Monday, September 18, 2017

ಪ್ರಥಮಂ ವಕ್ರತುಂಡಂಚ ......................ಮುಂದುವರೆದಿದೆ - ಮೂರನೇ ಭಾಗ

ಪ್ರಥಮಂ... ಮೊದಲನೇ ಭಾಗ
ದ್ವೀತೀಯಕಂ... ಎರಡನೇ ಭಾಗ

ಮುಂದೆ... ಮುಂದೆ... ಐದು ದಿನದ ಸುಂದರ ಕ್ಷಣಗಳನ್ನು ಬಚ್ಚಿಟ್ಟುಕೊಂಡ ಕಪಾಟನ್ನು ತೆರೆಯಲು ಕೀಲಿ ಕೈ ನನ್ನ ಕಣ್ಣ ಮುಂದೆ ಓಡಾಡುತ್ತಿತ್ತು... ಅದು ಕೈಗೆ ಬಂದ ಕ್ಷಣ.

"ತುಲಾ  ಮಾಸೇತು ಕಾವೇರಿ" ನನ್ನ ಮೊಬೈಲ್ ಅಲಾರಾಂ ಯಥಾಪ್ರಕಾರ ಬೆಳಿಗ್ಗೆ ೫ ಕ್ಕೆ ಕೂಗುತಿತ್ತು.. ಕಣ್ಣು ಬಿಟ್ಟೆ.. ಮಲಗುವಾಗ ಕತ್ತಲು ತುಂಬಿದ್ದ ಕೋಣೆಗೆ ಆಗಲೇ ಯಾರೋ ದಿನಕರನನ್ನು ತಂದು ಬಿಟ್ಟಹಾಗೆ.. ಪ್ರಕಾಶಮಾನವಾಗಿತ್ತು.. ಗಾಬರಿಯಾಯಿತು ಒಮ್ಮೆಲೇ..... ತಡವಾಯಿತೇನೋ ಅಂತ.. ಕಾರಣ.. ನನ್ನ ಸಹೋದ್ಯೋಗಿ ಹೋಟೆಲಿನ ಹತ್ತಿರ ಬಂದು ನನ್ನನ್ನು ಆಫೀಸಿಗೆ ಕರೆದೊಯ್ಯಲು ಬರುವವರಿದ್ದರು..

ಕಣ್ಣುಜ್ಜಿಕೊಂಡು ಎದ್ದೆ.. ಐದು ಘಂಟೆ.. ತತ್ ತೆರಿಕೆ... ಬರಿ ಇನ್ನೂ ಐದು ಘಂಟೆ... ಮತ್ತೆ ಒಂದು ಅರ್ಧ ಘಂಟೆ ಮಲಗಿ.. ನಂತರ ಲಗುಬಗೆಯಿಂದ ಹೊರಡಲು ತಯಾರಾದೆ.. ಇಷ್ಟವಾದ ತಿಳಿ ನೀಲಿ ಅಂಗಿ.. .. ಮನಸ್ಸು ತಂಪಾಗಿತ್ತು.. ಹಿಂದಿನ ದಿನದ ಆಯಾಸ ಮರೆಯಾಗಿತ್ತು...

ಹೋಟೆಲಿನ ಮುಂದೆ ಬಂದು ನಿಂತೇ.. ಅವರ  ಮುಖ ಪರಿಚಯವಿರಲಿಲ್ಲ... ಅವರಿಗೆ ನನ್ನ ಪಾಸ್ ಪೋರ್ಟ್ ನೋಡಿದ್ದರಿಂದ ಅವರಿಗೆ ಕಷ್ಟವಿರಲಿಲ್ಲ.. ಸರಿ ಬರುವ ಕಾರುಗಳನ್ನೆಲ್ಲ ನೋಡುತ್ತಿದ್ದೆ .. ಇವರಿರಬಹುದೇ... ಅವರಿರಬಹುದೇ... ಸ್ವಲ್ಪ ಹೊತ್ತು ಒಂದು ಬಿ ಎಂ ಡಬ್ಲ್ಯೂ ಕಾರು ಬಂದು ನಿಂತಿತು.... ನನ್ನ ಮನಸ್ಸು ಹೇಳಿತು.. ಶ್ರೀ ಇವರೇ ಕಣೋ..

ಕಾರಿನಿಂದ ಇಳಿದವರು ಹಾಯ್ ಶ್ರೀಕಾಂತ್ ಅಂದ್ರು... ಮನಸ್ಸು ಯಾವಾಗಲೂ ನನ್ನ ಕೈ ಹಿಡಿದಿತ್ತು.. ಇಂದು ಕೂಡ...

ಸುಯ್ ಅಂತ ಕಾರು ನಮ್ಮ ಆಫೀಸಿನ ಕಡೆಗೆ ಓಡಿತು.. ಹತ್ತೇ ನಿಮಿಷ..

ಮೊದಲ  ಬಾರಿಗೆ ನಮ್ಮ ಕೇಂದ್ರ ಕಚೇರಿಗೆ ಹೆಜ್ಜೆ ಇಡುವ ಸಂಭ್ರಮ.. ನವ ವಧುವಿನ ನಾಚಿಕೆ, ಸಂಕೋಚ.. ಹೆಮ್ಮೆ ಎಲ್ಲವೂ ಇತ್ತು.. ಬಲಗಾಲಿಟ್ಟು ಒಳಗೆ ಹೋದೆ.. ಅನೇಕ ಸಹೋದ್ಯೋಗಿಗಳ ಭೇಟಿ.. ಬರಿ  ಇ-ಮೇಲ್ ನಲ್ಲೆ ಇದ್ದ ಪರಿಚಯ... ಮುಖತಃ ಭೇಟಿ.. ನನ್ನನ್ನು ಅವರ ಹತ್ತಿರಕ್ಕೆ ಒಯ್ದಿತ್ತು...

ಅಂದು ಸೋಮವಾರ.. ನನ್ನ  ಕೆಲಸಗಳು ತುಂಬಾ ಇದ್ದವು.. ಜೊತೆಯಲ್ಲಿ ಮುಂದಿನ ದಿನಕ್ಕೆ ಸಿದ್ಧವಾಗಬೇಕಿತ್ತು.. ಎಲ್ಲವೂ ಸರಾಗವಾಗಿ ನೆಡೆಯಿತು... ಸಂಜೆ.. ಕೆಲಸ ಮುಗಿಸಿಕೊಂಡು ಹೋಟೆಲಿಗೆ ಹೋದೆ.. ಒಂದು ಪುಟ್ಟ ಸುತ್ತಾಟ ಎಂದು ಹೊರಗೆ ಬಂದೆ..

ಟ್ರಾಮ್ ಗಳು ಓಡಾಡುತ್ತಿದ್ದವು.. ಹೈವೇ ಸೊಗಸಾಗಿತ್ತು.. ಬರಿ ಚಲನ ಚಿತ್ರಗಳಲ್ಲಿ ನೋಡಿದ್ದ ರಸ್ತೆಗಳು ಈಗ ಕಣ್ಣ ಮುಂದೆ.. ರಸ್ತೆಯ ಅಂಚಿನ ತನಕ ಟಾರು... ಅಂಚಿನಲ್ಲಿ  ಎರಡೂ ಬದಿಯಲ್ಲಿ ಹುಲ್ಲುಗಾವಲು.. ಏನೋ ಒಂದು ರೀತಿಯ ಖುಷಿ..

ದಿನಕರ ವಿಶ್ರಮಿಸುವ ಹಂತಕ್ಕೆ ಬಂದೆ ಇರಲಿಲ್ಲ... ಕೋಣೆಗೆ ಬಂದು ಮನೆಗೆ ಕರೆ ಮಾಡಿದೆ.. ಗೃಹಪ್ರವೇಶ ಮುಗಿಸಿಕೊಂಡು ಬಂದಿದ್ದ ಸವಿತಾ ಶೀತಲ್ ತುಂಬಾ ಹೊತ್ತು ಮಾತಾಡಿದರು..

ಮಾರನೇ ದಿನಕ್ಕೆ ಮನಸ್ಸು ಸಿದ್ಧವಾಗಿತ್ತು.. ಬೆಳಿಗ್ಗೆ ಹೋಟೆಲಿನ ಮುಂಬಾಗದಲ್ಲಿ ಇನ್ನಷ್ಟು ಸಹೋದ್ಯೋಗಿಗಳು..

ಅರೆ ಶ್ರೀಕಾಂತ್.. ಹೇಗಿದೆ ಫ್ರಾಂಕ್ಫರ್ಟ್.. ಎಲ್ಲರೂ ಕೇಳಿದ ಮೊದಲ ಪ್ರಶ್ನೆ... ಬೇಸಿಗೆಯಾಗಿದ್ದ ಕಾರಣ.. ತಾಪಮಾನ ೩೫ ಇತ್ತು.. ಬೆಂಗಳೂರಿನ ತಾಪಮಾನವೇ.. ವಾಹನ ದಟ್ಟಣೆ.. ಬೆಂಗಳೂರಿನ ದಟ್ಟಣೆ ಅನುಭವಿಸಿದ ಮೇಲೆ.. ಮಿಕ್ಕವೂ ಮಾಮೂಲಿ ಅನಿಸಿತ್ತು.. ಬದಲಾವಣೆ ಎಂದರೆ ರೈಲು ಪ್ರಯಾಣ.. ಅದನ್ನೇ ಹೇಳಿದೆ.. ಅವರ ಹೃದಯದಲ್ಲಿ ತುಸು ಜಾಗ ಪಡೆಯಲು ಬಹುಶಃ ಈ ಮಾತುಗಳು ಸಾಕಾಗಿದ್ದವು ಅನ್ನಿಸುತ್ತೆ.. ನಾನು ಎಲ್ಲರೊಳು ಒಂದಾಗಿದ್ದೆ.. ಅವರು ನನ್ನೊಳಗೆ ಒಂದಾಗಿದ್ದರು..

ಟ್ರೈನಿಂಗ್  ಮಜವಾಗಿತ್ತು.. ನಾನು ಪ್ರಸ್ತುತ ಪಡಿಸಿದ್ದು ಎಲ್ಲರಿಗೂ ಇಷ್ಟವಾಗಿತ್ತು .. ಭಾಷೆ ಒಂದು ಸಮಸ್ಯೆ ಆಗಿತ್ತು .. ನಮ್ಮ ಆಂಗ್ಲ ಭಾಷೆ ಅಲ್ಲಿ ಅರ್ಥವಾಗಲು ತುಸು ಕಷ್ಟ..ಇರಲಿ .. ಇದೆಲ್ಲಾ ಮಾಮೂಲಿ..

ಸಂಜೆ ಕಾಸೆಲ್ ನಗರದ ಕೇಂದ್ರ ಭಾಗಕ್ಕೆ ನಾನು ಮತ್ತು ಹಂಗೇರಿಯ ಸಹೋದ್ಯೋಗಿ ಜೊತೆಯಲ್ಲಿ ಹೋದೆ.. ರಸ್ತೆಯಲ್ಲಿಯೇ ಓಡಾಡುವ ಬಸ್ಸು ಅದರ ಪಕ್ಕದಲ್ಲಿಯೇ ಟ್ರಾಮ್.. ಟ್ರೈನ್.. ಕಾರು ಬಸ್ಸುಗಳು.. ನಗರದ ಪರಿಚಯ ಸೊಗಸಾಗಿತ್ತು.. ಒಂದು ಅರಮನೆ.. ಉದ್ಯಾನವನ.. ಒಂದು ಪುಟ್ಟ ಸುತ್ತಾಟ.. ಚಿತ್ರಗಳು.. ಜರ್ಮನಿಯ ಪರಿಚಯ ಮಾಡಿಕೊಟ್ಟಿತು..
ಇಲ್ಲಿ ಹೊಗೆ ಬರುತ್ತಿದೆ ಎಂದರೆ ಡಾಕ್ಯುಮೆಂಟ ಚಾಲೂ ಅಂತ ಅರ್ಥ 
ಮಾರನೇ ದಿನ.. ಯಥಾಪ್ರಕಾರ ಟ್ರೈನಿಂಗ್ ಮುಗಿದ ಮೇಲೆ.. ಸಂಜೆಯ ಕಾರ್ಯಕ್ರಮ.. ಏನೂ ಎಂಬ ಕುತೂಹಲ ತಣಿಸಿದ್ದು ಡಾಕ್ಯೂಮೆಂಟಾ ೨೦೧೭ ಕ್ಕೆ ಭೇಟಿ..
ಪುಸ್ತಕಗಳಿಂದಲೇ ಮಾಡಿದ ಮಹಲು 

ಡಾಕ್ಯೂಮೆಂಟಾ ಈ ಕಾರ್ಯಕ್ರಮ ಐದು ವರ್ಷಗಳಿಗೊಮ್ಮೆ ಕಾಸೆಲ್ ನಲ್ಲಿ ನೆಡೆಯುತ್ತೆ .. ನೂರು ದಿನದ ಕಾರ್ಯಕ್ರಮ ಇದು.. ನಿಷೇದ ಮಾಡಿದ ಸಾಹಿತ್ಯ ಕೃತಿಗಳನ್ನು ಪ್ರಚುರ ಪಡಿಸುವ ಈ ಡೊಕ್ಯೂಮೆಂಟಾ ಕಾರ್ಯಕ್ರಮ.. ಈ ಬಾರಿ ಗ್ರೀಕ್ ದೇಶದ ಅಥೆನ್ಸ್ ನಲ್ಲಿ ಮೂಡಿ ನಂತರ ಕಾಸೆಲ್ ನಲ್ಲಿ ನೆಡೆದಿತ್ತು..
ಕಂಬದ ಹತ್ತಿರದ ನೋಟ 

ಇನ್ನೊಂದು ನೋಟ 
ಈ ಡಾಕ್ಯೂಮೆಂಟಾ ಕಾರ್ಯಕ್ರಮವನ್ನು ನಮಗೆ ಆಂಗ್ಲ ಭಾಷೆಯಲ್ಲಿ ಹೇಳಿದ ಅಮೇರಿಕಾದ ಗೈಡ್..  ಅಲ್ಲಿಯೇ ಪಕ್ಕದಲ್ಲಿದ್ದ ಮ್ಯೂಸಿಯಂ ಒಳಗೆ ಕರೆದುಕೊಂಡು ಹೋದರು.. ನಾಲ್ಕು ಮಹಡಿಯಲ್ಲಿದ್ದ ಅನೇಕ ವಸ್ತು ವಿನ್ಯಾಸಗಳನ್ನು ಪರಿಚಯಮಾಡಿಕೊಟ್ಟರು.. ನನಗೆ ಒಂದು ಬಗೆಯ ವಿಭಿನ್ನ ಆದರೆ ಮಿಶ್ರ ಅನುಭವ ನೀಡಿತು.. ಅದರ ಕೆಲವು  ಚಿತ್ರಗಳು ನಿಮಗಾಗಿ ..
ವಿಡಿಯೋ ತುಂಬಾ ಚೆನ್ನಾಗಿತ್ತು.. ತಾಂತ್ರಿಕವಾಗಿ 

ನಮ್ಮ ನಮ್ಮ ಅನಿಸಿಕೆ ನಮಗೆ 

ಮ್ಯೂಸಿಯಂ ಒಳಗಿನ ದೃಶ್ಯಗಳು 

ಮ್ಯೂಸಿಯಂ ಒಳಗಿನ ದೃಶ್ಯಗಳು 

ಪ್ರದರ್ಶನ.. ಇದರೊಳಗೆ  ವಾಸ ಮಾಡುತ್ತಾರೆ .. 

ಪ್ರದರ್ಶನ.. ಇದರೊಳಗೆ  ವಾಸ ಮಾಡುತ್ತಾರೆ .. 

ಸಂಜೆ ಊಟಕ್ಕೆ ಹೋದೆವು.. ರಾತ್ರಿ ಸುಮಾರು ಹನ್ನೆರಡಾಗಿತ್ತು ನಾವು ಅಲ್ಲಿಂದ ಹೊರಟಾಗ .. ಹೋಟೆಲಿಗೆ ಬಂದು ಮಲಗಿದ್ದೆ ಗೊತ್ತು .. ಬೆಳಿಗ್ಗೆ ಅಲಾರಾಂ ಕೊಡೆದುಕೊಳ್ಳುವ ತನಕ ಸೊಗಸಾದ ನಿದ್ದೆ ..

ಮರುದಿನ.. ಗ್ಲೋಬಲ್ ಸಪ್ಪ್ಲೈಯೆರ್ ಮೀಟ್ ಅಥವಾ ಜಾಗತಿಕ ಮಟ್ಟದ ಮಾರಾಟಗಾರರ ಸಮಾವೇಶ.. ಹಲವಾರು ಮಾರಾಟಗಾರರನ್ನು ಭೇಟಿ ಮಾಡಿದ ಅನುಭವ ಖುಷಿ ಕೊಟ್ಟಿತು.. ಜೊತೆಯಲ್ಲಿ ನಮ್ಮ ಆಫೀಸಿನ ದಿಗ್ಗಜರ ಜೊತೆಯಲ್ಲಿ ಚಿತ್ರ ತೆಗಿಸಿಕೊಂಡದ್ದು.. ಸಂತಸ ಕೊಟ್ಟಿತು.. ಇಡೀ ಕಾರ್ಯಕ್ರಮ ಜರ್ಮನ್ ಭಾಷೆಯಲ್ಲಿ ನೆಡೆದರೂ ನನ್ನ ಸಹೋದ್ಯೋಗಿಗಳು ಅದರ ಸಾರಾಂಶವನ್ನು ಆಂಗ್ಲ ಭಾಷೆಯಲ್ಲಿ ತರ್ಜುಮೆ ಮಾಡುತ್ತಿದ್ದರು..

ಊಟದ ಸಮಯದಲ್ಲಿಯೂ ಕೂಡ.. ನಾ ಶುದ್ಧ ಸಸ್ಯಾಹಾರಿ ಆಗಿದ್ದರಿಂದ ಹೋಟೆಲಿನಲ್ಲಿ ಸಸ್ಯಾಹಾರಿ ಆಹಾರವನ್ನು ಮೊದಲು ಅವರು ತಿಂದು ಧೃಢ ಪಡಿಸಿಕೊಂಡು ನಂತರ ನನಗೆ ತಿನ್ನಲು ಹೇಳುತ್ತಿದ್ದರು .. ನಾ ಮನೆಯಲ್ಲಿ ಇದ್ದೀನಿ ಅನ್ನುವ ಅನುಭವ ಕೊಟ್ಟಿದ್ದು ಈ ರೀತಿಯ ಹೃದಯಕ್ಕೆ ಹತ್ತಿರವಾದ ನನ್ನ ಸಹೋದ್ಯೋಗಿಗಳಿಂದ..  :-)

ಸಂಜೆ ಇನ್ನೊಂದು ಧಮಾಕ ಕಾದಿತ್ತು.. ಕಾಸೆಲ್ ನಗರದ ಅತಿ ಎತ್ತರದ ಪ್ರದೇಶಕ್ಕೆ ಹೋದೆವು.. ಹರ್ಕ್ಯುಲಸ್ ಎನ್ನುವ ಈ ಜಾಗ ಸುಂದರವಾಗಿತ್ತು.. ಮತ್ತು ನಾ  ಇಲ್ಲಿಯೇ ಮಂಗನಾಗಿದ್ದು.. ತಂಪಾಗಿದ್ದ ಜಾಗ.. ಮೋಡಗಳು ಫೋಟೋ ತೆಗೆಯಲು ಪ್ರಶಸ್ತವಾದ ವಾತಾವರಣ ಸಿದ್ಧವಾಗಿತ್ತು.. ಕ್ಯಾಮೆರಾ ತೆಗೆದೇ... ಕ್ಲಿಕ್ ಮಾಡಿದೆ.. ಕ್ಲಿಕ್ ಆಗ್ತಾ ಇಲ್ಲ .. ಬ್ಯಾಟರಿ ತೊಂದರೆಯೇ ಎಂದು ತೆಗೆದು ನೋಡಿದೆ.. ಸರಿಯಾಗಿತ್ತು.. ಜೂಮ್ ನೋಡಿದೆ ಸರಿಯಾಗಿತ್ತು... ಯಾಕೋ ಅನುಮಾನ ಬಂದು... ಮೆಮೊರಿ ಕಾರ್ಡ್ ನೋಡಿದೆ.. ಅದು ಅಲ್ಲೇ ಇರಲಿಲ್ಲ.. ಹಿಂದಿನ ದಿನ ತೆಗೆದ ಫೋಟೋಗಳನ್ನು ಲ್ಯಾಪ್ಟಾಪಿಗೆ ಹಾಕಿದ ಮೇಲೆ ಕಾರ್ಡನ್ನು ಅಲ್ಲಿಯೇ  ಬಿಟ್ಟಿದ್ದೆ.. ಕ್ಯಾಮೆರಾ ಹಿಡಿಯಲು ಶುರುಮಾಡಿದ ಮೇಲೆ ಮಾಡಿದ ಭಯಂಕರ ಮಂಗಾಟ.. :-(
ಈ  ದೃಶ್ಯವನ್ನು ತೆಗೆಯಲು ಹೋದಾಗ ಗೊತ್ತಾಯಿತು
ಮೆಮೊರಿ ಕಾರ್ಡ್ ಇಲ್ಲ ಅಂತ 

ಸುಂದರ ನೋಟ 

ಕಾಸೆಲ್  ನಗರದ ಸುಂದರ ನೋಟ 







ಮೊಬೈಲಿನಲ್ಲಿಯೇ ಹಲವಾರು ಚಿತ್ರ ತೆಗೆದೇ.. ಆದರೂ ನನ್ನ ಕ್ಯಾಮೆರಾದ ಸಹಾಯ ಪಡೆಯಲಿಲ್ಲ ಎನ್ನುವ ಬೇಸರ ತುಂಬಾ ಕಾಡಿತ್ತು.. ಒಂದು ಪುಟ್ಟ ಕರೆ ಮನೆಗೆ.. ಒಂದು ಪುಟ್ಟ ಮಾತು ಕತೆ.. ಮಡದಿ ಮಗಳು ಖುಷಿ ನಾನೂ ಖುಷಿ..

ಈ ಪ್ರದೇಶ ಕಾಸೆಲ್ ನಗರದಲ್ಲಿಯೇ ಎತ್ತರವಾದ ಪ್ರವಾಸಿ ಸ್ಥಳ ಎಂದು ಹೇಳುತ್ತಾರೆ.. ಅದಕ್ಕೆ ತಕ್ಕ ಹಾಗೆ ಈ ಬೆಟ್ಟವನ್ನು ಅಚ್ಚುಕಟ್ಟಾಗಿ ನೋಡಿಕೊಂಡಿರುವ ಬಗ್ಗೆಯೂ ಇಷ್ಟವಾಗುತ್ತದೆ.. ನಾವು ಹೋದಾಗ ಹರ್ಕ್ಯುಲೆಸ್ ಪ್ರತಿಮೆಯ ಸುತ್ತಾ ದುರಸ್ತಿ ಕೆಲಸ ನೆಡೆಯುತ್ತಿತ್ತು...ಸುಂದರವಾದ ಪ್ರತಿಮೆ ಅದು..

ಆ ಪ್ರತಿಮೆಯನ್ನು ಸುತ್ತಿ ಕೆಳಗೆ ಬಂದರೆ.. ಅಲ್ಲಿ ಇನ್ನಷ್ಟು ಮೂರ್ತಿಗಳು.. ಮತ್ತೆ ನೀರು ಹರಿದು ಹೋಗಲು ಮಾಡಿರುವ ವ್ಯವಸ್ಥೆ..
ನೀರಿನ ಆಟವನ್ನು ಆಡುತ್ತಾರೆ ಅಂತ ನನ್ನ ಸಹೋದ್ಯೋಗಿಗಳು ಹೇಳಿದರು.. ಆ ಪ್ರತಿಮೆಯ ಬುಡದಿಂದ.. ಕಣ್ಣಿಗೆ ಕಾಣುವಷ್ಟು ದೂರ ನೀರಿನ ಹಾದಿಗೆ ಜಲಪಾತದ ರೂಪ ಕೊಟ್ಟಿದ್ದಾರೆ.. ಮತ್ತೊಮ್ಮೆ ಅವಕಾಶ ಸಿಕ್ಕಿದರೆ.. ಆ ಸಮಯದಲ್ಲಿ ಹೋಗುವ ಬಯಕೆ ಇದೆ :-)

ಸುಮಾರು ಹೊತ್ತು ಕಚಪಚ ಮಾತಾಡುತ್ತಾ.. ಒಬ್ಬರನ್ನು ಇನ್ನೊಬ್ಬರು ರೇಗಿಸುತ್ತಾ ಕಾಲ ಕಳೆದೆವು.. ಅಲ್ಲಿಂದ ಹೊರಟು
ಊಟಕ್ಕೆ ಬಂದೆವು ನಗರದ ಮಧ್ಯ ಭಾಗಕ್ಕೆ.. ಎರಡು ಘಂಟೆಗಳು ಸುಯ್ ಅಂತ ಓಡಿ ಹೋಯಿತು..

ಆಗ ನನ್ನಿಷ್ಟದ ಮಳೆ.. ತನ್ನ ಚಮತ್ಕಾರವನ್ನು ತೋರಿಸಿತು.. ನಾ ಹೋದ ದಿನದಿಂದ ಎಲ್ಲರೂ ನನಗೆ ಹೇಳುತ್ತಿದ್ದರು.. ಶ್ರೀಕಾಂತ್ ನೀ ಒಬ್ಬನೇ ಬರಲಿಲ್ಲ.. ನಿನ್ನ ಜೊತೆ ಬೆಂಗಳೂರಿನಿಂದ ಸೂರ್ಯನನ್ನು ಕರೆದು ತಂದಿದ್ದೀಯ.. ನಮಗೆ ಸೆಕೆ ತಡೆಯಲಾಗುತ್ತಿಲ್ಲ.. ನೀ ಮಾತ್ರ ಆರಾಮಾಯಾಗಿ ಇದ್ದೀಯ ಎಂದು :-)...

ಅವರ ಆಪಾದನೆಯನ್ನು ನಗುತ್ತಾ ಸ್ವೀಕರಿಸಿದ ನಾನು ಅಂದಿನ ಮಳೆ ಬಂದು.. ಆ ಭೂ ಪ್ರದೇಶ ತಂಪಾದ ಮೇಲೆ ಮಾರನೇ ದಿನ ನಾ ಹೇಳಿದೆ.. ಹೌದು ನಾ ಸೂರ್ಯನನ್ನು ಕರೆತಂದಿದ್ದೆ.. ಈಗ ನಾ ವಾಪಾಸ್ ಹೋಗುವಾಗ ಕರೆದೊಯ್ಯುತ್ತಿದ್ದೇನೆ.. ಎಂದೇ..  ಸೂಪರ್ ಶ್ರೀ ಅಂದರು...

ಶುಕ್ರವಾರ.. ಸಂಜೆ ಕಾಸೆಲ್ ಬಿಡಬೇಕಿತ್ತು.. ಆಫೀಸಿನಲ್ಲಿ ನನ್ನ ಮಿತ್ರರಾದ ಸಹೋದ್ಯೋಗಿಗಳನ್ನು ಭೇಟಿ ಮಾಡಿ.. ನನ್ನ ಕೆಲಸವನ್ನೆಲ್ಲ ಪೂರೈಸಿದೆ.. ಸಂಜೆ ಕಾಸೆಲ್ ಬಿಡುವಾಗ.. ಯಾಕೋ ಮನಸ್ಸು ಭಾರವಾಗಿತ್ತು.. ಮೊದಲ ಭೇಟಿಗೆ ಕಾಸೆಲ್ ನನ್ನ ಮನಸ್ಸು ಗೆದ್ದಿತ್ತು.. !

ಸಂಜೆ ಜೆ ಎಂ ಗೆ ಕರೆ ಮಾಡಿದೆ.. ಇಷ್ಟು ಹೊತ್ತಿನ ಟ್ರೈನಿಗೆ ಹೋರಡುತ್ತಿದ್ದೇನೆ.. ಅಂದೇ.. ಅವ ನೀ ಅಲ್ಲಿ ಫ್ರಾಂಕ್ಫರ್ಟ್ ನಲ್ಲಿ ಇಳಿದು ಕರೆ ಮಾಡು.. ನಾ ಅಲ್ಲಿಗೆ ಬರುತ್ತೇನೆ.. ಎಂದಾ..

ವಾಪಾಸ್ ಬರುವಾಗ ಟ್ರೈನ್ ಹತ್ತಿದೆ.. ಅದು ದೂರ ಪ್ರಯಾಣ ಮಾಡುತ್ತಿದ್ದ ಟ್ರೈನ್.. ೨೦೦ ಕಿಮಿ ದಾಟುತ್ತಿತ್ತು.. ಕೆಲವೊಮ್ಮೆ ೨೫೦ - ೨೭೦ ದಾಟುತ್ತಿತ್ತು.. ಕೂರಲು ಸ್ಥಳವಿದ್ದರೂ.. ನಿಂತುಕೊಂಡೆ ಬಂದೆ.. ೨೦೦ ಕಿಮೀಗಳು ಒಂದೂವರೆ ತಾಸಿನಲ್ಲಿ ಮುಗಿಯುವ ಈ ಪಯಣವನ್ನು ನಿಂತುಕೊಂಡೆ ಆಸ್ವಾದಿಸಲು ಮನಸ್ಸು ಸಿದ್ಧವಾಗಿತ್ತು.. !!!

ಟಿಂಗ್ ಟಾಂಗ್.. ಟಿಂಗ್ ಟಾಂಗ್... ಜರ್ಮನ್ ಭಾಷೆಯಲ್ಲಿ ನಾ ಇಳಿಯುವ ಸ್ಥಳ ಬರಲಿದೆ ಎಂದು ಹೇಳುತ್ತಿತ್ತು.. ಜೊತೆಯಲ್ಲಿ ಫಲಕವೂ ಕೂಡ ಆ ವಿವರವನ್ನು ಸಾರುತ್ತಿತ್ತು... !!!

ಮುಂದೆ.. ನನ್ನ ಜೀವದ ಗೆಳೆಯನ ಜೊತೆ ಸುಮಾರು ೬೦-೭೦ ಘಂಟೆಗಳ ಸುಮಧುರ ಸಮಯ..

ಕ್ರೀಕ್ ಕ್ರೀಕ್.. ಫ್ರಾಂಕ್ಫರ್ಟ್ ಬಂತು.. ....!!!

Saturday, September 2, 2017

ಪ್ರಥಮಂ ವಕ್ರತುಂಡಂಚ ......................ಮುಂದುವರೆದಿದೆ - ಎರಡನೇ ಭಾಗ

ಪ್ರಥಮಂ ವಕ್ರತುಂಡಂಚ... ಅದ್ಭುತ ಅನುಭವಕ್ಕೆ ಮುನ್ನುಡಿಯಾಗಿ ವಿಮಾನ ಜರ್ ಅಂತ ಶುರುವಾಯಿತು.. !!! (ಮೊದಲ ಭಾಗ ಈ ಕೊಂಡಿಯಲ್ಲಿದೆ)

ಒಳಗೆ ಕೂತಿದ್ದೆ.. ಅಕ್ಕ ಪಕ್ಕದ ಸಹಪಯಣಿಗರು  ಬಂದು ಕೂತರು.. ನಾ ಮಧ್ಯೆ.. ನೋಡಿದರೆ.. ಇಬ್ಬರೂ ಹುಡುಗಿಯರೇ.. ನಾ ಗಗನಸಖಿಯ ಬಳಿ ಸೀಟು ಬದಲು ಮಾಡೋಣ ಎಂದುಕೊಂಡೆ.. ಅಷ್ಟರಲ್ಲಿ ಒಂದು ಹುಡುಗಿ ತನ್ನ ಪ್ರಿಯಕರನ ಪಕ್ಕದ ಸೀಟಿನಲ್ಲಿ ಕೂತು... ಅವಳ ಜಾಗದಲ್ಲಿ ಇದ್ದವ ನನ್ನ ಪಕ್ಕದಲ್ಲಿ ಕೂತ.. ಮನಸ್ಸು ನಿರಾಳವಾಯಿತು.. ಪಕ್ಕದಲ್ಲಿ ಕೂತಿದ್ದ ಇನ್ನೊಬ್ಬ ಹುಡುಗಿ.. ಗಗನಸಖಿ ಕೊಟ್ಟಿದ್ದ ಚಾದರ್ ಹೊದ್ದು ನಿದ್ದೆಗೆ ಜಾರಿದಳು.. ಮನಸ್ಸು ಇನ್ನೂ ನಿರಾಳವಾಯಿತು.. !!!

ಬೆಳಗಿನ ಜಾವ.. ಹೊಟ್ಟೆ ಚುರುಗುಟ್ಟುತ್ತಾ ಇತ್ತು.. ಚಿಟ್ಟೆಗಳಿದ್ದವು ಅಲ್ಲವೇ.. ಅವಕ್ಕೂ ಊಟ ಬೇಕಿತ್ತು :-).. ಮೊದಲ ಬಾರಿಗೆ ಹೊರದೇಶಕ್ಕೆ ಪಯಣ.. ಮೂರನೇ ಬಾರಿಗೆ ವಿಮಾನದಲ್ಲಿ ಕೂತಿದ್ದು.. ಟಿವಿ ಕೈಕೊಟ್ಟಿತ್ತು.. ಟಚ್ ಸ್ಕ್ರೀನ್ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ.. ರಿಮೋಟ್ ಕೈಕೊಟ್ಟಿತ್ತು.. ಅಥವಾ ನನಗೆ ಅದನ್ನು ಸರಿಯಾಗಿ ಉಪಯೋಗಿಸಲು ಬರಲಿಲ್ಲ ಅನ್ನಿಸುತ್ತೆ..

ಉಪಹಾರ.. ಮುಗಿಯಿತು.. ಕಾಫಿ ಕಪ್ ಕೈಗೆ ತಗೊಂಡೆ.. ನಸು ಬೆಳಕು.. ನನಗೆ ವಿಮಾನದಲ್ಲಿ ಕಾಫಿ ಕುಡಿಯುತ್ತಿದ್ದೀನಿ ಎನ್ನುವ ಖುಷಿ.. ಯಾಕೋ ಕಣ್ಣು ಪಕ್ಕಕ್ಕೆ ಹರಿಯಿತು.. ಆ ಹುಡುಗಿ ಕೈಯಲ್ಲಿ ವೋಡ್ಕಾ ಹಿಡಿದಿದ್ದಳು.. ಒಂದೇ ಗುಟುಕಿಗೆ ಕಾಫಿ ಹೊಟ್ಟೆ ಸೇರಿತು.. ಮತ್ತೆ ಆ ಕಡೆ ನೋಡಲಿಲ್ಲ (ಮಹಿಳೆಯರು.. ಕುಡಿಯಬಾರದು.. ಕೆಟ್ಟದ್ದು ಎನ್ನುವ ಭಾವವಲ್ಲ .. ಹಿಂದಿನ ಕಂಪೆನಿಗಳಲ್ಲಿ ಕೆಲಸ ಮಾಡುವಾಗ.. ಪಾರ್ಟಿಗಳಲ್ಲಿ ಇದೆಲ್ಲಾ ಮಾಮೂಲಿನ ದೃಶ್ಯಗಳಾಗಿತ್ತು.. ಆ ಕ್ಷಣ ಹೆಮ್ಮೆಯಿಂದ ಕಾಫಿ ಕುಡಿಯುತ್ತಿದ್ದ ರೀತಿಗೆ ಜರ್ ಅಂಥಾ ಇಳಿಯಿತು ಅಷ್ಟೇ)

ವಿಮಾನ ಎಲ್ಲಿಗೆ ಸಾಗುತ್ತಿದೆ, ಎಷ್ಟು ಎತ್ತರದಲ್ಲಿ ಹಾರುತ್ತಿದೆ.. ಹವಾಮಾನ, ಮುಗಿಲಲ್ಲಿ ಮೋಡಗಳ ಮೇಲೆ ಹಾರಾಡುವ ದೃಶ್ಯ.. ಎದುರು ಇದ್ದ ಟಿವಿಯಲ್ಲಿ ಬಿತ್ತರಗೊಳ್ಳುತ್ತಿತ್ತು.. ಪ್ರತಿಯೊಂದು ವಿವರವನ್ನು ಓದುತ್ತಿದ್ದೆ.. ಪರೀಕ್ಷೆಗೆ ಓದುವ ವಿದ್ಯಾರ್ಥಿಯಂತೆ..
ಖುಷಿಯಾಗುತ್ತಿತ್ತು ಮನಸ್ಸಿಗೆ.. ಬೆಂಗಳೂರಿನಲ್ಲಿ ಸಮಯವೆಷ್ಟು.. ನಾ ಇಳಿಯುವ ಮೊದಲ ತಾಣದಲ್ಲಿ ಸಮಯವೆಷ್ಟು.. ಹವಾಮಾನ ಹೇಗಿದೆ ಇದನ್ನೆಲ್ಲಾ ನೋಡುತ್ತಾ.. ನನ್ನ ಕೈಗಡಿಯಾರವನ್ನು ಅಡ್ಜಸ್ಟ್ ಮಾಡಿಕೊಳ್ಳುತ್ತಿದ್ದೆ..

ಮತ್ತೆ ಊಟ ಬಂತು.. ಚಿಟ್ಟೆಗಳು ಹೊರ ಬರುವ ಪ್ರಯತ್ನ ಮಾಡುತ್ತಿದ್ದವು.. ತಡೆ ಹಿಡಿದೆ..... ಈಗ ವಿಮಾನ ದೋಹಾದಲ್ಲಿ ಇಳಿಯುತ್ತಿದೆ.. ಸಮಯ ಇಷ್ಟು.... ಮುಂದಿನ ಪಯಣ ಶುಭಕರವಾಗಿರಲಿ ಎನ್ನುವ ಹಾರೈಕೆಗಳು ಕೇಳಿಬಂದವು..

ನಾ ನನ್ನ ಕೈಚೀಲ ಹಿಡಿದು ಹೊರಗೆ ಬಂದೆ.. ಎರಡು ಘಂಟೆಗಳು ಕಾಯಬೇಕಿತ್ತು.. ಆದರೆ ಅದು ಟಕ್ ಅಂತ ಓಡುತ್ತೆ ಅಂತ ಗೊತ್ತಿತ್ತು..ಕಾರಣ .. ವಿದೇಶದ ನೆಲದಲ್ಲಿ ಕಾಲಿಟ್ಟಿದ್ದೆ.. ಮನಸ್ಸು ಹಕ್ಕಿಯಾಗಿತ್ತು ..

ನಾ ಆರಾಮಾಗಿ ಇರೋಣ.. ಬಿಲ್ಡ್ ಅಪ್ ಬೇಡ ಅಂತ... ಸಾಮಾನ್ಯ ಜೀನ್ಸ್, ಟೀ ಶರ್ಟ್.. ಬೆಂಗಳೂರಿನಲ್ಲಿ ಚಳಿಯ ತಡೆದುಕೊಳ್ಳಲು ನನ್ನ ಸಹೋದರಿಯೊಬ್ಬಳು ಕೊಟ್ಟಿದ್ದ ಜರ್ಕಿನ್.. ಕಾಲಲ್ಲಿ ಫ್ಲೋಟರ್ (ಸ್ಲಿಪ್ಪರ್) ಇತ್ತು.. ಎಷ್ಟು ಸರಳವಾಗಿ ಇರಬೇಕಿತ್ತೋ ಅಷ್ಟುಸರಳವಾಗಿದ್ದೆ .. ಬೇಡದ ಅಹಂ ತಲೆಗೆ ಇರಬಾರದು ಅನ್ನುವ ಉದ್ದೇಶ ಮಾತ್ರ ತಲೆಯೊಳಗೆ ಇತ್ತು..

ದೋಹಾ ವಿಮಾನ ನಿಲ್ದಾಣದಲ್ಲಿ  ಇಳಿದು.. ವೈಫೈ ಸಿಕ್ಕಿದ ಮೇಲೆ.. ಮನೆಗೆ ಕರೆ ಮಾಡಿ ಹೇಳಿದೆ.. ಅವತ್ತು ಸವಿತಾ ಮತ್ತು ಶೀತಲ್.. ಒಂದು ಗೃಹ ಪ್ರವೇಶಕ್ಕೆ ಹೋಗಿದ್ದರು .. ಬಂಧು ಬಾಂಧವರ ಭೇಟಿ.. ಇಬ್ಬರಿಗೂ ಖುಷಿ ಕೊಟ್ಟಿತ್ತು ಅಂತ ಶೀತಲ್ ಮೆಸೇಜ್ ಮಾಡಿದ್ದಳು.. ಜೊತೆಯಲ್ಲಿ ಇಬ್ಬರೂ ಖುಷಿಯಾಗಿದ್ದಾರೆ ಎನ್ನುವ ಸಮಾಚಾರ ನನ್ನ ಮನಸ್ಸಿಗೆ ಸಮಾಧಾನ ನೀಡಿತು.. ಜರ್ಮನಿಗೆ ತಲುಪಿದ ಮೇಲೆ ಕರೆ ಮಾಡಿ ಅಂತ ಹೇಳಿದರು..
ವಿನ್ಯಾಸ ಮತ್ತು ಕಲೆ ಇಷ್ಟವಾಯಿತು 

ನಿಲ್ದಾಣದ ಒಂದು ಕಿರು ನೋಟ 

ದೋಹಾದ ವಿಮಾನ ನಿಲ್ದಾಣ ದೊಡ್ಡದಾಗಿತ್ತು.. ಅಲ್ಲಿನ ವಿನ್ಯಾಸ ಮನಸ್ಸಿಗೆ ಖುಷಿ ಕೊಡ್ತಾ ಇತ್ತು.. ಒಂದೆರಡು  ಸೆರೆ ಹಿಡಿದೆ .. ಅದರಲ್ಲಿ ಈ ಕೆಳಗಿನ ಚಿತ್ರ ಇಷ್ಟಆಯಿತು .. ಈ ಚಿತ್ರದ  ಬಗ್ಗೆ ಮತ್ತೊಮ್ಮೆ ಬರೆಯುತ್ತೇನೆ..

ಯಾಕೋ ಕಾಣೆ ಇಷ್ಟವಾಯಿತು..  ಮುಂದಿನ ದಿನಗಳ ಭವಿಷ್ಯ ಹೇಳುತ್ತಿತ್ತೇ?

ಒಂದು ಬದಿಯಿಂದ ಇನ್ನೊಂದು ಬದಿಗೆ ಹೋಗಲು.. ಒಂದು ಪುಟ್ಟ ಟ್ರಾಮ್ .. ಅದು ಎತ್ತರದಲ್ಲಿ (ಸರಿಯಾದ ಹೆಸರು ಗೊತ್ತಿಲ್ಲ ಹಾಗಾಗಿ ಟ್ರಾಮ್ ಅಂತ ಹೇಳಿದ್ದೀನಿ)

ಹೊಸ ಹೊಸ ಬದಲಾವಣೆಗಳಿಗೆ ಮತ್ತು ವಸ್ತು ಸ್ಥಿತಿಗೆ ಮನಸ್ಸು ಮತ್ತು ದೇಹ ಹೊಂದಿಕೊಳ್ಳುತ್ತಿತ್ತು..

ದೋಹಾದಿಂದ ಫ್ರಾಂಕ್ಫರ್ಟ್  (Frankfurt) ಗೆ ಹೋಗುವ ವಿಮಾನದಲ್ಲಿ ಕುಳಿತಾಗ.. ರಿಮೋಟ್ ಕೆಲಸ ಮಾಡುತ್ತಿತ್ತು.. ಟಚ್ ಸ್ಕ್ರೀನ್ ಆರಾಮಾಗಿತ್ತು.. ಪಕ್ಕದಲ್ಲಿ ಅಕ್ಕ ಪಕ್ಕದಲ್ಲಿ ಇಬ್ಬರೂ ಹುಡುಗರು... ಮನಸ್ಸು ರಿಲಾಕ್ಸ್ ಆಯಿತು..

"ಅಬ್ ತಕ್ ಚಪ್ಪನ್" ಸಿನಿಮಾ ನೋಡಿದೆ.. ನನ್ನ ಚಾರಣ ಸ್ನೇಹಿತ ಯಶದೀಪ್ ಸಂತ್ .. ನನಗೆ ಹೇಳುತ್ತಲೇ ಇದ್ದ.. ಶ್ರೀ ನೀನು ಈ ಸಿನಿಮಾ ನೋಡಬೇಕು ಅಂತ.. ಬಯಸದೆ ಬಂದ ಭಾಗ್ಯ.. ಸಿನಿಮಾ ತುಂಬಾ ಸೊಗಸಾಗಿತ್ತು.. ನಾನಾ ಪಾಟೇಕರ್ ಸಿಕ್ಕಾಪಟ್ಟೆ ಇಷ್ಟ ಆಗ್ತಾರೆ.. ಸೀರಿಯಸ್ ಸಿನಿಮಾ.. ಇಷ್ಟವಾಯಿತು...

ಫ್ರಾಂಕ್ಫರ್ಟ್ ಬಂತು ಅಂತ ಸಂದೇಶ.. ಅಬ್ಬಾ ಅಂತೂ ಬೆಳಿಗ್ಗೆ ಮೂರು ಘಂಟೆಯಿಂದ ಹೊರಟಿದ್ದ ಪಯಣ.. ಇನ್ನೇನು ಮುಗಿಯುವ ಹಂತಕ್ಕೆ ಬಂದಿತ್ತು..

ನಿಧಾನವಾಗಿ ಹೊರಬರಲು ಪ್ರಯತ್ನಮಾಡುತ್ತಿದ್ದ ಚಿಟ್ಟೆಗಳನ್ನು ಮತ್ತೆ ಹೊಟ್ಟೆಯೊಳಗೆ ಅದುಮಿ.. ನನ್ನ ಬ್ಯಾಗ್ ತೆಗೆದುಕೊಂಡು ಫ್ರಾಂಕ್ಫರ್ಟ್ ನಿಲ್ದಾಣದ ಬಾಗಿಲಿಗೆ ಬಂದೆ.. ಅಲ್ಲಿ ಕಂಡ ದೃಶ್ಯ ಮನಸ್ಸೆಳೆಯಿತು... ಜೀವನದಲ್ಲಿ ಕುತೂಹಲಿಗಳಾಗಿ.. ವಾಹ್ ಅದ್ಭುತ ವಾಕ್ಯ... !
ಕುತೂಹಲವೇ ಜೀವನ ಅಲ್ಲವೇ.. ನಾಳೆ ಎಂದು ಎಂಬ ಕುತೂಹಲ!!! 
ತಾಂತ್ರಿಕ ಕಾರಣಗಳಿಂದ ನನ್ನ ಸಿಮ್ ಕೆಲಸ ಮಾಡುತ್ತಿರಲಿಲ್ಲ.. ಹಾಗಾಗಿ  ನಿಲ್ದಾಣದ ವೈಫೈ ಉಪಯೋಗಿಸಿಕೊಂಡು ನನ್ನ ಆತ್ಮ ಸ್ನೇಹಿತ ಜೆ ಎಂ ಗೆ ವಾಟ್ಸಾಪ್ ಕರೆ ಮಾಡಿದೆ.. (ನನ್ನ ಸ್ನೇಹಿತ ಜರ್ಮನಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಇದ್ದಾನೆ.. ಈ ವಿಷಯ ಚಿಟ್ಟೆಗಳು ಹೊಟ್ಟೆಯೊಳಗೆ ಇರಲು ಸಹಾಯ ಮಾಡಿತ್ತು  :-)

ಅಲ್ಲಿಯೇ ಕುಳಿತು.. ನನ್ನ ಜರ್ಮನಿಯ ಆಫೀಸ್ ನಲ್ಲಿ ನನಗೆ ಆಹ್ವಾನವಿತ್ತ ನನ್ನ ಸಹೋದ್ಯೋಗಿಗೆ ಈ-ಮೇಲ್ ಮಾಡಿದೆ.. ಅವರು ತಕ್ಷಣ ಮರು ಪ್ರತಿಕ್ರಿಯೆ ಮಾಡಿದರು.. ಎಲ್ಲಿ ಹೇಗೆ ಬರಬೇಕು ಎಂದು ವಿವರ ಕೊಟ್ಟಿದ್ದರು.. .. ಇಲ್ಲಿಂದ ಹೊರಗೆ ಬಂದು.. ಒಂದು ಜರ್ಮನಿ ಸಿಮ್ ತೆಗೆದುಕೊಂಡು ಹೊರ ಪ್ರಪಂಚದ ಸಂಪರ್ಕ ಪಡೆದೆ..

ನನ್ನ ಜೀವದ ಗೆಳೆಯನ ಜೊತೆಯಲ್ಲಿ ವಿದೇಶದಲ್ಲಿ
"ರುಚಿ" ಎನ್ನುವ ಹೋಟೆಲಿಗೆ ಹೋಗಿ.. ಪುಷ್ಕಳವಾದ ವೆಜ್-ಬಿರಿಯಾನಿ ತಿಂದ ಮೇಲೆ.. ಹೊಟ್ಟೆಯೊಳಗಿನ ಚಿಟ್ಟೆಗಳು ಸುಮ್ಮನಾದವು.. ಫ್ರಾಂಕ್ಫರ್ಟ್ ಇಂದ ಕಾಸೆಲ್ ಎನ್ನುವ ಜಾಗ ೧೯೬ಕಿಮಿ ದೂರ ಇತ್ತು.... ಇಂಟೆರ್ ಸಿಟಿ ಟ್ರೈನ್ ಹತ್ತಿದೆ..

ನನ್ನ ಸ್ನೇಹಿತ ಜೆ ಎಂನನ್ನು ತಬ್ಬಿದೆ...  ಮತ್ತೆ ಶುಕ್ರವಾರ ಸಿಗ್ತೀನಿ ಎಂಬ ಭರವಸೆ ಕೊಟ್ಟು ಟ್ರೈನ್ ಹತ್ತಿದೆ.. ನಮ್ಮ ಕಂಪೆನಿಯವರೇ ತಯಾರು ಮಾಡುವ ಗ್ಯಾಂಗ್-ವೆ ರೈಲಿನಲ್ಲಿದ್ದು ನೋಡಿ... ಅದನ್ನು ಮುಟ್ಟಿ ಸವರಿ ಖುಷಿ ಪಟ್ಟೆ .. ಟ್ರೈನ್ ಒಂದು ಬೋಗಿಯನ್ನು ಇನ್ನೊಂದು ಬೋಗಿಗೆ ಸೇರಿಸುವುದೇ ಈ ಗ್ಯಾಂಗ್-ವೆ  ... ಮಗುವಿನ ಕುತೂಹಲ ನನ್ನಲ್ಲಿತ್ತು.. ಅದನ್ನು ನೋಡಿದೆ.. ಖುಷಿ ಪಟ್ಟೆ.. ಮುಟ್ಟಿದೆ.. ಅದರ ಫೋಟೋ ತೆಗೆದೆ..
ಸುಂದರ ಭೂ ಪ್ರದೇಶ

ಸುಡುತ್ತಿರುವ ಸೂರ್ಯ... ಸಂಜೆ ಆರು ಘಂಟೆ 

ಗ್ಯಾಂಗ್-ವೆ 

೨೦೦ ಕಿಮಿ ವೇಗದಲ್ಲಿ ಸಾಗುತ್ತಿರುವ ರೈಲಿನ ಒಳಗೆ 
ಟ್ರೈನ್ ೨೦೦ ಕಿಮಿ ವೇಗದಲ್ಲಿ ಓಡುತ್ತಿತ್ತು.. ಈ  ವೇಗ ನನಗೆ ಹೊಸದು.. ಗರ ಗರ ಅಂತ ಓಡುತ್ತಿತ್ತು.. ಸುತ್ತಲ ಪ್ರದೇಶ ರಮಣೀಯವಾಗಿತ್ತು.. ಅಲ್ಲಿನ ಸಮಯ ಸುಮಾರು ಐದು ಘಂಟೆ.. ಆದರೆ ಸೂರ್ಯ ನೆತ್ತಿಯ ಮೇಲಿದ್ದ.. ಹೌದು ಬೇಸಿಗೆಯಲ್ಲಿ ದಿನಗಳು ದೀರ್ಘವಾಗಿರುತ್ತವೆ.. ರಾತ್ರಿ ಸುಮಾರು ಹತ್ತರ ತನಕ  ಬೆಳಕು ಇರುತ್ತೆ.. ಬೆಳಿಗ್ಗೆ ಸುಮಾರು ನಾಲ್ಕು ಘಂಟೆಗೆಲ್ಲ ದಿನಕರ ಬಂದಿರುತ್ತಾನೆ..
ಕಾಸೆಲ್ ನಗರದ ನೋಟ 


ನಾ ಉಳಿದಿದ್ದ ಹೋಟೆಲ್ 
ನಿಗದಿಯಾಗಿದ್ದ ಹೋಟೆಲ್ ಕೋಣೆಗೆ ಬಂದಾಗ ಸಂಜೆ ಏಳು ಘಂಟೆಯಾಗಿತ್ತು.. ಜೆ ಎಂ ಕರೆ ಮಾಡಿದ.. ತಲುಪಿದ ಕ್ಷೇಮ ಸಮಾಚಾರಕ್ಕೆ.. ನಾ ಆರಾಮಾಗಿ ಬಂದದ್ದು ಕೇಳಿ ಖುಷಿ ಪಟ್ಟ...

ನನ್ನ ಲಗ್ಗೇಜ್ ಬ್ಯಾಗಿನಲ್ಲಿದ್ದ ಬಟ್ಟೆಗಳನ್ನೆಲ್ಲ ಕಪಾಟಿನಲ್ಲಿಟ್ಟು.. ಮೋರೆ ತೊಳೆದು.. ಹೋಟೆಲಿನ ಹೊರಗೆ ಒಂದು ಪುಟ್ಟ ಸುತ್ತು ಹೊಡೆದು ಬಂದೆ
ಸಂಜೆ ಒಂದು ಸಣ್ಣ ಸುತ್ತು 

ಕೋಣೆಗೆ ಬಂದು ಮನೆಗೆ ಕರೆ ಮಾಡಿದೆ.. ಆಗಲೇ  ಬೆಂಗಳೂರಿನಲ್ಲಿ ರಾತ್ರಿ ಹನ್ನೊಂದು ಆಗಿತ್ತು... ಸವಿತಾ ಮತ್ತು ಶೀತಲ್ ಗೃಹ ಪ್ರವೇಶ ಕಾರ್ಯಕ್ರಮ ಮುಗಿಸಿಕೊಂಡು.. ತಮ್ಮ ಚಿಕ್ಕಪ್ಪ ಮತ್ತು ಅವರ ಮಕ್ಕಳ ಜೊತೆ ಮನೆಗೆ ಬಂದಿದ್ದರು.. ವಿಡಿಯೋ ಕರೆ ಇಬ್ಬರಿಗೂ ಸಂತಸ ತಂದಿತ್ತು.. ಹೋಟೆಲಿನ ಕೋಣೆಯ ಹೊರಗಿನ ದೃಶ್ಯವನ್ನು ತೋರಿಸಿ ಹೇಳಿದೆ.. ಇನ್ನೂ ಕತ್ತಲಾಗಿಲ್ಲ ಎಂದು.. ಅವರಿಗೆ ಖುಷಿ.. ನನಗೂ ಅವರು ಖುಷಿಯಾಗಿರುವುದ ಕಂಡು ಮನಸ್ಸು ನಿರಾಳವಾಯಿತು..

ಇಬ್ಬರದೂ ಒಂದೇ ಮಾತು.. "ಜೋಪಾನ ಹುಷಾರಾಗಿರಿ.. ಹುಷಾರಾಗಿ ಬನ್ನಿ"

ಅವರಿಗೆ ಶುಭರಾತ್ರಿ ಹೇಳಿ.. ಒಂದು ಸೇಬು ಹಣ್ಣನ್ನು ತಿಂದು.. ಮಲಗಿದೆ..

ಬೆಳಿಗ್ಗೆ ನನ್ನ ಆಫೀಸಿನ ಕೇಂದ್ರ ಕಚೇರಿಗೆ ಹೋಗಬೇಕಿತ್ತು.. ಅಲ್ಲಿನ ಸಹೋದ್ಯೋಗಿಗಳ ಭೇಟಿ.. ಅವರೊಡನೆ ಕೆಲಸ.. ನಾ ಇಲ್ಲಿಗೆ ಬಂದಿದ್ದ ಉದ್ದೇಶ.. ಎಲ್ಲವೂ ಕಣ್ಣ ಮುಂದೆ ಬಂತು.. ಅದೇ ಗುಂಗಿನಲ್ಲಿ ಮಲಗಿದೆ.. ಮೆತ್ತನೆಹಾಸಿಗೆ .. ಮಧುರ ನೆನಪುಗಳು... ಬೆಳಿಗ್ಗೆ ಇಂದ ಪಯಣದ ಆಯಾಸ (????) ಎಲ್ಲವೂ ನಿದ್ರಾ ದೇವಿಯನ್ನು ಬರ ಸೆಳೆದು ಅಪ್ಪಿಕೊಳ್ಳಲು ಸಹಾಯ ಮಾಡಿತು...
ಮುಂದಿನ ಕ್ಷಣಗಳಿಗೆ ಕುತೂಹಲಿಯಾಗಿ!!!
ಮುಂದೆ... ಮುಂದೆ... ಐದು ದಿನದ ಸುಂದರ ಕ್ಷಣಗಳನ್ನು ಬಚ್ಚಿಟ್ಟುಕೊಂಡ ಕಪಾಟನ್ನು ತೆರೆಯಲು ಕೀಲಿ ಕೈ ನನ್ನ ಕಣ್ಣ ಮುಂದೆ ಓಡಾಡುತ್ತಿತ್ತು... ಅದು ಕೈಗೆ ಬಂದ ಕ್ಷಣ... !!!!