Sunday, October 16, 2016

ಕಾಡುವ - ೩

ಮೊದಲನೇ ಭಾಗ - ಕಾಡುವ - ೧
ಎರಡನೇ ಭಾಗ - ಕಾಡುವ - ೨

(ಮುಂದುವರಿದ ಭಾಗ)

ಲಾರಿ ಚಾಲಕ ನಿಧಾನವಾಗಿ ತಿರುಗಿದಾಗ.. ಅಲ್ಲಿದ್ದ ಇಬ್ಬರಿಗೂ ಮುಖದಲ್ಲಿ ಬೆವರಿನ ಜಲಪಾತ ಶುರುವಾಯಿತು.. ಕಾರಣ ಚಾಲಕನ ಒಂದು ಬದಿಯ ಮುಖವೇ ಇರಲಿಲ್ಲ.. ಬರಿ ವಸಡು, ಹಲ್ಲು ಕಾಣುತ್ತಿದ್ದವು.. ಕಣ್ಣುಗಳ ಗುಡ್ಡೆ ಮಾತ್ರ ಇದ್ದವು..

"ಅಯ್ಯೋ, ಯಪ್ಪಾ, ನಾ  ಸತ್ತೇ.. " ಇಬ್ಬರೂ ಕೂಗಲು ಶುರುಮಾಡಿದರು.. ಲಾರಿ ಓಲಾಡತೊಡಗಿತು..

ಇವರ ಭುಜದ ಮೇಲೆ ದೊಪ್ಪೆಂದು ಕೈ ಬಿದ್ದಿತು.. ಮೊದಲೇ ಹೆದರಿ ಸತ್ತಿದ್ದ ಇಬ್ಬರು, ತಿರುಗಿ ನೋಡಿದರು..

ದೊಡ್ಡದಾದ ಆಕೃತಿ ಹಲ್ಲು ಬಿಡುತ್ತಾ

"ಅಣ್ಣಾ ಅಣ್ಣಾ"

ಇಬ್ಬರಿಗೂ ಹೃದಯವೇ ಬಾಯಿಗೆ ಬಂದಂತಾಗಿತ್ತು.. ಜೊತೆಯಲ್ಲಿ ಲಾರಿ ಓಲಾಡತೊಡಗಿತ್ತು.. ಲಾರಿಯ ಚಾಲಕನ ವಿಕಾರ ರೂಪ, ನಗು, ಜೊತೆಯಲ್ಲಿ ಕಳೆದ ಕೆಲ ಘಂಟೆಗಳಿಂದ ಕೇಳಿಸುತ್ತಿರುವ "ಅಣ್ಣಾ ಅಣ್ಣಾ" ಧ್ವನಿಯಿಂದಾಗಿ ಹಣೆಯಲ್ಲಿನ ಬೆವರಿನ ಆಣೆಕಟ್ಟು ಒಡೆದು ಬಹಳ ಹೊತ್ತೇ ಆಗಿತ್ತು.

ಲಾರಿ ನಿಯಂತ್ರಣ ಕಳೆದುಕೊಂಡಿತ್ತು. ಹೊರಗೆ ಧುಮುಕಲು ಆ ಭಯದಲ್ಲಿಯೂ ಇಬ್ಬರೂ ನಿರ್ಧಾರ ಮಾಡಿದರು. ಹೊರಗೆ ಗವ್-ಗತ್ತಲೆ.. ಕಪ್ಪು ಅಂದರೆ ಕರೆಂಟ್ ಹೊಡೆದ ಕಾಗೆ ಕಪ್ಪು. ಅಕ್ಷರಶಃ ಏನೂ ಕಾಣುತ್ತಿರಲಿಲ್ಲ. ಜೊತೆಯಲ್ಲಿ ಟಪ್ ಟಪ್ ಮಳೆ ಹನಿಗಳು ಲಾರಿಯ ಬಾನೆಟ್ ಮೇಲೆ ರುದ್ರ ತಾಂಡವ ಮಾಡುತ್ತಿದ್ದವು.

ಇನ್ನೇನೂ ಇಬ್ಬರೂ ನಿಯಂತ್ರಣ ಕಳೆದುಕೊಂಡಿದ್ದ ಲಾರಿಯಿಂದ ಧುಮುಕಬೇಕು..  ಯಾರೋ ತಮ್ಮ ಕುತ್ತಿಗೆಯನ್ನು ಹಿಚುಕಿದ ಅನುಭವ, ಉಸಿರಾಡಲು ಆಗುತ್ತಿಲ್ಲ.. ಕಣ್ಣಾಲಿಗಳು ಮೇಲಕ್ಕೆ ಸಿಕ್ಕಿಕೊಳ್ಳುತ್ತಿದ್ದವು.

"ಅಯ್ಯೋ ಅಯ್ಯೋ" ಕೂಗಬೇಕಿದ್ದ ಪದಗಳು ಗಂಟಲಿನಿಂದ ಮೇಲಕ್ಕೆ ಏಳುತ್ತಲೇ ಇಲ್ಲ, ಪಂಚರ್ ಆದ ಚಕ್ರದ ತರಹ, ಕೆಸರಲ್ಲಿ ಹೂತು ಹೋಗುವ ಚಕ್ರದ ಹಾಗೆ ಪುಸ್ ಅಂತ ಒಳಗೆ ಹೋಗಲು ಶುರುಮಾಡಿತು. ಹೇಗೋ ಮನದಲ್ಲಿ ದೇವರ ನಾಮ ಸ್ಮರಣೆ ಮಾಡಿ, ಮೊದಲೇ ಅಲುಗಾಡಿ ಅಲುಗಾಡಿ ಸಡಿಲವಾಗಿ ನಡುಗುತಿದ್ದ ಲಾರಿಯ ಗೇರ್ ಲಿವರನ್ನು ಜೋರಾಗಿ ಹಿಡಿದು ಎಳೆದ ಒಬ್ಬ, ಇನ್ನೊಬ್ಬ  ಕಷ್ಟಪಡುತ್ತಲೇ ಆ ಕತ್ತಲೆಯಲ್ಲಿ ಏನೂ ಸಿಗುತ್ತೆ ಎಂದು ತಡಕಾಡಿದ, ಲಾರಿಯ ಕನ್ನಡಿ ಸಿಕ್ಕಿತು, ಅದನ್ನೇ ಬಲವಾಗಿ ಕೀಳಲು ಶುರು ಮಾಡಿದ.

ಅವರ ಕುತ್ತಿಗೆಯ ಮೇಲಿನ ಹಿಡಿತ ಬಲವಾಗುತ್ತಲೇ ಹೋಯಿತು.. ಕಣ್ಣಿನ ಗುಡ್ಡೆಗಳಿಗೆ ಮುಂದೆ ಏನೂ ಕಾಣುತ್ತಿರಲಿಲ್ಲ, ಉಸಿರು ತನ್ನ ಉಪಸ್ಥಿತಿ ಮುಗಿಯುತ್ತಿದೆ ಎನ್ನುವ ಸುಳಿವನ್ನು ಕೊಡಹತ್ತಿತು.

ಹಠಾತನ್ನೇ ಲಾರಿ ಚಾಲಕ ಗಹ ಗಹಸಿ ನಗುತ್ತಾ ಬ್ರೇಕ್ ಹಾಕಿದ.. "ಎಲ್ರುಲಾ ತಪ್ಪಿಸ್ಕೊತೀರಾ.. ಸಿಕ್ಕಿದ್ರಿ ಇವತ್ತು.. ಹಬ್ಬ ನಮಗೆ"

ಲಾರಿ ಜರ್ ಅಂತ ನಿಲ್ಲಲು ಆಗುತ್ತಿರಲಿಲ್ಲ,   ರಸ್ತೆಯ ಮೇಲೆ ಹರಿಯುತ್ತಿದ್ದ ನೀರು, ಎಲೆಗಳು ಕೊಳೆತು ಜಾರುತ್ತಿದ್ದ ರಸ್ತೆ, ಸವಕಲಾಗಿದ್ದ ಲಾರಿಯ ಟೈಯರ್ ಗಳು, ಬ್ರೇಕ್ ಹಾಕಿದರು ಲಾರಿಯನ್ನು ನಿಲ್ಲಿಸಲು ಹರಸಾಹಸ ಪಡುತ್ತಿದ್ದವು, ಜೊತೆಯಲ್ಲಿ ಇವರಿಬ್ಬರ ಕೊಸರಾಟಕ್ಕೆ, ಅವುಗಳ ಹಿಡಿತಕ್ಕೆ ಲಾರಿ ನಿಧಾನಕ್ಕೆ ರಸ್ತೆಯಂಚಿಗೆ ಜಾರುತ್ತಿತ್ತು.

ಒಂದು ಕಡೆ, ಕತ್ತರಿಸಿ ಕತ್ತರಿಸಿ ಸವೆದ ಗರಗಸದ ಹಲ್ಲಿನಂತೆ ಇರುವ ಓರೇ ಕೋರೆಯಾಗಿ ಇರುವ ಚೂಪು ಚೂಪು ಬಂಡೆಗಳು, ಇನ್ನೊಂದು ಕಡೆ ತಳವೇ ಕಾಣದಂತಹ ದಟ್ಟ ಕಾಡಿನಿಂದ ತುಂಬಿದ್ದ ಕಣಿವೆ ಪ್ರದೇಶ, ಮಳೆಯಿಂದಾಗಿ ಜುಳು ಜುಳು ಹರಿಯುತಿದ್ದ ಝರಿಗಳು, ಇದಕ್ಕೆ ತಕ್ಕ ಹಾಗೆ ಸಾತ್ ನೀಡುತ್ತಿರುವ ಕಾರ್ಗತ್ತಲೆ, ಮಳೆಯ ಹನಿಗಳು, ಅಮಾವಾಸ್ಯೆಯ ಕತ್ತಲೆ ಇಡೀ ಪ್ರದೇಶವನ್ನು ಭಯಾನಕ ಪ್ರದೇಶವನ್ನಾಗಿ ಮಾಡಿದ್ದವು.

ಜೋರಾಗಿ ಎಳೆದೇಬಿಟ್ಟ.. ಲಾರಿಯ ಲಿವರ್ ಕೈಗೆ ಬಂತು, ಆ ಕತ್ತಲಿನಲ್ಲಿಯೇ, ತನ್ನ ಕುತ್ತಿಗೆ ಹಿಸುಕುತಿದ್ದ ಹಿಂದೆ ಇದ್ದ ಆಕೃತಿಗೆ ಬೀಸಿದ.  ಅದು ತನ್ನ ಬೆನ್ನಿಗೆ ಬಡಿಯಿತು, ಕೂಗಲು ಧ್ವನಿಯಿಲ್ಲ, ಆದರೆ ನೋವು, ಮತ್ತಷ್ಟು ಅಲುಗಾಡ ತೊಡಗಿದ. ಲಾರಿ ಇನ್ನಷ್ಟು ಜಾರಿ ರಸ್ತೆಯಂಚಿಗೆ ಬಂತು.

ಅತ್ತ ಕಡೆ ಲಾರಿಯ ಕನ್ನಡಿ ಕೈಗೆ ಸಿಕ್ಕವನು ಬಲವಾಗಿ ಬೀಸಿದ.. ಒಂದು ವೃತ್ತಾಕಾರವಾಗಿ ತಿರುಗಿದ ಅವನ ಕೈ ಸೀದಾ ಮುಂದಿದ್ದ  ಲಾರಿಯ ಗಾಜಿಗೆ ಬಡಿದು ಠಳ್ ಎಂದು ಸದ್ದು ಮಾಡತ್ತಾ, ಗಾಜಿನ ಚೂರು ಅಲ್ಲೆಲ್ಲ ಸಿಡಿಯಿತು. ಇವರಿಬ್ಬರಿಗೂ ಆ ಗಾಜಿನ ತುಣುಕುಗಳು ಬಡಿದು ಇನ್ನಷ್ಟು ನೋವಾಯಿತು.

ಕೂಗೋಕೆ ಹೋದರೆ, ಅವರ ಸೌಂಡ್ ಕಾರ್ಡ್ ಮ್ಯೂಟ್ ಆಗಿತ್ತು... ಬರಿ ಬಾಯಿ ಮಾತ್ರ ಜೋರಾಗಿ ತೆಗೆಯುತ್ತಿತ್ತು ಅಷ್ಟೇ, ಧ್ವನಿ ಮಾತ್ರ ಇಲ್ಲ.

ಚಳಿ, ತಮಗೆ ಬಿದ್ದ ಹೊಡೆತ, ಜೊತೆಯಲ್ಲಿ ಗಾಜಿನ ಚೂರುಗಳು ಮೊದಲೇ ಬೆವರಿನಿಂದ, ಮತ್ತು ಮಳೆಯಿಂದ ನೆಂದು ಮುದ್ದೆಯಾಗಿದ್ದ ದೇಹಕ್ಕೆ ಆ ಗಾಯಗಳು ಇನ್ನಷ್ಟು ನೋವನ್ನು ತುಂಬಿದವು.

ಲಾರಿಯ ಮುಂದಿನ ಎರಡು ಚಕ್ರ ಧಸಕ್ ಅಂತ ಒಂದು ಹಳ್ಳದಲ್ಲಿ ಇಳಿದ ಅನುಭವ.. ಮಾತಾಡಲು ಆಗದೆ ಇದ್ದರೂ ಇಬ್ಬರಿಗೂ ಅರಿವಾಯಿತು, ನಿಯಂತ್ರಣ ಕಳೆದುಕೊಳ್ಳುತಿದ್ದ ಲಾರಿ, ಮೆಲ್ಲಕ್ಕೆ ಕಂದಕದತ್ತ ಜಾರುತ್ತಿದ್ದೆ ಎಂದು.

ಇವರಿಬ್ಬರ ಕುತ್ತಿಗೆಯ ಮೇಲಿನ ಹಿಡಿತ ಬಲವಾಗುತ್ತಲೇ ಇತ್ತು.. ಇದ್ದಬದ್ದ ಧೈರ್ಯ, ಶಕ್ತಿ ತುಂಬಿಕೊಂಡು ಬಲವಾಗಿ ಒಬ್ಬ ಹಿಂದಕ್ಕೆ ತಿರುಗಿ ಕಾಲಿನಿಂದ ಒದ್ದಾ.. ಕಾಲಿಗೆ ಏನೂ ಬಲವಾದ ವಸ್ತು ಸಿಕ್ಕ ಅನುಭವ, ಹಾಗೆ ಅದು ತುಸು ದೂರ ಹೋಯಿತು ಎನ್ನುವುದು ಅವನಿಗೆ ಅರಿವಾಯಿತು.

ಲಾರಿ ಮತ್ತಷ್ಟು ಕೆಳಕ್ಕೆ ಜಾರಿತು..

ಇನ್ನೊಬ್ಬ, ಕೈಗೆ ಸಿಕ್ಕಿದ ಕನ್ನಡಿಯನ್ನು ಮತ್ತೆ ಬೀಸಿದ, ಅದು ಟಪ್ ಅಂತ ಸದ್ದು ಮಾಡುತ್ತಾ, ಯಾವುದೋ ಆಕೃತಿಗೆ ಬಡಿದ ಶಬ್ದವಾಯಿತು.

ಇಬ್ಬರಿಗೂ ನಿಧಾನವಾಗಿ ತಮ್ಮ ಕುತ್ತಿಗೆಯ ಮೇಲಿನ ಹಿಡಿತ ಕಡಿಮೆ ಆಗುತ್ತಿರುವ ಅನುಭವ.. ಜೊತೆಯಲ್ಲಿಯೇ ಸಂಶಯವೂ ಶುರುವಾಯಿತು, ಗಾಡಿಯಲ್ಲಿ ಇದ್ದದ್ದು ನಾನು, ನನ್ನ ಗೆಳೆಯ.. ಜೊತೆಯಲ್ಲಿ ಲಾರಿ ಚಾಲಕ ಮತ್ತು ಇನ್ನೊಬ್ಬ ವ್ಯಕ್ತಿ, ಅಂದರೆ ನಾಲ್ಕೇ ಮಂದಿ.

ಆದರೆ ನಾನು ಒಬ್ಬನ್ನು ಒದ್ದೆ, ಇನ್ನೊಬ್ಬ ದೂರ ಜಾರಿದ, ಆದರೂ ನಮ್ಮ ಕುತ್ತಿಗೆಯ ಮೇಲೆ ಕೈಗಳ ಹಿಡಿತ ಇದ್ದೆ ಇದೆ.. ಮೈ ಜುಮ್ ಎಂದಿತು, ಅಂದರೆ ಅಂದರೆ.. ಅಯ್ಯೋ ದೇವರೇ..

ಲಾರಿ ಸುಯ್ ಅಂತ ಕಣಿವೆಗೆ ಇಳಿಯುತ್ತಿದ್ದೇನೆ ಎನ್ನುವ ಸುಳಿವು ಕೊಟ್ಟಿತು.. ಯಾವುದೋ ಮರಕ್ಕೆ ಡಿಕ್ಕಿ ಹೊಡೆದು, ಲಾರಿಯ ಮುಂದಿನ ಎರಡು ದೀಪಗಳು ಠಳ್ ಎಂದು ಒಡೆದು, ಮೊದಲೇ ಕತ್ತಲಾಗಿದ್ದ ಪ್ರದೇಶ.. ಚಂದಿರನಿಲ್ಲದ ಬಾನಿನಂತಾಯಿತು.

ರೆಂಬೆ ಕೊಬೆಗಳು ಕಣಿವೆಗೆ ಇಳಿಯುತ್ತಿದ್ದ ಲಾರಿಯೊಳಗೆಲ್ಲಾ  ನುಗ್ಗಿ ಬಂದು, ಇವರಿಬ್ಬರ ಮೈಕೈಗೆ ತರಚಿ ಇನ್ನಷ್ಟು ಚರ್ಮ ಕಿತ್ತು ಬರುವಂತೆ ಮಾಡಿತು.

"ಅಮ್ಮಾ ಅಮ್ಮಾ ನೋವು ನೋವು.. ಅಯ್ಯೋ ಅಯ್ಯೋ.. ಕಾಪಾಡಿ ಕಾಪಾಡಿ.. ಯಾರಿದ್ದೀರಾ. ದೇವರೇ ಕಾಪಾಡಪ್ಪ.. " ಸುಮಾರು ಹೊತ್ತು ಸದ್ದೇ ಇಲ್ಲದ ಅವರ ಧ್ವನಿ ಪೆಟ್ಟಿಗೆಗೆ ಜೀವ ಬಂದಿತ್ತು.. ಜೀವ ಭಯದಿಂದ, ಚಳಿಯಿಂದ ನಡುಗುತಿದ್ದರೂ. ಅವರು ನಂಬಿದ ಇಷ್ಟದೈವದ ಮೇಲಿನ ಅಚಲ ನಂಬಿಕೆ ಅವರಲ್ಲಿ ಉತ್ಸಾಹ ತುಂಬಲು ಪ್ರಯತ್ನಿಸುತ್ತಿತ್ತು.

ಲಾರಿ ನಿಧಾನವಾಗಿ ಕೆಳಮುಖವಾಗಿ ಆ ಕಣಿವೆಯಲ್ಲಿ ರೆಂಬೆಕೊಂಬೆಗಳ ಮಧ್ಯೆ.. ಬೆನ್ನಟ್ಟಿ ಬರುವ ಹಸಿದ ಹೆಬ್ಬುಲಿಯಿಂದ ತಪ್ಪಿಸಿಕೊಳ್ಳಲು ಓಡುವ ಜಿಂಕೆಯಂತೆ ಜಾಗ ಮಾಡಿಕೊಂಡು ನುಗ್ಗುವಂತೆ.. ಆ ರೆಂಬೆ ಕೊಂಬೆಗಳ ಮಧ್ಯೆ ಜಾರುತ್ತಲೇ ಹೋಯಿತು.

ಇಬ್ಬರೂ ಜೀವವನ್ನು ಬಿಗಿಮಾಡಿಕೊಂಡು, ದೇವರ ಅಭಯವಿದ್ದರೇ  ಬದುಕುತ್ತೇವೆ ಇಲ್ಲದೆ ಹೋದರೆ ಅವನಿಚ್ಛೆ ಹೇಗೋ ಹಾಗೆ ಎಂದು ತೀರ್ಮಾನಿಸಿ, ಆ ಕತ್ತಲಿನಲ್ಲಿಯೂ ಎಲ್ಲಾದರೂ ಬೆಳಕು ಕಾಣಬಹುದೇ ಎಂದು ಆಶಿಸುತ್ತಾ ಮೊಗವನ್ನು, ಶರೀರವನ್ನು ರೆಂಬೆಕೊಂಬೆಗಳ ಆಕ್ರಮಣದಿಂದ ತಪ್ಪಿಸಿಕೊಳ್ಳುತ್ತಾ ಬಗ್ಗಿ ಕೂತರು.

"ಅಣ್ಣಾ ಅಣ್ಣಾ ಅಣ್ಣಾ ಅಣ್ಣಾ" ಧ್ವನಿ....

ಬೆನ್ನಿನ ಹುರಿಯಲ್ಲಿ ಮತ್ತೆ ನಡುಕ.. ಚಳಿ, ಮಳೆ, ಹೆದರಿಕೆ, ತರಚಿದ ಗಾಯಗಳು ಕೊಡುತ್ತಿದ್ದ ನೋವು.. ಇದೆಲ್ಲದರ ಮೇಲೆ ಮತ್ತೆ ಆ ಧ್ವನಿ..

ಬೆನ್ನಿನ ಮೇಲೆ ಇಬ್ಬರಿಗೂ ಬಲವಾಗಿ ಎರಡು ಕೈಗಳಿಂದ ಹೊಡೆತ  ಬಿತ್ತು.. ಆ ಚಳಿಗೆ ಆ ಬಲವಾದ ಏಟು ಬಾರಿ ನೋವನ್ನೇ ಮಾಡಿತು.. "ಅಮ್ಮಾ ಸತ್ತೇ ಅಮ್ಮಾ ಸತ್ತೇ" ಇಬ್ಬರೂ ಕೂಗಿದರು ಜೋರಾಗಿ.. ಅವರ ಮುಲುಕಾಟಕ್ಕೆ, ಕಿರುಚಾಟಕ್ಕೆ ಲಾರಿ ಇಳಿಯುವ ವೇಗ ಇನ್ನಷ್ಟು ಹೆಚ್ಚಾಯಿತು..

ಮತ್ತೆ ಎರಡು ಹೊಡೆತ.. ಇಬ್ಬರೂ ಮೂರ್ಛೆ ತಪ್ಪಿ ಬಿದ್ದರು.. ಅವರ ಅಲುಗಾಟಕ್ಕೆ ಲಾರಿಯ ವೇಗ ಇನ್ನಷ್ಟು ಹೆಚ್ಚಾಯಿತು.. ಜೊತೆಯಲ್ಲಿ ಲಾರಿಯ ಮುಂದಿನ ಗಾಜು ಒಡೆದು ಹೋಗಿದ್ದರಿಂದ, ಇಬ್ಬರ ಶರೀರ ಲಾರಿಯಿಂದ ಹೊರಗೆ ಬಿತ್ತು.

ಲಾರಿ ಜಾಗ ಮಾಡಿಕೊಳ್ಳುತ್ತಲೇ ಹೋಯಿತು, ಜೊತೆಯಲ್ಲಿ ಇವರಿಬ್ಬರ ದೇಹಗಳು ಕೆಳಗೆ ಬೀಳಲು ಆರಂಭಿಸಿತು.

ಮಣ್ಣಿನ ನೆಲದ ಮೇಲೆ ಬೀಳುತ್ತಲೇ ಇವರಿಬ್ಬರ ದೇಹಗಳು ಲಟ ಪಟ ಸಡ್ಡು ಮಾಡಿದವು.. ಯಾವ ಯಾವ ಮೂಳೆಗಳು ಮುರಿದವೋ ಅಥವಾ ಅವರ ದೇಹ ಮೇಲಿನಿಂದ ಬೀಳುವಾಗ ಯಾವ ಯಾವ ಮರದ ಕೊಂಬೆಗಳು ಸಿಕ್ಕಿಕೊಂಡಿದ್ದವೋ ಅರಿವಿಲ್ಲ..
*******

ಮೈ ಚುರ್ ಎನ್ನಲು ಆರಂಭಿಸಿತು.. ತಡೆಯಲಾಗದಷ್ಟೂ ಉರಿ... ಅಯ್ಯೋ ಏನಾಗುತ್ತಿದೆ ಎಂದು ನಿಧಾನವಾಗಿ ಕಣ್ಣುಗಳು ತೆರೆಯಲು ಪ್ರಯತ್ನಿಸಿತು.. ಆಗುತ್ತಿಲ್ಲ.. ಕಣ್ಣಿನ ಮೇಲೆ ಏನೋ ದಪ್ಪನೆಯ ವಸ್ತು ಕೂತ ಅನುಭವ.. ಕಷ್ಟ ಪಟ್ಟು ಬೆರಳುಗಳಿಂದ ಕಣ್ಣಿನ ಮೇಲಿನ ವಸ್ತುವನ್ನು ತಳ್ಳಿದರು.. ಕಣ್ಣಿನ ಮೇಲೆ ಎಲೆಗಳು, ಮರಳು, ಚಿಕ್ಕ ಪುಟ್ಟ ಕಲ್ಲುಗಳು ಎಲ್ಲವೂ ದಸರಾ ಗೊಂಬೆಗಳಂತೆ ಕೂತಿದ್ದವು.. ಕಥೆ ಹೇಳುತ್ತಿದ್ದವ ಶಕ್ತಿ ಮೈಗೂಡಿಸಿಕೊಂಡು ಎದ್ದೇಳಲು ಪ್ರಯತ್ನಿಸಿದ. ಆಗಲಿಲ್ಲ. ದೇಹದ ಶಕ್ತಿ ಉಡುಗಿ ಹೋಗಿತ್ತು.

ಹಾಗೆ ಪಕ್ಕದಲ್ಲಿ  ಕಣ್ಣು ಹಾಯಿಸಿದ ಕಥೆ ಶುರುಮಾಡಿದವ.. ಅನತಿ ದೂರದಲ್ಲಿಯೇ ಕಥೆ ಹೇಳಿ ಎಂದು ಕಾಡಿದವನು ಅಂಗಾತ ಬಿದ್ದಿದ್ದ.. ಕಷ್ಟ ಪಟ್ಟು ತೆವಳುತ್ತಾ ಅವನ ಬಳಿ ಹೋಗಿ ಮೂಗಿಗೆ ಕೈ ಹಿಡಿದು ನೋಡಿದ .. ಬದುಕಿತ್ತು ಆ ಪ್ರಾಣಿ..ಉಫ್ ಎಂದಿತು ಅವನ ಮನಸ್ಸು.

ಹಾಗೆ ತೆವಳುತ್ತಲೇ, ಅಲ್ಲೇ ಮಳೆಯಿಂದ ಹೊಂಡವಾಗಿದ್ದ ನೀರನ್ನು ಕಷ್ಟ ಪಟ್ಟು ತನ್ನ ಒಂದು ಕೈಯಿಂದ ತುಂಬಿಕೊಂಡು, ಆತನ ಮುಖದ ಮೇಲೆ ಚಿಮುಕಿಸಿದ.. "ಆ ಆ ಆ.." ಸದ್ದಾಯಿತು ಆತನ ದೇಹದಿಂದ..  ಕಣ್ಣು ಅರ್ಧ ಮಾತ್ರ ತೆಗೆಯಲು ಆಯಿತು. ಕಾರಣ ಆವ ಬೀಳುವಾಗ ಚಿಕ್ಕ ಕೊಂಬೆಯೊಂದು ಅವನ ಕಣ್ಣಿಗೆ ಬಡಿದಿತ್ತು.. ಎಚ್ಚರವಾದ ಮೇಲೆ ಅಸಾಧ್ಯ ನೋವು..ಬಿಸಿಲಿಗೆ ಮೈಕೈ ಮೇಲಿನ ಗಾಯಗಳು ಬೊಬ್ಬೆ ಹೊಡೆಯುವಂತೆ ಮಾಡಿತ್ತು.

ತುಸು ಅರ್ಧ ಎದ್ದು ಸುತ್ತಲೂ ಇಬ್ಬರೂ ಕಣ್ಣು ಹಾಯಿಸಿದರು.. ಪಕ್ಕದಲ್ಲಿಯೇ ಹರಿಯುತ್ತಿದ್ದ ಪುಟ್ಟ ನದಿ.. ಕಲ್ಲು ಬಂಡೆಗಳು, ಅದರ ದಡದಲ್ಲಿ ಬಿದಿರಿನ ಮೆಳೆಗಳು.. ದೂರದಲ್ಲಿ ಒಂದು ದಿನದಿಂದ ಕಾಣದೆ ಇದ್ದ ನೀಲಿ ಆಗಸ.. ಜಲಪ್ರಳಯದಿಂದ ಮೈಕೈ ತೊಳೆದುಕೊಂಡು ಶುಭ್ರವಾದ ವಸುಂಧರೆ ಸುಂದರವಾಗಿ ಕಾಣುತ್ತಿತ್ತು. ತಲೆ ಎತ್ತಿ ನೋಡಲು ಪ್ರಯತ್ನಿಸಿದರು.. ನೆಂದಿದ್ದ ತಲೆ, ಜೊತೆಯಲ್ಲಿ ಸಿಕ್ಕ ಸಿಕ್ಕ ಕಡೆ ಬಿದ್ದ ಹೊಡೆತ.. ರೆಂಬೆಕೊಂಬೆಗಳು ಮಾಡಿದ್ದ ಗಾಯಗಳು ಇವುಗಳಿಂದ ತಲೆ ಅಸಾಧ್ಯ ನೋಯುತ್ತಿತ್ತು. ತಲೆಯ ಮೇಲೆ ಯಾರೋ ನಗಾರಿ ಬಾರಿಸಿದ ಅನುಭವ.. ತಲೆಯ ಸುತ್ತಲೂ ಟಪ್ ಟಪ್ ಎಂದು ಹೊಡೆದುಕೊಳ್ಳುತ್ತಿದ್ದ ನರಗಳು.. ಜೊತೆಯಲ್ಲಿ ಮೈ ಮೇಲಿದ್ದ ಗಾಯಗಳು.. ಅವರನ್ನು ಅರೆ ಜೀವದ ದೇಹದ ಮಾಲೀಕರನ್ನಾಗಿ ಮಾಡಿತ್ತು.

ಸ್ವಲ್ಪ ಶಕ್ತಿ ಮೈಯಲ್ಲಿ ತುಂಬಿಸಿಕೊಂಡು ಅನತಿ ದೂರದಲ್ಲಿಯೇ ಹರಿಯುತ್ತಿದ್ದ ನದಿಯ ಬಳಿಗೆ ತೆವಳಿಕೊಂಡೇ ಹೋದರು ಇಬ್ಬರು. ಬಾಯಲ್ಲಿ ಒಂದು ಹನಿ ನೀರು ಇರಲಿಲ್ಲ.. ಇಬ್ಬರೂ ಪ್ರಾಣಿಗಳ ತರಹ ತೆವಳಿಕೊಂಡು ಹೋಗಿ,  ಪ್ರಾಣಿಗಳು ನೀರನ್ನು ಕುಡಿಯುವ ತರಹ.. ನದಿಗೆ ತಮ್ಮ ಬಾಯಿಯನ್ನು ಒಡ್ಡಿ ಹಿತವಾಗುವಷ್ಟು ನೀರನ್ನು ಕುಡಿದರು..
ಕೃಪೆ - ಗೂಗಲೇಶ್ವರ 
ಸ್ವಲ್ಪ ಜೀವ ಬಂದಂತೆ ಅನ್ನಿಸಿತು.. ಹಾಗೆಯೇ ಮತ್ತೆ ನದಿ ದಂಡೆಯಲ್ಲಿ ಬಿದ್ದುಕೊಂಡರು..
*****

"ಅಣ್ಣಾ ಅಣ್ಣಾ.. ಯಾರೋ ಇಬ್ಬರು ಅಲ್ಲಿ ಬಿದ್ದಿದ್ದಾರೆ ನೋಡಣ್ಣೋ..

ಬೆಳಗಿನ ಬಹಿರ್ದೆಸೆ ಭಾದೆ ತೀರಿಸಿಕೊಳ್ಳಲು ಬಂದ ಹಳ್ಳಿಗರಲ್ಲಿ ಒಬ್ಬ ಅಲ್ಲಿ ಬಿದ್ದಿದ್ದ ಇಬ್ಬರ ದೇಹವನ್ನು ನೋಡಿ ಕೂಗಿಕೊಂಡ.

ಮೂರು ನಾಲ್ಕು ಜನ ಬಂದು ನೋಡಿದರು.. ಒಮ್ಮೆಲೇ ಅವರಿಗೆ ಅನುಮಾನ.. ಸತ್ತು ಬಿದ್ದಿದ್ದಾರೋ ಏನೋ.... ಧೈರ್ಯ ಮಾಡಿಕೊಂಡು ಒಬ್ಬ ಹತ್ತಿರ ಹೋಗಿ ಅವರಿಬ್ಬರ ಎದೆಯ ಮೇಲೆ ಕಿವಿಯಿಟ್ಟು ಕೇಳಿದ..

"ಲಬ್ ಡಬ್ ಲಬ್ ಡಬ್"

ಖಚಿತವಾಯಿತು.. ಬದುಕಿದ್ದಾರೆ ಎಂದು..

*****

"ಕೌಸಲ್ಯಾ ಸುಪ್ರಜಾ ರಾಮ ಪೂರ್ವಾಸಂಧ್ಯಾ ಪ್ರವರ್ತತೆ, ಉತ್ತಿಷ್ಠ ನರ ಶಾರ್ದೂಲ ಕರ್ತವ್ಯಂ ದೈವಮಾಹ್ನಿಕಂ"

ಘಂಟೆಯ ನಾದ, ಕೋಳಿಯ ಕೂಗು, ನಾಯಿಗಳ ಬೊಗಳಿವಿಕೆ.. ಬೆರಣಿ, ಸೌದೆಯ ಹೊಗೆಯ ಘಾಟು..

ಕಥೆ ಹೇಳುತ್ತಿದ್ದವನ ಕಣ್ಣುಗಳು ಕರ್ ಎಂದು ಸದ್ದು ಮಾಡದೆ ತೆಗೆದುಕೊಂಡವು.. ದೇಹ ಭಾರವಾಗಿದ್ದರೂ ತುಸು ಉತ್ಸಾಹ ಮತ್ತು ಶಕ್ತಿ ತುಂಬಿದ್ದ ಅನುಭವ..

ಕಾಲೆಳೆದುಕೊಂಡು ನಿಧಾನವಾಗಿ ತಾವು ಮಲಗಿದ್ದ ಮನೆಯಿಂದ ಹೊರಗೆ ಬಂದು ಸುತ್ತಲೂ ನೋಡಿದಾಗ ಕಂಡ ದೃಶ್ಯ ಮನಕ್ಕೆ ತುಸು ಧೈರ್ಯ ಹಾಗೂ ಸಮಾಧಾನ ತಂದಿತು. 

ಮನೆಯ ಅಂಗಳದಲ್ಲಿನ ಸಗಣಿ ನೆಲದ ವಾಸನೆಯಿಂದ ನಾವು ಯಾವುದೋ ಹಳ್ಳಿಯಲ್ಲಿದ್ದೇವೆ ಎಂದು ಅರಿವಾಯಿತು. ಅಂಗಳದಲ್ಲಿ ಬಣ್ಣ ಬಣ್ಣದ ರಂಗೋಲಿಗಳು ನಗುತ್ತಿದ್ದವು. 

ಮತ್ತೆ ಮನೆಯೊಳಗೇ ಹೋಗಿ ಕಥೆ ಹೇಳಿ ಎಂದು ಕಾಡುತ್ತಿದವನನ್ನು ನಿಧಾನಾವಾಗಿ ಅಲುಗಾಡಿಸಿ ಎಬ್ಬಿಸಿದ.. ಇಬ್ಬರಿಗೂ ಆಶ್ಚರ್ಯ..ಇಬ್ಬರ ಮೈಕೈಗೆ ಆಸ್ಪತ್ರೆಯ ಬ್ಯಾಂಡೇಜ್..ಹಾಗೂ ತಲೆಗೆ ಯಾವುದೋ ಬಟ್ಟೆ ಸುತ್ತಿರುವುದು ಕಾಣಿಸಿತು. 

ಕಣ್ಣಲ್ಲೇ ಬಾ ಹೊರಗೆ ಹೋಗೋಣ ಅಂದು ಕರೆದರು ಕಥೆ ಹೇಳುತ್ತಿದ್ದ ವ್ಯಕ್ತಿ. ಇಬ್ಬರೂ ನಿಧಾನವಾಗಿ ಕಾಲುಗಳನ್ನು ಎಳೆದು ಹಾಕುತ್ತ ಮನೆಯ ಅಂಗಳಕ್ಕೆ ಬಂದರು.   

ಕೋಳಿಗಳು ಕುಕ್ ಕುಕ್ ಎಂದು ತನ್ನ ಆಹಾರವನ್ನು ಹುಡುಕುತಿತ್ತು.. 
ಮಿಯಾವ್ ಮಿಯಾವ್ ಬೆಕ್ಕು ತನ್ನ ಬೆಳಗಿನ ಆಹಾರ ಬೇಕು ಎಂದು ತನ್ನ ಮನೆಯ ಯಜಮಾನಿಗೆ ಸಂಜ್ಞೆ ನೀಡುತ್ತಿತ್ತು. 
ಮರಕ್ಕೆ ಕಟ್ಟಿ ಹಾಕಿದ್ದ ಮನೆಯ ನಾಯಿ "ಬೌ ಬೌ" ಬೊಗಳುತ್ತಾ "ಯಾರೋ ಅದು ನನ್ನ ಸಾಮ್ರಾಜ್ಯದಲ್ಲಿ ಕಾಲಿಡುತ್ತಿರುವುದು" ಎಂದು ಇತರ ನಾಯಿಗಳಿಗೆ ಸವಾಲು ಹಾಕುತ್ತಿತ್ತು.
ನಗರದಲ್ಲಿ ಕಾಣದೆ ಇರುವ ಗುಬ್ಬಚ್ಚಿಗಳು ಚೀವ್ ಚೀವ್ ಎಂದು ಅಂಗಳದಲ್ಲಿ ಬಿದ್ದಿದ್ದ ಭತ್ತ, ಗೋಧಿ, ರಾಗಿ ಇತರ ಕಾಳುಗಳನ್ನು ತಿನ್ನುತ್ತಿದ್ದವು.

ಆಹ್ಲಾದಕರ ವಾತಾವರಣ.. ಮನಸ್ಸು ಹತ್ತಿಯ ಹಾಗೆ ಹಗುರವಾಗಿದ್ದ ಅನುಭವ..

ಇಬ್ಬರೂ ತನ್ಮಯತೆಯಿಂದ ಹಾಗೆ ಮನೆಯ ಜಗಲಿಯಲ್ಲಿ ಕುಳಿತರು.  ಬೆಳಗಿನ ತಣ್ಣನೆ ಗಾಳಿ ಮನಕ್ಕೆ ಮುದ ನೀಡಿತು.

ಅವರಿಬ್ಬರ ಬೆನ್ನಿನ ಮೇಲೆ ಯಾರೋ ಕೈಯಿಟ್ಟ ಅನುಭವ..

"ಅಣ್ಣಾ ಅಣ್ಣಾ ಅಣ್ಣಾ ಅಣ್ಣಾ"

ಧಸಕ್ ಎಂದಿತು ಇಬ್ಬರ ಹೃದಯ.. ಹಠಾತ್ ತಿರುಗಿದರು..

ತಲೆಗೆ ರುಮಾಲು ಸುತ್ತಿಕೊಂಡು, ಹೆಗಲ ಮೇಲೆ ಗುದ್ದಲಿ ಹಿಡಿದು ನಿಂತಿದ್ದ ಒಬ್ಬಾತ ತನ್ನ ಹಳದಿ ಹಲ್ಲನ್ನು ಬೀರುತ್ತಾ ಕೇಳಿದ

"ಅಣ್ಣಾ ಅಣ್ಣಾ"

ಇಬ್ಬರಿಗೂ ಗೊತ್ತಾಯಿತು.. ಇದು ಆ ಧ್ವನಿಯಲ್ಲ ಎಂದು.. ನಿಟ್ಟುಸಿರು ಬಿಟ್ಟರು..

ಆ ಹಳ್ಳಿಯವ "ನಿಮ್ಮ ಕಥೆ ಏನಣ್ಣ.. ಯಾಕೆ ನದಿ ತೀರದ ಹತ್ತಿರ ಬಿದ್ದಿದ್ರಿ.. ಏನು ನಿಮ್ಮ ಸಮಾಚಾರ.. ಈ ಊರಿಗೆ ಹೊಸಬರ ಹೇಗೆ... .. ಎಲ್ಲಿಂದ ಬಂದ್ರಿ.. ಹೇಗೆ ಬಂದ್ರಿ.. ನೀವು ಯಾವ ಊರಿನವರು.. ಎಲ್ಲಿಗೆ ಹೋಗುತ್ತಿದ್ರಿ.. " ಉಸಿರು ಹಿಡಿದಂತೆ ಒಂದೇ ಸಮನೆ ಪ್ರಶ್ನೆಗಳ ಮಳೆಯನ್ನೇ ಸುರಿಸಿದ.

ಮೊದಲೇ ಮಳೆಯಲ್ಲಿ, ಬೆವರಿನಲ್ಲಿ, ಭಯದಲ್ಲಿ ನೆಂದು ನೀರಾಗಿದ್ದ ಇವರಿಬ್ಬರೂ.. ನಿಧಾನವಾಗಿ ಉಸಿರು ಬಿಡುತ್ತಾ.. "ಅದು ದೊಡ್ಡ ಕಥೆ."

ಹೌದಾ.. ಅಣ್ಣಾ ಹೊಲಕ್ಕೆ ಹೋಗಿಬರುತ್ತೇನೆ, ನೀವಿಬ್ಬರೂ ಮುಖ ತೊಳೆದು ಕಾಫಿ ತಿಂಡಿ ಮಾಡಿ ವಿಶ್ರಾಂತಿ ತೆಗೆದುಕೊಳ್ಳಿ, ನಾ ಬಂದು ಬಿಡುತ್ತೇನೆ.. " ಎಂದು ಹಾಗೆ ಮನೆ ಎದುರಿನ ಕಾಡಿನಲ್ಲಿ ಹೋಗಿ ಮಾಯವಾದ.. ಅವನು ಹೋಗುವ ಹಾದಿಯನ್ನೇ ನೋಡುತ್ತಿದ್ದ ಅವರಿಬ್ಬರು.. ಉಫ್ ಎಂದು ನಿಡಿದಾದ ಉಸಿರು ಬಿಟ್ಟು.. ಹಾಗೆ ಅಂಗಳದಲ್ಲಿ ಮಲಗಿದರು. ಸುಮಾರು ಹೊತ್ತು ಹಾಗೆ ಮಲಗಿದ್ದರು.

ಅಲ್ಲಿಗೆ ಒಂದು ಅಜ್ಜ ಬಂದು "ಎನ್ರಪ್ಪ.. ಏನಪ್ಪಾ ನಿಮ್ಮ ಕಥೆ" ಎಂದು ಕೇಳಿತು.. ಆಗಲೇ ಮತ್ತೆ ಇಹಲೋಕಕ್ಕೆ ಬಂದದ್ದು.

ಕಥೆ ಹೇಳಿ ಎಂದು ಪೀಡಿಸುತ್ತಿದ್ದವ  "ಅಜ್ಜಾ . ನಾವು ಎಲ್ಲಿದ್ದೇವೆ, ನಮ್ಮನ್ನು ಯಾರು ಇಲ್ಲಿಗೆ ಕರೆತಂದವರು" ಎಂದು ಕೇಳಿದಾಗ.. ಅಜ್ಜ ತನ್ನ ಜೇಬಿನಲ್ಲಿದ್ದ ಸಿಂಗಾರಿ ಬೀಡಿಯನ್ನು ತೆಗೆದು.. ಇಬ್ಬರಿಗೂ ಕೊಟ್ಟು ತಾನು ಹಚ್ಚಿಕೊಂಡು ಉಫ್ ಎಂದು ಹೊಗೆ ಬಿಟ್ಟು.. ಉಫ್ ಉಫ್ ಎಂದು ಕೆಮ್ಮುತ್ತ ಒಮ್ಮೆ ಕಫ ಸರಿಮಾಡಿಕೊಂಡು

ಇವಾಗ ತಾನೇ ಒಬ್ಬ ಹೋದನಲ್ಲ ಅವನು ನನ್ನ ಮಗ.. ಅವ ಬೆಳಿಗ್ಗೆ ನದಿ ಕಡೆಗೆ ಅವನ ಸ್ನೇಹಿತರ ಜೊತೆ ಹೋದಾಗ ನೀವಿಬ್ಬರು ಅಲ್ಲಿ ಬಿದ್ದಿದ್ದನ್ನು ನೋಡಿ ಕರೆದುಕೊಂಡು ಬಂದು.. ಹಳ್ಳಿಯಲ್ಲಿನ ಆಸ್ಪತ್ರೆಯಲ್ಲಿ ಡಾಕ್ಟ್ರು ಹತ್ರ ಮದ್ದು ಕೊಡಿಸಿ ಈ ಮನೆಗೆ ಕರೆದುಕೊಂಡು ಬಂದ.. ನೀವು ಇವತ್ತು ಎಚ್ಚರವಾಗಿದೀರಿ... "

"ಆಹ್.. ಇವತ್ತು ಎಚ್ಚರವಾಗಿದ್ದೀರಿ ಅಂದ್ರೆ ಏನು ಅಜ್ಜಾ.. ಎಷ್ಟು ದಿನ ಆಯಿತು"

ಅಜ್ಜ ಬೀದಿಯಿಂದ ಇನ್ನೊಂದು ಧಮ್ ಎಳೆದು.. ಕೆಮ್ಮುತ್ತಲೇ "ನೀವು ನಮಗೆ ಸಿಕ್ಕಿ ಹದಿನೈದು ದಿನವಾಯಿತು.. ಇಂದು ಹುಣ್ಣಿಮೆ ದಿನ ಅದಕ್ಕೆ ಅಂಗಳದಲ್ಲಿ ಬಣ್ಣ ಬಣ್ಣದ ರಂಗೋಲಿ, ಮನೆ ಬಾಗಿಲಿಗೆ ಮಾವಿನ ತೋರಣ ಎಲ್ಲಾ ಹಾಕಿರೋದು"

ಇಬ್ಬರಿಗೂ ಮೂರ್ಛೆ ಹೋದ ಅನುಭವ.. "ಅಜ್ಜಾ ಹದಿನೈದು ದಿನವಾಯಿತೇ.. .ಯಪ್ಪಾ.. "

ಅಜ್ಜ " ಸರಿ ಸರಿ.. ಮೊದಲು ತಿಂಡಿ ತಿನ್ನಿ.. ಮಗ ಬರ್ತಾನೆ.. ಆಮ್ಯಾಕೆ ನಿಮ್ಮ ಕಥೆ ಹೇಳುವಿರಂತೆ.. "

ಅಜ್ಜಾ ಕೆಮ್ಮುತ್ತಾ.. ಕೋಲೂರಿಕೊಂಡು ಮನೆಯೊಳಗೇ ಹೋಯಿತು..

ಇಬ್ಬರೂ ಮುಖ ಮುಖ ನೋಡಿಕೊಂಡರು.. ಇಬ್ಬರ ಹಣೆಯಲ್ಲಿ ವಯಸ್ಸಿಗೆ ಬಂದ ಸುಕ್ಕುಗಳಿಗಿಂತ ಹೆದರಿಕೆ, ಗಾಬರಿ ಇವುಗಳಿಂದ ಮೂಡಿದ ಗೆರೆಗಳು ಹೆಚ್ಚಾಗಿದ್ದವು.

ತಿಂಡಿ ತಿಂದು.. ಸ್ವಲ್ಪ ಸುಧಾರಿಸಿಕೊಂಡ ಮೇಲೆ.. ಹಳ್ಳಿಯಲ್ಲಿನ ಆ ಮನೆಯಲ್ಲಿ ಓದುತ್ತಿದ್ದ ಒಬ್ಬ ಹುಡುಗನ ಬಳಿ ಒಂದಷ್ಟು ಬಿಳಿ ಹಾಳೆಗಳನ್ನು  ಪಡೆದುಕೊಂಡು ಅಂಗಳಕ್ಕೆ ಬಂದು.. ಬರೆಯಲು ಶುರುಮಾಡಿದ ತಮ್ಮ ಅನುಭವಗಳನ್ನು ಬ್ಲಾಗ್ ಮತ್ತು ಪತ್ರಿಕೆಗಳಿಗೆ ಕಳಿಸಲು.

ಸೂರ್ಯ ನೆತ್ತಿಗೆ ಬಂದು ಆಟವಾಟ ತೊಡಗಿ.. ಪಡುವಣಕ್ಕೆ ಜಾರಲು ಶುರುಮಾಡಿದ್ದ.. .

ಹೊಲದ ಕೆಲಸ ಮುಗಿಸಿ.. ಊಟಕ್ಕೆ ಬಂದವ.. ಸೀದಾ ಇವರಿಬ್ಬರ ಹತ್ತಿರ ಬಂದು.. ಅಣ್ಣಾ ಅಣ್ಣಾ.. ನಿಮ್ಮ ಕಥೆ ಒಸಿ ಹೇಳಿ.. ನಿಮ್ಮನ್ನು ನೋಡಿ ಊರೆಲ್ಲಾ ಏನೇನೂ ಮಾತಾಡಿಕೊಳ್ಳುತ್ತಿದ್ದರು... ನನಗೆ ಕುತೂಹಲ ಹೆಚ್ಚಾಗಿದೆ.."

"ಯಜಮಾನರೇ.. ನಿಮ್ಮಿಂದ ತುಂಬಾ ಸಹಾಯವಾಯಿತು.. ನಮ್ಮ ಕಥೆಯನ್ನು ಹೇಳುತ್ತೇನೆ... ಆದರೆ ನಾವಿಬ್ಬರು ಬಿದ್ದಿದ್ದ ಜಾಗವನ್ನು ಒಮ್ಮೆ ನೋಡಬೇಕು.. ಅಲ್ಲಿಗೆ ಕರೆದುಕೊಂಡು ಹೋಗ್ತೀರಾ"

"ಅಯ್ಯೋ ಅದಕ್ಕೆ ಏನಣ್ಣ.. ಬನ್ನಿ ಊಟ ಮಾಡಿ ಹೋಗೋಣ.. ಬಂದ ಮೇಲೆ ಕಥೆಯನ್ನು ಹೇಳಿ.. ಊರಿನವರನ್ನು ಕರೆಯುತ್ತೇನೆ .. ಆಯ್ತಾ.. "

ಪುಷ್ಕಳವಾದ ಊಟವಾಯಿತು.. ದೇಹ ಹಗುರವಾಯಿತು..

ನಿಧಾನವಾಗಿ ತಾವು ಬಿದ್ದಿದ್ದ ಸ್ಥಳಕ್ಕೆ ಹಳ್ಳಿಗರ ಜೊತೆಯಲ್ಲಿ ಹೋದರು..

"ಅಣ್ಣಾ ಅಣ್ಣಾ" (ಇಬ್ಬರೂ ಹೆದರುವ ಅಗತ್ಯ ಇರಲಿಲ್ಲ.. ಏಕೆಂದರೆ ಆ ಧ್ವನಿಯಲ್ಲ ಅದು) ಇಲ್ಲೇ ನೀವು ಬಿದ್ದಿದ್ದು..

ಇಬ್ಬರೂ ಅಲ್ಲಿನ ಜಾಗವನ್ನು ನೋಡಿ.. ಹಾಗೆ ಒಂದಷ್ಟು ದೂರ ನದಿಯ ದಡದಲ್ಲಿ ಏನನ್ನೋ ಹುಡುಕುತ್ತಾ ನೆಡೆದಾಡಿದರು.. ಇಬ್ಬರಿಗೂ ಗೊತ್ತಿತ್ತು.. ಏನನ್ನು ಹುಡುಕುತ್ತಿದ್ದೇವೆ ಅಂಥಾ..

ಹಳ್ಳಿಯವನಿಗೆ.. ಕುತೂಹಲ.. "ಏನಣ್ಣ ಹುಡುಕುತಿದ್ದೀರಾ.. ಮೊದಲು ನಿಮ್ಮ ಕಥೆ ಹೇಳಬಾರದೇ.. "

ತಮ್ಮಿಬ್ಬರ ಜೀವ ಉಳಿಸಿದವನಿಗೆ ಹಾಗೂ ಹಳ್ಳಿಯವರಿಗೆ ಕೃತಜ್ಞತೆ ಹೇಳುತ್ತಾ.. ಅಲ್ಲೇ ಇದ್ದ ಚಿಕ್ಕ ಬಂಡೆಯ ಮೇಲೆ ಕೂತು.. ತಮ್ಮ ಅಮಾವಾಸ್ಯೆ ರಾತ್ರಿಯ ಕರಾಳ ಅನುಭವವನ್ನು ಒಂದು ಕ್ಷಣವನ್ನು ಬಿಡದೆ ಹೇಳಿದರು.

ಹಳ್ಳಿಗರು ಮಂತ್ರ ಮುಗ್ಧರಾಗಿ ಕೇಳುತ್ತಾ ಕುಳಿತರು..

ಇಬ್ಬರೂ ಒಮ್ಮೆಲೇ ಕೇಳಿದರು... "ಯಜಮಾನರೇ.. ಎಲ್ಲಾ ಸರಿ.. ನಾವು ಇಲ್ಲಿ ಬಿದ್ದಿದ್ದೆವು.. ನೀವು ನಮ್ಮನ್ನ ಕಾಪಾಡಿದಿರಿ.. ಆದರೆ ಒಂದು ಲಾರಿ ಕೂಡ ಇಲ್ಲೇ ಎಲ್ಲೋ ಇರಬೇಕಲ್ಲ... "

"ಇಲ್ಲ ಅಣ್ಣ ಯಾವುದು ಲಾರಿ ಗೀರಿ ಏನೂ ಇಲ್ಲ.. ಎಲ್ಲೂ ಪ್ರಪಾತಕ್ಕೆ ಬಿದ್ದಿರುತ್ತೆ.. ಇಲ್ಲ ಅಂದರೆ ರೆಂಬೆ ಕೊಂಬೆಗಳಿಗೆ ಸಿಕ್ಕಿ ಬಂಡೆಗಳಿಗೆ ಬಡಿದು ಪುಡಿಪುಡಿಯಾಗಿರುತ್ತೆ.. "

ಒಂದು ರೀತಿಯ ಮಿಶ್ರ ಅನುಭವ ಹೊತ್ತು..

ಆ ರಾತ್ರಿ ಹಳ್ಳಿಯಲ್ಲಿಯೇ ಕಳೆದು.. ಮರುದಿನ ಇಬ್ಬರೂ ತಮ್ಮ ಊರಿಗೆ ಹೊರಟರು..

ಹಳ್ಳಿಗರಿಗೆ ಧನ್ಯವಾದ ಹೇಳಿ.. ಅಜ್ಜನಿಗೆ ನಮಸ್ಕಾರ ಮಾಡಿ.. ಬೆಳಗಿನ ಉಪಹಾರ ಮುಗಿಸಿ ತಾವು ತಮ್ಮ ಊರಿಗೆ ಹೋಗುವುದಾಗಿ ಹೇಳಿದರು.. ಹಳ್ಳಿಯವ ಹೇಳಿದ "ಸರಿಯಾದ ನಿರ್ಧಾರ.. ಯಾಕೆಂದರೆ ಈ ಊರಿಗೇ ಬಸ್ಸು ಬರುವುದೇ ಅಪರೂಪ.. ತಿಂಗಳಿಗೆ ಒಂದೆರಡು ಬಾರಿ ಬರುತ್ತದೆ.. ಇಂದು ಬಂದರೆ ಬರಬೇಕು.. ನೀವು ಇಲ್ಲೇ ಹತ್ತಿರ ಇರುವ ನಿಲ್ದಾಣಕ್ಕೆ ಹೋಗಿ.. ಬಸ್ಸು ಬಂದರೆ ಸರಿ.. ಇಲ್ಲದೆ ಹೋದರೆ ಯಾವುದು ಸಿಗುತ್ತೋ ಅದರಲ್ಲಿ ಹತ್ತಿ.."..

ಇಬ್ಬರಿಗೂ ಒಮ್ಮೆಲೇ ನಗು ಭಯ ಎರಡೂ ಆಯಿತು.

ಆ ಊರಿನ ಬಸ್ ನಿಲ್ದಾಣಕ್ಕೆ ಬಂದಾಗ ಆಗಲೇ ಹತ್ತು ಘಂಟೆಯಾಗಿತ್ತು.. ದಿನಕರ ಆಗಲೇ ಬಿಸಿಲಿನ ಝಳದಿಂದ ಭುವಿಯನ್ನು ಕಾಯಿಸಲು ಶುರುಮಾಡಿದ್ದ..

ಬಸ್ ನಿಲ್ದಾಣ.. ಒಂದು ಪುರಾತನ ಕಾಲದ ಚಿತ್ರದ ಸೆಟ್ ತರಹ ಇತ್ತು.. ಬಣ್ಣ ಮಾಸಿದ ಗೋಡೆಗಳು.. ಗೋಡೆಗೆ ಹಚ್ಚಿದ ಚಿತ್ರದ ಪೋಸ್ಟರ್ ಅನ್ನು ಆ ಊರಿನ ಮಕ್ಕಳು ಸುಮಾರು ಹರಿದು ಹಾಕಿದ್ದು ಕಾಣುತ್ತಿತ್ತು..ಉಳಿದ ಕಾಗದಗಳನ್ನು ತಿನ್ನಲು ಕತ್ತೆಗಳು ಪೈಪೋಟಿ ನೆಡೆಸಿದಂತೆ ಕಾಣುತ್ತಿತ್ತು.. ಬೋಂಡಾ ಬಜ್ಜಿ ಕರಿದು ಕರಿದು ಆ ಹೊಗೆಗೆ ಮಸುಕಾದ ಬಜ್ಜಿ ಅಂಗಡಿ.. ಅಗಾಧವಾದ ಮರ.. ಅದರ ಕೆಳಗೆ ಕೋಳಿಗಳ ಅಂಗಡಿ.. ಕುರಿ ಮೇಕೆಗಳು ಕಟ್ಟಿದ್ದ ಜಾಗ, ಪುಟ್ಟ ಪೆಟ್ಟಿಗೆ ಅಂಗಡಿಯಲ್ಲಿ ನೇತಾಕಿದ್ದ ಬೋಟಿ, ಬಿಸ್ಕತ್ ಪ್ಯಾಕೆಟ್ ಗಳು, ಪಾನ್ ಪರಾಗ್ ಪ್ಯಾಕೆಟ್ ಸರಗಳು, ಗಾಜಿನ ಬಾಟಲಿಯಲ್ಲಿ ನಾಜೂಕಾಗಿ ಜೋಡಿಸಿದ್ದ ಮೈಸೂರು ಪಾಕು, ಕೊಬ್ರಿಮಿಠಾಯಿ, ಕೋಡುಬಳೆ, ಚಕ್ಕಲಿ, ಬಿಸ್ಕತ್, ಪಕ್ಕದಲ್ಲಿಯೇ ಒಂದು ಮರಕ್ಕೆ ಮೊಳೆ ಹೊಡೆದು, ಹಗ್ಗ ಸಿಕ್ಕಿಸಿ ಅದರ ಬಾಲಕ್ಕೆ ಒಂದು ಕಡ್ಡಿ ಪೆಟ್ಟಿಗೆಯನ್ನು ಸಿಕ್ಕಿಸಿದ್ದರು.. ಬೀಡಿ ಹಚ್ಚಿಕೊಳ್ಳಲಿಕ್ಕೆ!!!!

ಮನಸ್ಸು ಹಗುರಾಗಿತ್ತು.. ಒಂದು ಭಯಾನಕ ಜಗತ್ತಿನಿಂದ ಹೊರ ಬಂದ ಸಂತೋಷ.. ಎಲ್ಲವೂ ಮನಸ್ಸನ್ನು ಮುದಗೊಳಿಸಿತ್ತು..

"ಪೇಮ್ ಪೇಮ್." ಸದ್ದಿಗೆ ಮತ್ತೆ ಇಬ್ಬರ ಮನಸ್ಸು ಮರಳಿತ್ತು.

ಬಸ್ ಹತ್ತಿದರು.. ಕಿಟಕಿ ತೆಗೆದುಕೊಂಡು.. ಬರುವ ಗಾಳಿಗೆ ಮೊಗವೊಡ್ಡಿ ಕೂತರು.. ಕಂಡಕ್ಟರ್ ಚೀಟಿ ಕೊಟ್ಟ..  ಬಸ್ ನಿಧಾನವಾಗಿ ಘಟ್ಟದ ಏರು ಹಾದಿಯಲ್ಲಿ ಚಲಿಸಲು ಶುರುಮಾಡಿತು.. . ಇಬ್ಬರೂ ಹಾಗೆ ತೂಕಡಿಸಲು ಶುರುಮಾಡಿದರು..

"ಕಿರ್ರ್ ಕಿರ್ರ್.. " ಸದ್ದು ಮಾಡುತ್ತಾ.. ಬಸ್ ನಿಂತಿತು.. ಕಣ್ಣು ಬಿಟ್ಟರು..

ಬಸ್ಸಿನಲ್ಲಿದ್ದ ಜನವೆಲ್ಲ ಗುಜು ಗುಜು ಮಾತಾಡುತ್ತಾ ಏನಾಯಿತು ಎಂದು.. ಕುತ್ತಿಗೆಯನ್ನು ಕೋಳಿಯ ತರಹ ಆದಷ್ಟು ದೂರಕ್ಕೆ ಚಾಚಿದರು.. ಏನೂ ಕಾಣಲಿಲ್ಲ..

ಎಲ್ಲರೂ ಬಸ್ಸಿಂದ ಇಳಿದರು.. ಏನೋ ಇದೆ ಎಂದು ಎಲ್ಲರೂ ಸೇತುವೆಯ ಹತ್ತಿರ ಓಡಿದರು.. ಆಗಲೇ ಅಲ್ಲಿ ಬೇಕಾದಷ್ಟು ಜನರು ಜಮಾಯಿಸಿದ್ದರು..

ಇಬ್ಬರು.. ಸೇತುವೆಯ ಬಳಿ ಹೋಗಿ ನೋಡಿದರು.. ಅಲ್ಲಿನ ದೃಶ್ಯವನ್ನು ಕಂಡ ಮನಸ್ಸು ತರಗುಟ್ಟಲು ಶುರುಮಾಡಿತು..ಆ ಕರಾಳ ರಾತ್ರಿಯ ಕತ್ತಲಿನಲ್ಲಿ ಅರೆ ಬರೇ ಕಂಡಿದ್ದು .. !

ತಮ್ಮನ್ನು ಕಾಡಿನಲ್ಲಿ ಆ ತಿರುವಿನಿಂದ ಹೊತ್ತು ತಂದಿದ್ದ ಲಾರಿ ಅಲ್ಲಿ ಅನಾಥವಾಗಿ ಪುಡಿ ಪುಡಿಯಾಗಿ ಬಿದ್ದಿತ್ತು..!

ಹತ್ತಿರದಲ್ಲಿಯೇ ಒಂದು ಗೋಣಿಚೀಲವನ್ನು ತನ್ನ ತಲೆಯ ಮೇಲೆ ಹಾಕಿಕೊಂಡು ವ್ಯಕ್ತಿ ಇವರಿಬ್ಬರನ್ನು ವಿಚಿತ್ರವಾಗಿ ನೋಡುತ್ತಾ ಹಲ್ಲು ಕಿರಿದು ದಾಟಿ ಹೋದ..
ಕೃಪೆ - ಗೂಗಲೇಶ್ವರ 

ಆ ವ್ಯಕ್ತಿಯನ್ನು ನೋಡುತ್ತಾ ಆ ಸೇತುವೆಯ ಮೇಲೆ ನಿಂತು ಒಮ್ಮೆ ಪುಡಿಪುಡಿಯಾದ ಲಾರಿಯನ್ನು ನೋಡಿದರು ತಿರುಗಿ ಆ ಆ ವ್ಯಕ್ತಿಯನ್ನು ನೋಡಿದರು..

ಆ ವ್ಯಕ್ತಿ ಹಾಗೆ ಗೋಣಿಚೀಲವನ್ನು ತಲೆಯಿಂದ ತುಸು ತೆಗೆದು ಇವರಿಬ್ಬರ ಕಡೆಗೆ ತಿರುಗಿ ನೋಡಿ ಹಲ್ಲು ಬಿಟ್ಟಿತು....

ಪರಿಚಿತವಾದ ಹಲ್ಲು.. ವಸಡು..

ಆ ವ್ಯಕ್ತಿ ತಮ್ಮನ್ನು ಕರೆದ ಅನುಭವ  "ಅಣ್ಣಾ ಅಣ್ಣಾ ಅಣ್ಣಾ ಅಣ್ಣಾ"

2 comments:

  1. ಅಬ್ಬಾ, ಶ್ರೀಕಾಂತ, ನನಗೇ ಆ ಭಯಾನಕ ವಾತಾವರಣದಲ್ಲಿ ಹಾಯ್ದು ಬಂದ ಅನುಭವವಾಯಿತು. ನಿಮ್ಮ ಕೆಲವು ಉಪಮೆಗಳು ತುಂಬ ಚೆನ್ನಾಗಿವೆ. ಉದಾಹರಣೆಗೆ: (೧)ಹಣೆಯಲ್ಲಿನ ಬೆವರಿನ ಆಣೆಕಟ್ಟು ಒಡೆದು ಬಹಳ ಹೊತ್ತೇ ಆಗಿತ್ತು.
    (೨)ಟಪ್ ಟಪ್ ಮಳೆ ಹನಿಗಳು ಲಾರಿಯ ಬಾನೆಟ್ ಮೇಲೆ ರುದ್ರ ತಾಂಡವ ಮಾಡುತ್ತಿದ್ದವು.
    (೩)ಕೂಗೋಕೆ ಹೋದರೆ, ಅವರ ಸೌಂಡ್ ಕಾರ್ಡ್ ಮ್ಯೂಟ್ ಆಗಿತ್ತು.
    (೪)ಆಹ್ಲಾದಕರ ವಾತಾವರಣ.. ಮನಸ್ಸು ಹತ್ತಿಯ ಹಾಗೆ ಹಗುರವಾಗಿದ್ದ ಅನುಭವ..
    ಇನ್ನು ಇಲ್ಲಿ ಆಗಿರುವಂತಹ ಬೆರಳಚ್ಚಿನ ಒಂದು ಲೋಪವನ್ನು ನಿಮ್ಮ ಗಮನಕ್ಕೆ ತರಬಯಸುತ್ತೇನೆ:“ಕೌಸಲ್ಯ ಸುಪ್ರಜಾ ರಾಮ ಸಂಧ್ಯಾ ಪ್ರವರ್ಧತೆ, ಉತ್ತಿಷ್ಠ ನರ ಶಾರ್ದೂಲ ಕರ್ತವ್ಯಂ ದೈವಮಾತ್ಮಿಕಂ". ಇದು ಹೀಗಿರಬೇಕಾಗಿತ್ತು: “ಕೌಸಲ್ಯಾ ಸುಪ್ರಜಾ ರಾಮ ಪೂರ್ವಾಸಂಧ್ಯಾ ಪ್ರವರ್ತತೆ, ಉತ್ತಿಷ್ಠ ನರ ಶಾರ್ದೂಲ ಕರ್ತವ್ಯಂ
    ದೈವಮಾಹ್ನಿಕಂ".
    ಮೈ ನವಿರೇಳಿಸುವ ಉತ್ತಮ ಬರಹಕ್ಕಾಗಿ ಅಭಿನಂದನೆಗಳು.

    ReplyDelete
    Replies
    1. ವಾಹ್ ಗುರುಗಳೇ.. ಧನ್ಯೋಸ್ಮಿ

      ನಿಮ್ಮ ಪ್ರತಿಕ್ರಿಯೆ ಅತಿ ಸುಂದರ.. ನಿಮ್ಮ ಆಶೀರ್ವಾದವೇ ನನಗೆ ಶ್ರೀ ರಕ್ಷೆ. ನಿಮ್ಮ ಆಶೀರ್ವಾದದ ಬಲ ಪ್ರತಿ ಅಕ್ಷರಗಳಲ್ಲೂ ಇಣುಕುತ್ತಿದೆ. ಧನ್ಯೋಸ್ಮಿ

      ಮುದ್ರಾರಾಕ್ಷಸ ಸರಿಯಾಗಿಯೇ ಇದ್ದಾ.. ಈ ಮರಿ ರಾಕ್ಷಸ.. ಕಣ್ಣು ತಪ್ಪಿ ತಪ್ಪು ಮಾಡಿದ್ದಾನೆ, ಸರಿ ಪಡಿಸಿಕೊಂಡಿದ್ದೇನೆ ಗುರುಗಳೇ ಧನ್ಯವಾದಗಳು.

      Delete