Tuesday, December 6, 2016

ಕಣ್ಣಂಚಿನ ನೋಟ - 360° ಕೋನದಲ್ಲಿ

ಕಣ್ಣಂಚಿನ ನೋಟ - 90° ಕೋನದಲ್ಲಿ
ಕಣ್ಣಂಚಿನ ನೋಟ - 180° ಕೋನದಲ್ಲಿ
ಕಣ್ಣಂಚಿನ ನೋಟ - 270° ಕೋನದಲ್ಲಿ

ತನ್ನ ಮನಗೆದ್ದ ಹುಡುಗಿ ವೀಣಾ.. ಬಂದಳು.. ನೋಡಿದಳು.. ಮಾತಾಡಿದಳು.. ಒಮ್ಮೆ ಜೋರಾಗಿ ಚಿಗುಟಿಕೊಂಡ.. ಹೌದು ಕನಸಲ್ಲ ಇದು.. ಉದಯ ಮ್ಯೂಸಿಕ್ ನಲ್ಲಿ ಕಿಲಾಡಿಜೋಡಿ ಚಿತ್ರದ "ಕನಸಿನಲಿ ನೋಡಿದೆನು ಕನವರಿಸಿ ಕೂಗಿದೆನು" ಹಾಡು ಬಂದಾಗಲಂತೂ.. ಅರೆ ಕನಸಲ್ಲ ಇದು ನನಸು.. ಎಂದಿತು ಕೃಷ್ಣಕಾಂತನ ಮನಸ್ಸು..

ಹೋದವಾರವಷ್ಟೇ ತಂದಿದ್ದ ನೀಲಿ ಜೀನ್ಸ್ ಪ್ಯಾಂಟನ್ನು ಮನೆಯ ಹತ್ತಿರವಿದ್ದ ಟೇಲರ್ ಬಳಿಕೊಂಡೊಯ್ದು ಉದ್ದ ಸರಿಮಾಡಿಸಿಕೊಂಡು ಬರಲು ಹೊರಟ.. ಮನಸ್ಸು ಹಗುರಾಗಿತ್ತು.. "ನಾಳಿನ ಭಾಗ್ಯಕೆ ಕಾದಿದೆ ಮಡಿಲು" ಬಭೃವಾಹನ ಚಿತ್ರದ ಹಾಡಿನ ಒಂದು ಎಳೆ ಮನದಲ್ಲಿ ಹರಿದಾಡಿತು..  ಬೆಳಿಗ್ಗೆ ಪಾರ್ಕಿನ ಬಳಿ ಮಾತಾಡಿದಾಗಿನಿಂದ .. ಊಟ ತಿಂಡಿ ಏನೂ ಬೇಕಿರಲಿಲ್ಲ.. ಆದರೆ ಎಷ್ಟು ಹೊತ್ತು ಆ ನಶೆಯಲ್ಲಿ ಇರೋಕಾಗುತ್ತೆ ಅಲ್ವೇ.. ಹೊಟ್ಟೆಯಲ್ಲಿದ್ದ ಹುಳಗಳು.. ಬೇಕೇ ಬೇಕು ಊಟ ಬೇಕು ಅಂತ ಕೂಗಲು ಶುರುಮಾಡಿತು..

ಟೇಲರ್ ಅಂಗಡಿಗೆ ಪ್ಯಾಂಟ್ ಕೊಟ್ಟು.. ಹತ್ತು ನಿಮಿಷ ಬರುತ್ತೇನೆ ಎಂದು ಹೇಳಿ. ಹತ್ತಿರದಲ್ಲಿಯೇ ಇದ್ದ ಪಾನಿಪುರಿ ಗಾಡಿಯ ಬಳಿ ಹೆಜ್ಜೆ ಹಾಕಿದ.. ಪಾನಿಪುರಿ ಗಾಡಿಯವನಿಗೆ ಒಂದು ಸಲ್ಯೂಟ್ ಹೊಡೆದ.. "ಸರ್ ನಮಸ್ಕಾರ.. ಒಂದೈದು ನಿಮಿಷ ನಿಮ್ಮ ಬ್ರಾಂಡ್ ರೆಡಿ ಆಗುತ್ತೆ"

ವಾರದಲ್ಲಿ ಕನಿಷ್ಠ ಎರಡು ಮೂರು ಬಾರಿಯಾದರೂ ಅಲ್ಲಿ ಪಾನಿ ಪುರಿ ತಿನ್ನುತ್ತಿದ್ದರಿಂದ ಚಿರಪರಿಚಿತನಾಗಿದ್ದ .. ಮತ್ತೆ ಅದೇ ಗುಂಗಿಗೆ ಶರಣಾದ..ಏನೋ ಒಂದು ರೀತಿಯ ಸುಖ ಸಿಗುತ್ತಿತ್ತು..

"ಸರ್ .. ಗುರುಗಳೇ.. ಯಜಮಾನರೇ.." ಎಂದು ಹೇಳಿ.. ಗಾಡಿಯವ ಅವನ ಕೈ ಮುಟ್ಟಿದಾಗಲೇ.. ಮತ್ತೆ ಭುವಿಗೆ ಬಂದದ್ದು..
ಒಂದು ರಾಶಿ ಮಾತಾಡುವ ಇವರು ಯಾಕೆ ಸೈಲೆಂಟ್.. ಈ ಪ್ರಶ್ನೆ ಗಾಡಿಯವನ ಮನದಲ್ಲಿ ಮೂಡಿದ್ದರೂ, ಸವಿಯಾದ ಪಾನಿಪುರಿ ಕಾಲೇಜು ಯುವತಿಯರ ಬಾಯಲ್ಲಿ ಮಾಯವಾಗುವಂತೆ, ಗಾಡಿಯವನ ಮನದಲ್ಲಿ ಹಾಗೆ ಮರೆಯಾಯಿತು.. ಕಾರಣ ಸಂಜೆ.. ಅವನ ಗಾಡಿಗೆ ಗ್ರಾಹಕರು ಹೆಚ್ಚು.. :-)

ತನ್ನ ಯಥಾಪ್ರಕಾರದ ಖೋಟಾ ಮುಗಿಸಿ.. ಟೇಲರ್ ಅಂಗಡಿಯಿಂದ ಪ್ಯಾಂಟ್ ಪಡೆದು ಮನೆಗೆ ಬಂದ.. ಗಡಿಯಾರ ನೋಡಿದಾಗ ಒಂಭತ್ತು ಮೂವತ್ತಾಗಿತ್ತು.. ತನ್ನ ಇಷ್ಟದ ಕಾರ್ಯಕ್ರಮ "ಥಟ್ ಅಂತ ಹೇಳಿ" ಕಾರ್ಯಕ್ರಮ ನೋಡುತ್ತಾ ಹಾಗೆ ಮಂಚದ ಮೇಲೆ ಉರುಳಿಕೊಂಡ.. ನಿದ್ರಾದೇವಿ ಯಾವಾಗ ಅವರಿಸಿಕೊಂಡಿದ್ದಳೋ ಅರಿವಿಲ್ಲ..

ಬೆಳಿಗ್ಗೆ ಎದ್ದಾಗ ಹತ್ತು ಘಂಟೆ.. ಅಲ್ಲಿಯ ತನಕ ರಾತ್ರಿ ಹಾಕಿದ್ದ ಟಿವಿ ಓಡುತ್ತಲೇ ಇತ್ತು.. ಯಥಾ ಪ್ರಕಾರ .. ತನ್ನ ಕಾರ್ಯಕ್ರಮ ಮುಗಿಸಿ..  ಆಂಜನೇಯ ದೇವಸ್ಥಾನಕ್ಕೆ ಹೋದ.. ಕೆಲ ಹೊತ್ತು ಅಲ್ಲಿಯೇ ಕೂತು ಜಪ ಮಾಡಿಕೊಂಡು ಕಣ್ಣು ತೆಗೆದಾಗ ಮನಸ್ಸು ತಹಬದಿಗೆ ಬಂದಿತ್ತು.. ಚಪ್ಪಲಿ ಮೆಟ್ಟಿಕೊಂಡು ತನ್ನ ಬೈಕ್ ಹತ್ತಿರ ಬಂದಾಗ.. ಒಂದು ಚೀಟಿ ಕನ್ನಡಿಗೆ ಮೆತ್ತಿಕೊಂಡದ್ದು ಕಾಣಿಸಿತು..ಯಾವುದೋ ಜಾಹಿರಾತಿನ ಚೀಟಿ ಎಂದು ಬಿಸಾಕಲು ಹೋದವನಿಗೆ ಕಂಡದ್ದು.. "ಸರ್ .. ಕ್ಷಮಿಸಿ.. ಸಮಯ ಹೇಳೋದು ಮರೆತಿದ್ದೆ.. ಸಂಜೆ ಏಳು ಘಂಟೆಗೆ ನ್ಯೂ ಶಾಂತಿ ಸಾಗರ್ ಹತ್ತಿರ ಬನ್ನಿ.. ಒಂದು ಟೇಬಲ್ ಕಾದಿರಿಸುತ್ತೇನೆ.. "

ಏನಪ್ಪಾ ಇದು... ಏನು ನೆಡೆಯುತ್ತಿದೆ.. ಈಕೆ ಹುಡುಗಿಯೇ.. ಪತ್ತೇದಾರಳೆ.. ಏನೂ ಅರಿವಾಗುತ್ತಿಲ್ಲ.. ಗೊಂದಲದ ಗೂಡಾಗಿದ್ದ ಕೃಷ್ಣಕಾಂತ ಒಮ್ಮೆ ಜೋರಾಗಿ ಉಸಿರು ಒಳಗೆ ತೆಗೆದುಕೊಂಡು ಹೊರಕ್ಕೆ ಹಾಕಿದ.. ತಾಳ್ಮೆ, ಪ್ರಶಾಂತತೆ.. ಯಾವುದೇ ವಿಷಮ ಪರಿಸ್ಥಿತಿಯಲ್ಲೂ ವಿವೇಕದಿಂದ ವರ್ತಿಸುತ್ತಿದ್ದ ಅವನಿಗೆ.. ತನ್ನ ಮನಸ್ಸು ಕೊಂಚ ಗಲಿಬಿಲಿಗೊಂಡಿದ್ದರೂ, ಬೆಳಗಿನ ದೇವಸ್ಥಾನದ ಭೇಟಿ ಅವನಿಗೆ ಹಿತ ನೀಡಿ ಮನಸ್ಸನ್ನು ಶಾಂತಗೊಳಿಸಿತ್ತು

"ನೀರಲ್ಲಿ ಮುಳುಗಿದವನಿಗೆ ಮಳೆಯೇನು ಚಳಿಯೇನು"  ಎಂಬ ಗಾದೆಯಂತೆ, ಅದೇನಾಗುತ್ತೋ ನೋಡಿಯೇ ಬಿಡೋಣ.. ಎಂದು ಯೋಚಿಸುತ್ತಾ ಮನೆಗೆ ಬಂದ..

ಕಚೇರಿಯ ಕೆಲಸ ಒಂದು ಖಂಡುಗ ಇತ್ತು.. ನಿಧಾನಕ್ಕೆ ತನ್ನ ಕೆಲಸದ ಮತ್ತಿನ ಲೋಕಕ್ಕೆ ಜಾರಿದ.. ಮಧ್ಯಾನ್ಹದ ಊಟದ ಅರಿವಿಲ್ಲ... ತನ್ನ ಕೋಣೆಯಲ್ಲಿ ಬೆಳಕು ಕಡಿಮೆಯಾದಾಗಲೇ ಅವನಿಗೆ ಅರಿವಾದದ್ದು.. ಸಂಜೆಯಾಗಿದೆ ಎಂದು!

ಸಮಯನೋಡಿಕೊಂಡ ಸಂಜೆ ೬. ೨೫ ಆಗಿದೆ.. ಅರೆ ಅರೆ ಏನಾಯ್ತು ಇದು.. ಎಂದು ಗಡಿಬಿಡಿಯಿಂದ ಎದ್ದು.. ಮೋರೆ ತೊಳೆದುಕೊಂಡು.. ಆ ಹುಡುಗಿ ಹೇಳಿದ್ದ ಬಿಳಿ ಶರ್ಟ್ ಮತ್ತು ನೀಲಿ ಜೀನ್ಸ್ ತೊಟ್ಟು.. ಉರಿಯುತ್ತಿದ್ದ ದೇವರ ದೀಪಕ್ಕೆ ಇನ್ನಷ್ಟು ಎಣ್ಣೆ ಹಾಕಿ... ದೇವರಿಗೆ ಕೈಮುಗಿದು ಹೊರಟ..

ನ್ಯೂ ಶಾಂತಿಸಾಗರ್ ಹತ್ತಿರ ಬಂದಾಗ ೬.೫೫ ಆಗಿತ್ತು.. ಅಬ್ಬಾ ಇನ್ನೂ ಐದು ನಿಮಿಷ ಇದೆ.. ಸದ್ಯ ಸಮಯಕ್ಕಿಂತ ಮುಂಚೆಯೇ ಬಂದೆ.. ಎಂದು ನಿಡಿದಾದ ಉಸಿರು ಬಿಟ್ಟು ಬೈಕನ್ನು ಪಕ್ಕದಲ್ಲಿಯೇ ನಿಲ್ಲಿಸಿ, ಹೆಲ್ಮೆಟ್ ಸಿಕ್ಕಿಸಿ ಬೀಗ ಹಾಕಿಕೊಂಡು ಹೋಟೆಲ್ ಬಾಗಿಲ ಬಳಿ ನೆಡೆದ..

"ನಮಸ್ಕಾರ್ ಕೃಷ್ಣಕಾಂತ್.. ಹೇಗಿದ್ದೀರಾ.. " ಅಪರಿಚಿತ ಧ್ವನಿಗೆ ಚಕ್ ಅಂತ ಹಿಂದೆ ತಿರುಗಿ ನೋಡಿದ..

ಏಕ್ ದಂ ಅಪರಚತ ವ್ಯಕ್ತಿ.. ಅಪರಿಚಿತ ಧ್ವನಿ..

"ಸರ್ ನೀವು?"

"ಅದೆಲ್ಲಾ ಆಮೇಲೆ .. ಮೊದಲು ಬನ್ನಿ ಒಳಗೆ ಹೋಗೋಣ.. ನಿಮಗಾಗಿ ಒಬ್ಬರು ಕಾಯುತ್ತಿದ್ದಾರೆ.. "

ಹೃದಯ ಬಾಯಿಗೆ ಬಂದಿತ್ತು.. ಯಾರಪ್ಪ ಇದು.. ನೋಡಲು ಚೆಲುವಾಂತ ಚೆನ್ನಿಗನೇ ಆಗಿದ್ದರೂ.. ಇವ ಯಾರೂ ಅನ್ನುವ ಪ್ರಶ್ನೆ.. ಬಸ್ ನಿಲ್ದಾಣಕ್ಕೆ ಬಂದು.. ಯಾವ ಆಟೋ ನಾ ಹೋಗುವ ಜಾಗಕ್ಕೆ ಬರುತ್ತಾನೆ ಎನ್ನುವ ಗೊಂದಲದ ತರಹವೇ ಕೃಷ್ಣಕಾಂತನಿಗೂ ಕಾಡುತ್ತಿತ್ತು..

ಹೃದಯದ ಬಡಿತ ಜೋರಾಗಿಯೇ ನಗಾರಿ ಬಾರಿಸಲು ಶುರುಮಾಡಿತ್ತು..

"ಸರ್ ನೀವು ಯಾರೂ ಅಂತ ಹೇಳಲಿಲ್ಲ.. ಬೇರೇ ಯಾರನ್ನೋ ತಪ್ಪಾಗಿ ತಿಳಿದುಕೊಂಡಿದ್ದೀರಿ ಅನ್ನಿಸುತ್ತದೆ" ಕೃಷ್ಣಕಾಂತ್ ಬಡಬಡಿಸುತ್ತಲೇ ಇದ್ದಾ..

".... .. ನೀವೇ ಕೃಷ್ಣಕಾಂತ್ ತಾನೇ.. ನಾ ಸರಿಯಾಗಿಯೇ ಗುರುತಿಸಿದ್ದೇನೆ.. ಮೊದಲು ಬನ್ನಿ.. "

"ಸರ್.. .ನಾ ಇಲ್ಲಿ ಒಬ್ಬರಿಗೆ ಕಾಯುತ್ತಿದ್ದೇನೆ.. ಅವರು ಬಂದ ಮೇಲೆ ಒಳಗೆ ಹೋಗಬೇಕು.. ನೀವು ಕನ್ಫ್ಯೂಸ್ ಮಾಡಿಕೊಂಡಿದ್ದೀರಾ ಅನ್ಸುತ್ತೆ"

ತುಸು ಗಡಸು ದನಿಯಲ್ಲಿ ಆತ "ಕೃಷ್ಣಕಾಂತ್.. ನೀವು ಬರದೇ ಹೋದರೇ.. ನಾನು ನಿಮ್ಮನ್ನು ಎತ್ತಿಕೊಂಡು ಒಳಗೆ ಹೋಗುತ್ತೇನೆ.. ಕೂಸುಮರಿ ಮಾಡಿಕೊಂಡು.. ನಡೀರಿ ಸರ್ ಒಳಗೆ"

ಬೇರೆ ದಾರಿಯಿಲ್ಲದೆ "ಸರ್.. ಅದು.. ನೋಡಿ.. ದಯವಿ.. ಸರ್.. ಪ್ಲೀಸ್... ಛೆ... ನೋಡಿ ಸರ್.. "

"ಕೃಷ್ಣಕಾಂತ್ ಮಾತು ಆಮೇಲೆ.. ಮೊದಲು ಒಳಗೆ ನೆಡೆಯಿರಿ" ತುಸು ಗದರಿದ ದನಿಯಲ್ಲಿ ಹಾಗೆ ಕೃಷ್ಣಕಾಂತನನ್ನು ತಳ್ಳಿಕೊಂಡೇ ಒಳಗೆ ಹೊರಟ...

ಬೇರೆ ದಾರಿ ಕಾಣದೆ.. ಕೃಷ್ಣಕಾಂತ್ ದೇವರ ಮೇಲೆ ಭಾರ ಹಾಕಿ... ಹೋಟೆಲ್ ಒಳಗೆ ಕಾಲಿಟ್ಟ..

ಟೇಬಲ್ ನಂಬರ್ ೮ ಖಾಲಿ ಇತ್ತು.... . ಮಂದ ಬೆಳಕು ಸ್ಪಷ್ಟವಾಗಿ ಕಾಣುತ್ತಿರಲಿಲ್ಲ.. ನಿಧಾನಕ್ಕೆ ಆ ಟೇಬಲ್ ಕಡೆ ಇಬ್ಬರೂ ಹೆಜ್ಜೆ ಇಟ್ಟರು..

ಕೃಷ್ಣಕಾಂತನಿಗೆ.. ಪಾಪ ಆ ಹುಡುಗಿ ಹೊರಗೆ ಕಾಯುತ್ತಿರುತ್ತಾಳೆ.. ಈ ಮಂಗಮನುಷ್ಯ ನೋಡಿದರೆ ನನ್ನನ್ನು ಯಾರೋ ಅಂದುಕೊಂಡು ಬಲವಂತವಾಗಿ ಕರೆದೊಯ್ಯುತ್ತಿದ್ದಾನೆ..  ಆಕೆಯ ಮೊಬೈಲ್ ನಂಬರ್ ಇದ್ದಿದ್ದ್ರೆ.. ಒಂದು ಸಂದೇಶ ಆದರೂ ಕಳಿಸಬಹುದಿತ್ತು ಛೆ.. ಕೋಪ ಉಕ್ಕುತ್ತಿತ್ತು.. ಆದರೆ ಏನೂ ಮಾಡುವಂತೆ ಇರಲಿಲ್ಲ..

ಟೇಬಲ್ ಎಂಟರಲ್ಲಿ ಒಂದು ಫಲಕ ಇತ್ತು "R E S E R V E D"

"ಕೃಷ್ಣಕಾಂತ್.. ಇಲ್ಲಿಯೇ ಕೂತಿರೀ.. ಎರಡು ನಿಮಿಷ ಬಂದೆ.. "

ಮಾಯಾಬಜಾರ್ ಚಿತ್ರ ನೋಡಿದ ಅನುಭವ.. ಏನಾಗುತ್ತಿದೆ ಅರಿವಾಗುತ್ತಿಲ್ಲ.. ಏನಾಗಬೇಕಿತ್ತೋ ಆಗುತ್ತಿಲ್ಲ  .. ಪಾಪ ಆ ಹುಡುಗಿ ಹೊರಗೆ ಕಾಯುತ್ತಿರುತ್ತಾಳೆ.. ಓಕೆ ಓಕೆ ಈ ವ್ಯಕ್ತಿ ಬಂದ ಕೂಡಲೇ ಸ್ವಲ್ಪ ದಬಾಯಿಸಿ.. ಹೊರಟು ಬಿಡಬೇಕು.. ಪಾಪ ಆ ಹುಡುಗಿಯನ್ನು ಕಾಯಿಸುವುದು ಸರಿಯಲ್ಲ.. ಮನಸ್ಸನ್ನು ಸಿದ್ಧಮಾಡಿಕೊಂಡು ಒಂದು ಲೋಟ ನೀರು ಕುಡಿದು.. ಸುಮ್ಮನೆ ಕುಳಿತಿದ್ದ..

ಒಂದೆರಡು  ಕ್ಷಣಗಳು ಯುಗಗಳ ತರಹ ಉರುಳಿತು ..

".. ನಮಸ್ಕಾರ ಕೃಷ್ಣಕಾಂತ್ ಹೇಗಿದ್ದೀರಾ"

ಕೋಗಿಲೆ ಧ್ವನಿ.. ನಾ ಕೇಳಿದ ಧ್ವನಿ.. ತಾನಿಷ್ಟ ಪಟ್ಟ ಧ್ವನಿ ..

ಕುತ್ತಿಗೆ ನೋವಾಗುತ್ತೆ ಎಂದು ಗೊತ್ತಿದ್ದರೂ.. ೨೭೦ ಡಿಗ್ರಿ ತಿರುಗಿದ...

ಕಣ್ಣು ಊರಗಲವಾಯಿತು.. ಮೈ ಮೆಲ್ಲನೆ ಬೆವರಲು ಶುರುಮಾಡಿತು.. ಅಯ್ಯೋ ಈ ಹುಡುಗಿ ಯಾರನ್ನೋ ಕರೆತಂದಿದ್ದಾಳೆ.. ಏನೂ ಗ್ರಹಚಾರವೋ ನಾನೇಕೆ ಒಪ್ಪಿಕೊಂಡೆ ಇಲ್ಲಿಗೆ ಬರಲು.. ಅರೆ ನಾನೆಲ್ಲಿ ಒಪ್ಪಿಕೊಂಡೆ.. ಅವಳು ಹೇಳಿದಳು.. ನಾ ಕುರಿಯಂತೆ ಇಲ್ಲಿಗೆ ಬಂದಿದ್ದೇನೆ.. ಛೆ ಯೋಚಿಸಬೇಕಿತ್ತು.. ದುಡುಕಿಬಿಟ್ಟೆ..ಸುತ್ತಮುತ್ತಲು ಒಳ್ಳೆ ಘನತೆ ಗೌರವ ಕಾಪಾಡಿಕೊಂಡಿದ್ದೇನೆ... ಈಗ ಏನಾಗುತ್ತೋ.. ಗಣಪ.. ನನ್ನ ಮಾನ ಮರ್ಯಾದೆ ಎಲ್ಲವೂ ನಿನ್ನ ಕೈಯಲ್ಲಿ.. ಒಂದೆರಡು ಅರೆ ಘಳಿಗೆಗಳಲ್ಲಿ ಕಣ್ಣು  ಮುಚ್ಚಿ ಹಾಗೆ ಧ್ಯಾನಿಸಿದ...

"ವೀಣಾ.. ಇವರೇ ನಿನ್ನನ್ನು ಕಾಡುತ್ತಿದ್ದ ಕೃಷ್ಣಕಾಂತ್.. .. ಏನ್ರಿ.. ನಮ್ಮ ಹುಡುಗೀನೇ ಬೇಕಿತ್ತಾ ನಿಮಗೆ.. ನಿಮಗೆ ಸ್ವಲ್ಪವೂ ಬೇಸರವಾಗುವುದಿಲ್ಲವೇ.. ಏನ್ರಿ ಆಗಿಂದ ನೋಡುತ್ತಿದ್ದೇನೆ.. ಏನೂ ಮಾತಾಡುತ್ತಿಲ್ಲ.. ದಿನಾ ಕಣ್ಣರಳಿಸಿಕೊಂಡು ನೋಡೋಕೆ ಆಗುತ್ತೆ.. ಮಾತಾಡೋಕೆ ಆಗೋಲ್ವಾ.. ಸುಮ್ಮನೆ ಯಾಕ್ರೀ ಕೂತಿದ್ದೀರಾ ಮಾತಾಡ್ರಿ ಕೃಷ್ಣಕಾಂತ್.. " ತೀಕ್ಷ್ಣ ನುಡಿಗಳು ಮೊದಲೇ ಗಾಬರಿಯಾಗಿ ಜೇನುಗೂಡಾಗಿದ್ದ ಮನಸ್ಸು..  ಕಲ್ಲು ಬಿದ್ದ ಜೇನು ಗೂಡಾಗಿತ್ತು..

ಬಾಯಲ್ಲಿ ನೀರಿನ ಪಸೆ .. ಕೆ ಆರ್ ಎಸ್ ಅಣೆಕಟ್ಟಿನ ರೀತಿಯಲ್ಲಿ ಒಣಗಿದ ವಾಟೆಗರಿಯಾಗಿತ್ತು.. ನಾಲಿಗೆಯಿಂದ ತುಟಿಯನ್ನು ಒಮ್ಮೆ ಸವರಿಕೊಂಡು .. ಸುತ್ತಲೂ ನೋಡಿದ.. ಯಾರೂ ಗಮನಿಸುತ್ತಿಲ್ಲ ಎಂದು ಅರಿತ ಮೇಲೆ.. ಟೇಬಲ್ ಮೇಲಿದ್ದ ನೀರಿನ ಲೋಟವನ್ನ ಎತ್ತಿಕೊಳ್ಳಲು ಹೋದ..

"ಸರ್ ಕ್ಷಮಿಸಿ.. ನೀವು  ಗಾಬರಿಯಾಗಿದ್ದೀರಾ.. ದಯಮಾಡಿ ಕ್ಷಮಿಸಿ.. ಇವರು ಸುಮ್ಮನೆ ನಿಮ್ಮನ್ನು ಗೋಳು ಹುಯ್ದುಕೊಳ್ಳುತ್ತಿದ್ದಾರೆ.. ತಗೋಳಿ ನೀರು ಕುಡಿಯಿರಿ.. " ಜೇನುದನಿ ಬಂದ ಕಡೆ ಮತ್ತೆ ಕಣ್ಣು ಅರಳಿಸಿದ..

ಇಬ್ಬರೂ ಜೋರಾಗಿ ನಗಲು ಶುರುಮಾಡಿದರು.. ಇಬ್ಬರೂ "ಕೃಷ್ಣಕಾಂತ್ ದಯಮಾಡಿ  ಕ್ಷಮಿಸಿ.. ಇದು ಇವಳದೆ ಪ್ಲಾನ್.. ನಮ್ಮನ್ನು ಕ್ಷಮಿಸಿ.. ಪ್ಲೀಸ್ ರಿಲ್ಯಾಕ್ಸ್ ಆಗಿ.. ಕಾಫಿ ಹೇಳಲೇ.. ನಿಮಗೆ"

ಪೇಲವ ನಗೆ ಬಿಸಾಕಿ "ಹೂ ಸರ್" ಎಂದ ಕೃಷ್ಣಕಾಂತ್..

"ಓಕೆ.. ವಿಷಯಕ್ಕೆ ಬರುತ್ತೇನೆ.. ನೋಡಿ ಕೃಷ್ಣಕಾಂತ್.. ನಾನು ರೇವ್.. ಸಾರಿ ರೇವಂತ್ ಅಂತ.. ಇವಳಿದ್ದಾಳಲ್ಲ ಇವಳ ತರಲೆ ಸಹಿಸಿಕೊಳ್ಳಲು ಈಕೆಯನ್ನು ಕೈ ಹಿಡಿಯುತ್ತಿರುವವನು.. ಇನ್ನೂ ಎಷ್ಟು ಕೀಟಲೆ ಸಹಿಸಿಕೊಳ್ಳಬೇಕು ಗೊತ್ತಿಲ್ಲ.. ನೀವು ಒಡವೆ ಅಂಗಡಿಯಿಂದ ಇವಳು ಹೊರಬಂದಿದ್ದನ್ನು ನೋಡಿದ್ದಿರಲ್ಲ.... ನೋಡಿ ಈ ಉಂಗುರ ತರಲು ಹೋಗಿದ್ದಳು.. ಇದು ನಮ್ಮಿಬ್ಬರ ನಿಶ್ಚಿತಾರ್ಥದ ಸಂಕೇತ.. ಇನ್ನೊಮ್ಮೆ ತರಕಾರಿ ಅಂಗಡಿಯ ಬಳಿ ಸಿಕ್ಕಾಗ.. ಮಿಂಚಿನಂತೆ ಬಂದು ಮಾಯವಾಗಿದ್ದಳಲ್ವ.. ಅಂದು ನಮ್ಮಿಬ್ಬರ ನಿಶ್ಚಿತಾರ್ಥದ ಹಿಂದಿನ ದಿನವಾಗಿತ್ತು.. ಇವಳ ಮನೆಯಲ್ಲಿಯೇ ಆ ಕಾರ್ಯಕ್ರಮ ನೆಡೆದಿತ್ತು  ಆದ್ದರಿಂದ..ಕಡೆ ಘಳಿಗೆಯಲ್ಲಿ ಅಡಿಗೆ ಭಟ್ಟರು ಹೇಳಿದ ಕೆಲವು ತರಕಾರಿಗಳನ್ನು ತರಲು ಇವಳು ಬಂದಿದ್ದಳು.. ಮತ್ತು ಸೀರೆಗೆ ಜಿಗ್ ಜಾಗ್, ಕುಚ್ಚು ಕಟ್ಟಲು ಕೊಟ್ಟಿದ್ದು, ಬ್ಲೌಸ್ ಅದಕ್ಕೆ ಹೊಂದುವಂತಹ ಬಳೆಗಳು ಇದನ್ನೆಲ್ಲಾ ತರಲು ಹೋಗಿದ್ದಳು.. ಅವಾಗ ನೀವು ಅಚಾನಕ್ ಇವಳ ಎದುರಿಗೆ ಬಂದಿರಿ.. ಆದರೆ ಇಬ್ಬರಿಗೂ ಆ ಮಂದಬೆಳಕಲ್ಲಿ ಏನು ಮಾಡಬೇಕು ಎಂದು ತೋಚದೆ.. ನಿಮ್ಮ ಪಾಡಿಗೆ ನೀವು ಹೋದಿರಿ.. ಅವಳ ಪಾಡಿಗೆ ಅವಳು ಹೋದಳು.."

ಮಂತ್ರ  ಮುಗ್ಧನಾಗಿ ಕೇಳುತ್ತಲೇ ಇದ್ದಾ ಕೃಷ್ಣಕಾಂತ್..

"ಆಮೇಲೆ.. ಸುಮಾರು  ದಿನಗಳು ನಿಮಗೆ ಇವಳು ಕಾಣಲಿಲ್ಲ .. ಇವಳಿಗೆ ನೀವು ಕಾಣಲಿಲ್ಲ.. ಕಾರಣ.. ಇವಳ ಆಫೀಸ್ ವಿಳಾಸ ಬದಲಾಗಿದ್ದು. .. ಕೆಲಸ ಒತ್ತಡ ಹೆಚ್ಚಿದ್ದು.. ಜೊತೆಯಲ್ಲಿ ನಮ್ಮಿಬ್ಬರ ಓಡಾಟ.. ಇವೆಲ್ಲವೂ ನಿಮ್ಮ ಕಣ್ಣಿಂದ  ಈ ಸುಂದರಿಯನ್ನು ಕೊಂಚ ದೂರ ಇರಿಸಿತ್ತು.. ಹಾಗೆಯೇ ಈ ಸುಂದರಿಯೂ ಕೂಡ ನಿಮ್ಮನ್ನು ಮಿಸ್ ಮಾಡಿಕೊಂಡದ್ದು ಇದೆ ಕಾರಣಕ್ಕೆ.. ಇಂದು ನಾವು ಮೂವರು ಒಂದೇ ಸೂರಿನಡಿ ಕೂತಿದ್ದೇವೆ.. ಈಗ ನನ್ನ ಮಾತು ಮುಗಿಯಿತು.. ನಿಮ್ಮ ಸರದಿ.. "

ರೇವಂತ್ ಉಫ್ ಇಂದು ಉಸಿರು ಬಿಟ್ಟು.. ಒಂದು ಲೋಟ ತಣ್ಣಗಿನ ನೀರನ್ನು ಗಟಗಟ ಕುಡಿದು.. ವೀಣಾಳ ಕಡೆ ನಗೆ ಬೀರಿ ಕಣ್ಣು ಹೊಡೆದ..

"ಸರ್.. ನಾ.. ಏನೂ.... ಹೇಗೆ.. ಛೆ.. ಉಫ್.. ಏನೂ ಗೊತ್ತಾಗು.. ಛೆ.. "

"ಕೃಷ್ಣಕಾಂತ್.. ದಯಮಾಡಿ ಗಾಬರಿ ಮಾಡಿಕೊಳ್ಳಬೇಡಿ.. ನಿಮ್ಮ ಗೊಂದಲ ನನಗೆ ಅರ್ಥವಾಗುತ್ತೆ.. ಇದೆಲ್ಲ ನಾ ಇವರಿಗೆ ಹೇಳಿದ್ದೆ.. ಗಾಬರಿ ಮಾಡಿಕೊಳ್ಳಬೇಡಿ.. ನಿಮ್ಮ ಬಗ್ಗೆ ಎಲ್ಲವನ್ನು ಹೇಳಿದ್ದೇನೆ.. ನಿಮ್ಮ ನಡೆನುಡಿ ನನಗೆ ಇಷ್ಟವಾಗಿದೆ.. ನಿಮ್ಮಂತಹ ಅದ್ಭುತ ವ್ಯಕ್ತಿಯ ಸ್ನೇಹದ ವಲಯದಲ್ಲಿ ನಾನಿರಬೇಕು ಎಂದು ಬಯಸುತ್ತೇನೆ.... ಛೆ.. ನಾವಿಬ್ಬರೂ ಬಯಸುತ್ತೇವೆ.. ನಿಮ್ಮ ಸ್ನೇಹದ ಬಂಧನ ನಮಗೆ ಸಿಗಬಹುದೇ.. "

ಕೃಷ್ಣಕಾಂತನಿಗೆ ಏನೂ ಹೇಳಬೇಕೋ ತೋಚದೆ.. ಸುಮ್ಮನೆ ಕೂತುಕೊಂಡ.. ಇನ್ನೊಂದು ಲೋಟ ನೀರು ಒಳಗೆ ಹೋಯಿತು..

ಅಷ್ಟರಲ್ಲಿ ಕಾಫಿ ಬಂತು.. ಗಾಬರಿಗೊಂಡಿದ್ದ ದೇಹ.. ಹೋಟೆಲಿನ ಎಸಿ.. ಕೊಂಚ ತಲೆನೋವು ತಂದಿತ್ತು.. ಕಾಫಿ ಕುಡಿದು ಮತ್ತೊಮ್ಮೆ ನೀರನ್ನು ಕುಡಿದು.. ಜೋರಾಗಿ ನಿಟ್ಟುಸಿರು ಬಿಟ್ಟ..

ವೀಣಾ ಮತ್ತು ರೇವಂತ್ ಮುಸಿ ಮುಸಿ ನಗುತ್ತಲೇ ಇದ್ದರು..

"ಕೃಷ್ಣಕಾಂತ್.. ನಿಮ್ಮ ಗೊಂದಲ ನಮಗೆ ಅರ್ಥವಾಗುತ್ತೆ.. ನೋಡಿ.. ನಾವಿಬ್ಬರೂ ಯಾಕೆ ಇಷ್ಟು ಓಪನ್ ಮೈಂಡೆಡ್ ಅಂದ್ರೆ..ನಮ್ಮಿಬ್ಬರ ಮಧ್ಯೆ ನಮಗೆ ನಂಬಿಕೆ ಇದೆ.. ಅಪಾರ ನಂಬಿಕೆ ಇದೆ.. ನಮಗಿಬ್ಬರಿಗೂ ನಮ್ಮ ಮೇಲೆ ನಂಬಿಕೆ ಇದೆ.. ತಪ್ಪು, ಅನುಮಾನ, ಸಂಶಯ, ದುರಾಸೆ, ಶಂಕೆ ಇದು ಯಾವುದೂ ನಮಗೆ ಗೊತ್ತಿಲ್ಲ.. ಪ್ರೀತಿಯೇ ನಮ್ಮುಸಿರು ಇದು ನಮ್ಮ ಬಾಳಿನ ಧ್ಯೇಯ.. ಒಂದು ವರ್ಷದಿಂದ ನೀವು ಇವಳನ್ನು ನೋಡುತ್ತಿದ್ದರೂ, ಒಮ್ಮೆಯೂ ಕೆಟ್ಟ ನೋಟದಿಂದ ನೀವು ನೋಡಿಲ್ಲ ಎಂದು ಇವಳೇ ಹಲವಾರು ಬಾರಿ ಹೇಳಿದ್ದಾಳೆ .. ಜೊತೆಯಲ್ಲಿ ಇವಳು ಕೂಡ ನಿಮ್ಮ ಬಗ್ಗೆ ಆಗಾಗ ಏನು ಬಂತು.. ನಾವು ಭೇಟಿಯಾದಾಗೆಲ್ಲ ನನಗೆ ಹೇಳುತ್ತಲೇ ಇದ್ದಳು.. ಹಾಗಾಗಿ ನಿಮಗೆ ಅರಿವಿಲ್ಲದೆ .. ಎಷ್ಟೋ ದಿನ ನಾ ಕೂಡ ನಿಮ್ಮನ್ನು ಗಮನಿಸಿದ್ದೇನೆ.. ಸಂಜೆ ನೀವು ಆಫೀಸಿನಿಂದ ಮನೆಗೆ ಬರುವಾಗ.. .. ನೀವು ಎಲ್ಲರನ್ನು ಹಾಗೆ ಗಮನಿಸುವುದಿಲ್ಲ ಎಂದು ತಿಳಿಯಿತು..  ನಿಮ್ಮ ಸುತ್ತಲ ಮುತ್ತಲ ಪ್ರದೇಶದಲ್ಲಿ ನಿಮ್ಮ ಬಗ್ಗೆ ಒಳ್ಳೆಯ ಬಹಳ ಒಳ್ಳೆಯ ಅಭಿಪ್ರಾಯವಿದೆ ಎಂದು ಈ ಬಡಾವಣೆಯ ಜನರಿಂದ ತಿಳಿಯಿತು.. .. ಇದೆಲ್ಲ ತಿಳಿದ ಮೇಲೆ, ವೀಣಾ ಕೂಡ ನಿಮ್ಮಂತಹ ಸ್ನೇಹಿತ ನಮ್ಮ ಬಾಳಿನಲ್ಲಿ ಇದ್ದರೇ  ಚೆನ್ನಾ ಅಂದಳು.. ನನಗೆ ನಾವು ಮೂವರು ಒಂದು ಅದ್ಭುತ ಸ್ನೇಹಿತರಾಗಬಹುದು ಎನ್ನಿಸಿತು.. ಹಾಗಾಗಿ ನೀವು ಇಲ್ಲಿದ್ದೀರಿ.. " ಎಂದು ತಮ್ಮ ಹೃದಯವನ್ನು ಮುಟ್ಟಿ ತೋರಿಸಿದಾಗ... ಕೃಷ್ಣಕಾಂತ್ ಮೂಕವಿಸ್ಮಿತನಾಗಿದ್ದ..

ವೀಣಾ ತನ್ನ ಕುರ್ಚಿಯಿಂದ ಎದ್ದು .ಕೈ ಚಾಚಿ . "ಕೃಷ್ಣಕಾಂತ್ ನಮ್ಮ ಸ್ನೇಹದ ಬಂಧನಕ್ಕೆ ಸ್ವಾಗತ ಶುಭ ಸ್ವಾಗತ.."  ಎಂದಾಗ ಅರಿವಿಲ್ಲದೆ ತನ್ನ ಕೈಯನ್ನು ಚಾಚಿದ.. ಪುಸಕ್ ಅಂತ ರೇವಂತ್ ಕೃಷ್ಣಕಾಂತನ ಕೈ ಎಳೆದುಕೊಂಡು "ಒಯೆ ಇವನು ನನ್ನ ಸ್ನೇಹಿತ.. ಅಲ್ವೇನೋ ಕಾಂತಾ"

ಸೋಲೊಪ್ಪಿಕೊಳ್ಳದ ವೀಣಾ "ಕಾಂತಾ ನಾ ತಾನೇ ನಿನ್ನ ಮೊದಲು  ನೋಡಿದ್ದು.. ಹಾಗಾಗಿ ನಾನೇ ತಾನೇ ನಿನ್ನ ಮೊದಲ ಸ್ನೇಹಿತೆ.. "

ಮಕ್ಕಳ ಜಗಳ ಕೃಷ್ಣಕಾಂತನಿಗೆ ಮಜಾ ಕೊಡುತ್ತಿತ್ತು..

ಇಷ್ಟು ಹೊತ್ತಾದರೂ.. ಪೂರ್ಣವಾಗಿ ಮಾತಾಡಲು ಅವಕಾಶ ಸಿಕ್ಕದ ಕೃಷ್ಣಕಾಂತ್ ಧೈರ್ಯ ಮಾಡಿ.. ವೀಣಾಳ ಕೈಯನ್ನು ಹಿಡಿದುಕೊಂಡು.. ಅದರ ಮೇಲೆ ರೇವಂತ್ ಕೈ ಇಟ್ಟು. "ವೀಣಾ- ರೇವಂತ್ ಇಂದಿನಿಂದ ನಾವು ಒಂದೇ ಪ್ರಾಣ.. ಮೂರು ದೇಹ .. ನಿಮಗಿಬ್ಬರಿಗೂ ಶುಭವಾಗಲಿ.. ಮದುವೆಗೆ ಈ ನಿಮ್ಮ ಸ್ನೇಹಿತನ ಕರೆಯೋದು ಮರೆಯಬೇಡಿ.. "

ಅಚಾನಕ್ ಕೃಷ್ಣಕಾಂತ್ ಅಷ್ಟೊಂದು ಸಲುಗೆಯಿಂದ ಮಾತಾಡಿದ್ದು ವೀಣಾ ಮತ್ತು ರೇವಂತ್ ಇಬ್ಬರಿಗೂ ಆಶ್ಚರ್ಯವಾಯಿತು.. ಆದರೂ ಕೃಷ್ಣಕಾಂತನ ಸ್ನೇಹಪರ ಮನಸ್ಸು ಅರಿತಿದ್ದ ಇಬ್ಬರಿಗೂ ಅವನ ಮಾತು ಮತ್ತು ಕೃತಿ ಮೆಚ್ಚುಗೆಗೆ ಪಾತ್ರವಾಯಿತು..

"ಹೌದು ರೇವಂತ್.. ಒಂದು ಮಾತು ನಿನ್ನಲ್ಲಿ.. ಮುಚ್ಚು ಮರೆಯಿಲ್ಲದೆ ಹೇಳುತ್ತೀಯಾ"

"ಹಾ ಕೃಷ್ಣಕಾಂತ್.. ನಿನ್ನ ಪ್ರಶ್ನೆ ನನಗೆ ಗೊತ್ತು .. ವೀಣಾಳನ್ನು ಮದುವೆಯಾಗುವ ಗಂಡು ನಾನು.. ನನಗೆ ಏಕೆ ನಿನ್ನ ಮೇಲೆ ಅನುಮಾನ, ಅಸೂಯೆ ಬರದೆ.. ನಿನ್ನನ್ನು ಸ್ನೇಹಿತನಂತೆ ಕಾಣುತ್ತಿದ್ದೇನೆ ಎನ್ನುವ ಸಂದೇಹ ತಾನೇ.. ನೋಡು.. ನನಗೆ ವೀಣಾಳ ಬಗ್ಗೆ ನನ್ನ ಪರಿಚಯಿಸ್ಥರಿಂದ ತಿಳಿದಿತ್ತು.. ಅವಳು ಹೇಗೆ.. ಅವಳ ಮಾತುಕತೆ ಹೇಗೆ.. ಎಲ್ಲವೂ ತಿಳಿದಿತ್ತು.. ಅವಳ ರೂಪಕ್ಕೆ ಅಷ್ಟೇ ಅಲ್ಲಾ ನಾ ಮರುಳಾಗಿದ್ದು.. ಅವಳ ಗುಣಕ್ಕೂ ಮಾರುಹೋಗಿದ್ದೆ.. ಮದುವೆ ಆದರೆ ಇವಳನ್ನೇ ಎಂದು ನಿರ್ಧರಿಸಿದೆ..ನಾನು ಈ ನಿರ್ಧಾರಕ್ಕೆ ಬಂದ ಮೇಲೆ ಅಲ್ಲಿ ಸಂಶಯಕ್ಕೆ ಅವಕಾಶವೇ ಇಲ್ಲ ಅಲ್ಲವೇ.. ನಿನ್ನ ಬಗ್ಗೆ ತಿಳಿಯಬೇಕಾದರೆ ನಾ ಬಹಳ ಶ್ರಮ ಪಡಬೇಕಾಯಿತು ಕಾರಣ.. ನೀ ಯಾರು ಎಂದು ತಿಳಿಯುದಕ್ಕಿಂತ ನೀ ಹೇಗೆ ಎಂದು ತಿಳಿಯಬೇಕಿತ್ತು. ಬಡಾವಣೆಯ ಸಮಿತಿಯ ಕಾರ್ಯಕ್ರಮದ ಬಗ್ಗೆ ಭಾಗವಹಿಸಲು ವೀಣಾ ಹೋಗಿದ್ದಳು.. ಆಗ ನಾ ಅವಳ ಮನೆಗೆ ಬಂದಿದ್ದೆ.. ಅವಳನ್ನು ಹುಡುಕಿಕೊಂಡು ಬಡಾವಣೆಯ ಸಮಿತಿಯ ಸದನಕ್ಕೆ ಬಂದಾಗ.. ನೀ ನೆಡೆದುಹೋಗುತ್ತಿರುವುದು ಕಂಡು ಬಂತು.. ಅಲ್ಲಿದ್ದ ಅಧ್ಯಕ್ಷರು ನಿನ್ನ ಬಗ್ಗೆ, ನಿನ್ನ ವ್ಯಕ್ತಿತ್ವದ ಬಗ್ಗೆ ಕೆಲವು ಮಾತನ್ನು ಹೇಳಿದರು. ನನಗೆ ಬಲು ಇಷ್ಟವಾಯಿತ್ತು.. ನನಗೆ ಅಲ್ಲಾ ವೀಣಾಳಿಗೂ ಕೂಡ.. ಅಲ್ಲಿಂದ ನಿನ್ನ ಬಗ್ಗೆ ತಿಳಿಯುವ ಕುತೂಹಲ ಶುರುವಾಗಿತ್ತು.. ಜೊತೆಯಲ್ಲಿ ನಿನ್ನ ಬಗ್ಗೆ ಕಿವಿ ತೂತಾಗುವಷ್ಟು ಇವಳು ಹೇಳಿದ್ದರಿಂದ ನನಗೂ ನಿನ್ನ ಮೇಲೆ ಒಂದು ರೀತಿಯ ಕ್ರಶ್ ಆಗಿತ್ತು!.. ಹಾಗಾಗಿ ನಾವು ಇಲ್ಲಿ"

"ಸೂಪರ್ ಕಣೋ.. .. ರೇವಂತ್" ಒಂದು ಹೈ ಫೈವ್ ಹೊಡೆದು.. ಗಟ್ಟಿಯಾಗಿ ತಬ್ಬಿಕೊಂಡ... ವೀಣಾಳನ್ನೇ ನೋಡುತ್ತಾ ಕಣ್ಣು ಮಿಟುಕಿಸಿದ..

"ಹಹಹಹಃ.. ಕಾಂತಾ.. ನಿನ್ನ ಇನ್ನೊಂದು ಪ್ರಶ್ನೆ ಏನು ಗೊತ್ತಾ.. ನಾ ಯಾಕೆ ನಿನ್ನ ಸತಾಯಿಸಿದೆ ಅಂತ ಅಲ್ವೇ.. ನಾಳೆ ಸಂಜೆ ಸಿಗೋಣ ಅನ್ನೋ ಮಾತನ್ನು.. ನಿನ್ನೆ ಬೆಳಿಗ್ಗೆ ನೀನು ಪಾರ್ಕ್ ಹತ್ತಿರ ಸಿಕ್ಕಾಗಲೇ ಹೇಳಬಹುದಿತ್ತು ಅಂತ ತಾನೇ.. ಇದೆಲ್ಲಾ ಈ ರೇವಂತನಾದೆ ಕಿತಾಪತಿ.. ಸುಮ್ಮನೆ ಒಂದು ಸ್ವಲ್ಪ ನಿನ್ನ ಗೋಳು ಹುಯ್ದುಕೊಳ್ಳೋಣ ಅಂತ ಪ್ಲಾನ್ ಮಾಡಿದ... ಪ್ಲೀಸ್ ನನ್ನ ಕ್ಷಮಿಸು.. ಮತ್ತೆ ನಾ ರೇವಂತನ ಮಾತನ್ನೇ ಹೇಳುತ್ತೇನೆ.. ಈ ಬಡಾವಣೆಯಲ್ಲಿ ನೆಡೆಯುವ ಕಾರ್ಯಕ್ರಮಕ್ಕೆ ನೀ ಬರುವುದು, ಗೌರವದಿಂದ ನೆಡೆದುಕೊಳ್ಳುವುದು, ನಿನ್ನನ್ನು ಹಿರಿಯರು ಕಿರಿಯರು ಎನ್ನದೆ ಅಭಿಮಾನದಿಂದ ನೋಡುವುದು.. ಇದೆಲ್ಲವೂ ನನಗೆ ತುಂಬಾ ಇಷ್ಟವಾಗಿತ್ತು.. ರೇವಂತ್ ಪರಿಚಯವಾದ ಮೇಲೆ ನಿನ್ನ ಬಗ್ಗೆ ಎಲ್ಲವನ್ನು ಹೇಳಿದ್ದೆ.. ಹಾಗಾಗಿ ನಮ್ಮಿಬ್ಬರ ಮಧ್ಯೆ ಯಾವುದೇ ರೀತಿಯ ಅಡ್ಡಿ ಆತಂಕಗಳೂ ಇರಲಿಲ್ಲ.. ನಿನ್ನಂತಹ ಸ್ನೇಹಿತ ನಮಗೆ ಬೇಕಿತ್ತು ಅನ್ನಿಸಿತು. .ಹಾಗೆ ಇವತ್ತು ನಾವು ಮೂವರು ಇಲ್ಲಿದ್ದೇವೆ.. ನೀ ದೇವಸ್ಥಾನಕ್ಕೆ ಹೋಗೋದನ್ನು ಇವನು ನೋಡಿದ.. ಇವನೇ ನಿನ್ನ  ಬೈಕಿಗೆ ಆ ಚೀಟಿ ಸಿಕ್ಕಿಸಿದ್ದು.. "


"ನಾ ಏನು ಹೇಳಲಿ ನಿಮ್ಮ ಪ್ರೀತಿಗೆ. ನನಗೆ ಅರಿವಿಲ್ಲದೆ ನಾ ವೀಣಾಳ ಬಗ್ಗೆ ಆಕರ್ಷಿತನಾಗಿದ್ದೆ.. ಆದರೆ ನೀವಿಬ್ಬರೂ ಜಾಸೂಸಿ ಕೆಲಸ ಮಾಡಿ.. ನನ್ನ ಬಗ್ಗೆ ವಿವರ ಕಲೆಹಾಕಿದ್ದು ಮಾತ್ರವಲ್ಲದೆ.. ನನ್ನನ್ನು ನಿಮ್ಮ ಸ್ನೇಹಿತ ಎಂದು ಗುರುತಿಸಿದಿರಿ.. ಅದು ಖುಷಿಯಾಯಿತು.. ಗೆಳೆತನ ಎಂದರೆ ಇದೆ ಅಲ್ಲವೇ.. " ಕೃಷ್ಣಕಾಂತ್ ಕಣ್ಣಲ್ಲಿ ನೀರು.

"ನೋಡು ಕಾಂತ.. ಗೆಳೆತನಕ್ಕೆ ಹೆಣ್ಣು ಗಂಡು ಭೇದವಿಲ್ಲ.. ಒಳ್ಳೆಯ ಮನಸ್ಸುಗಳು ಒಳ್ಳೆಯದನ್ನೇ ನೋಡುತ್ತವೆ ಎನ್ನುವುದಕ್ಕೆ ನಾವು ಮೂವರು ಉದಾಹರಣೆ.. ಹೌದು ನಿನ್ನ ಮನದಲ್ಲಿ ಒಂದು ಸಂದೇಹ ಇನ್ನೂ ಇದೆ ಎನ್ನಿಸುತ್ತದೆ.. ನಿಜ  ತಾನೇ"

"ಹೌದು ರೇವಂತ.. ನೀ ಅಸೂಯೆ ಪಡಬೇಕಾದ ಸಂದರ್ಭ.. ಅನುಮಾನ ಪಡುವ ಎಲ್ಲಾ ಸಾಧ್ಯತೆಗಳು ಇದ್ದರೂ ಕೂಡ.. ನೀ ಇಷ್ಟು ಕೂಲ್ ಆಗಿ ವರ್ತಿಸಿದ್ದು... ವೀಣಾಳ ಮನದಲ್ಲಿ ಇದ್ದ ಗೊಂದಲ ತುಂಬಿದ ಸ್ನೇಹದ ಮಾಲೆಯ ನೂಲಿಗೆ ನೀ ಇನ್ನಷ್ಟು ಬಲ ಕೊಟ್ಟಿದ್ದು ಆಶ್ಚರ್ಯ ಎನ್ನಿಸುತ್ತದೆ.. ನಾವೆಲ್ಲರೂ ಮನುಷ್ಯರೇ ಅಲ್ಲವೇ.. ಅನುಮಾನ, ಅಸೂಯೆ, ನಾನು ನನ್ನದು ಎನ್ನುವ ಮೋಹ ಯಾರನ್ನೂ ಬಿಡುವುದಿಲ್ಲ.. ಹಾಗಾಗಿ ಈ ಪ್ರಶ್ನೆ ಅಷ್ಟೇ.. "

"ಕಾಂತಾ.. ನಮ್ಮ ಕುಟುಂಬದಲ್ಲಿ ನೆಡೆದ ಒಂದು ಘಟನೆ.. ನನ್ನ ಮನಸ್ಸನ್ನು ಈ ರೀತಿ ಕೂಲ್ ಆಗಿ ಇರಲು, ಮತ್ತು ಜಗತ್ತನ್ನು ಪ್ರೀತಿಸಲು ಅವಕಾಶ ಮಾಡಿಕೊಟ್ಟಿತು.. ನಮ್ಮ ಚಿಕ್ಕಪ್ಪನ ಮಗನ ಜೀವನದಲ್ಲಿ ಸರಿ ಸುಮಾರು ಹೀಗೆ ಒಂದು ಘಟನೆ.. ಸುಂದರ ಹೆಂಡತಿ, ಗೌರವಯುಕ್ತ  ಕೆಲಸ, ಕೈತುಂಬಾ ಸಂಬಳ, ಮುದ್ದಾದ ಮಕ್ಕಳು.. ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರೂ ಕೂಡ.. ವಾರದ ಕೊನೆಯಲ್ಲಿ ಊರು ಸುತ್ತೋದು, ಪ್ರವಾಸ, ಎಲ್ಲವೂ ಇತ್ತು.. ಹೆಂಡತಿ ತುಂಬಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಳು. ಸಹಜವಾಗಿಯೇ ಅಂತರ್ಜಾಲ ತಾಣದಲ್ಲಿ ತುಂಬಾ ಹೆಸರುವಾಸಿಯಾಗಿದ್ದಳು.. ಮೊದಲು ಮೊದಲು ಗಂಡ ಇದನ್ನೆಲ್ಲಾ ಇಷ್ಟಪಡುತ್ತಿದ್ದ.. ಆದರೆ ಬರುಬರುತ್ತಾ.. ಅವನಿಗೆ ಸಂದೇಹ ಮೂಡಲು ಶುರುವಾಯಿತು.. ತನ್ನ ಹೆಂಡತಿ ತನಗೆ ಮೋಸ ಮಾಡುತ್ತಿರಬಹುದೇ ಎಂಬ ಅನುಮಾನ.. ಅದಕ್ಕೆ ತಕ್ಕಂತೆ.. ಹೆಂಡತಿಯ ಫೋನ್ ಸದಾ ಬ್ಯುಸಿ.. ಫೇಸ್ಬುಕ್, ವಾಟ್ಸಾಪ್ ಗಳಲ್ಲಿ ಸಂದೇಶಗಳ ಸುರಿಮಳೆ.. ಹೀಗಿದ್ದರೂ ಹೆಂಡತಿ ಎಂದೂ ತನ್ನ ಮನೆಯನ್ನು, ಮನದಾತನನ್ನು, ಮಕ್ಕಳನ್ನು ಪಕ್ಕಕ್ಕೆ ಸರಿಸಿರಲಿಲ್ಲ.. ಆದರೆ ಗಂಡನಿಗೆ ಶುರುವಾದ ಅನುಮಾನ ಪಿಶಾಚಿ.. ಅವಳ ಸಂಸಾರವನ್ನೇ ಬಲಿ ತೆಗೆದುಕೊಂಡಿತು.. ಒಂದು ಕೆಟ್ಟ ಘಳಿಗೆಯಲ್ಲಿ ಹೆಂಡತಿ ಮಾಡಿದ ಅಡಿಗೆಗೆ ವಿಷ ಬೆರೆಸಿದ.. ಎಲ್ಲರೂ ತಿಂದು  ಸಾಯಬೇಕೆಂಬುದು ಅವನ ಪ್ಲಾನ್ ಆಗಿತ್ತು.. ಆದರೆ ಅದೇನಾಯಿತೋ ಏನೋ.. ದುರದುಷ್ಟಕರ.. ಆಫೀಸಿನಿಂದ ಕರೆಬಂತು  ಎಂದು.. ವಾರಾಂತ್ಯದಲ್ಲಿ ಆಫೀಸಿಗೆ ಹೋದ.. ಬರುವಷ್ಟರಲ್ಲಿ ಊಟ ಮಾಡಿ,ಮಲಗಿಕೊಂಡ ಮಕ್ಕಳು, ಹೆಂಡತಿ ಮರಳಿ ಬಾರದ ಲೋಕಕ್ಕೆ ಹೋಗಿಯೇ ಬಿಟ್ಟಿದ್ದರು.. ಅವನಿಗೆ ಹುಚ್ಚು ಹಿಡಿಯಿತು.. ಈಗಲೂ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.. " ರೇವಂತ್ ಕಣ್ಣೀರು ಒರೆಸಿಕೊಂಡ.. ವೀಣಾ ಅವನ ಭುಜದ ಮೇಲೆ ಕೈಯಿಟ್ಟು.. ಒಮ್ಮೆ ತಟ್ಟಿದಳು..

"ಸಾರೀ ಕಾಂತ ಸ್ವಲ್ಪ ಭಾವುಕನಾಗಿ ಬಿಟ್ಟೆ.. .. ವೀಣಾ ನಿನ್ನ ಬಗ್ಗೆ ಎಲ್ಲಾ ಹೇಳಿದಾಗ.. ನನಗೆ ಮೊದಲು ಅಸೂಯೆ ಬಂದರೂ ಕೂಡ.. ಮೇಲಿನ ಘಟನೆ ನನ್ನ ಮನಸ್ಸನ್ನು ತಿಳಿಮಾಡಿತು.. ಹಾಗಾಗಿ ನಾ ವೀಣಾಳಿಗೆ ಸಪೋರ್ಟ್ ಮಾಡಿದೆ.. ಹಾಗಾಗಿ ಇಂದು ನಾವು ಇಲ್ಲಿ :-)

ಇಷ್ಟು ಕೇಳಿ.. ಕೃಷ್ಣಕಾಂತ್ ಕಣ್ಣಲ್ಲಿ ನೀರು..

"ಯಾಕೋ ಏನಾಯಿತು".. ವೀಣಾ-ರೇವಂತ್ ಇಬ್ಬರೂ ಗಾಬರಿಯಾಗಿ ಕೇಳಿದರು,,

"ಇದು ಕಣ್ಣೀರಲ್ಲ ಪನ್ನೀರು ಪನ್ನೀರು.. ಚಿನ್ನದಂಥ ಸ್ನೇಹಿತರಿರುವಾಗ ಕಣ್ಣೀರೇತಕೆ ಮನಸನು ಅರಿತು ನಗುತಾ ಇರಲು ಚಿಂತೆಯ ಮಾತೇಕೆ.. ನೀವ್ ಜೊತೆಯಿರಲು ನಮ್ಮಿ ಜಗಕೆ ಆ ಸ್ವರ್ಗವೇ ಜಾರಿದಂತೆ"

"ವಾಹ್.. ಅಣ್ಣಾವ್ರ ಭಕ್ತ.. ಕಣೋ ನೀನು.. " ರೇವಂತ್ ಆಲಂಗಿಸಿಕೊಂಡ..

ಕೃಷ್ಣಕಾಂತ್ ಎರಡು ಕೈಯನ್ನು ಚಾಚಿದ.. ವೀಣಾ ಮತ್ತು ರೇವಂತ್ ಇಬ್ಬರೂ ಕೃಷ್ಣಕಾಂತನಿಗೆ ಒಂದು ಹಗ್ ಕೊಟ್ಟರು..
ಸ್ನೇಹದ ಕಂಗಳು - ಅಂತರ್ಜಾಲದಲ್ಲಿ ಕಂಡದ್ದು 

ಹೋಟೆಲಿನಲ್ಲಿ ಮೆಲ್ಲಗೆ ಹಾಡು ಬರುತ್ತಿತ್ತು .. "ಕಣ್ಣಂಚಿನ ಈ ಮಾತಲಿ ಏನೇನೂ ತುಂಬಿದೆ"

17 comments:

  1. ಹಿಂತಿರುಗಿ ನೋಡಿದರೆ ಎಲ್ಲರ ಜೀವನದಲ್ಲೂ ಯಾರೋ ಒಬ್ಬರು ಹೀಗೆ ಹಿಂತಿರುಗಿ ನೋಡಿದ ನೋಟ ನೆನಪಾಗಬಹುದು. ಬಹಳ ಅಪರೂಪಕ್ಕೆ ನೆನಪಾಗುವ ಮಧುರವಾದ ಒಂದು ಮುಗುಳ್ನಗೆ ನಿಡುವ ನೆನಪದು. ಈ ಕಥೆ ಓದಿದ ಮೇಲೆ ಅನಿಸಿದ್ದು ಹಾಗೆ. ಈ ಕಂತನ್ನು ಓದಿದ ಮೇಲೆ ಮತ್ತೆ ಇಡಿ ಕಥೆ ಓದಿ ನೋಡಿದೆ. ಬಹಳ ಮಧುರವಾದ ಭಾವಗಳಿಗೆ ಎಲ್ಲೂ ಮೋಸವಾಗದಂತೆ ಬರೆದಿದ್ದೀರಿ. ಅಂತ್ಯ ಕ್ಯಾಂಡಿ ಸ್ವೀಟ್ ಅನಿಸಿದರು, ಈ ಕಥೆಗೆ ಸೂಕ್ತವಾಗಿತ್ತು ಅನ್ನೋದು ಸ್ಪಷ್ಟವಾಗುತ್ತೆ. ಕಥೆ ಬಿಚ್ಚಿಕೊಳುವ ರೀತಿ, ಪಾತ್ರಗಳಲ್ಲಿ ಸಹಜ ಅನಿಸುವಂತಹ ಹೃದಯದಿಂದ ಹೊಮ್ಮುವ ಒಳ್ಳೆಯತನ, ಸ್ನೇಹಕ್ಕೆ ಸಿಗಬೇಕಾದ ನಿಜವಾದ ಸ್ಥಾನ, ಪ್ರೀತಿಗೆ ಇರಬೇಕಾದ ನಂಬಿಕೆ ಮತ್ತೆ ಮಮತೆ.. ಇವೆಲ್ಲ ಮನ ತಟ್ಟುವಂತಿದೆ. ಈ ಕಥೆ ಓದಿದ್ದು ಒಂದು ಅದ್ಭುತವಾದ ಅನುಭವ... ಇಂತಹ ಕಥೆಗಳು ಇನ್ನು ಹೊರಬರಲಿ.

    ReplyDelete
    Replies
    1. ಸುಂದರ ಮಾತುಗಳು ಸಿಬಿ.. ಒಂದು ಚಿಕ್ಕ ಸ್ಪೂರ್ತಿಯ ಎಳೆ ಇಲ್ಲಿ ತನಕ ಬಂದು ನಿಲ್ಲಿಸಿತು..
      ಸ್ಫೂರ್ತಿ ಎಲ್ಲಿಂದ ಬಂದರೆ ಏನೂ ಬದುಕನ್ನು ಮುಂದಕ್ಕೆ ಕೊಂಡೊಯ್ಯುವ ತಾಕತ್ ಇದೆ ಎಂದು ನನ್ನ ಅಭಿಪ್ರಾಯ. ಇದೆ ಸಂದೇಶ ನಿಮ್ಮ ಪ್ರತಿಕ್ರಿಯೆಯಲ್ಲಿದೆ..
      ಧನ್ಯವಾದಗಳು ಸಿಬಿ

      Delete
  2. ಮನ ಮಿಡಿಯುವ ಕಥೆ. ಅಂದ ಹಾಗೆ ನೀವೂ ಸಹ ಅಣ್ಣಾವ್ರ ಭಕ್ತರೇ ತಾನೆ?

    ReplyDelete
    Replies
    1. ಗುರುಗಳೇ ಧನ್ಯವಾದಗಳು

      ಹೌದು ನಿಮ್ಮ ಮಾತು ನಿಜ

      Delete
  3. ಕಥೆ ಮುಂದುವರೆದ ರೀತಿ ಬಹಳ ಇಷ್ಟವಾಯಿತು. ಕೃಷ್ಣಕಾಂತನ ದುಗುಡ, ತುಮುಲಗಳನ್ನು ಚೆನ್ನಾಗಿ ವಿವರಿಸಿದ್ದೀಯಾ. ಕೆಲವೊಂದು ವಿಷಯಗಳನ್ನು ಬರೆಯುವುದಕ್ಕಿಂತ ನೀನು ಎದುರಿಗಿದ್ದರೆ ""ಎಲ್ಲಿ ಚೆನ್ನಾಗಿದೆ" ಎಂದು ಎದುರೇ ಹೇಳಬೇಕು ಎನ್ನುವಂತಿಹಾವು ಬಹಳ. ಜೊತೆಗೆ ಚಿತ್ರವೂ ಚೆನ್ನಾಗಿದೆ.

    ೩೬೦ ಡಿಗ್ರಿ ಕೋನದ ಕತೆಯನ್ನು ಓದುತ್ತ ಓದುತ್ತಾ ಹಾಗೆ ದೃಶ್ಯಗಳು ನಮ್ಮ ಕಣ್ಣಂಚಿನಲ್ಲೂ ಹಾದು ಹೋದಂತೆ ಆಯಿತು. ಸುಂದರ ಚಿತ್ರದೊಂದಿಗೆ ಕತೆಯೂ ಸುಂದರವಾಗಿ ಮುಗಿಯಿತು ​
    ​​ಈಗಿನ ಏಕತಾನತೆಯ ನಡುವೆ ಒಂದು ವಿಭಿನ್ನ, ಸುಂದರ ಕಥೆಯನ್ನು ಓದಿದಂತಾಯಿತು.

    ReplyDelete
    Replies
    1. ಧನ್ಯವಾದಗಳು ಅತ್ತಿಗೆ.. ನಿಮ್ಮ ಮಾತುಗಳು ಇನ್ನಷ್ಟು ಉತ್ಸಾಹ ತುಂಬುತ್ತದೆ. ಧನ್ಯೋಸ್ಮಿ

      Delete
  4. Wah wah.... snehakke hosa ayama kottiruva bage manamuttidae.... current trend gu match agidae..... ottinalli superroo super... �������� sakala gauravadondigae... ����swikarisi bhava

    ReplyDelete
    Replies
    1. ನಿಮ್ಮ ಮಾತುಗಳಿಗೆ ನಾ ಚಿರಋಣಿ ಮಾತೆ.. ಧನ್ಯವಾದಗಳು

      Delete
  5. Anna neevu nan story ne bardiro hagide but some differences aste.. Really blessed to have such friends in life..

    ReplyDelete
    Replies
    1. ಮಗಳೇ ಸುಂದರ ಮನಸ್ಸನ್ನು ಹೊಂದಿರುವ ಎಲ್ಲರ ಕಥೆಯೂ ಆಗಬಹುದು.. ಆದರೆ ಈ ಕಥೆಯಲ್ಲಿ ನಿನ್ನನ್ನು ನೀ ಗುರುತಿಸಿಕೊಂಡದ್ದು ಸಂತೋಷವಾಯಿತು.. ಕಾಲ್ಪನಿಕ ಕಥೆ ಹಾಗೆ ಬಂತು.. ಆದರೆ ನಿನ್ನ ಬದುಕಿಗೂ ಹೋಲಿಕೆ ಇದೆ ಅಂದರೆ ಖುಷಿ ಎನಗೆ..

      Delete


  6. odakke shurumaadidaaga uhisiddu sullaayitu.. yappa en idu full twist!!!!
    scene by scene description kottidella amazing...

    shuru maadidre poorti odale beku anno kutohala 4 parts galallu sakkataagi kaapdideera!!!

    ondu suggestion after reading your blog.. y dont you try writing stories for drama (skit).. most of d lines can b as it put as dialogues...

    ReplyDelete
    Replies
    1. ಹಹಹ ದೇವಿ ಸೂಪರ್ ಸೂಪರ್
      ನಿಮ್ಮ ಸಲಹೆಗೆ ಧನ್ಯವಾದಗಳು.. ಆ ಪ್ರಯತ್ನ ಮಾಡಬೇಕೆಂದು ಒಳಗಿನ ಬಾಸ್ ಬಯಸಿದರೆ ಖಂಡಿತ ಆ ಅಲ್ಪ ಪ್ರಯತ್ನ ನನ್ನಿಂದ ಆಗಬಹುದು..

      Delete
  7. ಪ್ರೀತಿ ಅಭಿಮಾನ ತುಂಬಿರುವಾಗ, ಅನುಮಾನ ಅವಮಾನಕ್ಕೆ ಜಾಗವಿಲ್ಲ ಅಂತ ತೋರಿಸಿದಿರಿ. ನಿಷ್ಕಲ್ಮಶ ಸ್ನೇಹವಷ್ಟೇ ಈ ಕಥೆಯ ಜೀವಾಳ. ಇಂಥ ಅಪರೂಪದ ಸ್ನೇಹ ಅತಿ ವಿರಳ. ಅಂತೂ ನಾಲ್ಕು ಕಂತಿನಲ್ಲಿ ಮುಗಿಸಿದ್ರಿ. ಕೃಷ್ಣಕಾಂತ - ಶ್ರೀಕಾಂತನಾಗಿದ್ದು - ನಂತರ ಕಾಂತನಾಗಿದ್ದು ಓದಿ ನಿಮ್ಮನ್ನೇ ಊಹಿಸಿಕೊಂಡೆ :)

    ReplyDelete
    Replies
    1. DFR ಮುಗ್ಧ ಪ್ರೀತಿ.. ಮುಗ್ಧ ಸ್ನೇಹ ಸದಾ ಜೀವಂತ ಎನ್ನುವ ಒಂದು ಕಲ್ಪನೆಗೆ ರೆಕ್ಕೆ ಪುಕ್ಕ ಹಚ್ಚಿ ಬರೆದ ಲೇಖನಕ್ಕೆ ಸಿಕ್ಕ ಪ್ರತಿಕ್ರಿಯೆ ಸೂಪರ್ ಸೂಪರ್..

      ನಿಮ್ಮ ಮಾತುಗಳು ಅಕ್ಷರಶಃ ನಿಜ.. ಪವಿತ್ರ ಸ್ನೇಹಕ್ಕಿಂತ ಮಿಗಿಲಾದದ್ದು ಏನೂ ಇಲ್ಲ.. ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ..

      "ಕೃಷ್ಣಕಾಂತ - ಶ್ರೀಕಾಂತನಾಗಿದ್ದು - ನಂತರ ಕಾಂತನಾಗಿದ್ದು ಓದಿ ನಿಮ್ಮನ್ನೇ ಊಹಿಸಿಕೊಂಡೆ :)"

      ಇದನ್ನು ಓದಿ.. ನನಗೆ ನಗು ಮತ್ತು ಖುಷಿ ಎರಡು ಆಗುತ್ತಿದೆ.. ಓದುಗರಿಗೆ ಮನ ಮುಟ್ಟಿದೆ ಎಂದರೆ ನಾ ಬರೆದದ್ದು ಸಾರ್ಥಕತೆ ಎನ್ನಿಸುತ್ತದೆ

      Delete
  8. ಬರಹ ಚೆನ್ನಾಗಿದೆ..ಕುತೂಹಲದಿಂದ ಓದಿಸಿಕೊಂಡು ಹೋಗುತ್ತೆ...ಕ್ರಿಷ್ಣಕಾಂತನ ಪರಿಸ್ಥಿತಿ ಯಾರಿಗೂಬೇಡ.. ಪ್ರೇಮ ಕಳೆದು ಹೋಗುತ್ತೇನೋ ಅಂದು ಕೊಳ್ಳೊ ಹೊತ್ತಿಗೆ ಶಾಶ್ವತ ಸ್ನೇಹಕ್ಕೆ ತಿರುಗುವ ಸಂದರ್ಭ ಖುಷಿ ಕೊಡುತ್ತೆ. ಸಂದರ್ಭಕ್ಲೆ ತಕ್ಕಹಾಗೆ ಅಣ್ಣೋರ ಹಾಡನ್ನ ಬಳಸಿರುವ ಜಾಣ್ಮೆಗೆ ಜೈ ಅನ್ನಲೇಬೇಕು. ಒಟ್ಟಾರೆ ಕತೆ ಖುಷಿ ಕೊಡ್ತು.. ಮುಂದುವರೆಸಿ.. ಮುಂದಿನ ಕತೆ ನಿರೀಕ್ಷೆ ಯಲ್ಲಿರುವೆ..,:)

    ReplyDelete
    Replies
    1. ಧನ್ಯವಾದಗಳು ಉಮೇಶ್ ಸರ್.. ಕಥೆಯ ಒಂದು ಎಳೆ ಬಿಡಿಸಿಕೊಂಡು ತಾನಾಗೇ ಹರಿಯುತ್ತಾ ಹೋಯಿತು... ಎಲ್ಲಾ ಓದುಗರಿಗೂ ಇಷ್ಟವಾಗಿದ್ದು ನನಗೆ ಖುಷಿಯಾಯಿತು

      Delete