Monday, November 28, 2016

ಮೊದಲ ಮೊದಲ ಢವ ಢವ .... :-)

"ಬೊಂಬೆಯಾಟವಯ್ಯ.. ಇದು ಬೊಂಬೆಯಾಟವಯ್ಯ.. ನೀ ಸೂತ್ರಧಾರಿ ನಾ ಪಾತ್ರಧಾರಿ ದಡವ ಸೇರಿಸಯ್ಯ" ಅಂದು ಬೆಳಿಗ್ಗೆಯಿಂದ ಅಣ್ಣಾವ್ರ ಈ ಹಾಡು ಬೇಡವೆಂದರೂ ಪದೇ ಪದೇ ತುಟಿಯ ಮೇಲೆ ಬರುತ್ತಲೇ ಇತ್ತು. ಕಾರಣ ಆಗ ಗೊತ್ತಿರಲಿಲ್ಲ, ಆದರೆ ಅದು ಗೊತ್ತಾದ ಹೊತ್ತು.. ವಾಹ್ ಸುಂದರ ಅನುಭವ...

"ನೀ ನನ್ನ ಗೆಲ್ಲಲಾರೆ" ಚಿತ್ರದಲ್ಲಿ ಕ್ಲೈಮಾಕ್ಸ್ ದೃಶ್ಯದಲ್ಲಿ ಪ್ರಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ರಾಜ್ ಅವರಿಗೆ ಸವಾಲು ಹಾಕುತ್ತಾ, "ನೋಡಿದೆಯಾ ಹೇಗಿದೆ ನನ್ನ ಮಾಸ್ಟರ್ ಪ್ಲಾನ್" ಎಂದಾಗ, ಅಣ್ಣಾವ್ರು ತಮ್ಮದೇ ಶೈಲಿಯಲ್ಲಿ "ತಿಪ್ಪೆ ಮೇಲಿರುವ ಹುಳಾನಾ ನುಂಗೋಕೆ ಕಪ್ಪೆ ಬಾಯಿ ಬಿಟ್ಟುಕೊಂಡಿರುತ್ತಂತೆ, ಕಪ್ಪೆನಾ ನುಂಗೋಕೆ ಹಾವು ಕಾಯ್ತಾ ಇರುತ್ತಂತೆ, ಹಾವನ್ನ ಹಿಡಿಯೋಕೆ ಗರುಡ ಹಾರಾಡ್ತಾ ಇರುತ್ತಂತೆ, ಗರುಡನ ಮೇಲೊಬ್ಬ ಕೂತಿರ್ತಾನಂತೆ... ಮಾಸ್ಟರ್ ಪ್ಲಾನ್ ಅವನ್ದು ಕಣೋ.. " ಹಾಗೆ ನಮ್ಮದು ಏನೇ ಪ್ಲಾನ್ ಇದ್ದರೂ, ಕಡೆಯಲ್ಲಿ ನೆಡೆಯುವುದು ಆ ಪರಮಾತ್ಮನ ಪುಸ್ತಕದ ಚಿತ್ರಕಥೆ ಹೇಗಿದೆಯೋ ಹಾಗೆ..

ಈ ಪೀಠಿಕೆಗೆ ಕಾರಣ, ೩ಕೆ ತಂಡ ಆಯೋಜಿಸಿದ್ದ ಕರುನಾಡ ರಾಜ್ಯೋತ್ಸವ ಸಮಾರಂಭಕ್ಕೆ ಸರಿಯಾಗಿ ಮೂರು ಘಂಟೆಗೆ ಅಲ್ಲಿರಬೇಕಿದ್ದ ನಾನು, ಸಮಯ ೨. ೧೫ ಆಗಿದ್ದರೂ ನಾ ಇದ್ದದ್ದು ಅಲ್ಲಿಂದ ಸರಿ ಸುಮಾರು ಐವತ್ತು ಕಿಮಿ ದೂರದಲ್ಲಿರುವ ನನ್ನ ಆಫೀಸ್ನಲ್ಲಿ.. ಹೇಗೋ ತರಾತುರಿಯಲ್ಲಿ ಕೆಲಸ ಮುಗಿಸಿ ನನ್ನ ಬಾಸ್ ಕಾರಿನಲ್ಲಿ ಯಶವಂತಪುರಕ್ಕೆ ಬಂದು ನನ್ನ ಕಾರನ್ನು ತೆಗೆದು ಹೊರಟೆ.. "ಶ್ರೀಕಾಂತಣ್ಣ ನಾ ವಿಜಯನಗರದ ಹತ್ತಿರ ಇದ್ದೇನೆ.. ಈಗ ಹೆಂಗೆ ಹೋಗಬೇಕು".. ತಕ್ಷಣ ಹೇಳಿದೆ "ಒಂದು ಹತ್ತೈದು ನಿಮಿಷ ನೀವು ಇರುವ ಕಡೆಯೇ ಇರಿ ನಾ ಬರುತ್ತಿದ್ದೇನೆ, ಜೊತೆಯಲ್ಲಿಯೇ ಹೋಗೋಣ"..

ಮೊದಲೇ ಹೆದರಿದ್ದವನಿಗೆ ಜೊತೆಗಾರ ಸಿಕ್ಕಿದ್ದು ಸ್ವಲ್ಪ ಸಮಾಧಾನ ತಂದಿತು. ಹೇಳಿದ ಸ್ಥಳದಲ್ಲಿ ಕಾಯುತ್ತಿದ್ದ ಕಡೆ ಹೋಗಿ ಅವರ ಜೊತೆಯಲ್ಲಿ ಸಭಾಂಗಣಕ್ಕೆ ಬಂದಾಗ.. ಆಗಲೇ ಕಾರ್ಯಕ್ರಮ ಶುರವಾಗಿತ್ತು.. ಇತ್ತ ಕಡೆ ಮಗಳು ಆಗಲೇ ಒಂದೆರಡು ಕರೆ, ಸಂದೇಶಗಳನ್ನು ಮಾಡಿ ನನ್ನಲ್ಲಿನ ಎದೆಬಡಿತವನ್ನು ಇನ್ನಷ್ಟು ಹೆಚ್ಚಿಸಿದ್ದಳು.

ಕಾರು ನಿಲ್ಲಿಸಿ, ಅಂಗಣಕ್ಕೆ ಹೋಗಿ, ಯಾರು ಇದ್ದಾರೆ, ಯಾರೂ ಇಲ್ಲ, ಯಾವುದನ್ನು ಗಮನಿಸದೆ, ಸದ್ದಿಲ್ಲದೇ ನನ್ನ ಕ್ಯಾಮೆರಾ ಹಿಡಿದು ಹಿಂದಿನ ಸಾಲಿಗೆ ಹೋಗಿ ತಣ್ಣಗೆ ಕೂತು ಬಿಡುವ ಪ್ಲಾನ್ ಮಾಸ್ಟರ್ ಪ್ಲಾನ್ ನನ್ನದಾಗಿತ್ತು.  ಆದರೆ ಅಣ್ಣಾವ್ರು ಹೇಳುವ ಮಾಸ್ಟರ್ ಪ್ಲಾನ್ ಕತೃ.. ತನ್ನದೇ ಒಂದು ಪ್ಲಾನ್ ಮಾಡಿದ್ದ..

"ಕವನ ವಾಚಿಸಿದ ಕವಿಗೆ ಧನ್ಯವಾದ ಹೇಳುತ್ತಾ.. ಈಗ ಮುಂದಿನ ಕವಿತೆಯನ್ನು ಓದಲು ಬರುತ್ತಿದ್ದರೆ ಶ್ರೀಕಾಂತ್ ಮಂಜುನಾಥ್" ನನ್ನ ಗೆಳೆಯ ಅರುಣ್ ಶೃಂಗೇರಿ ಹಿಡಿದಿದ್ದ ಮೈಕಿಂದ ಹೊರಗೆ ಬಂದ ಮಾತುಗಳನ್ನು ಕೇಳಿ, ಒಮ್ಮೆಲೇ ಗಾಬರಿಯಾಗಿ, ಸ್ವಲ್ಪ ಹೊತ್ತು ಆಮೇಲೆ ಹೇಳುತ್ತೇನೆ ಅಂದೇ. ಆವಾಗ ಅರಿವಾಯಿತು, ನನ್ನ ಸರದಿ ಇನ್ನೂ ಮುಗಿದಿಲ್ಲ, ಹಾಗೆ ಮಾಸ್ಟರ್ ಪ್ಲಾನ್ ನಲ್ಲಿ ನನ್ನ ಸೀನ್ ಇನ್ನೂ ಬಂದಿಲ್ಲ ಅಂತ :-(

ಬಂದಿದ್ದ ಒಂದಷ್ಟು ಗೆಳೆಯರನ್ನು ಮಾತಾಡಿಸಿ, ಒಂದೆರಡು ಫೋಟೋಗಳನ್ನು ಕ್ಲಿಕ್ಕಿಸಿ, ಹೇಗೋ ಕೆಲ ಕ್ಷಣಗಳನ್ನು ತಳ್ಳಿದೆ.. "ಶ್ರೀಕಾಂತ್ ಮಂಜುನಾಥ್ ರವರು ಈಗ ತಮ್ಮ ಕವಿತೆಯನ್ನು ವಾಚಿಸಲಿದ್ದಾರೆ" ಬೇರೆ ಏನೂ ದಾರಿಯಿರಲಿಲ್ಲ, ಈಗ ಮತ್ತೆ ನಖರ ಮಾಡಿದರೆ, ಅಹಂಕಾರವಾಗುತ್ತದೆ.. ಜೊತೆಯಲ್ಲಿ ಅಲ್ಲಿದ್ದ ಮಹಾನ್ ದೈತ್ಯ ಪ್ರತಿಭೆಗಳ ಮುಂದೆ ನಾನು ಏನೂ ಅಲ್ಲಾ.. ಬಭೃವಾಹನದಲ್ಲಿ ಹೇಳುವ ರೀತಿಯಲ್ಲಿ "ತೃಣಕ್ಕೆ ಸಮಾನ" ಆಗಿ ಬಿಡುತ್ತೇನೆ ಎಂದು, ಢವ ಢವ ಗುಟ್ಟುತ್ತಿದ್ದ ಎದೆಯನ್ನು ಒಮ್ಮೆ ಹಾಗೆ ಸವರಿ "ಆಲ್ ವಿಲ್ ಬಿ ವೆಲ್" ಅಂತ ಸಮಾಧಾನ ಹೇಳಿ, ಹೊತ್ತು ತಂದಿದ್ದ ಕವಿತೆಯ ಪ್ರತಿಯನ್ನು ತೆಗೆದುಕೊಳ್ಳಲು ಹೋದೆ.. ಆಗ ಗೆಳೆಯ ಅರುಣ್ "ಶ್ರೀ ನಿಮ್ಮ ಕವಿತೆ ಇಲ್ಲಿದೆ ತೆಗೆದುಕೊಳ್ಳಿ" ಆಗ ಶುರುವಾಯಿತು..

ಹಾಗೆ ಮೇಲೆ ಒಮ್ಮೆ ನೋಡಿದೆ.. ಮಾಸ್ಟರ್ ಪ್ಲಾನ್ ಕತೃ ಹೇಳಿದ "ಲೈಟ್ಸ್, ಕ್ಯಾಮೆರಾ.. ಆಕ್ಷನ್"

"ಎಲ್ಲರಿಗೂ ನಮಸ್ಕಾರ"  ಧ್ವನಿ ನನಗೆ ಕೇಳಲಿಲ್ಲ
"ಶ್ರೀ ಮೈಕ್ ಆನ್ ಮಾಡಿಕೊಳ್ಳಿ".. ಪಕ್ಕದಿಂದ ಅಶರೀರವಾಣಿ ಬಂತು

"ನೋಡಿ ಪ್ರಾಬ್ಲಮ್ ಇಲ್ಲಿಂದ ಶುರುವಾಗಿದೆ.. " ಎಲ್ಲರೂ ಗೊಳ್ ಎಂದು ನಕ್ಕರು..
ಎದೆ ಬಡಿತದ ಒಂದೆರಡು ತಾಳಗಳು ಕಮ್ಮಿಯಾದವು.. ದೀರ್ಘ ಉಸಿರು ಎಳೆದುಕೊಂಡು..
"ನಾ ಮದುವೆ ಆಗುವಾಗಲೂ ಇಷ್ಟು ಹೆದರಿಕೆ ಆಗಿರಲಿಲ್ಲ" ಮತ್ತೆ ಸಭಿಕರು ನಕ್ಕರು..
ಇನ್ನೊಂದೆರಡು ತಾಳಗಳು ಕಮ್ಮಿಯಾದವು..
"ಇದನ್ನು ಓದುವಾಗ.. ನಾ ತೊದಲಿದರೆ, ಗಂಟಲು ಗಟ್ಟಿ ಬಂದರೆ. ಇದು ನನ್ನ ಹೆದರಿಕೆಗಿಂತ.. ನಾ ಆಯ್ದುಕೊಂಡ ವಸ್ತುವಿನ ಭಾರವೇ ಕಾರಣ"

ಮತ್ತೆ ಸಭೆಯಲ್ಲಿ ಲೈಟ್ ಆಗಿ ನಗು ಜೊತೆಯಲ್ಲಿ ಕೆಲವರ ಹುಬ್ಬು ಎರಡನೇ ಮಹಡಿ ಹತ್ತಿತ್ತು .. "ಈ ಪ್ರಾಣಿ ಬ್ಲಾಗ್ ನಲ್ಲಿ ಮಾತ್ರ ಪೀಠಿಕೆ ಅಲ್ಲಾ .. ಮಾತಾಡುವಾಗಲೂ ಹೀಗೆನಾ.. "

ಮುಂದುವರಿಸಿದೆ ....

"ಆಯ್ದುಕೊಂಡ ವಸ್ತು ಮಹಾಭಾರತ.. ಈ ಮಹಾಭಾರತದಲ್ಲಿ ಗಂಗೆ, ಜಲ ಎಷ್ಟು ಪ್ರಾಮುಖ್ಯತೆ ಪಡೆದಿದೆ ಎಂದು ಹೇಳುವ ಒಂದು ಪ್ರಯತ್ನ ನನ್ನದು"




"ಕಮಾನ್ ಶ್ರೀ" ನನಗೆ ದೇವರು ಕೊಟ್ಟ ಸ್ನೇಹಿತೆ ರೂಪ ಸತೀಶ್ ಅವರ ಪ್ರೋತ್ಸಾಹದ ಮಾತುಗಳು, ಸ್ಟೇಜ್ ಇಂದ ನಾನು ಯಾರನ್ನು ನೋಡದೆ ಇದ್ದರೂ, ನನ್ನ ಅದ್ಭುತ ಸ್ನೇಹಿತೆ ನಿವೇದಿತಾ ಚಿರಂತನ ಅವರ ಪ್ರೋತ್ಸಾಹ.. ಇದಕ್ಕಿಂತ ಮಿಗಿಲಾಗಿ ನನ್ನ ಮಡದಿ ಸವಿತಾ.. (ಹೊರಗಡೆ ಒಂದು ಮಣ ಮಾತಾಡುವ ಇವರು.. ಹೇಗೆ ಮಾತಾಡುತ್ತಾರೆ ಎಂಬ ಆತಂಕ ಒಂದು ಕಡೆ, ಇನ್ನೊಂದು ಕಡೆ.. ಈ ಪ್ರಾಣಿ ಏನಾದರೂ ಮಾತಾಡುತ್ತೆ.. ಸರಿಯಾಗುತ್ತೆ ಎನ್ನುವ ವಿಶ್ವಾಸ).. ಜೊತೆಯಲ್ಲಿ "ಅಪ್ಪ ನನ್ನ ಹೀರೋ.. ಯು ಕ್ಯಾನ್ ಡು ಇಟ್.. ಯು ವಿಲ್ ಡು ಇಟ್"  ಎಂದು ಸದಾ ನನಗೆ ಎನರ್ಜಿ ಕೊಡುವ ನನ್ನ ಮಗಳು ಅರ್ಥಾತ್ ನನ್ನ ಸ್ನೇಹಿತೆ ಶೀತಲ್ ಮುಂದಿನ ಸಾಲಿನಲ್ಲಿ ಕೂತಿದ್ದು ನನಗೆ ಆನೆ ಬಲ ಬಂದಷ್ಟು ಆಯಿತು.. ಅಶರೀರವಾಣಿಯಾಗಿ "ಶ್ರೀ ನಾನಿದ್ದೇನೆ ಜೊತೆಯಲ್ಲಿ ಯು ಗೋ ಅಂಡ್ ಹ್ಯಾವ್ ಏ ಬ್ಲಾಸ್ಟ್" ಎಂದ ಅರ್ಪಿತಾ.... ಜೊತೆಯಲ್ಲಿ ನನ್ನ ಕುಟುಂಬ ಸದಸ್ಯರು.. ಇವರ ಜೊತೆಯಲ್ಲಿ ಬಲಗೈನಲ್ಲಿ ಕೈ ಗಡಿಯಾರದ ರೂಪದಲ್ಲಿ ವಿರಾಜಿಸಿದ್ದ ನನ್ನ ಸ್ಫೂರ್ತಿ, ಒಳಗಿನ ಪರಮಾತ್ಮ ನನ್ನ ಅಪ್ಪ..

ಧೈರ್ಯ ಮಾಡಿ ಶುರುಮಾಡಿಯೇ ಬಿಟ್ಟೆ

"ಗಂಗಾಜಲಭಾರತ"

ಕಾಯುತ್ತಿದ್ದ ಶಂತನು
ಒಂದಾಯಿತು ಎರಡಾಯಿತು
ಸಿಗಲೇ ಇಲ್ಲ ಕಂದಮ್ಮನ ಮುದ್ದು ಅಪ್ಪುಗೆ 
ತಡೆಯಲಾಗದ ಶಂತನು 
ಧರೆಗಿಳಿದನು ದೇವವ್ರತ 
ಭಾರತ ಮಹಾಭಾರತವಾಗಲು ಒಂದು ಕುರುಹಾದ
ಗಂಗೆಯ ಕಂದನಾದ ದೇವವ್ರತ
ಅವನ ಮಡಿಲಲ್ಲಿ ಅರಳಿತು ಮಹಾಭಾರತದ ಸಂಸ್ಕೃತಿ!

ಕೊಟ್ಟ ವರವನ್ನು ಮರ್ಕಟ ಮನದ ಕುಂತಿ 
ಇಟ್ಟೆ ಬಿಟ್ಟಳು ಪರೀಕ್ಷೆಗೆ
ನಿಗಿ ನಿಗಿ ಹೊಳೆಯುವ ಕಂದಮ್ಮ 
ದಿನಕರನ ಕೊಡುಗೆಯಾಗಿ 
ಮರದ ತೊಟ್ಟಿಲಿನಲ್ಲಿ ಗಂಗೆಯಲ್ಲಿ ಹೊರಟೇ ಬಿಟ್ಟಿತು
ರಾಧೇಯನಾದ ಕರ್ಣ 
ಭಾರತಕ್ಕೆ ಇನ್ನಷ್ಟು ತೂಕ ಸಿಗುವಂತೆ ಮಾಡಿದ 
ಅವನ ಜನ್ಮದಿಂದ ತೂಗಿತು ಮಹಾಭಾರತದ ಸಂಸ್ಕೃತಿ!

ಪಾಪಿ ಗಂಗೆ ಎಂದು ಕೂಗಿದಳು ಜ್ವಾಲೆ  
(ಅಣ್ಣಾವ್ರ ಬಭೃವಾಹನ ಚಿತ್ರ ನೋಡಿದವರಿಗೆ ಇದು ಗೊತ್ತಿರುತ್ತದೆ.. ಎಂದೇ ಉಪ ಪೀಠಿಕೆ ಹಾಕಿದೆ.. ಮತ್ತೊಮ್ಮೆ ಎಲ್ಲರೂ ನಕ್ಕರು)
ಕುಪಿತಗೊಂಡಳು ಗಂಗೆ 
ಕಾರಣ ಕೇಳಲು ಗಂಗೆ 
ಜ್ವಾಲೆ ಇಟ್ಟಳು ಗಂಗೆಯ ಒಡಲಿಗೆ ಮತ್ಸರದ ಬೆಂಕಿ 
ಒಡನೆ ಮೂಡಿತು ಮತ್ತೊಂದು ಅಸ್ತ್ರ 
ಬಭೃವಾಹನನಿಂದ ಹರಿಯಿತು ಕಿರೀಟಿ ಅಭಿಮಾನದ ವಸ್ತ್ರ 
ಭರತನ ಕಥೆಗೆ ಇನ್ನೊಂದು ಗರಿ ಮೂಡಿತು ಗಂಗೆಯ ಮುನಿಸಿನಿಂದ 
ಆ ಜ್ವಾಲೆಯಿಂದ ನುಗ್ಗಿತು ಮಹಾಭಾರತದ ಸಂಸ್ಕೃತಿ!

ಮಹಾಭಾರತದಲ್ಲಿ ತಮಗರಿವಿಲ್ಲದೆ ಭುವಿಗಳಿದ 
ಜೀವಿಗಳು ಭರತ ವಂಶದ ಕಥೆಗೆ 
ಬಲವಾದ ತಿರುವು ಕೊಡಲು ಕಾರಣವಾಗಿದ್ದು ಜಲ ಸಂಸ್ಕೃತಿ
ತನ್ನ ಒಡಲಿಗೆ ಬಿಟ್ಟ ಯಾವುದೇ ವಸ್ತುವನ್ನು 
ಜತನದಿಂದ ಕಾಪಾಡಿ ಅದಕ್ಕೊಂದು 
ತಿರುವು ನೀಡಿ ಕಥೆಗೆ ಮಹತ್ ಪಾತ್ರ ಕೊಡುವ ಗಂಗೆ 
ಗಂಗಾಜಲ ಸಂಸ್ಕೃತಿ ಕೊಟ್ಟ ತಿರುವು ಭಾರತಕ್ಕೆ ಭಾರವಾಯಿತು!!!

ಉಪಸಂಹಾರ : "ಭೀಷ್ಮ, ಕರ್ಣ, ಬಭೃವಾಹನ ಮಹಾಭಾರತದ ಕತೆಗೆ ಕೊಟ್ಟ ತಿರುವುದು ಬಲು ದೊಡ್ಡದು..
ಈ ಪದ್ಯದ ರೂಪದ ಕವಿತೆಯನ್ನು ಗದ್ಯದ ರೂಪದಲ್ಲಿ ನಾ ಓದಿದ್ದರೆ.. ನನ್ನ ಅನುಭವ ಎಷ್ಟು ದೊಡ್ಡದು ಎಂದು ನೀವೇ ಊಹಿಸಿಕೊಳ್ಳಿ.. ಎಲ್ಲರಿಗೂ ನಮಸ್ಕಾರ"

ಚಪ್ಪಾಳೆಗಳು ಬಿತ್ತು . ಖುಷಿಯಾಯಿತು..

ಕೂತಿದ್ದವರು "ಅಣ್ಣ ಸೂಪರ್ ಅಣ್ಣ ಚೆನ್ನಾಗಿದೆ.. ಚೆನ್ನಾಗಿತ್ತು ಅಂದರು"

ಇನ್ನಷ್ಟು ಖುಷಿಯಾಯಿತು.. ಭಾರವಾಗಿದ್ದ ಮನಸ್ಸು ಹಕ್ಕಿಯ ಹಾಗೆ ಹಾರಾಡ ತೊಡಗಿತು..

(ಕವಿತೆಯನ್ನು ವಾಚನ ಮಾಡುವಾಗ ಅಲ್ಪ ಪ್ರಾಣಗಳು ಮಹಾ ಪ್ರಾಣಗಳು ಬಹಳ ತೊಂದರೆ ಕೊಟ್ಟವು.. ಭಾರತ "ಬಾರತ" ವಾಯಿತು, ಭಾರ "ಬಾರಾ" ವಾಯಿತು, ಭರತ "ಬರತ"ವಾಯಿತು.. ಯಾಕೆ ಗೊತ್ತೇ.. ಅಲ್ಲಿ ನಿಂತು ಓದುವಾಗ, ನನ್ನ ಮಹಾಪ್ರಾಣವೇ ಸ್ವಲ್ಪ ಅಲ್ಪವಾಗಿ ಹೋಗಿತ್ತು :-)

ಈ ಒಂದು ಸುಂದರ ಅವಕಾಶಕ್ಕೆ ಅನುವು ಮಾಡಿಕೊಟ್ಟ ೩ಕೆ ತಂಡಕ್ಕೆ ಮತ್ತೆ ನನ್ನನ್ನು ಪ್ರೋತ್ಸಾಹಿಸಿದ ಮೇಲೆ ಹೆಸರು ಕಾಣಿಸಿದ ಸುಂದರ ಮನದ ಜೀವಿಗಳಿಗೂ.. ಅಣ್ಣಾವ್ರ ಸ್ಟೈಲ್ ನಲ್ಲಿ "ಧನ್ಯವಾದಗಳು"

ಕವಿಗಳಿಗೆ ಅಭಿನಂದನಾ ಪತ್ರ ಕೊಡುವಾಗ ನಾ ಎಲ್ಲರ ಚಿತ್ರ ತೆಗೆಯುತ್ತಿದ್ದೆ, ನನ್ನ ಸರದಿ ಬಂದಾಗ, ನನ್ನ ಕ್ಯಾಮೆರಾ ಅಲ್ಲಿಯೇ ಕೂತಿದ್ದವರಿಗೆ ಕೊಟ್ಟು ನಾ ವೇದಿಕೆಗೆ ಜಂಪ್ ಹೊಡೆದೆ.. ಎದುರಿಗೆ ಪ್ರಖರವಾದ ದೀಪ.. ನನ್ನ ಭ್ರಮೆ, ಯಾರೋ ಫೋಟೋ ತೆಗೆಯುತ್ತಾರೆ ಎಂದು.. ವೇದಿಕೆ ಮೇಲಿದ್ದ ಗಣ್ಯ ವ್ಯಕ್ತಿಗಳು ನನಗೆ ಹಸ್ತ ಲಾಘವ ಕೊಡಲು ಕೈ ಚಾಚಿದರೆ, ಗಾಬರಿಯಾಗಿದ್ದ ನಾನು ಅವರ ಕೈ ನೋಡದೆ, ಫೋಟೋಗೆ ಪೋಸ್ ಕೊಡ್ತಾ ಇದ್ದೆ, ಅಲ್ಲಿ ಫೋಟೋ ತೆಗೆದರೋ ಇಲ್ಲವೋ ಗೊತ್ತಿಲ್ಲ.. ಕ್ಷಣ ಕಾಲ.. ಕವಿ ಬದಲು ಕಪಿಯಾಗಿದ್ದೆ.. .... :-)
ಅಭಿನಂದನಾ ಪಾತ್ರ 
ವೇದಿಕೆಯಿಂದ ಇಳಿದಾಗ.. ಅಲ್ಲಿದ್ದವರು.. ಅಣ್ಣಾ ಅವರು ಶೇಕ್ ಹ್ಯಾಂಡ್ ಮಾಡಲು ಕೈ ಕೊಟ್ಟರೆ.. ನೀವು ಫೋಟೋಗೆ ಪೋಸ್ ಕೊಡ್ತಾ ಇದ್ದೀರಾ. ಅಂತ ಜೋರಾಗಿ ನಗುತ್ತಿದ್ದರು.. ನಾ ನನ್ನ ಹಲ್ಲನ್ನು ಬಿಟ್ಟು ಬಿಡದೆ ಬೇರೆ ದಾರಿಯಿರಲಿಲ್ಲ :-)

ಈ ಕಾರ್ಯಕ್ರಮಕ್ಕೆ ನನ್ನ ಜೊತೆಯಲ್ಲಿ ಒಬ್ಬರು ಬಂದರು ಅಂದೆನಲ್ಲ ಅವರ ಹೆಸರು "ಪ್ರಶಸ್ತಿ ಪ್ರಭಾಕರ್" .. ಈ ಕಾರ್ಯಕ್ರಮ ಮುಗಿದ ಮೇಲೆ ಅನುಭವಕ್ಕೆ ಬಂತು "ಅರೆ ಪ್ರಶಸ್ತಿ ಜೊತೆಯಲ್ಲಿ ನಾ ಬಂದಿದ್ದೇನೆ.. ನನ್ನ ಜೊತೆಯಲ್ಲಿ ಪ್ರಶಸ್ತಿ ಬಂದ ಮೇಲೆ ಅದೇ ನನಗೆ ಸಿಕ್ಕ ಮೊದಲ ಪ್ರಶಸ್ತಿ ಎಂದು ಅರಿವಾಯಿತು... ಈ ಸುಂದರ ಮೊಗದ ನನ್ನ ಲೇಖನದ ಮೂಲಕ ಸರದಾರನಿಗೆ ಧನ್ಯವಾದಗಳು!!!

30 comments:

  1. ಕೆಳಗೆ ಕೂತು ಸ್ಟೇಜ್ ಮೇಲೆ ಹೇಳುವವರ ಸರಿ ತಪ್ಪು ಹೇಳುವುದು ಸುಲಭ, ಸ್ಟೇಜ್ ಮೇಲೆ ನಿಂತು ಕವನ ವಾಚನ ಮಾಡುವುದು ಕಷ್ಟ. ನಿಮ್ಮ ಕಷ್ಟ ನಮಗೆ ಅರ್ಥವಾಗ್ತಾ ಇದ್ರೂ ನಿಮ್ಮನ್ನು ಸುಮ್ಮನೆ ಬಿಡೋಕೆ ಆಗುತ್ಯೇ. ಮೊದಲ ಅನುಭವ ಓದಿ ಮತ್ತೆ ಕಣ್ಮುಂದೆ ನೋಡಿದಂತಾಯಿತು. ನಿಮ್ಮ ಕವಿತೆ ಮತ್ತೆ ನೀವು ಹೇಳಿದ ಶೈಲಿ, ವಿವರಿಸಿದ ಪರಿ, ನಿಮ್ಮ ಆತಂಕ ತೋರಪಡಿಸದೆ ಮಾಡಿದ ಹಾಸ್ಯ, ಅದನ್ನು ವರ್ಣಿಸಿದ ಈ ಬರಹ ಎಲ್ಲವು ಬಹಳ ಇಷ್ಟವಾಯಿತು.

    ReplyDelete
    Replies
    1. ​​ನಿಮ್ಮ ಕಷ್ಟ ನಮಗೆ ಅರ್ಥವಾಗ್ತಾ ಇದ್ರೂ ನಿಮ್ಮನ್ನು ಸುಮ್ಮನೆ ಬಿಡೋಕೆ ಆಗುತ್ಯೇ
      ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ.. ಆದರೂ ಬೆನ್ನು ಬಿಡದೆ ಪ್ರೋತ್ಸಾಹ ನೀಡಿದ ನಿಮಗೆ ಶರಣು.
      ಸುಂದರ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು ಸಿಬಿ

      Delete
  2. Sri,
    Nimmade shailiyalli hmm... alla, nimmade drushtikonadalli karyakrama vivarane haagu nimma moda modala kavana vaachana anubhava .... alli haajaridda nammellarigoo saha nimma vaachana modala anubhava... palithamsha = "Adbhutha". adeshtu chennaagide kavitheyo ashte chennaagi lavalavikeyinda nammellara munde prastuthapadisidri (Elliyoo aatanka kaanalilla :) ).... nimminda innashtu kavana vaachanada nirikshe innu mele :)

    ReplyDelete
    Replies
    1. "ಕಮಾನ್ ಶ್ರೀ " ಈ ಪದಗಳು ನನಗೆ ಸ್ಫೂರ್ತಿ ನೀಡಿದವು. ಸದಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ೩ಕೆ ತಂಡದ ಒಂದು ಮರೆಯದ ಕಾರ್ಯಕ್ರಮಗಳಲ್ಲಿ ನಮ್ಮನ್ನೂ ಸೇರಿಸಿಕೊಂಡು ಹೋಗುವುದು ನಿಮ್ಮ ದೊಡ್ಡತನದ ಗುರುತು. ಮೊದಲ ಮೊದಲ ಢವ ಢವಕ್ಕೆ ಧೈರ್ಯ ತುಂಬಿದ ನಿಮಗೆ ಶರಣು ಮತ್ತು ಸ್ಪೂರ್ತಿದಾಯಕ ಪ್ರತಿಕ್ರಿಯೆಗೆ ಧನ್ಯವಾದಗಳು DFR

      Delete
  3. ಹೌದು ಹೊರಗೆ ಎಷ್ಟು ಬೇಕಾದರೂ ಮಾತನಾಡಬಹುದು, ವೇದಿಕೆಯಲ್ಲಿ ಬೇರೆ ವಿಚಾರಗಳನ್ನು ಮಾತನಾಡಬಹುದು, ಮೊದಮೊದಲು ನಮ್ಮದೇ ಕವನ ವಾಚನ/ ಭಾಷಣವೆಂದರೆ ಹರಸಾಹಸ ಮಾಡಿದಂತೆಯೇ! ಸೊಗಸಾದ ಬರಹ, ಅರ್ಥಪೂರ್ಣ ಕವನ :)

    ReplyDelete
    Replies
    1. ಧನ್ಯವಾದಗಳು ಮೇಡಂ. ಹೌದು ಅಂಕಣದಲ್ಲಿ ನಿಂತಾಗಲೇ ಅದರ ಗಟ್ಟಿತನ ಅರ್ಥವಾಗುವುದು. ಅಂದು ಆ ಅನುಭವ ನನಗಾಯಿತು. ಧನ್ಯವಾದಗಳು ಮತ್ತೊಮ್ಮೆ

      Delete
  4. Replies
    1. ಧನ್ಯವಾದಗಳು ಸೀತಾರಾಮ್ ಸರ್

      Delete
  5. ಹೌದು ನಿಮ್ಮ ಧ್ವನಿಯಲ್ಲಿ ಭಯ ಆವರಿಸಿತ್ತು.... ವೇದಿಕೆಯ ಮೇಲಿನ ಆ ಭಯವನ್ನು ಬಹಳ ವಿನೋದಾತ್ಮಕವಾಗಿ ತೆಗೆದುಕೊಂಡು ಹೋದದ್ದು ಕಂಡು ಖುಷಿಯಾಯಿತು..

    ReplyDelete
    Replies
    1. ಹಹಹ.. ನಗುವಿಲ್ಲದೆ ನಾಕವಿಲ್ಲ ಅಂತಾರೆ ಅಣ್ಣಾವ್ರು.. ಅದನ್ನೇ ತುಸು ಪ್ರಯೋಗಕ್ಕೆ ಒಡ್ಡಿದೆ.. ಧನ್ಯವಾದಗಳು ಪ್ರಕಾಶ ಸರ್

      Delete
  6. Replies
    1. ಧನ್ಯವಾದಗಳು ದಿನಕರ್ ಸರ್

      Delete
  7. ಕವಿತೆಗೆ ತಾವು ಆಯ್ದುಕೊಂಡ ವಸ್ತುವಿನಲ್ಲೇ ತಮ್ಮ ಪ್ರೌಢತೆ ಮತ್ತು ಗ್ರಹಿಕೆ ಅರಿವಾಗುತ್ತಾ ಹೋಗುತ್ತದೆ. ಈ ಬಾರಿ 3K ಸೂಚಿಸಿದ ವಿಷಯದ ಗಂಭಿರತೆ ಮತ್ತು ವಿಸ್ತಾರವೂ ಕವಿಗೆ ನಿಜದ ಸವಾಲೇ ಸರಿ. ನಿಮ್ಮ ಕವನದ ಗಹನತೆಯು ನಮಗೆ ಬಹು ಮೆಚ್ಚಿಗೆಯಾಯಿತು.



    ಕವನದ ಹೂರಣಕ್ಕೆ ತಕ್ಕ ಭಾಷಾ ಪ್ರಯೋಗ ಮತ್ತು ಪೌರಾಣಿಕ ಸ್ಪರ್ಷ ಕವಿತೆಗೆ ಮತ್ತಷ್ಟು ಮೆರಗು ತಂದಿದೆ.



    ಶ್ರೀಮಾನ್ ನಾವೆಲ್ಲ ಗರ್ವ ಪಡುವ ಈ ಕವಿತೆಗಾಗಿ ನಿಮಗೆ ಶರಣು.

    'ಅವನ ಜನ್ಮದಿಂದ ತೂಗಿತು

    ಮಹಾಭಾರತದ ಸಂಸ್ಕೃತಿ!'

    ಭೇಷ್.. ಭೇಷ್..



    (ಕೈ ಪಕ್ಷದ ಅಭ್ಯರ್ಥಿ ಈ ಸರ್ತಿ ತನ್ನ ಹೊಸ ಕೆಲಸದ ಒತ್ತಡದಿಂದ ಗೈರು ಹಾಜರಾಗಿದ್ದಕ್ಕೆ ಸಹೃದಯರು ಯಥಾಪ್ರಕಾರ ಕ್ಷಮಿಸಿಕೊಳ್ಳಬೇಕಾಗಿ ಸಪ್ರೇಮ ವಿನಂತಿ)

    ReplyDelete
    Replies
    1. ಪಾಂಡುರಂಗನ ಬಳಿ ದೂರು ಕೊಡುವ ಅಂತಿದ್ದೆ, ಎಲ್ಲಿ ಬಚ್ಚಿಟ್ಟುಕೊಂಡಿದ್ದೀರಿ, ನಿಮ್ಮ ಕವಿತೆಗಳು, ಪ್ರೋತ್ಸಾಹದ ಮಾತುಗಳು ಬ್ಲಾಗಿಗರಿಗೆ ಸಿಗುತ್ತಿಲ್ಲ.. ಹೊರಗೆ ಬನ್ನಿ ಬದರಿ ಸರ್.. ಜೊತೆಯಲ್ಲಿ ನಾವು ಇದ್ದೇವೆ..

      ವಾಹ್ ಎನ್ನಿಸುವಂತಹ ಪ್ರತಿಕ್ರಿಯೆ.. ಒಳಗಿರುವ ಪರಮಾತ್ಮ ಬರೆಸಿದ.. ಎಲ್ಲವೂ ಆ ಆತ್ಮಕ್ಕೆ "ಅರ್ಪಿತಾ" ಧನ್ಯವಾದಗಳು..

      ಈ ನಿಮ್ಮ ಸಾಲಿಗೆ ಒಮ್ಮೆ ಹಾಗೆ ಹಕ್ಕಿಯ ಹಾಗೆ ಹಾರಿ ಮತ್ತೆ ಕೆಳಕ್ಕೆ ಇಳಿದೆ
      "ಶ್ರೀಮಾನ್ ನಾವೆಲ್ಲ ಗರ್ವ ಪಡುವ ಈ ಕವಿತೆಗಾಗಿ ನಿಮಗೆ ಶರಣು."

      ಧನ್ಯವಾದಗಳು

      Delete
  8. ಸುಂದರವಾದ ವಿಚಾರಪೂರ್ನವಾದ ಕವನ. ಇನ್ನು ಪ್ರಶಸ್ತಿಗಾಗಿ ಅಭಿನಂದನೆಗಳು, ಶ್ರೀಕಾಂತ!

    ReplyDelete
    Replies
    1. ಗುರುಗಳೇ ನೀವು ಹೇಳುವಾ "ಶ್ರೀಕಾಂತಾ" ಕೇಳಲು ಬಲು ಇಷ್ಟ ನನಗೆ. ನಿಮ್ಮ ಪ್ರೋತ್ಸಾಹದಾಯಕ ಮಾತುಗಳು ಎನಗೆ ಆಶೀರ್ವಾದ

      ಧನ್ಯೋಸ್ಮಿ ಗುರುಗಳೇ

      Delete
  9. ಪ್ರಥಮ ಬಾರಿ ವಾಚನ ಮಾಡಿದ ಅನುಭವ ಚೆನ್ನಾಗಿತ್ತು
    ಮುಂದಿನ ಸಾರಿ ಪ್ರಥಮ ಬಂದು ವಾಚನ ಮಾಡುವಂತಾಗಲಿ

    ReplyDelete
  10. Great poem Shri Anna .. Congrats for great and memorable moments

    ReplyDelete
  11. ಮಹಾಭಾರತ ಬರೆದ ಅಣ್ಣಾವರಿಗೂ ಅಭಿನಂದನೆಗಳು

    ReplyDelete
  12. ತುಂಬಾ ತಮಾಷೆಯಾಗಿ ಕವನ ವಾಚಿಸಿದಿರಿ.

    ReplyDelete
  13. Nimma blog naste sundaravagide kavite. Neevu kapi matra (kanya pitru) andukondidde, adre kavi kooda anta gottaytu. J

    ReplyDelete
  14. ಮೊದಲ ಸಲ ನಿಮ್ಮನ್ನು ನೋಡಿದು ...ಆದರೂ ಆತ್ಮೀಯ ನಗು , ಹಾಗು ನಿಮ್ಮ ಕವಿತೆ ಮೆಚ್ಚುಗೆ ಆಯ್ತು.

    ReplyDelete