Saturday, November 30, 2019

"ರಾಮ"ಕ್ಕಯ್ಯ "ಶಶಿ"ದೇವರಗುಡ್ಡದಲ್ಲಿ ವೆಂಕಿಶ್ರೀ

ಮಾತಾಡೋಕೆ ಅವಕಾಶ ಕೊಡಿ ಅಕ್ಕಯ್ಯ..

ಸಾಧ್ಯಾನೇ ಇಲ್ಲ.. ನಿಮಗೆ ಮಾತಾಡೋಕೆ ಅವಕಾಶ ಕೊಟ್ರೆ ನನ್ನ ಒಪ್ಪಿಸಿಬಿಡ್ತೀರ ಅಣ್ಣಯ್ಯ.. ಅದಕ್ಕೆ ನನ್ನ ಕೋಪವನ್ನ ನಿಮ್ಮ ಮೇಲೆ ತೀರಿಸಿಕೊಳ್ಳಲೇ ಬೇಕು..

ಇದು ಪ್ರತಿ ಬಾರಿ ನಮ್ಮಿಬ್ಬರ ನಡುವೆ ನೆಡೆಯುವ ಸಾಮಾನ್ಯ ಸಂಭಾಷಣೆ.. ಜಗಳ, ಕೋಪದಿಂದಲೇ ಶುರು.. ಸರಿ ನಾ ಶಾಲೆಯಲ್ಲಿ ಓದಿದ್ದು, ಕಾಲೇಜಲ್ಲಿ ಕಲಿತಿದ್ದು.. ಜೀವನದಿಂದ ಕಲಿತಿದ್ದು ಎಲ್ಲವನ್ನು ಉಪಯೋಗಿಸಿ.. ಅಕ್ಕಯ್ಯ ದುರ್ಗಾದೇವಿಯನ್ನು ಶಾಂತ ಮಾಡಿದ ಮೇಲೆ.. ನಂತರ ಮಿಕ್ಕ ಮಾತು ಶುರು ಆಗುತ್ತದೆ..

ಮೊದಲ ಶ್ರಾವಣ ಶನಿವಾರ ಕಾಂಚಿಪುರಂ ಅತ್ತಿ ವರದರಾಜ ಸ್ವಾಮಿಯನ್ನು ನೋಡಲು ಹೋಗಿದ್ದು.. ನೀವು ಓದಿದ್ದೀರಾ .. ಹೀಗೆ ಆ ಪ್ರವಾಸದ ನೆನಪಲ್ಲಿ ನಾಲ್ಕು ವಾರಗಳು ಕಳೆದಿದ್ದವು.. ಅಚಾನಕ್.. ವೆಂಕಿ.. ಕರೆ ಮಾಡಿ.. ಮಗಾ ರಾಮನಗರಕ್ಕೆ ಹೋಗೋಣ್ವಾ.. ರಾಮದೇವರ ಗುಡ್ಡ.. ಶ್ರಾವಣ ಶನಿವಾರ..

ಎರಡನೇ ಮಾತಿಲ್ಲದೆ ಓಕೆ ಅಂದಿದ್ದೆ.. ಶಶಿ ಮತ್ತು ಅಕ್ಕಯ್ಯ ಬರ್ತೀವಿ ಅಂತ ಆಯ್ತು.. ಸರಿ.. ವೆಂಕಿ ಮನೆಗೆ ಹೋದೆ .. (ಸರಿಯಾದ ಸಮಯಕ್ಕೆ ಅಂದ್ರಾ.. ಚಾನ್ಸ್ ಇಲ್ಲ.. ನನ್ನ ಸಮಯ ಸರಿಯಾಗಿದೆಯೋ ಇಲ್ವೋ.. ಆದರೆ ಈ ನನ್ನ ಗೆಳೆಯರ ಕಾರ್ಯಕ್ರಮಕ್ಕೆ ಏನಾದರೂ ವಿಘ್ನ ಇದ್ದೆ ಇರುತ್ತೆ.. ) ಹೋದ ಕೂಡಲೇ ತೀರ್ಥ ಪ್ರಸಾದ ಮುಗಿದಿತ್ತು.. ನನಗೆ ಸಹಸ್ರನಾಮ ಅರ್ಚನೆ ಆಯ್ತು..

ಹಲ್ಲು ಬಿಟ್ಟು ಸ್ವೀಕರಿಸಿ.. ಶಶಿಯ ಕಾರು ರಾಮನಗರದ ಕಡೆಗೆ ದೌಡಾಯಿಸಿತು.. ಇನ್ನೇನು ದಾರಿಯುದ್ದಕ್ಕೂ ನಮ್ಮ ತರಲೆ ಮಾತುಗಳು ಅಕ್ಕಯ್ಯನ ಕೈಲಿ ಒದೆಗಳು.. ಶಶಿಯ ಸ್ಪಾಟ್ ಆನ್ ಮಾತುಗಳು.. ವೆಂಕಿಯ ತರಲೆ.. ಇದ್ದೆ ಇದ್ದವು..

ಮಾತಿಲ್ಲದೆ ಹೋದರೆ ಅದು ಪ್ರವಾಸವೇ.. ನನ್ನ ಭಾಗ್ಯ ನನಗೆ ಸಿಗೋರೆಲ್ಲ ಸೊಗಸಾಗಿ ಮಾತಾಡೋರೇ.. ಹಾಗಾಗಿ ನಾ ಆರಾಮು..
ಹೆಬ್ಬಾಗಿಲಿನಲ್ಲಿ ಹರಸಿದ ಹನುಮ 

ರಾಮನಗರದ ಹೆದ್ದಾರಿಯಲ್ಲಿ ದೊಡ್ಡ ಹನುಮನ ವಿಗ್ರಹ ಹೊಂದಿರುವ ಹೆಬ್ಬಾಗಿಲು ನಮಗೆ ಸ್ವಾಗತಿಸಿತು.. ವೆಂಕಿ ಸ್ಥಳೀಯ ಆಗಿದ್ದರಿಂದ.. ಅವ "ಶಶಿ ಕಾರನ್ನು ಇಲ್ಲೇ ಹಾಕು .. ಮುಂದೆ ಹೋಗೋಕೆ ಕಷ್ಟ.. ಸಿಕ್ಕಾಪಟ್ಟೆ ಕಾರುಗಳು, ವಾಹನಗಳು ಇರ್ತವೆ.. . " ಸ್ವಲ್ಪ ವಾದವಿವಾದ ಆಯ್ತು.. ಕಡೆಗೆ ಸಾಮಾನ್ಯ ವೆಂಕಿಯ ಪ್ಲಾನ್ ಯಶಸ್ವೀ ಯಾಗೋದು ಇತ್ತೀಚಿಗೆ ಪಕ್ಕ ಇತ್ತು. .. ಹಾಗಾಗಿ ಅವನ ತರ್ಕಕ್ಕೆ ತಲೆ ಬಾಗಿ.. ಆಟೋ ಹಿಡಿದೆವು.. ಮತ್ತೆ ವೆಂಕಿಯ ಪ್ಲಾನ್.. ಆಟೋ ಚಾಲಕನ ಜೊತೆ ಕಚಪಚ.. ..  ದಾರಿಯುದ್ದಕ್ಕೂ ಜನಜಾತ್ರೆ.. ಗಾಡಿಗಳು.. ಕಾರುಗಳು ದೌಡಾಯಿಸುತ್ತಿದ್ದವು..
ಹನುಮಂತ  ರಾಯ ಮಳೆರಾಯನ 
ಜೊತೆಯಲ್ಲಿ ಮಿಂದ ಕ್ಷಣ 

ರಾಮದೇವರ ಬೆಟ್ಟದ ಬಾಗಿಲಿಗೆ ಬಂದಾಗ.. ಅರಿವಾಯಿತು.. ಆಟೋದಲ್ಲಿಯೇ  ಒಳ್ಳೆದಾಯ್ತು ಅಂತ.. ವೆಂಕಿಯ ಕಡೆಗೆ ನೋಡಿದರೆ ಅವ ಹೊಗಳಿಕೆಯಿಂದ ಮರ ಹತ್ತಿಬಿಡುತ್ತಾನೆ ಎಂಬ ಭಯದಿಂದ.. ಮನದಲ್ಲಿಯೇ ಅವನಿಗೆ ಅಭಿನಂದನೆ ಸಲ್ಲಿಸಿದೆವು.

ಜನಸಾಗರ 
ಮೆಟ್ಟಿಲುಗಳ ರಾಶಿಯನ್ನು ಹತ್ತಿ ಹೋಗುವಾಗ.. ನಗು, ಮಾತು, ಕಿಚಾಯಿಸುವಿಕೆ.. ಅಕ್ಕಯ್ಯನಿಂದ ಹೊಡೆತ ಎಲ್ಲವೂ ಅವಿರತವಾಗಿ ಸಾಗುತ್ತಿತ್ತು.. ಜೊತೆಯಲ್ಲಿ ನನ್ನ ಕ್ಯಾಮೆರಾ ತನ್ನ ಕೆಲಸವನ್ನು ನಿಷ್ಠೆಯಿಂದ ಮಾಡುತಿತ್ತು..

ರಾಮದೇವರ ದರ್ಶನ ಮಾಡಿ.. ವೆಂಕಿ ಕೊಟ್ಟ ದುಡ್ಡಿನಿಂದ ಭಕ್ತಿಯ ದಾರವನ್ನು ಕೈಗೆ ಕಟ್ಟಿಸಿಕೊಂಡು.. ಹೊರಗೆ ಬಂದಾಗ.. ಪ್ರಸಾದ ಕಾಯುತಿತ್ತು.. ಪ್ರಸಾದವನ್ನು ಪಡೆದು.. ಮೇಲಿನ ಬೆಟ್ಟದ ಹಾದಿಯಲ್ಲಿ ಒಂದು ಹೆಬ್ಬಂಡೆಯ ಮೇಲೆ ಕೂತು.. ಪ್ರಸಾದವನ್ನು ಗುಳುಂ ಸ್ವಾಹಾ ಮಾಡಿ.. ಮತ್ತೆ ಒಂದಷ್ಟು ಫೋಟೋಗಳು ಮೂಡಿದವು..
ಪ್ರಸಾದ ಮುಕ್ಕುವ ಸಮಯ 

ಅಣ್ಣಯ್ಯ ಇವರ  ಯಶಸ್ಸಿನ ಹಿಂದೆ ಇರೋದು  ನಾನೇ 

 ಸೂಪರ್ ಜೋಡಿ ಶಶಿ ಪ್ರತಿಭಾಕ್ಕಯ್ಯ 

ತ್ರಿಮೂರ್ತಿ ಶ್ರೀ ಶಶಿ ವೆಂಕಿ 

ತುಂಬಾ ಜನವಿದ್ದರಿಂದ.. ಪೊಲೀಸರು ಒಂಟಿ ಕಂಬಿ ಬೆಟ್ಟದ ನೆತ್ತಿಗೆ ಹತ್ತಲು ಅವಕಾಶ ನಿರ್ಬಂಧಿಸಿದ್ದರು.. ಹಾಗಾಗಿ ಅಲ್ಲಿಯೇ ಕೂತು ಇನ್ನಷ್ಟು ಮಾತುಗಳನ್ನು ಮುಗಿಸಿ.. ಬೆಟ್ಟದ ಬುಡಕ್ಕೆ ಇಳಿಯಲು ಶುರು ಮಾಡಿದೆವು..

ಆಗ ಒಂದು ಆಶ್ಚರ್ಯಕರ ಘಟನೆ ನೆಡೆಯಿತು.. ಕಾಲೇಜು ದಿನಗಳಲ್ಲಿ ರಸ್ತೆ ಬದಿಯ ತಿಂಡಿ ತಿನಿಸುಗಳನ್ನು ತಿಂದು ಅರಗಿಸಿಕೊಳ್ಳುತಿದ್ದ ದೇಹ..  ನಮಗೂ ವಯಸ್ಸಾದಂತೆ (ಕೆಲವು ಒಪ್ಪಿಕೊಳ್ಳೋಲ್ಲ.. ವಯಸ್ಸಾಗಿದೆ ಎಂದು) ಅದನ್ನು ಕಡಿಮೆ ಮಾಡಿದ್ದು ಸುಳ್ಳಲ್ಲ.. ಆದರೆ ಅಲ್ಲಿದ್ದ ಬೋಂಡಾದ ವಾಸನೆ ವೆಂಕಿಯನ್ನು ಎಳೆಯಿತು. "ಶ್ರೀಕಿ ಒಂದಷ್ಟು ಬೋಂಡಾ ತಿನ್ನೋಣ" ಅನ್ನುತ್ತಾ ಬಿಸಿ ಬಿಸಿ ಬೋಂಡಾ ಮುಕ್ಕಿದೆವು.. ಕಡಲೆ ಪುರಿ ಕೊಂಡೆವು.. ಯಾಕೋ ಬೋಂಡಾದ ರುಚಿಗೆ ನಾಲಿಗೆ ಶರಣಾಗಿತ್ತು.. ಇನ್ನೊಂದು ಮೂವತ್ತು ರೂಪಾಯಿಗಳಿಗೆ ಬೋಂಡಾ ಕೊಂಡು.. ಕೆಳಗೆ ಇಳಿದೆವು..











ನಾವು ಕೆಳಗೆ ಇಳಿದೆವು.. ತಿಂದಿದ್ದು ಹೊಟ್ಟೆಯೊಳಗೆ ಆರಾಮಾಗಿ ನುಸುಳಿತ್ತು..

ದಾರಿಯುದ್ದಕ್ಕೂ ಮಳೆ ಬಂದು ರಾಡಿಯಾಗಿದ್ದ ರಸ್ತೆಯಾಗಿದ್ದರೂ ತಲೆ ಕೆಡಿಸಿಕೊಳ್ಳದೆ ಆರಾಮಾಗಿ ಹೆಜ್ಜೆ ಹಾಕಿದೆವು.. ಅಲ್ಲೀತನಕ ಕಣ್ಣ ಮುಚ್ಚಾಲೆ ಆಡುತ್ತಿದ್ದ ಮಳೆರಾಯ.. ಹಠಾತ್ "ಹೋಗಲೇ ಇನ್ನು ತಡೆಯೋಕೇ ಆಗೋಲ್ಲ" ಎನ್ನುವ ಮಗುವಿನಂತೆ ರಚ್ಚೆ ಹಿಡಿದು ಸುರಿಯತೊಡಗಿದ.. ಆಟೋದಲ್ಲಿ ಕೂತಿದ್ದರು ಇರುಚಲು ಮಳೆಯಿಂದಾಗಿ ವೆಂಕಿ ಒಂದು ಬದಿಯಲ್ಲಿ ತೋಯ್ದು ತೊಪ್ಪೆಯಾಗಿದ್ದ..

ಅಲ್ಲಿಂದ ಸೀದಾ ವೆಂಕಿಯ ಮನೆಗೆ ಹೋಗಿ.. ಅವರ ಅಮ್ಮನ ಉಭಯಕುಶಲೋಪರಿ ವಿಚಾರಿಸಿ.. ಅವರ ಜೊತೆಯಲ್ಲಿ ಒಂದಷ್ಟು ಹರಟಿ.. ಬೆಂಗಳೂರಿನ ಕಡೆಗೆ ಹೊರಟೆವು..

ಬಿಡದಿ ದಾಟಿ ಆನಂದ್ ಆಡ್ಯಾರ್ ಭವನದಲ್ಲಿ ಊಟಕ್ಕೆ ಬಂದೆವು.. ಊಟ ಬೇಡ ಅಂತ ಒಬ್ಬರು.. ಊಟವಿರಲಿ ಅಂತ ಒಬ್ಬರು.. ಹೀಗೆ ಎರಡು ಪಕ್ಷವಾದ್ದರಿಂದ.. ಯಥಾಪ್ರಕಾರ ಊಟದಲ್ಲಿ ಎತ್ತಿದ ಕೈಯಾದ ವೆಂಕಿ ಮತ್ತು ನಾನು ಊಟ ಕೊಂಡೆವು.. ಶಶಿ ಮತ್ತು ಅಕ್ಕಯ್ಯ ತಮಗಿಷ್ಟವಾದ ತಿಂಡಿ ಬಾರಿಸಿದರು..

ನಾ ಊಟದಲ್ಲಿ ನಿಧಾನ.. " ನಿನ್ನ ಹೊಟ್ಟೆ ಸೇದೋಗ .. ಆರಾಮಾಗಿ ತಿನ್ನು.. ಒಂದು ಚೂರು ಬಿಡಬೇಡ" ಅಂತ ವೆಂಕಿಯ ಮಾತಿಗೆ ಬೆಲೆಕೊಟ್ಟು.. ಸಾವಕಾಶವಾಗಿ ತಿಂದು ಮುಗಿಸಿದೆ..

ವೆಂಕಿ  ಬಿಡೋದು ಹಲ್ಲು ಹಿಂಗೇ 

ನಾಚಿ ನೀರಾದ 

ವಯಸ್ಸಾದರೇನಂತೆ ಮನ ಯಾವತ್ತೂ ಮಂಗವೇ ಅಲ್ವೇ 

ಮತ್ತೆ ಕಾರಿಗೆ ಬಂದು ಕೂತಾಗ ಬೆಂಗಳೂರಿನ ಕಡೆಗೆ ಮನ ಎಳೆಯುತ್ತಿತ್ತು .. ಅದೇ ಗುಂಗಿನಲ್ಲಿ ವೆಂಕಿ ಮನೆಗೆ ಬಂದು.. ಒಂದಷ್ಟು ಹೊತ್ತು ಹಲ್ಲು ಬಿಟ್ಟು.. ಮನೆ ಕಡೆ ಹೊರಟೆವು..

ತಮಾಷೆ ಅಂದರೆ.. ಈ ವರ್ಷ ಶ್ರಾವಣ ಮಾಸದ ಮೊದಲ ಶನಿವಾರ ಮತ್ತು ಕಡೆಯ ಶನಿವಾರ ಜೀವದ ಗೆಳೆಯರ ಜೊತೆಯಲ್ಲಿ ಕಳೆದದ್ದು..

ಅದು ಖುಷಿ ಕೊಡುವ ಸಂಗತಿ.. ಜೊತೆಯಲ್ಲಿ ಸುಮಾರು ಮೂರು ತಿಂಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಈ ಪ್ರವಾಸ ಮಾಲಿಕೆ.. ಶಶಿ ಮತ್ತು ಅಕ್ಕಯ್ಯನವರ ವಿವಾಹ ಸಂಭ್ರಮದ ಶುಭ ಸಮಯಕ್ಕೆ ಮೂಡಿ ಬಂದಿದ್ದು ಸೋನೇ ಫೆ ಸುಹಾಗ್ ಎನ್ನುವಂತೆ ಬಂದಿದೆ..





ಅಕ್ಕಯ್ಯ ಶಶಿ ೨೧ ಸಂಭ್ರಮದ ವರ್ಷದಿಂದ ಇಪ್ಪತ್ತೆರಡನೆ ವರ್ಷಕ್ಕೆ ಕಾಲಿಟ್ಟಿರುವ ನಿಮ್ಮ ದಾಂಪತ್ಯದಲ್ಲಿ ಸೌಖ್ಯ, ನೆಮ್ಮದಿ, ಶಾಂತಿ ಎಲ್ಲವೂ ನಿಮಗಿರಲಿ.. ನೀವು ನೆಡೆಯುವ ಹಾದಿಯಲ್ಲಿ ಬರುವ ಸಂತಸ, ನಗು, ಉಲ್ಲಾಸ, ಉತ್ಸಾಹಗಳನ್ನು ನೋಡುವ ಸೌಭಾಗ್ಯ ನಮಗೆ ಸದಾ ಇರಲಿ..

ವಿವಾಹ ಸಂಭ್ರಮದ ಶುಭಾಶಯಗಳು!!!

Sunday, November 24, 2019

ಸಹಾಯ....!

ಮೈ ಬೆವರುತ್ತಿತ್ತು.. 

ಒಂದು ಎರಡು ಮೂರು ನಾಲ್ಕು.. ಹತ್ತು .. ಹದಿನೈದು.. ತನ್ನ ಪ್ರೀತಿಯ ಬೈಕ್ ಸಾಮಾನ್ಯ ಎರಡನೇ ಕಿಕ್ಕಿಗೆ ಶುರುವಾಗಬೇಕಿತ್ತು.. ಕತ್ತಲೆ ಗವ್ ಅಂತ ಇತ್ತು.. ಜೀರಂಬೆಗಳ ಸದ್ದು.. ನರಿಗಳು ಊಳಿಡುವ ಶಬ್ದ.. ಯಾಕೋ ಪರಿಸ್ಥಿತಿ ಸರಿಯಿಲ್ಲ ಅನ್ನುವ ಅನುಭವ.. 

ಮತ್ತೆ ಕಿಕ್ ಹೊಡೆಯಲು ಶುರುಮಾಡಿದ... ಹೆಲ್ಮೆಟ್, ಜಾಕೆಟ್ ಎಲ್ಲವು ಒದ್ದೆಮಯವಾಗಿತ್ತು. ಅದನ್ನು ತೆಗೆದು ಬೈಕಿನ ಮೇಲೆ ಇಟ್ಟ  ಸುಸ್ತಾಗಿದ್ದ . ತಲೆ ಕೆಟ್ಟಿತ್ತು.. ಕಿಂಗ್ ಹಚ್ಚಲು ಜಾಕೆಟ್ ಜೇಬಿಗೆ ಕೈ ಹಾಕಿ ಸಿಗರೇಟ್ ತೆಗೆದು ತುಟಿಯ ಮಧ್ಯೆ ಇಟ್ಟು  ಲೈಟರ್ ಫರ್ ಫರ್ ಸದ್ದು ಮಾಡಿತೇ ವಿನಃ.. ಬೆಳಗಲಿಲ್ಲ.. ಥೂ ಥರಿಕೆ ಎಂದು ಬಯ್ದುಕೊಂಡು.. ಎಮರ್ಜೆನ್ಸಿ ಅಂತ ಇಟ್ಟುಕೊಂಡಿದ್ದ ಬೆಂಕಿ ಪೊಟ್ಟಣ ತೆಗೆದ.. ಚರ್ ಕಡ್ಡಿ ಗೀರಿ ಹತ್ತಿಕೊಂಡಿತು... ಆ ಬೆಳಕಲ್ಲಿ ಕಂಡ ದೃಶ್ಯ ಕಂಡು ಹೌಹಾರಿದ.. 

ಅನತಿ ದೂರದಲ್ಲಿಯೇ ಬೆಳ್ಳನೆಯ ಒಂದು ಆಕೃತಿ... ಮೈ ಕೈ ಕಾಲು ನಡುಗ ಹತ್ತಿತು.. ಓಡಿ ಹೋಗೋದಾ . ನಿಲ್ಲೋದ.. ಏನೂ ಯೋಚನೆ ಮಾಡಲಾಗದ ಪರಿಸ್ಥಿತಿ.. ತುಟಿಯಲ್ಲಿದ್ದ ಸಿಗರೇಟ್ ಆ ನಡುಕದಲ್ಲಿ ಬಿದ್ದು ಹೋಗಿತ್ತು.. 

ಬೆಂಕಿ ಕಡ್ಡಿ ಕೊನೆ ತನಕ ಉರಿದು.. ಇನ್ನೂ ನನಗಾಗದು ಅಂತ ಅವನ ಕೈ ಬೆರಳುಗಳಿಗೆ ತನ್ನ ಇರುವನ್ನು ತೋರಿಸಿದ ಮೇಲೆ.. ಗಾಬರಿಯಾಗಿ ಕಡ್ಡಿ ಕೆಳಗೆ ಬೀಳಿಸಿದ.. 

ಒಣಗಿದ ಹುಲ್ಲು..  ಅಲ್ಪ ಸ್ವಲ್ಪ ಬೆಂಕಿಯ ಕೆಂಡವಿದ್ದ ಬೆಂಕಿ ಕಡ್ಡಿ.. ಆಗೊಮ್ಮೆ ಈಗೊಮ್ಮೆ ತಣ್ಣಗೆ ಬೀಸುತ್ತಿದ್ದ ಗಾಳಿ.. ಇಷ್ಟು ಸಾಕಾಗಿತ್ತು.. ಎಲ್ಲೋ ಸುಟ್ಟ ವಾಸನೆ.. ಹೊಗೆ ಕಣ್ಣಿಗೆ ಉರಿಕೊಟ್ಟಾಗ ಮತ್ತೆ ಧರೆಗಿಳಿದ ರಾಜೇಶ.. ನೋಡು ನೋಡುತ್ತಿದ್ದಂತೆಯೇ.. ಹತ್ತಿರದ ಹುಲ್ಲಿನ ರಾಶಿಗೆ ಬೆಂಕಿ.. ಕಪ್ಪು ಕತ್ತಲೆಯಿದ್ದ ಪ್ರದೇಶ ಅಚಾನಕ್ ಬೆಳಕಿನ ಹೊಂಡವಾಗಿತ್ತು.. 

ಏನನ್ನೋ ನೆನಸಿಕೊಂಡು.. ಮತ್ತೆ ಆ ಕಡೆ ನೋಡಿದ.. ಆ ಹೊಗೆ.. ಆ ಬೆಂಕಿಯ ಜ್ವಾಲೆಯ ಮಧ್ಯದಲ್ಲಿಯೂ ಆ ಬೆಳ್ಳಗಿನ ಆಕೃತಿ ಕಾಣಿಸಿತು.. ತನ್ನತ್ತ ಬರಲು ಕೈಬೀಸಿದಂತೆ ಭಾಸವಾಯಿತು.. ನಡುಕ.. ಆದರೆ ಬೇರೆ ದಾರಿಯಿಲ್ಲ.. ಮೆಲ್ಲಗೆ ಬೆಂಕಿಯನ್ನು ಬಳಸಿಕೊಂಡು ಅತ್ತ ಕಡೆ ಹೆಜ್ಜೆ ಹಾಕಿದ.. ಒಂದೈವತ್ತು ಮೀಟರ್ ಇರಬಹುದು.. ಹತ್ತಿರ ಬಂದ... ಉದ್ದನೆಯ ಬಿಳಿಯ ನಿಲುವಂಗಿ.. ತಲೆಗೆ ಬಿಳಿಬಣ್ಣದ ಮಂಕಿ ಕ್ಯಾಪ್.. ಪಾದರಕ್ಷೆಯಿಲ್ಲದ ಕಾಲುಗಳು ಹುಲ್ಲಿನ ಹಾಸಿನಲ್ಲಿ ಮುಚ್ಚಿ ಹೋಗಿತ್ತು.. ಬೆಂಕಿ ಇನ್ನೂ ತನ್ನ ಕೆನ್ನಾಲಿಗೆಯನ್ನು ಇಲ್ಲಿಯ ತನಕ ಚಾಚಿರಲಿಲ್ಲ.. ಬೀಸುವ ಗಾಳಿಗೆ ತೊಯ್ದಾಡುತ್ತಿತ್ತು.. 

"ನಾನು ಪಕ್ಕದ ಊರಿನಲ್ಲಿರುವ ಚರ್ಚಿನ ಪಾದ್ರಿ.. ನನ್ನನ್ನು ಆ ಚರ್ಚಿನ ತನಕ ಬಿಡುತ್ತೀಯಾಪ್ಪಾ.. ಚಪ್ಪಲಿ ಇಲ್ಲದ ಕಾಲುಗಳು ಚುಚ್ಚುತ್ತಿವೆ.. "

"ಸರಿ ಫಾಧರ್ ಬನ್ನಿ... ಆದರೆ ನನ್ನ ಬೈಕ್ ಸಮಸ್ಯೆ ಕೊಡುತ್ತಿದೆ.. ಸ್ಟಾರ್ಟ್ ಆಗುತ್ತಿಲ್ಲ.. ಬಹುಶಃ ಪೆಟ್ರೋಲ್ ಖಾಲಿಯಾಗಿರಬಹುದು.. "

"ನೋಡು ಚೈಲ್ಡ್.. ಚರ್ಚಿಗಾಗಿ ಪೆಟ್ರೋಲ್ ಬೇಕಿತ್ತು.. ಒಂದು ಬಾಟಲಿಯಲ್ಲಿ ಹಾಕಿಕೊಂಡಿದ್ದೇನೆ.. ಸ್ವಲ್ಪ ನೀನು ಬೈಕಿಗೆ ಹಾಕಿ ಶುರು ಮಾಡು. ಚರ್ಚ್ ತನಕ ಬಂದರೆ ಸಾಕು... ಇವತ್ತು ಅಲ್ಲಿಯೇ ಮಲಗಿದ್ದು.. ಬೆಳಿಗ್ಗೆ ಹೋಗುವಂತೆ.. ನಿನ್ನ ಬೈಕಿಗೆ ಪೆಟ್ರೋಲ್ ಹೊಂದಿಸುವ ಹೊಣೆಗಾರಿಕೆ ನನ್ನದು.. ಆಗಬಹುದಾ"

ಬೇರೆ ದಾರಿಯಿರಲಿಲ್ಲ.. ಒಪ್ಪಿಕೊಂಡ.. 

ಇಬ್ಬರೂ ಸೇರಿ ಅಲ್ಪ ಸ್ವಲ್ಪ ಉರಿಯುತ್ತಿದ್ದ ಬೆಂಕಿಗೆ ಮಣ್ಣು, ಮರಳು, ಕಲ್ಲುಗಳನ್ನು ಹಾಕಿ ಪೂರ್ಣ ಆರಿಸಿದ್ದರು... 

ಪಾದ್ರಿ ಕೊಟ್ಟ ಬಾಟಲಿನಲ್ಲಿದ್ದ ಪೆಟ್ರೋಲ್  ಹಾಕಿ.. ಬೈಕಿಗೆ ಒಂದು ಕಿಕ್.. ಡುಗು ಡುಗು ತನ್ನ ಇಷ್ಟವಾದ ರಾಯಲ್ ಎಂಫಿಎಲ್ಡ್ ಓಡಲು ಶುರುಮಾಡಿತು.. 

ಅಲ್ಲಿಂದ ಹೊರಡುವ ಮೊದಲು.. ಉರಿಯುತ್ತಿದ್ದ ಬೆಂಕಿಯನ್ನೊಮ್ಮೆ ಇಬ್ಬರೂ ನೋಡಿದರು.. ಗಾಳಿಗೆ ಬೆಂಕಿ ಹೊತ್ತಿಕೊಂಡಿದ್ದ ಹುಲ್ಲಿನ ರಾಶಿ ಕ್ರಮೇಣ ತನ್ನ ಶಕ್ತಿಯನ್ನು ಕಳೆದುಕೊಂಡು. ನಿತ್ರಾಣವಾಗತೊಡಗಿತ್ತು.. 
ಹಾಗಾಗಿ ಅದರ ಯೋಚನೆಯಿಲ್ಲದೇ... ಪಾದ್ರಿ ಹೇಳಿದ ಹಾದಿಯಲ್ಲಿ ಬೈಕ್ ಡುಗು ಡುಗು ಸದ್ದು ಮಾಡುತ್ತಾ.. ಕಾಡಿನ ನೀರವತೆಯನ್ನು ಭೇದಿಸಿ ನುಗ್ಗತೊಡಗಿತ್ತು.. 

ಸುಮಾರು ಒಂದು ಘಂಟೆಗಳ ಪಯಣ ಇರಬಹುದು.. ಇಲ್ಲೇ ಕಣಪ್ಪ ಅಂತ ಪಾದ್ರಿ ರಾಜೇಶನ ಬೆನ್ನ ಮೇಲೆ ಕೈ ಇಟ್ಟು ಅಮುಕಿ ಹೇಳಿದಾಗ ಬೈಕ್ ನಿಂತಿತು.. 

ವಿದ್ಯುತ್ ಇಲ್ಲದ ಹೊತ್ತು.. ಸುತ್ತಲ ಮುತ್ತಲ ಪ್ರದೇಶ ಸರಿಯಾಗಿ ಕಾಣುತ್ತಿಲ್ಲ.. ಆದರೂ ಇಲ್ಲೊಂದು ಭವ್ಯವಾದ ಕಟ್ಟಡವಿದೆ ಎಂದು ಭಾಸವಾಗುತಿತ್ತು... ಮತ್ತೆ ಲೈಟರ್ ಫರ್ ಫರ್ ಅಂತ ಸದ್ದು ಮಾಡಿ.. ಈ ಬಾರಿ ಹೊತ್ತಿಕೊಂಡಿಯೇ ಬಿಟ್ಟಿತು..  

ಸಿಗರೇಟ್ ಸೇದುವ ಆಸೆಯಿದ್ದರೂ.. ಈ ಪ್ರದೇಶದಲ್ಲಿ ಬೇಡ ಎಂದುಕೊಂಡು ಸುತ್ತಲೂ ಲೈಟರ್ ತಿರುಗಿಸಿ.. ಆ ಮಂದಬೆಳಕಲ್ಲಿ ಅಲ್ಲಿ ಏನಿದೆ ಅನ್ನೋದನ್ನು ತನ್ನ ಕಣ್ಣಿಗೆ ಮತ್ತು ಬುದ್ದಿಗೆ ಅರಿವಾಗುವಷ್ಟು ಗಮನಿಸಿದ.. 

ಪಾದ್ರಿ ಮತ್ತೆ ಬಂದು.. ಹೆಗಲ ಮೇಲೆ ಕೈಯಿಟ್ಟು..ಒಂದು ಪಂಜನ್ನು ಹಿಡಿದು  "'ನಡಿ ಹೋಗೋಣ" ಎಂದು ಒಳಗೆ ಕರೆದುಕೊಂಡು ಹೋದರು... ಭವ್ಯವಾದ ಕಟ್ಟಡ.. ಅದರ ಒಳಾಂಗಣ .. ಆ ಮಂದ ಬೆಳಕಿನಲ್ಲಿಯೂ ಸೌಂದರವಾಗಿ ಕಾಣುತ್ತಿತ್ತು.. 
 
ಒಂದು ಕೋಣೆಗೆ ಕರೆದೊಯ್ದು.. ಇಲ್ಲಿ ನಾನೊಬ್ಬನೇ ಇರುವುದು.. ವರ್ಷಕ್ಕೊಮ್ಮೆ ಯಾವಾಗಲೋ ಕೆಲವರು ಬರುತ್ತಾರೆ.. confess ಮಾಡಿಕೊಳ್ಳೋಕೆ ಬಂದು ಹೋಗುತ್ತಾರೆ.. ಹಾಗಾಗಿ ಯಾವುದೇ ಸೌಲಭ್ಯಗಳಿಲ್ಲ.. ನೀ ಮಲಗಿಕೊ.. ಅತ್ತ ಕಡೆ ಒಂದು ಲೋಟ ಹಾಲನ್ನು ಇಟ್ಟಿರುವೆ.. ಹಣ್ಣುಗಳಿವೆ.. ನಾ ಇಲ್ಲಿಗೆ ಬರುವಾಗ ತಂದದ್ದು. ತಿಂದು ಮಲಗಿಕೊ.. ಬೆಳಿಗ್ಗೆ ನೋಡೋಣ.. 

ಇಷ್ಟು ಹೇಳಿ ಆ ಪಾದ್ರಿ ಹೋಗುತ್ತಾ ಹೋಗುತ್ತಾ ಒಂದು ಕೋಣೆಯೊಳಗೆ ಹೋದರು.. ಅದನ್ನೇ ನೋಡುತ್ತಾ.. ಎಷ್ಟನೇ ರೂಮು ಅಂತ ಲೆಕ್ಕ ಹಾಕಿ.. ಬೆಳಿಗ್ಗೆ ಪಾದ್ರಿಗೆ ಒಂದು ಥ್ಯಾಂಕ್ಸ್ ಹೇಳಿ ಹೊರಡಬಹುದು... ಎಂದು ಕೊಂಡು.. ಹಾಸಿಗೆ ಮೇಲೆ ಮಲಗಿದ್ದೆ ಗೊತ್ತು.. ಗಾಢವಾದ ನಿದ್ರೆ ಆವರಿಸಿಕೊಂಡಿತ್ತು.. 

ಗಾಳಿ.. ಮೊಗದ ಮೇಲೆ ಬೀರುತ್ತಿದ್ದ ದಿನಕರನ ಕಿರಣಗಳು.. ಮಣ್ಣಿನ ವಾಸನೆ.. ಎಲ್ಲೋ ನೀರಿನಲ್ಲಿ ಹಕ್ಕಿಗಳು ಮುಳುಗಿ ಏಳುತ್ತಿದ್ದ ಸದ್ದು.. ಇದನ್ನೆಲ್ಲಾ ಕೇಳಿ ನೋಡಿ.. ಅರೆ ಹೊತ್ತಾಗಿ ಹೋಯ್ತಲ್ಲ.. ಪಾದ್ರಿಗೆ ಹೇಳಿ ಹೊರಡೋಣ ಎಂದುಕೊಂಡು ಹೊರಗೆ ಬಂದರೆ ಅವಕ್ಕಾದ.. 

ಶಿಥಿಲಗೊಂಡಿದ್ದ ಚರ್ಚಿನ ಕಟ್ಟಡ ಅದಾಗಿತ್ತು.. ಯಾವಾಗ ಬೇಕಾದರೂ ಬೀಳಬಹುದೇನೋ ಎನ್ನುವ ಹಾಗಿತ್ತು.. ದೊಡ್ಡ ದೊಡ್ಡ ಮಿನಾರುಗಳು.. ಕಿಟಕಿಗಳು, ಜಾಲಂಧ್ರಗಳು.. ನೆಲಕ್ಕೆ ಹಾಸಿದ್ದ ಟೈಲುಗಳು ಕಿತ್ತುಹೋಗಿ ನನ್ನ ನೋಡ್ರೋ... ಎನ್ನುವ ಹಾಗೆ ಬೇಸರದ ಮೊಗ ಹೊತ್ತಿದ್ದವು.. ಮಾಸಲು ಗೋಡೆ.. ಏನಿಲ್ಲವೆಂದರೂ ಸುಮಾರು ನೂರೈವತ್ತು ವರ್ಷಗಳು ಆಗಿರಬಹುದು ಎನ್ನುವ ಸೂಚನೆ.. ಧೈರ್ಯ ಮಾಡಿಕೊಂಡು ರಾಜೇಶ.. ಪಾದ್ರಿ ನಿನ್ನೆ ರಾತ್ರಿ ಹೋಗಿರಬಹುದಾದ ಕೋಣೆಯ ಕಡೆಗೆ ಹೆಜ್ಜೆ ಹಾಕಿದ.. 

ಕಿರ್ ಕಿರ್ ಬಾಗಿಲು ತೆರೆದುಕೊಂಡಿತು.. ನೀಳ್ಗನ್ನಡಿ.. ಅದರ ಪಕ್ಕದಲ್ಲಿ ಒಂದು ನೀಳವಾದ ಶುಭ್ರ ಬಿಳಿಯ ಕೋಟು.. ಹ್ಯಾಟು.. ಕೈಗವಸು . ಬಿಳಿಯ ವರ್ಣದ ಚಪ್ಪಲಿಗಳು.. ಒಂದು ಮಣಿಯ ಸರ.. ಅದರ ತುದಿಯಲ್ಲಿ ಕ್ರಾಸ್ ಇತ್ತು... ಆದರೆ ಅಲ್ಲಿ ಯಾರೋ ಮಲಗಿದ್ದರು ಎನ್ನುವ ಯಾವ ಸುಳಿವು ಇರಲಿಲ್ಲ.. ಆ ಬಟ್ಟೆಗಳ ಮೇಲೆ ಒಂದು ಚೂರು ಧೂಳಾಗಲಿ.. ಸುಕ್ಕಾಗಲಿ ಇರಲಿಲ್ಲ... ಆದರೆ ಆ ರೂಮಿನೊಳಗೆಲ್ಲಾ ಕಸ ಕಡ್ಡಿ.. ಧೂಳು.. ಜೇಡರ ಬಲೆ ಯಥೇಚ್ಛವಾಗಿತ್ತು.. 

ಅಚ್ಚರಿಯಾಗಿ ಒಂದು ಸುತ್ತು ಬಂದ.. ಯಾರೂ ಕಾಣಿಸಲಿಲ್ಲ.. ಅನತಿ ದೂರದಲ್ಲಿ ಒಂದು ಪುಟ್ಟ ಕೆರೆ.. ಈ ಚರ್ಚು ಕೆರೆಯ ನೀರಿನಿಂದ ತುಸು ಎತ್ತರದಲ್ಲಿದ್ದರಿಂದ.. ಮಳೆಗಾಲದಲ್ಲಿ ಪೂರ್ಣಪ್ರಮಾಣದ ಮಳೆಯಾದರೆ ಮಾತ್ರ ಚರ್ಚು ಮುಳುಗಡೆಯಾಗಬಹುದು ಎನ್ನುವ ಸೂಚನೆ ಇತ್ತು ಅನಿಸಿತ್ತು.. 

ಪುಟ್ಟ ತೆಪ್ಪದಲ್ಲಿ ಒಬ್ಬ ಹರಿಗೋಲನ್ನು ಹಾಕುತ್ತ.. "ಸ್ವಾಮಿ.. ಅಲ್ಲಿ ಹೆಚ್ಚು ಹೊತ್ತು ಇರಬೇಡಿ.. . ನಾ ಕರೆದೊಯ್ಯುವೆ ಆ ದಡಕ್ಕೆ ಹೋಗೋಣ.. ಅಲ್ಲಿ ನಮ್ಮಳ್ಳಿ ಇದೆ.. "

ಏನೂ ಯೋಚಿಸದೆ.. ತನ್ನ ಬೈಕನ್ನು ಅಲ್ಲಿಯೇ ಬಿಟ್ಟು.. ಲಗುಬಗೆಯಿಂದ.. ತೆಪ್ಪ ಬರುವ ಕಡೆಗೆ ಓಡಿದ... ಐದು ನಿಮಿಷ ತೆಪ್ಪ ಬಂತು.. ಅದರೊಳಗೆ ಕುಳಿತ.. 

"ಏನಪ್ಪಾ ಇದು ವಿಚಿತ್ರ.. ನಿನ್ನೆ ರಾತ್ರಿ ಭವ್ಯವಾದ ಕಟ್ಟಡದ ಹಾಗೆ ಆ ಪಂಜಿನ ಬೆಳಕಲ್ಲಿ ಕಂಡಿತ್ತು.. ಇಂದು ನೋಡಿದರೆ ಎಲ್ಲವೂ ವಿಚಿತ್ರ.. ಏನಪ್ಪಾ ಇದರ ಕತೆ.. "

ಇರಿ ಸ್ವಾಮಿ.. ಎಂದು ಸನ್ನೆ ಮಾಡಿ ಜೇಬಿನಿಂದ ಒಂದು ಪುಟ್ಟ ಪತ್ರವನ್ನು ತೆಗೆದುಕೊಟ್ಟ.. ಓದಿ ಎಂದ.. 

"ಈ ಊರಿನ ಜನಕ್ಕೆ.. 

ನಿಮ್ಮೂರನ್ನು ತಲುಪುವುದು ಇಂದಿಗೂ ದುಸ್ತರವಾಗಿರೋದಿಂದ.. ನನಗೆ ಕಾಡು ದಾರಿಯಲ್ಲಿ ಸಿಗುವ ಅಲೆಮಾರಿಯನ್ನು ಇಲ್ಲಿಗೆ ಕರೆತರುತ್ತೇನೆ.. ಉಪಚಾರ ಮಾಡಿ. ಬೆಳಿಗ್ಗೆ ಅವರ ಹಾದಿ ಅವರು ಹಿಡಿಯಬಹುದು.. ಸುಪ್ತ ಮನಸ್ಸು.. ಒಳ್ಳೆಯ ವಿಚಾರಗಳು.. ಸದ್ಭಾವನೆ ಇದ್ದವರು ಮಾತ್ರ ನನ್ನಿಂದ ಉಪಚಾರ ಪಡೆದುಕೊಳ್ಳುತ್ತಾರೆ.. ಮತ್ತು ಆ ಹೊತ್ತಿಗೆ ಈ ಕಟ್ಟಡ ಭವ್ಯವಾಗಿ ಕಾಣುತ್ತದೆ.. ಮರುದಿನ ಅವರ ವಿಚಾರಧಾರೆಗಳು ಸಹಜ ಸ್ಥಿತಿಗೆ ಮರಳುವುದರಿಂದ ಅವರಿಗೆ ಯಥಾವತ್ ಕಾಣುತ್ತದೆ.. 

ಮಿಕ್ಕವರಿಗೆ ನಾನೇನೂ ತಂಟೆ ಮಾಡುವುದಿಲ್ಲ.. ಆದರೆ ಜೇಡ ತಾನು ಹೆಣೆದ ತನ್ನ ಬಲೆಯಲ್ಲಿ ತಾನೇ ಸಿಕ್ಕಿಕೊಳ್ಳುವಂತೆ ತಮ್ಮ ಯೋಚನೆಗಳಿಂದ ತಾವೇ ತೊಂದರೆಗೀಡಾಗುತ್ತಾರೆ.. 

ಈ ಕಾಯಕ ಮುಂದುವರೆಯುತ್ತದೆ.. "

"ಏನಪ್ಪಾ ಇದೆಲ್ಲ"

"ಪಾದ್ರಿ ತನ್ನ ಜೀವನದಲ್ಲಿ ಯಾರಿಗೂ ಉಪಕಾರ ಮಾಡದೆ.. ಈ ಚರ್ಚ್ ಸುತ್ತ ಮುತ್ತಲಿನ ಪ್ರದೇಶ ನೀರಿನಿಂದ ಆವೃತವಾಗಿದ್ದಾಗ..  ಹೋಗಿ ಬಿಟ್ಟ.. ಜೀವನದಲ್ಲಿ ಸಹಾಯ ಮಾಡಬೇಕಾದ ಸಂದರ್ಭದಲ್ಲಿ ಸ್ವಾರ್ಥ, ದ್ವೇಷ ಎಂದು ಒದ್ದಾಡಿ.. ಸತ್ತು ಹೋಗಿ.. ಈಗ ಪ್ರೇತಾತ್ಮನಾಗಿದ್ದಾನೆ.. ಆದರೆ ಅಂದು ಮಾಡಲಾಗದ ಸೇವೆಯನ್ನು ಇಂದು ಮಾಡುತ್ತಿರುವುದು.. ವಿಶೇಷ.. ನೀವು ಪುಣ್ಯ ಮಾಡಿದ್ದೀರಿ.. ನಿನ್ನೆ ನಿಮ್ಮನ್ನು ಆ ಕಗ್ಗತ್ತಲಿನ ಕಾಡಿನಿಂದ ಹೊರಗೆ ತರದಿದ್ದರೆ.. ಇಷ್ಟು ಹೊತ್ತಿಗೆ ಯಾವುದೋ ಕಾಡು ಪ್ರಾಣಿಗೆ ಆಹಾರವಾಗಿ ಬಿಡುತ್ತಿದ್ದಿರಿ.. "

"ಹೌದಾ . ಆದರೂ ನನಗ್ಯಾಕೋ ನಂಬಿಕೆ ಬರುತ್ತಿಲ್ಲ.. ನಿನ್ನೇ  ಬರುವಾಗ ಪೆಟ್ರೋಲ್ ಖಾಲಿಯಾಗಿತ್ತು.. ಆ ಪಾದ್ರಿ ಕೊಟ್ಟಿದ್ದು.. ಪುಟ್ಟ ಬಾಟಲಿಯಲ್ಲಿ ಪೆಟ್ರೋಲ್.. ನೋಡೋಣ ಬನ್ನಿ..ಈಗ ಖಾಲಿ ಆಗಿರಬೇಕು.. ಯಾಕೆ ಅಂದರೆ ಸುಮಾರು ಒಂದು ಘಂಟೆ ಪ್ರಯಾಣ ಮಾಡಿದ್ವಿ"

"ಯೋಚನೆ ಮಾಡಬೇಡಿ ಸ್ವಾಮಿ.. ಮಧ್ಯಾನ್ಹದ ಹೊತ್ತಿಗೆ ಮತ್ತೆ ನಿಮ್ಮನ್ನು ಅಲ್ಲಿಗೆ ಕರೆದೊಯ್ಯುತ್ತೇನೆ... ನಿಮ್ಮದೇನಿದೆಯೋ ಅದನ್ನೆಲ್ಲ ತೆಗೆದುಕೊಳ್ಳಿ.. ನಿಮಗೆ ಅಚ್ಚರಿ ಕಾದಿರುತ್ತದೆ.. ನೀವೇ ನಂಬುತ್ತೀರಿ"

"ಸರಿ ನೆಡೆಯಪ್ಪ "  

ಮಧ್ಯಾನ್ಹದ ನಂತರ ಮತ್ತೆ ಅಲ್ಲಿಗೆ ಬಂದಾಗ ಆತ ಹೇಳಿದಂತೆ ಅಚ್ಚರಿ ಕಾದಿತ್ತು!

ಜಾಕೆಟ್, ಹೆಲ್ಮೆಟ್ ಎಲ್ಲವೂ ಸ್ವಚ್ಛವಾಗಿದ್ದವು.. ಬೈಕ್ ನಿನ್ನೆ ಧೂಳುಮಯವಾಗಿತ್ತು.. ಆದರೆ ಇಂದು ಥಳ ಥಳ ಹೊಳೆಯುತ್ತಿತ್ತು.. ಯಾಕೋ ಅನುಮಾನ ಬಂದು ಪೆಟ್ರೋಲ್ ಟ್ಯಾಂಕ್ ಮುಚ್ಚಳ ತೆಗೆದರೆ.. ತುತ್ತ ತುದಿಯ ತನಕ ಪೆಟ್ರೋಲ್ ನಾನಿದ್ದೀನಿ ಎಂದು ನಗುತ್ತಿತ್ತು.. 


ತನ್ನ ಜಾಕೆಟ್ ಜೇಬಿನಿಂದ ಒಂದು ಪುಟ್ಟ ಕಾರ್ಡ್ ಕಾಣುತ್ತಿತ್ತು.. ತೆಗೆದ.. ಓದಿದ.. ಕೈ ಮೇಲೆತ್ತಿ ಒಂದು ಸಲ್ಯೂಟ್ ಹೊಡೆದ.. ಅಲ್ಲಿಂದ ಹೊರಟ 

ಆ ಬರಹದ ಸಾಲು ಅವನ ಮನದಲ್ಲಿ ಗುಯ್ ಗುಡಲು ಶುರುಮಾಡಿತು.. 

"ಪ್ರಪಂಚವು  ಆ ಸೂತ್ರಧಾರ ರಚಿಸಿದ ಒಂದು ರಂಗ ಮಂಟಪ.. ಇಲ್ಲಿ ಪ್ರತಿನಿತ್ಯವೂ ಸುಂದರ ಅನುಭವ ಸಿಕ್ಕೇ ಸಿಗುತ್ತದೆ"

Sunday, November 17, 2019

Hurdled ಪ್ರೀತಿ....!

ಸರಿತಾ.. ಅಥ್ಲೆಟಿಕ್ಸ್ ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದಳು.. ಅವಳ ತರಬೇತುದಾರ ಒಂದು ವಿಚಿತ್ರ ಫೀಲ್ಡ್ ಸೆಟ್ ಮಾಡಿದ್ದ.. ಅವಳಿಗಿಂತ ಒಂದು ಹನ್ನೊಂದು ಅಡಿ ಮುಂದೆ ಇದ್ದು.. ಒಂದೊಂದೇ ಹರ್ಡಲ್ಸ್ ಸಿದ್ಧ ಮಾಡುತ್ತಿದ್ದ.. ಕೆಲವೊಮ್ಮೆ ಚಿಕ್ಕದು.. ಕೆಲವೊಮ್ಮೆ ದೊಡ್ಡದು.. ಕೆಲವೊಮ್ಮೆ ಹಾವಿನ ರೀತಿಯ ಹಗ್ಗ.. ಕೋಲು.. ಕೆಲವೊಮ್ಮೆ ಒಂದು ದೊಡ್ಡ ತೊಟ್ಟಿಯಾಕಾರದ ಆಯತದಲ್ಲಿ ತುಂಬಿದ ನೀರಿಗೆ ಧುಮುಕಿ ಹೋಗಬೇಕಿತ್ತು..

ಚಿತ್ರ ಕೃಪೆ : ಗೂಗಲೇಶ್ವರ 

ಛಲ ಬಿಡದ ಸರಿತಾ.. ತರಬೇತುದಾರ ಒಡ್ಡುವ ಸವಾಲುಗಳನ್ನು ಯಶಸ್ವಿಯಾಗಿ ದಾಟುತ್ತಾ  ಹೋಗುತ್ತಿದ್ದಳು.. ಸುಮಾರು ಒಂದೂವರೆ ಘಂಟೆ ಪ್ರತಿದಿನವೂ ಈ ಪರೀಕ್ಷೆ ನೆಡೆಯುತ್ತಲೇ ಇತ್ತು..
ಅಂತಾರಾಷ್ಟ್ರೀಯ, ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಹೆಸರಾಗಿದ್ದಳು.. ೨೦ ಸಾವಿರಕ್ಕೂ   ಹೆಚ್ಚು ಅಂತರರಾಷ್ಟ್ರೀಯ ಆಟಗಾರರು ಅವಳ ಅಭ್ಯಾಸದ ವಿಚಿತ್ರ ರೀತಿಗೆ ಮರುಳಾಗಿದ್ದರು.. ಒಂದು ರೀತಿಯಲ್ಲಿ ಮಾದರಿ ವ್ಯಕ್ತಿಯಾಗಿದ್ದಳು..


ಚಿತ್ರ ಕೃಪೆ : ಗೂಗಲೇಶ್ವರ 

ಚಿತ್ರ ಕೃಪೆ : ಗೂಗಲೇಶ್ವರ 

ಕೋಚ್ ಈ ರೀತಿಯ ಅಭ್ಯಾಸದ ವಿಧಾನದ ಗುಟ್ಟನ್ನು ಯಾರಿಗೂ ಹೇಳಿರಲಿಲ್ಲ.. !
ಪೀ ಪೀ.. ಅಂತ ತರುಬೇತುದಾರ ಊದಿದ ಶೀಟಿಯ ಸದ್ದಿಗೆ ಏನೋ ಯೋಚನೆ ಮಾಡುತ್ತಲೇ ಓಡುತ್ತಿದ್ದ ಸರಿತಾಳ ಗಮನ ಅತ್ತ ಕಡೆ ತಿರುಗಿತು.. ಇಂದಿನ ಅಭ್ಯಾಸ ಮುಗಿಯಿತು ಎನ್ನುವ ಸೂಚನೆಯದು..


ಹಾಗೆ ಓಡುತ್ತಲೇ.. ಓಡುತ್ತಲೇ ತನ್ನ ಬ್ಯಾಗ್ ಇಟ್ಟಿದ್ದ ಜಾಗಕ್ಕೆ ಬಂದು ಕುಳಿತಳು.. ತರಬೇತುದಾರ ಹತ್ತು ನಿಮಿಷ ಬರುವೆ ಎಂದು ಸನ್ನೆ ಮಾಡಿ ಹೋಗಿದ್ದು ಕಂಡು.. ತನಗೆ ಹತ್ತು ನಿಮಿಷ ಸುಧಾರಿಸಿಕೊಳ್ಳಲು ಸಮಯವಿದೆ ಎಂದು ಗೊತ್ತಾಯಿತು..

ರೆಸ್ಟ್ ರೂಮಿಗೆ ಹೋಗಿ ಫ್ರೆಶ್ ಆಗಲು ಹೋದಳು.. ಮೊಗ ತೊಳೆದುಕೊಂಡು.. ಪೆರ್ಸನಲ್ಲಿದ್ದ ಪುಟ್ಟ ಕಪ್ಪು ಬಿಂದಿಯನ್ನು ಹಣೆಗೆ ಇಟ್ಟುಕೊಂಡಳು.. ತನ್ನನ್ನೊಮ್ಮೆ ನೋಡಿಕೊಂಡಳು.. ನೀಳವಾಗಿಲ್ಲದ್ದಿದ್ದರೂ ಲಕ್ಷಣವಾಗಿದ್ದ ತುಸು ಕಂದು ಬಣ್ಣದ ತಲೆಗೂದಲನ್ನೂಮ್ಮೆ ಬಿಚ್ಚಿಕೊಂಡಳು.... ಟವಲಿನಿಂದ ಚೆನ್ನಾಗಿ ತಲೆಗೂದಲನ್ನೊಮ್ಮೆ ಒರೆಸಿಕೊಂಡು .ಅಲ್ಲಿಯೇ ಇದ್ದ ಫ್ಯಾನಿಗೆ ತಲೆಗೂದಲನ್ನು ಒಡ್ಡಿ ಒಣಗಿಸಿಕೊಂಡು.. ಬಾಚಣಿಗೆಯಿಂದ ನೀಟಾಗಿ ತಲೆಗೂದಲನ್ನು ಬಾಚಿ ಬಲಬದಿಗೆ ತುಸು ಬೈತಲೆ ತೆಗೆದುಕೊಂಡು..  ಕ್ಲಿಪ್ ಹಾಕಿ ಮತ್ತೊಮ್ಮೆ ತಲೆಗೂದಲನ್ನು ಸರಿಮಾಡಿಕೊಂಡಳು.

ಹಣೆಯಲ್ಲಿದ್ದ ಬಿಂದಿ ಕಿಸಕ್ ಅಂತ ನಕ್ಕ ಅನುಭವ..

ತನ್ನನ್ನು ಮತ್ತೊಮ್ಮೆ ನೋಡಿಕೊಂಡಳು.. ಶ್ವೇತ ವರ್ಣವಲ್ಲದಿದ್ದರೂ ಶಾಮಲಾ ವರ್ಣವಲ್ಲ.. ಕಾಡಿಗೆ ಹಚ್ಚಿದ್ದ ದಟ್ಟವಾದ ಆಳವಾದ ಕಣ್ಣುಗಳು ಅವಳ ಸೊಬಗಿಗೆ ಕಾಂತಿ ನೀಡಿದ್ದವು.. ಪುಟ್ಟದಾಗಿದ್ದರೂ ಸಂಪಿಗೆ ಮೂಗು.. ಅದಕ್ಕೆ ತಿಲಕವಿಟ್ಟಂತೆ ಹೊಳೆಯುವ ಮೂಗುತಿ.. ನಕ್ಕಾಗ. ತುಸು ದೊಡ್ಡದು ಅನಿಸುವ ಮುಂದಿನ ಎರಡು ಹಲ್ಲುಗಳು.. ಅವಳ ನಗುವಿಗೆ ಸಾವಿರ ವ್ಯಾಟ್ ಬೆಳಕು ನೀಡುತ್ತಿತ್ತು.. ತುಸುವೇ ದಪ್ಪ ಎನಿಸಬಹುದಾದ ಶರೀರ ತನ್ನದು ಎನಿಸಿದರೂ.. ಅವಳ ತರುಬೇತುದಾರ ಯಾವಾಗಲೂ ಹೇಳುತ್ತಿದ್ದ .."ಮನೆಗೆ ಮನಕ್ಕೆ ಆಧಾರ ನೀಡುವುದು ದಪ್ಪವಾದ ಕಂಬಗಳು .. ಅದಕ್ಕೆ ತಲೆ ಕೆಡಿಸಿಕೊಳ್ಳಬೇಡ.. ನಿನ್ನ ಅಭ್ಯಾಸ ನೀನು ಮಾಡು"

ಆ ಮಾತುಗಳನ್ನೇ ಮತ್ತೊಮ್ಮೆ ಹೇಳಿಕೊಂಡು ತುಸು ನಕ್ಕಳು.. ಕನ್ನಡಿಯೊಳಗಿನ ಅವಳ ಪ್ರತಿಬಿಂಬ "ಸರಿತಾ ಸಲಾಂ ಕಣೆ ನಿನಗೆ.. ನಿನ್ನ ಮನೋಧೈರ್ಯವೇ ನಿನ್ನ ಕಾಪಾಡೋದು.. ನಿನಗೆ ಸಿಕ್ಕಿರುವ ಹೊಸ ಕೋಚ್ ನಿನ್ನ ಬದುಕನ್ನು ಬದಲಿಸುತ್ತಾನೆ.. ಹಸನಾಗಿಸುತ್ತಾನೆ.. ನೀ ತೆಗೆದುಕೊಂಡಿರುವ ನಿರ್ಧಾರ ಸರಿ ಇದೆ ಕಣೆ" ಎಂದ ಅನುಭವ..

ಇಷ್ಟೆಲ್ಲಾ ಸ್ವಗತ ಮಾತುಗಳು ಮುಗಿಯುವ ಹೊತ್ತಿಗೆ ಕೋಚ್ ಬಂದು.. "ಸರಿತಾ.. ಆಯ್ತಾ ನಿನ್ನ ಮಾಮೂಲಿ ಮಾತುಕತೆಗಳು .. ಹೋಗೋಣ್ವಾ.. "

"ಹಾ" ಎನ್ನುವ ಸೂಚನೆಯನ್ನು ತನ್ನ ಅದ್ಭುತ ಕಣ್ಣುಗಳಿಂದ ತಲುಪಿಸಿದಳು..

ಇಬ್ಬರೂ ನೆಡೆಯುತ್ತಾ ಸ್ಟೇಡಿಯಂ ಹತ್ತಿರದಲ್ಲಿದ್ದ ಹೋಟೆಲಿಗೆ ಹೋದಳು.. ನಿನ್ನೆ ಕೋಚ್ ಕಳಿಸಿದ್ದ ಸಂದೇಶ ಅವಳ ಮನದಲ್ಲಿ ಕೊರೆಯುತ್ತಲೇ ಇತ್ತು.. ಆದರೂ ಅದನ್ನು ತೋರಿಸಿಕೊಳ್ಳದೆ ಹೆಜ್ಜೆ ಹಾಕುತ್ತಿದ್ದಳು..

ಹೋಟೆಲಿಗೆ ಬಂದ ಮೇಲೆ.. "ಸರಿತಾ ಇವತ್ತು ಸ್ವೀಟ್ ತಿನ್ನೋಣ.. " ಎಂದು ಹಳದಿ ಬಣ್ಣದ ಬಾಸುಂದಿಗೆ ಆರ್ಡರ್ ಮಾಡಿದ..

ಸ್ವೀಟ್ ಬರುವ ತನಕ.. ಸರಿತಾ ಹಾಗೆ ತನ್ನ ತರಬೇತುದಾರನನ್ನ ನೋಡಿದಳು.... ರೇಷ್ಮೆಯಂತಹ ತಲೆಗೂದಲು.. ನೀಟಾಗಿ ಎಡಬದಿಗೆ ಕ್ರಾಪ್.. ಕುರುಚಲು ಫ್ರೆಂಚ್ ಗಡ್ಡ.. ಅದಕ್ಕೆ ಒಪ್ಪುವ ಕನ್ನಡಕ.. .. ಅವರ ಅಪರಿಮಿತ ಕನ್ನಡಾಭಿಮಾನಕ್ಕೆ ಸೋತಿದ್ದಳು.. ಆದರೂ ಮನದಲ್ಲಿ ಏನೋ ದುಗುಡ.. ಅದನ್ನೆಲ್ಲ ಪರಿಹರಿಸಿಕೊಳ್ಳೋಕೆ ಇಂದು ಮಾತಾಡಬೇಕು ಎಂದು ನಿರ್ಧರಿಸಿಕೊಂಡೆ ಬಂದಿದ್ದಳು..

"ನೀವು ಕಳಿಸಿದ ಸಂದೇಶ ನೋಡಿದೆ.. ಅದರ ಬಗ್ಗೆ ಮಾತಾಡಬೇಕಿತ್ತು... "

"ಓಕೇ... ಕೇಳಿ"

ಅಷ್ಟರಲ್ಲಿ ಬಾಸುಂದಿ ಬಂತು..

ಇಬ್ಬರೂ ಒಂದೊಂದು ಕಪ್ ತೆಗೆದುಕೊಂಡು.. ಅದನ್ನು ಮಿಕ್ಸ್ ಮಾಡುತ್ತಿದ್ದರು.. ಕೋಚ್ ಮೆಲ್ಲಗೆ ಒಂದು ಚಮಚದಲ್ಲಿ ಬಾಸುಂದಿ ತೆಗೆದುಕೊಂಡು "ಇದು ನಮ್ಮಿಬ್ಬರ ಗೆಳೆತನಕ್ಕೆ"  ಎನ್ನುತ್ತಾ  ಅವಳ ಬಾಯಿಗೆ ಹಿಡಿದ.. ಅದನ್ನು ನಿರೀಕ್ಷಿಸದೆ ಇದ್ದ ಸರಿತಾ.. ಅರಿವಿಲ್ಲದೆ ಬಾಯಿ ತೆಗೆದಳು..

ನಂತರ ಆಗಲೇ ಒಂದೆರಡು ಚಮಚ ತಿಂದಿದ್ದರೂ  ಅದನ್ನು  ತೋರಗೊಡದೆ  ಒಂದು ಚಮಚ.. ಅವನಿಗೆ ತಿನ್ನಿಸಿದಳು ..ಬಾಸುಂದಿ ಬಾಯಲ್ಲಿಯೇ  ಇಟ್ಟುಕೊಂಡು  ಥ್ಯಾಂಕ್ಸ್ ಹೇಳಿದ್ದು ಅವಳಿಗೆ ಕೇಳಿಸಿತು..

ಚಿತ್ರ ಕೃಪೆ : ಗೂಗಲೇಶ್ವರ 
"Thank you for accepting me". ಅರಿವಿಲ್ಲದೆ ಅವಳಿಂದ ಬಂದ ಮಾತು ಇವನಿಗೆ ಸಂತಸ ತಂದು... ಅವಳ ತಲೆಯನ್ನೊಮ್ಮೆ ತನ್ನ ಬಲಗೈಯಿಂದ ಒತ್ತಿ..  ಥ್ಯಾಂಕ್ ಯು ಎಂದ..

ಅವಳು ಹಲ್ಲು ಬಿಟ್ಟಳು.. ಮುದ್ದು ಕಣೋ ನೀನು ಎನ್ನುತ್ತಾ ಅವಳ ಗಲ್ಲವನ್ನೊಮ್ಮೆ ಸವರಿದ.. ನಾಚಿ ನೀರಾದಳು..

ತಾವಿಬ್ಬರೇ ಈ ಜಗತ್ತಿನಲ್ಲಿರುವುದು ಎನ್ನುವ ಭಾವ ಇಬ್ಬರದ್ದು... ಆದರೆ ಎಲ್ಲೇ ಮೀರಿರಲಿಲ್ಲ .. ತುಸು ದೂರವೇ ನಿಂತು ಮಾತಾಡುತ್ತಿದ್ದರು .. .

ಅವಳ ಮನದಲ್ಲಿದ್ದ ದುಃಖ,ಸಂಕಟ , ಸಂತೋಷದ ಎಲ್ಲಾ ವಿಚಾರಗಳನ್ನುಹೇಳಿಕೊಂಡಳು .. ಇವನು ತನ್ನ ಭಾವ ಲಹರಿಯನ್ನು ತೋಡಿಕೊಂಡ.... ಇಬ್ಬರ ಮನಸ್ಸು ಹಗುರಾಗಿತ್ತು..
ನಾನು ಇನ್ನೂ ಸ್ವಲ್ಪ ಹೇಳಬೇಕು ಎಂದಳು..

ಸರಿ ಮುಂದುವರೆಸು ಎಂದ ಇವ..

ಮಾತಾಡುತ್ತಾ ಮಾತಾಡುತ್ತ.. ಅವಳ ಕಣ್ಣಲ್ಲಿ ಮುತ್ತಿನ ಹನಿಗಳು  ಉರುಳಿದವು.. ತಕ್ಷಣ ತನ್ನ ಕರವಸ್ತ್ರ ಕೊಟ್ಟ.. ಅವಳು ಕರವಸ್ತ್ರದಿಂದ ಕಣ್ಣುಗಳನ್ನುಒತ್ತಿಕೊಂಡಳು .. ಇಬ್ಬರ ಮಧ್ಯೆ ಇಪ್ಪತ್ತೈದು ಸೆಕೆಂಡುಗಳು ನೀರವ ಮೌನ..

ಆ ಕ್ಷಣವನ್ನು ತುಸು ತಿಳಿಗೊಳಿಸಲು .. "ಸರಿತಾ .. ಸರಿಯಾಗಿ ಕಣ್ಣುಗಳನ್ನು ಒರೆಸಿಕೋ.. ಕಣ್ಣಿಗೆ ಹಚ್ಚಿರುವ ಕಾಡಿಗೆ ಅತ್ತಿತ್ತ ಹೋಗಿ ಡ್ರಾಕುಲ ತರಹ ಆಗಿ ಬಿಟ್ಟೀಯೇ"

"ಹೋಯ್ತಾ.. ಸರಿಯಾಗಿದೆಯಾ"

"ಇಲ್ಲ ಕಣೋ ಆರಾಮಾಗಿದೆ.. ನಿನ್ನ ಮೊಗದಲ್ಲಿ ನಗು ತರಿಸಲು ಹೇಳಿದೆ ಅಷ್ಟೇ.. ಸರಿಯಾಗಿದೆ"

"ತಗೊಳ್ಳಿ" ಎಂದು ಕರವಸ್ತ್ರ ಕೊಟ್ಟಳು.

"ಇದನ್ನು ಆಸ್ತಿಯಾಗಿ ಕಾಪಾಡಿಕೊಳ್ಳುತ್ತೇನೆ..ಇದನ್ನು ವಾಷ್ ಮಾಡೋಲ್ಲ.. ಜೀವನದ ಆಸ್ತಿಯಾಗಿ ಕಾಪಾಡಿಕೊಳ್ಳುತ್ತೇನೆ..  ಮುತ್ತಿನ ಹನಿಗಳು ಇದರಲ್ಲಿವೆ.. ಇನ್ನೆಂದು ಮತ್ತೆ ನಿನ್ನ ಕಣ್ಣಿನಿಂದ ಮುತ್ತಿನ ಹನಿಗಳು ಜಾರಿ ಬೀಳದ ಹಾಗೆ ನೋಡಿಕೊಳ್ಳುತ್ತೇನೆ" ಎಂದು ಅವಳ ಕೈಯನ್ನೊಮ್ಮೆ ಹಿಡಿದು ಒತ್ತಿದ..
ಅವಳು ಕೂಡ ಮೆಲ್ಲಗೆ ಕೈಯನ್ನು ಒತ್ತಿಕೊಂಡಳು..

"ಸರ್.. ಹೆಚ್ಹು ಹೊತ್ತು ಕೂರುವ ಹಾಗಿಲ್ಲ ಇಲ್ಲಿ.. ಜನ ಕಾಯ್ಥ ಇದ್ದಾರೆ.. " ಹೋಟೆಲಿನವ ತುಸು ಗಟ್ಟಿ ದನಿಯಲ್ಲಿ ಹೇಳಿದ್ದು ಕೇಳಿಸಿತು..

"ಹಾ ಹೊರಡ್ತೀವಿ.. ಬಿಲ್ ಕೊಡಿ.. "

ಬಿಲ್ ಪಾವತಿ ಮಾಡಿ.. ಹೊರಬಂದು.. ಇಬ್ಬರೂ ಒಮ್ಮೆ ಮುಗುಳು ನಕ್ಕರು..

"ಸರಿ ಮತ್ತೆ ಸಿಗೋಣ" ಅಂತ ಇಬ್ಬರೂ ತಮ್ಮ ತಮ್ಮ ಹಾದಿ ಹಿಡಿದರು ..

ಇಬ್ಬರ ಮನದಲ್ಲಿ ಜಗತ್ತು ಹೊಸದಾಗಿದೆ ಎನ್ನುವ ಅನುಭವ.. ಯಾವುದೋ ಒಂದು ದೊಡ್ಡ ಭಾರ
ಮನದಿಂದ ಜಾರಿ ಹೋದ ಅನುಭವ..

ನೆಡೆಯುತ್ತಾ ಒಮ್ಮೆ ಅವಳು ಇವನತ್ತ ತಿರುಗಿ ನೋಡಿದಳು.. ಅವನು ತಿರುಗಿದ ..

ಎಳೆ ಬಿಸಿಲು.. ಅವಳ ಮೊಗದ ಮೇಲಿತ್ತು.. ಅವಳ ಪುಟ್ಟ ನಾಸಿಕದಲ್ಲಿದ್ದ ಮೂಗುತಿಯ ಮೇಲೆ ಬಿಸಿಲು ಬಿದ್ದು ಫಳ್ ಅಂತ ಹೊಳೆಯಿತು . ಅದರ ಜೊತೆಯಲ್ಲಿ ಒಂದು ಹಾರ್ಟ್ ಸ್ಟಾಪಿಂಗ್ ಸ್ಮೈಲ್..

ಅದನ್ನು ಕಂಡ ಕೋಚ್ ಗಾಳಿಯಲ್ಲಿಯೇ ಒಂದು ಮುತ್ತನ್ನು ತೇಲಿಬಿಟ್ಟು ಕೈಯಾಡಿಸಿ ವಿಕ್ಟರಿ ಚಿನ್ಹೆ ತೋರಿಸಿದ.. !!!!

Thursday, November 7, 2019

ಮಿಂಚಿನ ಪ್ರೀತಿ ...!

ಬಣ್ಣ ಬಣ್ಣದ ಕನಸುಗಳು.. ತಾನು ಎಲ್ಲರಂತೆ ಇರಬೇಕು.. ಓಡಾಡಬೇಕು ಎನ್ನುವ ಹಂಬಲ.. ತಾನು ಸುಂದರನಲ್ಲದಿದ್ದರೂ, ಸುಂದರಿಯೇ ತನಗೆ ಸಿಗುತ್ತಾಳೆ ಎನ್ನುವ  ನಂಬಿಕೆ.. ಪ್ರತಿದಿನ ಕನ್ನಡಿಯಲ್ಲಿ ತನ್ನನ್ನೇ ನೋಡಿಕೊಂಡಾಗ ಅನಿಸುತ್ತಿದ್ದ ಮಾತುಗಳು..
ಇಪ್ಪತೆಂಟು ವರ್ಷ. ಮದುವೆ ಆಗುವ ವಯಸ್ಸು ಅಂತಲೂ ಅಲ್ಲ.. ಲೈಫಲ್ಲಿ ಸೆಟಲ್ ಆಗಿರಬೇಕು ಎನ್ನುವ ತುರ್ತು ಪರಿಸ್ಥಿತಿಯೂ ಅಲ್ಲದ ನಟ್ಟ ನಡುವಿನ ಕಾಲಘಟ್ಟ..
ವಿಶ್ವಾಸ್ ಮನದಲ್ಲಿ ದಿನಂಪ್ರತಿ ಹಾದು ಹೋಗುತ್ತಿದ್ದ ಮಾತುಗಳಿಗೆ ಅಷ್ಟೊಂದು ತೂಕ ಕೊಡುತ್ತಿಲ್ಲದ ಕಾರಣ.. ಆ ಭಾವಗಳು ಬರುತ್ತಿದ್ದವು, ಒಂದಷ್ಟು ಗಲಿಬಿಲಿ ಮಾಡಿ.. ಹೋಗುತ್ತಿದ್ದವು..

ತನ್ನ ಆಫೀಸಿನ ಕ್ಯಾಬ್ ಬೆಳಿಗ್ಗೆ ೫..೩೦ಕ್ಕೆ ಬರುತ್ತಿದ್ದರಿಂದ.. ಬೆಳಿಗ್ಗೆ ತುಸು ಬೇಗನೆ ತನ್ನೆಲ್ಲ ಕೆಲಸ ಮುಗಿಸಿ ತರಾತುರಿಯಲ್ಲಿ ಹೊರಡುತ್ತಿದ್ದ... ತನ್ನ ಸ್ಟಾಪಿನ ಬಳಿ ನಿತ್ಯವೂ ಒಂದು ಹುಡುಗಿ ತನ್ನನ್ನೇ ಗಮನಿಸುತ್ತಿದ್ದನ್ನು ಕಂಡು ಕಾಣದಂತೆ ಇವನು ಗಮನಿಸ ತೊಡಗಿದ.. ವಿಶ್ವಾಸ್ ಇವತ್ತು ಹಾಕಿದ್ದ ಬಟ್ಟೆಯ ಬಣ್ಣವನ್ನು ಅವಳು ಮಾರನೇ ದಿನ ಮ್ಯಾಚ್ ಮಾಡುತ್ತಿದ್ದಳು.. ಮೊದಲಿಗೆ ಇದು ಕಾಕತಾಳೀಯ ಅನಿಸಿದರೂ.. ಬರು ಬರುತ್ತಾ ಇದು ನಿಜವಾಗಿಯೂ ನೆಡೆಯತೊಡಗಿತು...
ಒಂದಷ್ಟು ದಿನ.. ತನ್ನ ಅಪ್ಪ ಅಮ್ಮನನ್ನು ನೋಡಲು ಚಿಕ್ಕಮಗಳೂರಿಗೆ ಹೊರಟಿದ್ದ.. ಅವನಿಗೆ ಗೊತ್ತಿತ್ತು ಇನ್ನು ಒಂದು ವಾರ ಅವಳನ್ನು ನೋಡಲು ಆಗದು ಎಂದು.. ಅದಕ್ಕೆ ಅವಳನ್ನು ಸದಾ ಮನತುಂಬುವಷ್ಟು ನೋಡೇ ಬಿಡುವ ಎಂದು.. ಮೊಬೈಲ್ ತೆಗೆದು ಏನೋ ಪರೀಕ್ಷಿಸುವಂತೆ ನಟಿಸುತ್ತಾ.. ಅವಳು ನಿಂತಿದ್ದ ತಾಣವನ್ನು ಸೆರೆಹಿಡಿದೆ ಬಿಟ್ಟಾ.. ಹೊಚ್ಚ ಹೊಸದಾದ ಮೊಬೈಲ್.. ೨೪ಎಂಪಿ ಕ್ಯಾಮೆರಾ.. ಒಳ್ಳೆಯ ಜೂಮ್ ಇದ್ದ ಕ್ಯಾಮೆರಾ... ಮೊದಲೇ ಸುಂದರಿಯಾಗಿದ್ದ ಅವಳನ್ನು ಯಥಾವತ್ತಾಗಿ ಚಿತ್ರಿಸಿತ್ತು..

ಊರಿಗೆ ಹೋಗುವ ಬಸ್ಸಿನಲ್ಲಿ, ಅವಳ ಚಿತ್ರವನ್ನು ಒಂದಷ್ಟು ಕ್ರಾಪ್ ಮಾಡಿ.. ಫ್ರೇಮಿನಲ್ಲಿದ್ದ ಬೇಡದ ಭಾಗವನ್ನು ತೆಗೆದು ಅವಳು ಸ್ಪಷ್ಟವಾಗಿ ಕಾಣುವಂತೆ ಮಾಡಿಕೊಂಡ.. ಅವಳ ಸೌಂದರ್ಯವನ್ನು ವರ್ಣಿಸಬೇಕು ಎನ್ನುವ ಕಾತುರತೆ ಇದ್ದರೂ.. ಮನಸ್ಸಿಗೆ ಬಂತು.. ಅವಳ ಜೊತೆ ಮಾತಾಡಿ, ಅವಳನ್ನು ಒಪ್ಪಿಸಿದ ಮೇಲೆ.. ಅವಳ ಎದುರಿಗೆ ಅವಳ ಸೌಂದರ್ಯವನ್ನು ಬಣ್ಣಿಸೋಣ ಎಂದು ಮನದಲ್ಲಿಯೇ ಅಂದುಕೊಂಡು.ಅವಳ ಚಿತ್ರ ನೋಡುತ್ತಲೇ ಊರು ಸೇರಿದ್ದ..

ಬೆಟ್ಟ ಗುಡ್ಡಗಳು, ಹಳ್ಳಿಯ ತಿಳಿಯಾದ ಕಲ್ಮಶ ರಹಿತ ವಾತಾವರಣ.. ತಿಳಿ ನೀರು, ಸಿಹಿ ಗಾಳಿ, ಪ್ರಿಯ ತನ್ನ ಪ್ರಿಯತಮೆಯ ಕೆನ್ನೆಗೆ ಮುತ್ತಿಡುವಂತೆ ಕಾಣುತ್ತಿದ್ದ ಮೋಡಗಳು ಗಿರಿಯನ್ನು ಚುಂಬಿಸುವ ದೃಶ್ಯಗಳು.. ಕೆಲಸದ ಜಂಜಾಟವನ್ನು ಮರೆಯುವಂತೆ ಮಾಡಿತ್ತು.. ಹಾಗೆಯೇ ಮೊಬೈಲಿನಲ್ಲಿದ್ದ ದೇವತೆಯೂ ಕೂಡ :-)

ಒಂದು ವಾರ ಕಳೆದದ್ದು ಗೊತ್ತಾಗಲೇ ಇಲ್ಲದಷ್ಟು ಮನಸ್ಸು ಹಗುರಾಗಿತ್ತು.. ಮಾರನೇ ದಿನ ರಾತ್ರಿ ಊರಿಗೆ ಹೊರಡಬೇಕು.. ಸಿದ್ಧತೆ ಮಾಡಿಕೊಳ್ಳುತಿದ್ದ.. ಅವನ ಅಮ್ಮ ಬಟ್ಟೆಬರೆಗಳನ್ನು ಒಪ್ಪವಾಗಿ ಒಗೆದು ಇಸ್ತ್ರಿ ಮಾಡಿ.. ಅವನ ಬ್ಯಾಗಿಗೆ ಇಡುತ್ತಿದ್ದಳು.. ರಾಗಿ ಮುದ್ದೆ, ಸೊಪ್ಪಿನ ಸಾರು, ಕೆಂಪು ಅಕ್ಕಿಯ ಅನ್ನ, ನೆಂಚಿಕೊಳ್ಳೋಕೆ ಈರುಳ್ಳಿ, ಉಪ್ಪಿನಕಾಯಿ. ಹಪ್ಪಳ, ಸಂಡಿಗೆ, ಬಾಳ್ಕ ಮೆಣಸಿನ ಕಾಯಿ.. ಎಲ್ಲವೂ ಅನುದಿನವೂ ಅವನ ಹೊಟ್ಟೆಯ ಸೇರಿ.. ಬದುಕು ಹೀಗೆ ಇದ್ದರೇ ಚೆನ್ನ ಅನ್ನಿಸುವಷ್ಟು ಸೊಗಸು ಕಾಣುತ್ತಿತ್ತು...

ಬೆಳಿಗ್ಗೆ ಎದ್ದು "ಅಮ್ಮ ರತ್ನಗಿರಿ ಬೋರೆಯ ತನಕ ಹೋಗಿ ಬರುತ್ತೇನೆ.. ಬಂದ ಮೇಲೆ ಕಾಫಿ ಕುಡಿಯುತ್ತೇನೆ.. ರಾತ್ರಿ ಬಸ್ಸಿಗೆ ಹೋಗೋದು"  ದಿನ ನಿತ್ಯದ ಮಾತಿನ ಧಾಟಿಯಲ್ಲಿಯೇ ಹೇಳಿ ಹೊರಟ.. ಕಪ್ಪು ಬಣ್ಣದ ಟ್ರ್ಯಾಕ್ ಪ್ಯಾಂಟ್, "ಆಪ್ನ ಟೈಮ್ ಆಯೇಗಾ.. ನಹಿ.. ಜರೂರ್ ಆಯೆಗೆ" ಅಂತ ಪದಗಳಿದ್ದ ಬಿಳಿ ಬಣ್ಣದ ಟೀ ಶರ್ಟ್, ಕಾಲಿಗೆ ಹವಾಯ್ ಚಪ್ಪಲಿ ಮೆಟ್ಟಿಕೊಂಡು.. ಮನೆಯಿಂದ ಸುಮಾರು ಹತ್ತು ಕಿಮಿ ದೂರವಿದ್ದ ರತ್ನಗಿರಿ ಬೋರೆಗೆ ತನ್ನ ಇಷ್ಟವಾದ ರಾಯಲ್ ಎಂಫಿಎಲ್ಡ್ ಬುಲೆಟ್ ತೆಗೆದುಕೊಂಡು ಹೊರಟ..

ಬೆಟ್ಟದ ತುದಿಯಲ್ಲಿ ಕೂತು.. ಬಾನಿನ ರಂಗನ್ನು ನೋಡುತ್ತಾ ಕುಳಿತಿದ್ದ.. ಮೈಮರೆತಿದ್ದ.. ಹಕ್ಕಿಗಳ ಕಲರವ.. ತಣ್ಣನೆ ಗಾಳಿ.. ಅವನ ಜೋಂಪು ಕೂದಲು ಹಾರಾಡುತ್ತಲೇ ಇತ್ತು.. ಚಳಿ ಎನಿಸಿದರೂ, ಬಿಡು ಪರವಾಗಿಲ್ಲ ಎನ್ನುವ ಹಾಗೆ ಹಿತಕರವಾಗಿತ್ತು.. ಆದ್ದರಿಂದ ಸುಮ್ಮನೆ ಅಗಸ ನೋಡುತ್ತಾ ಹಾಗೆ ಕಲ್ಲು ಬೆಂಚಿನ ಮೇಲೆ ಮಲಗಿದ..

ಸುಮಾರು ಹೊತ್ತು ಕಣ್ಣಾಲಿಗಳು ಹಾಗೆ ಮುಚ್ಚಿಕೊಂಡಿದ್ದವು.. ಕಣ್ಣಿನ ಪರದೆಯ ಮೇಲೆ... ಬಿಳಿ ಬಣ್ಣದ ಟೀ ಶರ್ಟ್ ತೊಟ್ಟು.. ಕಪ್ಪನೆಯ ಪ್ಯಾಂಟ್ ತೊಟ್ಟು, ನೀಳಗೂದಲನ್ನು ಗಾಳಿಗೆ ಹರಿಯ ಬಿಟ್ಟು.. ಗಾಳಿಯಿಂದ ಪದೇ ಪದೇ ಮುಖದ ಮೇಲೆ ಕೂದಲುಗಳು ಹರಡಿಕೊಳ್ಳುತ್ತಿದ್ದರೂ ನವಿರಾಗಿ ಕಿವಿಯ ಹಿಂದಕ್ಕೆ ಸಿಕ್ಕಿಸಿಕೊಳ್ಳುತ್ತಲೇ ಇದ್ದ ಹುಡುಗಿ.. ಟೀ ಶರ್ಟ್ ಮೇಲೆ.. "ಅಬೆ.. ಹಮಾರಾ ಟೈಮ್ ಆಗಯಾ ಹೈ" ಎನ್ನುವ ಪದಗಳ ಗುಚ್ಛ.. ಇದೆ ಗುಂಗಿನಲ್ಲಿ ಮಲಗಿದ್ದ.. ಅಕ್ಷರಶಃ ನಿದ್ದೆಯೇ ಮಾಡಿ ಬಿಟ್ಟಿದ್ದ..!

"ರೀ ಮಿಸ್ಟರ್.. ನಿದ್ದೆ ಮಾಡೋಕೆ ಬೇರೆ ಜಾಗವಿಲ್ಲವೇನ್ರಿ.. ಓಡಾಡೋ ತಾಣವಿದು.. ಸುಸ್ತಾಗಿದ್ದರೇ ಮನೆಗೆ ಹೋಗಿ ಮಲಗಿಕೊಳ್ಳಿ.. " ಕೋಲಿನ ತುದಿ ತನ್ನ ಮೈಸೋಕಿದಾಗ ಎಚ್ಚರವಾಯ್ತು..
ಕಣ್ಣು ಬಿಟ್ಟು ನೋಡಿದಾಗ.. ಆ ಗಿರಿ ಉದ್ಯಾನವನದ ಮಾಲಿ ... ಎಬ್ಬಿಸುತ್ತಿದ್ದ.. "ಒಹ್ ಗಿರಿಯಪ್ಪ.. ಈ ಗಾಳಿಗೆ ನಿದ್ದೆಯೇ ಬಂದಿತ್ತು.. "..

"ಒಹೋ ವಿಶ್ವಾಸಪ್ಪ ನೀವಾ.. ಮುಖದ ಮೇಲೆ ಕರ್ಚಿಫ್ ಹಾಕಿಕೊಂಡ್ರಿ ಗೊತ್ತಾಗಲೇ ಇಲ್ಲ.. ಊಒ ಸರಿ ವಿಶ್ರಾಂತಿ ತಗಳ್ಳಿ.."ಎಂದು ಮುಂದೆ ಹೋದ ಗಿರಿಯಪ್ಪ!
ಎಚ್ಚರವಾದ ಮೇಲೆ.. ಮತ್ತೆ ನಿದ್ದೆ ಬರುತ್ತದೆಯೇ.. ಸರಿ ಎದ್ದು ನಿಂತ.. ಜೋರಾಗಿ ಮೈಮುರಿದು.. ಕತ್ತಿನ ನೆಟಿಗೆಯನ್ನು ಮುರಿದು.. ಕೈಕಾಲುಗಳನ್ನು ಜೋರಾಗಿ ಜಾಡಿಸಿ.. ಮೆಲ್ಲನೆ ತನ್ನ ಬೈಕ್ ಕಡೆಗೆ ಹೊರಟ..

ತೆಳ್ಳಗಾಗಬೇಕೇ, ದಪ್ಪಗಾಗಬೇಕೆ.. ಅಜೀರ್ಣವೇ.. ಎಂಬಿಎ ಮಾಡಬೇಕೆ.. ಹೀಗೆ ಹತ್ತಾರು ಜಾಹಿರಾತುಗಳ ಫ್ಲೈಯರ್ ಬೈಕುಗಳಿಗೆ ಸಿಕ್ಕಿಸುವುದು ಮಾಮೂಲು.. ಒಂದು ಪೋಸ್ಟಿಟ್.. ಪೆಟ್ರೋಲ್ ಟ್ಯಾಂಕಿಗೆ ಅಂಟಿಕೊಂಡಿತ್ತು.. ತುದಿಯಲ್ಲಿ ಮಾತ್ರ ಗಮ್ ಇದ್ದದ್ದರಿಂದ.. ಮಿಕ್ಕ ಭಾಗ ಗಾಳಿಗೆ ಹಾರುತ್ತಿತ್ತು.. ಲೇ ನನ್ನ ನೋಡು ಎಂದು ಕೂಗಿ ಕೂಗಿ ಹೇಳುವಂತೆ ಭಾಸವಾಗುತಿತ್ತು..
ಅದರಲ್ಲಿ ಬರೆದ ಸಾಲುಗಳು "ವಿಶ್ವಾಸ್.. ಹಮಾರಾ ಟೈಮ್ ಆಗಾಯ ಹೈ.... ಯಕೀನ್ ನಹಿ ಆತಾ?.. ಟೌನ್ ಕ್ಯಾಂಟೀನ್ ಮೇ ಆಜಾವ್..  ಟೇಬಲ್ ೮.. ಪೇ "

ಏನಪ್ಪಾ ಇದು ವಿಚಿತ್ರ.. ಎಂದುಕೊಂಡು.. ದಿನವೂ ಅಲ್ಲಿಗೆ ಹೋಗಿ ಬರುತ್ತಿದ್ದ.. ಬೆಣ್ಣೆ ಮಸಾಲೆ ದೋಸೆ ಬಹಳ ಪ್ರಸಿದ್ಧಿ... ಅದು ತಿಂದುಕೊಂಡೆ ಮನೆಗೆ ಹೋಗುತ್ತಿದ್ದದ್ದು.. ಹಾಗಾಗಿ ಯಥಾ ಪ್ರಕಾರ ಅಲ್ಲಿಗೆ ಹೊರಟ.. ಮತ್ತೆ ಟೇಬಲ್ ೮ ರಲ್ಲಿಯೇ ದಿನವೂ ಕೂರುತ್ತಿದ್ದದ್ದು..

ನೀಳಗೂದಲಿನ ಬಿಳಿ ಬಣ್ಣದ  ಟೀ ಶರ್ಟ್ ತೊಟ್ಟಿದ್ದ ಲಲನಾಮಣಿ ಕೂತಿದ್ದಳು.. ಅಯ್ಯೋ ಇವತ್ತು ನನ್ನ ಟೇಬಲ್ ನನಗಿಲ್ಲವೇ ಎಂದು.. ಅದರ ಪಕ್ಕದ ಟೇಬಲಿನಲ್ಲಿ ಕೂತು..ಮಾಣಿಗೆ ಮಾಮೂಲಿ ಎನ್ನುವಂತೆ ಸನ್ನೆ ಮಾಡಿ.. ಮೊಬೈಲ್ ತೆಗೆದು ವಾಟ್ಸಾಪ್ ಸಂದೇಶಗಳಿಗೆ ಉತ್ತರ ಕೊಡುತ್ತ ಇದ್ದಾಗ ಟನ್ ಅಂತ ಒಂದು ಸಂದೇಶ "ಅಲ್ರಿ ನಾ ಕೂತಿರುವ ಟೇಬಲಿಗೆ ಬಂದರೆ. ಮಸಾಲೆ ದೋಸೆ ಜೊತೆಯಲ್ಲಿ ನಿಮ್ಮನ್ನು ತಿಂದು ಬಿಡ್ತೀನಾ..?.. ಜೊತೆಯಲ್ಲಿ ನಾಲಿಗೆ ಹೊರಚಾಚಿದ ಎಮೋಜಿ..
ಪಕ್ಕನೆ ತಿರುಗಿ ನೋಡಿದ.. ಅರೆ ನನ್ನ ಕನಸಿನ ಕನ್ಯೆ ಇವಳೇ.. ಕಣ್ಣುಜ್ಜಿಕೊಂಡ.. "ಕನಸೇನು ಇಲ್ಲಾರಿ.. ಇಲ್ಲಿಗೆ ಬನ್ನಿ.. ಆಗಲೇ ನಿಮ್ಮ ಪ್ರೀತಿಯ ಮಾಣಿಗೆ ನಿಮ್ಮ ಆರ್ಡರ್ ಸೇರಿಸಿ ನನ್ನದು ಹೇಳಿದ್ದೀನಿ.. ಬನ್ನಿ ಬನ್ನಿ"  ಆ ಹುಡುಗಿ ಇವನನ್ನು ಪೂರ್ತಿಅರ್ಥ ಮಾಡಿಕೊಂಡಿದ್ದಳು.. ಹುಡುಗನ ಮನೆ, ಮನೆತನ, ಅವನ ಹವ್ಯಾಸಗಳು ಎಲ್ಲವನ್ನು ಅರ್ಥೈಸ್ಕೊಂಡು ಅವನನ್ನು ತನ್ನ ಬಾಳಸಂಗಾತಿಯಾಗಿ ಆಯ್ಕೆ ಮಾಡಿಕೊಂಡಿದ್ದಳು.. ತುಸು ಹೆಚ್ಚೇ ಧೈರ್ಯವಿದ್ದ ಹುಡುಗಿ. ಅನಾಥೆಯಾಗಿ ಪಿಜಿಯಲ್ಲಿದ್ದ ಹುಡುಗಿ.. ತನ್ನವರು ಅಂತ ಯಾರೂ ಇರಲಿಲ್ಲ.. ತನ್ನ ಬದುಕನ್ನು ಕಟ್ಟಿಕೊಂಡಿದ್ದಳು.. ಇವನು ತನ್ನ ಊರಿಗೆ ಬಸ್ ಬುಕ್ ಮಾಡಿದ್ದು ತನ್ನ ಪಿಜಿಯ ಕೆಳಗಿದ್ದ ಆಫೀಸಿನಲ್ಲಿ.. ಹಾಗಾಗಿ ವಿಚಾರ ತಿಳಿದಿತ್ತು.. ತಾನೂ ವಾರದ ಕಡೆಯಲ್ಲಿ ಚಿಕಮಗಳೂರಿಗೆ ಕಾಲಿಟ್ಟಿದ್ದಳು..

ಬೋಲ್ಡ್ ಆಗಿ ಮಾತಾಡಿದ ಆ ಹುಡುಗಿಯ ಧೈರ್ಯಕ್ಕೆ ಮೆಚ್ಚದೆ ಇರಲಾಗಲಿಲ್ಲ.. .. ಅವಳ ಟೇಬಲ್ಲಿಗೆ ಬಂದು ಕೂತಾಗ.. ಕಂಡಿದ್ದು.. ಅವಳ ಟೀ ಶರ್ಟ್ ಮೇಲಿನ ಬರಹ.. "ಅಬೆ.. ಹಮಾರಾ ಟೈಮ್ ಆಗಯಾ ಹೈ" 

ಆ ಬರಹ ಓದಿ.. ನಗು ಬಂತು.. ಅವಳು ತನ್ನ ಮುಂಗುರುಳನ್ನು ಕಿವಿಯ ಹಿಂದಕ್ಕೆ ಸಿಕ್ಕಿಸಿಕೊಂಡು ಕಣ್ಣು ಮಿಟುಕಿಸಿ ತಾನು ನಕ್ಕಳು.. !!!

ಕ್ಯಾಂಟೀನ್ ಗೋಡೆಯ ಮೇಲೆ ತೂಗು ಹಾಕಿದ್ದ ಫೋಟೋದಲ್ಲಿ "ನನ್ನನ್ನು ನೋಡು ಯೋಗ ಬರುತೈತೆ" ಯೋಗರಾಣಿಗಳು ಸಾಲು ನೋಡಿದ.. ಹುಡುಗಿಯ ಮುಖ ನೋಡಿದ.. ಮತ್ತೊಮ್ಮೆ ಕಣ್ಣು ಮಿಟುಕಿಸಿ.. ಓಕೇ ಎಂದು ಹೆಬ್ಬೆರಳನ್ನು ಎತ್ತಿ ತೋರಿಸಿದಳು.. !