Friday, May 31, 2019

ಸಾರ್ಥಕತೆ ಎನ್ನುವುದು ಹೇಗೆ .....!

ಸಾರ್ಥಕತೆ ಎನ್ನುವುದು ಹೇಗೆ ...ಅದರ ವಿಸ್ತಾರವೇನು.. ಅದರ  ಅಗತ್ಯತೆ ಏನು.. ಇದಕ್ಕೆ ಉತ್ತರವನ್ನು ಕಂಡುಹಿಡಿದವರಿಲ್ಲ.. ಒಬ್ಬರದು ಒಂದೊಂದು ವಿವರಣೆ... ಎಲ್ಲವೂ ಕಣ್ಣು ಕಾಣದವರು ಆನೆಯನ್ನು ಮುಟ್ಟಿ ನೋಡಿ ವಿವರಿಸಿದ ಹಾಗೆ.. ಒಂದೇ ಆದರೂ ಅನುಭವ ವಿಭಿನ್ನ ..

ತುಂಬು ಸಂಸಾರವನ್ನು ಎತ್ತಿ ಹಿಡಿದು... ಹತ್ತು ಮಕ್ಕಳಿಗೆ ಭವಿಷ್ಯ ನೀಡಿದ ಒಂದು ಹೆಂಗಸಿನ ಸಾರ್ಥಕ ಬದುಕಿನ ಒಂದು  ಕ್ಷಣಗಳ ಬಗ್ಗೆ ನಾ ಕಣ್ಣಾರೆ ಕಂಡ ಬಗ್ಗೆ ಒಂದು ಪುಟ್ಟ ಲೇಖನ... ಉತ್ಪ್ರೇಕ್ಷೆಯಿಲ್ಲ... ಅತೀಂದ್ರಿಯ ಶಕ್ತಿಯೂ ಅಲ್ಲ.. ಆದರೆ ಅದಕ್ಕಿಂತ ಮೇಲೆ ಇರುವ ಶಕ್ತಿ ನೆಡೆಸಿದ ಒಂದು ಘಟನೆ.. 

ನನ್ನ ಮನದನ್ನೆ ಸವಿತಾಳ ಅಜ್ಜಿ .. ಸಹಸ್ರಚಂದ್ರ ದರ್ಶನದ ಸಂಭ್ರಮ.. ಹತ್ತು ಮಕ್ಕಳು.. ಸೊಸೆಯಂದಿರು.. ಮೊಮ್ಮಕ್ಕಳು .. ಮರಿ ಮೊಮ್ಮಕ್ಕಳು.. ಬಂಧು ಮಿತ್ರರು.. ಊರಿನ ಹಿರಿ ಕಿರಿಯರು ನೆರೆದಿದ್ದ ಸಂಭ್ರಮ.. 

ಈ ಸಹಸ್ರ ಚಂದ್ರ ದರ್ಶನ ಅಂದರೆ ನಾ ಒಂದು ಕಡೆ ಓದಿದ್ದು. ಜೀವತಾವಧಿ... ಎಂಭತ್ತು ವಸಂತಗಳನ್ನು ಕಂಡಿದ್ದರೇ.. ಸಾವಿರ ಚಂದ್ರ ಅಂದರೆ ಸಾವಿರ ಹುಣ್ಣಿಮೆಯನ್ನು ಕಂಡಿದ್ದಾರೆ ಎಂದು ಶಾಸ್ತ್ರ ಹೇಳುತ್ತದೆ... ಆ ಅವಧಿಯಲ್ಲಿ ಮೂರು ತಲೆಮಾರುಗಳಿಗೆ ಬುನಾದಿ ಹಾಕಿರುತ್ತಾರೆ ಎನ್ನುವುದು ನಂಬಿಕೆ.. ಮಕ್ಕಳು.. ಮೊಮ್ಮಕ್ಕಳು.. ಮರಿ ಮೊಮ್ಮಕ್ಕಳು ಹೀಗೆ ..

ನಾ ಈ ರೀತಿಯ ಆಚರಣೆಯನ್ನು  ಮೂರು ಬಾರಿ ಕಂಡಿದ್ದೇನೆ.. ಒಂದು  ಅಮ್ಮನ ಸೋದರತ್ತೆಯ ಜೋಡಿಯದು.. ಎರಡನೆಯದು ನಾ ಸ್ವಾಮೀಜಿ ಎಂದು ಕರೆಯುವ ನನ್ನ ಮಡದಿಯ ಚಿಕ್ಕಪ್ಪನ ಅಪ್ಪ ಅವರ ಸಂಭ್ರಮ.. ಮೂರನೆಯದು ಸವಿತಾಳ ಅಜ್ಜಿ.. 

ಹಿರಿಕಿರಿಯರು ಕಿಕ್ಕಿರಿದು ಸೇರಿದ್ದರು.. ಅವರ ಮುಂದೆ ಈ ರೀತಿಯ ಸಂಭ್ರಮ ಒಂದು ಕಡೆಯಲ್ಲಿ ಸಂಕೋಚದ ಭಾವ ಮೂಡಿಸಿದರೆ..  ಇನ್ನೊಂದು ಬದಿಯಲ್ಲಿ ಸಾರ್ಥಕ ಬದುಕು ನೆಡೆಸುತ್ತಿರುವ ಅಜ್ಜಿಗೆ ತನ್ನ ಕಣ್ಣ ಮುಂದಿನ ಈ ವೈಭವದ ಸಂಭ್ರಮದ ಸಂತಸ.. 

ಎರಡೂ ಭಾವವನ್ನು ಅವರು ವ್ಯಕ್ತಪಡಿಸುತ್ತಿದ್ದ ರೀತಿಯನ್ನು ನನ್ನ ಕಣ್ಣುಗಳು ನನ್ನ ಮೂರನೇ ಕಣ್ಣಿನ ಮೂಲಕ  ಸೆರೆ ಹಿಡಿಯುತ್ತಿದ್ದವು.. ಅದನ್ನು ನೋಡೋದೇ ಒಂದು ಸಂತಸ ನನಗೆ... ಅವರ ಮುಖಭಾವ ಗಮನಿಸುತ್ತಲೇ ಇದ್ದೆ.. ಅವರ ಕೆಲವು ಕ್ಷಣದ ಮುಖ ಭಾವದಲ್ಲಿ ಏನೋ ಒಂದು ರೀತಿಯ ದುಗುಡ ಕಂಡು ಕಾಣದೆ ಇಣುಕುತಿತ್ತಾದರೂ.. ಸಂಭ್ರಮದ ಛಾಯೆ ಈ ದುಗುಡವನ್ನು ದೂರ ದೂರ ಸರಿಸುತ್ತಿತ್ತು.. 

ಮಂತ್ರೋಕ್ತ ಪೂಜೆ ಪುನಸ್ಕಾರಗಳು ಭರ್ಜರಿಯಾಗಿ ನೆಡೆದಿದ್ದವು.. ಮಂತ್ರೋಕ್ತ ಜಲ.. ಕಲಶದಲ್ಲಿ ಕಾಯುತ್ತಿತ್ತು.. ಇತ್ತೀಚೆಗಷ್ಟೇ ಕಾಶಿ ಯಾತ್ರೆ ಮಾಡಿದ್ದರಿಂದ ಗಂಗಸಮಾರಾಧನೆ ಕೂಡ ನೆಡೆದಿತ್ತು.. ಕಳೆದ ಐದು ವರ್ಷಗಳಲ್ಲಿ ಗಂಗಾನದಿಯನ್ನು ಗಂಗೆಯನ್ನಾಗಿ ಮಾಡಿದ ಕೀರ್ತಿ ಮೋದಿ ಸರ್ಕಾರಕ್ಕೆ ಸಲ್ಲಬೇಕು.. ಆ ಗಂಗಾಜಾಲವನ್ನು ಮಂತ್ರೋಕ್ತ ಸಹಿತ ಆಹ್ವಾನಿಸಿ ರುದ್ರ ಚಮಕಗಳೆಲ್ಲ ಮುಗಿದಿತ್ತು.. ಮಂತ್ರದಿಂದ ಸಿದ್ಧವಾಗಿದ್ದ ಜಲದಿಂದ ಸಹಸ್ರ ಚಂದ್ರ ದರ್ಶನದ ಹೀರೋಯಿನ್ ಅವರಿಗೆ ಜಲಾಭಿಷೇಕ.. (ಇದಕ್ಕೆ ಪರ್ಯಾಯ ಪದ ತಕ್ಷಣಕ್ಕೆ ಹೊಳೆಯುತ್ತಿಲ್ಲ ಹಾಗಾಗಿ ಜಲಾಭಿಷೇಕ ಎನ್ನುವ ಪದವನ್ನು ಉಪಯೋಗಿಸಿದ್ದೇನೆ)... ನೆಡೆಯುವ ಹೊತ್ತು..


ಮನೆಯ ಮಕ್ಕಳಾದಿಯಾಗಿ ಬಂಧು ವರ್ಗವೆಲ್ಲ ಸರತಿಯಲ್ಲಿ ಬಂದು ತಮ್ಮ ಗೌರವ ಸೂಚಿಸಿದ್ದರು... ಬಂದವರೆಲ್ಲ ಈ ಕಳಸದ ಜಲದಿಂದ ಅಭ್ಯಂಜನ ನೆಡೆದಿತ್ತು... ಆಗ ಅವರ ಮುಖಭಾವವನ್ನೇ ಗಮನಿಸುತ್ತಿದ್ದೆ.. ಸಂತಸ.. ದುಃಖ.. ಅಭಿಮಾನ.. ಉತ್ಸಾಹ.. ಎಲ್ಲವೂ ಕಾಣುತಿತ್ತು.. ಮುಖದ ಮೇಲೆ ಹರಿಯುತ್ತಿದ್ದ ಮಂತ್ರಜಲ ಧಾರೆ.. ಅವರ ಮುಖಭಾವವನ್ನು ಕಾಮನಬಿಲ್ಲಿನ ಕಾಂತಿಯಂತೆ  ಬದಲಿಸುತ್ತಲೇ ಇತ್ತು.. 

ನಂತರ ಹೊಸವಸ್ತ್ರವನ್ನು ಉಟ್ಟು.. ಮುಂದಿನ ಕಾರ್ಯಕ್ರಮಕ್ಕೆ ಅಣಿಯಾಗಿದ್ದರು.. ದೇವರಿಗೆ ಪೂಜೆ..ಮಂಗಳಾರತಿ.. ಹೀಗೆ ಕಾರ್ಯಗಳು ನೆಡೆದಿದ್ದವು.. ಅಜ್ಜಿಯ ಮುಖಭಾವದಲ್ಲಿ ಯಾರನ್ನೋ ನಿರೀಕ್ಷೆ ಮಾಡುತ್ತಿರುವ ನೋಟ.. ಸುತ್ತ ಮುತ್ತಲು ತಿರು ತಿರುಗಿ ನೋಡುತ್ತಲೇ ಇದ್ದರು.. ನನ್ನ ಕ್ಯಾಮೆರಾ ಕೂಡ ಕೇಳಿತು ..

"ಏನು ಶ್ರೀ ಅದು ಅಜ್ಜಿ ಯಾರನ್ನು ನಿರೀಕ್ಷೆ ಮಾಡುತ್ತಿದ್ದಾರೆ?".. 

"ಗೊತ್ತಿಲ್ಲ ನಿಕೋನ್ .. ನೋಡೋಣ ಕಾದು ನೋಡೋಣ" ಎಂದು ಹೇಳಿದೆ.. 


ಕೊಂಚ ಗದ್ದಲ.. ಕೊಂಚ ಗಲಿಬಿಲಿ.. ನೋಡಿದರೆ.. ಅಜ್ಜಿ ಮನೆಯ ಕಾಂಪೌಂಡ್ ಮೇಲೆ ಒಂದು ವಾನರ ಬಂದು ಕೂತಿತ್ತು.. ಅಲ್ಲಿದ್ದವರೊಬ್ಬರು ಮಾವಿನಹಣ್ಣು ಕೊಟ್ಟರು.. ಅಚ್ಚುಕಟ್ಟಾಗಿ ಸಿಪ್ಪೆ ಸುಲಿದು ತಿಂದುಹಾಕಿತು .. ಇನ್ನೊಂದು ಮಾವಿನ ಹಣ್ಣು ಅದಕ್ಕೂ ಅದೇ ಗತಿಯಾಯಿತು.. ಬಾಳೆ ಹಣ್ಣು ಕೊಟ್ಟರು.. ತಿಂದಿತು.. ಹಾಗೆ ಮತ್ತೆ ಅಜ್ಜಿಯ ಕಡೆ ಕ್ಯಾಮೆರಾ ತಿರುಗಿಸಿದೆ.. ಸ್ವಲ್ಪ ಹೊತ್ತಿನಲ್ಲಿಯೇ . ಅದೇ ವಾನರ.. ಹೋಮದ ಕುಂಡದ ಹತ್ತಿರ ಬಂದು ಅಲ್ಲಿದ್ದ ಪದಾರ್ಥವನ್ನು ತಿಂದಿತು.. ನಂತರ ಅಜ್ಜಿಯ ಕಾಲು ಬುಡದಲ್ಲಿ ಕೂತಿತು.. ಪಕ್ಕದಲ್ಲಿಯೇ ಕೂತಿದ್ದ ಅಜ್ಜಿಯ ಹಿರಿಯ ಸೊಸೆ ಮತ್ತು ಮಗ.. ಮೆಲ್ಲಗೆ ಅಲ್ಲಿದ ಹಣ್ಣು ಕೊಟ್ಟರು.. ಪುರೋಹಿತರು ನೈವೆದ್ಯ ಮಾಡಬೇಕು ಎಂದರು.. ಸೊಸೆ ಮತ್ತು ಮಗ ಅದಕ್ಕೆ ಸಿದ್ಧವಾಗಬೇಕೆಂದಿದ್ದಾಗ... ವಾನರ ಒಂದು ಲೋಟದಲ್ಲಿದ್ದ ಕಲೆಸಿದ ಮೊಸರನ್ನವನ್ನು ಅಚ್ಚುಕಟ್ಟಾಗಿ ನಾವು ಊಟ ಮಾಡುವಂತೆ ತಿಂದು ಮುಗಿಸಿತು.. ನಂತರ ಹಾಲು.. ಜೇನು ತುಪ್ಪ.. ಎಲ್ಲವನ್ನು ತಿಂದು ಮುಗಿಸಿತು.. ನಂತರ ಪಂಚ ಪಾತ್ರೆಯಲ್ಲಿದ್ದ ನೀರಿನಲ್ಲಿ ಕೈಯನ್ನು ಅದ್ದಿ.. ಕೊಡವಿಕೊಂಡು.. ಮೆಲ್ಲಗೆ ಜಾಗ ಖಾಲಿ ಮಾಡಿತು.. 






ಊರಿನವರ ಪ್ರಕಾರ .. ಮಂಗಗಳು ಬಂದಿದ್ದೆ ಅಥವಾ ಕಾಣಿಸಿಕೊಂಡಿದ್ದೆ ಬಲು ಅಪರೂಪವಂತೆ.. ಒಂದು ರೀತಿಯಲ್ಲಿ ಪವಾಡ ಎನಿಸಿತು.. ವಾನರ ತಿಂದು ಮುಗಿಸಿದ್ದನ್ನೆಲ್ಲ ಫೋಟೋ ತೆಗೆದೇಬಂದು .. ಸುಮಾರು ಹೊತ್ತಾದ ಮೇಲೆ.. ಯಾಕೋ ಅಜ್ಜಿಯ ಮುಖ ನೋಡಿದೆ ..ತಮ್ಮ ಆಶಯ ಈಡೇರಿದ ಭಾವ.. ಅವರು ಯಾರನ್ನು ನಿರೀಕ್ಷಿಸಿದ್ದರೋ ವಾನರ ರೂಪದಲ್ಲಿ ಬಂದು ದರ್ಶನ ನೀಡಿದರು ಎನ್ನುವ ತೃಪ್ತಿ ಭಾವ.. ಅವರ ಮೊಗದಲ್ಲಿತ್ತು.. 

ಆಗಸವನ್ನೊಮ್ಮೆ ನೋಡಿದೆ.. ಅಣ್ಣಾವ್ರ ನಾದಮಯ ಹಾಡಿನ ಒಂದು ಸಾಲು ಮನದಲ್ಲಿ ಹಾಡತೊಡಗಿತು .. 

"ಸುರರು ಬಂದು, ಹರಿಯ ಕಂಡು ಹರುಷದಿ ಭುವಿಯೆ ಸ್ವರ್ಗ ಭುವಿಯೆ ಸ್ವರ್ಗ ಎನುತಿರಲು ನಾದಮಯ ಈ ಲೋಕವೆಲ್ಲಾ ಕೊಳಲಿಂದ ಗೋವಿಂದ ಆನಂದ ತಂದಿರಲು ನಾದಮಯ ಈ ಲೋಕವೆಲ್ಲ ನಾದಮಯ" 

ಅಲ್ಲವೇ.. ತನಗೆ ಬೇಕಾದವರನ್ನು ವಾನರ ರೂಪದಲ್ಲಿ ದರ್ಶನ ಕೊಡಿಸಿದ ಆ ಮಹಾಮಹಿಮನ ಪವಾಡವನ್ನು ಕಂಡು ಅಜ್ಜಿಯು ಸಂತಸ ಪಟ್ಟ ಕ್ಷಣ ಒಂದು ಕಡೆಯಲ್ಲಾದರೆ.. ನಿರ್ಲಿಪ್ತ ಮನಸ್ಸಿನಿಂದ.. ಅಂದುಕೊಂಡ ಕಾರ್ಯ ಆಗಿಯೇ ಆಗುತ್ತದೆ ಎನ್ನುವ ಪವಾಡ ಸಾದೃಶ್ಯ ಕಂಡ ಸಂತಸ ನಮಗೆ 

ಒಂದು ಸಾರ್ಥಕತೆಯನ್ನು ಕಣ್ಣಾರೆ ಕಂಡ ತೃಪ್ತಿ ನಮಗೆ.. 

ಅದರ ಕೆಲವು ಚಿತ್ರಗಳು ನಿಮಗಾಗಿ.. !!!

Wednesday, May 8, 2019

ಕಣ್ಣೀರಲ್ಲ ಶ್ರೀ ಪನ್ನೀರು ಪನ್ನೀರು

ಮಳೆ ಬರುತ್ತದೆ.. ಬರಬಹುದು.. ಬಂದರೆ.. ಈ ರೇ ರೇ ರೇ ಗಳಲ್ಲಿ ದಿನವೂ ಆಫೀಸಿಗೆ ಹೋಗುವಾಗ ಛತ್ರಿ ತೆಗೆದುಕೊಂಡು ಹೋಗುವ ಅಭ್ಯಾಸ ಮಾಡಿಕೊಂಡೆ.. ಆ ದಿನದಿಂದ ಒಂದು ದಿನವೂ ಮಳೆಯ ಸುಳಿವಿಲ್ಲ.. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಛತ್ರಿ ಬ್ಯಾಗಿನೊಳಗೆ ಇರುತ್ತಿತ್ತು..

ನಿನ್ನೆ ಮಧ್ಯಾನ್ಹ ಸಿಹಿ ವಾರ್ತೆ ಕೇಳಿದ ಮೇಲೆ.. ಮನಸ್ಸು ಹಗುರಾಗಿತ್ತು.. ಅದೇ ಗುಂಗಿನಲ್ಲಿ ವಾಟ್ಸಾಪ್ ಸ್ಟೇಟಸ್ ಹಾಕಿದೆ..

"ಸವಿತಾ ನಗುತ್ತಿದ್ದಾಳೆ..
ತನ್ನ ಮಗಳು ೮೬% ನಲ್ಲಿ
ಜೀವನದ ಮೊದಲ ಘಟ್ಟ ದಾಟಿದ್ದಾಳೆ ಎಂದು"
#ಸವಿತಾರ್ಥಕತೆ!!!

ಮನಸ್ಸು ಇನ್ನೂ ಹಗುರಾಯಿತು.. ಸಂಜೆ ಆಫೀಸಿನಿಂದ ಹೊರಟೆ..

ಒಂದೆರಡು ಮಳೆ ಹನಿ ಬಿದ್ದವು..

"ಯಾಕೆ ಟೀ ಹನಿಗಳು" ಅಂದೇ..

"ಶ್ರೀ ನಿಮ್ಮ ಅಣ್ಣಾವ್ರ ಹಾಲುಜೇನು ಚಿತ್ರದ ಶೈಲಿಯಲ್ಲಿ "ಕಣ್ಣೀರಲ್ಲ ಶ್ರೀ ಪನ್ನೀರು ಪನ್ನೀರು"

 "ವಾಹ್ ಸೂಪರ್ ಟೀ.. ಎಂಥಹ ಮಾತು.. ಖುಷಿಯಾಯಿತೇ"

"ಹೌದು ಶ್ರೀ.. ನಾವು ಪಟ್ಟ ಶ್ರಮ ಒಂದು ಘಟ್ಟಕ್ಕೆ ಬಂದು ನಿಂತಿದೆ.. ಇಷ್ಟೆಲ್ಲಾ ಮಾನಸಿಕ ಒತ್ತಡದ ನಡುವೆಯೂ ನಮ್ಮ ಕಂದಮ್ಮ ಇಷ್ಟು ಚೆನ್ನಾಗಿ ಓದಿದ್ದಾಳೆ.. ಅದಕ್ಕಿಂತ ಇನ್ನೇನು ಬೇಕು.. ಅವಳಿಗೆ ಶುಭವಾಗುತ್ತೆ ಶ್ರೀ.. ನೀನು ಇದ್ದೀಯ ಜೊತೆಯಲ್ಲಿ. ಅದಕ್ಕಿಂತ ಇನ್ನೇನು ಬೇಕು ಅವಳಿಗೆ"

"ಹಾ ಟೀ.. ನನಗೂ ಒಂದೊಮ್ಮೆ ಅನಿಸಿತ್ತು .. ಅವಳು ಎಷ್ಟು ಅಂಕ ತೆಗೆಯುತ್ತಲೋ ತೆಗೆಯಲಿ.. ಯಾವುದೇ ಒತ್ತಡ ಹಾಕೋದು ಬೇಡ ಅಂತ ..ಅವಳು ಇಷ್ಟು ಅಂಕ ತೆಗೆದಿದ್ದಾಳೆ ಅಂದರೆ.. ಅದು ಅವಳ ಮಾನಸಿಕ ಒತ್ತಡವನ್ನು ನಿಭಾಯಿಸಿದ ರೀತಿಗೆ ಶರಣು ಎನ್ನಬೇಕು.. ಮತ್ತು ಆ ಶ್ರೇಯಸ್ಸು ಅವಳಿಗೆ ಸಲ್ಲಬೇಕು.. ತನ್ನ ಪಾಡಿಗೆ ತನ್ನ ಪ್ಲಾನ್ ಪ್ರಕಾರ ಓದುತ್ತಾ ಸಾಗಿದ್ದು.. ಮಧ್ಯೆ ಮಧ್ಯೆ.. ಮೊಬೈಲು, ಸಿನಿಮಾ, ಟಿವಿ.. ಹೀಗೆಲ್ಲಾ ಇದ್ದರೂ ಓದುವುದರಿಂದ ದೂರವಿರಲಿಲ್ಲ.. ಇದೆ ರೀತಿ ಇನ್ನು ಐದರಿಂದ - ಏಳು ವರ್ಷ ಓದಿಬಿಟ್ಟರೆ.. ಅವಳ ಹಾದಿ ಸುಂದರವಾಗಿರುತ್ತೆ.. "

"ನಿಜ ಶ್ರೀ... ನಾನಿದ್ದೇನೆ ಅವಳ ಜೊತೆಯಲ್ಲಿ ಮಾನಸಿಕ ಧೈರ್ಯ ತುಂಬುವುದಕ್ಕಾಗಿ.. ಜೊತೆಗೆ ನಾನು ಅವಳಿಗೆ ಹೇಳಿದ್ದೆ ಪಮ್ಮಿ ಅಕ್ಕನ ತರಹ ಚಾರ್ಟರ್ಡ್ ಅಕೌಂಟೆಂಟ್ ಆಗು ಅಂತ.. ಅದನ್ನು ನಿಜ ಮಾಡುವುದೇ ಅವಳ ಗುರಿಯಾಗಬೇಕು.. ಅದನ್ನು ನನಸು ಮಾಡೋದಕ್ಕೆ ನೀ ಇದ್ದೀಯ ಜೊತೆಯಲ್ಲಿ.. ಅಷ್ಟು ಸಾಕು ನನಗೆ.. "

ಆಗಸ ನೋಡಿದೆ ..ಅದರ ತುಂಬೆಲ್ಲ ಸವಿತಾಳ ಆ ಮುಗ್ಧ ನಗು ಮೊಗವೆ ಕಾಣುತ್ತಿತ್ತು.. ಹಾಗೆ ಅವಳ ಜೊತೆ ಮಾತಾಡಿಕೊಂಡು.. ಮೆಟ್ರೋ ಹತ್ತಿ.. ನನ್ನ ಬೈಕ್ ಹತ್ತಿರ ಬಂದಾಗಲೂ ಮಳೆಯ ಹನಿಗಳಿದ್ದವೇ  ಹೊರತು ಭೋರ್ಗರೆಯುವ ಮಳೆ ಇರಲಿಲ್ಲ.. ಸರಿ ಬೈಕಿನಲ್ಲಿ ಹಾಡಾಡಿಕೊಂಡು ಬರುತ್ತಿದ್ದೆ..

ಒಮ್ಮೆ ಆಗಸ ನೋಡಿದೆ.. ಮತ್ತೆ ಸವಿತಾ ಕಂಡಳು.. "ಟೀ ಒಂದು ಪ್ರಶ್ನೆ"

"ಹೇಳು ಶ್ರೀ"

"ಆನಂದಭಾಷ್ಪ ಅಂದೇ. .. ಬರೀ ಒಂದೆರಡು ಹನಿಗಳು ಮಾತ್ರ ಬಿದ್ದವು.. ಅಷ್ಟೇನಾ ಖುಷಿಯಾಯ್ತಾ "

"ಹಾ ಶ್ರೀ.. ಕುಶಿಯಾಯ್ತು.. ಓಹ್ ಗೊತ್ತಾಯ್ತು.. ಇರು ಒಂದು ಕ್ಷಣ.. ನಿನಗೆ ಮ್ಯಾಜಿಕ್ ತೋರಿಸುತ್ತೇನೆ"

"ಏನು ಟೀ ಮ್ಯಾಜಿಕ್"

"ಇರಪ್ಪ ..ಇಂದು ನಿನ್ನ ಇಷ್ಟದ ಮಂಗಳವಾರ.. ನನ್ನಿಷ್ಟದ ತಾರೀಕು (ಏಳು)... ಎರಡೂ ಇದ್ದ ಮೇಲೆ ಇನ್ನೊಂದು ನಿನಗೆ ಇಷ್ಟವಾದುದನ್ನು ಕಳಿಸುತ್ತೇನೆ.. "

ಅರೆ ಕ್ಷಣ.. ಭೋರ್ಗರೆತ ಶುರುವಾಯಿತು.. ಕಣ್ಣು ಕಾಣದಷ್ಟು ದಪ್ಪ ದಪ್ಪ ಹನಿಗಳ ಮಳೆ.. ಬೈಕ್ ಓಡಿಸಲಾಗಲಿಲ್ಲ.. ತಕ್ಷಣ.. ರಸ್ತೆಯ ಅಂಚಿನಲ್ಲಿದ್ದ ಅಂಗಡಿಯ ಮುಂದೆ ಬಂದು.. ಮೊಬೈಲು, ವಾಚು, ಪರ್ಸ್ ಎಲ್ಲವನ್ನೂ ಬ್ಯಾಗಿನಲ್ಲಿ ಹಾಕಿ.. ಕನ್ನಡಕವನ್ನು ಜೇಬಿನಲ್ಲಿ ಹಾಕಿಕೊಂಡು.. ಮತ್ತೆ ಬೈಕ್ ಬಳಿ ಬಂದೆ.. ಅಲ್ಲಿಯ ತನಕ ನನ್ನ ಕಾರ್ಯವನ್ನು ನೋಡುತ್ತಿದ್ದ ಅಕ್ಕ ಪಕ್ಕದ ಮಂದಿ ಸುಮ್ಮನಿದ್ದರು.. ಬೈಕ್ ಬಳಿ  ಬಂದು. .. ಬೈಕ್ ಸ್ಟಾರ್ಟ್ ಮಾಡಿದಾಗ.. ಅಲ್ಲಿದ್ದ ಒಬ್ಬ ತಲೆ ಚಚ್ಚಿಕೊಂಡದ್ದು ಕಣ್ಣಿಗೆ ಬಿಟ್ಟು.. ನಸು ನಗುತ್ತಾ "ಟೀ ಸೂಪರ್" ಎಂದು ಸಲ್ಯೂಟ್ ಹೊಡೆದದ್ದೇ.. ಸೀದಾ ಮನೆ ಕಡೆ..  ಆ ಮಳೆಯಲ್ಲಿ ಬೈಕ್ ಚಾಲನೆ.. ಸುಂದರ ಅನುಭವ ಕೊಟ್ಟಿತು.. ಹಾಗೆ ನನ್ನ SSLC ದಿನಗಳ ಕಡೆಗೆ ಜಾರಿತು..

"ಶ್ರೀಕಾಂತ ಇವತ್ತು ನಿನ್ನ ರಿಸಲ್ಟ್.. ಶಾಲೆಗೆ ಹೋಗಿ ನೋಡಿಕೊಂಡು ನನ್ನ ಆಫೀಸ್ ಹತ್ತಿರ ಬಾ" ಅಂತ ನನ್ನ ಅಪ್ಪ ಹೇಳಿ ಆಫೀಸಿಗೆ ಹೋದರು..

ನಾನು ಠಾಕು ಠೀಕಾಗಿ ಸಿದ್ಧವಾಗಿ.. ಶಾಲೆಯ ಹತ್ತಿರ ಹೋದೆ.. ನೋಟೀಸ್ ಬೋರ್ಡಿನಲ್ಲಿ ಫಲಿತಾಂಶ ಹಾಕಿದ್ದರು.. ನನ್ನ ರೋಲ್ ನಂಬರ್ ಹುಡುಕುತ್ತಾ ಬಂದಾಗ ಅಚ್ಚರಿ ಕಾದಿತ್ತು.. ನನ್ನ ನಂಬರಿಗೆ ಒಂದು ಗೆರೆ ಎಳೆದಿದ್ದರು. .. ಅಲ್ಲಿ ಇನ್ಯಾರ ನಂಬರಿಗೂ ಹಾಗೆ ಮಾಡಿರಲಿಲ್ಲ.. ಸರಿ ಮಾರ್ಕ್ಸ್ ಎಷ್ಟು ಬಂದಿದೆ ಎಂದು ತಿಳಿದುಕೊಂಡು.. ಅಪ್ಪನ ಆಫೀಸಿಗೆ ಹೋದೆ.. ಹೇಳಿದೆ..

"ಅಣ್ಣ ಫಸ್ಟ್ ಕ್ಲಾಸಿನಲ್ಲಿ ಪಾಸಾಗಿದ್ದೇನೆ.. ಇದು ನೋಡಿ ಮಾರ್ಕ್ಸ್"

"ನನಗೆ ಗೊತ್ತು.. ನೋಡಿಲ್ಲಿ ಬರೆದುಕೊಂಡು ಬಂದಿದ್ದೇನೆ" ಎಂದು ತೋರಿಸಿದರು.. "ಆಫೀಸಿಗೆ ಬರುವಾಗ ಶಾಲೆಗೆ ಹೋಗಿ ನಿನ್ನ ರಿಸಲ್ಟ್ ನೋಡಿ.. ನನ್ನ ಬಾಸ್ ಸೀತಾರಾಮುಗೆ ಹೇಳಿದ್ದೀನಿ.. ನಾನೇ ನಿನ್ನ ನಂಬರ್ ಕೆಳಗೆ ಗೆರೆ ಎಳೆದದ್ದು. "

ಅಪ್ಪನ ಬಾಸ್ ಸೀತಾರಾಮು ಸರ್ ಹತ್ತಿರ ಹೋಗಿ ಹೇಳಿದೆ.. "ಖುಷಿ ಆಯ್ತು ಶ್ರೀಕಾಂತ.. ಕೆ ಆರ್ ಪಟ್ಟ ಕಷ್ಟಕ್ಕೆ ಸರಿಯಾದ ಬೆಲೆ ಸಿಗುತ್ತಿದೆ.. ಶುಭವಾಗಲಿ.. ಮುಂದೆ ಏನು ಓದುತ್ತೀಯ ನಿರ್ಧಾರ ಮಾಡಿ ಹೇಳು.. ನನ್ನ ಕೈಲಾದ ಸಹಾಯ ಮಾಡುತ್ತೇನೆ" ಎಂದರು ... ಅವರು ನುಡಿದಂತೆಯೇ.. ನನ್ನ ಪೂರ್ಣ ವಿದ್ಯಾಭ್ಯಾಸಕ್ಕೆ ಅವರ ಸಹಾಯ ಇತ್ತು.. ಇಂದು ನಾನು ಏನಾದರೂ ಆಗಿದ್ದೇನೆ ಎಂದರೆ ಅದಕ್ಕೆ ಭದ್ರ ತಳಪಾಯ ಹಾಕಿದ್ದು.. ಸೀತಾರಾಮ್ ಸರ್..

 ಇದೆಲ್ಲ ನೆನೆದು..ಮಳೆಯಿಂದ ನೆನೆದು ಮನೆಗೆ ಬಂದಾಗ.. ಮಗಳು ಫುಲ್ ಕುಶಿಯಲ್ಲಿದ್ದಳು.. ಹಾಗೆ ಒದ್ದೆ ಬಟ್ಟೆಯಲ್ಲಿಯೇ.. ಕಂಗ್ರಾಜುಲೇಷನ್ ಪಾಪ  ಎಂದು ಹೇಳಿ ಅಪ್ಪಿಕೊಂಡು ಸಿಹಿ ತಿನ್ನಿಸಿದೆ..

ಹೊರಗೆ ಬಂದು ನೋಡಿದೆ.. ಆನಂದಭಾಷ್ಪ ಇನ್ನೂ ಧಾರಾಕಾರವಾಗಿ ಸುರಿಯುತ್ತಲೇ ಇತ್ತು.. ಅವಳ ಫೋಟೋ ನೋಡಿದೆ .. ಸೂಪರ್ ಶ್ರೀ ಎಂದಳು ನನ್ನ ಟೀ!!!