Sunday, December 31, 2017

ಎಂದರೋ ಮಹಾನುಭಾವುಲು ಅಂದರೀಕಿ ವಂದನಮು..

ಸಿಬಿ.. ಒಂದು ವಿಷ್ಯ ಗೊತ್ತಾ.. ಈಗ ಸ್ಕೋರ್ ೪೩೬ ಆಗಿದೆ..

"ವಾಹ್ ಶ್ರೀ..you should go for 500 in 2016"

"ಅದೇನು ಅಷ್ಟು ಕಷ್ಟವಲ್ಲ.. ಎಂಟು ಬ್ಲಾಗ್ ಇದೆ.. ಎಂಟು ತಿಂಗಳಿವೆ.. ತಿಂಗಳಿಗೆ ಎಂಟು ಲೇಖನ ಬರೆದರೆ.. ಸಾಕು... " ಸ್ವಲ್ಪ ಅಹಂನಲ್ಲಿ ಮಾತಾಡಿದ್ದೆ.. 

"Then you do it.. all the best sri"

ದೇವರು ಯು ಟರ್ನ್ ಮಾಡಿಸಿದ.. ೫೦೦ ಇರಲಿ. ಮುಂದಿನ ಎಂಟು ತಿಂಗಳಲ್ಲಿ ೪೫೦ ಕೂಡ ಮುಟ್ಟಲಿಲ್ಲ.. ಸುಸ್ತಾಗಿತ್ತು.. ಕೈ ಬಿಟ್ಟೆ ..೨೦೧೬ ಮುಗಿದು ೨೦೧೭ ಬಂತು.. 

"ಶ್ರೀ ಈ ವರ್ಷ ಯಾವುದೇ ಮಿತಿ ಹಾಕಿಕೊಳ್ಳದೆ ಸುಮ್ಮನೆ ಬರೆಯುತ್ತಾ ಹೋಗಿ " ಸಿಬಿ ಹೇಳಿದಾಗ.. ಅದರ ಜಾಡಿನಲ್ಲಿಯೇ ನೆಡೆದೆ..  

ಇದು ೫೦೦ನೇ ಲೇಖನ.. ಇದನ್ನೆಲ್ಲಾ ನಾ ಬರೆದಿದ್ದಲ್ಲ.. ನನ್ನೊಳಗೆ ಕೂತಿರುವ ನನ್ನ ಆತ್ಮದ ಒಡೆಯ ಹೇಳಿದ್ದು.. ನಾ ಆ ವಾಣಿ ಕೇಳಿದ್ದನ್ನ ಅಲ್ಪ ಸ್ವಲ್ಪ ಕೇಳಿಸಿಕೊಂಡು ಬರೆದ ಲೇಖನಗಳು ಇವು.. ಇವು ನನ್ನ ಪ್ರೀತಿಯ ಓದುಗರಿಗೆ ಇಷ್ಟವಾಗಿದೆ ಅಂದರೆ ಅದರ ಶ್ರೇಯಸ್ಸು ಆ ವಾಣಿಗೆ.. ತಪ್ಪಿದ್ದರೆ.. ಆ ವಾಣಿಯ ಧ್ವನಿಯನ್ನು ಸರಿಯಾಗಿ ಕೇಳಿಸಿಕೊಳ್ಳದೆ ಬರೆದ ತಪ್ಪು ನನ್ನದು.. 

ಸ್ನೇಹಿತರು ತಮಗೆ ಅರಿವಿಲ್ಲದೆ ಸ್ಫೂರ್ತಿ ತುಂಬುವ ಪರಿ ಇದು.. ಶ್ರೀ ನೀವು ಮಾಡಬಲ್ಲಿರಿ, ನೀವು ಬರೆಯಬಲ್ಲಿರಿ ಎನ್ನುವ ಮನೋಸ್ಥೈರ್ಯ ತುಂಬಿದ.. ನನಗೆ ದೇವರು ಕೊಟ್ಟ ಅದ್ಭುತ ಗೆಳತೀ.. ನಿವೇದಿತಾ ಚಿರಂತನ್ ಅಲಿಯಾಸ್ ಸಿಬಿ.. ನನ್ನ ಎಲ್ಲಾ  ಗೊಂದಲಗಳನ್ನು ಪರಿಹರಿಸುವ ದೇವತಾ ಸ್ನೇಹಿತೆ ಇವರು. 

ನಾನು ಕಳಿಸುವ ಸಂದೇಶಗಳ ಅಲ್ಪ ವಿರಾಮ, ಪೂರ್ಣ ವಿರಾಮಗಳಲ್ಲಿ ನನ್ನ ಯೋಚನಾ ಲಹರಿಯನ್ನು ಕಂಡು ಹಿಡಿದು, ಏನಾಯಿತು ಶ್ರೀ ಎಂದು ಅದನ್ನು ನಿವಾರಣೆ ಮಾಡುವ ಈ ಗೆಳತಿಗೆ ಈ ಲೇಖನ ಅರ್ಪಣೆ.. 

ಐನೂರು ಮುಟ್ಟಿ ಎನ್ನುವ ಒತ್ತಾಯವಿರಲಿಲ್ಲ, ಅದನ್ನು ನೀವು ಮಾಡಲೇ ಬೇಕು ಎನ್ನುವ ಧೋರಣೆಯನ್ನು ನನ್ನಲ್ಲಿ ಒತ್ತಡ ಹೇರುವ ಬದಲು.. ಶ್ರೀ ನೀವು ಮಾಡಬಲ್ಲಿರಿ.. ಆರಾಮಾಗಿ ಬರೆಯುತ್ತಾ ಹೋಗಿ.. ನಾ  ಓದಲಿಕ್ಕೆ ಎನ್ನುತ್ತಾ ಸ್ಫೂರ್ತಿ ತುಂಬಿದ ಇವರಿಗೆ ನಾ ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆ .. 

ವಾಹ್ ನಿವ್ಸ್.. ಸೂಪರ್ ಹೀಗಿರಬೇಕು ಸ್ಫೂರ್ತಿ ತುಂಬುವ ರೀತಿ .. ಕಮಾನ್ ಶ್ರೀ ಬರೆಯಿರಿ.. ನಾವು ಇದ್ದೀವಿ ಓದಲಿಕ್ಕೆ ಎನ್ನುವ ದೇವ್ರು ಕಳಿಸಿದ ಸ್ಫೂರ್ತಿ ತುಂಬುವ ರೂಪ ಸತೀಶ್ ಅಲಿಯಾಸ್ DFR.. ಇವರಿಗೆ ನನ್ನ ಧನ್ಯವಾದಗಳು.. 

                                                                         ********

ಬ್ಲಾಗ್ ಲೋಕಕ್ಕೆ ನನ್ನ ಪರಿಚಯಿಸಿದ ಸಂದೀಪ್ ಕೆ ಬಿ, ಶ್ರೀಕಾಂತೂ ಎನ್ನುತ್ತಾ ಲೇಖನಗಳನ್ನು ಓದುವ ಪ್ರಕಾಶ್ ಹೆಗಡೆ, ನೀವು ಬರೆಯಿರಿ ಸರ್ ಆನೆ ನೆಡೆದದ್ದೇ ದಾರಿ ಎನ್ನುವ ಬಾಲೂ ಸರ್, ಶ್ರೀಮನ್ ನಿಮ್ಮ ಭಾವ ಪೂರ್ಣ ಲೇಖನಗಳು ಸೊಗಸು ಎನ್ನುವ ಅಜಾದ್ ಸರ್, ಬ್ಲಾಗೋತ್ತಮ ಬ್ರದರ್ ಎನ್ನುವ ಬದರಿ ಸರ್ ಇವರ ಪ್ರೋತ್ಸಾಹಗಳಿಗೆ ನಾ ಚಿರಋಣಿ.. 

ನನ್ನ ಕನ್ನಡಿಯೆಂದೇ ಹೆಸರಾದ.. ನನ್ನ ಯೋಚನೆಗಳಿಗೆ ಯಥಾವತ್ ಪ್ರತಿಕ್ರಿಯೆ ಕೊಡುತ್ತಾ ಅಣ್ಣ ಅಂದರೆ ನಮ್ಮಣ್ಣ ಎನ್ನುವ  ಸಂಧ್ಯಾ ಭಟ್, ಜನುಮದಿನಕ್ಕೆ ನಾ ಬ್ಲಾಗ್ ಬರೆಯುತ್ತಿದ್ದಾಗ ಅದನ್ನು ಓದಲೆಂದೇ ಮಧ್ಯ ರಾತ್ರಿಯ ತನಕ ಕಾದು ಓದುವ  ಭಾಗ್ಯ ಭಟ್, ನಿಮ್ಮ ಕಾಮೆಂಟ್ಗಳನ್ನೇ ಒಂದು ಪುಸ್ತಕ ಮಾಡಬೇಕು ಎನ್ನುವ ಸುಷ್ಮಾ ಮೂಡಬಿದ್ರಿ, ಕಾಮೆಂಟಿಗ ಎನ್ನುವ ಅಶೋಕ್ ಶೆಟ್ಟಿ, ಶ್ರೀ ಅಣ್ಣ ನಿಮ್ಮ ಬ್ಲಾಗ್ ಓದೋಕೆ ಒಂದು ಖುಷಿ ಎನ್ನುವ ಶುಭ ಹೆಗಡೆ, ನನ್ನ ಎಲ್ಲಾ ಲೇಖನಗಳನ್ನು ಇಷ್ಟ ಪಟ್ಟು ಓದುವ ನನ್ನ ಪ್ರಾಥಮಿಕ  ಶಾಲಾ ದಿನಗಳ ಸುಧಾ ರಂಗರಾಜ್, ನೀನೆ ನನಗೆ ಬರೆಯಲು ಸ್ಫೂರ್ತಿ ಎನ್ನುವ ಪ್ರಕಾಶ್ ನಾಯಕ್, ನಾ ಲೇಖನ ಪ್ರಕಟಿಸಿದ ಕೂಡಲೇ ಸಮಯ ಮಾಡಿಕೊಂಡು ಓದಿ ಪ್ರತಿಕ್ರಿಯೆ ಕೊಡುವ ಸತೀಶ್ ಕೆವಿ, ನಿಶ್ಯಬ್ಧ ಕೂಡ ಒಂದು ಮೆಸೇಜ್ ಎನ್ನುವ ಶೋಭನ್ ಬಾಬು, ಗೆಳೆಯ ನಿನ್ನ ಬರಹಗಳನ್ನು ತಡವಾದರೂ ಓದುವೆ ಎನ್ನುವ ನಂದಿನಿ, ಶ್ರೀ ನಿನ್ನ ಬರಹಗಳಿಗೆ ಮಾತಿಲ್ಲ .. ಎನ್ನುವ ಶ್ರೀ ಲಕ್ಷ್ಮಿ.. ಹೇಳುತ್ತಾ ಹೋದರೆ ಪಟ್ಟಿ ಹನುಮಂತನ ಬಾಲದ ತರಹ ಬೆಳೆಯುತ್ತೆ.. ನನ್ನ ಎಲ್ಲಾ ಸ್ನೇಹಿತರು, ನನ್ನ ಬಂಧು ಬಳಗ, ನನ್ನ ಆತ್ಮೀಯರಿಗೆ ಈ ಬ್ಲಾಗಿನ ಮೂಲಕ ಧನ್ಯವಾಗಳನ್ನು ಹೇಳಬಯಸುತ್ತೇನೆ.. 

ನನ್ನ ಎಲ್ಲಾ ಪ್ರೀತಿಯ ಓದುಗರಿಗೂ ನನ್ನ ಧನ್ಯವಾದಗಳು.. 

**************

ಮರಿ ಬರಿ ಮರಿ.. ಬರೀಬೇಕು ಮರಿ.. ಎನ್ನುತ್ತಾ ನನ್ನ ಬ್ಲಾಗ್ ಲೋಕಕ್ಕೆ ಧುಮುಕಲು ಸ್ಫೂರ್ತಿ ನೀಡಿದ ರೋಹಿತ್ ಚೂಡಾನಾಥ್.. ಇವನು ನನ್ನ ಟ್ರೆಕ್ಕಿಂಗ್ ಗುರು.. ಇವನ ಜೊತೆ  ಮಾಡಿದ ಚಾರಣಗಳು ಅದ್ಭುತ.. 

ಬ್ಲಾಗಿನ ಆರಂಭದ ದಿನಗಳಲ್ಲಿ ಆಂಗ್ಲ ಭಾಷೆಯಲ್ಲಿ ಬರೆಯುತ್ತಿದ್ದೆ.. ಅದನ್ನು ಓದಿ ಪ್ರೋತ್ಸಾಹಿಸಿ.. ಶ್ರೀ ಎಲ್ಲರೂ ಇಂಗ್ಲಿಷಿನಲ್ಲಿ ಬರೆಯುತ್ತಾರೆ.. ಕನ್ನಡದಲ್ಲಿ ಬರೆಯುವವರು ಕಡಿಮೆ.. ನೀವು ಬರೆಯಿರಿ ಅಂದಾಗ.. ಅದನ್ನೇ ಹಿಡಿದು ಸಾಗಿದೆ ..ಹಾಗೆ ಬರೆಯಲು ಸ್ಫೂರ್ತಿ ನೀಡಿದ್ದು ಮಂಜು ಶಂಕರ್.. 

*************

ಕಾರ್ಪೊರೇಟ್ ಸಂಸ್ಥೆಗಳಲ್ಲಿ ಕಸವನ್ನು ಹಾಕಲು ವಿವಿಧ ಬಣ್ಣದ  ಬುಟ್ಟಿಗಳನ್ನುಇಟ್ಟಿರುತ್ತಾರೆ.. ವಿವಿಧ ರೀತಿಯ ಕಸಗಳನ್ನು ತುಂಬಲು ವಿವಿಧ ಬಣ್ಣದ ಬುಟ್ಟಿಗಳು.. ನನ್ನ ಮನದಲ್ಲಿ ಮೂಡುವ ಯೋಚನೆಗಳನ್ನು ಒಂದೇ ಬುಟ್ಟಿಯಲ್ಲಿ ಹಾಕಲು ಇಷ್ಟಪಡದೆ ಅದಕ್ಕೊಂದು ತರಹಾವರಿ ಹೆಸರುಗಳನ್ನಿಟ್ಟು ಇಷ್ಟ ಪಟ್ಟವರು ತಮಗೆ ಇಷ್ಟಪಟ್ಟ ವಿಷಯಗಳನ್ನು ಓದಲಿ, ಅಥವಾ ನನ್ನ ಯೋಚನೆಗಳು ಆ ಬುಟ್ಟಿಯಲ್ಲಿ ಹೋಗಿ ಕೂರಲಿ ಎಂದು ಆಶಿಸುತ್ತಾ ಶುರುಮಾಡಿದ್ದು ಒಂದೆರಡು ಬ್ಲಾಗ್ ಅಂಗಣಗಳು.. ಆದರೆ ಬರುತ್ತಾ ಅದು ಎರಡಾಯಿತು,ಮೂರಾಯಿತು .. ಈಗ ಎಂಟಕ್ಕೆ ಬಂದು ನಿಂತಿದೆ.. 

ಮೊದಲು ಜನ್ಮ ತಾಳಿದ್ದು ಚಾರಣದ ಲೇಖನಗಳು.. ನನ್ನ ಅಲೆಮಾರಿಗಳು ತಂಡ ಮಾಡಿದ  ದಾಖಲಿಸುವ ಬ್ಲಾಗ್ Tripping ಲೈಫ್.. 



ಶ್ರೀ ನಿನ್ನ ಈ ಬರೆಯುವ ಶೈಲಿ ಸೊಗಸಾಗಿದೆ,. ನಮ್ಮ ಶಾಲೆಯ ದಿನಗಳು, ನಮ್ಮ ಸ್ನೇಹ ಇದರ ಬಗ್ಗೆ ಬರೆಯುತ್ತ ಹೋಗು ಎಂದು ಬೆನ್ನು ತಟ್ಟಿದ ನನ್ನ ಜೀವದ ಗೆಳೆಯರಾದ ಜೆಎಂ ಸತೀಶ್, ಶಶಿ, ವೆಂಕಿ, ಲೋಕಿ ಮತ್ತು ಪ್ರತಿಭಾ, ಸಮತಾ ಇವರ ಪ್ರೋತ್ಸಾಹದ ಫಲ ಹುಟ್ಟಿದ್ದು Kantha the magnet of friendship. 




ನನ್ನ ಜೀವನವನ್ನು ಹಲವಾರು ರೀತಿಯಲ್ಲಿ ತಿದ್ದಿ ತೀಡಿದ್ದರ ಪಾಲಲ್ಲಿ ಚಲನ ಚಿತ್ರಗಳುಪಾತ್ರವೂ ಇದೆ .. ನಾ ನೋಡಿದ, ಸ್ಫೂರ್ತಿ ನೀಡಿದ,  ಸಂದೇಶಗಳನ್ನು ಅಳವಡಿಸಿಕೊಳ್ಳುವ ಚಿತ್ರಗಳ ಬಗ್ಗೆ, ಸಂಭಾಷಣೆಗಳ ಬಗ್ಗೆ, ಹಾಡುಗಳು, ಛಾಯಾಗ್ರಹಣ, ತಂತ್ರಜ್ಞಾನ ಇದನ್ನೆಲ್ಲಾ ಬರೆಯಲು ಒಂದು ವೇದಿಕೆ ಬೇಕು ಎಂದು ಅನಿಸಿದಾಗ ಮೂಡಿದ್ದು moved movies.. ಇದಕ್ಕೆ ಬೆಂಬಲವಾಗಿ ನಿಂತದ್ದು  ಆತ್ಮೀಯ ಗೆಳೆಯ, ಮಾರ್ಗದರ್ಶಿ ವಿಕ್ರಮಾದಿತ್ಯ ಅರಸ್.. 




ಶ್ರೀ.. ನೀವು ಬರೆಯುವ ಕೆಲವು ಪಂಚಿಂಗ್ ಸಂಭಾಷಣೆ, ಮಾತುಗಳು ಸೂಪರ್ ಇರುತ್ತವೆ, ಅದನ್ನು ಒಂದು ಬ್ಲಾಗ್ ನಲ್ಲಿ ಬರೆಯಿರಿ.. ಸೊಗಸಾಗಿರುತ್ತೆ ಎಂದು ಹುರಿದುಂಬಿಸಿದ್ದು ಸಂದೀಪ್ ಕೆಬಿ.. ಅದಕ್ಕೆ ನಾ point pancharangi ಎಂದು ಹೆಸರಿಟ್ಟಾಗ ಚಪ್ಪಾಳೆ ತಟ್ಟಿ ಖುಷಿ ಪಟ್ಟರು.. 




ಜಗತ್ತನ್ನು ನೋಡಲು ಕಳಿಸಿದ್ದು, ಕಲಿಸಿದ್ದು ನನ್ನ ಕುಟುಂಬ.. ನನ್ನ ಕುಟುಂಬದ ಸದಸ್ಯರು, ನೋವು ನಲಿವು, ನನ್ನ ಪರಿವಾರ, ನನ್ನ ಆಲೋಚನೆಗಳು, ಮನದ ಇಂಗಿತಗಳು, ಹುಚ್ಚು ಮನಸ್ಸಿನ ಯೋಚನೆಗಳು ಇವಕ್ಕೆಲ್ಲಾ ಸೆರಗೊಡ್ಡಿ ನಿಂತದ್ದು Sri Parapancha.. ಇದಕ್ಕೆ ಲಕ್ಷ ವರ್ಷ ಅಂತ ಯಾಕೆ ಹೆಸರು ಬಂತು ಗೊತ್ತೇ.. ಕಾಲೇಜು ದಿನಗಳಲ್ಲಿ ಸಂಚಲನ ಮೂಡಿಸಿದ್ದ ಆಶಿಕಿ ಚಿತ್ರದ ಗೀತೆಗಳು.. ಹುಚ್ಚೆಬ್ಬಿಸಿದ್ದವು.. ಹಾಗೆ ಮಾತಾಡುತ್ತಿದ್ದಾಗ.. ನಾ ಹೇಳಿದ್ದೆ.. ಈ ಚಿತ್ರದ ಹಾಡುಗಳಿಂದಲೇ ಈ ಚಿತ್ರ ಲಕ್ಷವರ್ಷ ಓಡುತ್ತೆ ಅಂತ. .. ಆಗ ನನ್ನ ಗೆಳೆಯ.. ಶಶಿ ಹೇಳಿದ.. ಇವನಿಗೆ ಎಲ್ಲೋ ಹುಚ್ಚು. ಲಕ್ಷ ವರ್ಷ ಅಂತೇ.. ಅಂತ ಹೇಳಿ ನಕ್ಕಿದ್ದ.. ನಾವು ಸೇರಿ ನಕ್ಕು ಅದನ್ನೇ ಒಂದು ಜೋಕ್ ಮಾಡುತ್ತಾ ನಕ್ಕಿದ್ದೆವು.. 




ಓದಿಗಾಗಲಿ, ಆಟಕ್ಕಾಗಲಿ, ಆಫೀಸಿನ ಕೆಲಸಗಳಾಗಲಿ ಚೆನ್ನಾಗಿ ಆಗಬೇಕು ಎಂದರೆ.. ಅದಕ್ಕೆ ಒಂದು ಉತ್ತಮ ಮನಸ್ಸಿನ ತಂಡ ಬೇಕು.. ಅಂತಹ ತಂಡವೂ ನನ್ನ ಕೆಲಸದ ಆರಂಭದ ದಿನಗಳಿಂದಲೂ ಸಿಕ್ಕಿದ್ದು ನನ್ನ ಪುಣ್ಯ.. ಅವರ ಅದ್ಭುತ ಒಡನಾಟವೂ ಚಿತ್ರಿಸುವ ಬಯಕೆಯಿಂದ ಅರಳಿದ್ದು The Team of Invincibles.. 




ಹೆಸರು ಒಂದೇ. ಮನೋಭಾವ ಒಂದೇ.. ಅಭಿರುಚಿ ಒಂದೇ.. ಹೀಗೆ ಇರುವುದು ಬಲು ಅಪರೂಪ  ನನ್ನ ಸೋದರ ಮಾವ.. ಅಂದರೆ ನನ್ನ ತಾಯಿಯ ತಮ್ಮ ರಾಜ ಅಲಿಯಾಸ್ ಶ್ರೀಕಾಂತ.. ಇವನು ನಾನು ಮಾಡಿದ ಸಾಹಸಗಳ ಬಗ್ಗೆ ಬರೆಯುತ್ತಾ ಹೋದರೆ ಅದೇ ಒಂದು ಪುಸ್ತಕವಾಗುತ್ತದೆ.. ಜಗತ್ತು ಇವನನ್ನು ಒಂದು ತಮಾಷೆ ವಸ್ತುವಾಗಿ ನೋಡಿದ್ದೇ ಹೆಚ್ಚು.. ಆದರೆ ಇವನ ನಿಷ್ಕಲ್ಮಶ ಮನಸ್ಸಿನಲ್ಲಿ ಅರಳಿದ ಸ್ನೇಹಲೋಕ ತುಂಬಾ ದೊಡ್ಡದು.. ಇವನ ಜೊತೆಗಿನ ಒಡನಾಟದ ಬಗ್ಗೆ ಬರೆಯಲು ಹುಚ್ಚು  ಹತ್ತಿದಾಗ ಎಟುಕಿದ್ದು raja-srikanth-htnakirs




ಜನುಮ ನೀಡಿದಾತ ಹೇಳಿಕೊಡದೆ ಕಲಿಸಿದ ಪಾಠ ಅನಂತ. . ತಾನು ಹೇಳಿ ಅದನ್ನೇ ಪಾಲಿಸು ಎನ್ನುವವರು ಕೆಲವರಾದರೆ.. ತಾನು ನೆಡೆದು ಅದನ್ನು ಪಾಲಿಸು ಎನ್ನುವವರು ಇನ್ನೊಂದು ತರಹ.. ಆದರೆ ನಮಗೆ ಹೀಗೆ ಏನೂ ಹೇಳದೆ ತನ್ನ ಆದರ್ಶವನ್ನು ಕಾಯ್ದುಕೊಂಡು ತನ್ನ ಪಾಡಿಗೆ ಹೆಜ್ಜೆ ಹಾಕಿ.. ನಾವು ಅವರ ಹೆಜ್ಜೆಯಲ್ಲಿ ನೆಡೆಯುವ ಹಾಗೆ ಸ್ಫೂರ್ತಿ ತುಂಬಿದವರು ನನ್ನ ಅಪ್ಪ.. ಅವರ ಜೀವನ ಕಥಾನಕವನ್ನು ಹೊರಗೆ ತರಬೇಕು ಎನ್ನುವುದು ನನ್ನ ಕನಸು ಆ ಕನಸ್ಸಿನ ಒಂದು ಹೆಜ್ಜೆ ಮಂಜಲ್ಲಿ ಮಂಜಾದ ಮಂಜು




**********

ಈ ಬರಹಕ್ಕೆ ಕಳಶವಿಟ್ಟಂತೆ ಬ್ಲಾಗ್ ಲೋಕದ ಗುರುಗಳು ಎಂದು ನಾ ಹೇಳುವ ಶ್ರೀ ಸುನಾಥ ಕಾಕಾ ಅರ್ಥಾತ್ ಶ್ರೀ ಸುಧೀಂದ್ರ ದೇಶಪಾಂಡೆ ನನ್ನ ಶ್ರೀ ಪರಪಂಚದ ಲೇಖನಗಳನ್ನು ಓದಿ ಮೆಚ್ಚಿ, ಪ್ರತಿಕ್ರಿಯೆ ನನಗೆ ದೊಡ್ಡ ಬಹುಮಾನ ಎನ್ನಿಸಿತು.. ಅವರ ಪ್ರತಿಕ್ರಿಯೆಗಳಿಗೆ ಶಿರಬಾಗಿ ನಮಿಸುವೆ.. 

**********

ಇದು ನನ್ನ ಬರಹದ ಲೋಕದ ಐದು ನೂರನೇ ಬರಹ.. ಬರೆದದ್ದು ಬೇಕಾದಷ್ಟು.. ಅದರಲ್ಲಿ ಜೊಳ್ಳು, ಕಾಳು ಎಲ್ಲವೂ ಇವೆ.. ನೀವು ಓದಿ ಇಷ್ಟಪಟ್ಟಿದ್ದೀರಿ, ಬೆನ್ನು ತಟ್ಟಿದ್ದೀರಿ, ಮತ್ತಷ್ಟು ಬರೆಯಲು ಪ್ರೋತ್ಸಾಹ ನೀಡಿದ್ದೀರಿ ಇದಕ್ಕಿಂತ ನಾ ಕೇಳೋದು ಇನ್ನೇನು ಇದೆ.. ತಪ್ಪುಗಳು ಬೇಕಾದಷ್ಟಿದ್ದರೂ, ಶ್ರೀ ನಿಮ್ಮ ಬರಹ ಅದ್ಭುತ ಎನ್ನುವ ನನ್ನ ಬ್ಲಾಗ್ ಲೋಕದ ಗೆಳೆಯರಿಗೆ ಶಿರಬಾಗಿ ನಮಿಸುವೆ.. 

ನಿಮ್ಮ ಪ್ರೀತಿಯ ಅಭಿಮಾನ ನನಗೆ ಶ್ರೀ ರಕ್ಷೆ.. ಅದಕ್ಕೆ ದಾಸರ ಪದವನ್ನು ಹೇಳೋಣ ಅನ್ನಿಸಿತು .. 

ಎಂದರೋ ಮಹಾನುಭಾವುಲು ಅಂದರೀಕಿ ವಂದನಮು.. 
ಚಿತ್ರಕೃಪೆ - ಗೂಗಲೇಶ್ವರ 

Saturday, December 30, 2017

ಬಯಸದೆ ಬಂದ ಭಾಗ್ಯ.. .. !

ಭಕ್ತ ಕುಂಬಾರ ಚಿತ್ರದ ಅಂತಿಮ ದೃಶ್ಯ.. ಗೋರನ ಕೈಗಳು ಮತ್ತೆ ಮೂಡಿಬರುತ್ತೆ .. ಮಗು ಸಿಗುತ್ತೆ ..

ವಿಠಲ ಗೋರನನ್ನು ಮತ್ತು ಆತನ ಕುಟುಂಬವನ್ನು ಅನುಗ್ರಹಿಸಿದಾಗ ಅಣ್ಣಾವ್ರು ಹೇಳುವ ಮಾತು

"ವಿಠಲ ಕೊಡುವವನು ನೀನೆ.. ತೆಗೆದುಕೊಳ್ಳುವವನು ನೀನೆ.. ಮತ್ತೆ ಕೊಟ್ಟು ಉದ್ಧಾರ ಮಾಡುವವನು ನೀನೆ.. "

ಈ ದೃಶ್ಯ ನೋಡುತ್ತಾ ಹಲವಾರು ಬಾರಿಮೂಕನಾಗಿದ್ದೇನೆ ..

 ಗಾಬರಿ ಆಗಬೇಡಿ ಮತ್ತೆ ನನ್ನ  ಪ್ರೀತಿಯ ಓದುಗರಾದ ನಿಮ್ಮನ್ನು ಭಾವಸಾಗರದಲ್ಲಿ ತೇಲಿಸುವುದಿಲ್ಲ.. ಅಳಿಸೋಲ್ಲ..

ದುಡ್ಡು ದುಡ್ಡು ದುಡ್ಡು ಇದು ತೆಲುಗು ಮೂಲದ ಶ್ರೀ ಯಂಡಮೂರಿ ವೀರೇಂದ್ರನಾಥ ಅವರ ಅದ್ಭುತ ಕಾದಂಬರಿ.. ಅಲ್ಲಿನ ನಾಯಕ ಎಲ್ಲವನ್ನು ಕಳೆದುಕೊಂಡಿರುತ್ತಾನೆ.. ಆಗ ಅವನಿಗೆ ದೊರೆಯುವ ನುಡಿಮುತ್ತು.. "ಕಳೆದುಕೊಂಡಲ್ಲೇ ಹುಡುಕು... "

ನನ್ನ ಪ್ರೀತಿಯ ವಿಕ್ಟರ್ ಮತ್ತು ರಿಟ್ಜ್ ನನಗೆ ಹೇಳಿದ್ದು ಇಷ್ಟೇ.. ಶ್ರೀ ದೇವರ ಚಿತ್ರಕಥೆಯಲ್ಲಿ ಇದ್ದ ಹಾಗೆ ನೆಡೆದಿದೆ.. ಇದನ್ನು ನೆನೆದು ನೆನೆದು ಮನಸ್ಸನು ಘಾಸಿ ಮಾಡಿಕೊಳ್ಳದೆ ಮುಂದೆ ಹೆಜ್ಜೆ ಇದು.. ಕಳೆದುಕೊಂಡಲ್ಲೇ ಹುಡುಕು..

ಭಗವಂತನ ಲೀಲೆ ಏನಿರುತ್ತೋ ಯಾರಿಗೆ ಗೊತ್ತು.. ನನಗರಿವಿಲ್ಲದೆ ಬಳುವಳಿಯಾಗಿ ಬಂತು ಕಾಣದ ಕಡಲಿಂದ ಒಂದು ಪ್ರೀತಿಯ ಉಡುಗೊರೆ.. ಬೇಡ ಅನ್ನಲಿಕ್ಕೆ ಸಮಯವೇ ಇರಲಿಲ್ಲ.. ಜೊತೆಯಲ್ಲಿ ಬೇಡ ಎನ್ನುವ ಗುಂಡಿ ನಿಷ್ಕ್ರಿಯವಾಗಿತ್ತು.. ಅಲ್ಲಿ ಒತ್ತಬೇಕಾದ್ದು "ಹೌದು" ಎನ್ನುವ ಗುಂಡಿ ಒಂದೇ..

ಶ್ರೀ ನಿಮ್ಮ ಉಡುಗೊರೆ ತಗೊಳ್ಳಿ ಅಂತ ಹೇಳಿದಾಗ ನಾ ನಂಬಲು ಸಿದ್ಧನಿರಲಿಲ್ಲ.. ಹಾಗಾಗಿ ನನ್ನ ಮಾತೃ ದೇವೋಭವ ಅವರಿಗೆ ತೆಗೆದುಕೊಳ್ಳಲು ಹೇಳಿದೆ.. ಅವರ ಕೈಯಿಂದ ನನಗೆ ಬಂತು..

ಅದು ಏನೂ ಅಂತೀರಾ.. ಚಿತ್ರಗಳನ್ನು ನೋಡಿ..





ನಾ ಚಲಾಯಿಸಲು ಸಿದ್ಧನಿರಲಿಲ್ಲ.. ಕಾರಣ ಗೊತ್ತಿಲ್ಲ.. ಆದರೆ ನನ್ನ ತಮ್ಮ ಮುರುಳಿ.. ನೀನೆ ಓಡಿಸಬೇಕು ಅಂತ ಹಠ ಮಾಡಿದ.. ಪಕ್ಕದಲ್ಲಿ ನನ್ನ ಸ್ನೇಹಿತೆ ಶೀತಲ್.. "ಅಪ್ಪ ಯು ಕ್ಯಾನ್ ಡು ಇಟ್" ಅಂದಳು.. ಅಮ್ಮ ಹೂಂ ಎಂದರು..

ಸ್ಟೇರಿಂಗ್ ಹಿಡಿದಾಗ ಹಾಗೆ ಕಣ್ಣ ಮುಂದೆ ಸಿನಿಮಾ ಓಡಿತು.. ಕಣ್ಣುಗಳು ಮಂಜಾದವು.. ಶ್ರೀ.. ಕಮಾನ್ ಅಂದಿತು ಒಳಗಿರುವ ಶಕ್ತಿ.. ಸಲೀಸಾಗಿ ಮನೆಯ ತನಕ ಬಂದೆ..

ಪೂಜೆ ಮಾಡಿಸುವ ಬಗ್ಗೆ ಮಾತಾಯಿತು.. ಅಮ್ಮ ನೀನೆ ಮಾಡಬೇಕು ಅಂತ ಹಠ ಮಾಡಿದೆ..

ಮುರುಳಿ.. ಇವನೊಬ್ಬ .. ಇವನಿಗೆ ಏನೂ ಹೇಳೋದು.. ಅಂತ ಬಯ್ದ..

ಅಕ್ಕ "ಮಾತೃ ದೇವೋಭವ ಕಣೋ" ಅಂದ್ಲು..

ಫಲಿತಾಂಶ.. ಅಮ್ಮನ ಕೈಯಲ್ಲಿ ಪೂಜೆ ಆಯಿತು..ನನಗಲ್ಲ.. ಬದಲಿಗೆ ಮನೆಗೆ ಬಂದ ಉಡುಗೊರೆಗೆ.. 



ತಲೆ ಎತ್ತಿ ನೋಡಿದೆ..
​ಬಯಸದೇ ಬರುವ ಭಾಗ್ಯ 
ಅರಿವಿಲ್ಲದೇ ಬರುವ ಅಡೆತಡೆಗಳು 
ನಮ್ಮನ್ನ ಪುಟಕ್ಕಿಟ್ಟ ಚಿನ್ನವಾಗಿಸುತ್ತವೆ..

ಭಾಗ್ಯ ನಿನ್ನದೇ ಲೀಲೆ ಎಂದು ಭಗವಂತನಿಗೆ ವಂದನೆ ಹೇಳಿದರೆ
ಅಡೆತಡೆಗಳು ನೀನಿದ್ದರೆ ಲೀಲೆ ಎಂದು ಭಗವಂತನಿಗೆ ಶರಣಾಗುತ್ತದೆ..

ಶುಭಮಂಗಳಮಯವಾಗಿರಲಿ 

ಎಂದು ಅಶರೀರವಾಣಿ ನುಡಿದು.. ಅದರ ಜೊತೆಯಲ್ಲಿಯೇ "ಸೂಪರ್" ಚಿನ್ಹೆ ಕಾಣಿಸಿತು.. 

Thursday, December 28, 2017

ಪ್ರಥಮಂ.. ವಕ್ರ ತುಂಡಂ ಚ ...................ಮುಂದುವರೆದಿದೆ - ಅಂತಿಮಭಾಗ

ಪ್ರಥಮಂ... ಮೊದಲನೇ ಭಾಗ
ದ್ವೀತೀಯಕಂ... ಎರಡನೇ ಭಾಗ
ತೃತೀಯಕಂ.. ಮೂರನೇ ಭಾಗ
ಚತುರ್ಥಕಮ್...ನಾಲ್ಕನೇ ಭಾಗ

ಪಂಚಮಂ - ಅಂತಿಮ ಭಾಗ .. ಮುಂದಕ್ಕೆ ಓದಿ.. :-)

ಕೆಲಸ ಮುಗಿಸಿಕೊಂಡು.. ಆ ಚಳಿಯಲ್ಲಿಯೂ ಮತ್ತೆ ಮಳೆಯಲ್ಲಿ ನೆನೆದು.. ದಾರಿಯಲ್ಲಿ ಒಂದು ಅಂಗಡಿಯಲ್ಲಿ ಬಿಸಿ ಬಿಸಿ ಇಡ್ಲಿ ತಿಂದು.. ಬಸ್ಸಿನಲ್ಲಿ ಬಂದು ಮಲಗಿದಾಗ ರಾತ್ರಿ ಒಂಭತ್ತು ಘಂಟೆ.. ಬಟ್ಟೆ ಒದ್ದೆಯಾಗಿತ್ತು.. ಬ್ಯಾಗಿನಲ್ಲಿದ ಇನ್ನೊಂದು ಬಟ್ಟೆ ಹಾಕಿಕೊಂಡು ಹೊದ್ದಿಕೆ ಹೊದ್ದು ಮಲಗಿದೆ.. ಕಣ್ಣು ಬಿಟ್ಟಾಗ ಕೆಂಗೇರಿ ಬಸ್ ನಿಲ್ದಾಣ ದಾಟಿತ್ತು..

ಮನೆಗೆ ಬಂದು... ಒಂದೆರಡು ಘಂಟೆ ಮಲಗಿದೆ.

ಮುಂದೆ ಅದ್ಭುತ ತಿರುವಿನಲ್ಲಿ ಕಾಲ ಓಡುತಿತ್ತು.. ಮುಂದೇ ... !

"ಶೀತಲ್ ಅಪ್ಪ ಕೇರಳದಿಂದ ನಿನಗಿಷ್ಟವಾದ ಬಾಳೆಕಾಯಿ ಚಿಪ್ಸ್ ತಂದಿದ್ದಾರೆ ಏಳು.. " ಮಲಗಿದ್ದ ಮಗಳನ್ನು ಎಬ್ಬಿಸುವ ಕಾರ್ಯದಲ್ಲಿ ನಿರತಳಾಗಿದ್ದಳು ಸವಿತಾ..

ಆ ಚಳಿಗೆ ಏಳಲು ಮನಸ್ಸು ಬಾರದೆ.. ಏಳದಿದ್ದರೆ ಕಾರ್ಯಕ್ರಮಕ್ಕೆ ಹೋಗಲಾಗೋಲ್ಲ ಅನ್ನುವ ಅರಿವಿದ್ದರಿಂದ ಬೇಸರದಿಂದಲೇ.. ಎದ್ದಳು ಮಗಳು..

ಗಡಿಬಿಡಿಯಲ್ಲಿ ಎದ್ದು ತಯಾರಿ ನೆಡೆಸಿದೆ .. ಕ್ಯಾಮೆರದ ಮೆಮೊರಿ ಕಾರ್ಡ್  ಫೋಟೋಸ್ ಕಂಪ್ಯೂಟರಿಗೆ ಹಾಕಿ.. ಪ್ರಾತಃವಿಧಿ ಮುಗಿಸಿ.. ಮನದನ್ನೆ ಮತ್ತು ಮಗಳ ಜೊತೆ ಹೊರಟೆ.. ಎಲ್ಲಿಗೆ ಅಂದಿರಾ..ಜೀವನದ ಒಂದು ಉತ್ತಮ ಮಜಲಿಗೆ..

ಅಪ್ಪ ಎನ್ನುವ ಶಕ್ತಿ ನನ್ನ ಆವರಿಸಿದ್ದು.. ಅವರ ಶಕ್ತಿಯ ಸ್ಫೂರ್ತಿಯಲ್ಲಿ ಲೇಖನಗಳನ್ನು ಬರೆದಿದ್ದು ನಿಮಗೆಲ್ಲ ಗೊತ್ತೇ ಇದೆ.. ಆದರೆ ಅವರ ಬಗ್ಗೆ ಒಂದು ಲೇಖನವನ್ನು "ಎಲ್ಲರಂತಲ್ಲ ನನ್ನ ಅಪ್ಪ" ಎನ್ನುವ ಕಥಾ ಮಾಲಿಕೆಗೆ ಬರೆದು ಕಳಿಸಿದ್ದೆ .. ಸಂಪಾದಕರು ನನ್ನ ಮೂಲಕ ಅಪ್ಪ ಬರೆಸಿದ ಬರಹವನ್ನು ಆಯ್ಕೆ ಮಾಡಿದ್ದರು.. ೩೭ ಲೇಖಕರ ಭಾವುಕ ಪೂರ್ಣ ಲೇಖನವನ್ನು ಒಂದು ಹೊತ್ತಿಗೆ ಮಾಡಿ ಅದರ ಬಿಡುಗಡೆಯನ್ನು ದಿನಾಂಕ ೦೨.೦೭. ೨೦೧೭ ರಂದು ಸಹಕಾರನಗರದ ಸಂಭಾಗಣದಲ್ಲಿ ನಿಗದಿಪಡಿಸಿದ್ದರು..

ಅಲ್ಲಿಗೆ ಹೋಗುತ್ತಿದ್ದೆವು.. ನನಗೆ ಸಂತೃಪ್ತಿ.. ಅಪ್ಪನ ಬಗೆಗಿನ ಲೇಖನ ಮುದ್ರಣ ಕಾಣುತ್ತಿದೆ.. ಮತ್ತು ಅದನ್ನು ಹಲವಾರು  ಓದುಗರನ್ನು ತಲುಪುತ್ತದೆ ಎಂದು.. ಸವಿತಾಳಿಗೂ ಖುಷಿ.. ಇಂತಹ ಭಾವಪೂರ್ಣ ಸಮಾರಂಭದಲ್ಲಿ ತಾನೂ ಜೊತೆಯಾಗಿರುವುದು .. ಕಾಲ ಏನೂ ನಿರ್ಧರಿಸುತ್ತೋ ಯಾರಿಗೆ ಗೊತ್ತು ಅಲ್ಲವೇ ..

ಎಲೆಯಲ್ಲಿ ಸುತ್ತಿ ಬೇಯಿಸಿದ ಕೊಟ್ಟೆ ಕಡಬು, ಖಾರ ಖಾರವಾಗಿದ್ದ ಚಟ್ನಿ.. ಆ ಚಳಿಗೆ ಹೇಳಿಮಾಡಿಸಿದ ಹಾಗಿತ್ತು.. ತಿಂದದ್ದು ಸಂತೃಪ್ತಿಯಾಗಿತ್ತು .. ನನಗೆ ಇನ್ನೊಂದು ಅಚ್ಚರಿ ಕಾದಿತ್ತು.. ನನ್ನ ಪ್ರಾಥಮಿಕ ಶಾಲಾದಿನಗಳ ಸ್ನೇಹಿತ ಸತೀಶ ಅಂದು ಪುಣೆಗೆ ವಿಮಾನ ನಿಲ್ದಾಣಕ್ಕೆ ಹೋಗುವ ಹಾದಿಯಲ್ಲಿ ಈ ಕಾರ್ಯಕ್ರಮವೂ ಇದ್ದದರಿಂದ.. ಶುಭಾಶಯ ತಿಳಿಸಿ ಹೋಗಲು ಬಂದಿದ್ದ..ಖುಷಿಯಾಗಿತ್ತು ನನಗೆ ..

ಫೋಟೋಗಳನ್ನು ತೆಗೆಯುತ್ತಿದ್ದೆ .. ಅಚ್ಚುಕಟ್ಟಾದ ಸರಳ ಸಮಾರಂಭ. ನಮ್ಮೆಲ್ಲರ ನೆಚ್ಚಿನ ಗುರುಗಳಾದ ಶ್ರೀ  ಗೋಪಾಲ ವಾಜಪೇಯಿ ಅವರ ನೆನಪಿನಲ್ಲಿ ವೇದಿಕೆಗೆ ಅವರ ಹೆಸರನ್ನೇ ಇಟ್ಟಿದ್ದರು.. ಹಾಗೂ ಅವರಿಗೆ ಗೌರವ ಪೂರ್ವಕ ನಮನಗಳನ್ನು ಸಲ್ಲಿಸಿದ್ದರು..

ಕಾರ್ಯಕ್ರಮದ ನಿರೂಪಣೆ ಸುಂದರವಾಗಿತ್ತು..  ಈ ಕಾರ್ಯಕ್ರಮಕ್ಕೆ ಚಲನಚಿತ್ರ ನಟ, ನಿರ್ದೇಶಕ ಶ್ರೀ ಸುರೇಶ ಹೆಬ್ಳಿಕರ್ ಬಂದದ್ದು ವಿಶೇಷವಾಗಿತ್ತು . ಆಗಂತುಕ ಎನ್ನುವ ಅದ್ಭುತ  ಸಿನಿಮಾದಲ್ಲಿ ಸುಂದರವಾದ ಯಾಣವನ್ನು ತೆರೆಯ ಮೇಲೆ ತೋರಿಸಿದ್ದು ಇವರೇ.. ಅದನ್ನ ಅವರ ಬಳಿ ಮಾತಾಡುವಾಗ ಖುಷಿ ಪಟ್ಟಿದ್ದು ಅರಿವಾಯಿತು.. ಶೀತಲ್ ಮತ್ತು ಸವಿತಾ ನಾ
ಶ್ರೀ ಸುರೇಶ ಹೆಬ್ಳಿಕರ್ ಜೊತೆಯಲ್ಲಿ ಮಾತಾಡುತ್ತಿದ್ದಾಗ ಸಂಭ್ರಮಪಡುತ್ತಿದ್ದರು..

ಕಾರ್ಯಕ್ರಮ ಮುಂದುವರೆಯಿತು.. ಪುಸ್ತಕ ಬಿಡುಗಡೆಯಾಯಿತು.. ವೇದಿಕೆಯಲ್ಲಿದ್ದ ಅತಿಥಿಯೊಬ್ಬರು.. ಪುಸ್ತಕದ ಕೆಲವು ಲೇಖನಗಳ ಬಗ್ಗೆ ಹೇಳುತ್ತಿದ್ದರು.. ನಾ ಫೋಟೋ ತೆಗೆಯುತಿದ್ದೆ ... ಅಷ್ಟರಲ್ಲಿ ಈ ಪುಸ್ತಕದ ಸಂಪಾದಕರಾದ ಶ್ರೀ ಗುರುಪ್ರಸಾದ್ ಕುರ್ತಕೋಟಿಯವರು ಇವರೇ ಅದನ್ನು  ಬರೆದದ್ದು ಎಂದು ನನ್ನ ಹೆಸರು ಹೇಳಿದಾಗ..  ಆಶ್ಚರ್ಯ ಮತ್ತು ಗಾಬರಿ..  ಏನಾಗುತ್ತಿದೆ ಎಂದು ಕೇಳಿದಾಗ.. ಅವರು ನಿಮ್ಮ ಬರಹದ ಬಗ್ಗೆ ಹೇಳುತ್ತಿದ್ದಾರೆ ಎಂದರು .




ಹೃದಯದ ಬಡಿತ ತಾರಕಕ್ಕೆ ಏರಿತ್ತು ..

ಸರಳ ಸಮಾರಂಭದ ಸಂಭ್ರಮವನ್ನು ಹೊತ್ತು ಕೆಳಗೆ ಕಾರಿನತ್ತ ಬಂದಾಗ.. ನಮ್ಮ ಅದ್ಭುತ ಗೆಳೆಯರು ಸೇರಿ  ಮತ್ತೊಮ್ಮೆ ನಮ್ಮ ನಮ್ಮ ಪುಸ್ತಕವನ್ನು ಬಿಡುಗಡೆ ಮಾಡಿಕೊಂಡೆವು.. ಸರಿ ಎಲ್ಲರಿಗೂ ಬೀಳ್ಕೊಟ್ಟು... ಹೊರಬಿದ್ದೆವು..


ಅಲ್ಲಿಂದ ತುಮಕೂರು ರಸ್ತೆಯ ಡಾಬಸ್ ಪೇಟೆ ಬಳಿಯಲ್ಲಿ ಸ್ನೇಹಲೋಕ ತಂಡ ತನ್ನ ಜನುಮದಿನವನ್ನುಆಚರಿಸಿಕೊಳ್ಳುತ್ತಿತ್ತು .. ಈ ತಂಡದ ಹಲವಾರು ಕಾರ್ಯಕ್ರಮಗಳನ್ನು ನೋಡಿದ್ದೇ..ಜೊತೆಯಾಗಿದ್ದೆ .. ಹಾಗಾಗಿ ಬರಲೇ ಬೇಕೆಂಬ ಪ್ರೀತಿ ಪೂರ್ವಕ ಒತ್ತಾಯವಿತ್ತು ..

ಸ್ನೇಹಲೋಕದ ಕಾರ್ಯಕ್ರಮ ನಾವು ಹೋಗುವ ಹೊತ್ತಿಗೆ ಮುಗಿದಿತ್ತು.. ಎಲ್ಲರೂ ಊಟ ಸವಿಯುವ ಹಂತಕ್ಕೆ ಬಂದಿದ್ದರು.. ತಡವಾಗಿದ್ದರೂ.. ನಾವು ಬಂದದ್ದು ಕಂಡು ಖುಷಿಪಟ್ಟರು .. ಅವರ ಜೊತೆಯಲ್ಲಿ ಒಂಧಷ್ಟು ಚಿತ್ರಗಳು.. ಅವರ ಜೊತೆಯಲ್ಲಿ ಊಟ,ಹರಟೆ  ಹಾಸ್ಯ.. .  ಸಂಭ್ರಮದ ಮೇಲೆ ಸಂಭ್ರಮ..  ಒಮ್ಮೆ ಆ ದೇವರು ಕೂಡ ಏನಪ್ಪಾ ಇಷ್ಟೊಂದು ಸಂಭ್ರಮ ಪಡುತ್ತಿದ್ದೀಯ ಅಂತ ಅನ್ನಿಸುವಷ್ಟು ..

ಆದರೆ ಆ ದೇವಾ ಎಂದಿಗೂ ಕಣ್ಣು ಹಾಕುವುದಿಲ್ಲ.. ಎಂದಿಗೂ ಅಸೂಯೆ ಪಡುವುದಿಲ್ಲ.. ಆದರೆ ಅವನ ಪುಸ್ತಕದಲ್ಲಿ ನೆಡೆಯಬೇಕಾದ್ದು ನೆಡೆಯಲೇ ಬೇಕು ಅಲ್ಲವೇ..

ಪ್ರೀತಿಯಿಂದ ಸ್ನೇಹಲೋಕದ ಬಳಗಕ್ಕೆ ಶುಭಾಶಯಗಳನ್ನು ಸಲ್ಲಿಸಿ.. ಎಲ್ಲಾ ಮಿತ್ರವೃಂದಕ್ಕೆ ತಿಳಿಸಿ ಹೊರಟೆವು..

"ಶ್ರೀ".. ... ದಬಕ್ ಟಪಾಕ್ ... ಡಬ್..

ಮುಂದೆ.. ಕಾಣದ ಕಡಲನ್ನು ಈಜುವ ಕಾಯಕದಲ್ಲಿ ಒಂಟಿಯಾದೆ..

ಸತಿ ಸಾವಿತ್ರಿಯ ಬಗ್ಗೆ ಕೇಳಿದ್ದೆ.. ಓದಿದ್ದೆ.. ಆದರೆ ಆ ಅನುಭವ ಅನುಭವಿಸಿರಲಿಲ್ಲ ..

ಭಗವಂತ ಸವಿತಾಳ ಮುಂದೆ  ಮೂವರಲ್ಲಿ ಒಬ್ಬರು ಎನ್ನುವ ಆಯ್ಕೆ ಇಟ್ಟಾಗ.. ಅವಳು ಆಯ್ದುಕೊಂಡದ್ದು ತನ್ನನ್ನೇ. ಐದು ದಿನಗಳ ಜೊತೆ ಆ ದೇವರ ಜೊತೆ ಗುದ್ದಾಡಿ .. ತಾನು ಅಳಿದು.. ನನ್ನ ಮತ್ತು ಮಗಳನ್ನು ಉಳಿಸಿದ ದೇವತೆಯಾಗಿ ಗಗನದ ತಾರೆಯಾದಳು ..

ಆನೆ ಇದ್ದರೂ ಲಕ್ಷ.. ಇಲ್ಲದೆ ಇರುವಾಗಲೂ ಲಕ್ಷ ಎನ್ನುವ ಹಾಗೆ.. ತಾನು ಅಳಿದು ನಮ್ಮಿಬ್ಬರನ್ನು ಮಾತ್ರ ಉಳಿಸದೆ.. ತನ್ನ ಅಮೂಲ್ಯ ದೇಹದ ಅಂಗಗಳನ್ನು ದಾನ ಮಾಡಿ ಏಳು ಕುಟುಂಬಗಳ ಬೆಳಕನ್ನು ಹಚ್ಚಿದ ಸವಿತಾ ಎಂದೂ ಮನದಲ್ಲಿ ಅಮರಳಾಗಿದ್ದಾಳೆ..


ಪ್ರಥಮಂ ವಕ್ರತುಂಡಂಚ..ಪದಗಳು .. ತಾನೇ ತಾನೇ ದೂರವಾಗಿ.. ವಕ್ರವಾಗಿ ನನ್ನ ಜೀವನವನ್ನು ಭಗವಂತನ ಅಣತಿಯ ಪ್ರಕಾರ ತುಂಡು ತುಂಡು ಮಾಡಿತು.. ಅದಕ್ಕಾಗಿ ಶೀರ್ಷಿಕೆ ವಿಚಿತ್ರವಾಗಿದೆ..

ಪ್ರಥಮ ಬಾರಿ ವಿದೇಶ ಪ್ರವಾಸ
ಪ್ರಥಮ ಬಾರಿ ಗೆಳೆಯನನ್ನ ಹೊರದೇಶದಲ್ಲಿ ಭೇಟಿ ಮಾಡಿ ಅವನೊಡನೆ ಸುತ್ತಾಡಿದ್ದು
ಪ್ರಥಮ ಬಾರಿ ಅಪ್ಪನ ಬಗ್ಗೆ ಒಂದು ಬರಹ ಪುಸ್ತಕದ ರೂಪದಲ್ಲಿ
ಪ್ರಥಮ ಬಾರಿ @#@#$%#$%#$#$

ಎಲ್ಲವೂ ಪ್ರಥಮ.. !!!

Sunday, December 24, 2017

ಪ್ರಥಮಂ ವಕ್ರತುಂಡಂಚ ...................ಮುಂದುವರೆದಿದೆ - ನಾಲ್ಕನೇ ಭಾಗ

ಪ್ರಥಮಂ... ಮೊದಲನೇ ಭಾಗ
ದ್ವೀತೀಯಕಂ... ಎರಡನೇ ಭಾಗ
ತೃತೀಯಕಂ.. ಮೂರನೇ ಭಾಗ

ಟಿಂಗ್ ಟಾಂಗ್.. ಟಿಂಗ್ ಟಾಂಗ್... ಜರ್ಮನ್ ಭಾಷೆಯಲ್ಲಿ ನಾ ಇಳಿಯುವ ಸ್ಥಳ ಬರಲಿದೆ ಎಂದು ಹೇಳುತ್ತಿತ್ತು.. ಜೊತೆಯಲ್ಲಿ ಫಲಕವೂ ಕೂಡ ಆ ವಿವರವನ್ನು ಸಾರುತ್ತಿತ್ತು... !!!

ಮುಂದೆ.. ನನ್ನ ಜೀವದ ಗೆಳೆಯನ ಜೊತೆ ಸುಮಾರು ೬೦-೭೦ ಘಂಟೆಗಳ ಸುಮಧುರ ಸಮಯ..

ಕ್ರೀಕ್ ಕ್ರೀಕ್.. ಫ್ರಾಂಕ್ಫರ್ಟ್ ಬಂತು.. ....!!!


"ಹೇಯ್ ಶ್ರೀ.. ಹೇಗಿದ್ದೀಯಾ.. ಮಗನೆ ಈ ಬಿಸಿಲಿನಲ್ಲೂ ಜರ್ಖಿನ್ ಬೇಕಾ.. ಅಥವಾ ಸ್ಟೈಲ್ ಹೊಡಿತಾ ಇದ್ದೀಯ.. " ಎನ್ನುತ್ತಾ ಓಡಿ ಬಂದು ತಬ್ಬಿದ ಜೆಎಂ..

"ಇಲ್ಲ ಗುರು.. ಬ್ಯಾಗಿಗೆ ಒಂಭತ್ತು ತಿಂಗಳು ತುಂಬಿದೆ.. ಜಾಗವಿಲ್ಲ.. ಇನ್ನೇನೂ ಮಾಡಲಿ ಸೆಕೆ ಇದ್ದರೂ ಸ್ಟೈಲ್ ಇರಲಿ ಅಂತ ಹಾಕಿಕೊಂಡಿದ್ದೀನಿ" ಕೆಟ್ಟದಾಗಿ ಹಲ್ಲು ಬಿಟ್ಟೆ..

"ಸರಿ.. ಮನೆಗೆ ಹೋಗೋಣ.. ಅಥವಾ ಇಲ್ಲೇ ಏನಾದರೂ ತಿನ್ನೋಣವಾ.. ?"

"ಬೇಡ ಗುರು.. ಮನೆ ಊಟ ಮಾಡಿ ದಿನಗಳಾಗಿ ಹೋಗಿವೆ.. ಮನೇಲಿ ಅಡಿಗೆ ಮಾಡಿಕೊಂಡು ಬ್ಯಾಟಿಂಗ್ ಮಾಡೋಣ"

ಮುಂದಿನ ಅರ್ಧಘಂಟೆ.. ಅವನ ಮನೆಯಲ್ಲಿ..ಮೂರನೇ ಮಹಡಿ.. .. ಚಿಕ್ಕ ಚೊಕ್ಕ ಮನೆ.. ಖುಷಿಯಾಗಿತ್ತು.. ಸ್ವಲ್ಪ ಹೊತ್ತು ವಿರಮಿಸಿಕೊಂಡು.. ಬಿಸಿ ಬಿಸಿ ಕಾಫಿ ಮಾಡಿದ.. ಬಾಲ್ಕನಿಯಲ್ಲಿ ಕೂತು.. ತಣ್ಣಗೆ ಮಾತಾಡುತ್ತಾ ಕಾಫಿ ಹೀರಿದೆವು..

ಹೊಟ್ಟೆ ಹಸಿವು ಏನಾದರೂ ಕೊಡೊ ಅಂದಾಗ.. ಒಂದು ಡಬ್ಬಿಯಲ್ಲಿದ್ದ ನಿಪ್ಪಟ್ಟು ತಂದು ಕೊಟ್ಟಾ.. ಕಾಫಿ.. ನಿಪ್ಪಟ್ಟು ಸಲೀಸಾಗಿ ಹೋಯಿತು.. ಹೊರಗೆ ಗಾಳಿಯಲ್ಲಿ ಮಾತಾಡುತ್ತಾ.. ನನ್ನ ಐದು ದಿನದ ಜರ್ಮನಿ ಪ್ರವಾಸ.. ಆಫೀಸ್ ಕೆಲಸದ ಒಂದು ಪುಟ್ಟ ವರದಿ ಕೊಟ್ಟೆ..

ಮಶ್ರೂಮ್ ಫ್ರೈಡ್ ರೈಸ್ ಆಗುತ್ತೆ ತಾನೇ ಎನ್ನುತ್ತಾ ಅನ್ನಕ್ಕೆ ಇಟ್ಟಾ.. ಈ ಕಡೆ ಈರುಳ್ಳಿ, ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಎಲ್ಲವನ್ನು ತೊಳೆದು ಹೆಚ್ಚಿ ಕೊಟ್ಟೆ.. ಆವಾ ಮಸಾಲೆ ಸಿದ್ಧ ಮಾಡುತ್ತಾ.. ಮಾತಾಡುತ್ತಾ ಕೆಲಸ ಮಾಡುತ್ತಿದ್ದೆವು.. ಅಡಿಗೆ ಮನೆ ಸಿಂಕ್ ನಲ್ಲಿದ್ದ ಪಾತ್ರೆಗಳನ್ನೆಲ್ಲ ತೊಳೆದು.. ಅಡಿಗೆ ಸಿದ್ಧ ಮಾಡಲು ತೊಡಗಿದೆವು..
ನಮಗೋಸ್ಕರ ನಿದ್ದೆ ತ್ಯಾಗ ಮಾಡಿ ನಮ್ಮ ಜೊತೆ ಭಾರತದ ಸಮಯ
ಮಧ್ಯರಾತ್ರಿ ಎರಡು ಘಂಟೆ ತನಕ ಜೊತೆಗಿದ್ದ ಗೆಳೆಯ . ವೆಂಕಿ 

ಇಷ್ಟರಲ್ಲಿ ಬೆಂಗಳೂರಿನಲ್ಲಿದ್ದ ವೆಂಕಿಗೆ ಕರೆ ಮಾಡಿದೆವು.. ಅದೂ ವಿಡಿಯೋ ಕರೆ.. ನಮ್ಮ ಎಲ್ಲಾ ಮಂಗಾಟಗಳು, ಹಾಸ್ಯಗಳು ಕಾದಿದ್ದವು ಹೊರಗೆ ಬರಲು.. ಅಡಿಗೆ ಪ್ರಾರಂಭದಿಂದ.. ನಾವು ತಿಂದು ಮೆಲುಕು ಹಾಕುವವರೆಗೂ ನಮ್ಮ ಮಾತುಗಳು ಮುಂದುವರೆದಿದ್ದವು.. ಸರಿ ಸುಮಾರು ಎರಡು ಘಂಟೆಗಳ ಕಾಲ.. ವಿಡಿಯೋ ಕಾಲ್ ಮುಂದುವರೆಯಿತು.. ಸೂಪರ್ ಆಗಿತ್ತು..

ವೆಂಕಿ ರೇಗಿಸುತ್ತಿದ್ದ.. "ಜಮ್ಮು.. ಆ ಶ್ರೀಕಿ ಅನ್ನ ತಿಂದು ಎಷ್ಟು ವರ್ಷ ಆಯ್ತೋ ಅನ್ನುವ ಹಾಗೆ ತಿಂತಾ ಇದ್ದಾನೆ.. ನಿನಗೆ ಬಿಡೋ ತರಹ ಕಾಣ್ತಾ ಇಲ್ಲ.. ಕಿತ್ಕೊಳೋ ಅವನ ಬಳಿ ಇರುವ ಕುಕ್ಕರ್ನ.. "
ಭರ್ಜರಿ ಊಟಕ್ಕೆ ಸಿದ್ಧತೆ 

ಭರ್ಜರಿ ಊಟಕ್ಕೆ ಸಿದ್ಧತೆ 

ಭರ್ಜರಿ ಊಟಕ್ಕೆ ಸಿದ್ಧತೆ 

"ಇಲ್ಲ ಗುರುವೇ.. ಅವನಿಗೂ ಸ್ವಲ್ಪ ಇಟ್ಟಿದ್ದೀನಿ.. ಮಿಕ್ಕಿದ್ದು ನಾ ಖಾಲಿ ಮಾಡ್ತೀನಿ "

"ಶ್ರೀಕಿ ಪಾಪ ಸಣ್ಣ ಆಗಿದ್ದಾನೆ.. ತಿನ್ಲಿ ಬಿಡೋ ಮಗ.. "

"ಲೋ ಅವನು ಮೊದಲೇ ಬ್ಯಾಟಿಂಗ್ ಪ್ರವೀಣ.. ನಿನಗೆ ಕಡೆಯಲ್ಲಿ ಬರಿ ಪಾತ್ರೆ ಮಾತ್ರ ಸಿಗುತ್ತೆ ತೊಳೆಯೋಕೆ.. "

"ನೋಡು ಇಷ್ಟು ಮಾತಾಡ್ತಾ ಇದೀವಿ.. ಅವನು ಶ್ರೀಕಿ ನೋಡು ತಲೆ ತಗ್ಗಿಸಿಕೊಂಡು ಪಾತ್ರೆ ಖಾಲಿ ಮಾಡ್ತಾ ಇದ್ದಾನೆ.. ನಿನ್ನ ಹೊಟ್ಟೆ ಸೇದು ಹೋಗಾ.. "

ಇದೆಲ್ಲ ಮಾತುಗಳು ಕೇಳುವಾಗ.. ಛೆ ನಾವು ಐದು ಜನ ಜೀವದ ಗೆಳೆಯರು ನಮ್ಮ ಕುಟುಂಬದೊಡನೆ ಅಲ್ಲಿ ಇದ್ದಿದ್ದರೆ ಹೇಗಿರುತ್ತಿತ್ತು.. ಎನ್ನುವ ಆಲೋಚನೆ ಬಂದು ಖುಷಿಯಾಯಿತು.. ಆದರೆ.. ರೇ ರೇ..

ನಾವು ಊಟ ಮಾಡುವ ಹೊತ್ತಿಗೆ ಆಗಲೇ ಜೆರ್ಮನಿ ಸಮಯ ಹತ್ತಾಗಿತ್ತು.. ಅಂದರೆ ಭಾರತದಲ್ಲಿ ಸುಮಾರು ರಾತ್ರಿ ಒಂದು ಮೂವತ್ತು.. ವೆಂಕಿಗೆ ನಿದ್ದೆ ಎಳೆಯುತ್ತಿತ್ತು.. ಆದರೋ ನಮಗೋಸ್ಕರ ಎದ್ದು ಕುಳಿತಿದ್ದ.. ಮಧ್ಯೆ ಮಧ್ಯೆ ಮಕ್ಕಳ.. ಬಿಡ್ರೋ ನಿದ್ದೆ ಮಾಡಬೇಕು ಅಂತ ಗೋಗರೆಯುತ್ತಿದ್ದ ಆದರೂ ಬಿಡುತ್ತಿರಲಿಲ್ಲ.. ಕಡೆಗೆ.. ಭಾರತದ ಸಮಯ ಎರಡು ಘಂಟೆ ಆಗಿತ್ತು. ಹೋಗಲಿ ಪಾಪ.. ಬಡಪಾಯಿ ಎಂದು ಅವನಿಗೆ ಶುಭ ರಾತ್ರಿ ಹೇಳಿ.. ನಾವು ಅಡಿಗೆ ಮಾಡಿದ ಪಾತ್ರೆ, ತಿಂದ ತಟ್ಟೆಯನ್ನು ತೊಳೆದಿಟ್ಟೆವು.. ಮುಂದಿನ ನನ್ನ ಬದುಕಿನ ಒಂದು ಝಲಕ್ ಇಲ್ಲಿ ತೋರಿಸಿತೇ ವಿಧಿ ಗೊತ್ತಿಲ್ಲಾ...

ಶ್ರೀ ಮಲಗೋಣ ಅಥವಾ ಒಂದು ರೌಂಡ್ ಹೋಗಿ ಬರೋಣ ..

ಒಂದು ವಾರದ ಊಟ ಒಂದೇ ದಿನ ತಿಂದು ಹೆಬ್ಬಾವಿನ ತರಹ ಆಗಿದ್ದೀನಿ.. ಒಂದು ರೌಂಡ್ ಹೋಗಿ ಬರೋಣ ಅಂದ.. ರಾತ್ರಿಯಲ್ಲಿ ಜೆರ್ಮನಿಯ ಹೆದ್ದಾರಿಯಲ್ಲಿ ನೆಡೆವ ಉತ್ಸಾಹ..

ರಾತ್ರಿ ಹೊತ್ತು.. ಆಗ ತಾನೇ ಸೂರ್ಯ ಮುಳುಗಿ ಒಂದು ಘಂಟೆಯಾಗಿರಬಹುದು.. ನಸು ಬೆಳಕಿತ್ತು.. ಆರಾಮಾಗಿ ಸುಮಾರು ಒಂದು ಮೂರು ನಾಲ್ಕು ಕಿಮೀಗಳು ನೆಡೆದೆವು.. ಜೆಎಂ ಅವನ ಮಗನ ಶಾಲೆಯನ್ನು ತೋರಿಸಿದ.. ಹೆದ್ದಾರಿ... ಓಡಾಡುತ್ತಿದ್ದ ವಾಹನಗಳು.. ಹೆದ್ದಾರಿಯ ಆ ಬದಿ ಈ ಬದಿಯಲ್ಲಿ ಪಾರ್ಕಿನಲ್ಲಿ ಬೆಳೆವ ರೀತಿಯಲ್ಲಿ ಹುಲ್ಲುಗಾವಲು.. ರಸ್ತೆಯಲ್ಲಿಯೇ ಕೂತು ಒಂದು ಫೋಟೋ ತೆಗೆಸಿಕೊಳ್ಳುವ ಉತ್ಸಾಹ ಇತ್ತು.. ಆದರೆ ವಾಹನಗಳು ನೂರು ಚಿಲ್ಲರೆ ವೇಗದಲ್ಲಿ ಸಾಗುವ ಆ ರಸ್ತೆಯಲ್ಲಿ ಕೂರುವುದು.. ಉಫ್ ಎನ್ನಿಸಿತು..

ತಣ್ಣನೆ ಗಾಳಿ.. ಹಿತವಾದ ವಾತಾವರಣ.. ಇಕ್ಕೆಲಗಳಲ್ಲಿಯೂ ಹುಲ್ಲುಗಾವಲು.. ಹೊರದೇಶದ ಸೊಬಗನ್ನ ಬರಿ ಸಿನೆಮಾದಲ್ಲಿ ನೋಡಿದ್ದ ನನಗೆ.. ಅದರ ಮೊದಲ ಅನುಭವ..

ಮರುದಿನ ಬೆಳಿಗ್ಗೆ ಬೇಗನೆ ಎದ್ದು.. ಒಂದು ಚಾರಣಕ್ಕೆ ಹೋಗೋಣ ಎನ್ನುವ ನಮ್ಮ ಪ್ಲಾನ್ ಸಿದ್ಧವಾಗಿತ್ತು..

ಬೆಳಿಗ್ಗೆ ತಿಂಡಿ ಬಾರಿಸಿ.. ಬಸ್ಸಿನಲ್ಲಿ ಕೂತು ಹೋಗಬೇಕಾದ ಸ್ಥಳಕ್ಕೆ ಹೋದೆವು.. ಸುಮಾರು ಒಂದು ಘಂಟೆ ಕಾಯಬೇಕು ಮುಂದಿನ ರೈಲಿಗೆ ಅಂದಾಗ.. ಅಲ್ಲಿಯೇ ಹತ್ತಿರದಲ್ಲಿದ್ದ ನದಿಯ ಕಡೆಗೆ ವಾಕ್ ಹೋಗೋಣ ಅಂದ..

ನದಿಯ ತಟದಲ್ಲಿ ಓಡಾಡುತ್ತಾ.. ಕೆಲವು ಚಿತ್ರಗಳು ನನ್ನ ಕ್ಯಾಮೆರಾ ಹೊಟ್ಟೆಗೆ ಸೇರಿತು.. ಶ್ರೀ ನಿನ್ನ ಫೋಟೋ ತೆಗೆಯುತ್ತೇನೆ ಎಂದು ಒಂದಷ್ಟು ನನ್ನ ಚಿತ್ರಗಳನ್ನು ತೆಗೆದ..


ಸುಮಾರು ಒಂದು ಘಂಟೆಯ ರೈಲಿನ ಪಯಣ.. ಮನದಲ್ಲಿ ಹಕ್ಕಿಯ ಹಾರುವ ಭಾವ.. ಕಾಡಿನೊಳಗೆ ನೆಡೆಯುವ ಒಂದು ಸುಂದರ ಅನುಭವ.. ಜೊತೆಯಲ್ಲಿ ಎತ್ತರ ಪ್ರದೇಶದ ಮೇಲೆ ನಿರ್ಮಿಸಿದ್ದ ಪ್ರತಿಮೆಗಳು ಮನಸ್ಸೆಳೆದವು..

ಶ್ರೀ ಸುಸ್ತಾಗಿದ್ದಾರೆ ಚಾರಣ ಬೇಡ.. ಇಲ್ಲಿಂದಲೇ ವಾಪಸ್ ಹೋಗೋಣ ..

ನೋ ಚಾನ್ಸ್.. ಇಲ್ಲಿಯ ತನಕ ಬಂದಿದ್ದೇವೆ... ಆರಾಮಾಗಿ ನೆಡೆದು ಸಾಗುವ...

ನಿತ್ಯ ಹರಿದ್ವರ್ಣ ಕಾಡು.. ತಂಪಾದ ನೆರಳು.. ನಿಧಾನವಾಗಿ ಲೋಕಾಭಿರಾಮವಾಗಿ ಮಾತಾಡುತ್ತಾ.. ಕಾಡಿನ ನಾಲ್ಕು ಐದು ಕಿಮಿಗಳು ನೆಡೆದೆವು.. ಕೆಲವು ಸುಂದರ ಚಿತ್ರಗಳು ಸಿಕ್ಕವು..


ಸಂಜೆಯ ತನಕ ಅಡ್ಡಾಡಿ.. ಮತ್ತೆ ಮನೆಗೆ ಬಂದಾಗ ರಾತ್ರಿಯಾಗಿತ್ತು..

ಅನ್ನ ಮತ್ತು ಕಾಳಿನ ಸಾರು ಮಾಡುತ್ತಾ ಮತ್ತೆ ವೆಂಕಿಯನ್ನು ರೇಗಿಸೋಣ ಅಂತ ಮತ್ತೆ ಕರೆ..

"ಲೋ.. ನಿನ್ನೆಯಿಂದ ಅದೇ ಜಾಗದಲ್ಲಿ ಅದೇ ಬಟ್ಟೆಯಲ್ಲಿ ಇದ್ದೀಯ.. ವಾಸನೆ ಬರ್ತಾ ಇದೆ ಕಣೋ" ಅಂದಾಗ.. ವೆಂಕಿ ಜೋರಾಗಿ ನಗುತ್ತಾ.. ಏನೋ ಹೇಳಲು ಹೋದ.. "ಆ ಕಡೆಯಿಂದ ವೆಂಕಿಯ "ಹೆಂಡತಿ" .. ಶ್ರೀಕಾಂತ್ ಅವರೇ ಇವರ ಬಗ್ಗೆ ನಿಮಗೆ ಗೊತ್ತಿಲ್ಲವಾ.. ಹೇಗಿದೆ ಜರ್ಮನಿ.. ಸತೀಶ್ ಅವರೇ ನಮಸ್ಕಾರ.. ಹೇಗಿದ್ದೀರಾ.. "

ಮುಂದೆ ನಮ್ಮ ತರಲೆ ಮಾತುಗಳು ಮುಗಿಯುವ ಹಂತಕ್ಕೆ ಬರಲೇ.. ಇಲ್ಲ.. ಮತ್ತೆ ವೆಂಕಿಗೆ ಶಿವರಾತ್ರಿ..

"ಲೋ ಮಕ್ಕಳ.. ನಿದ್ದೆ ಬರ್ತಾ ಇದೆ.. ಬಿಡ್ರೋ" ನಾವು ದಯೆ ತೋರಿಸುವ ಹಂತವನ್ನು ದಾಟಿದ್ದೆವು..

"ಲೋ ನಾಡಿದ್ದು ನಾ ಬೆಂಗಳೂರಿಗೆ ಬರುತ್ತೇನೆ.. ಆಗ ಮಾತಾಡೋಕೆ ಅವಕಾಶ ಸಿಗುತ್ತಾ.. ಮಾತಾಡ್ಲ.. ನಿದ್ದೆ ಮಾಡೋದು ಇದ್ದೆ ಇರ್ತದೆ.. "

ಇಬ್ಬರೂ ದಬಾಯಿಸಿದಾಗ.. ಗೆಳೆತನಕ್ಕೆ ಬೆಲೆ ಕೊಟ್ಟು ನಿದ್ದೆಯನ್ನು ಕೊಂಚ ದೂರ ತಳ್ಳಿ ನಮ್ಮ ಜೊತೆ ಮಾತಿಗಿಳಿದ.. ಮತ್ತೆ ಸುಮಾರು ಎರಡು ಘಂಟೆ..

ಊಟ ಮುಗಿಸಿ.. ಇವತ್ತು ವಾಕಿಂಗ್ ಮಾಡುವ ಮೂಡ್ ಇರಲಿಲ್ಲ.. ಬದಲಿಗೆ ಟಿವಿ ಹಾಕಿ ಟೆನಿಸ್ ಮ್ಯಾಚ್ ನೋಡುತ್ತಾ ಮಾತಾಡುತ್ತ ಹಾಗೆ ಮಲಗಿದೆವು..

ಮರುದಿನ.. ಬೆಳಿಗ್ಗೆ ಎದ್ದಾಗ.. ಸ್ವಲ್ಪ ತಡವಾಗಿತ್ತು..

"ಶ್ರೀ.. ಟ್ರೈನ್ ಹಿಡಿಬೇಕಾದರೆ.. ಓಡ ಬೇಕು.. ಸ್ವಲ್ಪ ಬೇಗಾ ಬಾ.. "

ಚಕ ಚಕ ಇಬ್ಬರೂ ಓಡಿದೆವು.. ಬಸ್ಸು ತಲುಪುವ ವೇಳೆಗೆ... ನಾ ತಿಂದಿದ್ದ ತಿಂಡಿ.. ಅರಗಿ ಹೋಗಿತ್ತು :-)

ಬಸ್ಸಿನಲ್ಲಿ ಕೂತು.. ಮುಂದಿನ ರೈಲು ನಿಲ್ದಾಣಕ್ಕೆ ಬರುವ ಹೊತ್ತಿಗೆ ಒಂದು ಸಣ್ಣ ನಿದ್ದೆಯೂ ಆಗಿತ್ತು..

ಅಲುಗಾಡದೇ ಓಡುವ ರೈಲು.. ತಿಂದಿದ್ದ ತಿಂಡಿ.. ತಣ್ಣನೆ ವಾತಾವರಣ.. ಬೇಡ ಎಂದರೂ ನಿದ್ದೆಯನ್ನು ಬರ ಸೆಳೆಯುತ್ತಿತ್ತು..

ಹೈಡಲ್ ಬರ್ಗ್ ಎನ್ನುವ ಪ್ರದೇಶಕ್ಕೆ ಬಂದಿಳಿದೆವು..
ಅಣ್ಣಾವ್ರ ಶಂಕರ್ ಗುರು ಚಿತ್ರ ನೆನಪಿಸಿದ ಕೇಬಲ್ ಕುರ್ಚಿ 



ಅಲ್ಲಿನ ಒಂದು ಅಂಗಡಿಯಲ್ಲಿ ಐಸ್ ಕ್ರೀಮ್ ತಿಂದು.. ನನ್ನ ಮತ್ತು ಜೆಎಂ ನ ಹಳೆ ನೆನಪನ್ನು ಹೊರ ತಂದಿತು.. ಒಮ್ಮೆ ಕೊರಮಂಗಲದಿಂದ ಸೈಕಲ್ ನಲ್ಲಿ ಬರುವಾಗ ವಿಪರೀತ ಮಳೆ.. ಹಾಕಿದ್ದ ಬಟ್ಟೆ ಒದ್ದೆ ಮುದ್ದೆಯಾಗಿತ್ತು.. ಒಂದು ಬೇಕರಿ ಮುಂದೆ ನಿಂತಾಗ ನಮ್ಮನ್ನು ನೋಡಿದ ಬೇಕರಿಯವ.. ಬಿಸಿ ಬಿಸಿ ಹಾಲು ಕೊಡ್ಲಾ ಅಂದ.. ನಾವಿಬ್ಬರೂ ಒಂದೇ ಉಸಿರಿನಲ್ಲಿ ಸೆವೆನ್ ಅಪ್ ಕೊಡಿ.. ಚಿಲ್ಡ್ ಇರಲಿ ಅಂದೆವು..
ನಮ್ಮನ್ನು ಮಂಗಗಳ ಹಾಗೆ ನೋಡಿದ ಅವನು.. ಯಾವುದೋ ಕಾಣದ ಊರಿನ ಮಂಗಗಳು ಅಂದುಕೊಂಡು ಎರಡು ಬಾಟಲ್ ಸೆವೆನ್ ಅಪ್ ಕೊಟ್ಟಾ.. ನಾವು ಅದನ್ನು ಮುಟ್ಟಿ ನೋಡಿ.. ಸರ್ ಚಿಲ್ಡ್ ಕೊಡಿ ಸರ್.. ಬೇರೆ ಕೊಡಿ.. ಅಂದಾಗ.. ಆವಾ ಕಿಸಕ್ ಅಂತ ನಕ್ಕಿದ್ದು ನಮಗೆ ಕಾಣಲಿಲ್ಲ..

ಹಿಡಿದುಕೊಳ್ಳಲಾರದೆ.. ಕಷ್ಟ ಪಟ್ಟು ಆ ತಣ್ಣಗಿನ ಬಾಟಲ್ ಹಿಡಿದು.. ಬಾಟಲ್ ಮುಗಿಸಿದ ನೆನಪು ಮೂಡಿ ಬಂತು..



ಕೇಬಲ್ ಕಾರ್ ಪಯಣ ಸೊಗಸು 

ಕೇಬಲ್ ಕಾರಿನಲ್ಲಿ ಬೆಟ್ಟದ ಮೇಲೆ ಏರಿ ಹೋಗುವ ಅನುಭವ ಸೂಪರ್ ಇತ್ತು.. ದಾರಿಯುದ್ದಕ್ಕೂ ಹಲೋ ಹಲೋ ಎನ್ನುವ ಜರ್ಮನ್ ಪ್ರಜೆಗಳ.. ಅತಿಥಿ ಭಾವ ಇಷ್ಟವಾಗುತ್ತಿತ್ತು.. ಕೇಬಲ್ ಕಾರಿನಲ್ಲಿ ಮೇಲೆ ಹೋಗಿ ಮತ್ತೆ ಐಸ್ ಕ್ರೀಮ್.. ಜೊತೆಯಲ್ಲಿ ಚಿಕ್ಕ ಪುಟ್ಟ ತಿನಿಸು.. ಜೊತೆಯಲ್ಲಿ ಬೇಜಾನ್ ಫೋಟೋಗಳು.. ಹಿತಕರವಾದ ಭಾವ ಮೂಡಿಸಿತ್ತು..

ಬೆಟ್ಟದ ಮೇಲೆ ಒಂದು ಪುಟ್ಟ ವಾಕಿಂಗ್ ಮಾಡಿ.. ಮತ್ತೆ ಇನ್ನೊಂದು ಬಗೆಯ ಕೇಬಲ್ ಕಾರಿನಲ್ಲಿ ಇಳಿಯುವ ಮಜಾ ಒಮ್ಮೆ ಎದೆ ಝಲ್ ಎನ್ನುತ್ತಿತ್ತು.. ಚಲಿಸುವ ಚೇರಿನಲ್ಲಿ ಕೂತು ಬೆಟ್ಟವನ್ನು ಇಳಿಯುವ ಪರಿ.. ಸೂಪರ್..

ಬೆಟ್ಟವನ್ನು ಇಳಿದು ಅಲ್ಲಿಂದ ಸ್ವಲ್ಪ ಮುಂದೆ.. ಸಾಗಿದರೆ.. ಸುಮಾರು ಐದು ನೂರು ವರ್ಷಗಳ ಹಿಂದೆ ಕಟ್ಟಿದ ಒಂದು ಕಟ್ಟಡ.. ಎರಡನೇ ಮಹಾಯುದ್ಧದ ಸಮಯದಲ್ಲಿ ಕೆಲವು ಭಾಗ ಜಖಂಗೊಂಡರೂ.. ಅದನ್ನು ಸಂರಕ್ಸಿಸಿ.. ಇಟ್ಟಿರುವ ರೀತಿ ಸೊಗಸಾಗಿದೆ.. ವೈನ್ ತಯಾರಿಕೆ ಮತ್ತು ಅದನ್ನು ಸಂರಕ್ಷಿಸುವ ರೀತಿ.. ಸೋಜಿಗಗೊಳಿಸುತ್ತದೆ.... ಅದರೊಳಗೆ ಒಂದು ಸುತ್ತು.. ಇನ್ನೂ ನೋಡಬೇಕೆನ್ನುವ ಹಂಬಲವಿದ್ದರೂ.. ಮುಂದಿನ ಟ್ರೈನ್ ಹತ್ತಬೇಕಾದ್ದರಿಂದ ಸಮಯದ ಅಭಾವ. ನಮ್ಮನ್ನು ಅಲ್ಲಿಂದ ಓಡಿಸಿತು..
ಐದು ಶತಮಾನಗಳಷ್ಟು ಹಳೆಯ ಅರಮೆನೆಯ ಸಮುಚ್ಚಯ 

ವೈನ್ ಕೂಡಿ ಇಡುವ ಸ್ಥಳ 

ನಾವು ಹೋಗುವ ರೈಲು ಹೋಗಿಯಾಗಿತ್ತು.. ಮುಂದಿನ ರೈಲಿಗೆ ಕಾದು ಕೂತಿದ್ದೆವು..

ನಿರ್ಜನ ನಿಲ್ದಾಣ 
ಅನೇಕ ಹಿಂದಿ ಭಾಷೆಯ ಚಿತ್ರಗಳಲ್ಲಿ ನೋಡಿದ ರೀತಿಯ ಜನ ರಹಿತ ರೈಲು ನಿಲ್ದಾಣ.. ಸುತ್ತಲೂ ಪ್ರಕೃತಿ. . ಇಲ್ಲವೇ ಮನೆಗಳು.. ನಿರ್ಜನ ಪ್ರದೇಶ.. ಸೂಪರ್ ಅನುಭವ..

ಮಾತಾಡುತ್ತಾ.. ಮತ್ತೆ ಮನೆಗೆ ಹೊರಟೆವು..

ಶ್ರೀ... ಇವತ್ತು ಫ್ರಾಂಕ್ಫರ್ಟ್ ನಲ್ಲಿ ಊಟ ಮಾಡಿ ಮನೆಗೆ ಹೋಗೋಣ.. ಮನೆ ಊಟ ಸಾಕಾಗಿದೆ ಅಲ್ವ..

ಬೇಡ ಗುರು.. ಆದರೆ ನಿನಗೆ ಸುಸ್ತಾಗಿದ್ದಾರೆ ಇಲ್ಲಿಯೇ ತಿಂದು ಹೋಗೋಣ .. ಆಗಲೇ ತಡವಾಗಿದೆ.. ಹೋಟೆಲಿನ ಊಟ ಮಾಡೋಣ

ಸರಿ ಒಂದು ಥಾಯ್ ಹೋಟೆಲಿಗೆ ಬಂದು.. ವೆಜ್ ಫ್ರೈಡ್ ರೈಸ್ ತಿಂದು.. ಮನೆಗೆ ಹೋಗುವ ಹಾದಿಯಲ್ಲಿ ಸೂಪರ್ ಮಾರ್ಕೆಟೀಗೆ ಹೋಗಿ.. ಮನೆಗೆ ಬೇಕಾಗಿದ್ದ ದಿನಸಿ ಜೆಎಂ ಖರೀದಿಸಿದ.. ಜೊತೆಯಲ್ಲಿ ನನಗೆ ಕೆಲವು ಉತ್ತಮ ಚೊಕೊಲೇಟ್ ಖರೀದಿಸಿದ..

ಮನೆಗೆ ಬಂದು ಕಾಲು ಚಾಚಿ ಮಲಗಿದಾಗ.. ನಿದ್ದೆ ಸುಯ್ ಅಂತ ಹಾರಿ ಬಂತು..

ಬೆಳಿಗ್ಗೆ ಬೇಗನೆ ಎದ್ದು.. ಬ್ಯಾಗ್ ಎಲ್ಲವನ್ನು ಸಿದ್ಧ ಪಡಿಸಿಕೊಂಡು.... ರವಾ ಇಡ್ಲಿ ತಿಂದು ಬಸ್ಸಿನಲ್ಲಿ ಕೂತಾಗ.. ಅರೆ ಇನ್ನೂ ಒಂದೆರಡು ದಿನ ಇಲ್ಲಿದ್ದಾರೆ ಸೊಗಸಾಗಿರುತ್ತಿತ್ತು.. ಅನ್ನಿಸುತ್ತಿತ್ತು.. ಆದರೆ ರೇ ರೇ..

ಜೆಎಂನ ಬೀಳ್ಕೊಟ್ಟು... ಫ್ರಾಂಕ್ಫರ್ಟ್ ವಿಮಾನ ನಿಲ್ದಾಣಕ್ಕೆ ತಲುಪಿದಾಗ ಏನೋ ಬಿಟ್ಟು ಹೋಗುತ್ತಿದ್ದೇನೆ ಎನ್ನುವ ಭಾವ..

ಫ್ರಾಂಕ್ಫರ್ಟ್.. ದೋಹಾ.. ಬೆಂಗಳೂರು.. ಮಧ್ಯದಲ್ಲಿ ಒಂದಷ್ಟು ಚಲನ ಚಿತ್ರಗಳು.. ಭಾರವಾದ ಮನಸ್ಸು ಒಂದು ಕಡೆ.. ಮತ್ತೆ ನನ್ನ ಮನದನ್ನೆ ಮತ್ತು ಮಗಳನ್ನು ನೋಡುತ್ತಿದ್ದೇನೆ ಎನ್ನುವ ಖುಷಿ.. ಮೊದಲ ವಿದೇಶ ಪ್ರವಾಸ ಕೊಟ್ಟ ಅನುಭವ... ಎಲ್ಲವೂ ಕಣ್ಣಲ್ಲಿಯೇ ಕಟ್ಟಿಕೊಂಡು.. ಬೆಂಗಳೂರಿನಲ್ಲಿ ಇಳಿದಾಗ.... ಕಾರು ಸಿದ್ಧವಾಗಿತ್ತು.. ಕಾರಿನ ಚಾಲಕ ನನಗೆ ಪರಿಚಯವಿದ್ದವರೇ..
ಎಲ್ಲಾ ಅನುಭವಗಳನ್ನು ಮಾತಾಡುತ್ತ ಮನೆಗೆ ಬಂದಿಳಿದಾಗ.. ಮಗಳು ಮತ್ತು ಮನದನ್ನೆ ತಬ್ಬಿಕೊಂಡು ಸ್ವಾಗತಿಸಿದರು..

ಪುಟ್ಟ ನಿದ್ದೆ ಮಾಡಿ.. ಬೆಳಿಗ್ಗೆ ಆಫೀಸಿಗೆ ಕಾರಿನಲ್ಲಿ ಪಯಣ... ಆಫೀಸಿನ ಕೆಲಸದಲ್ಲಿ ಮುಳುಗಿದ್ದರೂ.. ಹಿಂದಿನ ಒಂದು ವಾರದ ಪಯಣದ ಪಕ್ಷಿನೋಟ ಮನದಲ್ಲಿಯೇ ಚಲನಚಿತ್ರವಾಗಿತ್ತು..

ಐದು ದಿನಗಳ ಬಳಿಕ.. ಅಚಾನಕ್.. ಕಲ್ಲಿಕೋಟೆಗೆ ಹೋಗಬೇಕಾದ ಅವಕಾಶ ಒದಗಿಬಂತು.. ಸವಿತಾ ಮತ್ತೆ ಹೊರಗೆ ಹೋದರೆ ಕಾಲು ಮುರೀತೀನಿ ಅಂದಳು.. ನಗುತ್ತಾ.. ಆದರೂ ಹೋಗಿ ಬನ್ನಿ ಶ್ರೀ .. ಎಂದಳು.. ಮಗಳು ಅಪ್ಪಾ ಬರುವಾಗ ಬಾಳೆಹಣ್ಣಿನ ಚಿಪ್ಸ್ ತನ್ನಿ ಮರೀಬೇಡಿ ಅಂದಳು..

ಸರಿ ಶನಿವಾರ ಬೆಳಗಿನ ಜಾವ ಮೂರು ಘಂಟೆಗೆ ಮನೆಯ ಮುಂದೆ ಕಾರು ಬಂತು.. ಮೈಸೂರಿನತ್ತ ಪಯಣ.. ಮೈಸೂರಿಗೆ ಹೋಗಿ ನನ್ನ ಅಲೆಮಾರಿಗಳು ಪ್ರವಾಸದ ಖಾಯಂ ಡ್ರೈವರ್ ಕಾಮ್ ಗೆಳೆಯ ಸುನಿಲ್ ಭೇಟಿ ಮಾಡಿ ಅವರ ಜೊತೆಯಲ್ಲಿ ತಿಂಡಿ ತಿಂದು .. ವಾಯ್ನಾಡಿನ ಹಾದಿಯಲ್ಲಿ ಕಲ್ಲಿಕೋಟೆಯ ಕಡೆಗೆ ಪಯಣಿಸಿದೆವು..

ದಾರಿಯಲ್ಲಿ ಗಜರಾಜ ದರುಶನ ನೀಡಿದ.. ಜಿಂಕೆಗಳು ಸ್ವಾಗತಿಸಿದವು.. ಅದನ್ನೆಲ್ಲ ನೋಡುತ್ತಾ ಎಡಕಲ್ಲು ಗುಡ್ಡಕ್ಕ್ಕೆ ಬಂದೆವು...
ಸುಂದರ ಪ್ರದೇಶಕ್ಕೆ ನಾಲ್ಕು ವರ್ಷದ ಹಿಂದೆ ಭೇಟಿ ಕೊಟ್ಟಿದ್ದ ನೆನಪನ್ನು ತಾಜಾ ಮಾಡಿಕೊಂಡು.. ಅಲ್ಲಿಂದ ಕಲ್ಲಿಕೋಟೆಯ ಹಾದಿ ಹಿಡಿದೆವು..

ಅದ್ಭುತ ರಸ್ತೆ.. ಘಟ್ಟವನ್ನು ಇಳಿದು ಕಡಲಿನ ತೀರವನ್ನು ಸೇರುವ ನಮ್ಮ ಪಯಣ ಸುಂದರವಾಗಿತ್ತು.. ಒಮ್ಮೆ ಮಳೆ.. ಒಮ್ಮೆ ಚಳಿ.. ಒಮ್ಮೆ ಬಿಸಿಲು.. ಘಟ್ಟಗಳ ತಿರುವಿನಲ್ಲಿ ಸ್ವಾಗತಿಸುತ್ತಿದ್ದವು.. ಒಂದು ಇಳಿಜಾರಿನಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಮುಖ್ದ ತೊಳೆದು... ಮತ್ತೆ ಪಯಣ ಆರಂಭಿಸಿ.. ಕಲ್ಲಿಕೋಟೆ ತಲುಪಿದಾಗ ಸಂಜೆಯಾಗಿತ್ತು..




ಎಡಕಲ್ಲು ಗುಡ್ಡದ ಶಿಲಾಯುಗದ ಜನರ ಕಲಾಕೃತಿ.. 

ಸಮುದ್ರದ ತೀರಕ್ಕೆ ಹೋಗಿ.. ಬಿಸಿ ಬಿಸಿ ಪಾನಿಪುರಿ ತಿಂದು.. ಸಮುದ್ರಕ್ಕೆ ಹೋದಾಗ ಮಳೆ ಬರಬೇಕು ಎನ್ನುವ ಆಸೆಯನ್ನು ಈಡೇರಿಸಿಕೊಂಡು.. ಹಾಕಿಕೊಂಡಿದ್ದ ಬಟ್ಟೆ ಒದ್ದೆ ಮುದ್ದೆಯಾದರೂ ಲೆಕ್ಕಿಸದೆ ಮಳೆಯಲ್ಲಿಯೇ ನೆನೆದು ಬಂದೆ..

ಕೆಲಸ ಮುಗಿಸಿಕೊಂಡು.. ಆ ಚಳಿಯಲ್ಲಿಯೂ ಮತ್ತೆ ಮಳೆಯಲ್ಲಿ ನೆನೆದು.. ದಾರಿಯಲ್ಲಿ ಒಂದು ಅಂಗಡಿಯಲ್ಲಿ ಬಿಸಿ ಬಿಸಿ ಇಡ್ಲಿ ತಿಂದು.. ಬಸ್ಸಿನಲ್ಲಿ ಬಂದು ಮಲಗಿದಾಗ ರಾತ್ರಿ ಒಂಭತ್ತು ಘಂಟೆ.. ಬಟ್ಟೆ ಒದ್ದೆಯಾಗಿತ್ತು.. ಬ್ಯಾಗಿನಲ್ಲಿದ ಇನ್ನೊಂದು ಬಟ್ಟೆ ಹಾಕಿಕೊಂಡು ಹೊದ್ದಿಕೆ ಹೊದ್ದು ಮಲಗಿದೆ.. ಕಣ್ಣು ಬಿಟ್ಟಾಗ ಕೆಂಗೇರಿ ಬಸ್ ನಿಲ್ದಾಣ ದಾಟಿತ್ತು..

ಮನೆಗೆ ಬಂದು... ಒಂದೆರಡು ಘಂಟೆ ಮಲಗಿದೆ..
ಜೀವನದ ಕಡಲಿನ ಅಲೆಗಳು ಏನೇ ಹೊತ್ತು  ತರಲಿ ಎದುರಿಸುವೆ
ಎನ್ನುವ ಪೋಸ್.. 
ಮುಂದೆ ಅದ್ಭುತ ತಿರುವಿನಲ್ಲಿ ಕಾಲ ಓಡುತಿತ್ತು.. ಮುಂದೇ ... !