Sunday, December 11, 2016

ಸ್ಮಶಾನ.. ಪಾಠ ಕಲಿಸುವ "ಪಾಕ"ಶಾಲೆ

ಒಂದು ವಿಚಿತ್ರ ಮನಸ್ಸು.. ವಿಚಿತ್ರ ಆಸೆ.. ವಿಚಿತ್ರವಾಗಿ ಯೋಚಿಸುವ ಹೃದಯ..

ಅರಿವಿಲ್ಲ..

ಗೊತ್ತಾಗೊಲ್ಲ

ಕಾರಣ ಹೀಗೆ ಅಂತ ಹೇಳೋಕೆ ಆಗೋಲ್ಲ.. ನಾ ಯಾವಾಗಲೂ ತಮಾಷೆಯಾಗಿ ಹೇಳುತ್ತಿದ್ದೆ..

ಹೋಟೆಲಿನಲ್ಲಿ ಯಾರಾದರೂ ಸಿಕ್ಕರೆ.. ತಮ್ಮ ಕುರ್ಚಿಯ ಪಕ್ಕದಲ್ಲಿಯೇ ಇನ್ನೊಂದು ಕುರ್ಚಿ ಹಾಕಿ.. ಅಥವಾ ಬೆಂಚಾದರೆ ಸ್ವಲ್ಪ ಜರುಗಿಕೊಂಡು ಜಾಗ ಕೊಡುತ್ತಾರೆ..

ಬಸ್ ನಿಲ್ದಾಣದಲ್ಲಿ ಸಿಕ್ಕರೆ.. ಕೂರಲು ಪಕ್ಕಕ್ಕೆ ಒತ್ತಿ ಜಾಗ ಕೊಡುತ್ತಾರೆ..

ಮದುವೆ ಮುಂಜಿ ಮಾಡುವ ಛತ್ರದಲ್ಲಿ ಸಿಕ್ಕರೆ.. ಪಕ್ಕದಲ್ಲಿ ಅಥವಾ ಯಾವುದೋ ಮೂಲೆಯಲ್ಲಿ ಖಾಲಿ ಇರುವ ಚೇರ್ ಹುಡುಕಿ ಅದನ್ನು ತಂದು ತಮಗೆ ಇಷ್ಟವಾದವರ ಜೊತೆ ಹರಟುತ್ತಾರೆ..

ಆಸ್ಪತ್ರೆ, ದೇವಸ್ಥಾನ ಇಲ್ಲಿಯೂ ಕೂಡ ಇದೆ ಪುನರ್ವಾರ್ತನೆ ಆಗುತ್ತದೆ..

ಆದರೆ ನನ್ನ ಕುತೂಹಲ ಒಂದು ವಿಚಿತ್ರ ಹಂತ ಮುಟ್ಟಿತ್ತು.. ಸ್ಮಶಾನದಲ್ಲಿ ಬೇರೆಯವರ ಶವ ಸಂಸ್ಕಾರಕ್ಕೆ ಹೋದಾಗ ಅಲ್ಲಿ ನಮ್ಮ ಪರಿಚಯಸ್ತರು ಸಿಕ್ಕಾಗ ಹೇಗೆ ಇರುತ್ತದೆ.. ?

ಶವಸಂಸ್ಕಾರದ ಪದ್ಧತಿ ಮಣ್ಣು ಮಾಡುವುದು ಆದರೆ.. ಗೋರಿಗಳನ್ನು ಅಥವಾ ಸ್ಮಾರಕಗಳನ್ನು ಕಟ್ಟಿರುತ್ತಾರೆ.. ಆಗ ಯಾವುದಾದರೂ ಒಂದು ಸಮಾಧಿಯ ಮೇಲೆ ಕೂತು.. ಇನ್ನೊಂದು ಸಮಾಧಿಯ ಧೂಳನ್ನು ಕೈಯಲ್ಲಿ ಒರೆಸಿ ಕೂರಲು ಹೇಳುತ್ತಾರೆ.. ಆದರೆ ಶವಸಂಸ್ಕಾರದ ಪದ್ಧತಿ ಅಗ್ನಿಗೆ ಆಹುತಿ ಮಾಡುವುದು ಎಂದರೆ.. ಕೊಂಚ ಕಷ್ಟ.. ಆದರೂ ಬೆಂಗಳೂರಿನಂತಹ ಮಹಾನಗರಗಳಲ್ಲಿ... ವಾಸಿಸಲು ಕಡಿಮೆ ಆಗುತ್ತಿರುವ ಸನ್ನಿವೇಶದಲ್ಲಿ ಈ ರೀತಿಯ ಕಟ್ಟಿಗೆಯಲ್ಲಿ ಸುಡುವ ಪದ್ದತಿ ಕಡಿಮೆ.. ವಿದ್ಯುತ್ ಚಿತಾಗಾರ ಬಹಳವಾಗಿದೆ  .. ಆದರೂ ಕಟ್ಟಿಗೆಯಲ್ಲಿ ಸುಡುವ ಶಾಸ್ತ್ರ ಬದ್ಧ ಸಂಸ್ಕಾರ ನೋಡಲು ಚೆನ್ನ (ಕ್ಷಮೆ ಇರಲಿ) ಅಥವಾ ಆ ಶಾಸ್ತ್ರ ಸಂಪ್ರದಾಯದ ಪರಿ ಮನೆಯವರಿಗೆ ಕೊಂಚ ತೃಪ್ತಿ ತರುವುದು ಸಹಜ.. (ಇದು ನನ್ನ ವೈಯುಕ್ತಿಕ ಅಭಿಪ್ರಾಯ.. ಕಾರಣ ಅಪ್ಪನ ಸಂಸ್ಕಾರ.. ಕಣ್ಣು ಮುಚ್ಚಿ ಕಣ್ಣು ತೆರೆಯುದರ ಒಳಗೆ ವಿದ್ಯುತ್ ಚಿತಾಗಾರದಲ್ಲಿ ಮುಗಿದು ಹೋಗಿತ್ತು)..

ಇಂದು ನನ್ನ ಅಣ್ಣನ ಮನೆಯ ನೆರೆಹೊರೆಯವರ ಮನೆಯಲ್ಲಿ ಹಿರಿಯರು ಕಾಲನ ಕರೆಗೆ ಓಗೊಟ್ಟು ತಮ್ಮನ್ನು ಪ್ರೀತಿಸುವ ಪರಿವಾರವನ್ನು ತ್ಯಜಿಸಿ ಹೊರನೆಡೆದಿದ್ದರು.. ತುಂಬು ಸಂಸಾರದಿಂದ ಬಂದಿದ್ದ ಅವರು.. ಸುಮಾರು ೬೦ ವಸಂತಗಳ ಸುವರ್ಣ ವೈವಾಹಿಕ ಜೀವನವನ್ನು ಪೂರೈಸಿ ತಮ್ಮ ಕುಟುಂಬದ ಏಳು ಬೀಳುಗಳನ್ನು ಸಮನಾಗಿ ಕಂಡು ಅದರ ಏಳಿಗೆಗೆ ಶ್ರಮಿಸಿದ ಜೀವ ಇಂದು ಎಲ್ಲರ ಹೃದಯಕಮಲದಲ್ಲಿ  ನೆನಪುಗಳನ್ನು ಬಿಟ್ಟು ಹೊರಟಿದ್ದರು.

ಅವರ ದುಃಖ ಅವರಿಗೆ..ಮಡದಿ, ಅಮ್ಮ, ತಂಗಿ, ಚಿಕ್ಕಮ್ಮ, ದೊಡ್ಡಮ್ಮ, ಅಜ್ಜಿ,  ಆಂಟಿ ಹೀಗೆ ಹಲವಾರು ಬಂಧಗಳ ಹ್ಯಾಟ್ ಧರಿಸಿದ್ಧ ಆ ಹಿರಿಯ ಜೀವ ಇಂದು ಬರಿ ನೆನಪಾಗಿ ಉಳಿದದ್ದು ಎಲ್ಲರಲ್ಲೂ ದುಃಖವನ್ನು ಒತ್ತರಿಸಿ ತರುತ್ತಿತ್ತು..

ಚಿತಾಗಾರಕ್ಕೆ ಹೋದಾಗ.. ಸಹಜವಾಗಿಯೇ ನನ್ನ ಮನಸ್ಸು ಕದಡಿದ ಸರೋವರವಾಗಿತ್ತು.. ಸಾವು ಮನುಷ್ಯನನ್ನು ಹೇಗೆ ಬದಲಿಸುತ್ತೆ (ಕ್ಷಣ ಮಾತ್ರ.. ಆದರೂ ಸರಿ) ಸ್ಮಶಾನ ವೈರಾಗ್ಯ.. ಅಯ್ಯೋ ಬದುಕು ಇಷ್ಟೇ.. ಇಂದು ಅವರು ನಾಳೆ ನಾವು.. ಈ ರೀತಿಯ ಮಾತುಗಳು ಸಹಜವಾಗಿಯೇ ಕೇಳಿಬರುತ್ತಿದ್ದವು.. ಇಲ್ಲಿಯೂ ಅದಕ್ಕೆ ಹೊರತೇನೂ ಆಗಿರಲಿಲ್ಲ.. ಆದರೆ ನನ್ನ ವಿಚಿತ್ರ ಕಣ್ಣುಗಳಿಗೆ ಕಂಡ ಕೆಲವು ದೃಶ್ಯಗಳು ಅಕ್ಷರ ರೂಪದಲ್ಲಿ ಬರಲು ಶ್ರಮಿಸಿದವು.. ಹಾಗಾಗಿ ಈ ಲೇಖನ ನಿಮ್ಮ ಮುಂದೆ..

ಒಳಗೆ ಹೋಗುತ್ತಲೇ.. ಒಂದು ಮಾರುತಿ ವ್ಯಾನ್.. ಅದರೊಳಗೆ ಕೂರಲು ಆಗದಷ್ಟು ಮಡಿಕೆ ಕುಡಿಕೆಗಳು ಮತ್ತು ಸಂಸ್ಕಾರಕ್ಕೆ ಬೇಕಾಗುವ ಪದಾರ್ಥಗಳು.. ಅಚ್ಚರಿ ಎನಿಸಿತು.. ಆದರೂ ಈ ಮಹಾನಗರದಲ್ಲಿ ಈ ರೀತಿಯ ದುಃಖತಪ್ತ ಸಂದರ್ಭದಲ್ಲಿ ಬೇಕಾಗುವ ಪರಿಕರಗಳನ್ನು ಹುಡುಕಿಕೊಂಡು  ಅಲೆಯುವುದನ್ನು ಕಡಿಮೆ ಮಾಡಲು ಸಿದ್ಧತೆಕಂಡು ಮನಸ್ಸಿಗೆ ಆಹ್ ಎಲ್ಲವೂ ಪೂರ್ವಸಿದ್ಧತಾಮಯ ಎನ್ನಿಸಿತು..
ಎಲ್ಲವೂ ಸಿದ್ಧ.. ಈ ಕ್ಷಣಿಕ ಜಗತ್ತಿನಲ್ಲಿ ಓಡಾಡಲು ಸಮಯವಿಲ್ಲ.. ಹಾಗಾಗಿ ನಾ ಸಿದ್ಧ !!!

ಅಲ್ಲಿನ ಸಿಬ್ಬಂಧಿಗಳಿಗೆ ಸಾವು, ಕಳೇಬರ, ಡೆಡ್ ಬಾಡಿ, ಸಂಸ್ಕಾರ ಇವೆಲ್ಲವೂ ನಾವು ದಿನನಿತ್ಯ ಕಚೇರಿಗೆ ಹೋಗಿ ಫೈಲ್, ಲ್ಯಾಪ್ಟಾಪ್, ಪ್ರಾಜೆಕ್ಟ್ ಅನ್ನುವಂತೆ ಅದು ಅವರ ಕೆಲಸ ಅಲ್ಲವೇ.. ನಾವುಗಳು ಅಲ್ಲಿಗೆ ಹೋಗಿ ಬಂದ ಮೇಲೆ ಸ್ನಾನ ಮಾಡುತ್ತೇವೆ .. ಅವರು ಸ್ನಾನ ಮಾಡಿಕೊಂಡು ಅಲ್ಲಿಗೆ ಬರುತ್ತಾರೆ.. ಅಷ್ಟೇ ವ್ಯತ್ಯಾಸ..

ಒಬ್ಬೊಬ್ಬರದು ಒಂದೊಂದು ರೀತಿಯ ಸಂಪ್ರದಾಯ.. ಕೆಲವರು ಮಂತ್ರಘೋಷಗಳ ನಡುವೆ ಕಾರ್ಯ ನೆಡೆಸಿದರೆ.. ಕೆಲವರದು ತಮಟೆ ಸದ್ದಿನ ಜೊತೆಯಲ್ಲಿ.. ಇನ್ನೂ ಕೆಲವರದು ಆಗಲೇ ಮೈಯಲ್ಲಿ ತುಂಬಿಕೊಂಡ ಪರಮಾತ್ಮನ ವರಪ್ರಸಾದದಿಂದ ತೂರಾಡುತ್ತಾ ತಮಗೆ ಬಂದ ರೀತಿಯಲ್ಲಿ ಶವಸಂಸ್ಕಾರ ಮಾಡುವ ಪದ್ಧತಿ.. ಏನೇ ಆದರೂ ಅವರವರ ಭಾವಕ್ಕೆ ಅವರವರ ಭಕುತಿಗೆ ... !
ತಾವು ಬದಕಲು... ಬದುಕಿ ಬಾಳಿದ ಜೀವಿಗೆಕಾಯುತ್ತಿರುವ ಕ್ಷಣ 

ಆ ರುದ್ರಭೂಮಿಯ ಒಬ್ಬ ಕೆಲಸಗಾರ ಅಕ್ಷರಶಃ  ತೂರಾಡುತ್ತಾ ಬಂದ.. ಎಲ್ಲವೂ ಸಿದ್ಧವಾಗಿದೆಯೇ.. ಏನಾದರೂ ಬೇಕಿತ್ತೆ.. ಹೇಳಿ.. ಅಂದಾಗ.. ಯಾರೂ ಮಾತಾಡದೆ ಇದ್ದದ್ದು ನೋಡಿ.. ಆಗಲಿ.. ಬಾಡಿ ಬರಲಿ, ಪೂಜಾರಪ್ಪ ಬರಲಿ, ಸೌದೆ ಬರಲಿ.. ಬರಲಿ ಬರಲಿ ಬರಲಿ ಬರಲಿ.. ಹೀಗೆ ಏನೇನೂ ಬಡಬಡಿಸುತ್ತಾ ಹೋದ..

ಹಿರಿಯ ಚೇತನವನ್ನು ಕಳೆದುಕೊಂಡ ನೋವು ಒಬ್ಬರಿಗೆ.. ಆ ಸಮಯದಲ್ಲಿಯೂ ತಮ್ಮ ವೃತ್ತಿಪರತೆ, ತಮ್ಮ ಹೊಟ್ಟೆ ಪಾಡು ನೋಡಿಕೊಳ್ಳುವ ತವಕ ಇನ್ನೊಬ್ಬರಿಗೆ.. ನಗು ಬರುತ್ತೆ ಆದರೂ ಇದು ಸಹಜಧರ್ಮ.. ನಮ್ಮ ನೋವು ನಮಗೆ.. ಅವರ ಹೊಟ್ಟೆ ಪಾಡು ಅವರಿಗೆ.. ತಪ್ಪಿಲ್ಲ..

ಚಿತೆ ಸಿದ್ಧಮಾಡುವ ಸಿಬ್ಬಂದಿ ಕೂಡ.. "ಅಯ್ಯೋ ಬಿಡಿ ಅಣ್ಣ.. ದಿನಕ್ಕೆ ಎಷ್ಟು ನೋಡ್ತೀವಿ.. ನಮಗೇನೂ ಹೊಸದೇ.. ನಮಗೆ ಇಷ್ಟು ಕೊಡಿ.. ಸರಿಯಾಗಿ ಚಿತೆ ಉರಿದು ಬೂದಿಯಾಗುವವರೆಗೂ ನಾವು ನೋಡಿಕೊಳ್ಳುತ್ತೇವೆ.. ಆಫೀಸ್ ಕಟ್ಟುವ ಹಣಕ್ಕೂ ನಮಗೂ ಸಂಬಂಧ ಇಲ್ಲ.. ನಾವು ತಾನೇ ಇದನ್ನು ಮೆಂಟೇನ್ ಮಾಡೋದು .. ಇಲ್ಲಿ ಚೌಕಾಸಿ ಮಾಡಬಾರದ್ ಅಲ್ಲವೇ ಅಣ್ಣ .. " ಮಾತಿರಲಿಲ್ಲ ನನ್ನ ಬಳಿ..

ಎಲ್ಲವೂ ಸರಿ.. ಎಲ್ಲವೂ ತಪ್ಪು.. ಯಾವುದು ಸರಿ ಯಾವುದು ತಪ್ಪು.. ಅರಿವಿಲ್ಲ.. ಆ ಕ್ಷಣಕ್ಕೆ ಎಲ್ಲವೂ ಸರಿ ಎನ್ನಿಸತೊಡಗಿತು ಅವರವರ ದೃಷ್ಟಿಕೋನದಲ್ಲಿ.. :-)

ಕೇಶಮುಂಡನ ಮಾಡುವ ವ್ಯಕ್ತಿ.. ಅಲ್ಲಿಯೇ ಬಿದ್ದಿದ್ದ ಇದ್ದಲಿನಲ್ಲಿ ತನ್ನ ಮೊಬೈಲ್ ಸಂಖ್ಯೆ ಬರೆದದ್ದು ನನಗೆ ಮೊದಲು ನಗು ತಂದರೂ.. ನಂತರ ಅಬ್ಬಾ ಇಂತಹ ಅಡ್ವಟೈಸ್ಮೆಂಟ್ / ಮಾರ್ಕೆಟಿಂಗ್ ಅನ್ನಿಸಿತು..  ಆತನಿಗೂ ಇದು ತನ್ನ ಕೆಲಸ.. ಸರಿ ಎನ್ನಿಸಿತು.. ಹೌದು ಕೆಲವು ದೊಡ್ಡ / ಪುಟ್ಟ ವಿಷಯಗಳು ಭೂತಾಕಾರವಾಗಿ ಕಾಡುವುದೇ ಇಂತಹ ಸನ್ನಿವೇಶದಲ್ಲಿ.. ಎಲ್ಲವೂ ಇದ್ದರೂ.. ಕೇಶ ಮುಂಡನ ಮಾಡುವವ ಇಲ್ಲದೆ ಹೋದರೇ.. ರೇ ರೇ ರೇ ರೇ... !
ಕಾಗುಣಿತ ಹೇಗೆ ಇರಲಿ.. ಆದರೆ ವೃತ್ತಿಪರತೆ ಮೆಚ್ಚುವ ಅಂಶ.. 
ಹೀಗೆ ನನ್ನ ಮಾನಸ ಸರೋವರದಲ್ಲಿ ಅಲೆಅಲೆಯಾಗಿ ಏಳುತ್ತಿದ್ದ ಅನೇಕ ಪ್ರಶ್ನೆ ಉತ್ತರಗಳ ನಡುವೆ.. ಆ ಬಿರುಬಿಸಿಲಿಗೆ ತಲೆ ನೋವು ಶುರುವಾಗಿ.. ಹಾಗೆ ಕಂಬಕ್ಕೆ ಒರಗಿ ಕೂತಿದ್ದೆ.. ಆ ಕಡೆ ಕೇಶ ಮುಂಡನ ಕಾರ್ಯ ತುಸು ತಡವಾಗಿತ್ತು.. ಕಾರಣ ಕೇಶ ಮುಂಡನ ಮಾಡುವವ ಇನ್ನೊಂದು ಕಡೆ ಬ್ಯುಸಿ.. ಕಾಯುತ್ತಿದ್ದ ಕೂತಿದ್ದವರು ಹಲವರು ಇಲ್ಲಿ.. ಕಾಯುತ್ತಾ ಕಾಯುತ್ತಾ ಹಾಗೆ ಕಂಬಕ್ಕೆ ಒರಗಿ ಕೂತಿದ್ದ ನನಗೆ, ಯೋಚನಾ ಲಹರಿಯ ಅಲೆಗಳು ಮನದ ಕಡಲಿಗೆ ಬಡಿದು ಬಡಿದು ಹಾಗೆ ಕಣ್ಣುಗಳು ತಮ್ಮ ಕೋಣೆಯ ಕದವನ್ನ ಮುಚ್ಚಿಕೊಂಡ ಹೊತ್ತು..

ಏನಿಲ್ಲಾ ಎಂದರೂ ಸುಮಾರು ಇಪ್ಪತ್ತು ಇಪ್ಪತೈದು ನಿಮಿಷ ಮನಸ್ಸು ಆ ಸ್ಥಳದಿಂದ ಆಗಸ ಮಾರ್ಗದಲ್ಲಿ ದೇವಲೋಕದಲ್ಲೆಲ್ಲಾ ಓಡಾಡುತ್ತಿತ್ತು.. ಭುವಿಯಲ್ಲಿ ನೆಡೆಯುತ್ತಿದ್ದ ಕಾರ್ಯಕ್ರಮಗಳು ನನ್ನನ್ನು ಅಲ್ಲಿಂದ ಕರೆತರಲು ಸೋತಿದ್ದವು..

ಟಪಕ್ .. ಧಪ್.. ಮಡಿಕೆ ಒಡೆದ ಸದ್ದಿಗೆ.. ಅಚಾನಕ್ ನನ್ನ ಮನಸ್ಸು ಭುವಿಗೆ ಇಳಿಯಿತು.. ಅರೆ ಇದೇನಿದು.. ಸ್ಮಶಾನದಲ್ಲಿ ನಿದ್ದೆಯೇ.. ಅಯ್ಯೋ ದೇವರೇ.. ಅನ್ನಿಸಿತು.. ಯಾರು ಗಮನಿಸಿದ್ದರೋ ಇಲ್ಲವೋ ತಿಳಿಯದು.. ಆದರೆ ನಾ ಇಪ್ಪತ್ತು ಇಪ್ಪತ್ತೈದು ನಿಮಿಷ ನಿದ್ರಿಸಿದ್ದು ಮಾತ್ರ ಸುಳ್ಳಲ್ಲ.. {ನನಗೆ ಅರಿವಿಲ್ಲದೆ ಒಂದು ಆಸೆ ಕಾಡುತ್ತಿತ್ತು... ಸ್ಮಶಾನದಲ್ಲಿ ನಿದ್ದೆ ಮಾಡಬಹುದೇ.. ಮಾಡಿದರೆ ಅದರ ಸವಿ ಹೇಗೆ ಇರುತ್ತದೆ.. ಅದು ನೆರೆವೇರಿತು.. ವಿಚಿತ್ರ ಆಸೆ.. ಆದರೆ ನಿಜ :-)}

ಕಣ್ಣು ಬಿಟ್ಟು ನೋಡಿದೆ.. ಆಗಲೇ ಮುಂದಿನ ಕಾರ್ಯಗಳು ನೆರೆವೇರುತ್ತಿದ್ದವು... ಇನ್ನೇನು ಸಂಸ್ಕಾರದ ಅಂತಿಮ ಹಂತ ತಲುಪಿತ್ತು.. ಬಂದವರೆಲ್ಲ ತಮ್ಮ ಅಂತ್ಯ ನಮನಗಳನ್ನು ಆ ಹಿರಿಯ ಜೀವಕ್ಕೆ ಸಲ್ಲಿಸಿದ್ದು ಆಗಿತ್ತು.. ಕೆಲವೇ ಕ್ಷಣಗಳು ದೇವರು ಮಾಡಿದ ಈ ಜೀವವೆಂಬ ಮಡಿಕೆ ಅಗ್ನಿಯ ಜೊತೆಯಲ್ಲಿ ಆಲಿಂಗನಕ್ಕೇ ಸಿದ್ಧವಾಗಿತ್ತು.. ಧಗ ಧಗ ಉರಿಯುತ್ತಿದ್ದ ಅಗ್ನಿ ತನ್ನ ಕೆನ್ನಾಲಿಗೆಯನ್ನು ಚಾಚಿಕೊಂಡು ಆ ಹಿರಿಯ ಜೀವವನ್ನು ತನ್ನ ಮಡಿಲಿಗೆ ಸೇರಿಸಿಕೊಂಡ.. ಇನ್ನೊಂದು ಐದಾರು ತಾಸುಗಳು.. ಹಲವಾರು ವಸಂತಗಳನ್ನು ಕಂಡ ಆ ಬ್ರಹ್ಮನ ಕೃತಿ ಒಂದು ಮಡಿಕೆಯೊಳಗೆ ಬೂದಿಯಾಗಿ.. ಕಾವೇರಿ ಮಡಿಲನ್ನು ಸೇರುವ ಕ್ಷಣಗಳು ದೂರವಿರಲಿಲ್ಲ..

ಸುಮಾರು ಹೊತ್ತು ಆ ಚಿತೆಯನ್ನೇ ನೋಡುತ್ತಾ ನಿಂತಿದ್ದೆ.. ಕಾಲುಗಳು ನೋಯುತ್ತಿದ್ದವು.. ತಲೆ ಸಿಕ್ಕಾ ಪಟ್ಟೆ ಸಿಡಿಯುತ್ತಿತ್ತು.. ತಲೆಯ ಮೇಲೆ ಯಾರೋ ಗದಾಪ್ರಹಾರ ಮಾಡುತ್ತಿರುವಂತೆ.. . ಮನಸ್ಸು ಭಾರವಾಗಿತ್ತು.. ಪಕ್ಕದಲ್ಲಿ ನೋಡಿದೆ.. ಇನ್ನೊಂದು ದೇಹದ ಅಂತ್ಯಸಂಸ್ಕಾರಕ್ಕೆ ಕಾಯುತ್ತಿದ್ದ ಚಿತೆಯ ಮೇಲೆ ಬಾಳಿ ಬದುಕಬೇಕಾದ ಪಾರಿವಾಳ ಕೂತಿತ್ತು..

ತನ್ನ ನಿತ್ಯ ಬದುಕಿಗೆ ಆಹಾರ ಹುಡುಕುತ್ತಿರುವ ಪಾರಿವಾಳ!!!

ಒಂದರ ಸಾಹಸಿ ಬದುಕಿನ ಅಂತ್ಯ.. ಇನ್ನೊಂದರದ್ದು ಬದುಕಲು ಪಡುತ್ತಿದ್ದ ಸಾಹಸ  :-(

14 comments:

  1. Badukiruvaregu dehakkondu hesaru, ondu guruthu nentaru, istaru ellaroo... Satta mele baree 'body' enisikolluva deha.... Satta mele enaguttare ennuva prashne..... Indigoo prashneyaagiye ulidide....

    Vicharathmaka baraha.....

    ReplyDelete
    Replies
    1. ಧನ್ಯವಾದಗಳು ಅತ್ತಿಗೆ

      ಕೆಲವೊಂದು ವಿಚಾರಗಳು ಮನದಲ್ಲಿ ಹೇಗೆ ಮೂಡುತ್ತವೆ ಅರಿವಾಗೋಲ್ಲ.. ಅದನ್ನು ಹರಿಯಬಿಟ್ಟಾಗ ಮನಸ್ಸಿಗೆ ನೆಮ್ಮದಿ

      Delete
  2. Death is always been an enigma we don't understand. When it visits someone near to us, we feel like the whole world is grieving with us. Its a hard realization when you see people rather merchants of death, people who depend on other people's death are going about this incident like daily routine (which is true in their case). One death which might have devastated a hundred minds will provide food for so many others. It always comes back to that, the circle of life. And you have very neatly explained the circle of death. This article is one of your most serious and amazing written expressions, very honest opinions and thoughtful ironies.

    ReplyDelete
  3. you have the brain of a superb screenplay writer

    the writing is very well treated

    ReplyDelete
  4. Yeno nenapaitu.. yako bejar tara aitu.. nive heliro hage awarawara yochane awaravarige

    ReplyDelete
  5. ನೀವು ಬರೆದಿರೋದು ನಿಜ... ಅಲ್ಲಿಗೆ ಹೋದರೆ ತಾತ್ಕಾಲಿ ವೈರಾಗ್ಯ ಬಂದುಬಿಡುತ್ತೆ.. ಅದು ಹೀಗೆ ಮಾಡ್‌ಬೇಕು ಅದು ಹಾಗ್ಮಾಡ್ಬೇಕು ಅಂತ ತಲಾತಟ್ಟಿಗೆ ಒಬ್ಬೊಬ್ರು ಒಂದೊಂದ್ ಥರ ಸಲಹೆ ಕೊಡ್ತಾರೆ.. ಕೆಲಸ ಮುಗಿಯೋವರೆಗೂ ಮನಸ್ಸು ಸ್ಮಶಾನದ ಸುತ್ತನೆ ಸುತ್ತುತಾ ಇರುತ್ತೆ.. ಬರಹ ಚೆನ್ನಾಗಿದೆ‌

    ReplyDelete
  6. ಸ್ಮಶಾನದಲ್ಲಿ ಒಂದೆಡೆ ರೋಧಿಸುತ್ತಿರುವ ಆಪ್ತರು, ಇನ್ನೊಂದೆಡೆ ವ್ಯವಾಹಾರಸ್ಥ ಸಿಬ್ಬಂದಿ; ಇದೇ ನೋಡಿ ಜೀವನ ಎಂದರೆ! ಚೆನ್ನಾಗಿ ಬರೆದಿದ್ದೀರಿ.

    ReplyDelete
    Replies
    1. ಗುರುಗಳೇ ನಿಮ್ಮ ಪ್ರತಿಕ್ರಿಯೆ ಸುಂದರ.. ಮತ್ತು ಆಶೀರ್ವಾದ

      Delete
  7. Disturbing Sri.... yet it is full of truth...
    One of ur best blog posts...!

    ReplyDelete
    Replies
    1. Death is true to the life..but its arrival..Thank you for your comment DFR

      Delete