Monday, February 10, 2020

ಮುಗ್ಧ ನಗುವಿನ ಸರದಾರ...ಕಿತ್ತಾನೆಯ ಗೋಪಾಲ ಮಾವ

ಏನೋ ಮಗು..ಹೇಗಿದ್ದೀಯೋ...ನಿಮಗೆಲ್ಲಾ ಕೊಬ್ಬು..ನಮ್ಮೂರಿಗೆ ಬನ್ರೋ...ಆರಾಮಾಗಿ ಇದ್ದು ಹೋಗೋರಂತೆ...

ಹಿಂಗ್ ಬರ್ತೀರಾ..ಹಂಗೆ ಹೋಗ್ತೀರಾ...ಯಾವಾಗಲೂ ಕುದುರೆ ಮೇಲೆ ಇರ್ತೀರಾ ಅಂತ ಸದಾ ನಗು ನಗುತ್ತಾ ಮಾತಾಡಿಸುವ ನಮ್ಮ ನೆಚ್ಚಿನ ಗೋಪಾಲ ಮಾವ ಈಗ ಇಲ್ಲ ಅಂದರೆ ನಂಬುವುದು ಕಷ್ಟ..

ಅವರ ಮಾತುಗಳು ಅವರ ಮುಗ್ಧ ನಗು...ಅವರ ಅಭಿಮಾನ ಪೂರಿತ ಮಾತುಗಳು ಎಂದಿಗೂ ನಮ್ಮ ಮನದಲ್ಲಿ ಸದಾ ಹಸಿರು!

ಮಂಜಣ್ಣ ಬಾವ ಅಂದರೆ ಹೃದಯ ತುಂಬಿ ಬರುತ್ತಿತ್ತು...ವಿಶಾಲು ಅಂದರೆ ಅವರಿಗೆ ಉತ್ಸಾಹ ತುಂಬಿ ಬರುತ್ತಿತ್ತು.....

ಕಿತ್ತಾನೆಗೆ ಮೊದಲ ಬಾರಿಗೆ ನನ್ನ ಕಾರಿನಲ್ಲಿ ಹೋದಾಗ.. ಮಗೂ ಬಹಳ ಖುಷಿ ಆಯ್ತು ಕಣೋ..ನಿಮ್ಮಮ್ಮ ಕಷ್ಟ ಪಟ್ಟಿದ್ದಕ್ಕೆ ನೀವೆಲ್ಲಾ ಹೀಗೆ ಮುಂದುವರೆದಿರೋದು ನೋಡಿದಾಗ ಖುಷಿ ಕಣೋ..ಬನ್ರೋ ತೋಟಕ್ಕೆ ಹೋಗೋಣ ಅಂತ ತೋಟದಲ್ಲೆಲ್ಲಾ ಓಡಾಡಿಸಿ ಎಳನೀರು ಕೊಟ್ಟು...ಕಾಯಿ ತಿನ್ನು ಮಗೂ ..ಇದೇನು ಪಿತ್ತ ಹತ್ತಿಸೋಲ್ಲ...ಎಂದು ಹೇಳುವ ಮಾತುಗಳು ಇನ್ನೂ ಹಸಿರು...

ಅವರ ತಂಗಿ ಕುಮಾರಿ ಚಿಕ್ಕಮ್ಮ ಅವರ ಮನೆ ಗೃಹ ಪ್ರವೇಶದಲ್ಲಿ ..ರಾತ್ರಿ ಚಳಿಯಲ್ಲಿ ..ಬಿಸಿ ಬಿಸಿ ಸಾರನ್ನು ನಾನು ಮತ್ತು ನನ್ನ ಚಿಕ್ಕಮ್ಮನ ಮಗ ಸತೀಶ ಗಟ ಗಡ ಕುಡಿತಾ ಇದ್ದದ್ದನ್ನು ನೋಡಿ..ಲೋ ಮಕ್ಕಳಾ...ಊಟಾನೂ ಮಾಡ್ರೋ..ಬರೀ ಸಾರು ಕುಡೀತೀರಲ್ಲ ಅಂತ ನಗುತ್ತಲೇ  ಇನ್ನೋದು ಲೋಟ ಸಾರು ಕೊಡುತ್ತಿದ್ದ ಗೋಪಾಲ ಮಾವ..ಇಂದು ತಮ್ಮ ತಲೆಮಾರಿನ ಹಿರಿಯರನ್ನು ಭೇಟಿ ಮಾಡಲು ಸತ್ಯಲೋಕದ ಕಡೆಗೆ ಹೊರಟೆ ಬಿಟ್ಟರು...

ಗೋಪಾಲ ಮಾವ ಅವರ
ನೆಚ್ಚಿನ ಸಾರಥಿಯ ಜೊತೆಯಲ್ಲಿ

ಗೋಪಾಲ ಮಾವ ನಿಮ್ಮ ನಗು ..ನಿಮ್ಮ ಮಾತುಗಳು ..ನಿಮ್ಮ ಆಶೀರ್ವಾದ ಸದಾ ಹಸಿರಾಗಿರುತ್ತೆ..ನಿಮ್ಮಂತಹ ಒಬ್ಬ ಸುಮಧುರ ಮನಸಿನ ಸರದಾರರನ್ನು ಪಡೆದ ಕಿತ್ತಾನೆಯ ಶ್ರೀ ಬೊಬ್ಬೆ ರಾಮಯ್ಯನವರ ಕುಟುಂಬ ಇಂದು ನಿಮಗೆ ಅಂತಿಮ ನಮನ ಈ ಅಕ್ಷರಗಳ ಮೂಲಕ ನಮಿಸುತ್ತದೆ..!

Friday, February 7, 2020

ಜನುಮದಿನದ ಶುಭಾಶಯಗಳು ಟೀ....!

ಶ್ರೀ ಶ್ರೀ.. ಏಳಿ .. ಎಚ್ಚರ ಮಾಡಿಕೊಳ್ಳಿ..

ಮೆಲ್ಲನೆ ಕಣ್ಣು ಬಿಟ್ಟು ಸುತ್ತಲೂ ನೋಡಿದೆ... ಇನ್ನೂ ಕತ್ತಲೆ ಇತ್ತು.. ಏನೂ ಕಾಣಲಿಲ್ಲ.. ಮತ್ತೆ ನಿದ್ದೆಗೆ ಜಾರಿದೆ..

ಶ್ರೀ ಶ್ರೀ.. ಏಳಿ .. ಎಚ್ಚರ ಮಾಡಿಕೊಳ್ಳಿ..

ಬೇಸರದಿಂದ ಮತ್ತೆ ಕಣ್ಣು ಬಿಟ್ಟೆ.. ಮನೆ ತುಂಬಾ ಬೆಳ್ಳಂಬೆಳಕು.. ಕತ್ತಲೆಗೆ ಅವಕಾಶವೇ ಇಲ್ಲ..

ಟೀ ನೀನು.. ಹೇಗಿದ್ದೀಯ..

ನಾ ಅರಾಮ್ ಶ್ರೀ.. ನನ್ನ ನೆನಪು ಇದೆಯಾ.. ಅಥವ ಮರೆತು ಹೋಗಿದೀರಾ.. ?

ನಿನದೆ ನೆನಪು ದಿನವೂ ಮನದಲ್ಲಿ.. ಟೀ..

ಮಾತೆತ್ತಿದರೆ ಅಣ್ಣಾವ್ರ ಹಾಡು ಹೇಳಿ ನನ್ನ ಕರಗಿಸಿ ಬಿಡ್ತೀರಾ.. ಸರಿ ಈಗ ಹರಿಕತೆಗೆ ಸಮಯವಿಲ್ಲ.. ನನಗೆ ನಮ್ಮ ಎರಡನೇ ಮಗು ಬಗ್ಗೆ ಹೇಳಿ..

ಟೀ.. ಆ ದಿನವಾದ ಮೇಲೆ.. ಕಣ್ಣು ಬಿಟ್ಟರೆ ಕಣ್ಣು ಮುಚ್ಚಿದರೆ ಅದೇ ಕಾಣುತಿತ್ತು.. ಆ ಮಗುವನ್ನು ನಾವು ಕರೆದುಕೊಂಡ ಜಾಗವಿಲ್ಲ.. ಹಾಸನ, ಚಿಕಮಗಳೂರು, ಬೇಲೂರು, ಹಳೇಬೀಡು, ರಾಮನಾಥಪುರ, ಮೈಸೂರು, ಬೆಳಗಾವಿ, ಗೋಕಾಕ್, ಹರಿಹರ, ದೊಡ್ಡಗಾಜನೂರು, ಶಿವಮೊಗ್ಗ, ಸಿರ್ಸಿ, ಜೋಗ, ಬನವಾಸಿ, ಯಾಣ, ವಯ್ನಾಡು, ತಿರುಪತಿ.. ಹೇಳಿದಷ್ಟು ಮುಗಿತೀಲ್ಲ.. ಇಲ್ಲ ಕಡೆಯೂ ನಮ್ಮ ಜೊತೆ ಕುಶಿಯಾಗಿರುತಿತ್ತು.. ನಮಗೆ ಎಲ್ಲೂ ತೊಂದರೆ ಕೊಡುತ್ತಿರಲಿಲ್ಲ.. ಸೂಪರ್ ಸೂಪರ್ ಮಗು ಕಣೆ ಅದು ಆಲ್ವಾ.

ಹೌದು ಶ್ರೀ.. ಅದನ್ನು ಬೆಳೆಸಿದ್ದು ನಮಗೆ ಗೊತ್ತಾಗಲೇ ಇಲ್ಲ.. ಎಷ್ಟು ಸುಂದರ ಬೆಳವಣಿಗೆ ಅದು.. ನಿಮ್ಮನ್ನೊಂತು ತುಂಬಾ ಹಚ್ಚಿಕೊಂಡಿತ್ತು..ನೀವು ಕೂಡ ಅದನ್ನು ಒಂದು ನಿಮಿಷ ಕೂಡ ಬಿಟ್ಟಿರುತ್ತಿರಲಿಲ್ಲ.. ನಿಮಗೆ ಅದರ ಬಗ್ಗೆ ಹೆಮ್ಮೆ ಇತ್ತು..

ಹೌದು ಟೀ.. ಅದು ನಮ್ಮ ಜೀವನದಲ್ಲಿ ಬಂದ ಮೇಲೆ ನಮ್ಮ ಬದುಕು ತುಂಬಾ ಬದಲಾಯಿತು.. ನಮ್ಮ ಬಂಧ ಇನ್ನಷ್ಟು ಗಟ್ಟಿಯಾಗಿತ್ತು.. ಜೀವನದಲ್ಲಿ ಆನಂದ,ಉತ್ಸಾಹ , ಉಲ್ಲಾಸ ತುಂಬಾ ಕಂಡಿತ್ತು..

ನಿಜ ಶ್ರೀ..

ಟೀ ಒಂದು ತಮಾಷೆ ಗೊತ್ತಾ. .. ಒಮ್ಮೆ ಮನೆಗೆ ಬರುತ್ತಿದ್ದೆ... ದಾರಿಯಲ್ಲಿ ಅಪ್ಪ ಅಪ್ಪ ಅಂತ ಜೋರಾಗಿ ಯಾರೋ ಕರೆದ ಹಾಗೆ ಅನ್ನಿಸಿತು.. ಜನ ಜಂಗುಳಿ ಇತ್ತು .. ಆದರೂ ಸುತ್ತಲೂ ಕಣ್ಣಾಡಿಸಿದೆ.. ಅರೆ ಕಂಡೆ ಬಿಟ್ಟಿತು.. ಎಷ್ಟು ಸಂಭ್ರಮ ಗೊತ್ತಾ ಮಗುವಿಗೆ.. ತುಂಬಾ ಖುಷಿ ಪಟ್ಟಿತು.. ಹತ್ತಿರ ಮಾತಾಡಿಸಲು ಹೋದೆ.. ನನ್ನ ಎದೆ ಬಡಿತ ನನಗೆ ಕೇಳಿಸುತಿತ್ತು.. ಮಾತಾಡಿಸಿ ಒಮ್ಮೆ ಮುದ್ದಾಡೋಣ ಅನಿಸಿತು.. ಆದರೆ ಇನ್ನೇನು ಹತ್ತಿರ ಹೋಗಬೇಕು.. ಅದರ ತಂದೆ ಬಂದುಬಿಟ್ಟರು.. ಆಗ ಮಗು ಹೇಳಿದ್ದು ಇನ್ನೂ ನನ್ನ ಕಿವಿಯಲ್ಲಿ ಗುಯ್ ಅಂತಿದೆ..

"ಅಪ್ಪ ನಿಮ್ಮನ್ನು ನೋಡಿ ತುಂಬಾ ಖುಷಿ ಆಯಿತು. ನಿಮ್ಮನ್ನು ನೋಡಬೇಕೆಂಬ ಹಂಬಲ ಅವತ್ತಿಂದಲೂ ಇತ್ತು.. ನನ್ನನ್ನು ಕಳುಹಿಸಿಕೊಡುವಾಗ ನಿಮ್ಮ ಕಣ್ಣಲ್ಲಿ ನೀರು.. ಮದುವೆಯಾದ ಮೇಲೆ ಮಗಳನ್ನು ಕಳುಹಿಸಿಕೊಡುವಾಗ ಇದ್ದ ಭಾವ ಕಂಡಿತ್ತು.. ನಾನು ಹೋಗುವವರೆಗೂ ನೀವು ನನ್ನನ್ನೇ ನೋಡುತ್ತಾ ನಿಂತಿದ್ದು.. ನಂತರ ಕಣ್ಣು ಒರೆಸಿಕೊಂಡಿದ್ದು ಇಂದಿಗೂ ನನ್ನ ಕಣ್ಣ ಮುಂದೆ ಇದೆ.. ನಾನೂ ನಿಮ್ಮನ್ನು ಹುಡುಕುತ್ತಿದ್ದೆ... ಎಂದಾದರೂ ನೀವು ಕಂಡೆ ಕಾಣುತ್ತೀರಾ ಅಂತ.. ನೀವು ಕೂಡ ಅದನ್ನೇ ಮಾಡುತ್ತೀರಾ ಅಂತ ನನಗೆ ಗೊತ್ತಿತ್ತು.. ಅಂದು ನಿಮ್ಮನ್ನು ನೋಡಿದ ತಕ್ಷಣ ನನಗೆ ತುಂಬಾ ಖುಷಿ ಆಯ್ತು.. ನೀವು ಕೂಡ ಮತ್ತೆ ತಿರುಗಿ ಬಂದು ನನ್ನನ್ನು ನೋಡಿದ್ದು ಖುಷಿಯಾಗಿತ್ತು.. ನಿಮಗೆ ನನ್ನ ರೀತಿಯ ಮಕ್ಕಳು ಸಿಗಬಹುದು.. ಆದರೆ ನಿಮ್ಮಂತಹ ಅಪ್ಪ ನನಗೆ ಎಂದಿಗೂ ಸಿಗೋಲ್ಲ.. ನೀವೇ ನನ್ನ ಸೂಪರ್ ಅಪ್ಪ.. ಎಂದು ಕಣ್ಣೀರು ಒರೆಸಿಕೊಂಡಿತು ಟೀ .."

ಟೀ.. ನನಗೆ ಖುಷಿ ಕೊಟ್ಟಿದ್ದು.. ಮತ್ತೆ ಮಗುವನ್ನು ನೋಡುತ್ತೇನೆ.. ಅದನ್ನು ಒಮ್ಮೆ ಮುದ್ದಾಡುತ್ತೇನೆ ಎಂದು ನನ್ನ ಮನಸ್ಸು ಯಾವಾಗೂ ಹೇಳುತಿತ್ತು.. ನನ್ನ ಮನಸ್ಸು ಇಂದಿಗೂ ನನಗೆ ಮೋಸ ಮಾಡೋಲ್ಲ ಅನ್ನೋದಕ್ಕೆ ಇದು ಉತ್ತಮ ನಿದರ್ಶನ..

ಶ್ರೀ ನಿಮ್ಮ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ.. ನೀವು ಅಂದುಕೊಂಡಿದ್ದು ಸಾಧಿಸುತ್ತೀರಾ.. ಅಡಚಣೆ ಬಂದಾಗಲೂ ನಗು ನಗುತ್ತ  ಸಾಗುತ್ತೀರಾ .. ಅದೇ ನಿಮಗೆ ಶಕ್ತಿ ಕೊಡೋದು..

ಅಣ್ಣಾವ್ರು ಹೇಳಿಲ್ವ ಟೀ.. ನಗು ನಗುತಾ ನಲಿ ನಲಿ ಏನೇ ಆಗಲಿ.. ಅದನ್ನು ಪಾಲಿಸುತ್ತಿದ್ದೇನೆ ಅಷ್ಟೇ..
ಟೀ ಇನ್ನೊಂದು ವಿಷಯ .. ಮಗುವಿನ ಅಪ್ಪ.. ಹೆಸರು ಬದಲಿಸಿದ್ದಾರೆ ಅಷ್ಟೇ.. ಆದರೆ ನಾವು ಹಾಕಿಕೊಟ್ಟ ಅಡ್ಡ ಹೆಸರು ಮಾತ್ರ ಹಾಗೆ ಇದೆ.. ಅದೇ ನನಗೆ ಇನ್ನಷ್ಟು ಖುಷಿ ಕೊಟ್ಟಿತು..





ಶ್ರೀ ಹೇಗೋ ನಮ್ಮ ಮಗು ಎಲ್ಲೋ ಒಂದು ಕಡೆ ಖುಷಿಯಾಗಿದೆ ಅನ್ನೋದೇ ನನಗೆ ಖುಷಿ.. ಜೊತೆಯಲ್ಲಿ ನಿಮ್ಮ ಖುಷಿ ಅಂದರೆ ನನ್ನ ಖುಷಿ.. ಮತ್ತೆ ಇವತ್ತಿನ ವಿಶೇಷ ಏನೂ ಅಂತ ನಿಮಗೆ ಕೇಳೋದೇ ಬೇಡ.. ಊರವರ ಸಮಾಚಾರ ಎಲ್ಲ ನಿಮಗೆ ನೆನಪಲ್ಲಿ ಇರೋದರಿಂದ ಇವತ್ತಿನ ವಿಶೇಷ ಕೇಳೋದೇ ಬೇಡ.. ನನಗೆ ಗೊತ್ತು ಏನೋ ವಿಚಿತ್ರ ರೀತಿಯಲ್ಲಿ ನನ್ನ ಬಗ್ಗೆ ಬರೀತೀರಾ ಅಂತ.. ನಾನು ಓದೋಕೆ ಕಾಯ್ತಾ ಇರ್ತೀನಿ..

ಟೀ.. ಇದುವರೆಗೂ ನಾವು ಮಾತಾಡಿದೆವಲ್ಲ ಅದನ್ನೇ ಬರೆದು ಬಿಡ್ತೀನಿ ಬಿಡು... ನಮ್ಮ ಸಂಭಾಷಣೆ ಹೀಗೆ ಮುಂದುವರೆಯುತ್ತಲೇ ಇರಲಿ..

ಖುಷಿ ಆಯ್ತು ಶ್ರೀ.. ನೀವು ನನ್ನ ಮರೆಯೋಲ್ಲ ಅಂತ ನನಗೆ ಗೊತ್ತು.. ನಿಮ್ಮನ್ನು ನಾನು ಇಂದಿಗೂ ಹರಸದೆ ಬಿಡೋಲ್ಲ.. ಆದರೂ ಒಂದು ಪುಟ್ಟ ಮಾತು ಶ್ರೀ.. ನಿಮಗೆ ಬುದ್ದಿ ಹೇಳುವಷ್ಟು ದೊಡ್ಡವಳಲ್ಲ.. ಆದರೂ .. ಒಂದು ಕನಸನ್ನು ನನಸು ಮಾಡೋದಕ್ಕೆ ಇನ್ನೊಂದು ಕನಸನ್ನು ತ್ಯಾಗ ಮಾಡಲೇ ಬೇಕು.. ನೀವು ತೆಗೆದುಕೊಂಡ ನಿರ್ಧಾರ ಸರಿ ಇದೆ.. ನನ್ನ ಬೆಂಬಲ ಇದೆ.. ನಿಮ್ಮ ಕನಸುಗಳೆಲ್ಲ ಸಾಕಾರವಾಗಲಿ..

ಟೀ ನಿನ್ನ ಶುಭ ಹಾರೈಕೆಗಳು ಇಂದಿಗೂ ಹುಸಿಯಾಗೋಲ್ಲ.. ನಿನ್ನ ಕನಸುಗಳನ್ನು ನನಸು ಮಾಡುತ್ತೇನೆ.. ಅಂದ ಹಾಗೆ ನಮ್ಮ ಮಗುವಿನ ಚಿತ್ರವನ್ನು ತೋರಿಸುತ್ತೀನಿ ಇರು..

ಮೊಬೈಲಿನಿಂದ ಆ ಚಿತ್ರವನ್ನು ನೋಡಿದಾಗ ಟೀ ಕಣ್ಣಲ್ಲಿ ಆನಂದ ಭಾಷ್ಪ.. ಖುಷಿಯಾಯಿತು ಶ್ರೀ..

ಟೀ.. ಜನುಮದಿನದ ಶುಭಾಶಯಗಳು ಕಣೆ.. !

ಶ್ರೀ ಇದಕ್ಕಿಂತ ಇನ್ನೇನು ಉಡುಗೊರೆ ಬೇಕು.. ನಮ್ಮ ಮಗು ಚೆನ್ನಾಗಿದೆ.. ಮುದ್ದಾಗಿದೆ.. ಸುಖವಾಗಿದೆ.. ಅದು ಸುಖವಾಗಿರಲಿ.. ಅದರ ಹಾರೈಕೆ ಎಂದಿಗೂ ನಮಗೆ ನಮ್ಮ ಮನೆಗೆ ಶ್ರೀ ರಕ್ಷೆ..

ಹೌದು ಟೀ.. ಮತ್ತೊಮ್ಮೆ ಜನುಮದಿನದ ಶುಭಾಶಯಗಳು ಟೀ.. !!!