Thursday, December 12, 2013

ಛಲದೋಳ್...............................................!

"ಶ್ರೀಕಾಂತ ನೀನು ಕಾರು ತಗೊಂಡೆ, ಮನೆ ಕಟ್ಟುವ ಹಾಗೆ ಕೂಡ ಆಗಲಿ, ನೀನು ವಿಜಯ ಮುರುಳಿ ಎಲ್ಲರೂ ಚೆನ್ನಾಗಿರಿ.. ಆದರೆ ನೀವು ಏನೇ ಮಾಡಿದರೂ ನಮಗೆಲ್ಲ ಸಂತೋಷವೇ ಆದರೆ....  ಆ ಮಗು ಸಾಧಿಸುತ್ತಿದೆಯಲ್ಲ ಅದು ನಿಜವಾದ ಛಲ.. " ನಮ್ಮ ಪ್ರೀತಿಯ ನಗುಮೊಗದ ರಾಮಿ ಚಿಕ್ಕಪ್ಪ ಮತ್ತು ರಾಜು ಚಿಕ್ಕಮ್ಮ ಈ ಮಾತನ್ನು ಹೇಳಿದಾಗ ಕಣ್ಣಲ್ಲಿ ನೀರು ಧುಮುಕಲಿಕ್ಕೆ ಸಿದ್ಧವಾಗಿತ್ತು.. ತಡೆದುಕೊಂಡೆ...

"ನಿಜವಾಗಿಯೂ ಶ್ರೀಕಾಂತ.. ಕೃಷ್ಣವೇಣಿ ತನ್ನ ಜೀವನದಲ್ಲಿ ಏನೇನೋ ನಡೆದರೂ ಅದನ್ನು ಛಲದಿಂದ ಸ್ವೀಕರಿಸಿ ಹೆಜ್ಜೆ ಇಡುತ್ತಿರುವ ರೀತಿ ನಿಜಕ್ಕೂ ಹೆಮ್ಮೆ ತರುತ್ತದೆ.. ಆಲ್ವಾ ಮಗು" ಎಂದರು ರಾಮಿ ಚಿಕ್ಕಪ್ಪ!

ನಾನು ಏನು ಹೇಳುವ ಸ್ಥಿತಿಯಲ್ಲಿರಲಿಲ್ಲ.. ನಾನು ಹೇಳಿದ್ದು ಒಂದೇ ಮಾತು "ಚಿಕ್ಕಪ್ಪ.. ಜೀವನಲ್ಲಿ ಏನಾದರೂ ಸಾಧಿಸಬೇಕಾದರೆ ಸ್ಪೂರ್ತಿ ಬೇಕು ಎಂದು ನಾ ಎಲ್ಲೂ ಹುಡುಕುವುದೇ ಇಲ್ಲ.. ನನ್ನ ಅಕ್ಕನ ಛಲದ ಜೀವನವೇ ಸಾಕ್ಷಿ..." ಅಷ್ಟು ಹೇಳಿದೆ.. ನನಗೆ ತಡೆಯಲಾಗಲಿಲ್ಲ.. ಕಣ್ಣಲ್ಲಿ ಜಿನುಗುತ್ತಿದ್ದ ಜೋಗದ ಜಲಪಾತವನ್ನು ಹಾಗೆ ತಡೆದಿರಿಸಿಕೊಂಡೆ.. ಕಾರಣ ನಾ ಅಳುವುದಿಲ್ಲ ಎಂದು ಅಣ್ಣನಿಗೆ (ಅಪ್ಪ) ಪ್ರಮಾಣ ಮಾಡಿದ್ದೆ :-)

ಹೌದು ಇವತ್ತು ನನ್ನ ಅಕ್ಕನ ಜೀವನದಲ್ಲಿ ಒಂದು ಸುಂದರ ದಿನ.  ಕ್ರಮಬದ್ಧವಾಗಿ ಶಿಸ್ತಿನ ಹಾಗೂ ಛಲದ ನೊಗವನ್ನು ಹೆಗಲಿಗೇರಿಸಿ ಜೀವನದಲ್ಲಿ ಕಾಣುವ ಏಳಿಗೆಗಳನ್ನು ಮೆಟ್ಟಿಲಾಗಿಯೂ.. ಬೀಳುಗಳನ್ನು ಆಲದ ಮರದ ಬಿಳಲುಗಳ ಹಾಗೇ ಅದನ್ನೇ ಹಿಡಿದುಕೊಂಡು ಮೇಲೆ ಏರುತ್ತಿರುವ ಹಾಗೆ ಪ್ರತಿ ಹಂತದಲ್ಲೂ ಕ್ರಮಬದ್ಧವಾಗಿ ಏರು ಹಾದಿಯಲ್ಲಿ ನಡೆಯುತ್ತಿರುವ ಅಕ್ಕ ಇಂದು ಒಂದು ಕಾರಿನ ಒಡತಿಯಾದಳು. ಅವಳ ಸಾಧನೆಗೆ ಕ್ಯಾಲೆಂಡರ್ ಕೂಡ ಶರಣಾಗಿ ಕ್ರಮಬದ್ಧವಾಗಿ ನಿಂತವು.. ೧೧/೧೨/೧೩.... ಇದಕ್ಕಿಂತ ಇನ್ನೇನೂ ಬೇಕು.. ಅಲ್ಲವೇ
ಸರದಿಯಲ್ಲಿರುವ ಹೆಸರು - ಐದನೇ ಹೆಸರು!!!
ಮನಸ್ಸು ಹಾಗೆ ಮೂವತ್ತು ವಸಂತಗಳ  ಹಿಂದೆ ಓಡಿತು.. ನಾವು ತ್ಯಾಗರಾಜನಗರದಲ್ಲಿ ಇದ್ದಾಗ.. ಅಪ್ಪ ಪ್ರತಿ ವರುಷವೂ  ಸಜ್ಜನರಾವ್ ವೃತ್ತದ ಬಳಿ ಇರುವ ಸತ್ಯನಾರಾಯಣ ದೇವಸ್ಥಾನದಲ್ಲಿ ಪೂಜೆ ಮಾಡಿಸುತ್ತಿದ್ದರು. ಸುಮಾರು ಮೂರು ಅಥವಾ ನಾಲ್ಕು ವರ್ಷ ಅಲ್ಲಿಯೇ ಪೂಜೆ ಮಾಡಿಸಿದ್ದ ನೆನಪು. ಅಮೃತ ಶಿಲೆಯಲ್ಲಿ ರಚಿಸಿರುವ ಸತ್ಯನಾರಾಯಣನ ಮೂರ್ತಿ ಸುಂದರವಾಗಿದೆ. ಆ ದೇವಸ್ಥಾನದ ಮುಂದೆ ಹೋದಾಗಲೆಲ್ಲ ಅದೇ ನೆನಪುಗಳು ಕಾಡುತ್ತಿದ್ದವು.
ಸಜ್ಜನ್ ರಾವ್ ವೃತ್ತದ ಶ್ರೀ ಸತ್ಯನಾರಾಯನ ಸ್ವಾಮೀ ದೇವಾಲಯ

ಚಿತ್ರ ಕೃಪೆ - ಅಂತರ್ಜಾಲ 
 ಭೌತಿಕವಾಗಿ ನಮ್ಮ ಅಪ್ಪ ಜೊತೆಯಲ್ಲಿಲ್ಲದಿದ್ದರೂ....  ಅಕ್ಕನ ಕಾರನ್ನು ಡ್ರೈವ್ ಮಾಡಿಕೊಂಡು ಆ ದೇವಸ್ಥಾನದ ಮುಂದೆ ಬಂದು ನಿಂತಾಗ ಹಾಗೆ ಮನಸ್ಸು ಹಳೆಯ ನೆನಪುಗಳನ್ನು ಮೆಲುಕು ಹಾಕಿತು.. ಅಪ್ಪ ಅಲ್ಲಿಯೇ ನಿಂತು ಮಗಳ ಏಳಿಗೆಯನ್ನು ಕಂಡು ಸಂತಸಗೊಂಡಂತೆ ಭಾಸವಾಯಿತು!

"ಅಮ್ಮ.. ಚೆನ್ನಾಗಿದ್ದೀಯ.. ಇರು ಅಕ್ಕ ನಿನಗೆ ಒಂದು ಸಂತೋಷದ ಸುದ್ಧಿ ಹೇಳುತ್ತಾಳೆ" ಎಂದು ಹೇಳಿ ಅಕ್ಕನಿಗೆ ಫೋನ್ ಕೊಟ್ಟೆ. ಎರಡು ನಿಮಿಷ ಅಮ್ಮ ಮಗಳು ಸಂಭಾಷಣೆ.. ಅಕ್ಕನ ಕಣ್ಣಲ್ಲಿ ಸಾಧನೆಯ ಮಜಲನ್ನು ಏರಿದ ಸಂತಸವಿತ್ತು ಜೊತೆಯಲ್ಲಿ ಅಮ್ಮನ ಹೃದಯ ಸಂತಸದಿಂದ ಬೀಗುತ್ತಿದ್ದ ಧ್ವನಿ ನನಗೆ ಕೇಳಿಸುತಿತ್ತು. ಅಮ್ಮ ತನ್ನನ್ನು ಎತ್ತಿ ಮುದ್ದಾಡಿ ಊರಿನ ಮಗಳಂತೆ ಬೆಳೆಸಿದ ಕಿತ್ತಾನೆ ಗ್ರಾಮಕ್ಕೆ ಹೋಗಿದ್ದ ಕಾರಣ ಧ್ವನಿಯಲ್ಲಿ ಮಾತ್ರ ಅವರ ಸಂತಸದ ಸಿಂಚನವಾಯಿತು. 
ಸುವರ್ಣ ಹಸ್ತಾಕ್ಷರದ ಸಮಯ!!!
"ಛಲದೋಳ್ ಸುಯೊಧನನ್" ಎಂದ ಆದಿ ಕವಿ ಪಂಪ ಹೇಳಿದರೆ..ನನಗೆ ಸಾದೃಶ್ಯ ವಾಗಿ ಕಂಡ ಅಕ್ಕನ ಬದುಕು ನಿಜಕ್ಕೂ "ಛಲದೋಳ್ ನನ್ನ ಅಕ್ಕ" ಎಂದು ಹೇಳುವಂತೆ ಪ್ರೇರೇಪಿಸಿತು. ನಾನು ಇಂದು ಈ ಮಟ್ಟಿಗೆ ನಿಂತಿದ್ದೇನೆ ಅಂದರೆ ಅಪ್ಪ ಅಮ್ಮನ ರಕ್ಷಾ ಕವಚದ ಜೊತೆಯಲ್ಲಿ ಅಕ್ಕನ ತ್ಯಾಗ ಮತ್ತು ಅವಳ ಮಮಕಾರದ ಪಾಲು ಬಹು ದೊಡ್ಡದು.

ಹೊಸ ಚೈತನ್ಯ ರಥಕ್ಕೆ ಸಾರಥಿಯಿಂದ  ಒಲವಿನ ಪೂಜೆ!
ಅಪ್ಪ ಅಮ್ಮನ  ಅನುಪಸ್ಥಿತಿಯಲ್ಲಿ ಅಪ್ಪ ಅಮ್ಮನ ಸ್ಥಾನದಲ್ಲಿ ನಿಂತು ಈ ಸಂತಸವನ್ನು ದುಪ್ಪಟ್ಟು ಮಾಡಿದ ಅಣ್ಣ ಮತ್ತು ಅತ್ತಿಗೆಗೆ ಎಷ್ಟು ಕೃತಜ್ಞತೆಗಳನ್ನು ಹೇಳಿದರೂ ಸಾಲದು. ಒಂದು ಕುಟುಂಬ ಒಟ್ಟಿಗೆ ನಿಲ್ಲಬೇಕಾದರೆ ಮನಸ್ಸು ಮನಸ್ಸು ಸೂಜಿ ಹಾಗೂ ದಾರದಂತೆ ಇರಬೇಕು ಎನ್ನುವ ತತ್ವ ನಮ್ಮ ಅಪ್ಪ ಅಮ್ಮ ಹೇಳಿಕೊಡದೇ ಅವರೇ ಜೀವನದಲ್ಲಿ ಅಳವಡಿಸಿಕೊಂಡದ್ದು ನಮ್ಮ ಕುಟುಂಬದ ಯಶಸ್ಸಿಗೆ ಕಾರಣವಿರಬಹುದು ಎನ್ನುವ ಅಭಿಪ್ರಾಯ ನನ್ನದು.

ಒಲವಿನ ಪೂಜೆಗೆ ಒಲವೆ ಮಂಧಾರ.. ಒಲವೆ ಬದುಕಿಗೆ ಬಂಗಾರ!!!

ಅಣ್ಣ ಇತ್ತೀಚಿಗೆ ತಾನೇ ಸ್ವಿಫ್ಟ್ ಕಾರ್ ಕೊಂಡಿದ್ದ.. ಅದರ ಪಕ್ಕದಲ್ಲಿಯೇ ಅಕ್ಕನ ಕಾರು.. ಇದಕ್ಕಿಂತ ಸಂತಸ ಇನ್ನೇನು ಬೇಕು.. ಇಬ್ಬರೂ ಜೀವನದ ಆರಂಭದಲ್ಲಿ ನೋವು ತಿಂದಿದ್ದರೂ ಛಲ ಬಿಡದ ತ್ರಿವಿಕ್ರಮನಂತೆ ಹೋರಾಡಿ ಯಶಸ್ಸಿನ ಮೆಟ್ಟಿಲನ್ನು ಏರುತ್ತಾ ಸಾಗಿದ್ದಾರೆ.  ಇವರ ಜೀವನವೇ ನನಗೆ ಆದರ್ಶ..

ಅಕ್ಕ ಹಾಗೂ ಅಣ್ಣನ ಚೈತನ್ಯ ರಥಗಳು.. !
ಅಕ್ಕನ ಮಗ .... ಆದಿತ್ಯ ಮುಂದಿನ ವಾರಸುದಾರ!!!
ಈ ಸುಂದರ ಸಡಗರದ ಕೆಲವು ಮಧುರ ಕ್ಷಣಗಳು ದಾಖಲು ಮಾಡಬೇಕೆನ್ನುವ ನನ್ನ ಆಸೆಗೆ  ಜೊತೆಯಾಗಿ ನಿಂತದ್ದು ನನ್ನ ಮೂರನೇ ಕಣ್ಣು ಅದಕ್ಕೆ ನನ್ನ ಮನಸಾರೆ ಪ್ರಣಾಮಗಳು!!!

ಸುಮಧುರ ಕ್ಷಣಗಳಿಗೆ ಸುಂದರ ಚೌಕಟ್ಟು !!!
ಜೀವನದಲ್ಲಿ ಬರುವ ತಿಮಿಂಗಿಲಗಳ ಒಡನಾಟವನ್ನು ಖುಷಿಯಿಂದ ಬರಮಾಡಿಕೊಳ್ಳಿ ಮತ್ತು ಆನಂದದಿಂದ ಅನುಭವಿಸಿ ಈ ಸಿದ್ಧಾಂತವನ್ನು ಮತ್ತೊಮ್ಮೆ ಸಾಧರಪಡಿಸುವ ಅವಕಾಶ ನನ್ನದಾಯಿತು!!!

ಲೇಖನ ಓದಿ ಶುಭ ಹಾರೈಸಿದ್ದಕ್ಕೆ ನಿಮಗೆ ಸಿಹಿಯ ಲೇಪನ!!!
enjoy the sharks in your life!!!

Monday, November 18, 2013

ಗಿಜಿ ಗಿಜಿ ಗುಜು ಗುಜು

ಈ ಲೇಖನವನ್ನು ಪ್ರಕಟ ಮಾಡಿದ ಪಂಜು ಪ್ರಕಾಶನಕ್ಕೂ ಮತ್ತು ತಂಡದ ಸದಸ್ಯರಿಗೂ ಧನ್ಯವಾದಗಳು

ಕೋರವಂಗಲ ವಂಶವೃಕ್ಷದಲ್ಲಿ ನವಗ್ರಹಗಳಾದ ಚಿಕ್ಕಪ್ಪ ದೊಡ್ಡಪ್ಪಂದಿರ ಗಂಡು ಮಕ್ಕಳಲ್ಲಿ ನಡೆಯುವ ತಮಾಷೆ ಮಾತುಗಳಿಗೆ ಮಿತಿಯಿಲ್ಲ. ಅಂಥಹ ಸಾಗರದಷ್ಟು ನಡೆದ, ನೆಡೆಯುವ ಚರ್ಚೆಗಳನ್ನು, ವಿಷಯಗಳನ್ನು ಹೆಕ್ಕಿ ಹೆಕ್ಕಿ ಮೆಲುಕು ಹಾಕುತ್ತ ನಮ್ಮ ಭೇಟಿಗಳನ್ನು ಇನ್ನಷ್ಟು ಸುಮಧುರ ಕ್ಷಣಗಳನ್ನಾಗಿ ಮಾಡಿಕೊಳ್ಳುತ್ತೇವೆ. ಒಂಭತ್ತು ಗ್ರಹಗಳು ಪ್ರಚಂಡ ಪ್ರತಿಭೆಗಳು ಒಬ್ಬರಿಗೊಬ್ಬರು, ಒಬ್ಬರಿಂದ ಒಬ್ಬರು, ಒಬ್ಬರಿಗಾಗಿ ಒಬ್ಬರು ಜೊತೆ ನಿಲ್ಲುತ್ತೇವೆ. ನಮ್ಮ  ಹಿಂದಿನ ಹಾಗು ಮುಂದಿನ ಪೀಳಿಗೆಗೆ ಸೇತುವಾಗಿ ನಿಲ್ಲುವ ನಾವುಗಳು ನಮ್ಮ ಮಕ್ಕಳಿಗೆ ಒಂದು  ಸಂಸ್ಕಾರದ ಹಾದಿಯನ್ನು ತೋರಬೇಕು ಅನ್ನುವುದಷ್ಟೇ ನಮ್ಮ ಕಳಕಳಿ.
ಕೊರವಂಗಲ ಕುಟುಂಬದ ನವಗ್ರಹಗಳು!

ಇಂತಹ ಒಂದು ಸುಮಧುರ ಚಟಾಕಿಗೆ ಪ್ರೇರೇಪಣೆ ಸಿಕ್ಕಿದ್ದು ಇಹಲೋಕ ತೊರೆದ ಮೇಲೆ ಯಮಲೋಕದಲ್ಲಿ ನಡೆಯುವ ಕೆಲವು ಪ್ರಸಂಗಗಳು. ಈ ಲೇಖನದಲ್ಲಿ ಬರುವ ಮಾತುಗಳು ಎಲ್ಲಾ ನವಗ್ರಹಗಳದ್ದು. ಸಾಂಧರ್ಭಿಕವಾಗಿ ರುಚಿಗೆ ಬೇಕಾದ ಮಸಾಲೆ ಜೋಡಿಸುವ ದುಸ್ಸಾಹಸಕ್ಕೆ ಕೈ ಹಾಕಿದ್ದು ಮಾತ್ರ ….. ಹೇ ಹೇ ಹೇ!!!

******

ಯಮಾಲಯದಲ್ಲಿ ಗಿಜಿ ಗಿಜಿ ಗುಜು ಗುಜು.. ಭೂಲೋಕದಿಂದ ರವಾನೆಯಾದ ಎಷ್ಟೋ ಆತ್ಮಗಳು ಓಡಾಡುತ್ತಿದ್ದವು. ಅವುಗಳಿಗೆ ಸರಿಯಾದ ತೀರ್ಪು, ಶಿಕ್ಷೆ ಕೊಡುವ ಕೆಲಸ ಚಿತ್ರಗುಪ್ತ ಹಾಗೂ ಯಮಧರ್ಮನಿಗೆ ಇತ್ತು.. ಶಿಕ್ಷೆ ಕೊಟ್ಟಮೇಲೆ ಸರಿಯಾದ ಶಿಕ್ಷೆಗೆ ಗುರಿಪಡಿಸುವ ಗುರುತರ ಹೊಣೆ ಯಮಕಿಂಕರರ ಮೇಲೆ ಇತ್ತು. ಜೊತೆಯಲ್ಲಿ ಲೆಕ್ಕ ಪತ್ರದ ಪರಿಶೋಧನೆ ನಡೆದಿತ್ತು.

ಲೆಕ್ಕ ಪತ್ರದ ಅಧಿಕಾರಿ "ಚಿತ್ರಗುಪ್ತರೆ ಲೆಕ್ಕ ಪತ್ರ ಶೋಧಿಸುವಾಗ ಒಂದು ಗಮನಾರ್ಹ ವಿಚಾರ ಬೆಳಕಿಗೆ ಬಂತು. ನಿಮ್ಮ ಉಗ್ರಾಣದಲ್ಲಿ ಎಣ್ಣೆಯ ಬಳಕೆ ಅತಿಯಾಗಿದೆ. ಡಬ್ಬಗಳ ಗಟ್ಟಲೆ ಎಣ್ಣೆಯನ್ನು ಶೇಖರಿಸಿಟ್ಟಿದ್ದೀರಿ.. ಜೊತೆಯಲ್ಲಿ ಪ್ರತಿದಿನವೂ ಸಾವಿರಾರು ಲೀಟರ್ ಎಣ್ಣೆ ಬಳಕೆಯಾಗುತ್ತಿದೆ. ಎಲ್ಲಿ ನೋಡಿದರು ಎಣ್ಣೆಯ ಕಮಟು ವಾಸನೆ, ನೆಲವೆಲ್ಲಾ ಜಾರುತ್ತಿದೆ, ಬಾಣಲೆಗಳು ಸೀದು ಕಪ್ಪಾಗಿದೆ.. ಏನು ಇದಕ್ಕೆ ಕಾರಣ. ಗರಗಸಗಳು, ಲೋಹದ ಭರ್ಜಿಗಳು, ಗದೆಗಳು, ಕತ್ತಿಗಳು, ಚಾಕುಗಳು ಇವುಗಳನ್ನೂ  ಉಪಯೋಗಿಸದೆ  ಬಹಳ ಕಾಲವಾಗಿವೆ ಅಂತ ಅವು ತುಕ್ಕು ಹಿಡಿದಿರುವುದನ್ನು ನೋಡಿದರೆ ಅನ್ನಿಸುತ್ತಿದೆ. ಇವಕ್ಕೆ ಸರಿಯಾದ ಉತ್ತರ ಬೇಕೇ  ಬೇಕು. ಉತ್ತರಿಸದೆ ಹೋದರೆ ಯಮರಾಜನ ಬಳಿ ಹೋಗುತ್ತೇವೆ!

"ಅಯ್ಯೋ ಅವರ ಹತ್ತಿರ ಹೋಗ್ತೀರಾ ಹೋಗಿ.. ಅವರಿಗೆ ತಲೆ ಕೆಟ್ಟು ಹೋಗಿದೆ.. ಯಾಕೆ  ಹೀಗೆ ಅಂತ ಅವರಿಗೂ ಅರ್ಥವಾಗಿಲ್ಲ.. ಕೋಣನ ಸಮೇತ ಹೋಗುತ್ತಾ ನಮಗೆ ಹೇಳಿದರು ಈ ಲೆಕ್ಕ ಪತ್ರದ ಪರಿಶೋಧನೆ ಮುಗಿದ ಮೇಲೆ ನನಗೆ ಕರೆ ಮಾಡಿ ಅಲ್ಲಿಯ ತನಕ ನಾನು ತಲೆ ಮರೆಸಿಕೊಂಡು ಇರುತ್ತೇನೆ ಎಂದು"

"ಏನಪ್ಪಾ ಇದು ಏನು ಹೇಳ್ತಾ ಇದ್ದೀರಾ.. ಅಂದ್ರೆ ಎಲ್ಲೋ ಏನೋ ತಪ್ಪಾಗಿದೆ.. ನಿಮ್ಮ ಸಂವಿಧಾನದ ಕಡತವನ್ನು ಪರಿಶೀಲಿಸಬೇಕು. ಯಾಕೆ ಒಂದೇ ತರಹದ ಪದಾರ್ಥ ಬಳಕೆಯಾಗುತ್ತಿದೆ ಎಂದು.. ಆ ಕಡತವನ್ನು ತರಿಸಿ ಚಿತ್ರಗುಪ್ತರೆ"

"ಸರಿ ಸ್ವಾಮೀ"

ಚಿತ್ರಗುಪ್ತರು ಕಡತವನ್ನು ತರುವಷ್ಟರಲ್ಲಿ ಯಮ ಲೋಕವನ್ನು ಒಮ್ಮೆ ನೋಡಿಬರಲು ಅಧಿಕಾರಿಗಳು ಹೊರಟರು…

ಅಲ್ಲಿ ಒಂದು ದೃಶ್ಯವನ್ನು ಕಂಡು ಅವಕ್ಕಾದರು…

ಶಿಕ್ಷೆಗೆ ಗುರಿಯಾಗಿದ್ದ ಆತ್ಮಗಳು ರಭಸವಾಗಿ ಓಡುತ್ತಾ, ದಾರಿಗೆ  ಅಡ್ಡ ಬಂದವರನ್ನು ತಳ್ಳುತ್ತಾ, ದೊಡ್ಡ ದೊಡ್ಡ ಸಾಲೆ ಇದ್ದರೂ, ಓಡುತ್ತಾ, ಓಡುತ್ತಾ, ಎಣ್ಣೆ ಬಾಣಲೆಯೊಳಗೆ ಧುಮುಕಿ ಹತಾತ್ ಮರೆಯಾಗುತ್ತಿದ್ದವು..

ಸ್ವಲ್ಪ ಸಮಯದ ನಂತರ ಏದುಸಿರು ಬಿಡುತ್ತಾ ಬಾಣಲೆಯಿಂದ ಹೊರಗೆ ಬಂದು  ಅಬ್ಬಾ ಅಂತು ನಮ್ಮ ಶಿಕ್ಷೆಯನ್ನು ಮುಗಿಸಿದೆವು..ಎಂದು ಎದೆ ಹಿಡಿದುಕೊಂಡು ಕಿಂಕಕರು ಕೊಟ್ಟ ಚೀಟಿ ಹಿಡಿದು  ಮುಂದಿನ ಜನ್ಮಕ್ಕೆ ಅಣಿಯಾಗ ತೊಡಗುತ್ತಿದ್ದವು.

"ಏನಿದು ವಿಚಿತ್ರ.. ಯಾಕೆ ಹಾಗೆ ಈ ಆತ್ಮಗಳು ದೆವ್ವ ಹಿಡಿದವರ ಹಾಗೆ ಓಡುತ್ತಿವೆ, ಮತ್ತು ಕಾದ ಎಣ್ಣೆ ಬಾಣಲೆಯಿಂದ ಹೊರಗೆ ಹೋಗುವಾಗ ಮೈಯೆಲ್ಲಾ ಸುಟ್ಟಿದ್ದರೂ ನೋವಿನಿಂದ ಚೀರದೆ, ನಸು ನಗುತ್ತಾ ಮುಂದಿನ ಜನ್ಮಕ್ಕೆ ಕಾದು ನಿಂತಿವೆ..   ಆಶ್ಚರ್ಯ .. ಪರಮಾಶ್ಚರ್ಯ!!!"

"ಚಿತ್ರಗುಪ್ತರೆ"  ಎಂದು ಕಿರುಚಿದರು.. "ಬೇಗ ಬನ್ನಿ ಇಲ್ಲಿ ಏನಿದು ಸೋಜಿಗ.. ಯಾಕೆ ಹೀಗೆ ನಡೆಯುತ್ತಿದೆ.. "

ಚಿತ್ರಗುಪ್ತ ಪೇಟ ತೆಗೆದು ತಲೆ ಕೆರೆದುಕೊಂಡು.. ಮತ್ತೆ ಪೇಟ ಹಾಕಿಕೊಂಡು..

"ಬನ್ನಿ ಬನ್ನಿ ನನಗೂ ಇದರ ಬಗ್ಗೆ ಮಾಹಿತಿ ಬೇಕಿತ್ತು.. ಇರಿ ಯಾವುದಾದರೂ ಓಡುತ್ತಿರುವ ಆತ್ಮವನ್ನು ಹಿಡಿದು ಕೇಳಿಯೇ ಬಿಡುತ್ತೇನೆ.. "

ಅದೇ ಹಾದಿಯಲ್ಲಿ ಒಂದು ಆತ್ಮ ಇನ್ನೊಂದು ಆತ್ಮಕ್ಕೆ ಡಿಕ್ಕಿ ಹೊಡೆದು ಬಿದ್ದು ಮತ್ತೆ ಎದ್ದು ಓಡಲು ಪ್ರಯತ್ನ ಪಡುತ್ತಿತ್ತು.. ಚಿತ್ರಗುಪ್ತರು ಆ ಬಿದ್ದ ಆತ್ಮವನ್ನು ಹಿಡಿದೆತ್ತಿ ನಿಲ್ಲಿಸಿ..

" ಎಲೈ ಆತ್ಮವೇ ಯಾಕೆ ಹೀಗೆ ಓಡುತ್ತಿರುವೆ..ಸವಿವರವಾಗಿ ಹೇಳು ಇಲ್ಲದೆ ಇದ್ದರೆ.. ನಿನಗೆ ಘನ ಘೋರ ಶಿಕ್ಷೆ ವಿಧಿಸಬೇಕಾಗುತ್ತದೆ.. "

"ಅಯ್ಯೋ ಚಿತ್ರಗುಪ್ತರೆ.. ಈಗ ನೀವುಗಳು ವಿಧಿಸಿರುವ ಶಿಕ್ಷೆಗಿಂತ  ಇನ್ನೇನು ಘೋರ ಶಿಕ್ಷೆ ಇರಲಾರದು… ಅಲ್ಲಿ ನೋಡಿ ಇನ್ನಷ್ಟು ಆತ್ಮಗಳು ಓಡಿ ಬರುತ್ತಿವೆ.. ಮೊದಲು ನನಗೆ ಜಾಗ ಬಿಡಿ "ಎಂದು ಹೇಳುತ್ತಾ ತಳ್ಳಿಕೊಂಡು ಓಡಿ ಹೋಗಿ ಎಣ್ಣೆ ಬಾಣಲೆಗೆ ದುಡುಂ ಎಂದು ಬಿದ್ದೇ ಬಿಟ್ಟಿತು!

ತಲೆ ಬಿಸಿಮಾಡಿಕೊಂಡ ಅಧಿಕಾರಿಗಳು, ಚಿತ್ರಗುಪ್ತರು ಇನ್ನು ತಡ ಮಾಡುವುದು ಸರಿಯಲ್ಲ ಎಂದು ಬಗೆದು.. ಸೀದಾ ಆತ್ಮಗಳು ಎದ್ದು ಬಿದ್ದು ಓಡುತ್ತಿರುವ ಆ ಜಾಗಕ್ಕೆ ಹೋದರು.. ಅಲ್ಲಿ ನೋಡಿ ಮತ್ತೆ ಗಾಬರಿಗೊಳ್ಳುವ ಸರದಿ ಚಿತ್ರಗುಪ್ತರು ಹಾಗು ಅಧಿಕಾರಿಗಳದ್ದಾಗಿತ್ತು..

ಅಲ್ಲಿ ಹೆಜ್ಜೆ ಇಡಲು ಜಾಗ ಸಾಲದಾಗಿತ್ತು.. .. ಅಲ್ಲಿನ ಅಧಿಕಾರಿಗಳನ್ನು ಭೇಟಿ ಮಾಡಿ ಚಿತ್ರಗುಪ್ತರು

"ನೋಡಿ ಸ್ವಾಮಿ ನಾವಿರೋದೆ ಹೀಗೆ… ಎನ್ನಬೇಡ.. ಯಾಕೆ ಹೀಗಾಯ್ತು.. "

"ಏನು ಮಾಡಲಿ ನಾನು ಹೇಗೆ ಹೇಳಲಿ..  ಯಮರಾಜರು  ಇಲ್ಲಿಗೆ ಬಂದ ಆತ್ಮಗಳ ಪಾಪ ಪುಣ್ಯ ಲೆಕ್ಕಾಚಾರ ಮಾಡಿ ಅವುಗಳಿಗೆ ಒಂದು ದಿನಕ್ಕೆ ೧೦ ಇತ್ತೀಚಿನ ಕನ್ನಡ ಚಿತ್ರಗಳನ್ನು ನೋಡಬೇಕೆಂಬ ಶಿಕ್ಷೆ ವಿಧಿಸಿದರು. ಇಲ್ಲವೇ ಎಣ್ಣೆಯ ಬಾಣಲೆಯೊಳಗೆ ಧುಮುಕಬೇಕು  ಆಜ್ಞೆ ಮಾಡಿದ್ದರು..    ಮೊದ ಮೊದಲು ಆನಂದವಾಗಿದ್ದ ಆತ್ಮಗಳು ಹತ್ತೇನು ಹದಿನೈದು ಚಿತ್ರಗಳನ್ನು ದಿನವೆಲ್ಲ ನೋಡುತ್ತಿದ್ದವು.. ಕ್ರಮೇಣ ತಲೆ ಕೆರೆದುಕೊಳ್ಳಲು ಶುರುಮಾಡಿದವು..ಮುಖವನ್ನು ಪರಚಿಕೊಂಡವು.. ಬಾಯಿ ಬಾಯಿ ಬಡಿದು ಕೊಂಡವು, ತಲೆಗೂದಲನ್ನು ಕಿತ್ತು ಕೊಂಡವು… "

"ಯಾಕೆ ಏನಾಯಿತು?"

"ಕೆಟ್ಟ ಕೆಟ್ಟ ಸಾಹಿತ್ಯ, ದ್ವಂದ್ವಾರ್ಥ ಸಂಭಾಷಣೆ.. ಹೊಡಿ ಬಡಿ ಚಚ್ಚು ಕೊಲ್ಲು ಎನ್ನುವ ಸಿದ್ಧಾಂತ ಬೀರುವ ರಕ್ತ ಸಿಕ್ತ ಚಿತ್ರಗಳು.. ಮಂಗನ ಮುಸುಡಿ ಇರುವ ತಾರಾಬಳಗ..  ಬರೆದಿದ್ದೆ ಸಾಹಿತ್ಯ ಬಾರಿಸಿದ್ದೆ ಸಂಗೀತ ಎನ್ನುವ ಮಂಡೆ ಬಿಸಿ ಇರುವ ಮಂದಿ,  ಹಿಂದೆ ಮುಂದೆ ನೋಡದೆ.. ದುಡ್ಡು ಯಾರು ಹಾಕುತ್ತಾರೋ ಅವರೇ ನಾಯಕ ನಾಯಕಿಯರು ಅಂತ ನಿರ್ಧರಿಸೋ ಚಿತ್ರಗಳು.. ಇವನೆಲ್ಲಾ ನೋಡಿ ಬೇಸತ್ತ ಆತ್ಮಗಳು.. ದಿನಕ್ಕೆ ಹತ್ತು ಸಿನಿಮಾಗಳನ್ನು ನೋಡುವ ಬದಲು.. ಎಣ್ಣೆ ಬಾಣಲಿಯ ಶಿಕ್ಷೆಯೇ ವಾಸಿ ಎಂದುಕೊಂಡು ಅಲ್ಲಿಗೆ ಹೋಗಿ ಬೀಳುತ್ತಿವೆ.. ಅಲ್ಲಿ ನೋಡಿ ಬಲವಂತವಾಗಿ ಕುರ್ಚಿಗೆ ಕಟ್ಟಿ ಹಾಕಿದರೂ.. ಉರುಳಿಕೊಂಡು ಕೊಂಡು ಹೋಗಿ ಬಿಸಿ ಬಿಸಿ ಎಣ್ಣೆಯನ್ನು ಮೈ ಮೇಲೆ ಸುರಿದುಕೊಳ್ಳುತ್ತಿವೆ.. ಮೊನ್ನೆ ಒಂದು ಆತ್ಮ ನನಗೆ ಎಣ್ಣೆ ಬಾಣಲಿಯಲ್ಲಿ ಬೀಳಲು ಒಂದೇ ಒಂದು ಅವಕಾಶ ಕೊಡಿ.. ಎಂದು ಚೀರಾಡುತ್ತಿತ್ತು.. ನಾ ಬಂದೆ ನಾ ಓಡ್ದೆ . ನಾ ಬಿದ್ದೆ ಎನ್ನುತ್ತಾ ಅಷ್ಟು ಮೇಲೆ ಹಾರಿ ದುಡುಂ ಅಂತ ಬಾಣಲೆಗೆ ಬಿದ್ದು ಬಿಡ್ತು.. ನೋಡಿ ಆ ಕಾದ ಎಣ್ಣೆ ಹಾರಿ ನನ್ನ ಕೈ ಕೂಡ ಸುತ್ತು ಬಿಟ್ಟಿದೆ.. " ಎಂದು ಸುಟ್ಟ ಕೈ ತೋರಿಸಿದರು ಅಲ್ಲಿನ ಅಧಿಕಾರಿಗಳು.. ಪಾಪ ಕೈ ಕೆಂಪಾಗಿ ಬೊಬ್ಬೆ ಬಂದು ಬಿಟ್ಟಿತ್ತು..

"ಓಹ್ ಹಾಗೋ.. ಮತ್ತೆ ಈ ಪಾಟಿ ಚಿತ್ರಗಳನ್ನೇಕೆ ತರಿಸಿದ್ದೀರಿ.. ನಿಲ್ಲಿಸಬಾರದೆ.. "

" ಇಲ್ಲಾ ಸ್ವಾಮೀ.. ನರಕಲೋಕದಲ್ಲಿ ಮಲ್ಟಿಪ್ಲೆಕ್ಸ್ ಇದೆ ಅಂಥಾ ಗೊತ್ತಾದ ತಕ್ಷಣ ಸ್ಯಾಟಲೈಟ್ ಹಕ್ಕು ಹೊಂದಿರುವವರು ಸೀದಾ ಇಲ್ಲಿಗೆ ಕಳಿಸಿಬಿಟ್ಟಿದ್ದಾರೆ.. ಬೇರೆ ದಾರಿ ಇಲ್ಲದೆ ಇದನ್ನೆಲ್ಲಾ ಶೇಖರಿಸಿ ಇಟ್ಟುಕೊಂಡಿದ್ದೇವೆ… "

ಸರಿ ಸರಿ ವಿಚಿತ್ರ ನಿಮ್ಮದು.. ನವೆಂಬರ್ ೩೧ ಹತ್ತಿರ ಬರುತ್ತಿದೆ ಬ್ಯಾಲೆನ್ಸ್ ಶೀಟ್ ಮುಗಿಸಬೇಕು.. ಹಾಗಾಗಿ ಇವಕ್ಕೆಲ್ಲ ನೋಟ್ ಬರೆದು ಯಮರಾಜರಿಗೆ .. ಮತ್ತು ಇಲ್ಲಿಯ ಬೋರ್ಡ್ ಆಫ್ ಡೈರೆಕ್ಟರ್ಸ್ ಬ್ರಹ್ಮ ವಿಷ್ಣು ಮಹೇಶ್ವರ ಇವರಿಗೆ ಒಂದು ಕಾಪಿ ಕಳಿಸುತ್ತೇನೆ.. ಅವರೆಲ್ಲ ಸಹಿ  ಮಾಡಿದ ಮೇಲೆ ಕುಬೇರನ ಬಳಿ ಬ್ಯಾಲೆನ್ಸ್ ಶೀಟ್ ಫೈಲ್ ಮಾಡಬೇಕು ಆಯ್ತಾ.. ಯಮಧರ್ಮ ರಾಜನಿಗೆ ತಿಳಿಸಿಬಿಡಿ… ಹೊತ್ತಾಯಿತು ನಾವು ಬರುತ್ತೇವೆ.. ಹಾಗೆ ಆಡಿಟ್ ನೋಟ್ ನಲ್ಲಿ ಕನ್ನಡದಲ್ಲಿ ಒಳ್ಳೆ ಚಿತ್ರಗಳನ್ನು ಆದಷ್ಟು  ಹೆಚ್ಚು ತಯಾರಿಸಿ   ಲೋಕದಲ್ಲಿ ಬಾಣಲೆ, ಎಣ್ಣೆಯ ಬಳಕೆಯನ್ನು ಕಡಿಮೆ ಮಾಡಿ ಅಂತ ಬರೆಯುತ್ತೇವೆ..  ಶುಭವಾಗಲಿ"

ಸರಿ ಸ್ವಾಮೀ ಹಾಗೆಯೇ ಆಗಲಿ.. ನಿಮಗೂ ಶುಭವಾಗಲಿ"

Sunday, October 20, 2013

ಆತ್ಮ ವಿಶ್ವಾಸ......... or ವಿಶ್ವಾಸದ ಆತ್ಮ......!

"ನಾನಾರು ಕಶ್ಯಪ ಬ್ರಹ್ಮನ ಮಗ
ದಿತಿ ಗರ್ಭ ಸಂಜಾತ
ಚತುರ್ಮುಖ ಬ್ರಹ್ಮನ ಮೊಮ್ಮಗ
ವಿಧಾತನಿಂದ ವಿಧಿಬರಹವನ್ನೇ ಬದಲಾಯಿಸಿ
ಮರಣವನ್ನೇ ಮೆಟ್ಟಿ ನಿಂತ ಮಹಾವೀರ
ಅದಿತಿಯ ಮಕ್ಕಳ ಅಟ್ಟಹಾಸವನ್ನು ಸುಟ್ಟು
ಆದಿತ್ಯನ ಅಟ್ಟಹಾಸವನ್ನು ಮಟ್ಟಹಾಕಿದ ಸಾಹಸಿ
ಅತಲ ವಿತಲ ಸುತಲ ತಲಾತಲ ರಸಾತಲ ನಿರಾತಲ ಪಾತಾಳ ಲೋಕಗಳನ್ನು ಪಾದದಡಿದಲ್ಲಿಟ್ಟುಕೊಂಡ ಪರಾಕ್ರಮಶಾಲಿ
ಅಡಿಯಿಟ್ಟರೆ ಬಿರಿಯುವುದು ಭೂಮಿ ತಲೆಯೆತ್ತಲು ಬೆಚ್ಚುವುದು ಬಾನು ಕೈಯೆತ್ತಲು ನಡುಗುವುದು ಸೃಷ್ಠಿ
ಚತುರ್ಮುಖನ ಸೃಷ್ಠಿಯೇ ನನ್ನ.... "

"ಮಗು ಹಿರಣ್ಯ... !ಏಕಪ್ಪ ಇಷ್ಟು ಕಳವಳ?... ಸದಾ ಆತ್ಮ ವಿಶ್ವಾಸ ತುಂಬಿತುಳುಕುತ್ತಿದ್ದ ನಿನ್ನ ಮನಸಲ್ಲಿ ಏಕೆ ಈ ಅನುಮಾನ. ಏನಾಯಿತು ಕಂದಾ?"

ನಿಧಾನವಾಗಿ ತಲೆಯೆತ್ತಿದ  ಹಿರಣ್ಯಕಶಿಪು ನೋಡುತ್ತಾನೆ...  ಪಿತಾಮಹ ನಿಂತಿದ್ದಾನೆ

"ತಾತ.. ಯಾಕೋ ಅರಿವಿಲ್ಲ ಕೆಲವು ದಿನಗಳಿಂದ ನನ್ನ ಮೇಲೆಯೇ ನನಗೆ ಅನುಮಾನ ಹೆಚ್ಚುತ್ತಿದೆ.. ನೀನು ಕೊಟ್ಟ ವರಗಳು.. ನಾ ತಪ ಮಾಡಿಗಳಿಸಿದ್ದ ಶಕ್ತಿ, ಆತ್ಮ ವಿಶ್ವಾಸ, ಮನೋಬಲ ಸೂರ್ಯನಿಗೆದರು ಕರಗುವ ಮಂಜಿನಂತೆ ಕರಗಿ ಹೋಗುತ್ತಿದೆ. ಸರಿಯಾಗಿ ರಾಜ್ಯಾಭಾರ ಮಾಡಲು ಆಗುತ್ತಿಲ್ಲ. ಹೊಸ ಹೊಸ ಶಾಸನಗಳನ್ನು ಬರೆಯಲು ಆಗುತ್ತಿಲ್ಲ.. ನನ್ನ ಅಭಿಮಾನಿ ದೇವರುಗಳ ಪತ್ರಗಳನ್ನು, ಸಂದೇಶಗಳನ್ನು ಓದಲಾಗುತ್ತಿಲ್ಲ... ಮನಸ್ಸು ಯಾವಾಗಲೂ "ಏನು ಮಾಡಲಿ ನಾನು ಏನು ಹೇಳಲಿ.. " ಎಂಬ ಹಾಡನ್ನೇ ಹಾಡುತ್ತಿರುತ್ತದೆ.. ನಗುವೆಂಬ ಆತ್ಮವಿಶ್ವಾಸದ ಹೂವು ಸದಾ ನನ್ನಲ್ಲಿ ಅರಳುತಿತ್ತು.. ಆದರೆ ಇತ್ತೀಚೆಗೆ ಯಾಕೋ ಸಾಧ್ಯವಾಗುತ್ತಿಲ್ಲ.. ಯಾಕೆ ಪಿತಾಮಹ.. ಸದಾ ನಾ ಹೇಳಲು ಬಯಸುತ್ತಿದ್ದ "ನಾ ನಿರುವುದೇ ನಿಮಗಾಗಿ" ಹಾಡಿನಲ್ಲಿ ನಾ ತೋರುತ್ತಿದ್ದ ಆತ್ಮವಿಶ್ವಾಸ ಪದಗಳು ತೂಕ ಕಳೆದುಕೊಂಡು ತೂರಾಡುತ್ತಿವೆ... ಸೃಷ್ಠಿಕರ್ತನಾದ  ನೀನೇ ಇದಕ್ಕೆ ಒಂದು ಪರಿಹಾರ ನೀಡಬೇಕು"

"ಮಗು.. ನಿನಗೆ ಒಂದು ಪುಟ್ಟ ಕಥೆ ಹೇಳುತ್ತೇನೆ ಕೇಳು"
--------------------------------
ಹತ್ತಿಗೂ ಉಪ್ಪಿಗೂ ಬಹಳ ಸ್ನೇಹ.. ಒಬ್ಬರನ್ನೊಬ್ಬರು ಬಿಟ್ಟಿರುತ್ತಿರಲಿಲ್ಲ.. ಎಲ್ಲಾ ಕಾಲದಲ್ಲಿಯೂ ಉಪ್ಪು ಮತ್ತು ಹತ್ತಿ ಎಲ್ಲರಿಗೂ ಬೇಕಾಗಿದ್ದವು.. ಹೀಗಿದ್ದಾಗ ಒಮ್ಮೆ ಅವರಿಬ್ಬರಲ್ಲಿ ಯಾರು ಹೆಚ್ಚು ಎನ್ನುವ ಒಂದು ಹುಚ್ಚು ಅನುಮಾನ ಕಾಡತೊಡಗಿತು.

"ತಾಯಿಗಿಂತ ಶ್ರೇಷ್ಠ ಬಂಧುವಿಲ್ಲ .. ಉಪ್ಪಿಗಿಂತ ರುಚಿ ಬೇರೆಯಿಲ್ಲ" ಎನ್ನುವ ಮಾತಿದೆ.. ಈ ಮಾತಿನಂತೆ ಉಪ್ಪು ನಾ ಶ್ರೇಷ್ಠ ಎಂದು ಕುಣಿಯಿತು..

"ತಾಯಿಯಂತೆ ಮಗಳು ನೂಲಿನಂತೆ ಸೀರೆ" ಎನ್ನುವ ಮಾತಿದೆ ಅಂತ ಹತ್ತಿ ಬೀಗಿತು..

ಇಬ್ಬರ ವಾದ ವಿವಾದ ಆಲದ  ಮರದ ಹಾಗೆ ಬೆಳೆಯಿತು.. ಸಿಕ್ಕಲ್ಲೆಲ್ಲ ಜಗಳಗಳು ಮನಸ್ತಾಪಗಳು ಬೇರು ಬಿಟ್ಟು ಬೆಳೆಯಲು ಶುರುವಾಯಿತು..

ಇವರ ವಾಗ್ಯುದ್ಧ ಎಲರಿಗೂ ಅರ್ಥವಾಗತೊಡಗಿತು.. ಎರಡೂ ನಾ ಹೆಚ್ಚು ತಾ ಹೆಚ್ಚು ಅಂಥಾ ಅಸಹಾಕಾರ ನೀಡುತ್ತಾ ಹೋಯಿತು. ಇದರ ಪರಿತಾಪ ಭುವಿಯ ಎಲ್ಲರಿಗೂ ಸುಡಲು ಶುರುವಾಯಿತು ಕಾರಣ ಉಪ್ಪಿಲ್ಲದೇ ಅಡಿಗೆ ರುಚಿಸುತ್ತಿರಲಿಲ್ಲ.. ಹತ್ತಿಯಿಲ್ಲದೆ ಭುವಿಯ ಮಳೆಗಾಲ, ಬೇಸಿಗೆ ಕಾಲ, ಚಳಿಗಾಲ ಕಳೆಯುವುದು ಅಸಾಧ್ಯವಾಗತೊಡಗಿತು.

ಎಲ್ಲರೂ ಕೃಷ್ಣನ ಮೊರೆ ಹೋದರು.. ಕೃಷ್ಣನಿಗೆ ಎಲ್ಲವೂ ತಿಳಿದಿತ್ತು.. ತನ್ನ ಟ್ರೇಡ್ ಮಾರ್ಕ್ ನಗು ಬೀರುತ್ತಾ ಕೊಳಲಲ್ಲಿ "ಬಿದಿರಿನ ಕಾಡಿನಲ್ಲಿ ಕೂಗಿದೆ ನಿನ್ನ್ ಹೆಸರ .. ಬಿದಿರೆಲ್ಲ ತಾಯಿಯಾಯ್ತು ಯಾವ ಮಾಯೆ... " ಎಂದಾಗ... ಕೃಷ್ಣ ಸುಂದರ ಯಶೋಧೆಯ ರೂಪದಲ್ಲಿ ಕಾಣಿಸಿಕೊಂಡ...

ಜನರೆಲ್ಲಾ.. ನಿಟ್ಟುಸಿರು ಬಿಟ್ಟರು..  ನಮ್ಮ ಕೃಷ್ಣ ಬಂದಾ.. ಈ ಸಮಸ್ಯೆಗೆ ಪರಿಹಾರ ಶತಸಿದ್ಧ.. ನಡೀರಪ್ಪ ನಮ್ಮ ನಮ್ಮ ಕೆಲಸ ಮಾಡೋಕೆ ಹೋಗೋಣ ಅಂತ ಜಾಗ ಖಾಲಿ ಮಾಡಿದರು.

ಯಶೋಧೆ ರೂಪದಲ್ಲಿದ್ದ ಕೃಷ್ಣ ಸೀದಾ ಹತ್ತಿ ಮತ್ತು ಉಪ್ಪಿನ ಬಳಿ ಸಾಗಿದ.. ರಾಶಿ ರಾಶಿ ಉಪ್ಪು, ಹತ್ತಿ ಬೆಟ್ಟಗಳು ಹಾಯಾಗಿ ಮಲಗಿದ್ದವು.. ಕೃಷ್ಣ ಬಂದದ್ದನ್ನು ನೋಡಿ

ಎರಡು ಕೈ ಮುಗಿದು ನಮಸ್ಕರಿಸಿದವು.. ಏನೋ ಹೇಳಲು ಉಪ್ಪು ಬಾಯಿ ತೆಗೆಯಿತು.. ಹತ್ತಿ ಹೇಗೆ ಹೇಳಲಿ ಎಂದು ತಲೆ ಕೆರೆದುಕೊಳ್ಳಲು  ಶುರು ಮಾಡಿತು ...

ಇಬ್ಬರಿಗೂ ಸನ್ನೆ ಮಾಡಿದ ಯಶೋದೆ ರೂಪದ ಕೃಷ್ಣ...

"ಉಪ್ಪೆ ನೀನು ಸೀದಾ ಹೋಗಿ ಆ ಯಮುನೆ ನೀರಿನಲ್ಲಿ ಧುಮುಕಿ ಎದ್ದು ಬಾ"

ಏನೂ ಯೋಚನೆ ಮಾಡದೆ ಸೀದಾ ತುಂಬಿ ಹರಿಯುತ್ತಿದ್ದ ನದಿಗೆ ಉಪ್ಪು ... ದುಡುಂ ಎಂದು ಬಿದ್ದಿತು.. ಎದ್ದು ಬರಲು ಪ್ರಯತ್ನ ಮಾಡಿತು.. ಆದರೆ ಮೊದಲಿನ ರೂಪವಿರದ ಕಾರಣ.. ತೂರಾಡುತ್ತಾ, ಕಷ್ಟಪಟ್ಟು ಮೇಲೆ ಬರಲು ಶ್ರಮಿಸಿ ಕಡೆಗೆ ನೀರಿನ ರೂಪದಲ್ಲೇ ಮೇಲೆ ಬಂದಿತು..

ಹತ್ತಿ ಉಪ್ಪಿನ ವ್ಯವಸ್ಥೆ ಕಂಡು ಹಲ್ಲು ಬಿರಿಯುತ್ತಾ ನಿಂತಿತ್ತು.. ಯಶೋಧೆ ಹತ್ತಿಗೆ

"ಹತ್ತಿ ಈಗ ನಿನ್ನ ಸರದಿ.. "

ತಲೆ ಕೂದಲು ರಜನಿಕಾಂತನ ಸ್ಟೈಲ್ ನಲ್ಲಿ ಸರಿಮಾಡಿಕೊಂಡು... ಸ್ಪ್ರಿಂಗ್ ಬೋರ್ಡ್ ಮೇಲಿಂದ ಬೀಳುವಂತೆ ಚಕ್ರಾಕಾರವಾಗಿ ಯಮುನೆಗೆ ಬಿದ್ದಿತು.  ಸ್ವಲ್ಪ ದೂರ ತೇಲಾಡಿಕೊಂಡು ಸಾಗಿದ ಹತ್ತಿ..  ತೊಪ್ಪೆಯಾದಮೇಲೆ.. ಸಪೂರವಾಗಿದ್ದ ತನ್ನ ಮೈ ಭಾರವಾಗತೊಡಗಿತು.. ಅಲ್ಲೇ ಇದ್ದ ಬಂಡೆ, ಮರದ ರೆಂಬೆ ಕೊಂಬೆಗಳ ಸಹಾಯದಿಂದ ಪ್ರಯಾಸಪಟ್ಟು ದಡಕ್ಕೆ ಬಂದು ಉಸ್ಸಪ್ಪ ಎಂದು ಬಿದ್ದು ಬಿಟ್ಟಿತು..

ಉಪ್ಪು ಮತ್ತು ಹತ್ತಿ... ಎರಡು  ಜೋಲು ಮುಖ ಹಾಕಿಕೊಂಡು ಒಬ್ಬರಿಗೊಬ್ಬರ ಮುಖ ನೋಡಲಾರದೆ ತಲೆ ತಗ್ಗಿಸಿಕೊಂಡು ಕೂತವು.

ಯಶೋಧೆ ರೂಪದಲ್ಲಿದ್ದ ಕೃಷ್ಣ ಕೊಳಲು ನುಡಿಸಿಕೊಂಡು ಮರೆಯಾದ..  !

**********
"ತಾತ ಇದೇನು ಕಥೆ.. ಮುಂದೆ ಹೇಳು ತಂದೆ.. "

"ಮಗು ನೀನು ಹೇಳು.. ಈ ಕಥೆ ಕೇಳಿದ ಮೇಲೆ ನಿನ್ನ ಮನದಲ್ಲಿ ಓಡುತ್ತಿರುವ ಭಾವಗಳು.. ಇದರ ಬಗ್ಗೆ ಹೇಳು"

"ಪಿತಾಮಹ....  ಹತ್ತಿ ನೀರಲ್ಲಿ ನೆನೆದಾಗ ಆ ಕ್ಷಣಕ್ಕೆ ಭಾರವಾಗುತ್ತದೆ.. ಹಾಗೆಯೇ  ಕೆಲಸದ ಒತ್ತಡಗಳು, ಏನು ಮಾಡಬೇಕೆಂದು ಅರಿಯದೆ ತೋಳಲಾಡುವುದು ಈ ಪರಿಸ್ಥಿತಿಯಲ್ಲಿ ಮನಸ್ಸು ನೆಂದ ಹತ್ತಿಯಂತೆಯೇ ಭಾರವಾಗಿರುತ್ತದೆ.. ಅಲ್ಲಿಂದ ಕೆಲ ಕಾಲ ಹೊರಗೆ ಬಂದು ಸಮಾಧಾನದಿಂದ ನೋಡಿದಾಗ, ಅರಿತಾಗ, ಚಿಂತಿಸಿದಾಗ ಮನಸ್ಸು ಹತ್ತಿಯ ಹಾಗೆಯೇ ಅರಳುತ್ತದೆ.. "

"ಸೂಪರ್ ಕಂದಾ ಇಷ್ಟವಾಯಿತು ನಿನ್ನ ವಿಶ್ಲೇಷಣೆ.. ಮುಂದೆ ಉಪ್ಪಿನ ಕಥೆ"

"ತಾತ.. ಇತರರ ಕಷ್ಟ ಸುಖಃಗಳಲ್ಲಿ ಮಿನುಗಿ ಮಿಂದು ಕರಗಿದಾಗ ಹಲವು ಬಾರಿ ನಮ್ಮತನವನ್ನು ನಾವು ಕಳೆದುಕೊಳ್ಳುತ್ತೇವೆ.. ಅವರೊಂದಿಗೆ ನಾವು ಬೆರೆತುಹೊಗುತ್ತೇವೆ.. ನಮ್ಮ ಅಸ್ತಿತ್ವವೇ ಕಾಣುವುದಿಲ್ಲ ಆದ್ರೆ ಆ ಕ್ಷಣದಲ್ಲಿ ನಾವಿಲ್ಲದೇ ಹೋದರೆ ಪರಿಸ್ಥಿತಿ ತಿಳಿಯಾಗುವುದಿಲ್ಲ.. ಅಲ್ಲಿ ನಮ್ಮತನ ಕಳೆದುಕೊಂಡರೂ ನಮ್ಮ ಮನಸ್ಸಿನ ಸಾರ ಬೆರೆತಾಗ ಸಿಗವ ಆನಂದವೇ ಬೇರೆ. ಉಪ್ಪು ನೀರಲ್ಲಿ ನೆಂದು ಕರಗಿತು.. ತನ್ನ ತನವನ್ನು ಕಳೆದುಕೊಂಡಿತು. ಆದರೆ ತಾನು ಬೆರೆತ ಸ್ಥಳವನ್ನು ತನ್ನ ಸ್ವಭಾವತಃ ಗುಣದಿಂದ ಬದಲಾಯಿಸಿತು. ಇಲ್ಲಿ ಗಮನದಲ್ಲಿಡಬೇಕಾದ ಅಂಶ ಉಪ್ಪು ತನ್ನ ಮಿತಿಯನ್ನು ಕಾಯ್ದುಕೊಳ್ಳಬೇಕು ಇಲ್ಲದೆ ಹೋದರೆ ತಾನು ಬೆರೆತ ಜಾಗವೇ ತನಗೆ ಪರಕೀಯವಾಗಿಬಿಡುತ್ತದೆ"

"ನಿಜ ಕಂದಾ ಇಷ್ಟವಾಯಿತು ನಿನ್ನ ಮಾತುಗಳು.. ಈಗ ಹೇಳು ಉಪ್ಪು ಹೆಚ್ಚೋ ಹತ್ತಿ ಹೆಚ್ಚೋ"

"ಚತುರ್ಮುಖನೆ.. ಉಪ್ಪಿನ ಗುಣ ಹತ್ತಿಗೆ ಬರಬೇಕು.. ಹಾಗೆಯೇ ಹತ್ತಿಯ ಗುಣ ಉಪ್ಪಿಗೆ ಇರಬೇಕು.. "

"ಬಿಡಿಸಿ ಹೇಳು ಮಗು"

"ಎಲ್ಲಾ ಬಲ್ಲ ನೀನು ನನ್ನ ಬಾಯಿಂದ ಕೇಳುವ ಬಯಕೆಯೇ.. ಇರಲಿ ಇರಲಿ.... ಉಪ್ಪು ಬೇರೆಯವರ ಜೊತೆಯಲ್ಲಿ ಬೆರೆಯಬೇಕು...  ಆದರೆ ಪೂರ ಕರಗಿ ಹೋಗಬಾರದು.. ಅಂದ್ರೆ ತನ್ನ ತನವನ್ನೇ ಮರೆತು.. ಕರಗಿ ಹೋದಾಗ ಮತ್ತೆ ಮೊದಲಿನ ಸ್ಥಿತಿಗೆ ಬರಲಾರದಷ್ಟು ದೂರ ಹೋಗಬಾರದು.  ತನ್ನ ಅರಿವಿನ ಮಿತಿ ಇರಬೇಕು.. ಕರಗಿದರು ಮತ್ತೆ ಸಹಜ ಸ್ಥಿತಿಗೆ ಮರಳಲು ಬೇಕಾಗಿರುವುದು ಆತ್ಮ ವಿಶ್ವಾಸ.  ಹತ್ತಿ ನೀರಲ್ಲಿ ನೆನೆಯಿತು.. ಭಾವನೆಗಳಿಗೆ ಮರುಗಿತು, ಆದರೆ ಪರಿಸ್ಥಿತಿಯ ಜೊತೆ ಕರಗಲಿಲ್ಲ.. ಆದರೆ ತನ್ನ ಉಪಸ್ಥಿತಿಯಿಂದ ವಾತಾವರಣವನ್ನು ನಿಭಾಯಿಸುವ ಮನಶಕ್ತಿ ಕೊಟ್ಟಿತು. ಮತ್ತೆ ಅವಕಾಶ ಸಿಕ್ಕಿದಾಗ ತನ್ನ ಯಥಾಸ್ಥಿತಿಗೆ ಮರಳಿತು. ಅಂದರೆ ಇದ್ದೂ ಇದ್ದೆ ಇಲ್ಲದೆಯೂ ಇದ್ದೆ ಎನ್ನುವ ಉದಾತ್ತ  ಭಾವ. ಇಲ್ಲಿ ತನ್ನ ಮಿತಿಯನ್ನು ಅರಿತ ಹತ್ತಿ ಬಲು ದೂರ ಸಾಗದೆ ಮತ್ತೆ ಮರಳಿ ತನ್ನ ಯಥಾಸ್ಥಿತಿಗೆ ಮರಳಿತು. ಇಲ್ಲಿ ಕಲಿಯಬೇಕಾದ್ದು ಎಲ್ಲದರಲ್ಲಿಯೂ, ಎಲ್ಲರಲ್ಲಿಯೂ ನಮ್ಮ ಪರಿಸ್ಥಿತಿಯ ಮಿತಿ ಅರಿತು ಬೆರೆಯಬೇಕು ಹಾಗೆಯೇ ನಮ್ಮ ಮೂಲರೂಪಕ್ಕೆ ಧಕ್ಕೆ ಬಾರದ  ಹಾಗೆ ಇರಬೇಕು.

"ಮುಂದೆ"

"ಉಪ್ಪಿನಲ್ಲಿ ಆತ್ಮ ವಿಶ್ವಾಸ ಕಂಡರೆ.. ಹತ್ತಿಯಲ್ಲಿ ವಿಶ್ವಾಸದ ಆತ್ಮವನ್ನು ಕಂಡೆ.. .. ಹಾಗಾಗಿ ಎರಡು ಹೆಚ್ಚೇ ಎರಡರದ್ದು ಸಮಾನ ತೂಕ.. "

"ಈಗ ನಿನ್ನ ಸಮಸ್ಯೆಗೆ ಉತ್ತರ ಸಿಕ್ಕಿತೆ"

"ಹೌದು ಪಿತಾಮಹ.. ನಾನು ಶಾಪಗ್ರಸ್ತನಾಗಿ ಈ ಜನ್ಮ ತಳೆದಿದ್ದರೂ.. ನನ್ನ ಮೂಲರೂಪ ವೈಕುಂಠವಾಸಿಯ ಚರಣಕಮಲದಲ್ಲಿಯೇ.. ಉಪ್ಪಿನ ಹಾಗೆ ನಾ ಇಲ್ಲೇ ಕರಗಿ ಹೋಗಬಾರದು.. ಅಂದರೆ ಕರ್ತವ್ಯದಲ್ಲಿ ನಮ್ಮನ್ನು ನಾವು ಮರೆಯಬಾರದು.. ಕರ್ತವ್ಯ ಪ್ರಜ್ಞೆ, ಸಾಮಾಜಿಕ ಹೊಣೆ ಎಲ್ಲವೂ ಹೌದು..  ಆದರೆ ಅದರೊಳಗೆ ಕಳೆದು ಹೋಗಬಾರದು...ನಮ್ಮ ಇರುವನ್ನು ಮರೆಯಬಾರದು.. ಹತ್ತಿಯ ಹಾಗೆ ತಮ್ಮೊಳಗೆ ಸಾರವನ್ನು ಹೀರಿಕೊಳ್ಳಬೇಕು.. ಮತ್ತೆ ಅರಳಬೇಕು.. ನಾನು ಎನ್ನುವ ಭಾವ ಮಾಯವಾಯಿತು.. ಅವತಾರಕ್ಕಾಗಿ ನಾರಾಯಣ ಆಗಮಿಸಲಿರುವ ಸಮಯವಾಯಿತು.. ಚತುರ್ಮುಖ ಬ್ರಹ್ಮ ನನ್ನ ಸಮಸ್ಯೆಗೆ ಸಮಸ್ಯೆಯೇ ಪರಿಹಾರವಲ್ಲ.. ಆದರೆ ಆ ಸಮಸ್ಯೆಯಲ್ಲೇ ಪರಿಹಾರವನ್ನು ತಿಳಿಸಿದ ನಿನಗೆ ಶರಣು... "

ಬ್ರಹ್ಮನ ಅಂತರ್ಧಾನನಾದ...

ಹಿರಣ್ಯಕಶಿಪು ತನ್ನ ಮುಖವನ್ನು ನೋಡಿಕೊಳ್ಳುತ್ತಾ ಗಿರಿಜಾ ಮೀಸೆಯ ಮೇಲೆ ಕೈ ಆಡಿಸಿ..

"ನಾನಾರು.. ಕಶ್ಯಪ ಬ್ರಹ್ಮನ ಮಗ..."
"ಛೆ ಮತ್ತೆ ಇದೆ ಸಂಭಾಷಣೆಗಳು.... "
"ನಾ....  ಹೋದರೆ ಹೋದೆನು... ಆ  ಇದು ಸರಿಯಾಗಿದೆ.. ಧನ್ಯೋಸ್ಮಿ ಬ್ರಹ್ಮದೇವ... !

Tuesday, October 1, 2013

ಅಪ್ಪು..... ಎಂಬ ಹೆಸರಿನ ದೊಡ್ಡಪ್ಪ


ಕೋರವಂಗಲ  ಕುಟುಂಬದ ಹಿರಿಯಣ್ಣನಾದರೂ  ಮಗುವಿನಂಥಹ ಮನಸ್ಸಿನಿಂದ ಮನ ಗೆದ್ದ ನಮ್ಮ ದೊಡ್ಡಪ್ಪ.... ರಾಮಸ್ವಾಮಿ ಎನ್ನುವ ನಾಮಾಂಕಿತವಿದ್ದರೂ.... ಎಲ್ಲರಿಂದಲೂ ಅಪ್ಪು  ಎಂದು ಕರೆಸಿಕೊಂಡು ಎಲ್ಲರ  ಎಲ್ಲರನ್ನೂ ಮಮತೆಯ, ಪ್ರೀತಿಯ ಅಪ್ಪುಗೆಯಲ್ಲಿ ಬಂಧಿಸಿದ್ದ ನಮ್ಮ ದೊಡ್ಡಪ್ಪ ಇಂದು ನಮ್ಮನ್ನು ಅಗಲಿದ್ದಾರೆ
ಸತ್ಯ... ಸಹಿಷ್ಣುತೆ... ಇವನ್ನೆಲ್ಲ ತನ್ನ ಬದುಕಿನಲ್ಲಿ ಅಳವಡಿಸಿಕೊಂಡು ಅದೇ ಹಾದಿಯಲ್ಲಿ ನೆಡೆದು.. ಬೆಳೆದು... ಬದುಕಿ... ಬಾಳಿದ ನಮ್ಮ ದೊಡ್ಡಪ್ಪನ ಜೀವನವೇ  ಸುಂದರ ಸತ್ಯ ಕಾಂಡ ಎನ್ನಬಹುದು. 


ತನ್ನ ತಾಯಿಯ ಅಂತ್ಯ ಸಂಸ್ಕಾರ ಮುಗಿದು ಶ್ರಾದ್ಧ ಕಾರ್ಯಗಳು ಅಂತಿಮ ಹಂತ ತಲುಪಿದ್ದಾಗ.... ಉಳ್ಳವರು.... ಉಳ್ಳವರಿಗೆ ಬೇಕಾದ ದಾನ ಧರ್ಮ ಮಾಡುತ್ತಿದ್ದರು.. ಅಂತಹ ಸಮಯದಲ್ಲಿ,  ತನ್ನ ತಾಯಿಯ ಅಂತ್ಯ ಸಂಸ್ಕಾರಕ್ಕೆ,  ಹಾಸನದ ಕೋರವಂಗಲದಿಂದ  ಚಿಕಮಗಳೂರಿನ  ಗ್ರಾಮಕ್ಕೆ  ನೆಡೆದು ಬಂದು,  ಅಂತಿಮ ನಮನ ಸಲ್ಲಿಸಲು ಬಂದಿದ್ದ ಸೀನಪ್ಪ ಎಂಬ ಗ್ರಾಮಸ್ಥನಿಗೆ "ತಗೋ  ಸೀನಪ್ಪ ಕಾಫೀ ಕುಡಿ"   ಎಂದು ಹೇಳಿ ಎರಡು  ರುಪಾಯಿ ಕೊಟ್ಟರು. ಅಂಥಹ ಸಂಧರ್ಭದಲ್ಲಿ ಅಲ್ಲಿದ್ದ ತನ್ನ  ಅನುಜ ಹೇಳಿದ್ದು "ಅಪ್ಪು... ನಿನ್ನ ದಾನ ಅಮ್ಮನಿಗೆ ತಲುಪಿತು" ಎಂದರು.

ಇದು ನಮ್ಮ ದೊಡ್ಡಪ್ಪನ ಹಿರಿಮೆ.   

ಮಗುವಿನಷ್ಟೇ ಮುಗ್ಧ ಮನಸ್ಸುಳ್ಳ ...ಅಪ್ಪು ...ಎನ್ನುವ ದೊಡ್ಡಪ್ಪ ನಮ್ಮನ್ನು ಬಿಟ್ಟು ಹೋಗಿದ್ದರೂ ಅವರ ನೆನಪು  ಅಮರ. ನಮ್ಮ ಅಪ್ಪನಿಗೆ "ಮಂಜು" ಎನ್ನುವ ಸುಂದರ ಹೆಸರಿನಿಂದ ಕರೆಯುತ್ತಿದ್ದು ನಮಗೆ ಆಪ್ತವಾಗಿತ್ತು. 

ದೊಡ್ಡಪ್ಪ ನಿಮ್ಮ ಮಂಜುವನ್ನು ಸೇರಲು ಹೋಗುತ್ತಿದ್ದೀರಾ.. ನಮ್ಮ ಅಪ್ಪನನ್ನು.... ನಿಮ್ಮ ಅಪ್ಪ ಅಮ್ಮ, ಅಕ್ಕ ತಮ್ಮನನ್ನು ಸೇರಿ ನಿಮ್ಮ ಕುಟುಂಬದ ಎಲ್ಲರ ಜೀವನ ಹಸಿರಾಗಿರಲಿ ಎಂದು ಹಾರೈಸುತ್ತಾ ಇರಿ.. 

 ಹೋಗಿ ಬನ್ನಿ ದೊಡ್ಡಪ್ಪ ನಿಮ್ಮ ನೆನಪಿನ ಆಶೀರ್ವಾದದಲ್ಲಿ ನಾವೆಲ್ಲರೂ ಹಸಿರಾಗಿರುತ್ತೇವೆ. 

Saturday, August 24, 2013

ಅಪ್ಪಾ..... you will win!!!

"ತಂತ್ರಜ್ಞಾನ ಬಂದು ಮೂಲೆ ಮೂಲೆಯ ಧೂಳನ್ನು ಬಡಿದೆಬ್ಬಿಸಿ ಜಗತ್ತನ್ನೇ ಒಂದು ಪುಟ್ಟ ಹಳ್ಳಿಯನ್ನಾಗಿ ಮಾಡಿಬಿಟ್ಟಿದೆ... "

"ಅಪ್ಪಾ ಇದು ಗೊತ್ತು ಏನಾದರೂ ಹೊಸ ಕಥೆ ಹೇಳಪ್ಪಾ... ?"

ಯಾಕೋ ಸಂಯಮ, ತಾಳ್ಮೆಗೆ ಹೆಸರಾಗಿದ್ದ ಮಗಳು ದಿಡೀರ್ ಅಂತ ಹಳೇ ವಿಚಾರವನ್ನು ಬಿಟ್ಟು ಬೇರೆ ಹೊಸ ದಾರಿಗೆ ಹೊರಳಲು ಅಥವಾ ಹೊರಳಿಸಲು ಪ್ರಯತ್ನ ಪಡುತ್ತಿದ್ದಳು...

"ಹೌದಾ ಪಾಪ . ಇದೊಂದು ವಿಚಿತ್ರ ಕಥೆ.. ವಿಕ್ರಮ ಬೇತಾಳನ ಕಥೆ.. ಕೇಳುವೆಯ...."

"ವಾವ್ ನೀವು ಕಥೆ ಹೇಳ್ತೀರಾ ಅಂದ್ರೆ ಬಿಡ್ತೀನಾ... ಹೇಳಿ ಅಪ್ಪಾ"
---------------------------------------
ಮರದಿಂದ ಬೇತಾಳನನ್ನು ಇಳಿಸಿ ಬೆನ್ನ (ಹೆಗಲ) ಮೇಲೆ ಹಾಕಿಕೊಂಡು ವಿಕ್ರಮ ಖಡ್ಗ ಹಿಡಿದು ಹೊರಟ.. ನೇತಾಡಿ ನೇತಾಡಿ ಸುಸ್ತಾಗಿದ್ದ ಬೇತಾಳಕ್ಕೆ ಬೇಸರವಾಗದಿರಲೆಂದು ಕಥೆ ಹೇಳಲು ಶುರುಮಾಡಿದ..

"ಒಂದೂರಲ್ಲಿ ಒಬ್ಬ ಮಾನವ ಇದ್ದ.. ಬುದ್ದಿವಂತ, ತಕ್ಕ ಮಟ್ಟಿಗೆ ತಿಳುವಳಿಕೆ ಇತ್ತು, ಸಂಘಜೀವಿ.. ಕಾಡಲ್ಲಿ ಮರ ಕಡಿದು ಅದನ್ನ ತುಂಡು ತುಂಡು ಮಾಡಿ.. ತನ್ನ ಯಜಮಾನರಿಗೆ ಲೆಕ್ಕ ಒಪ್ಪಿಸುವ, ಹಾಗೆಯೇ ಅದಕ್ಕೆ ಬೇಕಾದ ಲೆಕ್ಕ ಪತ್ರ ಬರೆಯುವ ಕೆಲಸ ಮಾಡುತ್ತಿದ್ದ.. "

"ಹಾ ಆಮೇಲೆ"

ಕೆಲಸದಲ್ಲಿ ಶ್ರದ್ಧೆ ನಿಷ್ಠೆ ಯಾವಾಗಲೂ ಅವನ ಎರಡು ಕಣ್ಣುಗಳಾಗಿದ್ದವು.. ಸಂತಸದಿಂದ ತನ್ನ ಸುಖಿ ಪರಿವಾರದ ಜೊತೆ ಜೀವನ ನಡೆಸುತ್ತಿದ್ದ.. "

"wow intersting....ಆಮೇಲೆ?"

"ತನ್ನ ಪರಿವಾರವನ್ನು ನಗೆಯ ಕಡಲಲ್ಲಿ ತೇಲಿಸಲು ಎಲ್ಲಾ ರೀತಿಯ ಕಸರತ್ತನ್ನು ತಾಳ್ಮೆಯಿಂದ ಮಾಡುತ್ತಿದ್ದ... ಹೀಗೆ ಸಾಗುತ್ತಿರಲು ಒಂದು ದಿನ.. ಅವನ ಯಜಮಾನ.. ಬಂದು... ನೋಡಪ್ಪ.. ನಾನು ನಡೆಸುತ್ತಿದ್ದ ಈ ಸಣ್ಣ ಕೈಗಾರಿಕೆಯನ್ನು ಇನ್ನೊಬ್ಬರು ಬಂದು ಕೊಂಡುಕೊಂಡಿದ್ದಾರೆ.. ಇನ್ನು ಮುಂದೆ ನಾನೇ ಅವರು ಹೇಳಿದ್ದನ್ನ ಕೇಳಬೇಕು.. ನೀನು ಹಾಗೆಯೇ ಇರಬೇಕು ಆಯಿತೆ.. ?"

"hmmmmmmmmmmmmmmmmm..."

"ಅವನಿಗೆ ಒಂದು ಕ್ಷಣ ಏನೂ ತೋಚದಾಯಿತು.. ಸರಿ ಮನ, ಮನೆಯ ಜವಾಬ್ಧಾರಿ.. ಕಣ್ಣ ಮುಂದೆ ಬಂದು ನಿಂತಿತ್ತು.. ಸುತ್ತ ಮುತ್ತಲ ಕಾಡು ಪ್ರದೇಶ ಕ್ರಮೇಣ ನಗರೀಕರಣವಾಗುತ್ತಿತ್ತು.. ಕಾಡುಗಳು ಇದ್ದರೇ ತನಗೆ ಕೆಲಸ  ಇಲ್ಲದೆ ಹೋದರೆ.... ಆ ಆತಂಕ ಬೆನ್ನು ಹುರಿಯಲ್ಲಿ ನಡುಕ ಹುಟ್ಟಿಸುತ್ತಿತ್ತು.. ತನ್ನ ನಗುವನ್ನು ಯಾವುದೇ ಕಾರಣಕ್ಕೂ ಬಿಡಲು ಅವನ ಮನಸ್ಸು ಒಪ್ಪುತ್ತಿರಲಿಲ್ಲ .. ಕಷ್ಟಗಳು ಮನುಜನಿಗಲ್ಲದೆ ಮರಕ್ಕೆ ಬರುತ್ತದೆಯೇ  ಎನ್ನುವ ಸಿದ್ಧಾಂತ ಅವನದು.. ಕಣ್ಣಿಗೆ ಕಾಣುವ ದೇವರುಗಳು, ಕಾಣದ ದೇವರುಗಳ ಕೃಪೆ ಆಶೀರ್ವಾದ ತನ್ನ ತಲೆಕಾಯುವ ವಜ್ರ ಕಿರೀಟ ಎಂದು ಬಲವಾಗಿ ನಂಬಿದ್ದ.. "

"ಬೇತಾಳ ಮಧ್ಯೆ ಬಾಯಿ ಹಾಕಿತು.. .. ಅದು ಸರಿ ಗುರು ಕಥೆ ಚೆನ್ನಾಗಿ ಬರ್ತಾ ಇದೆ.. ಮುಂದುವರೆಸು... "

"ಹೀಗೆ ಸಾಗಿತು.. ಅವನ ಜೀವನ.. ಒಂದು ದಿನ ಅಚಾನಕ್ಕಾಗಿ ಹೊಸ ಯಜಮಾನ ಬಂದು.. ನೋಡಪ್ಪ ಇನ್ನು ಮುಂದೆ ಹೀಗೆ ಇರಬೇಕು.. ದಿನಕ್ಕೆ ಇಷ್ಟೇ ಹೊತ್ತು ನಗಬೇಕು.. ಹೆಚ್ಚು ನಗುವ ಹಾಗೆ ಇಲ್ಲ.. ಅಂತೆಲ್ಲ ಕಟ್ಟು ನಿಟ್ಟು ಮಾಡಿದರು.. .."

"ಹೊ.. ಹೊ... closeup tooth paste use ಮಾಡ್ಬೇಕು.. mysore sandal ಸೋಪ್ ಉಪಯೋಗಿಸಬೇಕು ಅನ್ನುವ ಮಟ್ಟಕ್ಕೆ ಕಟ್ಟಿ ಹಾಕಿದರು ಆಲ್ವಾ ಅಂತು ಬೇತಾಳ"

"ಅರೆ ಬೇತಾಳ.. ನಾನು ನಿನ್ನ ಹೊತ್ತು ನೆಡೆಯುತ್ತಿದೇನೆ.. ಕಥೆ ಮುಗಿಯುವ ತನಕ ನೀನು ಮಾತಾಡುವ ಹಾಗಿಲ್ಲ ಓಕೆ ನಾ"

"ಸರಿ ಗುರುವೇ ಮುಂದುವರೆಸು"

"ಯಾಕೋ ಕಟ್ಟು ಪಾಡು, ಅಂಕೆ ಶಂಕೆ ತೀರ ಹೆಚ್ಚಾದಾಗ.. ಸುತ್ತಲ ಮುತ್ತಲ ಕಾಡನ್ನು ನೋಡತೊಡಗಿದ.. ಬೇರೆ ಮರ, ಗಿಡ, ಗಂಟೆಗಳು ಸಿಗುತ್ತವೆಯೋ ಏನೋ ಅಂತಾ.... ನೋಡು ನೋಡುತ್ತಲೇ  ದಿನಗಳು ವಾರಗಳಾದವು, ವಾರಗಳು ಸೋಪ್ ಪೌಡರ್ ಹಾಕಿಕೊಂಡು ಮಾಸಗಳಾದವು.. ಮಾಸಗಳು ಅಂಗಿ ಶರಾಯಿ ತೊಟ್ಟು ವರ್ಷವಾಯಿತು.. ಆದರೆ ಅವನ ಮುಖದ ಮೇಲೆ ಜಿನುಗುತಿದ್ದ ಮಂದಹಾಸ ಮರೆಯಾಗಿರಲಿಲ್ಲ.. .. ಹೀಗೆ ಅವನ ಭಗೀರಥ ಪ್ರಯತ್ನದಲ್ಲಿ ಅವನ ಪರಿವಾರದವರು, ಸ್ನೇಹಿತರು ವಿಶ್ವಾಸಿಗಳು ಜೊತೆಯಲ್ಲಿ ನಡೆದಿದ್ದರು.... "

"ಸರಿ ಗುರು ಆಮೇಲೆ"

"ಶ್ರಾವಣ ಮಾಸ ಬಂದಾಗ ಆನಂದ ತಂದಾಗ ವಿರಹ ಗೀತೆ ಇನ್ನಿಲ್ಲಾ ಪ್ರಣಯ ಗೀತೆ ಬಾಳೆಲ್ಲ.. "

"ಏನ್ ಗುರುವೇ ಅಣ್ಣಾವ್ರ ಚಿತ್ರ ಗೀತೆ ಶುರುಮಾಡಿದೆ.. ಏನ್ ಸಮಾಚಾರ"

"ಶ್ರಾವಣ ಮಾಸವು ತಂದ  ಉಡುಗೊರೆ ಉಲ್ಲಾಸವ ತರಲಿ ಆ "ಮಂಜುನಾಥ"ನ ಕೃಪಾ ಕಟಾಕ್ಷವೂ ಹಾಗೆಯೇ ಅವನ ಸುತ ಗಣಪತಿಯ ಆಶೀರ್ವಾದವು ಎಂದೆಂದು ನಿನಗಿರಲಿ"

"ಅಯ್ಯೋ ಗುರುವೇ ಏನು ಸಾಹಿತ್ಯವನ್ನೇ ಬದಲಾಯಿಸಿ ಬಿಟ್ಟೆ.. ಇರಲಿ ಇರಲಿ.. ನಿನ್ನದು ಏನೋ ವಿಷಯ ಇದೆ ಇರಲಿ ಕಥೆ ಮುಂದುವರೆಸು"

"ಹೀಗೆ ಮಂಜುನಾಥನ, ಕಾಶಿ ವಿಶಾಲಕ್ಷಿಯ ಅನುಗ್ರಹ.. ಕೃಷ್ಣನ ನೀಳ ಜಡೆ, ಅವನ ಕೊಳಲು, ಪಾಂಚಜನ್ಯದ ವಿಜಯದ  ನಾದ ತಣ್ಣಗಿನ ಕೋಮಲತೆ ಬೆಚ್ಚಗಿನ ಶಾಖ.. ಎಲ್ಲವೂ ಅವನಿಗೆ ಹೊಸ ಹುರುಪು ಕೊಟ್ಟಿತು.. ಅವನ ಭಗೀರಥ ಪ್ರಯತ್ನಕ್ಕೆ ಹೊಸ ಹಸಿರಿನ ಚೈತನ್ಯ ಸಿಕ್ಕೆ ಬಿಟ್ಟಿತು.. .. ಅವನ ಸಂತೋಷಕ್ಕೆ ಪಾರವೇ ಇಲ್ಲ..... ಅಚಾನಕ್ಕಾಗಿ ಅವನ ಕಣ್ಣಲ್ಲಿ ದೇವಗಂಗೆ ಧುಮುಕುತ್ತ ಸಾಗಿದಳು.. "

ಬೇತಾಳ ಇದು ಕಥೆ.. ಈಗ ನಾ ಕೇಳುವ ಪ್ರಶ್ನೆಗೆ ಉತ್ತರಿಸು.. ಇಲ್ಲದೆ ಹೋದರೆ ಮತ್ತೆ ನಿನ್ನ ಹೊತ್ತು ನಾ ನಡೆಯೋಲ್ಲ"

"ಹೊ ಇದೊಳ್ಳೆ ಕಥೆ ಆಯ್ತಲ್ಲ.. ಸರಿ ಅದೇನು ಕೇಳ್ತೀಯೋ ಕೇಳು"

"೧. ಬೇತಾಳನಾದ ನೀನು ನನಗೆ ಕಥೆ ಹೇಳಬೇಕಿತ್ತು.. ಉತ್ತರ ನಾ ಹೇಳಬೇಕಿತ್ತು.. ಆದರೆ ಇಲ್ಲಿ ಉಲ್ಟಾ ಪುಲ್ಟಾ
 ೨. ಕಷ್ಟಗಳು ಕಳೆದು ಸುಖದ ಹಾದಿಯಲ್ಲಿದ್ದ ಅವನಿಗೆ ಯಾಕೆ ಭಗೀರಥ ಪ್ರಯತ್ನ ಮಾಡಿಯೂ ದೇವಗಂಗೆ ಕಣ್ಣಲ್ಲಿ  ಉದ್ಭವವಾದಳು..
 ೩.  ಅವನ ಮುಖದಲ್ಲಿನ ನಗೆಯ ಬಗ್ಗೆ ಯಾಕೆ ಅಷ್ಟೊಂದು ಬಾರಿ ನಾ ಹೇಳಿದೆ"

"ಹ ಹ ಏನ್ ಗುರುವೇ ಇಂತಹ ಪ್ರಶ್ನೆ ಕೇಳಿಬಿಟ್ಟೆ.. ಇರಲಿ ಮೊದಲನೇ ಪ್ರಶ್ನೆಗೆ ಕಡೆಯಲ್ಲಿ ಉತ್ತರಿಸುವೆ.. ಈಗ ಎರಡನೇ ಪ್ರಶ್ನೆಗೆ ಉತ್ತರಿಸುವೆ ಕೇಳು... ಅವನ ಕಷ್ಟದ ದಿನಗಳಲ್ಲಿ ಅವನ ಪರಿವಾರದವರೆಲ್ಲ ಒಳ್ಳೆಯ ದಿನ ಬರುತ್ತದೆ ಹೆದರಬೇಡ ಎಂದು ಹೇಳುತ್ತಲೇ ಇದ್ದರು... ಅವನ ಪ್ರಚಂಡ ಆತ್ಮ ವಿಶ್ವಾಸ ಅವನ ಮನಸ್ಸನ್ನು ಕುಗ್ಗದ ಹಾಗೆ ನೋಡಿಕೊಳ್ಳುತ್ತಿತ್ತು.. ಹೊಸ ಹುರುಪು ಚೈತನ್ಯ ಸಿಕ್ಕ ಮೇಲೆ ಅದನ್ನ ತನ್ನ ಪರಿವಾರದವರಿಗೆ ಹೇಳಿದಾಗ ಎಲ್ಲರು ಸಂತಸಪಟ್ಟು ಖುಷಿಯಲ್ಲಿದ್ದಾಗ ಅವನ ವಂಶದ ಕುಡಿ ಬಂದು ತಬ್ಬಿ ಕೊಂಡು.. ಅಪ್ಪಾ... you will win ಅಂತ ಹೇಳಿತು.... ಬಳ್ಳಿಗೆ ಮರ ಆಸರೆ ಸಹಜ .. ಆದರೆ ಇಲ್ಲಿ ಬಳ್ಳಿಯೇ  ಮರಕ್ಕೆ ಆಸರೆಯಾಗಿ ನಿಂತು ಹೊಸ ಉಲ್ಲಾಸಭರಿತ ಆ ನಾಲ್ಕು ಪದಗಳನ್ನು ಹೇಳಿದ್ದು ಅವನಿಗೆ ಇನ್ನಷ್ಟು ಸಂತಸ ತಂದಿತು.. ಆ ಸಂತಸ ಕಣ್ಣಲ್ಲೇ ದೇವಗಂಗೆಯಾಗಿ ಹರಿಯಿತು... "

"ಬೇತಾಳ ಸೂಪರ್ "

ಇನ್ನು ಮೂರನೇ ಪ್ರಶ್ನೆಗೆ ಉತ್ತರ... ಮರ ಬೆಳೆಯುವುದು ಮಣ್ಣಿಂದ.. ಆದರೆ ಅದೇ ಮರ ಬೆಳವಣಿಗೆ ನಿಲ್ಲಿಸಿ ಬಿಟ್ಟರೆ.. ಸುತ್ತ ಮುತ್ತಲ ಗೆದ್ದಲು ಮಣ್ಣಿನ ರೂಪ ಮಾಡಿಕೊಂಡು ಮರವನ್ನು ತಿಂದು ಬಿಡುತ್ತದೆ... ಅಲ್ಲಿಗೆ ಮಣ್ಣಿಂದ ಬೆಳೆಯಬೇಕಾದ ಮರ ಮಣ್ಣಿಂದಲೇ ಅಳಿಯುತ್ತದೆ.. ಹಾಗೆಯೇ ಕಷ್ಟ ನಷ್ಟಗಳು ಬಂದಾಗ ನಗುವನ್ನು ಮರೆತು ಬಿಟ್ಟರೆ ನಗುವೇ ನಮ್ಮನ್ನು ಮರೆತು ಬಿಡುತ್ತದೆ.. ಆಗ ಚಿಂತೆ ಚಿತೆಯ ರೂಪದಲ್ಲಿ ನಮ್ಮನ್ನು ಸುಡಲು ಶುರುಮಾಡುತ್ತದೆ.... ಚಿಂತೆಗೆ ಮದ್ದು ಬೇರೆಯೇನೂ ಇಲ್ಲಾ ...  ಬರಿ ಒಂದು ಹೂ ನಗೆ ಅಷ್ಟೇ ಸಾಕು...

"ನಿನ್ನ ಬೆನ್ನು ತಟ್ಟೋಣ ಅಂದ್ರೆ.. ನನ್ನ ಬೆನ್ನು ಏರಿ ಕುಳಿತಿದ್ದೀಯ.. Anyway ಬೇತಾಳ you are awesome...."

"ಈಗ ಮೊದಲನೇ ಪ್ರಶ್ನೆಗೆ ಉತ್ತರ... ಬೆನ್ನಿಗೆ ಸಮಸ್ಯೆಯನ್ನು ಕಟ್ಟಿ ಕೊಳ್ಳಬೇಕು ಆಗಲೇ ಛಲ ಮೈಯಲ್ಲಿ ಮೂಡಿಬರುತ್ತದೆ... ಆದರೆ ಆ ಸಮಸ್ಯೆಗೆ ಮಾತನಾಡಲು ಬಿಡಬಾರದು.. ಮೊದಲೇ ನಾವು ಅದನ್ನು ಬೆನ್ನ ಮೇಲೆ ಹೇರಿಕೊಂಡಿರುತ್ತೇವೆ ಇನ್ನು ಅದಕ್ಕೆ  ಮಾತಾಡಲು ಬಿಟ್ಟರೆ.. ನಮ್ಮ ತಲೆಯ ಮೇಲೆ ಹತ್ತಿ ಕೂತು ಬಿಡುತ್ತದೆ.. ಹಾಗಾಗಿ ಸಮಸ್ಯೆಗೆ ಸಮಸ್ಯೆ ಕೊಟ್ಟರೆ ಉತ್ತರ ತಾನೇ ತಾನಾಗಿ ಹೊಳೆಯುತ್ತದೆ... ಅದೇ ಕೆಲಸವನ್ನು ನೀನು ಮಾಡಿದ್ದು ವಿಕ್ರಮ ಮಹಾರಾಜ.. ಹಾಗೆಯೇ ಅದನ್ನೇ ಈ ಕಥಾನಾಯಕ ಕೂಡ ಮಾಡಿದ್ದು.. ಎಲ್ಲರಲ್ಲೂ ಉತ್ಸಾಹ, ಪ್ರೋತ್ಸಾಹ ಕಂಡಿದ್ದ  ಅವನಿಗೆ ಸಮಸ್ಯೆ ಒಂದು ಸಮಸ್ಯೆ ಆಗಿರಲಿಲ್ಲ.. ಜೊತೆಗೆ "ನಗು ನಗುತ ನಲಿ ನಲಿ ಏನೇ ಆಗಲಿ" ಎನ್ನುವ  ಅಣ್ಣಾವ್ರ ಹಾಡಿನಂತೆ ಜೀವನ ನಡೆಸುವ ಅವನಿಗೆ ಸಮಸ್ಯೆ ಕೂಡ ಅವನ ಮುಂದೆ ಮಂಡಿ ಊರಿ ಕೂರದೆ ನಗುತ್ತ ಮುಂದೆ ಸಾಗಿ ಹೋಗುತ್ತದೆ.. "

"ಬೇತಾಳ ನಿಜಕ್ಕೂ ನಿನ್ನ ಹೊತ್ತು ನಡೆದಿದ್ದು ನನಗೆ ಸಮಾಧಾನ ತಂದಿತು ಒಂದು ಒಳ್ಳೆಯ ಕಥೆಗೆ ಅಷ್ಟೇ ಒಳ್ಳೆಯ ಸಂದೇಶ ಕೊಟ್ಟ ನಿನಗೆ ನಾ ಚಿರ ಋಣಿ.. ಹೋಗಿ ಬಾ ಬೇತಾಳ ಮತ್ತೊಮ್ಮೆ ನೀನು ಸಿಕ್ಕರೂ ನಿನ್ನಿಂದ ಒಳ್ಳೆಯ ಉತ್ತರ ಸಿಗುವ ಸಮಸ್ಯೆಯಾಗಿ ಬಾ... bye ಬೇತಾಳ..."

"ಗುರುವೇ.. ಸೂಪರ್ ಸೂಪರ್ .. ನೀನು ಕಥೆ ಹೇಳುವ ಶೈಲಿ.. ಸರಿ ಹೋಗಿ ಬಾ ಸಮಯ ಸಿಕ್ಕರೆ ಮತ್ತೆ ಸುಖವಿಚಾರ ವಿನಿಮಯ ಮಾಡಿಕೊಳ್ಳುವ ಸ್ನೇಹಿತರ ಹಾಗೆ ಸಿಗೋಣ.. " ಎಂದು ಬೇತಾಳ ಹಾರಿ ಹೋಯಿತು..
--------------------------------------------

ಅಪ್ಪಾ ಸೂಪರ್ ಕಥೆ ಅಪ್ಪ ತುಂಬಾ ಇಷ್ಟವಾಯಿತು.. ಸದಾ ನಕ್ಕರೆ...  ಅಲ್ಲಿಯೇ ಸಕ್ಕರೆ ಬಂದು ಬೀಳುತ್ತದೆ ಅಲ್ವಾ ಅಪ್ಪ.. ನಾನು ನಗುತ್ತಲೇ ಇರುತ್ತೇನೆ.. ಕಷ್ಟ ಬಂದ್ರೆ ಬರಲಿ ಅಲ್ವಾ.. ಅಪ್ಪಾ ದೂರದ ಬೆಟ್ಟ ಚಿತ್ರದ ಹಾಡು ಹೇಳಪ್ಪಾ...  ನಿಮ್ಮ ಬಾಯಲ್ಲಿ ಕೇಳಬೇಕು ಒಮ್ಮೆ...

"ನೀ ಪಕ್ಕ ಇದ್ರೆ ಹಿಂಗೆ ಬೆಟ್ಟನೆತ್ತೀನ್ ಬೆಳ್ನಾಗೆ.. 
ಏಸೇ ಕಷ್ಟ ಬಂದ್ರು ನಂಗೆ ... ನೀಗ್ಸೆ ಬಿಡ್ತೀನಿ ಸುಮ್ಗೆ.. 
ಪ್ರೀತಿನೇ  ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳಿಗೆ 
ಹಸಿವಿನಲ್ಲೂ ಹಬ್ಬಾನೆ 
ದಿನವು ನಿತ್ಯ ಉಗಾದಿನೇ ನನ್ನ ನಿನ್ನ ಪಾಲಿಗೆ"

ಕಣ್ಣಲ್ಲಿ ನೀರು ತುಂಬಿಕೊಂಡು ಮಗಳು ಅಪ್ಪನನ್ನು ತಬ್ಬಿಕೊಂಡು ಹೇಳಿದಳು 

"ಅಪ್ಪಾ you must win....and you will win... " 

Saturday, July 20, 2013

ಅಜ್ಜಯ್ಯ ಅಜ್ಜಯ್ಯ ಅಜ್ಜಯ್ಯ .....

ಸಂಧ್ಯಾವಂದನೆ ಮಾಡಲು ಸಿದ್ಧತೆ  ಮಾಡಿಕೊಳ್ಳುತ್ತಿದ್ದರು.  ಸಂಕಲ್ಪ ಶುರುವಾಯಿತು. ಸಂವತ್ಸರ, ಋತು, ಮಾಸ, ಪಕ್ಷ, ತಿಥಿ ಹೇಳುತ್ತಾ ಹೋದಂತೆ ನೆನಪಾಯಿತು

"... ಅರೆ ಇವತ್ತು  ತಿರುಪತಿಗೆ ಹೋಗಬೇಕೆಂದಿದ್ದೆ. "

ಸಾಂಗೋಪಾಂಗವಾಗಿ ಸಂಧ್ಯಾವಂದನೆ ಮುಗಿಸಿ ಜಪ ತಪಗಳನ್ನು ಮುಗಿಸಿ.. 

"ಎನ್ರೆ.. ನಾ ಇವತ್ತು ತಿರುಪತಿಗೆ ಹೋಗಬೇಕಿತ್ತು.. ನೀನು ನೆನಪಿಸಲಿಲ್ಲ.. "

"ನಿಮಗೆ ಯಾವಾಗಲು ಸುತ್ತೋದೆ ಕೆಲಸ... "ನಸು ನಕ್ಕರು ಅಜ್ಜಿ 

"ಹಾಗೇನು ಇಲ್ಲಾ .. ಯಾಕೋ ಹೋಗಬೇಕೆನ್ನಿಸಿತ್ತು.. " ಅಜ್ಜಯ್ಯ ತಿರುಗುಬಾಣ ಬಿಟ್ಟರು 

"ನೀವು ಊರು, ಲೆಕ್ಕ ಪತ್ರ, ಶಾನುಭೋಗರ ಕೆಲಸ, ಅಮಲ್ದಾರರು.. ಜಮ ಕಟ್ಟುವಿಕೆ, ಹೀಗೆ ಆ ಕೆಲಸ ಈ ಕೆಲಸ ಅಂತ ಊರು  ಸುತ್ತುತ್ತಾ ಇರುತ್ತೀರಿ.. ಇನ್ನೂ ತಿರುಪತಿಗೆ ಯಾವಾಗ ಹೋಗಲು ಸಾಧ್ಯ?"

"ನಾನು ಊರೂರು ಸುತ್ತೋದು ಕೆಲಸದ ಮೇಲೆ ತಾನೇ ಸುಮ್ಮನೆ ಅಲ್ವಲ್ಲ.. " ಹೀಗೆ ಸಾಗಿತ್ತು ಅಜ್ಜಯ್ಯ ಅಜ್ಜಿಯ ಜುಗಲ್-ಬಂಧಿ.. 

"ಸದ್ದು ಸದ್ದು... " ದೇವಲೋಕದ ದೂತ ನಸು ನಗುತ್ತ "ರಂಗಸ್ವಾಮಿಗಳೇ ಇವತ್ತು ನೀವು ತಿರುಪತಿಗೆ ಹೋಗಬೇಕೆಂದು ನಮ್ಮ ಹತ್ತಿರ ಹೇಳಿದ್ದಿರಷ್ಟೇ ಅಗೋ ನೋಡಿ ಅಲ್ಲಿ ವಾಹನ ಸಿದ್ಧವಿದೆ.. ನಿಮ್ಮ ಪ್ರಾತಃ ಕಾಲದ ನಿತ್ಯ ಕರ್ಮಗಳು ಮುಗಿದ್ದಿದ್ದರೆ ಹೊರಡಬಹುದು"

"ಒಹ್ ನಾನು ಸಿದ್ಧ.. ನಡೆಯಿರಿ ಬರುತ್ತೇನೆ.. ಬಾಗಿಲು ಸರಿಯಾಗಿ ಹಾಕಿಕೊಳ್ರೆ.. ಸಂಜೆ ಅಥವಾ ರಾತ್ರಿಗೆ ಬಂದು ಬಿಡ್ತೇನೆ"

ವಾಹನ ಗಾಳಿಯಲ್ಲಿ ತೇಲುತ್ತಾ.. ಈಜುತ್ತಾ ನಿಧಾನವಾಗಿ ಬಂದು ಇಳಿಯಿತು. 

ಅಜ್ಜಯ್ಯ.. "ಕಳೆದ ಸಾರಿ ಇಲ್ಲಿಗೆ ಬಂದಾಗ ಒಂದು ಕಣಗಲೆ ಹೂವಿನ ಗಿಡವಿತ್ತು.... ಅದರ ಪಕ್ಕದಲ್ಲೇ ಇದ್ದದ್ದು.. ಇದೇನು ಹೀಗಾಯಿತು?"

ದೂತ "ಸ್ವಾಮಿಗಳೇ ಆ ಗಿಡವನ್ನು ಕಡಿದು ನೋಡಿ ಸುಂದರವಾದ  ಮನೆಗಳನ್ನು ಕಟ್ಟಿದ್ದಾರೆ... ನೋಡಿ ಅಲ್ಲಿ ಒಂದು ಫಲಕವಿದೆ"

"SAPTHAGIRI RESIDENCY"          "ಸಪ್ತಗಿರಿ ರೆಸಿಡೆನ್ಸಿ"

ಅಜ್ಜಯ್ಯ ನೋಡಿದರು.. ಖುಷಿಯಿಂದ ಹುಬ್ಬು ಮೇಲೆ ಏರಿತು.. "ಸರಿಯಾದ ಸ್ಥಳ ಸರಿಯಾದ ಸ್ಥಳ.. ತಿರುಪತಿಗೆ ಈ ಸಾರಿ ಬೇಡ ಮುಂದಿನ ಸಾರಿ ಹೋಗುವೆ.. ಇವತ್ತು ನನ್ನ ಮಕ್ಕಳು, ಸೊಸೆ, ಮೊಮ್ಮಕ್ಕಳನ್ನು, ಮರಿ ಮೊಮ್ಮಕ್ಕಳನ್ನು ನೋಡಲು ಎಲ್ಲರನ್ನೂ "ಸಪ್ತಗಿರಿ"ಗೆ  ಬರಲು ಹೇಳಿದ್ದೆ. ಸರಿಯಾದ ಜಾಗ ದೂತನೆ.. ಕೋಟಿನ ಜೇಬಿಂದ ಒಂದು ಕಡ್ಲೆ ಬೀಜದ ಮಿಠಾಯಿ, ಕಡಲೆ ಬೀಜ ಎಲ್ಲವನ್ನೂ  ಧೂತನಿಗೆ ಕೊಟ್ಟು ನೀನು ಹೋಗಿ ಬಾ. ಸಂಜೆ ಮತ್ತೆ ಬಾ ನನ್ನನ್ನು ಕರೆದೊಯ್ಯಲು" ಎಂದರು. ಒಳಗೆ ಬಂದಾಗ ಅವರ ಪರಿವಾರವೇ ಅವರನ್ನು ಸ್ವಾಗತಿಸಲು ಕಾಯುತಿತ್ತು... !    
--------------------------
ನನ್ನ ಸಹೋದರ ಜ್ಞಾನೇಶನ ಒಂದು ಚಿಕ್ಕ ಅಂಚೆ ನನ್ನಿಂದ ಈ ಪಾಟಿ ಬರಿಸಿತು., 

"Dear brothers n sisters,
As you all are aware, our beloved ajjaiah is descending tomorrow at g3, sapthagiri residency 4. I know, all of you will not like to see this mail as invitation, as it is our duty to participate. Looking forward to meet you all in full strength."
-----------------------------

ಅಜ್ಜಯ್ಯ ಅಜ್ಜಿ!
ಬನ್ನಿ ಎಲ್ಲರೂ ಸೇರೋಣ.. ಅಜ್ಜಯ್ಯನ ಆಶೀರ್ವಾದ ಪಡೆಯೋಣ.... ನಮ್ಮೆಲ್ಲರಿಗೋಸ್ಕರ  ಸ್ವರ್ಗದಿಂದ ಧರೆಗಿಳಿದು ಬರುವ ಆ ಹೊತ್ತಿನಲ್ಲಿ ನಾವೆಲ್ಲರೂ ಅವರನ್ನು ಸ್ವಾಗತಿಸೋಣ!

Sunday, June 23, 2013

ಹತ್ತು ಜನರಿಂದ ಒಂದೊಂದು ತುತ್ತು....!....ಒಂದು ಸುಂದರ ಅನುಭವ

"ಅರೆ  ಅರ್ಜುನ ಇದೇನು ನಾರುಮುಡಿಯುಟ್ಟು ಸ್ವಾಗತಿಸುತ್ತಿದ್ದೀಯ.. ? ರಾಜೋಚಿತ ಉಡುಪುಗಳು ಎಲ್ಲಿ? ಅರೆ ಕರ್ಣನು ಕೂಡ ಸಿದ್ಧವಾಗಿದ್ದಾನೆ.. ಏನು ಸಮಾಚಾರ ಪಾರ್ಥ.. ನೀನು ಎಲ್ಲಿಗೆ ಹೋಗುತ್ತಿದ್ದೀಯ ದಾನ ಶೂರ ಕರ್ಣ?" ಪ್ರಶ್ನೆಗಳ ಮಳೆಯನ್ನೇ ಸುರಿಸಿದ ಕೃಷ್ಣ ಪರಮಾತ್ಮ..!

ಕೊಳಲು ಹಿಡಿದ ಪರಮಾತ್ಮ 
ಅರ್ಜುನ ಹೇಳಿದ "ವಾಸುದೇವ.. ನಾನು ತೀರ್ಥ ಯಾತ್ರೆಗೆ ಹೊರಟಿದ್ದೆ.. ಏತಕ್ಕೆ ಎನ್ನುವುದು ನಿನಗೆ ಚೆನ್ನಾಗಿ ಗೊತ್ತು.. ಹೊರಟು ನಿಂತಿದ್ದೆ..  ಕರ್ಣನ ಹಾಗೆ ಇನ್ನೊಬ್ಬರಿಗೆ ಸಹಾಯ ಮಾಡುವ ಒಂದು ಸುಂದರ ಕಾರ್ಯಕ್ರಮ ನಡೆಯುತ್ತಿದೆ ಎಂಬ  ಒಂದು ವಿಷಯ ತಿಳಿಯಿತು.. ಕರ್ಣನಿಗೆ ಹೇಳಿದೆ.. ಅವಶ್ಯವಾಗಿ ನಾನು ಅದನ್ನು ನೋಡಿ ಬರುತ್ತೇನೆ ಹಾಗೆಯೇ ನಿನಗೆ ತೀರ್ಥಯಾತ್ರೆಗೆ ಸ್ವಲ್ಪ ದಾರಿ ಜೊತೆಯಾಗಿ ಬರುತ್ತೇನೆ ಎಂದು ಇಬ್ಬರು ಹೊರಟೆವು!"

"ಸರಿ ಹಾಗಾದರೆ.. ಹೋಗಿ ಬನ್ನಿ... ಅಲ್ಲಿನ ಕಾರ್ಯಕ್ರಮದ ಕೊಂಡಿಯನ್ನು ನನಗೆ ಮೇಲ್ ಮಾಡಿ" ಎಂದು ಕೃಷ್ಣ ಹೇಳಿ  ಪಾರ್ಥನಿಗೆ ಆಶೀರ್ವದಿಸುತ್ತಾ

"ಕಲ್ಯಾಣವಾಗಲಿ"
ಕಲ್ಯಾಣ ಬರಲಿ
ಕಲ್ಯಾಣ ಸಿಗಲಿ"  ಎಂದ!

ಪಾರ್ಥನಿಗೆ ಆಶ್ಚರ್ಯ... "ಅರೆ ಕಲ್ಯಾಣಮಸ್ತು ಕಲ್ಯಾಣಮಸ್ತು ಕಲ್ಯಾಣಮಸ್ತು ಅಂತ ಮೂರು ಸಲ ಆಶೀರ್ವದಿಸುತ್ತೀಯ ಎಂದು ತಿಳಿದಿದ್ದೆ.. ಇದೇನು ಪರಮಾತ್ಮ ಈ ಪರಿ ಆಶೀರ್ವಾದ" ಎಂದ.

ನೀನು ಆ ಕಾರ್ಯಕ್ರಮಕ್ಕೆ ಹೋಗು ಪಾರ್ಥ.. ! ನಿನಗೆ ತಿಳಿಯುತ್ತೆ ಅಂತ ಕೊಳಲು ನುಡಿಸುತ್ತಾ ಹೊರಟೆ ಬಿಟ್ಟಾ ಪರಮಾತ್ಮ!

ಸರಿ ಇನ್ನೇನು ಮಾಡುವುದು ಎಂದು ಕರ್ಣಾರ್ಜುನರು ಕೃಷ್ಣನ ಅಣತಿಯಂತೆ ಹೊರಟರು!
------------------------------------------------------------------------------------------------------------
ಮೈಸೂರು ರಸ್ತೆಯಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಕಾರಿನಲ್ಲಿ "ಅರರರೆ  ತುಂತುರು ತಂತು ಋತು... ಅರರರೆ  ತುಂತುರು ತಂತು ಋತು... " ಹಾಡು ಬರುತಿತ್ತು.. "ತುಂತುರು ಅಲ್ಲಿ ನೀರ ಹಾಡು" ಎಂದು ಶುರುವಾಯಿತು.
ಮೈಮನ ಪುಳಕಗೊಳ್ಳುತಿತ್ತು. ಆ ನಾದಕ್ಕೆ ಮೈಮರೆಯುತ್ತಿದ್ದಂತೆ "ಮನಸೇ ಮನಸೇ ಎಂಥಾ ಮನಸೇ" ಸುಮಧುರ ಗಾನ.. ಕರ್ಣಾರ್ಜುನರಿಗೆ ಆಶ್ಚರ್ಯ... ಕೇಳುತ್ತಾ ಮೈಮರೆತಿದ್ದರು..

"ಸಿಹಿಗಾಳಿ ಸಿಹಿಗಾಳಿ ಸಹಿ ಹಾಕಿದೆ ಮನಸ್ಸಿನಲ್ಲಿ
ಒಂದು ತುತ್ತು ಒಂದು ತುತ್ತು
ಎತ್ತಿಟ್ಟರೆ ಸಾಕು.. ಹಸಿದ ಹೊಟ್ಟೆಯನ್ನು ತುಂಬುವುದು ..... "
ಅಚಾನಕ್ಕಾಗಿ ಕಣ್ಣು ಬಿಟ್ಟ ಅರ್ಜುನ.. "ಕರ್ಣ ಈ ಹಾಡಿನಲ್ಲಿ ಏನೋ ವ್ಯತ್ಯಾಸ ಇದೆ.. ನಾ ಕೇಳಿದ ಹಾಡು ಬೇರೆ.. " ಎಂದ

ಕರ್ಣ "ಅರ್ಜುನನ ಭುಜ ತಟ್ಟಿ ಅಲ್ಲಿ ನೋಡು" ಎಂದ... ಅರ್ಜುನ ಕಣ್ಣರಳಿಸಿ ನೋಡಿ ಹೂವಿನ ನಗೆಬಾಣವನ್ನು ಬಿಟ್ಟಾ!
------------------------------------------------------------------------------------------------------------
ಕರುನಾಡಿನಲ್ಲಿ ಪ್ರೇಮಕವಿ ಎಂದೇ ಹೆಸರಾದ ಶ್ರೀ ಕಲ್ಯಾಣ್ ಅವರು ಪಕ್ಕದ ಕಾರಿನಿಂದ ಇಳಿದು ಸೀದಾ "ಹಂಸ" ನಡಿಗೆಯಲ್ಲಿ,   ಮೈಸೂರು ರಸ್ತೆಯ ಕುಂಬಳಗೋಡು ಗ್ರಾಮದ ಸರಹದ್ದಿನಲ್ಲಿರುವ ಒಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಡೆ ಹೆಜ್ಜೆ ಹಾಕಿ, ಮುಖ್ಯ ಅತಿಥಿಯಾಗಿ ತಮ್ಮ ಆಸನ ಸ್ವೀಕರಿಸಿದರು.

ಹಂಸ ನಡಿಗೆ ಇಡುತ್ತಾ ಬಂದರು ಸರಳ ಪ್ರೇಮ ಕವಿ ಶ್ರೀ ಕಲ್ಯಾಣ್ 
ಅಂದು ಕೆಲವು ಆಯ್ದ ಶಾಲೆಗಳ ಮಕ್ಕಳಿಗೆ ಪಾದರಕ್ಷೆಗಳನ್ನು,  ನೋಟ್ ಬುಕ್ ಗಳನ್ನೂ, ಟೈ, ಬೆಲ್ಟ್ ಗಳನ್ನು ವಿತರಿಸುವ ಸತೀಶ್ ಬಿ ಕನ್ನಡಿಗ ಅವರ ಒಂದು ಸುಂದರ ಪರಿಶ್ರಮಕ್ಕೆ ಯಶಸ್ಸಿನ ಹಂತ ಮುಟ್ಟುವ ಕಾರ್ಯಕ್ರಮ ನಡೆಯಲು ವೇದಿಕೆ ಸಜ್ಜುಗೊಂಡಿತ್ತು, ಅದಕ್ಕೆ ಹೆಗಲು ಕೊಟ್ಟು 3K ತಂಡದ ನಾಯಕಿ ರೂಪ ಸತೀಶ್, ಎಲ್ಲರ ನೆಚ್ಚಿನ ವಿಜ್ಞಾನಿ, ಹೃದಯವಂತ ಗೆಳೆಯ ಆಜಾದ್ ಸರ್, ನಮ್ಮೆಲ್ಲರ ನಗೆ ಬುಗ್ಗೆ ಪ್ರಕಾಶಣ್ಣ , ಮತ್ತು ಮುಖ್ಯೋಪಾಧ್ಯಾಯಿನಿ ಆಸೀನರಾದರು.

ಪ್ರತಿಭಾವಂತರ ದಂದು ವೇದಿಕೆಯಲ್ಲಿ 
ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಶುರುವಾಯಿತು, ಯಕ್ಷಗಾನದ ತುಣುಕು, ವೀರಾವೇಶದ ಹಾಡಿಗೆ ನೃತ್ಯ, ಜಾನಪದ ಗೀತೆಗಳಿಗೆ ನೃತ್ಯ, ಅರಳುತಿದ್ದ ಮಕ್ಕಳ ಕಡೆಯಿಂದ ಶ್ಲೋಕಗಳು,  ಹಾಡುಗಳು, ನೃತ್ಯ, ಸಾಧನೆಯ ಹಂಬಲ ಹೊತ್ತ ಸಾಹಸಿಯ ಯೋಗಾಸನ ಒಂದೇ ಎರಡೇ ಸಾಲು ಸಾಲು ಕಾರ್ಯಕ್ರಮಗಳು ಮನಸನ್ನು ಸೂರೆಗೊಂಡವು. ಇದರ ನಡುವೆ ಮಕ್ಕಳಿಗೆ ವೇದಿಕೆಯಲ್ಲಿ ಆಸೀನರಾಗಿದ್ದ ಮಹಾನೀಯರಿಂದ ಮಕ್ಕಳಿಗೆ ನೋಟ್ ಬುಕ್ ವಿತರಣೆಯಾಯಿತು. ಮಿಕ್ಕ ಪುಸ್ತಕಗಳನ್ನು, ಟೈ ಬೆಲ್ಟ್, ಪಾದರಕ್ಷೆಗಳನ್ನು ಆಯಾ ಶಾಲೆಯ ಉಪಾಧ್ಯಾಯರಿಗೆ ವಿತರಿಸಿದರು. ಮುಖ್ಯ ಅತಿಥಿ ಶ್ರೀ ಕಲ್ಯಾಣ್ ಅವರು ಮಕ್ಕಳಿಗೆ ಹಿತನುಡಿ ನುಡಿದು ಆಶೀರ್ವದಿಸಿದರು.


ದೊಡ್ಡವರು ಮಾತ್ರ ಜಾಣರಲ್ಲ ! 

ಹೃದಯ ಸಮುದ್ರದ ಸುಂದರ ನೃತ್ಯ ಶೈಲಿ 

ಸುಂದರ ನೃತ್ಯ ಮಾಡಿದ ಬಾಲಕಿ 

ಸಾಧನೆಗೆ ಪರಿಶ್ರಮ ಅಗತ್ಯ ಎಂದು ನಿರೂಪಿಸಿದ ಸಾಹಸಿ 

ವೇದಿಗೆಕೆ ಹೆಜ್ಜೆ ಇಡಲು ಬೇಕಾದ್ದು ಆತ್ಮಸ್ಥೈರ್ಯ ಎಂದು ತೋರಿಸಿದ ಪುಟಾಣಿ 

ಸಕ್ಕರೆಯಂತ ಅಕ್ಕರ ಪದ್ಯ ಉಳಿದ ಪ್ರಕಾಶಣ್ಣ 

ಹಮ್ಮು ಬಿಮ್ಮು ಇಲ್ಲದೆ ಮಕ್ಕಳಿಗೆ ಹಿತ ನುಡಿ ಹೇಳಿದ ಅಜಾದ್ ಸರ್ 

ಅಪೂರ್ವ ಸಾಧನೆ ಮಾಡಿದರೂ ನಾವು ಕಂಡ ಅತ್ಯಂತ ಸರಳ ಜೀವಿ, ಹಮ್ಮು ಬಿಮ್ಮು ಇಲ್ಲದೆ ಎಲ್ಲರ ಜೊತೆಯಲ್ಲಿ ಬೆರೆಯುವ ಸರಳ ಗುಣ ನಮ್ಮೆಲ್ಲರ ಮೆಚ್ಚಿನ ಪ್ರೇಮಕವಿ ಶ್ರೀ ಕಲ್ಯಾಣ್ ಅವರದ್ದು. ಅವರ ಜೊತೆಯಲ್ಲಿ ಆಡಿದ ಕೆಲ ಮಾತುಗಳು, ಕಳೆದ ಕೆಲ ಸಮಯ ಜೀವನದ ಉತ್ತಮ ಕ್ಷಣಗಳಲ್ಲಿ ಒಂದು ಎನ್ನಬಹುದು.  ಈ ಕ್ಷಣಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ಕೊಟ್ಟಿತು.

ಪ್ರೇಮಕವಿಗೆ ಪ್ರೀತಿಯ ಕಾಣಿಕೆ 

ಮಕ್ಕಳ ಜೊತೆಯಲ್ಲಿ ಕಾರ್ಯಕ್ರಮಕ್ಕೆ  ಬಂದವರು ಮಕ್ಕಳಾಗಿ ಒಬ್ಬರನ್ನೊಬ್ಬರು ತಮಾಷೆಮಾಡುತ್ತಾ, ನಗುತ್ತಾ, ನಗಿಸುತ್ತಾ ಸುಂದರ ಕ್ಷಣಗಳನ್ನು ಕಳೆದರು. ತಿಂಡಿ ಕೊಡುವ ಸಮಯ, ಊಟ ಮಾಡುವ ಸಮಯ ಎಲ್ಲವಕ್ಕೂ ನಗೆಯೇ ಸಿಹಿ ತಿಂಡಿಯಾಗಿತ್ತು. ತಿಂದದ್ದು, ನಕ್ಕಿದ್ದು ಎಲ್ಲವೂ ಸೇರಿ ಎಲ್ಲರ ಹೊಟ್ಟೆ ಉಬ್ಬಿದ್ದಂತು ನಿಜ.

ನಗಲು ಇನ್ನಷ್ಟು ಹೂರಣ ಸಿಕ್ಕಿದ್ದು ಸತೀಶ್ ನಾಯಕ್ ಅವರ ಸುಮಧುರ ನಿರೂಪಣೆ, ಪ್ರಕಾಶ ಹೆಗಡೆಯವರ ಶಾಲೆಯಲ್ಲಿ ಕಲಿತಿದ್ದ  "ಒಂದು ಎರಡು ಬಾಳೆಲೆ ಹರಡು" ಪದ್ಯ, ಬಾಲೂ ಸರ್ ಅವರ ಹಾಸ್ಯ, ನಡುವೆ ಉತ್ತಮ ಸಂದೇಶ ಕೊಟ್ಟ ಅಜಾದ್ ಸರ್ ಅವರ ಕಿವಿ ಮಾತುಗಳು, ಸ್ನೇಹಲೋಕ ತಂಡದ ನೃತ್ಯ, ಜೊತೆಗೆ ಕಾರ್ಯಕ್ರಮದ ಅಂತಿಮ ಹಂತದಲ್ಲಿ ಎಲ್ಲರ ಜೊತೆಯಲ್ಲಿ ಒಂದು ಚೆಂದದ ಫೋಟೋ ಕಾರ್ಯಕ್ರಮದ ಯಶಸನ್ನು ಸಾರಿ ಸಾರಿ ಹೇಳುತಿತ್ತು.

ಸುಂದರ ಲೋಕ ಈ ನಮ್ಮೆಲ್ಲರ ಸ್ನೇಹಲೋಕ 
ಈ ಕಾರ್ಯಕ್ರಮದ ರೂವಾರಿ ಸತೀಶ್ ಬಿ ಕನ್ನಡಿಗ ಅವರ ಪರಿಶ್ರಮ ಈ ಸುಂದರ ಕಾರ್ಯಕ್ರಮ. ನಾನು ನನ್ನ ಕುಟುಂಬ ಅನ್ನುವ ಈ ಕಾಲದಲ್ಲಿ ತತ್ವ, ಆದರ್ಶಗಳನ್ನೂ ಪಾಲಿಸುತ್ತಾ, ಜನರಿಂದ ಜನರಿಗಾಗಿ ಎನ್ನುವ ತಮ್ಮ ತತ್ವವನ್ನು ಆಚರಣೆಗೆ ತಂದು,  ತಮ್ಮ ಸುತ್ತಮುತ್ತಲ ಪರಿಸರ, ಕುಟುಂಬಗಳ ಕಾಳಜಿವಹಿಸುವ ಇವರ ವ್ಯಕ್ತಿತ್ವಕ್ಕೆ ಒಂದು ಸಲಾಂ ಹೇಳಬೇಕು. ಧಣಿವರಿಯದ ಇವರ ಕೆಲಸ ಸಾಧನೆಗಳ ಬಗ್ಗೆ ಹೆಮ್ಮೆಯಾಗುತ್ತದೆ. ತಮ್ಮ ಪಾಡಿಗೆ ತಾವು ನಂಬಿರುವ ಆದರ್ಶಗಳನ್ನು ಪಾಲಿಸುತ್ತಾ ತೆರೆಮರೆಯಲ್ಲೇ ಇವರು ಮಾಡುತ್ತಿರುವ ಕೆಲಸಗಳು ನಿಜಕ್ಕೂ ಶ್ಲಾಘನೀಯ.

ಪ್ರಕಾಶಣ್ಣನಿಂದ ಅಭಿಮಾನದ ಅಪ್ಪುಗೆ!
ಸತೀಶ್ ಅವರು ಒಂದು ಸುಂದರ ತಂಡ ಕಟ್ಟಿ ತಮ್ಮ ತಲೆಯಲ್ಲಿ ಬಂದ ಆಲೋಚನೆ ಎನ್ನುವ ಬಂಡೆಗೆ ಒಂದು ಸುಂದರ ಮೂರ್ತಿಯ ರೂಪ ಕೊಟ್ಟು, ತಾವು ಸಕ್ರಿಯರಾಗಿರುವ ಗುಂಪುಗಳಾದ ಹತ್ತು ಜನರಿಂದ ಒಂದೊಂದು ತುತ್ತು, ವಾತ್ಸಲ್ಯ ಕುಟುಂಬ, ಸ್ನೇಹಲೋಕ, 3K-ಕನ್ನಡ ಕವಿತೆ ಕವನ, ಶ್ರೀ ಸಾಯಿ ಕಾಮಧೇನು ಫೌಂಡೇಶನ್, ಶಂಕರ್ ನಾಗ್ ಭಕ್ತರು ಮುಂತಾದ ತಂಡಗಳ ಸಹ ಪ್ರಾಯೋಜತ್ವದಲ್ಲಿ ಒಂದು ಸರಳ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿಭಾಯಿಸಿ ನಡೆಸಿಕೊಟ್ಟರು. ಸತೀಶ್ ಅವರಿಗೆ ಹೆಗಲು ಕೊಟ್ಟು ಈ ಕಾರ್ಯಕ್ರಮವನ್ನು ಯಶಸ್ಸಿನ ಹಾದಿಯಲ್ಲಿ ಕೊಂಡೊಯ್ದ ಎಲ್ಲರಿಗೂ ಅಭಿನಂದನೆಗಳು.

ಹುರ್ರಾ  ಕಾರ್ಯಕ್ರಮ ಯಶಸ್ವೀ ಆಯಿತು!
-----------------------------------------------------------------------------------------------------------
"ಅರ್ಜುನ... ಪಾರ್ಥ... ಮಧ್ಯಮ ಪಾಂಡವ... "

"ಆ ಹಾ ಆಅ ಆಅ... ಹಾ ಕರ್ಣ.. ಒಂದು ಕ್ಷಣ ರೋಮಾಂಚನವಾಗುತ್ತೆ  ಈ ಕಾರ್ಯಕ್ರಮವನ್ನು ನೋಡಿದಾಗ.. ಇರು ಕೃಷ್ಣನಿಗೆ ಈ ಕಾರ್ಯಕ್ರಮದ ಬಗ್ಗೆ ಒಂದು ಮೇಲ್ ಕಳಿಸಿ ಬಿಡ್ತೀನಿ.. "

"ಸರಿ ಅರ್ಜುನ.. ನೀನು ಹೊರಡು ತೀರ್ಥಯಾತ್ರೆಗೆ.. ಶುಭವಾಗಲಿ ... ಹಾಗೆಯೇ  ಈ ಕಾರ್ಯಕ್ರಮದ ಒಂದು ಪ್ರತಿಯನ್ನು ನನಗೂ ಕಳಿಸಿಬಿಡು"

"ಆಗಲಿ ಕರ್ಣ... ಶುಭವಾಗಲಿ ನಿನ್ನ ಯಾತ್ರೆ .."

ಅರ್ಜುನ  ವಾಯುದೇವನನ್ನು ಸ್ಮರಿಸಿ ಒಂದು ಬಾಣ ಹೂಡಿದನು.. ಆ ಬಾಣಕ್ಕೆ
srikrishna@mathura.com,
daanaveerakarna@angaraja.com
ಮೇಲ್ ಅಡ್ರೆಸ್ ಹಾಕಿ ಬಿಲ್ಲನ್ನು ಹೆದೆಗೆರಿಸಿ ಅದಕ್ಕೆ ಒಂದು ಕೊಂಡಿಯನ್ನು  ತಾಕಿಸಿ ಬಾಣ ಬಿಟ್ಟನು... !

ಸರ್ವಂ ಕೃಷ್ಣಾರ್ಪಣಮಸ್ತು!
------------------------------------------------------------------------------------------------------------

Monday, June 10, 2013

ಹಳ್ಳಿಯಾವ "ಕಳಿಸಿ"ಕೊಟ್ಟ ಪಾಠ

(ಈ  ಲೇಖನವನ್ನು ಪ್ರಕಟಿಸಿದ ಪಂಜು ತಂಡಕ್ಕೆ ಧನ್ಯವಾದಗಳು ಪಂಜುವಿನಲ್ಲಿ)

ಹಾಗೆಯೇ ಈ ಲೇಖನವನ್ನು ಓದಿ ಮೆಚ್ಚಿ ಪತ್ರಿಕೆಗೆ ಕಳಿಸಿ ಎಂದು ಹುರಿದುಂಬಿಸಿದ ಶ್ರೀ ಪ್ರಕಾಶ್ ಹೆಗಡೆ ಅವರಿಗೆ ಧನ್ಯವಾದಗಳು)

ನಾಗರೀಕ ಸಮಾಜ ಎಂದು ಬೀಗುವ ಪಟ್ಟಣದಲ್ಲಿ ಸಂಸ್ಕೃತಿ ಮರೆತು ಹೇಗೆ ಆಡುತ್ತೇವೆ ಅನ್ನುವ ಭಾವ ಇರುವ ಒಂದು ಕಿರು ಲೇಖನ.

ಗುಡ್ಡ-ಗಾಡುಗಳನ್ನು ಸುತ್ತಿ ಬಸವಳಿದಿದ್ದ ಒಂದು ಗುಂಪು, ತುಂಬಾ ದಿನಗಳಾದ ಮೇಲೆ, ಒಂದೇ ಛಾವಣಿಯಡಿಯಲ್ಲಿ ಸೇರಿದ್ದವು. ಹೊರಗಡೆ ಬಿಸಿಲು ಚೆನ್ನಾಗಿ ಕಾದಿತ್ತು, ಒಳಗೆ ಹೊಟ್ಟೆ ಹಸಿವಿನಿಂದ ಕುದಿಯುತ್ತಿತ್ತು. ಏನು ಸಿಕ್ಕಿದರು ತಿಂದು ತೇಗಿಬಿಡುವ ಧಾವಂತದಲ್ಲಿದ್ದರು.

ಸುಮಾರು ಎಂಟು ಮಂದಿಯಿದ್ದ ಗುಂಪಾದ್ದರಿಂದ ಹೋಟೆಲ್ನಲ್ಲಿ ಒಂದೇ ಟೇಬಲ್ ನಲ್ಲಿ ಜಾಗ ಸಿಗುವುದು ಕಷ್ಟವಾಗಿತ್ತು. ಅಲ್ಲಿದ್ದ ಮೇಲ್ವಿಚಾರಕರು "ಸರ್ ಸ್ವಲ್ಪ ಹೊತ್ತು ಕೂತುಕೊಳ್ಳಿ.. ಆ ಟೇಬಲ್ ಖಾಲಿಯಾಗುತ್ತೆ" ಅಂತ ಒಂದು ಟೇಬಲ್ ಕಡೆ ಕೈತೋರಿಸಿ ಹೇಳಿದರು.

ನಾವೆಲ್ಲರೂ, ಅರ್ಜುನ ಮತ್ಸ್ಯ ಯಂತ್ರ ಭೇದಿಸುವಾಗ, ಆತ ನೀರಿನಲ್ಲಿ ಬರಿ ಮೀನಿನ ಕಣ್ಣನ್ನೇ ನೋಡುತ್ತಾ ಪ್ರಪಂಚದಲ್ಲಿ ಬೇರೇನೂ ಇಲ್ಲವೇನೋ ಅನ್ನುವಷ್ಟು ತಾದ್ಯಾತ್ಮನಾಗಿ ನೋಡುವವನಂತೆ,  ಆ ಟೇಬಲ್ಲಿನ ಮೇಲೆ ಕಣ್ಣಿಟ್ಟುಕೊಂದು ಕೂತಿದ್ದೆವು.

ಮಧ್ಯೆ ಮಧ್ಯೆ ಹಾಸ್ಯ ಚಟಾಕಿಗಳು ಹಾರಾಡುತಿದ್ದವು. ಅವರಲ್ಲಿ ಒಬ್ಬ ಹೇಳುತಿದ್ದ ಈ ತರಹದ ಭೇಟಿಗಳು ನನ್ನೊಳಗಿರುವ ಅನೇಕ ಬೀಗಗಳನ್ನೆಲ್ಲ ತೆಗೆದುಬಿಡುತ್ತದೆ!

ಕೆಲ ಸಮಯದ ನಂತರ ಮೇಲ್ವಿಚಾರಕರು ನಮ್ಮನ್ನು ಕರೆದು "ಸಾರ್ ಈಗ ಖಾಲಿಯಾಗಿದೆ, ನೀವು ಅಲ್ಲಿ ಕೂರಬಹುದು" ಎಂದರು.

"ಹೊಟ್ಟೆ ಚುರುಗುಟ್ತೈತೆ…… ರಾಗಿ ಮುದ್ದೆ ತಿನ್ನೋ ಹೊತ್ತು!" ಅಂತ ಅಣ್ಣಾವ್ರು ಹಾಡಿದ ಹಾಡು ನೆನಪಿಗೆ ಬಂತು. ಸರಿ ಊಟಕ್ಕೆ ದೈಹಿಕವಾಗಿ ಮಾನಸಿಕವಾಗಿ ಸಿದ್ಧವಾದೆವು. ಬಾಳೇ ಎಲೆ ಬಂತು. ಎಲೆಯ ಮೇಲೆ ಬಗೆ ಬಗೆಯ ಭಕ್ಷ್ಯಗಳು ಬಂದು ನೆಲೆಸುತ್ತಿದ್ದವು. ಇನ್ನೇನು ತಿನ್ನಬೇಕು ಅಷ್ಟರಲ್ಲಿ,

"@#@$# ಡಬ್ಲ್ಯೂ#ಡಬ್ಲ್ಯೂ$ @#$@#ಆ#@$ @#$@!!#$" ಯಾರೋ ವಿದೇಶೀಯ ದೊಡ್ಡ ಧ್ವನಿ ಆ ಮಹಡಿಯಲ್ಲಿದ್ದ ಎಲ್ಲರನ್ನು ಚಕಿತಗೊಳಿಸಿತು!. ಯಾರಪ್ಪಾ ಇದು ಎಂದು ಎಲ್ಲರೂ ಧ್ವನಿ ಬಂದತ್ತ ಕತ್ತನ್ನು ತಿರುಗಿಸಿದರು.

ಅಂದು ಶ್ರೀ ಭಗತ್ ಸಿಂಗ್, ಶ್ರೀ ರಾಜಗುರು, ಶ್ರೀ ಸುಖದೇವ್ ತಾಯಿನಾಡಿನ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಮಾತೆಗೆ ಅರ್ಪಣೆ ಮಾಡಿದ "ನಿಜ ಹುತಾತ್ಮರ" ದಿನವಾಗಿತ್ತು …. ಇಂತಹ ಸುದಿನದಲ್ಲಿ ಇವರಾರಪ್ಪ ಇಷ್ಟು ದೊಡ್ಡ ಧ್ವನಿಯಲ್ಲಿ ಮಾತಾಡುತ್ತಿರುವವರು (ಕಿರುಚುತ್ತಿರುವವರು) ಅಂತ ಆಶ್ಚರ್ಯವಾಯಿತು!

ಎಲ್ಲರೂ ಅ ಧ್ವನಿ ಬಂದತ್ತ ತಿರುಗಿ ನೋಡಿದರೆ ಅರ್ಧ ಚಣ್ಣ ಹಾಕಿಕೊಂಡು, ಇಳಿ ಬೀಳುತ್ತಿದ್ದ ಅಂಗಿ ಹಾಕಿಕೊಂಡು, ತಲೆಕೂದಲನ್ನು ಕರೆಂಟ್ ಹೊಡೆಸಿಕೊಂಡವನಂತೆ ನೆಟ್ಟಗೆ ನಿಲ್ಲಿಸಿಕೊಂಡಿದ್ದ, ಕಣ್ಣಿಗೆ ಹಾಕಿಕೊಳ್ಳುವ ಕಪ್ಪು ಕನ್ನಡಕವನ್ನು ತಲೆಗೆ ಏರಿಸಿಕೊಂಡಿದ್ದ… ಒಂಥರಾ ವಿಚಿತ್ರ ಪ್ರಾಣಿಯ ಹಾಗಿದ್ದ   ಒಂದು ಜೀವಿ ಕಂಡಿತು! ಜೊತೆಯಲ್ಲಿ ಒಂದಷ್ಟು ವಿಚಿತ್ರ ಧಿರುಸಿನಲ್ಲಿದ್ದ ಹೆಣ್ಣು ಹೈಕಳು. ಇವನ ಮಂಗಾಟಕ್ಕೆ ಇನ್ನಷ್ಟು ತುಪ್ಪವನ್ನು ಹುಯ್ಯುತ್ತಿದ್ದವು!

ಅಲ್ಲಿದ್ದ ನಾಗರೀಕರು "ಏನೋ…  ಮಂಗಗಳು" ಎಂದು ಮನದಲ್ಲೇ ಬಯ್ದುಕೊಳ್ಳುತ್ತಾ..ಛೆ ಕಾಲ ಕೆಟ್ಟು ಹೋಗಿದೆ ಅಂತ ಏನು ಮಾಡಲಾಗದೆ ಬಾಯಲ್ಲಿ ತ್ಸ್ಚು ತ್ಸ್ಚು ಎಂದು ಸದ್ದು ಮಾಡುತ್ತಾ ಸುಮ್ಮನೆ ಕೂತಿದ್ದರು!

ಅಷ್ಟರಲ್ಲಿ…. ಅಲ್ಲೇ ಊಟ ಮಾಡುತಿದ್ದ ಒಬ್ಬ ಹಳ್ಳಿಯವ ಊಟವನ್ನು ಅರ್ಧಕ್ಕೆ ನಿಲ್ಲಿಸಿ ನಿಧಾನವಾಗಿ ಹೆಜ್ಜೆ ಹಾಕುತ್ತ ಆ ವಿಚಿತ್ರಜೀವಿಯ ಹತ್ತಿರ ಹೋಗಿ,

"ಯಾರಪ್ಪ ನೀನು?"

ಆಗ ಆ ವಿಚಿತ್ರ ಪ್ರಾಣಿ "who are you dude? what do you want?"

"ಯಾಕಪ್ಪ ಈಟು ಜೋರಾಗಿ ಮಾತಾಡುತ್ತಿದ್ದೀಯ.. ಸಾನೆ ವೊಟ್ಟೆ ಅಸೀತ ಇದ್ಯಾ"

"oye!…  what you are talking? get lost from here. you country brute!"

ಹಳ್ಳಿಯವನಿಗೆ ಅವನೇನಂದ ಎಂದು ಪೂರ್ತಿ ತಿಳಿಯಲಿಲ್ಲ.  ಆದರೆ ಕೋಪ ನೆತ್ತಿಗೆ ಏರಿತು  "ಕಂತ್ರಿ ಗಿಂತ್ರಿ ಅಂದ್ರೆ ಸಂದಾಗಿರಕ್ಕಿಲ್ಲ.  ಮೈ ಮ್ಯಾಗೆ ನಿಗಾ ಮಡಕ್ಕಂಡು ಮಾತಾಡು"

"who the hell are you? how dare you to shout at me?"

ಹಳ್ಳಿಯವನಿಗೆ ಅರ್ಥವಾಯಿತು.  ತಾನು ಮುಂದೆ ಏನು ಮಾಡಬೇಕೆಂದು. ಸೀದಾ ಅವನ ತಲೆಯ ಹಿಂಬದಿಗೆ ತನ್ನ ಎಡಗೈಯಿಂದ ಪಟಾರ್ ಅಂತ ಬಲವಾಗಿ ಹೊಡೆದ!

ವಿಚಿತ್ರ ಜೀವಿ "ಅಮ್ಮಾ" ಎಂದು ಚೀರಿ ಕೆಳಕ್ಕೆ ಬಿದ್ದ.. ಹಳ್ಳಿಯವ ಅವನ ಹತ್ತಿರ ಹೋಗಿ

"ಓಹ್ ಕನ್ನಡ ಬತ್ತೈತೆ"

"ಹೂಂ ಬತ್ತದೆ" ಅಂತು ಆ ವಿಚಿತ್ರ ಜೀವಿ!

"ಏನ್ಲಾ ಬಡ್ದತ್ತದೆ… ಯಾವ್ದು ಊರೂ?

"ತ್ಯಾಮಗೊಂಡ್ಲು"

"ಎಲ್ಲಿ ಓದಿದ್ದು"

"ಅಲ್ಲೇ ಒಂದು ಸರ್ಕಾರಿ ಸ್ಕೂಲ್ನಲ್ಲಿ"

"ಓಹ್ ನಮ್ಮೂರಿನವನೇ … ಮತ್ತೆ ಯಾಕಲಾ…. ಇಂಗ್ಯಾಕೆ ಮಂಗನ ತರಹ ಇದ್ದೀಯ… ಏನ್ಲಾ ನಿನ್ನವತಾರ… ಯಾಕಲೇ ಹಿಂಗ್ ಮಾತಾಡ್ತೀಯಾ?"

"ಏನಿಲ್ಲ ಕಣಣ್ಣ.. ಆಫೀಸಿಂದ ಅಮೆರಿಕಾಕ್ಕೆ ಒಂದೀಟು ದಿನ ಕಳಿಸಿದ್ರು.. ಬಂದ್ ಮ್ಯಾಕೆ ಹಿಂಗಾಡಿದ್ರೆ… ಹಿಂಗಿದ್ರೆ… ಚನ್ನ ಅಂತ ಅನ್ನಿಸ್ತು ..ಅಲ್ಲೆಲ್ಲ ಇಂಗೇಯ ಕಣಣ್ಣ .ಅದ್ಕೆ ಅಂಗೆ ಆಗ್ಬುಟ್ಟೆ"

"ಅಲ್ಲಾ ಕಣಲೇ.. ಹಸೂನ ಪರಂಗಿ ದೇಶಕ್ಕೆ ತಗೊಂಡೋಗ್ಬಿಟ್ರೇ…. ಅದು ಹುಲ್ಲು ತಿನ್ನದ್ ಬಿಟ್ಟು ಅದೇನೋ ಕುಟು ಕುಟು ಅಂತ ಕುಟ್ಟತೀರಲ್ಲ ಕಂಪೂಟರ್ ಅಂತ..... ಅದನ್ನ ತಿಂದಾತ !!! .. ಆಟು ಬುದ್ದಿ ಬ್ಯಾಡ್ವ ನಿಂಗೆ?.ಅದು ಸರಿ…  ಅಪ್ಪ ಅಮ್ಮ ಏನು ಯೋಳ್ಳಿಲ್ವಾ ನಿಂಗೆ?"

"ಯೋಳಿದ್ರು… ಆ ಮುದಿಗೊಡ್ಡುಗಳ ಮಾತೇನೂ ಕೇಳಾದು ಅಂತ ಅವ್ರ್ಗೆ ಸಂದಾಕೆ ಬಯ್ದು ಕೂರ್ಸಿದ್ದೀನಿ"

"ಅಯ್ಯೋ ಮಂಗ್ಯಾ.. ನಮ್ಮ ಸಂಸ್ಕಾರ ಕಣ್ಲಾ…  ನಮ್ಮನ್ನ ಕಾಪಾಡೋದು… ಯಾರೋ ಕುಣುದ್ರು ಅಂತ ನೀನು ಕುಣಿಯಾಕೆ ಹೊಂಟೀಯಾ! ಮಂಗ ಮುಂಡೇದೆ ಎಂಗ್ ಲಾಗ ಹಾಕಿದ್ರೂ ಕಾಲ್ ಕೆಳ್ಗೆ ಇರ್ಬೇಕು…ತಿಳ್ಕಾ … ಇಲ್ಲಾಂದ್ರೆ ಪಲ್ಟಿ ಹೊಡೀತೀಯ"

"ಸರಿ ಕಣಣ್ಣ.. ಅರ್ಥವಾಯಿತು.. ಇನ್ನು ಹೀಗೆಲ್ಲ ಆಡಕ್ಕಿಲ್ಲ… ತುಂಬಾ ಉಪಕಾರವಾಯಿತು ಕಣಣ್ಣ… ಮುಚ್ಚಿದ್ದ ಕಣ್ಣು ತೆರೆಸಿದೆ ನೀನು"

"ಅಯ್ಯೋ ಮಂಗ್ಯಾ  .. ಅಪ್ಪ ಅಮ್ಮ ಹೇಳೋದಿಕ್ಕಿಂತಾನ ನನ್ನ ಮಾತು….. ಅವ್ರ ಮಾತು ಕೇಳು ಜೀವನದಲ್ಲಿ ಉದ್ದಾರವಾಯ್ತೀಯ.. ಸರಿ ಹೋಗ್ಬಾ ಅಪ್ಪ ಅಮ್ಮನ್ನ ಮಾತು ಕೇಳು….  ಸಂದಾಗಿ ನೋಡ್ಕೋ ಅವ್ರನ್ನಾ… ಸರಿ ನನ್ನ ಊಟ ಅಲ್ಲೇ ಅಯ್ತೆ… ನಾ ಉಣ್ಣಾಕೆ ಹೊಯ್ತೀನಿ"

ಅಲ್ಲಿದ್ದ ಎಲ್ಲರ ಕಣ್ಣಲ್ಲೂ ಕಣ್ಣೀರು… ಹಾಗೆ ಅವರಿಗಿಲ್ಲದೆ ಎಂಜಲು ಕೈ ಅಂತ ಕೂಡ ನೋಡದೆ ಕೈ ನೋಯುವ ತನಕ ಚಪ್ಪಾಳೆ ತಟ್ಟಿದರು ..ಸುಂದರವಾದ ಮಾತುಗಳನ್ನು ಹೇಳಿ ಹುಲ್ಲನ್ನು ಹಿಡಿದು ಆಕಾಶದಲ್ಲಿದ್ದೀನಿ ಎನ್ನುವ ಭ್ರಮೆಯಲ್ಲಿದ್ದ ಹುಡುಗನಿಗೆ ಸರಿಯಾದ ಮಾರ್ಗ ತೋರಿದ, ಹಳ್ಳಿಯವನಿಗೆ ತಮ್ಮ ಅಭಿನಂದನೆಯನ್ನು ಸಲ್ಲಿಸಿದರು.

ಆಗ ವಿಚಿತ್ರ ಜೀವಿ ಅಲ್ಲಿದ್ದ ಮೇಲ್ವಿಚಾರಕರನ್ನು ಕರೆದು "ಅಣ್ಣ ಬನ್ನಿ ಅಣ್ಣ… ನನ್ನ ಕಣ್ಣ ತೆರೆಸಿದ ಈ ಅಣ್ಣನಿಗೆ ಇವತ್ತು ನನ್ನ ಕಡೆಯಿಂದ ಊಟ.  ಇವರ ಬಿಲ್ಲನ್ನು ನಾನು ಕೊಡುವೆ"

ಮೇಲ್ವಿಚಾರಕರು ಹೇಳಿದರು "ಸರ್ ಈಗ ನೀವು ಮನುಜರಾದಿರಿ!!!"

Friday, May 24, 2013

.......... ಹಾಕಿದ ಆಲದ ಮರ

ನನ್ನ ಮೆಚ್ಚಿನ ಚಿತ್ರಗಳಲ್ಲಿ ಅಮಿತಾಭ್ ಬಚ್ಚನ್ ಅವರ ಲಾವಾರಿಸ್ ಚಿತ್ರ ಕೂಡ ಒಂದು. ಅ ಚಿತ್ರದಲ್ಲಿ ಬಚ್ಚನ್
ಜೀನತ್ ಅಮನ್ ಗೆ  ಹೇಳುವ ಸಂಭಾಷಣೆ

"ಬಡತನದ ಬಗ್ಗೆ  ನಿಮಗೆ ಏನು ಗೊತ್ತು?...ಬಾಲ್ಯದಲ್ಲಿ ತಿನ್ನಲು ರೊಟ್ಟಿಯ ಬದಲು ಮೂದಲಿಕೆ, ತೆಗಳಿಕೆ, ಬಡತನವನ್ನು ಲೇವಡಿ ಮಾಡುವವರು ಸಿಕ್ಕಾಗ...ಮೇಲೇರಲು ಪ್ರಯತ್ನ ಪಟ್ಟಾಗೆಲ್ಲ ಸಮಾಜ ಅವರನ್ನು ಕಡೆಗಣಿಸಿ ನೋಡುವಾಗ ಆಗುವುದೇ ಲಾವಾರಿಸ್"

ಯಾಕೋ ಏನೋ ಈ ಸಂಭಾಷಣೆ ಈ ದಿನ ತುಂಬಾ ಕಾಡಿತ್ತು.

ಸಹನೆಗೆ ಹೆಸರಾಗಿದ್ದ ಅಪ್ಪ.. ಛಲಕ್ಕೆ ಎರಡನೇ ಹೆಸರಾಗಿದ್ದ ಅಮ್ಮ...  ಇಬ್ಬರೂ ಬಡತನದ ಬೇಗೆಯಲ್ಲಿ ನರಳುತ್ತಿದ್ದಾಗ ಮೂಡಿದ ಎರಡು ಕುಸುಮಗಳು ನನ್ನ ಅಕ್ಕ ಹಾಗೂ ಅಣ್ಣ.  ಬಡತನದ ಬೇಗೆಯಲ್ಲಿ ಅಪ್ಪ ಅಮ್ಮನ ಜೊತೆಯಲ್ಲಿ ನರಳಿ ಅವಮಾನದ ತಟ್ಟೆಯಲ್ಲಿ ನಿತ್ಯ ಊಟ ಮಾಡುತ್ತಾ,   ತಾತ್ಸಾರದ ಲೋಟದಲ್ಲಿ ನೀರು ಕುಡಿಯುತ್ತಾ ಶಿವಮೊಗ್ಗದ ಕೋಟೆ ಆಂಜನೇಯನ ಕೃಪಾಶಿರ್ವಾದದಲ್ಲಿ ಬೆಂಗಳೂರಿಗೆ ಬಂದ ಮೇಲೆ...  ಅಪ್ಪ ಹಾಕಿದ ಆಲದ ಮರದ ನೆರಳಲ್ಲಿ ಲತೆಯಾಗಿ ಹಬ್ಬುತ್ತ ಮರವನ್ನು ತಬ್ಬಿ ಹಿಡಿದು ತಮ್ಮ ಕಾಲ ಮೇಲೆ ತಾವು ನಿಂತು ಉತ್ಸಾಹ ತುಂಬಿದ ನನ್ನ ಅಕ್ಕ ಹಾಗೂ ಅಣ್ಣನ ಬಾಳಿನಲ್ಲಿ ಕಳೆದ ಹದಿನೈದು ದಿನಗಳು ಉಲ್ಲಾಸದ ಹೂ ಮಳೆಯನ್ನೇ ಸುರಿಸಿದ ಘಳಿಗೆಗಳು.

ತನ್ನ ಜೀವನ ಅಂಕು ಡೊಂಕಿನ ಹಾದಿಯಲ್ಲಿ ಸಾಗಿದರೂ... ಛಲದಲ್ಲಿ ಅಮ್ಮನಂತೆ ತನ್ನ ಕಾಲ ಮೇಲೆ ನಿಂತು ಇತರರಿಗೆ ಮಾರ್ಗದರ್ಶಿಯಾಗಿ ನಿಂತ ಅಕ್ಕ.. ಬೆಂಗಳೂರಿನಲ್ಲಿ ಅಂಗೈ ಅಗಲ ಜಾಗಕ್ಕೂ ಪರದಾಡಬೇಕಾದ ಸ್ಥಿತಿಯಲ್ಲಿ ಕಷ್ಟ ಪಟ್ಟು ಗಳಿಸಿ ಉಳಿಸಿದ ಹಣದಲ್ಲಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಖರೀದಿ ಮಾಡಿದ್ದ ಒಂದು ನಿವೇಶನದಲ್ಲಿ ಕಳೆದ ಮೇ ಹದಿಮೂರನೇ ದಿನ ಸಾಂಪ್ರದಾಯಿಕವಾಗಿ ಗುದ್ದಲಿ ಪೂಜೆ ಮಾಡಿದಾಗ ಅಮ್ಮನ ಕಣ್ಣಲ್ಲಿ ಆನಂದ ಭಾಷ್ಪಗಳು ಮೂಡಿದವು. ನಮ್ಮ ಅಪ್ಪನ ಕನಸನ್ನು ನನಸು ಮಾಡುವ ಮೊದಲ ಹೆಜ್ಜೆ ಈ ಗುದ್ದಲಿ ಪೂಜೆಯಾಗಿತ್ತು. ದೈಹಿಕವಾಗಿ ಅಪ್ಪ ಇಲ್ಲದೆಯೂ ನಮ್ಮ ಮನದಲ್ಲಿ ಕೂತು ತಲೆಯ ಮೇಲೆ ಅಭಯ ಆಶೀರ್ವಾದದ ಹಸ್ತ ಸದಾ ನೀಡುತ್ತ ಹರಸಿದ ಆ ಕ್ಷಣ ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣಗಳು. ಇಡೀ ಕುಟುಂಬ ಅಂದು ಅಲ್ಲಿ ನೆರೆದಿತ್ತು. ಸಂತಸ ಭರಿತ ಕ್ಷಣಗಳ ಚಿತ್ರಗಳು ನಿಮಗಾಗಿ.

ಹಸುವಿನ ಮನಸ್ಸಿನ ಅಪ್ಪ ಹಸುವಾಗಿ ಆಶೀರ್ವದಿಸಲು ಬಂದ ಕ್ಷಣ... ಪೂಜೆಯ  ಆರಂಭಕ್ಕೆ ಬಂದು
ಪೂಜೆ ಮುಗಿಯುವವರೆಗೂ ಇದ್ದದ್ದು ವಿಶೇಷ ! 

ಹಿರಿಯರು ಮನೆ ಕಟ್ಟಲು ಹೊರಟರೇ ಪುಟಾಣಿಗಳು ಆಸರೆಗೆ ಗಿಡ ನೆಡುತ್ತಿರುವ ಕ್ಷಣ 

ಅಡಿಪಾಯದ ಕಲ್ಲಿಗೆ ಪೂಜಿಸುತ್ತಿರುವ ನಮ್ಮ ಮನೆಯ ಶಕ್ತಿ  ಅಕ್ಕ 

ಮನೆಗೆ ಆಧಾರ ಹಿರಿಯಣ್ಣ 
ಗುದ್ದಲಿ ಪೂಜೆ ಯಶಸ್ಸಿನ ಮೊದಲ ಮೆಟ್ಟಿಲು

ಭೂರಮೆಗೆ ಹಾಲು ಹಾಕಿ ಸಂತೈಸುತ್ತಿರುವ ಕ್ಷಣ 
 
ಸುಂದರ ಕ್ಷಣಗಳಲ್ಲಿ ಜೊತೆ ನಿಂತ ಮನೆ ಮಂದಿ 
ಅಪ್ಪ ತಮ್ಮ ಜೀವನದಲ್ಲಿ ಕೂಡಿಸಿದ್ದು ಸ್ನೇಹ, ಪ್ರೀತಿ,  ವಿಶ್ವಾಸ ಎಂಬ ಗಂಟನ್ನು.... ಕಳೆದದ್ದು... ತಮಗಿಷ್ಟವಾಗದ ತಮ್ಮ ಸಿದ್ಧಾಂತಕ್ಕೆ ವಿರುದ್ಧವಾದ ಕೆಲವು ಬೇಡದ ಕ್ಷಣಗಳನ್ನು... ಅಪ್ಪ ಹಾಕಿದ ಆಲದ ಮರದಲ್ಲೇ ಜೋತಾಡುತ್ತಾ ಕೂಡಿ-ಕಳೆಯುವ ಅಕೌಂಟ್ ವೃತ್ತಿಯನ್ನೇ ಸ್ವೀಕರಿಸಿ ಇಂದು ಆ ವೃತ್ತಿಯಲ್ಲಿ ಅಪಾರ ಹೆಸರು, ಕೀರ್ತಿಯನ್ನು ಗಳಿಸಿರುವ ಅಣ್ಣ ಇಂದು ತನ್ನ ಜೀವನದ ಒಂದು ಕನಸಾದ ವಾಹನವನ್ನು ಮನೆಯ ಮುಂದೆ ನಿಲ್ಲಿಸಿದಾಗ.. ಅಮ್ಮ ಒಂದು ಬಾರಿ ತಮ್ಮ ಯಜಮಾನರ ಭಾವ ಚಿತ್ರವನ್ನು ದಿಟ್ಟಿಸಿ ನೋಡಿದರು. ವಿಶಾಲು ನಾವು ಗೆದ್ದೆವು ಕಣೆ "ನಮ್ಮ ಮಕ್ಕಳು ಸೂಪರ್ ನನ್ಮಕ್ಕಳು" ಎನ್ನುವ ಭಾವ ಚಿತ್ರದಲ್ಲಿತ್ತು.
ಕಷ್ಟದ ದಿನಗಳಿಂದ ಸಾಧನೆಯ ಹಾದಿಯ ಸಂತಸದಲ್ಲಿ ಅಣ್ಣ 
ಇದಕ್ಕಿಂತ ಬೇರೆ ಏನು ಬೇಕು. ಅವಿರತ  ೫೧ ತುಂಬು ವೈವಾಹಿಕ ಜೀವನ ನಡೆಸಿದ ದಂಪತಿಗಳಿಗೆ ಇಂದು (ಮೇ ತಿಂಗಳ ೨೩ನೇ ದಿನ) ಅವರ ೫೩ನೆ ವಾರ್ಷಿಕ ಮಹೋತ್ಸವ.   ಮಕ್ಕಳ ಏಳಿಗೆಗಿಂತ ಉತ್ತಮ ಉಡುಗೊರೆ ಬೇರೆ ಬೇಕೇ ಎಂದುಕೊಂಡ  ಅಮ್ಮನಿಗೆ ಆದ ಖುಷಿಗೆ ಎಣೆಯೇ ಇಲ್ಲ!!!

ಅನುಗ್ರಹ ಸದನದ ಮುಂದೆ ಅನುಗ್ರಹಿತ ವಾಹನ 

ಬೆಳ್ಳಂ ಬೆಳಕಿನಲ್ಲಿ!

ಸಾಧನೆಯ ಹುಮ್ಮಸ್ಸಿನ ಹೆಮ್ಮೆಯಲ್ಲಿ ಅಣ್ಣ ಅತ್ತಿಗೆ 

ಅನುಗ್ರಹಿತ ಪರಿವಾರದೊಂದಿಗೆ ಹೊಸ ಸದಸ್ಯನ ಆಗಮನ 
ನನ್ನ ತಮ್ಮನ ಕೈಯಲ್ಲಿ ಸುಂದರವಾದ ಆಧುನಿಕ ತಂತ್ರಜ್ಞಾನದ ಹೊಸ ಮೊಬೈಲು ಬಂದಿದ್ದು ಇದಕ್ಕೆಲ್ಲ ಕಳಶ ಇಟ್ಟಂತೆ ಆಯಿತು!

ಹೊಸ ಹೊಸ ದಿಕ್ಕಿನಲ್ಲಿ ಯಶಸ್ಸಿನ ಹಾದಿಯಲ್ಲಿ ಬೆಳೆಯುತ್ತಿರುವ ಕುಟುಂಬದ ರೆಂಬೆ ಕೊಂಬೆಗಳನ್ನು ನೋಡಿದ ಅಪ್ಪನ ಮನಸ್ಸು...  ತನ್ನ ಕುಟುಂಬದ ಯಶಸ್ಸಿನ ದಿಕ್ಕಿಗೆ ಕಾರಣರಾದ ಎಲ್ಲರಿಗೂ ಹೇಳಿದ್ದು ಒಂದೇ ಮಾತು "ಸಕಲ ಕಾರ್ಯ ಕಾರಣಗೆ ವಂದನೆ ಅಭಿವಂದನೆ... ನನ್ನ ಅನುಗ್ರಹದ ಸದನ ಸದಸ್ಯರಿಗೆ ಶುಭಾನುಗ್ರಹ ಹೀಗೆ ಸದಾ ಇರಲಿ"

Wednesday, May 8, 2013

ಕೌಶಿಕದ ಅಜ್ಜಯ್ಯ - ಉಸಿರಲ್ಲಿ ಹಸಿರಾದ ಜೀವನ


ದಿನವೂ ಚಂದ್ರನನ್ನು ಕಾಣುವ ಹಂಬಲ ಇದ್ದೆ ಇರುತ್ತೆ 

ಬಾಲ್ಯದಲ್ಲಿ ನಲಿಯುತ್ತಾ ತಾಯಿಯ ಮಡಿಲಲ್ಲಿ ಆಡುತ್ತಾ ನಲಿವ ಮಗುವಿಗೆ ಚಂದಮಾಮನೇ ಜೊತೆಗಾರ 

ಬಾಲ್ಯಾವಸ್ಥೆ ತಲುಪುವ ಹೊತ್ತಿಗೆ ಚಂದಮಾಮನ ಜೊತೆ ತಾಯಿಯ ತುತ್ತು ತಿನ್ನುತ್ತಾ ನಲಿಯುವ ಭಾಗ್ಯ 

ಯೌವನಕ್ಕೆ ಬಂದಾಗ ಜೀವನದ ಆಸೆ ಆಕಾಂಕ್ಷೆಗಳನ್ನು ಗುರಿಯನ್ನು ಚಂದಮಾಮನ ಜೊತೆ ಹಂಚಿಕೊಂಡು ನಲಿಯುವ ಹುಮ್ಮಸ್ಸು 

ದಾಂಪತ್ಯಕ್ಕೆ ಕಾಲಿಟ್ಟಾಗ ಜೀವನದ ಸುಖ ದುಃಖಗಳನ್ನೂ ಚಂದಮಾಮನ ಜೊತೆ ಸಮೀಕರಿಸಿಕೊಳ್ಳುತ್ತಾ ಸುಂದರ ಜೀವನದ ಹೆಜ್ಜೆ ಗುರುತು ಮೂಡಿಸುವ ನೈಪುಣ್ಯತೆ 

ಸಹಸ್ರ ಚಂದ್ರ ದರ್ಶನ ಮಕ್ಕಳ ಕಣ್ಣಲ್ಲಿ ಕಂಡ ಒಂದು ಸುಂದರ ಸರಳ ಜೀವಿ


ಸಹಸ್ರಚಂದ್ರ ದರ್ಶನದ  ಕರೆಯೋಲೆ

ಇವೆಲ್ಲ ಬ್ರಹ್ಮನ ಸುಂದರ ಕಲಾಕೃತಿಯ ಬಗ್ಗೆ ಮನದಾಳದಲ್ಲಿ ಹುಟ್ಟಿದ ಮಾತು!


ಕಳೆದ ಆಗಸ್ಟ್ ತಿಂಗಳಲ್ಲಿ ಭೇಟಿ ಮಾಡಿದಾಗ - ಕೌಶಿಕದ ಅಜ್ಜಯ್ಯ 

ಮೃದುಭಾಷಿ, ಸುಂದರ ಮನಸ್ಸು, ಸುಂದರ ವ್ಯಕ್ತಿತ್ವ, ಮಕ್ಕಳ, ಮೊಮ್ಮಕ್ಕಳ, ಮರಿಮೊಮ್ಮಕ್ಕಳ ಸುಂದರ ಪೀಳಿಗೆಯನ್ನು ಕಂಡ ಸುಮಾರು ತೊಂಭತ್ತೈದು ನವ ಚಿಗುರಿನ ಚೈತ್ರ ಮಾಸವನ್ನು ಕಂಡು ಭೂಮಿತಾಯಿ ಕೂಡಾ ಹೆಮ್ಮೆ ಪಡುವಂತೆ ಸಹನಮೂರ್ತಿಯಾಗಿದ್ದ ಕೌಶಿಕದ ಅಜ್ಜಯ್ಯ ಎಂದೇ ಹೆಸರಾಗಿದ್ದ ಶ್ರೀ ಸೋಮೇಶ್ವರ ಭಟ್ಟ (ಚಿಂತಾಮಣಿ) ಅವರು ತನ್ನ ಮಾತಾ ಪಿತೃಗಳಿಗೂ ಆತ್ಮೀಯ ಸುತರಾಗಿದ್ದರು, ಹಾಗೆಯೇ ಬಂಧು-ಮಿತ್ರರಿಗೆ ಮಾರ್ಗದರ್ಶಕರಾಗಿದ್ದರು. 


ಕ್ಲಾಸಿಕ್ ಚಿತ್ರ .. ತಾರುಣ್ಯದಲ್ಲಿ ಶಂಖದ ದೇವರಭಟ್ಟರ ಮಗ ಶ್ರೀ ಕಿಟ್ಟಣ್ಣ ಅವರ ಜೊತೆಯಲ್ಲಿ 
ಇಂದು ಸಂಜೆ ಸುಮಾರು  ನಾಲ್ಕು ಘಂಟೆ ಆಸು ಪಾಸಿನಲ್ಲಿ ನಮ್ಮೆಲ್ಲರ ಮನಸ್ಸಲ್ಲಿ ಹಸಿರಾಗಿ ಉಳಿದುಕೊಂಡು, ತಮ್ಮ ಉಸಿರನ್ನು ನಮ್ಮ ಜೀವನದ ನಂದನವನಕ್ಕೆ ಪ್ರಾಣವಾಯುವನ್ನಾಗಿಸಿ , ತಮ್ಮ ಹೆಸರನ್ನು, ಗುರುತನ್ನು ಭೂರಮೆಯಲ್ಲಿ ಉಳಿಸಿ ಹೊರಟು ಬಿಟ್ಟರು.

ನನ್ನ ಅಣ್ಣನ ಮಗಳ ಮೊದಲ ವರ್ಷದ ಸಂಭ್ರಮದಲ್ಲಿ ಅನೀರೀಕ್ಷಿತವಾಗಿ ಬಂದು ನನ್ನ ಅಪ್ಪ ಅಮ್ಮನನ್ನು ಹರಸಿದ್ದು ಕಣ್ಣಿಗೆ ಕಟ್ಟಿದಂತಿದೆ. ಕೆಲವು ತಿಂಗಳ ಹಿಂದೆ ನಮ್ಮ ಮನೆಯ ಪರಿವಾರ ಅಜ್ಜಯ್ಯನನ್ನು ಕಂಡು ಮಾತಾಡಿಸಿ ಆಶೀರ್ವಾದ ಪಡೆದ ನೆನಪು ಇನ್ನು ಬೆಟ್ಟದ ತಪ್ಪಲಲ್ಲಿ ಬೆಳೆದ ಹುಲ್ಲಿನಂತೆಯೇ ಹಸಿರಾಗಿದೆ.


ನಮ್ಮ ಕುಟುಂಬ ಅವರೊಡನೆ ಕಳೆದ ಒಂದು ಸುವರ್ಣ ನೆನಪು 
ಅವರ ಮಾರ್ಗದರ್ಶನ, ಅವರು ಜೀವನ ಸಾಗಿಸಿದ ಹಾದಿಯಲ್ಲಿ ನೆಡೆದು ಹಸಿರಾದ ತರುಲತೆಗಳಲ್ಲಿ ನಮ್ಮ ಜೀವನದ ಸಾರ್ಥಕತೆ ಕಾಣುವುದು ಅವರಿಗೆ ನಾವು ಸಲ್ಲಿಸುವ ಭಾವಪೂರ್ಣ ಶ್ರದ್ದಾಂಜಲಿ. 

Monday, April 22, 2013

ನಾ ನಿನ್ನ ಮರೆಯಲಾರೆ!!!


"ಗುರು ಇವತ್ತು ಒಂದು ಸಿನಿಮಾಕ್ಕೆ ಹೋಗೋಣ?"

"ಯಾವ ಸಿನಿಮಾ?"..

"ಕತ್ರಿಗುಪ್ಪೆಯ ಕಾಮಾಕ್ಯ  ಚಿತ್ರಮಂದಿರದಲ್ಲಿ "ಈವಿಲ್ ಡೆಡ್ ಭಾಗ ಮೂರು" ಇದೆ

"ಸರಿ ಹಂಗಾದ್ರೆ ಒಂದು ಆಲೋಚನೆ..ಈಗ ಸಮಯ ಸಂಜೆ ಆರುವರೆ.. ಎರಡನೇ ಆಟಕ್ಕೆ (ಸೆಕೆಂಡ್ ಶೋ) ಹೋಗಿ ಸಿನೆಮಾ ಮುಗಿದ ಮೇಲೆ ಯಾವುದಾದರೂ ದಾಬಕ್ಕೆ ಹೋಗಿ ಊಟ ಮಾಡಿ ನಂತರ ಮನೆಗೆ ಹೋಗುವ ಏನಂತೀರ"

"ಸೂಪರ್ ಐಡಿಯಾ ಗುರು!.. ಇರು ನಮ್ಮ ಹುಡುಗರಿಗೆ ಫೋನ್ ಮಾಡ್ತೀನಿ ಎಲ್ಲರೂ ಹೋಗುವ!

ಇದು ೧೯೯೯ ಏಪ್ರಿಲ್ ತಿಂಗಳಲ್ಲಿ ನಾನು ಕೆಲಸ ಮಾಡುತ್ತಿದ್ದ ಪೀಣ್ಯ ಬಳಿಯ ಒಂದು ಆಫೀಸ್ ನಲ್ಲಿ ನಡೆದ ಒಂದು ಸಂಭಾಷಣೆ!

ಎಲ್ಲರ ಹತ್ತಿರ ಗಾಡಿ ಇತ್ತು ನಾನು, ಸತೀಶ, ಶ್ರೀಕಂಠ ಮೂರ್ತಿ, ಆಡಿಟರ್ ಮೂರ್ತಿ, ಚಂದ್ರು .. ಸುಮಾರು ಏಳು ಘಂಟೆಗೆ ಅಲ್ಲಿಂದ ಹೊರಟೆವು

ಆಗ ವಾಹನ ದಟ್ಟನೆ ಇಷ್ಟೊಂದು ಇರಲಿಲ್ಲಾವಾದ್ದರಿಂದ ಸುಲಭವಾಗಿ ಸುಮಾರು ಏಳು ಮುಕ್ಕಾಲು ಅಷ್ಟರ ಹೊತ್ತಿಗೆ ಕಾಮಾಕ್ಯ ಮುಂದೆ ತಲುಪಿದೆವು. ಶೋ ರಾತ್ರಿ ೯.೧೫ಗೆ ಇತ್ತು. ಸರಿ ಅಲ್ಲೇ ಕುಳಿತು ಪಾನಿ ಪುರಿ ಮಸಾಲೆ ಪುರಿ ಅಂತ ತಿಂದು ಸಮಯ
ಕಳೆದೆವು.
ಚಿತ್ರಕೃಪೆ - ಅಂತರ್ಜಾಲ 
ಈವಿಲ್ ಡೆಡ್ ಎಂಭತ್ತರ ದಶಕದಲ್ಲಿ ದೆವ್ವ ಭೂತಗಳ ಒಂದು ಭಯಾನಕ ಚಿತ್ರ ಎಂದು ಹೆಸರಾಗಿತ್ತು. ಆಗ ನಾನು ಸುಮಾರು ಹತ್ತು ಹನ್ನೆರಡು ವರ್ಷದವನು. ಅದನ್ನು ಸಿಂಫೊನಿ ಚಿತ್ರಮಂದಿರದಲ್ಲಿ ಸೆಕೆಂಡ್ ಶೋನ ಒಬ್ಬರೇ ನೋಡಿಕೊಂಡು ಕಬ್ಬನ್ ಪಾರ್ಕ್ ಮೂಲಕ ತ್ಯಾಗರಾಜ ನಗರ ತಲುಪಬೇಕು ಎನ್ನುವುದು ಗಾಂಧಿ ಬಜಾರ್, ತ್ಯಾಗರಾಜನಗರದ ಸುತ್ತ ಮುತ್ತಲಿನ ಕೆಲ ಎದೆಗಾರಿಕೆ ಹೊಂದಿದ ಪಡ್ಡೆಗಳ ಸವಾಲಾಗಿತ್ತು.

ಚಿತ್ರಕೃಪೆ - ಅಂತರ್ಜಾಲ
ಆಗಲೋ ಈಗಲೂ ಅನ್ನುವಂತೆ ಕೆಲವು ತುಣುಕುಗಳನ್ನು ನೋಡಿದ್ದೇ ಮತ್ತು ಹೆದರಿದ್ದೆ ಕೂಡ. ಈವಿಲ್ ಡೆಡ್ ಭಾಗ ಒಂದು.. ಭಯದ ಹುತ್ತವನ್ನೇ ಸೃಷ್ಠಿಸುತ್ತಿತ್ತು.

ಈಗ ಬೆಳೆದು ದೊಡ್ದವರಾಗಿದ್ದೆವು ಭಾಗ ಒಂದು -ಎರಡು ಎರಡನ್ನು ನೋಡಿರದ ನಾನು.. ಸ್ವಲ್ಪ ಧೈರ್ಯ ಪ್ರದರ್ಶನ ಮಾಡುವ ಎಂದು ಮೂರನೇ ಭಾಗ ಸೆಕೆಂಡ್ ಶೋ ನೋಡಿಯೇ ಬಿಡೋಣ ಎಂದು ನಿರ್ಧರಿಸಿ ಗೆಳೆಯರನ್ನೆಲ್ಲ ಕೂಡಿಕೊಂಡು ಕಾಮಾಕ್ಯ ಚಿತ್ರಮಂದಿರದಲ್ಲಿ ಉಸಿರು ಬಿಗಿ ಹಿಡಿದು ಕೂತಿದ್ದೆವು. ತೊಂಭತ್ತರ ದಶಕದಲ್ಲಿ ಕಾಮಾಕ್ಯ ಚಿತ್ರಮಂದಿರ ಅಮೋಘ ಸೌಂಡ್ ಸಿಸ್ಟಮ್ ನಿಂದ ಹೆಸರು ಮಾಡಿದ್ದ ಚಿತ್ರಮಂದಿರ.

ಇಂಗ್ಲಿಷ್ ಸಿನಿಮಾಗಳ ಅವಧಿ ಒಂದು ಘಂಟೆ ಆಸು ಪಾಸಿನಲ್ಲೇ ಮುಗಿಯುವ ಚಿತ್ರಗಳಾದ್ದರಿಂದ ನಮ್ಮ ದಾಬ ಕಾರ್ಯಕ್ರಮಕ್ಕೆ ಏನು ಅಡಚಣೆ ಇರಲಿಲ್ಲ.

ಸಿನೆಮಾ ಶುರುವಾಯಿತು. ಭಯಾನಕ ದೃಶ್ಯಗಳು , ಎದೆ ಜಿಲ್ ಎನಿಸುವ ಸೌಂಡ್, ಕ್ಯಾಮೆರ ಕೆಲಸ ಎಲ್ಲವು ಎದೆ ನಡುಕವನ್ನು ಹೆಚ್ಚಿಸಿದ್ದವು. ಒಂದು ಕ್ಷಣಕ್ಕೆ ಮಾಡಿದ ನಿರ್ಧಾರ ತಪ್ಪು ಎನ್ನಿಸಿದ್ದರೂ ಆ ಹರಯದ ಮರ್ಕಟ ಮನಸ್ಸು ತಕ್ಷಣಕ್ಕೆ ಸೋಲನ್ನು ಒಪ್ಪಿಕೊಳ್ಳುವ ಮನಸ್ಸು ಮಾಡಿರಲಿಲ್ಲ. ಸರಿ ನೋಡಿಯೇ ಬಿಡೋಣ ಅಂತ ಪೂರ ಚಿತ್ರ ನೋಡಿ ಹೊರಬಂದೆವು. ಎಲ್ಲರ ಮುಖವೂ ಕರೆಂಟ್ ಹೊಡಿಸಿಕೊಂಡ ಕಾಗೆಯ ಹಾಗೆ ಆಗಿತ್ತು. (ಕೆಲವರ್ಷಗಳ ನಂತರ ಈವಿಲ್ ಡೆಡ್ ಭಾಗ ಒಂದು ಮತ್ತು ಎರಡು ನೋಡಿದ ಮೇಲೆ ಮೂರನೇ ಭಾಗ ಒಂದು ತಮಾಷೆ ಚಿತ್ರದಂತೆ ಕಂಡಿತ್ತು)

ಚಿತ್ರಕೃಪೆ - ಅಂತರ್ಜಾಲ
ಯಾರಲ್ಲೂ ದಾಬಕ್ಕೆ ಹೋಗುವ ಧೈರ್ಯ ಇರಲಿಲ್ಲ. ಆದರೆ ಮೊದಲು ಯಾರು ನಿರಾಕರಿಸುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಕಾರಣ ಮೊದಲಿಗೆ ಯಾರೂ ಬೇಡ ಎನ್ನುತ್ತಾರೆ ಅವರ ಕಾಲು ಎಳೆಯಲು ಮಿಕ್ಕೆಲ್ಲ "ಪುಕ್ಕಲು" ಹೃದಯದ ಗೆಳೆಯರು ಕಾಯುತ್ತಿದ್ದರು.

ಕಡೆಗೆ ಒಕ್ಕುರುಲಿನಿಂದ ನೆಡೆಯಿರೋ ದಾಬಕ್ಕೆ ಹೋಗೋಣ.. ಹೊಟ್ಟೆ ಹಸಿತ ಇದೆ ಅಂತ ನಿರ್ಧಾರ ಮಾಡಿ.. ಧೈರ್ಯದ ಮುಖವಾಡ ಹೊತ್ತು  ಬನ್ನೇರುಘಟ್ಟದ ರಸ್ತೆಯಲ್ಲಿದ್ದ ದಾಬ ಕಡೆ ಹೊರಟೆವು.

ಸುಮ್ಮನೆ ಮೇಲುನೋಟಕ್ಕೆ ತಮಾಷೆ ಮಾತಾಡುತ್ತಿದ್ದರೂ ಎಲ್ಲರಿಗೂ ಹೇಗಪ್ಪ ಮನೆ ಸೇರುವುದು ಎನ್ನುವ ಭಯ ಕಾಡುತ್ತಲೇ ಇತ್ತು. ದೆವ್ವದ ಸಿನಿಮಾ ನೋಡಿ, ಮಧ್ಯ ರಾತ್ರಿಯಲ್ಲಿ ಹೇಗೆ ಹೋಗುವುದು, ದಾರಿಯಲ್ಲಿ ಏನೂ ಸಿಗುತ್ತೋ ಏನೋ ಎನ್ನುವ ಭೀತಿ ಕಾಡುತ್ತಲೇ ಇತ್ತು.

ಹೊಟ್ಟೆಬಾಕರಾದ ನಾವೆಲ್ಲಾ ಏನೂ ಜಾಸ್ತಿ ತಿನ್ನದೇ ಆದಷ್ಟು ಬೇಗ ಮನೆಗೆ ಹೋಗಿ ಬಿದ್ದರೆ ಸಾಕು ಎನ್ನುವ ಹಾಗೆ ಇತ್ತು.  ಆದ್ರೆ ಸೋಗಿನ ಮುಖವಾದ ಧರಿಸಿದ್ದ ಕಾರಣ ಹಾಗೆ ಮಾಡುವಂತಿರಲಿಲ್ಲ :-)

ಆಡಿಟರ್ ಮೂರ್ತಿ ಮನೆ ಬನ್ನೇರುಘಟ್ಟದ ರಸ್ತೆಯಲ್ಲಿ ಇತ್ತು ಅವನನ್ನು ಮನೆ ಹತ್ತಿರ ಬಿಟ್ಟು ಮಿಕ್ಕವರು ಹೊರಟೆವು.

ನಾನು ಸತೀಶನಿಗೆ ಹೇಳಿದೆ "ಗುರು ಇವತ್ತು ನೀನು ನಮ್ಮ ಮನೆಗೆ (ವಿಜಯನಗರ) ಬಂದು ಬಿಡು.. ಬೆಳಿಗ್ಗೆ ಹೋಗುವಂತೆ" (ಯಾಕೆ ಹೀಗೆ ಹೇಳಿದೆ.... ಅದಕ್ಕೆ ಕಾರಣ ಬೇಕಿಲ್ಲ ಅಲ್ಲವೇ ಹ ಹ ಹ!)

ಸತೀಶ್ "ಲೋ ಕಾಂತ...  ಏನು ಯೋಚನೆ ಬೇಡ ನಿನ್ನ ಮನೆಯ ತನಕ ಬಂದು ನಾನು ನಮ್ಮ ಮನೆಗೆ ಹೋಗುತ್ತೇನೆ" ಎಂದ (ಅವನ ಮನೆ ಮಾಗಡಿ ರಸ್ತೆಯ ತಾವರೆಕೆರೆ). ನನಗೆ ತುಸು ಧೈರ್ಯ ಬಂತು ಕಾರಣ ಅವನ ಮನೆಗೆ ಹೋಗಬೇಕಾದರೆ ನಮ್ಮ ಮನೆಯ ರಸ್ತೆಯಲ್ಲೇ ಹೋಗಬೇಕಿತ್ತು.

ಶ್ರೀಕಂಠ ಮೂರ್ತಿ ಮನೆ ಶ್ರೀನಿವಾಸನಗರದಲ್ಲಿತ್ತು. ಅವನನ್ನು ಬೀಳ್ಕೊಟ್ಟು ನಾನು,  ಚಂದ್ರ, ಸತೀಶ ಹೊರಟೆವು. ಪುಕ್ಕಲ ಚಂದ್ರ.. ಗುರು ನಾನು ಇವತ್ತು ಶ್ರೀಕಂಠ ಮೂರ್ತಿ ಮನೆಯಲ್ಲಿ ಇರುತ್ತೇನೆ ನೀವು ಹೋಗಿ ಅಂತ ಹೇಳಿ ನಾವು ಮಾತಾಡುವ ಮುಂಚೆನೇ ಗಾಡಿ ತಿರುಗಿಸಿಕೊಂಡು ಹೊರಟು ಬಿಟ್ಟ.

ನಾನು ಸತೀಶ ಇಬ್ಬರೂ ಅವನನ್ನು ಮನಸಾರೆ "ಕಳ್ಳ.. ಪುಕ್ಕಲ, ಹೇಡಿ" ಅಂತೆಲ್ಲ ಬಯ್ದುಕೊಂಡು ಹೊರಟೆವು.   ನನಗೆ ಭಯದ ಹೊಗೆ ಕಾಡುತ್ತಿತ್ತು.   ಈ ಸತೀಶ ಕೈ ಕೊಟ್ಟರೆ ಏನು ಮಾಡೋದು ಅಂತ.

ಸತೀಶ "ಕಾಂತ ಏನೂ ಯೋಚನೆ ಮಾಡಬೇಡ.. ನಾನು ಬರ್ತೇನೆ ನಿನ್ನ ಜೊತೆ" ಅಂತ ಹೇಳಿದ.
ಸರಿ ಶ್ರೀನಿವಾಸ ನಗರದಿಂದ ವಿಜಯನಗರಕ್ಕೆ ಹನುಮಂತನಗರದ ಐವತ್ತು ಅಡಿರಸ್ತೆಯಲ್ಲಿ ಹೋಗುತ್ತಿದ್ದೆವು.

"ಕಾಂತ.. ಯಾಕೋ ನಮ್ಮ ಹುಡುಗರು ನೆನಪಾಗುತ್ತಿದ್ದಾರೆ. ನಿರ್ಮಲ ಸ್ಟೋರ್ಸ್ ಹತ್ತಿರ ಇರುವ ಕಗ್ಗಿಸ್ ಬೇಕರಿಯ ಹತ್ತಿರ ರೂಂನಲ್ಲಿ ಇದ್ದಾರೆ. ನಾನು ಅಲ್ಲಿಗೆ ಹೋಗುತ್ತೇನೆ. ನೀನು ಇಲ್ಲೇ ಇದ್ದು ಬಿಡು ಬೆಳಿಗ್ಗೆ ಹೋಗುವಂತೆ" ಅಂತ ಸತೀಶ ಅಂದ.

ನನಗೆ ನಡುರಾತ್ರಿ ಕೋಪ ಬಂದರೂ ಏನೂ ಹೇಳುವ ಸ್ಥಿತಿಯಲ್ಲಿ ಇರಲಿಲ್ಲ "ಲೋ....  ಹೋಗೋ ನೀನಿಲ್ಲದೆ ಹೋದರೆ....  ನಾನು ಮನೆಗೆ ಹೋಗೋಕೆ ಆಗೋಲ್ವಾ. ಒಬ್ಬನೇ ಹೋಗುತ್ತೇನೆ ಬಿಡು.. ಅಂತ ಗಾಡಿ ಸ್ಟಾರ್ಟ್ ಮಾಡಿದೆ. (ಗಾಡಿ ಗಡ ಗಡ ಎನುತ್ತಿತ್ತು.. ನನ್ನ ಬಾಡಿ ಕೂಡ ಮುಂದಿನ ಸೀನ್ ಬಗ್ಗೆ ನೆನೆದು ನಡುಗುತ್ತಿತ್ತು)

ಸಮಯ ನಡುರಾತ್ರಿ ಸುಮಾರು ಒಂದೂವರೆ ಘಂಟೆಯಾಗಿತ್ತು. ಗೆಳೆಯರೆಲ್ಲರೂ ನಾನಾ ಕಾರಣಗಳಿಂದ ಅವರವರ ಸುರಕ್ಷಿತ ಜಾಗಗಳನ್ನು ಸೇರಿಯಾಗಿತ್ತು (ಮಾರನೆ ದಿನ ಅವರನ್ನೆಲ್ಲಾ ಸರಿಯಾಗಿ ವಿಚಾರಿಸಿಕೊಂಡೆ ಅದು ಬೇರೆ ಕಥೆ).

ನಾನೊಬ್ಬನೇ ನಡುರಾತ್ರಿಯಲ್ಲಿ!

ನಿರ್ಮಲ ಸ್ಟೋರ್ಸ್ ನಿಂದ ನಿಧಾನವಾಗಿ ಗಾಡಿ ಓಡಿಸುತ್ತಾ ಗಾಯತ್ರಿ ಜಪ ಮಾಡುತ್ತಾ ಹೊರಟೆ. (ನನ್ನ ಜೀವನದಲ್ಲಿ ಮೊಟ್ಟ ಮೊದಲ ಬಾರಿ ಮಧ್ಯೆ ರಾತ್ರಿಯಲ್ಲಿ ಒಬ್ಬನೇ ಹೊರಗಿದ್ದದ್ದು ಅದೇ ಮೊದಲು).  ಗಾಳಿ ತುಸು ಮೆಲ್ಲನೆ ಬೀಸುತ್ತಿತ್ತು. ನಿರ್ಮಲ ವಾತಾವರಣ. ಸೂಜಿ ಬಿದ್ದರೂ ಸದ್ದು ಕೇಳಿಸಬಹುದೇನೋ ಅನ್ನುವಷ್ಟು ನಿಶ್ಯಬ್ಧ ವಾತಾವರಣ. ಮೈಯಲ್ಲಿ ತುಸು ನಡುಕ. ನನ್ನ ಬಣ್ಣಕ್ಕಿಂತಲೂ ಕಪ್ಪಾಗಿತ್ತು ಆ ರಾತ್ರಿ!

ಸಿನಿಮಾದಲ್ಲಿ ನೋಡಿದ ಭೂತಗಳು ಕಣ್ಣ ಮುಂದೆ ಅಕ್ಕ ಪಕ್ಕದಲ್ಲಿ ಸುಳಿದಾಡುತ್ತಿರುವ ಹಾಗೆ ಅನ್ನಿಸುತಿತ್ತು. ಗಾಯತ್ರಿ ಮಂತ್ರ ತಾರಕಕ್ಕೆ ಏರುತಿತ್ತು. ಮಧ್ಯೆ ಮಧ್ಯೆ ಭಯದ ಕಾರಣ ಮರೆತು ಹೋಗುತ್ತಿತ್ತು. ಮತ್ತೆ ನೆನಪಿಸಿಕೊಂಡು ಜಪ ಶುರುವಾಗುತ್ತಿತ್ತು. (ಉಪನಯನವಾದಾಗ ಗುರುಗಳು ಹೇಳಿಕೊಟ್ಟಿದ್ದರು.. ಬೇಸರವಾದಾಗ, ಭಯವಾದಾಗ, ಏನೂ ಮಾಡಲು ತೋಚದಾದಾಗ ಗಾಯತ್ರಿ ಮಂತ್ರ ನೆನಪಿಸಿಕೋ ಅಂತ)

ಮಂತ್ರವನ್ನು ಅದೆಷ್ಟು ಬಾರಿ ಹೇಳಿಕೊಂಡೇನೋ ಅರಿವಿಲ್ಲ.. ಅನತಿ ದೂರದಲ್ಲಿ ಒಂದು ಲಾರಿ ಸಾಗುತಿತ್ತು. ಸರಿ ಅದರ ಹಿಂದೆಯೇ ಹೋಗೋಣ ಅಂತ ಹೋಗುತ್ತಿದ್ದೆ.

ನನ್ನ ಹಣೆಬರಹ.. ಆ ಲಾರಿ ಸ್ವಲ್ಪ ದೂರ ಸಾಗಿ ಒಂದು ಕಟ್ಟುತ್ತಿದ್ದ ಕಟ್ಟಡದ ಬಳಿ ನಿಂತು ಬಿಟ್ಟಿತು.
ಗೆಳೆಯರನ್ನೆಲ್ಲ ಬಯ್ದುಕೊಂಡು, ಪ್ರಾಯಶಃ ನನ್ನ ನಿರ್ಧಾರ ತಪ್ಪಾಯಿತು. ಮೊದಲು ಸಿನೆಮಾಕ್ಕೆ ಹೋಗಬಾರದಿತ್ತು, ನಂತರ ದಾಬದ ಊಟ, ಕಡೆ ಪಕ್ಷ ಗೆಳೆಯರ ಮನೆಯಲ್ಲೇ ಉಳಿದುಬಿಡಬೇಕಿತ್ತು.. ಛೆ ನನ್ನ ಅವಿವೇಕತನ.. ಹೀಗೆ ನನ್ನನ್ನೇ ಹಳಿದುಕೊಳ್ಳುತ್ತಾ ಗಿರಿನಗರ ತಲುಪಿದೆ. ಅಲ್ಲಿಂದ ಹೊಸಕೆರೆಹಳ್ಳಿ ಕ್ರಾಸ್ ರಸ್ತೆಯಲ್ಲಿ ಸಾಗಿದರೆ ಮೈಸೂರು ರಸ್ತೆ ಸಿಗುತ್ತಿತ್ತು. ಅಲ್ಲಿಂದ ವಿಜಯನಗರದ ಮನೆ ಕೇವಲ ಎರಡು ಕಿ.ಮಿ.ಗಳು.

ವಿಧಿಯಿಲ್ಲ.. ಬೇರೆ ದಾರಿ ಕಾಣದ ಮುಂದುವರೆದೆ. ದೆವ್ವಗಳು ಮರದ ಮೇಲೆ ಕೂತು ನನ್ನ ಕಡೆ ಕೈ ತೋರಿಸಿ ಕುಹಕ ನಗೆ ಬೀರಿದಂತೆ ಕಂಡಿತು. ಜಪ ಜೋರಾಯಿತು.. ಇನ್ನಷ್ಟು ದೆವ್ವಗಳು ದಾರಿಯಲ್ಲಿ ನನ್ನ ಹೆಸರು ಕೂಗಿದಂತೆ ಭಾಸವಾಯಿತು.

ಢವಗುಟ್ಟುವ ಎದೆಯ ಬಡಿತ ಜೊತೆಯಲ್ಲಿ ಮುಂದೆ ಸಾಗಿದೆ. ಮೈ ಬೆವರಲು ಶುರುವಾಯಿತು, ಕೈ ನಡುಕ ಹತ್ತಿತು, ಕಾಲುಗಳು ಅದುರಲು ಶುರುಮಾಡಿದವು. ಭಯದಿಂದ ನೀರು ಆವಿಯಾದ ತುಟಿಗಳು ಜಪ ಮಾಡಲು ನಿರಾಕರಿಸಿದವು. ಸುಮಾರು ೫೦ ಮೀಟರುಗಳಷ್ಟು ದೂರದಲ್ಲಿ ಹತ್ತಾರು ದೇಹಗಳು ಕೈಯಲ್ಲಿ ಬಲೂನ್ ಹಿಡಿದು ಕೇಕೆ ಹಾಕುತ್ತ, ಕುಣಿಯುತ್ತಾ ಬರುತಿದ್ದವು.

"ಅಯ್ಯೋ ದೇವರೇ. ನನ್ನ ಅವಿವೇಕವನ್ನು ಮನ್ನಿಸಿಬಿಡು. ಈ ದೆವ್ವಗಳಿಂದ ನನ್ನನ್ನು ರಕ್ಷಿಸು" ಎಂದು ಬೇಡಿಕೊಳ್ಳುತ್ತಾ ನಿಧಾನವಾಗಿ ಮುಂದುವರೆದೆ. ನನ್ನ ಕಡೆ ವಕ್ರ ದೃಷ್ಟಿ ಬೀರುತ್ತಾ, ಹಲ್ಲು ಕಿರಿಯುತ್ತಾ, ಕೈ ತೋರಿಸಿಕೊಂಡು ನಗುತ್ತಾ ಆ ದೇಹಗಳು ನನ್ನನ್ನು ದಾಟಿ ಹಿಂದೆ ಹೋದವು.

ನಿಟ್ಟುಸಿರು ಬಿಡುತ್ತಾ ಮೈಸೂರು ರಸ್ತೆಗೆ ಬಂದೆ. ನನ್ನ ಹೃದಯ ಒಂದು ಕ್ಷಣ ನಿಂತೇ ಬಿಟ್ಟಿತು. ಅಲ್ಲಿನ ದೃಶ್ಯವನ್ನು ನೋಡಿ ಕಣ್ಣುಗಳ ರೆಪ್ಪೆ ಕೂಡ ಹಾಗೆಯೇ ಕೆಲ ಕ್ಷಣಗಳು ನಿಂತು ಬಿಟ್ಟವು. ಬಾಯಿಂದ ಮಂತ್ರದ ಶಬ್ಧಗಳು ಇಲ್ಲಾ, ಗಾಡಿ ಸದ್ದು ನನಗೆ ಕೇಳಿಸುತ್ತಿಲ್ಲ!

ಸಾವರಿಸಿಕೊಂಡು ನೋಡಿದೆ. ದೊಡ್ಡ ತೇರು, ಜನ ಸಾಗರ, ಪೊಲೀಸರು ಜನಗಳಿಗೆ ಹೋಗಿ ಹೋಗಿ ಬೇಗ ಹೋಗಿ ಎಂದು ಜನಸಾಗರವನ್ನು ಸರಿಸುತ್ತಿದ್ದರು. ಶ್ರೀರಾಮನವಮಿ ಪ್ರಯುಕ್ತ ತೇರು ಎಳೆದು ಮುಗಿದಿದ್ದರೂ.... ..  ಜನಗಳು ಅಲ್ಲಿ ಇಲ್ಲಿ ಓಡಾಡುತ್ತಾ ತಿಂಡಿ ತಿನಿಸುಗಳನ್ನು ತಿನ್ನುತ್ತಾ, ಅದು ಇದು ನೋಡುತ್ತಿದ್ದರು.

ಶ್ರೀ ರಾಮನಿಗೆ ಮನದಲ್ಲಿ ನಮಿಸಿ, ಪವನ ಸುತ ಹನುಮಂತನಿಗೆ ಮನದಲ್ಲಿ ನಮಸ್ಕರಿಸಿ ಇಂದು ನನ್ನನ್ನು ರಕ್ಷಿಸಿದೆ ಎಂದೆ.

ಭರ್ರನೆ ವಿಜಯನಗರದ ಕಡೆಗೆ ಓಡಿತು ಗಾಡಿ.

"ನಾನು ಶ್ರೀಕಾಂತ" ಎಂದೇ

ಬಾಗಿಲು ತೆರೆದು "ಯಾಕೋ ಇಷ್ಟೊತ್ತಲ್ಲಿ ಬಂದೆ. ಅಲ್ಲೇ ಗೆಳೆಯರ ಮನೆಯಲ್ಲಿ ಇರಬಾರದಿತ್ತೆ. ಈ ಸರಿ ಹೊತ್ತಿನಲ್ಲಿ ಹಾಗೆಲ್ಲ ಬರಬಾರದು ಆಯ್ತಾ" ಅಂತ ಹುಸಿ ಮುನಿಸಿನಿಂದ ಗದರಿ, "ಊಟ ಮಾಡಿದೆಯ?"ಅಂದ್ರು ಅಣ್ಣ (ನನ್ನ ಅಪ್ಪ)

ಎಲ್ಲಿ ಹೋಗಿದ್ದೆ, ಏನು ಮಾಡುತಿದ್ದೆ ಎನ್ನುವ ಪ್ರಶ್ನೆಗಳ ಸುರಿಮಳೆ ನಿರೀಕ್ಷಿಸಿದ್ದ ನನಗೆ ಅವರ ಮಾತುಗಳಿಂದ ಹೃದಯ ತುಂಬಿ ಬಂತು. ತಂದೆಗೆ ಮಕ್ಕಳ ಮೇಲೆ ನಂಬಿಕೆಯಿದ್ದಾಗ ಅವರ ಹೆಸರಿಗೆ ಮಸಿಬಳಿಯುವ ಕೆಲಸ ಮಾಡೋಲ್ಲ ಎನ್ನುವ ತತ್ತ್ವ ನನ್ನ ಅಪ್ಪನದು!

(೨೦ನೆ ಏಪ್ರಿಲ್ ೨೦೧೩ ರ ಶನಿವಾರ ಗಾಳಿ ಅಂಜನೇಯ ದೇವಸ್ಥಾನದ ಹತ್ತಿರ ನಿಂತಿದ್ದ ಜನಸಾಗರ, ತೇರು, ಕಡಲೆ ಪುರಿ, ಬತ್ತಾಸು ಇವನ್ನೆಲ್ಲ ನೋಡಿ ಮನಸ್ಸು ೧೪ ವರ್ಷಗಳ ಹಿಂದೆ ನಡೆದಿದ್ದ ಈ ಪ್ರಸಂಗವನ್ನು ಮತ್ತೆ ಕಣ್ಣ ಮುಂದೆ ತಂದೊಡ್ಡಿತು. ಆ ಪ್ರಸಂಗವಾದ ನಂತರ ಅನೇಕ ಬಾರಿ ಮಧ್ಯ ರಾತ್ರಿಯ ನಂತರ ಓಡಾಡಿದಿದ್ದೇನೆ, ಕಾಡಲ್ಲಿ ಓಡಾಡಿದ್ದೇನೆ, ಬೆಟ್ಟ ಗುಡ್ಡಗಳಲ್ಲಿ ಮಲಗಿದ್ದೇನೆ. . ಆದರೆ ಇವತ್ತಿಗೂ ಅವತ್ತಿನ ಕ್ಷಣ ನೆನೆದರೆ ಮೈ ತುಸು ಕಂಪಿಸುವುದು ಸುಳ್ಳಲ್ಲ)

Wednesday, April 10, 2013

ಎಸ್ ಪಿ.... ಎಸ್ ಪಿ... ಹ್ಯಾಪಿ ಬರ್ತ್ಡೇ!!!

"ಅಗೋ ನೋಡು ಆ ನದಿಯಲ್ಲಿ ಒಂದು ಎತ್ತರದ ಅಟ್ಟಣಿಗೆ ಕಾಣುತ್ತಿದೆಯಾ ? ಅಲ್ಲಿ ಕಾಲು ಇಳಿ ಬಿಟ್ಟು ಕುಳಿತರೆ ಪಾದ ಮುಳುಗುವಷ್ಟು ನೀರು ಕಾಲಿಗೆ ತಾಕುತ್ತೆ"

ಅಚಾನಕ್ಕಾಗಿ ಧ್ವನಿ ಬಂದ ಕಡೆ ತಿರುಗಿತು ಕಣ್ಣುಗಳು.  ಅನತಿ ದೂರದಲ್ಲಿ ಪಟ ಪಟ ಹೆಜ್ಜೆ ಹಾಕುತ್ತ ಒಂದು ಪುಟಾಣಿ ಬರುತ್ತಿತ್ತು . ಸರಿ ನೋಡೋಣ ಏನು ಮಾಡುತ್ತಾರೆ ಅಂತ ಅಲ್ಲೇ ಮರದ ಬದಿಯಲ್ಲಿದ್ದ ಒಂದು ಒಂಟಿ ಬೆಂಚಿನ ಮೇಲೆ ಕುತೂಹಲ ಭರಿತ ಕಣ್ಣುಗಳಿಂದ ಆ ಪುಟಾಣಿಯ ಚಲನವಲನ ನೋಡುತ್ತಾ ಕುಳಿತೆ!

ಆ ಸುಂದರ ಪರಿಸರ, ದಿನವಿಡೀ ಸುತ್ತಾಡಿ ಇನ್ನು ಇಲ್ಲೇ ಇದ್ದು ಬಿಡುತ್ತೇನೆ ಎನ್ನುವ ಹಾಗೆ ಕುಳಿತ ಪ್ರಕೃತಿ ಮಾತೆಯ ಸೌಂದರ್ಯ ರಾಶಿಯೇ ಅಲ್ಲಿ ಇಳಿ ಬಿದ್ದಿತ್ತು. ಎತ್ತ ನೋಡಿದರೂ ಹಸಿರು, ಜುಳು ಜುಳು ಹರಿವ ಝರಿಗಳು, ಚಿಲಿ ಪಿಲಿ  ಸದ್ದು ಮಾಡುತ್ತಾ ಅಲ್ಲಿನ ವಾತಾವರಣಕ್ಕೆ ಸಂಗೀತಮಯ ಹಿಮ್ಮೇಳ ಒದಗಿಸುತ್ತಿತ್ತು.

ಚಿತ್ರಕೃಪೆ - ಅಂತರ್ಜಾಲ
ನನಗೆ ಆಶ್ಚರ್ಯ!...  ಪುಟಾಣಿ ನಿಧಾನವಾಗಿ ಅಟ್ಟಣಿಗೆಯ ತನಕ ನೆಡೆದು ಹೋಗಿ, ಕೂತು.. ಪಾದ ಮುಳುಗುವಷ್ಟು ನೀರಿನಲ್ಲಿ ಕಾಲನ್ನು ಬಡಿಯುತ್ತ ಗಿಲಿ ಗಿಲಿ ನಗುತ್ತಾ ಕೈಬೀಸಿತು!

ಅಲ್ಲೇ ಆಡುತ್ತಿದ್ದ ಆ ಪುಟಾಣಿಯ ತಮ್ಮ... "ಒಹ್ ಅಕ್ಕ ಕರೆಯುತ್ತಿದ್ದಾಳೆ... ಬಂದೆ ಅಕ್ಕಾ!" ಎನ್ನುತ್ತಾ ಓಡುತ್ತಾ ಬಂದಿತು.

"ಏನಕ್ಕಾ ಕರೆದೆಯಲ್ಲ?" ಎಂದಿತು ಆ ಮರಿ ಪುಟಾಣಿ!
ಚಿತ್ರ ಕೃಪೆ - ಅಂತರ್ಜಾಲ

"ಏನಿಲ್ಲ ಕಣೋ!...ಇಲ್ಲಿ ಕೂತು, ಸೂರ್ಯ ಹುಟ್ಟುವುದನ್ನು ನೋಡುತ್ತಾ... ದೂರದೆ ಆಗಸದೆ ತೇಲಿ ಬರುವ ಮೋಡಗಳಲ್ಲಿ ನಮ್ಮ ಕನಸುಗಳನ್ನು ಹೇಳಿಕೊಂಡು, ಅದು ನಮ್ಮತ್ತ ಸಾಗಿ ಬರುವುದನ್ನು ನೋಡುವುದು ಒಂದು ಖುಷಿ... ನೀನು ಜೊತೆಯಿರು ಅಂತ ಕರೆದೆ" ಅಂದಳು ಆ ಪುಟ್ಟಿ!

ಚಿತ್ರಕೃಪೆ - ಅಂತರ್ಜಾಲ 
"ಓಹ್ ಅಷ್ಟೇನಾ!.. ಸರಿ... ನಿನ್ನ ಜೊತೆಯಿದ್ದಾಗ ನೀನು ಆಡುವ ಪ್ರತಿಯೊಂದು ಪದವು ಒಂದು ಕಾವ್ಯ ಅಕ್ಕಾ"  ಅಂದಾ ಆ ಪುಟಾಣಿ ಹುಡುಗ!

ಆ ಪ್ರಶಾಂತ ವಾತಾವರಣವನ್ನು ಭೇಧಿಸಿ ಬರುವಂತೆ ದೂರದಲ್ಲಿ ಉಗಿಬಂಡಿಯ ನಾದ... ಹಸಿರು ಹೊದ್ದ ಪ್ರಕೃತಿ ಮಾತೆಯ ಗರ್ಭವನ್ನು ಸೀಳಿ ಬರುವಂತೆ ವೇಗವಾಗಿ ಹತ್ತಿರ ಬರುತಿತ್ತು.

ಚಿತ್ರಕೃಪೆ - ಅಂತರ್ಜಾಲ
ನಾ ಹೊತ್ತು ಕಳಿಸಿದ್ದ ಒಂದು ಪಾರ್ಸೆಲ್ ಇದೆ ರೈಲಿನಲ್ಲಿ ಬರಬೇಕಿತ್ತು.. ಹಾಗಾಗಿ ಅದನ್ನು ತರಲು ಎದ್ದು ನಿಂತೇ!

ಅಷ್ಟರಲ್ಲಿ ಆ ಪುಟಾಣಿ ಹುಡುಗ ಸ್ಟೇಷನ್ ಮಾಸ್ಟರ್ ಬಳಿ ಓಡಿ ಹೋಗಿ "ಸರ್ ನಾನೇ ಪದ್ಮನಾಭ... ಒಂದು ಪಾರ್ಸೆಲ್ ನನ್ನ ಹೆಸರಲ್ಲಿ ಬರಬೇಕಿತ್ತು.." ಎಂದನು!

ಸ್ಟೇಷನ್ ಮಾಸ್ಟರ್ "ಹೌದು ಮರಿ! ಬಂದಿದೆ... ಹಾಗೆಯೇ ನಿನ್ನ ಅಕ್ಕನನ್ನು ಕರೆ... ಅಕ್ಕನಿಗೆ ಒಂದು ದೊಡ್ಡ ಪಾರ್ಸೆಲ್ ಬಂದಿದೆ... ಅಗೋ ಅಲ್ಲಿ ಒಬ್ಬರು ಬರ್ತಾ ಇದ್ದಾರಲ್ಲ.. ಅವರು ಕೊಡುತ್ತಾರೆ.. ತೆಗೆದುಕೋ" ಅಂದರು!

ಅಷ್ಟರಲ್ಲಿ ನಾನು ನಿಧಾನವಾಗಿ ಹೆಜ್ಜೆ ಇಡುತ್ತಾ ಕಛೇರಿಗೆ ಬಂದೆ.. ಆ ಪುಟಾಣಿ ಹುಡುಗ.. "ಸರ್ ಸರ್ ಬೇಗ ಪಾರ್ಸೆಲ್ ಕೊಡಿ ಸರ್.. ಇದು ಅದರ ರಸೀತಿ.. " ಅಂದ

ಅಲ್ಲಿಯೇ ಇದ್ದ ಪಾರ್ಸೆಲ್ಗಳಲ್ಲಿ ಅವನ ಹೆಸರನ್ನು ಹುಡುಕಿ "ತಗೋ ಕಂದ... ನಿನ್ನ ಅಕ್ಕ ಎಲ್ಲಿ?"

"ಅಕ್ಕಾ.. ಅಕ್ಕಾ ಬೇಗ ಬಾ.. ನಿನ್ನ ಹೆಸರಲ್ಲಿ ಒಂದು ಪಾರ್ಸೆಲ್ ಇದೆಯಂತೆ...!" ಅಂತ ಕೂಗಿದ

"ಬಂದೆ ಕಣೋ.. ನಂಗೆ ಯಾರೋ ಪಾರ್ಸೆಲ್ ಕಳಿಸಿರೋದು?" ಎನ್ನುತ್ತಲೇ ನಿಧಾನವಾಗಿ ಓಡಿ ಬಂದಳು ಪುಟ್ಟಿ!

ನಾನು ಆ ಪುಟ್ಟಿಯ ಹೆಸರಲ್ಲಿದ್ದ ಪಾರ್ಸೆಲ್ ಕೊಟ್ಟೆ... ಅದನ್ನು ನೋಡುತ್ತಲೇ ಕೆನ್ನೆಯುಬ್ಬಿಸಿಕೊಂಡು
"ಬೇಡ ಬೇಡ ಎಂದರೂ... ಇವರೆಲ್ಲಾ ಸೇರಿ ಒಂದು ಪಾರ್ಸೆಲ್ ಕಳಿಸೇ ಬಿಟ್ರಾ... ಇರಲಿ ಇವರೆನ್ನೆಲ್ಲ ಒಂದು ಕೈನೋಡ್ಕೊತೀನಿ" ಅನ್ನುತ್ತಾ ತೋಳು ಮಡಿಸುತ್ತಾ ಇದ್ದಳು, ಅಷ್ಟರಲ್ಲಿ

"ಎಸ್ ಪಿ  ... ಹುಟ್ಟು ಹಬ್ಬದ ಶುಭಾಶಯಗಳು... " ಎನ್ನುತ್ತಾ ನಾನು ಒಂದು ದೊಡ್ಡ ಚಾಕ್ಲೆಟನ್ನು ಕೊಟ್ಟೆ..

ರೈಲ್ವೆ ಸ್ಟೇಷನ್ನಲ್ಲಿದ್ದವೆರಲ್ಲ ಹುಟ್ಟು ಹಬ್ಬದ ಶುಭಾಶಯಗಳು! ಎಂದು ಹಾರೈಸುತ್ತಾ ರೈಲನ್ನು ಹತ್ತಿ ನಿಂತರು.

ರೈಲು ಕೂಡ ಚುಕ್ ಬುಕ್ ಎನ್ನದೆ "ಎಸ್ ಪಿ....  ಎಸ್ ಪಿ... ಹ್ಯಾಪಿ ಬರ್ತ್ಡೇ... ಎಸ್ ಪಿ....  ಎಸ್ ಪಿ... ಹ್ಯಾಪಿ ಬರ್ತ್ಡೇ..... ಎಸ್ ಪಿ....  ಎಸ್ ಪಿ... ಹ್ಯಾಪಿ ಬರ್ತ್ಡೇ" ಎನ್ನುತ್ತಾ ಅಲ್ಲಿಂದ ಹೊರಟಿತು.

ಶುಭಾಶಯಗಳ ಕರತಾಡನ !
ಪುಟ್ಟಿ ನಿಧಾನವಾಗಿ ಹೆಜ್ಜೆ ಹಾಕುತ್ತಾ ಮತ್ತೆ ಅಟ್ಟಣಿಗೆಯ ಬಳಿ ನಡೆದಳು.. ಆಶ್ಚರ್ಯ ಬಜ್ಜಿಗರು ಗುಂಪಿನ ಪ್ರತಿಯೊಬ್ಬರೂ ಅಲ್ಲಿ ಚಪ್ಪಾಳೆ ತಟ್ಟುತ್ತ "ಸಂಧ್ಯಾ ಪುಟ್ಟಿಗೆ ಹುಟ್ಟು ಹಬ್ಬದ ಶುಭಾಶಯಗಳು!!!" ಎಂದು ಕೂಗುತ್ತಾ ಕುಣಿಯುತ್ತಿದ್ದರು!

ಸಂತಸದಿಂದ ಮೂಕಳಾದ ಆ ಪುಟ್ಟಿ ಅಲ್ಲಿಯೇ ಇದ್ದ ನನಗೆ ಒಂದು ಗುದ್ದು ಕೊಟ್ಟು "ಅಣ್ಣಾ ಇದೆಲ್ಲ ನಿಮ್ಮದೇ ಸಿದ್ಧತೇನಾ?..". ಅಂದಳು!

"ನಮ್ಮೆನ್ನೆಲ್ಲ ಅಣ್ಣ ಅಂತೀಯ... ನಿಮ್ಮ ಕುಟುಂಬದ ಒಂದು ಭಾಗವೇ ಆಗಿರುವಾಗ ಇದೆಲ್ಲ ನಮ್ಮ ಕರ್ತವ್ಯ ಅಲ್ಲವೇ ಎಸ್ ಪಿ"  ಎಂದೇ!

ಹೆಜ್ಜೆ ಇಡುತ್ತ ಬಂದ ಎಸ್ ಪಿ ಯ ಅಪ್ಪ, ಅಮ್ಮ,  ಅಕ್ಕ, ಭಾವ, ತಮ್ಮ,... "ಸನ್ ಪುಟ್ಟಾ... ಅದಕ್ಕೆ ಹೇಳಿದ್ದು ಬ್ಲಾಗ್ ಲೋಕ ನಿನಗೆ ಇನ್ನೊಂದು ಕುಟುಂಬವೇ ಆಗಿ ಬಿಟ್ಟಿದೆ... ನೋಡಿದೆಯ ನಮಗೂ ಹೇಳದೆ ಇದೆಲ್ಲ ಮಾಡಿದ್ದಾರೆ!!!" ಎಂದರು

ಆನಂದ ಭಾಷ್ಪ ಸುರಿಸುತ್ತಾ ಪುಟ್ಟಿ ಕೈ ಜೋಡಿಸಿದಳು... ಸ್ವಲ್ಪ ನಗು.. ಸ್ವಲ್ಪ ಮುನಿಸು.. ಸ್ವಲ್ಪ ಭಾವುಕಳಾದ
ಎಸ್ ಪಿ.. ಮುಖವನ್ನು ಆ ಕಡೆ ತಿರುಗಿಸಿಕೊಂಡು ಆನಂದ ಭಾಷ್ಪವನ್ನು ಸುರಿಸಿದಳು.. !

ಭಾವುಕಳಾದ ಎಸ್ ಪಿ !
ಅವಳ ಮೊಬೈಲ್ ನಲ್ಲಿ ಯಾವ ಜನ್ಮದ ಮೈತ್ರಿ ಈ ಜನ್ಮದಲ್ಲಿ ಬಂದು ನಮ್ಮೆಲ್ಲರನ್ನೂ ಮತ್ತೆ ಬಂಧಿಸಿಹುದೋ.... ಕಾಣೆ" ಹಾಡು ತಂಗಾಳಿಯಂತೆ ತೇಲಿ ಬರುತಿತ್ತು!

-----------------------------------------------------------------------------------------------------------

ಬ್ಲಾಗ್ ಲೋಕದ ಮಿತ್ರರು ಕರಿಘಟ್ಟಕ್ಕೆ ಪ್ರವಾಸ ಹೋದಾಗ, ಸದಾ ನಗು ನಗುತ್ತಿರುವ ಮುದ್ದು ಪುಟಾಣಿಯ ಪರಿಚಯ ಆಯಿತು. ಶ್ರೀ ಅಣ್ಣ ಅನ್ನುತ್ತಲೇ ಹತ್ತಿರವಾದ ಹುಡುಗಿ.. ತನ್ನ "ಸಂಧ್ಯೆಯಂಗಳದಿ" ಅಂಗಳದಲ್ಲಿ ಹಾಕಿದ  ಪ್ರತಿಯೊಂದು ರಂಗವಲ್ಲಿಯೂ  ಸೂರ್ಯನ  ಕಿರಣದಷ್ಟೇ ಬಣ್ಣಗಳನ್ನು, ಭಾವಗಳನ್ನು ಹೊತ್ತು ತರುತ್ತವೆ.  ನಿಧಾನವಾಗಿ ತೂಗಿ ಆಡುವ ಮಾತುಗಳಿಂದ ಗಮನ ಸೆಳೆಯುವ ಹುಡುಗಿ... ತಂಗಿ ಇದ್ದರೇ ಹೀಗೆ ಇರಬೇಕು ಎನ್ನುವಂತೆ ಆಪ್ತಳಾಗಿಬಿಡುತ್ತಾಳೆ. ಅವಳ ಮಾತುಗಳು, ಕಷ್ಟ ಸುಖಗಳನ್ನು ಹೇಳಿಕೊಳ್ಳುವ ಭಾವ,  ಪ್ರಾಯಶಃ ದೇವರು ನನಗಾಗಿ ಆರಿಸಿ ಕೊಟ್ಟ ಅನೇಕ ತಂಗಿಯರಲ್ಲಿ ಇವಳು ಒಬ್ಬಳು ಅನ್ನುವಂತೆ ಮಾಡುತ್ತದೆ. ಕಥೆ, ಕವನ, ಚಿತ್ರಕಲೆ, ಕಾಗದದಲ್ಲಿ ಬೊಂಬೆಗಳನ್ನು ಮಾಡುವುದು ಒಂದೇ ಎರಡೇ...
ಸಕಲಕಲಾವಲ್ಲಭೆ  ಎನ್ನಬಹುದು!.  ಭಾವಕ್ಕೆ ಅಭಾವ ಇಲ್ಲ ಅನ್ನುತ್ತಾರೆ.   ಎಸ್ ಪಿ ನಿಜಕ್ಕೂ ಅವರ ಮಾತಾ ಪಿತೃಗಳ ಒಂದು ಅನರ್ಘ್ಯ ರತ್ನವೇ ಸರಿ. ಊರಲ್ಲಿ ಅಪರೂಪದ ಮಂತ್ರ ಘೋಷಗಳ ಆಶೀರ್ವಾದ ಪಡೆದ ಈ ಪುಟ್ಟಿಯ ಎಲ್ಲಾ  ಕನಸುಗಳ ನನಸಾಗಲಿ.. ನನಸಾದ ಕನಸುಗಳು ಚಿಗುರೊಡೆಯಲಿ... ಸದಾ ನಗು ನಗುತಿರುವ ಈ ಪುಟ್ಟಿ,  ಸದಾ ಅರಳು ಮಲ್ಲಿಗೆಯಂತೆ ಘಮ ಘಮಿಸಲಿ ಎಂದು ಹಾರೈಸುತ್ತಾ ..  ಪ್ರೀತಿಯ ಎಸ್ ಪಿ ಗೆ ಹುಟ್ಟು ಹಬ್ಬದ ಶುಭಾಶಯಗಳು..

ಯುಗಾದಿಯ ದಿನದಂದೇ ಬಂದಿರುವ ಈ ಜನುಮ ದಿನ,  ಪುಟ್ಟಿಯ ಜೀವನದಲ್ಲಿ ಮಾವಿನ ಎಲೆಯಂತೆ ಹಸಿರಾಗಿ .. ಬೆಲ್ಲದಂತೆ ಸವಿಯಾಗಿ ಇರಲಿ!

ಎಸ್ ಪಿ ಹುಟ್ಟು ಹಬ್ಬದ, ಯುಗಾದಿಯ ಹಬ್ಬದ ಹಾಗೂ ಹೊಸ ವರ್ಷದ ಶುಭಾಶಯಗಳು!

(ಎಸ್ ಪಿ ಬರೆದ ಒಂದು ಲೇಖನದಲ್ಲಿ "ಅಗೋ ನೋಡು ಆ ನದಿಯಲ್ಲಿ ಒಂದು ಎತ್ತರದ ಅಟ್ಟಣಿಗೆ ಕಾಣುತ್ತಿದೆಯಾ ? ಅಲ್ಲಿ ಕಾಲು ಇಳಿ ಬಿಟ್ಟು ಕುಳಿತರೆ ಪಾದ ಮುಳುಗುವಷ್ಟು ನೀರು ಕಾಲಿಗೆ ತಾಕುತ್ತೆ" ಈ ಸಾಲುಗಳು ತುಂಬಾ ಕಾಡಿದ್ದವು.. ಅವಳ ಅನುಮತಿ ಪಡೆದು ಆ ಸಾಲುಗಳನ್ನು ಕೊಂಚ ಹಿಗ್ಗಿಸಿದ್ದೇನೆ.. ಈ ಲೇಖನದ ಆರಂಭಕ್ಕೆ ಸುಂದರ ಸಾಲುಗಳನ್ನು ಕೊಟ್ಟ ಎಸ್ ಪಿ ನಿನಗೆ ಧನ್ಯವಾದಗಳು)