Monday, April 3, 2017

ಕಾಣದಂತೆ ಮಾಯವಾದನೋ .... ಭಾಗ - ೩ (ಅಂತಿಮ)

ಕಾಣೆಯಾಗಿದ್ದು - ಭಾಗ ೧
ಇನ್ನೇನು ಸಿಕ್ಕಿದ್ದು - ಭಾಗ ೨

ಮುಂದುವರೆದ ಭಾಗ....

ರಾಜೇಶ ಸೀನಪ್ಪನ ಅವಸ್ಥೆ ಕಂಡು.. "ರೀ ಸೀನಪ್ಪ.. ಸಿಗರೇಟ್ ಕೊಡಲೇನು"

ಸಾಹೇಬರ ಈ ಪ್ರಶ್ನೆಗೆ ಹಾವು ತುಳಿದವನಂತೆ.. ಹಾ ಸಾಹೇಬ್ರೆ.. ಏನೂ ಮಾತಾಡ್ತ  ಇದ್ದೀರಿ.. ಸಿಗರೇಟ್ ಬೇಡ.. ಈ ಶಿವನ ಸೀಕ್ರೆಟ್ ಹೇಳಿಬಿಡಿ..  ಸಾಕು.. "

ಅಷ್ಟೇ ತಾನೇ.. ರಂಗ.. ಸೀದಾ ಜೀಪನ್ನು ಗಣೇಶನ ಹೋಟೆಲಿನ ಕಡೆ ತಿರುಗಿಸಿ ಆಮೇಲೆ ನಮ್ಮ ಮನೆಗೆ ಹೋಗೋಣ..

ಜೀಪು ಸರ್ರ್ ಅಂತ ರಾಜೇಶನ ಮನೆಯ ಕಡೆ ತಿರುಗಿತು.. !

ಮತ್ತೆ ಸೀನಪ್ಪ ತಲೆಕೆರೆದುಕೊಂಡ.. ಈ ಬಾರಿ ತಲೆ ಬುರುಡೆ ಚುರ್ ಅನ್ನುವಷ್ಟು ಕೆರೆದುಕೊಂಡ.. ಸಾಹೇಬ್ರು ಹೇಳಿದ್ದು.. ಹೋಟೆಲು ನಂತರ ಮನೆ.. ಆದರೆ ಜೀಪು ತಿರುಗಿದ್ದು ಸಾಹೇಬ್ರ ಮನೆ.. ಏನೋ ಇದೆ.. ಬಡಬಡಿಸುತ್ತಿದ್ದ ಹೃದಯದ ಮೇಲೆ ತನ್ನ ಕೈಯನ್ನು ಇಟ್ಟುಕೊಂಡು.. ಮೆಲ್ಲಗೆ ತನಗೆ ಮಾತ್ರ ಕೇಳುವಂತೆ "ಆಲ್ ಈಸ್ ವೆಲ್" ಎಂದು ಹೇಳಿಕೊಂಡ.. !

ರಾಜೇಶನ ಮನೆಯ ಮುಂದೆ ನಿಂತ ಜೀಪು.. ಮೆಲ್ಲಗೆ ರಂಗ, ಗಣೇಶ, ಸೀನಪ್ಪ ಇಳಿದರು.. 

ಜೀಪಿನ ಶಬ್ದ ಕೇಳಿ ಮನೆಯ ಕೆಲಸದವ ತನ್ನ ದಂತ ಪಂಕ್ತಿಯನ್ನು ಪ್ರದರ್ಶಿಸಿದ.. !

ಮತ್ತೆ ಹುಲ್ಲುಹಾಸಿನ ಮೇಲೆ ಕೂತ ರಾಜೇಶ.. ಸುತ್ತಲೂ ನೋಡಿದ.. ಕೆಲಸದವನಿಗೆ ಕಾಫಿ ಸಿಗರೇಟು ತರುವಂತೆ ಸನ್ನೆ ಮಾಡಿ.. ಹಳ್ಳಿಯಲ್ಲಿ ಅಜ್ಜಿ ಹೇಳುವ ಕತೆಯನ್ನು ಕೇಳಲು ಕೂರುವ ಮಕ್ಕಳ ಹಾಗೆ ಸೀನಪ್ಪ, ರಂಗ ಮತ್ತು ಗಣೇಶ ರಾಜೇಶನನ್ನೇ ಎವೆ ಮಿಟುಕಿಸದಂತೆ ನೋಡುತ್ತಾ ಕುಳಿತರು..  

"ಈಗ ವಿಷಯಕ್ಕೆ ಬರೋಣ.. ಸತ್ತವ "ಶಿವ"... ಯಜಮಾನರ ಮಗಳು "ರಂಜಿನಿ".. ಗಣೇಶ.. ಎರಡನೇ ಕಾಗದ ನೋಡು.." ಗಣೇಶ ಮೆಲ್ಲಗೆ ಕಾಗದ ಬಿಡಿಸಿ ನೋಡಿದ.. "ಶಿವರಂಜಿನಿ ರಾಗದಲ್ಲಿ ಕತ್ತಲಲ್ಲಿ ಕುಳಿತ ನಿಧಿ" ಎಂದು ಬರೆದಿತ್ತು.. ಅದರ ಕೆಳಗೆ ಇನ್ನಷ್ಟು ಸಾಲುಗಳು . ಎಲ್ಲವೂ ಬಿಡಿ ಬಿಡಿ.. ಒಂದೇ ನೋಟಕ್ಕೆ ಅಥವಾ ಓದಿಗೆ ಅರ್ಥವಾಗದ ಒಗಟಿನಂತೆ ಇತ್ತು.. !

ಗಣೇಶನ ಹುಬ್ಬು ಒಂದೆರಡು ಮಿಮಿ ಮೇಲಕ್ಕೆ ಏರಿತು.. "ಗಣೇಶ.. ಅಲ್ಲಿ ಬೋರ್ಡ್ ಮೇಲೆ ರಂಗ ಬರೆದ ಆಲ್ವಾ.. ಅದನ್ನೇ ಇಲ್ಲಿ ಮತ್ತೊಮ್ಮೆ ಬರೀತಾನೆ..ಆಮೇಲೆ ನೀನು ಈ ಎರಡನೇ ಕಾಗದಲ್ಲಿರುವ ವಿಷಯವನ್ನು ಮೊದಲನೇ ಕಾಗದದ ವಿಷಯದ ಜೊತೆಗೆ ಸೇರಿಸುತ್ತಾ.. ಜೋರಾಗಿ ಓದು... ರಂಗ.. ನಿನ್ನ ಮೊಬೈಲ್ನಲ್ಲಿ ಬೋರ್ಡ್ ಮೇಲೆ ಬರೆದಿದ್ದನ್ನು ಫೋಟೋ ತೆಗೆದೇ ಆಲ್ವಾ.. ಈಗ ಅದನ್ನೇ ನೋಡಿಕೊಂಡು ಮತ್ತೊಮ್ಮೆ ಬರಿ"  

ರಂಗನಿಗೆ ಅರೆ ನನ್ನ ಮೊಬೈಲು ಈ ಕೇಸಿಗೆ ಒಂದು ಮುಖ್ಯವಾಗುತ್ತೆ ಅಂತ ತಿಳಿದು ಇನ್ನಷ್ಟು ಖುಷಿಯಾಯಿತು.. ಮೊಬೈಲಿಗೆ ಒಂದು ಸಿಹಿಮುತ್ತನ್ನು ಕೊಟ್ಟು.. ತಾ ತೆಗೆದಿದ್ದ ಫೋಟೋನ ನೋಡಿಕೊಂಡು ಕಾಣದಂತೆ ಮಾಯವಾದನು ಹಾಡನ್ನು ಸಾಹೇಬರು ಹೇಳಿದಂತೆ ಬರೆದ.. ರಾಜೇಶ ಹಚ್ಚಿದ್ದ ಸಿಗರೇಟ್ ಕೊನೆ ಉಸಿರು ಎಳೆಯುತ್ತಿತ್ತು.. ಕಡೆ ದಂ ಎಳೆದು ಸಿಗರೇಟನ್ನು ಆಶ್ ಟ್ರೇ ಒಳಗೆ ಸಮಾಧಿ ಮಾಡಿದ.. !

ಮೆಲ್ಲಗೆ ಉಸಿರು ಎಳೆದುಕೊಂಡು ರಾಜೇಶ ಇನ್ನು ಸೀನಪ್ಪನ ತಲೆ ಕೆರೆದು ಕೆರೆದು ಹುಣ್ಣಾಗಬಾರದು ಎಂದು ಈ ಕೇಸಿನ ಅಂತರಂಗಕ್ಕೆ ನುಗಿದ.. 

ಗಣೇಶ.. ನಾ ಹೇಳಿದ ಹಾಗೆ ಬರೆಯುತ್ತಾ ಹೋಗು... 

ಹೆಣ್ಣಿಗೆಂದು ಅಂದ ಕೊಟ್ಟನು
ನಮ್ಮ ಶಿವ
ಗಂಡಿನಲ್ಲಿ ಆಸೆ ಇಟ್ಟನು
(ಶಿವ ಆ ಊರಿನ ಇನ್ನೊಬ್ಬ ಪ್ರಖ್ಯಾತ ಕುಳನ ಮಗ.. ಕಾಲೇಜಿಗೆ ಹೋಗುತ್ತಿದ್ದ ಸುರಸುಂದರಾಂಗ.. ಆದರೆ ಯಾರಲ್ಲಿಯೂ ಬೆರೆಯುತ್ತಿರಲಿಲ್ಲ.. ಆವ ಊರಿನಲ್ಲಿ ಇದ್ದಾನೆ ಎನ್ನುವುದೇ ಎಷ್ಟೋ ಮಂದಿಗೆ ತಿಳಿಯುತ್ತಿರಲಿಲ್ಲ.. ತಾಳ್ಮೆ, ಶಾಂತ ಸ್ವಭಾವ ಜೊತೆಯಲ್ಲಿ ನಾಚಿಕೆಯೂ ಕೂಡ ಅವನಲ್ಲಿರುವ ಹಣದ ಸಿರಿವಂತಿಕೆಯ ಜೊತೆಯಲ್ಲಿ ಗುಣದಲ್ಲಿಯೂ ಸಿರಿವಂತ ಎಂದು ತೋರಿಸುತ್ತಿತ್ತು.. ಕಾಲೇಜಿನಲ್ಲಿ ಓದುತ್ತಿದ್ದರೂ, ಕಥೆ ಕವನ ಬರೆಯುದು ಅವನ ಹವ್ಯಾಸವಾಗಿತ್ತು.. ಕಾಡಿನ ಸೊಬಗು, ಮೋಡಗಳ ಮೆರವಣಿಗೆ, ದಿನಕರನ ಆರಂಭ ಮತ್ತು ದಿನದ ಮುಕ್ತಾಯದ ವೇಳೆ ರಂಗಾಗಿಸುತ್ತಿದ್ದ ಅಂಬರ ಇವೆಲ್ಲಾ ಅವನ ಕವಿಮನಸ್ಸಿಗೆ ಸ್ಫೂರ್ತಿ ಕೊಡುತ್ತಿತ್ತು.. 

ಇತ್ತ ರಂಜಿನಿ.. ಮೊದಲೇ ಹೇಳಿದ ಹಾಗೆ ದೊಡ್ಡ ಮನೆಯ ಕಿರಿ ಮಗಳು.. ತುಂಟ ಸ್ವಭಾವ.. ಆದರೆ ಯಾರಿಗೂ ತೊಂದರೆ ಕೊಡದ ಹುಡುಗಿ.. ಗಣೇಶನ ಹೋಟೆಲಿನ ಹತ್ತಿರವೇ ನಿಲ್ಲಿಸುತ್ತಿದ್ದ ಪ್ರೈವೇಟ್ ಬಸ್ಸಿನಲ್ಲಿ ದಿನವೂ ಕಾಲೇಜಿಗೆ ಹೋಗಿ ಬರುತ್ತಿದ್ದಳು.. 

ಹೀಗಿದ್ದಾಗ.. ನಾಚಿಕೆ ಸ್ವಭಾದವ  ಹುಡುಗ ಶಿವ.. ಕೀಟಲೆ ಸ್ವಭಾವದ ಹುಡುಗಿ ಅರಿವಿಲ್ಲದೆ.. ತಾರುಣ್ಯದ ಕನಸುಗಳು.. ಹೃದಯದ ವಿಷಯ.. ಹೀಗೆ ನಾನಾಕಾರಣಗಳಿಂದ ಹತ್ತಿರವಾದರು. ಆದರೆ  ನಿರ್ಮಲ ಮನಸ್ಸು ಮತ್ತು ನಿರ್ಮಲ ಪ್ರೀತಿಯಾಗಿತ್ತು ಎಂದು ಅವನ ಜೇಬಿನಲ್ಲಿ ಇದ್ದ ಕವನ ಓದಿದ ಮೇಲೆ ನನಗೆ ಅರಿವಾಯಿತು.. "ರೀ ರಂಜಿನಿ... ನೀವು ನನಗೆ ಇಷ್ಟ ಅಂತ ಹೇಳಿದಾಗ.. ನನಗೆ  ಹೇಳಲು ಗೊತ್ತಾಗಲೇ ಇಲ್ಲ ಕಣ್ರೀ.. " ಆಹಾ ಇಂತಹ ಮರ್ಯಾದೆ ತುಂಬಿದ ಸಂಭೋದನೆ.. ಇದನ್ನೆಲ್ಲಾ ನೋಡಿ.. ಗಣೇಶನ ಹತ್ತಿರ ಇವರಿಬ್ಬರ ಬಗ್ಗೆ ಕೇಳಿ ತಿಳಿದುಕೊಂಡ ಮೇಲೆ ನನಗೆ ಅರಿವಾಗಿದ್ದು.. ಅದಕ್ಕೆ ಗಣೇಶ ಬೇಕು ಎಂದು ಹೇಳಿದ್ದು.. "

ಮತ್ತೊಂದು ಸಿಗರೇಟ್ ಎರಡು ತುಟಿಗಳ ಮದ್ಯೆ ತೂರಾಡುತ್ತಿತ್ತು ..

ನೆಲ್ಲಿಕಾಯಿ ಮರದಲಿಟ್ಟನು
ನಮ್ಮ ಶಿವ
ಕುಂಬಳಕಾಯಿ ಬಳ್ಳಿಲಿಟ್ಟನು
ಪ್ರೀತಿ  ಎಂಬ ನೆಲ್ಲಿಕಾಯನ್ನು ಹೊತ್ತ ಶಿವ.. ದಿನವೂ ಅದಕ್ಕೆ ಮಮತೆ ಮತ್ತು ಮಂದಹಾಸವೆಂಬ ನೀರನ್ನು ಹುಯ್ದು ಪೋಷಿಸುತ್ತಿದ್ದ.. ರಂಜಿನಿಯೂ ಕೂಡ ಹಾಗೆ.. ಇವನ ಪ್ರೀತಿಗೆ ಗುಡಿಯಲಿರುವ ದೀಪದಂತೆ ಶಿವನ ಪ್ರೀತಿಯನ್ನು ಬೆಳಗಿಸುತ್ತಿದ್ದಳು.... ನೆಲ್ಲಿಯ ಕಾಯಿಯ ಹಾಗಿದ್ದ ಪ್ರೀತಿ.. ಅನುದಿನವೂ ಕುಂಬಳಕಾಯಿಯ ತರಹ ದೊಡ್ಡದಾಗುತ್ತಾ ಹೋಯಿತ್ತು.. ಅನುದಿನವೂ ಬಿಟ್ಟಿರಲಾರದಷ್ಟು ಹತ್ತಿರವಾದರೂ ಕೂಡ ಪ್ರೀತಿಗೆ ಕಾಮ ಎಂಬ ಕಪ್ಪು ಚುಕ್ಕೆಯನ್ನು ಇಟ್ಟಿರಲಿಲ್ಲ.. !

ಆಕಾಶ ಮೇಲೆ ಇಟ್ಟನು
ನಮ್ಮ ಶಿವ
ಪಾತಾಳಾ ಕೆಳಗೆ ಬಿಟ್ಟನು

ಇಬ್ಬರ ಜಾತಿ ಅಂತಸ್ತು.. ಹಣ.. ಸಂಪತ್ತು ಯಾವುದು ಕಡಿಮೆ ಇರಲಿಲ್ಲ.. ಎಲ್ಲವೂ ಸರಿಸಮಾನವಾಗಿತ್ತು.. ಎರಡು ಮನೆಯವರಿಗೆ ಗೊತ್ತಾಗಿದ್ದರೆ ಸಾಕು ಅವರೇ ಮುಂದೆ ನಿಂತು ಮದುವೆ ಮಾಡುವಷ್ಟು ಸಮಾಧಾನಚಿತ್ತವುಳ್ಳವರಾಗಿದ್ದರು.. 

ಹೂವು ಹಣ್ಣು ಕಾಯಿ ಕೊಟ್ಟು
ಜಗಳವಾಡೋ ಬುದ್ದಿ ಕೊಟ್ಟು

ಇಂತಹ ಪರಿಸ್ಥಿತಿಯಲ್ಲಿ.. ರಂಜನಿಯ ರೂಪಕ್ಕೆ ಮರುಳಾಗಿದ್ದ ತನ್ನ ಅಪ್ಪನ ಅಕ್ಕನ ಮಗ ಸಂಜೀವ್ .. ಇದಕ್ಕೆ ಕೊಳ್ಳಿ ಇಡುವಂತಹ ಕಾರ್ಯಕ್ಕೆ ಮುಂದಾಗಿದ್ದ.. ! ಶಿವನಿಗೆ ಬೇರೆ ಹುಡುಗಿಯ ಸಂಬಂಧ ಇದೆ.. ಆವ ಹಾಗೆ ಹೀಗೆ ಎಂದು ಇಲ್ಲ ಸಲ್ಲದ ಮಾತುಗಳನ್ನು ಹೇಳಿ.. ಒಂದಾಗಿದ್ದ ಎರಡು ಹೃದಯಗಳ ಮದ್ಯೆ ಹುಳಿಹಿಂಡುವ ಕೆಲಸ ಮಾಡತೊಡಗಿದ್ದ.. ಹುಷಾರಿಲ್ಲದ ಶಿವ ಕೆಲವು ದಿನಗಳು ಕಾಲೇಜಿಗೆ ಬರದಿದ್ದಾಗ .. ಸಂಜೀವ ಹೇಳಿದ್ದು ಮತ್ತು ಅಚಾನಕ್ ಶಿವ ಕಾಣದೆ ಹೋಗಿದ್ದು ಒಂದಕ್ಕೊಂದು ಕಾಕತಾಳೀಯವಾದರೂ ಶಂಕೆಗೊಂಡ ಮನಸ್ಸು  ಪ್ರತಿ ಚಿಕ್ಕ ಚಿಕ್ಕದ್ದಕೂ ಶಂಖ ಊದಲು ತೊಡಗಿತ್ತು.. 

ಹೆಣ್ಣು ಗಂಡು ಸೇರಿಕೊಂಡು
ಯುದ್ಧವನ್ನು ಮಾಡುವಾಗ 
ಹುಷಾರಾದ ಮೇಲೆ.. ರಂಜಿನಿಯನ್ನು ನೋಡುವ ತವಕದಿಂದ ಶಿವ ಬಸ್ ನಿಲ್ದಾಣಕ್ಕೆ ಬಂದರೆ.. ಮೊದಲಿದ್ದ ರೀತಿಯಲ್ಲಿ ಆಕೆ ಇರದದ್ದನ್ನು ಕಂಡು.. ಮನದೊಳಗೆ ಶಿವ ನೊಂದು ಕೊಂಡ.. ತನ್ನ ಮೇಲೆ ಇಷ್ಟವಿಲ್ಲವೋ ಏನೋ.. ತಾನು ಅವಳಿಗೆ ಬೇಡವಾದೆನೋ ಏನೋ.. ಹೀಗೆ ತನ್ನೊಳಗೆ  ಒಂದು ಗೆದ್ದಲಿನ ಗೂಡನ್ನು ಕಟ್ಟಿಕೊಂಡು ಸಂದೇಹವಲ್ಲ ಆದರೆ.. ಪೂರ್ತಿ ಸಮಾಧಾನವೂ ಅಲ್ಲದ ಸ್ಥಿತಿಗೆ ತಲುಪಿದ ಶಿವ... ಇವರಿಬ್ಬರೂ ಮಾತಾಡದೆ ಮುಸುಕಿನ ಗುದ್ದಾಟವನ್ನು ಕಂಡು ಸಂಜೀವ ಮನದೊಳಗೆ ಖುಷಿಪಡುತ್ತಿದ್ದ.. 

ನಡುವೆ ಈ ಭೂಮಿಯನ್ನು 
ದೋಣಿ ಅಂತೇ ತೇಲಿ ಬಿಟ್ಟು
ಇವರಿಬ್ಬರ ನಡುವೆ ಕಂದಕ ಅಗಲವಾಗುತ್ತಾ ಹೋದ ಹಾಗೆ.. ಆ ಕಂದಕದಲ್ಲಿ ಸಂಜೀವ ತ್ರಿವೇಣಿ ಸಂಗಮದ ಇನ್ನೊಂದು ಗುಪ್ತ ನದಿಯ ಹಾಗೆ ಕಂದಕದಲ್ಲಿ ಹರಿಯುತ್ತಾ ಹೋಗಿ.. ತನ್ನ ಪ್ರೀತಿ ಎಂಬ ದೋಣಿಯನ್ನು ರಂಜನಿಯ ಕಡೆಗೆ ಹುಟ್ಟು ಹಾಕತೊಡಗಿದ.. !

ನ್ಯಾಯ ನೀತಿಗಾಗಿ ತಲೆಯ
ಚಚ್ಚಿಕೊಳ್ಳಿರೆಂದು ಹೇಳಿ
ಶಿವನಿಗೆ.. ಅರ್ಥವಾಗುತ್ತಿರಲಿಲ್ಲ.. ಇಲ್ಲಿ ಏನು ನೆಡೆಯುತ್ತಿದೆ ಎಂದು.. ತಲೆಯನ್ನು ಕೆಡಿಸಿಕೊಂಡ.. ಗಡ್ಡ ಬೆಳೆಸಿದ.. ದೇವದಾಸನಂತಾದ.. ಆದರೂ ರಂಜನಿಗೆ ಅವನ ಮೇಲಿನ ಸಂದೇಹ.. ಕಡಿಮೆಯಾಗಲಿಲ್ಲ.. ಜೊತೆಯಲ್ಲಿ ಇದ್ದ ಪ್ರೀತಿ ಕರ್ಪೂರದ ಹಾಗೆ ಕರಗುತ್ತಾ ಹೋಯಿತು.. ಒಮ್ಮೆ ಶಿವ ಧೈರ್ಯ ಮಾಡಿ ಬಸ್ ನಿಲ್ದಾಣದ ಬಳಿ ರಂಜನಿಯನ್ನು ತಡೆದು ಕೇಳಿದ.. ಯಾಕೆ ಹೀಗೆ ನನ್ನನ್ನು ದೂರ ಮಾಡುತ್ತಿದ್ದೀಯ.. ನನ್ನದೇನು ತಪ್ಪು.. ಹೇಳು ಹೇಳು ಎಂದು ಒತ್ತಾಯಿಸಿದಾಗ.. ಆಕೆ ಏನೂ ಹೇಳದೆ ಶಿವನನ್ನು ದುರುಗುಟ್ಟಿಕೊಂಡು ನೋಡಿ "ಥೂ" ಎಂದು ಉಗಿದು ಹೋಗಿದ್ದಳು.. ಇದು ಶಿವನಿಗೆ ತಡೆಯದಾಯಿತು.. ಮಾರನೇದಿನ ಮತ್ತೆ ಅದೇ ಜಾಗದಲ್ಲಿ ಮತ್ತೆ ಅದೇ ಪ್ರಶ್ನೆ ಕೇಳಿದಾಗ.. ರಂಜಿನಿ ನಿನ್ನಂತವನನ್ನು ಮಾತಾಡಿಸೋದೇ ತಪ್ಪು.. ಇಷ್ಟು ದಿನ ಮಾಡಿದ ತಪ್ಪನ್ನು ಈಗ ಮತ್ತೆ ಮಾಡುವುದಿಲ್ಲ.. ಮತ್ತೆ ಮಾತಾಡಿಸಬೇಡ.. ತೊಲಗಿ ಹೋಗು ಎಂದು ಬಯ್ದಿದ್ದಳು ನಾಲ್ಕು ಮಂದಿಗೆ ಕೇಳುವ ಹಾಗೆ.. ಗಣೇಶ ಪೇಟೆಯಿಂದ ತನ್ನ ಹೋಟೆಲಿಗೆ ತರಕಾರಿ, ದಿನಸಿ ಮತ್ತಿತ್ತರ ಸಾಮಾನುಗಳನ್ನು ಹಿಡಿದುಕೊಂಡು ತನ್ನ ಬಸ್ಯಾನಿಗೆ ಕಾಯುತ್ತಾ ನಿಂತಿದ್ದ.. ಇದನ್ನೆಲ್ಲಾ ಕೇಳಿಸಿಕೊಂಡಿದ್ದ.. ಮನಸ್ಸಿಗೆ ಬೇಸರವಾಗಿತ್ತು ಅವನಿಗೆ.. ಒಳ್ಳೆಯ ಜೋಡಿ ಹೀಗಾಯಿತಲ್ಲ ಎಂದು!


ಕತ್ತಲಲ್ಲಿ ನ್ಯಾಯವಿಟ್ಟನು
ನಮ್ಮ ಶಿವ
ಕಣ್ಣುಗಳ ಕಟ್ಟಿ ಬಿಟ್ಟನು 
ಒಂದು ಅಮಾವಾಸ್ಯೆ ಕತ್ತಲು.. ಸ್ಪೆಷಲ್ ಕ್ಲಾಸ್ ಇದ್ದದರಿಂದ ರಂಜನಿ ಕಾಲೇಜಿನಿಂದ ಬರುವುದು ತಡವಾಗಿತ್ತು .. ಶಿವ ಇವತ್ತು ಏನಾದರೂ ಸರಿ .. ವಿಷಯವನ್ನು ಕೇಳಲೇಬೇಕು ಎಂದು ಆ ಮರದ ಹತ್ತಿರವೇ ಕುಳಿತಿದ್ದ.. ಕತ್ತಲಾಗಿತ್ತು ಆದರೆ ಭಯವೇನು ಎಂದರಿಯದ ಶಿವನಿಗೆ.. ರಂಜನಿ ಮಾತ್ರ ಮನದಲ್ಲಿ ತುಂಬಿದ್ದಳು.. 

ಕಡೆ ಬಸ್ಸಿಳಿದು ರಂಜನಿ ನಿಧಾನವಾಗಿ ಹೆಜ್ಜೆ ಇಡುತ್ತಾ ಬರುತ್ತಿದ್ದಳು.. ಕಾಡಿನ ಹಾದಿಯಲ್ಲಿ ಅನತಿ ದೂರದಲ್ಲಿಯೇ ಮನೆಯಿದ್ದರಿಂದ.. ಜೊತೆಯಲ್ಲಿ ಆ ಊರಿನಲ್ಲಿ ಎಲ್ಲರ ಪರಿಚಯವಿದ್ದುರಿಂದ ಭಯಕ್ಕೆ ಅವಕಾಶವಿರಲಿಲ್ಲ.. 

"ರಂಜಿನಿ" ಕರೆದದ್ದು ಕೇಳಿ ತಿರುಗಿದಳು .. ಕತ್ತಲು.. ಮೊಬೈಲ್ ಬೆಳಕಿನಿಂದ ಗೊತ್ತಾಯಿತು.. ಅದು ಶಿವನೇ ಎಂದು.. ನಿಲ್ಲದೆ ಇನ್ನೊಂದೆರಡು ಹೆಜ್ಜೆ ಮುಂದೆ ಹೋದಳು.. ರಟ್ಟೆ ಹಿಡಿದು ನಿಲ್ಲಿಸಿದ ಶಿವ... ಅದೇ ಮೊಟ್ಟ ಮೊದಲ ಬಾರಿಗೆ ಶಿವ ರಂಜನಿಯನ್ನು ಮುಟ್ಟಿದ್ದು... ರಂಜಿನಿಗೆ ಒಂದು ರೀತಿಯ ಕುಶಿಯಾದರೂ.. ಇನ್ನೊಂದು ಕಡೆ ಸಂಜೀವ ತಲೆಗೆ ತುಂಬಿದ್ದ ವಿಷಯಗಳು ಶಿವನ ಬಗ್ಗೆ ತಿರಸ್ಕಾರ ಮೂಡಿಸಿತ್ತು.. 

ರಂಜಿನಿ.. ನೋಡಿ.. ನೀವಂದುಕೊಂಡ  ಹಾಗಲ್ಲ... ಹೋಟೆಲಿನ ಗಣೇಶ ನನಗೆ ಹೇಳಿದ.. ಸಂಜೀವ ನಿನಗೆ ನನ್ನ ಬಗ್ಗೆ ಇಲ್ಲದ್ದು ಹೇಳಿದ್ದು.. ನೋಡಿ ನಾ ನಿಮ್ಮನ್ನಲ್ಲದೆ ಬೇರೆ ಯಾರನ್ನು ಇಷ್ಟಪಟ್ಟಿಲ್ಲ.. ನೀವು ಸಿಕ್ಕರೆ ಸರಿ.. ಇಲ್ಲದೆ ಹೋದರೆ ಜನುಮದಲ್ಲೇ ನನಗೆ ವಿವಾಹವಿಲ್ಲ.. ಇನ್ನೊಂದು ಹುಡುಗಿಯನ್ನು ನಾ ನೋಡಿಲ್ಲ, ನೋಡೋಲ್ಲಾ, ನೋಡೋದು ಇಲ್ಲಾ.. ಇದು ನನ್ನ ಹೆತ್ತ ತಾಯಿ ಮೇಲಾಣೆ.. "

ರಂಜನಿ ಹಗುರಾದಳು.. ಆದರೂ ಸಂಜೀವನ ಮಾತುಗಳು ಆಳಕ್ಕೆ ಇಳಿದಿದ್ದವು.. "ನೋಡಿ ಶಿವ ಏನೂ ಹೇಳಬೇಕೋ ನನಗೆ ಗೊತ್ತಿಲ್ಲ.. ಆದಷ್ಟು ಬೇಗ ಸಂಜೀವನನ್ನು ನಿಮ್ಮ ಮುಂದೆ ನಿಲ್ಲಿಸುತ್ತೇನೆ.. ಮೂವರು ಮಾತಾಡಿ ಬಗೆ ಹರಿಸಿಕೊಳ್ಳೋಣ.. ಆಮೇಲೆ ನೋಡೋಣ.. " 

ಇಷ್ಟು ಹೇಳಿ ರಂಜಿನಿ ತಲೆ ತಗ್ಗಿಸಿಕೊಂಡು ಮೊಬೈಲ್ ಟಾರ್ಚ್ ಆನ್ ಮಾಡಿಕೊಂಡು ಹೊರಟೆ ಬಿಟ್ಟಳು.. 

ಮೊಗದಲ್ಲಿ ಮಂದಹಾಸ ತುಂಬಿಕೊಂಡ ಶಿವ ನಿಧಾನವಾಗಿ ತನ್ನ ಮನೆಯ ಕಡೆಗೆ ಹೆಜ್ಜೆ ಹಾಕತೊಡಗಿದ.. .. ಏನೋ  ಚುಚ್ಚಿದ ಹಾಗೆ ಅನಿಸಿತು.. ಚುರ್ ಅಂತು ಅಷ್ಟೇ.. ಮೆಲ್ಲಗೆ ಒಂದು ಮರದ ಕೆಳಗೆ ಹಾಗೆ ಕುಸಿದ.. ಸುತ್ತಲೂ ಏನೂ ಕಾಣದಾಗಿತ್ತು.. ತನ್ನ ಕಾಲನ್ನು ಯಾರೋ ತುಳಿದುಕೊಂಡು ಹೋದಂತೆ ಅನಿಸಿತು.. ಕೂಗಲು ಬಾಯಿ ತೆಗೆದ.. ಒಂದು ಕೈ ಬಾಯಿಯನ್ನು ಬಲವಾಗಿ ಮುಚ್ಚಿತು.. ಕಾಲು ಬಡಿದುಕೊಳ್ಳಲು ಹೋದರೆ.. ಎರಡು ಕಾಲನ್ನು ಇನ್ನೊಂದು ಜೊತೆ ಕೈಗಳು ಗಟ್ಟಿಯಾಗಿ ಹಿಡಿದುಕೊಂಡವು.. ಕೈಯನ್ನು ಕತ್ತಲಲ್ಲಿ ಅತ್ತಿತ್ತ ಬೀಸತೊಡಗಿದ.. ಆದರೂ ಕೈಯನ್ನು ಹಿಂದಕ್ಕೆ ಹಿಡಿದುಕೊಂಡಿತು ಕಾಣದ ಕೈಗಳು.. 

ಚುಚ್ಚಿದ್ದ ಔಷಧಿ ನಿಧಾನವಾಗಿ ಕೆಲಸ ಮಾಡತೊಡಗಿತ್ತು.. ಕಣ್ಣುಗಳು ಮಂಜಾಗತೊಡಗಿದವು.. ಕೈಕಾಲುಗಳು ಆಡಿಸಲು ಸೋಲನ್ನು ಒಪ್ಪಿಕೊಂಡಿದ್ದವು.. ಗಂಟಲಿನಲ್ಲಿ ನೀರು ಇಂಗತೊಡಗಿತ್ತು.. ಹೃದಯದ ಬಡಿತ ಮೆಲ್ಲನೆ ವೇಗ ಕಳೆದುಕೊಳ್ಳತೊಡಗಿತ್ತು.. ದೂರದಲ್ಲಿ ಒಂದು ಹೆಣ್ಣಿನ ಧ್ವನಿ.. ಸರಿಯಾಗಿ ಮಾಡಿದೆ.. ಗಂಡು ಧ್ವನಿ ಮತ್ತೆ ನನ್ನ ಬೇಟೆಯನ್ನು ನಾ ಬೇರೆ ಶಿಕಾರಿಗೆ ಒಪ್ಪಿಸುತ್ತೀನಾ.. ನೋ ಚಾನ್ಸ್.. .. ಶಿವನ ದೇಹ ತಣ್ಣಗಾಗತೊಡಗಿತ್ತು.. 


ಕೊಡುವುದನ್ನು ಕೊಟ್ಟು
ಬಿಡುವುದನ್ನು ಬಿಟ್ಟು
ಕೈಯ ಕೊಟ್ಟು ಓಡಿ ಹೋದನು"

ಶಿವ ತನ್ನ ಪ್ರೀತಿಯನ್ನು ಇನ್ನೊಬ್ಬರಿಗೆ ಬಿಟ್ಟುಕೊಟ್ಟಿದ್ದನು.. ಅಲ್ಲಾ ಅಲ್ಲ ಬಲವಂತವಾಗಿ ಅವನಿಂದ ಕಿತ್ತುಕೊಂಡಿದ್ದರೂ.. ರಂಜಿನಿಯ ಬಾಳಿನಲ್ಲಿ ಬೆಳಕಾಗಬೇಕಿದ್ದ ಶಿವ.. ಅವಳ ಸಂದೇಹ ಎಂಬ ಗಾಳಿಗೆ ತನ್ನ ಬದುಕಿನ ದೀಪವನ್ನು ಆರಿಸಿಕೊಂಡು ಯಾರಿಗೂ ಸಿಗದೇ.. ಕೈ ಹಿಡಿಯಬೇಕಿದ್ದ ಸ್ಥಿತಿಯಿಂದ ಎಲ್ಲರಿಗೂ ಕೈಕೊಟ್ಟು ಬಾರದ ಲೋಕಕ್ಕೆ ಪಯಣಿಸಿದ್ದನು.. 

ಕಾಣದಂತೆ ಮಾಯವಾದನು..
ನಮ್ಮ ಶಿವ ಕೈಲಾಸ ಸೇರಿಬಿಟ್ಟನು
ಅಣ್ಣಾವ್ರ ಚಿತ್ರದಲ್ಲಿನ ಹಾಡಿನಂತೆ.. ಕಾಣದಂತೆ ಮಾಯವಾದ ಶಿವ ಕೈಲಾಸ ಸೇರಿಯೇ ಬಿಟ್ಟಿದ್ದಾನೆ.. 

ಆಶ್ ಟ್ರೇಯಲ್ಲಿ ಇನ್ನೊಂದಷ್ಟು ಸಿಗರೇಟುಗಳು..ಪಕ್ಕದಲ್ಲಿದ್ದ ಕಸದ ಬುಟ್ಟಿಯಲ್ಲಿ ಕಾಫಿ ಕಪ್ಪುಗಳು ಬಿದ್ದಿದ್ದವು.. ತಮ್ಮ ಜೀವನ ಮುಗಿಯಿತು ಶಿವನ ತರಹ ಎಂದು ಸಾಕ್ಷಿಯಾಗಿ!

ನಿಟ್ಟುಸಿರು ಬಿಟ್ಟ ರಾಜೇಶ.. ಸೀನಪ್ಪನ ಕಡೆಗೆ ನೋಡಿದ.. ಸೀನಪ್ಪನ ಮೊರೆಯಲ್ಲಿ ಇನ್ನೂ ಉತ್ತರ ಬೇಕಿದ್ದ ಪ್ರಶ್ನೆಗಳು ಕಂಡವು.. ರಂಗ.. ತನ್ನ ಮೊಬೈಲ್ನಲ್ಲಿನ ಸಂದೇಶಗಳನ್ನು ನೋಡುತ್ತಾ ಕೂತಿದ್ದ.. ಗಣೇಶನ ಮೊಗದಲ್ಲಿ ಏನೋ ಒಂದು ರೀತಿಯ ದಿಗ್ವಿಜಯ ಸಾಧಿಸಿದ ಸಂತಸ.. 

"ಸಾಹೇಬ್ರೆ.. ಇನ್ನೊಂದಿಷ್ಟು ಚುಕ್ಕೆಗಳನ್ನು ಇಟ್ಟು ಅದನ್ನು ಸೇರಿಸಿಲ್ಲ.. ಪೂರ್ತಿ ಸೇರಿಸಿ.. ಆಮೇಲೆ ನನಗೆ ಒಂದು ಪೂರ್ತಿ ಚಿತ್ರ ಸಿಗುತ್ತೆ.. "

"ರೀ ಸೀನಪ್ಪ.. ನೀವೇ ಪ್ರಶ್ನೆ ಕೇಳಿ ನಾ ಅದಕ್ಕೆ ಉತ್ತರ ಕೊಡುತ್ತೇನೆ.. ಆಗ ನಿಮಗೆ ಇದ್ದ ಅನುಮಾನವೂ ಬಗೆ ಹರಿಯುತ್ತದೆ.. ಹಾಗೆಯೇ ಈ ಕೇಸಿನ ಫೈಲಿಗೆ ಬೇಕಾದ ಸಾಕ್ಷ್ಯ ಆಧಾರ ಮತ್ತು ಕೇಸನ್ನು ಬಗೆ ಹರಿಸಿದ ರೀತಿ ಒಂದು ಒಳ್ಳೆಯ ಕಥೆಯ ತರಹ ಸಿಗುತ್ತದೆ.. "

ಸೀನಪ್ಪ ಟೋಪಿಯನ್ನು ಮತ್ತೆ ತೆಗೆದು ತಲೆಯನ್ನು ಕೆರೆದುಕೊಂಡು 
೧) ಸೀನಪ್ಪ : ಸಾಹೇಬ್ರೆ.. ಮೊದಲಿಗೆ ಶಿವನ ಜೇಬಿನಲ್ಲಿದ್ದ ಕಾಗದದಲ್ಲಿದ್ದನ್ನು ನೀವು ಕೊಟ್ಟ ಮೇಲೆ ನಾ ಓದಿದ್ದೆ.. ಆದರೆ ಅದು ಪೂರ್ತಿ ಅರ್ಥ ಆಗಿರಲಿಲ್ಲ.. ಅದರಲ್ಲಿದದ್ದು ಏನು?
ರಾಜೇಶ : ಸೀನಪ್ಪ.. ಶಿವನಿಗೆ ರಂಜಿನಿಯ ಬದಲಾವಣೆ ಕಂಡು ಅವನು ಬರೆದಿದ್ದ ಒಂದು ಪುಟ್ಟ ಕವಿತೆ ಅದು 
ಕತ್ತಲಲ್ಲಿ ನ್ಯಾಯವಿತ್ತ ಶಿವ. 
ಆ ನ್ಯಾಯವನ್ನು ಬಯಲಿಗೆ ಬಿಟ್ಟ ಶಿವ 
ಬಯಲಲ್ಲಿ ಸಿಗದ ನ್ಯಾಯ ಶಿವ 
ಕತ್ತಲೆಯಲ್ಲಿ ಸಿಗುವುದೇ ಶಿವ 
ರಂಜನೆಗೆಂದು ಪ್ರೀತಿಯೇ ಶಿವ 
ಪ್ರೀತಿಗೆಂದು ರಂಜನೆಯ ಶಿವ 
ಅವರಿಗದು ರಂಜನೆಯೇ ಆದರೂ ಶಿವ 
ರಂಜಿನಿ ಮಾತ್ರ ನನಗೆ ಸಿಗದೇ ಹೋಯ್ತು ಶಿವ 
ಜೀವ ಉಳಿಸಬೇಕಿದ್ದ ಸಂಜೀವಿ ಶಿವ 
ಪ್ರೀತಿಯ ಜೀವವನ್ನೇ ಹಿಸುಕಿಬಿಟ್ಟನಲ್ಲ ಶಿವ 
ಕತ್ತಲಲ್ಲಿ ನ್ಯಾಯವಿಟ್ಟ ಶಿವ 
ನನ್ನ  ಬಾಳಿನಲ್ಲಿ ಕತ್ತಲನ್ನು ಕಟ್ಟಿದೆಯಲ್ಲ ಶಿವ 

ಇಂತಿ ನಿನ್ನ ಶಿವ!!!

ದಿಗ್ಗನೆ ಬೆಳಕು ಮೂಡಿದಂತೆ ಆಯಿತು ಸೀನಪ್ಪನಿಗೆ.. 

೨) ಸೀನಪ್ಪ : ಸರ್ ರಂಗನಿಗೆ ಕಾಣದಂತೆ ಮಾಯವಾದನು ಹಾಡನ್ನು ಏತಕ್ಕೆ ಕೇಳಿದ್ದು?
     ರಾಜೇಶ : ಅಂದು ಬೆಳಿಗ್ಗೆ ಮನೆಗೆ ಹೋದಾಗ.. ಸೋಫಾ ಮೇಲೆ ಹಾಗೆ ನಿದ್ದೆ ಮಾಡಿದೆ.. ಎದ್ದಾಗ ಅಣ್ಣಾವ್ರ ಚಲಿಸುವ ಮೋಡಗಳು ಚಿತ್ರ ಬರುತ್ತಿತ್ತು.. ಈ ಹಾಡು ಬಂದಾಗ... ನನಗೆ ಹೊಳೆದದ್ದು ಶಿವ ಶಿವ ಎನ್ನುವ ಪದ.. ತಕ್ಷಣ ಶಿವನ ಜೇಬಲ್ಲಿ ಸಿಕ್ಕಿದ್ದ ಪತ್ರ.. ಜೊತೆಯಲ್ಲಿ ಈ ಹಾಡನ್ನು ಸಮೀಕರಿಸಿದೆ.. ಆಗ ಹೊಳೆಯಿತು.. ಈ ಕೇಸಿಗೆ ಒಂದು ಸುಳಿವು 

೩) ಸೀನಪ್ಪ : ಗಣೇಶನನ್ನು ಕರೆತರಲು ಹೇಳಿದ್ದು ಏಕೆ?
     ರಾಜೇಶ : ಸೀನಪ್ಪ.. ಆ ರಾತ್ರಿ.. ಶಿವ ರಂಜಿನಿಯ ಹತ್ತಿರ ಮಾತಾಡುತ್ತಿದ್ದಾಗ.. ಈ ನಮ್ಮ ಗಣೇಶ.. ಅಲ್ಲಿಯೇ ಹತ್ತಿರದಲ್ಲಿ ತನ್ನ ಸಂಜೆಯ ಕಾರ್ಯಕ್ರಮಕ್ಕೆ ಕೂತಿದ್ದನಂತೆ.. ಕತ್ತಲಲ್ಲವೇ.. ಯಾರಿಗೂ ಕಾಣುತ್ತಿರಲಿಲ್ಲ.. ಹಾಗಾಗಿ ಶಿವ ಮತ್ತು ರಂಜಿನಿ ಮಾತುಗಳು ಈತನಿಗೆ ಸ್ಪಷ್ಟವಾಗಿ ಕೇಳುತ್ತಿತ್ತು.. ಜೊತೆಯಲ್ಲಿ ಕೆಲವು ದಿನಗಳ ಹಿಂದೆ ಬೀದಿಯಲ್ಲಿಯೇ ನಾಲ್ಕು ಜನಕ್ಕೆ ಕೇಳುವಂತೆ ಬಯ್ದಿದ್ದ ರಂಜಿನಿಯ ಬಗ್ಗೆ ಗಣೇಶನಿಗೆ ಕೋಪ ಇತ್ತು... ಸರಿ ಇಲ್ಲಿ ಏನೂ ನೆಡೆಯುತ್ತದೆ ಎಂದು ಕೇಳೋಣ ಅನ್ನುವ ಕುತೂಹಲದಲ್ಲಿ ಅಲ್ಲಿಯೇ ಕೂತಿದ್ದ.. ತನ್ನ ಕೆಲಸ ಮುಗಿದ್ದಿದ್ದರೂ ಕೂಡ.. ರಂಜಿನಿಯು ಹೋದ ಮೇಲೆ.. ಇದರ ಬಗ್ಗೆ ಶಿವನ ಹತ್ತಿರ ಮಾತಾಡೋಣ ಅಂತ ಶಿವನನ್ನು ಹಿಂಬಾಲಿಸಿಕೊಂಡು ಹೋದ.. ಆಗ ಶಿವನ ಮೇಲೆ ಒಂದಷ್ಟು ಮಂದಿ ಮುಗಿಬಿದ್ದರು.. ಪ್ರಾಣಭಯದಿಂದ.. ಗಣೇಶ ಶಿವನಿಗೆ ಏನೂ ಸಹಾಯ ಮಾಡಲಾಗಲಿಲ್ಲ.. ಆದರೆ ಅಲ್ಲಿ ನೆಡೆದಿದ್ದ ಘಟನೆಗೆ ಗಣೇಶನೇ ಸಾಕ್ಷಿಯಾದ.. ಆ ಘಟನೆ ನೆಡೆದ ಮಾರನೇ ದಿನ ಗಣೇಶ ಹೇಳಿದ.. ಆದರೆ ಮೊದಲೇ ಸಿನಿಮಾ ಹುಚ್ಚು ಅವನಿಗೆ.. ಅವನು ಹೇಳಿದ್ದು ನನ್ನ ತಲೆಯಲ್ಲಿ ಇತ್ತೇ ಹೊರತು .. ಈ ಕೇಸಿಗೆ ಕೊಂಡಿಯಾಗುತ್ತೆ ಅಂತ ಯೋಚಿಸಿರಲಿಲ್ಲ.. ಜೊತೆಯಲ್ಲಿಯೇ ಶಿವನ ಮೇಲೆ ಬಿದ್ದಿದ್ದು ಯಾರು ಎಂದು ಇವನಿಗೆ ಕಂಡಿರಲಿಲ್ಲ... ಮತ್ತೆ ಶಿವನ ದೇಹದ ಮೇಲೆ ಯಾವುದೇ ಗುರುತುಗಳು ಇರಲಿಲ್ಲ.. ಹೃದಯಘಾತವಾಗಿರಬಹುದು ಎಂದೇ.. ಮೊದಲು ಊಹಿಸಿದ್ದೆ.. ಪೋಸ್ಟ್ ಮಾರ್ಟಮ್ ಮಾಡಿದ ವೈದ್ಯರೂ ಕೂಡ ನಿಖರವಾಗಿ ಏನೂ ಹೇಳಿರಲಿಲ್ಲ.. ಈ ಹಾಡು ನನಗೆ ಸಿಕ್ಕಿದ ಮೇಲೆ.. ಮತ್ತೆ ಎಲ್ಲವನ್ನು ತಾಳೆ ಹಾಕಿದೆ.. ಹಾಗಾಗಿ ಗಣೇಶ ಈ ಕೇಸಿಗೆ ಮುಖ್ಯ ಸಾಕ್ಷಿಯಾದ 

೪) ಸೀನಪ್ಪ : ನೀವು ಯಜಮಾನರ ಮನೆಗೆ ಹೋಗಿದ್ದು ಯಾಕೆ.. ಬೋರ್ಡ್ ಮೇಲೆ ಆ ಹಾಡನ್ನು ಬರೆದದ್ದು ಯಾಕೆ.. ಅವರ ಮಗಳು ನಿರ್ಮಲ ಕಾಗದ ನೋಡಿ ಮೂರ್ಛೆ ಬಿದ್ದದ್ದು ಯಾಕೆ.. ಮತ್ತೆ ನೀವು ಅವರ ಮಗಳನ್ನು ಸ್ಟೇಷನಿಗೆ ಬರಲು ಹೇಳಿದ್ದು ಯಾಕೆ?
   ರಾಜೇಶ : ಶಿವ ರಂಜಿನಿ ಪ್ರೀತಿಸುತ್ತಿದ್ದದ್ದು ಎಲ್ಲರಿಗೂ ಗೊತ್ತಿದ್ದ ವಿಷಯ... ಜೊತೆಯಲ್ಲಿ ಗಣೇಶನನ್ನು ನೋಡಿ ಗಾಬರಿಯಾಗಿದ್ದಳು ನಿರ್ಮಲ.. ಒಂದು ಬಾರಿ ಶಿವನ ಮೇಲೆ ಕೂಗಾಡಿದ್ದಾಗ ಗಣೇಶ ಅಲ್ಲಿಯೇ ಇದ್ದದ್ದು.. ಅವಳಿಗೆ ಗಾಬರಿಗೊಳಿಸಿತ್ತು.. ಗಣೇಶ ಇನ್ನಷ್ಟು ಸೇರಿಸಿ ಹೇಳಿರಬೇಕು ಅದಕ್ಕೆ ಪೊಲೀಸಿನವರು ಇಲ್ಲಿಗೆ ಬಂದಿದ್ದಾರೆ.. ಎಂಬ ಆತಂಕ.. ಅದಾದ ಮೇಲೆ ಕಾಣದಂತೆ ಮಾಯವಾದನು ಹಾಡು ಬೋರ್ಡ್ನಲ್ಲಿ ಇದ್ದದ್ದು.. ಶಿವ ಎನ್ನುವ ಹೆಸರೇ ಅವಳಿಗೆ ನಡುಕ ಹುಟ್ಟಿಸುತ್ತಿತ್ತು.. ಆಮೇಲೆ ಅವನ ಪತ್ರ.. ಈ ಕವಿತೆಯನ್ನು ಬರೆಯುವಾಗ ಅವನೆಷ್ಟು ನೊಂದಿರಬಹುದು ಎನ್ನುವ ಬೇಸರ.. ಜೊತೆಯಲ್ಲಿ ಆತನನ್ನು ಅನುಮಾನಿಸಿ ನಾ ತಪ್ಪು ಮಾಡಿದೆ ಎನ್ನುವ ಅಳುಕು ಮತ್ತು ಮುಂದಕ್ಕೆ ಏನು ಎನ್ನುವ ಭಯ ಆಕೆಯನ್ನು ಮೂರ್ಛೆಗೊಳಿಸಿತು.. ದೊಡ್ಡ ಮನೆ.. ಆ ಮನೆಮಗಳನ್ನು ಸ್ಟೇಷನಿಗೆ ಜೀಪಿನಲ್ಲಿ ವಿಚಾರಣೆಗೆ ಕರೆತರುವುದು ಸರಿಯಲ್ಲ .. ಜೊತೆಯಲ್ಲಿ ಆ ಸಂಜೀವ ಮಾಡಿದ ಕೃತ್ಯ.. ಶಿವನ ಆ ಕವಿತೆಯಿಂದ ಅರಿವಾಗುತ್ತದೆ .. ಹಾಗಾಗಿ ನಿರ್ಮಲಳನ್ನು ಸ್ಟೇಷನಿಗೆ ಬರೋಕೆ ಹೇಳಿದರೆ.. ಖಂಡಿತ ಸಂಜೀವ ಮತ್ತು ಆತನ ಸಂಗಡಿಗರು ಬಂದೆ ಬರುತ್ತಾರೆ ತಮ್ಮ ಅಧಿಕಾರದ ದರ್ಪವನ್ನು ತೋರಿಸಲು.. ಎಂದು ನಾ ಸ್ಟೇಷನಿಗೆ ಬರಲು ಹೇಳಿದೆ

೫) ಸೀನಪ್ಪ : ಇದೆಲ್ಲ ಕಥೆ ಆ ಯಜಮಾನರಿಗೆ ಗೊತ್ತೇ?
      ರಾಜೇಶ : ಮಗಳ ಮೇಲಿನ ಪ್ರೀತಿ.. ಅಕ್ಕನ ಮಗನ ಅಧಿಕಾರ ದರ್ಪಕ್ಕೆ ಹೆದರುವ ಮನ.. ಮತ್ತೆ ಯಜಮಾನರ ನಂಬಿಕಸ್ತರು ಹೊತ್ತು ತರುತ್ತಿದ್ದ ಮಾಹಿತಿಗಳು.. ಶಿವ ರಂಜಿನಿಯ ಕಥೆಯನ್ನು ಅವರಿಗೆ ತಿಳಿಯುವ ಹಾಗೆ ಮಾಡಿತ್ತು.. ಏನು ಮಾಡಲಾಗದೆ.. ಗೊತ್ತಿದ್ದರೂ ಗೊತ್ತಿಲದಷ್ಟೇ ಅಮಾಯಕರ ಸೋಗಿನಲ್ಲಿ ಇದ್ದರು. ಶಿವನ ಸಾವಿನ ಹಿಂದೆ ತನ್ನ ಅಕ್ಕ ಮತ್ತು ಸಂಜೀವನ ಕೈವಾಡ ಇದೆ ಎಂದು ಅವರಿಗೆ ಗೊತ್ತಿತ್ತು.. ಆ ಕಾಡಿನಲ್ಲಿ ಶಿವನ ಅಂತಿಮ ಸಮಯದಲ್ಲಿ ಬಂದ ಹೆಣ್ಣು ದನಿ ಸಂಜೀವನ ಅಮ್ಮ ಅರ್ಥಾತ್ ಯಜಮಾನರ ಅಕ್ಕನದು. 

೬) ಸೀನಪ್ಪ : ಸಂಜೀವ ಸಿಗುತ್ತಾನಾ .. ಸಂಜೀವನಿಗೆ ಶಿಕ್ಷೆ ಆಗುತ್ತಾ... ಅವನಿಗೆ ಸಹಾಯ ಮಾಡಿದ ವೈದ್ಯರಿಗೂ ಶಿಕ್ಷೆ ಆಗುತ್ತಾ.. ಜೊತೆಯಲ್ಲಿ ನಿರ್ಮಲಾಳಿಗೆ ಬಿಡುಗಡೆ ಆಗುತ್ತಾ.. ಆಕೆಯದು ಏನೂ ತಪ್ಪಿಲ್ಲ ಅಲ್ಲವೇ.. ?
  ರಾಜೇಶ : ಸಂಜೀವ ಆಗಲೇ ನಮ್ಮ ಹಿಡಿತದಲ್ಲಿದ್ದಾನೆ.. ಊಟಕ್ಕೆ ಇನ್ನೊಬ್ಬ ಅಂದಿದ್ದೆ ಆಲ್ವಾ.. ಅವನೇ.. ಅವನ ಊಟದಲ್ಲಿ ನಿದ್ದೆ ಮಾತ್ರೆ ಹಾಕಿಸಿದ್ದೇ.. ನೆಮ್ಮದಿಯಾಗಿ ಸ್ಟೇಷನಿನಲ್ಲಿ ಮಲಗಿದ್ದಾನೆ.. ಈ ಪ್ರಕರಣವನ್ನು ದಾಖಲಿಸಿ ನ್ಯಾಯಾಲಯಕ್ಕೆ         ಕಳಿಸುತ್ತೇನೆ.. ಅಲ್ಲಿ ಮುಂದಿನ ತೀರ್ಮಾನ... !!

ಟೋಪಿ ಹಾಕಿಕೊಂಡು ಧಪ್ ಅಂತ ಸಲ್ಯೂಟ್ ಹೊಡೆದು.. "ಸಾಹೇಬ್ರೆ.. ನಿಮ್ಮ ಪತ್ತೇದಾರಿ ಮೆದುಳಿಗೆ ನನ್ನ ಅಭಿನಂದನೆಗಳು.. !!!"

ರೀ ಸೀನಪ್ಪ.. ನೀವು, ರಂಗ, ಗಣೇಶ.. ಎಲ್ಲರೂ ಇದ್ದದ್ದಕ್ಕೆ ಈ ಕೇಸನ್ನು ಬಗೆಹರಿಸಿದೆ.. ಜೊತೆಯಲ್ಲಿ ಸಾಹಿತ್ಯ ರತ್ನ ಚಿ ಉದಯಶಂಕರ್ ಮತ್ತು ಅಣ್ಣಾವ್ರಿಗೆ ನಮ್ಮ ಒಂದು ಜೈಕಾರ.. !!!