Sunday, June 21, 2015

ಸ್ನೇಹ ಎಂದರೆ ಅದು ಸ್ನೇಹವೇ.. ಸ್ನೇಹ ಲೋಕ ಒಂದು ಅದ್ಭುತ ಲೋಕ

ಓದಿದ ನೆನಪು.. ಒಂದು ಮಾತಿಂದ ಮುರಿದು ಹೋಗುವ ಸ್ನೇಹ, ಸ್ನೇಹವಲ್ಲ..
ಒಂದು ನಗುವಿಂದ ಅರಳುವ ಸ್ನೇಹ ಅದು ಸ್ನೇಹ..

ಇಂಥಹ ಒಂದು ಕಿರು ನಗುವಿಂದ ಶುರುವಾದ ಸ್ನೇಹ ಲೋಕ ಸಪ್ತ ವರ್ಣಗಳು ಸೇರಿ ಆಗುವ ಕಾಮನಬಿಲ್ಲಿನಂತೆ ಆರೇಳು ಸಮಾನ ಮನಸ್ಕರಿಂದ ಶುರುವಾದ ಈ ನಗುವಿನ ಸ್ನೇಹ ಯಾನ ಇಂದು ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡು.. ಕೆರೆಯ ನೀರನು ಕೆರೆಗೆ ಚೆಲ್ಲು ಎನ್ನುವಂತೆ.. ಸಮಾಜಕ್ಕೆ ತಮ್ಮ ಕಿರು ಕಾಣಿಕೆ ನೀಡುತ್ತ ಒಂದು ಹೆಜ್ಜೆ ಗುರುತು ಮೂಡುವಷ್ಟು ಬಲಿಷ್ಠವಾಗಿದೆ ಈ ಲೋಕ.

ಒಂದು ಸುಂದರ ಭಾನುವಾರ ದೂರದರ್ಶನದ ಮುಂದೆ, ಅಥವಾ ಎಲ್ಲೋ ಸಮಯ ಕಳೆಯುವ ಅವಕಾಶವಿದ್ದ ನನಗೆ.. ಸ್ನೇಹಲೋಕದ ಕಾರ್ಯಕ್ರಮದ ಆಹ್ವಾನ ನಿರಾಕರಿಸಲು ಸಾಧ್ಯವಿರಲೇ ಇಲ್ಲ.. ಹೋಗಲೇಬೇಕು ಎಂದು ಹಠ ಮಾಡಿ ಹೋದ ಈ ಕಾರ್ಯಕ್ರಮ ಎಂದಿನಂತೆ ಖಂಡಿತ ವ್ಯರ್ಥ ಎನ್ನಿಸಲಿಲ್ಲ..


ಇಬ್ಬರೂ ಸ್ಪುರದ್ರೂಪಿಗಳ ನಿರೂಪಣೆಯಲ್ಲಿ ಶುರುವಾದ ಕಾರ್ಯಕ್ರಮ.. ಸರಿಯಾದ ಟೇಕ್ ಆಫ್ ಸಿಕ್ಕಿತ್ತು.. ಅವರ ನಿರೂಪಣೆಯಲ್ಲಿ ಅವರೇ ಹೇಳಿದಂತೆ ಇದು ಅವರ ಮೊದಲ ನಿರೂಪಣೆ ತಪ್ಪು ಸರಿ ಎಲ್ಲವನ್ನು ಗಮನಿಸಬೇಕು ಎಂದು ಹೇಳಿದ್ದರು. ಆದರೆ ನನಗೆ ಅನ್ನಿಸಿದ್ದು ಇದು ಮೊದಲ ನಿರೂಪಣೆ ಎನ್ನುವುದಕ್ಕೆ ಯಾವುದೇ ರೀತಿಯ ಪುರಾವೆಗಳು ಇರಲಿಲ್ಲ., ಅಷ್ಟು ಅಚ್ಚುಕಟ್ಟಾಗಿತ್ತು ಭಾಷ ಪ್ರಯೋಗ, ಅಂಗೀಕ ಅಭಿನಯ, ಎಲ್ಲೇ ಮೀರದ ನುಡಿಗಳು.. ಒಬ್ಬ ಸಭ್ಯ ಅತ್ಯುತ್ತಮ ನಿರೂಪಕರಿಗೆ ಇರಬೇಕಾದ ಎಲ್ಲಾ ಗುಣ ಲಕ್ಷಣಗಳು ಇವರಿಬ್ಬರ ನಿರೂಪಣೆಯಲ್ಲಿತ್ತು ಎನ್ನುವುದು ಈ ಕಾರ್ಯಕ್ರಮದ ಯಶಸ್ಸಿಗೆ ಪುರಾವೆ ಒದಗಿಸಿತ್ತು.

ಉಷಾ ಉಮೇಶ್ ಅವರ ಪ್ರಾರ್ಥನಾ ಗೀತೆ ಉತ್ತಮವಾಗಿ ಹೊಂದಿ ಬಂದಿತ್ತು. ನಂತರ ಅತಿಥಿಗಳ ಕಿರುಪರಿಚಯ.. ಇವರು ಕಿರು ಅತಿಥಿಗಳೊಂತು ಅಲ್ಲವೇ ಅಲ್ಲ..

ಮತ್ಯ ವಿಜ್ಞಾನಿ, ಪದ ಚಿಂತಾಮಣಿ, ಪದ ಕಮ್ಮಟ, ಹಾಸ್ಯ ಮೂರ್ತಿ, ಖಡಕ್ ಹಾಸ್ಯ ನುಡಿಗಳು, ಸಮಯ ಪ್ರಜ್ಞೆ ಜೊತೆಯಲ್ಲಿ ಸ್ನೇಹದ ಸ್ವಾತಂತ್ರ.. ಇವರು ಇದ್ದ ಕಡೆಯಲ್ಲಿ ಸಂತಸ ತಾಂಡವಾಡುತ್ತಿರುತ್ತದೆ... ತುಂಬಿದ ತುಳುಕೋದಿಲ್ಲ ಎನ್ನುವುದು ಹಳೆಯ ನುಡಿ.. ಇವರು ತುಂಬಿದ ಹಂಡೆ.. ತುಳುಕಲು ಸಾಧ್ಯವೇ ಇಲ್ಲ.. ಇವರ ಬಗ್ಗೆ ಕೇಳಿದಾಗ ಮಾತ್ರ ಇವರೇನಾ ಅನ್ನಿಸುತ್ತದೆ..  ಅವರೇ ಅಜಾದ್ ಸರ್..


ನಾನು ಹಿಮವನ್ನು ನೋಡಿದ್ದೇ.. ಆದರೆ "ಕಂಡಿರಲಿಲ್ಲ.. ಮಾತನ್ನು ಕೇಳಿರಲಿಲ್ಲ.. ಗಂಗಾ ನದಿ ಹಿಮಾಲಯದಲ್ಲಿ ಹುಟ್ಟಿ ತಾನು ಹರಿವ ನೆಲವನ್ನು ಹಸಿರುಗೊಳಿಸುವ ಗಂಗಾ ಮಾತೆಯಂತೆ.. ತಾನಿಟ್ಟ ಹೆಜ್ಜೆಯೆಲ್ಲ ಗುರುತಾಗುವಂತೆ, ಸಮಾಜಕ್ಕೆ ತನ್ನ ಅಳಿಲು ಸೇವೆ ಮಾಡಬೇಕೆಂದು ಅನೇಕ  ಸಮಾಜ ಪರ ಕಾಳಜಿಯುಕ್ತ ಕಾರ್ಯ ಮಾಡುತ್ತಿರುವ ರೂಪ ಸತೀಶ್.

ನಗುವೊಂದು ಇದ್ದರೆ ಸಾಕು ಪರಪಂಚದ ಮೂಲೆ ಮೂಲೆಯನ್ನು ಗೆಲ್ಲಬಹುದು ಎನ್ನುತ್ತದೆ ನಾಣ್ಣುಡಿ.. ಕುಮುದವಲ್ಲಿ ಅರುಣ ಮೂರ್ತಿ ಕೂಡ ಅಂಥಹ ಅದ್ಭುತ ನಗೆಯ ಒಡತಿ. ನಟಿ, ಉತ್ತಮ ವಾಗ್ಮಿ, ಇದಕ್ಕೆಲ್ಲ ಮಿಗಿಲಾಗಿ ಉತ್ತಮ ಮನದ ಒಡತಿ. ಇಂಥಹ ಕಾರ್ಯಕ್ರಮಕ್ಕೆ ಬರುವಾಗ ಎಲ್ಲರಲ್ಲಿ ನಾನು ಎಂಬ ಭಾವ ಹೊತ್ತು ಬಂದಾಗ ಮಾತ್ರ ಗೆಲ್ಲಲು ಸಾಧ್ಯ. ಇವರು ಅಂಥಹ ಸುಮಧುರ ಭಾವದ ಸಂಗಮ.

ಜೋಗದ ಜಲಪಾತ.. ನಾಲ್ಕು ಕವಲುಗಳಾಗಿ ಬೀಳುತ್ತವೆ.. ರೋರರ್, ರಾಕೆಟ್, ಲೇಡಿ.. ಬಳುಕುತ್ತ, ಸದ್ದು ಮಾಡುತ್ತಾ ಸುಮಾರು ಒಂಬೈನೂರು ಅಡಿಗೂ ಮಿಗಿಲಾದ ಕಂದರಕ್ಕೆ ಹಾರಿದರೆ.. ರಾಜ ಕವಲು ಮಾತ್ರ ಒಂದೇ ತೆರನಾಗಿ ಮೇಲಿಂದ ಕೆಳಗಿನ ತನಕ ಒಂದೇ ಜಿಗಿತ ಮತ್ತು ಒಂದೇ ರಭಸ.. ವಿದ್ಯಾ ರಾವ್ ಅವರ ಮಾತುಗಳು, ಅವರ ಧ್ವನಿ.. ಜೊತೆಯಲ್ಲಿ ಅವರು ಮಂಡಿಸುವ ವಿಷಯದ ಮೇಲಿನ ಹಿಡಿತ ಮತ್ತು ಸ್ಪಷ್ಟ ಭಾಷೆ.. ನನಗೆ ಜೋಗದ ರಾಜ ಕವಲು ನೆನಪಿಗೆ ಬಂತು.. ಅದರಲ್ಲೂ ಮಕ್ಕಳಿಗೆ ಬಾಲ್ಯದಲ್ಲಿಯೆ ಕಾಣಸಿಗುವ ಒಂದು ಮನೋ ವೇದನೆ ಅಥವ ದೌರ್ಬಲ್ಯ (ಸರಿಯಾದ ಪದ ಹೊಳೆಯಲ್ಲಿಲ್ಲ.. ಕ್ಷಮೆ ಇರಲಿ) ಅದರ ಬಗ್ಗೆ ಅವರು ಹೇಳಿದ ಅಷ್ಟು ಮಾತುಗಳು ಚಿಂತನಾ ಯೋಗ್ಯ ಮತ್ತು ಎಲ್ಲರೂ ಅಳವಡಿಸಿಕೊಳ್ಳ ಬೇಕಾದ್ದು.


ಇಂಥಹ ಸ್ನೇಹಲೋಕ ಎನ್ನುವ ಅಭಿಮಾನದಿಂದ ಕೂಡಿದ ತಂಡವನ್ನು ಕಟ್ಟಲು ಶ್ರಮ ತೊಟ್ಟ ಸುಮನ ಅವರ ಸಾಧನೆ ಅಬ್ಬ ಎನ್ನಿಸುತ್ತದೆ.. ಒಂದು ಬಸ್ಸಿನಲ್ಲಿ ಬರುವ ಪ್ರಯಾಣಿಕರನ್ನು ಹಿಡಿದಿಡುವುದು ಎಷ್ಟು ಕಷ್ಟವೋ ಹಾಗೆ ಸಮಾಜದ ಎಲ್ಲಾ ತರಹದ ಪ್ರಜೆಗಳನ್ನು ಹಿಡಿದಿಟ್ಟು.. ನಾಲ್ಕು ಮಂದಿಗೆ ಅನುಕೂಲ ಆಗುವ ಸೌಲಭ್ಯ ಒದಗಿಸಲು ತಂಡವನ್ನು ಕಟ್ಟಿ ಬೆಳೆಸಿ ಮುನ್ನೆಡೆಸುವುದು ಕಡಿಮೆ ಸಾಧನೆಯಲ್ಲ.. ಅಂಥಹ ಸಾಧನೆಯಲ್ಲಿ ಗೆದ್ದವರು ಇವರು.

ಅಶೋಕ್ ಶೆಟ್ಟಿ.. ಸಾಲು ಮರವನ್ನು ನೆಟ್ಟು ಪಯಣಿಗರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಶ್ರಮಿಸಿದರು ಸಾಮ್ರಾಟ್ ಅಶೋಕ್.. ಇವರು ಕೂಡ ಹಾಗೆಯೇ ಎಲ್ಲೇ ಇದ್ದರೂ ಒಂದು ಕರೆಗೆ ನಿಮ್ಮ ಮುಂದೆ ನಿಲ್ಲುತ್ತಾರೆ. ಶ್ರಮಿಸುತ್ತಾರೆ.. ನಾನು ಇದ್ದೇನೆ ಎನ್ನುವ ಭಾವ ಕೊಡುತ್ತಾರೆ.. ಇದಕ್ಕಿಂತ ಒಂದು ಸ್ನೇಹದ ಸಂಕೋಲೆಗೆ ಮುನ್ನುಗ್ಗಲು ಬೇರೆ ಕಾರಣ ಬೇಕಿಲ್ಲ. ಇಂಥಹ ಮಧುರ ಮನದ ಸರದಾರರು ಇವರು


ತಾನು, ತನ್ನದು ಎನ್ನುವ ಈ ಕಾಲದಲ್ಲಿ ನಾವು ನಿಮ್ಮದು ಎನ್ನುವ ಮನೋಭಾವ ಬೆಳೆಸಿ ಉಳಿಸಿ ಮರಳಿ ಸಮಾಜಕ್ಕೆ ಮರಳಿಸುತ್ತಿರುವ ಸ್ನೇಹಲೋಕದ ಪ್ರತಿ ಸಾಧಕರಿಗೂ, ಸ್ನೇಹಿತರಿಗೂ ಮತ್ತು ಸದಸ್ಯರಿಗೂ ಈ ಲೇಖನ ಅರ್ಪಿತ. ತೆರೆಯ ಮೇಲೆ ಕಂಡ ಮೊಗಗಳು ಅನೇಕ.. ಆದರೆ ತೆರೆಯ ಹಿಂದೆ ಜೇನುಗಳಂತೆ ಕಠಿಣ ಶ್ರಮವಹಿಸಿ ಇಂಥಹ ಒಂದು ಸುಂದರ, ಅಧ್ಬುತ ದಿನ ಸಮಯವನ್ನು ಕೊಟ್ಟ ಎಲ್ಲರಿಗೂ ಈ ಲೇಖನ ಮೂಲಕ ನಾ ಧನ್ಯವಾದಗಳನ್ನು ಹಾಗೆಯೇ ಅಭಿನಂದನೆಗಳನ್ನು ಸಲ್ಲಿಸಲು ಇಷ್ಟಪಡುತ್ತೇನೆ.

ಸಮಾಜದಲ್ಲಿ ಬೆಳೆಯುತ್ತಿರುವ ಅನೇಕ ಸೌಲಭ್ಯ ವಂಚಿತ ಮಕ್ಕಳನ್ನು ಕಾಪಾಡುತ್ತಿರುವ ಅನೇಕ ಸಮಾಜ ಸಂಸ್ಥೆಗಳು ತಮ್ಮ ಮಕ್ಕಳನ್ನು ಕರೆತಂದು ಅವರ ಪ್ರತಿಭೆಯನ್ನು ಒರೆಗೆ ಹಚ್ಚಿ, ಆ ನಿಟ್ಟಿನಲ್ಲಿ ಅವರ ಪ್ರತಿಭೆಗೆ ಒಂದು ಚೌಕಟ್ಟು ಹಾಗೂ ಪ್ರೋತ್ಸಾಹ ನೀಡುವಂತೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಸ್ನೇಹಲೋಕದ ತಂಡದ ಸಾಧನೆ.

ಮಕ್ಕಳನ್ನು ಹುರಿದುಂಭಿಸಿ, ಅವರ ಪ್ರತಿಭೆಯನ್ನು ಬೆಳಗಿಸಿ ಎಲ್ಲರಿಗೂ ಮನೋರಂಜನೆಯ ಜೊತೆಯಲ್ಲಿ ಮನಸ್ಸು ಮಾಡಿದರೆ ಏನು ಸಾಧಿಸಬಹುದು ಎಂದು ತೋರಿದರು.  ಇಂದಿನ ಕಾರ್ಯಕ್ರಮದ ಬಗ್ಗೆ ಬರೆಯುತ್ತ ಹೋದರೆ ಪುಟಗಟ್ಟಲೆಯಾಗುತ್ತದೆ.. ಒಂದು ಚಿತ್ರ ನೂರು ಮಾತನ್ನು ಹೇಳುತ್ತದೆ.. ನೂರು ಮಾತು ಒಂದು ಭಾವವನ್ನು ಹೇಳುತ್ತದೆ ಎನ್ನುತ್ತದೆ ಜನಪ್ರಿಯ ನುಡಿಮಾತು.. ಅಂಥಹ ಭಾವ ಸೂಸುವ ಚಿತ್ರಗಳು ನಿಮಗಾಗಿ.. ನಿಮ್ಮ ಗಮನಕ್ಕಾಗಿ..











































ಯುವ ಪಡೆ ಮುಂದೆ ಬಂದು ಸಾಮಾಜಿಕ ತಾಣದಿಂದ ಒಂದು ಸದುಪಯೋಗವಾಗುವಂಥಹ ಕಾರ್ಯಕ್ರಮ ನಡೆದಾಗ ನನಗೆ ಅನ್ನಿಸಿದ್ದು..





ಯಶಸ್ಸಿಗೆ ಮಂತ್ರ ಈ ಮೇಲಿನ ಫಲಕಗಳು..

ಸ್ನೇಹಲೋಕದ ತಂಡಕ್ಕೆ ಒಂದು ಧೀರ್ಘ ದಂಡ ನಮಸ್ಕಾರಗಳು.. ಶುಭವಾಗಲಿ ಶುಭಪ್ರದವಾಗಲಿ ಎಲ್ಲಾ ನಿಮ್ಮ ಮುಂದಿನ ಹೆಜ್ಜೆಗಳಿಗೆ..