನ್ನು ಉಳಿಸಲು ವಕೀಲರು ತಮ್ಮ ಜ್ಞಾನವನ್ನು ಪಣಕ್ಕಿಟ್ಟು ಹೋರಾಡುವಂತೆ,  ಎಲ್ಲಾ ರೀತಿಯಲ್ಲಿಯೂ ಎಲ್ಲವೂ ಸರಿಯಾಗಿದೆ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳುತ್ತಿದ್ದ.  

ಆದರೆ ಅವನಿಗೆ ಆ ಕಡೆ ವೀಣಾಳ ಮನದಲ್ಲಿ ತರಂಗಗಳು ಏಳುತ್ತಿದ್ದ ಪರಿಯ ಬಗ್ಗೆ ಅರಿವಿರಲಿಲ್ಲ.. !

ಅತ್ತ ಕಡೆ ವೀಣಾ.. ಇತ್ತ ಕಡೆ ಕೃಷ್ಣಕಾಂತ್.. ವಸುಂಧರೆಯ ಮನೆಯಲ್ಲಿನ ಶಂಖ ಏಳು ಬಾರಿಗೆ ಹೊಡೆದುಕೊಳ್ಳುವುದಕ್ಕೆ ಕಾಯುತ್ತಿದ್ದರು.. 

ಕೃಷ್ಣಕಾಂತ್ ಆಫೀಸಿಂದ ಮನೆಗೆ ಬರುವ ಸಮಯ.. ಆಫೀಸಿಂದ ಕ್ಯಾಬ್ ಹತ್ತುವಾಗ ಸ್ವಲ್ಪ ಮಟ್ಟಿಗೆ ಸಿಂಗರಿಸಿಕೊಂಡೆ ಬಂದಿದ್ದ.. ಬಲವಂತವಾಗಿ ಬರುತ್ತಿದ್ದ ನಿದ್ದೆಯನ್ನು ತಡೆದುಹಿಡಿದಿದ್ದ.. ತನ್ನ ನೆಚ್ಚಿನ ಪೂರ್ಣ ಚಂದ್ರ ತೇಜಸ್ವಿ ಬರೆದಿದ್ದ ಜುಗಾರಿ ಕ್ರಾಸ್ ಕಥೆ ಓದುತ್ತಿದ್ದ. ಅವನಿಗೆ ಅರಿವಿರಲಿಲ್ಲ ಇಂದಿನ ಘಟನೆ ಕೂಡ ಜುಗಾರಿ ಕ್ರಾಸ್ ಕತೆಯ ತರಹ ರೋಮಾಂಚಕವಾಗಿದೆ ಎಂದು
೬.೫೧... ೬.೫೨... ೬.೫೩.. ೬.೫೪... ೬.೫೫.. ೬.೫೬.. ೬.೫೭.. ೬.೫೮.. ೬.೫೯.. ೭.೦೦

ಪಾರ್ಕ್ ಹತ್ತಿರ ಕೃಷ್ಣಕಾಂತ್.. ಬೆಳಿಗ್ಗೆ ವೀಣಾ ನಿಂತು ಮಾತಾಡಿಸಿದ ಜಾಗದಲ್ಲಿಯೇ ನಿಂತಿದ್ದ.. 
"ಫಿರ್ ಫಿರ್" ಎಂದು ಸದ್ದು ಮಾಡುತ್ತಾ.. ಬಿಳಿ ಹೋಂಡಾ ಆಕ್ಟಿವಾ ಬಂದು ನಿಂತಿತು.. ಬೆಳದಿಂಗಳ ಬಾಲೆಯ ಹಾಗೆ ಬಿಳಿ ಚೂಡಿದಾರ್ ನಲ್ಲಿ ಈಕೆ ಇನ್ನೂ ಹೊಳೆಯುತ್ತಿದ್ದಳು.. ಬೇಡ ಬೇಡವೆಂದರೂ.. ಆ ರಸ್ತೆಯಲ್ಲಿನ ಬೀದಿ ದೀಪದ ಬೆಳಕು ಅವಳ ಮೂಗುತಿಯನ್ನು ಕನ್ಯಾಕುಮಾರಿ ದೇವಸ್ಥಾನದಲ್ಲಿನ ಹೊಳೆಯುವ ಮೂಗುತಿಯ ತರಹ ಫಳ ಫಳ ಬೆಳಗಿಸುತಿತ್ತು .. 

"ಸರ್.. ನಾಳೆ.... ನ್ಯೂ ಶಾಂತಿ ಸಾಗರ್ ಹೋಟೆಲ್ ಹತ್ತಿರ ಬನ್ನಿ.. ನಿಮ್ಮ ಬಳಿ ಮಾತಾಡುವುದಿದೆ.. ನೀವು ನನ್ನ ಅದ್ಭುತ ಗೆಳೆಯರಲ್ಲಿ ಒಬ್ಬರು.. ದಯಮಾಡಿ ಬನ್ನಿ.. ನಾ ನಿಮಗಾಗಿ ಅಲ್ಲಿಯೇ ಕಾದಿರುತ್ತೇನೆ.. ನೀವು ನೀಲಿ ಜೀನ್ಸ್ ಮತ್ತು ಬಿಳಿ ಶರ್ಟ್ ತೊಟ್ಟು ಬನ್ನಿ ಪ್ಲೀಸ್.. ಓಕೆ ಬೈ" ಎಂದು ಮತ್ತೊಮ್ಮೆ ಕಣ್ಣು ಮಿಟುಕಿಸಿ ತನ್ನ ಗಾಡಿಯನ್ನು ಏರಿ ಹೋಗಿಯೇ ಬಿಟ್ಟಳು. 

ಕೃಷ್ಣಕಾಂತನಿಗೆ ಅರೆ ಏನಿದು ಎನ್ನುವ ಗೊಂದಲವಿದ್ದರೂ.. ವೀಣಾ ಬಂದು ಮಾತಾಡಿಸಿದ್ದು ಖುಷಿಯಾಗಿತ್ತು.. ಕಿವಿಗೆ ಸಿಕ್ಕಿಸಿಕೊಂಡಿದ್ದ ಹ್ಯಾಂಡ್ಸ್ ಫ್ರೀ "ಬೊಂಬೆಯಾಟವಯ್ಯ ಇದು ಬೊಂಬೆಯಾಟವಯ್ಯ.. ನೀ ಸೂತ್ರಧಾರಿ.. ನಾ ಪಾತ್ರಧಾರಿ.. ದಡವ ಸೇರಿಸಯ್ಯಾ" ಅಣ್ಣಾವ್ರ ಹಾಡು ಕೇಳಿಸುತ್ತಿತ್ತು.. .. 

ಮನಸ್ಸು ನಾಳಿನ ದಿನಕ್ಕೆ ಕಾಯುತ್ತಿತ್ತು... 

"ಈ ಸಮಯ ಆನಂದಮಯ ನೂತನ ಬಾಳಿನ ಶುಭೋದಯ"  ಬಭೃವಾಹನದ ಅಣ್ಣಾವ್ರ ಗಾನ ಅಲ್ಲಿಯೇ ಇದ್ದ ಬೇಕರಿಯಿಂದ ಕೇಳಿ ಬರುತ್ತಿತ್ತು.. !

Friday, November 18, 2016

ಕಣ್ಣಂಚಿನ ನೋಟ.....ಈ ಕಡೆ ದೃಶ್ಯ!

ಕಣ್ಣಂಚಿನ ನೋಟ - ಆ ಕಡೆ ದೃಶ್ಯ

ಕನ್ನಡಿ ಮುಂದೆ ನಿಂತ ವೀಣಾ, ತನ್ನ ಸಾಧಾರಣ ಎನ್ನಿಸುವ ರೂಪವನ್ನೊಮ್ಮೆ ನೋಡಿಕೊಂಡಳು. ತನ್ನ ನೀಳಕೇಶ ರಾಶಿಯನ್ನೊಮ್ಮೆ ಸರಿ ಮಾಡಿಕೊಂಡಳು, ನಿದ್ದೆ ಮಾಡಿ ಎದ್ದದ್ದರಿಂದ, ತಲೆಗೂದಲು ಗಾಳಿಗೆ ಸಿಕ್ಕ ಹುಲ್ಲುಗಾವಲಾಗಿತ್ತು. ಒಮ್ಮೆ ಹಾಗೆ ಕೈಯಲ್ಲಿಯೇ, ಮಕ್ಕಳು ಸ್ಲೇಟನ್ನು ತಮ್ಮ ಅಂಗೈಯಲ್ಲಿ ಮನಸ್ಸಿಗೆ ಬಂದಂತೆ ಒರೆಸುವಂತೆ, ಸರಿ ಮಾಡಿಕೊಂಡು ಮನೆಯ ಹತ್ತಿರವೇ ಇದ್ದ ಪಾರ್ಕ ಕಡೆಗೆ ಹೆಜ್ಜೆ ಇಟ್ಟಳು.

ಗೇಟ್ ಕಿರ್ರ್ ಎಂದು ಸದ್ದು ಮಾಡುತ್ತಾ ತೆರೆದುಕೊಂಡಿತು, ಗೇಟಿನ ಬಳಿಯೇ ಮಲಗಿದ್ದ ಬೀದಿ ನಾಯಿ ಒಮ್ಮೆ ಹಾಗೆ ವೀಣಾಳನ್ನು ನೋಡಿ ಹಲ್ಲು ಕಿಸಿದು ಬಾಲ ಅಲ್ಲಾಡಿಸಿತು. ಕೈಯಲ್ಲಿದ್ದ ಬಿಸ್ಕತ್ತನ್ನು ನಾಯಿಗೆ ಹಾಕಿ, ಒಮ್ಮೆ ತಲೆ ಸವರಿ ಹೊರಟಳು. ಎದುರು ಮನೆಯ ಆಂಟಿ, "ವೀಣಾ ಯಾಕೆ ಇವತ್ತು ಸ್ವಲ್ಪ ಲೇಟ್.."

"ಹೌದು ಆಂಟಿ ನಿನ್ನೆ ಬಂಗಾರದ ಮನುಷ್ಯ ಚಿತ್ರ ನೋಡ್ತಾ ಇದ್ದೆ,  ಎದ್ದಿದ್ದು ಲೇಟ್ ಆಯಿತು", ಆಂಟಿ ನಕ್ಕರು.

"ಒಂದೆರಡು ರೌಂಡ್ ಕಡಿಮೆ ಮಾಡಿದರೆ ಆಯ್ತು.. ಕೆಲಸಕ್ಕೆ ಹೋಗೋಕೆ ಸಮಯ ಅಡ್ಜಸ್ಟ್ ಆಗುತ್ತೆ ಅಲ್ವೇ ಆಂಟಿ"

"ವೀಣಾ.. ನೀನು ಉಪೇಂದ್ರಿ.... "

ಇಬ್ಬರೂ ಜೋರಾಗಿ ನಕ್ಕರು..

ಆಂಟಿ ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದರು. ಇವಳಿಗೆ ಆತುರ, ಕಾತುರ, ತಳಮಳ.. ಆದರೆ ಆಂಟಿಗೆ ವಯಸ್ಸಾದ ಕಾರಣ, ಬೇಗನೆ ಹೆಜ್ಜೆ ಹಾಕಲು ಸಾಧ್ಯವಿರಲಿಲ್ಲ.

ಪಾರ್ಕಿಗೆ ಬಂದ ಕೂಡಲೇ, ಯಥಾಪ್ರಕಾರ, ಮೊದಲನೇ ಸುತ್ತು ಮಾತ್ರ ಇಬ್ಬರೂ ಜೊತೆಯಲ್ಲಿ ಸುತ್ತಿದರು, ನಂತರ, ಬೆಂಗಳೂರಿನ ಆಟೋ ತರಹ ವೇಗ ಪಡೆದುಕೊಂಡಳು ವೀಣಾ.  ಎರಡು ಕೈಯನ್ನು ಬೀಸುತ್ತಾ, ನೆಲ ನೋಡಿಕೊಂಡು ತನ್ನ ಪಾಡಿಗೆ ಹೆಜ್ಜೆ ಹಾಕತೊಡಗಿದಳು. ಮನಸ್ಸಲ್ಲಿ ಒಂದು ರೀತಿಯ ತಳಮಳ.. ಮನಸ್ಸು ಅರಿಯದೆ ಹಿಂದಿನ ದಿನದ ಸಂಜೆಗೆ ಓಡಿತು.

ಮರಗಿಡಗಳ ಮಧ್ಯೆ ತೂರಿ ಬರುತ್ತಿದ್ದ ಚಂದಿರನ ಬೆಳದಿಂಗಳು.. ಹಣ್ಣಿನ ಅಂಗಡಿ ಮುಂದೆ ಜನ. ಅದರ ಪಕ್ಕದಲ್ಲಿಯೇ ಇದ್ದ ಏಟಿಎಂ ಮುಂದೆ ನೂರಾರು ಮಂದಿ (ಕಾರಣ ಹೇಳಬೇಕಿಲ್ಲ ಅಲ್ಲವೇ.. ಎಲ್ಲರಿಗೂ ಗರಿ ಗರಿ ೨೦೦೦ ನೋಟನ್ನು ನೋಡುವ, ಮುಟ್ಟುವ ತವಕ.. ಖರ್ಚು ಮಾಡೋಕೆ ಅಲ್ಲ.. ನಮ್ಮೆಲ್ಲರ ಹೆಮ್ಮೆಯ ಪ್ರಧಾನಿ ಇತ್ತೀಚಿಗಷ್ಟೇ ಬೀಸುತ್ತಿರುವ ಒಂದು ಬದಲಾವಣೆಯ ಗಾಳಿಗೆ ಮೈಯೊಡ್ಡುವ ತವಕ...!), ಅವರು ನಿಲ್ಲಿಸಿದ್ದ ಗಾಡಿಗಳು, ಮಕ್ಕಳು ಆಟದ ಸಾಮಾನುಗಳನ್ನು ಎಲ್ಲೆಂದರಲ್ಲಿ ಬಿಸಾಕಿದ ರೀತಿ ಇತ್ತು..!

ಅಚಾನಕ್, ಒಂದು ಚಹರೆ ತನ್ನನ್ನು ಹಾದು ಹೋದಂತೆ ಅನುಭವ.  ಅರೆ ಅರೆ.. ಉಫ್.. ಓಹ್.. ಛೆ.. ಅನ್ನುವಷ್ಟರಲ್ಲಿ ಹಾಗೆ ಮುಂದಕ್ಕೆ ಹೋದರೆ, ಆಗಲೇ ಆ ವ್ಯಕ್ತಿ ಅಲ್ಲಿಯೇ ಅಡ್ಡ ಬಂದ ಗಾಡಿಯವನಿಗೆ ಸಾರಿ ಹೇಳುತ್ತಾ ನಿಂತಿದ್ದ. . ವೀಣಾ ಗಾಡಿಯನ್ನು ತೆಗೆಯುವಾಗ, ಪಕ್ಕದ ಗಾಡಿಗೆ ತಗುಲಿ, ಅದರ ಒಡತಿ ಆ ಮಂದ ಬೆಳಕಲ್ಲೂ ಕಣ್ಣನ್ನು ಕೆಂಪಗೆ ಮಾಡಿಕೊಂಡದ್ದು ಕಂಡು ಬಂತು. ಆಕೆಗೆ ಸಾರಿ ಹೇಳಿ, ಗಾಡಿ ತೆಗೆದುಕೊಂಡು ಹೊರಟ ವೀಣಾಳಿಗೆ ಮನದಲ್ಲಿಯೇ ಸಾಗರ ತರಂಗಗಳು. ಒಮ್ಮೆ ತಿರುಗಿ ನೋಡಿದಳು.. ಅದೇ ಚಹರೆ.. ಅನುಮಾನವೇ ಇಲ್ಲ.. ಮೊಗದಲ್ಲಿ ಮಂದಹಾಸ ಹಾಗೆ ಬಂದು ಹೋಯಿತು..

ನಿಲ್ಲಿಸಲೇ, ಬೇಡವೇ.. ಮಾತಾಡಲೇ, ಏನು ಅಂದುಕೊಳ್ಳುತ್ತಾರೋ ಏನೋ.. ಈ ತುಮುಲಗಳಲ್ಲಿಯೇ ಇದ್ದ ವೀಣಾ ಹಾಗೆ ಮುಂದಕ್ಕೆ ಬಂದುಬಿಟ್ಟಿದ್ದಳು. ಹಾಗೆ ತುಸು ತಿರುಗಿನೋಡಿದಳು..  ಆ ಚಂದ್ರನನ್ನು ನೋಡುತ್ತಾ.. ಏನೋ ಯೋಚನೆಯಲ್ಲಿಯೇ ನೆಡೆದುಹೋಗುತ್ತಿದ್ದ ವ್ಯಕ್ತಿಯ ಮೊಗವನ್ನು ನೋಡಿ.. ಇವನು ಆ ವ್ಯಕ್ತಿಯೇ ಎಂದು ಧೃಡ ಪಡಿಸಿಕೊಂಡಳು.

"ಹೇ ವೀಣಾ ಇದೇನೇ ಇವತ್ತು ಇಷ್ಟೊಂದು ಸುತ್ತು ಹೊಡಿತಿದ್ದೀಯಾ.. ಬರೋಲ್ವಾ ಮನೆಗೆ.. ನಿನ್ನ ಕ್ಯಾಬ್ ಬೇಗ ಬರುತ್ತೆ ಅಲ್ವಾ"

ಆ ವ್ಯಕ್ತಿಯ ಯೋಚನೆಯಲ್ಲಿಯೇ ಇದ್ದ ವೀಣಾಳಿಗೆ.. ಹಿಂದಿನ ದಿನದಿಂದ ಇಂದಿನ ದಿನದ ಬೆಳಿಗ್ಗೆಗೆ ಜರ್ ಅಂತ ಇಳಿದು ಬಂದಳು.

ಆಫೀಸ್ ಕ್ಯಾಬ್ ಹತ್ತಿದಾಗ.. ಕನ್ನಡ ಪ್ರೇಮಿ ಡ್ರೈವರ್ ಹಾಕಿದ್ದ ೯೨.೭ ಎಫ್ ಎಂ ನಲ್ಲಿ "ಈ ಹೃದಯ ಹಾಡಿದೆ ಆಸೆಗಳ ತಾಳದೆ ಹುಡುಕುತ ನಿನ್ನ ಕೂಗಿದೆ ಸುಮವೇ ನಿನಗಿನ್ನು ಕೇಳದೆ" ಆ ಹಾಡನ್ನು ಕೇಳುತ್ತಾ ಹಾಗೆ ಒಂದು ವರ್ಷದ ಹಿಂದಕ್ಕೆ ಓಡಿತು ಅವಳ ಮನಸ್ಸು.

ದಿನವೂ, ೨೫ ಕಿಮಿ ದೂರದ ಆಫೀಸ್ ಹೋಗಬೇಕಿತ್ತು... ಹೊತ್ತು ಗೊತ್ತಿಲ್ಲದೇ ಆಫೀಸ್ ಕೆಲಸ, ಊಟ, ತಿಂಡಿ ಸರಿಯಾದ ಸಮಯಕ್ಕೆ ತಿನ್ನದೇ, ಬೊಂಡ ಬಜ್ಜಿ ಅದು ಇದು ಅಂತ ತಿಂದು, ಸ್ವಲ್ಪ ಮಟ್ಟಿಗೆ ದೇಹದ ತೂಕ ಏರಿತ್ತು. ಆಫೀಸಿನಲ್ಲಿ ವೈದ್ಯರನ್ನು ಕಂಡು ಕೇಳಿದಾಗ, ಬೆಳಿಗ್ಗೆ ೨೦-೨೫ ನಿಮಿಷ ವಾಕಿಂಗ್ ಮಾಡಿ ಅಂತ ಹೇಳಿದ್ದರು. ಮನೆಯ ಹತ್ತಿರ ಇದ್ದ ಪಾರ್ಕಿಗೆ, ಜನುಮೇಪಿ ಹೋಗದ ವೀಣಾಳಿಗೆ, ಹೋಗಲೇಬೇಕಾದ ಅನಿವಾರ್ಯತೆ.. ಇಲ್ಲದೆ ಹೋದರೆ, ಇಷ್ಟ ಪಟ್ಟು ಕೊಂಡುಕೊಂಡ ಬಟ್ಟೆಗಳೆಲ್ಲ ಮುಷ್ಕರ ಹೂಡಲು ಸಿದ್ಧವಾಗಿದ್ದವು.

ರೈಲು ನಿಲ್ದಾಣಕ್ಕೆ ಸರಿಯಾದ ಸಮಯಕ್ಕೆ ಬರುವಂತೆ, ಒಂದು ಸಮಯ ನಿಗದಿ ಪಡಿಸಿಕೊಂಡು, ಪ್ರತಿದಿನವೂ ಪಾರ್ಕಿಗೆ ವಾಕಿಂಗ್ ಹೋಗೋಕೆ ಶುರುಮಾಡಿದಳು. ಎದುರು ಮನೆಯ ಆಂಟಿ ಕೂಡ ಇವಳಿಗೆ ಜೊತೆಯಾದರು. ಹೀಗೆ ಸಾಗಿತ್ತು ದಿನಚರಿ. ಇಪ್ಪತ್ತು ನಿಮಿಷ ವಾಕಿಂಗ್, ತದನಂತರ, ಆಫೀಸಿಗೆ ಸಿದ್ಧವಾದರೆ ಸಾಕು, ಅದು ಹೇಗೋ ಸಂಜೆಯ ತನಕ ಸಮಯ ಓಡುವುದೇ ಅರಿವಾಗುತ್ತಿರಲಿಲ್ಲ.

ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದ ಆಂಟಿಗೆ, "ಆಂಟಿ ನೀವು ಬರುತ್ತಿರಿ, ನಾನು ಸುತ್ತು ಜಾಸ್ತಿ ಹಾಕುತ್ತೇನೆ ಎಂದಳು"

"ಆಹಾ ಸುಂದರಿ ಕಣೆ ನೀನು.. ಸರಿ ಈ ಮುದುಕಿ ಜೊತೆಯಲ್ಲಿ ನಿಧಾನಕ್ಕೆ ಹೆಜ್ಜೆ ಹಾಕೋಕೆ ನಿನಗೆಲ್ಲಿ ಆಗುತ್ತೆ.. ಸರಿ ಹಾಗೆ ಮಾಡು"

ವೀಣಾ.. ಬಿಲ್ಲಿನಿಂದ ಬಿಟ್ಟ ಬಾಣದ ತರಹ.. ತಲೆ ತಗ್ಗಿಸಿಕೊಂಡು ಭರ ಭರ ಹೆಜ್ಜೆ ಹಾಕೋಕೆ ಶುರುಮಾಡಿದಳು.. ಪೇಪರ್ ಹಂಚುವ ಹುಡುಗನ ಸೈಕಲ್ ಕಿರ್ ಕಿರ್ ಎಂದು ಬ್ರೇಕ್ ಹಾಕುವುದ ಕೇಳಿ.. ಆ ಕಡೆ ಕಣ್ಣಾಯಿಸಿದಳು.. ತುಸುಗಪ್ಪು ಬಣ್ಣ, ಆಕರ್ಷಕ ಅನ್ನಿಸದೆ ಇದ್ದರೂ, ಒಮ್ಮೆ ನೋಡಿದರೆ.. ಇರಲಿ ಇನ್ನೊಮ್ಮೆ ನೋಡಬಹುದು ಎನ್ನಿಸುವಂತಹ ಮುಖಚರ್ಯೆ, ಬೆರಳಲ್ಲಿ ಏನೋ ಎಣಿಸುತ್ತಾ ಹೆಜ್ಜೆ ಹಾಕುವುದು ಕಾಣಿಸಿತು. ಬೆನ್ನಿಗೆ ಆಫೀಸ್ ಬ್ಯಾಗ್, ಕೈಯಲ್ಲಿ ಊಟದ ಡಬ್ಬಿ ಹಿಡಿದು ಸಾಗುತ್ತಿದ್ದ.. ಬೇಡ ಎಂದರೂ ಆ ಕಣ್ಣುಗಳು ಕೆಲ ಕ್ಷಣ ಅವನನ್ನೇ ಹಿಂಬಾಲಿಸಿತು. ಆ ರಸ್ತೆಯ ತಿರುವಿನ ತನಕ ಹೋಗಿ ಮರೆಯಾದ.. ಅಂದು ಏನೂ ವಿಶೇಷ ಎನ್ನಿಸಲಿಲ್ಲ..

ಮಾರನೇ ದಿನ, ಸರಿ ಸುಮಾರು ಅದೇ ಸಮಯ.. ಮತ್ತೆ ಪುನಾವಾರವರ್ತನೆ... ಹೀಗೆ ಸಾಗಿತ್ತು ಅನೇಕ ದಿನಗಳು, ವಾರಗಳು, ತಿಂಗಳುಗಳು..

ಪಾರ್ಕಿಗೆ ಬರುವುದು, ಇವನನ್ನು ನೋಡಲೇ ಎನ್ನುವಂತಾಗಿತ್ತು ಅವಳ ಮನಸ್ಸಿಗೆ, ಆದರೂ, ವೀಣಾ ಬರಿ ತನ್ನ ಕಾಯಕ ಮುಂದುವರೆಸುತ್ತಿದ್ದಳು, ಆದರೆ ದಿನ ದಿನಕ್ಕೆ ಅವನ ಬಗ್ಗೆ ಅವಳಿಗೆ ಆಕರ್ಷಣೆ ಹೆಚ್ಚಾಯಿತು. ಶಿಸ್ತುಬದ್ಧವಾಗಿ ಅಲಂಕರಿಸಿಕೊಂಡು, ತನ್ನ ಬಣ್ಣಕ್ಕೆ ಒಪ್ಪುವ ಅವನ ವೇಷಭೂಷಣ, ಮೊಗದಲ್ಲಿ ಯಾವಾಗಲೂ ಮಂದಹಾಸ, ಬೆಳಗಿನ ತಣ್ಣನೆ ಗಾಳಿಗೆ ರೇಷ್ಮೆಯಂತಹ ಅವನ ತಲೆಗೂದಲು ಹಾರಾಡುವಾಗ ಅವನು ರಜನಿಕಾಂತ್ ತರಹ ತಲೆಗೂದಲನ್ನು ಸರಿಪಡಿಸಿಕೊಂಡು ಹೋಗುವ ರೀತಿ, ಸುತ್ತಮುತ್ತಲೂ ನೋಡಿಕೊಂಡೆ ಹೋಗುವ ಅವನ ಸಿಂಹಾವಲೋಕನಾದ ನಡಿಗೆ, ಆಕರ್ಷಕ ಎನ್ನಿಸುವ ಕಂದು ಬಣ್ಣದ ಕಣ್ಣುಗಳು.. ಒಂದು ರೀತಿಯಲ್ಲಿ ವೀಣಾಳ ಮನಸ್ಸಿನೊಳಗೆ ಕೂತಿದ್ದ.

ಯಾವುದೇ ಮೋಹಪಾಶ ಸೆಳೆಯುತ್ತಲಿರಲಿಲ್ಲ, ಆದರೆ ಈ ವ್ಯಕ್ತಿಯ ವ್ಯಕ್ತಿತ್ವದಲ್ಲಿ ಏನೋ ಅಯಸ್ಕಾಂತ ಇದೆ ಎನ್ನಿಸುತ್ತಿತ್ತು ವೀಣಾಳಿಗೆ.  ದಿನವೂ ಅವನೂ ಕೂಡ ಓರೇ ಗಣ್ಣಿನಲ್ಲಿ ನೋಡುವುದು ಅರಿವಾಗುತ್ತಿತ್ತು. ಕೆಲವೊಮ್ಮೆ, ತಾನು ಪಾರ್ಕಿಗೆ ಹೋಗುವುದು ತಡವಾದರೆ, ಅವನು ಹಾದು ಹೋಗುವಾಗ, ಅಲ್ಲಿ ಓಡಾಡುವ ಜನರ ಮಧ್ಯೆ ನನ್ನನ್ನು ಹುಡುಕುವ ಅವನ ಕಣ್ಣುಗಳು ಇಷ್ಟವಾಗುತ್ತಿತ್ತು, ಎಷ್ಟೋ ದಿನ, ಎದುರಿಗೆ ಸಿಕ್ಕ ಉದಾಹರಣೆಗಳು ಇದ್ದವು, ಆಗ ಆತ ನನ್ನ ಮೊಗವನ್ನು ದಿಟ್ಟಿಸಿ ನೋಡದೆ, ಒಮ್ಮೆ ಒಂದು ಝಲಕ್ ಕೊಟ್ಟು, ಮತ್ತೆ ಆಗಸ ನೋಡುತ್ತಾ ಸಾಗುವುದ ನೋಡಿ, ಅವನ ಬಗ್ಗೆ ಗೌರವ ಭಾವ ಹೆಚ್ಚಾಗಲು ಶುರುವಾಗಿತ್ತು.

ಗೆಳೆಯ ಅಂದರೆ ಇವನ ರೀತಿ ಇರಬೇಕು ಅನ್ನಿಸುವ ರೀತಿಯಲ್ಲಿ, ಹೇಳಿ ಮಾಡಿಸಿದಂತಹ ವ್ಯಕ್ತಿ ಎಂದು ಯಾಕೋ ಅವಳ ಮನಸ್ಸಿಗೆ ಪದೇ ಪದೇ ಅನ್ನಿಸುತ್ತಿತ್ತು. ಒಮ್ಮೆಯಾದರೂ ಮಾತಾಡಿಲ್ಲ, ಬರಿ ನೋಟ ನೋಟ ನೋಟ ಅಷ್ಟೇ. ಆದರೆ ದಿನ ಕಾಣುವ ಹುಡುಗಿಯನ್ನು ಕೆಟ್ಟ ನೋಟದಲ್ಲಿ ನೋಡದ ಅವನ ವ್ಯಕ್ತಿತ್ವ ಇಷ್ಟವಾಗತೊಡಗಿತ್ತು. ಅವನನ್ನು ಕಾಣದ ದಿನ ಸೂರ್ಯನನ್ನು ಕಾಣದ ಕಮಲದಂತೆ ಆಗುತ್ತದೆ ಎನ್ನುವ ಒಂದು ಭಾವ ವೀಣಾಳ ಮನದೊಳಗೆ ಕಾಲಿಡುತ್ತಲೇ ಇತ್ತು. 

ಸಂಜೆ ಆಫೀಸ್ ಹತ್ತಿರ ಕ್ಯಾಬಿಗೆ ಕಾಯುತ್ತಾ ನಿಂತಿದ್ದಾಗ, ಮೊಬೈಲ್ ಹೊಡೆದುಕೊಂಡಿತು, ಮೊಗದಲ್ಲಿ ಹಾಗೆ ಮಂದಹಾಸ.. ತನ್ನ ಭಾವಿ ಪತಿರಾಯ.. !

"ವೀಣಾ.. ಇಲ್ಲಿ ಇದ್ದೀನಿ.. ಬಾ ಇವತ್ತು ಸುತ್ತಾಡಿ ಬರೋಣ.. ನಿಮ್ಮ ಮನೆಗೆ ಫೋನ್ ಮಾಡಿ ಹೇಳಿದ್ದೀನಿ.. ಸ್ವಲ್ಪ ಹೊತ್ತಾಗುತ್ತೆ ಅಂತ"

ಮನಸ್ಸು ಹಕ್ಕಿಯ ಹಾಗೆ ಹಾರಾಡಿತು...ಆಕಾಶ ನೀಲಿ ಬಣ್ಣದ ಅವಳ ಚೂಡಿದಾರ್, ಪೂರ್ತಿ ಇಳಿಬಿಟ್ಟಿದ್ದ ನೀಳ ತಲೆಗೂದಲು ಸಂಜೆಯ ಗಾಳಿಗೆ ಹಾರಾಡುತ್ತಿತ್ತು. ಅಲ್ಲಿಯೇ ನಿಂತಿದ್ದ ಬೈಕಿನ ಕನ್ನಡಿಯಲ್ಲಿ ಒಮ್ಮೆ ತನ್ನನ್ನೇ ನೋಡಿಕೊಂಡಳು. ಹಣೆಗೆ ಇಟ್ಟಿದ್ದ ಬೊಟ್ಟು, ಆಫೀಸಿನಲ್ಲಿ ತನ್ನ ಗೆಳತಿ ಕೊಟ್ಟ ಗಣಪನ ಪ್ರಸಾದದ ಕುಂಕುಮವನ್ನು ಆ ಬೊಟ್ಟಿನ ಕೆಳಗೆ ಇಟ್ಟುಕೊಂಡಿದ್ದರಿಂದ, ಅವಳ ಮೊಗದ ಚೆಲುವು ಇನ್ನಷ್ಟು ಹೆಚ್ಚಿತ್ತು, ಕಣ್ಣಿಗೆ ಹಚ್ಚಿದ್ದ ಕಾಡಿಗೆ ಅವಳ ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು. ತನ್ನ ಭಾವಿ ಪತಿರಾಯ ಯಾವಾಗಲೂ ಹೇಳುತ್ತಿದ್ದ "ವೀಣಾ.. ನಿನ್ನ ಕಣ್ಣುಗಳು ಮತ್ತು ನಿನ್ನ ಮೂಗುತಿ ಹೊತ್ತ ನಾಸಿಕ ತುಂಬಾ ಕಾಡುತ್ತದೆ ಕಣೆ.. ಬ್ರಹ್ಮ ನನಗಾಗಿಯೇ ಪುರುಸೊತ್ತಾಗಿ ಸೃಷ್ಟಿ ಮಾಡಿದ ರತ್ನಮಣಿ ಕಣೆ ನೀನು"
ಚಿತ್ರ ಕೃಪೆ : ಗೂಗಲ್ ಕಣ್ಣಿಂದ ನೋಡಿದ್ದು 

ಈ ಮಾತನ್ನು ಕಳೆದ ಆರು ತಿಂಗಳಿಂದ ಹೇಳುತ್ತಲೇ ಇದ್ದ. ಅವಳಿಗೂ ಕೂಡ ಈ ಮಾತನ್ನು ಕೇಳುವುದು ಎಂದರೆ ಖುಷಿಯೋ ಖುಷಿ.. ಒಮ್ಮೆ ತಲೆಗೂದಲನ್ನು ಸರಿ ಪಡಿಸಿಕೊಂಡು, ಭಾವಿ ಪತಿರಾಯನ ಬೈಕ್ ಏರಿದಳು.

ಶಾಪಿಂಗ್ ಎಲ್ಲಾ ಮುಗಿದು, ಹೋಟೆಲಿನಲ್ಲಿ ಊಟ ಮಾಡುತ್ತಾ ಕೂತಿದ್ದಾಗ.. ವೀಣಾ ಹಿಂದಿನ ದಿನದ ಘಟನೆ ಬಗ್ಗೆ ಹೇಳಿದಳು..ಇಬ್ಬರೂ ಕೂಡ ಒಬ್ಬರಿಗಾಗಿಯೇ ಒಬ್ಬರು ಹುಟ್ಟಿದ್ದಾರೆ ಎನ್ನುವಂತಹ ಜೋಡಿ, ಅಸೂಯೆ, ಅನುಮಾನ ಎನ್ನುವ ಪದದ ಅರ್ಥ ಏನು ಎನ್ನುವಂತಹ ನಂಬಿಕೆ ಇಬ್ಬರಲ್ಲೂ ಇತ್ತು. ಎಲ್ಲಾ ವಿಷಯವನ್ನು ಇಬ್ಬರೂ ಹಂಚಿಕೊಳ್ಳುತ್ತಿದ್ದರು, ಗುಟ್ಟು, ರಹಸ್ಯ ಎನ್ನುವ ಪದಗಳು ಇಬ್ಬರಿಗೂ ಗೊತ್ತಿರಲಿಲ್ಲ.

"ವೀಣಾ.. ನನಗೆ ಅರ್ಥವಾಗುತ್ತೆ ನಿನ್ನ ತಳಮಳ.. ನೀನು ನಿನ್ನ ಬದಲಾದ ಆಫೀಸ್ ವಿಳಾಸದಿಂದ ನಿನ್ನ ಆಫೀಸ್ ಸಮಯವೂ ಬದಲಾಗಿದೆ, ಅದಕ್ಕಾಗಿ ನಿನ್ನ ವಾಕಿಂಗ್ ಸಮಯ ಕೂಡ ಬದಲಾಗಿದೆ.. ನೀನು ಅವನನ್ನು ನೋಡಲಾಗುತ್ತಿಲ್ಲ.. ಜೊತೆಯಲ್ಲಿ ನಿನ್ನೆ ನೀನು ಸ್ವಲ್ಪ ಯೋಚಿಸಿದ್ದರೆ, ಇದುವರೆಗೂ ಮಾತಾಡದೆ ಬೆಳೆದು ನಿಂತಿರುವ ನಿಮ್ಮ ನಿರ್ಮಲ ಸ್ನೇಹಕ್ಕೆ ಒಂದು ಅದ್ಭುತ ಆರಂಭ ಸಿಗುತ್ತಿತ್ತು. ಇರಲಿ ಯೋಚಿಸಬೇಡ..ಅವನ ಮೊಗವನ್ನು ನೀ ಗುರುತಿಸಬಲ್ಲೆ, ಅವನ ಹೆಸರು ತಿಳಿದುಕೊಂಡರೆ, ಫೇಸ್ಬುಕ್ ನಲ್ಲಿ ಹೇಗಾದರೂ ಹುಡುಕಬಹುದು.. ಮತ್ತೆ ಇನ್ನೊಂದು ಉಪಾಯ.. ಒಂದೆರಡು ದಿನ ಮನೆಯಿಂದಲೇ ಕೆಲಸ ಮಾಡುತ್ತೇನೆ ಎಂದು ನಿನ್ನ ಮ್ಯಾನೇಜರ್ ಗೆ ಹೇಳಿ, ನಿನ್ನ ಮೊದಲ ಸಮಯಕ್ಕೆ ವಾಕಿಂಗಿಗೆ ಹೋಗು.. ಆಗ ಅವನು ಸಿಕ್ಕಿದರೇ , ಸ್ವಲ್ಪ ಧೈರ್ಯ ಮಾಡಿ ನೀನೇ ಮಾತಾಡು.. ಮನಸ್ಸಿಗೆ ಗೊಂದಲ ಕಡಿಮೆಯಾಗುತ್ತದೆ.."

ವೀಣಾಳ ಕಣ್ಣಲ್ಲಿ ಹೊಳಪು.. ತನ್ನ ಭಾವಿ ಪತಿರಾಯನ ಬಗ್ಗೆ ಶಭಾಷ್ ಎನ್ನಿಸಿತು...

"ರೇವಂತ್.. ಎಂತಹ ಅದ್ಭುತ ಗೆಳೆಯ ನೀನು.. ನಿನ್ನ ಪಡೆದ ನಾನೇ ಧನ್ಯ.. ಸಾಮಾನ್ಯ ಈ ರೀತಿಯ ಸನ್ನಿವೇಷ ಎದುರಾದಾಗ.. "

ಇನ್ನೂ ವೀಣಾ ಮಾತನ್ನು ಮುಗಿಸಿರಲಿಲ್ಲ.. "ನೋಡು ಬಂಗಾರಿ ನಿನ್ನ ಮನಸ್ಸು ನನಗೆ ಗೊತ್ತು.. ನಿನ್ನ ಬಗ್ಗೆ ನನಗೆ ಗೊತ್ತು..ಸ್ನೇಹ ಎಂದರೆ ಹಾತೊರೆಯುವ ಮನಸ್ಸು ನಿನ್ನದು.. ನಿನ್ನ ಬಾಳಸಂಗಾತಿಯಾಗಿ ಪಡೆದ ನಾನೇ ಧನ್ಯ.. ಇಂತಹ ಅದ್ಭುತ ಗೆಳತಿಯ ಬಗ್ಗೆ ಅನುಮಾನ ಯಾಕೆ ಪಡಬೇಕು.. ನೀನು ಪ್ರತಿಯೊಂದನ್ನು ನನ್ನ ಬಳಿ ಹೇಳುವುದೇ ತಿಳಿಸುತ್ತೆ ನಿನ್ನ ಮನಸ್ಸು ತಿಳಿಯಾದ ಮಾನಸ ಸರೋವರ ಎಂದು.. ಯೋಚಿಸಬೇಡ ಬಂಗಾರಿ.. ಆ ವ್ಯಕ್ತಿಯ ಬಗ್ಗೆ ವಿಷಯ ತಿಳಿದರೆ... ಹೇಳು..ಒಮ್ಮೆ ಹೋಟೆಲಿನಲ್ಲಿ ಊಟ ಮಾಡೋಣ.. ನಿನ್ನ ಗೆಳೆಯ ನಮ್ಮ ಗೆಳೆಯ.. "

ಹೋಟೆಲಿನಲ್ಲಿ ಕೂತಿದ್ದರೂ, ಎಂದೂ ಭಾವೋದ್ವೇಗಕ್ಕೆ ಒಳಗಾಗದ ವೀಣಾ.. ಎದುರು ಕೂತಿದ್ದ ಭಾವಿ ಪತಿ ದೈವನ ಕೈಯನ್ನು ತನ್ನ ಎದೆಗೆ ಆನಿಸಿಕೊಂಡು "ರೇವಂತ್.. ಮೈ ಲವ್.. ಐ ಲವ್ ಯು ಕಣೋ"

ಪಕ್ಕದ ಟೇಬಲಿನಲ್ಲಿ ಕೂತಿದ್ದ ಇಳಿ ವಯಸ್ಸಿನ ದಂಪತಿಯೊಬ್ಬರ ಮೊಬೈಲಿಗೆ ಕರೆ ಬಂತು ಕಾಲರ್ ಟ್ಯೂನ್
"ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳಿಗೆ"

ಆದಷ್ಟು ಬೇಗ ಆ ವ್ಯಕ್ತಿಯನ್ನು ಮಾತಾಡಿಸಲೇ ಬೇಕು.. ಎಂದು ನಿರ್ಧರಿಸಿ ತನ್ನ ಮ್ಯಾನೇಜರ್ ಗೆ ಸಂದೇಶ ಕಳಿಸಿದಳು
"ಡಿಯರ್ ಕಾರ್ತಿಕ್
ಐ ವಿಲ್ ಬಿ ವರ್ಕಿಂಗ್ ಫ್ರಮ್ ಹೋಂ ಟುಮಾರೋ ಅಂಡ್ ಡೇ ಆಫ್ಟರ್ ಟುಮಾರೋ ...
ದಿಸ್ ಐಸ್ ಫಾರ್ ಯುವರ್ ಇನ್ಫರ್ಮೇಷನ್..
ವೀಣಾ"

Tuesday, November 15, 2016

ಕಣ್ಣಂಚಿನ ನೋಟ.....ಆ ಕಡೆ ದೃಶ್ಯ!.!

ಕೃಷ್ಣಕಾಂತ್ ತುಂಬಾ ಸರಳ ಜೀವಿ. ಅವನಲ್ಲಿ ಅದೇನೋ ಅಪರಿಮಿತ ಧನಾತ್ಮಕ ಗುಣ.. ಕಾರಣವಿಲ್ಲದೆ ಎಲ್ಲರನ್ನೂ ಪ್ರೀತಿಸುವ ಮನುಷ್ಯ, ಆದರೆ ಸಕಾರಣವಿದ್ದರೆ ಮಾತ್ರ ಯಾರನ್ನೇ ಆದರೂ ದೂರ ಇಡಬಲ್ಲ ವ್ಯಕ್ತಿತ್ವ.. ಒಮ್ಮೆ ಕೃಷ್ಣಕಾಂತ್ ದೂರ ಇಟ್ಟರೆ ಮುಗೀತು... ಭಗವಂತನೇ ಕಷ್ಟ ಪಡಬೇಕು :-)
ಪ್ರತಿದಿನ ಸಂಧ್ಯಾವಂದನೆ ಮಾಡಿ, ದೇವರಿಗೆ, ತನ್ನ ದೇವರಿಗೆ ನಮಿಸಿ ಆಫೀಸ್ ಗೆ ಹೋರಡುವ ಇವನಿಗೆ.. ಪ್ರತಿ ಕ್ಷಣಕ್ಕೂ ಕಣ್ಣಿಗೆ ಕಾಣುವ ದೃಶ್ಯವನ್ನು ಆರಾಧಿಸುವುದು, ಇಷ್ಟಪಡುವುದು, ಅದರ ಬಗ್ಗೆ ಯೋಚಿಸುವುದು, ಅದರಿಂದ ಧನಾತ್ಮಕವಾಗಿ ಯೋಚಿಸಿ ಪ್ರೇರೇಪಣೆ ಪಡೆಯುವುದು.. ಇದು ಅವನ ನಿತ್ಯದ ದಿನಚರಿ. ಕಣ್ಣಿಗೆ ಕಾಣುವ ಯಾವುದೇ ಸ್ಫೂರ್ತಿ ಉಕ್ಕುವ ವಿಷಯವನ್ನು ಬಿಡದ ಅವನಿಗೆ ಒಂದು ಅಚ್ಚರಿ ಸಂಗತಿ ನೆಡೆಯುತ್ತಿದ್ದದು ಅರಿವಿಗೆ ಬರುತ್ತಲೇ ಇರಲಿಲ್ಲ. 

ಪ್ರತಿದಿನ ಬೆಳಿಗ್ಗೆ ತನ್ನ ಆಫೀಸ್ ಗಾಡಿಗೆ ಹತ್ತುವ ಜಾಗಕ್ಕೆ ಸುಮಾರು ಒಂದು ಕಿ.ಮೀ. ಗಳು.. ನೆಡೆಯುತ್ತಾ ಹೋಗುವಾಗ.. ಹಾದಿಯಲ್ಲಿ ಒಂದು ಉದ್ಯಾನವನ.. ಅಲ್ಲಿ ವ್ಯಾಯಾಮ ಸಲುವಾಗಿ ನೆಡೆದಾಡುವ ಮಂದಿ ಹಲವರು.. ಒಮ್ಮೆ ಹೀಗೆ ಹೋಗುತ್ತಿರುವಾಗ, ಒಂದು ಹುಡುಗಿ ಕಣ್ಣಿಗೆ ಬೀಳುತ್ತಾರೆ  ವಾಕಿಂಗ್ ಅಂತ ಬರುವವರಲ್ಲಿ ಅನೇಕರು ಕಿವಿಗೆ ಸಿಕ್ಕಿಸಿಕೊಂಡು ಹಾಡು, ಸಂಗೀತ ಕೇಳುತ್ತಾ ಹೋಗುವವರು ಕೆಲವರು, ಎಲ್ಲರೂ ನೋಡಲಿ ಅಂತ ಚಿತ್ರ ವಿಚಿತ್ರ ವೇಷ ಹಾಕಿಕೊಂಡು ಬರುವ ಮಂದಿ ಕೆಲವರು, ಇನ್ನೂ ಕೆಲವರು ಜೋರಾಗಿ ಕಸರತ್ತು ಮಾಡುತ್ತಾ ಎಲ್ಲರ ಗಮನವನ್ನು ಸೆಳೆಯಲು ಹೊಂಚು ಹಾಕುವವರು ಇದ್ದರು.. ಆದರೆ ಇದರ ಮಧ್ಯದಲ್ಲಿ ನಿಯತ್ತಾಗಿ ತಮ್ಮ ದೇಹವನ್ನು ದಂಡಿಸುತ್ತಾ, ತಮ್ಮ ಆರೋಗ್ಯದ ಬಗ್ಗೆ ಮಾತ್ರ ಗಮನ ಹರಿಸಿ, ಸುತ್ತಾ ಮುತ್ತಾ ಏನು ನೆಡೆಯುತ್ತಿದೆ ಎಂಬ ಚಿಂತೆಗೆ ತಲೆ ಕೊಡದೆ, ತಮ್ಮ ಪಾಡಿಗೆ ತಮ್ಮ ಕಾಯಕ ಮಾಡುವವರಲ್ಲಿ ಈ ಹುಡುಗಿ ಕೂಡ ಒಂದು.  

ಸುಂದರ ಮೊಗ, ತುಸು ಪುಟ್ಟ ಮೂಗಿಗೆ ಮುದ್ದಾದ ಹೊಳೆಯುವ ಮೂಗುತಿ, ನಿದ್ದೆಯಿಂದ ಎದ್ದು ಬೆಳಿಗ್ಗೆ ವಾಕಿಂಗ್ ಬರೋದರಿಂದ, ಬೈತಲೆ ಮೈಸೂರು ರಸ್ತೆಯ ರೀತಿ ಅಂಕು ಡೊಂಕಾದ  ರೀತಿಯಲ್ಲಿದ್ದರೂ ನೀಳ ಕಪ್ಪು ಜಡೆ ಆಕರ್ಷಕವಾಗಿ ಕಾಣುತ್ತಿತ್ತು .. ಸಿಂಗಾರವಿಲ್ಲದಿದ್ದರೂ, ಒಮ್ಮೆ ನೋಡಿದರೆ ಮತ್ತೊಮ್ಮೆ ಆಹಾ ಈ ರೀತಿಯ ಹುಡುಗಿ ಎಲ್ಲರ ಮನೆಯಲ್ಲಿ ಇರಬಾರದೇ ಎನ್ನುವಷ್ಟು ಮುದ್ದಾದ ಮೊಗವುಳ್ಳ ಹುಡುಗಿ ಇವರು..ಕಾಲಿಗೆ ಕಟ್ಟಿದ್ದ ಗೆಜ್ಜೆ ಝಲ್ ಝಲ್ ಎಂದು ಸದ್ದು ಮಾಡುತ್ತಿದ್ದರೆ ಕೃಷ್ಣಕಾಂತ್ ಮನಸ್ಸಲ್ಲಿ ಏನೋ ಒಂದು ರೀತಿಯ ಸಂತಸ. 

ಪಾಪ ಕೆಟ್ಟ ದೃಷ್ಟಿಯಲ್ಲಿ ಎಂದೂ ಆ ಹುಡುಗಿಯನ್ನು ನೋಡಿರಲಿಲ್ಲ.. ಕೆಲವರು ಹಾಗೆ.. ಒಂದು ಹುಡುಗಿ ತಂಗಿಯಾಗಬಹುದು, ಅಕ್ಕನಾಗಬಹುದು, ಗೆಳತಿಯಾಗಬಹುದು.. ಆದರೆ ಯಾವುದೇ ಭಾವವಿರದ, ಯಾವುದೇ ಬಂಧನವಿರದ ಒಂದು ರೀತಿಯ ದೈವಿಕ ಬಾಂಧವ್ಯ ಕೆಲವು ಬಂಧನಗಳಿಗೆ ಇರುತ್ತದೆ. ಅಂತಹ ಒಂದು ಬಂಧ ಈ ಹುಡುಗಿ ಮತ್ತು ಕೃಷ್ಣಕಾಂತ್ ಮಧ್ಯೆ ಇತ್ತು. 

ದಿನ ನಿತ್ಯವೂ ನೋಡುತ್ತಿದ್ದರಿಂದ, ಓರೇಗಣ್ಣುಗಳಲ್ಲಿ ಮಾತು ಇಲ್ಲದೆ ಬರಿ ನೋಟಕ್ಕೆ ಮಾತ್ರ ಮೀಸಲಾಗಿತ್ತು. ಆಕೆಯೂ ಕೂಡ ವಾಕಿಂಗ್ ಮಾಡುತ್ತಿದ್ದರೂ, ಇವ ಹೋಗುವಾಗ ಹಾಗೆ ಒಂದು ಎದೆ ಝಲ್ ಎನ್ನಿಸುವಂತಹ ನೋಟ ಬೀರಿ ತನ್ನ ಪಾಡಿಗೆ ಹೋಗುತ್ತಿದ್ದರು. 
ಕೃಪೆ : ಅಂತರ್ಜಾಲದಲ್ಲಿ ಒರೆಗಣ್ಣಿನಲ್ಲಿ ತೆಗೆದದ್ದು 
ಈ ನೋಟದ ಸಲುಗೆ, ಆ ಹುಡುಗಿಯ ಬಗ್ಗೆ ಯೋಚಿಸುವಾಗ ಬಹುವಚನ ಮಾಯವಾಗಿ ಏಕವಚನ ರೂಪುಗೊಂಡಿತ್ತು. 

ಕೃಷ್ಣಕಾಂತನಿಗೆ ಒಂದು ರೀತಿಯಲ್ಲಿ ಈ ಹುಡುಗಿ ಶುಭದ ಸಂಕೇತವಾಗಿದ್ದಳು. ಅವಳನ್ನು ನೋಡಿ, ಅವಳ ಮುದ್ದಾದ ಮೊಗವನ್ನು ಕಣ್ಣು ತುಂಬಾ ತುಂಬಿಕೊಂಡು, ಆವ ಇಷ್ಟಪಡುವ ಮುದ್ದಾದ ಮೂಗುತಿ ಹೊತ್ತ ನಾಸಿಕದ ಕೆಳಗಿನ ತುಟಿಯಂಚಿನ ಮಂದಹಾಸವನ್ನು ಕಂಡರೆ, ಅಂದಿನ ದಿನ ಎಂಥಹ ಕ್ಲಿಷ್ಟ ಪರಿಸ್ಥಿತಿಯನ್ನು ಕೂಡ ಎದುರಿಸುತ್ತೇನೆ ಎನ್ನುವಂತಹ ಆತ್ಮ ವಿಶ್ವಾಸ ಅವನಲ್ಲಿ ಮೂಡುತ್ತಿತ್ತು. 

ಅದು ನಿಜವೂ ಆಗಿತ್ತು, ಬೆಳಿಗ್ಗೆಯೇ ಆಕೆಯನ್ನು ನೋಡಿದರೆ, ಏನೋ ಸಂತೋಷ, ಉಲ್ಲಾಸ ಪುಟಿಯುತ್ತಿತ್ತು. ಇಬ್ಬರದೂ ಮೌನ ಗೆಳೆತನ.. ಆದರೆ ಇಬ್ಬರ ನಡುವೆ ಮಾತಿಲ್ಲ ಕಥೆಯಿಲ್ಲ ಬರಿ ಮೌನ ಮೌನ ಮೌನ ಮತ್ತು ಉಲ್ಲಾಸ ಪುಟಿಯುವ ಮಂದಹಾಸ ಮಾತ್ರ. 

ಬೆಳಿಗ್ಗೆ ಮಾತ್ರ ಕಾಣ ಸಿಗುವ ಆಕೆ ಅವನ ಹೃದಯದ ಹೂವಾಗಿದ್ದಳು. ದಿನ ಬೆಳಿಗ್ಗೆ ಆಕೆಯ ವೇಷಭೂಷಣಗಳಲ್ಲಿಯೇ ಕಾಣ ಸಿಗುತ್ತಿದ್ದ ಆಕೆ, ಒಮ್ಮೆ ಸಂಜೆ ಇವ ಆಫೀಸ್ ಗಾಡಿಯಿಂದ ಇಳಿದು ನೆಡೆದು ಬರುವಾಗ, ಅಚಾನಕ್ ಒಂದು ಒಡವೆ ಅಂಗಡಿಯಿಂದ ಹೊರಬಂದಳು. ಇವನನ್ನು ನೋಡಿದ ಆಕೆಯ ಕಣ್ಣಲ್ಲಿನ ಕಾಂತಿಯನ್ನು ನೋಡಿ ಕೃಷ್ಣಕಾಂತ್ ಉಲ್ಲಸಿತನಾಗಿದ್ದ. 

ಅದಕ್ಕೆ ಕಾರಣ, ಬೆಳಿಗ್ಗೆ ಹೊಳೆಯುವಂತೆ ಸಿದ್ಧಗೊಂಡು ಆಫೀಸ್ ಗೆ ಹೋಗುತ್ತಿದ್ದ ಕೃಷ್ಣಕಾಂತ್ ಒಂದು ಕಡೆ, ಹಾಸಿಗೆಯಿಂದ ಎದ್ದು, ಸಿಂಗಾರವಿಲ್ಲದ ಮೊಗ ಹೊತ್ತು, ವಾಕಿಂಗ್ ಮಾಡಲು ಬರುವ ಹುಡುಗಿ ಇನ್ನೊಂದು ಕಡೆ.. ಈ ಸನ್ನಿವೇಶ ಪೂರ್ತಿ ತಿರುಗು ಮುರುಗಾಗಿತ್ತು. 

ಆಫೀಸಿನಿಂದ ಬಸವಳಿದು ಬರುತ್ತಿದ್ದ ಕೃಷ್ಣಕಾಂತ್, ಆಗ ತಾನೇ ಸಿಂಗರಿಸಿಕೊಂಡು ಬಂದು, ಒಡವೆ ಅಂಗಡಿಯಲ್ಲಿ ತನಗಿಷ್ಟವಾದ ಒಡವೆ ಕೊಂಡು, ಹೊರಬರುತ್ತಿದ್ದ ಪೂರ್ಣ ಚಂದ್ರನಂತಹ ಹುಡುಗಿ ಇನ್ನೊಂದು ಕಡೆ. ಇಬ್ಬರ ಸಮಾಗಮ ರಸ್ತೆಯಲ್ಲಿ, ಎಂದಿನಂತೆ ಮಾತಿಲ್ಲ.. ಆದರೆ ಇವನನ್ನು ಸಂಜೆ ನೋಡಿ ಹೊಳೆಯುತ್ತಿದ್ದ ಆಕೆಯ ಕಂಗಳ ಕಾಂತಿ ಕಂಡು, ಆಗಸದ ಚಂದಿರನು ಕೂಡ ಒಂದು ಕ್ಷಣ ದಂಗಾಗಿ ಹೋಗಿದ್ದು ಮಾತ್ರ ಸುಳ್ಳಲ್ಲ. 

ಹಾಗೆ ಒಂದು ಬೆಳದಿಂಗಳಿನ ನಗೆಯನ್ನು ಕೃಷ್ಣಕಾಂತ್ ಮೇಲೆ ಬೀರಿ ತನ್ನ ಗೆಳತಿಯ ಜೊತೆ ಗಾಡಿಯನ್ನು ಏರಿ ಹೋಗಿಯೇ ಬಿಟ್ಟಳು. ಬೆಳಿಗ್ಗೆ ಅವಳನ್ನು ಮತ್ತೆ ಪಾರ್ಕ್ ನಲ್ಲಿ ನೋಡುವ ತನಕ ಅವನಿಗೆ ನೆಮ್ಮದಿ ಇರಲಿಲ್ಲ. ಇದು ಲವ್, ಪ್ಯಾರ್, ಇಷ್ಕ್, ಮೊಹಬ್ಬತ್ ಯಾವುದೂ ಅಲ್ಲ.. ಸ್ಪೂರ್ತಿಗಾಗಿ ಕಾಡು ಮೇಡು ಅಲೆಯುವ ಕವಿಯ ಮನಸ್ಸು ಹಂಬಲಿಸುವ ಸ್ಪೂರ್ತಿಯ ಹುಡುಕಾಟ ಅಷ್ಟೇ. 

ಹೀಗೆ ದಿನವೂ ಸಾಗುತ್ತಿತ್ತು.. "ನೋಟದಾಗೆ ನಗೆಯ ಮೀಟಿ"  ಎನ್ನುವ ತರಂಗ ಅವನ ಹೃದಯದಲ್ಲಿ ಸದಾ ಮೀಟುತ್ತಿತ್ತು.  ಇಂತಹ ಮುದ್ದಾದ ಹುಡುಗಿಯ ಹೆಸರು ವೀಣಾ ಇರಬೇಕು ಎನ್ನಿಸಿತು ಕೃಷ್ಣಕಾಂತನಿಗೆ.. ಯಾರಿಗೆ ಗೊತ್ತು.. ಏನು ಹೆಸರೋ ಏನೂ ಕಥೆಯೋ.. 

ಹೀಗೆ ಸಾಗುತ್ತಿರಲು, ಅಚಾನಕ್ ಆ ಹುಡುಗಿ ಕಾಣದೆ ಹೋದಳು.. ಪಾರ್ಕ್ ನಲ್ಲಿ ಬಿಟ್ಟ ಕಣ್ಣು ಬಿಟ್ಟ ಹಾಗೆ ದಿನವೂ ಹುಡುಕುತಿತ್ತು ಆಕೆಯನ್ನು ಇವನ ಕಂಗಳು. ಆದರೆ ಇಲ್ಲ.. ಅದೃಷ್ಟ ಇಲ್ಲ.. ಹತಾಶೆಗೊಳ್ಳಲಿಲ್ಲ, ಆದರೆ ಆಕೆಯನ್ನು ಒಮ್ಮೆಯಾದರೂ ನೋಡಲೇ ಬೇಕು ಅನ್ನಿಸುತ್ತಿತ್ತು.. ಮನದೊಳಗೆ ನೂರಾರು ಯೋಚನೆ.. 

೧) ಆಕೆ ಮನೆ ಖಾಲಿ ಮಾಡಿ ಹೋಗಿರಬಹುದೇ 
೨) ಕೆಲಸ ಬದಲಾವಣೆಯಾಗಿ, ಸಮಯ ಸಾಲದೇ ವಾಕಿಂಗ್ ಬಿಟ್ಟಿರಬಹುದೇ 
೩) ವಾಕಿಂಗ್ ಸಮಯ ಬದಲಾವಣೆ ಮಾಡಿರಬಹುದೇ 
೪) ತಾನು ಆಕೆಯನ್ನು ನೋಡುತ್ತಿರುವ ಬಗ್ಗೆ ಆಕೆಗೆ ಬೇಸರವಾಗಿ, ವಾಕಿಂಗ್ ಬೇಡವೇ ಬೇಡ ಅಂತ ನಿರ್ಧರಿಸಿರಬಹುದೇ 

ಹೀಗೆ ತಾಳಮೇಳವಿಲ್ಲದ ಪ್ರಶ್ನೆಗಳು ಸಾಗಿದ್ದವು.. 

ಆದರೆ ದಿನವೂ ಆಕೆಯ ಮುಗ್ಧ ಮೊಗವನ್ನು ಹುಡುಕುವ ಕಣ್ಣುಗಳು ಮಾತ್ರ ತಮ್ಮ ಕೆಲಸ ನಿಲ್ಲಿಸಿರಲಿಲ್ಲ.. ಭೂಮಿ ಗುಂಡಾಗಿದೆ.. ಎಂದಾದರೂ ಒಮ್ಮೆ ಸಿಕ್ಕಿಯೇ ಸಿಗುತ್ತಾಳೆ.. ಆಗ ಮಾತಾಡಿಸಲೇಬೇಕು ಎನ್ನುವ ಬಯಕೆ ಮಾತ್ರ ಮನದಲ್ಲಿ ನಿಂತಿತ್ತು. ಆನಂದ್ ಚಿತ್ರದಲ್ಲಿ ಹೇಳುವಂತೆ "ಪ್ರತಿಯೊಬ್ಬರ ದೇಹದಲ್ಲಿ ಟ್ರಾನ್ಸ್ಮೀಟರ್, ರಿಸೀವರ್ ಇರುತ್ತೆ.. ಸರಿಯಾದ ಸ್ನೇಹದ ಸಿಗ್ನಲ್ ವೈಬ್ರೆಷನ್ ಬಂದಾಗ ಸ್ನೇಹದ ಬಂಧ ಅರಳುತ್ತದೆ". 

ಎಷ್ಟು ನಿಜ  ಅಲ್ವೇ.. ಒಂದು ನಿರ್ಮಲ ಸ್ನೇಹಕ್ಕೆ ಕೈಚಾಚುತ್ತಿತ್ತು ಅವನ ಮನಸ್ಸು. 

ಹೀಗೆ ಯಾವುದೋ ಯೋಚನೆ ಮಾಡುತ್ತಾ, ಕಚೇರಿಯಲ್ಲಿ ಸುಸ್ತಾಗುವಂಥ ಕೆಲಸ ಮುಗಿಸಿ, ಗಾಡಿಯಲ್ಲಿ ಚೆನ್ನಾಗಿ ನಿದ್ದೆ ಮಾಡಿಕೊಂಡು, ತನ್ನ ಜಾಗಕ್ಕೆ ಬಂದರೂ ನಿದ್ದೆ ಹರಿಯದೇ ಮಲಗಿದ್ದ ಕೃಷ್ಣಕಾಂತನನ್ನು ತಟ್ಟಿ ಎಬ್ಬಿಸಿದ ಡ್ರೈವರ್.. "ಸಾರ್ ನಿಮ್ಮ ಸ್ಟಾಪ್ ಬಂತು ಮನೆಗೆ ಹೋಗಲ್ವಾ.. ಅಕ್ಕ ಅವರು ಕಾಯುತ್ತಾ ಇರ್ತಾರೆ.. ಏಳಿ ಸಾರ್" ಎಂದಾಗಲೇ ಎಚ್ಚರ ಇವನಿಗೆ. 

ಒಂಥರಾ ಟ್ರಾನ್ಸ್ ನಲ್ಲಿಯೇ ನೆಡೆಯುತ್ತಾ ಬರುತ್ತಿದ್ದ ಕೃಷ್ಣಕಾಂತ್.. ಅಚಾನಕ್ ಒಂದು ಗಾಡಿ ಅಡ್ಡ ಬಂತು.. ತಕ್ಷಣ ಕಣ್ಣನ್ನು ಇನ್ನೊಮ್ಮೆ ಉಜ್ಜಿಕೊಂಡು, ತಲೆಗೂದಲನ್ನು ಸರಿಮಾಡಿಕೊಂಡು, ಗಾಡಿಯವನಿಗೆ ಸಾರಿ ಹೇಳಿ ಮುಂದೆ ಬಂದ. ಯಾವುದೋ ಒಂದು ಸೆಳೆತ ಅವನನ್ನು ಕೈಚಾಚಿ ಕರೆದಂತಾಯಿತು.. ಅರೆ ಚಿರಪರಿಚಿತ ಜರ್ಕಿನ್.. ಆ ಮಂದ ಬೆಳಕಿನಲ್ಲಿಯೂ, ಚಂದಿರನ ಬೆಳದಿಂಗಳಲ್ಲಿ , ಅಂಗಡಿಯ ಮುಂದೆ ಹಾಕಿದ್ದ ಸಣ್ಣ ದೀಪದ ಬೆಳಕಿನಲ್ಲಿ ಫಳ್ ಎಂದು ಹೊಳೆದ ಮೂಗುತಿ. ಕೃಷ್ಣಕಾಂತನ ಹೃದಯದಲ್ಲಿ ಜೋಗದ ಜಲಪಾತ.  ಅರೆ "ಇವಳೇ ಇವಳೇ ಚಂದನದ ಗೊಂಬೆ ಚೆಲುವಾದ ಗೊಂಬೆ ಚಂದನದಾ ಗೊಂಬೆ" ಹಾಡು ಹೃದಯದಲ್ಲಿ ಹಾಡತೊಡಗಿತು. 
ಕೃಪೆ : ಮನದ ಮಡಿಲಲ್ಲಿ ಅರಳಿದ ಹೂಗಳು.. ಅಂತರ್ಜಾಲದ ಉದ್ಯಾನವನದಲ್ಲಿ ಕಿತ್ತದ್ದು 
ಇನ್ನೊಮ್ಮೆ ನೋಡೋಣ ಅನ್ನಿಸಿತು.. ಮಾತಾಡಲೇಬೇಕು ಎನ್ನಿಸಿತು.. ಆ ಮುದ್ದಾದ ಮೊಗವನ್ನು ನೋಡಿ, ಆಕೆಯ ಹೊಳೆಯುವ ಕಂಗಳನ್ನು ಒಮ್ಮೆ ಕಣ್ಣ ತುಂಬಾ ತುಂಬಿಕೊಂಡು, ಸದಾ ಅರಳುತ್ತಿದ್ದ ಆಕೆಯ ಮಲ್ಲಿಗೆ ನಗೆಯನ್ನು ಮತ್ತು ಆ ನಗೆಯು ಕೊಡುತ್ತಿದ್ದ ಉತ್ಸಾಹದ ಬಗ್ಗೆ, ಆಕೆಯ ಬೆಳಗಿನ ಮಂದಹಾಸದ ದರುಶನದಿಂದ ತನಗೆ ಸಿಗುತ್ತಿದ್ದ ಉತ್ಸಾಹ, ಉಲ್ಲಾಸ ಇದರ ಬಗ್ಗೆ ಹೇಳಲೇಬೇಕು.. ಇವಿಷ್ಟು ಆ ಎರಡು ಕ್ಷಣಗಳಲ್ಲಿ ಅನ್ನಿಸಿತು.. ಆದರೆ ಆ ಮಂದ ಬೆಳಕಿನಲ್ಲಿ ಮತ್ತೆ ತಿರುಗಿ ಮಾತಾಡಿಸಲೇ, ಅಥವಾ ಆಕೆಯಲ್ಲದೆ ಬೇರೆ ಯಾರೋ ಆಗಿದ್ದರೆ ಎಷ್ಟು ಅಭಾಸವಾಗುತ್ತದೆ.. ಎನ್ನಿಸಿತು ಮನಸು.. 

ಆಕೆ ತನ್ನ ಗಾಡಿಯನ್ನು ಸ್ಟಾರ್ಟ್ ಮಾಡಿಕೊಂಡು ಆ ಕತ್ತಲಲ್ಲಿ ಮರೆಯಾದಳು.. ಹಣ್ಣಿನ ಅಂಗಡಿಯಿಂದ ಎಫ್ ಎಂ ನಲ್ಲಿ ಹಾಡು ಬರುತ್ತಿತ್ತು

"ಕಣ್ಣಂಚಿನ ಈ ಮಾತಲಿ ಏನೇನೋ ತುಂಬಿದೆ.. "

Sunday, October 16, 2016

ಕಾಡುವ - ೩

ಮೊದಲನೇ ಭಾಗ - ಕಾಡುವ - ೧
ಎರಡನೇ ಭಾಗ - ಕಾಡುವ - ೨

(ಮುಂದುವರಿದ ಭಾಗ)

ಲಾರಿ ಚಾಲಕ ನಿಧಾನವಾಗಿ ತಿರುಗಿದಾಗ.. ಅಲ್ಲಿದ್ದ ಇಬ್ಬರಿಗೂ ಮುಖದಲ್ಲಿ ಬೆವರಿನ ಜಲಪಾತ ಶುರುವಾಯಿತು.. ಕಾರಣ ಚಾಲಕನ ಒಂದು ಬದಿಯ ಮುಖವೇ ಇರಲಿಲ್ಲ.. ಬರಿ ವಸಡು, ಹಲ್ಲು ಕಾಣುತ್ತಿದ್ದವು.. ಕಣ್ಣುಗಳ ಗುಡ್ಡೆ ಮಾತ್ರ ಇದ್ದವು..

"ಅಯ್ಯೋ, ಯಪ್ಪಾ, ನಾ  ಸತ್ತೇ.. " ಇಬ್ಬರೂ ಕೂಗಲು ಶುರುಮಾಡಿದರು.. ಲಾರಿ ಓಲಾಡತೊಡಗಿತು..

ಇವರ ಭುಜದ ಮೇಲೆ ದೊಪ್ಪೆಂದು ಕೈ ಬಿದ್ದಿತು.. ಮೊದಲೇ ಹೆದರಿ ಸತ್ತಿದ್ದ ಇಬ್ಬರು, ತಿರುಗಿ ನೋಡಿದರು..

ದೊಡ್ಡದಾದ ಆಕೃತಿ ಹಲ್ಲು ಬಿಡುತ್ತಾ

"ಅಣ್ಣಾ ಅಣ್ಣಾ"

ಇಬ್ಬರಿಗೂ ಹೃದಯವೇ ಬಾಯಿಗೆ ಬಂದಂತಾಗಿತ್ತು.. ಜೊತೆಯಲ್ಲಿ ಲಾರಿ ಓಲಾಡತೊಡಗಿತ್ತು.. ಲಾರಿಯ ಚಾಲಕನ ವಿಕಾರ ರೂಪ, ನಗು, ಜೊತೆಯಲ್ಲಿ ಕಳೆದ ಕೆಲ ಘಂಟೆಗಳಿಂದ ಕೇಳಿಸುತ್ತಿರುವ "ಅಣ್ಣಾ ಅಣ್ಣಾ" ಧ್ವನಿಯಿಂದಾಗಿ ಹಣೆಯಲ್ಲಿನ ಬೆವರಿನ ಆಣೆಕಟ್ಟು ಒಡೆದು ಬಹಳ ಹೊತ್ತೇ ಆಗಿತ್ತು.

ಲಾರಿ ನಿಯಂತ್ರಣ ಕಳೆದುಕೊಂಡಿತ್ತು. ಹೊರಗೆ ಧುಮುಕಲು ಆ ಭಯದಲ್ಲಿಯೂ ಇಬ್ಬರೂ ನಿರ್ಧಾರ ಮಾಡಿದರು. ಹೊರಗೆ ಗವ್-ಗತ್ತಲೆ.. ಕಪ್ಪು ಅಂದರೆ ಕರೆಂಟ್ ಹೊಡೆದ ಕಾಗೆ ಕಪ್ಪು. ಅಕ್ಷರಶಃ ಏನೂ ಕಾಣುತ್ತಿರಲಿಲ್ಲ. ಜೊತೆಯಲ್ಲಿ ಟಪ್ ಟಪ್ ಮಳೆ ಹನಿಗಳು ಲಾರಿಯ ಬಾನೆಟ್ ಮೇಲೆ ರುದ್ರ ತಾಂಡವ ಮಾಡುತ್ತಿದ್ದವು.

ಇನ್ನೇನೂ ಇಬ್ಬರೂ ನಿಯಂತ್ರಣ ಕಳೆದುಕೊಂಡಿದ್ದ ಲಾರಿಯಿಂದ ಧುಮುಕಬೇಕು..  ಯಾರೋ ತಮ್ಮ ಕುತ್ತಿಗೆಯನ್ನು ಹಿಚುಕಿದ ಅನುಭವ, ಉಸಿರಾಡಲು ಆಗುತ್ತಿಲ್ಲ.. ಕಣ್ಣಾಲಿಗಳು ಮೇಲಕ್ಕೆ ಸಿಕ್ಕಿಕೊಳ್ಳುತ್ತಿದ್ದವು.

"ಅಯ್ಯೋ ಅಯ್ಯೋ" ಕೂಗಬೇಕಿದ್ದ ಪದಗಳು ಗಂಟಲಿನಿಂದ ಮೇಲಕ್ಕೆ ಏಳುತ್ತಲೇ ಇಲ್ಲ, ಪಂಚರ್ ಆದ ಚಕ್ರದ ತರಹ, ಕೆಸರಲ್ಲಿ ಹೂತು ಹೋಗುವ ಚಕ್ರದ ಹಾಗೆ ಪುಸ್ ಅಂತ ಒಳಗೆ ಹೋಗಲು ಶುರುಮಾಡಿತು. ಹೇಗೋ ಮನದಲ್ಲಿ ದೇವರ ನಾಮ ಸ್ಮರಣೆ ಮಾಡಿ, ಮೊದಲೇ ಅಲುಗಾಡಿ ಅಲುಗಾಡಿ ಸಡಿಲವಾಗಿ ನಡುಗುತಿದ್ದ ಲಾರಿಯ ಗೇರ್ ಲಿವರನ್ನು ಜೋರಾಗಿ ಹಿಡಿದು ಎಳೆದ ಒಬ್ಬ, ಇನ್ನೊಬ್ಬ  ಕಷ್ಟಪಡುತ್ತಲೇ ಆ ಕತ್ತಲೆಯಲ್ಲಿ ಏನೂ ಸಿಗುತ್ತೆ ಎಂದು ತಡಕಾಡಿದ, ಲಾರಿಯ ಕನ್ನಡಿ ಸಿಕ್ಕಿತು, ಅದನ್ನೇ ಬಲವಾಗಿ ಕೀಳಲು ಶುರು ಮಾಡಿದ.

ಅವರ ಕುತ್ತಿಗೆಯ ಮೇಲಿನ ಹಿಡಿತ ಬಲವಾಗುತ್ತಲೇ ಹೋಯಿತು.. ಕಣ್ಣಿನ ಗುಡ್ಡೆಗಳಿಗೆ ಮುಂದೆ ಏನೂ ಕಾಣುತ್ತಿರಲಿಲ್ಲ, ಉಸಿರು ತನ್ನ ಉಪಸ್ಥಿತಿ ಮುಗಿಯುತ್ತಿದೆ ಎನ್ನುವ ಸುಳಿವನ್ನು ಕೊಡಹತ್ತಿತು.

ಹಠಾತನ್ನೇ ಲಾರಿ ಚಾಲಕ ಗಹ ಗಹಸಿ ನಗುತ್ತಾ ಬ್ರೇಕ್ ಹಾಕಿದ.. "ಎಲ್ರುಲಾ ತಪ್ಪಿಸ್ಕೊತೀರಾ.. ಸಿಕ್ಕಿದ್ರಿ ಇವತ್ತು.. ಹಬ್ಬ ನಮಗೆ"

ಲಾರಿ ಜರ್ ಅಂತ ನಿಲ್ಲಲು ಆಗುತ್ತಿರಲಿಲ್ಲ,   ರಸ್ತೆಯ ಮೇಲೆ ಹರಿಯುತ್ತಿದ್ದ ನೀರು, ಎಲೆಗಳು ಕೊಳೆತು ಜಾರುತ್ತಿದ್ದ ರಸ್ತೆ, ಸವಕಲಾಗಿದ್ದ ಲಾರಿಯ ಟೈಯರ್ ಗಳು, ಬ್ರೇಕ್ ಹಾಕಿದರು ಲಾರಿಯನ್ನು ನಿಲ್ಲಿಸಲು ಹರಸಾಹಸ ಪಡುತ್ತಿದ್ದವು, ಜೊತೆಯಲ್ಲಿ ಇವರಿಬ್ಬರ ಕೊಸರಾಟಕ್ಕೆ, ಅವುಗಳ ಹಿಡಿತಕ್ಕೆ ಲಾರಿ ನಿಧಾನಕ್ಕೆ ರಸ್ತೆಯಂಚಿಗೆ ಜಾರುತ್ತಿತ್ತು.

ಒಂದು ಕಡೆ, ಕತ್ತರಿಸಿ ಕತ್ತರಿಸಿ ಸವೆದ ಗರಗಸದ ಹಲ್ಲಿನಂತೆ ಇರುವ ಓರೇ ಕೋರೆಯಾಗಿ ಇರುವ ಚೂಪು ಚೂಪು ಬಂಡೆಗಳು, ಇನ್ನೊಂದು ಕಡೆ ತಳವೇ ಕಾಣದಂತಹ ದಟ್ಟ ಕಾಡಿನಿಂದ ತುಂಬಿದ್ದ ಕಣಿವೆ ಪ್ರದೇಶ, ಮಳೆಯಿಂದಾಗಿ ಜುಳು ಜುಳು ಹರಿಯುತಿದ್ದ ಝರಿಗಳು, ಇದಕ್ಕೆ ತಕ್ಕ ಹಾಗೆ ಸಾತ್ ನೀಡುತ್ತಿರುವ ಕಾರ್ಗತ್ತಲೆ, ಮಳೆಯ ಹನಿಗಳು, ಅಮಾವಾಸ್ಯೆಯ ಕತ್ತಲೆ ಇಡೀ ಪ್ರದೇಶವನ್ನು ಭಯಾನಕ ಪ್ರದೇಶವನ್ನಾಗಿ ಮಾಡಿದ್ದವು.

ಜೋರಾಗಿ ಎಳೆದೇಬಿಟ್ಟ.. ಲಾರಿಯ ಲಿವರ್ ಕೈಗೆ ಬಂತು, ಆ ಕತ್ತಲಿನಲ್ಲಿಯೇ, ತನ್ನ ಕುತ್ತಿಗೆ ಹಿಸುಕುತಿದ್ದ ಹಿಂದೆ ಇದ್ದ ಆಕೃತಿಗೆ ಬೀಸಿದ.  ಅದು ತನ್ನ ಬೆನ್ನಿಗೆ ಬಡಿಯಿತು, ಕೂಗಲು ಧ್ವನಿಯಿಲ್ಲ, ಆದರೆ ನೋವು, ಮತ್ತಷ್ಟು ಅಲುಗಾಡ ತೊಡಗಿದ. ಲಾರಿ ಇನ್ನಷ್ಟು ಜಾರಿ ರಸ್ತೆಯಂಚಿಗೆ ಬಂತು.

ಅತ್ತ ಕಡೆ ಲಾರಿಯ ಕನ್ನಡಿ ಕೈಗೆ ಸಿಕ್ಕವನು ಬಲವಾಗಿ ಬೀಸಿದ.. ಒಂದು ವೃತ್ತಾಕಾರವಾಗಿ ತಿರುಗಿದ ಅವನ ಕೈ ಸೀದಾ ಮುಂದಿದ್ದ  ಲಾರಿಯ ಗಾಜಿಗೆ ಬಡಿದು ಠಳ್ ಎಂದು ಸದ್ದು ಮಾಡತ್ತಾ, ಗಾಜಿನ ಚೂರು ಅಲ್ಲೆಲ್ಲ ಸಿಡಿಯಿತು. ಇವರಿಬ್ಬರಿಗೂ ಆ ಗಾಜಿನ ತುಣುಕುಗಳು ಬಡಿದು ಇನ್ನಷ್ಟು ನೋವಾಯಿತು.

ಕೂಗೋಕೆ ಹೋದರೆ, ಅವರ ಸೌಂಡ್ ಕಾರ್ಡ್ ಮ್ಯೂಟ್ ಆಗಿತ್ತು... ಬರಿ ಬಾಯಿ ಮಾತ್ರ ಜೋರಾಗಿ ತೆಗೆಯುತ್ತಿತ್ತು ಅಷ್ಟೇ, ಧ್ವನಿ ಮಾತ್ರ ಇಲ್ಲ.

ಚಳಿ, ತಮಗೆ ಬಿದ್ದ ಹೊಡೆತ, ಜೊತೆಯಲ್ಲಿ ಗಾಜಿನ ಚೂರುಗಳು ಮೊದಲೇ ಬೆವರಿನಿಂದ, ಮತ್ತು ಮಳೆಯಿಂದ ನೆಂದು ಮುದ್ದೆಯಾಗಿದ್ದ ದೇಹಕ್ಕೆ ಆ ಗಾಯಗಳು ಇನ್ನಷ್ಟು ನೋವನ್ನು ತುಂಬಿದವು.

ಲಾರಿಯ ಮುಂದಿನ ಎರಡು ಚಕ್ರ ಧಸಕ್ ಅಂತ ಒಂದು ಹಳ್ಳದಲ್ಲಿ ಇಳಿದ ಅನುಭವ.. ಮಾತಾಡಲು ಆಗದೆ ಇದ್ದರೂ ಇಬ್ಬರಿಗೂ ಅರಿವಾಯಿತು, ನಿಯಂತ್ರಣ ಕಳೆದುಕೊಳ್ಳುತಿದ್ದ ಲಾರಿ, ಮೆಲ್ಲಕ್ಕೆ ಕಂದಕದತ್ತ ಜಾರುತ್ತಿದ್ದೆ ಎಂದು.

ಇವರಿಬ್ಬರ ಕುತ್ತಿಗೆಯ ಮೇಲಿನ ಹಿಡಿತ ಬಲವಾಗುತ್ತಲೇ ಇತ್ತು.. ಇದ್ದಬದ್ದ ಧೈರ್ಯ, ಶಕ್ತಿ ತುಂಬಿಕೊಂಡು ಬಲವಾಗಿ ಒಬ್ಬ ಹಿಂದಕ್ಕೆ ತಿರುಗಿ ಕಾಲಿನಿಂದ ಒದ್ದಾ.. ಕಾಲಿಗೆ ಏನೂ ಬಲವಾದ ವಸ್ತು ಸಿಕ್ಕ ಅನುಭವ, ಹಾಗೆ ಅದು ತುಸು ದೂರ ಹೋಯಿತು ಎನ್ನುವುದು ಅವನಿಗೆ ಅರಿವಾಯಿತು.

ಲಾರಿ ಮತ್ತಷ್ಟು ಕೆಳಕ್ಕೆ ಜಾರಿತು..

ಇನ್ನೊಬ್ಬ, ಕೈಗೆ ಸಿಕ್ಕಿದ ಕನ್ನಡಿಯನ್ನು ಮತ್ತೆ ಬೀಸಿದ, ಅದು ಟಪ್ ಅಂತ ಸದ್ದು ಮಾಡುತ್ತಾ, ಯಾವುದೋ ಆಕೃತಿಗೆ ಬಡಿದ ಶಬ್ದವಾಯಿತು.

ಇಬ್ಬರಿಗೂ ನಿಧಾನವಾಗಿ ತಮ್ಮ ಕುತ್ತಿಗೆಯ ಮೇಲಿನ ಹಿಡಿತ ಕಡಿಮೆ ಆಗುತ್ತಿರುವ ಅನುಭವ.. ಜೊತೆಯಲ್ಲಿಯೇ ಸಂಶಯವೂ ಶುರುವಾಯಿತು, ಗಾಡಿಯಲ್ಲಿ ಇದ್ದದ್ದು ನಾನು, ನನ್ನ ಗೆಳೆಯ.. ಜೊತೆಯಲ್ಲಿ ಲಾರಿ ಚಾಲಕ ಮತ್ತು ಇನ್ನೊಬ್ಬ ವ್ಯಕ್ತಿ, ಅಂದರೆ ನಾಲ್ಕೇ ಮಂದಿ.

ಆದರೆ ನಾನು ಒಬ್ಬನ್ನು ಒದ್ದೆ, ಇನ್ನೊಬ್ಬ ದೂರ ಜಾರಿದ, ಆದರೂ ನಮ್ಮ ಕುತ್ತಿಗೆಯ ಮೇಲೆ ಕೈಗಳ ಹಿಡಿತ ಇದ್ದೆ ಇದೆ.. ಮೈ ಜುಮ್ ಎಂದಿತು, ಅಂದರೆ ಅಂದರೆ.. ಅಯ್ಯೋ ದೇವರೇ..

ಲಾರಿ ಸುಯ್ ಅಂತ ಕಣಿವೆಗೆ ಇಳಿಯುತ್ತಿದ್ದೇನೆ ಎನ್ನುವ ಸುಳಿವು ಕೊಟ್ಟಿತು.. ಯಾವುದೋ ಮರಕ್ಕೆ ಡಿಕ್ಕಿ ಹೊಡೆದು, ಲಾರಿಯ ಮುಂದಿನ ಎರಡು ದೀಪಗಳು ಠಳ್ ಎಂದು ಒಡೆದು, ಮೊದಲೇ ಕತ್ತಲಾಗಿದ್ದ ಪ್ರದೇಶ.. ಚಂದಿರನಿಲ್ಲದ ಬಾನಿನಂತಾಯಿತು.

ರೆಂಬೆ ಕೊಬೆಗಳು ಕಣಿವೆಗೆ ಇಳಿಯುತ್ತಿದ್ದ ಲಾರಿಯೊಳಗೆಲ್ಲಾ  ನುಗ್ಗಿ ಬಂದು, ಇವರಿಬ್ಬರ ಮೈಕೈಗೆ ತರಚಿ ಇನ್ನಷ್ಟು ಚರ್ಮ ಕಿತ್ತು ಬರುವಂತೆ ಮಾಡಿತು.

"ಅಮ್ಮಾ ಅಮ್ಮಾ ನೋವು ನೋವು.. ಅಯ್ಯೋ ಅಯ್ಯೋ.. ಕಾಪಾಡಿ ಕಾಪಾಡಿ.. ಯಾರಿದ್ದೀರಾ. ದೇವರೇ ಕಾಪಾಡಪ್ಪ.. " ಸುಮಾರು ಹೊತ್ತು ಸದ್ದೇ ಇಲ್ಲದ ಅವರ ಧ್ವನಿ ಪೆಟ್ಟಿಗೆಗೆ ಜೀವ ಬಂದಿತ್ತು.. ಜೀವ ಭಯದಿಂದ, ಚಳಿಯಿಂದ ನಡುಗುತಿದ್ದರೂ. ಅವರು ನಂಬಿದ ಇಷ್ಟದೈವದ ಮೇಲಿನ ಅಚಲ ನಂಬಿಕೆ ಅವರಲ್ಲಿ ಉತ್ಸಾಹ ತುಂಬಲು ಪ್ರಯತ್ನಿಸುತ್ತಿತ್ತು.

ಲಾರಿ ನಿಧಾನವಾಗಿ ಕೆಳಮುಖವಾಗಿ ಆ ಕಣಿವೆಯಲ್ಲಿ ರೆಂಬೆಕೊಂಬೆಗಳ ಮಧ್ಯೆ.. ಬೆನ್ನಟ್ಟಿ ಬರುವ ಹಸಿದ ಹೆಬ್ಬುಲಿಯಿಂದ ತಪ್ಪಿಸಿಕೊಳ್ಳಲು ಓಡುವ ಜಿಂಕೆಯಂತೆ ಜಾಗ ಮಾಡಿಕೊಂಡು ನುಗ್ಗುವಂತೆ.. ಆ ರೆಂಬೆ ಕೊಂಬೆಗಳ ಮಧ್ಯೆ ಜಾರುತ್ತಲೇ ಹೋಯಿತು.

ಇಬ್ಬರೂ ಜೀವವನ್ನು ಬಿಗಿಮಾಡಿಕೊಂಡು, ದೇವರ ಅಭಯವಿದ್ದರೇ  ಬದುಕುತ್ತೇವೆ ಇಲ್ಲದೆ ಹೋದರೆ ಅವನಿಚ್ಛೆ ಹೇಗೋ ಹಾಗೆ ಎಂದು ತೀರ್ಮಾನಿಸಿ, ಆ ಕತ್ತಲಿನಲ್ಲಿಯೂ ಎಲ್ಲಾದರೂ ಬೆಳಕು ಕಾಣಬಹುದೇ ಎಂದು ಆಶಿಸುತ್ತಾ ಮೊಗವನ್ನು, ಶರೀರವನ್ನು ರೆಂಬೆಕೊಂಬೆಗಳ ಆಕ್ರಮಣದಿಂದ ತಪ್ಪಿಸಿಕೊಳ್ಳುತ್ತಾ ಬಗ್ಗಿ ಕೂತರು.

"ಅಣ್ಣಾ ಅಣ್ಣಾ ಅಣ್ಣಾ ಅಣ್ಣಾ" ಧ್ವನಿ....

ಬೆನ್ನಿನ ಹುರಿಯಲ್ಲಿ ಮತ್ತೆ ನಡುಕ.. ಚಳಿ, ಮಳೆ, ಹೆದರಿಕೆ, ತರಚಿದ ಗಾಯಗಳು ಕೊಡುತ್ತಿದ್ದ ನೋವು.. ಇದೆಲ್ಲದರ ಮೇಲೆ ಮತ್ತೆ ಆ ಧ್ವನಿ..

ಬೆನ್ನಿನ ಮೇಲೆ ಇಬ್ಬರಿಗೂ ಬಲವಾಗಿ ಎರಡು ಕೈಗಳಿಂದ ಹೊಡೆತ  ಬಿತ್ತು.. ಆ ಚಳಿಗೆ ಆ ಬಲವಾದ ಏಟು ಬಾರಿ ನೋವನ್ನೇ ಮಾಡಿತು.. "ಅಮ್ಮಾ ಸತ್ತೇ ಅಮ್ಮಾ ಸತ್ತೇ" ಇಬ್ಬರೂ ಕೂಗಿದರು ಜೋರಾಗಿ.. ಅವರ ಮುಲುಕಾಟಕ್ಕೆ, ಕಿರುಚಾಟಕ್ಕೆ ಲಾರಿ ಇಳಿಯುವ ವೇಗ ಇನ್ನಷ್ಟು ಹೆಚ್ಚಾಯಿತು..

ಮತ್ತೆ ಎರಡು ಹೊಡೆತ.. ಇಬ್ಬರೂ ಮೂರ್ಛೆ ತಪ್ಪಿ ಬಿದ್ದರು.. ಅವರ ಅಲುಗಾಟಕ್ಕೆ ಲಾರಿಯ ವೇಗ ಇನ್ನಷ್ಟು ಹೆಚ್ಚಾಯಿತು.. ಜೊತೆಯಲ್ಲಿ ಲಾರಿಯ ಮುಂದಿನ ಗಾಜು ಒಡೆದು ಹೋಗಿದ್ದರಿಂದ, ಇಬ್ಬರ ಶರೀರ ಲಾರಿಯಿಂದ ಹೊರಗೆ ಬಿತ್ತು.

ಲಾರಿ ಜಾಗ ಮಾಡಿಕೊಳ್ಳುತ್ತಲೇ ಹೋಯಿತು, ಜೊತೆಯಲ್ಲಿ ಇವರಿಬ್ಬರ ದೇಹಗಳು ಕೆಳಗೆ ಬೀಳಲು ಆರಂಭಿಸಿತು.

ಮಣ್ಣಿನ ನೆಲದ ಮೇಲೆ ಬೀಳುತ್ತಲೇ ಇವರಿಬ್ಬರ ದೇಹಗಳು ಲಟ ಪಟ ಸಡ್ಡು ಮಾಡಿದವು.. ಯಾವ ಯಾವ ಮೂಳೆಗಳು ಮುರಿದವೋ ಅಥವಾ ಅವರ ದೇಹ ಮೇಲಿನಿಂದ ಬೀಳುವಾಗ ಯಾವ ಯಾವ ಮರದ ಕೊಂಬೆಗಳು ಸಿಕ್ಕಿಕೊಂಡಿದ್ದವೋ ಅರಿವಿಲ್ಲ..
*******

ಮೈ ಚುರ್ ಎನ್ನಲು ಆರಂಭಿಸಿತು.. ತಡೆಯಲಾಗದಷ್ಟೂ ಉರಿ... ಅಯ್ಯೋ ಏನಾಗುತ್ತಿದೆ ಎಂದು ನಿಧಾನವಾಗಿ ಕಣ್ಣುಗಳು ತೆರೆಯಲು ಪ್ರಯತ್ನಿಸಿತು.. ಆಗುತ್ತಿಲ್ಲ.. ಕಣ್ಣಿನ ಮೇಲೆ ಏನೋ ದಪ್ಪನೆಯ ವಸ್ತು ಕೂತ ಅನುಭವ.. ಕಷ್ಟ ಪಟ್ಟು ಬೆರಳುಗಳಿಂದ ಕಣ್ಣಿನ ಮೇಲಿನ ವಸ್ತುವನ್ನು ತಳ್ಳಿದರು.. ಕಣ್ಣಿನ ಮೇಲೆ ಎಲೆಗಳು, ಮರಳು, ಚಿಕ್ಕ ಪುಟ್ಟ ಕಲ್ಲುಗಳು ಎಲ್ಲವೂ ದಸರಾ ಗೊಂಬೆಗಳಂತೆ ಕೂತಿದ್ದವು.. ಕಥೆ ಹೇಳುತ್ತಿದ್ದವ ಶಕ್ತಿ ಮೈಗೂಡಿಸಿಕೊಂಡು ಎದ್ದೇಳಲು ಪ್ರಯತ್ನಿಸಿದ. ಆಗಲಿಲ್ಲ. ದೇಹದ ಶಕ್ತಿ ಉಡುಗಿ ಹೋಗಿತ್ತು.

ಹಾಗೆ ಪಕ್ಕದಲ್ಲಿ  ಕಣ್ಣು ಹಾಯಿಸಿದ ಕಥೆ ಶುರುಮಾಡಿದವ.. ಅನತಿ ದೂರದಲ್ಲಿಯೇ ಕಥೆ ಹೇಳಿ ಎಂದು ಕಾಡಿದವನು ಅಂಗಾತ ಬಿದ್ದಿದ್ದ.. ಕಷ್ಟ ಪಟ್ಟು ತೆವಳುತ್ತಾ ಅವನ ಬಳಿ ಹೋಗಿ ಮೂಗಿಗೆ ಕೈ ಹಿಡಿದು ನೋಡಿದ .. ಬದುಕಿತ್ತು ಆ ಪ್ರಾಣಿ..ಉಫ್ ಎಂದಿತು ಅವನ ಮನಸ್ಸು.

ಹಾಗೆ ತೆವಳುತ್ತಲೇ, ಅಲ್ಲೇ ಮಳೆಯಿಂದ ಹೊಂಡವಾಗಿದ್ದ ನೀರನ್ನು ಕಷ್ಟ ಪಟ್ಟು ತನ್ನ ಒಂದು ಕೈಯಿಂದ ತುಂಬಿಕೊಂಡು, ಆತನ ಮುಖದ ಮೇಲೆ ಚಿಮುಕಿಸಿದ.. "ಆ ಆ ಆ.." ಸದ್ದಾಯಿತು ಆತನ ದೇಹದಿಂದ..  ಕಣ್ಣು ಅರ್ಧ ಮಾತ್ರ ತೆಗೆಯಲು ಆಯಿತು. ಕಾರಣ ಆವ ಬೀಳುವಾಗ ಚಿಕ್ಕ ಕೊಂಬೆಯೊಂದು ಅವನ ಕಣ್ಣಿಗೆ ಬಡಿದಿತ್ತು.. ಎಚ್ಚರವಾದ ಮೇಲೆ ಅಸಾಧ್ಯ ನೋವು..ಬಿಸಿಲಿಗೆ ಮೈಕೈ ಮೇಲಿನ ಗಾಯಗಳು ಬೊಬ್ಬೆ ಹೊಡೆಯುವಂತೆ ಮಾಡಿತ್ತು.

ತುಸು ಅರ್ಧ ಎದ್ದು ಸುತ್ತಲೂ ಇಬ್ಬರೂ ಕಣ್ಣು ಹಾಯಿಸಿದರು.. ಪಕ್ಕದಲ್ಲಿಯೇ ಹರಿಯುತ್ತಿದ್ದ ಪುಟ್ಟ ನದಿ.. ಕಲ್ಲು ಬಂಡೆಗಳು, ಅದರ ದಡದಲ್ಲಿ ಬಿದಿರಿನ ಮೆಳೆಗಳು.. ದೂರದಲ್ಲಿ ಒಂದು ದಿನದಿಂದ ಕಾಣದೆ ಇದ್ದ ನೀಲಿ ಆಗಸ.. ಜಲಪ್ರಳಯದಿಂದ ಮೈಕೈ ತೊಳೆದುಕೊಂಡು ಶುಭ್ರವಾದ ವಸುಂಧರೆ ಸುಂದರವಾಗಿ ಕಾಣುತ್ತಿತ್ತು. ತಲೆ ಎತ್ತಿ ನೋಡಲು ಪ್ರಯತ್ನಿಸಿದರು.. ನೆಂದಿದ್ದ ತಲೆ, ಜೊತೆಯಲ್ಲಿ ಸಿಕ್ಕ ಸಿಕ್ಕ ಕಡೆ ಬಿದ್ದ ಹೊಡೆತ.. ರೆಂಬೆಕೊಂಬೆಗಳು ಮಾಡಿದ್ದ ಗಾಯಗಳು ಇವುಗಳಿಂದ ತಲೆ ಅಸಾಧ್ಯ ನೋಯುತ್ತಿತ್ತು. ತಲೆಯ ಮೇಲೆ ಯಾರೋ ನಗಾರಿ ಬಾರಿಸಿದ ಅನುಭವ.. ತಲೆಯ ಸುತ್ತಲೂ ಟಪ್ ಟಪ್ ಎಂದು ಹೊಡೆದುಕೊಳ್ಳುತ್ತಿದ್ದ ನರಗಳು.. ಜೊತೆಯಲ್ಲಿ ಮೈ ಮೇಲಿದ್ದ ಗಾಯಗಳು.. ಅವರನ್ನು ಅರೆ ಜೀವದ ದೇಹದ ಮಾಲೀಕರನ್ನಾಗಿ ಮಾಡಿತ್ತು.

ಸ್ವಲ್ಪ ಶಕ್ತಿ ಮೈಯಲ್ಲಿ ತುಂಬಿಸಿಕೊಂಡು ಅನತಿ ದೂರದಲ್ಲಿಯೇ ಹರಿಯುತ್ತಿದ್ದ ನದಿಯ ಬಳಿಗೆ ತೆವಳಿಕೊಂಡೇ ಹೋದರು ಇಬ್ಬರು. ಬಾಯಲ್ಲಿ ಒಂದು ಹನಿ ನೀರು ಇರಲಿಲ್ಲ.. ಇಬ್ಬರೂ ಪ್ರಾಣಿಗಳ ತರಹ ತೆವಳಿಕೊಂಡು ಹೋಗಿ,  ಪ್ರಾಣಿಗಳು ನೀರನ್ನು ಕುಡಿಯುವ ತರಹ.. ನದಿಗೆ ತಮ್ಮ ಬಾಯಿಯನ್ನು ಒಡ್ಡಿ ಹಿತವಾಗುವಷ್ಟು ನೀರನ್ನು ಕುಡಿದರು..
ಕೃಪೆ - ಗೂಗಲೇಶ್ವರ 
ಸ್ವಲ್ಪ ಜೀವ ಬಂದಂತೆ ಅನ್ನಿಸಿತು.. ಹಾಗೆಯೇ ಮತ್ತೆ ನದಿ ದಂಡೆಯಲ್ಲಿ ಬಿದ್ದುಕೊಂಡರು..
*****

"ಅಣ್ಣಾ ಅಣ್ಣಾ.. ಯಾರೋ ಇಬ್ಬರು ಅಲ್ಲಿ ಬಿದ್ದಿದ್ದಾರೆ ನೋಡಣ್ಣೋ..

ಬೆಳಗಿನ ಬಹಿರ್ದೆಸೆ ಭಾದೆ ತೀರಿಸಿಕೊಳ್ಳಲು ಬಂದ ಹಳ್ಳಿಗರಲ್ಲಿ ಒಬ್ಬ ಅಲ್ಲಿ ಬಿದ್ದಿದ್ದ ಇಬ್ಬರ ದೇಹವನ್ನು ನೋಡಿ ಕೂಗಿಕೊಂಡ.

ಮೂರು ನಾಲ್ಕು ಜನ ಬಂದು ನೋಡಿದರು.. ಒಮ್ಮೆಲೇ ಅವರಿಗೆ ಅನುಮಾನ.. ಸತ್ತು ಬಿದ್ದಿದ್ದಾರೋ ಏನೋ.... ಧೈರ್ಯ ಮಾಡಿಕೊಂಡು ಒಬ್ಬ ಹತ್ತಿರ ಹೋಗಿ ಅವರಿಬ್ಬರ ಎದೆಯ ಮೇಲೆ ಕಿವಿಯಿಟ್ಟು ಕೇಳಿದ..

"ಲಬ್ ಡಬ್ ಲಬ್ ಡಬ್"

ಖಚಿತವಾಯಿತು.. ಬದುಕಿದ್ದಾರೆ ಎಂದು..

*****

"ಕೌಸಲ್ಯಾ ಸುಪ್ರಜಾ ರಾಮ ಪೂರ್ವಾಸಂಧ್ಯಾ ಪ್ರವರ್ತತೆ, ಉತ್ತಿಷ್ಠ ನರ ಶಾರ್ದೂಲ ಕರ್ತವ್ಯಂ ದೈವಮಾಹ್ನಿಕಂ"

ಘಂಟೆಯ ನಾದ, ಕೋಳಿಯ ಕೂಗು, ನಾಯಿಗಳ ಬೊಗಳಿವಿಕೆ.. ಬೆರಣಿ, ಸೌದೆಯ ಹೊಗೆಯ ಘಾಟು..

ಕಥೆ ಹೇಳುತ್ತಿದ್ದವನ ಕಣ್ಣುಗಳು ಕರ್ ಎಂದು ಸದ್ದು ಮಾಡದೆ ತೆಗೆದುಕೊಂಡವು.. ದೇಹ ಭಾರವಾಗಿದ್ದರೂ ತುಸು ಉತ್ಸಾಹ ಮತ್ತು ಶಕ್ತಿ ತುಂಬಿದ್ದ ಅನುಭವ..

ಕಾಲೆಳೆದುಕೊಂಡು ನಿಧಾನವಾಗಿ ತಾವು ಮಲಗಿದ್ದ ಮನೆಯಿಂದ ಹೊರಗೆ ಬಂದು ಸುತ್ತಲೂ ನೋಡಿದಾಗ ಕಂಡ ದೃಶ್ಯ ಮನಕ್ಕೆ ತುಸು ಧೈರ್ಯ ಹಾಗೂ ಸಮಾಧಾನ ತಂದಿತು. 

ಮನೆಯ ಅಂಗಳದಲ್ಲಿನ ಸಗಣಿ ನೆಲದ ವಾಸನೆಯಿಂದ ನಾವು ಯಾವುದೋ ಹಳ್ಳಿಯಲ್ಲಿದ್ದೇವೆ ಎಂದು ಅರಿವಾಯಿತು. ಅಂಗಳದಲ್ಲಿ ಬಣ್ಣ ಬಣ್ಣದ ರಂಗೋಲಿಗಳು ನಗುತ್ತಿದ್ದವು. 

ಮತ್ತೆ ಮನೆಯೊಳಗೇ ಹೋಗಿ ಕಥೆ ಹೇಳಿ ಎಂದು ಕಾಡುತ್ತಿದವನನ್ನು ನಿಧಾನಾವಾಗಿ ಅಲುಗಾಡಿಸಿ ಎಬ್ಬಿಸಿದ.. ಇಬ್ಬರಿಗೂ ಆಶ್ಚರ್ಯ..ಇಬ್ಬರ ಮೈಕೈಗೆ ಆಸ್ಪತ್ರೆಯ ಬ್ಯಾಂಡೇಜ್..ಹಾಗೂ ತಲೆಗೆ ಯಾವುದೋ ಬಟ್ಟೆ ಸುತ್ತಿರುವುದು ಕಾಣಿಸಿತು. 

ಕಣ್ಣಲ್ಲೇ ಬಾ ಹೊರಗೆ ಹೋಗೋಣ ಅಂದು ಕರೆದರು ಕಥೆ ಹೇಳುತ್ತಿದ್ದ ವ್ಯಕ್ತಿ. ಇಬ್ಬರೂ ನಿಧಾನವಾಗಿ ಕಾಲುಗಳನ್ನು ಎಳೆದು ಹಾಕುತ್ತ ಮನೆಯ ಅಂಗಳಕ್ಕೆ ಬಂದರು.   

ಕೋಳಿಗಳು ಕುಕ್ ಕುಕ್ ಎಂದು ತನ್ನ ಆಹಾರವನ್ನು ಹುಡುಕುತಿತ್ತು.. 
ಮಿಯಾವ್ ಮಿಯಾವ್ ಬೆಕ್ಕು ತನ್ನ ಬೆಳಗಿನ ಆಹಾರ ಬೇಕು ಎಂದು ತನ್ನ ಮನೆಯ ಯಜಮಾನಿಗೆ ಸಂಜ್ಞೆ ನೀಡುತ್ತಿತ್ತು. 
ಮರಕ್ಕೆ ಕಟ್ಟಿ ಹಾಕಿದ್ದ ಮನೆಯ ನಾಯಿ "ಬೌ ಬೌ" ಬೊಗಳುತ್ತಾ "ಯಾರೋ ಅದು ನನ್ನ ಸಾಮ್ರಾಜ್ಯದಲ್ಲಿ ಕಾಲಿಡುತ್ತಿರುವುದು" ಎಂದು ಇತರ ನಾಯಿಗಳಿಗೆ ಸವಾಲು ಹಾಕುತ್ತಿತ್ತು.
ನಗರದಲ್ಲಿ ಕಾಣದೆ ಇರುವ ಗುಬ್ಬಚ್ಚಿಗಳು ಚೀವ್ ಚೀವ್ ಎಂದು ಅಂಗಳದಲ್ಲಿ ಬಿದ್ದಿದ್ದ ಭತ್ತ, ಗೋಧಿ, ರಾಗಿ ಇತರ ಕಾಳುಗಳನ್ನು ತಿನ್ನುತ್ತಿದ್ದವು.

ಆಹ್ಲಾದಕರ ವಾತಾವರಣ.. ಮನಸ್ಸು ಹತ್ತಿಯ ಹಾಗೆ ಹಗುರವಾಗಿದ್ದ ಅನುಭವ..

ಇಬ್ಬರೂ ತನ್ಮಯತೆಯಿಂದ ಹಾಗೆ ಮನೆಯ ಜಗಲಿಯಲ್ಲಿ ಕುಳಿತರು.  ಬೆಳಗಿನ ತಣ್ಣನೆ ಗಾಳಿ ಮನಕ್ಕೆ ಮುದ ನೀಡಿತು.

ಅವರಿಬ್ಬರ ಬೆನ್ನಿನ ಮೇಲೆ ಯಾರೋ ಕೈಯಿಟ್ಟ ಅನುಭವ..

"ಅಣ್ಣಾ ಅಣ್ಣಾ ಅಣ್ಣಾ ಅಣ್ಣಾ"

ಧಸಕ್ ಎಂದಿತು ಇಬ್ಬರ ಹೃದಯ.. ಹಠಾತ್ ತಿರುಗಿದರು..

ತಲೆಗೆ ರುಮಾಲು ಸುತ್ತಿಕೊಂಡು, ಹೆಗಲ ಮೇಲೆ ಗುದ್ದಲಿ ಹಿಡಿದು ನಿಂತಿದ್ದ ಒಬ್ಬಾತ ತನ್ನ ಹಳದಿ ಹಲ್ಲನ್ನು ಬೀರುತ್ತಾ ಕೇಳಿದ

"ಅಣ್ಣಾ ಅಣ್ಣಾ"

ಇಬ್ಬರಿಗೂ ಗೊತ್ತಾಯಿತು.. ಇದು ಆ ಧ್ವನಿಯಲ್ಲ ಎಂದು.. ನಿಟ್ಟುಸಿರು ಬಿಟ್ಟರು..

ಆ ಹಳ್ಳಿಯವ "ನಿಮ್ಮ ಕಥೆ ಏನಣ್ಣ.. ಯಾಕೆ ನದಿ ತೀರದ ಹತ್ತಿರ ಬಿದ್ದಿದ್ರಿ.. ಏನು ನಿಮ್ಮ ಸಮಾಚಾರ.. ಈ ಊರಿಗೆ ಹೊಸಬರ ಹೇಗೆ... .. ಎಲ್ಲಿಂದ ಬಂದ್ರಿ.. ಹೇಗೆ ಬಂದ್ರಿ.. ನೀವು ಯಾವ ಊರಿನವರು.. ಎಲ್ಲಿಗೆ ಹೋಗುತ್ತಿದ್ರಿ.. " ಉಸಿರು ಹಿಡಿದಂತೆ ಒಂದೇ ಸಮನೆ ಪ್ರಶ್ನೆಗಳ ಮಳೆಯನ್ನೇ ಸುರಿಸಿದ.

ಮೊದಲೇ ಮಳೆಯಲ್ಲಿ, ಬೆವರಿನಲ್ಲಿ, ಭಯದಲ್ಲಿ ನೆಂದು ನೀರಾಗಿದ್ದ ಇವರಿಬ್ಬರೂ.. ನಿಧಾನವಾಗಿ ಉಸಿರು ಬಿಡುತ್ತಾ.. "ಅದು ದೊಡ್ಡ ಕಥೆ."

ಹೌದಾ.. ಅಣ್ಣಾ ಹೊಲಕ್ಕೆ ಹೋಗಿಬರುತ್ತೇನೆ, ನೀವಿಬ್ಬರೂ ಮುಖ ತೊಳೆದು ಕಾಫಿ ತಿಂಡಿ ಮಾಡಿ ವಿಶ್ರಾಂತಿ ತೆಗೆದುಕೊಳ್ಳಿ, ನಾ ಬಂದು ಬಿಡುತ್ತೇನೆ.. " ಎಂದು ಹಾಗೆ ಮನೆ ಎದುರಿನ ಕಾಡಿನಲ್ಲಿ ಹೋಗಿ ಮಾಯವಾದ.. ಅವನು ಹೋಗುವ ಹಾದಿಯನ್ನೇ ನೋಡುತ್ತಿದ್ದ ಅವರಿಬ್ಬರು.. ಉಫ್ ಎಂದು ನಿಡಿದಾದ ಉಸಿರು ಬಿಟ್ಟು.. ಹಾಗೆ ಅಂಗಳದಲ್ಲಿ ಮಲಗಿದರು. ಸುಮಾರು ಹೊತ್ತು ಹಾಗೆ ಮಲಗಿದ್ದರು.

ಅಲ್ಲಿಗೆ ಒಂದು ಅಜ್ಜ ಬಂದು "ಎನ್ರಪ್ಪ.. ಏನಪ್ಪಾ ನಿಮ್ಮ ಕಥೆ" ಎಂದು ಕೇಳಿತು.. ಆಗಲೇ ಮತ್ತೆ ಇಹಲೋಕಕ್ಕೆ ಬಂದದ್ದು.

ಕಥೆ ಹೇಳಿ ಎಂದು ಪೀಡಿಸುತ್ತಿದ್ದವ  "ಅಜ್ಜಾ . ನಾವು ಎಲ್ಲಿದ್ದೇವೆ, ನಮ್ಮನ್ನು ಯಾರು ಇಲ್ಲಿಗೆ ಕರೆತಂದವರು" ಎಂದು ಕೇಳಿದಾಗ.. ಅಜ್ಜ ತನ್ನ ಜೇಬಿನಲ್ಲಿದ್ದ ಸಿಂಗಾರಿ ಬೀಡಿಯನ್ನು ತೆಗೆದು.. ಇಬ್ಬರಿಗೂ ಕೊಟ್ಟು ತಾನು ಹಚ್ಚಿಕೊಂಡು ಉಫ್ ಎಂದು ಹೊಗೆ ಬಿಟ್ಟು.. ಉಫ್ ಉಫ್ ಎಂದು ಕೆಮ್ಮುತ್ತ ಒಮ್ಮೆ ಕಫ ಸರಿಮಾಡಿಕೊಂಡು

ಇವಾಗ ತಾನೇ ಒಬ್ಬ ಹೋದನಲ್ಲ ಅವನು ನನ್ನ ಮಗ.. ಅವ ಬೆಳಿಗ್ಗೆ ನದಿ ಕಡೆಗೆ ಅವನ ಸ್ನೇಹಿತರ ಜೊತೆ ಹೋದಾಗ ನೀವಿಬ್ಬರು ಅಲ್ಲಿ ಬಿದ್ದಿದ್ದನ್ನು ನೋಡಿ ಕರೆದುಕೊಂಡು ಬಂದು.. ಹಳ್ಳಿಯಲ್ಲಿನ ಆಸ್ಪತ್ರೆಯಲ್ಲಿ ಡಾಕ್ಟ್ರು ಹತ್ರ ಮದ್ದು ಕೊಡಿಸಿ ಈ ಮನೆಗೆ ಕರೆದುಕೊಂಡು ಬಂದ.. ನೀವು ಇವತ್ತು ಎಚ್ಚರವಾಗಿದೀರಿ... "

"ಆಹ್.. ಇವತ್ತು ಎಚ್ಚರವಾಗಿದ್ದೀರಿ ಅಂದ್ರೆ ಏನು ಅಜ್ಜಾ.. ಎಷ್ಟು ದಿನ ಆಯಿತು"

ಅಜ್ಜ ಬೀದಿಯಿಂದ ಇನ್ನೊಂದು ಧಮ್ ಎಳೆದು.. ಕೆಮ್ಮುತ್ತಲೇ "ನೀವು ನಮಗೆ ಸಿಕ್ಕಿ ಹದಿನೈದು ದಿನವಾಯಿತು.. ಇಂದು ಹುಣ್ಣಿಮೆ ದಿನ ಅದಕ್ಕೆ ಅಂಗಳದಲ್ಲಿ ಬಣ್ಣ ಬಣ್ಣದ ರಂಗೋಲಿ, ಮನೆ ಬಾಗಿಲಿಗೆ ಮಾವಿನ ತೋರಣ ಎಲ್ಲಾ ಹಾಕಿರೋದು"

ಇಬ್ಬರಿಗೂ ಮೂರ್ಛೆ ಹೋದ ಅನುಭವ.. "ಅಜ್ಜಾ ಹದಿನೈದು ದಿನವಾಯಿತೇ.. .ಯಪ್ಪಾ.. "

ಅಜ್ಜ " ಸರಿ ಸರಿ.. ಮೊದಲು ತಿಂಡಿ ತಿನ್ನಿ.. ಮಗ ಬರ್ತಾನೆ.. ಆಮ್ಯಾಕೆ ನಿಮ್ಮ ಕಥೆ ಹೇಳುವಿರಂತೆ.. "

ಅಜ್ಜಾ ಕೆಮ್ಮುತ್ತಾ.. ಕೋಲೂರಿಕೊಂಡು ಮನೆಯೊಳಗೇ ಹೋಯಿತು..

ಇಬ್ಬರೂ ಮುಖ ಮುಖ ನೋಡಿಕೊಂಡರು.. ಇಬ್ಬರ ಹಣೆಯಲ್ಲಿ ವಯಸ್ಸಿಗೆ ಬಂದ ಸುಕ್ಕುಗಳಿಗಿಂತ ಹೆದರಿಕೆ, ಗಾಬರಿ ಇವುಗಳಿಂದ ಮೂಡಿದ ಗೆರೆಗಳು ಹೆಚ್ಚಾಗಿದ್ದವು.

ತಿಂಡಿ ತಿಂದು.. ಸ್ವಲ್ಪ ಸುಧಾರಿಸಿಕೊಂಡ ಮೇಲೆ.. ಹಳ್ಳಿಯಲ್ಲಿನ ಆ ಮನೆಯಲ್ಲಿ ಓದುತ್ತಿದ್ದ ಒಬ್ಬ ಹುಡುಗನ ಬಳಿ ಒಂದಷ್ಟು ಬಿಳಿ ಹಾಳೆಗಳನ್ನು  ಪಡೆದುಕೊಂಡು ಅಂಗಳಕ್ಕೆ ಬಂದು.. ಬರೆಯಲು ಶುರುಮಾಡಿದ ತಮ್ಮ ಅನುಭವಗಳನ್ನು ಬ್ಲಾಗ್ ಮತ್ತು ಪತ್ರಿಕೆಗಳಿಗೆ ಕಳಿಸಲು.

ಸೂರ್ಯ ನೆತ್ತಿಗೆ ಬಂದು ಆಟವಾಟ ತೊಡಗಿ.. ಪಡುವಣಕ್ಕೆ ಜಾರಲು ಶುರುಮಾಡಿದ್ದ.. .

ಹೊಲದ ಕೆಲಸ ಮುಗಿಸಿ.. ಊಟಕ್ಕೆ ಬಂದವ.. ಸೀದಾ ಇವರಿಬ್ಬರ ಹತ್ತಿರ ಬಂದು.. ಅಣ್ಣಾ ಅಣ್ಣಾ.. ನಿಮ್ಮ ಕಥೆ ಒಸಿ ಹೇಳಿ.. ನಿಮ್ಮನ್ನು ನೋಡಿ ಊರೆಲ್ಲಾ ಏನೇನೂ ಮಾತಾಡಿಕೊಳ್ಳುತ್ತಿದ್ದರು... ನನಗೆ ಕುತೂಹಲ ಹೆಚ್ಚಾಗಿದೆ.."

"ಯಜಮಾನರೇ.. ನಿಮ್ಮಿಂದ ತುಂಬಾ ಸಹಾಯವಾಯಿತು.. ನಮ್ಮ ಕಥೆಯನ್ನು ಹೇಳುತ್ತೇನೆ... ಆದರೆ ನಾವಿಬ್ಬರು ಬಿದ್ದಿದ್ದ ಜಾಗವನ್ನು ಒಮ್ಮೆ ನೋಡಬೇಕು.. ಅಲ್ಲಿಗೆ ಕರೆದುಕೊಂಡು ಹೋಗ್ತೀರಾ"

"ಅಯ್ಯೋ ಅದಕ್ಕೆ ಏನಣ್ಣ.. ಬನ್ನಿ ಊಟ ಮಾಡಿ ಹೋಗೋಣ.. ಬಂದ ಮೇಲೆ ಕಥೆಯನ್ನು ಹೇಳಿ.. ಊರಿನವರನ್ನು ಕರೆಯುತ್ತೇನೆ .. ಆಯ್ತಾ.. "

ಪುಷ್ಕಳವಾದ ಊಟವಾಯಿತು.. ದೇಹ ಹಗುರವಾಯಿತು..

ನಿಧಾನವಾಗಿ ತಾವು ಬಿದ್ದಿದ್ದ ಸ್ಥಳಕ್ಕೆ ಹಳ್ಳಿಗರ ಜೊತೆಯಲ್ಲಿ ಹೋದರು..

"ಅಣ್ಣಾ ಅಣ್ಣಾ" (ಇಬ್ಬರೂ ಹೆದರುವ ಅಗತ್ಯ ಇರಲಿಲ್ಲ.. ಏಕೆಂದರೆ ಆ ಧ್ವನಿಯಲ್ಲ ಅದು) ಇಲ್ಲೇ ನೀವು ಬಿದ್ದಿದ್ದು..

ಇಬ್ಬರೂ ಅಲ್ಲಿನ ಜಾಗವನ್ನು ನೋಡಿ.. ಹಾಗೆ ಒಂದಷ್ಟು ದೂರ ನದಿಯ ದಡದಲ್ಲಿ ಏನನ್ನೋ ಹುಡುಕುತ್ತಾ ನೆಡೆದಾಡಿದರು.. ಇಬ್ಬರಿಗೂ ಗೊತ್ತಿತ್ತು.. ಏನನ್ನು ಹುಡುಕುತ್ತಿದ್ದೇವೆ ಅಂಥಾ..

ಹಳ್ಳಿಯವನಿಗೆ.. ಕುತೂಹಲ.. "ಏನಣ್ಣ ಹುಡುಕುತಿದ್ದೀರಾ.. ಮೊದಲು ನಿಮ್ಮ ಕಥೆ ಹೇಳಬಾರದೇ.. "

ತಮ್ಮಿಬ್ಬರ ಜೀವ ಉಳಿಸಿದವನಿಗೆ ಹಾಗೂ ಹಳ್ಳಿಯವರಿಗೆ ಕೃತಜ್ಞತೆ ಹೇಳುತ್ತಾ.. ಅಲ್ಲೇ ಇದ್ದ ಚಿಕ್ಕ ಬಂಡೆಯ ಮೇಲೆ ಕೂತು.. ತಮ್ಮ ಅಮಾವಾಸ್ಯೆ ರಾತ್ರಿಯ ಕರಾಳ ಅನುಭವವನ್ನು ಒಂದು ಕ್ಷಣವನ್ನು ಬಿಡದೆ ಹೇಳಿದರು.

ಹಳ್ಳಿಗರು ಮಂತ್ರ ಮುಗ್ಧರಾಗಿ ಕೇಳುತ್ತಾ ಕುಳಿತರು..

ಇಬ್ಬರೂ ಒಮ್ಮೆಲೇ ಕೇಳಿದರು... "ಯಜಮಾನರೇ.. ಎಲ್ಲಾ ಸರಿ.. ನಾವು ಇಲ್ಲಿ ಬಿದ್ದಿದ್ದೆವು.. ನೀವು ನಮ್ಮನ್ನ ಕಾಪಾಡಿದಿರಿ.. ಆದರೆ ಒಂದು ಲಾರಿ ಕೂಡ ಇಲ್ಲೇ ಎಲ್ಲೋ ಇರಬೇಕಲ್ಲ... "

"ಇಲ್ಲ ಅಣ್ಣ ಯಾವುದು ಲಾರಿ ಗೀರಿ ಏನೂ ಇಲ್ಲ.. ಎಲ್ಲೂ ಪ್ರಪಾತಕ್ಕೆ ಬಿದ್ದಿರುತ್ತೆ.. ಇಲ್ಲ ಅಂದರೆ ರೆಂಬೆ ಕೊಂಬೆಗಳಿಗೆ ಸಿಕ್ಕಿ ಬಂಡೆಗಳಿಗೆ ಬಡಿದು ಪುಡಿಪುಡಿಯಾಗಿರುತ್ತೆ.. "

ಒಂದು ರೀತಿಯ ಮಿಶ್ರ ಅನುಭವ ಹೊತ್ತು..

ಆ ರಾತ್ರಿ ಹಳ್ಳಿಯಲ್ಲಿಯೇ ಕಳೆದು.. ಮರುದಿನ ಇಬ್ಬರೂ ತಮ್ಮ ಊರಿಗೆ ಹೊರಟರು..

ಹಳ್ಳಿಗರಿಗೆ ಧನ್ಯವಾದ ಹೇಳಿ.. ಅಜ್ಜನಿಗೆ ನಮಸ್ಕಾರ ಮಾಡಿ.. ಬೆಳಗಿನ ಉಪಹಾರ ಮುಗಿಸಿ ತಾವು ತಮ್ಮ ಊರಿಗೆ ಹೋಗುವುದಾಗಿ ಹೇಳಿದರು.. ಹಳ್ಳಿಯವ ಹೇಳಿದ "ಸರಿಯಾದ ನಿರ್ಧಾರ.. ಯಾಕೆಂದರೆ ಈ ಊರಿಗೇ ಬಸ್ಸು ಬರುವುದೇ ಅಪರೂಪ.. ತಿಂಗಳಿಗೆ ಒಂದೆರಡು ಬಾರಿ ಬರುತ್ತದೆ.. ಇಂದು ಬಂದರೆ ಬರಬೇಕು.. ನೀವು ಇಲ್ಲೇ ಹತ್ತಿರ ಇರುವ ನಿಲ್ದಾಣಕ್ಕೆ ಹೋಗಿ.. ಬಸ್ಸು ಬಂದರೆ ಸರಿ.. ಇಲ್ಲದೆ ಹೋದರೆ ಯಾವುದು ಸಿಗುತ್ತೋ ಅದರಲ್ಲಿ ಹತ್ತಿ.."..

ಇಬ್ಬರಿಗೂ ಒಮ್ಮೆಲೇ ನಗು ಭಯ ಎರಡೂ ಆಯಿತು.

ಆ ಊರಿನ ಬಸ್ ನಿಲ್ದಾಣಕ್ಕೆ ಬಂದಾಗ ಆಗಲೇ ಹತ್ತು ಘಂಟೆಯಾಗಿತ್ತು.. ದಿನಕರ ಆಗಲೇ ಬಿಸಿಲಿನ ಝಳದಿಂದ ಭುವಿಯನ್ನು ಕಾಯಿಸಲು ಶುರುಮಾಡಿದ್ದ..

ಬಸ್ ನಿಲ್ದಾಣ.. ಒಂದು ಪುರಾತನ ಕಾಲದ ಚಿತ್ರದ ಸೆಟ್ ತರಹ ಇತ್ತು.. ಬಣ್ಣ ಮಾಸಿದ ಗೋಡೆಗಳು.. ಗೋಡೆಗೆ ಹಚ್ಚಿದ ಚಿತ್ರದ ಪೋಸ್ಟರ್ ಅನ್ನು ಆ ಊರಿನ ಮಕ್ಕಳು ಸುಮಾರು ಹರಿದು ಹಾಕಿದ್ದು ಕಾಣುತ್ತಿತ್ತು..ಉಳಿದ ಕಾಗದಗಳನ್ನು ತಿನ್ನಲು ಕತ್ತೆಗಳು ಪೈಪೋಟಿ ನೆಡೆಸಿದಂತೆ ಕಾಣುತ್ತಿತ್ತು.. ಬೋಂಡಾ ಬಜ್ಜಿ ಕರಿದು ಕರಿದು ಆ ಹೊಗೆಗೆ ಮಸುಕಾದ ಬಜ್ಜಿ ಅಂಗಡಿ.. ಅಗಾಧವಾದ ಮರ.. ಅದರ ಕೆಳಗೆ ಕೋಳಿಗಳ ಅಂಗಡಿ.. ಕುರಿ ಮೇಕೆಗಳು ಕಟ್ಟಿದ್ದ ಜಾಗ, ಪುಟ್ಟ ಪೆಟ್ಟಿಗೆ ಅಂಗಡಿಯಲ್ಲಿ ನೇತಾಕಿದ್ದ ಬೋಟಿ, ಬಿಸ್ಕತ್ ಪ್ಯಾಕೆಟ್ ಗಳು, ಪಾನ್ ಪರಾಗ್ ಪ್ಯಾಕೆಟ್ ಸರಗಳು, ಗಾಜಿನ ಬಾಟಲಿಯಲ್ಲಿ ನಾಜೂಕಾಗಿ ಜೋಡಿಸಿದ್ದ ಮೈಸೂರು ಪಾಕು, ಕೊಬ್ರಿಮಿಠಾಯಿ, ಕೋಡುಬಳೆ, ಚಕ್ಕಲಿ, ಬಿಸ್ಕತ್, ಪಕ್ಕದಲ್ಲಿಯೇ ಒಂದು ಮರಕ್ಕೆ ಮೊಳೆ ಹೊಡೆದು, ಹಗ್ಗ ಸಿಕ್ಕಿಸಿ ಅದರ ಬಾಲಕ್ಕೆ ಒಂದು ಕಡ್ಡಿ ಪೆಟ್ಟಿಗೆಯನ್ನು ಸಿಕ್ಕಿಸಿದ್ದರು.. ಬೀಡಿ ಹಚ್ಚಿಕೊಳ್ಳಲಿಕ್ಕೆ!!!!

ಮನಸ್ಸು ಹಗುರಾಗಿತ್ತು.. ಒಂದು ಭಯಾನಕ ಜಗತ್ತಿನಿಂದ ಹೊರ ಬಂದ ಸಂತೋಷ.. ಎಲ್ಲವೂ ಮನಸ್ಸನ್ನು ಮುದಗೊಳಿಸಿತ್ತು..

"ಪೇಮ್ ಪೇಮ್." ಸದ್ದಿಗೆ ಮತ್ತೆ ಇಬ್ಬರ ಮನಸ್ಸು ಮರಳಿತ್ತು.

ಬಸ್ ಹತ್ತಿದರು.. ಕಿಟಕಿ ತೆಗೆದುಕೊಂಡು.. ಬರುವ ಗಾಳಿಗೆ ಮೊಗವೊಡ್ಡಿ ಕೂತರು.. ಕಂಡಕ್ಟರ್ ಚೀಟಿ ಕೊಟ್ಟ..  ಬಸ್ ನಿಧಾನವಾಗಿ ಘಟ್ಟದ ಏರು ಹಾದಿಯಲ್ಲಿ ಚಲಿಸಲು ಶುರುಮಾಡಿತು.. . ಇಬ್ಬರೂ ಹಾಗೆ ತೂಕಡಿಸಲು ಶುರುಮಾಡಿದರು..

"ಕಿರ್ರ್ ಕಿರ್ರ್.. " ಸದ್ದು ಮಾಡುತ್ತಾ.. ಬಸ್ ನಿಂತಿತು.. ಕಣ್ಣು ಬಿಟ್ಟರು..

ಬಸ್ಸಿನಲ್ಲಿದ್ದ ಜನವೆಲ್ಲ ಗುಜು ಗುಜು ಮಾತಾಡುತ್ತಾ ಏನಾಯಿತು ಎಂದು.. ಕುತ್ತಿಗೆಯನ್ನು ಕೋಳಿಯ ತರಹ ಆದಷ್ಟು ದೂರಕ್ಕೆ ಚಾಚಿದರು.. ಏನೂ ಕಾಣಲಿಲ್ಲ..

ಎಲ್ಲರೂ ಬಸ್ಸಿಂದ ಇಳಿದರು.. ಏನೋ ಇದೆ ಎಂದು ಎಲ್ಲರೂ ಸೇತುವೆಯ ಹತ್ತಿರ ಓಡಿದರು.. ಆಗಲೇ ಅಲ್ಲಿ ಬೇಕಾದಷ್ಟು ಜನರು ಜಮಾಯಿಸಿದ್ದರು..

ಇಬ್ಬರು.. ಸೇತುವೆಯ ಬಳಿ ಹೋಗಿ ನೋಡಿದರು.. ಅಲ್ಲಿನ ದೃಶ್ಯವನ್ನು ಕಂಡ ಮನಸ್ಸು ತರಗುಟ್ಟಲು ಶುರುಮಾಡಿತು..ಆ ಕರಾಳ ರಾತ್ರಿಯ ಕತ್ತಲಿನಲ್ಲಿ ಅರೆ ಬರೇ ಕಂಡಿದ್ದು .. !

ತಮ್ಮನ್ನು ಕಾಡಿನಲ್ಲಿ ಆ ತಿರುವಿನಿಂದ ಹೊತ್ತು ತಂದಿದ್ದ ಲಾರಿ ಅಲ್ಲಿ ಅನಾಥವಾಗಿ ಪುಡಿ ಪುಡಿಯಾಗಿ ಬಿದ್ದಿತ್ತು..!

ಹತ್ತಿರದಲ್ಲಿಯೇ ಒಂದು ಗೋಣಿಚೀಲವನ್ನು ತನ್ನ ತಲೆಯ ಮೇಲೆ ಹಾಕಿಕೊಂಡು ವ್ಯಕ್ತಿ ಇವರಿಬ್ಬರನ್ನು ವಿಚಿತ್ರವಾಗಿ ನೋಡುತ್ತಾ ಹಲ್ಲು ಕಿರಿದು ದಾಟಿ ಹೋದ..
ಕೃಪೆ - ಗೂಗಲೇಶ್ವರ 

ಆ ವ್ಯಕ್ತಿಯನ್ನು ನೋಡುತ್ತಾ ಆ ಸೇತುವೆಯ ಮೇಲೆ ನಿಂತು ಒಮ್ಮೆ ಪುಡಿಪುಡಿಯಾದ ಲಾರಿಯನ್ನು ನೋಡಿದರು ತಿರುಗಿ ಆ ಆ ವ್ಯಕ್ತಿಯನ್ನು ನೋಡಿದರು..

ಆ ವ್ಯಕ್ತಿ ಹಾಗೆ ಗೋಣಿಚೀಲವನ್ನು ತಲೆಯಿಂದ ತುಸು ತೆಗೆದು ಇವರಿಬ್ಬರ ಕಡೆಗೆ ತಿರುಗಿ ನೋಡಿ ಹಲ್ಲು ಬಿಟ್ಟಿತು....

ಪರಿಚಿತವಾದ ಹಲ್ಲು.. ವಸಡು..

ಆ ವ್ಯಕ್ತಿ ತಮ್ಮನ್ನು ಕರೆದ ಅನುಭವ  "ಅಣ್ಣಾ ಅಣ್ಣಾ ಅಣ್ಣಾ ಅಣ್ಣಾ"

Tuesday, October 11, 2016

ಕಾಡುವ - ೨

ಮೊದಲ ಭಾಗ ಇಲ್ಲಿದೆ
ಕಾಡುವ - ೧

ಇಬ್ಬರಿಗೂ ಬೆನ್ನಿನಲ್ಲಿ ಛಳಕ್ ಎಂದು ಚಳಿ ಮೂಡಿತು.. ಯಾಕೋ ಇಬ್ಬರೂ ತಿರುಗಿ ನೋಡಿದರು.. ಆ ಮೂರನೇ ವ್ಯಕ್ತಿ.. ಅಚಾನಕ್ ದೊಡ್ಡದಾಗಿ ಬೆಳೆದೆ ಬಿಟ್ಟಾ.. ಜೋರಾಗಿ ಗಹಗಹಿಸಿ ನಕ್ಕ..

ಇಬ್ಬರು ಮೂರ್ಛೆ ಬಿದ್ದರು.. ಫಳ್ ಫಳ್ ಮಿಂಚು ಬಂದಂತೆ ಭಾಸವಾಯಿತು.. ತುಂತುರು ಮಳೆ ನೀರು ಮುಖದ ಮೇಲೆ ಬಿದ್ದಿತು.. ತಿರುಗಿ ನೋಡದೆ.. ಓಡಲು ಶುರು ಮಾಡಿದರು.. ಅನತಿ ದೂರದಲ್ಲಿಯೇ.. ಯಾರೋ ಕರೆದ ಹಾಗೆ ಆಯಿತು..

"ಅಣ್ಣ ಅಣ್ಣಾ ಅಣ್ಣಾ ಅಣ್ಣಾ ...... !"

ಹಿಂದೆ ತಿರುಗಿ ನೋಡದೆ ಓಡುತ್ತಾ ಇದ್ದ ಇಬ್ಬರಲ್ಲಿ ಕಥೆ ಹೇಳಿ ಸರ್  ಎಂದು ಪೀಡಿಸುತ್ತಿದ್ದವ
"ಸರ್.. ಅಣ್ಣ ಅಂತ ಕರೆಯುತ್ತಿದ್ದಾರೆ, ಒಮ್ಮೆ ನೋಡೋಣವೇ.. "

"ಸರ್ ನೀವ್ ಸುಮ್ಮನಿರಿ ಸರ್.. ಮೊದಲೇ ನನಗೆ ಹೃದಯ ಬಾಯಿಗೆ ಬಂದಿದೆ.. ಬೆಳಿಗ್ಗೆ ಮನೆಯಿಂದ ಹೊರಡುವಾಗ ಬಿಪಿ ಮಾತ್ರೆ ತಗೋಳೋದೆ ಮರೆತುಬಿಟ್ಟಿದ್ದೇನೆ.. ಸ್ವಲ್ಪ ಹೆಚ್ಚು ಕಮ್ಮಿಯಾದರೂ.. ನಾನೇ ಅಣ್ಣ ಅಣ್ಣಾ ಎಂದು ಕರೆಯಲು ಶುರುಮಾಡಬೇಕಾಗುತ್ತದೆ.. ತೆಪ್ಪಗೆ ಓಡುವುದ ನೋಡಿ"

ಏದುಸಿರು ಬಿಡುತ್ತಲೇ ಮಧ್ಯೆ ಮಧ್ಯೆ ಮಾತು ಅಡ್ಡ ಅಡ್ಡ ಸೀಳಾಗುತ್ತಲೇ ಇತ್ತು.. . ಬಾಯಲ್ಲಿ ನೀರಿನ ಪಸೆ ಸಂಪೂರ್ಣ ಆರಿದ್ದರೂ.. ಇದ್ದ ಬದ್ದ ತುಸು ಧೈರ್ಯದಿಂದ ಈ ಮಾತನ್ನು ಆಡಿದ್ದರು.

ಪೇಮ್ ಫೇಮ್... ಎನ್ನುತ್ತಾ ಬಾರಿ ಹಾರ್ನ್ ಮಾಡುತ್ತಾ.. ಹಿಂದಿನಿಂದ ಒಂದು ಲಾರಿ ಬರುವ ಸದ್ದಾಯಿತು..  ಅರೆ ಇಸ್ಕಿ ಮೊದಲು ಕೈ ಮಾಡೋಣ ಅಂತ ಇಬ್ಬರೂ ಕೈ ಬೀಸುತ್ತಲೇ ಓಡುತ್ತಿದ್ದರು..

ಹಠಾತ್ ಲಾರಿ ನಿಂತಿತು..

"ಅಣ್ಣಾ ಅಣ್ಣಾ ಬನ್ನಿ ಅಣ್ಣಾ" ಆ ಧ್ವನಿ ಬಂದತ್ತ ತಿರುಗಿದರು.. . ಲಾರಿಯಲ್ಲಿ ಕೂತು ಒಂದು ವ್ಯಕ್ತಿ ಕರೆಯುತ್ತಿದೆ..
ಆ ಧ್ವನಿ ಪರಿಚಿತ ಅನಿಸಿತು ಆ ಭಯದಲ್ಲಿಯೂ..

"ಹಾಗಾದರೆ.. ನಮ್ಮನ್ನು ಅಣ್ಣ ಅಣ್ಣ ಅಂತ ಕರೆದಿದ್ದು.. ಇವರೇನೇ.. ?????" ಎದೆ ಜೋರಾಗಿ ರಾಜ್-ಕೋಟಿ ಅವರ ಡ್ರಮ್ ಬೀಟ್ಸ್ ತರಹ ನಗಾರಿಯಾಗಿತ್ತು, ಆದರೂ ಸಾವರಿಸಿಕೊಂಡು ಆ ಪ್ರಶ್ನೆ ಕೇಳಿದರು.

"ನಾ ಇಂದೇ ಕಾಡ್ನಾಗೆ ನೆಡೆದು ಬಂದಿದ್ದು.. ಲಾರಿ ಅಣ್ಣ ನನಗೆ ಡ್ರಾಪ್ ಕೊಡ್ತೀನಿ ಅಂದಾ.. ನಾ ಸುಮಾರು ೧೦೦ ಕಿಮಿ ಇಂದ ಬರ್ತಾ ಇದ್ದೀನಿ.. ನೀವು ಕತ್ಲಾಗೆ ಯಾರನ್ನ ನೋಡಿದ್ರೋ ಕಾಣೆ.. ಲಾರಿ ಅಣ್ಣ ಹೇಳ್ತಾ ಇದ್ದಾ.. ಈ ಘಟ್ಟದ ಕಾಡಿನಲ್ಲಿ ಏನೇನೂ ಇರ್ತಾವಂತೆ.. ಏನೋ ನೋಡಿರಬೇಕು ನೀವೂ "

"ಇಲ್ಲಪ್ಪ ಆ ಹಿಂದಿನ ತಿರುವಿನಲ್ಲಿ ಒಂದು ವ್ಯಕ್ತಿ ನಿನ್ನ ಧ್ವನಿಯಲ್ಲಿಯೇ ಮಾತಾಡುತ್ತಿತ್ತು.. ಅದಕ್ಕೆ ಕೇಳಿದೆ.. . ನನಗ್ಯಾಕೋ ತುಂಬಾ ಹೆದರಿಕೆ ಆಗ್ತಿದೆ.......  "

ಅವನ ಮಾತನ್ನು ತುಂಡರಿಸುತ್ತಾ ತುಸು ಕೋಪದಿಂದ
"ಸರ್.. ಮೊದಲೇ ನಾ ಗಾಬರಿ ಆಗಿ ಸಾಯ್ತಾ ಇದ್ದೀನಿ.. ನೀವು ಉಭಯ ಕುಶಲೋಪರಿ ಸಾಂಪ್ರತ ಕೇಳುತ್ತಿದ್ದೀರಾ.. ಮೊದಲು ಲಾರಿ ಹತ್ತಿ ಸರ್.. ಹೆದರಿಕೆಯಿಂದ ನನ್ನ ಬಟ್ಟೆ ಎಲ್ಲಾ ಒದ್ದೆ ಮಯವಾಗಿದೆ.. "

ಕಥೆ ಹೇಳುತ್ತಿದ್ದವ "ಸರಿ ಸರಿ.. ಎಲ್ಲೊ ಹೆದರಿಕೆಯಲ್ಲಿಯೇ ಹುಟ್ಟಿದ ಪ್ರಾಣಿ..  ಸರಿ ಹತ್ತು ಹತ್ತು.. "

ಇಬ್ಬರೂ ದೇವರಿಗೆ ಒಂದು ಸಲಾಂ ಹೇಳಿ.. ಲಾರಿ ಹತ್ತಿಯೇ ಬಿಟ್ಟರು.

ಲಾರಿಯ ಬ್ಯಾಟರಿ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ.. ಅವಾಗವಾಗ ಲಾರಿಯ ದೀಪ ಹತ್ತಿಕೊಳ್ಳುತ್ತಿತ್ತು, ಆರುತ್ತಿತ್ತು, ಹಾರ್ನ್ ಯಾವಾಗ ಬೇಡವೋ ಅವಾಗ ಕೆಲಸ ಮಾಡುತ್ತಿತ್ತು.. ಒಟ್ಟಿನಲ್ಲಿ ಹಾರ್ನ್ ಬಿಟ್ಟು ಮಿಕ್ಕೆಲ್ಲ ಲಾರಿ ಭಾಗಗಳು ಸದ್ದು ಮಾಡುತ್ತಿದ್ದವು..
ಚಿತ್ರ ಕೃಪೆ - ಗೂಗಲೇಶ್ವರ 

ಹೆದರಿ ಸತ್ತಿದ್ದ ಇಬ್ಬರಿಗೂ, ಚೂರು ಕಣ್ಣು ಹತ್ತಿತ್ತು... ಘಟ್ಟದ ತಿರುವುಗಳು ಜೋಲಿ ಹೊಡೆದಂತಾಗಿ ನಿದ್ದೆ ಎಳೆಯುತ್ತಿತ್ತು.. ಬೆಳಗಿನ ಜಾವ ಸುಮಾರು ೩-೪ ಘಂಟೆ ಇರಬಹುದು.. ಕತ್ತಲು ಇನ್ನೂ ದಟ್ಟವಾಗಿಯೇ ಇತ್ತು.. ಮಳೆ, ಕತ್ತಲು, ದಟ್ಟವಾದ ಕಾಡು, ಆಗಸವೇ ಕಾಣುತ್ತಿರಲಿಲ್ಲ..
ಚಿತ್ರ ಕೃಪೆ - ಗೂಗಲೇಶ್ವರ 

"ನೇನ್ ರಾ ನಾಗವಲ್ಲಿ"

ಎದೆ ಧಸಕ್ ಎಂದಿತು.. ಹಠಾತ್ ಇಬ್ಬರಿಗೂ ಎಚ್ಚರ.. ಲಾರಿಯಲ್ಲಿದ್ದ ಟಿವಿ ಯಲ್ಲಿ ಆಪ್ತಮಿತ್ರ ಚಿತ್ರದ ದೃಶ್ಯ....

ಎದೆ ಒಮ್ಮೆ ಝಲ್ ಎಂದಿತು..

"ಯಪ್ಪಾ.. ಈ ಹೊತ್ತಿನಲ್ಲಿ ಈ ಚಿತ್ರವೇ"

ಆ ವ್ಯಕ್ತಿ.. ಕಿಸ್ ಅಂತ ತನ್ನ ಹಲ್ಲನ್ನು ತೋರಿಸಿತು.. ಕರ್ರಗೆ ಇದ್ದರೂ.. ತುಸು ಬೆಳ್ಳಗಿನ ಹಲ್ಲುಗಳು  ಆ ಕಾರ್ಗತ್ತಲೆಯಲ್ಲಿಯೂ ಲಕ ಲಕ ಹೊಳೆಯುತ್ತಿತ್ತು..

ಲಾರಿ ಚಾಲಕ ಹತ್ತಿಸಿದ್ದ ಬೀಡಿಯ ದಟ್ಟ ಹೊಗೆ ಮೂಗಿಗೆ ಅಡರುತ್ತಿತ್ತು.. ಮಳೆ, ಮಣ್ಣಿನ ವಾಸನೆ, ಕೆಸರು, ನೆಂದು ನೆಂದು ಕೊಳೆಯುತ್ತಿದ್ದ ಮರಗಳ ತುಂಡು, ಕೊಳೆತ ಎಲೆಗಳು.. ಪಕ್ಕದವ ಅಗಿಯುತಿದ್ದ ಪಾನ್ ಪರಾಗ್.. ಇದಕ್ಕೆ ಜೊತೆಯಲ್ಲಿ ತಿರುಗಿ ತಿರುಗಿ ಸುತ್ತುತ್ತಿದ್ದ ಘಟ್ಟದ ರಸ್ತೆಗಳು, ಎಲ್ಲವೂ ಸೇರಿ ಹೊಟ್ಟೆಯೊಳಗೆ ಮಿಕ್ಸಿ ಆನ್ ಮಾಡಿದ್ದವು..

ಒಂದು ತುಸು ನಿದ್ದೆ ಆಗಿತ್ತು, ಹೊಟ್ಟೆಯೊಳಗೆ ಸಾಗರ ಮಂಥನವಾಗುತ್ತಿತ್ತು, ಅದನ್ನು ಹೇಗಾದರೂ ತಡೆಯಬೇಕು ಎಂದು.. ಮತ್ತೆ ಮಾತಿಗಿಳಿದ ಕಥೆ ಹೇಳುತ್ತಿದ್ದವ "ಆ ತಿರುವಿನಲ್ಲಿ ಸಿಕ್ಕಿದ ವ್ಯಕ್ತಿ ಯಾಕೆ ಅಲ್ಲಿ ನಿಂತಿದ್ದ ಎಂದು ಹೇಳಿದ.. ಆಶ್ಚರ್ಯ ಅಂದರೆ.. ಆ ವ್ಯಕ್ತಿ ಹೇಳಿದ ರೀತಿಯಲ್ಲಿಯೇ ನನಗೆ ಕಳೆದ ತಿಂಗಳು ಇದೆ ರೀತಿ ಅದೇ ಹಿಂದಿನ ತಿರುವಿನಲ್ಲಿ ಅದೇ ಘಟನೆ ನೆಡೆದಿತ್ತು.. ಏನೋ ಎಂತೋ ನನಗೆ ಗೊತ್ತಾಗ್ತಾ ಇಲ್ಲ.. ಒಂದು ಕಡೆ ಹೆದರಿಕೆ, ಇನ್ನೊಂದು ಕಡೆ ಆಶ್ಚರ್ಯ, ಕುತೂಹಲ.... ಏನಪ್ಪಾ ಲಾರಿ ಅಣ್ಣ.... ನಿನಗೇನಾದರೂ ಗೊತ್ತೇ ಇದರ ಬಗ್ಗೆ.. "

ಲಾರಿ ಚಾಲಕ ಸಾವಧಾನವಾಗಿ ಇವರಿಬ್ಬರ ಸಂಭಾಷಣೆ ಕೇಳಿಸಿಕೊಳ್ಳುತ್ತಿದ್ದ.. ಅವನ ತುಟಿ ಕಾರ್ಖಾನೆಯ ಚಿಮಣಿಯಂತೆ ಹೊಗೆಯನ್ನು ಬಿಡುತ್ತಲೇ ಇತ್ತು..

ನಿಧಾನವಾಗಿ ಇವರ ಕಡೆ ತಿರುಗಿ "ನನಗೆ ಈ ರೀತಿಯ ಕಥೆಗಳು, ಘಟನೆಗಳು ದಿನ ನಿತ್ಯವೂ ಕಾಣುತ್ತಲೇ ಇರುತ್ತದೆ ಸಾರ್" ಎಂದು ಕೆಟ್ಟದಾಗಿ ಹಲ್ಲು ಬಿಟ್ಟ.. ಫಳ್ ಮಿಂಚು..ಗುಡುಗು..  ಆ ದಟ್ಟಕಾಡಿನಲ್ಲಿ ಕಾರ್ಗತ್ತಲೆ ತುಂಬಿದ್ದರೂ, ಯಾವಾಗಲೊಮ್ಮೆ ಎದುರು ಬರುವ ವಾಹನದ ದೀಪಗಳಿಂದ ಲಾರಿಯಲ್ಲಿದ್ದ ವ್ಯಕ್ತಿಗಳ ಮುಖ ಅಸ್ಪಷ್ಟವಾಗಿ ಕಾಣುತ್ತಿತ್ತು..

ಲಾರಿ ಚಾಲಕ ನಿಧಾನವಾಗಿ ತಿರುಗಿದಾಗ.. ಅಲ್ಲಿದ್ದ ಇಬ್ಬರಿಗೂ ಮುಖದಲ್ಲಿ ಬೆವರಿನ ಜಲಪಾತ ಶುರುವಾಯಿತು.. ಕಾರಣ ಚಾಲಕನ ಒಂದು ಬದಿಯ ಮುಖವೇ ಇರಲಿಲ್ಲ.. ಬರಿ ವಸಡು, ಹಲ್ಲು ಕಾಣುತ್ತಿದ್ದವು.. ಕಣ್ಣುಗಳ ಗುಡ್ಡೆ ಮಾತ್ರ ಇದ್ದವು..

"ಅಯ್ಯೋ, ಯಪ್ಪಾ, ನಾ  ಸತ್ತೇ.. " ಇಬ್ಬರೂ ಕೂಗಲು ಶುರುಮಾಡಿದರು.. ಲಾರಿ ಓಲಾಡತೊಡಗಿತು..

ಇವರ ಭುಜದ ಮೇಲೆ ದೊಪ್ಪೆಂದು ಕೈ ಬಿದ್ದಿತು.. ಮೊದಲೇ ಹೆದರಿ ಸತ್ತಿದ್ದ ಇಬ್ಬರು, ತಿರುಗಿ ನೋಡಿದರು..

ದೊಡ್ಡದಾದ ಆಕೃತಿ ಹಲ್ಲು ಬಿಡುತ್ತಾ

"ಅಣ್ಣಾ ಅಣ್ಣಾ"