ಮುಂದುವರಿದ ನೋಟ!!!
ತನ್ನ ಮ್ಯಾನೇಜರ್ ಗೆ ಎರಡು ದಿನ ಮನೆಯಿಂದಲೇ ಕೆಲಸ ಮಾಡುತ್ತೇನೆ ಎಂದು ಹೇಳಿದಾಗ.. ಆತ ಕರೆಮಾಡಿ ತುಸು ಗೊಣಗುಟ್ಟಿದರೂ, ರಜೆ ತುಂಬಾ ತುಂಬಾ ಕಡಿಮೆ ಹಾಕುತ್ತಿದ್ದ, ಮತ್ತು ತನ್ನ ಅತ್ಯಂತ ಶಿಸ್ತುಬದ್ಧ ಸ್ಟಾಫ್ ಗಳಲ್ಲಿ ಒಬ್ಬಳಾಗಿದ್ದ ವೀಣಾಳ ಅಪರೂಪದ ಕೋರಿಕೆಯನ್ನು ಇಲ್ಲ ಎನ್ನುವುದಕ್ಕೆ ಮನಸ್ಸು ಬಾರದೆ ಒಪ್ಪಿಕೊಂಡಿದ್ದ..
ತನ್ನ ಮ್ಯಾನೇಜರ್ "ವಾರಾಂತ್ಯ ಶುಭಪ್ರದವಾಗಿರಲಿ" ಎಂಬ ಸಂದೇಶ ಕೂಡಿದ್ದ ಇಮೇಲ್ ನೋಡಿ ವೀಣಾಳಿಗೆ ಬಲು ಸಂತಸವಾಗಿತ್ತು.
ರೇವಂತ್ ಮನೆಗೆ ಬಿಟ್ಟು ಹೋಗಿದ್ದರಿಂದ, ಮತ್ತು ಹೋಟೆಲ್ನಲ್ಲಿ ಹೊಟ್ಟೆ ತುಂಬಾ ತಿಂದಿದ್ದರಿಂದ, ಮನೆಯಲ್ಲಿ ಮಾಡಬೇಕಾದ ಕೆಲಸವೇನು ಇರಲಿಲ್ಲ. ಮನೆಗೆ ಬಂದಾಗ, ಅಮ್ಮ ಅಪ್ಪ ಕಾಲು ನೀಡಿಕೊಂಡು ಕೂತಿದ್ದರು. ವೀಣಾ ತನ್ನ ನಿತ್ಯದ ಅಭ್ಯಾಸದಂತೆ ಅಮ್ಮನ ಹತ್ತಿರ ಬಂದು.. ಹಾಗೆ ಒಮ್ಮೆ ಆಲಂಗಿಸಿಕೊಂಡು, ಅಮ್ಮನ ಕೆನ್ನೆಗೆ ಮುತ್ತು ಕೊಟ್ಟಳು, ಅಮ್ಮನೂ ಕೂಡ ತನ್ನ ಮುದ್ದಿನ ಮಗಳ ಸಂತಸವನ್ನು ಕಂಡು, ಒಮ್ಮೆ ಕೈಬೆರಳುಗಳಿಂದ ದೃಷ್ಟಿ ತೆಗೆದರು. ಲಟಲಟ ಎಂದು ಬೆರಳುಗಳು ಸದ್ದು ಮಾಡಿದ್ದನ್ನು ಕಂಡು "ಲೇ ವೀಣಾ ಏನೇ ಇದು ಈ ಪಾಟಿ ದೃಷ್ಟಿಯಾಗಿದೆ .. ಹೋಗು.. ಕಾಲು ಕೈ ತೊಳೆದು ಬೆಳವಾಡಿ ಗಣಪನಿಗೆ ಕೈಮುಗಿದು ಬಾ".
"ಅಮ್ಮ ನನ್ನ ಮುದ್ದು ಅಮ್ಮ" ಎಂದು ಮತ್ತೊಮ್ಮೆ ಮುತ್ತು ಕೊಟ್ಟು..ಅಪ್ಪನಿಗೆ ಹೈ ಫೈವ್ ಹೊಡೆದು.. ತನ್ನ ಕೋಣೆಗೆ ಓಡಿದಳು.. ಅಮ್ಮ ಹೇಳಿದಂತೆ.. ಗಣಪನಿಗೆ ಕೈಮುಗಿದು ಬಂದು.. ಟಿವಿ ನೋಡುತ್ತಿದ್ದ ಅಪ್ಪ ಅಮ್ಮನ ಜೊತೆಯಲ್ಲಿ ಕೂತಳು..
ಉದಯ ಮೂವೀಸ್ ನಲ್ಲಿ ಅಣ್ಣಾವ್ರ ಚಿತ್ರ "ಶಂಕರ್ ಗುರು" ಅಣ್ಣಾವ್ರು ಪದ್ಮಪ್ರಿಯಾಳನ್ನು ರೇಗಿಸುವ ದೃಶ್ಯ.. ಅಣ್ಣಾವ್ರ ಅಭಿನಯದಲ್ಲಿ ಮುಳುಗಿಹೋಗಿದ್ದಳು.. ಮತ್ತೆ ತನ್ನ ಮಾರನೇ ದಿನದ ಮುಖ್ಯ ಕಾರ್ಯ ನೆನಪಿಗೆ ಬಂದು.. ಅಮ್ಮ ಬೆಳಿಗ್ಗೆ ಸ್ವಲ್ಪ ತಡವಾಗಿ ವಾಕಿಂಗಿಗೆ ಹೋಗುತ್ತೇನೆ.. ನನ್ನನ್ನು ಬೇಗ ಎಬ್ಬಿಸಬೇಡ.. ಸರಿ ನಾ ಮಲಗುತ್ತೇನೆ ಎಂದು ಹೇಳಿ ಅಪ್ಪ ಅಮ್ಮನಿಗೆ ಒಂದೊಂದು ಮುತ್ತನ್ನು ನೀಡಿ-ಪಡೆದು ತನ್ನ ಕೋಣೆಗೆ ಜಿಂಕೆಯಂತೆ ಓಡಿದಳು.
ನಿದ್ದೆ ಬರದೇ ಹೊರಳಾಡುತ್ತಲೇ ಇದ್ದಳು.. ಶಂಕರ್ ಗುರು ಚಿತ್ರದ "ಏನೇನೋ ಆಸೆ ನೀ ತ೦ದಾ ಭಾಷೆ ಇ೦ದು ಹೊಸತನ ತ೦ದು ತನು ಮನ ಕೂಗುತಿದೆ ಬಾ ಎ೦ದು ನಿನ್ನ" ಹಾಡು ಬೇಡವೆಂದರೂ ಮತ್ತೆ ಮತ್ತೆ ಬಂದು ಕಾಡುತ್ತಿತ್ತು..
"ಕರಾಗ್ರೇ ವಸತೇ ಲಕ್ಷ್ಮಿ... " ಮೊಬೈಲ್ ನಲ್ಲಿ ಇಟ್ಟಿದ್ದ ಅಲಾರಾಂ ಹೊಡೆದುಕೊಳ್ಳತೊಡಗಿತು.. ದಿಗ್ಗನೆ ಎದ್ದು.. ಮೋರೆ ತೊಳೆದು.. ಕೈಯಲ್ಲಿಯೇ ತಲೆಗೂದಲನ್ನು ಸರಿಮಾಡಿಕೊಂಡು.. ಅಮ್ಮ ಕಾಫಿ ಕುಡಿದು ಹೋಗು ವೀಣಾ ಎಂದಿದ್ದನ್ನು ಕೇಳಿಸಿಕೊಳ್ಳದೆ ಪಾರ್ಕ್ ಕಡೆಗೆ ಚಿಗರೆಯಂತೆ ಓಡಿದಳು..
ಇಂದು ವಾಕಿಂಗ್ ಮಾಡುವ ಮೂಡ್ ಇರಲಿಲ್ಲ.. ಅಕಸ್ಮಾತ್ ತಾನು ಅವನನ್ನು ನೋಡದೆ ಹೋದರೆ.. ಅಥವಾ ಅವ ಇಂದು ಬರದೇ ಹೋದರೆ.. ಅಥವಾ ಅವನು ನನ್ನ ತರಹ ಸಮಯ ಬದಲಿಸಿಕೊಂಡಿದ್ದರೇ.. ಹೀಗೆ ರೇ... ಪ್ರಪಂಚದಲ್ಲಿಯೇ ನೀರಿಗೆ ಬಿದ್ದ ಮಂಜುಗಲ್ಲಿನಂತೆ ಮುಳುಗದೇ.. ತೇಲದೇ ಒದ್ದಾಡುತ್ತಿದ್ದಳು.. ನಿಧಾನವಾಗಿ ಮೈಯೆಲ್ಲಾ ಕಣ್ಣಾಗಿ ಮಕ್ಕಳು ಹೆಜ್ಜೆ ಇಡುವಂತೆ ತನ್ನ ವಾಕಿಂಗ್ ಶುರುಮಾಡಿದಳು... ಅವನು ಬರುವ ಸಮಯವಾಯಿತು.. ಕಣ್ಣುಗಳು ದುರ್ಬಿನುಗಳಾಗಿದ್ದವು..
ಐದು ಸುತ್ತಾಯಿತು.. ಹತ್ತು ಸುತ್ತಾಯಿತು.. ಉಹೂಂ.. ಅವನ ಸುಳಿವಿಲ್ಲ.. ಎಂದಿಗಿಂತ ಇನ್ನೂ ಹತ್ತು ರೌಂಡ್ ಹೆಚ್ಚಿಗೆ ಹಾಕಿದಳು.. ಅವನು ಆಫೀಸಿಗೆ ಹೋಗುವ ಸಮಯ ಮೀರಿತ್ತು ಅನ್ನಿಸಿತು.. ಬೇಸರದಿಂದ ಮನೆ ಕಡೆಗೆ ಹೆಜ್ಜೆ ಹಾಕಿದಳು.. ಅವಳು ಮನೆಯ ಕಡೆ ತಿರುಗಬೇಕು.. ಯಾವುದೋ ಒಂದು ಅದೃಶ್ಯ ಶಕ್ತಿ ಅವಳನ್ನು ಬಲವಂತವಾಗಿ ತಿರುಗಿ ನೋಡುವಂತೆ ಮಾಡಿತು.. ಗರ್ ಅಂತ ಹಾಗೆ ತಲೆ ತಿರುಗಿಸಿನೋಡಿದಳು.. ಅರೆ ಚಿರಪರಿಚಿತ ತನ್ನ ಇಷ್ಟದ ಬಿಳಿ ಶರ್ಟ್..!
ಆವನು ಒಂದು ತುಸು ತಡವಾಗಿ ಹೊರಟಿದ್ದ ಅನ್ನಿಸುತ್ತದೆ.. ವೀಣಾ ತನ್ನ ತಲೆಯನ್ನು ತಾನೇ ಬಡಿದುಕೊಂಡು.. ಛೆ ಇನ್ನೊಂದು ರೌಂಡ್ ಹೊಡೆದಿದ್ದರೆ ಸಿಕ್ಕಿಯೇ ಬಿಡುತ್ತಿದ್ದ ಅನ್ನಿಸಿತು. ತನ್ನ ಮನೆಯ ಗೇಟ್ ಹತ್ತಿರ ಬಂದು.. ಒಳಗೆ ಹೋಗದೆ ಗೇಟನ್ನು ಹಿಡಿದು.. ಯೋಚಿಸತೊಡಗಿದಳು.. "ಅವನ ಬಣ್ಣ ತುಸು ಕಪ್ಪು.. ಆದರೆ ರೇಷ್ಮೆಯಂತಹ ಅವನ ತಲೆಗೂದಲು .. ಭಕ್ತಿ ಭಾವ ತುಸು ಹೆಚ್ಚು ಎನ್ನಿಸುವ ಅವನ ಹಣೆಯಲ್ಲಿನ ಕುಂಕುಮ, ಕೈಗೆ ಬೆಳ್ಳಿಯ ಬಳೆ.. ಬಲಗೈಗೆ ವಾಚು.. ಒಂದು ರೀತಿಯಲ್ಲಿ ಸಾಧಾರಣ ಎನಿಸಿದರೂ, ಇನ್ನೊಮ್ಮೆ ನೋಡಬೇಕು ಎಂದು ಅವಳಲ್ಲಿ ಆಸೆ ಹುಟ್ಟಿಸುತ್ತಿತ್ತು.. ಮುಂಚೆ ಪ್ರತಿದಿನವೂ ಅವನನ್ನು ನೋಡುತಿದ್ದಾಗ, ಅವನ ವಸ್ತ್ರ ವಿನ್ಯಾಸ, ಅಭಿರುಚಿ ಇಷ್ಟವಾಗುತ್ತಿತ್ತು.. ಅವಳ ಸೂಕ್ಷಮತಿ ಅವನ ಡ್ರೆಸ್ ಕೋಡ್ ಬಗ್ಗೆ ತುಸು ನಿಖರವಾದ ಅಭಿಪ್ರಾಯಕ್ಕೆ ಬಂದಿದ್ದಳು. ಅವನದು ವಾರದ ದಿನಕ್ಕೆ ತಕ್ಕಂತೆ ಒಂದು ರೀತಿಯಲ್ಲಿ ಬಣ್ಣ ಬಣ್ಣದ ವಸ್ತ್ರಗಳನ್ನು ಹಾಕಿಕೊಳ್ಳುತ್ತಿದ್ದ. ಸೋಮವಾರ ನೀಲಿ, ಮಂಗಳವಾರ ತುಸು ಕಡುನೀಲಿ, ಬುಧವಾರ ಪಿಂಕ್, ಗುರುವಾರ ಕ್ರೀಮ್, ಶುಕ್ರವಾರ ಬಿಳಿ ಶರ್ಟ್ ಮತ್ತು ಕಡು ನೀಲಿ ಜೀನ್ಸ್.. ಕೃಷ್ಣಕಾಂತನಿಗೆ ಬಿಳಿ ಶರ್ಟ್ ಮತ್ತು ಕಡು ನೀಲಿ ಜೀನ್ಸ್ ಎಂದರೆ ಪ್ರಾಣ ಎಂದು ಅವಳಿಗೆ ಅನ್ನಿಸುತಿತ್ತು. .. ಅವಳಿಗೆ ಗೊತ್ತಿತ್ತು ಈ ಕಾಂಬಿನೇಶನ್ ಚೆನ್ನಾಗಿ ಒಪ್ಪುತ್ತದೆ ಎಂದು.. ಹಾಗಾಗಿ ಸಾಮಾನ್ಯ ಶುಕ್ರವಾರದಂದು ಆ ಕಾಂಬಿನೇಶನಿಗೆ ಮೊರೆ ಹೋಗುತ್ತಿದ್ದ ಎಂಬುದು ಅವಳ ಗಮನಿಸುವಿಕೆಯ ಮೂಲಕ ಅರಿವಾಗಿತ್ತು. .. ಅರಿವಿಲ್ಲದ ಅವನ ಈ ಅಭ್ಯಾಸ ವೀಣಾಳಿಗೆ ಇಷ್ಟವಾಗಿತ್ತು.
"ಅಯ್ಯೋ ಒಂದು ದಿನ ಅನ್ಯಾಯವಾಗಿ ಮಿಸ್ ಮಾಡಿಕೊಂಡೆ.. ನಾಳೆ ತುಸು ಬೇಗನೆ ಹೋಗಿ ಪಾರ್ಕ್ ನಲ್ಲಿ ಕಾಯುತ್ತೇನೆ.. ಆವ ಬರುವ ತನಕ ಪಾರ್ಕಿನಿಂದ ಹೋಗುವುದು ಬೇಡ" ಎಂದು ವೀರ ಭೀಷ್ಮ ಶಪಥ ಮಾಡಿ.. ತನ್ನ ನಿತ್ಯ ಕಾಯಕಕ್ಕೆ ತೊಡಗಿಕೊಂಡಳು..
ರೇವಂತ್ ಗೆ ಮೆಸೇಜ್ ಮಾಡುವುದು ಮರೆಯಲಿಲ್ಲ
"ರೇವ್.. ಜಸ್ಟ್ ಮಿಸ್ ಆಯ್ತು ಕಣೋ.. ನಾಳೆ ಬೆಳಿಗ್ಗೆ ಖಂಡಿತಾ ಮೀಟ್ ಮಾಡುತ್ತೇನೆ.. :-) "
ಆ ಕಡೆಯಿಂದ "ಮುದ್ದು ಮೈ ಲವ್.. ಆಲ್ ದಿ ಬೆಸ್ಟ್ ಕಣೋ"..
"ಥ್ಯಾಂಕ್ ಯು ರೇವ್.. ಹ್ಯಾವ್ ಏ ಗುಡ್ ಡೇ"
"ಯೂ ಟೂ ಮೈ ಲವ್ :-)"
ನಿರಾಳವಾಗಿ ತನ್ನ ಕೆಲಸ ಮುಗಿಸಿ... ಮಧ್ಯಾಹ್ನ ಒಂದು ಪುಟ್ಟ ನಿದ್ದೆ ಮುಗಿಸಿ.. ಸಂಜೆ ದೇವರಮನೆಯಲ್ಲಿ ದೀಪ ಹಚ್ಚಿ.. ಮನೆಯ ಹತ್ತಿರವೇ ಇದ್ದ ಹನುಮನ ಗುಡಿಗೆ ಹೋಗಿ ಬಂದಳು.. ಮನಸ್ಸು ಅರಿವಿಲ್ಲದೆ ಒಂದು ರೀತಿಯ ಸುಖದ ನಶೆಯಲ್ಲಿ ತೇಲಾಡುತ್ತಿತ್ತು..
ಸಂಜೆಯಿಂದ ರಾತ್ರಿಯಾಯಿತು.. ರಾತ್ರಿಯಿಂದ ಬೆಳಗಾಯಿತು.. ತಾನು ಕಾಯುತ್ತಿದ್ದ ಆ ಸವಿ ಘಳಿಗೆ ಇನ್ನೇನೂ ಹತ್ತಿರದಲ್ಲಿಯೇ ಇತ್ತು... ಪ್ರತಿದಿನಕ್ಕಿಂತಲೂ ತುಸು ಬೇಗನೆ ಪಾರ್ಕ್ ಒಳಗೆ ಹೋಗಿ.. ಅವನು ಬರುವ ಹಾದಿ ಕಾಣುವಂತೆ ಒಂದು ಕಲ್ಲು ಬೆಂಚಿನ ಮೇಲೆ ಕೂತಳು..
ಅವನು ಬಂದಾಗ ಹೇಗೆ ಮಾತಾಡುವುದು.. ಏನು ಮಾತಾಡುವುದು.. ಈ ಪಾರ್ಕಿನಲ್ಲಿ ಎಲ್ಲರೂ ಚಿರಪರಿಚಿತರು.. ಅವರ ಮುಂದೆ ಈ ಹುಡುಗನ ಹತ್ತಿರ ಮಾತಾಡಿದರೆ ಹೇಗೆ ಇರುತ್ತದೆ.. ನೂರಾರು ಯೋಚನೆಗಳು ಬೆಂಗಳೂರಿನ ಏರ್ ಪೋರ್ಟ್ ರಸ್ತೆಯ ಮೇಲಿನ ವಾಹನ ದಟ್ಟಣೆಯಂತೆ ಅವಳ ಮನದ ಪಟಲದಲ್ಲಿ ದಟ್ಟೈಸುತ್ತಿತ್ತು..
"ಏನೇ ವೀಣಾ.. ಸುತ್ತು ಹೊಡೆಯೋದು ಬಿಟ್ಟು. .ಸುಸ್ತಾಗಿ ಕೂತುಬಿಟ್ಟಿದ್ದೀಯ.. ಯಾಕೆ ಮೈಗೆ ಹುಷಾರಿಲ್ಲವೇ.. ಈ ಚಳಿಗೆ ಯಾಕೆ ಬರುತ್ತೀಯ.. ಹೋಗು ಮನೆಗೆ ಹೋಗಿ ಬೆಚ್ಚನೆ ಮಲಗಿಕೊ" ಪಕ್ಕದ ಮನೆಯ ವನಜ ಆಂಟಿ ಕೂಗಿದಾಗ ಮತ್ತೆ ವಾಸ್ತವಕ್ಕೆ ಬಂದಳು ವೀಣಾ.
"ಇಲ್ಲ ಆಂಟಿ.. ಹಾಗೆ ಕೂತು ಜಪ ಮಾಡುತ್ತಿದ್ದೇನೆ.. ನಾ ಆರಾಮಾಗಿದ್ದೀನಿ.. ನೀವು ಯೋಚನೆ ಮಾಡಬೇಡಿ.. ಒಂದು ಹತ್ತು ನಿಮಿಷ ಜಪ ಮುಗಿಸಿ ಬರುತ್ತೇನೆ.. "
"ಮುದ್ದು ವೀಣಾ.. " ಆಂಟಿ ಹತ್ತಿರ ಬಂದು.. ವೀಣಾಳ ಕೆನ್ನೆಯನ್ನು ಸವರಿ ಮುಂದಕ್ಕೆ ಹೋದರು.
ಈ ಕಡೆ ಇದರ ಯಾವುದೇ ಸುಳಿವಿಲ್ಲದ ಕೃಷ್ಣಕಾಂತ್ ಪ್ರತಿದಿನದಂತೆ, ನಿತ್ಯ ಕರ್ಮ ಮುಗಿಸಿ.. ಆಫೀಸ್ ಕ್ಯಾಬ್ ಕಡೆ ಹೆಜ್ಜೆ ಹಾಕುತ್ತಿದ್ದ.. ತಾನು ಕಿವಿಗೆ ಹಾಕಿಕೊಂಡಿದ್ದ ಹ್ಯಾಂಡ್ಸ್ ಫ್ರೀ ನಲ್ಲಿ ಹಾಡು ಬರುತ್ತಿತ್ತು.. ಅಣ್ಣಾವ್ರ ಪರಮ ಅಭಿಮಾನಿಯಾಗಿದ್ದ ಅವನಿಗೆ ಅವರ ಹಾಡುಗಳು ಬಂದರೆ ಏಕ್ ದಂ ಮಂಜಿನ ಹನಿಗಳಿಂದ ಮೋರೆ ತೊಳೆದುಕೊಂಡ ಉದ್ಯಾನವನದ ಗರಿಕೆಯಂತಾಗಿಬಿಡುತ್ತಿದ್ದ..
"ಹೃದಯದಲಿ ಇದೇನಿದು.. ನದಿಯೊಂದು ಓಡಿದೆ" ಮನಸ್ಸು ಹಕ್ಕಿಯ ಹಾಗೆ ಹಾರುತಿತ್ತು.. ಅಣ್ಣಾವ್ರ ಚಿತ್ರಗಳು, ಹಾಡುಗಳು, ಸಂಭಾಷಣೆಗಳ ಶಕ್ತಿ ಇದೇ ಅಲ್ಲವೇ..
"ಸರ್ ಒಂದು ನಿಮಿಷ" ಎಫ್ ಎಂ ಹಾಡು ಬದಲಾಗಿತ್ತು.. "ಕೋಗಿಲೆ ಹಾಡಿದೆ ಕೇಳಿದೆಯಾ" ಧ್ವನಿ ಬಂದ ಕಡೆ ತಿರುಗಿದ.. ಹೃದಯದ ಬಡಿತ "ಒಂದು ಕ್ಷಣ ಇರೋ ಈಗ ಬಂದೆ" ಎನ್ನುವ ಹಾಗೆ ಧಡಕ್ ಅಂತ ನಿಂತು ಮತ್ತೆ ಹೊಡೆದುಕೊಳ್ಳತೊಡಗಿತು..
ತನ್ನ ಕಣ್ಣನ್ನೇ ತಾ ನಂಬದಾದ.. ತಾನು ಇಷ್ಟಪಡುವ, ಮನದಲ್ಲಿಯೇ ಆರಾಧಿಸುವ, ಯಾವುದೇ ನಿಷ್ಕಲ್ಮಶ ಭಾವ ಇಲ್ಲದ ಗೆಳತಿ ತನ್ನ ಕಣ್ಣ ಮುಂದೆ.. ಹಾಗೆ ಒಮ್ಮೆ ನೋಡಿದ..
ಘಟ್ಟ ಪ್ರದೇಶದ ಅಂಕು ಡೊಂಕಿನ ರಸ್ತೆಯಂತಿದ್ದ ಆಕೆಯ ಬೈತಲೆ.. ಇಳಿ ಬಿದ್ದಿದ್ದ ನೀಳಗೂದಲು.. ಮಕ್ಕಳಿಗೆ ಕೂಕ್ ಕೂಕ್ ಎಂದು ಕಣ್ಣಾ ಮುಚ್ಚಾಲೆ ಆಡುವಂತೆ, ಬೆಳಗಿನ ತಂಗಾಳಿಗೆ ಸೊಂಟದ ಬದಿಯಿಂದ ಇಣುಕುತ್ತಿತ್ತು.. ಚಳಿಗೆ ಧರಿಸಿದ್ದ ತುಂಬು ತೋಳಿನ ಸ್ವೆಟರ್ .. ಮುಖ ನೋಡಲು ಧೈರ್ಯ ಬರುತ್ತಿಲ್ಲ..
"ಸರ್ ಸರ್ ಒಂದು ನಿಮಿಷ" ಮತ್ತೆ ಕೋಗಿಲೆ ಧ್ವನಿ..
ಧರೆಗಿಳಿದು ಬಂದ ಕೃಷ್ಣಕಾಂತ್..
ಹಾಗೆ ಆಕೆಯ ಮೊಗವನ್ನು ದಿಟ್ಟಿಸಿ ನೋಡಿದ.. ಅದ್ಭುತವಾದ ಹೊಳೆಯುವ ಕಂಗಳು.. ಸೂಪರ್ ಮೂನನ್ನು ನಾಚಿಸುತಿತ್ತು... ಸುಂದರವಾಗಿ ತಿದ್ದಿ ತೀಡಿದಂತಹ ತುಸು ತೆಳುವಾದ ಹುಬ್ಬುಗಳು, ಆ ಕಣ್ಣುಗಳಿಗೆ ಬಾಲಕ ಕೃಷ್ಣ ಗೋವರ್ಧನಗಿರಿಯನ್ನು ಎತ್ತಿ ಹಿಡಿದು ಊರ ಜನರಿಗೆ ರಕ್ಷಣೆ ಮಾಡಿದಂತೆ ಇತ್ತು. ಆ ಹೊಳೆಯುವ ಕಂಗಳಿಗೆ ಸವಾಲು ಎನ್ನುವಂತೆ, ಆಕೆಯ ಮುದ್ದಾದ ಮೂಗಿಗೆ ಸರಿಯಾಗಿ ಅಲಂಕರಿಸಿಕೊಂಡಿತ್ತು ಫಳ ಫಳ ಹೊಳೆಯುವ ಮೂಗುತಿ. ತುಟಿಯ ಮೇಲೆ ಸದಾ ಜಿನುಗುತ್ತಿದ್ದ ತಾ ಇಷ್ಟಪಡುವ ಮಂದಹಾಸ "ಕೃಷ್ಣಕಾಂತ್ ನೀ ಬಂದೆ.. ನನ್ನ ಮಂದಹಾಸಕ್ಕೆ ಒಂದು ನೂರು ಗ್ರಾಂ ತೂಕ ಜಾಸ್ತಿ ಬಂತು" ಎನ್ನುವಂತಿತ್ತು.
"ಸರ್ ನಿಮ್ಮ ಹತ್ತಿರ ಸ್ವಲ್ಪ ಮಾತಾಡಬೇಕಿತ್ತು"
ಜೋರಾಗಿ ಎದೆಯೊಳಗೆ ನಗಾರಿ ಬಾರಿಸುತ್ತಿತ್ತು.. ಇವೆಲ್ಲವೂ ಕೆಲವೇ ಕ್ಷಣಗಳಲ್ಲಿ ನೆಡೆದರೂ, ಯಾಕೋ ಅರಿವಿಲ್ಲದೆ ಕೃಷ್ಣಕಾಂತನಿಗೆ ಯುಗ ಯುಗದಿಂದ ಅಲ್ಲೇ ನಿಂತಿದ್ದೇನೆ ಎನ್ನುವಂತಿತ್ತು. ಮೊಬೈಲ್ ಹೊಡೆದುಕೊಳ್ಳುತ್ತಿತ್ತು, ಅದಕ್ಕೆ ಸವಾಲ್ ಎನ್ನುವಂತೆ ಅವನ ಹೃದಯದ ಬಡಿತವೂ ಕೂಡ !!!
"ಮೇಡಂ.. ನೀವು... ನನ್ನನ್ನು.. ಆಹಾ.. ಏನು ಸಮಾಚಾರ.. ಹೇಳಿ.. "
"ಸರ್.. ಇಂದು ಸಂಜೆ ಏಳು ಘಂಟೆಗೆ ನೀವು ಇಲ್ಲಿಯೇ ಸಿಗಬಹುದೇ.. ನಿಮ್ಮ ಬಳಿ ಮಾತಾಡುವುದಿದೆ" ಇವನ ಉತ್ತರಕ್ಕೆ ಕಾಯದೆ ಹಾಗೆ ಅವನನ್ನು ಬಳಸಿ ಮುಂದೆ ಹೋಗಿ ಒಮ್ಮೆ ತಿರುಗಿ ಅವಳ ಹೊಳೆಯುವ ಕಂಗಳನ್ನು ಒಮ್ಮೆ ಮಿಟುಕಿಸಿ ಹೊರಟೆ ಬಿಟ್ಟಳು..
ಜೀವ ಡಗ್ ಎಂದಿತು.. ಅಚಾನಕ್ ಅವಳು ಬಂದು ನಿಂತದ್ದು.. ಮಾತಾಡಿದ್ದು.. ಈಗ ಸಂಜೆ ಇಲ್ಲಿಯೇ ಸಿಗೋಣ ಎಂದಿದ್ದು..ಎಲ್ಲವೂ ಯಾವುದೋ ಯಕ್ಷ ಲೋಕದ ಯಕ್ಷಿಣಿ ಎನ್ನುವಂತಿತ್ತು..
ಕೈಯಲ್ಲಿದ್ದ ಮೊಬೈಲ್ ಮತ್ತೆ ಕೂಗತೊಡಗಿತು.. "ಬಂದೆ ಬಂದೆ ಒಂದೆರಡು ನಿಮಿಷ" ಎಂದು ಹೇಳಿ ದಪ ದಪ ಕಾಲು ಹಾಕುತ್ತಾ .. ತನ್ನ ಕ್ಯಾಬ್ ಕಡೆಗೆ ಹೊರಟ ಕೃಷ್ಣಕಾಂತ್ ...
ಆಹ್.. ಮನಸು ಉಯ್ಯಾಲೆಯಂತೆ ತೂಗಾಡತೊಡಗಿತ್ತು .. ಮೊಬೈಲ್ ನ ಸೌಂಡನ್ನು ಜಾಸ್ತಿ ಮಾಡಿದ.. "ನಿನ್ನ ರೂಪು ಎದೆಯ ಕಲಕಿ ಕಣ್ಣು ಮಿಂದಾಗ.. ನಿನ್ನ ನೋಟ ಕೂಡಿದಾಗ ಕಂಡೆ ಅನುರಾಗ" ಈ ಹಾಡು ಪ್ರೇಮಮಯವಾಗಿದ್ದರೂ.. ತನ್ನ ಕಲ್ಮಶವಿಲ್ಲದ ಗೆಳೆತನಕ್ಕೆ ಒಂದು ಸುಂದರ ಆತ್ಮೀಯತೆಯ ರಂಗು ಕೊಟ್ಟಿತ್ತು.
ಆಫೀಸ್ ನಲ್ಲಿ ಕೃಷ್ಣಕಾಂತ್ ಗೆ ಹೊತ್ತೇ ಹೋಗುತ್ತಿಲ್ಲ.. "ಆ ಮೋಡ ಬಾನಲ್ಲಿ ತೇಲಾಡುತ್ತಾ.. ನಿನಗಾಗಿ ನಾ ಬಂದೆ ನೋಡೆನ್ನುತಾ.. ನಲ್ಲೆ ನಿನ್ನ ಸಂದೇಶವಾ ನನಗೆ ಹೇಳಿದೆ" ಹೀಗೆ ಮನಸ್ಸು ಹಕ್ಕಿಯ ರೂಪ ಪಡೆದುಕೊಂಡು ಗರಿಬಿಚ್ಚಿ ಹಾರತೊಡಗಿತು. ವೀಣಾಳನ್ನು ಹತ್ತಿರದಿಂದ ನೋಡಿದ್ದು, ಅವಳ ಜೇನುಧ್ವನಿಯನ್ನು ಕೇಳಿದ್ದು, ಅವಳು ಹೋಗುವಾಗ ಕಣ್ಣು ಮಿಟುಕಿಸಿ ನಕ್ಕಿದ್ದು.. ಒಂದು ಹೇಳಿಕೊಳ್ಳಲಾಗದ ಅನುಭವ ನೀಡಿತ್ತು.. ಉತ್ಸಾಹದಿಂದ ಕೆಲಸಗಳು ಸಲೀಸಾಗಿ ಮುಗಿಯುತ್ತಿದ್ದವು, ಆದರೆ ಅವನ ಬಲಗೈಗೆ ಕಟ್ಟಿದ್ದ ಕೈಗಡಿಯಾರ ಮಾತ್ರ ಮುಷ್ಕರ ಹೂಡಿ ಕುಳಿತಿರುವಂತೆ ಭಾಸವಾಗುತ್ತಿತ್ತು.. ಎಷ್ಟೋ ಬಾರಿ ನಿಂತು ಹೋಗಿದೆಯೇ ಎಂದು ಕಿವಿಗೆ ಆನಿಸಿಕೊಂಡು, ಮೊಬೈಲ್ ನಲ್ಲಿ ಸಮಯ ನೋಡಿಕೊಳ್ಳುತ್ತಲೇ, ಆಫೀಸ್ ನಲ್ಲಿ ಇದ್ದ ಗಡಿಯಾರ, ತನ್ನ ಲ್ಯಾಪ್ಟಾಪ್ನ ಸಮಯದ ಗೆರೆ... ಹೀಗೆ... ತನ್ನ ನಿರಪರಾಧಿ ಕಕ್ಷಿದಾರನನ್ನು ಉಳಿಸಲು ವಕೀಲರು ತಮ್ಮ ಜ್ಞಾನವನ್ನು ಪಣಕ್ಕಿಟ್ಟು ಹೋರಾಡುವಂತೆ, ಎಲ್ಲಾ ರೀತಿಯಲ್ಲಿಯೂ ಎಲ್ಲವೂ ಸರಿಯಾಗಿದೆ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳುತ್ತಿದ್ದ.
ಆದರೆ ಅವನಿಗೆ ಆ ಕಡೆ ವೀಣಾಳ ಮನದಲ್ಲಿ ತರಂಗಗಳು ಏಳುತ್ತಿದ್ದ ಪರಿಯ ಬಗ್ಗೆ ಅರಿವಿರಲಿಲ್ಲ.. !
ಅತ್ತ ಕಡೆ ವೀಣಾ.. ಇತ್ತ ಕಡೆ ಕೃಷ್ಣಕಾಂತ್.. ವಸುಂಧರೆಯ ಮನೆಯಲ್ಲಿನ ಶಂಖ ಏಳು ಬಾರಿಗೆ ಹೊಡೆದುಕೊಳ್ಳುವುದಕ್ಕೆ ಕಾಯುತ್ತಿದ್ದರು..
ಕೃಷ್ಣಕಾಂತ್ ಆಫೀಸಿಂದ ಮನೆಗೆ ಬರುವ ಸಮಯ.. ಆಫೀಸಿಂದ ಕ್ಯಾಬ್ ಹತ್ತುವಾಗ ಸ್ವಲ್ಪ ಮಟ್ಟಿಗೆ ಸಿಂಗರಿಸಿಕೊಂಡೆ ಬಂದಿದ್ದ.. ಬಲವಂತವಾಗಿ ಬರುತ್ತಿದ್ದ ನಿದ್ದೆಯನ್ನು ತಡೆದುಹಿಡಿದಿದ್ದ.. ತನ್ನ ನೆಚ್ಚಿನ ಪೂರ್ಣ ಚಂದ್ರ ತೇಜಸ್ವಿ ಬರೆದಿದ್ದ ಜುಗಾರಿ ಕ್ರಾಸ್ ಕಥೆ ಓದುತ್ತಿದ್ದ. ಅವನಿಗೆ ಅರಿವಿರಲಿಲ್ಲ ಇಂದಿನ ಘಟನೆ ಕೂಡ ಜುಗಾರಿ ಕ್ರಾಸ್ ಕತೆಯ ತರಹ ರೋಮಾಂಚಕವಾಗಿದೆ ಎಂದು
೬.೫೧... ೬.೫೨... ೬.೫೩.. ೬.೫೪... ೬.೫೫.. ೬.೫೬.. ೬.೫೭.. ೬.೫೮.. ೬.೫೯.. ೭.೦೦
ಪಾರ್ಕ್ ಹತ್ತಿರ ಕೃಷ್ಣಕಾಂತ್.. ಬೆಳಿಗ್ಗೆ ವೀಣಾ ನಿಂತು ಮಾತಾಡಿಸಿದ ಜಾಗದಲ್ಲಿಯೇ ನಿಂತಿದ್ದ..
"ಫಿರ್ ಫಿರ್" ಎಂದು ಸದ್ದು ಮಾಡುತ್ತಾ.. ಬಿಳಿ ಹೋಂಡಾ ಆಕ್ಟಿವಾ ಬಂದು ನಿಂತಿತು.. ಬೆಳದಿಂಗಳ ಬಾಲೆಯ ಹಾಗೆ ಬಿಳಿ ಚೂಡಿದಾರ್ ನಲ್ಲಿ ಈಕೆ ಇನ್ನೂ ಹೊಳೆಯುತ್ತಿದ್ದಳು.. ಬೇಡ ಬೇಡವೆಂದರೂ.. ಆ ರಸ್ತೆಯಲ್ಲಿನ ಬೀದಿ ದೀಪದ ಬೆಳಕು ಅವಳ ಮೂಗುತಿಯನ್ನು ಕನ್ಯಾಕುಮಾರಿ ದೇವಸ್ಥಾನದಲ್ಲಿನ ಹೊಳೆಯುವ ಮೂಗುತಿಯ ತರಹ ಫಳ ಫಳ ಬೆಳಗಿಸುತಿತ್ತು ..
"ಸರ್.. ನಾಳೆ.... ನ್ಯೂ ಶಾಂತಿ ಸಾಗರ್ ಹೋಟೆಲ್ ಹತ್ತಿರ ಬನ್ನಿ.. ನಿಮ್ಮ ಬಳಿ ಮಾತಾಡುವುದಿದೆ.. ನೀವು ನನ್ನ ಅದ್ಭುತ ಗೆಳೆಯರಲ್ಲಿ ಒಬ್ಬರು.. ದಯಮಾಡಿ ಬನ್ನಿ.. ನಾ ನಿಮಗಾಗಿ ಅಲ್ಲಿಯೇ ಕಾದಿರುತ್ತೇನೆ.. ನೀವು ನೀಲಿ ಜೀನ್ಸ್ ಮತ್ತು ಬಿಳಿ ಶರ್ಟ್ ತೊಟ್ಟು ಬನ್ನಿ ಪ್ಲೀಸ್.. ಓಕೆ ಬೈ" ಎಂದು ಮತ್ತೊಮ್ಮೆ ಕಣ್ಣು ಮಿಟುಕಿಸಿ ತನ್ನ ಗಾಡಿಯನ್ನು ಏರಿ ಹೋಗಿಯೇ ಬಿಟ್ಟಳು.
ಕೃಷ್ಣಕಾಂತನಿಗೆ ಅರೆ ಏನಿದು ಎನ್ನುವ ಗೊಂದಲವಿದ್ದರೂ.. ವೀಣಾ ಬಂದು ಮಾತಾಡಿಸಿದ್ದು ಖುಷಿಯಾಗಿತ್ತು.. ಕಿವಿಗೆ ಸಿಕ್ಕಿಸಿಕೊಂಡಿದ್ದ ಹ್ಯಾಂಡ್ಸ್ ಫ್ರೀ "ಬೊಂಬೆಯಾಟವಯ್ಯ ಇದು ಬೊಂಬೆಯಾಟವಯ್ಯ.. ನೀ ಸೂತ್ರಧಾರಿ.. ನಾ ಪಾತ್ರಧಾರಿ.. ದಡವ ಸೇರಿಸಯ್ಯಾ" ಅಣ್ಣಾವ್ರ ಹಾಡು ಕೇಳಿಸುತ್ತಿತ್ತು.. ..
ಮನಸ್ಸು ನಾಳಿನ ದಿನಕ್ಕೆ ಕಾಯುತ್ತಿತ್ತು...
"ಈ ಸಮಯ ಆನಂದಮಯ ನೂತನ ಬಾಳಿನ ಶುಭೋದಯ" ಬಭೃವಾಹನದ ಅಣ್ಣಾವ್ರ ಗಾನ ಅಲ್ಲಿಯೇ ಇದ್ದ ಬೇಕರಿಯಿಂದ ಕೇಳಿ ಬರುತ್ತಿತ್ತು.. !
ಇದು ಮೋಸ ಅಂತ ಹಠ ಮಾಡಬೇಕಾಗುತ್ತೆ ಈಗ... ಕುತೂಹಲ ಇನ್ನು ಕೆರಳಿದೆ. ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ.. ಎಕ್ಸಾಮ್ ಬರಿವಾಗ್ಲು ಪ್ರಶ್ನೆಗಳ ಬಗ್ಗೆ ಇಷ್ಟು ತಲೆ ಕೆಡಿಸಿಕೊಂಡಿರಲಿಲ್ಲ. ಆದ್ರೆ ಕೃಷ್ಣ ಕಾಂತ್ ಕೈ ಬಿಟ್ಟು ಹೋಗ್ತಾ ಸಿಕ್ರಲ್ಲ ಅನ್ನೋ ಖುಷಿ ಆಯ್ತು. ಮೂರನೆ ಭಾಗವಾದರೂ ಕಥೆ ಹಿಡಿತ ಸಡಿಳವಾಗದಂತೆ ಬರೆದುಕೊಂಡು ಬಂದಿದ್ದೀರಿ. ಮುಂದಿನ ಭಾಗಕ್ಕೆ ಖಾತರದಿಂದ ಎದುರು ನೋಡುತ್ತಿದ್ದೀವಿ.
ReplyDeleteಧನ್ಯವಾದಗಳು ಸಿಬಿ
Deleteಸುಂದರ ಪ್ರತಿಕ್ರಿಯೆ.. ಸುವಿವರವಾಗಿ ಬರೆದಿದ್ದೀರಿ ಕಥೆಯ ಒಟ್ಟಾರೆ ಆಶಯವನ್ನು.. ಧನ್ಯೋಸ್ಮಿ
ಅದೇನ್ ಅಷ್ಟೊಂದು ಆಟಾಡುಸ್ತಾಳೆ ಆ ಹುಡುಗಿ.. ನೋಡುವ ಬಯಕೆ ಅವನದ್ದೋ ಅವಳದ್ದೋ ... ಬೇಗ ಹೇಳಿ ಶ್ರೀಕಾಂತ್ ಜಿ... ಸೂಪರ್... :)
ReplyDeleteಧನ್ಯವಾದಗಳು ಸರ್.. ಯಾಕೆ ಅಂತ ನನಗೂ ಗೊತ್ತಿಲ್ಲ.. ಕಥೆ ಮುಂದಿನ ಭಾಗದಲ್ಲಿ ನೋಡೋಣ ಏನೂ ಸ್ಪೂರ್ತಿಯ ಸೆಲೆ ತರುವ ಬೆಳವಣಿಗೆಗೆ..
DeleteVery nice. Awaiting next Sri 😊👍
ReplyDeleteಧನ್ಯವಾದಗಳು DFR.. ಒಳಗಿರುವ ಪರಮಾತ್ಮ ಬರೆಸುತ್ತಾ ಇದ್ದಾನೆ.. ಬರೆಯುತ್ತಾ ಇದ್ದೇನೆ..
Deleteಅಬ್ಬಾ!! ಏನಿದು ಶ್ರೀಕಾಂತ.. ರಸದೌತಣ. ಹಿಂದಿನ ಕಂತಿನ ಕೊರತೆಯನ್ನು ಈ ಕಂತಿನಲ್ಲಿ ಬಡ್ಡಿ ಸಮೇತ ತೀರಿಸಿದಂತಾಗಿದೆ. ಪ್ರತಿ ವಾಕ್ಯದ, ಪದದ ಸವಿಯನ್ನು ಸವಿಯುವುದೋ, ಮುಂದೇನಾಗುವುದೋ ಎಂದು ಯೋಚಿಸುವುದೋ, ಕಾಮೆಂಟ್ ಏನು ಬರೆಯುವುದೋ ಎಂದು ಗಮನ ಹರಿಸುವುದೋ ತಿಳಿಯದಾಯಿತು.
ReplyDeleteಕಣ್ಣಂಚಿನ ನೋಟದಿಂದ ಶುರುವಾದ ಕಥೆ, ಆ ಕಡೆ ದೃಶ್ಯ ಈ ಕಡೆ ದೃಶ್ಯವನ್ನು ವಿವರಿಸುತ್ತಾ ೨೭೦ಡಿಗ್ರಿ ಕೋನದಲ್ಲೂ ಕುತೂಹಲ ಹೆಚ್ಚಿಸಿ ೩೬೦ ಡಿಗ್ರಿ ಕೋನದಲ್ಲಿ ಏನಾಗುತ್ತೋ ಹೇಗೆ ಕೊನೆಗೊಳ್ಳುತ್ತದೆಯೋ ಎಂದು ಕಾಯುವಂತೆ ಮಾಡಿದೆ.
ನೀವು ಅಬ್ಬಾ ಎಂದರೆ
Deleteನಾನು ಯಪ್ಪೋ ಅನ್ನುತ್ತೀನಿ.. ಏನು ಅತ್ತಿಗೆ ಈ ಪಾಟಿ ಭಯಂಕರ ಪ್ರತಿಕ್ರಿಯೆ.. ಮನಸ್ಸು ಹಾರಾಡುತ್ತಿದೆ..
ಸೂಪರ್ ಸೂಪರ್ ಧನ್ಯವಾದಗಳು
ವರ್ಣನೆಗಳು ಸೂಪರ್ ಆಗಿವೆ. ಕುತೂಹಲವು ೨೭೦ ಡಿಗ್ರೀಯಷ್ಟು ಏರಿದೆ. ಶ್ರೀಕಾಂತರೆ, ಸಸ್ಪೆನ್ಸ್ಅನ್ನು ಬೇಗನೇ ಕೊನೆಗಾಣಿಸಿ.
ReplyDeleteಗುರುಗಳೇ ಧನ್ಯವಾದಗಳು ಸುಂದರ ಪ್ರತಿಕ್ರಿಯೆಗೆ. ನಿಮ್ಮ ಬೆನ್ನು ತಟ್ಟುವಿಕೆಗೆ ಧನ್ಯೋಸ್ಮಿ..
Delete