Friday, April 13, 2018

ಕುರುಡಲ್ಲದ... ಕುರುಡು.. ಮಾಡುವ ಕಾಂಚಾಣ

ಹಣದಿಂದ ನೆಮ್ಮದಿ ಸಿಗುತ್ತೆ... ... ಅರೆ ಯಾರಪ್ಪ ಸಿಗುತ್ತೆ ಅಂತ ಹೇಳಿದ್ದು.. ಕರೆಕೊಂಡು ಬನ್ರಪ್ಪ ನನ್ನ ಮುಂದೆ.. ಸ್ವಲ್ಪ ಹೊತ್ತು ಮಾತಾಡೋಣ.. ಅಲ್ವಾ

ಹಣದಿಂದ ನೆಮ್ಮದಿ ಸಿಗುತ್ತೆ ಎನ್ನುವುದು ಒಂದು ತಪ್ಪು ಕಲ್ಪನೆ.. ಜಗತ್ತು ಹಣದ ಮೇಲೆ ನಿಂತಿದೆ.. ಇರಬಹುದು.. ಹಣ ಬೇಕು ಬದುಕಲು... ಜೀವಿಸಲು.. ಬಾಳಲು.. ಆದರೆ ಹಣವಿಲ್ಲದ ಜನತೆ ಬದುಕುತ್ತಿಲ್ಲವೇ... ಬಾಳುತ್ತಿಲ್ಲವೇ..

ಹಣವಿರಬೇಕು ನಿಜ.. ಆದರೆ ಅದು ನೆಮ್ಮದಿಗಲ್ಲ..

ಪುಸ್ತಕಗಳಲ್ಲಿ ಓದಿದ ನೆನಪು.. ಹಣದಿಂದ ಹಣ್ಣನ್ನು ಕೊಳ್ಳಬಹುದು.. ಆದರೆ ಹಸಿವನಲ್ಲ, ತೃಪ್ತಿಯನ್ನಲ್ಲ.. ಹಣದಿಂದ ಪ್ರವಾಸಕ್ಕೆ ಹೋಗಬಹುದು.. ಆದರೆ ಸಂತಸವನ್ನ ಕೊಂಡುಕೊಳ್ಳಲು ಆಗುವುದಿಲ್ಲ..

ಹಣವಿದ್ದರೆ ನೀ ದಿನಕರನಂತೆ ಇಲ್ಲದಿದ್ದರೆ ಶ್ವಾನದಂತೆ ಅಂತ ಅಣ್ಣಾವ್ರ ಚಿತ್ರದ ಹಾಡಿದೆ.. ನಿಜ.. ಆದರೆ ಹಣ ಎನ್ನುವ ಈ ಮಾಯಾ ಬೊಂಬೆ ಏನೆಲ್ಲಾ ಅನಾಹುತ ಮಾಡುತ್ತದೆ  ಎಂದು ತಿಳಿಯಬೇಕೇ.. ಒಂದು ಪುಟ್ಟ ಕತೆ ಹೇಳುತ್ತೇನೆ ಕೇಳಿ.. ಪುಸ್ತಕದಲ್ಲಿ ಓದಿದ್ದು..

ಒಬ್ಬ ರೈತ.. ಕಷ್ಟ ಪಟ್ಟು ದುಡಿದು ತನ್ನ ಸಂಸಾರವನ್ನು ಸಾಕುತ್ತಿದ್ದ.. ನೆಮ್ಮದಿಯಾಗಿದ್ದ.. ನೆಂಟರು, ಮಿತ್ರರು ಬೇಕಾದಷ್ಟು ಇದ್ದರು.. ಎಲ್ಲರೊಡನೆ ವಿಶ್ವಾಸ, ಪ್ರೀತಿಯಿಂದ ಇರುತ್ತಿದ್ದ.. ದೇವರ ಮೇಲಿನ ಭಕ್ತಿ, ಶ್ರದ್ಧೆ.. ಗುರುಹಿರಿಯರನ್ನು ಕಂಡರೆ ಗೌರವ ಎಲ್ಲವೂ ಇತ್ತು.. ಸುಖ ಸಂತೋಷ ನೆಮ್ಮದಿಗಳಿಗೆ ಅವನ ಮನೆ ತವರು ಮನೆಯಾಗಿತ್ತು..

ಒಮ್ಮೆ ದೇವನು ಅವನನ್ನು ಪರೀಕ್ಷಿಸಲು.. ಅವನ ಮನೆಯ ಮುಂದೆ ಒಂದು ಪುಟ್ಟ ಚೀಲ... ಚೀಲ ಅಂದರೆ ಹಳ್ಳಿಯ ಹಿರಿಯವರು ಸೊಂಟದಲ್ಲಿ ಸಿಕ್ಕಿಸಿಕೊಳ್ಳುವ ಎಲೆ ಅಡಿಕೆ ಚೀಲ ಎಂದುಕೊಳ್ಳಿ .. ಆ ತರಹ ಪುಟ್ಟ ಚೀಲದಲ್ಲಿ ಒಂದಷ್ಟು ಬಂಗಾರದ ನಾಣ್ಯಗಳನ್ನು ತುಂಬಿ ಮನೆಯ ಮುಂದೆ ಇಟ್ಟ.. ಬೆಳಿಗ್ಗೆ ಎದ್ದ ರೈತ ಅದನ್ನು ನೋಡಿ.. ಖುಷಿಯಿಂದ ಅತ್ತಿತ್ತ ನೋಡಿದ.. ಯಾರೂ ಕಾಣಲಿಲ್ಲ.. ಒಂದೆರಡು ದಿನ ಕಾದು ನೋಡಿದ.. ಯಾರಾದರೂ ಕೇಳಿಕೊಂಡು ಬರುತ್ತಾರೋ ಅಂತ..

ಸರಿ.. ದೇವರೇ ಕರುಣಿಸಿರಬೇಕು ಎಂದು.. ಆ ಚೀಲವನ್ನು ಬಿಚ್ಚಿ ನೋಡಿದ.. ಖುಷಿಯಾಯಿತು.. ತನ್ನ ಬಡತನ ನಿವಾರಣೆಯಾಯಿತು ಎಂದು ಸಂತಸ ಪಟ್ಟ.. ಒಂದೊಂದೇ ನಾಣ್ಯಗಳನ್ನು ಎಣಿಸಿದ.. ೯೯ ಇತ್ತು.. ಅರೆ ತಪ್ಪಾಗಿದೆ ಎಂದು ಮತ್ತೆ ಎಣಿಸಿದ.. ಮರು ಎಣಿಸಿದ.. ನಿಧಾನವಾಗಿ ಎಣಿಸಿದ.. ಉಫ್.. ೯೯ ಇತ್ತು..

ಯೋಚನೆ ಶುರುವಾಯಿತು.. ಇದನ್ನು ನೂರು ಮಾಡಬೇಕು ಎಂದು.. ಅಂದಿನಿಂದ ಅವನ ಜೀವನ ಶೈಲಿ ಬದಲಾಯಿತು.. ಹಣ ಉಳಿಸಲು ಶುರುಮಾಡಿದ, ದುಡಿಮೆ ಮಾಡುವಾಗ ಹೇಗಾದರೂ ಅಧಿಕ ಹಣ ಗಳಿಸಿ ೯೯ ನಾಣ್ಯವನ್ನ ನೂರು ಮಾಡಬೇಕು ಎಂದು ಹಠ ಹಿಡಿದ.. ಮೋಸ ವಂಚನೆ, ಸುಳ್ಳು ಎಲ್ಲವೂ ಅವನ ಬಳಿ ಬಂದವು.. ಮನೆಯಲ್ಲಿ ನೆಮ್ಮದಿ ಹೋಯಿತು.. ಬಂಧು ಮಿತ್ರರು ದೂರವಾದರು.. ಕಡೆಗೂ ಅವನಿಗೆ ೯೯ ಇಂದ ೧೦೦ ಮಾಡಲು ಆಗಲೇ ಇಲ್ಲ..

ಯೋಚಿಸುತ್ತಾ ಕುಳಿತು ಆರೋಗ್ಯ ಹಾಳಾಯಿತು, ನಿದ್ದೆ ದೂರಾಯಿತು.. ನೆಮ್ಮದಿ ಎಗರಿ ಹೋಯಿತು...

ದೇವ ಕನಸಲ್ಲಿ ಬಂದು ಹೇಳಿದ.. "೯೯ ನ್ನು ಮರೆತು ಬಿಡು.. ಅದು ನಿನಗೆ ಶಾಪ.. ನೀ ಸಂಪಾದಿಸುವ ಹಣವೇ ಸಾಕು.. ನಿನ್ನ ಬದುಕಿಗೆ ಎಷ್ಟು ಬೇಕೋ ಅಷ್ಟು ಹಣವೇ ಸಾಕು.. "

ಬೆಳಿಗ್ಗೆ ಎದ್ದು.. ಸೀದಾ ಕೆರೆಯ ಹತ್ತಿರ ಹೋಗಿ.. ಆ ಬಂಗಾರದ ನಾಣ್ಯಗಳನ್ನು ನೀರಿಗೆ ಬಿಟ್ಟ.. ಮನಸ್ಸಲ್ಲಿ ಇದ್ದ ದೆವ್ವ ಕೂಡ ಮರೆಯಾಯಿತು.. ಕೆಲವೇ ದಿನಗಳು ಮತ್ತೆ ಮೊದಲಿನಂತಾದ

ಈಗ ಹೇಳಿ.. ಹಣ ಮಾಡಿದ ಕೆಲಸ.. ಅವನದ್ದು ದುರಾಲೋಚನೆ ಅಥವಾ ಅಸೆಬುರುಕತನವಾಗಿರಲಿಲ್ಲ.. ಆದರೆ ೯೯ ನಾಣ್ಯ ನೂರು ಮಾಡಲು ಹೋಗಿದ್ದು ತಪ್ಪೇ ಆದರೂ.. ೯೯ ಸಿಗದೇ ಇದ್ದಿದ್ದರೆ.. ನಾ ನಿಮ್ಮ ಮುಂದೆ ಈ ಮಾತುಗಳನ್ನು ಹೇಳೋಕೆ ಕಥೆ ಇರುತ್ತಿರಲಿಲ್ಲ ಅಲ್ಲವೇ


ಹಣ ಎಷ್ಟು ಬೇಕೋ ಅಷ್ಟು ಇರಬೇಕು.. ಆದರೆ ಹಣದಿಂದ ನೆಮ್ಮದಿ ಎನ್ನುವ ಮಾತು.. ಮಾವಿನ ವಾಟೆ ಬಿತ್ತಿ ಬೇವಿನ ಕಾಯಿ ಬಿಟ್ಟ  ಅಲ್ವೇ ..

ಇನ್ನೂ ಉದಾಹರಣೆ ಬೇಕೇ.. ಅಣ್ಣಾವ್ರ ಒಂದು ಮುತ್ತಿನ ಕಥೆ ಸಿನಿಮಾ ನೋಡಿ :-)

Monday, April 2, 2018

ಶ್ರೀ ಬೊಬ್ಬೆ ರಾಮಯ್ಯನವರ ಜೊತೆ ಒಂದು ಸುತ್ತು

"ಕೇಳ್ರಪ್ಪೋ ಕೇಳ್ರಿ.. ನಾಳೆ ಪಂಚಾಯತಿ ಕಟ್ಟೆಯ ಹತ್ತಿರ ಎಲ್ಲರೂ ಸೇರಬೇಕು.. ಎಲ್ಲರೂ ಊಟದ ಹೊತ್ತಿಗೆ ಬನ್ನಿ.. ಅಲ್ಲಿಯೇ ಊಟದ ವ್ಯವಸ್ಥೆ ಇರುತ್ತೆ.... "
ಟಂ ಟಂ ಟಾಮ್

ಡಂಗೂರ ಸಾರುವವ ಹೇಳಿಕೊಟ್ಟಿದ್ದನ್ನು ಹೇಳುತ್ತಾ ಬೀದಿ ಬೀದಿ ಸುತ್ತಿ ಹೇಳಿದ... 

ಮರುದಿನ.. ಊಟದ ಸಮಯ.. ಎಲ್ಲರೂ ಅರಳಿ ಕಟ್ಟೆಯ ಸುತ್ತಾ ನೆರೆದಿದ್ದರು.. ಯಾರ ಕೇಸು.. ಯಾರಿಗೆ ಶಿಕ್ಷೆ ಎನ್ನುವ ಮಾತೆ ಇರಲಿಲ್ಲ.. ಅದು ಆನಂದ ಲೋಕ.. ಅರಿಷಡ್ವರ್ಗಗಳ ಪದವೂ ಸುಳಿಯದ ತಾಣವದು... 

ಎಲ್ಲರೂ ಕುತೂಹಲದಿಂದ ಕಟ್ಟೆಯನ್ನೇ ನೋಡುತ್ತಾ ಕೂತಿದ್ದರು.. ಸುಮಾರು ಆರು ಅಡಿ ಎತ್ತರದ ಆಜಾನುಭಾವ ಶರೀರದ ವ್ಯಕ್ತಿ ಕೆಲವರೊಡನೆ ಮಾತಾಡುತ್ತಾ ಬಂದರು.. .. ವಯಸ್ಸಾಗಿದೆ ಎಂಬ ಸೂಚನೆಗಳು ಶರೀರದಲ್ಲಿದ್ದರೂ.. ನೆಡೆಯುವ ಠೀವಿ.. ತನ್ನ ಜೊತೆಯಲ್ಲಿ ಬಂದವರ ಜೊತೆ ಮಾತಾಡುತ್ತಾ ಬರುವಾಗ ಕೇಳುತ್ತಿದ್ದ ಕಂಚಿನ ಕಂಠ.. ಆ ಧ್ವನಿಯನ್ನು ಕೇಳಿಯೇ ಎಲ್ಲರೂ ಗಪ್ ಚುಪ್.. 

ಕೈಯಲ್ಲಿಯೇ ಎಲ್ಲರೂ ಕೂಡಿ.. ಎಂದು ಸನ್ನೆ ಮಾಡಿದರು.. ಅಲ್ಲಿದ್ದವು ಕೈಮುಗಿದು.. ಹೆಗಲ ಮೇಲಿದ್ದ ಟವೆಲನ್ನು ಒಮ್ಮೆ ಜಾಡಿಸಿ... ಕೆಳಗೆ ಕುಳಿತರು..

ಕೂತ ಮೇಲೆ ಸಣ್ಣ ಗುಸು ಗುಸು.. 

"ಸದ್ದು ಸದ್ದು.. " ಆ ಸದ್ದಿಗೆ ಎಲ್ಲರೂ ಬೆಚ್ಚಿ.. ಸೂಜಿ ಬಿದ್ದರು ಕೇಳಿಸುವಷ್ಟು ನಿಶ್ಶಬ್ದದಿಂದ ಕುಳಿತರು.. 

"ನೋಡ್ರಪ್ಪಾ.. ನಾನೆರಡು ದಿನ ಊರಲ್ಲಿ ಇರಲಿಲ್ಲ. .ನೀವೆಲ್ಲರೂ ಗಾಬರಿಯಿಂದ ಹುಡುಕಾಡಿದಿರಿ ಎಂದು ಗೊತ್ತಾಯಿತು.. ನನ್ನ ಮನೆಯ ಹಾದಿಯಲ್ಲಿದ್ದ ಹಿರೀಕರು, ನನ್ನ ಮಡದಿ, ಮಕ್ಕಳು.. ಎಲ್ಲರೂ ಗಾಬರಿಯಾಗಿದ್ದರು ಎನ್ನುವ ವಿಚಾರ ನನಗೆ ತಿಳಿಯಿತು.. ಅದಕ್ಕೆ ಈ ಕಟ್ಟೆಗೆ ಎಲ್ಲರೂ ಬನ್ನಿ ಅಂತ ನಾನೇ ಡಂಗೂರ ಹೊಡೆಸಬೇಕಾಯಿತು .. ಮತ್ತೆ ನಾನೇ ನಿಮನ್ನೆಲ್ಲ ಬರ ಹೇಳಿದ್ದರಿಂದ.. ಊಟದ ವ್ಯವಸ್ಥೆ ನನ್ನದೇ ಆಗಿದೆ.. ನೀವೆಲ್ಲ ಊಟ ಮಾಡಿ ಬನ್ನಿ.. ನಂತರ ಮುಂದುವರೆಸುವ"

ಎಂದು ಹೇಳಿದ್ದೆ.. ತಾವೇ ಖುದ್ದಾಗಿ ಊಟೋಪಚಾರ ವ್ಯವಸ್ಥೆಯನ್ನು ಹೊತ್ತಿದ್ದ ಶಂಕರನ ಕಡೆ ತಿರುಗಿ.. "ನೋಡು ಶಂಕರ.. ಎಲ್ಲರೂ ಅಚ್ಚುಕಟ್ಟಾಗಿ ಊಟ ಮಾಡಬೇಕು.. ಅದರ ಜವಾಬ್ಧಾರಿ ನಿನ್ನದು.. "  

"ಕೃಷ್ಣ.. ನೀನು ಎಲ್ಲರೂ ಬಂದಿದ್ದಾರೆ ಎಂದು ವಿಚಾರಿಸಿ.. ಪ್ರತಿಯೊಬ್ಬರನ್ನು ಗಮನಿಸಬೇಕು.. "

"ಚೆಲುವಮ್ಮ (ಚೆನ್ನಮ್ಮ) ನೀ ಬಂದ ಹೆಣ್ಣುಮಕ್ಕಳಿಗೆ, ಮಕ್ಕಳಿಗೆ.. ಅರಿಶಿನ ಕುಂಕುಮ ಕೊಡಬೇಕು.. "

"ಏನ್ರಿ.. ಲಕ್ಷ್ಮಿ ದೇವಮ್ಮನವರೇ.. ಎಲ್ಲಾ ವ್ಯವಸ್ಥೆ ಸರಿಯಾಗಿ ಮಾಡಿದ್ದೀರಾ ನೀವು ಅಂತ ಗೊತ್ತು.. ಆದರೂ  ಮಕ್ಕಳ ಸುತ್ತಲೇ ಓಡಾಡುತ್ತಾ.. ಎಲ್ಲವನ್ನು ಗಮನಿಸಬೇಕು.." 

"ನೋಡ್ರಪ್ಪಾ.. ಊಟೋಪಚಾರ ಮುಗಿದ ಮೇಲೆ.. ಮತ್ತೆ ಇದೆ ಅರಳಿಕಟ್ಟೆಯ ಹತ್ತಿರ ಬನ್ನಿ.. "

ಆ ಕಂಚಿನ ಕಂಠಕ್ಕೆ ಇಲ್ಲಾ ಅಂದವರು ಉಂಟೆ.. ತುಟಿ ಪಿಟಿಕ್ ಅನ್ನದೆ ಮುಂದಿನ ಮೂವತ್ತು ನಿಮಿಷಗಳು ಸರ್ ಅಂತ ಕಳೆದೆ ಹೋಯ್ತು.. 

ಹೇಳಿದ ಹಾಗೆ ಎಲ್ಲರೂ ಅರಳಿಕಟ್ಟೆಯ ಹತ್ತಿರ ಮತ್ತೆ ಬಂದು ಕೂತರು.. 

ಎಲ್ಲರ ಕಿವಿಗಳು ನೆಟ್ಟಗಿದ್ದವು.. ಮೊದಲೇ ಸಡ್ಡು ಗದ್ದಲವಿಲ್ಲದ ಲೋಕ ಅದು.. ಇವರ ಧ್ವನಿ ಮತ್ತೆ ಮಾರ್ದನಿಯಾಗುವಷ್ಟು ನಿಶ್ಯಬ್ಧ.. ಭೂಲೋಕದ ಮಲ್ಟಿಪ್ಲೆಕ್ಸ್ ಥೀಯೇಟರ್ ತರಹ ಸೌಂಡ್ ಸಿಸ್ಟಮ್ ಬೇಕೇ ಆಗಿರಲಿಲ್ಲ.. ಅಷ್ಟು ಖಡಕ್ ಆಗಿತ್ತು ಅವರ ಧ್ವನಿ.. 

"ನಿಮಗೆಲ್ಲ ಒಂದು ಸಂತಸದ ವಿಚಾರ.. ನನ್ನ ಕುಟುಂಬದ ವಂಶವೃಕ್ಷ ದೊಡ್ಡದಾಗಿದೆ.. ಜಗದಗಲ ಪಸರಿಸಿದೆ.. ಕಳೆದ ಶನಿವಾರ ಊಟ ಮಾಡಿ ನೆಡೆಕೊಂತ ಹೋಗಿದ್ದ ನಾನು.. ಬಂದದ್ದು ಭಾನುವಾರ ಸಂಜೆ ಐದು ಘಂಟೆಗೆ ಅಲ್ವೇ.. "

ಎಲ್ಲರೂ ಅಭ್ಯಾಸವಾಗಿದ್ದ ಹಾಗೆ ತಲೆ ತೂಗಿದರು.. 

"ನಿಮಗೆಲ್ಲ ಅಚ್ಚರಿ / ಕುತೂಹಲ / ಪ್ರಶ್ನೆ ಇತ್ಯಾದಿ ಎಲ್ಲವೂ ಇದೆ ಅಂತ ನನಗೆ ಗೊತ್ತು.. .ಆದರೆ ನೀವೆಲ್ಲ ನನ್ನ ದನಿಗೆ ಹೆದರಿ.. ಏನೂ ಮಾತಾಡುತ್ತಿಲ್ಲ / ಕೇಳುತ್ತಿಲ್ಲ.. ಅದಕ್ಕೆ ನಾನೇ ಉತ್ತರ ಕೊಡುತ್ತಿದ್ದೇನೆ.. .. ಎಲ್ಲರೂ ಎದುರಿಗೆ ಇರುವ ಪರದೆಯನ್ನು ನೋಡಿ.. ಒಂದು ದಿನದ ಪೂರ್ತಿ ವಿವರ ನಾನೇ ಹೇಳುತ್ತಾ ನಿಮಗೆಲ್ಲ ವಿವರಿಸುತ್ತೇನೆ.. "

*******
ವಿಜಯನಗರದ ಸಾಮ್ರಾಜ್ಯದ ಶ್ರೀ ಕೃಷ್ಣದೇವರಾಯ.. ಸುಮಾರು ಐದು ಶತಮಾನಗಳ ಹಿಂದೆ ನಮ್ಮ ಗ್ರಾಮದ ಪೂರ್ವಜರಿಗೆ ಕೊಟ್ಟ ಸ್ಥಳವೇ ನಾ ಹುಟ್ಟಿ ಬೆಳೆದ ಊರು "ಕಿತ್ತಾನೆ"  ನನ್ನ ಮಕ್ಕಳು ಇರುವ ತನಕ ವರ್ಷಕ್ಕೊಮ್ಮೆ ಹೋಗಿ ಬರುತ್ತಿದ್ದೆ.. ಈಗ ನನ್ನೆಲ್ಲ ಮಕ್ಕಳು ನನ್ನ ಬಳಿಗೆ ಬಂದಿದ್ದಾರೆ.. ಈಗ ಹೋಗುವ ಅವಕಾಶವಿರಲಿಲ್ಲ.. ಆದರೆ ನನ್ನ ಮೊಮ್ಮಕ್ಕಳು ಒಂದಾಗಿ ಕೂಡಿ.. ಕುಟುಂಬ ಮಿಲನ ಕಾರ್ಯಕ್ರಮ ಮಾಡುತ್ತಿದ್ದಾರೆ ಎನ್ನುವ ವಿಷಯ ತಿಳಿದಾಗ.. ಬಲು "ಸಂತೋಷ"ವಾಯಿತು.. ಅದಕ್ಕೆ ನಿಮಗೆಲ್ಲ ಹೇಳದೆ ಮೆಲ್ಲನೆ ನಾನೇ ಹೋಗಿ ಬಂದೇ.. "

ಎಲ್ಲರೂ "ಹೋ ಹೋ" ಅಂತ ಕೂಗುತ್ತಾ "ನಾವು ಬರುತ್ತಿದ್ದೆವು.." ಎಂದಾಗ.. 

"ಸದ್ದು ಸದ್ದು" 

ಪಿನ್ ಡ್ರಾಪ್ ಸೈಲೆನ್ಸ್!!!!

"ನನ್ನ ಕುತೂಹಲ ತಣಿಸುವುದಕ್ಕಾಗಿ ನಾ ಹೋಗಿ ಬಂದೆ.. ಅದರ ವಿವರವನ್ನು ಈಗ ಕೊಡುತ್ತೇನೆ.. ಮುಂದಿನ ವರ್ಷವೂ.. ಮತ್ತೆ ಪ್ರತಿ ವರ್ಷವೂ ಈ ಕಾರ್ಯಕ್ರಮ ನೆಡೆಯುತ್ತೆ.. ಮುಂದಿನ ವರ್ಷ ನಾವೆಲ್ಲರೂ ಒಟ್ಟಿಗೆ ಹೋಗೋಣ ..ಈಗ ಕಾರ್ಯಕ್ರಮದ ವಿವರ.. ಅಲ್ಲೇ ನೋಡಿ ಪರದೆಯ ಮೇಲೆ.. ಚಿತ್ರ ಮೂಡುತ್ತಿದ್ದೆ ತಾನೇ.. "

ಎಲ್ಲರೂ ಮಂತ್ರ ಮುಗ್ಧರಾಗಿ ಪರದೆಯ ಮೇಲಿನ ಚಿತ್ರವನ್ನು ನೋಡುತ್ತಾ ಕೂತರು.. 

ಚುಮು ಚುಮು ಚಳಿ.. ಎಲ್ಲೆಡೆಯೂ ಮಂಜು ಮಂಜು.. ಹಳ್ಳಿಯ ಮರಗಿಡಗಳು ಮಂಜನ್ನು ಹೊದ್ದು ಮಲಗಿತ್ತು.. . 
ಅಲ್ಲೊಂದು ಇಲ್ಲೊಂದು ಹಕ್ಕಿಗಳು ಕೂಗುತಿತ್ತು... ವಸಂತಕಾಲ.. ಚಿಗುರು.... ಹಸಿರು.. ಉಸಿರು ತುಂಬಿಕೊಂಡಿದ್ದ ತರುಲತೆಗಳನ್ನು ನೋಡುತ್ತಾ ಹಳ್ಳಿದಾರಿಯಲ್ಲಿ ನೆಡೆಯುತ್ತಾ ಸಾಗಿದೆ.. ಕಳೆದ ಹಲವಾರು ವರ್ಷಗಳಲ್ಲಿ ನಾ ನೋಡಿದ ನನ್ನ ಹಳ್ಳಿ ತುಂಬಾ ಬದಲಾಗಿದೆ... ನೆಡೆಯುತ್ತಾ ಹೋದಂತೆ.. ಅರೆ.. ತುಂಬಾ ದೂರ ಇದೆಯಾ ಅಂತ ಅಕ್ಕ ಪಕ್ಕ ನೋಡಿದೆ.. ಮೈಲಿಗಲ್ಲು ಕಂಡೆ ಬಿಟ್ಟಿತು.. ಮನ ಪುಳಕಗೊಂಡಿತು.. ಅರೆ ಅನತಿ ದೂರದಲ್ಲಿಯೇ ಇದೆ ನನ್ನೂರು.. ನನ್ನ ಮನೆ.. ನನ್ನ ಬಾಂಧವರು.. ನನ್ನ ಬಳಗ.. ನನ್ನ ಮೊಮ್ಮಕ್ಕಳು....   ಅರೆ ವಾಹ್.. 
ನಾ ಓಡಾಡಿದ್ದ ಕೆರೆ ಏರಿಗೆ ಟಾರು ಬಂದಿದೆ.. ನಮ್ಮೂರಿಗೆ ಹೆಬ್ಬಾಗಲಾಗಿದ್ದ ಮರ ಹಾಗೆ ಇದೆ.. ನನ್ನ ಸ್ವಾಗತಿಸಲು.. ಹೂಗಳು ಅರಳಿವೆ.. ಅರೆ ಅರೆ ಇನ್ನೂ ನನ್ನೂರಿನಲ್ಲಿ ಸೌದೆ ಓಲೆ ಇದೆ.. ಚಿಮಣಿಯಿಂದ ಬರುವ ಹೊಗೆಯನ್ನು ನೋಡೋದೇ ಅಂದ.. 


ಮಕ್ಕಳಿಗೆ ಬೆಳೆಯಲು ಅನುಕೂಲವಾಗುವ ಹಾಲು ಕೊಡುವ ಎಮ್ಮೆಗಳು, ಎತ್ತುಗಳು, ಹಸ್ಸುಗಳು ಇವೆ.. ವಾಹ್ ಎಷ್ಟು ಸುಂದರ ನನ್ನ ಊರು.. ಅರೆ ಉಡುಸಲಮ್ಮ ದೇವಿಗೆ ಹೊಸ ದೇಗುಲವಾಗುತ್ತಿದೆ.. ಮುಂದಿನ ಬಾರಿ ನನ್ನ ಮಡದಿಯನ್ನು ಮಕ್ಕಳನ್ನು ಕರೆತರಬೇಕು.. 

ಹೀಗೆ ಮಾತಾಡುತ್ತಾ ಹೆಜ್ಜೆ ಹಾಕುತ್ತಾ ಬಂದೆ.. ನನ್ನ ದೊಡ್ಡ ಬಳಗದ ಹಾಜರಿ ಆಗಲೇ ಆಗಿತ್ತು.. ಎಲ್ಲರೂ ನಗು ನಗುತ್ತಾ ಮಾತಾಡುತ್ತಾ ಸ್ವಾಗತಿಸುತ್ತಿದ್ದರು.. ಊಟದ ಸಮಯಕ್ಕೆ ಎಲ್ಲರೂ ಸೇರಬೇಕು ಎನ್ನುವ ಮಾತಿನಂತೆ ಬಂದು ಸೇರುತ್ತಿದ್ದರು.. ಎಲ್ಲರೂ ಸೇರಿ ಆನಂದಮಯವಾಗಿ ಊಟ ಮಾಡೋದೆ ಸೊಗಸು.. ಎಲ್ಲರ ಮೊಗದಲ್ಲೂ ಆನಂದ.. ಏನೋ ಸಾಧಿಸಿದ, ಗಳಿಸಿದ ಹುಮ್ಮಸ್ಸು.. 

ಊಟ ಮುಗಿದು ಎಲ್ಲರೂ ಸುಖಾಸೀನರಾದ ಮೇಲೆ.. ಕಾರ್ಯಕ್ರಮದ ವಿವರವನ್ನು ಕೊಟ್ಟಿದ್ದು ನನ್ನ ಮರಿ ಮೊಮ್ಮಕ್ಕಳು.. ಅವರಿಗೆ ಮಾರ್ಗದರ್ಶಿಗಳಾಗಿ ನಿಂತದ್ದು ನನ್ನ ಮೊಮ್ಮಕ್ಕಳು.. ಒಬ್ಬೊಬ್ಬರು ಒಂದೊಂದು ಜವಾಬ್ಧಾರಿ ಹೊತ್ತು ಹಬ್ಬದ ಸಂಭ್ರಮವನ್ನೇ ಸೃಷ್ಟಿ ಮಾಡಿದ್ದರು.. ಪ್ರತಿ ಮನೆಗೂ ಮಾವಿನ ತೋರಣವಿರಲಿಲ್ಲ.. ಆದರೆ ಹಬ್ಬದ ಸಡಗರ ತುಂಬಿತುಳುಕುತ್ತಿತ್ತು... 


ಪ್ರಾರ್ಥನೆ ಗೀತೆ ಬಂತು.. ನನ್ನ ವಂಶಸದ ಆಲದ ಮರದ ಪರಿಚಯ.. ಸುಮಾರು ಐವತ್ತು ವರ್ಷಗಳ ಹಿಂದೆ ಊರು ಬಿಟ್ಟು ಬಂದಿದ್ದ ನನಗೆ ನನ್ನ ವಂಶದ ಮುಂದಿನ ತಲೆಮಾರನ್ನು ನೋಡುವ ತವಕ ಹೆಚ್ಚಾಗುತ್ತಿತ್ತು.. ವಿವರವನ್ನು ಹೇಳುತ್ತಿದ್ದಾಗ ಕಣ್ಣೀರಾದವರು ಕೆಲವರು.. ಸೋಜಿಗವಾಗಿ ನೋಡುತ್ತಿದ್ದವರು ಕೆಲವರು.. ಇದು ನಮ್ಮ ವಂಶ ಎಂದು ಗರ್ವದಿಂದ ನಿಂತಿದ್ದವರು ಕೆಲವರು..  ನನ್ನ ಕುಟುಂಬದ ಪ್ರತಿಯೊಬ್ಬರೂ ಪಾದರಸದ ಚಟುವಟಿಕೆಯಿರುವ ಚಿನ್ನ ಚಿನ್ನ.. " ಹೇಳುತ್ತಾ ಹೇಳುತ್ತಾ ಕಣ್ಣುಗಳು ತುಂಬಿ ಬಂದಿದ್ದವು .. ಅರೆ ಘಳಿಗೆ ಮೌನ.. ಮಾತಿಲ್ಲ..  

ಒಂದು ಹೆಣ್ಣು ಧ್ವನಿ .. "ರೀ ಮುಂದೆ ಹೇಳಿ.. " ತಿರುಗಿ ನೋಡಿದರೆ.. ಅಕ್ಕ ಅಲಿಯಾಸ್ ಲಕ್ಷ್ಮಿ ದೇವಮ್ಮನವರು.. 

"ಓ ಭಾವುಕನಾಗಿಬಿಟ್ಟಿದ್ದೆ.. ಸರಿ ಸರಿ.. ಮುಂದಕ್ಕೆ ಹೇಳುತ್ತೇನೆ.. "

"ನನ್ನ ಮೇಲೆ ಹಾಡು ಕಟ್ಟಿ.. ಅದಕ್ಕೆ ರಾಗ ಹಾಕಿ ಹಾಡಿದಾಗ.. ನಾ ಇಲ್ಲಿಯೇ ಇದ್ದು ಬಿಡಬಾರದೇ ಎನ್ನಿಸಿತು ..ಸೊಗಸಾಗಿತ್ತು ಆ ಹಾಡು.. " 

"ನಂತರ ಎಲ್ಲರನ್ನು ಹಿಡಿದಿಡುವುದು ಸುಲಭದ ಮಾತಲ್ಲ.. ಎಲ್ಲ ರೀತಿಯ ಚಟುವಟಿಗೆಗಳು ಬೇಕಿತ್ತು.. ಅದಕ್ಕಾಗಿ ನಾವೆಲ್ಲಾ ಬಾಲ್ಯದಲ್ಲಿ ಆಡಿದ್ದ ಲಗೋರಿ ಆಟದ ಸ್ಪರ್ಧೆ ಆಯೋಜಿಸಿದ್ದರು.. ಹಿರಿಯರು ಕಿರಿಯರು ಎನ್ನದೆ ಎಲ್ಲರೂ ಭಾಗವಹಿಸಿ ಅಕ್ಷರಶಃ ಮಕ್ಕಳೇ ಆಗಿಬಿಟ್ಟಿದ್ದರು.. ಬಾಲ್ಯದ ತುಂಟತನ, ಕಾಲು ಎಳೆದಾಟ, ಗೆಲ್ಲಲೇ ಬೇಕೆಂಬ ಛಲ.. ವಾಹ್. .. ದೊಡ್ಡವರಲ್ಲಿ ಮಕ್ಕಳ ಮನಸ್ಸು ನೋಡಬೇಕೆ.. ಬಾಲ್ಯದ ಆಟವಾಡಿ.. ಲಗೋರಿ, ಚಿನ್ನಿದಾಂಡು,ಮರಕೋತಿ, ಕುಂಟೆಬಿಲ್ಲೆ.." 

"ಅಣ್ಣ ಮುಂದಕ್ಕೆ ಹೇಳಿ.. " ಶಂಕರಪ್ಪ ನವರ ಮೆಲ್ಲನೆ ಹೇಳಿದರು.. 

"ಕುಶಿಯಾಗಿದ್ದೀನಿ.. ಅಲ್ಲೇ ಒಂದೆರಡು ನಿಮಿಷ ಅದರ ಬಗ್ಗೆ ಹೇಳೋಣ ಅಂದ್ರೆ.... ಸರಿ ಕಣಪ್ಪ.. ಮುಂದೆ.. ಲಗೋರಿ ಆಟ ಮುಗೀತು.. ಅದರಲ್ಲಿ ಗೆದ್ದವರು ಹಿಪ್ ಹಿಪ್ ಹುರ್ರೇ ಎಂದು ಕೂಗುತ್ತ ಸಂಭ್ರಮಿಸಿದರು.. 

ಆಟದ ಬಿಸಿ ಕಡಿಮೆಯಾಗಿರಲಿಲ್ಲ.. ಆದರೆ ಮೆಣಸಿನ ಕಾಯಿ ಬಜ್ಜಿಯ ಬಿಸಿ ಎಲ್ಲರನ್ನೂ ಕರೆದಿತ್ತು.. ರುಚಿ ರುಚಿಯಾದ ಬಜ್ಜಿಅನ್ನಿಸಿತು .. ಬಿಸಿ ಬಿಸಿ ಖಾರ ಖಾರ.. ನಾನೂ ಒಂದು ಕೈ ನೋಡಿಯೇ ಬಿಡೋಣ ಅಂತ ಬೋಂಡಾದ ತಟ್ಟೆಗೆ ಕೈ ಹಾಕಿದೆ.. ಅರೆ ಬರುತ್ತಲೇ ಇಲ್ಲ.. ಆಮೇಲೆ ಗೊತ್ತಾಯಿತು.. ನಾ ಇಲ್ಲಿ ಬಂದು ನೋಡಬಹುದೇ ವಿನಃ.. ಯಾವುದನ್ನು ಮುಟ್ಟಲು ಆಗೋಲ್ಲ ಅಂತ.. 

ನನ್ನ ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು, ನನ್ನ ಶಂಕರನ ಹೆಂಡತಿ ಎಲ್ಲರೂ ನಾಟಕದ ಪದಗಳು, ಭಕ್ತಿ ಗೀತೆ, ಭಜನೆ, ಹಿಂದಿ ಹಾಡು, ದೇವರ ನಾಮಗಳನ್ನು ಹಾಡಿದಾಗ, ಮರಿ ಮೊಮ್ಮಕ್ಕಳು ಮಾಡಿದ ನೃತ್ಯ ಸೊಗಸಾಗಿತ್ತು .. ಅದನ್ನೆಲ್ಲ ನೋಡಿದಾಗ ಛೆ ನನ್ನ ಮೊಬೈಲ್ ತಂದಿದ್ದರೆ .. ಅದನ್ನೆಲ್ಲ ರೆಕಾರ್ಡ್ ಮಾಡಿ ನಿಮಗೆಲ್ಲ ಕೇಳಿಸಬಹುದು ಅನ್ನಿಸಿತು..  ಆದರೆ.. ಹೋಗಲಿ ಬಿಡಿ.. ಮುಂದಿನ ವರ್ಷ ಇನ್ನೂ ಭರ್ಜರಿಯಾಗಿ ಮಾಡುತ್ತಾರೆ.. ಆಗ ಜಮಾಯಿಸಿ ಬಿಡೋಣ.. ಏನಂತೀರಾ"

"ಹೋ ಹೊ.. ಆಗಲಿ" ಎನ್ನುತ್ತಾ ಎಲ್ಲರೂ ಕೂಗಿದರು... 
"ಅಣ್ಣ.. ಕಾಯೋಕೆ ಆಗ್ತಿಲ್ಲ.. ಬೇಗ ಬೇಗ ಹೇಳಿ.." ಚೆಲುವಮ್ಮನವರು ಮೆಲ್ಲನೆ ತನ್ನ ಅಮ್ಮನ ಮಡಿಲಲ್ಲಿ ಮಲಗಿಕೊಂಡು ಹೇಳಿದರು.. 

"ಹೂ ಕಣಮ್ಮ ಮುಂದಕ್ಕೆ ಹೇಳ್ತೀನಿ.. ಇಲ್ಲಿವರೆಗೂ ಜೇನಿನ ಧಾರೆಯಾಗಿ.. ಹರಿಯುತ್ತಿದ್ದ ಕಾರ್ಯಕ್ರಮಕ್ಕೆ ಹಠಾತ್ ವೇಗ ತಂದುಕೊಟ್ಟವರು ತುಂಡು ಹೈಕಳು.. ಪರ ಪರ ಅನ್ನೋ ರೀತಿಯಲ್ಲಿ ವೇಗದ ಗೀತೆಗಳನ್ನು ಹೇಳುತ್ತಾ ಎಲ್ಲರಿಗೂ ಖುಷಿ ಕೊಟ್ಟರು.. "


ಅಷ್ಟೊತ್ತಿಗೆ ಊಟದ ಸಮಯವಾಗಿತ್ತು .. ಊಟ ಮಾಡಿ ನಿದ್ದೆ ಮಾಡೋಕೆ ಹೋದವರು ಕೆಲವರು.. ಇನ್ನೂ ಮರಿ ಮೊಮ್ಮಕ್ಕಳಿಗೆ ಸಮಾಧಾನವಾಗಿರಲಿಲ್ಲ ..ಅಂತ್ಯಾಕ್ಷರಿ.. ಸನ್ನೆಯಿಂದ ಪದಗಳನ್ನು ಕಂಡು ಹಿಡಿಯುವುದು.. ಹೀಗೆ ಇನ್ನೊಂದು ಘಂಟೆ ಆಟವಾಡಿದರು.. ಎಲ್ಲರಿಗೂ ಬೆಳಗ್ಗೆ ಮತ್ತೆ ಇನ್ನೊಂದು ಸುಂದರ ದಿನದ ಕನಸ್ಸು ನನಸಾಗುವ ಆಶಾ ಭಾವ ಹೊತ್ತು ಮಲಗಿದರು .

ನಾನೂ ಕೇಶವ ದೇವರ ಗುಡಿಗೆ ನಮಸ್ಕಾರ ಹಾಕಿ.. ಗರ್ಭಗುಡಿಯ ಒಳಗೆ ಇದ್ದ ಕೇಶವನೊಡಲ ಸೇರಿಕೊಂಡೆ. 

ಬೆಳಿಗ್ಗೆ ಎದ್ದು ಬಂದರೆ.. ನಾ ಓಡಾಡಿದ ರಸ್ತೆಯಲ್ಲಿ ಚಿತ್ತಾರಗಳ ಮಳೆಯೇ ಸುರಿದಿತ್ತು .. ಚಿತ್ತಾಕಾರದ ರಂಗವಲ್ಲಿಯೊಳಗೆ ಮೂಡಿ ಬಂದದ್ದು ಜೀವನ ಬೆಸೆಯುವ ರೇಖೆಗಳು, ಹನುಮ, ಗಣಪತಿ .. ಒಂದೊಂದು ಸುಂದರ ಕಲಾಕೃತಿ.. ರಂಗವಲ್ಲಿ ಸ್ಪರ್ಧೆ ನಿಜಕ್ಕೂ ಅದ್ಭುತವಾಗತ್ತು .. ಸಮಯ ಸಿಕ್ಕಿದ್ದರೆ.. ಇಡೀ ಬೀದಿಯನ್ನೇ ವರ್ಣಮಯ ರಂಗೋಲಿ ಮಾಡುವ ಹುಮ್ಮಸ್ಸಿತ್ತು ಎಲ್ಲರಲ್ಲಿ.. 

ಉಪಹಾರದ ಸಮಯ.. ನಂತರದ್ದೇ ಇನ್ನೂ ಸೊಗಸು... ಶ್ರೀ ಕೃಷ್ಣದೇವರಾಯ ಬಳುವಳಿಯಾಗಿ ಕೊಟ್ಟ ಊರು ನಮ್ಮ ಕಿತ್ತಾನೆ ಎನ್ನುವ ತಾಮ್ರ ಪಟ್ಟಿ ಅದನ್ನು ಹಳೆಯ ದೇವನಾಗರಿ ಭಾಷೆಯಲ್ಲಿ ಇದ್ದರೂ, ಅದರ ಮುಖ್ಯ ಭಾಗವನ್ನು ತರ್ಜುಮೆ ಮಾಡಿ.. ಎಲ್ಲರಿಗೂ ಹೇಳಿದ ನನ್ನ ಮೊಮ್ಮಗ.. ಎಲ್ಲರೂ ಸಂಭ್ರಮಿಸಿದರು.. ಫೋಟೋತೆಗೆದುಕೊಂಡರು . ಕರುನಾಡಿನ ಗೆಜೆಟ್ನಲ್ಲಿಯೂ ಇದರ ಉಲ್ಲೇಖವಿದೆಯೆಂದಾಗ ಮನಸ್ಸು ಕುಣಿಯಿತು.. 

ಮತ್ತೆ ಆಟದ ಸಮಯ..ಕಲ್ಲಾಟ, ಚೌಕಾಭಾರಹ್, ಪಗಡೆ ಎಲ್ಲರೂ ಮತ್ತೆ ಮಕ್ಕಳಾದರು.. 
ನಿನ್ನೆ ವಂಶ ವೃಕ್ಷದ ಪರಿಚಯ ಎಲ್ಲರಿಗೂ ಮಾಡಿಕೊಟ್ಟಿದ್ದರಲ್ಲ.. ಅದನ್ನು ಪರೀಕ್ಷಿಸುವ ಆಟ.. ಶುರುವಾಯಿತು.. ಏಳೆಂಟು ಪ್ರಶ್ನೆಗಳಿಗೆ ಉತ್ತರ ಆ ವಂಶವೃಕ್ಷದಲ್ಲಿಯೇ ಅಡಗಿತ್ತು.. ಜೊತೆಯಲ್ಲಿ ಹಿರಿಯರನ್ನು ಗೌರವಿಸುವ, ಕಿರಿಯರಿಗೆ ಹಿರಿಯರನ್ನು ಪರಿಚಯಿಸುವ ಕಾರ್ಯಕ್ರಮವಾಯಿ ಹೊಮ್ಮಿ ಬಂದಿತ್ತು.. ಈ ನಿಧಿ ಹುಡುಕಾಡುವ ಆಟ.. ನಿಜಕ್ಕೂ ಈ ಆಟ ನಿಧಿ ಹುಡುಕುವ ಆಟವೇ.. ಎಷ್ಟೋ ನಂಟು ಬೆಸೆಯುವ ಈ ಆಟಗಳು ನೂರಕ್ಕೆ ನೂರು ಬಂಧವನ್ನು ಬೆಸೆಯುವ ರೀತಿ ಸೋಜಿಗವೆನಿಸುತ್ತದೆ.. 

ಎಲ್ಲರನ್ನೂ ಒಂದೇ ಅಂಗಳದಲ್ಲಿ ನಿಲ್ಲಿಸಬೇಕೆನ್ನುವ ಈ ಆಶಯದಲ್ಲಿ ಸ್ಪರ್ಧೆಗಳು ಕೇವಲ ಸ್ಪರ್ಧೆಗಳು ಮಾತ್ರವಾಗದೆ.. ಎಲ್ಲರನ್ನೂ ಬೆಸೆಯುವ ಕೊಂಡಿಯಾಗಿತ್ತು.. ಸ್ಪರ್ಧೆಗಳಲ್ಲಿ ಗೆದ್ದವರಿಗೆ ಸಾಂಕೇತಿಕವಾಗಿ ಬಹುಮಾನವನ್ನು ನನ್ನ ಮೊಮ್ಮಕ್ಕಳ ಮೂಲಕ ಕೊಡಿಸಿದರು.. ಎಲ್ಲರ ಮನಸ್ಸು ಹಾಯ್ ಹಾಯ್ ಎನ್ನುತ್ತಿದ್ದಾಗ ನನ್ನ ಮನಸ್ಸು ಭಾರವಾಗುತ್ತಾ ಹೋಯಿತು.. ಅರೆ ಎಲ್ಲರೂ ಹೊರಡುತ್ತಾರೆ.. ಅನಿಸಿದರೂ.. ಮುಂದಿನ ಬಾರಿ ಇನ್ನಷ್ಟು ಬಳಗ ಬಂದು ಸೇರಿ.. ಇನ್ನೂ ದೊಡ್ಡ ಮಟ್ಟಕ್ಕೆ ಸಾಗುತ್ತದೆ ಎನ್ನುವ ಆಶಯ ಹೊತ್ತು ಎಲ್ಲರೂ ಹೊರಡಲು ಅನುವಾದರು.. ಅಷ್ಟರಲ್ಲಿ ಒಂದು ಮ್ಯಾಜಿಕ್ ನೆಡೆಯಿತು.. 

ನನ್ನ ಜೀವಮಾನದಲ್ಲಿ ಈ ಕ್ಯಾಮೇರಾ ಸರಿಯಾಗಿ ನೋಡಿದವನಲ್ಲ.. ಮುಸುಕು ಹಾಕಿಕೊಂಡು ಚಿತ್ರಗಳನ್ನು ತೆಗೆಯುವ ಆ ಜಾದೂ ಪೆಟ್ಟಿಗೆಯಲ್ಲಿ ನಾ ಮೂಡಿ ಬಂದಿದ್ದೇನೋ ಇಲ್ಲವೋ ಗೊತ್ತಿಲ್ಲ.. ಆದರೆ ನನ್ನ ಪ್ರತಿರೂಪಿಯನ್ನು ಚಿತ್ರಿಸಿದ ಈ ನೈಪುಣ್ಯಕ್ಕೆ ಭಲೇ ಭಲೇ ಎಂದಿತು.. ನೋಡ್ರಪ್ಪಾ.. ನಾ ಹೆಚ್ಚು ಕಮ್ಮಿ ಹೀಗೆ ಇದ್ದೆ ನನ್ನ ಪ್ರಾಯದಲ್ಲಿ.. 


ಎಲ್ಲರೂ ಹೊರಟರು.. ದಾರಿ ಬುತ್ತಿ ಕಟ್ಟಿಕೊಂಡು ಎಲ್ಲರೂ ಕೆರೆಯ ಏರಿ ಮೇಲೆ ಹೋಗುತ್ತಾ ಒಮ್ಮೆ ತಿರುಗಿನೋಡಿದಾಗ ಮಗುವನ್ನು ಎತ್ತಿಕೊಂಡು ಸಂತೈಸುವ ತಾಯಿಯ ಚಿತ್ರ ನನ್ನ ಕಣ್ಣ ಮುಂದೆ ಬಂತು.. ಕಣ್ಣು ತುಂಬಿದವು.. ಮೆಲ್ಲನೆ ನನ್ನ ಉತ್ತರೀಯದಲ್ಲಿ ಒರೆಸಿಕೊಂಡು.. ಕೇಶವ ದೇವರ ಗುಡಿಯತ್ತ ಹೆಜ್ಜೆ ಹಾಕುತ್ತಾ ಇಲ್ಲಿಗೆ ಬಂದೆ.. 

ನನಗೆ ಗೊತ್ತು.. ನಿಮಗೆ ಇನ್ನೂ ಸಂಧಾನವಾಗಿಲ್ಲ ಅಂತ.. ಅದಕ್ಕೆ ಈ ಕಾರ್ಯಕ್ರಮದ ಚಿತ್ರಗಳನ್ನೆಲ್ಲ ಈ ಕೊಂಡಿಯಲ್ಲಿ ತುಂಬಿಸಿಕೊಂಡು ತಂದಿದ್ದೇನೆ. .ನೋಡಿ ಖುಷಿ ಪಡಿ.. ಮತ್ತೆ ಮುಂದಿನ ವರ್ಷ ನಾವೆಲ್ಲರೂ ಒಟ್ಟಿಗೆ ಹೋಗಿ ಸಂಭ್ರಮಿಸೋಣ. ಏನಂತೀರಾ.. !!!


ಖಂಡಿತ.. ಹೋಗೋಣ..!!!

****

"ತಾತಾ ನಾವೂ ನಿಮ್ಮ ಆಶೀರ್ವಾದ ಪಡೆಯಲು ಮುಂದಿನ ವರ್ಷ ಕಾಯುತ್ತಿರುತ್ತೇವೆ.. ನಿಮ್ಮ ಪರಿವಾರ ಸಮೇತರಾಗಿ ಬಂದು ಆಶೀರ್ವದಿಸಿ ಹರಸಿ.. ನಿಮ್ಮ ಹರಕೆ ನಮ್ಮ ಮುಂದಿನ ಏಳು ತಲೆಮಾರುಗಳನ್ನು ಕಾಯುವ ವಜ್ರ ಕವಚ.. ಯಾಕೆ ಗೊತ್ತೇ ನಿಮ್ಮ ಬ್ರಾಂಡ್ ಯಾವುದು ಹೇಳಿ.."

"ಯಾವುದಪ್ಪಾ ನನ್ನ ಬ್ರಾಂಡ್" 

"ಈ ಚಿತ್ರ ನೋಡಿ ತಾತಾ"

"ಹ ಹ ಹ ಹ" ಭುವಿಯೇ ಅಲ್ಲಾಡುವಂಥಹ ನಗು.. "ಸರಿಯಾಗಿ ಹೇಳಿದೆ.. ಬೈ ಗಯ್ಸ್.. "  ಎಂದು ಹೇಳುತ್ತಾ ಬಾನಲ್ಲಿ ನಕ್ಷತ್ರವಾಗಿದ್ದ ತಾತಾ ಒಂದು ಕಣ್ಣು ಹೊಡೆದು ಮತ್ತೆ ಮುಗುಳುನಕ್ಕರು. 

ಶ್ರೀ ಬೊಬ್ಬೆ ರಾಮಯ್ಯ ವಂಶದ ಕೆಲವು ಕುಡಿಗಳು 


Wednesday, February 7, 2018

"ಸವಿ" ನೆನಪುಗಳು ಬೇಕು

"ಅಪರಿಚಿತ" ಇದು ಒಂದು ಅದ್ಭುತ ಕುತೂಹಲಭರಿತ ಚಿತ್ರ.. ನನ್ನ ಪ್ರಕಾರ ಈ ರೀತಿಯ ಚಿತ್ರ ಇದೆ ಮೊದಲು ಮತ್ತು ಇದೆ ಕಡೆ.. ಯಾಕೆಂದರೆ.. ಈ ಚಿತ್ರದಲ್ಲಿ  ತರ್ಕಕ್ಕೂ ಉತ್ತರಿವಿದೆ. ಪ್ರತಿಯೊಂದನ್ನು  ಹತ್ತಿಯ ಎಳೆ ಬಿಡಿಸಿದ ಹಾಗೆ ಬಿಡಿಸಿಟ್ಟಿದ್ದಾರೆ ಮತ್ತು ಚಿತ್ರ ನೋಡಿ ಹೊರಬಂದ ಮೇಲೆ ಅನುಮಾನ ಇರುವುದೇ ಇಲ್ಲ..

ಈ ಚಿತ್ರದ ಒಂದು ಅತ್ಯುತ್ತಮ ಗೀತೆ ಶ್ರೀ ಪಿ ಆರ್ ರಾಮದಾಸು ನಾಯ್ಡು ಅವರ ಸಾಹಿತ್ಯ, ಶ್ರೀ ಎಲ್ ವೈದ್ಯನಾಥನ್ ಅವರ ಸಂಗೀತದಲ್ಲಿ ನನ್ನ ನೆಚ್ಚಿನ ಗಾಯಕಿಯರಲ್ಲಿ ಒಬ್ಬರಾದ ಶ್ರೀಮತಿ ವಾಣಿಜಯರಾಂ ಸುಶ್ರಾವ್ಯವಾಗಿ ಹಾಡಿರುವ ಗೀತೆ..

ಯಾಕೋ ಗೊತ್ತಿಲ್ಲ ಸುಮಾರು ದಿನಗಳಿಂದ ಈ ಹಾಡು ಕಾಡುತ್ತಿತ್ತು.. ಇದಕ್ಕೊಂದು ಸುಂದರ ಸ್ಪರ್ಶ ಕೊಡೋಣ ಅನ್ನಿಸಿತು.. ಇದರ ಫಲಶ್ರುತಿ ಈ ಲೇಖನ..

ಮೂರು ಅದ್ಭುತ ಆತ್ಮಗಳಿಗೆ ನಮನ ಸಲ್ಲಿಸುತ್ತಾ ಈ ಲೇಖನ ನಿಮ್ಮ ಮುಂದೆ..

                                                        ******

ಒಂದು ಮುದ್ದಾದ ಜೋಡಿ ಸಾಗರದ ಅಲೆಗಳನ್ನು ನೋಡುತ್ತಾ ಮಾತಾಡುತ್ತಿತ್ತು.. ಕಡಲಿನ ಅಬ್ಬರ ಅವರುಗಳ ಮಾತುಗಳಿಗೆ ಅಡ್ಡಿ ಬರುತ್ತಿರಲಿಲ್ಲ..

ಶ್ರೀಧರ್ ಹೇಳುತ್ತಿದ್ದ "ಸವಿ ನೆನಪುಗಳು ಬೇಕು ಸವಿಯಲಿ ಬದುಕು..ಅಲ್ವೇನೋ ಕವಿ"
ಅಲ್ಲಿಯ ತನಕ ಕವಿತಾ ಒಬ್ಬಳೇ ಮಾತಾಡುತ್ತಿದ್ದಳು.. ಅಚಾನಕ್ ಅದನ್ನು ತುಂಡರಿಸಿ ಶ್ರೀಧರ್ ಮಾತಾಡಿದ್ದು.. ಅವಳಿಗೆ ಅಚ್ಚರಿಗಿಂತ ಖುಷಿಯಾಯಿತು.. ಎರಡು ಕೈ ಸೇರಿದರೆ ಅಲ್ಲವೇ ಚಪ್ಪಾಳೆ..

"ಹೌದು ಸಿಡ್ .. ಆದರೆ
ಕಹಿ ನೆನಪು ಸಾಕೊಂದು ಮಾತಲಿ ಬದುಕು
ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲ
ಕಾಡುತಿದೆ ಮನವ.. ಏನು ಮಾಡೋದು.. ಜಗತ್ತಿನಲ್ಲಿ ನಮ್ಮ ದಾರಿಯಲ್ಲಿ ಸಿಕ್ಕವನ್ನು ನೋಡುತ್ತಾ ನಲಿಯುತ್ತ ಸಾಗುತ್ತಿರಬೇಕು"

"ನಿಜ ಕವಿ ಸವಿ ನೆನಪುಗಳು ಬೇಕು ಸವಿಯಲಿ ಬದುಕು.. ಆ ನೆನಪುಗಳೇ ನಮ್ಮ ಬದುಕಿಗೆ ಬುನಾದಿ.. ಮತ್ತು ಸ್ಫೂರ್ತಿ.. "

"ನಿನ್ನ ನಾ ಪ್ರೀತಿ ಮಾಡಲು ಶುರುಮಾಡಿದಾಗ ಮನದಲ್ಲಿ ಆಗುತ್ತಿದ್ದ ಭಾವನೆಗಳು ಸೂಪರ್ ಇರುತ್ತಿದ್ದವು.. ಮನದಲ್ಲಿ ಹಾಗೆ ಪದಗಳು ತೇಲಿ ಬರುತ್ತಿದ್ದವು ಪ್ರಿಯತಮನ ಒಲವಿಂದ ಕನಸುಗಳು ಮೂಡಿ..
                                      ಇನಿಯನ ಎದೆಗೊರಗಿ ಆಸರೆಯ ಬೇಡಿ
                                      ಸರಸ ಸವಿಯ ಬಯಸಿದೆನು ನಾನು.. "

"ಹೌದು ಕಣೋ .. ಪ್ರೀತಿಯಲ್ಲಿ ಸರಸವೂ ಇರುತ್ತದೆ.. ವಿರಸವೂ ಇರುತ್ತದೆ.. ನೀ ನನ್ನ ಎದೆಗೊರಗಿ ಮಾತಾಡುತ್ತಿದ್ದಾಗ ಖುಷಿಯಾಗುತ್ತಿತ್ತು.. ನೀ ಹೊರಡುವೆ ಎಂದಾಗ ನನ್ನ ಮನಸ್ಸು ಹೇಳುತ್ತಿತ್ತು ವಿರಹ ವಿಫಲ ಫಲಿಸಿದವು ನನಗೆ

"ನಿನ್ನ ಎದೆಗೊರಗಿದಾಗ ನಿನ್ನ ಹೃದಯದ ಬಡಿತ ಕವಿ ಕವಿ ಎನ್ನುವಾಗ ಮನಸ್ಸಿಗೆ ಉಲ್ಲಾಸ.. ನಾಲಿಗೆಯಲ್ಲಿ ಅದೇ ಗಾನ ಮೂಡುತ್ತಿತ್ತು.. ಒಮ್ಮೆ ಹೇಳಲೇ ಗೆಳೆಯ.. "

"ಖಂಡಿತ ಕಣೋ.. ನಾವಿಬ್ಬರೂ ಮದುವೆಯಾಗಿ ದಶಕ ಕಳೆದಿದೆ .. ಮಗನಿದ್ದಾನೆ.. . ಆದರೂ ನಾವು ಪ್ರೇಮಿಗಳೇ.. ಪ್ರೇಮಕ್ಕೆ ಪ್ರೀತಿಗೆ ವಯಸ್ಸಿಲ್ಲ.. ಮುಪ್ಪಿಲ್ಲ.. "

"ಇನಿಯನ ಎದೆ ಬಡಿತ ಗುಂಡಿನ ಧನಿಗೆರೆದು 
ಮಾಸುತಿದೆ ಕನಸು 
ಸವಿ ನೆನಪುಗಳು ಬೇಕು ಸವಿಯಲೆ ಬದುಕು"

"ವಾಹ್ ಸೂಪರ್ ಕಣೋ.. ಈ ಕಡಲಿನ ಮೊರೆತ.. ಈ ತರಂಗಗಳು ತರುವ ತಂಗಾಳಿ.. ಮನಸ್ಸಿಗೆ ಎಷ್ಟು ಮುದಕೊಡುತ್ತದೆ.. ಈ ತಂಗಾಳಿಗಳು ಹೊತ್ತು ತರುವ ಆ ದಿನಗಳ ನೆನಪು ಸದಾ ಹಸಿರು.. "

"ಕವಿ ನಿನಗೆ ನೆನಪಿದೆಯಾ.. "

"ಸಿಡ್ ನಿನ್ನ ಜೊತೆ ಕಳೆದ ಪ್ರತಿಕ್ಷಣವನ್ನೂ ನೆನಪಿನ ಪುಟಗಳಲ್ಲಿ ಸೆರೆ ಹಿಡಿದು ಇಟ್ಟಿದ್ದೇನೆ.. ಹೇಳು"

"ನಾವಿಬ್ಬರೂ ಪರಿಚಯವಾದ ಮೇಲೆ .. ನೀ ನಮ್ಮ ಮನೆಗೆ ಬಂದಿದ್ದೆ.. ಆಗ ನಾನೊಬ್ಬನೇ ಇದ್ದೆ.. ಅಪ್ಪ ಅಮ್ಮ ಊರಿಗೆ ಹೋಗಿದ್ದರು.. ಹಾಗಾಗಿ ನೀ ಧೈರ್ಯ ಮಾಡಿ ನಮ್ಮ ಮನೆಗೆ ಬಂದಿದ್ದೆ.. ಆಗ ನಾ ನನ್ನ ಇಷ್ಟವಾದ ಅಪರಿಚಿತ ಸಿನಿಮಾ ನೋಡುತ್ತಿದ್ದೆ.. ನಿನಗೂ ಈ ಚಿತ್ರ ಬಲು ಇಷ್ಟ . ನೀ ಹೇಳಿದ ಸಮಯಕ್ಕಿಂತ ತಡವಾಗಿ ಬರುತ್ತೇನೆ ಎಂದು ಮೆಸೇಜ್ ಕಳಿಸಿದ ಮೇಲೆ .. ಇನ್ನೇನು ಮಾಡಲಿ ಎಂದು ಆ ಚಿತ್ರವನ್ನು ನೋಡುತ್ತಿದ್ದೆ.. ನೀ ಬರುವ ಹೊತ್ತಿಗೆ ನಾ ಆಗಲೇ ಅರ್ಧ ಸಿನಿಮಾ ನೋಡಾಗಿತ್ತು ಆದರೂ.. ಮತ್ತೆ ನಿನಗೋಸ್ಕರ ಮೊದಲಿಂದ ನೋಡಲು ಶುರುಮಾಡಿದೆವು.. ನೀ ಚಿತ್ರದ ಪ್ರತಿದೃಶ್ಯವನ್ನು ಅನುಭವಿಸಿ ನೋಡುತ್ತಿದ್ದದು ನನಗೆ ಖುಷಿ ಕೊಡುತ್ತಿತ್ತು.. ಪ್ರತಿಯೊಂದು ವಿಭಾಗದಲ್ಲಿಯೂ ಈ ಚಿತ್ರದ ತಂಡ ಸೊಗಸಾಗಿ ಕೆಲಸ ಮಾಡಿತ್ತು.. "

"ಹೌದು ಕಣೋ.. ಕಾರಣ ಗೊತ್ತಿಲ್ಲ.. ಈ ಚಿತ್ರ ನನಗೂ ತುಂಬಾ ಇಷ್ಟ.. ಒಳ್ಳೆ ಸಸ್ಪೆನ್ಸ್ ಚಿತ್ರ ಇದು.. ಕಾಶೀನಾಥ್  ಅವರ ಅತ್ಯುತ್ತಮ ಚಿತ್ರವಿದು.. "

"ಕವಿ ನನಗೆ ಒಂದಾಸೆ.. ಈ ಚಿತ್ರದ ಒಂದು ಹಾಡನ್ನು ನನಗೋಸ್ಕರ ಹಾಡುತ್ತೀಯ ಪ್ಲೀಸ್.. "

"ಹಾಡೋಕೆ ನನಗೆ ಬರೋಲ್ಲ.. ನೀನೆ ಅದಕ್ಕೆ ಒಂದಷ್ಟು ಪದ ಸೇರಿಸಿ ಕಥೆ ಮಾಡಿಬಿಡು.. ನಾವಿಬ್ಬರೂ ಓದೋಣ.. ನಲಿಯೋಣ.. "

ಇಲ್ಲಿ ಯಾರು ಸೋತರು ಅಂತ ಹೇಳಬೇಕೇ.. ಪ್ರೀತಿಯಲ್ಲಿ ಪ್ರೇಮದಲ್ಲಿ ಸೋಲಿಲ್ಲ.. ಬದಲಿಗೆ ಒಬ್ಬರ ಗೆಲುವು ಇನ್ನೊಬ್ಬರ ಗೆಲುವು.. ಒಬ್ಬರ ಸೋಲು.. ಇಬ್ಬರ ಸೋಲು.. ಹಾಗಾಗಿ ಸಿಡ್ ಹೇಳಿದ..

"ನೋಡು ಕವಿ.. ನಮಗೆ ಗೊತ್ತಿಲ್ಲದೇ ಈ ಹಾಡಿನ ಸಾಹಿತ್ಯವನ್ನು ನಮ್ಮ ಸಂಭಾಷಣೆಯಲ್ಲಿ ಸೇರಿಸಿಬಿಟ್ಟಿದೇವೆ..ಇನ್ನು ಉಳಿದಿರೋದು ನಾಲ್ಕೈದು ಸಾಲುಗಳು ಅಷ್ಟೇ.. ಅದನ್ನೇ ಇಲ್ಲಿ ಹಾಕಿ ಬಿಡುತ್ತೇನೆ.. ಅದನ್ನು  ಇಬ್ಬರೂ ಮತ್ತೆ ಮೊದಲಿಂದ ಓದೋಣ.. ಸರಿ ನಾ.. "

"ಮುದ್ದು ಕಣೋ ನೀನು.. ಸೂಪರ್ ಶುರು ಹಚ್ಚಿಕೋ.. "

"ಕಡಲಿನ ತರಂಗಗಳು ಹೊತ್ತು ತರುತ್ತಿದ್ದ ಗಾಳಿಯನ್ನು ನೋಡಿ.. ಮನಸ್ಸಿನಲ್ಲಿ ಮೂಡಿದ ಮಾತುಗಳು
ಬೀಸುತಿಹ ತಂಗಾಳಿ ಬಿಸಿಯಾಗಿ ಕಾಡಿ
ನೆನಪಿನ ಭೀತಿಯಲಿ ನಾ ಬಂಧಿಯಾಗಿ
ಮನಸು ಹೃದಯ ನೊಂದು ನೋವಾಗಿದೆ
ಒಲವು ನಲಿವು ಮೂಡಿ ಮಸಕಾಗಿದೆ"

"ಯಾಕೋ ಸಿಡ್ ಏನಾಯಿತು... "

"ಏನಿಲ್ಲ ಕಣೋ.. ಈ ಕಡಲಿನ ತರಂಗಗಳು ಹೊತ್ತು ತರುವ ಮಣ್ಣಿನ ಕಣಗಳು.. ಧೂಳು ಕಣ್ಣಿಗೆ ಬೀಳುತ್ತವೆ.. ಕಣ್ಣು ಮಂಜಾಗುತ್ತದೆ.. ಮತ್ತೆ ನೀರಿನಲ್ಲಿ ತೊಳೆದಾಗ ಸ್ಪಷ್ಟವಾಗುತ್ತದೆ.. ನೆನಪುಗಳು ಹಾಗೆ ಅಲ್ಲವೇ.. ನೆನಪುಗಳು ಮಧುರವಾಗಿ ಇರುತ್ತದೆ.. ಹಾಗೆ ಕಣ್ಣಂಚಿನಲ್ಲಿ ನೀರನ್ನು ತುಂಬಿರುತ್ತದೆ.. ಇದೆ ಜೀವನ.. "

ಕಡೆಯ ಸಾಲನ್ನು ನಾ ಹೇಳುತ್ತೇನೆ ಸಿಡ್
ಅರಳುವ ಹೂವೊಂದು
ಕಮರುವ ಭಯದಲಿ
ಸಾಗುತಿದೆ ಬದುಕು

ಶ್ರೀಧರನ ಕಣ್ಣು ಮಂಜಾದವು.. ಅರಳುತ್ತಿದ್ದ ಹೂವು ಒಣಗಿ ಹೋಗುವ ಪರಿಯನ್ನು ನೋಡಲಾಗದೇ ಹಾಗೆ ಕಣ್ಣು ಮುಚ್ಚಿಕೊಂಡ..

ಕೊಂಚ ಹೊತ್ತಾದ ಮೇಲೆ ಪಕ್ಕದಲ್ಲಿ  ನೋಡಿದ ಯಾರೂ ಇರಲಿಲ್ಲ..

ಮಧುರ ನೆನಪಿನ ದೋಣಿಯಲ್ಲಿ ಇಷ್ಟು ಹೊತ್ತು ಸಂಚರಿಸಿ ಬಂದ ಅನುಭವ ಅವನನ್ನು ಇನ್ನಷ್ಟು ಗಟ್ಟಿ ಮಾಡಿತ್ತು..

ಸುಮಾರು ಹೊತ್ತು ಹಾಗೆ ಕಣ್ಣು ಮುಚ್ಚಿಕೊಂಡೆ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾ ಕೂತಿದ್ದ ..

ತಂದಿದ್ದ  ಚಿಪ್ಸ್, ಕಡಲೇಕಾಯಿ.. ಸೌತೆಕಾಯಿ.. ನೀರಿನ ಬಾಟಲ್ ಎಲ್ಲವೂ ಖಾಲಿಯಾಗಿತ್ತು.. ಸೂರ್ಯ ನಾಳೆ ಮತ್ತೆ ಹೊಸ ಭರವಸೆಗಳನ್ನು ಹೊತ್ತು ತರುವ ಆಶಯದೊಂದಿಗೆ ಕಡಲೊಳಗೆ ಇಳಿಯುತ್ತಿದ್ದ..

ಮನೆಯಿಂದ ಮಗರಾಯ ಕರೆ ಮಾಡಿದ್ದ.. "ಅಪ್ಪ ಎಲ್ಲಿದ್ದೀರಾ.. "

"ಹಾ ಪುಟ್ಟ ಬರ್ತಾ ಇದ್ದೀನಿ.. "

ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ಹೊರಟ ಮನೆ ಕಡೆಗೆ.. ಅವನ ಮೊಬೈಲಿನಲ್ಲಿ ವಾಣಿಯಮ್ಮ ಅದ್ಭುತವಾಗಿ ಹಾಡುತ್ತಿದ್ದರು..

"ಸವಿ ನೆನಪುಗಳು ಬೇಕು ಸವಿಯಲಿ ಬದುಕು
ಕಹಿ ನೆನಪು ಸಾಕೊಂದು ಮಾತಲಿ ಬದುಕು
ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲ
ಕಾಡುತಿದೆ ಮನವ
ಸವಿ ನೆನಪುಗಳು ಬೇಕು ಸವಿಯಲಿ ಬದುಕು

ಪ್ರಿಯತಮನ ಒಲವಿಂದ ಕನಸುಗಳು ಮೂಡಿ
ಇನಿಯನ ಎದೆಗೊರಗಿ ಆಸರೆಯ ಬೇಡಿ
ಸರಸ ಸವಿಯ ಬಯಸಿದೆನು ನಾನು
ವಿರಹ ವಿಫಲ ಫಲಿಸಿದವು ನನಗೆ

ಇನಿಯನ ಎದೆ ಬಡಿತ ಗುಂಡಿನ ಧನಿಗೆರೆದು
ಮಾಸುತಿದೆ ಕನಸು
ಸವಿ ನೆನಪುಗಳು ಬೇಕು ಸವಿಯಲೆ ಬದುಕು

ಬೀಸುತಿಹ ತಂಗಾಳಿ ಬಿಸಿಯಾಗಿ ಕಾಡಿ
ನೆನಪಿನ ಭೀತಿಯಲಿ ನಾ ಬಂಧಿಯಾಗಿ
ಮನಸು ಹೃದಯ ನೊಂದು ನೋವಾಗಿದೆ
ಒಲವು ನಲಿವು ಮೂಡಿ ಮಸಕಾಗಿದೆ

ಅರಳುವ ಹೂವೊಂದು
ಕಮರುವ ಭಯದಲಿ
ಸಾಗುತಿದೆ ಬದುಕು

ಸವಿ ನೆನಪುಗಳು ಬೇಕು ಸವಿಯಲಿ ಬದುಕು
ಕಹಿ ನೆನಪು ಸಾಕೊಂದು ಮಾತಲಿ ಬದುಕು
ಬೆಂಬಿಡದ ಆ ನೆನಪು ಮರುಕಳಿಸಿ ದಿನವೆಲ್ಲ
ಕಾಡುತಿದೆ ಮನವ

ಸವಿ ನೆನಪುಗಳು ಬೇಕು ಸವಿಯಲಿ ಬದುಕು"

****

ಲೋ ಗುರುವೇ.. ಲೇಖನದ ಆರಂಭದಲ್ಲಿ ಮೂರು ಆತ್ಮಗಳು ಅಂದೇ..

ಆ ಆ ಆ ಆ ಆ ಆ  ಏನಂದಿರಿ ಮೂರು ಆತ್ಮಗಳೇ .. ಯಾವುದು ಅಂದಿರಾ..

ಮೊದಲು ಈ ಚಿತ್ರದ ನಿರ್ದೇಶಕ ಶ್ರೀ  ಕಾಶಿನಾಥ್ (ಇತ್ತೀಚಿಗಷ್ಟೇ ನಮ್ಮನ್ನಗಲಿದರು..)
ಎರಡನೆಯದು ಈ ಚಿತ್ರದ ಸಂಗೀತ ನಿರ್ದೇಶಕ ಶ್ರೀ ಎಲ್ ವೈದ್ಯನಾಥನ್..
ಮೂರನೆಯದು.. ಬಿಡಿ ಆ ಮಾತೇಕೆ.. 

Thursday, February 1, 2018

ಮರದ ಮರೆ.....!


ಒಂದೂರಿನಲ್ಲಿ ಒಬ್ಬ ರಾಜ ಇದ್ದ..

ಹೋಗತ್ತಾ... 

ಮತ್ತೆ ಶುರುವಾಯಿತಾ ಕಾಗೆ ಗುಬ್ಬಕ್ಕನ ಕತೆ..

ರಾಜ ಇದ್ದ ರಾಣಿ ಇದ್ದಳು ಮಕ್ಕಳು ಇದ್ದ್ರೂ.. ಶತ್ರುಗಳು ರಾಜ್ಯವನ್ನು ಮುತ್ತಿದರು...

ಟುರ್ರ್ ಬ್ಯಾ ಬ್ಯಾ.. ಲೊಕೇಶನ್ ಶಿಫ್ಟ್ ಮಾಡೋಣ..

ದಟ್ಟ ಕಾಡು.. ಕತ್ತಲೆಯೇ ಹೆದರಿಕೊಳ್ಳಬೇಕು ಅಷ್ಟು ಕಾರ್ಗತ್ತಲೆ.. ಪೂರ್ವಿ ಮತ್ತು ಸಮೀರ್ ನೆಡೆದು ಹೋಗ್ತಾ ಇದ್ದರು.. ಸೆಕೆಂಡ್ ಶೋ ಸಿನಿಮಾ ನೋಡಿಕೊಂಡು ಹೊರಟಾಗ.. ಬೈಕ್ ಪಂಚರ್ ಆಗಿತ್ತು..

ಮನೆಗೆ ಕಾಡು ದಾರಿಯಲ್ಲಿ ನೆಡೆದು ಹೋದರೆ ಒಂದು  ಕಿಮೀ.. ಬೈಕಿನಲ್ಲಿ ಸುತ್ತಿಕೊಂಡು ಪೇಟೆ ರಸ್ತೆಯಲ್ಲಿ ಹೋದರೆ ಐದು ಕಿಮೀಗಳು..

ಮೌನ ಮುರಿದು ಪೂರ್ವಿ "ಯಾಕೋ ಇವತ್ತು ಬೈಕ್ ಕೆಟ್ಟಿದ್ದು ಒಳ್ಳೆಯದಾಯ್ತು ಸಮೀರ್.. ಇಂದು ಈ ರಾತ್ರಿಯಲ್ಲಿ ನೆಡೆದೆ  ಹೋಗೋಣ ಕಣೋ.. . ಮೊಬೈಲ್ ಇದೆ.. ಆರಾಮಾಗಿ ಮಾತಾಡಿಕೊಂಡು ಹೋಗೋಣ ಕಣೋ"

"ನೆಡೆಯೋಕೆ ಆಗತ್ತೇನೆ ನಿಂಗೆ .. ಆಟೋಗೆ  ನೂರು ಕೊಟ್ಟರೆ  ಹತ್ತು ನಿಮಿಷ ಮನೆಗೆ ಬಿಸಾಕ್ತಾನೆ.. "

"ಬೇಡ ಕಣೋ ಸಮೀರಾ.. ತುಂಬಾ ದಿನ ಆಯ್ತು ನಾವು ವಾಕಿಂಗ್ ಮಾಡಿ.. ಪ್ಲೀಸ್ ಕಣೋ.. ಬೇಕಾದರೆ ನಿನಗೆ ಒಂದು ಸಿಗರೇಟ್ ಸೇದುವ ಅವಕಾಶ ಕೊಡ್ತೀನಿ.. ಒಂದೇ ಅಂದರೆ ಒಂದೇ.. ಸರೀನಾ".. ಕಣ್ಣು ಹೊಡೆದಳು ಪೂರ್ವಿ..

"ಬೇಡ ಪೂರ್ವಿ.. ಸಿಗರೇಟ್ ಬಿಡುವ ನಿರ್ಧಾರವಾಗಿದೆ.. ಇಂದು ಮಂಗಳವಾರ ಬೆಳಿಗ್ಗೆ ಇಂದ ಒಂದು ಸಿಗರೇಟ್ ಸೇದಿಲ್ಲ... ಬೆಳಿಗ್ಗೆ ಎದ್ದಾಗ ಸಿಗರೇಟ್ ಬಿಡಬೇಕು ಅನ್ನಿಸಿತು.. ಇಂದಿನಿಂದಲೇ ಬಿಟ್ಟಾಯ್ತು.. ಸರಿ .. ನೆಡೆದೆ ಹೋಗೋಣ.. ಕಾಲು ನೋವು ಬಂದರೆ ಹೇಳು.. ಆಯ್ತಾ.. "

"ಮುದ್ದು ಕಣೋ ನೀನು.. "
ಕೃಪೆ : ಗೂಗಲೇಶ್ವರ 
ಕತ್ತಲಲ್ಲಿ  ಕೊಂಚ ದೂರ ನೆಡೆದ ಮೇಲೆ ಕಣ್ಣುಗಳು ವಾತಾವರಣಕ್ಕೆ ಹೊಂದಿಕೊಂಡಿತು. .. ಹಾಗಾಗಿ ಮೊಬೈಲ್ ಟಾರ್ಚು ಬೇಕಾಗಲಿಲ್ಲ.. ತಮ್ಮ ಜೀವನ  ಶುರುವಾದ ಕ್ಷಣದಿಂದ ಇಲ್ಲಿಯ ತನಕ ನೆಡೆದ ವಿಷಯಗಳನ್ನೆಲ್ಲ ನಿಧಾನವಾಗಿ ಮೆಲುಕು ಹಾಕುತ್ತಾ ಸಾಗಿದರು..

 ಸುಯ್ ... ದಪ್ ಅಂಥಾ ಏನೋ ಬಿದ್ದ ಸದ್ದಾಯಿತು.. ಗವ್ ಗತ್ತಲೆ ಏನೂ ಕಾಣಿಸುತ್ತಿರಲಿಲ್ಲ.. ಮೊಬೈಲಿನ ಟಾರ್ಚ್ ಬೆಳಕಲ್ಲಿ ನೋಡಿದಾಗ ಇಬ್ಬರಿಗೂ ಬೆನ್ನಲ್ಲಿ ಚಳಿಮೂಡಿತು .. ಮೈಯೆಲ್ಲಾ ಸಣ್ಣಗೆ ಬೆವರಲು ಶುರುವಾಯಿತು..

ಸ್ವಲ್ಪ ಧೈರ್ಯ ಮಾಡಿಕೊಂಡು ಸದ್ದು ಬಂದ ಕಡೆ ಹೆಜ್ಜೆ ಹಾಕಿದ..

ಮರದ ಕೆಳಗೆ ಒಂದು ದೇಹ ಬಿದ್ದಿತ್ತು..

ಏನೂ ಮಾಡೋದು ತಿಳಿಯದೆ ಮೊಬೈಲ್ ಬೆಳಕಲ್ಲಿ ಇಬ್ಬರೂ ಹತ್ತಿರ ಹೋದರು.. ಮುಖಕ್ಕೆ ಬೆಳಕು ಬಿಟ್ಟಾಗ.. ಗೊತ್ತಾಯಿತು ಯಾವುದೋ ಗುರುತಿಲ್ಲದ ವ್ಯಕ್ತಿ ಎಂದು.. ಶಿಸ್ತಾಗಿ ವಸ್ತ್ರ ಧರಿಸಿದ್ದ ವ್ಯಕ್ತಿ.. ಬೆರಳುಗಳಲ್ಲಿ  ಉಂಗುರಗಳು, ಕತ್ತಿನಲ್ಲಿ ಸರ.. ಕೈಯಲ್ಲಿ ಬ್ರೆಸ್ಲೇಟ್ ಇತ್ತು..  ಮೊಗದಲ್ಲಿ ನಗುವಿತ್ತು... ಅದನ್ನೆಲ್ಲ ಪೂರ್ವಿಗೆ ಹೇಳಿದ .. . ಆ ಸಾಧಾರಣ ಬೆಳಕಲ್ಲಿಯೂ ಸಮೀರಾ ಆ ವ್ಯಕ್ತಿಯನ್ನು ವಿಶ್ಲೇಷಿಸಿದ್ದು ಪೂರ್ವಿಗೆ ಆಶ್ಚರ್ಯವಾಗಿತ್ತು.. ಮೊದಲೇ ಹೆದರಿಕೆ.. ಕತ್ತಲೆ.. ಜಿಯ್ ಎನ್ನುವ ಕಾಡು.. ಜೊತೆಯಲ್ಲಿ ಈ ರೀತಿಯಲ್ಲಿ ಬಿದ್ದಿದ್ದ ಒಂದು ಅನಾಮಧೇಯ ದೇಹ..

ಏನಪ್ಪಾ ಮಾಡೋದು.. ಅರೆಘಳಿಗೆ ಯೋಚಿಸಿದ.. ಇಲ್ಲೇ ನಿಂತರೆ.. ಬೇಡದ ವಿಷಯಕ್ಕೆ ಸಿಕ್ಕಿಹಾಕಿಕೊಳ್ಳುವ ಭಯ.. ಹಾಗೆ ಹೋಗೋಣ ಅಂದರೆ.. ಮಾನವೀಯತೆ ಕೂಗಿ ಕರೆಯುತ್ತಿತ್ತು..

"ಪೂರ್ವಿ ನಿನ್ನ ಹತ್ತಿರ ಇರುವ ಬಾಟಲಿನಲ್ಲಿ ನೀರಿದೆಯಾ ನೋಡು.. "

"ಇದೆ ಕಣೋ ಈ ಚಳಿಯಲ್ಲಿ ನೀರನ್ನು ಕುಡಿಯಲೇ ಇಲ್ಲ.. ಪೂರಾ ತುಂಬಿದೆ.. " 

ಬಾಟಲನ್ನ ತೆಗೆದುಕೊಂಡು  ನೀರನ್ನು ಕೈಯಲ್ಲಿ ತುಂಬಿಕೊಂಡು ವ್ಯಕ್ತಿಯ ಮೊಗಕ್ಕೆ ಎರಚಿದ.. ಏನೂ ಚಲನೆಯಿರಲಿಲ್ಲ.. ಮತ್ತೊಮ್ಮೆ ಇನ್ನು ಸ್ವಲ್ಪ ನೀರನ್ನು ಮುಖಕ್ಕೆ ಎರಚಿ.. ಒಂದೆರಡು ಹನಿಯನ್ನು ಆ ವ್ಯಕ್ತಿಯ ಬಾಯಿಗೆ ಹಾಕಿದ.. ಅವನ ಎದೆಯ ಮೇಲೆ ಕಿವಿಯಿಟ್ಟು ಆನಿಸಿದ.. ಹೃದಯ ಹೋರಾಡುತ್ತಿದ್ದ ಸದ್ದು ಕೇಳಿಸುತ್ತಿತ್ತು.. ಆ ವ್ಯಕ್ತಿ ಮೆಲ್ಲಗೆ  ನಾಲಿಗೆಯನ್ನು ಅತ್ತಿತ್ತ ಹೊರಳಾಡಿಸಿತು.. ದೇಹದಲ್ಲಿ ತುಸು ಚಾಲನೆ ಕಂಡು ಬಂತು..

"ಸರ್ ಸರ್.. ಏನಾಯಿತು ಯಾಕೆ ಹೀಗೆ ಬಿದ್ದಿದ್ದೀರಾ.. .. "

ಏನೋ ಮಾತಾಡಲು ಪ್ರಯತ್ನ ಮಾಡುತ್ತಿತ್ತು.. ಆದರೆ ಧ್ವನಿ ಹೊರಗೆ ಬರುತ್ತಿಲ್ಲ.. ಸಮೀರಾ ಧೈರ್ಯ ಮಾಡಿ.. ಆ ವ್ಯಕ್ತಿಯ ತಲೆಯನ್ನು ಹಿಡಿದುಕೊಂಡು ಮೆಲ್ಲನೆ ಮರಕ್ಕೆ ಒರಗಿಸಿ ಕೂರಿಸಿದ.. ಬಾಟಲ್ ಕೊಟ್ಟು "ಸ್ವಲ್ಪ ನೀರು ಕುಡೀರಿ ಸರ್" ಎಂದ..

ನೀರು ಕುಡಿದ ವ್ಯಕ್ತಿಗೆ ತುಸು ಚೈತನ್ಯ ಬಂದ ಹಾಗೆ ಕಂಡಿತು.. ಆದರೂ ಮಾತುಗಳು ಕಷ್ಟವಾಗಿದ್ದವು.. "ಪೂರ್ವಿ ನಿನ್ನ ಬ್ಯಾಗಿನಲ್ಲಿ ಇಂಟರ್ವಲ್ ಸಮಯದಲ್ಲಿ ತೆಗೆದುಕೊಂಡ ಚಾಕೊಲೇಟುಗಳು ಸ್ವಲ್ಪ ಉಳಿದಿದ್ದವು . ಸ್ವಲ್ಪ ಕೊಡು.. "

ಚೊಕೊಲೇಟ್ ಆ ವ್ಯಕ್ತಿಯ ಬಾಯಿಗೆ ಹೋಯಿತು.. ಸ್ವಲ್ಪ ಚೈತನ್ಯ ಬಂದ ಹಾಗೆ ಅನ್ನಿಸಿತು..

ಮತ್ತೊಂದು ಗುಟುಕು ನೀರು.. "ಸರ್...  ನಾನು...  ಸಿನಿಮಾ.....  .. ಮನೆಗೆ.... .. ತಲೆ....  ಸುತ್ತು....  ಅನುಭವ.. ಹಾಗೆ ಕುಸಿದು ಬಿದ್ದೆ.. " ಅರ್ಧ ಅರ್ಧ ಮಾತುಗಳು...

ಸಮೀರಾ ಮೆಲ್ಲನೆ ಆ ವ್ಯಕ್ತಿಯ ಬೆನ್ನು ತಲೆ ಸವರುತ್ತಾ ಯೋಚಿಸತೊಡಗಿದ.. .. ಸಿನಿಮಾ ನೋಡೋಕೆ ಬಂದಿದ್ದ ವ್ಯಕ್ತಿ ಇಷ್ಟು ಬೇಗ ಹೇಗೆ ಮುಂದಕ್ಕೆ ಹೋದ ಅಂತ.. ಕಾರಣ.. ಇವರು ಬೈಕ್ ಸ್ಟಾರ್ಟ್ ಮಾಡುವಾಗ ಅರಿವಾಗಿತ್ತು ಪಂಚರ್ ಆಗಿದೆ ಎಂದು.. ನಂತರ ಪಾರ್ಕಿಂಗ್ ಪ್ರದೇಶದಲ್ಲಿದ್ದ ವ್ಯಕ್ತಿಯ ಹತ್ತಿರ ಪಂಚರ್ ಅಂಗಡಿ ಹತ್ತಿರವಿದೆಯಾ ಎನ್ನುವ ಪೆದ್ದು ಪ್ರಶ್ನೆ ಕೇಳಿದ್ದು.. "ಆವ ತಮಾಷೆ ಮಾಡ್ತೀರಾ ಸರ್ ದೆವ್ವಗಳು ಓಡಾಡುವ ಸಮಯದಲ್ಲಿ ಪಂಚರ್ ಅಂಗಡಿ ಯಾರು ತೆಗೆದಿರುತ್ತಾರೆ.. ಇಲ್ಲೇ ಬಿಟ್ಟು ಹೋಗಿ .. ಬೆಳಿಗ್ಗೆ ಬಂದು ಪಂಚರ್ ಹಾಕಿಸಿಟ್ಟುರುತ್ತೇನೆ.. ತಗೊಂಡು ಹೋಗೋರಂತೆ.. ಐನೂರು ಕೊಟ್ಟು ಹೋಗಿ.. ಚಿಲ್ಲರೆ ಬೆಳಿಗ್ಗೆ ಕೊಡುತ್ತೇನೆ.. ಹನ್ನೆರಡು ಘಂಟೆಯ ಹೊತ್ತಿಗೆ ಬನ್ನಿ ಸರಿನಾ.. ಅದಕ್ಕಿಂತ ಮುಂಚೆ ಬರಬೇಡಿ.. ನಾ ಇರೋಲ್ಲ.. ಆಮೇಲೆ ನನ್ನ ಜಾಗದಲ್ಲಿದ್ದವ ತಕರಾರು ಮಾಡುತ್ತಾನೆ.. ಸರಿ ನಾ "

ಇಷ್ಟೆಲ್ಲಾ ಮಾತು ಕತೆ ನೆಡೆದು ಹದಿನೈದು ಇಪ್ಪತ್ತು ನಿಮಿಷ ಆಗಿತ್ತು.. ಹಾಗಾಗಿ ಆ ವ್ಯಕ್ತಿ ನಮಗಿಂತ ಮುಂದೆ ಹೋಗಿದ್ದ ಅಂತ ಅರಿವಾಯಿತು..

"ಸರಿ ಸರ್.. ಈಗ ಎಲ್ಲಿಗೆ ಹೋಗಬೇಕು. ಎಲ್ಲಿ ನಿಮ್ಮ ಮನೆ.. ಅಡ್ರೆಸ್ ಹೇಳಿ ನಾ ಬಿಟ್ಟು ಬರುವೆ.. ನನ್ನ ಮನೆ ಕೂಡ ಈ ಕಾಡಿನ ಆಚೆ ಬದಿಯಲ್ಲಿದೆ.. "

ಆ ವ್ಯಕ್ತಿ.. ಮಿಸುಕಾಡಲಿಲ್ಲ.. ಮಾತುಗಳು ಅಸ್ಪಷ್ಟವಾಗುತ್ತಿದ್ದವು.. ಜೇಬನ್ನು ತಡಕಾಡುತ್ತಿತ್ತು ತನ್ನ ವಿಸಿಟಿಂಗ್ ಕಾರ್ಡ್ ಕೊಟ್ಟು..
"ಇದೆ.. ..  ನನ್ನ ವಿಳಾಸ.. ನೀವೇನು....  ತೊಂದರೆ... .. ನನಗೆ ಶುಗರ್ ಸಮಸ್ಯೆ ಇದೆ.. .. ... ಸಕ್ಕರೆ...  ಅಂಶ ಅಚಾನಕ್ ಕಡಿಮೆ...  .. ಈ ರೀತಿ ಆಗುತ್ತದೆ.. ನನ್ನ ಜೇಬಲ್ಲಿ...  ಸಾಮಾನ್ಯ...  ಚಾಕೊಲೇಟ್ ಇರುತ್ತೆ.. ಇವತ್ತು ಹೊಸ ಬಟ್ಟೆ ಹಾಕಿಕೊಂಡು...  ಬಂದಿದ್ದೆ...  ಸಿನಿಮಾ...  ನೋಡೋಕೆ.. ಹೋಗಲಿ ಬಿಡಿ.. ನಾನು ಇಲ್ಲೇ...  ಸ್ವಲ್ಪ ... ಹೊತ್ತು ಸುಧಾರಿಸಿಕೊಂಡು ನಾ ಹೋಗುತ್ತೇನೆ.. ... ನೀವು...  ಹೊರಡಿ...  ಪರವಾಗಿಲ್ಲ, ಬೆಳಿಗ್ಗೆ...  ಮನೆಗೆ...  ಬನ್ನಿ...  ತಿಂಡಿ ... ಸಮಯಕ್ಕೆ...  ಬಂದರೆ...  ಒಳ್ಳೆಯದು.. ಒಂದಷ್ಟು....  ಮಾತಾಡಬಹುದು.. ಹೌದು ನೀವು... ಈಗ ಮಾಡಿದ ಉಪಕಾರ ನಾ ಮರೆಯೋಕೆ...  ಸಾಧ್ಯವೇ...  ಇಲ್ಲ.. ಸಕ್ಕರೆ..  ಅಂಶ...  ಒಂದು...  ರೀತಿಯ...  ವಿಷ...  ಇದ್ದ...  ಹಾಗೆ...  ಕಡಿಮೆ...  ಆದರೂ ಕಷ್ಟ.. ಹೆಚ್ಚಾದರೂ...  ಕಷ್ಟ.. ಹೀಗೆ....  ದಾರಿಯಲ್ಲಿ...  ಕುಸಿದು...  ಕೂತ...  ಉದಾಹರಣೆಗಳು...  ತುಂಬಾ...  ಇವೆ...  ಅಂತ ಹೇಳ್ತಾರೆ...  ಮನೆಯಲ್ಲಿ.. ನನಗೆ ಗೊತ್ತಿಲ್ಲ.. .. ಈ...  ಕಾಡು...  ಹಾದಿಯಲ್ಲಿ...  ನೀವು ...  ದೇವರು...  ಸಿಕ್ಕ..  ಹಾಗೆ..  ಸಿಕ್ಕಿದ್ರಿ.. ನೀವು...  ಬರಲಿಲ್ಲ...  ಅಂದಿದ್ರೆ..  ನನ್ನ...  ಕತೆ...  ದೇವರೇ..  ಕಾಪಾಡಬೇಕಿತ್ತು.. ನೀವು...  ನನ್ನ...  ಪಾಲಿನ ದೇವರಾಗಿಬಿಟ್ರಿ.. ಖಂಡಿತ ... ಮನೆಗೆ...  ಬನ್ನಿ.. ಮನೆಯಲ್ಲಿರುವವರಿಗೆ...  ನಿಮ್ಮನ್ನು..  ಪರಿಚಯ...  ಮಾಡಿಕೊಡುತ್ತೇನೆ.. "

ಮಾತಾಡದೆ ಕೂತಿದ್ದ ವ್ಯಕ್ತಿಯ ದೇಹದಲ್ಲಿ ಚೂರು ಸಕ್ಕರೆಯ ಅಂಶ ಮಾಡಿದ ಮ್ಯಾಜಿಕ್ ಆ ವ್ಯಕ್ತಿಯನ್ನು ಬಿಟ್ಟು ಬಿಟ್ಟು ಆಡುತ್ತಿದ್ದ  ಮಾತುಗಳು ಆದರೆ ನಿಧಾನವಾಗಿ ಚೈತನ್ಯ ಬರುತ್ತಿದ್ದ ಕುರುಹುವನ್ನು ತೋರಿಸುತ್ತಿತ್ತು.. .. . ಬಿಟ್ಟ ಬಾಯಿ ಬಿಟ್ಟುಕೊಂಡು ನೋಡುತ್ತಿದ್ದ ಪೂರ್ವಿಗೆ ಇದು ಆಶ್ಚರ್ಯಕರ ವಿಷಯವಾಗಿತ್ತು .. ಸತ್ತಂತೆ ಮಲಗಿದ್ದ ವ್ಯಕ್ತಿ.. ಈ ಪರಿಯ ಚೈತನ್ಯ ತುಂಬಿಕೊಳ್ಳಲು ಕಾರಣವಾದ ಆ ಸಕ್ಕರೆಯ ಚಾಕೊಲೇಟಿಗೆ ಸಲಾಂ ಹೊಡೆಯಬೇಕು ಅನ್ನಿಸಿತು..

ನಿಧಾನವಾಗಿ ಇನ್ನಷ್ಟು ಚೈತನ್ಯ ತುಂಬಿಕೊಂಡು..  ಇನ್ನೊಂದು ಚಾಕೊಲೇಟ್ ತಿಂದು.. "ನೀವು ಹೋಗಿ ಸರ್.... ಜೊತೆಯಲ್ಲಿ ಮೇಡಂ ಬೇರೆ ಇದ್ದಾರೆ.. ಆಗಲೇ ಒಂದು ಘಂಟೆ ಆಗಿದೆ ಅನ್ನಿಸುತ್ತಿದೆ.. ನೀವು ಹೋಗಿ ನಾ ಮೆಲ್ಲನೆ ನಿಧಾನಕ್ಕೆ ಹೋಗುತ್ತೇನೆ. ಸಿನಿಮಾ ನೋಡುವ ಚಪಲ.. ನೆಡೆದೆ ಹೋಗೋಣ ಅಂತ ಇವತ್ತು ಗಾಡಿಯನ್ನು ತರಲಿಲ್ಲ.. ನೀವು ಹೋಗಿ.. ಬೆಳಿಗ್ಗೆ ಬರುವುದನ್ನು ಮಾತ್ರ ಮರೆಯಬೇಡಿ . ಮೇಡಂ ನೀವು ಬರಬೇಕು.. "

ಎಷ್ಟು ಹೇಳಿದರೂ ಕೇಳಲಿಲ್ಲ ಆ ವ್ಯಕ್ತಿ.. ಸರಿ ಇನ್ನೇನು ಮಾಡುವುದು ಅಂತ ಯೋಚಿಸಿ.. "ಸರ್ ಹೀಗೆ ಮಾಡಿ.. ಇನ್ನೊಂದೆರಡು ಚಾಕೊಲೇಟ್, ಮತ್ತು ನೀರಿನ ಬಾಟಲ್ ಕೊಡುತ್ತೇನೆ.. ಸುಧಾರಿಸಿಕೊಂಡು ಹೋಗಿ ಆಯ್ತಾ.. ಬೆಳಿಗ್ಗೆ ನಿಮ್ಮನ್ನು ಕಾಣುತ್ತೇನೆ.." 

" ಸರಿ" ಅಂತ ಒಂದು ದೇಶಾವರಿ ನಗೆ ಬೀರಿ ಕೈಯಾಡಿಸಿತು ಆ ವ್ಯಕ್ತಿ..

ನೀರಿನ ಬಾಟಲ್ ಮತ್ತು ಒಂದೆರಡು ಚಾಕೊಲೇಟ್ ಕೊಟ್ಟು.. ಸಮೀರಾ ಮತ್ತು ಪೂರ್ವಿ ನೆಡೆಯುತ್ತಾ ತಮ್ಮ ಮೆನೆಗೆ ತಲುಪಿದರು.. ದಾರಿಯುದ್ದಕ್ಕೂ ಅದೇ ಮಾತು ಇಬ್ಬರಲ್ಲೂ..

ಬೆಳಿಗ್ಗೆ ತಡವಾಗಿ ಎದ್ದ ಸಮೀರಾ.. ಪೂರ್ವಿ ಇನ್ನೂ ಮಲಗಿಯೇ ಇದ್ದಳು..

ತಾನೇ ಕಾಫಿ ಮಾಡಿ ಪೂರ್ವಿಗೆ ಕೊಟ್ಟು... ಪೇಪರ್ ಓದುತ್ತಾ ಕೂತ.. ಆಗಲೇ ಹನ್ನೊಂದಾಗಿತ್ತು.. ಓಹ್ ಬೈಕ್ ತರಬೇಕು ಅಂತ ನೆನಪಿಗೆ ಬಂತು.. ಲಘುಬಗೆಯಿಂದ ಸ್ನಾನ ಮಾಡಿ.. ದೇವರಿಗೆ ಡೈವ್ ಹೊಡೆದು.. ಚಪ್ಪಲಿ ಮೆಟ್ಟಿ ಮತ್ತೆ ಅದೇ ಕಾಡಿನ ಹಾದಿ ಹಿಡಿದ..

ನಿನ್ನೆ ರಾತ್ರಿ ನೆಡೆದ ವಿಷಯಗಳೆಲ್ಲ ನೆನಪಿಗೆ ಬಂತು.. ಅದನ್ನೇ ನೆನೆಸಿಕೊಂಡು ಆ ವ್ಯಕ್ತಿ ಬಿದ್ದಿದ್ದ ಮರವನ್ನು ಹಾದು ಹೋಗುವಾಗ ಅವನಿಗೆ ಅರಿವಿಲ್ಲದೆ ಆ ಮರದ ಕಡೆಗೆ ಗಮನ ಹರಿಸಿದ.. ಆಶ್ಚರ್ಯವಾಯಿತು..

ತಾ ಕೊಟ್ಟ ಬಾಟಲ್ ಅಲ್ಲೇ ಇದೆ.. ಅರೆ ಇಸ್ಕಿ ಇದೇನು.. ಇಲ್ಲಿ ಬಿಟ್ಟು ಹೋದನಲ್ಲ ಪಾರ್ಟಿ ಎಂದು ಹತ್ತಿರ ಹೋಗಿ ನೋಡಿದ.. ಖಾಲಿಯಾಗಿದ್ದ ಎರಡು ಚಾಕೊಲೇಟ್ ಪೇಪರ್ ಅಲ್ಲಿಯೇ ಇತ್ತು.. ಬಾಟಲಿನಲ್ಲಿ ನೀರು ಖಾಲಿಯಾಗಿತ್ತು..

ಸರಿ.. ಹೇಗಿದ್ದರೂ ವಿಳಾಸ ಇದೆ ಅಲ್ಲಾ.. ಮನೆಗೆ ಹೋಗುವಾಗ ನೋಡೋಣ ಅಂತ.. ಶಿಳ್ಳೆ ಹೊಡೆಯುತ್ತಾ.. ಹಿಂದಿನ ರಾತ್ರಿ ನೋಡಿದ್ದ ಚಿತ್ರದ ಹಾಡು ಗುನುಗುತ್ತಾ.. ಥಿಯೇಟರಿಗೆ ಹೋದ..

ಗೇಟಿನ ಹತ್ತಿರವೇ ಇದ್ದ ಆ ಹುಡುಗ.. "ನಮಸ್ಕಾರ ಸರ್.. ಏನ್ ಸರ್ ಟೈಮ್ ಅಂದ್ರೆ ಟೈಮ್. ೧೨ ಅಂತ ಹೇಳಿದ್ದೆ ಸರಿಯಾಗಿ ಹನ್ನೆರಡಕ್ಕೆ ಬಂದಿದ್ದೀರಿ.. ನಿಮ್ಮಂತರವರಿಂದಲೇ ಮಳೆ ಬೆಳೆ ಆಗುತ್ತಿರುವುದು ಸರ್.. ಬೈಕ್ ಪಂಚರ್ ಹಾಕಿಸಿಟ್ಟಿದ್ದೀನಿ ಸರ್.. ಬೊಂಬಾಟ್ ಬೈಕ್ ಸರ್ ಇದು.. ಮಾರುವ ಪ್ಲಾನ್ ಇದ್ದರೆ ಹೇಳಿ ಸರ್.. ನಾನೆ ತಗೋತೀನಿ ...  ಸರ್ ಪಂಚರ್ ದುಡ್ಡು ಇಷ್ಟಾಯಿತು.. " ಇನ್ನೂ ಬಡಬಡಿಸುತ್ತಲೇ ಇದ್ದ..

"ಥ್ಯಾಂಕ್ಸ್.. ಚಿಲ್ಲರೆ ನೀನೆ ಇಟ್ಕೋ.. " ಎಂದು ಹೇಳಿದವನೇ ಸಮೀರಾ.. ಬೈಕ್ ಹತ್ತಿ ಮನೆಯ ಕಡೆಗೆ ಹೊರಟ..

ಪೇಟೆ ದಾರಿಯಲ್ಲಿ ಹೋಗುವಾಗ ನೆನಪಿಗೆ ಬಂತು ಅರೆ ಇಲ್ಲೇ ಎಲ್ಲೋ ಇರಬೇಕು ಆ ವ್ಯಕ್ತಿ.. ಸರಿ ಹೇಗಿದ್ದಾರೆ ವಿಚಾರಿಸೋಣ.. ಎಂದು ಆ ಕಾರ್ಡ್ ತೆಗೆದುಕೊಂಡು ವಿಳಾಸ ಹುಡುಕ ಹತ್ತಿದ.. ಚಿಕ್ಕ ಊರಾಗಿದ್ದರಿಂದ ಅಷ್ಟೇನೂ ಕಷ್ಟ ಪಡಬೇಕಿರಲಿಲ್ಲ.. ಹದಿನೈದು ನಿಮಿಷದಲ್ಲಿ ಅಲ್ಲಿ ಇಲ್ಲಿ ವಿಚಾರಿಸಿದ ಮೇಲೆ ವಿಳಾಸ ಸಿಕ್ಕಿತು..

ದೊಡ್ಡದಾದ ಮನೆ.. ಮನೆಯ ಮುಂದೆ ಹುಲ್ಲು ಹಾಸು.. ಅತ್ತಿತ್ತ ಹೂವಿನ ಗಿಡಗಳು.. ಅಂಗಳದಲ್ಲಿ ಆಡುತ್ತಿದ್ದ ಪುಟ್ಟ ಪುಟ್ಟ ಮಕ್ಕಳು.. ಮನೆಗೆ ಬಳಿದಿದ್ದ ಬಿಳಿಯ ಬಣ್ಣ.. ಮಂಗಳೂರು ಹೆಂಚು.. ಒಂದು ರೀತಿಯ ಆಹ್ಲಾದಕರ ವಾತಾವರಣ ಅನ್ನಿಸಿತು..  ಕಿರ್ ಎಂದು ಸದ್ದು ಮಾಡುತ್ತಾ ಗೇಟ್ ತೆರೆದುಕೊಂಡಿತು..

ಒಳಗೆ ಹೆಜ್ಜೆ ಹಾಕುತ್ತಾ ಸುತ್ತ ನೋಡುತ್ತಾ ಒಳಗೆ ಹೋದ..

"ಎಸ್.. ಯಾರು ಬೇಕಿತ್ತು.. " ಒಂದು ಹೆಂಗಸಿನ ಧ್ವನಿಗೆ ತಿರುಗಿದ ಸಮೀರಾ..

"ಆ ಮೇಡಂ.. ಇದು ಇವರ ಮನೆ ವಿಳಾಸ ತಾನೇ.. ಇವರು ಇಲ್ಲೇ ಇದ್ದಾರಾ.. " ಆ ಕಾರ್ಡನ್ನು ತೋರಿಸಿದ..

"ಹೌದು ಒಳಗೆ ಇದ್ದಾರೆ.. ನೀವು ಯಾರು"

"ನಾನು ಅವರನ್ನು ನೋಡಬೇಕಿತ್ತು.. "

"ಸರಿ ಒಳಗೆ ಹೋಗಿ.. .. ಒಯೆ ಚೋಟು.. ಇವರನ್ನು ಒಳಕ್ಕೆ ಕರೆದುಕೊಂಡು ಹೋಗು"

ಚೋಟುವಿನ ಜೊತೆಯಲ್ಲಿ ಸಮೀರಾ ... ತನ್ನ ತಲೆಗೂದಲನ್ನು ಒಮ್ಮೆ ಸರಿ ಮಾಡಿಕೊಂಡು ಒಳಗೆ ಹೋದ..

ಆ ವ್ಯಕ್ತಿ ಅಲ್ಲಿಯೇ ಕೂತಿತ್ತು.. "ನಮಸ್ಕಾರ ಸರ್.. ಈಗ ಹೇಗಿದ್ದೀರಾ..ನೀವು ವಾಟರ್ ಬಾಟಲನ್ನು ಅಲ್ಲಿಯೇ ಇಟ್ಟಿದ್ದ್ರಿ. ನೋಡಿ ಹೌದು ಇದೆ ಬಾಟಲ್.. ನನ್ನ ಬೈಕ್ ಪಂಚರ್ ಆಗಿತ್ತು.. ಥೀಯೇಟರ್ ಹತ್ತಿರ ನಿಲ್ಲಿಸಿದ್ದೆ.. ಈಗ ರಿಪೇರಿ ಮಾಡಿಸಿಕೊಂಡು ನಿಮ್ಮನ್ನು ಹಾಗೆ ನೋಡಿಕೊಂಡು ಹೋಗುವ ಅಂತ ಬಂದೆ.. "

ಸಮೀರನನ್ನು ಮೇಲಿಂದ ಕೆಳಗೆ ಒಮ್ಮೆ ನೋಡಿ.. ಹಣೆಯ ಮೇಲೆ ಗೆರೆ ಮೂಡಿಸಿಕೊಂಡು ಕಣ್ಣನ್ನು ಕಿರಿದಾಗಿಸಿ..

"ನೀವು ಯಾರು.. ಏನಾಗಬೇಕಿತ್ತು.. ಏತಕ್ಕೆ ಬಂದ್ರಿ.. ನನಗೆ ಏನಾಗಿತ್ತು.. ಏನಿದು ವಾಟರ್ ಬಾಟಲ್ ಕಥೆ..ನಿಮ್ಮ ಬೈಕ್ ಪಂಚರ್ ಆದ್ರೆ ನನಗೇಕೆ ಹೇಳ್ತಾ ಇದ್ದೀರಿ..  ಇದು ಮನೆ.. ಪಂಚರ್ ಅಂಗಡಿ ಅಲ್ಲಾ.. ಚಂದಾ ಬೇಕು ಅಂದ್ರೆ ಸೀದಾ ಮನೆ ಒಳಗೆ ಬರೋದಾ... "

"ನಿನ್ನೆ ನೀವು.. ಕಾಡಲ್ಲಿ ಬಿದ್ದಿದ್ದು.. !"

ಸಮೀರಾ ಇನ್ನೂ ಮಾತು ಮುಗಿಸಿರಲಿಲ್ಲ.. ಆ ವ್ಯಕ್ತಿ "ಏನ್ರಿ ನಿಮ್ಮ ಹರಿಕತೆ ಕೇಳೋಕೆ ನಾ ಕೂತಿಲ್ಲ.. ಓಯ್ ಯಾರಿದು ಇವರನ್ನು ಒಳಗೆ ಬಿಟ್ಟಿದ್ದು.. ನೋಡಿ ಸರ್ ನೀವು ಯಾರೋ ನನಗೆಗೊತ್ತಿಲ್ಲ .. ಯಾತಕ್ಕೆ ಬಂದಿದ್ದಿದ್ದೀರೋ ಗೊತ್ತಿಲ್ಲ.. ಹೊರಡಿ ಹೊರಡಿ"

ಅಚಾನಕ್ ಇಷ್ಟೊಂದು ಮಾತಾಡಿದ್ದು ನೋಡಿ ಆಶ್ಚರ್ಯವಾಯಿತು ಸಮೀರನಿಗೆ.. ಬೇರೆ ಮಾತಾಡಲು ಅವಕಾಶವಿರಲಿಲ್ಲ.. ಎದ್ದು ನಿಂತು ಸುತ್ತಲೂ ನೋಡಿದ.. ಮೂಲೆಯಲ್ಲಿ ಕೂತಿದ್ದ ಟಿವಿಯಲ್ಲಿ ಅಮೀರ್ ಖಾನ್ ಅಭಿನಯದ ಘಜನಿ ಚಿತ್ರ ಬರುತ್ತಿತ್ತು..

ಏನೋ ನೆನಪಾಯಿತು.. ಸರಕ್ಕನೆ ಮತ್ತೆ ಆ ವ್ಯಕ್ತಿಯನ್ನು ನೋಡಿದಾ.. ಮೊಗದ ಮೇಲೆ ಏನೂ ಭಾವಗಳು ಇರಲಿಲ್ಲ.. ಟಿವಿಯನ್ನು ನೋಡಿದ..  ಅಮೀರ್ ಖಾನ್ ಘಜನಿ ಪಾತ್ರದಲ್ಲಿ ಸಮೀರನನ್ನು ನೋಡಿ ಕಿಸಕ್ ಅಂತ ನಕ್ಕ ಅನುಭವ.. ....!!!!

Sunday, January 21, 2018

ನನ್ನ ಗೆಳತಿಯ ದಿನ

21 ಹತ್ತಿರ ಬರ್ತಾಇದೆ ..
೨೧ ಶ್ರೀ ಇವತ್ತು..

ನನ್ನ ಟೀ ಸಾಮಾನ್ಯ ಒಂದು ವಾರದ ಮುಂಚೆ ಈ ರೀತಿಯ ಎಚ್ಚರಿಕೆ ಕೊಡುವುದು ಸಾಮಾನ್ಯವಾಗಿತ್ತು..

ಸದಾ  ಕಾಲದಲ್ಲಿಯೂ ಎಲ್ಲರನ್ನು ಕಾಡುವ ಸಮಸ್ಯೆ ನನಗೂ ಮಾಮೂಲು..

"ಹೂ ಟೀ ಏನಾದರೂ ಮಾಡೋಣ .. "

"ಏನ್ ಮಾಡ್ತೀರೋ.. ನಿಮ್ ತಲೆ.. "

ಇಬ್ಬರೂ ನಗುತ್ತಿದ್ದೆವು..

ಇದ್ದ ಸಮಸ್ಯೆಗಳ ಮಧ್ಯೆ ಏನಾದರೂ ತೂಗಿಸಿಕೊಂಡು.. ಹೇಗೋ ಅನುಸರಿಸಿಕೊಂಡು ಬೇಕಿದ್ದನ್ನು ತರುವುದು ಅಭ್ಯಾಸವಾಗಿತ್ತು..

ಮೊನ್ನೆ  ಇದೆ ರೀತಿಯ ದೃಶ್ಯ ಮತ್ತೆ ಪುನಾರಾವರ್ತನೆ..

ಹೋಗಿದ್ದಾಯ್ತು.. ತಗೆದುಕೊಂಡಿದ್ದಾಯ್ತು. .. ಅಲ್ಲಿಂದ ಸುಮಾರು ಹತ್ತು ಕಿಮೀಗಳು ಕಿವಿಯಲ್ಲಿ
"ಈ ಮೌನವ ತಾಳೆನೋ.. ಮಾತಾಡೇ ದಾರಿಯ ಕಾಣೆನು.. " ಹಾಡು ಗುನುಗುನುಸುತ್ತಿತ್ತು..

ಹತ್ತು ಕಿಮೀಗಳು ನನ್ನ ಕಣ್ಣಲ್ಲಿ "ಇಳಿದು ಬಾ ತಾಯಿ ಇಳಿದು ಬಾ"  ಹಾಡು..

ಹಿಂದೆ ಮೌನದ ಮೆರವಣಿಗೆ.. .ಮುಖ ಊದಿಕೊಂಡಿತ್ತು

ಮನೆಗೆ ಬಂದ ಮೇಲೆ.. "ಯಾಕೆ ಮಾತಿಲ್ಲದೆ ಬಂದೆ.. "

"ಜಾಸ್ತಿ ಆಯಿತು.. ನಿಮಗೆ ತೊಂದರೆ ಆಯಿತು.. "

"ಅಯ್ಯೋ ಅದಕ್ಕೆಲ್ಲಾ ಯೋಚಿಸಬಾರದು.. ಕುಶಿಯಾಗಿರಬೇಕು.. "

ಮತ್ತೆ ಸದ್ದಿಲ್ಲ..

ನನಗೆ ಅದು ಬೇಕು.. ಇದು ಬೇಕು.. ಅಂತ ಕೋಪ ಮಾಡಿಕೊಂಡು ಗಲಾಟೆ ಮಾಡುವ ಮಕ್ಕಳ ಮಧ್ಯೆ "ನಿಮಗೆ ತೊಂದರೆಯಾಯಿತು.. ಸಾರಿ ಎನ್ನುವ" ಈ ರೀತಿಯ ವರಪ್ರಸಾದವೂ ಇರುತ್ತದೆಯೇ ಎಂದು ... ಆಗಸ ನೋಡಿದೆ ..  ತಾರೆಯಾಗಿದ್ದ ಟೀ.. "ವರಪ್ರಸಾದ ಶ್ರೀ .. ತಪಸ್ಸು ಮಾಡಿದರೂ ಈ ರೀತಿಯ ಹೊಂದಾಣಿಕೆ ಇರುವ ಕುಡಿ ಸಿಗುತ್ತಿರಲಿಲ್ಲ.. " ತನ್ನ ಎಂದಿನ ಕಂಜೂಸು ನಗೆ ಕೊಟ್ಟ ಅನುಭವ..

"ಸವಿ ನೆನಪುಗಳು ಬೇಕು ಸವಿಯಲಿ ಬದುಕು" ಆ ನೆನಪುಗಳ ಬತ್ತದ ಮಾಲೆ ಇರಲೇ ಬೇಕು ಬರಲೇ ಬೇಕು..

ನನ್ನ ಗೆಳತಿಯ ಜನುಮದಿನವಿಂದು.. ಕಾಲ ಗರ್ಭದಲ್ಲಿ ಅಡಗಿದ್ದ ಒಂದು ಸಣ್ಣ ಕಲ್ಲು ಹೊರಗೆ ಬಂತು ..

Sunday, December 31, 2017

ಎಂದರೋ ಮಹಾನುಭಾವುಲು ಅಂದರೀಕಿ ವಂದನಮು..

ಸಿಬಿ.. ಒಂದು ವಿಷ್ಯ ಗೊತ್ತಾ.. ಈಗ ಸ್ಕೋರ್ ೪೩೬ ಆಗಿದೆ..

"ವಾಹ್ ಶ್ರೀ..you should go for 500 in 2016"

"ಅದೇನು ಅಷ್ಟು ಕಷ್ಟವಲ್ಲ.. ಎಂಟು ಬ್ಲಾಗ್ ಇದೆ.. ಎಂಟು ತಿಂಗಳಿವೆ.. ತಿಂಗಳಿಗೆ ಎಂಟು ಲೇಖನ ಬರೆದರೆ.. ಸಾಕು... " ಸ್ವಲ್ಪ ಅಹಂನಲ್ಲಿ ಮಾತಾಡಿದ್ದೆ.. 

"Then you do it.. all the best sri"

ದೇವರು ಯು ಟರ್ನ್ ಮಾಡಿಸಿದ.. ೫೦೦ ಇರಲಿ. ಮುಂದಿನ ಎಂಟು ತಿಂಗಳಲ್ಲಿ ೪೫೦ ಕೂಡ ಮುಟ್ಟಲಿಲ್ಲ.. ಸುಸ್ತಾಗಿತ್ತು.. ಕೈ ಬಿಟ್ಟೆ ..೨೦೧೬ ಮುಗಿದು ೨೦೧೭ ಬಂತು.. 

"ಶ್ರೀ ಈ ವರ್ಷ ಯಾವುದೇ ಮಿತಿ ಹಾಕಿಕೊಳ್ಳದೆ ಸುಮ್ಮನೆ ಬರೆಯುತ್ತಾ ಹೋಗಿ " ಸಿಬಿ ಹೇಳಿದಾಗ.. ಅದರ ಜಾಡಿನಲ್ಲಿಯೇ ನೆಡೆದೆ..  

ಇದು ೫೦೦ನೇ ಲೇಖನ.. ಇದನ್ನೆಲ್ಲಾ ನಾ ಬರೆದಿದ್ದಲ್ಲ.. ನನ್ನೊಳಗೆ ಕೂತಿರುವ ನನ್ನ ಆತ್ಮದ ಒಡೆಯ ಹೇಳಿದ್ದು.. ನಾ ಆ ವಾಣಿ ಕೇಳಿದ್ದನ್ನ ಅಲ್ಪ ಸ್ವಲ್ಪ ಕೇಳಿಸಿಕೊಂಡು ಬರೆದ ಲೇಖನಗಳು ಇವು.. ಇವು ನನ್ನ ಪ್ರೀತಿಯ ಓದುಗರಿಗೆ ಇಷ್ಟವಾಗಿದೆ ಅಂದರೆ ಅದರ ಶ್ರೇಯಸ್ಸು ಆ ವಾಣಿಗೆ.. ತಪ್ಪಿದ್ದರೆ.. ಆ ವಾಣಿಯ ಧ್ವನಿಯನ್ನು ಸರಿಯಾಗಿ ಕೇಳಿಸಿಕೊಳ್ಳದೆ ಬರೆದ ತಪ್ಪು ನನ್ನದು.. 

ಸ್ನೇಹಿತರು ತಮಗೆ ಅರಿವಿಲ್ಲದೆ ಸ್ಫೂರ್ತಿ ತುಂಬುವ ಪರಿ ಇದು.. ಶ್ರೀ ನೀವು ಮಾಡಬಲ್ಲಿರಿ, ನೀವು ಬರೆಯಬಲ್ಲಿರಿ ಎನ್ನುವ ಮನೋಸ್ಥೈರ್ಯ ತುಂಬಿದ.. ನನಗೆ ದೇವರು ಕೊಟ್ಟ ಅದ್ಭುತ ಗೆಳತೀ.. ನಿವೇದಿತಾ ಚಿರಂತನ್ ಅಲಿಯಾಸ್ ಸಿಬಿ.. ನನ್ನ ಎಲ್ಲಾ  ಗೊಂದಲಗಳನ್ನು ಪರಿಹರಿಸುವ ದೇವತಾ ಸ್ನೇಹಿತೆ ಇವರು. 

ನಾನು ಕಳಿಸುವ ಸಂದೇಶಗಳ ಅಲ್ಪ ವಿರಾಮ, ಪೂರ್ಣ ವಿರಾಮಗಳಲ್ಲಿ ನನ್ನ ಯೋಚನಾ ಲಹರಿಯನ್ನು ಕಂಡು ಹಿಡಿದು, ಏನಾಯಿತು ಶ್ರೀ ಎಂದು ಅದನ್ನು ನಿವಾರಣೆ ಮಾಡುವ ಈ ಗೆಳತಿಗೆ ಈ ಲೇಖನ ಅರ್ಪಣೆ.. 

ಐನೂರು ಮುಟ್ಟಿ ಎನ್ನುವ ಒತ್ತಾಯವಿರಲಿಲ್ಲ, ಅದನ್ನು ನೀವು ಮಾಡಲೇ ಬೇಕು ಎನ್ನುವ ಧೋರಣೆಯನ್ನು ನನ್ನಲ್ಲಿ ಒತ್ತಡ ಹೇರುವ ಬದಲು.. ಶ್ರೀ ನೀವು ಮಾಡಬಲ್ಲಿರಿ.. ಆರಾಮಾಗಿ ಬರೆಯುತ್ತಾ ಹೋಗಿ.. ನಾ  ಓದಲಿಕ್ಕೆ ಎನ್ನುತ್ತಾ ಸ್ಫೂರ್ತಿ ತುಂಬಿದ ಇವರಿಗೆ ನಾ ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆ .. 

ವಾಹ್ ನಿವ್ಸ್.. ಸೂಪರ್ ಹೀಗಿರಬೇಕು ಸ್ಫೂರ್ತಿ ತುಂಬುವ ರೀತಿ .. ಕಮಾನ್ ಶ್ರೀ ಬರೆಯಿರಿ.. ನಾವು ಇದ್ದೀವಿ ಓದಲಿಕ್ಕೆ ಎನ್ನುವ ದೇವ್ರು ಕಳಿಸಿದ ಸ್ಫೂರ್ತಿ ತುಂಬುವ ರೂಪ ಸತೀಶ್ ಅಲಿಯಾಸ್ DFR.. ಇವರಿಗೆ ನನ್ನ ಧನ್ಯವಾದಗಳು.. 

                                                                         ********

ಬ್ಲಾಗ್ ಲೋಕಕ್ಕೆ ನನ್ನ ಪರಿಚಯಿಸಿದ ಸಂದೀಪ್ ಕೆ ಬಿ, ಶ್ರೀಕಾಂತೂ ಎನ್ನುತ್ತಾ ಲೇಖನಗಳನ್ನು ಓದುವ ಪ್ರಕಾಶ್ ಹೆಗಡೆ, ನೀವು ಬರೆಯಿರಿ ಸರ್ ಆನೆ ನೆಡೆದದ್ದೇ ದಾರಿ ಎನ್ನುವ ಬಾಲೂ ಸರ್, ಶ್ರೀಮನ್ ನಿಮ್ಮ ಭಾವ ಪೂರ್ಣ ಲೇಖನಗಳು ಸೊಗಸು ಎನ್ನುವ ಅಜಾದ್ ಸರ್, ಬ್ಲಾಗೋತ್ತಮ ಬ್ರದರ್ ಎನ್ನುವ ಬದರಿ ಸರ್ ಇವರ ಪ್ರೋತ್ಸಾಹಗಳಿಗೆ ನಾ ಚಿರಋಣಿ.. 

ನನ್ನ ಕನ್ನಡಿಯೆಂದೇ ಹೆಸರಾದ.. ನನ್ನ ಯೋಚನೆಗಳಿಗೆ ಯಥಾವತ್ ಪ್ರತಿಕ್ರಿಯೆ ಕೊಡುತ್ತಾ ಅಣ್ಣ ಅಂದರೆ ನಮ್ಮಣ್ಣ ಎನ್ನುವ  ಸಂಧ್ಯಾ ಭಟ್, ಜನುಮದಿನಕ್ಕೆ ನಾ ಬ್ಲಾಗ್ ಬರೆಯುತ್ತಿದ್ದಾಗ ಅದನ್ನು ಓದಲೆಂದೇ ಮಧ್ಯ ರಾತ್ರಿಯ ತನಕ ಕಾದು ಓದುವ  ಭಾಗ್ಯ ಭಟ್, ನಿಮ್ಮ ಕಾಮೆಂಟ್ಗಳನ್ನೇ ಒಂದು ಪುಸ್ತಕ ಮಾಡಬೇಕು ಎನ್ನುವ ಸುಷ್ಮಾ ಮೂಡಬಿದ್ರಿ, ಕಾಮೆಂಟಿಗ ಎನ್ನುವ ಅಶೋಕ್ ಶೆಟ್ಟಿ, ಶ್ರೀ ಅಣ್ಣ ನಿಮ್ಮ ಬ್ಲಾಗ್ ಓದೋಕೆ ಒಂದು ಖುಷಿ ಎನ್ನುವ ಶುಭ ಹೆಗಡೆ, ನನ್ನ ಎಲ್ಲಾ ಲೇಖನಗಳನ್ನು ಇಷ್ಟ ಪಟ್ಟು ಓದುವ ನನ್ನ ಪ್ರಾಥಮಿಕ  ಶಾಲಾ ದಿನಗಳ ಸುಧಾ ರಂಗರಾಜ್, ನೀನೆ ನನಗೆ ಬರೆಯಲು ಸ್ಫೂರ್ತಿ ಎನ್ನುವ ಪ್ರಕಾಶ್ ನಾಯಕ್, ನಾ ಲೇಖನ ಪ್ರಕಟಿಸಿದ ಕೂಡಲೇ ಸಮಯ ಮಾಡಿಕೊಂಡು ಓದಿ ಪ್ರತಿಕ್ರಿಯೆ ಕೊಡುವ ಸತೀಶ್ ಕೆವಿ, ನಿಶ್ಯಬ್ಧ ಕೂಡ ಒಂದು ಮೆಸೇಜ್ ಎನ್ನುವ ಶೋಭನ್ ಬಾಬು, ಗೆಳೆಯ ನಿನ್ನ ಬರಹಗಳನ್ನು ತಡವಾದರೂ ಓದುವೆ ಎನ್ನುವ ನಂದಿನಿ, ಶ್ರೀ ನಿನ್ನ ಬರಹಗಳಿಗೆ ಮಾತಿಲ್ಲ .. ಎನ್ನುವ ಶ್ರೀ ಲಕ್ಷ್ಮಿ.. ಹೇಳುತ್ತಾ ಹೋದರೆ ಪಟ್ಟಿ ಹನುಮಂತನ ಬಾಲದ ತರಹ ಬೆಳೆಯುತ್ತೆ.. ನನ್ನ ಎಲ್ಲಾ ಸ್ನೇಹಿತರು, ನನ್ನ ಬಂಧು ಬಳಗ, ನನ್ನ ಆತ್ಮೀಯರಿಗೆ ಈ ಬ್ಲಾಗಿನ ಮೂಲಕ ಧನ್ಯವಾಗಳನ್ನು ಹೇಳಬಯಸುತ್ತೇನೆ.. 

ನನ್ನ ಎಲ್ಲಾ ಪ್ರೀತಿಯ ಓದುಗರಿಗೂ ನನ್ನ ಧನ್ಯವಾದಗಳು.. 

**************

ಮರಿ ಬರಿ ಮರಿ.. ಬರೀಬೇಕು ಮರಿ.. ಎನ್ನುತ್ತಾ ನನ್ನ ಬ್ಲಾಗ್ ಲೋಕಕ್ಕೆ ಧುಮುಕಲು ಸ್ಫೂರ್ತಿ ನೀಡಿದ ರೋಹಿತ್ ಚೂಡಾನಾಥ್.. ಇವನು ನನ್ನ ಟ್ರೆಕ್ಕಿಂಗ್ ಗುರು.. ಇವನ ಜೊತೆ  ಮಾಡಿದ ಚಾರಣಗಳು ಅದ್ಭುತ.. 

ಬ್ಲಾಗಿನ ಆರಂಭದ ದಿನಗಳಲ್ಲಿ ಆಂಗ್ಲ ಭಾಷೆಯಲ್ಲಿ ಬರೆಯುತ್ತಿದ್ದೆ.. ಅದನ್ನು ಓದಿ ಪ್ರೋತ್ಸಾಹಿಸಿ.. ಶ್ರೀ ಎಲ್ಲರೂ ಇಂಗ್ಲಿಷಿನಲ್ಲಿ ಬರೆಯುತ್ತಾರೆ.. ಕನ್ನಡದಲ್ಲಿ ಬರೆಯುವವರು ಕಡಿಮೆ.. ನೀವು ಬರೆಯಿರಿ ಅಂದಾಗ.. ಅದನ್ನೇ ಹಿಡಿದು ಸಾಗಿದೆ ..ಹಾಗೆ ಬರೆಯಲು ಸ್ಫೂರ್ತಿ ನೀಡಿದ್ದು ಮಂಜು ಶಂಕರ್.. 

*************

ಕಾರ್ಪೊರೇಟ್ ಸಂಸ್ಥೆಗಳಲ್ಲಿ ಕಸವನ್ನು ಹಾಕಲು ವಿವಿಧ ಬಣ್ಣದ  ಬುಟ್ಟಿಗಳನ್ನುಇಟ್ಟಿರುತ್ತಾರೆ.. ವಿವಿಧ ರೀತಿಯ ಕಸಗಳನ್ನು ತುಂಬಲು ವಿವಿಧ ಬಣ್ಣದ ಬುಟ್ಟಿಗಳು.. ನನ್ನ ಮನದಲ್ಲಿ ಮೂಡುವ ಯೋಚನೆಗಳನ್ನು ಒಂದೇ ಬುಟ್ಟಿಯಲ್ಲಿ ಹಾಕಲು ಇಷ್ಟಪಡದೆ ಅದಕ್ಕೊಂದು ತರಹಾವರಿ ಹೆಸರುಗಳನ್ನಿಟ್ಟು ಇಷ್ಟ ಪಟ್ಟವರು ತಮಗೆ ಇಷ್ಟಪಟ್ಟ ವಿಷಯಗಳನ್ನು ಓದಲಿ, ಅಥವಾ ನನ್ನ ಯೋಚನೆಗಳು ಆ ಬುಟ್ಟಿಯಲ್ಲಿ ಹೋಗಿ ಕೂರಲಿ ಎಂದು ಆಶಿಸುತ್ತಾ ಶುರುಮಾಡಿದ್ದು ಒಂದೆರಡು ಬ್ಲಾಗ್ ಅಂಗಣಗಳು.. ಆದರೆ ಬರುತ್ತಾ ಅದು ಎರಡಾಯಿತು,ಮೂರಾಯಿತು .. ಈಗ ಎಂಟಕ್ಕೆ ಬಂದು ನಿಂತಿದೆ.. 

ಮೊದಲು ಜನ್ಮ ತಾಳಿದ್ದು ಚಾರಣದ ಲೇಖನಗಳು.. ನನ್ನ ಅಲೆಮಾರಿಗಳು ತಂಡ ಮಾಡಿದ  ದಾಖಲಿಸುವ ಬ್ಲಾಗ್ Tripping ಲೈಫ್.. ಶ್ರೀ ನಿನ್ನ ಈ ಬರೆಯುವ ಶೈಲಿ ಸೊಗಸಾಗಿದೆ,. ನಮ್ಮ ಶಾಲೆಯ ದಿನಗಳು, ನಮ್ಮ ಸ್ನೇಹ ಇದರ ಬಗ್ಗೆ ಬರೆಯುತ್ತ ಹೋಗು ಎಂದು ಬೆನ್ನು ತಟ್ಟಿದ ನನ್ನ ಜೀವದ ಗೆಳೆಯರಾದ ಜೆಎಂ ಸತೀಶ್, ಶಶಿ, ವೆಂಕಿ, ಲೋಕಿ ಮತ್ತು ಪ್ರತಿಭಾ, ಸಮತಾ ಇವರ ಪ್ರೋತ್ಸಾಹದ ಫಲ ಹುಟ್ಟಿದ್ದು Kantha the magnet of friendship. 
ನನ್ನ ಜೀವನವನ್ನು ಹಲವಾರು ರೀತಿಯಲ್ಲಿ ತಿದ್ದಿ ತೀಡಿದ್ದರ ಪಾಲಲ್ಲಿ ಚಲನ ಚಿತ್ರಗಳುಪಾತ್ರವೂ ಇದೆ .. ನಾ ನೋಡಿದ, ಸ್ಫೂರ್ತಿ ನೀಡಿದ,  ಸಂದೇಶಗಳನ್ನು ಅಳವಡಿಸಿಕೊಳ್ಳುವ ಚಿತ್ರಗಳ ಬಗ್ಗೆ, ಸಂಭಾಷಣೆಗಳ ಬಗ್ಗೆ, ಹಾಡುಗಳು, ಛಾಯಾಗ್ರಹಣ, ತಂತ್ರಜ್ಞಾನ ಇದನ್ನೆಲ್ಲಾ ಬರೆಯಲು ಒಂದು ವೇದಿಕೆ ಬೇಕು ಎಂದು ಅನಿಸಿದಾಗ ಮೂಡಿದ್ದು moved movies.. ಇದಕ್ಕೆ ಬೆಂಬಲವಾಗಿ ನಿಂತದ್ದು  ಆತ್ಮೀಯ ಗೆಳೆಯ, ಮಾರ್ಗದರ್ಶಿ ವಿಕ್ರಮಾದಿತ್ಯ ಅರಸ್.. 
ಶ್ರೀ.. ನೀವು ಬರೆಯುವ ಕೆಲವು ಪಂಚಿಂಗ್ ಸಂಭಾಷಣೆ, ಮಾತುಗಳು ಸೂಪರ್ ಇರುತ್ತವೆ, ಅದನ್ನು ಒಂದು ಬ್ಲಾಗ್ ನಲ್ಲಿ ಬರೆಯಿರಿ.. ಸೊಗಸಾಗಿರುತ್ತೆ ಎಂದು ಹುರಿದುಂಬಿಸಿದ್ದು ಸಂದೀಪ್ ಕೆಬಿ.. ಅದಕ್ಕೆ ನಾ point pancharangi ಎಂದು ಹೆಸರಿಟ್ಟಾಗ ಚಪ್ಪಾಳೆ ತಟ್ಟಿ ಖುಷಿ ಪಟ್ಟರು.. 
ಜಗತ್ತನ್ನು ನೋಡಲು ಕಳಿಸಿದ್ದು, ಕಲಿಸಿದ್ದು ನನ್ನ ಕುಟುಂಬ.. ನನ್ನ ಕುಟುಂಬದ ಸದಸ್ಯರು, ನೋವು ನಲಿವು, ನನ್ನ ಪರಿವಾರ, ನನ್ನ ಆಲೋಚನೆಗಳು, ಮನದ ಇಂಗಿತಗಳು, ಹುಚ್ಚು ಮನಸ್ಸಿನ ಯೋಚನೆಗಳು ಇವಕ್ಕೆಲ್ಲಾ ಸೆರಗೊಡ್ಡಿ ನಿಂತದ್ದು Sri Parapancha.. ಇದಕ್ಕೆ ಲಕ್ಷ ವರ್ಷ ಅಂತ ಯಾಕೆ ಹೆಸರು ಬಂತು ಗೊತ್ತೇ.. ಕಾಲೇಜು ದಿನಗಳಲ್ಲಿ ಸಂಚಲನ ಮೂಡಿಸಿದ್ದ ಆಶಿಕಿ ಚಿತ್ರದ ಗೀತೆಗಳು.. ಹುಚ್ಚೆಬ್ಬಿಸಿದ್ದವು.. ಹಾಗೆ ಮಾತಾಡುತ್ತಿದ್ದಾಗ.. ನಾ ಹೇಳಿದ್ದೆ.. ಈ ಚಿತ್ರದ ಹಾಡುಗಳಿಂದಲೇ ಈ ಚಿತ್ರ ಲಕ್ಷವರ್ಷ ಓಡುತ್ತೆ ಅಂತ. .. ಆಗ ನನ್ನ ಗೆಳೆಯ.. ಶಶಿ ಹೇಳಿದ.. ಇವನಿಗೆ ಎಲ್ಲೋ ಹುಚ್ಚು. ಲಕ್ಷ ವರ್ಷ ಅಂತೇ.. ಅಂತ ಹೇಳಿ ನಕ್ಕಿದ್ದ.. ನಾವು ಸೇರಿ ನಕ್ಕು ಅದನ್ನೇ ಒಂದು ಜೋಕ್ ಮಾಡುತ್ತಾ ನಕ್ಕಿದ್ದೆವು.. 
ಓದಿಗಾಗಲಿ, ಆಟಕ್ಕಾಗಲಿ, ಆಫೀಸಿನ ಕೆಲಸಗಳಾಗಲಿ ಚೆನ್ನಾಗಿ ಆಗಬೇಕು ಎಂದರೆ.. ಅದಕ್ಕೆ ಒಂದು ಉತ್ತಮ ಮನಸ್ಸಿನ ತಂಡ ಬೇಕು.. ಅಂತಹ ತಂಡವೂ ನನ್ನ ಕೆಲಸದ ಆರಂಭದ ದಿನಗಳಿಂದಲೂ ಸಿಕ್ಕಿದ್ದು ನನ್ನ ಪುಣ್ಯ.. ಅವರ ಅದ್ಭುತ ಒಡನಾಟವೂ ಚಿತ್ರಿಸುವ ಬಯಕೆಯಿಂದ ಅರಳಿದ್ದು The Team of Invincibles.. 
ಹೆಸರು ಒಂದೇ. ಮನೋಭಾವ ಒಂದೇ.. ಅಭಿರುಚಿ ಒಂದೇ.. ಹೀಗೆ ಇರುವುದು ಬಲು ಅಪರೂಪ  ನನ್ನ ಸೋದರ ಮಾವ.. ಅಂದರೆ ನನ್ನ ತಾಯಿಯ ತಮ್ಮ ರಾಜ ಅಲಿಯಾಸ್ ಶ್ರೀಕಾಂತ.. ಇವನು ನಾನು ಮಾಡಿದ ಸಾಹಸಗಳ ಬಗ್ಗೆ ಬರೆಯುತ್ತಾ ಹೋದರೆ ಅದೇ ಒಂದು ಪುಸ್ತಕವಾಗುತ್ತದೆ.. ಜಗತ್ತು ಇವನನ್ನು ಒಂದು ತಮಾಷೆ ವಸ್ತುವಾಗಿ ನೋಡಿದ್ದೇ ಹೆಚ್ಚು.. ಆದರೆ ಇವನ ನಿಷ್ಕಲ್ಮಶ ಮನಸ್ಸಿನಲ್ಲಿ ಅರಳಿದ ಸ್ನೇಹಲೋಕ ತುಂಬಾ ದೊಡ್ಡದು.. ಇವನ ಜೊತೆಗಿನ ಒಡನಾಟದ ಬಗ್ಗೆ ಬರೆಯಲು ಹುಚ್ಚು  ಹತ್ತಿದಾಗ ಎಟುಕಿದ್ದು raja-srikanth-htnakirs
ಜನುಮ ನೀಡಿದಾತ ಹೇಳಿಕೊಡದೆ ಕಲಿಸಿದ ಪಾಠ ಅನಂತ. . ತಾನು ಹೇಳಿ ಅದನ್ನೇ ಪಾಲಿಸು ಎನ್ನುವವರು ಕೆಲವರಾದರೆ.. ತಾನು ನೆಡೆದು ಅದನ್ನು ಪಾಲಿಸು ಎನ್ನುವವರು ಇನ್ನೊಂದು ತರಹ.. ಆದರೆ ನಮಗೆ ಹೀಗೆ ಏನೂ ಹೇಳದೆ ತನ್ನ ಆದರ್ಶವನ್ನು ಕಾಯ್ದುಕೊಂಡು ತನ್ನ ಪಾಡಿಗೆ ಹೆಜ್ಜೆ ಹಾಕಿ.. ನಾವು ಅವರ ಹೆಜ್ಜೆಯಲ್ಲಿ ನೆಡೆಯುವ ಹಾಗೆ ಸ್ಫೂರ್ತಿ ತುಂಬಿದವರು ನನ್ನ ಅಪ್ಪ.. ಅವರ ಜೀವನ ಕಥಾನಕವನ್ನು ಹೊರಗೆ ತರಬೇಕು ಎನ್ನುವುದು ನನ್ನ ಕನಸು ಆ ಕನಸ್ಸಿನ ಒಂದು ಹೆಜ್ಜೆ ಮಂಜಲ್ಲಿ ಮಂಜಾದ ಮಂಜು
**********

ಈ ಬರಹಕ್ಕೆ ಕಳಶವಿಟ್ಟಂತೆ ಬ್ಲಾಗ್ ಲೋಕದ ಗುರುಗಳು ಎಂದು ನಾ ಹೇಳುವ ಶ್ರೀ ಸುನಾಥ ಕಾಕಾ ಅರ್ಥಾತ್ ಶ್ರೀ ಸುಧೀಂದ್ರ ದೇಶಪಾಂಡೆ ನನ್ನ ಶ್ರೀ ಪರಪಂಚದ ಲೇಖನಗಳನ್ನು ಓದಿ ಮೆಚ್ಚಿ, ಪ್ರತಿಕ್ರಿಯೆ ನನಗೆ ದೊಡ್ಡ ಬಹುಮಾನ ಎನ್ನಿಸಿತು.. ಅವರ ಪ್ರತಿಕ್ರಿಯೆಗಳಿಗೆ ಶಿರಬಾಗಿ ನಮಿಸುವೆ.. 

**********

ಇದು ನನ್ನ ಬರಹದ ಲೋಕದ ಐದು ನೂರನೇ ಬರಹ.. ಬರೆದದ್ದು ಬೇಕಾದಷ್ಟು.. ಅದರಲ್ಲಿ ಜೊಳ್ಳು, ಕಾಳು ಎಲ್ಲವೂ ಇವೆ.. ನೀವು ಓದಿ ಇಷ್ಟಪಟ್ಟಿದ್ದೀರಿ, ಬೆನ್ನು ತಟ್ಟಿದ್ದೀರಿ, ಮತ್ತಷ್ಟು ಬರೆಯಲು ಪ್ರೋತ್ಸಾಹ ನೀಡಿದ್ದೀರಿ ಇದಕ್ಕಿಂತ ನಾ ಕೇಳೋದು ಇನ್ನೇನು ಇದೆ.. ತಪ್ಪುಗಳು ಬೇಕಾದಷ್ಟಿದ್ದರೂ, ಶ್ರೀ ನಿಮ್ಮ ಬರಹ ಅದ್ಭುತ ಎನ್ನುವ ನನ್ನ ಬ್ಲಾಗ್ ಲೋಕದ ಗೆಳೆಯರಿಗೆ ಶಿರಬಾಗಿ ನಮಿಸುವೆ.. 

ನಿಮ್ಮ ಪ್ರೀತಿಯ ಅಭಿಮಾನ ನನಗೆ ಶ್ರೀ ರಕ್ಷೆ.. ಅದಕ್ಕೆ ದಾಸರ ಪದವನ್ನು ಹೇಳೋಣ ಅನ್ನಿಸಿತು .. 

ಎಂದರೋ ಮಹಾನುಭಾವುಲು ಅಂದರೀಕಿ ವಂದನಮು.. 
ಚಿತ್ರಕೃಪೆ - ಗೂಗಲೇಶ್ವರ 

Saturday, December 30, 2017

ಬಯಸದೆ ಬಂದ ಭಾಗ್ಯ.. .. !

ಭಕ್ತ ಕುಂಬಾರ ಚಿತ್ರದ ಅಂತಿಮ ದೃಶ್ಯ.. ಗೋರನ ಕೈಗಳು ಮತ್ತೆ ಮೂಡಿಬರುತ್ತೆ .. ಮಗು ಸಿಗುತ್ತೆ ..

ವಿಠಲ ಗೋರನನ್ನು ಮತ್ತು ಆತನ ಕುಟುಂಬವನ್ನು ಅನುಗ್ರಹಿಸಿದಾಗ ಅಣ್ಣಾವ್ರು ಹೇಳುವ ಮಾತು

"ವಿಠಲ ಕೊಡುವವನು ನೀನೆ.. ತೆಗೆದುಕೊಳ್ಳುವವನು ನೀನೆ.. ಮತ್ತೆ ಕೊಟ್ಟು ಉದ್ಧಾರ ಮಾಡುವವನು ನೀನೆ.. "

ಈ ದೃಶ್ಯ ನೋಡುತ್ತಾ ಹಲವಾರು ಬಾರಿಮೂಕನಾಗಿದ್ದೇನೆ ..

 ಗಾಬರಿ ಆಗಬೇಡಿ ಮತ್ತೆ ನನ್ನ  ಪ್ರೀತಿಯ ಓದುಗರಾದ ನಿಮ್ಮನ್ನು ಭಾವಸಾಗರದಲ್ಲಿ ತೇಲಿಸುವುದಿಲ್ಲ.. ಅಳಿಸೋಲ್ಲ..

ದುಡ್ಡು ದುಡ್ಡು ದುಡ್ಡು ಇದು ತೆಲುಗು ಮೂಲದ ಶ್ರೀ ಯಂಡಮೂರಿ ವೀರೇಂದ್ರನಾಥ ಅವರ ಅದ್ಭುತ ಕಾದಂಬರಿ.. ಅಲ್ಲಿನ ನಾಯಕ ಎಲ್ಲವನ್ನು ಕಳೆದುಕೊಂಡಿರುತ್ತಾನೆ.. ಆಗ ಅವನಿಗೆ ದೊರೆಯುವ ನುಡಿಮುತ್ತು.. "ಕಳೆದುಕೊಂಡಲ್ಲೇ ಹುಡುಕು... "

ನನ್ನ ಪ್ರೀತಿಯ ವಿಕ್ಟರ್ ಮತ್ತು ರಿಟ್ಜ್ ನನಗೆ ಹೇಳಿದ್ದು ಇಷ್ಟೇ.. ಶ್ರೀ ದೇವರ ಚಿತ್ರಕಥೆಯಲ್ಲಿ ಇದ್ದ ಹಾಗೆ ನೆಡೆದಿದೆ.. ಇದನ್ನು ನೆನೆದು ನೆನೆದು ಮನಸ್ಸನು ಘಾಸಿ ಮಾಡಿಕೊಳ್ಳದೆ ಮುಂದೆ ಹೆಜ್ಜೆ ಇದು.. ಕಳೆದುಕೊಂಡಲ್ಲೇ ಹುಡುಕು..

ಭಗವಂತನ ಲೀಲೆ ಏನಿರುತ್ತೋ ಯಾರಿಗೆ ಗೊತ್ತು.. ನನಗರಿವಿಲ್ಲದೆ ಬಳುವಳಿಯಾಗಿ ಬಂತು ಕಾಣದ ಕಡಲಿಂದ ಒಂದು ಪ್ರೀತಿಯ ಉಡುಗೊರೆ.. ಬೇಡ ಅನ್ನಲಿಕ್ಕೆ ಸಮಯವೇ ಇರಲಿಲ್ಲ.. ಜೊತೆಯಲ್ಲಿ ಬೇಡ ಎನ್ನುವ ಗುಂಡಿ ನಿಷ್ಕ್ರಿಯವಾಗಿತ್ತು.. ಅಲ್ಲಿ ಒತ್ತಬೇಕಾದ್ದು "ಹೌದು" ಎನ್ನುವ ಗುಂಡಿ ಒಂದೇ..

ಶ್ರೀ ನಿಮ್ಮ ಉಡುಗೊರೆ ತಗೊಳ್ಳಿ ಅಂತ ಹೇಳಿದಾಗ ನಾ ನಂಬಲು ಸಿದ್ಧನಿರಲಿಲ್ಲ.. ಹಾಗಾಗಿ ನನ್ನ ಮಾತೃ ದೇವೋಭವ ಅವರಿಗೆ ತೆಗೆದುಕೊಳ್ಳಲು ಹೇಳಿದೆ.. ಅವರ ಕೈಯಿಂದ ನನಗೆ ಬಂತು..

ಅದು ಏನೂ ಅಂತೀರಾ.. ಚಿತ್ರಗಳನ್ನು ನೋಡಿ..

ನಾ ಚಲಾಯಿಸಲು ಸಿದ್ಧನಿರಲಿಲ್ಲ.. ಕಾರಣ ಗೊತ್ತಿಲ್ಲ.. ಆದರೆ ನನ್ನ ತಮ್ಮ ಮುರುಳಿ.. ನೀನೆ ಓಡಿಸಬೇಕು ಅಂತ ಹಠ ಮಾಡಿದ.. ಪಕ್ಕದಲ್ಲಿ ನನ್ನ ಸ್ನೇಹಿತೆ ಶೀತಲ್.. "ಅಪ್ಪ ಯು ಕ್ಯಾನ್ ಡು ಇಟ್" ಅಂದಳು.. ಅಮ್ಮ ಹೂಂ ಎಂದರು..

ಸ್ಟೇರಿಂಗ್ ಹಿಡಿದಾಗ ಹಾಗೆ ಕಣ್ಣ ಮುಂದೆ ಸಿನಿಮಾ ಓಡಿತು.. ಕಣ್ಣುಗಳು ಮಂಜಾದವು.. ಶ್ರೀ.. ಕಮಾನ್ ಅಂದಿತು ಒಳಗಿರುವ ಶಕ್ತಿ.. ಸಲೀಸಾಗಿ ಮನೆಯ ತನಕ ಬಂದೆ..

ಪೂಜೆ ಮಾಡಿಸುವ ಬಗ್ಗೆ ಮಾತಾಯಿತು.. ಅಮ್ಮ ನೀನೆ ಮಾಡಬೇಕು ಅಂತ ಹಠ ಮಾಡಿದೆ..

ಮುರುಳಿ.. ಇವನೊಬ್ಬ .. ಇವನಿಗೆ ಏನೂ ಹೇಳೋದು.. ಅಂತ ಬಯ್ದ..

ಅಕ್ಕ "ಮಾತೃ ದೇವೋಭವ ಕಣೋ" ಅಂದ್ಲು..

ಫಲಿತಾಂಶ.. ಅಮ್ಮನ ಕೈಯಲ್ಲಿ ಪೂಜೆ ಆಯಿತು..ನನಗಲ್ಲ.. ಬದಲಿಗೆ ಮನೆಗೆ ಬಂದ ಉಡುಗೊರೆಗೆ.. ತಲೆ ಎತ್ತಿ ನೋಡಿದೆ..
​ಬಯಸದೇ ಬರುವ ಭಾಗ್ಯ 
ಅರಿವಿಲ್ಲದೇ ಬರುವ ಅಡೆತಡೆಗಳು 
ನಮ್ಮನ್ನ ಪುಟಕ್ಕಿಟ್ಟ ಚಿನ್ನವಾಗಿಸುತ್ತವೆ..

ಭಾಗ್ಯ ನಿನ್ನದೇ ಲೀಲೆ ಎಂದು ಭಗವಂತನಿಗೆ ವಂದನೆ ಹೇಳಿದರೆ
ಅಡೆತಡೆಗಳು ನೀನಿದ್ದರೆ ಲೀಲೆ ಎಂದು ಭಗವಂತನಿಗೆ ಶರಣಾಗುತ್ತದೆ..

ಶುಭಮಂಗಳಮಯವಾಗಿರಲಿ 

ಎಂದು ಅಶರೀರವಾಣಿ ನುಡಿದು.. ಅದರ ಜೊತೆಯಲ್ಲಿಯೇ "ಸೂಪರ್" ಚಿನ್ಹೆ ಕಾಣಿಸಿತು..