Friday, April 30, 2021

ಶ್ರೀ ನಾಗಭೂಷಣ - ದಶವೇದ ಆಶ್ರಮ - ಸಾಧಕರು - ಗಣಪತಿ ಉಪಾಸಕರು

ಪ್ರತಿಯೊಬ್ಬರ ಒಳಗೂ ಪರಮಾತ್ಮನು ಇದ್ದಾನೆ .. ಆದರೆ ಅವನ ಇರುವಿಕೆಯನ್ನು ಪರಿಚಯಿಸಲು ನಮಗೊಬ್ಬ ದೇವಾಂಶ ಸಂಭೂತರಾ ಅವಶ್ಯಕತೆ ಇರುತ್ತದೆ. 

ಅಂತಹ ಒಬ್ಬ ಮೇರು ವ್ಯಕ್ತಿತ್ವವೇ ನನ್ನ ಸೋದರತ್ತೆಯ ಮಗ  ಶ್ರೀಯುತ ನಾಗಭೂಷಣ. 

ಸದ್ದಿಲ್ಲದೇ ಸಾಧನೆಯ ಶಿಖರವನ್ನು ಏರುತ್ತಿರುವ ಅವರ ಸಾಧನೆಯ ಹಾದಿ, ಧಾರ್ಮಿಕ ಕೈಂಕರ್ಯಗಳು, ನಂಬಿದವರಿಗೆ ನೀಡುತ್ತಿರುವ ಶಾಂತಿ ನೆಮ್ಮದಿ, ಅವರು ಕಟ್ಟಿ ಬೆಳೆಸುತ್ತಿರುವ ಆಶ್ರಮ, ದೇವಸ್ಥಾನಗಳನ್ನು ಪರಿಚಯಿಸುವ  ಒಂದು ವಿನಮ್ರ ಪ್ರಯತ್ನವಷ್ಟೇ ಈ ಲೇಖನ.. 

ಶ್ರೀ ನಾಗಭೂಷಣ ಅವರ ಸಾಧನೆಯನ್ನು ಹೇಳುವುದು ಅಂದರೆ ಸೂರ್ಯನಿಗೆ ಆರತಿ ಬೆಳಗಿದಂತೆ.. ಆದರೂ ನನಗೆ ತೋಚಿದ ಎರಡು ಮಾತುಗಳಲ್ಲಿ.. ಅವರ ಸಾಧನೆಯ ಒಂದು ಮಜಲನ್ನು ತೋರಿಸುವ ಒಂದು ಅಳಿಲು ಪ್ರಯತ್ನ ಈ ಲೇಖನದಲ್ಲಿ ಹೊಮ್ಮಿದೆ.. !

*******

> ಶ್ರೀಕಾಂತಾ ನನಗೆ ಒಂದು ಹತ್ತು ಎಕರೆ ಜಾಗದಲ್ಲಿ ಇಪ್ಪತೇಳು ನಕ್ಷತ್ರಗಳ ಗುಣಗಳನ್ನು ಹೊಂದಿರುವ ಗಿಡಗಳನ್ನು ನೆಟ್ಟು, ಸಂಬಂಧ ಪಟ್ಟ ನಕ್ಷತ್ರದವರು ಅದರ ಕೆಳಗೆ ಕೂತು.. ಜಪತಪ ಮಾಡಿ ಉತ್ಸಾಹ ತುಂಬಿಕೊಳ್ಳಬಹುದು.. ಇದನ್ನು ಮಾಡುವ ಹಂಬಲವಿದೆ 

> ದಶವೇದ ಅಂತ ಒಂದು ಆಶ್ರಮ ಕಟ್ಟುವ ಆಸೆ ಇದೆ.. 

> ನದಿಯ ನೀರಿನಲ್ಲಿ, ಹಾಲು, ಮೊಸರು, ಹರಳು, ಅರಿಶಿನ, ಲಾವಂಚ, ಅಷ್ಟ ಗಂಧ, ಮುಂತಾದ ದ್ರವ್ಯಗಳನ್ನು ಬಳಸಿಕೊಂಡು ಮಂತ್ರ ಘೋಷಗಳ ಜೊತೆಯಲ್ಲಿ ಸ್ನಾನ ಮಾಡಿ, ಜಪ ಮಾಡಿದಾಗ ಮನಸ್ಸು ಉಲ್ಲಸಿತಗೊಳ್ಳುವುದಷ್ಟೇ ಅಲ್ಲ.. ಶಕ್ತಿ, ಉತ್ಸಾಹ ಬರುತ್ತದೆ.. 

> ನಿಷ್ಕಲ್ಮಶದಿಂದ ಜಪ ತಪ ಮಾಡಿದಾಗ ನಮ್ಮ ಕರ್ಮಗಳು ಸವೆಯುವುದಷ್ಟೇ ಅಲ್ಲ.. ಬದುಕುವುದಕ್ಕೆ ದಾರಿ ಕಾಣುತ್ತದೆ, ಸಂಕಷ್ಟಗಳನ್ನು ದಾಟಿ ನಿಲ್ಲುವ ಚೈತನ್ಯ ಬರುತ್ತದೆ 

> ನದಿಯ ನೀರು ಸಮುದ್ರವನ್ನು ಸೇರುವ ಗುರಿಯನ್ನು ಇಟ್ಟುಕೊಂಡು ಹರಿಯುತ್ತಾ ತನ್ನ ಎದುರಿಗೆ ಬರುವ ಅಡೆ ತಡೆಗಳನ್ನು ದಾಟಿ ಮುನ್ನುಗ್ಗಿ, ತನ್ನ ಗುರಿಯನ್ನು ಸಾಧಿಸಿಕೊಳ್ಳುವ ಹಾಗೆ, ಈ ರೀತಿಯ ವಿಧಾನಗಳು ನಮ್ಮ ಬದುಕನ್ನು ಹಸಿರು ಮಾಡುತ್ತದೆ.. 

> ಶ್ರೀಕಾಂತಾ ಗಣಪತಿ ಇದ್ದಾನೆ, ದತ್ತಾತ್ರೇಯ ಇದ್ದಾನೆ, ನಾನಿದ್ದೀನಿ ಯಾವುದಕ್ಕೂ ಹೆದರಬೇಡ.. ಬದುಕು ಸುಂದರವಾಗುತ್ತದೆ ..ಧೈರ್ಯವಾಗಿರು.. ಇದೆಲ್ಲಾ ದೇವರು ಕೊಡುವ ಪರೀಕ್ಷೆಗಳು.. ನೀನು ಗೆದ್ದೇ ಗೆಲ್ಲುತ್ತೀಯ.. 

> ನೀ ಸುಮ್ಮನೆ ಬಾ ಮಿಕ್ಕಿದ್ದು ನಾನು ನೋಡಿಕೊಳ್ಳುತ್ತೇನೆ.. 

ಈ ರೀತಿಯ ಮಾತುಗಳು ಎಲ್ಲರ ಹೃದಯದಿಂದಲೂ ಬರುವುದಿಲ್ಲ.. ಅಂತಹಃಕರಣ, ವಿಶ್ವಾಸ ತುಂಬುವ ಮನಸ್ಸು, ನಾ ಇದ್ದೀನಿ ನಿನ್ನ ಜೊತೆಯಲ್ಲಿ ಎಂದು ಕೊಡುವ ಭರವಸೆಯ ಮಾತುಗಳು ಬಂದಿದ್ದು, ಬರುತ್ತಲಿರುವುದು, ಬರುತ್ತಲೇ ಇರುವುದು ನನ್ನ ಸೋದರತ್ತೆಯ ಮಗ ಶ್ರೀ ನಾಗಭೂಷಣನಿಂದ.. 

ಹೌದು.. ಏಕವಚನದಲ್ಲಿ ಮಾತಾಡುವ ಸಲಿಗೆ ಇದ್ದದ್ದರಿಂದ ಹಾಗೆ ಬರೆಯುತ್ತಿದ್ದೇನೆ. 

******

ಬೂದಿಯಿಂದ ಮೇಲೆದ್ದು ಬರುವ ಕಾಲ್ಪನಿಕ ಪಕ್ಷಿ ಫೀನಿಸ್ ತರಹ ಕಷ್ಟ ಕೋಟಲೆಗಳಿದ್ದರೂ ತನ್ನ ಸ್ವಂತ ಪರಿಶ್ರಮದಿಂದ ಮೇಲೆದ್ದು ಬಂದು ಹತ್ತಾರು, ನೂರಾರು ಕುಟುಂಬಗಳಿಗೆ ಸಾಂತ್ವನ ನೀಡುತ್ತಾ, ಬದುಕನ್ನು ಕಟ್ಟಿಕೊಳ್ಳುವ ಉತ್ಸಾಹ ತೋರುತ್ತಿರುವ ನಾಗಭೂಷಣ ಬೆಳೆದು ಬಂದ ಹಾದಿ ವಿಸ್ಮಯವೇ ಹೌದು. 

ಸುಮಾರು ಇಪ್ಪತ್ತು ವರ್ಷಗಳಿಂದ ಇವನ ಜೊತೆ ಒಡನಾಟವಿದೆ.. ಪ್ರತಿ ಬಾರಿ ಇವನ ಜೊತೆ ಮಾತಾಡಿದಾಗಲೂ ಆರೇಳು ತಿಂಗಳಿಗಾಗುವಷ್ಟು ಉತ್ಸಾಹ ತುಂಬಿ ಕಳಿಸುವ ಇವನ ಮಾತುಗಳು ನನಗೆ ಇಂದಿಗೂ ಶ್ರೀ ರಕ್ಷೆ.. ನನ್ನ ಬದುಕು ಕವಲು ಹಾದಿ ಹಿಡಿದಾಗಲೂ ಹುರುದುಂಬಿಸಿ, ನಾ ಇದ್ದೀನಿ ನಿನ್ನ ಜೊತೆ ಎಂದು ತನ್ನ ಹೆಗಲನ್ನು ಕೊಟ್ಟು ಸಾಂತ್ವನ ಹೇಳಿದ ಮಮತಾಮಯಿ.. 

ನನ್ನ ತಾಯಿ ತಂದೆಗೆ ನಾಗಭೂಷಣ ಇದ್ದಾನೆ ಶ್ರೀಕಾಂತನನ್ನು ನೋಡಿಕೊಳ್ಳೋಕೆ ಎನ್ನುವಷ್ಟು ನಂಬಿಕೆ.. ಹಾಗಾಗಿ ನಾ ಯಾವಾಗ ಹಾಸನಕ್ಕೆ ಹೋಗಲಿ, ಅಥವ ನಾಗಭೂಷನನ್ನು ಭೇಟಿ ಮಾಡಿ ಬರುತ್ತೇನೆ ಅಂತ ಹಲವಾರು ಬಾರಿ ಅಚಾನಕ್ ಹೊರಟಿದ್ದರೂ ಒಮ್ಮೆಯೂ ನನ್ನ ತಡೆದಿರಲಿಲ್ಲ.. ಅಷ್ಟು ವಿಶ್ವಾಸ ನಾಗಭೂಷಣನ ಮಾತುಗಳಿಂದ ನನ್ನ ಮನಸ್ಸು ಸರಿಯಾಗುತ್ತದೆ ಎಂದು.. 

*****

ತಾನು ಕಟ್ಟಿದ ಕನಸುಗಳನ್ನು ಒಂದೊದಾಗಿ ನನಸು ಮಾಡಿಕೊಳ್ಳುವ ಇವನ ಛಲ ನೋಡಿ ಬಲು ಖುಷಿಯಾಗುತ್ತಿತ್ತು..

ಘಂಟೆಗಟ್ಟಲೆ ಹಾಸನದ ಗೊರೂರು ಗ್ರಾಮದ ಹೇಮಾವತಿ ನದಿಯಲ್ಲಿ ಮಳೆ ಚಳಿ ಗಾಳಿ ಎನ್ನದೆ ನಿಂತು ಹಗಲು ರಾತ್ರಿ ಜಪ ಮಾಡಿ ಸಿದ್ಧಿಸಿಕೊಂಡ ಶಕ್ತಿಯನ್ನು ತನ್ನ ಏಳಿಗೆಗೆ ಉಪಯೋಗಿಸದೆ, ತನ್ನ ಬಳಿ ಬಂದ ಅನೇಕಾನೇಕ ಕುಟುಂಬಗಳಿಗೆ ಶಕ್ತಿಯಾಗಿ ನಿಂತದ್ದು, ನಿಂತಿರುವುದು, ನಿಲ್ಲುತ್ತಿರುವುದು ಈಗ ಇತಿಹಾಸ..

ಕೇರಳದ ಒಬ್ಬ ಗುರುಗಳಿಂದ ಮಂತ್ರೋಪದೇಶವಾಗಿ ಗಣಪತಿಯನ್ನು ನಂಬಿ ಗಣಪತಿ  ಉಪಾಸಕನಾಗಿ ಒಂದು ರೀತಿಯ ಪವಾಡ ಸದೃಶ್ಯವಾಗಿ  ಸಾಧನೆ ಮಾಡಿರುವುದು, ನಮ್ಮ ಕೊರವಂಗಲದ ಕುಟುಂಬದ ಒಂದು ಕೊಂಬೆಯಾಗಿ ನಿಂತಿರುವುದು ನನ್ನ ಪುಣ್ಯ. 

ಬಂದೂಕಿನಿಂದ ಹೊರಟ ಗುಂಡು ಗುರಿ ತಪ್ಪಬಹುದು, ಆದರೆ ನಾಗಭೂಷಣ ಹೇಳಿದ ಮಾತುಗಳು ನೆರವೇರದೆ ಹೋಗಿದ್ದು ನನ್ನ ಬದುಕಿನಲ್ಲಿ ನಾ ಎಂದೂ ಕಂಡೆ ಇಲ್ಲ ಕೇಳೇ ಇಲ್ಲ.. 

*****

ಸುಮಾರು ಹದಿನೈದು ಇಪ್ಪತ್ತು ಎಕರೆಯನ್ನು ಜಮೀನನ್ನು ಕೊಂಡು ಅದರಲ್ಲಿ ಆಶ್ರಮ ಕಟ್ಟುವ ಸಾಹಸಕ್ಕೆ ಕೈ ಹಾಕಿದಾಗ, ಮೊದಲು ಅಚ್ಚರಿ ಎನಿಸಿದರೂ ನಾಗಭೂಷಣನ ಸಾಮರ್ಥ್ಯದ ಬಗ್ಗೆಯಾಗಲಿ, ಅವನ ಆತ್ಮ ವಿಶ್ವಾಸದ ಮೇಲಾಗಲಿ ಕೊಂಚವೂ ಸಂದೇಶ ಇರಲಿಲ್ಲ ಬದಲಿಗೆ ಒಂದು ಪವಾಡವನ್ನು ಕಣ್ಣಿಂದ ನೋಡುವ ಸದವಕಾಶ ನನಗೆ ಸಿಕ್ಕಿದ್ದು ನನ್ನ ಪುಣ್ಯ ಎನ್ನಬೇಕು.. 

ನನ್ನ ಭಾಷೆಯಲ್ಲಿ ಹೇಳುವುದಾದರೆ, ಒಂದು ಬರಡು ಭೂಮಿಯನ್ನು ಹೊನ್ನಿನ ಭೂಮಿಯನ್ನಾಗಿ ಮಾಡಿದ್ದು ನಾಗಭೂಷಣನ ಸಾಧನೆ.  

ಮೊದಲು ಭೂಮಿ ಪೂಜೆ ಮಾಡಿದಾಗ ಕುಡಿಯಲು ನೀರನ್ನು ಹೊತ್ತು ತರಬೇಕಿತ್ತು, ನೆರಳಿಗೆ ಸುತ್ತಮುತ್ತಲೂ ಮರಗಳಿರಲಿಲ್ಲ... ವಾಹನವನ್ನು ಅನತಿದೂರದಲ್ಲಿ ನಿಲ್ಲಿಸಿ ಕಲ್ಲು ಮುಳ್ಳುಗಳ ಮಧ್ಯೆ ನೆಡೆದು ಬರಬೇಕಿತ್ತು.. 

ನಂತರ ವಾಹನವನ್ನು ಹಾಗೂ ಹೀಗೂ ಹತ್ತಿರ ಬರುವಂತಾದರೂ ಸುಮಾರು ಏಳೆಂಟು ಅಡಿಯಾಳಾದ ತಗ್ಗಾದ ನೀರಿನಿಂದ ಕೂಡಿದ ಹಾದಿಯನ್ನು ಏರಿ ಬರಬೇಕಿತ್ತು.. 

ಬರಬಿಸಿಲು, ಇಲ್ಲವೇ ತಡೆಯಲಾಗದಷ್ಟು ಬಿರುಸು ಮಳೆ, ಗಾಳಿ, ಚಳಿ ಎಲ್ಲವೂ ಆ ಪ್ರದೇಶದಲ್ಲಿ ತುಸು ಅಧಿಕವಾಗಿಯೇ ಬರುತ್ತಿತ್ತು ಎನ್ನಬಹುದು.. 

ಒಂದೊಂದೇ ಹಂತವನ್ನು ದಾಟಿ ಬರುತ್ತಿದ್ದ ಆಶ್ರಮ.. ದಶವೇದ ಎನ್ನುವ ಹೆಸರಿಗೆ ದಕ್ಕಂತೆ ದಶದಿಕ್ಕುಗಳಲ್ಲೂ ಪಸರಿಸ ತೊಡಗಿತು.. 

ಹತ್ತಾರು ಹಸುಗಳು ಇರಲಿ ಎಂಬ ಎಂಬ ಆಶಯದಿಂದ ಗೋಶಾಲೆ ರೂಪಗೊಂಡಿತು.. ಅಲ್ಲಿ ಬಂದಾಗ ಉಳಿಯಲು ಒಂದು ಅಡಿಗೆ ಮನೆ, ದೇವರ ಮನೆ, ಕೋಣೆ, ಸ್ನಾನದ ಗೃಹ, ಪೂಜಾ ಮಂದಿರ ಹೊಂದಿದ್ದ ಮನೆ ನಿರ್ಮಾಣವಾಯಿತು.. ಮೊದಲು ಪೂಜೆ, ಹೋಮಗಳು ಆ ಮನೆಯಲ್ಲಿಯೇ ನೆಡೆಯುತ್ತಿತ್ತು.. 

ನಂತರ ಯಾಗ ಶಾಲೆ ಆರಂಭ.. ಮೊದಲ ಕಟ್ಟಡಕ್ಕಿಂತಲೂ ಇನ್ನಷ್ಟು ಸೊಗಸಾಗಿ ಮೂಡಿಬಂದಿತು ಯಾಗ ಶಾಲೆ.. ಅದರ ಜೊತೆಯಲ್ಲಿಯೇ ಪ್ರವಚನ ಮಂದಿರ.. ಎಂಭತ್ತರಿಂದ ನೂರು ಜನ ನೆಲದ ಮೇಲೆ ಕುಳಿತು ಪ್ರವಚನ ಕೇಳಬಹುದಾದ ಪ್ರವಚನ ಮಂದಿರ ನಿರ್ಮಾಣವಾಯಿತು.. 

ಇಲ್ಲಿಂದ ನಾಗಭೂಷಣ ಹಿಂತಿರುಗಿ ನೋಡಿದ್ದೇ ಇಲ್ಲ (ನಾಗಭೂಷಣ ಎಂದಿಗೂ...  ಇಂದಿಗೂ ಹಿಂದೆ ತಿರುಗಿ ನೋಡಿದ್ದು, ಯೋಚಿಸಿದ್ದು ನನ್ನ ಪ್ರಕಾರ ಇಲ್ಲವೇ ಇಲ್ಲ).. 




ಪ್ರತಿ ತಿಂಗಳೂ ಹುಣ್ಣಿಮೆ ದಿನ ತಪ್ಪದೆ ಹೋಮಗಳು ನೆಡೆಯುತ್ತಿದೆ. ಜೊತೆಯಲ್ಲಿ ನಂಬಿ ಬಂದ ಅನೇಕ ಕುಟುಂಬಗಳು ತಮ್ಮ ಗುರುಗಳ ಅಣತಿಯಂತೆ ಹೋಮಗಳನ್ನು ಪೂಜೆಗಳನ್ನು ಮಾಡಿಸುತ್ತಿದ್ದರಿಂದ.. ಪೂಜೆ, ಹೋಮಗಳು ಯಥೇಚ್ಛವಾಗಿ ನೆಡೆಯಲಾರಂಭಿಸಿತು.. ಎಂದಿಗೂ ಯಾವುದರಿಂದಲೂ ಪ್ರತಿಫಲಾಪೇಕ್ಷೆಯನ್ನು ಬಯಸದೆ, ತನ್ನ ನಂಬಿ ಬಂದವರಿಗೆ ತನ್ನ ತಿಳುವಳಿಕೆಯ ಮಾತುಗಳಿಂದ ಸಂತೈಸುತ್ತಿದ್ದದ್ದು ಅಷ್ಟೇ ಅಲ್ಲದೆ, ಸಂಕಷ್ಟಗಳಿಂದ ಮೇಲೆದ್ದು ಬರಲು.. ತಾನು ನಂಬಿದ್ದ ಗಣಪತಿ ದತ್ತಾತ್ರೇಯರ ಆಶೀರ್ವಾದದ ಬಲದಿಂದ ಹಾದಿಯನ್ನು ತೋರಿಸುತ್ತ ಬಂದಿದ್ದಾನೆ. 




ದತ್ತ ಜಯಂತಿ, ಸಂಕಷ್ಟ ಚೌತಿ, ಹುಣ್ಣಿಮೆ ಸಂಕ್ರಮಣ ದಿನಗಳಲ್ಲಿ ನದಿ ಸ್ನಾನ, ಹೋಮಗಳು, ಗುರು ಪೌರ್ಣಿಮೆ, ರಾಮ ನವಮಿ, ಶರನ್ನವರಾತ್ರಿ ಹೀಗೆ ಎಲ್ಲಾ ಕಾಲಗಳಲ್ಲೂ ಸಲ್ಲಬೇಕಾದ ಜಪತಪ, ಪೂಜಾ ಹೋಮಾದಿಗಳು ಅವಿರತವಾಗಿ ನೆಡೆಯಲಾರಂಭಿಸಿತು. 

ಭಕ್ತಾದಿಗಳು ಆಶ್ರಮದ ಭವ್ಯವಾದ ತಾಣದಲ್ಲಿ ಬಂದು, ಆ ಭಕ್ತಿ  ಸಂಭ್ರಮಗಳಲ್ಲಿ ಮೈ ಮರೆತು ಭಗವಂತನ ಧ್ಯಾನ ಮಾಡುತ್ತಿದ್ದದ್ದು, ಮಾಡುತ್ತಿರುವುದು ನಾನೇ ಕಣ್ಣಾರೆ ಕಂಡು ಪುಳಕಿತನಾಗಿದ್ದೀನಿ. 

ಗೊರೂರು ಗ್ರಾಮದ ಹೇಮಾವತಿ ನದಿ ತೀರದಲ್ಲಿ ನರಸಿಂಹ ಸ್ವಾಮಿಯವವರ ಪುರಾತನ ದೇವಾಲಯವಿದೆ.. ಋಷಿ ಮುನಿಗಳು ತಪಸ್ಸು ಮಾಡಿದ ತಾಣವೆಂದು ಅಲ್ಲಿನ ಐತಿಹ್ಯ ಹೇಳುತ್ತದೆ.. ಆ ತಾಣ ಹೇಮಾವತಿ ಅಣೆಕಟ್ಟಿನ ತಪ್ಪಲಿನಲ್ಲಿರುವುದರಿಂದ ಅಲ್ಲಿ ನಿರ್ಮಾಣ ಕಾರ್ಯಕಷ್ಟ ಸಾಧ್ಯ .. ಆದರೆ ಭಗವಂತನ ಪ್ರೇರಣೆ.. ಗಣಪತಿಯೇ ನಾ ಇಲ್ಲಿ ನೆಲೆಸುತ್ತೇನೆ ಎಂದು ನಾಗಭೂಷಣನ ಅಂತರಾತ್ಮಕ್ಕೆ ಹೇಳಿದಾಗ.. ಅಲ್ಲಿ ಅಚ್ಚರಿ ಎನ್ನುವಂತೆ ನಾಗಭೂಷಣನ ತಪಶ್ಯಕ್ತಿಯಿಂದ ಪ್ರಭಾವಗೊಂಡು ಸರ್ಕಾರಿ ಅಧಿಕಾರಿಯೊಬ್ಬರ ಸಹಾಯದಿಂದ ಅಲ್ಲೊಂದು ಗಣಪತಿಯ ದೇವಸ್ಥಾನ ನಿರ್ಮಾಣಗೊಂಡಿದ್ದು ನಾ ಕಂಡ ಘಟನೆ ಸೂರ್ಯ ಚಂದ್ರ ಇರುವಷ್ಟೇ ಸತ್ಯ.. !





ಇಲ್ಲಿ ಬಂದು ಮಿಂದು ನರಸಿಂಹನನನ್ನು, ಗಣಪತಿಯನ್ನು ಪೂಜಿಸಿ ಗಜ ಕೇಸರಿ ಯೋಗ ಬರುತ್ತದೆ ಎಂದು ಹೇಳುವಾಗ ನನ್ನ ಮೈ ಕಂಪಿಸಿತ್ತು.. ಎರಡು ಮಹಾನ್ ದೈವವಾದ ಸನ್ನಿಧಿಯ ವಿಶೇಷ ವೆಂದರೆ.. ನರಸಿಂಹ ಸ್ವಾಮಿ ಪಶ್ಚಿಮಾಭಿಮುಖವಾಗಿದ್ದರೆ... ಗಣಪತಿ ಪೂರ್ವಾಭಿಮುಖವಾಗಿದೆ.. ಎರಡು ಶಕ್ತಿ ದೇವರುಗಳು ಎದುರು ಬದುರು ನಿಂತಿರುವುದು ಗಜಕೇಸರಿ ಯೋಗವಿರುವ ತಾಣ ಎನ್ನುವುದಕ್ಕೆ ಪುಷ್ಟಿಕೊಡುತ್ತದೆ.. 

ಈ ದೇಗುಲ ನಿರ್ಮಾಣವಾಗುವುದಕ್ಕೆ ನನಗೆ ತಿಳಿದು ಬಂದ ಒಂದು ಘಟನೆ.. ಇದೆ ಜಾಗದಲ್ಲಿ ಒಮ್ಮೆ ನಾಗಭೂಷಣ ನದಿಯಲ್ಲಿ ಅಹೋರಾತ್ರಿ ಕುತ್ತಿಗೆ ಮಟ್ಟದ ನೀರಿನಲ್ಲಿ ನಿಂತು ಜಪ ಮಾಡುತ್ತಿದ್ದಾಗ ಆನೆಯೊಂದು ಬಂದು ನಿಂತಂತೆ ... ಅದಕ್ಕೆ ನಾಗಭೂಷಣ ಕಬ್ಬನ್ನು ಕೊಡುತ್ತಿರುವಂತೆ ತೆ ತನ್ನ ಯೋಗ ದೃಷ್ಟಿಯಲ್ಲಿ ಕಂಡಾಗ.. ಅಲ್ಲಿಯೇ ಒಂದು ಗಣಪತಿ ದೇವಾಲಯವಾಗಬೇಕೆಂದು, ಗಣಪತಿ ನಾ ಇಲ್ಲಿ ನೆಲಸಲು ಇಚ್ಛಿಸುತ್ತೇನೆ ಎಂದು ಹೇಳಿದಂತೆ ಭಾಸವಾಯಿತು ಎನ್ನುವುದು ಈ ಗಣಪತಿ ದೇಗುಲ ಬರುವುದಕ್ಕೆ ಶಂಕು ಸ್ಥಾಪನೆಯಾಯಿತು ಎಂದು ನಾಗಭೂಷಣನ ಮಾತಲ್ಲಿ ಕೇಳಿದ್ದೇನೆ.. ತನ್ನ ತಾಯಿಗೆ ಈ ವಿಷಯ ಹೇಳಿದಾಗ ಅತಿ ಸಂತೋಷ ಪಟ್ಟು ಆಗಲಿ ಒಳ್ಳೆಯದಾಗಲಿ ಆ ಪರಮಾತ್ಮ ಇಲ್ಲಿ ಬಂದು ನೆಲೆಸುತ್ತಾನೆ ಎಂದರೆ ಅದು ಗಣಪತಿ ನಿನಗೆ ಅನುಗ್ರಹ ಮಾಡಿದ್ದಾನೆ ಎಂದೇ ಅರ್ಥ ಎಂದು ಹರಸಿದ್ದರು.. 

ಇಷ್ಟೆಲ್ಲಾ ಸದ್ದಿಲ್ಲದೇ ತನ್ನ ನಿಷ್ಕಲ್ಮಶ ಮನಸ್ಸಿನಿಂದ ತನ್ನ ಸುತ್ತ ಮುತ್ತಲ ಜನತೆಗೆ ಸಹಾಯ/ಮನಸ್ಸಿಗೆ ಶಾಂತಿ ಸಿಗುತ್ತಿದ್ದರೂ, ತಾನೂ ಏನೂ ಮಾಡಿಲ್ಲ ತನ್ನದೇನೂ ಇಲ್ಲ ಎನ್ನುವ ಮಗುವಿನಂಥ ಮನಸ್ಸಿನ ನಾಗಭೂಷಣನ ಮನಸ್ಸು ಒಂದು ಭವ್ಯವಾದ ಯೋಜನೆಯನ್ನು ನೇಯುತ್ತಲೇ ಇತ್ತು.. 

ದಶವೇದ ಅಂದರೆ ಏನೂ ಅಂದಾಗ.  ನಾಲ್ಕು ವೇದಗಳಿಗೆ ನಾಲ್ಕು ಗುರುಗಳಿದ್ದಾರೆ.. ಸತ್ಯ ಯುಗದಲ್ಲಿ ದತ್ತಾತ್ರೇಯ,  ಕೃತ ಯುಗದಲ್ಲಿ ದಕ್ಷಿಣಾಮೂರ್ತಿ, ದ್ವಾಪರದಲ್ಲಿ ವೇದವ್ಯಾಸರು, ಕಲಿಯುಗದಲ್ಲಿ ಶಂಕರ ಚಾರ್ಯರು ಹೀಗೆ ನಾಲ್ಕು ಗುರುಗಳ ಹೆಸರಿನ ಮೊದಲ ಅಕ್ಷರ ತೆಗೆದುಕೊಂಡು ಹಿಂದೆ ಮುಂದೆ ಮಾಡಿ ದಶವೇದ ಎಂದು ಮಾಡಿದ್ದೇನೆ ಎಂದಾಗ ನಿಬ್ಬೆರೆಗಾಗಿದ್ದೆ.. ವೇದಗಳು ಎಂದರೆ ನಾಲ್ಕು.. ಎಂದು ತಿಳಿತಿದ್ದ ನನಗೆ ಇನ್ನೊಂದು ಅಪೂರ್ವ ಪದಪುಂಜ ಸಿಕ್ಕಿದ್ದಷ್ಟೇ ಅಲ್ಲದೆ ಅದರ ಹಿನ್ನೆಲೆ ಕೂಡ ಅಷ್ಟೇ ಅದ್ಭುತವಾಗಿತ್ತು.. 

ಮದ್ಯದಲ್ಲಿ ಶ್ರೀ ಗಣಪತಿ.. ಅದರ ಸುತ್ತಲೂ ದತ್ತಾತ್ರೇಯ, ಶಂಕರ ಶಂಕರಚಾರ್ಯ, ವೇದವ್ಯಾಸರು, ದಕ್ಷಿಣಾಮೂರ್ತಿ ಈ ಮೂರ್ತಿಗಳ ಪುಟ್ಟ ಗುಡಿಯೂ ಬರುತ್ತದೆ ಎಂದು ನೀಲಿ ನಕ್ಷೆ ತೋರಿಸಿದಾಗ ಮನಸ್ಸಾರೆ ವಂದಿಸಿ ಕಾಲು ಮುಟ್ಟಿ ನಮಸ್ಕರಿಸಿದ್ದೆ.. ಮತ್ತು ನಾಗಭೂಷಣನ ಛಲ ಸಾಧನೆಯ ಆರಂಭಕ್ಕೆ ಸಲಾಂ ಎಂದಿದ್ದೆ.. 

ಭೂಮಿ ಪೂಜೆಯಾಯಿತು, ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ತಾಣದಲ್ಲಿ ಹದಿನೈದು ಇಪ್ಪತ್ತು ಅಡಿಯ ಕೆಳಗೆ ಶಕ್ತಿಯುತ ಯಂತ್ರಗಳನ್ನು ಭಕ್ತಿ ಪೂರ್ವಕವಾಗಿ ಮಂತ್ರಘೋಷಗಳ ನಡುವೆ ಇಟ್ಟು.. ಅದರ ಸುತ್ತಾ ಗುಡಿಯ ಗೋಡೆಯನ್ನು ಬೆಳೆಸುತ್ತಾ ಹೋದ ಹಾಗೆ ದೇವಾಲಯ  ವಿಶಿಷ್ಟ ರೂಪವನ್ನು ಪಡೆಯುತ್ತಾ ಹೋಯಿತು.. 

ದೇವಸ್ಥಾನದ ವಿನ್ಯಾಸ ಹೀಗೆ ಇರಬೇಕು, ಕಂಬಗಳು ಹೀಗೆ ಇರಬೇಕು.. ಇದೆ ಯಂತ್ರ ಚಿನ್ಹೆ ಇದೆ ಕಂಬದಲ್ಲಿ ಇರಬೇಕು.. ಗಣಪತಿಯ ವಾಹನ ಇಲಿಯು ಹೀಗೆ ಇರಬೇಕು .. ಗಣಪತಿ ಮೂರ್ತಿಯ ಶಿಲೆ ಹೀಗೆ ಇರಬೇಕು, ಇಂತದ್ದೇ ಇರಬೇಕು ತಡವಾದರೂ ಸರಿ ಯೋಚಿಸದೆ ಅದೇ ಮಾದರಿ ಶಿಲೆಯನ್ನು ಹುಡುಕಿಸಿದ್ದು ಅಷ್ಟೇ ಅಲ್ಲದೆ.. ಗಣಪತಿ ಹೀಗೆ ಇರಬೇಕು ಎಂದು ಇಂಚು ಇಂಚು ತನ್ನ ಸ್ವಸಾಮರ್ಥ್ಯದ ಯೋಚನಾ ಲಹರಿಯನ್ನು ಪಣಕ್ಕಿಟ್ಟು ಈ ದೇವಾಲಯ ಮೂಡಿ ಬರುವಂತೆ ಮಾಡಿದ.. 

ದೇವಾಲಯದ ಮುಂದೆ ಇರುವ ಕೆರೆಯಿಂದ ಇಷ್ಟೇ ಮೆಟ್ಟಿಲು ಇರಬೇಕು.. ಎರಡು ಹಂತಗಳಲ್ಲಿ ಹೀಗೆ ಇರಬೇಕು.. ಕೆರೆಯ ತೀರದಿಂದ ನೋಡಿದರೆ ಗಣಪತಿ ಮೂರ್ತಿ ಕಾಣಬೇಕು ಎಂದು.. ಯಾವ ಇಂಜಿನೀಯರ್ ಕೂಡ ತಿಣುಕುವಂತೆ ಲೆಕ್ಕಾಚಾರವಾಗಿ ಮೂಡಿಸಿರುವ ಪರಿ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.. 

ಮದ್ಯೆ ಕೊರಾನಾ ದೆಸೆಯಿಂದ ಶಿಲೆಗಳು ಬರುವುದು, ಶಿಲ್ಪಿಗಳು ಬರುವುದು, ಕೆಲಸ ನಿಗದಿತ ಸಮಯದಲ್ಲಿ ಆಗದೆ ಖರ್ಚು ವೆಚ್ಚ ಹೆಚ್ಚಾಗಿದ್ದರೂ ತಲೆ ಕೆಡಿಸಿಕೊಳ್ಳದೆ.. ಅದರ ಬಗ್ಗೆ ಕಷ್ಟವಾದರೂ ಹಿಡಿದ ಕಾರ್ಯವನ್ನು ಬಿಡದೆ.. ತನ್ನ ಆರಾಧ್ಯ ದೇವರಿಗೆ ಒಂದು ತಾಣವನ್ನು ಆ ಭಗವಂತನ ಪ್ರೇರಣೆಯಂತೆ ಕಳೆದ ಭಾನುವಾರ ಏಪ್ರಿಲ್೨೫ ೨೦೨೧ ರಂದು ಪ್ರಾಣಪ್ರತಿಷ್ಠಾಪನೆ ಭವ್ಯವಾಗಿ ನೆರವೇರಿತು.. ಕೊರೊನ ಮೂಡಿಸಿದ್ದ  ಹಿಂಜರಿಕೆಯಿಂದ ಮತ್ತು ತಾತ್ಕಾಲಿಕ ಅಡಚಣೆಗಳಿಂದ ಜೀವಮಾನದಲ್ಲಿ ಒಮ್ಮೆ ನೋಡಬಹುದಾದ ಇಂತಹ ಕಾರ್ಯಕ್ರಮವನ್ನು ನಾನು ಮತ್ತು ನನ್ನ ಕುಟುಂಬ ತಪ್ಪಿಸಿಕೊಂಡಿದ್ದರ ಬಗ್ಗೆ ಬೇಸರವಿದ್ದರೂ, ಈ ಅಡಚಣೆಗಳೆಲ್ಲ ಮುಗಿದ ನಂತರ ಅಲ್ಲಿ ಹೋಗಿಬರುವೆ .. ಹೋಗಿ ಬರುತ್ತಲೇ ಇರುವೆ.. 
















ಸುಮಾರು ಹದಿಮೂರು ವರ್ಷಗಳ ಅಂತರದಲ್ಲಿ ಆಶ್ರಮ ಬೆಳೆದು ಬಂದ ಚಿತ್ರಗಳನ್ನು ನನ್ನ ಕಣ್ಣಿಂದ ನನ್ನ ಮೂರನೇ ಕಣ್ಣು ಸೆರೆಹಿಡಿಯುವಂತೆ ಅನುಕೂಲ ಮಾಡಿಕೊಟ್ಟ ದೈವಪ್ರೇರಣೆಗೆ ನನ್ನದೊಂದು ನಮಸ್ಕಾರಗಳು.. 




















ನಾಗಭೂಷಣನ ಬಗ್ಗೆ ಹೇಳುವುದು ಬೇಕಾದಷ್ಟಿದೆ ಮುಂದಿನ ಕೆಲವು ಸರಣಿಗಳಲ್ಲಿ ಇನ್ನಷ್ಟು ನನ್ನ ಅನುಭವಗಳನ್ನು ತಿಳಿಸುವೆ. 

ಹತ್ತಾರು ಚಿತ್ರಗಳನ್ನು ಈ ಲೇಖನಕ್ಕೆ ಪೋಣಿಸುವೇ ನಿಮ್ಮ ಗಮನಕ್ಕಾಗಿ.. ಜೊತೆಗೆ ಹಾಸನ ಮಾರ್ಗವಾಗಿ ಹೋಗುವಾಗ ಚನ್ನರಾಯ ಪಟ್ಟಣದಿಂದ ಮುಂದೆ ಸಾಗಿ ಉದಯಪುರದ ನಂತರ ಜೋಡುಗಟ್ಟೆ ಗ್ರಾಮದ ಬಳಿ ಇರುವ ಶಿವನ ದೇವಾಲಯದ ಬಳಿ ಬಲ ತಿರುವುದು ತೆಗೆದುಕೊಂಡು ಸುಮಾರು ನಾಲ್ಕು ಕಿಮೀಗಳು ಕರಡೇವು  ಗ್ರಾಮದ ಹಾದಿಯಲ್ಲಿ ಸಿಗುವುದೇ ಈ ಭವ್ಯವಾದ ದಶವೇದ ಆಶ್ರಮ.. 

ಗೂಗಲ್ ನಲ್ಲಿ ಕಂಡ ಆಶ್ರಮ 

Dashaveda Ashrama in Google Search



ಇದರ ನಕ್ಷೆಯನ್ನು ಹಾಕುತ್ತೇನೆ (Google Map) .. ಜೊತೆಗೆ ನಾಗಭೂಷಣ ಅವರ ದೂರವಾಣಿ ಸಂಖ್ಯೆಯನ್ನು ಹಾಕುವೆ (+91 94489 20247).. ಆಸಕ್ತರು ಒಮ್ಮೆ ಭೇಟಿ ನೀಡಿ.  

ಹರಿವ ನದಿ ಸಾಗರವ ಸೇರುವ ಗುರಿ ಇಟ್ಟುಕೊಂಡಂತೆ.. ತನ್ನ ಸುತ್ತ ಮುತ್ತಲ ಜನತೆಗೆಶುಭವಾಗಲಿ , ಒಳ್ಳೆಯದಾಗಲಿ, ದೈವಾನುಗ್ರಹ ಎಲ್ಲರಿಗೂ ಆಗಲಿ ಎನ್ನುವ ಆಶಯ ಹೊತ್ತು ಸಾಧಿಸಿರುವ ಈ ದೇವಾಲಯ ಹಾಗೂ ಆಶ್ರಮದ  ಗುರಿ ಈಡೇರಲಿ... ಏನಂದೆ.. ಈಡೇರಲಿ ಅಲ್ಲ ಈಡೇರುತ್ತದೆ ಅನ್ನುವ ಖಾತ್ರಿ ನನಗಿದೆ... !

Thursday, April 8, 2021

ಸಂಭ್ರಮ ಸದಾ ಇರಲಿ ಟೀ..

ಪಾಪಾ ನೋಡು ಅಲ್ಲಿಂದ ಟೀ
ನಮ್ಮ ಮನೆಗೆ ಆಶೀರ್ವಾದ ಮಾಡುತ್ತಿದ್ದಾಳೆ 

ಯಾಕೆ ಏನಾಯ್ತು.. ಅದ್ಯಾಕೆ ಮರಿ ಹಾಕಿದ ಬೆಕ್ಕಿನ ಹಾಗೆ ಓಡಾಡ್ತಾ ಇದ್ದೀಯ.. ಪದೇ ಪದೇ ಕಂಪ್ಯೂಟರ್ ಚೆಕ್ ಮಾಡ್ತಾನೆ ಇದ್ದೀಯ.. ?

ಹೌದು ಕಣಮ್ಮ.. ಶ್ರೀ ಯಾಕೋ ನನ್ನ ಮರೆತು ಬಿಟ್ಟಿದ್ದಾರೆ... ಬೆಳಗಿನಿಂದ ಏನಾದರೂ ಬರೀತಾರೆ ಓದೋಣ ಅಂತ ಕಾಯ್ತಾನೆ ಇದ್ದೀನಿ.. ಎಂಥದ್ದು ಇಲ್ಲ.. ನನ್ನ ಮರೆತು ಬಿಟ್ಟಿದ್ದಾರೆ. 

ಎಂಥಹ ಮಾತು ಹೇಳ್ತೀಯ ಸವಿತಾ... ಅವನಪ್ಪ ಇಲ್ಲಿಗೆ ಬಂದು ಒಂಭತ್ತು ವರ್ಷ ಆಯ್ತು. ಒಂದು ದಿನ ಕೂಡ ಅವರನ್ನು ನೆನೆಯದೆ ಮನೆಯಿಂದ ಹೊರಗೆ ಹೋಗೋಲ್ಲ.. ನಾನು ಬಂದು ಹತ್ತಿರ ಹತ್ತಿರ ಆರು ತಿಂಗಳಾಯಿತು.. ಪ್ರತಿ ಕ್ಷಣ ನನ್ನ ಬಗ್ಗೆ.. ನಾ ಅವನಿಗೆ ಊಟ ಮಾಡು ಅಂತ ಹೇಳುತ್ತಿದ್ದ ಬಗ್ಗೆ ಸೀಮಾ ಹತ್ರ ಹೇಳ್ತಾನೆ ಇರ್ತಾನೆ.. ಇನ್ನು ನೀನು ಸಾವಿತ್ರಿಯಂತೆ ಜವರಾಯನ ಜೊತೆ ಹೊಡೆದಾಡಿ ಅವನನ್ನು ಮತ್ತು ನಿನ್ನ ಬಾಳಿನ ಕುಡಿಯನ್ನು ಉಳಿಸಿ ನೀ ಇಲ್ಲಿಗೆ ಬಂದು ನಾಲ್ಕು ವರ್ಷಗಳಾಗುತ್ತಾ ಬಂದಿದೆ... ಅವನ ಬದುಕಿಗೆ ತಿರುವು ಕೊಟ್ಟ ಸೀಮಾಳ ಹತ್ತಿರ ನಿನ್ನ ಬಗ್ಗೆ ಹೇಳದ ದಿನವಿಲ್ಲ.. ಇಷ್ಟಾದರೂ ನಿನಗೆ ಅವನ ಮೇಲೆ ನಂಬಿಕೆ ಇಲ್ವಾ.. 

ಹಾಗಲ್ಲ ಅಮ್ಮ.. ಅವರು ನಮ್ಮನ್ನೆಲ್ಲ ಮರೆಯೋದೆ ಇಲ್ಲ.. ಮರೆಯಬೇಕು ಎನ್ನುವ ಘಟನೆಗಳನ್ನು, ವ್ಯಕ್ತಿಗಳನ್ನು ಅವರು ಎಂದಿಗೂ ತಲೆಗೆ ತಂದುಕೊಳ್ಳದಂತಹ ಹಠವಾದಿ.. ಆದರೆ ಅವರ ನೆನಪಿನ ಸಾಗರಕ್ಕೆ ಹೊಕ್ಕು, ಏನಾದರೂ ಹೊಸ ರೀತಿಯಲ್ಲಿ ಬರೆದು.. ಸಂಭ್ರಮವನ್ನು ಹೆಚ್ಚಿಸುತ್ತಾರೆ ಅಲ್ವ ಅದನ್ನು ಓದೋಕೆ ಖುಷಿ.. ಅಲ್ಲಿಯೇ ನಾ ಇದ್ದೀನಿ ಅನ್ನುವಷ್ಟು ಖುಷಿ ಕೊಡುತ್ತದೆ.. 

ಹೌದು ಕಣೆ.. ಕೋರವಂಗಲದ ಕುಟುಂಬ ಶ್ರೀಕಾಂತನ ಅಯ್ಯೋ ನಿನ್ನ ಮನೆಗೆ ಎಲ್ಲರೂ ಬಂದದ್ದು, ಅವನಿಗೆ ಶುಭ ಹಾರೈಸಿದ್ದು.. ಸೀಮಾ ಸಾಹಸ ಮಾಡಿ ಎಲ್ಲರನ್ನು ಒಂದು ಕಡೆ ಕರೆಸಿ, ಶ್ರೀಕಾಂತನ ಜನುಮದಿನವನ್ನು ಮತ್ತೆ  ಆಚರಿಸಿದ್ದು.. ಎಲ್ಲರೂ ಹೋಗುವಾಗ ರಜನೀಶ.. ಆಗಲೇ ಅವನ ತಲೆಯಲ್ಲಿ ಬರಹ ಸಿದ್ಧವಾಗಿದೆ ಅದನ್ನು ಬರೆಯೋದಷ್ಟೇ ಬಾಕಿ ಅಂತ ಹೇಳಿದ್ದು ಕೇಳಿ ಆಗಲೇ ಒಂದು ತಿಂಗಳಾಗುತ್ತಿದೆ.. ಅದರ ಬಗ್ಗೆ ಓದಬೇಕು ಅಂತ ನನಗೂ ಆಸೆ.. ಆದರೆ ಅವನಿಗೆ ಕೈತುಂಬಾ ಕೆಲಸ.. ತಲೆ ತುಂಬಾ ಯೋಚನೆ.. ಅವನ ತಲೆಗೂದಲಿನ ಹಾಗೆ ಉದ್ದುದ್ದ ಬೆಳೆಯುತ್ತಿದೆ.. ಖಂಡಿತಾ ಅವನು ಬರೆಯುತ್ತಾನೆ.. ಆ ನಂಬಿಕೆ ನಿನಗೆ ಇರಲಿ.. ಅವನ ಜೊತೆಯಲ್ಲಿ ಹದಿನಾಲ್ಕು ವರ್ಷ ಕಳೆದಿದ್ದೀಯ.. ಯೋಚನೆ ಬೇಡಾ.. ಲೇಖನ ಖಂಡಿತಾ ಬರುತ್ತೆ.. 

                                                                            **********

ಹೌದು.. ಜೋಪಾನವಾಗಿ ನೋಡಿಕೊಳ್ಳಿ. ಶ್ರೀಕಾಂತ್.. 

ಮಡದಿಯ ಮೊಗ ನೋಡಿದೆ.. ಅರಳಿತ್ತು.. ಬಭೃವಾಹನದ ಹಾಡು ನೆನಪಿಗೆ ಬಂತು.. 

"ನಿನ್ನೀ ಒಲವಿಗೆ ಅರಳಲು ಒಡಲು 
ನಾಳಿನ ಭಾಗ್ಯಕೆ ಕಾದಿದೆ ಮಡಿಲು
ಬೆರೆತ ಜೀವಕೆ ಹರಕೆಯ ತರಲು 
ಮಳೆಯನ್ನು ಸುರಿಸಿದೆ ಕಪ್ಪನೆ ಮುಗಿಲು.. "

 ಶ್ರೀ ಅಣ್ಣಾವ್ರ ಬಗ್ಗೆ ಮಾತಿಲ್ಲದೆ ಏನೂ ಬರೆಯೋಲ್ಲ ಅಲ್ವ.. ಅಂದಿತು ಅಶರೀರವಾಣಿ.. 

ನೆನಪಿನಾಳಕ್ಕೆ ಜಾರಿದೆ.. ಅಂದು ಡಾಕ್ಟರ್ ನಿಮ್ಮ ಮನೆಗೆ ಹೊಸ ಅತಿಥಿಯ ಬರುವ ಹಾದಿಯಲ್ಲಿದೆ ಅಂದಾಗ.. ಮನಸ್ಸು ಈ ಸಮಯ ಆನಂದಮಯ ಹಾಡೇ ನೆನಪಿಗೆ ಬಂದಿದ್ದು.. 

ಮದುವೆಯ ಮೊದಲನೇ ವರ್ಷದೊಳಗೆ ನಾನು ಕಪಿ ಅರ್ಥಾತ್ ಕನ್ಯಾ ಪಿತೃವಾದ್ದರಿಂದ.. ಬದುಕಿನಲ್ಲಿ ಅಂತಹ ಬಾರಿ ಬದಲಾವಣೆ ಅನಿಸಲಿಲ್ಲ .. 

ಆದರೆ ಪುಟ್ಟ ಮಗು ನಮ್ಮ ಬದುಕಿಗೆ ಬೆಳಕಾಗಿ ಬಂದಿದೆ ಎಂದು ತಿಳಿದಾಗ ಮನಸ್ಸು ಆಗಸದಲ್ಲಿ ಹಾರಾಡಿದ್ದು ನಿಜ.. 

ಅಪ್ಪನ ಸ್ಥಾನಕ್ಕೆ ಬಡ್ತಿ ಸಿಗುವ ಮೊದಲು ಜೀವನ ಸರಳವಾಗಿತ್ತು.. ಮೊದಲಿಂದಲೂ ಪುಟ್ಟ ಮಕ್ಕಳನ್ನು ಎತ್ತಿಕೊಳ್ಳುವ ಹಂಬಲವಿದ್ದರೂ, ಆ ಪುಟ್ಟ ಮಕ್ಕಳ ಮೃದು ಮೈ.. 

ಮೆತ್ತನೆಯ ಮೂಳೆಗಳು ಎಲ್ಲಿ ಘಾಸಿಗೊಳ್ಳುತ್ತವೋ ಎನ್ನುವ ಭಯವಿತ್ತು.. ನನ್ನ ಕುಟುಂಬಕ್ಕೆ ಮಗು ಬಂದಾಗಲೂ ಆ ಭಯ ಇನ್ನಷ್ಟು ಜಾಸ್ತಿ ಆಯ್ತು .. 

ಕಾರಣ ನನ್ನ ಆಸ್ತಿಯಿದು, ನನ್ನ ರಕ್ತ ಹಂಚಿಕೊಂಡು ಹುಟ್ಟಿರುವ ಈ ಕಂದನನ್ನು ಎತ್ತಿಕೊಂಡಾಗ ಏನಾದರೂ ಘಾಸಿಯಾದರೆ ಅನ್ನುವ ಆತಂಕ.. 

ಏನು ಆಗಲ್ಲ.. ಶ್ರೀ.. ನಿಧಾನವಾಗಿ ಎತ್ತಿಕೊಳ್ಳಿ ಅಂದರೂ ನನ್ನ ಕಂದನನ್ನು ಅದು ಹುಟ್ಟಿದ ಮೇಲೆ ಹಲವಾರು ತಿಂಗಳು ಎತ್ತಿಕೊಂಡೆ ಇರಲಿಲ್ಲ.. 

ಮಗು ಹಾಸಿಗೆಯಲ್ಲಿ, ತೊಟ್ಟಿಲಿನಲ್ಲಿ, ಅಥವ ನನ್ನ ಮಡದಿಯ ಮಡಿಲಲ್ಲಿ ಮಲಗಿದಾಗ ಮಾತ್ರ ಮುದ್ದಿಸುತ್ತಿದ್ದೆ.. ಎತ್ತಿಕೊಳ್ಳುವ ಸಾಹಸಕ್ಕೆ ಕೈ ಹಾಕಿರಲೇ ಇಲ್ಲ.. 

ಒಂದು ದಿನ ಅಚಾನಕ್ ನನ್ನ ಮಡದಿ, ಶ್ರೀ ತಗೊಳ್ಳಿ ಅಂತ ನನ್ನ ತೊಡೆಯ ಮೇಲೆ ಮಲಗಿಸಿದಳು.. ಅದ್ಭುತ ಅನುಭವ.. ಮೆತ್ತನೆಯ ಮಗು, 

ನನ್ನದೇ ರಕ್ತ ಮಾಂಸ ಹೊತ್ತು ಧರೆಗಿಳಿದ ಕಂದ ಎಷ್ಟು ಮೃದು.. ಜೊತೆಗೆ ಮೊದಲಿಂದಲೂ ಗುಂಡು ಗುಂಡಗೆ ತುಸು ದಪ್ಪವೇ ಇದ್ದ ಮಗು.. 

ಅಯ್ಯೋ ಇಷ್ಟು ತಿಂಗಳು ಎತ್ತಿಕೊಳ್ಳಲಿಲ್ಲ ಅಂತ ಬೇಸರವಾಯ್ತು.. 

ನಂತರ ನಿಧಾನವಾಗಿ ಎತ್ತಿಕೊಳ್ಳುವುದು, ಆಟಾಡಿಸುವುದು ಶುರುಮಾಡಿದೆ.. 

ಜೀವನದಲ್ಲಿ ಬದಲಾವಣೆಯ ಆರಂಭ ಶುರುವಾಯಿತು.. ನಾ ನಾಲಿಗೆ ಉದ್ದಕ್ಕೆ ಚಾಚಿ.. ಪಾಪಾ ಅಂತ ಕರೆದರೆ ಸಾಕು.. ತಾನು ನಾಲಿಗೆ ಉದ್ದ ಮಾಡಿ, ನಗೋದನ್ನು ನೋಡಿ ಮನಸ್ಸು ಮನಸ್ಸು ಹಗುರಾಗುತಿತ್ತು.. ನನಗೆ ಇರುವ ಹಾಗೆ ಗದ್ದದಲ್ಲಿ ಗುಳಿ.. ಅದೇ ರೀತಿ ನಗು.. ಆಹಾ ಬದುಕು ಸುಂದರ ಅನಿಸಲಿಕ್ಕೆ ಶುರುವಾಯಿತು.. 

ಅಪ್ಪನ ಸ್ಥಾನಕ್ಕೇರುವುದು ಮತ್ತು ಆ ಸ್ಥಾನದ ಸಂತಸ ಅನುಭವಿಸೋದು ಮಸ್ತ್..  

ಒಡಲು ತುಂಬಿದ ಮಡದಿಯ ಜೊತೆಯಲ್ಲಿ ಆಫೀಸಿಂದ ಬಂದ ಮೇಲೆ  ಪುಟ್ಟ  ವಾಕಿಂಗ್ ಹೋಗುತ್ತಿದ್ದೆ.. ಅದು ನಿಲುಗಡೆಗೆ ಬಂದಿತು.. ಕಾರಣ ಮಗುವಿಗೆ ಥಂಡಿ ಆಗುತ್ತೆ ಹೊರಗೆ ಹೋಗಬೇಡಿ ಅಂತ ಕಟ್ಟಾಜ್ಞೆ.. ಹಾಗಾಗಿ ಮನೆಯಲ್ಲಿಯೇ ಮಗು ಮಡದಿಯ ಜೊತೆ ನಲಿದಾಟ.. 

ಬೆಳಿಗ್ಗೆ ಇಂದ ಸಂಜೆ ತನಕ ಮಗುವಿನ ಆಟೋಟಗಳ ಬಗ್ಗೆ ಮಡದಿ ವರದಿ ಒಪ್ಪಿಸಿ ಸಂತಸಪಡುವಾಗ ಆ ಸಂತಸದ ಸಾಗರದಲ್ಲಿ ನಾನು ಮುಳುಗಿ ತೇಲುತಿದ್ದೆ.. ಮೆಲ್ಲಗೆ ಎತ್ತಿಕೊಳ್ಳುವ ಅಭ್ಯಾಸವಾಗಿದ್ದು ಒಂದು ಕಡೆ ಸಂತಸವಾದರೂ.. ಇನ್ನೊಂದು ಕಡೆ ಅದೇ ಶಿಕ್ಷೆ ಅನಿಸುತಿತ್ತು.. ಕಾರಣ ಡುಮ್ಮು ಡುಮ್ಮುಗೆ ಇದ್ದ ನನ್ನ ಮುದ್ದು ಮಗಳನ್ನು ಸ್ವಲ್ಪ ಹೊತ್ತು ಎತ್ತಿಕೊಳ್ಳೋಕೆ ಖುಷಿಯಾದರೂ ...ಮೆಲ್ಲನೆ ಭಾರ ಹೆಚ್ಚಾಗುತಿತ್ತು.. ಮಡದಿ ಹಲ್ಲು ಬಿಡುತ್ತಾ.. ನೋಡಿ ಮಗು ನೋಡಿಕೊಳ್ಳೋದು ಎಷ್ಟು ಕಷ್ಟ ಅಂತ ನಗುತಿದ್ದಳು.. ಆದರೆ ಆ ಭಾರದಲ್ಲೂ ಖುಷಿ ಇರುತಿತ್ತು.. ನಾ ಹೇಳುತಿದ್ದೆ..ನೋಡು ನೀನು ಮಗುವನ್ನು ಒಂಭತ್ತು ತಿಂಗಳು ಒಡಲಲ್ಲಿ ಇಟ್ಟುಕೊಂಡಿದ್ದೆ.. ಈಗ ನನ್ನ ಸರದಿ. .. 

ಹಾಗಾಗಿ ನಾ ಮಗುವನ್ನು ಎತ್ತಿಕೊಂಡು ಓಡಾಡಲು ಶುರುಮಾಡಿದೆ.. ನನ್ನ ಮಗಳು ಕೂಡ ಅದಕ್ಕೆ ಸ್ಪಂದಿಸೋಕೆ ಶುರು ಮಾಡಿದಳು..ಮನೆಯಲ್ಲಿದ್ದಾಗ ಅಮ್ಮನ ಮಗಳಾಗಿದ್ದವಳು.. ಮನೆಯಿಂದ ಹೊರಗೆ ಬಂದ ಕೂಡಲೇ ಅಪ್ಪನ ಮಗಳಾಗುತ್ತಿದ್ದಳು.. ನಾ ಹೇಳಿದ್ದು ವೇದವಾಕ್ಯ.. ನಾ ಹೇಳಿದ್ದು ಇಂಚಿಂಚು ಪಾಲಿಸುತ್ತಿದ್ದಳು..

ಮಗುವನ್ನು ಗಣೇಶನ ತರಹ ಎತ್ತಿಕೊಂಡು ಓಡಾಡುತಿದ್ದೆ.. ಹಾದಿಯಲ್ಲಿ ನೋಡಿ ಎಲ್ಲರೂ ಹಲ್ಲು ಬಿಡೋರು.. ಮಡದಿ ಕೂಡ ಥೂ ಇದು ಯಾಕ್ರೀ ಹೀಗೆ ಎತ್ತಿಕೊಳ್ಳುತ್ತೀರಾ ಅಂತ ಬಯ್ಯುತ್ತಿದ್ದರೂ.. ನಾನು ಏನೂ ಏನೂ ಹೇಳದೆ ಸಾಗುತಿದ್ದೆ.. 

ಮಗಳು ದಿನೇ ದಿನೇ ಬೆಳೆಯುತಿದ್ದಳು.. ಎತ್ತಿಕೊಳ್ಳುವ ಸ್ಥಾನದಿಂದ ಪುಟ್ಟ ಪುಟ್ಟ ಹೆಜ್ಜೆ ಹಾಕುವ ಹಂತಕ್ಕೆ ಬಂದಾಗ..ಕೈ ಹಿಡಿದು ನೆಡೆಸುವ ಬದಲು ಪಾಪಾ ನೀನೆ ಹೆಜ್ಜೆ ಹಾಕು ನಿನ್ನ ಬೆನ್ನ ಹಿಂದೆ ನಾ ಇದ್ದೇನೆ ಎನ್ನುತಿದ್ದೆ.. ಮಗಳಿಗೂ ನನ್ನ ಮೇಲೆ ಏನೋ ವಿಶ್ವಾಸ ಹಾಗೆ ಮಾಡುತಿದ್ದಳು.. 

ಮಡದಿಗೆ ಈ ಕಮಂಗಿ ಏನೋ ಮಾಡುತ್ತಿದೆ ಆದರೆ.. ಇದರ ಆಲೋಚನೆ ಏನು ಅಂತ ಹೊಳೆಯದೆ ನನ್ನ ಮೇಲೆ ಕೆಲವೊಮ್ಮೆ ರೇಗುತಿದ್ದಳು.. ಆದರೆ ನನ್ನ ಆಲೋಚನೆ ಮತ್ತು ಯೋಜನೆಯ ಮೇಲೆ ನನಗೆ ನಂಬಿಕೆ ಇತ್ತು ಹಾಗಾಗಿ ನಾ ನನ್ನ ಪಾಡಿಗೆ ನನ್ನ ಸಿದ್ಧಾಂತದ ಹಾದಿಯಲ್ಲಿ ಸಾಗುತಿದ್ದೆ.. 

ಮಗಳು ಬಂದ ಮೇಲೆ ನನ್ನ ಜೀವನ ಬದಲಾಯಿತು ಅಂದುಕೊಳ್ಳೋದಕ್ಕಿಂತ ನನಗೆ ಅದ್ಭುತ ಗೆಳತೀ ಸಿಕ್ಕಿದಳು ಅಂತ ಹೇಳೋಕೆ ನನಗೆ ಖುಷಿ.. ಯಾಕೆ ಅಂದರೆ ನಾ ಅವಳಿಗೆ ತಿಳಿ ಹೇಳುತ್ತಿದ್ದ ಮಾತುಗಳೆಲ್ಲ ನನ್ನ ಜೀವನಕ್ಕೆ ದಾರಿ ದೀಪವಾಗುತಿತ್ತು.. ನನಗರಿವಿಲ್ಲದೆ ಅವಳಿಗೆ ಹೇಳುತ್ತಿದ್ದ ಮಾತುಗಳು ನನಗೆ ಪಾಠ ಕಲಿಸಲು ಶುರು ಮಾಡುತ್ತಿದ್ದವು.. 

ಅವಳ ಶಾಲೆಯ ಮೊದಲ ದಿನ.. ಅಳದೆ.. ಶಾಲೆಗೆ ಹೊರತು ನಿಂತಾಗ ಭಲೇ ಹುಡುಗಿ ಅಂದುಕೊಂಡೆ.. ಶಾಲೆಯಲ್ಲಿ ಕೂತು ಅವರ ಟೀಚರ್ ನಮಗೆ ನೀವು ಹೋಗಿ ಅಂದಾಗ.. ಅಚಾನಕ್ ಅಳಲು ಶುರು ಮಾಡಿದಾಗ ನನಗೆ ಪಿಚ್ ಅನಿಸಿತು.. ಆದರೆ ಅಲ್ಲಿಂದ ಮತ್ತೊಂದು ಅಧ್ಯಾಯ ಶುರುವಾಯಿತು.. 

ಆಕೆಯ ಓದು ಬರಹ.. ನಾ ಶಾಲೆಯಲ್ಲಿ ಕಾಣದ ಆನಂದ ಆಕೆಯ ಮೊಗದಲ್ಲಿ ಕಂಡು ಧನ್ಯನಾಗುತ್ತಿದ್ದೆ.. ಶಾಲೆಯಲ್ಲಾಗುವ ಪ್ರತಿ ಪೋಷಕರು ಮತ್ತು ಅಧ್ಯಾಪಕರ ಭೇಟಿಯಲ್ಲಿ ನಾ ಎಂದಿಗೂ  ಆಕೆಯ  ಅಂಕ ಪಟ್ಟಿಯನ್ನು ನೋಡದೆ.. ಆಕೆಯ ಸ್ವಭಾವ, ಆಕೆಯ ನಡೆವಳಿಕೆ, ಆಕೆಯ ಸಹಪಾಠಿಗಳ ಜೊತೆಯಲ್ಲಿ ಆಕೆ ಬೆರೆಯುತಿದ್ದ ರೀತಿ, ಆಕೆಯ ಗುರುಗಳ ಜೊತೆಯಲ್ಲಿ ಮಾತಾಡುತಿದ್ದ ರೀತಿ, ತೋರುತ್ತಿದ್ದ ಗೌರವ ಬರೀ ಇದರ ಸುತ್ತ ಮುತ್ತಲೇ ನನ್ನ ಮಾತುಗಳು ಸುತ್ತಾಡುತ್ತಿದ್ದವು... ಆಗ ಆಕೆಯ ಅಧ್ಯಾಪಕರೊಬ್ಬರು.. ಇದೊಳ್ಳೆ ಕತೆ ಸರ್ ನಿಮ್ಮದು.. ಎಲ್ಲಾ ಪೋಷಕರು ಬಂದು ಅಂಕಗಳು ಕಡಿಮೆಯಾಗಿವೆ.. ಹೆಚ್ಚಾಗೋಕೆ ಏನು ಮಾಡಬೇಕು, ಟ್ಯೂಷನ್ ಕಲಿಸಬೇಕು, ಸಮಯವಿಲ್ಲ ಅದು ಇದು ಅಂತ ತಮ್ಮ ಮಕ್ಕಳ ಬಗ್ಗೆ ದೊಡ್ಡ ದೂರನ್ನೇ   ದಾಖಲಿಸುತ್ತಿದ್ದರೆ..ನೀವು ಉಲ್ಟಾ ಮಾತಾಡುತ್ತಿದ್ದೀರಲ್ಲ.. ಅಂದಾಗ ನಾ ಸುಮ್ಮನೆ ನನ್ನ ಮಗಳ ಮುಖ ನೋಡಿ.. "ಜೀವನದಲ್ಲಿ ಅಂಕಗಳು ಮುಖ್ಯವಲ್ಲ.. ಅಂಕೆಗಳು ಮುಖ್ಯ ಅಂದೇ". 

ನನ್ನ ಮಗಳ ಮೊಗದಲ್ಲಿ ಸಾವಿರ ವಾಟ್ ಬಲ್ಬ್ ಹತ್ತಿದ್ದು ಕಂಡೆ.. ಆದರೆ ಅವಳಿಗೆ ಪೂರ್ಣ ಅರ್ಥವಾಗಿರಲಿಲ್ಲ... ಅದಕ್ಕೂ ಒಂದು ಸಮಯ ಬರುತ್ತೆ ಅಂತ ಅವಳಿಗೂ ಗೊತ್ತಿತ್ತೋ ಅಥವ ನನ್ನ ತಲೆಯಲ್ಲಿನ ಯೋಚನೆಯನ್ನು ಗ್ರಹಿಸಿದಳೋ ಕಾಣೆ..  

ಅವಳು ಬೆಳೆದಾಗೆಲ್ಲ ನನ್ನ ಮತ್ತು ಅವಳ ಬಾಂಧವ್ಯ ಗೆಳೆಯರ ತರಹ ಆಯಿತು... ದಿನದಲ್ಲಿ ಮೊದಲ ಬಾರಿಗೆ ನೋಡಿದಾಗ ಸಲ್ಯೂಟ್ ಮಾಡೋದು.. ಆಫೀಸಿನಿಂದ ಬಂದ ಮೇಲೆ ಸಲ್ಯೂಟ್ ಹೊಡೆದು ಅವಳು ನನ್ನ ಬ್ಯಾಗ್ ತೆಗೆದುಕೊಂಡು ಹೋಗೋದು, ಹೈ ಪೈ ಹೊಡೆಯೋದು, ನಾ ಯೋಚಿಸೋ ಧಾಟಿಯಲ್ಲಿಯೇ ಆಕೆಯೂ ಯೋಚಿಸೋದು.. ಅಥವ ಆಕೆಯ ರೀತಿಯಲ್ಲಿ ನಾ ಯೋಚಿಸೋದು ಹೀಗೆ ಬದುಕು ತಿರುವನ್ನು ಪಡೆಯುತ್ತಲೇ ಸಾಗಿತ್ತು.. 

ನಮ್ಮ ಮಾತುಗಳು ಕೂಡ ಇಬ್ಬರು ಗೆಳೆಯರ ತರಹನೇ ಇರುತ್ತಿದ್ದವು.. 

ಒಮ್ಮೆ ಶಾಲೆಯ ಒಂದು ತಿಂಗಳ ಪರೀಕ್ಷೆಯಲ್ಲಿ ಅವಳ ಅಂಕಗಳು ಸುಮಾರಾಗಿ ಬಂದವು.. ಒಂದು ವಿಷಯದಲ್ಲಿ ಅತಿ ಕಡಿಮೆ ಅಂಕ ಬಂದಿತ್ತು.. ಹಾಗೂ ಹೀಗೂ ಪಾಸಾಗುವಷ್ಟೇ ಬಂದಿದ್ದವು.. ಅಂದು ಆಫೀಸಿನ ಕೆಲಸದ ಒತ್ತಡ ತುಸು ಅದವಾಗಿಯೇ ಬಂದಿದ್ದೆ.. ಅವಳ ಮೊಗ ಕಮಲದ ಹೂವಿನಂತೆ ಅರಳೋದರ ಬದಲಿಗೆ ಬಾಡಿದ ಹೂವಾಗಿತ್ತು.  ನಾ ಸುಮ್ಮನೆ ಅವಳಾ ಮೊಗವನ್ನೊಮ್ಮೆ ನೋಡಿ, ನನ್ನ ಪಾಡಿಗೆ ನನ್ನ ನಿತ್ಯ ಕೆಲ್ಸದಲ್ಲಿ ತೊಡಗಿಕೊಂಡೇ.. ಸ್ವಲ್ಪ ಹೊತ್ತಾದ ಮೇಲೆ ಬಂದು ಅಪ್ಪಾ ಅಂತ ತೋಡಿ ರಾಗ ಶುರು ಮಾಡಿದಳು.. ಹೇಳು ಪಾಪಾ ಅಂದೇ.. 

ಅಪ್ಪ.. ಮತ್ತೆ ರಾಗ ಶುರು ಶುರು.. ಒಂದು ವಿಷಯದಲ್ಲಿ ಕಡಿಮೆ ಅಂಕ ಅಂತ ಹೇಳಿದಳು. ಹೌದ ಸರಿ ಮುಂಚಿನ ಪರೀಕ್ಷೆಯಲ್ಲಿ ಚೆನ್ನಾಗಿ ಓದಿ ಉತ್ತಮ ಅಂಕ ಪಡಿ ಅಂದೇ.. ಅವಳ ಕಣ್ಣಲ್ಲಿ ನೀರು ತುಂಬಿತ್ತು.. ನಾ ಚೆನ್ನಾಗಿ ಬಯ್ತೀನಿ ಅಂತ ಅಂದುಕೊಂಡಿದ್ದವಳಿಗೆ ನನ್ನ ಈ ನೆಡವಳಿಕೆ ಅಚ್ಚರಿ ತಂದಿದ್ದು ಸುಳ್ಳಲ್ಲ.. 

ಅಪ್ಪ.. ನನ್ನ ಸ್ನೇಹಿತೆ ಕಡಿಮೆ ಅಂಕ ತೆಗೆದುಕೊಂಡಳು ಅಂತ.. ಅವಳ ಅಪ್ಪ ಬಾಯಿಗೆ ಬಂದಂತೆ ಬಯ್ದರಂತೆ .. ನೀವು ನೋಡಿದರೆ ಉತ್ತೇಜನ ಕೊಟ್ಟು ಸ್ಫೂರ್ತಿ ಬರುವ ಹಾಗೆ ಬೆನ್ನು ತಟ್ಟುತ್ತೀರಾ.. ನಿಮ್ಮಂಥ ಅಪ್ಪನನ್ನು ಪಡೆದ ನಾನೇ ಧನ್ಯ ಅಂದಳು.. 

ಆಗ ಅವಳಿಗೆ ಅರ್ಥವಾಗುವ ಹಾಗೆ ಹೇಳಿದೆ.. "ಪಾಪಾ ನೀನು ಮಗುವಾಗಿದ್ದಾಗ ಗಣೇಶನ ತರಹ ಎತ್ತಿಕೊಂಡು ಓಡಾಡುತ್ತಿದ್ದೆ.. ಕಾರಣ ನಿನ್ನ ಮುಖ ನನ್ನ ಭುಜದ ಮೇಲೆ ಬರುವಂತೆ ಎತ್ತಿಕೊಂಡರೆ.. ನನಗೆ ಆಯಾಸ ಖಂಡಿತ ಕಡಿಮೆಯಾಗುತ್ತಿತ್ತು.. ಆದರೆ ನೀನು ನನ್ನ ಹಿಂದೆ ಕಾಣುವ ದೃಶ್ಯಗಳನ್ನು ಮಾತ್ರ ಗಮನಿಸುತ್ತಿದ್ದೆ.. ಅಲ್ಲಿ ನನ್ನ ತಪ್ಪುಗಳು ಕಾಣುತ್ತಿದ್ದವು.. ಜಗತ್ತಿನ ಸರಿ ನಿನಗೆ ಕಾಣುತ್ತಿರಲಿಲ್ಲ.. ನೀನು ಮುಂದೆ ನೋಡಿಕೊಂಡು ಬದುಕು ಸಾಗಿಸಬೇಕು.. ನನ್ನ ಹಿಂದಿನ ಅನುಭವಗಳು ನಿನಗೆ ಅಡ್ಡಿಯಾಗದೆ, ನಿನಗೆ ನನ್ನ ಅನುಭವದ ಮೂಸೆಯಿಂದ ಸಿಗುವ ಸಾರಾಂಶ ಮಾತ್ರ ದಾರಿದೀಪವಾಗಬೇಕು ಅಂತ ಅದರ ಉದ್ದೇಶ ಇತ್ತು.. ಅದೇ ಪಾಠ ನೀನು ಕಡಿಮೆ ಅಂಕಗಳನ್ನು ತೆಗೆದಾಗಲೂ ನಾ ಹೇಳಿದ್ದು ಅದೇ.. ಹಿಂದೆ ಆದ ತಪ್ಪಿನಿಂದ, ಅಥವಾ ಸೋಲಿನಿಂದ ಕಂಗೆಡದೆ ಮುಂದೆ ಹೆಜ್ಜೆ ಹಾಕಬೇಕು.. .. "

ಅವಳಿಗೆ ಈ ಹೇಳಿದ ಪಾಠ ನಾ ಎಲ್ಲಿಯೂ ಹೇಳಿಕೊಟ್ಟದ್ದಲ್ಲ.. ಬದಲಿಗೆ ಅಪ್ಪನಾದ ಮೇಲೆ ನಾನೇ ಜೀವನದಲ್ಲಿ ಕಲಿತ ಪಾಠ.. ಇದರ ಯಶಸ್ಸಿನ ಭಾಗ ನನ್ನ ಅಪ್ಪನಿಗೂ ಸಲ್ಲಲೇ ಬೇಕು.. ಕಾರಣ.. ಅಪ್ಪ ಅಂದರೆ ಹೇಗಿರಬೇಕು ಅಂತ ಮಾದರಿಯಾಗಿ ಬದುಕಿ, ಪಾಠ ಹೇಳಿಕೊಡದೆ, ಪಾಠ ಕಳಿಸಿದ ಗುರು ಅವರು.. 

ಅಪ್ಪ ಅಂದರೆ ಅಪ್ಪ ಅಲ್ಲ ಅದೊಂದು ಶಕ್ತಿ.. ! ಮಗಳು ಅಂದರೆ ಬರಿ ಮಗಳಲ್ಲ.. ನಮ್ಮ ಬದುಕಿಗೆ ಪಾಠಗಳನ್ನು ನಮ್ಮಿಂದಲೇ ಹೇಳಿಕೊಡುವ ಗುರು.. !

                                                                         **************

ಸವಿತಾಳ ಮೊಗ ಅರಳಿದ್ದು ಕಂಡು.. ಅಂತೂ ಬಂತಾ.. ಓದಿದೆಯಾ.. ಸಮಾಧಾನ ಆಯ್ತಾ.. 

ಆಯ್ತು ಅಮ್ಮ.. ನಿಮ್ಮ ಮಗರಾಯ ಅದೆಂಗೆ ಆ ದಿನಗಳನ್ನು ಕಣ್ಣೆದುರು ತರುತ್ತಾರೋ.. ಅದ್ಭುತ.. 

ಎಲ್ಲದಕ್ಕೂ ಆ ಭಗವಂತನ ಅನುಗ್ರಹ ಕಣೆ ಸವಿತಾ. .. ಇವತ್ತು ನಿನ್ನ ವಿವಾಹವಾದ ಸಂಭ್ರಮ.. ನನಗೆ ಗೊತ್ತು.. ಅದಕ್ಕೆ ನಾನು ಸುಮ್ಮನಿದ್ದೆ ಏನೂ ಹೇಳದೆ.. ಏನು ಅವನ ಲೇಖನ ಓದಿದ ಮೇಲೆ ನಿನ್ನ ಮೊಗದ ಮೇಲೆ ನಗು ತರುತ್ತೀಯ ಅಲ್ವ.. ಅದನ್ನು ಕಂಡೆ ನಿನಗೆ ಶುಭ ಆಶೀರ್ವಾದ ಮಾಡಬೇಕು ಅಂತ ಕಾದಿದ್ದೆ.. ನೋಡಲ್ಲಿ ಎಲ್ಲರೂ ಅಲ್ಲಿ ನಿನಗೆ ಹಾರೈಸಿದ್ದಾರೆ.. 

ಧನ್ಯವಾದಗಳು ಅಮ್ಮ.. ನಿಮ್ಮ ಆಶೀರ್ವಾದ ನನ್ನ ಶ್ರೀ ಮನೆಯ ಮೇಲೆ ಸದಾ ಇರಲಿ.. ಸೀಮಾ ಒಂದೊಂದೇ ಹೆಜ್ಜೆ ಹಾಕುತ್ತ ಮನೆಯನ್ನು ಮುನ್ನೆಡೆಸುತ್ತಿದ್ದಾಳೆ... ಶ್ರೀ ಗೆ ಭುಜಕ್ಕೆ ಭುಜ ಕೊಟ್ಟು ನಿಂತಿದ್ದಾಳೆ.. ಶೀತಲ್ ಇವರಿಬ್ಬರ ಜೊತೆಯಲ್ಲಿ ಹೆಜ್ಜೆ ಹಾಕುತ್ತಿದ್ದಾಳೆ.. ಖಂಡಿತ ನಮ್ಮ ಅನುಗ್ರಹ ಸದನ ಎಂದಿಗೂ ಹಸಿರಾಗಿರುತ್ತದೆ.. ಹಸಿರಾಗಿರಲೇಬೇಕು.. ಸದ್ಯದ ಸಮಸ್ಯೆಗಳು ತಾತ್ಕಾಲಿಕ.. ಅದನ್ನು ಮೆಟ್ಟಿ ನಿಲ್ಲುತ್ತಾರೆ..ನಿಲ್ಲಲೇಬೇಕು.. 

                                                                           ***************