Saturday, December 31, 2016

ಅಕ್ಕ(ಅ)ಣ್ಣ ... ಜನುಮದಿನಗಳ ಶುಭಾಶಯಗಳು

ಹೀಗೊಂದು ಸಂಭ್ರಮದ ನೆನಪು.. 

೧೯೭೯ಇಸವಿ .. ಕರುನಾಡಿನಲ್ಲಿ ಅನಂತ್ ನಾಗ್ ಮತ್ತು ಲಕ್ಷ್ಮಿ ಅದ್ಭುತ ಜೋಡಿಯಾಗುವತ್ತ ಹೆಜ್ಜೆ ಹಾಕಿದ್ದ ಕಾಲ. ಕನ್ನಡ ಚಿತ್ರದ ಇತಿಹಾಸದಲ್ಲಿಯೇ ಒಂದು ವಿಭಿನ್ನ ಚಿತ್ರ ಬಿಡುಗಡೆಯಾಗಿತ್ತು. ಅದುವೇ ನಾ ನಿನ್ನ ಬಿಡಲಾರೆ. ಯಶ್ವಸಿಯಾಗಿತ್ತು. ಶಿವಮೊಗ್ಗದ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಆರಂಭಿಕ ದೃಶ್ಯಗಳು ಪ್ರೇಮಮಯವಾಗಿದ್ದವು ,ಹಾಸ್ಯಮಯವಾಗಿದ್ದವು. ಬರು ಬರುತ್ತಾ ದೆವ್ವ ಭೂತಗಳ ಚೇಷ್ಟೆ ಜಾಸ್ತಿಯಾಗಿ ಹೆದರಿಕೆಯಿಂದ ಅನೇಕ ಮಹಿಳೆಯರು ಮಕ್ಕಳು ಚಿತ್ರಮಂದಿರದಿಂದ ಓಡಿಹೋಗಿದ್ದ  ಉದಾಹರಣೆಗಳು ಇದ್ದವು. ಒಂದೆರಡು ಪ್ರದರ್ಶನಗಳಲ್ಲಿ ತುಂಬು ಗರ್ಭಿಣಿಯರಿಗೆ ಹೆದರಿಕೆಯಾಗಿ ಹೆತ್ತ ಘಟನೆಗಳು ನೆಡೆದಿದ್ದವು. ಹೀಗೆ ಒಂದು ರೀತಿಯಲ್ಲಿ ಹಾಡುಗಳಿಂದ, ಅಭಿನಯದಿಂದ ದಕ್ಷ ನಿರ್ದೇಶನದಿಂದ ಚಿತ್ರ ದುಡ್ಡನ್ನು ಬಾಚುತ್ತಿತ್ತು. ಇನ್ನೊಂದು ಕಡೆ ವೀಕ್ಷಕರನ್ನು ಭಯಪೀಡಿತರನ್ನಾಗಿ ಮಾಡುತ್ತಿತ್ತು. 

"ಎಂದೆಂದಿಗೂ ನಾ ನಿನ್ನ ಬಿಡಲಾರೆ ಬಾ ಚಿನ್ನ" ಹಾಡಿನಲ್ಲಿ ಉಪಯೋಗಿಸುವ ಟಿಕ್ ಟಿಕ್ ಚಿಟಿಕೆಯ ವಸ್ತು ಬಹಳ ಪ್ರಸಿದ್ಧವಾಗಿತ್ತು. 

ಅಕ್ಕ ನನ್ನನ್ನು ಮತ್ತು ನನ್ನ ತಮ್ಮನನ್ನು ನಮ್ಮ ಮನೆಯ ಅಕ್ಕ ಪಕ್ಕದವರ ಜೊತೆಯಲ್ಲಿ ಆ ಚಿತ್ರಕ್ಕೆ ಕರೆದೊಯ್ದಳು. ನಮಗೂ ಖುಷಿ ಚಿತ್ರ ನೋಡುವುದೆಂದರೆ. ಆಗ ನನಗೆ ಆರು ವರ್ಷ.. ತಮ್ಮನಿಗೆ ೪ ವರ್ಷ.  ಜೋಶ್ ನಲ್ಲಿ ಚಿತ್ರ ನೋಡಲು ಶುರುಮಾಡಿದೆವು. ಆ ಕಾಲಕ್ಕೆ ಎಷ್ಟು ಅರ್ಥವಾಗಿತ್ತೋ ಬಿಟ್ಟಿತೋ ದೇವರಿಗೆ ಗೊತ್ತು. ಆದರೆ ಎಲ್ಲವೂ ಚೆನ್ನಾಗಿ ಇತ್ತು. ಅನಂತ್ ನಾಗ್ ಆಸ್ಪತ್ರೆಯಿಂದ ಅರ್ಧ ರಾತ್ರಿಯಲ್ಲಿ ಎದ್ದು ಹೊರಗೆ ಹೋಗುತ್ತಾರೆ.. ಅವರನ್ನೇ ಅನುಸರಿಸಿಕೊಂಡು ಲಕ್ಷ್ಮಿ ಹೋಗುತ್ತಾರೆ. ಒಂದು ಸ್ಮಶಾನವನ್ನು ಹೊಕ್ಕ ಅನಂತ್.. ಹಾಗೆ ನಿಲ್ಲುತ್ತಾರೆ .. ಲಕ್ಷ್ಮಿ ಹಿಂದಿನಿಂದ ಬಂದು ರೀ ಎನ್ನುತ್ತಾ ಬೆನ್ನು ಮುಟ್ಟುತ್ತಾರೆ.. ಸರ್ರನೆ ತಿರುಗುವ ಅನಂತ್... 

ಚಿತ್ರಮಂದಿರಲ್ಲಿ ಹೋ ಎಂದು ಕೂಗಾಟ.. ಚೀರಾಟ.. ದೆವ್ವ ಅನಂತ್ ಮೈಮೇಲೆ ಬಂದಿರುತ್ತೆ.. 

ಆಗ ನನ್ನ ಅಕ್ಕ ತೊಡೆಯ ಮೇಲೆ ಕೂರಿಸಿಕೊಂಡಿದ್ದ ನನ್ನನ್ನು ಮತ್ತು ನನ್ನ ತಮ್ಮನನ್ನು ಸೀಟ್ ಕೆಳಗೆ ಕೂರಿಸಿ ಕಿವಿ ಮುಚ್ಚುತ್ತಾಳೆ.. ಹೆದರಿಕೆಯಾಗಬಾರದು ಎಂದು.. ದೆವ್ವದ ದೃಶ್ಯ ಮುಗಿದ ನಂತರ ಮತ್ತೆ ಸೀಟ್ ಮೇಲೆ ಕೂರಿಸುತ್ತಾಳೆ (ಆಗ.. ಚಿಕ್ಕವರಿದ್ದ ಕಾರಣ ಟಿಕೆಟ್ ಇರುತ್ತಿರಲಿಲ್ಲ) ಹೀಗೆ ಚಿತ್ರ ಮುಗಿಯುವವರೆಗೂ ನೆಡೆಯುತ್ತದೆ. ಚಿತ್ರ ಮುಗಿದಮೇಲೆ, ಬೆವರನ್ನು ಒರೆಸಿ ಮನೆಗೆ ಕರೆತರುತ್ತಾಳೆ. ಇದು ಅಕ್ಕನ ಪ್ರೀತಿ ಮಮತೆ. 

ಈ ಘಟನೆ ಏತಕ್ಕೆ ಉಲ್ಲೇಖ ಮಾಡಿದೆ ಎಂದರೆ.. ಪುಟ್ಟ ಘಟನೆ ಆದರೆ ತನ್ನ ತಮ್ಮಂದಿರ ಮೇಲಿನ ಕಾಳಜಿ ವ್ಯಕ್ತವಾಗುತ್ತದೆ. ಇದೆ ಅಕ್ಕ ತಾನು ಬೆಳೆದು ನಮ್ಮನ್ನು ಬೆಳೆಸಿದಳು.. ಹಬ್ಬ ಹರಿದಿನ ಎಂದರೆ... ನಾನು ಮತ್ತು ನನ್ನ ತಮ್ಮ ವಠಾರದ ತುದಿಯಲ್ಲಿ ಅಕ್ಕ ಕೆಲಸ ಮುಗಿಸಿಕೊಂಡು ಬರುವುದನ್ನೇ ಕಾಯುತ್ತಿದ್ದೆವು. ಅದೆಷ್ಟೇ ಹೊತ್ತು ಆಗಲಿ ಅಕ್ಕ ನಮ್ಮನ್ನು ನಿರಾಶೆಗೊಳಿಸುತ್ತಿರಲಿಲ್ಲ.. ಹಾಗೆಯೇ ನಾವು ಕೂಡ ಅಕ್ಕನನ್ನು ಬಾಗಿಲ ಬಳಿಯೇ ಕಾಯುವುದು ಬಿಡುತ್ತಿರಲಿಲ್ಲ.. 

ಇಂತಹ ಅಕ್ಕನ ಜನುಮದಿನವಿಂದು.. ಇಡೀ ವಿಶ್ವವೇ ಈ ದಿನವನ್ನು ಆಚರಿಸುತ್ತದೆ ಕಾರಣ.. ಕ್ಯಾಲೆಂಡರ್ ವರ್ಷ ಇಂದಿಗೆ ಮುಗಿಯುತ್ತದೆ .. ನಾವೂ ಹಾಗೆ ಶುಭ ಕೋರೋಣ ಅಲ್ಲವೇ.. :-)

ಅಕ್ಕ ಜನುಮದಿನದ ಶುಭಾಶಯಗಳು... 

*****

ಅಣ್ಣ ಶಾಲಾ ಕಾಲೇಜುದಿನಗಳಲ್ಲಿ ಓದಿನಲ್ಲಿ ಮುಂದು.. ತಾನು ಓದಿದ್ದನ್ನು ಸರಿಯಾಗಿ ಗ್ರಹಿಸುವುದರಲ್ಲಿ ಎತ್ತಿದ ಕೈ .. ಚಿಕ್ಕ ವಯಸ್ಸಿನಿಂದಲೂ ಓದುವ ಅಭ್ಯಾಸವಿದ್ದ ಇವನಿಗೆ.. ದೊಡ್ಡ ಕಾದಂಬರಿಗಳು ನೀರು ಕುಡಿದಷ್ಟು ಸುಲಭವಾಗಿ ಇವನ ಪಕ್ಕಕ್ಕೆ ಕೂತುಬಿಡುತ್ತಿದ್ದವು. ಇವನು ಕೂಡ ಒಮ್ಮೆ ಅದರ ಮೈ ತಡವಿ ಓದಲು ಕುಳಿತನೆಂದರೆ ಊಟ ತಿಂಡಿ ಯಾವುದು ಬೇಕಿಲ್ಲ.. ಒಮ್ಮೆ ಒಂದು ಪುಸ್ತಕ ಹಿಡಿದನೆಂದರೆ ಮುಗಿಯಿತು.. ಅದು ಓದಿ ಮುಗಿಸಿಯೇ ಏಳುತ್ತಿದ್ದ.. ಆ ಪಾಟಿ ಓದುವ ಹಸಿವು ..  

ಅಕ್ಕ ಕಾಲೇಜಿನ ಪಠ್ಯ ಪುಸ್ತಕವಾಗಿದ್ದ ವಿಷಯಗಳನ್ನು ಅಕ್ಕನ ಸಹಪಾಠಿಗಳು ಇವನ ಹತ್ತಿರ ಬಂದು ಪಾಠ ಹೇಳಿಸಿಕೊಳ್ಳುತ್ತಿದ್ದರು. ಪಾಠ ಅಂದರೆ.. ಆ ದಿನಗಳ ನೋಟ್ಸ್ ನಲ್ಲಿನ ಸಂದೇಹಗಳನ್ನು ನಿವಾರಿಸಿಕೊಳ್ಳುತ್ತಿದ್ದರು. 
ಕಾಲೇಜು ದಿನಗಳಲ್ಲಿ ಅಕ್ಕನ ಸಹಪಾಠಿಗಳಿಗೆ "ಲಾಜಿಕ್" ವಿಷಯ ಕಬ್ಬಿಣದ ಕಡಲೆಯಾಗಿತ್ತು. ನನ್ನ ಅಣ್ಣ ಅಕ್ಕನಿಗಿಂತ ಕೆಳತರಗತಿಯಲ್ಲಿ ಓದುತ್ತಿದ್ದರೂ, ಇವನಿಗೆ "ಲಾಜಿಕ್" ವಿಷಯ ಇವನಿಗೆ ಕರತಲಾಮಲಕ.. ಈ ವಿಷಯವನ್ನು ಅಕ್ಕ ತನ್ನ ಸಹಪಾಠಿಗಳಿಗೆ ಹೇಳಿದ್ದರಿಂದ, ಇವನು ಕಿರಿಯನಾಗಿದ್ದರೂ ಅವರಿಗೆ ಗುರುವಾಗಿ ಬಿಟ್ಟಿದ್ದ. 

ಬಾಲ್ಯದಲ್ಲಿ ಪಟ್ಟ ಅವಮಾನಗಳು, "ಅಪ್ಪನ ಕೆಲಸವೂ ಸಿಗೋಲ್ಲ" ಎಂದು ಮೂದಲಿಕೆ ಕೇಳಿದ್ದ ಈ ಹುಡುಗ ಇಂದು ತನ್ನ ಕಾಲಮೇಲೆ ತಾನು ನಿಂತಿದ್ದು ಅಷ್ಟೇ ಅಲ್ಲದೆ, ತನ್ನದೇ ಒಂದು ಆಫೀಸ್ ಶುರುಮಾಡಿ, ಅನೇಕರಿಗೆ ಕೆಲಸ ಕೊಟ್ಟಿರುವುದು ಸಾಧನೆಯೇ ಹೌದು. 

ನಮ್ಮ ಮನೆಯಲ್ಲಿ ಇವನ ಮಾತು ವೇದವಾಕ್ಯ . ಇವನು ಆಯೋಜಿಸುವ ಕಾರ್ಯಕ್ರಮಗಳಿಗೆ ನಾನು ಮತ್ತು ನನ್ನ ತಮ್ಮ ಓಕೆ ಎಂದು ಹೇಳುವುದಷ್ಟೇ ಕೆಲಸ.,. ಅವನಿಗೆ ಹೆಗಲಿಗೆ ಹೆಗಲು ಕೊಟ್ಟು ಅವನ ಜೊತೆಯಲ್ಲಿ ನಿಂತರೆ ಸಾಕು.. ಹೂವಿನ ಸರ ಎತ್ತಿದಷ್ಟು ಸಲೀಸು ಎಲ್ಲಾ ಕಾರ್ಯಕ್ರಮಗಳು. 

ಡಿಸೆಂಬರ್ ೨೬ ರಂದು ಜನುಮದಿನ ಆಚರಿಸಿಕೊಂಡ ಇವನಿಗೆ ಆ ತಿಮ್ಮಪ್ಪನ ಆಶೀರ್ವಾದವೇ ಸಿಕ್ಕಿದೆ. ಕಾರಣ ಅಂದು ನಮ್ಮ ಇಡೀ ಪರಿವಾರ ಇವನ ಜನುಮದಿನವನ್ನು ಆಚರಿಸಲು ನಿರ್ಧರಿಸಿದ್ದು ತಿಮ್ಮಪ್ಪನ ಆವಾಸ ಸ್ಥಾನ ತಿರುಪತಿಯಲ್ಲಿ.. 

ವಿಜಯ ನಿನ್ನ ಹೆಸರಿನಂತೆ ನಿನ್ನ ಪ್ರತಿ ಕೆಲಸ, ಕನಸು, ಪರಿಶ್ರಮ ನಿನ್ನ ಹೆಸರಿನಂತೆಯೇ ಆಗಲಿ.. 

ಜನುಮದಿನದ ಶುಭಾಶಯಗಳು ವಿಜಯ... !!!!
*****

ಇದು ಡಬಲ್ ಧಮಾಕ.. ಡಿಸೆಂಬರ್ ನಲ್ಲಿ ಎರಡು ಎರಡು ಸಂಭ್ರಮಗಳು.. ಅಕ್ಕನದು ಡಿಸೆಂಬರ್ ೩೧, ಅಣ್ಣನದು ಡಿಸೆಂಬರ್ ೨೬.. ಇಬ್ಬರಿಗೂ ಒಂದೇ ಶುಭಾಷಯ ಒಟ್ಟಿಗೆ ಹೇಳುವ ಸಂಭ್ರಮ ನನ್ನದು ಮತ್ತು ನಮ್ಮೆಲ್ಲರದು. 

4 comments:

  1. ಇಂತಹ ಪ್ರೀತಿಯ ಅಕ್ಕ ಹಾಗು ಅಣ್ಣರನ್ನು ಪಡೆದ ನೀವು ಪುಣ್ಯಶಾಲಿಗಳು. ಅವರಿಗೆ ನನ್ನ ಶುಭಾಶಯಗಳನ್ನೂ ತಿಳಿಸಿರಿ.

    ReplyDelete
  2. ಪ್ರೀತಿಯಲ್ಲಿ ತಂದೆ ತಾಯಿಗಿಂತ ಒಂದೆ ಮೆಟ್ಟಿಲ ಕೆಳಗೆ ಅಣ್ಣ ಅಕ್ಕ ನಿಲ್ಲುತ್ತಾರೆ. ಎಲ್ಲರಿಗೂ ಹೀಗೆ ಸಾತ್ ಕೊಡುವ ಒಡಹುಟ್ಟಿದವರು ಸಿಕ್ಕುವುದಿಲ್ಲ. ಅವರಿಗೆ ನನ್ನ ಕಡೆಯಿಂದ ಹುಟ್ಟು ಹಬ್ಬದ ಶುಭಾಷಯಗಳು :)

    ReplyDelete
    Replies
    1. ನಿಜವಾದ ಮಾತು ಧನ್ಯವಾದಗಳು ಸಿಬಿ

      Delete