Monday, March 7, 2016

ಜನುಮದಿನಕ್ಕೆ ಶುಭಾಶೀರ್ವಾದ .. ಶಿವಾರ್ಪಣ ಮಸ್ತು!!!

ಅಣ್ಣಾವ್ರ ಭಕ್ತ ಕುಂಬಾರ ಚಿತ್ರ ಬಾರಿ ಬಾರಿ ನೆನಪಿಗೆ ಬರುತ್ತಿತ್ತು.

ಕಳೆದ ವಾರವಷ್ಟೇ ನನ್ನ ಜನುಮದಿನಕ್ಕೆ ಸಾಗರೋಪಾದಿಯಾಗಿ ಹರಿದು ಬಂದ ಶುಭಾಶಯಗಳ ನೆರೆ ನನ್ನ ಮನವನ್ನು ತೋಯಿಸಿತ್ತು. ನನ್ನ ಕೈಲಾದ ಮಟ್ಟಿಗೆ ಪ್ರತಿ ಸಂದೇಶಕ್ಕೂ ಪ್ರತಿಕ್ರಿಯೆ ನೀಡಿದ್ದೆ. ಆದರೂ ಮನದಲ್ಲಿ ಯಾಕೋ ಖಾಲಿ ಖಾಲಿ ಅನುಭವ. ಇನ್ನೂ ಏನೋ ಹೇಳಬೇಕಿತ್ತು ಅನ್ನುವ ಭಾವ ಕಾಡುತ್ತಿತ್ತು.

ಇಂದು ಶಿವರಾತ್ರಿ. ಕಳೆದ ವಾರವಷ್ಟೇ ನನ್ನ ಮನೆಗೆ ಅಮ್ಮ ಬಂದಿದ್ದರು. ನೀನು ಶಿವರಾತ್ರಿ ಹಿಂದಿನ ದಿನ ಹುಟ್ಟಿದ್ದು. ನೀನು ಹುಟ್ಟಿದೆ, ನಿನ್ನ ಮುತ್ತಜ್ಜಿಗೆ ಮೂರು ದಿನ ಉಪವಾಸ ಎಂದಿದ್ದರು. ಇದರ ಬಗ್ಗೆ ಎರಡು ವರ್ಷದ ಹಿಂದೆ ಬರೆದಿದ್ದೆ. ಅಮ್ಮನಿಗೆ ಹೆರಿಗೆ ನೋವು ಶುರುವಾಗಿತ್ತು. ಅಂದಿನ ದಿನ ರಾತ್ರಿ ಪೂರ ನನ್ನ ಮುತ್ತಜ್ಜಿ ನಿದ್ದೆ ಗೆಟ್ಟು ತಾಯಿಯಿಲ್ಲದ ನನ್ನ ತಾಯಿಗೆ ತಾಯಿಯಾಗಿ ಉಪಚರಿಸಿದ್ದರು.

ನಾ ಭುವಿಗೆ ಬಂದ ದಿನ.. ಪುರುಡು ಕಾರಣಕ್ಕೆ ಆಚಾರ ವಿಚಾರ ಮಡಿ ಮಾಡುತ್ತಿದ್ದ ನನ್ನ ಮುತ್ತಜ್ಜಿ ಊಟವಿಲ್ಲದೆ ದಿನ ಕಳೆದಿದ್ದರು. ಮಾರನೆ ದಿನ ಶಿವರಾತ್ರಿ. ಮತ್ತೆ ಉಪವಾಸ. ಒಮ್ಮೆ ಮುತ್ತಜ್ಜಿ ನಗು ನಗುತ್ತಾ ಯಾವ ಸಮಯದಲ್ಲಿ ಭುವಿಗೆ ಬಂದೆಯೋ ಮೂರು ದಿನ ಉಪವಾಸ ನನಗೆ ಎಂದಿದ್ದರು.

ಇದೆಲ್ಲಾ ಹಾಗೆ ಕಣ್ಣ ಮುಂದೆ ಬಂದು ಹೋಯ್ತು.

ಕಚೇರಿಯಲ್ಲಿ ಲೆಕ್ಕ ಪತ್ರ ಪರಿಶೀಲನೆ ಕಾರಣ ಅಧಿಕ ಕೆಲಸದ ಒತ್ತಡ. ಕಳೆದ  ಒಂದು ತಿಂಗಳಿಂದ ಎಡಬಿಡದೆ ಶನಿವಾರ ಭಾನುವಾರ ಎನ್ನದೆ ಕಚೇರಿಗೆ ಹೋಗಿದ್ದೆ. ದಣಿವಾಗಿರಲಿಲ್ಲ ಆದರೆ ಉತ್ಸಾಹ ಕಡಿಮೆಯೇನೋ ಅನ್ನಿಸಿತು. ಆಗ ಅಣ್ಣಾವ್ರ ಶಂಕರ್ ಗುರು ಚಿತ್ರದ ಸಂಭಾಷಣೆ ನೆನಪಿಗೆ ಬಂತು.

"ವಿಶ್ರಾಂತಿ ಬೇಕಾಗಿರುವುದು ದೇಹಕ್ಕಲ್ಲ ಮನಸ್ಸಿಗೆ ಮನಸ್ಸಿಗೆ..... "

ಅದನ್ನೇ  ಅರಸಿಕೊಂಡು ಇಂದು ಸಂಜೆಮನೆಯ ಹತ್ತಿರ ಇರುವ ಕಾಶಿ ವಿಶ್ವಾನಾಥನ ಗುಡಿಗೆ ಹೋದೆ. ಶಿವರಾತ್ರಿ ಪ್ರಯುಕ್ತ ಭಕ್ತಾದಿಗಳು ಸರತಿಯಲ್ಲಿ ನಿಂತು ಕಾಯುತ್ತಿದ್ದರು. ನಾನು ನಿಂತೇ.

ಮನಸ್ಸಲ್ಲೇ ಭಕ್ತ ಕುಂಬಾರ ಚಿತ್ರದ ದೃಶ್ಯ ಓಡುತ್ತಿತ್ತು. ಸಂತ ನಾಮದೇವರು ಗೋರನ ಮಾತಿಂದ ಕೋಪಗೊಂಡು ಹೊರಗೆ ಬಂದಾಗ, ಒಂದು ದೇಗುಲದಲ್ಲಿ ಶಿವಲಿಂಗದ ಮೇಲೆ ಕಾಲನ್ನಿಟ್ಟು ಮಲಗಿದ್ದ ಒಬ್ಬ ಸಂತನನ್ನು ಕಂಡು ಕೋಪದಿಂದ ಬಯ್ಯುತ್ತಾರೆ. ಆಗ ಆ ವೃದ್ಧ ಸಂತ, ಶಿವನಿಲ್ಲದ ಜಾಗದಲ್ಲಿ ನನ್ನ ಕಾಲನ್ನಿಡು ಎಂದು ಹೇಳುತ್ತಾರೆ. ಆದರೆ ಪ್ರತಿ ತಾಣದಲ್ಲೂ ಶಿವ ಕಾಣುತ್ತಾನೆ, ಕಡೆಗೆ ಸೋತು ಮುಖ ಹಾಕಿಕೊಂಡು ಅಜ್ಞಾನ, ಅಹಂಕಾರ ತುಂಬಿಕೊಂಡ ನನ್ನ ತಲೆಯೇ ಶಿವನಿಲ್ಲದ ತಲೆ ಎಂದು ಸಾಧುವಿನ ಕಾಲನ್ನು ತನ್ನ ತಲೆಯ ಮೇಲೆ ಇಟ್ಟುಕೊಳ್ಳುತ್ತಾನೆ ಮತ್ತು ಗುರು ಕಟಾಕ್ಷದಿಂದ ಪುನೀತನಾಗುತ್ತಾನೆ.

ಹಾಗೆ ನನ್ನ ಮನಸ್ಸು ಹೇಳುತ್ತಿತ್ತು, ಶಿವನೆ, ನನ್ನ ಇಷ್ಟ ಪಡುವ, ಪ್ರೀತಿಸುವ ಅನೇಕ ನೂರಾರು ಹೃದಯವಂತ ಸ್ನೇಹಿತರಿದ್ದಾರೆ, ಇವರ ಸ್ನೇಹ, ಪ್ರೀತಿಗಳಿಂದ ನನಗೆ ಅಹಂ ಬರದೆ, ನೀ ನನ್ನ ಮನದಲ್ಲಿ ತಲೆಯಲ್ಲಿ ಯಾವಗಾಲೂ ನೆಲೆಸಿರುವ ತಂದೆ ಎಂದು ಬೇಡಿಕೊಂಡು ದೇಗುಲದೊಳಗೆ ಹೋದೆ.

ನನಗೆ ತೋಚಿದಷ್ಟು ಮಂತ್ರಗಳನ್ನು ಹೇಳಿಕೊಂಡು ಶಿವನಿಗೆ ನಮಸ್ಕರಿಸಿ ಹೊರಬರಲು ಅನುವಾದಾಗ ಅರ್ಚಕರು ಸಿಕ್ಕರು. ನಗುಮೊಗದ ಅವರನ್ನು
"ಚೆನ್ನಾಗಿದ್ದೀರಾ ಗುರುಗಳೇ"  ಎಂದೇ.
"ನಮಸ್ಕಾರ ಚೆನ್ನಾಗಿದ್ದೀರಾ? ಎಲ್ಲಿ ನಿಮ್ಮ ಮನೆಯವರು ಬರಲಿಲ್ಲ"
"ಬೆಳಿಗ್ಗೆ ಬಂದು ಪೂಜೆ ಮಾಡಿಸಿಕೊಂಡು ಹೋದರು" ಎಂದೇ
ಸ್ವಲ್ಪ ಹೊತ್ತು ಇಲ್ಲೇ ನಿಲ್ಲಿ ಎಂದು ಗರ್ಭ ಗುಡಿಯ ಒಳಗೆ ಹೋದರು.
ನಾ ಅಲ್ಲೇ ಧ್ಯಾನಿಸುತ್ತಾ ನಿಂತೇ.
ತಗೊಳ್ಳಿ ಪ್ರಸಾದ ಎಂದು ನನಗೆ ಇಷ್ಟವಾದ ಗೊಜ್ಜು ಅವಲಕ್ಕಿ ಮತ್ತು ಪ್ರಸಾದ ಎಂದು ದೇವರಿಗೆ ಅರ್ಚಿಸಿದ್ದ ಹೂವನ್ನು ಕೊಟ್ಟರು. ನಾ ಆಶ್ಚರ್ಯಚಕಿತನಾದೆ. ಭಕ್ತಿ ಪೂರ್ವಕವಾಗಿ ಅವರಿಗೆ ಪ್ರವರ ಹೇಳಿ ನಮಸ್ಕರಿಸಿದೇ.

ಹೊರಗೆ ಬಂದೆ.. ದೇವ ನಾ ಒಂದು ಚಿಕ್ಕ ಕೋರಿಕೆಯನ್ನು ಕೇಳಿದೆ.. ನೀ ಪ್ರಸಾದ ರೂಪದಲ್ಲಿ ಕರುಣಿಸಿದ್ದೀಯ.. ನಿನ್ನ ಮಹಿಮೆ ಅಪಾರ ಎಂದು ಮನದಲ್ಲೇ ಗುನುಗುನಿಸಿತು.

ಮನಸ್ಸು ಹಾಗೆ ಮಾರ್ಗಶಿರ ಮಾಸವಾದರೂ ಅಣ್ಣಾವ್ರ ಶ್ರಾವಣ ಬಂತು ಚಿತ್ರದ ಹಾಡು ನೆನಪಿಗೆ ಬಂತು.
"ಆ ಮಂಜುನಾಥನ ಕೃಪಾಕಟಾಕ್ಷವು ಎಂದೆಂದೂ ನಿಮಗಿರಲಿ"

ಹೊರಗೆ ಬಂದೆ,

ಕತ್ತೆತ್ತಿ ನೋಡಿದೆ. ದೇವಸ್ಥಾನದ ಮೇಲೆ ಮಂಜುನಾಥ ವಿಶಾಲಾಕ್ಷಿ ಅರ್ಥಾತ್ ಶಿವ ಪಾರ್ವತೀ ಪ್ರತಿಮಾ ರೂಪದಲ್ಲಿ ನಿಂತಿದ್ದರು. ಯಾಕೋ ಮತ್ತೆ ಇನ್ನಷ್ಟು ಕತ್ತನ್ನು ಆನಿಸಿ ನೋಡಿದೆ.. ಮಂಜುನಾಥ ಕೂಡ ಅಂದರೆ ನನ್ನ ಅಣ್ಣ (ಅಪ್ಪ) ನಿಂತು ಮುಗುಳು ನಕ್ಕರು.

ಅಣ್ಣಾವ್ರ ಸಂಭಾಷಣೆ ನೆನಪಿಗೆ ಬಂತು "ನಿಮ್ಮನ್ನು ಪಡೆದ ನನ್ನ ಜನ್ಮ ಸಾರ್ಥಕ ಸಾರ್ಥಕ"  ಇದನ್ನು ನನ್ನ ಮನಸ್ಸು ನನ್ನ ಮನಸ್ಸಿನ ಶಿವ ಅಂದರೆ ನನ್ನ ಅಣ್ಣ(ಪ್ಪ) ಮಂಜುನಾಥ್ ಕೂಗಿ ಕೂಗಿ ಹೇಳಿತು.

ತಿಥಿ ನಕ್ಷತ್ರದ ಪ್ರಕಾರ ಹುಟ್ಟು ಹಬ್ಬಕ್ಕಾಗಿ ಶಿವನ ಪ್ರಸಾದ ಈ ರೀತಿಯಲ್ಲಿ ಬಂದದ್ದು ನನ್ನ ಬದುಕು ಸಾರ್ಥಕ ಎನ್ನಿಸಿತು. ಒಂದು ದಿಟ್ಟ ಹೆಜ್ಜೆ ಇಡಲು ಇಂದಿನ ದಿನ ನನಗೆ ಸ್ಫೂರ್ತಿ ನೀಡಿದ್ದು ದೃಷ್ಟಿ ಯಾಗಬಾರದೆಂದು ಪಾರ್ವತೀ ಹೇಳಿದಳು ಶ್ರೀಕಾಂತ ನಿನ್ನ ಏಳಿಗೆಗೆ "ಚಷ್ಮೆ ಬದ್ದೂರ್" ಅಲಿಯಾಸ್ ದೃಷ್ಟಿ ಬೀಳದಿರಲಿ ಎಂದು.

ನನ್ನ ಮನ ಹೇಳಿತು... ನನ್ನ ಮೇಲೆ ವಿಶ್ವಾಸ ಪ್ರೀತಿಯಿಂದ ಸ್ನೇಹದ ಸಂಕೋಲೆಯನ್ನು ತೊಡಿಸಿ ಶುಭಕೋರಿದ ಎಲ್ಲಾ ಶುಭಹಾರೈಕೆಗಳು ನನ್ನ  ಶಿವನಿಗೆ "ಅರ್ಪಿತ"ವಾಯಿತು!!!!