Saturday, September 22, 2012

ಪುಟ್ಟು ಎಂಬ ದೊಡ್ಡ ಮನಸಿನ ಯಜಮಾನ


"ಮಂಜಣ್ಣ ತಗೋ ಈ ಹೊಸ ಶರ್ಟ್ ಹಾಕಿಕೋ..ಬೆಂಗಳೂರಿಗೆ ಹೋಗ್ತಾ ಇದ್ದೀಯ ಅಲ್ವ..?"

ಇದು ಯಾವುದೇ ಚಿಕ್ಕ ಮಗು ಹೇಳಿದ ಮಾತಲ್ಲ..ಸುಮಾರು ಒಂದೇ ವಯಸ್ಸಿನವರಾದ ನಮ್ಮ ಅಪ್ಪ ಮತ್ತು ಅವರ ಚಿಕ್ಕಜ್ಜಿ ಮಗನ ನಡುವೆ  ನಡೆದ ಸಂಭಾಷಣೆ..

ನಮ್ಮಪ್ಪ ಬೇಕು ಎಂದು ಕೇಳಲಿಲ್ಲ..ಆದ್ರೆ ಪರಿಸ್ಥಿತಿ ಅರ್ಥ ಮಾಡಿಕೊಂಡು ಆಗ ತಾನೇ ಅಂಗಡಿಯಿಂದ ತಂದಿದ್ದ ಹೊಚ್ಚ ಹೊಸ ಶರ್ಟನ್ನು ಕೊಟ್ಟವರು..ಇವರು

ನಾವು ನಮ್ಮ ವಸ್ತುವನ್ನು ಕೊಡಬೇಕೆಂದು ಸಾಮಾನ್ಯವಾಗಿ ಅನ್ನಿಸುವುದು ವಸ್ತು ಹಳೆಯದಾದಾಗ ಇಲ್ಲವೇ ಅದು ನಮಗೆ ಬೇಡವೆನಿಸಿದಾಗ..ಹೊಸ ವಸ್ತುಗಳನ್ನು ಕೊಡುವುದು ಇರಲಿ...ಇನ್ನೊಬ್ಬರಿಗೆ ತೋರಿಸಿದರೆ ಅವರು ಕೇಳಿಬಿಡುತ್ತಾರೆನೋ ಅನ್ನುವ ಅಳುಕು ಇರುತ್ತೆ..ಅಂಥಹ ಒಂದು ಮುಗ್ಧ ಮನಸಿನ ಯಜಮಾನ "ಪುಟ್ಟು" ಎನ್ನುವ ಈ ಮಹಾನುಭಾವರು.

ಸುಬ್ರಮಣ್ಯ ಎನ್ನುವ ಹೆಸರಿಂದ ನಾಮಾಂಕಿತರಾಗಿ "ಪುಟ್ಟು" ಎನ್ನುವ ಹೆಸರೇ ಶಾಶ್ವತವಾಗಿ ಉಳಿದು ಸಂಬಂಧಿಕರಲ್ಲಿ ಅದೇ ಹೆಸರಿನಿಂದ ಗುರುತಿಸಿಕೊಂಡರು ಇವರು..

ಶಿವಮೊಗ್ಗದಲ್ಲಿ ಎರಡು ಮನೆಯನ್ನು ಕೇವಲ ಒಂದೇ ಒಂದು ಗೋಡೆ ಬೇರೆ ಮಾಡಿತ್ತು..ಆದ್ರೆ ಆ ಗೋಡೆಗೂ ಒಂದು ಬಾಗಿಲು ಇತ್ತು..ಆ ಬಾಗಿಲು ಸದಾ ತೆರೆದೇ ಇತ್ತು..ಇಂತಹ ಎರಡು ಮನೆಯಲ್ಲಿ ಎರಡು ಕುಟುಂಬಗಳು ಒಂದೇ ಕುಟುಂಬದಂತೆ ಸುಮಾರು ಏಳೆಂಟು ವರುಷ ಸಂಸಾರ ಮಾಡಿತ್ತು..ರಕ್ತ ಸಂಬಂಧಕ್ಕಿಂತ ಮಾನವೀಯ ಸಂಬಂಧ ಅಧಿಕವಾಗಿದ್ದ ಆ ಕಾಲದಲ್ಲಿ ನಮ್ಮ ಕುಟುಂಬ ಹಾಗು "ಪುಟ್ಟು" ಅವರ  ಕುಟುಂಬ ಎರಡು ಸೇರಿ ಸುಮಾರು ೧೨ ಮಂದಿ ಸುಖವಾಗಿ ಕಳೆದ ಆ ದಿನಗಳು ನಮ್ಮೆಲ್ಲರ ಬದುಕಿನಲ್ಲಿ ಒಂದು ಸುವರ್ಣ ಅಧ್ಯಾಯ ಎನ್ನಬಹುದು..

ಮಗುವಿನ ಮನಸು ಹೇಗೆ ಇರಬೇಕು..ಹೇಗೆ ಇರುತ್ತೆ ಅನ್ನುವುದು ಯಾವಾಗಲೂ ಯಕ್ಷ ಪ್ರಶ್ನೆಯಾಗಿ ಕಾಡಿತ್ತು..ಆದ್ರೆ ಸುಮಾರು ೭೪ -೭೫
ವಸಂತಗಳನ್ನು ಕಂಡರೂ ಮಗುವಿನ ಮುಗ್ದತೆ, ಮೃದು ಮಾತು, ಹಗುರ ಮನಸು ಇವೆಲ್ಲರ ಯಜಮಾನ ಇಂದು(೨೨ನೆ ಸೆಪ್ಟೆಂಬರ್ ೨೦೧೨)  ನಮ್ಮೆಲ್ಲರನ್ನೂ ಬೆಳಿಗ್ಗೆ  ಸುಮಾರು ಏಳು ಘಂಟೆಗೆ ಅಗಲಿದ್ದಾರೆ.
ಶ್ರೀ ಸುಬ್ರಮಣ್ಯ ("ಪುಟ್ಟು) 
ಇಂತಹ ಮುಗ್ಧ ಮನಸಿನ ಯಜಮಾನರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರುವುದು ನಮ್ಮನ್ನು ನಾವೇ ಗೌರವಿಸಿಕೊಂಡ ಹಾಗೆ..ಮತ್ತು ಅವರಿಗೆ ಒಂದು ದೊಡ್ಡ ಗೌರವ ಸೂಚಿಸಿದ ಹಾಗೆ..

ನಿಮ್ಮ ಆಶಿರ್ವಾದ ನಮ್ಮ ಮೇಲೆ ಇರಲಿ..ನಾವೆಲ್ಲರೂ ನಿಮ್ಮ ಕುಟುಂಬದ ಜೊತೆ ಸದಾ ಇರುತ್ತೇವೆ..

Wednesday, September 19, 2012

ಅಣ್ಣನಿಲ್ಲದ ಗಣಪನ ಹಬ್ಬ


ಬೆಳಿಗ್ಗೆ ಎದ್ದು ಕಣ್ಣು ಬಿಟ್ಟಾಗ..ಏನೋ ಕೊರತೆ ಎದ್ದು ಕಾಣುತಿತ್ತು..

ಅಮ್ಮನ ಮನೆಗೆ ಬಂದೆ..ಕಾಫಿ ಕುಡಿಯುತ್ತ ಇದ್ದಾಗ...

ಅಮ್ಮ ಕಣ್ಣು ತುಂಬಿಕೊಂಡು..

"ಅವರು ಇದ್ದಿದ್ದರೆ ಎಷ್ಟು ಸಂಭ್ರಮ ಇರ್ತಿತ್ತು....!"

ಮನಸು ಮೂರು ದಶಕಗಳ ಹಿಂದೆ ಓಡಿತು...

"ಅಣ್ಣ (ಅಪ್ಪ)..ಗಣಪತಿ ತರಲು ನಾವು ಬರ್ತೀವಿ..."

"ಸರಿ ಬನ್ನಿ"

ದಾರಿಯುದ್ದಕ್ಕೂ ನಾನು, ನನ್ನ ತಮ್ಮ ಘಂಟೆ ಬಾರಿಸಿಕೊಂಡು..ತ್ಯಾಗರಾಜ ನಗರದಿಂದ ನರಸಿಂಹ ರಾಜ ಕಾಲೋನಿ, ಡಿ.ವಿ.ಜಿ. ರೋಡ್, ಗಾಂಧಿ ಬಜಾರ್ ತನಕ...ಸರದಿಯಲ್ಲಿ ಘಂಟೆ ಬಾರಿಸಿದ್ದೆ ಬಾರಿಸಿದ್ದು..

"ಅಣ್ಣ ಆ ಗಣಪತಿ..ತಗೊಳ್ಳಿ..ಅಣ್ಣ..ಈ ಗಣಪತಿ ತಗೊಳ್ಳಿ.."

"ಆ ಗಣಪತಿಗೆ ನಾಮ ಇದೆ, ಈ ಗಣಪತಿ ವಿಭೂತಿ ಇಟ್ಟುಕೊಂಡಿದೆ...ನಮಗೆ ಗೋಪಿಚಂದನ ಇರುವ ಗಣಪತಿ ಬೇಕು..ನೋಡ್ತಾ ಇರಿ"

ಇಲ್ಲಿ ಜಾತಿ, ಗೀತಿ ಅನ್ನುವ ಪೊಳ್ಳು ನುಡಿಗಳಿಗಿಂತ..ನಮ್ಮ ಅಪ್ಪ..ಸದಾ ಅಚ್ಚುಕಟ್ಟು ಇಷ್ಟ ಪಡ್ತಾ ಇದ್ದರು..ಅವರು ನಂಬಿದ್ದ, ನೆಡೆದುಕೊಂಡಿದ್ದ ದಾರಿಯನ್ನು ಎಂದು ಬದಲಿಸುತ್ತಿರಲಿಲ್ಲ

ಸರಿ ಗಣಪತಿ ಸಿಕ್ಕಿತು, ಬಾಳೆ ಕಂದು, ಮಾವಿನ ಎಲೆಗಳು, ಹೂವು ಒಂದೊದಾಗಿ ನಮ್ಮ ಕೈಗೆ ಸೇರುತಿದ್ದವು..ನಾನು ನನ್ನ ತಮ್ಮ ನಮ್ಮ ಶಕ್ತಿ ಮೀಟಿ ಘಂಟೆ ಬಾರಿಸುವದರ ಜೊತೆಗೆ, ಆದಷ್ಟು ಭಾರ ಕೈಯಲ್ಲಿ ಹಿಡಿದು ಸಾಗುತಿದ್ದೆವು..
ಮನೆಗೆ ಬಂದ ನಂತರ..ಬಾಗಿಲಲ್ಲೇ ಗಣಪನಿಗೆ ಆರತಿ ಬೆಳಗಿ ಅಮ್ಮ ಮನೆಯ ಒಳಗೆ ಕರೆಯಿಸಿಕೊಂಡ ಮೇಲೆ..ನಾವು ನಮ್ಮ ಗಣಪನ ಪ್ರವಾಸವನ್ನು ಅಮ್ಮನಿಗೆ ಅರುಹುವ ತನಕ ನೆಮ್ಮದಿ ಇಲ್ಲ..ನಾನು ಹೇಳಿದ್ದನ್ನು ತಮ್ಮ ಸರಿ ಮಾಡುವುದು..ತಮ್ಮ ಹೇಳಿದ್ದನ್ನು ನಾನು ಸರಿ ಮಾಡುವುದು..ಹೀಗೆ ಸಾಗುತಿತ್ತು...

ಆ ದಿನಗಳ ಸೊಗಸೇ ಸೊಗಸು..ಕೈಯಲ್ಲಿ ಕಾಸಿರುತ್ತಿರಲಿಲ್ಲ..ಆದ್ರೆ ಇದ್ದದ್ದರಲ್ಲೇ ಅಪ್ಪ, ಅಮ್ಮ ಕೊಟ್ಟ ಚಿಕ್ಕಾಸುಗಳನ್ನು ಕೂಡಿಸಿಕೊಂಡು..ಬಣ್ಣದ ಕಾಗದ, ಬಲೂನ್, ಗಣಪನ ಅಲಂಕಾರಕ್ಕೆ ಬೇಕಾದ ಸಿದ್ಧತೆ ಮಾಡುವುದರಲ್ಲಿ ಹುಮ್ಮಸ್ಸು..ಅದರ ಮಜವೇ ಬೇರೆ (ಅಪ್ಪನ ಪ್ರೇರಣೆ...ಅದು ಇಂದಿಗೂ ಕುಂದಿಲ್ಲ ಅನ್ನುವುದೇ ನನಗೆ ಸಮಾಧಾನದ ಸಂಗತಿ..)...

ಪ್ರತಿವರುಷವು ಇದೆ ವರಸೆ ಪುನಾರಾವರ್ತನೆ ಆಗುತಿತ್ತು..ಆದ್ರೆ ನಮ್ಮ ಹುಮ್ಮಸ್ಸು ವರುಷದಿಂದ ವರುಷಕ್ಕೆ ಬೆಳೆಯುತ್ತಲೇ ಹೋಯ್ತು...

ಇಂದು ಗಣಪನ ಹಬ್ಬದ ದಿನ..ಮನೆಯಲ್ಲಿ ನೀರವ ಮೌನ..ಎಂದಿನ ಕಲರವವಿಲ್ಲ..ಮನೆಯ ಯಜಮಾನ..ಮನದಲ್ಲೇ ಇದ್ದು ಹರಸುತ್ತ ಇದ್ದಾರೆ..ಗಣಪ ನಮ್ಮ ಮನೆಗೆ ಬರಲು ಇನ್ನೊಂದು ವರುಷ ನೀನು ಕಾಯಲೇಬೇಕು..!! 

Saturday, September 1, 2012

ನನ್ನ ಎರಡನೇ ಕೂಸಿಗೆ ವರ್ಷದ ಸಂಭ್ರಮ...


ಎಲ್ಲರ ಮನೆಯಲ್ಲೂ ಎರಡು ಮೂರು ಇರುತ್ತೆ..ನಿನಗೂ ಬೇಡವೇ...ನೀನು ಯೋಚಿಸು ನೋಡು..ನನ್ನ ಮನಸು ಸದಾ ಹೇಳುತಿತ್ತು....ಆದ್ರೆ ಈಗ ಬೇಕೇ ಬೇಡವೇ...ಮನಸು ದ್ವಂದ್ವದ ಗೂಡಾಗಿತ್ತು...ಅಪ್ಪ ಅಮ್ಮನಿಗೆ ಖುಷಿ ಕೊಡುವ ಸಂಗತಿಗಿಂತ ಬೇರೆ ಏನು ಸಾಧನೆ ಎನ್ನಿಸಿತು...!

ಮನೆಯಲ್ಲಿ ಮಡದಿ ಯೋಚನೆ ಮಾಡಿ..ಸುಮ್ಮನೆ ದುಡುಕುವುದು ಬೇಡ...ಅಂತ ಹೇಳುತಿದ್ದಳು...ಆಗಲೇ ಮೊದಲನೆಯ ಕೂಸಿಗೆ ಹತ್ತಿರ ಹತ್ತಿರ ಒಂಭತ್ತು ವರುಷಗಳು ಆಗುತ್ತಾ ಬಂದಿದೆ...ನಮ್ಮ ಜೊತೆ ಒಂದು ನಿಮಿಷವೂ ಬಿಟ್ಟು ಇರುವುದಿಲ್ಲ..ನಮ್ಮನ್ನು ಅಷ್ಟು ಪ್ರೀತಿ ಮಾಡುತ್ತದೆ..ಹೀಗೆ ಸಾಗಿತ್ತು ಮಾತಿನ ಲಹರಿ...

ತುತ್ತಾ ಮುತ್ತಾ...ಈ ಪ್ರಶ್ನೆ ಅಚಾನಕ್ಕಾಗಿ ವಿಚಿತ್ರ ರೀತಿಯಲ್ಲಿ ಕಾಡತೊಡಗಿತ್ತು..ನನಗು ಅನ್ನಿಸಿತ್ತು ಹೌದು ನನ್ನ ಮೊದಲ ಕೂಸು ನಮ್ಮನ್ನು ಎಂದು ನೋಯಿಸಿಲ್ಲ...ನಮ್ಮ ಕಷ್ಟ ಸುಖ ಎಲ್ಲದರಲ್ಲೂ ಹೆಜ್ಜೆ ಹಾಕುತ್ತ ಬಂದಿದೆ..ಈ ಸಮಯದಲ್ಲಿ ಏನು ಮಾಡೋದು ಅನ್ನಿಸಿತು..

ನೆಂಟರಿಷ್ಟರ ಕೆಲವು ಸಮಾರಂಭಗಳಲ್ಲಿ ನನ್ನ ಅಪ್ಪ ಅಮ್ಮ ಪಡುತಿದ್ದ ಗೋಜಲನ್ನು.....ಸಂಬಂಧಿಕರ ಪ್ರಶ್ನೆ ಭರಿತ ನೋಟಕ್ಕೆ ಎಷ್ಟೋ ಸಲ ಮಾತಾ ಪಿತೃಗಳು ಮೌನಕ್ಕೆ ಶರಣು ಹೋಗಿದ್ದನ್ನು ಕಂಡಿದ್ದೆ.....

ಇದನ್ನೆಲ್ಲಾ ನೋಡಿ ಒಂದು ದಿನ ನಿರ್ಧರಿಸಿಯೇ ಬಿಟ್ಟೆ...ಆ ನಿರ್ಧಾರದ ಫಲ ಕಳೆದ ವರ್ಷ ಸೆಪ್ಟೆಂಬರ್ ೨ ೨೦೧೧ ರಂದು ಬಹು ವರ್ಷಗಳ ತಪಸ್ಸು..ಅಪ್ಪ ಅಮ್ಮನ ಹಾರೈಕೆ ಎಲ್ಲವು ಕೂಡಿಬಂತು...ಮನೆಯಲ್ಲಿ ಎಲ್ಲರಿಗು ಸಂತೋಷ..ಅವಾಗ ನನ್ನ ಮನಸಿಗೆ ಗೌರಿಶಂಕರ ಏರಿದಷ್ಟು ಖುಷಿ...ಅಪ್ಪ ಅಮ್ಮನ ಮುಖದಲ್ಲಿ ಒಂದು ಹೆಮ್ಮೆಯ ಸಂತಸ ಕಂಡಾಗ ಪಟ್ಟ ಕಷ್ಟವೆಲ್ಲ ಉಫ್ ಅಂತ ಗಾಳಿಯಲ್ಲಿ ಕರಗಿ ಹೋಯಿತು..

ಬನ್ನಿ ಗೆಳೆಯರೇ, ಗೆಳತಿಯರೆ, ಸೋದರ ಸೋದರಿಯರೆ..ನಮ್ಮ ಸಂತಸದಲ್ಲಿ ನೀವು ಪಾಲ್ಗೊಳ್ಳಿ...ನಾಳೆ ವರುಷದ ಹೆಚ್ಚು,  ನಾಮಕರಣ...ನಿಮಗೆಲ್ಲ ಮೊದಲೇ ಹೆಸರನ್ನು ಹೇಳಿಬಿಡುತ್ತೇನೆ..ಕಾರಣ ಕೆಲಸದ ಒತ್ತಡ ಕೆಲವೊಮ್ಮೆ ಕಾರ್ಯಕ್ರಮಗಳಿಗೆ ಬರಲಾಗುವುದಿಲ್ಲ..ಅಲ್ಲವೇ...
....
....
....
....
....
....
....
....
....
....
....
....
....
....
....
....
....
ಮೊದಲ ಕೂಸು -ಟಿ.ವಿ.ಎಸ್ ವಿಕ್ಟರ್ - ಬರೋಬ್ಬರಿ ಹತ್ತು ವರುಷ

....
....
....
....
....
....
....
....
ಕೂಸು ಪ್ರಸೂತಿ ಕೋಣೆಯಿಂದ..   ಜನಿಸಿದ ಸಂದರ್ಭದ ಲೇಖನ

ಎರಡನೇ ಕೂಸು...ಮಾರುತಿ ಸುಜುಕಿ ರಿಟ್ಜ್..ಒಂದು ವರುಷದ ಹೊಸ್ತಿಲಿನಲ್ಲಿ..

....
....
....
....
....
....
....
....



ನನ್ನ ಅಪ್ಪ ಅಮ್ಮನ ಪ್ರೀತಿಯಿಂದ ಇಟ್ಟ ಹೆಸರು "ಶ್ರೀವಿತಲ್"      
ಶುಭ ಹಾರೈಸಿ..ಸುದೀರ್ಘ ವರುಷಗಳ ಕಾಲ ಆರೋಗ್ಯವಂತನಾಗಿ, ಯಶೋವಂತನಾಗಿ.ಸುಂದರ ಬದುಕು ಸಾಗಿಸಲಿ..
ನಿಮ್ಮ ಹಾರೈಕೆ ನನ್ನಿಬ್ಬರ ಕೂಸುಗಳಿಗೆ ಭದ್ರ ವಜ್ರ ಕೋಟೆ..!!!!.