Monday, March 24, 2014

ಕಾಡುವ ಸುಡುಗಾಡು...... ಜೀವ ಒಡಲಿಂದ ದೂರಾದಂತೆ!!!!

"ನೀ ಇರಲು ಜೊತೆಯಲ್ಲಿ" ಒಳಗೆ ಜೀವ ಇರುವವರೆಗೂ.....

ಯಾಕೋ ಏನೋ ಗೊತ್ತಿಲ್ಲ ತುಂಬಾ ಕಾಡಲು ಹತ್ತಿತ್ತು.. ಒಂದು ಜೀವ ತಾನು ಪ್ರೀತಿಸುತ್ತಿದ್ದ ದೇಹವನ್ನು ಬಿಟ್ಟು ಹೋಗುವಾಗ ಹೇಗೆಲ್ಲ ಹಾಡುತ್ತಿರುತ್ತದೆ. ಅದರ ತಳಮಳವೇನು ತಿಳಿಯ ಬೇಕು ಎನ್ನಿಸಿತು..

ಸಹೋದ್ಯೋಗಿಯ ಪಿತ ಇಹಲೋಕದಿಂದ ಬಿಡುಗಡೆ ಪಡೆದು ಸುಂದರ ಲೋಕಕ್ಕೆ ಧಾವಿಸಿದ್ದ ಸಮಯ.. ಅಲ್ಲಿಯೇ ಕೂತಿದ್ದೆ..
ನಿರ್ಜೀವ ಎನ್ನಿಸಿಕೊಂಡ ಒಂದು ಕೃಶ ದೇಹ.. ಅದರಿಂದ ಹೊರಗೆ ನಿಂತು ಹಾಡುತ್ತಿದ್ದ ಆತ್ಮ... ಒಬ್ಬರನೊಬ್ಬರು ಅಗಲಿದ ಸಮಯ..  ಅವರಿಬ್ಬರ ಸಂಭಾಷಣೆ ಕಿವಿಗೆ ಬಡಿಯುತ್ತಿತ್ತು... !

"ನೀ ಇರಲು ಜೊತೆಯಲ್ಲಿ
ಬಾಳೆಲ್ಲ ಹಸಿರಾದಂತೆ"

ಆತ್ಮದೊಳಗೆ ಜೀವವಿದ್ದಾಗ.. ದೇಹದಲ್ಲಿ ಆತ್ಮವಿರುತ್ತದೆ.. ಆದರೆ ದೇಹ ಹೇಳುತ್ತದೆ

"ನಗುತ ನೀ ಕರೆದರೆ
ಮನದೆ ಸಂತೋಷ ಹಾಡಾದಂತೆ
ನೀ ಇರಲು ಜೊತೆಯಲ್ಲಿ
ಬಾಳೆಲ್ಲ ಹಸಿರಾದಂತೆ"

ಸುತ್ತಲು ಆ ದೇಹದ ಜೊತೆ ರಕ್ತ ಸಂಬಂಧ ಹೊಂದಿದ್ದವರು ಭಾವನಾತ್ಮಕ ಸಂಬಂಧ ಹೊಂದಿದ್ದವರು.. ಗುರುತು ಪರಿಚಯ ಇರುವವರ ಹಿಂಡೇ ನೆರೆದಿತ್ತು.. ಎಲ್ಲರ "ಮಾತಲ್ಲಿ ಏನೊ ಹೊಸತನ.. ಮಗುವನ್ನು ಹೋಲೋ ಹೂ ಮನ"

ಆತ್ಮ ತನ್ನ ಹಳೆಯ ದೇಹದ ಯಜಮಾನನಿಗೆ ಹೇಳುತ್ತಿತ್ತು.. "ರಸಕಾವ್ಯ ನಿನ್ನ ಯೌವ್ವನಾ.. ಎದೆ ತುಂಬಿ ನಿಂತೆ ಪ್ರತಿಕ್ಷಣ .. ಆಗ ಬಿಕ್ಕುತ್ತಾ ಬಿಕ್ಕುತ್ತಾ "ಹಳ್ಳಿ ಮಣ್ಣಲಿ" ಬೆರೆಯಬೇಕು ಎನ್ನುವ ಹಂಬಲ ಇತ್ತು.. ಇನ್ನಷ್ಟು ದಿನ ನೀನು ನನ್ನೊಳಗೆ ಇರಬೇಕು ಎನ್ನಿಸಿತ್ತು" ಆದರೆ "ಬಿರಿದ ಮಲ್ಲಿಗೆ" ನನ್ನ ಎದೆಯ ಮೇಲೆ ಹಾಕುತ್ತಿದ್ದಾರೆ.. ಎಲೆ ಆತ್ಮ ಬಂಧುವೇ "ಬೆರೆತೆ ಉಸಿರಲ್ಲಿ ಒಂದಾದಂತೆ" ನಾನು ನಿನ್ನೊಳಗೆ ಬೆರೆಯಲು ಸಾಧ್ಯವೇ.. ?

"ಈ ನೀಲಿ" ಆಕಾಶದಲ್ಲಿ ನನ್ನ "ಕಣ್ಣ ಬೆಳಕಲ್ಲಿ" ಏನು ಕಾಣುತ್ತಲೇ ಇಲ್ಲಾ.. "ಮನೆಯೆಲ್ಲ ಎಂದು ಬೆಳಗಲಿ" ಎಂದು ದುಡಿದ ಮನೆ ಮನ ಇಂದು ನನ್ನದಲ್ಲ.. ಆತ್ಮವೇ "ನೀ ತಂದ ಪ್ರೀತಿ ಲತೆಯಲಿ" ನನ್ನ ಜೀವನದಲ್ಲಿ "ನಗುವೆಂಬ ಹೂವು ಅರಳಲಿ" ಅಥವಾ ಮುದುಡಲಿ ಸದಾ ಗೆದ್ದೇ ಗೆಲ್ಲುವೆ ಎಂಬ ಆತ್ಮ ವಿಶ್ವಾಸ ಬೆಟ್ಟದಷ್ಟಿತ್ತು. ಸಂಕಟ ಬಂದಾಗ ಸುಂಕವೂ ಕಟ ಕಟ ಎಂದು ಬಾಗಿಲು ಬಡಿಯುತ್ತದೆ.. ಆತ್ಮವೇ "ಅಗಲಿ ನಿನ್ನನು ಬಾಳಲಾರೆನು.....  ಜೀವ ಒಡಲಿಂದ ದೂರಾದಂತೆ"  ಇಂದು ನೀನು ನನ್ನೋಳಗಿಲ್ಲ.. "ನೀ ಇರಲು ಜೊತೆಯಲ್ಲಿ" ಅಯ್ಯೋ ಇದು ಸಾಧ್ಯವೇ.. ದಾಸರ ಗಿಳಿಯು ಪಂಜರದೊಳಿಲ್ಲ ಗೀತೆ ನೆನಪಿಗೆ ಬರುತ್ತಿದೆ..

ಯಾಕೋ ಮೈಯೆಲ್ಲಾ ನಡುಗುತ್ತಿರುವಂತೆ ಭಾಸವಾಯಿತು.. ನೋಡಿದರೆ ಒಬ್ಬರಾಗಿ ಒಬ್ಬರು ಎಣ್ಣೆ ಸೀಗೆಕಾಯಿ ತಿಕ್ಕಿ ನಡು ಬೀದಿಯಲ್ಲಿ ಮಜ್ಜನ ಮಾಡಿಸುತ್ತಿದ್ದಾರೆ.. ಅಳುತ್ತಾ ಇರುವರು ಕೆಲವರು..ಅಯ್ಯೋ ಇಂದು ಇವರು ನಾಳೆ ನಾವು ಎನ್ನುವ ಸ್ಮಶಾನ ವೈರಾಗ್ಯದಲ್ಲಿ ಕೆಲವರು.. .. ದೇಹದಿಂದ ಆತ್ಮವೇಕೆ ಹೊರಕ್ಕೆ ಹೋಯಿತು ಎನ್ನುವ ಕುತೂಹಲ ತಣಿಯದ ಪ್ರಶ್ನೆಗಳಲ್ಲಿ ಮುಳುಗಿದವರು ಹಲವರು..

ಇವೆಲ್ಲದರ ಪರಿವೆ ಇಲ್ಲದೆ.. ಯಾವುದೋ ಪ್ರಾಣಿ ತನ್ನ ಚರ್ಮವನ್ನು ದಾನ ಮಾಡಿ...  ಅದರಿಂದ ಎದೆ ನಡುಗುವಂತೆ ಬಡಿಯುತ್ತಿರುವ ತಮಟೆ ಸದ್ದು.. ಅರೆ ಅರೆ ಯಾಕೆ ಹೀಗೆ ಬಡಿಯುತ್ತಿದ್ದಾರೆ.. ಬದುಕಿದ್ದವರು ಓಡಲಿ ಎಂದೇ.. ಅಥವಾ ಹೊರಗೆ ಹೋದ ಆತ್ಮ ಮತ್ತೆ ಬರಲು ರಹದಾರಿಯೇ.. ಯಾಕೆ.. ಹೀಗೆ.. ?

ನೋಡು ನೋಡುತ್ತಲೇ ಅಲ್ಲೇ ಒಬ್ಬ ಕುಳಿತಿದ್ದ ಭಾವುಕ ತದೇಕ ಚಿತ್ತದಿಂದ ತಮಟೆ ಸದ್ದನ್ನೇ ಕೇಳುತ್ತಾ.. ಬಡಕಲು ದೇಹವನ್ನೇ ನೋಡುತ್ತಿದ್ದ.. ಅವನೊಳಗೆ ಭಾವ ಸಾಗರದ ಅಲೆಗಳು ಬಡಿಯುತ್ತಾ ಬಡಿಯುತ್ತಾ ಕಣ್ಣಂಚಿಗೆ ಬಂದು ಬೀಳಲೋ ಬೇಡವೋ ಅಂತ ಅಪ್ಪಣೆ ಕೇಳುತ್ತಿದ್ದವು..!

ದೇಹಕ್ಕೆ ಮೆಲ್ಲನೆ ಬಿಸಿ ತಾಗ ತೊಡಗಿತು.. ಬೆಚ್ಚನೆ ಹೊದಿಕೆ.. ಘಮ ಘಮ ಗುಟ್ಟುವ ಹೂವಿನ ಹಾರ.. ಹಣೆಗೆ ವಿಭೂತಿ.. ಕುಂಕುಮ.. ಅಯ್ಯೋ ಈ ದೇಹಕ್ಕೆ ಬೇಕೇ.. ಇವೆಲ್ಲ ಅನ್ನುವಷ್ಟರಲ್ಲಿಯೇ.. ಹಟಾತ್ ನಾಲ್ಕೈದು ಮಂದಿ ದೇಹವನ್ನು ಎತ್ತಿ ಹೂವಿನ ಪಲ್ಲಕ್ಕಿ (?????)ಯಲ್ಲಿ ಕೂರಿಸಿದರು.. ಹೌದು ಕೂರಲು ಶಕ್ತಿಯಿಲ್ಲದೆ ಲೋಕ ಬಿಟ್ಟಿದ ದೇಹಕ್ಕೆ ವಿಪರೀತ ಮುತುವರ್ಜಿ ವಹಿಸಿ ಪಲ್ಲಕ್ಕಿ ಸಿದ್ಧಪಡಿಸಿದ್ದರು.. ಹೂವಿನ ಪರಿಮಳದ ಜೊತೆಯಲ್ಲಿ ಘಂ ಎನ್ನುವ ಗಂಧದ ಪರಿಮಳ.. ಊದುಬತ್ತಿಯ ಧೂಪ.. ಜೀವನವಿಡಿ ಹೊಗೆ ಹಾಕಿಸಿಕೊಳ್ಳದ ಈ ದೇಹಕ್ಕೆ ಇಂದು ಹೊಗೆಯಲ್ಲಿ ಅಭ್ಯಂಜನ..

 ಅಂತರಂಗದ ಅಗ್ನಿ ಬಹಿರಂಗದ ಅಗ್ನಿಯನ್ನು ಸಂಧಿಸುವ ತಾಣ!!!

ಆಫೀಸ್ಗೆ ಹೋಗಬೇಕು.. ಅಯ್ಯೋ ಬೆಳಿಗ್ಗೆಯಿಂದ ತಿಂಡಿ ತಿಂದಿಲ್ಲ.. ಬೇಗ ಮುಗಿದರೆ ಸಾಕು ಊರಿಗೆ ಹೋಗಬೇಕು.. ಬಸ್ ಎಷ್ಟೊತ್ತಿಗೆ.. ದೇಹದ ಉಸಾಭರಿಯನ್ನು  ಕೇಳುವವರೇ ಇಲ್ಲ.. ದೇಹ ಬೇಸರದಲ್ಲಿದ್ದಾಗ ಆತ್ಮ ನಗುತ್ತಾ ಹಾಡಲು ಶುರುಮಾಡಿತು... 

"ಹೆಂಡತಿ ಮಕ್ಕಳು  ಬಂಧು ಬಳಗ 
ರಾಜಯೋಗದ ವೈಭೋಗ 
ಕಾಲನು ಬಂದು ಬಾ ಎಂದಾಗ 
ಎಲ್ಲವೂ ಶೂನ್ಯ ಚಿತೆ ಏರುವಾಗ
ಎಲ್ಲಾ ಶೂನ್ಯ ಎಲ್ಲವೂ ಶೂನ್ಯ 
ಉಳಿಯುವುದೊಂದೇ ದಾನ ಧರ್ಮ ತಂದ ಪುಣ್ಯ"

ದೇಹಕ್ಕೆ ನಿಜದ ಅರ್ಥವಾಯಿತು

"ನಾನೇ ಎಂಬ ಭಾವ ನಾಶವಾಯಿತು.. ನೀನೆ ಎಂಬ ನೀತಿ ನಿಜವಾಯಿತು.. ಒಳಗಿನ ಕಣ್ಣನು ತೆರೆಸಿದೆಯೋ.. ಗೀತೆಯ ಮರ್ಮವಾ ತಿಳಿಸಿದೆಯೋ.. "


ಅರೆ ಕಣ್ಣಿಗೆ ಏನೋ ಬೀಳುತ್ತಿದ್ದೆ ಎಂದು ಮೇಲೆ ನೋಡಿತು ದೇಹ.. ಎಲ್ಲರೂ ಒಂದು ಹಿಡಿ ಮಣ್ಣನ್ನು ಹಾಕುತ್ತ ಹೋದರು.. ತಲೆಯೆಲ್ಲಾ ಮಣ್ಣು.. ಕಣ್ಣು ಬಿಡಲಾಗುತ್ತಿಲ್ಲ.. ಉಸಿರು ಸಿಕ್ಕಿಕೊಳ್ಳುತ್ತಿದೆ.. ಅರೆ ಇದೇನು ಕಣ್ಣಿಗೆ ಕಪ್ಪು ಕತ್ತಲೆ.. ಅರೆ ಅರೆ.. ಏನಾಗು.... "ಈ ದೇಹದಿಂದ ದೂರವಾದೆ ಏಕೆ ಆತ್ಮವೇ.. ಈ ಸಾವು ನ್ಯಾಯವೇ.. "

ಆತ್ಮ ಇನ್ನೊಂದು ದೇಹವನ್ನು ಹುಡುಕುತ್ತಾ.. ಹಾಡುತ್ತಾ ಸಾಗಿತು

ಇಲ್ಲಿಗೆ ಬರಲೇ ಬೇಕು !!!


"ಕಥೆ ಮುಗಿಯಿತೇ ಆರಂಭದ ಮುನ್ನಾ.. ಎಲ್ಲಿಗೆ ಪಯಣ ಯಾವುದೋ ದಾರಿ ಏಕಾಂಗಿ ಸಂಚಾರಿ.. !!!!

Thursday, March 6, 2014

ಮರೋ ಚರಿತ್ರಾ... ಕಾದು ಕಾದು ಮರೆಯಲಾರದ ಚರಿತ್ರಾ

ಕಾದು ಕುಳಿತಿವೆ..

ಅರಳಿ ಎಲೆಗಳ ನೆರಳು ಬಿಸಿಲಿನ ಆಟದ ಮಧ್ಯದಲ್ಲಿ.. 

ಮರದಲ್ಲಿದ್ದ ಹಕ್ಕಿಗಳು ತಮ್ಮಮರಿಗಳಿಗೆ ಅಲ್ಲಿ ಇಲ್ಲಿ ಹೆಕ್ಕಿ ತಂದಿದ್ದ ಕಾಳುಗಳನ್ನು ತಿನ್ನಿಸುತ್ತಿದ್ದವು..

"ಕೋಟಿ ದಂಡಾಲೋ ಶತ ಕೋಟಿ ದಂಡಾಲೋ"

ಗಣೇಶನ ಮೂರ್ತಿಯನ್ನು ಕೂರಿಸಿದ್ದ ಮಂಟಪದಿಂದ ಆಗಷ್ಟೇ ಬಿಡುಗಡೆಯಾಗಿ ಅಪಾರ ಸುದ್ಧಿ ಮಾಡಿದ್ದ "ಮರೋ ಚರಿತ್ರಾ" ಚಲನ ಚಿತ್ರದ ಹಾಡು ಕಿರುಚುತಿತ್ತು..

ಹಸಿದು ಬೆಂಡಾಗಿದ್ದ ಹಕ್ಕಿಯ ಮರಿಗಳು ತನ್ನ ತಾಯಿ ಹಕ್ಕಿ ಉಣಿಸಿದ್ದ ಕಾಳುಗಳನ್ನು ತಿಂದು ಸಂತೃಪ್ತರಾಗಿ ಹಾಡಿಗೆ ಹಿಮ್ಮೇಳದಂತೆ ಗಾನ ಸೇರಿಸುತ್ತಿದ್ದವು..

ಅಣ್ಣಾವ್ರ ಕವಿರತ್ನ ಕಾಳಿದಾಸ ಚಲನ ಚಿತ್ರ ಬರಲು ಇನ್ನು ಹಲವಾರು ವರ್ಷಗಳು ಇದ್ದವು ಇಲ್ಲ ಅಂದ್ರೆ...

"ಹೊಟ್ಟೆ ಚುರುಗುಟ್ ತಾ ಐತೆ ರಾಗಿ ಮುದ್ದೆ ತಿನ್ನೋ ಹೊತ್ತು" ಅಂತ ಹಾಡುತ್ತಿದ್ದವು ಆ ಮರದ ನೆರಳಲ್ಲಿ ಕೂತಿದ್ದರೂ ಹೊಟ್ಟೆಯ ಹಸಿವಿನ ಬೇಗೆ ತಾಳದೆ ಬಳಲುತಿದ್ದ ಎರಡು ಮುದ್ದು ಕಂದಮ್ಮಗಳು.. ತಮ್ಮ ತಾಯಿಯ ಬರುವಿಗೆ ಕಾಯುತ್ತಾ ಕುಳಿತಿದ್ದವು..

*********************************************************************************
"open it carefully..there is a surprise for you"

೧೯೯೪ ಮಾರ್ಚ್ ೨ ರಂದು ಬೆಳಿಗ್ಗೆ ಎದ್ದಾಗ ನನ್ನ ಪಕ್ಕದಲ್ಲಿ ಒಂದು ಲಕೋಟೆಯ ಮೇಲೆ ಈ ಮುದ್ದಾದ ಬರಹಗಳನ್ನು ಕಂಡು ಆಶ್ಚರ್ಯವಾಗಿತ್ತು.. ನಿಧಾನವಾಗಿ ತೆರೆದೇ..

"HMT" ಕೈಗಡಿಯಾರ ನಸು ನಗುತ್ತಿತ್ತು.. ಜೊತೆಯಲ್ಲಿ ಒಂದು ಸುಂದರ ಶುಭಾಶಯದ ಪತ್ರ "Happy Birthday Dear brother"  

ಪ್ರೀತಿಯ ಅಣ್ಣನಿಂದ ನನಗೆ ಸುಂದರ ಕೈಗಡಿಯಾರ ಮತ್ತು ಶುಭ ಹಾರೈಕೆ ಹೊತ್ತ ಗ್ರೀಟಿಂಗ್ ಕಾರ್ಡ್!

ಜೀವನದಲ್ಲಿ ಸಮಯ ನೋಡಿಕೊಳ್ಳಲು ಕೈಗೆ ಬಂದ ಮೊದಲ ನನ್ನದೇ ಅನ್ನಿಸುವ ಕೈಗಡಿಯಾರ!
*********************************************************************************
ಆಗ ತಾನೇ ಕಂಪ್ಯೂಟರ್ ಯಂತ್ರ ಕಣ್ಣು ಬಿಡುತ್ತಿದ್ದ ಸಮಯ.. ಜಗತ್ತನ್ನೆಲ್ಲ ಅದರಲ್ಲೂ ಭಾರತವನ್ನು ಈ ಕಂಪ್ಯೂಟರ್ ಎನ್ನುವ ಮಾಂತ್ರಿಕ ಶಕ್ತಿ ತನ್ನ ಕಬಂಧ ಬಾಹುಗಳಲ್ಲಿ ಸೆಳೆದುಕೊಳ್ಳಲು ಹವಣಿಸುತ್ತಿದ್ದ ಕಾಲ..

"ನೀನು ಕಂಪ್ಯೂಟರ್ ಕೋರ್ಸ್  ಗೆ ಸೇರಿಕೋ.. ಹೊಸದನ್ನು ಕಲಿ.. ನಾ ಅದಕ್ಕೆ ದುಡ್ಡು ಕೊಡುವೆ.. " ಎನ್ನುವ ೧೯೯೪-೯೫ ರಲ್ಲಿ ನಡೆದ ಈ ಮಾತುಗಳು ನನಗೆ ಒಂದು ಕ್ಷಣ ಗಾಬರಿ ಇನ್ನೊಂದು ಕಡೆ ಸಂತಸ ತಂದಿತ್ತು..

ಆಗ ಐದು ರುಪಾಯಿಗೆ ಈಗಿನ ಐವತ್ತು ರೂಪಾಯಿಯಷ್ಟು ಬೆಲೆ.. ಆಗಿನ ಕಾಲಕ್ಕೆ ಸುಮಾರು ಹದಿನೈದು ಸಾವಿರ ರೂಪಾಯಿಗಳಷ್ಟು ವ್ಯಯ ಮಾಡಿ ವಿಜಯನಗರದಲ್ಲಿನ ಕಂಪ್ಯೂಟರ್ ಪಾಯಿಂಟ್ ಎನ್ನುವ ಒಂದು ಕಲಿಕಾ ಶಾಲೆಯಲ್ಲಿ ಕಂಪ್ಯೂಟರ್ ಯಂತ್ರ ಅಂದರೆ ಏನು ಎಂದು ತಿಳಿದುಕೊಳ್ಳಲು ಸಹಾಯ ಮಾಡಿದ್ದು ನನ್ನ ಜೀವನಕ್ಕೆ ಒಂದು ಮಹತ್ತರ ತಿರುವು ನೀಡಿದ ನನ್ನ ಅಕ್ಕಾ..

ಅಲ್ಲಿಂದ ಆಚೆಗೆ ಜೀವನದಲ್ಲಿ ಮತ್ತೆ ತಿರುಗಿ ನೋಡುವ ಪ್ರಮೇಯ ಬರಲಿಲ್ಲ.. ದೇವರ ಅನುಗ್ರಹ..
*********************************************************************************
"ಬನ್ನಿ ಶ್ರೀ.. ಒಂದು ಪುಸ್ತಕ ಬಿಡುಗಡೆ ಸಮಾರಂಭ ಇದೆ.. ಹೋಗಿ ಬರೋಣ.. ".. ನನಗೆ ಈ ಸಭೆ ಸಮಾರಂಭಗಳು ಅಲರ್ಜಿ ಎನ್ನಿಸುತ್ತಿದ್ದ ಕಾಲ.. ಆದರೆ ಸ್ನೇಹಿತನ ಬಲವಂತಕ್ಕೆ ಹೋದೆ..

"ಇವರು ಶ್ರೀಕಾಂತ್ ಮಂಜುನಾಥ್ ಅಂತ.. ಬರೀತಾ ಇರ್ತಾರೆ.. "

"ಒಹ್ ಹೌದಾ ದ ನಮಸ್ಕಾರ ಚೆನ್ನಾಗಿದ್ದೀರಾ .. ಬನ್ನಿ ತಿಂಡಿ ತಿನ್ನಿ.. ಸಿಗ್ತೀನಿ ಮತ್ತೆ"

ಇದು ಪ್ರಕಾಶ್  ಹೆಗ್ಗಡೆ ಅವರನ್ನು ಮೊಟ್ಟ ಮೊದಲ ಬಾರಿ ಭೇಟಿ ಪ್ರಸಂಗ..
*********************************************************************************
ಹಾಗೆ ಸುಮ್ಮನೆ ಒಂದು ಫೇಸ್ ಬುಕ್ ಗೊಡೆಯಲ್ಲಿನ ಬರಹಕ್ಕೆ ಲೈಕ್ ಬಟ್ಟನ್ ಒತ್ತಿದೆ...

ತಕ್ಷಣ ಒಂದು ಸಂದೇಶ ಬಂದಿತು.. ಶ್ರೀಕಾಂತ್ ಮಂಜುನಾಥ್.. ನೀವು ನಿಮ್ಮ ಕುಟುಂಬದ ಸಂಗಡ ಬನ್ನಿ.. ನಾವೆಲ್ಲಾ ಒಂದು ಸುಂದರ ಜಾಗಕ್ಕೆ ಹೋಗುತ್ತಿದ್ದೇವೆ..

ಸರಿ ಸರ್ಜಿ.. ಬರುವುದಾದರೆ ಹೇಳುವೆ ಎಂದಿದ್ದೆ..

ಜೂನ್ ೨೩ ೨೦೧೨.. ಬೆಳಿಗ್ಗೆ ಆರು ಘಂಟೆಗೆ.. ಎದ್ದು ಹೊರಟಿದ್ದೆವು.. ಬಸ್ಸಲ್ಲಿ ಜನವೋ ಜನ.. ಯಾರ ಮುಖವೂ ಪರಿಚಯವಿಲ್ಲ.." ಶ್ರೀಕಾಂತ್ ಮಂಜುನಾಥ್ ಚೆನ್ನಾಗಿದ್ದೀರಾ.." ಎಂದ ಅಜಾದ್ ಸರ್.. ಕಾಂತ ಎಂದ ಮಹೇಶ್.. ಶ್ರೀಕಾಂತ್ ಮಂಜುಂಥ್ ಎಂದ ರೂಪ ಸತೀಶ್.. ಶ್ರೀಕಾಂತ್ ಎಂದ ಸಂಧ್ಯಾ ಭಟ್.. ಸುಮಧುರ ನಗೆ ನಕ್ಕ ಸುಲತ.. ಸರ್ ನಿಮ್ಮ ಕಾಮೆಂಟ್ ಗಳು ಸೂಪರ್ ಎಂದ ಸುದೇಶ್.. ಒಬ್ಬರೇ ಇಬ್ಬರೇ ಗುರುಪ್ರಸಾದ್, ಉಮೇಶ್ ದೇಸಾಯಿ ಸರ್, ನವೀನ ಮಾಸ್ಟರ್, ಗಿರೀಶ್, ಬನ್ನಿ ಸರ್ ನೀವು ಎಂದ ಶಿವೂ ಸರ್.. ಹೀಗೆ ಹೆಸರಿಸಲು ಜಾಗವೇ ಸಾಲದೇ ಕಡೆಗೆ ನನ್ನ ಎಲ್ಲರಿಗೂ ಪರಿಚಯಿಸಿದ ಪ್ರಕಾಶ್ ಹೆಗ್ಗಡೆ.. "ಇವರು ಶ್ರೀಕಾಂತ್ ಮಂಜುನಾಥ್ ಅಂತ .. ನನ್ನ ಬ್ಲಾಗ್ ನಲ್ಲಿ ಸುಂದರ ಕಾಮೆಂಟ್ ಹಾಕ್ತಾರೆ.. "...  ಹೀಗೆ ಶುರುವಾಯಿತು ಸುಮಧುರ ವ್ಯಕ್ತಿಗಳ ಪರಿಚಯ.. ಒಬ್ಬರಾದ ಮೇಲೆ ಒಬ್ಬರು ನನ್ನ ಮನಸನ್ನು ಆಕ್ರಮಿಸಿಕೊಳ್ಳುತ್ತಾ ಹೋದರು.. ಇಂದು ಬೆರಳಿಗೆ ಸಿಕ್ಕದ..  ಲೆಕ್ಕಕ್ಕೆ ಎಟುಕದಷ್ಟು ಪ್ರೀತಿ ವಿಶ್ವಾಸ ಹರಿಸುವ ಸುಮಧುರ ಹೃದಯಗಳ ಸಾಗರವೇ ನನ್ನನ್ನು ಆವರಿಸಿಕೊಂಡಿವೆ..
********************************************************************************
ಶ್ರೀಕಾಂತ್ ಜಿ ಆನೆ ನಡೆದದ್ದೇ ದಾರಿ.. ನಿಮಗೆ ಅನ್ನಿಸಿದ್ದು ನೀವು ಬರೆಯಿರಿ.. ಓದಲು ನಾವು ಇದ್ದೇವೆ.. ಇದನ್ನು ನಿಮ್ಮೊಳಗೆ ನಾನೊಬ್ಬ ಎಂದು ಆದರಿಸುವ.. ಬಾಲೂ ಸರ್.. ಬನ್ನಿ ಸರ್ ಮೈಸೂರಿಗೆ ಎಂದರು.. ಸರಿ ಹೋಗಿಯೇ ಬಿಡೋಣ ಅಂತ ಮೈಸೂರಿಗೆ ಹೋಗಿಯೇ ಬಿಟ್ಟೆವು.. . ಕೆಲವು ತಿಂಗಳ ಹಿಂದೆ ಸರ್ ಎಂದು ಮಾತಾಡುತಿದ್ದ ಸಂಧ್ಯಾ, ಸುಲತ, ಸುಷ್ಮಾ..  ಭಾಗ್ಯ.. .. ಬನ್ನಿ ಅಣ್ಣ.. ಹೋಗೋಣ ಅಂತ ತಮ್ಮ ಹೃದಯ ಸಿಂಹಾಸನದಲ್ಲಿ ಅಣ್ಣ ಎಂದು ನನಗೆ ಜಾಗ ಕೊಟ್ಟು.. ಆದರಿಸಲು ಶುರು ಮಾಡಿದರು...
********************************************************************************
ನಾನೂ.. ಕಾಮೆಂಟ್ ಹಾಕಲು ಭಯ ಪಡುತ್ತೇನೆ.. ಈ ಮಹಾನುಭಾವ ನೆಗೆಟಿವ್ ಕಾಮೆಂಟ್ ಹಾಕಿದರೆ ಸಾಕು ಎಲ್ಲಿಂದಲೋ ಫೋನ್ ಮಾಡಿ ಹೆದರಿಸುತ್ತಾರೆ ಎನ್ನುತ್ತಾ ಆತ್ಮೀಯರಾಗಿರುವ ಬದರಿ ಸರ್.. ನನ್ನನ್ನು ಲಾಫ್ಟರ್ ಚಾಂಪಿಯನ್ ಎನ್ನುವ ಪ್ರದೀಪ್.. ಕಾಂತ  ಎನ್ನುತ್ತಾ ಅಪ್ಪಿ ಕೊಳ್ಳುವ ಮಹೇಶ್.. ಹೀಗೆ ಬರೆಯುತ್ತಾ ಹೋದರೆ ಹನುಮನ ಬಾಲಕ್ಕಿಂತ ದೊಡ್ಡದಾಗುವ ದೊಡ್ಡ ಪಡೆಯೇ ಇದೆ.. ನಿಮ್ಮನ್ನು "ಶ್ರೀ" ಎನ್ನುತ್ತೇನೆ ಎನ್ನುವ ಸ್ಪೂರ್ತಿಗೆ ಹೆಸರಾದ ರೂಪ ಸತೀಶ್.. ಇವರನ್ನು ಅಕ್ಕ ಎನ್ನಲೇ, ದೇವಿ ಎನ್ನಲೇ.. ತಂಗಿ ಎನ್ನಲೇ.. ತಾಯಿ ಎನ್ನಲೇ.. ಊಹೂ ಇದಕ್ಕಿಂತ ಮಿಗಿಲು.. ಇವರನ್ನು ಶ್ರೀಮಾನ್ ಎನ್ನುತ್ತೇನೆ. ಆ ಹೆಸರು ನಾನೇ ಇಟ್ಟದ್ದು ಎನ್ನುವ ಉತ್ಸಾಹದ ಚಿಲುಮೆ ಅಜಾದ್ ಸರ್.. "ಶ್ರೀಕಾಂತ್  ಮಂಜುನಾಥ್ " ಎನ್ನುತ್ತಾ ಅಪ್ಪಿಕೊಂಡು ಪುಟ್ಟ ಕಂದನನ್ನು ಮುದ್ದು ಮಾಡುವಷ್ಟೇ ಆಪ್ತತೆಯಿಂದ ಪ್ರೀತಿಸುವ ಡಾಕ್ಟರ್ ಡಿ. ಟಿ. ಕೃಷ್ಣಮೂರ್ತಿ.. ಅಬ್ಬಾ ಒಬ್ಬರಿಗಿಂತ ಒಬ್ಬರು ಘಟಾನುಘಟಿಗಳು ತಮ್ಮ ಸ್ನೇಹದ ಸಂಕೋಲೆಯಲ್ಲಿ ನನ್ನನ್ನು ಬಂಧಿಸುವ ಇಂಥಹ ಬಳಗ ದೇವರು ಕೊಟ್ಟ ವರವೇ ಸರಿ
********************************************************************************
ಅಣ್ಣಾ ನಿಮ್ಮ ಶೈಲಿಯಲ್ಲಿ ಬರೆದಿದ್ದೇನೆ ನೋಡಿ ಎನ್ನುತ್ತಾ ಹುಟ್ಟು ಹಬ್ಬಕ್ಕೆ ಅಮೋಘ ಬರಹ ಕೊಟ್ಟ ಸತೀಶ್ ಬಿ ಕನ್ನಡಿಗ...

ಶ್ರೀ ನೀವು ಒಬ್ಬ ಉತ್ತಮಾತೀತ ಸ್ನೇಹಿತ.. ನಿಮ್ಮ ಹುಟ್ಟು ಹಬ್ಬಕ್ಕೆ ನಿಮ್ಮದೇ ಶೈಲಿಯಲ್ಲಿ ಉಡುಗೊರೆ ಕೊಡಬೇಕು ಅನ್ನಿಸಿತು.. ನನ್ನ ಅಪ್ಪನ ಹುಟ್ಟು ಹಬ್ಬದಂದೇ ನಿಮ್ಮ ಹುಟ್ಟು ಹಬ್ಬ... ಅದಕ್ಕಿಂತ ಇನ್ನೇನು ಬೇಕು ನನಗೆ.. ಎನ್ನುವ ನಿವೇದಿತ ಚಿರಂತನ್..

ಅಣ್ಣ ನಿಮ್ಮ ಹತ್ತಿರ ಮಾತಾಡುತ್ತಿದ್ದರೆ.. ನನ್ನ ಜೊತೆಯಲ್ಲಿ ಮಾತಾಡುತ್ತಿದ್ದೇನೆ ಎನ್ನಿಸುತ್ತದೆ.. ಎನ್ನುವ ಸಂಧ್ಯಾ ಪುಟ್ಟಿ..

ಅಣ್ಣಯ್ಯ ನೆಗೆಟಿವ್ ಕತೆಗೂ ಪಾಸಿಟಿವ್ ಕಾಮೆಂಟ್ ನೀಡುವ ನಿಮಗೆ ಹಾಟ್ಸ್ ಆಫ್ ಎನ್ನುತ್ತಾ ಗುಳಿ ಕೆನ್ನೆಯಲ್ಲಿ ನಗುವ ಪುಟ್ಟಿ ಸುಷ್ಮಾ

ಅಣ್ಣ ಎನ್ನಲೇ ಅಪ್ಪ ಎನ್ನಲೇ ಎಂದು ಗೊಂದಲವೇ ಕಾಣದ ಅಪ್ಪನಂತಿರೋ ಅಣ್ಣ ಎಂದು ಹೇಳುತ್ತಾಳೆ ತುಂಟ ಭಾಗ್ಯ ಪುಟ್ಟಿ..
ಸಾರೀ ಶ್ರೀ.. ನಿಮ್ಮ ತರಹ ಬರೆಯೋಕೆ ಬರೋಲ್ಲ.. ಆದರೂ ಶುಭಾಷಯ ಹೇಳುವೇ ಎನ್ನುವ ರೂಪ ಸತೀಶ್..

ಇವರ ಜೊತೆ ಮಡದಿ ಸವಿತಾ.. ಹಾಗೂ ನನ್ನ ಸ್ನೇಹಿತೆ ಕಂ ಮಗಳು ಶೀತಲ್ ಎಲ್ಲರೂ ಸೇರಿ ಹರಟಿದ್ದು ಬೆಳಗಿನ ಜಾವ ಮೂರು ಘಂಟೆಯ ತನಕ.. ಬೆಳಿಗ್ಗೆ ಎದ್ದ ಮೇಲೆ ಇನ್ನೊಮ್ಮೆ ಶುಭಾಶಯಗಳ ಜೊತೆಯಲ್ಲಿ ಕೇಕ್ ತಂದು.. ಇನ್ನೊಮ್ಮೆ ಆಚರಣೆ..

ಇತಿಹಾಸದಲ್ಲಿ ಕಂಡರಿಯದ ಈ ಶುಭಾಶಯಸಾಗರದ ಅಲೆಗಳು ಬಡಿದು ಬಡಿದು ಕಣ್ಣಲ್ಲಿ ಹಾಗೆಯೇ...

*********************************************************************************
ಇದೆಲ್ಲಾ ಸಾಧ್ಯವೇ.. ಎನ್ನುತ್ತಾ ಕಳೆದ ನಲವತ್ತೊಂದು ವರ್ಷಗಳ ಇತಿಹಾಸದ ಪುಟವನ್ನು ತಿರುವು ಹಾಕಿದರೆ... ಆಹಾ... ಯೋಚಿಸುತ್ತಾ ಕುಳಿತಿದ್ದಾಗ...

ಶ್ರೀ ಶ್ರೀ .. ಎಂದು ಯಾರೋ ಕೂಗಿದ ಹಾಗೆ ಆಯಿತು.. ಯಾರಪ್ಪ ಎಂದು ತಿರುಗಿದರೆ..

"ಅಲ್ಲಾ ಶ್ರೀ.. ನಿನಗೆ ಶುಭಾಶಯಗಳ ಮಹಾಪೂರವೇ ಹರಿಯಿತು ಅಂತ ನನ್ನನ್ನೇ ಮರೆತು ಬಿಡೋದೇ. .ಇಡಿ ರಾತ್ರಿ ಚಳಿಯಲ್ಲಿ ಒಬ್ಬನೇ ನಿಂತಿದ್ದೆ.. "

ಅಯ್ಯೋ ಗೊತ್ತಾಗಲೇ ಇಲ್ಲ ಪುಟ್ಟಾ.. ಇವರ ಪ್ರೀತಿಯ ಕಂಡು ನಾ ಮೂಕನಾಗಿ ಬಿಟ್ಟಿದ್ದೆ.. ಕಾರಣ ಇಡಿ ರಾತ್ರಿ ನನ್ನ ಪ್ರೀತಿ ಪಾತ್ರವಾದ ವಿಕ್ಟರ್ ಬೈಕನ್ನು ಗೇಟಿನ ಹೊರಗೆ ರಸ್ತೆಯಲ್ಲಿಯೇ ಮರೆತು ನಿಲ್ಲಿಸಿದ್ದೆ..

ಇಲ್ಲ ಬಿಡು ಶ್ರೀ ನನಗೆ ಅರ್ಥ ವಾಗುತ್ತೆ..  "ಅಂದು ಹೊಟ್ಟೆಗೆ  ಇಲ್ಲದೆ ತಾಯಿಯ ಬರುವನ್ನೇ ಕಾಯುತ್ತಾ ಕುಳಿತಿದ್ದಾ ಆ ಕಂದಮ್ಮ ಇಂದು ಮನಸ್ಸಿಗೆ ಹಸಿವೆ ಇಲ್ಲದಷ್ಟು ಪ್ರೀತಿ ವಿಶ್ವಾಸಗಳನ್ನು ಉಂಡು ಸಂತೃಪ್ತಿ ನಗೆಯ ಚೆಲ್ಲುವ ವ್ಯಕ್ತಿಯಾಗಿದ್ದಾನೆ ಎನ್ನುವ ಮಾತು ನಿಜವಾಗಿದ್ದರೆ ಅದಕ್ಕೆಲ್ಲ ಕಾರಣ ನಿನ್ನ ಸ್ನೇಹದ ಬಳಗ.. ಅಲ್ಲವೇ...ನೂರಕ್ಕೂ ಹೆಚ್ಚು ಶುಭಾಶಯ ಸಂದೇಶಗಳು.. ಮೆಚ್ಚುಗೆಗಳು, ಚಿತ್ರಗಳು.. ಕರೆಗಳು ಓಹ್.. ಇದೆಲ್ಲ ಒಂದು ಚರಿತ್ರೆಯೇ ಅಲ್ಲವೇ " ಎಂದಾಗ

ಅದರ ಜೊತೆಯಲ್ಲಿ ನಿಂತಿದ್ದ ನನ್ನ ರಿಟ್ಜ್  ಕಾರು.. ನಕ್ಕು ಕಣ್ಣು ಹೊಡೆದು ಸಮ್ಮತಿಸಿತು .

ಇದಕ್ಕೆಲ್ಲಾ ಕಾರಣೀಕರ್ತರು ಯಾರು ಗೊತ್ತೇ..

ನೀವೇ.. ಅಂದರೆ ಈ ಲೇಖನವನ್ನು ಓದುತ್ತಿರುವ ನನ್ನ ಕುಟುಂಬದ ಸದಸ್ಯರೇ ಆಗಿರುವ ನೀವೇ..

ಅದಕ್ಕೆ ಕಣ್ಣೊರೆಸಿಕೊಂಡು ಹೇಳುವೆ..

ಎಂದರೋ ಮಹಾನುಭಾವುಲು ಅಂದರೀಕಿ ವಂದನಮು.. !!!

 ಅದಕ್ಕೆ ಹೇಳಿದ್ದು ಮರೋ ಚರಿತ್ರ ಅಲ್ಲವೇ ಅಲ್ಲಾ ಇದು ಮರೆಯಲಾರದ ಮರೆಯಲಾಗದ ಚರಿತ್ರೆ... !!!