Monday, April 27, 2026

"ಮಾವಿನ ಹಣ್ಣು ಬೇಕಾ.. "

ವಾರದ ಅಂತ್ಯ.. 

ಒಂದಷ್ಟು ರೀಲುಗಳು, ಯು ಟ್ಯೂಬ್ ಕ್ಲಿಪ್ಪುಗಳು ಅಂತ ಕೂತಿದ್ದ ..

ಕನ್ನಡದ ಚಿತ್ರರಂಗದಲ್ಲಿ ಪ್ರಾಯಶಃ ಮೊದಲ ಬಾರಿಗೆ ಟಾಕೀಸಿನ ಮುಂದೆ "ಹೆದರಿಕೆಯುಳ್ಳವರು, ಗರ್ಭಿಣಿ ಸ್ತ್ರೀಯರು ಈ ಚಿತ್ರ ನೋಡಬೇಡಿ ಅಂತ ಫಲಕ ಹಾಕಿಸಿಕೊಂಡ ಚಿತ್ರ ನಾ ನಿನ್ನ ಬಿಡಲಾರೆ

ಅದರಲ್ಲಿಯೂ ಸ್ಮಶಾನದಲ್ಲಿ ಅನಂತ್ ನಾಗ್ ತಿರುಗಿ ನೋಡುವ ದೃಶ್ಯ ಎಂಥಹ ಗಟ್ಟಿ ಎದೆಯರ ಗುಂಡಿಗೆಯನ್ನು ಒಮ್ಮೆ ಝಲ್ ಎನಿಸಿದ್ದು ಸುಳ್ಳಲ್ಲ.. 

 ಅವನಿಗೂ ಅನುಭವವಾಗಿತ್ತು.. ಬಾಲಕನಾಗಿದ್ದಾಗ ಆ ಚಿತ್ರವನ್ನು ನೋಡಿದ್ದು ಹಸಿ ಹಸಿ ನೆನಪು.. 

ಹೀಗೆ ರೀಲ್ಸು , ಕ್ಲಿಪ್ಪು ಅಂತ ನೋಡುತ್ತಿದ್ದವ.. ಹಾಗೆ ನಾ ನಿನ್ನ ಬಿಡಲಾರೆ ಚಿತ್ರವನ್ನು ಮತ್ತೊಮ್ಮೆ ನೋಡಿಯೇ ಬಿಟ್ಟ.. 

ಹೊರಗೆಲ್ಲ ಹುಣ್ಣಿಮೆಯ ಹತ್ತಿರದ ಬೆಳದಿಂಗಳು.. ಬೇಸಿಗೆ ಕಾಲದ ರಾತ್ರಿಯಾದರೂ ಬೆಳದಿಂಗಳ ತಂಪಿನ ಬೆಳಕಿನ ಜೊತೆ ತಣ್ಣನೆಯ ಗಾಳಿಯೂ ಬೀಸುತಿತ್ತು.. ತೆರೆದ ಕಿಟಕಿಯಿಂದ ಗಾಳಿ ತೇಲಿ ಬರುತಿತ್ತು.. ಮನಸ್ಸಿಗೆ ಉಲ್ಲಾಸ ತುಂಬಿತ್ತು.. 

ಸಿನೆಮಾ ಓಡುತ್ತಿತ್ತು.. 

ಮದುವೆಯ ಮುಂಚೆ ವಿವಾಹ ಪತ್ರಿಕೆಯ ಮೇಲೆ ಇಂಕು ಚೆಲ್ಲಿಯಾಗಿತ್ತು.. 
ಪತ್ರಿಕೆಗಳೆಲ್ಲ ಗಾಳಿಯಲ್ಲಿ ಹಾರಾಡಿಯಾಗಿತ್ತು.. 
ಮದುವೆಯ ದಿಬ್ಬಣ ಬರುವಾಗ ಕಟ್ಟಿದ ಕೋಣ ಹಗ್ಗ ಬಿಚ್ಚಿಕೊಂಡು ಅನಂತ್ ನಾಗ್ ಅವರ ಕಾರಿನತ್ತ ನುಗ್ಗಿದ್ದ ದೃಶ್ಯವಾಗಿತ್ತು.. 
ಪ್ರಥಮ ರಾತ್ರಿಯಲ್ಲಿ ಅನಂತ್ ನಾಗ್ ತಲೆ ನೋವು ಅಂತ ಕಿರುಚಿ ಕೆಳಗೆ ಬಿದ್ದಾಗಿತ್ತು.. 
ಆಸ್ಪತ್ರೆಯಲ್ಲಿ ಡಾಕ್ಟ್ರರು ಏನೂ ತೊಂದರೆ ಇಲ್ಲ ಎಂದು ತಪಾಸಣೆ ಮಾಹಿತಿಯನ್ನು ನೋಡಿ ಹೇಳಿದ್ದರೂ ಕೂಡ..
ಒಂದೆರಡು ದಿನ ಆಸ್ಪತ್ರೆಯಲ್ಲಿ ಇರಲಿ ಎಂದು ಹೇಳಿದ್ದ ದೃಶ್ಯವಾಗಿತ್ತು.. 
ಮಧ್ಯರಾತ್ರಿಯಲ್ಲಿ ಅನಂತ್ ನಾಗ್ ಸೀದಾ ಎದ್ದು ಮಸಣದ ಕಡೆಗೆ ಹೋಗಿದ್ದು.. 
ಲಕ್ಷ್ಮಿ ಅವರನ್ನು ಹಿಂಬಾಲಿಸಿದ್ದು.. 
ಲಕ್ಷ್ಮಿ ಅವರನ್ನು ಅಶ್ವಥ್ ಮತ್ತು ಬಾಲಣ್ಣ ಹಿಂಬಾಲಿಸಿದ್ದು . 
ನಂತರ  ಅನಂತ್ ನಾಗ್ ತಿರುಗಿ ನೋಡಿದ ದೃಶ್ಯ ... 
ಅವರ ಮೈಮೇಲೆ ಬಂದ ದೆವ್ವದ ಮಾತುಗಳು.. 

ಎದೆ ಝಲ್ ಎನಿಸುವ ದೃಶ್ಯಗಳು ಹೇರಳವಾಗಿದ್ದವು.. 

ಅದರಲ್ಲೂ ಅನಂತ್ ಮೇಲೆ ದೆವ್ವ ಬರುವ ದೃಶ್ಯಗಳೂ ಅದಕ್ಕೆ ನೀಡಿರುವ ಹಿನ್ನೆಲೆ ಸಂಗೀತ..ದೆವ್ವ ಬಿಡಿಸುವವನ ಜೊತೆ ಮಾತುಗಳು .. ಹೆದರಿಕೆಯನ್ನು ಹೆಚ್ಚು ಮಾಡುತ್ತಲೇ ಇತ್ತು.. ಅದೇ ಗುಂಗಿನಲ್ಲಿ ಯಾವಾಗಲೂ ನಿದ್ರಾದೇವಿ ಆವರಿಸಿದ್ದಳು.. 

ಟಿವಿ ತನ್ನ ತಾನೇ ಆಫ್ ಆಗಿತ್ತು.. ಟಿವಿಗೆ ಟೈಮರ್ ಇಟ್ಟಿದ್ದರಿಂದ ತೊಂದರೆ ಇರಲಿಲ್ಲ.. 

ಮನೆಯ ದೀಪಗಳೆಲ್ಲ ಆರಿತ್ತು.. 

ಬಾಯಾರಿಕೆ ಎಂದು ಪಕ್ಕದಲ್ಲಿ ನೋಡಿದರೆ ನೀರಿನ ಬಾಟಲ್ ಖಾಲಿ..

ಸರಿ ಅಡಿಗೆ ಮನೆಗೆ ಹೋಗಿ ನೀರು ಕುಡಿಯೋಣ ಅಂತ ದೀಪ ಹಾಕೋಕೆ ಹೋಗದೆ  .. ಹಾಗೆ ಅಡಿಗೆ ಮನೆಗೆ ಹೋದ ..

ಹೊರಗೆ ಬೆಳದಿಂಗಳು .. ಆದರೆ ಕಿಟಕಿಗಳಿಗೆ ದಪ್ಪನೆ ಪರದೆ ಹಾಕಿದ್ದರಿಂದ ಕತ್ತಲು.. 

ನೀರು ಕುಡಿದು.. ಯಾಕೋ ಬಾಗಿಲಿನ ಕಡೆ ನೋಡಿದರೆ.. ಅಂಗಳದ ದೀಪ ಉರಿಯುತ್ತಿದೆ ಎನ್ನುವ ಅನುಭವ.. 

ದೀಪದ ಸ್ವಿಚ್ ಮೇಲೆ ಕೈಯಾಡಿಸಿದರೆ.. ಆಫ್ ಆಗಿದ್ದರ ಸಂಕೇತ ತೋರಿಸುತ್ತಿತ್ತು.. ದೀಪ ಹಾಕದೆ ಹಾಗೆ ನೋಡಿದ್ದ .. 

"ಹೀ ಹೀ ಹೀ " ನಗುವಿನ ಸದ್ದು.. 

ಕ್ಷಣದಲ್ಲಿಯೇ ಮೈಪೂರ್ತಿ ಬೆವರು.. .. ರೋಮ ರೋಮಗಳು ಸೆಟೆದು ನಿಂತ ಅನುಭವ.. 

"ಮಾವಿನ ಹಣ್ಣು ಬೇಕಾ.. " 


ಪೂರ್ಣ ಹೆದರಿಕೆ.. 

ನಾ ನಿನ್ನ ಬಿಡಲಾರೆ ಚಿತ್ರದ ಪೂರ್ತಿ ಭಯಾನಕ ದೃಶ್ಯಗಳು ಕಣ್ಣ ಮುಂದೆ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಕೊಟ್ಟು ಹೋದವು.. 

ನೀರು ಕುಡಿದಿದ್ದರೂ ನಾಲಿಗೆ ಪೂರ್ಣ ಒಣಗಿದ ವಾಟೆಗರಿಯಾಗಿತ್ತು.. 

ಭಯದಿಂದಲೇ ಹೋಗಿ ಹಾಲಿನ ದೀಪ ಹಾಕಿದರೆ.. ತನ್ನ ಮಡದಿ ಮಾವಿನ ಹಣ್ಣನ್ನು ತಿನ್ನುತಿದ್ದಾಳೆ.. 

ಉಫ್ ಉಫ್... 

ಜೋರಾದ ನಗು.. ಅವಳದು 

ಮೈಯೆಲ್ಲಾ ಒದ್ದೆಅವನದ್ದು  !

Monday, April 13, 2026

ಸೀಮಾವಲೋಕನ ಜೊತೆಗೆ ಶೀತಲೈಶ್ವರ್ಯ... !

"ಶ್ರೀ ನೀನು ಮನುಷ್ಯನ.. ಏ ಇಲ್ಲ ಬಿಡು ಮನುಷ್ಯರು ಹೀಗೆ ಇರೋಕೆ ಸಾಧ್ಯವೇ ಇಲ್ಲ.. "

"ಇದ್ಯಾಕೆ ಅಣ್ಣಾವ್ರೇ ಹೀಗೆ ಎಡ ಬಲ ಸೇರಿಸಿ ಉಗೀತಾ ಇದ್ದೀರಾ ಯಾಕೆ ಅಂತಹ ತಪ್ಪು ಏನು ಮಾಡಿದೆ.." 

"ಅಲ್ಲ ಕಣೋ ಶ್ರೀ ನಿನ್ನ ಮಡದಿಯ ಜನುಮದಿನ ನನ್ನ ಪುಣ್ಯದಿನದ ಮಾರನೇ ದಿನ .. ಆಕೆಗೆ ಖುಷಿಯಾಗಿ ಇಟ್ಟುಕೊಳ್ಳೋದು ಬಿಟ್ಟು ಆಫೀಸ್ ಕೆಲಸ ಅದು ಇದು ಮೀಟಿಂಗ್ ಪಾಟಿಂಗು ಅಂತ ಆಕೆಗೆ ಬೇಸರ ಮಾಡೋದೇ.. ಅಲ್ಲಿ ನೋಡಿ ನಿನ್ನ ಮಕ್ಕಳು ಪಾಪು, ಪಾಪ ಎಷ್ಟು ಸೊಗಸಾಗಿ ಸಿಂಗಾರ ಮಾಡಿಕೊಂಡಿದ್ದಾರೆ. ನಿನ್ನ ಮನದನ್ನೆ ನೋಡು. ಅಲ್ಲಿ ನೋಡು.. ಎಷ್ಟು ಮುದ್ದಾಗಿ ಪುಟ್ಟ ಮಗು ತರಹ ಕಾಣುತ್ತಿದ್ದಾಳೆ.. ಅಂತಹ ಸಮಯ ಬಿಟ್ಟು.. ಈ ಸಮಯ ಕೆಲಸದ ಸಮಯ ಅಂತ ಲ್ಯಾಪ್ಟಾಪ್ ಇಟ್ಕೊಂಡು ಕೂತಿದ್ದೀಯಾ ಅಲ್ಲ. ನೀನು ಮನುಷ್ಯನೋ.. ಇಲ್ಲ.. "

ಕ್ಷಮಿಸಿ ಅಣ್ಣೋರೆ.. ಹಾಗೇನು ಇಲ್ಲ.. ಮನಸ್ಸು ಯಾಕೋ ಪಕಪಕ ಅಂತಾ ಇದೆ.. ಅಷ್ಟೇ.. ಅದು ಬಿಟ್ರೆ ಇನ್ನೇನೂ ಇಲ್ಲ.. 

"ಕ್ಷಮೆ. ನಿನಗೆ ಕ್ಷಮೆ.. "(ಭಕ್ತ ಪ್ರಹ್ಲಾದದಲ್ಲಿ ಹಿರಣ್ಯ ಕಷಿಪು, ಮಹೇಂದ್ರನಿಗೆ  ಹೇಳಿದ ಧ್ವನಿಯಲ್ಲಿ ಅಣ್ಣಾವ್ರು ಅಬ್ಬರಿಸಿದರು)

"ಅಯ್ಯೋ ಅಣ್ಣಾವ್ರೇ ಇಷ್ಟು ಆಗ್ರಹವೇಕೆ ಅಣ್ಣಾವ್ರೇ (ನಾನೂ ಕಡಿಮೆ ಏನಲ್ಲ... ಮಹೇಂದ್ರನಂತೆ ನಾನೂ ನಾಟಕೀಯವಾಗಿ ಒಂದು ಡೈಲಾಗು ಬಿಟ್ಟೆ)

"ನೋಡು ಈಗ ನೀನು ಅವರ ಜೊತೆ ಹೊರಗೆ ಹೋದಾಗ ಯಾವ ಹಾಡು ಬರುತ್ತದೆಯೋ ಅದೇ ಹಾಡಿನ ಪದಗಳ ಮೇಲೆ ನೀನು ನಿನ್ನ ಮಡದಿಯನ್ನು, ನಿನ್ನ ಮಕ್ಕಳನ್ನು ಹೊಗಳಿ... ಅವರ ಹಿಂದಿನ, ಮತ್ತು ಮುಂದೆ ಬರುವ ಜನುಮದಿನಕ್ಕೆ ಸೇರಿಸಿ ಬರೆಯಬೇಕು.. ಅದೇ ನಿನಗೆ ನಾ ಕೊಡುವ ಶಿಕ್ಷೆ ಕಂ ಕ್ಷಮೆ.. ..ಆ ಮುದ್ದು ನಿನ್ನ ಸಂಗಾತಿಗೆ ಕೇಕ್ ತರಿಸಿದ್ಧೇನೆ..ಹೋಗಿ ಖುಷಿ ಪಡಿ..ಶುಭವಾಗಲಿ...



ಅಣ್ಣಾವ್ರ ಸುಗ್ರೀವಾಜ್ಞೆ ಆಗಿತ್ತು...

"ಆಗಲಿ ಅಣ್ಣಾವ್ರೇ ನೀವು ಹೇಳಿದಂತೆ ಆಗಲಿ"

ಕಾಲಿಟ್ಟ ಕೂಡಲೇ.. 

ಕವಿರತ್ನ ಕಾಳಿದಾಸ ಚಿತ್ರದ 

ಸದಾ ಕಣ್ಣಲಿ ಪ್ರಣಯದಾ ಕವಿತೆ ಹಾಡುವೆ
ಸದಾ ನನ್ನಲಿ ಒಲವಿನ ಬಯಕೆ ತುಂಬುವೆ

ಹಾಡು ಬರಬೇಕೆ .. ಮನಸ್ಸು ಮತ್ತೆ ಗೊಂದಲದ ಗೂಡು.. ಈ ಹಾಡನ್ನು ಹೇಗಪ್ಪಾ ಶುಭಾಶಯದ ಮಟ್ಟಕ್ಕೆ ತರೋದು.. 

ಗಟ್ಟಿಯಾಗಿ ಹೋಟೆಲಿನ ಬಾಗಿಲಲ್ಲಿಯೇ ನಿಂತೇ.. ಚಿ ಉದಯಶಂಕರ್ ಸರ್.. ರಾಜಕುಮಾರ್ ಸರ್. ನೀವೇ ನನಗೆ ಸ್ಫೂರ್ತಿ ಕೊಡಬೇಕು.. ಬೇರೆ ದಾರಿ ಇಲ್ಲ ಅಂತ.. ಒಂದು ಹತ್ತು ಸೆಕೆಂಡುಗಳು ಕಣ್ಣು ಮುಚ್ಚಿ ನಿಂತೇ.. ಆಗಸದಿಂದ ಎರಡು ಕಿರಣಗಳು ಮನದೊಳಗೆ ಇಳಿದಂತೆ ಭಾಸವಾಯಿತು.. 
ಬಂದೆ ಬಿಡ್ತು.. 

(ಚಿ ಉದಯಶಂಕರ್ ಅವರ ಕ್ಷಮೆ ಕೋರಿ.. ಒಂದು ಪಲ್ಲವಿಯನ್ನು ಸೇರಿಸಿಬಿಟ್ಟಿದ್ದೀನಿ)

ನನ್ನ ಗೆಳತೀ ಜನವರಿ ತಿಂಗಳಲ್ಲಿ ಜನುಮದಿನವನ್ನು ಸಂಭ್ರಮಿಸಿದ್ದಳು.... ನನ್ನ ಪರಿಸ್ಥಿತಿಯನ್ನು ಕನ್ನಡಿಗಿಂತ ಚೆನ್ನಾಗಿ ಅರಿಯುವ ನನ್ನ ಗೆಳತೀ ಅಂದು ನಗು ನಗುತ್ತಾ ಗೊತ್ತು ಬಿಡಿ ಅಪ್ಪ ಅಂತ ನನ್ನ ಸಮಾಧಾನ ಮಾಡಿದ್ದಾಳು.. ಆ ಕ್ಷಣವನ್ನು ನೆನೆಯುತ್ತಾ

ಮಗುವಿನಲ್ಲಿ ಶಾಂತಾವಾಗಿ..  
ಬೆಳದಂತೆ ಬುದ್ದಿವಂತಳಾಗಿ 
ಸಿಎ ಕನಸೆಲ್ಲ 
ನನಸು ನನಸು ಮಾಡಿ 
ಅಮ್ಮನ ಮೊಗದಲ್ಲಿ ಮಗುವಾಗಿ 
ನಗು ತಂದಂತೆ 
ಈ ನಗುವಿಗೆ ಸೋತೆನು 
ಸೋತೆ ನಾನು!!!
 

ನಾ ಗುಡಿ ಕಟ್ಟಿದರೆ ನೀವು ಕಳಸ ಇಡುತ್ತೀರಾ ಅಂತ ಯಾವಾಗಲೂ ರೇಗಿಸುವ ನನ್ನ ಮನದನ್ನೆಗೆ ಅವಳ ಅಂದವನ್ನು ಹೊಗಳುತ್ತಾ.. ಜನುಮದಿನಕ್ಕೆ ಉಡುಗೊರೆಯ ರೂಪದಲ್ಲಿ ಪಲ್ಲವಿ ಸಿದ್ಧವಾಯಿತು.. 

ಕಣ್ಣೆರಡು ಕಮಲಗಳಂತೆ, 
ಮುಂಗುರುಳು ದುಂಬಿಗಳಂತೆ ।೨।
ನಾಸಿಕವು ಸಂಪಿಗೆಯಂತೆ, 
ನೀ ನಗಲು ಹೂ ಬಿರಿದಂತೆ ।೨।
ನಡೆಯುತಿರೆ (ತಾನೇ ಸಂಯೋಜಿಸಿದ) ನಾಟ್ಯದಂತೆ ।೨।
ರತಿಯೆ ಧರೆಗಿಳಿದಂತೆ
ಈ ಅಂದಕೆ ಸೋತೆನು, 
ಸೋತೆ ನಾನು

ನನಗೆ ಇಲ್ಲವಾ ಹಾಡು ಅಪ್ಪ ಅಂತ ಕೋಪದಿಂದ ನನ್ನ ಇನ್ನೊಬ್ಬ ಮಗಳು ..ಕೂಗಿದಳು .. ಅವಳ ಸುಂದರ ಕಣ್ಣುಗಳು ಕೆಂಪಾಗಿದ್ದವು... ಮೆಲ್ಲನೆ ಸಮಾಧಾನ ಮಾಡುತ್ತಾ.. ಮಗಳೇ.. ಮಗಳೇ ಎಂದು ಹೇಳುತ್ತಾ.. 

ಗುಡುಗುಗಳು ತಾಳದಂತೆ 
ಮಿಂಚುಗಳು ಮೇಳದಂತೆ
ಸುರಿವಾ ಮಳೆ ನೀರೆಲ್ಲಾ, 
ಪನ್ನೀರ ಹನಿ ಹನಿಯಂತೆ ।೨।
ಜೊತೆಯಾಗಿ ರಿಷಬ್ ಇರೆ ಸಾಕು, 
ಭೂಲೋಕ ಸ್ವರ್ಗದಂತೆ
ನಿನ್ನ ಪ್ರೇಮಕೆ ಅವನು ಸೋತನು 
ಸೋತು ಗೆಲುವಾದನು.... 

*****
ಮೆಲ್ಲನೆ ನಿಟ್ಟುಸಿರು ಬಿಟ್ಟೆ.. ನನ್ನ ಮುದ್ದು ಮಕ್ಕಳು.. ಮಡದಿಯನ್ನು ಸಮಾಧಾನ ಪಡಿಸಿದೆ ಅಂದು ಅನಿಸಿತು.. ಇದರ ಜೊತೆ ಅಣ್ಣಾವ್ರು ಕೂಡ ಜೋರಾಗಿ ಚಪ್ಪಾಳೆ ತಟ್ಟಿದರು.. ಅರೆ ಅಣ್ಣಾವ್ರಿಗೆ ಸಂತೋಷ ಆಯಿತು ಅಂದರೆ ಎಲ್ಲವೂ ಅರಾಮ್.. ಎಲ್ಲವೂ ಸುಖಾಂತ್ಯ ಅನ್ನಿಸಿತು.. 

ಅಣ್ಣಾವ್ರ ಮುಖ ನೋಡಿದೆ.. .. ಜೋರಾಗಿ ನಗುತ್ತಾ.. 

ಶ್ರೀ ನಿನ್ನ ಮುದ್ದು ಮಕ್ಕಳಿಗೆ. .. ಮತ್ತು ನಿನ್ನ ಮನದನ್ನೆಗೆ ಈ ಹಾಡು ಸಮರ್ಪಿತ.. ಇದನ್ನು ನನ್ನ ಆಪ್ತಗೆಳೆಯ ಚಿ ಉದಯಶಂಕರ್ ಬರೆದದ್ದು.. ನಿಮಗೆ ಶುಭವಾಗಲಿ.. ಎಂದು ಹಾಡುತ್ತಾ.. ಗಗನದಲ್ಲಿ ತಾರೆಯಾದರು.. 

ನಗುತ ನಗುತ ಬಾಳೂ ನೀನು
ನೂರು ವರುಷಾ
ಎಂದು ಹೀಗೆ ಇರಲೀ ಇರಲಿ
ಹರುಷ ಹರುಷಾ
ಬಾಳಿನ ದೀಪಾ ನಿನ್ನ ನಗು.
ದೇವರ ರೂಪ ನೀನೆ ಮಗು
ನಗುತ ನಗುತ ಬಾಳೂ ನೀನು
ನೂರು ವರುಷಾ
ಎಂದು ಹೀಗೆ ಇರಲೀ ಇರಲಿ
ಹರುಷ ಹರುಷಾ
ಉಲ್ಲಾಸದ ಶುಭ ದಿನಕೆ
ಸಂತೋಷವೇ ಉಡುಗೊರೆಯು
\
ಹೂವು ನಕ್ಕಾಗ ತಾನೇ…
ಅಂದ ಇರುವುದು
ದುಂಬಿ ಬರುವುದು
ಚಂದ್ರ ನಕ್ಕಾಗ ತಾನೇ
ಬೆಳಕು ಬರುವುದೂ
ಕಡಲು ಕುಣಿವುದೂ
ಸೂರ್ಯನಾಡೊ ಜಾರೊ ಆಟ
ಬಾನು ನಗಲೆಂದೆ
ಬೀಸೊ ಗಾಳಿ ತೂಗೊ ಪೈರು
ಭೂಮಿ ನಗಲೆಂದೆ
ದೇವರು ತಂದ ಸೃಷ್ಟಿಯ ಅಂದ
ಎಲ್ಲರು ನಗಲೆಂದೆ

ನಗುತ ನಗುತ ಬಾಳೂ ನೀನು
ನೂರು ವರುಷಾ
ಎಂದು ಹೀಗೆ ಇರಲೀ ಇರಲಿ
ಹರುಷ ಹರುಷಾ

ಆಕಾಶದಾಚೆ ಎಲ್ಲೋ…
ದೇವರಿಲ್ಲವೋ…..
ಹುಡುಕಬೇಡವೋ
ಆ ಮಾಯಗಾರ ತಾನೂ….
ಗಿರಿಯಲಿಲ್ಲವೋ…..
ಗುಡಿಯಲಿಲ್ಲವೋ
ಪ್ರೀತಿಯಲ್ಲಿ ಸ್ನೇಹದಲ್ಲಿ
ಇರುವನು ಒಂದಾಗಿ
ತಂಪಿನಲ್ಲು ಕಂಪಿನಲ್ಲು
ಬರುವನು ಹಿತವಾಗಿ
ಸಂತಸದಲ್ಲಿ ಸಂಭ್ರಮದಲ್ಲಿ
ಮಕ್ಕಳ ನಗುವಾಗೀ…

ನಗುತ ನಗುತ ಬಾಳೂ ನೀನು
ನೂರು ವರುಷಾ
ಎಂದು ಹೀಗೆ ಇರಲೀ ಇರಲಿ
ಹರುಷ ಹರುಷಾ
ಬಾಳಿನ ದೀಪಾ ನಿನ್ನ ನಗು
ದೇವರ ರೂಪ ನೀನೆ ಮಗು
ನಗುತ ನಗುತ ಬಾಳೂ ನೀನು
ನೂರು ವರುಷಾ
ಎಂದು ಹೀಗೆ ಇರಲೀ ಇರಲಿ
ಹರುಷ ಹರುಷಾ
ಉಲ್ಲಾಸದ ಶುಭ ದಿನಕೆ
ಸಂತೋಷವೇ ಉಡುಗೊರೆಯು
ಉಲ್ಲಾಸದ ಶುಭ ದಿನಕೆ
ಸಂತೋಷವೇ ಉಡುಗೊರೆಯು!!!!




Friday, March 6, 2026

ಅಪರಿಮಿತವಾದ ಮಂದ"ಸ್ಮಿತ"ದ ಉತ್ಸಾಹದ ಹತ್ತನೇ ದಿನದ ಪಯಣ

ಬಾನಿನಲ್ಲಿ ಚಂದಿರ ನಗುತ್ತಿದ್ದ.. ಸಂಕಷ್ಟ ಚೌತಿಯ ದಿನ ತನ್ನ ಸಹೋದರಿಯರು ಕಟ್ಟುಪವಾಸ ಮಾಡಿದರೂ ಸಹೋದರಿಯ ನೆನಪಲ್ಲಿ ಮಾತು ಸಾಗಿತ್ತು.. ಕುಮುದ ಹಾಗೆ ಮಾತಾಡುತ್ತಿದ್ದಳು, ಹೀಗೆ ಅನ್ನುತ್ತಿದ್ದಳು... ಆಯೀಗೆ ಹೀಗೆ ರೇಗಿಸುತ್ತಿದ್ದೆ ಅಂತ ಸೀಮಾ.. ಆಯೀ ಹೀಗೆ ಹೇಳುತ್ತಿದ್ದಳು ಅಂತ ಅಜಿತ.. 

ಹೀಗೆ ನಮ್ಮ ನಮ್ಮ ನೆನಪುಗಳ ಮೆರೆವಣಿಗೆಯಲ್ಲಿ ಸಾಗುತ್ತಿದ್ದೆವು..  ಬೆಳಗಿನ ಕಾರ್ಯದ ನೆನಪಾಯಿತು!

ಹತ್ತನೇ ದಿನದ ಪುಣ್ಯ ಕಾರ್ಯ ಸಾಗಿತ್ತು.. ಸಾಮಾನ್ಯ ಹತ್ತು ಹನ್ನೊಂದು ಒಂದು ಮುಖ್ಯವಾದ ಹಂತ.. ಸಂಖ್ಯೆ ಹತ್ತಕ್ಕೆ ಮುಟ್ಟಿದೆ ಎಂದರೆ ಒಂದಂಕಿ ದಾಟಿದೆ ಅಂತ.. ಹಾಗೆ ಮನುಷ್ಯನ ಬದುಕಿನಲ್ಲಿ ಮುಖ್ಯ ಘಟ್ಟವೂ ಹೌದು..

ಇಂತಹ ಹತ್ತು.. ಇನ್ನೊಂದು ಮುಖ್ಯ ಘಟ್ಟವನ್ನು ಹೊತ್ತು ಬಂದಿತ್ತು.. 

ಶ್ರೀ ದತ್ತಾತ್ರೇಯನ ಆವಾಸ ಸ್ಥಾನದ ಕ್ಷೇತ್ರದಲ್ಲಿ ವೇದ ಪಠಣ ಕಾರ್ಯ ನೆಡೆದಿತ್ತು.. ಬಂದಿದ್ದವರು ತಮ್ಮ ತಮ್ಮ ನಮನಗಳನ್ನು ಸಲ್ಲಿಸಿದ್ದರು.. 

 ಹತ್ತನೇ ದಿನ ಬಂದಿದ್ದವರು ತಮ್ಮ ತಮ್ಮ ಪುಣ್ಯವನ್ನು ಧಾರೆಯೆರೆದು ಆ ದೇಹವನ್ನು ತೊರೆದ ಆತ್ಮಕ್ಕೆ ವಿದಾಯ ಹೇಳುವ ಸಮಯ.. ಆ ಆತ್ಮಕ್ಕೆ ಮೊದಲೇ ಸಿದ್ಧವಾಗಿರಬಹುದಾದ ದೇಹವನ್ನು ಸೇರಲು ಈ ಹತ್ತನೇ ದಿನದ ಕಾರ್ಯ ಒಂದು ರೀತಿಯ ರಾಕೆಟ್ ಲಾಂಚ್ ಮಾಡಿ.. ಉಪಗ್ರಹ ಕಡೆಯ ಭಾಗ ಗಗನ ಪಥಕ್ಕೆ ಸೇರುವಾಗ ತನ್ನುಳಿದ ಭಾಗವನ್ನು ಬಿಟ್ಟು ಮುಂದಿನ ಪಯಣಕ್ಕೆ ನಭೋಮಂಡಲಕ್ಕೆ ಹಾರುವ ಕ್ಷಣವದು.. 

ಈ ಹತ್ತನೇ ದಿನವೂ ಕೊಂಚ ಹಾಗೆ.. ಬಂದಿದ್ದವರ ಪುಣ್ಯದ ರಾಕೆಟ್ ಆ  ಆತ್ಮವನ್ನು ಮುಂದಿನ ಪಯಣಕ್ಕೆ ಸಿದ್ಧಗೊಳಿಸಿ ಕಳಿಸುವ ಸಮಯವದು.. 

ಕಾರ್ಯ ಮುಗಿದು.. ಆ ಆತ್ಮಕ್ಕೆ ಊಟವನ್ನು ಇಟ್ಟಾಗ.. ಅಲ್ಲಿದ್ದ ಪುರೋಹಿತರು ಎಲ್ಲರೂ ನಿಮ್ಮ ನಿಮ್ಮ ಪ್ರಾರ್ಥನೆ ಸಲ್ಲಿಸಿ... ಆ ಆತ್ಮ ಶ್ರೀ ಶನೀಶ್ವರನ ವಾಹನವಾಗಿ ಬಂದು ಸ್ವೀಕರಿಸುತ್ತದೆ.. ಎಂದು ಹೇಳಿದರು.. 

ಎಲ್ಲರೂ ಪ್ರಾರ್ಥನೆ ಸಲ್ಲಿಸಿದರು.. 

ಮರು ಪ್ರಾರ್ಥನೆ ಸಲ್ಲಿಸಿದರು.. 

ಮತ್ತೊಮ್ಮೆ ಪ್ರಾರ್ಥನೆ ಸಲ್ಲಿಸಿದರು.. 

ಸುಮಾರು ಹೊತ್ತು ಕಳೆಯಿತು.. 

ಪುರ್ ಅಂತ ಹಾರಿ ಬಂದು.. ಆಹಾರವನ್ನು ಸ್ವೀಕರಿಸಿದ ಕ್ಷಣ ಎಲ್ಲರ ಮನಸ್ಸಿಗೂ ಸಂತಸ ಉಂಟು ಮಾಡಿತು.. 

ಕಾರ್ಯ ಮುಗಿದು ಮತ್ತೆ ಕೋಣೆಗೆ ಬಂದು.. ವಿಶ್ರಾಮ ತೆಗೆದುಕೊಳ್ಳುತ್ತಿದ್ದಾಗ  .. ಕುತೂಹಲ ಅಲ್ಲವೇ.. ಏನು ಪ್ರಾರ್ಥನೆ ಮಾಡಿಕೊಂಡಿರಿ.. ಅಂತ ಒಬ್ಬರಿಗೊಬ್ಬರು ಕೇಳುತ್ತಿದ್ದರು.. 

ಎಲ್ಲರೂ ಹೇಳಿದ್ದು ಒಂದೇ ಮಾತು 

"ಅಜಿತನನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ" 
"ಅಜಿತ ಮತ್ತು ಸೀಮಾ ನನ್ನ ಜವಾಬ್ಧಾರಿ"

ಈ ಉತ್ತರದಿಂದ ಸಂತುಷ್ಟವಾಗಿರಲಿಲ್ಲ... 

ಅಜಿತ "ಬಾಬಾನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ" ಅಂತ ಒಮ್ಮೆ, ಮತ್ತೊಮ್ಮೆ, ಮಗುದೊಮ್ಮೆ ಪ್ರಾರ್ಥನೆ ಮಾಡಿಕೊಂಡಾಗ.. ಇದು ಸಾರ್ಥಕತೆ ಅಂತ ಅನಿಸಿ ಆಹಾರವನ್ನು ಸ್ವೀಕರಿಸಿದ ಕ್ಷಣ ಒಮ್ಮೆ ಮೈ ಜುಮ್ ಎನಿಸಿತು.. 

ತಾಯಿ ಹೃದಯ ಎಂದರೆ ಅದೇ ಅಲ್ಲವೇ.. ನಾ ಅಷ್ಟೇ ಅಲ್ಲ.. ನನ್ನ ಪರಿವಾರವೂ ಕೂಡ ಕ್ಷೇಮವಾಗಿರಬೇಕು ಎಂದು ಬಯಸೋದು ಮಾತೃ ಹೃದಯ ದ ವಿಶೇಷತೇ.. 

ಊಟ ಮಾಡಿ ವಿಶ್ರಾಂತಿಯಾಯಿತು.. ಕಾಫೀ ಬಂತು.. 

ಚಂದಿರ ಉಗಮವಾಗಲು ಇನ್ನಷ್ಟು ಸಮಯವಿತ್ತು.. 

ಗರುಡಪುರಾಣದ ಸಂಕ್ಷಿಪ್ತ ಮಾಹಿತಿಯನ್ನು ಕೇಳಿದೆವು.. ಗರುಡಪುರಾಣದ ಮುಖ್ಯ ಸಾರದ ಬಗ್ಗೆಯೂ ಮಾತುಗಳು ಬಂದವು.. 

ಮುಂದೆ ಅಮ್ಮನ ಮಾತು ಕೇಳಿ


ಚಿತ್ರಕೃಪೆ - ಗೂಗಲ್ ಬಾಬಾ 
"ನನ್ನ ಪ್ರೀತಿಯ ಪರಿವಾರದವರೇ.. ನನ್ನನ್ನು ಬೀಳ್ಗೊಡಲು ನೀವೆಲ್ಲ ಬಂದಿದ್ದೀರಿ.. ಹೌದು ನಿಮ್ಮನ್ನು ಬಿಟ್ಟು ಹೋಗಲು ನನಗೆ ಕಷ್ಟ.. ಆದರೇನು ಮಾಡುವುದು ನಾ ನಂಬಿರುವ ಬ್ರಹ್ಮ ಬಾಬಾ, ಶಿವಬಾಬಾ.. ಸ್ಮಿತಾ ಅಲಿಯಾಸ್ ಕುಮುದ  ಅಲಿಯಾಸ್ ಕುಮುದಿನಿ ನಿನ್ನ ಆತ್ಮಕ್ಕೆ ಆಗಲೇ ಬೇರೆ ಮನೆ ಸಿದ್ಧ ಮಾಡಿಟ್ಟಿರುವೆ.. ನೀ ಬರೋದಷ್ಟೇ ಇರೋದು.. ಬೇಗ ಬಂದು ಬಿಡು.. ಈ ಜನ್ಮದಲ್ಲಿ ನೀ ಅಪಾರ .. ಅಪಾರ ಜನ ಮನ್ನಣೆ, ಜನ ಪ್ರೀತಿ ಗಳಿಸಿದ್ದೀಯಾ.. ಇದಕ್ಕೆಲ್ಲ ಮುಖ್ಯವಾಗಿ ನಿನ್ನ ಕುಟುಂಬಕ್ಕೆ ಒಂದು ಉತ್ತಮ ಸಂಸ್ಕಾರ ನೀಡಿದ್ದೀಯ.. ಕೊಂಚ ಕಲೆ ಉಳಿದಿತ್ತು.. ಹಾಗಾಗಿ ನಿನ್ನ ಅಂತಿಮ ಘಟ್ಟದಲ್ಲಿ ಸ್ವಲ್ಪ ಇಂಜೆಕ್ಷನ್, ಮಾತ್ರೆಗಳು, ಟಾನಿಕ್ಕು, ವೈದ್ಯಕೀಯ ಉಪಚಾರ ಅಂತ ಒಂದು ತಿಂಗಳು ಕಳೆದಿದ್ದೀಯ.. ಹಾಗಾಗಿ ಆ ಕಲೆಗಳು ಈಗ ಮಾಯಾ.. ಮುಂದಿನ ಜನ್ಮದಲ್ಲಿ ಉತ್ತಮ ದೇಹದಲ್ಲಿ ಸೇರಿಕೊಂಡು ಇನ್ನಷ್ಟು ಉತ್ತಮೋತ್ತಮ ಸೇವೆ ಮಾಡಲು ನಿನ್ನನ್ನು ಸಿದ್ಧ ಮಾಡಿದ್ದೇನೆ.. ಆಗೋ ಅಲ್ಲಿದೆ ನೋಡು ನಿನ್ನ ಹೊಸ ಗೂಡು ಅಂತ ತೋರಿಸಿದರು.. ಇನ್ನೇನು ಮಾಡುವುದು.. ನಾ ನಂಬಿದ ಬಾಬಾನೇ ಕರೆದಾಗ ಇಲ್ಲ ಅನ್ನೋಕೆ ಸಾಧ್ಯವೇ.. ನನ್ನ ಕುಟುಂಬ ಕಾರು ತೆಗೆದು ಹೋಗೋಕೆ ಸಿದ್ಧವಾದರೆಂದರೆ ನಾ ಬಿಡುತ್ತಲೇ ಇರಲಿಲ್ಲ.. ಆರೋಗ್ಯವೋ ಅನಾರೋಗ್ಯವೋ ನಾ ಹೋಗಿಯೇ ಹೋಗುತ್ತಿದ್ದೆ. ಪಾಪ ನನ್ನ ಮಕ್ಕಳೂ ಕೂಡ ಬೇಸರಿಸದೆ ಅವರು ಹೋದ ಕಡೆಯೆಲ್ಲ ನನ್ನನ್ನು ಕರೆದು ಕೊಂಡು ಹೋಗುತ್ತಿದ್ದರು.. ಇನ್ನೂ ಬಾಬಾ ಕರೆದರೆ ಸುಮ್ಮನೆ ಇರಲು ಸಾಧ್ಯವೇ.. ಅದಕ್ಕೆ ಹೊರಟಿದ್ದೇನೆ.. ನನ್ನನ್ನು ಕಳಿಸಿ ಕೊಡಿ.. ಪ್ಲೀಸ್"


ಯಾವಾಗಲೂ ಒಂದಕ್ಕೆ ಹತ್ತು ಮಾತಾಡುವ ಅಮ್ಮ ತಮ್ಮ ಅದೇ ಶೈಲಿಯಲ್ಲಿ ಮಾತಾಡಿದರು.. 

ಎಲ್ಲರ ಕಣ್ಣಲ್ಲಿ ಕೊಂಚ ನೀರು.. ಆದರೆ ಇದು ಆನಂದಭಾಷ್ಪ.. 

ಸದಾ ನಗುಮೊಗದ ಅಮ್ಮ.. ಮೆಲ್ಲನೆ ತನ್ನ ಇಷ್ಟದ ಬ್ರಹ್ಮ ಬಾಬಾ ಮತ್ತು ಶಿವ ಬಾಬಾ ಕಳಿಸಿದ ಪುಷ್ಪಕವಿಮಾನವನ್ನು ಏರಿಯೇ ಬಿಟ್ಟರು.. ಮೆಲ್ಲನೆ ಅದು ರೆಕ್ಕೆ ಬಡಿಯುತ್ತ ಬಡಿಯುತ್ತ ದಿಗಂತದೆಡೆ ಹಾರುತಿತ್ತು.. 


ಚಿತ್ರಕೃಪೆ - ಗೂಗಲ್ ಬಾಬಾ 

ಗಗನದಲ್ಲಿ ಮೇಲೆ ಏರುತ್ತಾ ಏರುತ್ತಾ ಹೋದಾ ಹಾಗೆ ಅವರ ಮುಗುಳುನಗೆ ಇಡೀ ಆಗಸವನ್ನೆಲ್ಲ ತುಂಬಿಕೊಂಡು ಬಿಳಿ ಬಿಳಿಯಾಗುತ್ತಾ ಹೋಯಿತು... ಇಡೀ ಆಗಸ ಸ್ವಚ್ಛ ಬಿಳುಪು.. ಒಂದು ಚೂರು ಕಲೆಯಿಲ್ಲ ಅಮ್ಮನ ಮುಂದಿನ ಜನ್ಮದ ಹಾಗೆ ಕಲೆಯೇ ಇಲ್ಲದ ಸ್ವಚ್ಛ ಜನ್ಮದ ಹಾಗೆ...

ಪುಷ್ಪಕ ವಿಮಾನ ದೂರ ಎತ್ತರಕ್ಕೆ ಹಾರಿದಂತೆಲ್ಲ.. ಆ ಬಿಳುಪಾದ ಆಗಸ ಮತ್ತೆ ನೀಲಿಯಾಗುತ್ತಾ ನೀಲಿಯಾಗುತ್ತ .. ಆ ಬಿಳುಪು ಸಣ್ಣಗೆ ಆಗುತ್ತಾ ಬಂದು.. ಕಡೆಯಲ್ಲಿ ಗೋಳಾಕಾರವಾಯಿತು.. ಗೋಳಾಕಾರವಾಗಿ ಮತ್ತೆ ಪ್ರಕಾಶಮಾನವಾಯಿತು.. ಆ ಗೋಳಾಕಾರವೇ ಚಂದಿರನಾಯಿತು.. 

ಚಿತ್ರಕೃಪೆ - ಗೂಗಲ್ ಬಾಬಾ 

ಬಾನಿನಲ್ಲಿ ಚಂದಿರ ನಗುತ್ತಿದ್ದ.. ಜೊತೆಯಲ್ಲಿ ಸಂಕಷ್ಟ ಚೌತಿಯ ದಿನ.. 


ಚಿತ್ರಕೃಪೆ - ಗೂಗಲ್ ಬಾಬಾ 

ಎಲ್ಲರೂ ಚಂದಿರನ ದರ್ಶನ ಮಾಡಿ.. ಗುಡಿಯಲ್ಲಿ ಗಣಪನ ದರ್ಶನ ಮಾಡಿ.. ಆಹಾರ ಸೇವಿಸಬೇಕು ಇದು ಸಾಮಾನ್ಯವಾಗಿ ಪಾಲಿಸುವ ನಿಯಮ.. 

ತನ್ನ ಸಹೋದರಿಯರು.. ಒರಗಿತ್ತಿಯ ಮಗಳು ಸಂಕಷ್ಟ ಚೌತಿಯ ವ್ರತವನ್ನು ಮಾಡಿ.. ಚಂದಿರನನ್ನು ನೋಡಲು ಬಾನಿನ ಕಡೆ ನೋಡಿದಾಗ.. ಅಲ್ಲಿ ಕಂಡದ್ದು..  ಕುಮುದಿನಿ ಅರ್ಥಾತ್ ತಾವರೆ ಹೂವು.. ಬೆಳದಿಂಗಳ ನಗೆ.. ಅಂದರೆ ಮಂದ"ಸ್ಮಿತ"

ನಾ ಆಗಸವನ್ನೇ ನೋಡುತ್ತಿದ್ದೆ. ಅಮ್ಮನ ಮುಗ್ಧ ನಗು ಕಂಡಿತು. ಜೋರಾಗಿ ನಗುತ್ತಿದ್ದರು.. ನಾನು ಯಾಕೆ ಅಮ್ಮ ಹಾಗೆ ನಗುತ್ತಿದ್ದೀರಿ ಅಂದೇ 

"೧. ನೀವು ಹೇಳಿದ ಒಂದು ಸಂಭಾಷಣೆ ಕೇಳಿ ನಗು ಬಂತು.. ಹುಣ್ಣಿಮೆದಿನ ಮರದಿಂದ ಯಾವುದಾದರೂ ಭೂತ ಜಿಗಿದು ನಿಮ್ಮ ಮುಂದೆ ಬಂದು ಹೀ ಹೀ ಅಂತ ಹೆದರಿಸೋಕೆ ಪ್ರಯತ್ನ ಪಟ್ಟರೂ ನೀವು ಹೆದರದೆ.. ಒಂದು ಬೆಲ್ಲದ ತುಂಡನ್ನು ಕಂಡರೆ ಭಯಭೀತರಾಗುತ್ತೀರಿ ಎಂಬ ಮಾತು ನಗು ತರಿಸಿತು.. 

೨. ಒಂಭತ್ತು ಹದಿನೈದಕ್ಕೆ ಚಂದ್ರೋದಯ.. ಆಮೇಲೆ ಹೋಗೋಣ ಅಂತ ನನ್ನ ಸಹೋದರಿ ಹೇಳಿದಾಗ.. ಅಯ್ಯೋ ಆಕಾಶ ನೋಡೋಕೆ ಯಾಕೆ ನೂಕು ನುಗ್ಗಲು.. ಬೆಲ್ಲ ತಿನ್ನೋಕೆ ಎಂಟು ಮುಕ್ಕಾಲಾದರೇನು.. ಒಂಭತ್ತು ಕಾಲು ಆದರೇನು.. ಬೆಲ್ಲ ಬೆಲ್ಲ ಬೆಲ್ಲಾ ಎಲ್ಲೆಲ್ಲಿ ನೋಡಲಿ ಬೆಲ್ಲವನ್ನೇ ಕಾಣುವೆ.. ಅಂತ ನಿಮ್ಮಿಷ್ಟದ ರಾಜಕುಮಾರನ ಹಾಡು ನೆನಪಿಗೆ ಬಂತು" 

ಅದಕ್ಕೆ ನಗು ಬಂತು ಅಂತ ಅಮ್ಮ ಹೇಳಿದರು.. 

ಅವರ ಬದುಕಿನುದ್ದಕ್ಕೂ ಅನುಸರಿಸಿಕೊಂಡು ಬಂದದ್ದು ಅವರ ನಗು.. ನಮ್ಮ ಬದುಕಿಗೂ ಬೆಳಕಾಗಿ ಮಾರ್ಗದರ್ಶನ ನೀಡುವುದು ಅದೇ ನಗು.. ಆ ನಗು ನಮ್ಮ ಜೊತೆಯಿರುವಾಗ "ನಗು ನಗುತಾ ನಲಿ ನಲಿ ಏನೇ ಆಗಲಿ"  ಅಲ್ಲವೇ


Thursday, February 26, 2026

ಅಪರಿಮಿತವಾದ ಮಂದ"ಸ್ಮಿತ"ದ ಉತ್ಸಾಹದ ಮೊದಲ ದಿನದ ಪಯಣ

ವಿಷಯ ಗೊತ್ತಾಯಿತು ...ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಂಡು ಮನೆ ಬಿಡುವಾಗ ನಾ ನಂಬಿದ ಇಷ್ಟದೈವಗಳಿಗೆ ನಮಸ್ಕಾರ ಸಲ್ಲಿಸಿ.. ಇವಳು ಅನುಸರಿಸುತ್ತಿರುವ ಅಜ್ಜನ ಚಿತ್ರಕ್ಕೆ ನಮಿಸಿ 

"ಅಜ್ಜ ನಮಗೆಲ್ಲ ನಿನ್ನ ಲೋಕವನ್ನು ಅವರ ಕುಟುಂಬಕ್ಕೆ ಪರಿಚಯಿಸಿದ ಆ ಶಕ್ತಿ ಇಂದು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದೆ.. ನಿನ್ನ ಶಕ್ತಿಯ ಬಗ್ಗೆ ಅಪಾರ ನಂಬಿಕೆ ಇರುವ ಅವರ ಕುಟುಂಬ ಹಗಲಿರುಳು ತಮ್ಮ ಪರಿಶ್ರಮದ ಜೊತೆ, ವೈದ್ಯಕೀಯ ನೆರವಿನ ಜೊತೆಗೆ .. ನಿನ್ನ ಧ್ಯಾನದಲ್ಲಿ ಯೋಗ ಮಾಡುತ್ತಿದ್ದಾರೆ. ಆ ನಿನ್ನ  ಮಗಳ ಆರೋಗ್ಯ ಸುಧಾರಿಸುವುದು ನಿನ್ನ ಕೈಯಲ್ಲಿ ಇದೆ.. ನಿನಗೆ ಇಂದು ಬಹಳ ಖುಷಿಯಾಗ್ತಿದೆ ಅನ್ನಿಸುತ್ತಿದೆ ಅಲ್ವೇ..  ಅವರ ಬದುಕಿನ ಪ್ರತಿಕ್ಷಣದಲ್ಲೂ ನಿನ್ನ ಹೆಸರನ್ನೇ, ನಿನ್ನ ಧ್ಯಾನದಲ್ಲಿಯೇ ಕಳೆದ ಅವರ ಬದುಕಿನ ಅಂತಿಮ ಘಟ್ಟದಲ್ಲಿ ನಿನ್ನ ಆ ಶಕ್ತಿಯ ಒಂದು ಕಿರಣಕ್ಕೆ ಕಾಯುತ್ತಿದೆ.. ನಿನ್ನ ಶಕ್ತಿಯಲ್ಲಿ ಅಪಾರ ನಂಬಿಕೆ ಇರುವ ಅವರ ಕುಟುಂಬ ನೀನು ಆಕೆಯನ್ನು ಉಳಿಸಬೇಕು.. ಇಲ್ಲವೇ ನೋವಿನಿಂದ ಮುಕ್ತರನ್ನಾಗಿಸಿ ನಿನ್ನ ಲೋಕಕ್ಕೆ ಕರೆದೊಯ್ಯಬೇಕು.. "

ಅಮಿತಾಭ್ ದೀವಾರ್ ಸಿನಿಮಾದಲ್ಲಿ ಶಂಕರನ ಮುಂದೆ ನಿಂತು ಹೇಳಿದಂತೆ ನಾನೂ ಹೇಳಿಬಿಟ್ಟೆ.. 

ಅಜ್ಜನ ಫೋಟೋ ನೋಡುತ್ತಿದ್ದೆ.. ಅಜ್ಜ ನಸು ನಕ್ಕ ಹಾಗೆ ಭಾಸವಾಯಿತು.. 


"ಯಾಕೆ ಅಜ್ಜ ಈ ನಗು" ಅಂದೇ 

"ನೀ ಹೊರಟಿದ್ದೀಯ ಅಲ್ವೇ.. ಆಮೇಲೆ ನಿನಗೆ ಗೊತ್ತಾಗುತ್ತದೆ.. ಪ್ರಯಾಣಿಕ ಶುಭಕರವಾಗಿರಲಿ" ಇಷ್ಟು ಹೇಳಿ ಫೋಟೋದೊಳಗೆ ಅಜ್ಜ ಹೋಗಿ ಬಿಟ್ಟರು.. 

ಹತ್ತುಘಂಟೆಗಳ ಪಯಣ.. ಬಳಲಿಕೆ ಇದ್ದರೂ ಛಲ ಆ ಬಳಲಿಕೆಯನ್ನು ಮೆಟ್ಟಿ ನಿಂತಿತ್ತು.. 

ವಿವಶವಾಯಿತು ಪ್ರಾಣ – ಹಾ!!
ವಿವಶವಾಯಿತು ಪ್ರಾಣ  ಹಾ
ಪರವಶವು ನಿನ್ನೀ ಚೇತನ
ವಿವಶವಾಯಿತು ಪ್ರಾಣ - ಹಾ!!
ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು
ಇರದುದರೆಡೆಗೆ ತುಡಿವುದೇ ಜೀವನ 

ಶ್ರೀ ಗೋಪಾಲಕೃಷ್ಣ ಅಡಿಗರ ಯಾವ ಮೋಹನ ಮುರಳಿ ಕವನ ಕಾರಿನಲ್ಲಿ ಬರುತ್ತಿತ್ತು.. 

ಹೌದು ಜೀವನೋತ್ಸಾಹ ಎಂದರೆ ನಾ ಅನೇಕ ಕಡೆ ನೋಡಿದ್ದೇ, ಕೇಳಿದ್ದೆ, ಓದಿದ್ದೆ.. ಆದರೆ ಅದನ್ನೆಲ್ಲ ಮೆಟ್ಟಿ ನಿಂತವರು ನನ್ನ ಮಾತೃ ಸ್ವರೂಪಿ ಅತ್ತೆಯವರು.. ಹೆಣ್ಣು ಕೊಟ್ಟೆಯೋ ಕಣ್ಣು ಕೊಟ್ಟೆಯೋ ಅನ್ನುವ ಗಾದೆಯಂತೆ, ತಿರುವಿನಲ್ಲಿದ್ದ ಬದುಕಿಗೆ ದಾರಿದೀಪವಾದವಳನ್ನು ಹೆತ್ತ ಮಾತೆ.. 

ನಾವು ಬೆಳಗಾವಿಗೆ ಬರುತ್ತಿದ್ದೇವೆ ಎಂದರೆ ಅವರು ತರುಣಿಯಾಗಿಬಿಡುತ್ತಿದ್ದರು.. ಅವರಿಗೆ ನನ್ನ ಪ್ರವಾಸದ ಹುಚ್ಚು ತಿಳಿದಿತ್ತು.. ಎಲ್ಲರಿಗಿಂತ ಮೊದಲೇ ಸಿದ್ಧವಾಗಿಬಿಡುತ್ತಿದ್ದರು.. 

ಎಲ್ಲೇ ಹೋಗಲಿ, ಎಲ್ಲೇ ನಿಲ್ಲಲಿ, ಎಲ್ಲೇ ಊಟ ತಿಂಡಿಗೆ ನಿಲ್ಲಲಿ ಅವರು ಸದಾ ಮುಂದು.. ಕಾರಣ ಜೀವನವನ್ನು ತುಂಬು ಹೃದಯದಿಂದ ಅನುಭವಿಸುತ್ತಿದ್ದರು.. ಅಸಾಧ್ಯ ಮಾತು, ಅಸಾಧ್ಯವಾದ ಸುತ್ತಮುತ್ತಲ್ಲ ಮಂದಿಯ ಬಗ್ಗೆ ಅರಿವು.. ಒಂದು ಕ್ಷಣ ಪರಿಚಯವಾದರೆ ಮುಗಿಯಿತು.. ಇವರ ಪೂರ್ವಾಪರ ಅವರ ಪೂರ್ವಾಪರ ಎಲ್ಲವೂ ಹತ್ತು ನಿಮಿಷದ ಸಿನಿಮಾದಲ್ಲಿ ಮೂಡಿಬಂದಷ್ಟು ಕರಾರುವಾಕ್ ಆಗಿರುತ್ತಿತ್ತು.. 

ಸುಮ್ಮನೆ ಹಾಗೆ ಹೀಗೆ ಬಂದದ್ದು ನೋಡೇ ಇಲ್ಲ.. ಯಾವಾಗಲೂ ಶಿಸ್ತಾಗಿ ಅಲಂಕಾರ ಮಾಡಿಕೊಳ್ಳುತ್ತಿದ್ದರು.. "ಏನ್ ಆಯೀ ಹುಡುಗಿ ಆಗಿಬಿಟ್ಟಿದ್ದೀಯ" ಅಂತ ಇವಳು ರೇಗಿಸೋಳು.. 

ಆ ಕಡೆ ಈ ಕಡೆ ಕಬ್ಬಿಣದ ಗೋಡೆಗಳು.. ಕೆಳಗೆ ಕಬ್ಬಿಣದ ಹಾಸಿಗೆ.. ಅದರ ಮೇಲೊಂದಷ್ಟು ಸೌದೆಗಳು.. ಅದರ ಮೇಲೆ ತವರು ಮನೆಯ ಅಂತಿಮ ಉಡುಗೊರೆಯಾಗಿದ್ದ ಏಳೆಂಟು ಸೀರೆಗಳು, ಕಾಲುಂಗುರು, ಸಾಂಕೇತಿಕ ತಾಳಿ, ಹೂವು, ಕಾಲುಂಗುರು ಮುತ್ತೈದೆಯಾಗಿ ಪರಲೋಕಕ್ಕೆ ಕಳಿಸಿಕೊಡುವ ಸಿದ್ಧತೆ ಪೂರ್ಣಗೊಂಡಿತ್ತು.. 

ಅವರ ಒಳಗಿನ ಜೀವನೋತ್ಸಾಹದ ಅಗ್ನಿ.. ಹೊರಗಿನ ಅಗ್ನಿಗಿಂತ ಜೋರಾಗಿಯೇ ಇತ್ತು.. 
ಆದರೆ ಆ ಜೀವನೋತ್ಸಾಹದ ಅಗ್ನಿಗಿಂತ ಇನ್ನೂ ಹೆಚ್ಚಾಗಿದ್ದದ್ದು ಶರೀರದ ತಾಪಮಾನ.. ಅದು ನೂರರ ಗಡಿ ದಾಟಿ.. ನೂರಾ ಆರು ತನಕ ಬಂದಿತ್ತು.. 

ಆ ಶಾಖ ಅವರ ಜೀವನೋತ್ಸಾಹದ ಅಗ್ನಿಯನ್ನು ಕಡಿಮೆ ಮಾಡತೊಡಗಿತು.. ಅವರ ಶರೀರಕ್ಕೆ ಲಗತ್ತಿಸಿದ್ದ ಉಪಕರಣಗಳು ಏರು ಪೇರಿನ  ರೇಖೆಯನ್ನು ತೋರಿಸುತ್ತಿದ್ದವು.. ಅಲ್ಲಿ ಸುತ್ತಲಿದ್ದ ಮಂದಿಗೆ ಏನೋ ಒಂದು ಆಶಾಕಿರಣ.. ಮತ್ತೆ ಮೊದಲಿನ ಹಾಗೆ ಆಗುತ್ತಾರೆ ಅಂತ..

ಸೀಮಾ ನಾ ಮಲಗಿರುವ ಆಸ್ಪತ್ರೆಯ ಹಾಸಿಗೆ ಮೇಲಕ್ಕೆ ಏರುತ್ತಿದ್ದೆ ಕೆಳಕ್ಕೆ ಇಳಿಯುತ್ತಿದೆ.. ಜೋಕಾಲಿಯಲ್ಲಿ ತೂಗಾಡಿಸಿದ ಅನುಭವವಾಗುತ್ತಿದೆ.. ಅಂತ ಒಂದೆರಡು ದಿನಗಳ ಹಿಂದೆ ಸೀಮಾಳಿಗೆ ಹೇಳಿದ್ದರಂತೆ.. 

ಒಂದು ಕಡೆ ಬದುಕಬೇಕು ಎಂಬ ಆಶಯ.. ಇನ್ನೊಂದು ಕಡೆ ಕಾಲನ ಕರೆ.. ತಾವು ನಂಬಿದ ಅಜ್ಜ/ಬಾಬಾ/ ಶಿವಬಾಬಾ ತನ್ನನ್ನು ಪರಂಧಾಮಕ್ಕೆ ಕರೆದೊಯ್ಯಲು ಬಂದಿದ್ದಾನೆ ಅನ್ನುವ ಅನುಭವ.. 

ಇವೆಲ್ಲ ಒಂದರ ಮೇಲೆ ಒಂದು ಪೈಪೋಟಿ ನೆಡೆಸಿದಂತೆ ಕಂಡರೂ ಕಡೆಗೆ ಗೆದ್ದದ್ದು ಕಾಲನ ಕರೆ.. 

ಸುಮಾರು ಹತ್ತು ಘಂಟೆಗಳ ಪಯಣ ಮುಗಿಸಿ ಬಂದು ಮನೆ ಬಾಗಿಲಿಗೆ ಬಂದಾಗ ಕಾಣದಿದ್ದದ್ದು ಎಂದಿನಂತೆ "ಶ್ರೀಕಾಂತ್ ಬನ್ನಿ ಬನ್ನಿ.. ಎಷ್ಟು ಹೊತ್ತಿಗೆ ಹೊರಟಿರಿ.. ಸೀಮಾ ಊಟ ಬಡಿಸು.. ಕಾಫೀ ಕುಡಿತೀರಿ, ನೀರು ಕೊಡಲಿ.. ಶೀತಲ್ ಚೆನ್ನಾಗಿದ್ದೀಯಾ.. ನೀ ಬಂದದ್ದು ಬಾಳ ಚಲೋ ಆಯ್ತು" ಹೀಗೆ ಹತ್ತಾರು ರೀತಿಯಲ್ಲಿ ಕಾಳಜಿಯಿಂದ ವಿಚಾರಿಸಿಕೊಳ್ಳುತ್ತಿದ್ದ ಧ್ವನಿ ಕೇಳಿಬರಲಿಲ್ಲ.. ಆದರೆ ಅವರ ದಿವ್ಯ ಉಪಸ್ಥಿತಿಯ ಅನುಭವ ನನಗೆ ಸಿಕ್ಕಿತು.. 

ಯಾವಾಗಲೂ ಅವರಿಗೆ ಕುತೂಹಲ ಹೆಚ್ಚಿತ್ತು.. ಒಂದು ದಿನ ನಮ್ಮ ಮನೆಗೆ ಬಂದಾಗ.. ರಾತ್ರಿ ಪ್ರೇಮದ ಕಾಣಿಕೆ ಚಿತ್ರ ನೋಡುತ್ತಿದ್ದೆವು.. ಬೇರೆ ರೂಮಿನಲ್ಲಿ ಮಲಗಿದ್ದ ಇವರು.. ಮೆಲ್ಲನೆ ಬಾಗಿಲ ಸಂಧಿಯಿಂದ ನೋಡುತ್ತಿದ್ದನ್ನು ನೋಡಿ "ಯಾಕೆ ಆಯೀ ಅಲ್ಲಿ ಇದ್ದೀಯ .. ಬಾ ಇಲ್ಲಿಯೇ ಬಾ" ಅಂದಾಗ "ಈ ಚಿತ್ರ ಚೆನ್ನಾಗಿತ್ತು ಅದಕ್ಕೆ ನೋಡೋಕೆ ಬಂದೆ" .. ಎಂದಿದ್ದರು.. 

ಸಿನೆಮಾ, ಹಾಡುಗಳು, ಪ್ರವಾಸ, ಊಟೋಪಚಾರ, ಬಂಧುವರ್ಗದವರನ್ನು ಉಪಚರಿಸುವುದು, ತನ್ನ ಮಕ್ಕಳ, ಮೊಮ್ಮಕ್ಕಳ ಸ್ನೇಹಿತರನ್ನು ಆತ್ಮೀಯವಾಗಿ ಮಾತಾಡಿಸುವುದು, ಉಪಚರಿಸುವುದು, ತನ್ನ ಸುತ್ತಲ ನೆರೆಹೊರೆಯವರನ್ನು ಪ್ರೀತಿಯಿಂದ ಮಾತಾಡುಸಿದ್ದರು.. 

ಇದಕ್ಕೆ ಸಾಕ್ಷಿ ಅವರು ಭೌತಿಕವಾಗಿ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ ಎನ್ನುವ ವಿಷಯ ತಿಳಿದ ಮೇಲೆ, ಹತ್ತಾರು ಮಂದಿ ಸಂತಾಪ ವ್ಯಕ್ತಪಡಿಸಿದ್ದು, ಅವರ ಅದ್ಭುತ ಇಚ್ಚಾಶಕ್ತಿಯ ಬಗ್ಗೆ ಹೇಳಿದ್ದು.. ಎಲ್ಲವೂ ಅವರ ತುಂಬು ಜೀವನದ ವ್ಯಕ್ತಿತ್ವವನ್ನು ಸಾರುತಿತ್ತು.. 

ಬದುಕಿನ ಪ್ರತಿಕ್ಷಣವನ್ನೂ ಅವರು ಅನುಭವಿಸಿ ಜೀವಿಸಿದ್ದರು.. 

ಪ್ರವಾಸಕ್ಕೆ ಹೋದಾಗ ಅದು ಜಲಪಾತವಾಗಿರಲಿ, ದೇವಾಲಯವಿರಲಿ, ಉದ್ಯಾನವಿರಲಿ, ಹೋಟೆಲ್ ಇರಲಿ.. ಮನೆಯ ಸಮಾರಂಭವಿರಲಿ ಇವರ ಉತ್ಸಾಹ ನೂರು ಪಟ್ಟು ಜಾಸ್ತಿಯಾಗಿತ್ತು.. 

ಅವರ ಅಂತಿಮ ಘಟ್ಟದ ಕೆಲವು ವರ್ಷಗಳು ಅವರ ಜೊತೆಯಲ್ಲಿ ಕಳೆಯುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯವೇ ಹೌದು.. ಅಪಾರ ಮಾತುಗಳು ಕೆಲವೊಮ್ಮೆ ಓಹ್ ಆಹ್ ಅನ್ನಿಸುತ್ತಿದ್ದರೂ ಅವರ ನಿರರ್ಗಳ ಮಾತುಗಳು.. ಕಲ್ಮಶವಿಲ್ಲದ ಮನಸ್ಸು, ಕಪಟವಿಲ್ಲದ ನೆಡೆನುಡಿಗಳು.. ಅವರ ಬದುಕಿನ ಕಡೆಯ ಹಂತದಲ್ಲಿ ಸೂಜಿ, ಮಾತ್ರೆಗಳು, ಟಾನಿಕ್ಕುಗಳು ಕೊಡುತ್ತಿದ್ದ ನೋವುಗಳು ... ಅವರ ಶುಭ್ರಮನಸ್ಸು ಗಟ್ಟಿಯಾಗಿ ನಿಂತಿದ್ದರಿಂದ.. ಆ ನೋವುಗಳನ್ನು ಈ ಭಗವಂತನ  ಆಶೀರ್ವಾದದಿಂದ  ಮೆಟ್ಟಿ ನಿಂತಿತ್ತು.. ವೈದ್ಯರು ತಮ್ಮಿಂದ ಆಗಬಹುದಾದ ಪ್ರಯತ್ನಗಳನ್ನೆಲ್ಲ ಮಾಡಿದ್ದರು.. ಇಂತಹ ಜೀವವನ್ನು ಉಳಿಸಿಕೊಳ್ಳಲು ಆಗಲಿಲ್ಲವಲ್ಲ ಎಂಬ ನೋವು.. ಅವರ ಕಣ್ಣಿನ ಅಂಚಿನಲ್ಲಿ ಕಣ್ಣೀರಾಗಿ ಬಂದದ್ದು ಮಾನವೀಯತೆ ಇದೆ ಎನ್ನುವುದಕ್ಕೆ ಸಾಕ್ಷಿಯಾಗಿತ್ತು.. 

ಈ ಹತ್ತು ಹದಿನೈದು ವರ್ಷಗಳಲ್ಲಿ ವೈದ್ಯಲೋಕವನ್ನು ತೀರಾ ಹತ್ತಿರದಿಂದ ನೋಡಿದ್ದ ನನಗೆ ವೈದ್ಯೋನಾರಾಯಣೋ ಹರಿಃ ಎಂಬ ಸಾಲಿನಲ್ಲಿ ಇರುವ ದಿವ್ಯಶಕ್ತಿಯ ಅನುಭವವಾಗಿತ್ತು.  

ಹಾಗಾಗಿ ಅವರ ಅಂತಿಮ ದರ್ಶನ ಮಾಡಿದ ಅನೇಕ ಬಂಧು ಮಿತ್ರರು, ಆಸ್ಪತ್ರೆಯ ಸಿಬ್ಬಂಧಿಗಳು ದೇವಿ ಕಳೆಯಿದೆ ಮುಖದಲ್ಲಿ ಅನ್ನುತ್ತಿದ್ದರು.. ಆ ಮಟ್ಟಿನ ದೈವಿಕ ಕಳೆ ಇತ್ತು ಅಂತ ಹೇಳ್ತಾರೆ ನೋಡಿದವರೆಲ್ಲ.. 

ಅವರನ್ನು ಅಂತಿಮ ಹಂತದಲ್ಲಿ ನೋಡಲಾಗಲಿಲ್ಲವೆಂಬ ನೋವಿದ್ದರೂ, ಅರೆ ಅವರೊಡನೆ ಸುತ್ತಾಡಿದ ಮಧುರನೆನಪುಗಳಲ್ಲಿ ಹಸಿರಾಗಿದ್ದರೆ ಅನಿಸುವ ಆ ಭಾವ ಸದಾ ನಿಂತಿರುತ್ತದೆ. 

ಭೌತಿಕವಾಗಿ ಇಲ್ಲದ ಅವರ ಅಸ್ತಿತ್ವವನ್ನು ಸಂಸ್ಕಾರದ ರೀತಿ ರಿವಾಜುಗಳಿಗಾಗಿ ಉರಿದು ಹೋದ ನಶ್ವರ ದೇಹ ಉಳಿಸಿದ ಕುರುಹುಗಳಲ್ಲಿ ಹುಡುಕುವ ಅವರನ್ನು ಹುಡುಕುವ ಕೆಲಸದಲ್ಲಿ ನಾನು ಭಾಗಿಯಾಗಿದ್ದು.. ಪುಣ್ಯವೇ ಹೌದು.. ಅವರ ಆ ಎಲುಬು, ಭಸ್ಮಗಳ ಸ್ಪರ್ಶ, ಆ ಶಕ್ತಿಗೆ  ಅಂತಿಮ ಸಂಸ್ಕಾರದ ಅಗ್ನಿ ಸ್ಪರ್ಶ ಮಾಡಿದ ಜಾಗದಲ್ಲಿ ನಮಸ್ಕರಿಸಿದಾಗ ಆ ಕಡೆಯಿಂದ ಆ ಸ್ಮಶಾನದ ಸಿಬ್ಬಂಧಿ ಆ ಭಸ್ಮವನ್ನು ಒಂದು ಕಡೆ ಮಾಡುತ್ತಿದ್ದ ಆ ಭಸ್ಮ ನನ್ನ ತಲೆಗೆ ಹಾರಿತು.. ಅಮ್ಮ ನನ್ನನ್ನು ಸ್ಪರ್ಶ ಮಾಡಿದ್ದಾರೆ ಅಂತ ಅನುಭವ ಸಿಕ್ಕಿತು.. ಹಾಗೆ ಆ ಚಿತಾಭಸ್ಮದಲ್ಲಿ ಸಂಸ್ಕಾರಕ್ಕೆ ಎಲುಬಿನ ಅವಶೇಷಗಳನ್ನು ಹುಡುಕುತ್ತಿದ್ದಾಗ ಸಿಕ್ಕಿದ್ದು ಅವರ ಅಗ್ನಿಯಲ್ಲಿ ಬೆಂದ ಕಾಲುಂಗುರ.. 

ಹೋಗಿ ಬನ್ನಿ ಅಮ್ಮ.. ಬದುಕಿನ ಸಾರ್ಥಕತೆಯನ್ನು ಕಂಡು ಜೀವನೋತ್ಸಾಹದ ಪಾಠವನ್ನು ನಮಗೆಲ್ಲ ಕಲಿಸಿದ ನೀವು.. ಆ ಮಹಾಮಹಿಮನಿಗೂ ಉತ್ಸಾಹ ತುಂಬ ಬೇಕಾದ ಅವಶ್ಯಕತೆ ಇದೆ ಅನಿಸುತ್ತದೆ.


ಈ ಬದುಕಿನಲ್ಲಿ ಕಂಡ ಕನಸ್ಸುಗಳು.. ಮಾಡಬೇಕಾದ ಸಾಧನೆಗಳು, ಸೇವೆಗಳು ಎಲ್ಲವೂ ನಿಮ್ಮ ಬಾಳಿನಲ್ಲಿ ಸಿಕ್ಕಿದೆ.. ಅದನ್ನು ನಿಮ್ಮದೇ ಶೈಲಿಯಲ್ಲಿ ವಜ್ರಸಮಾನ ಮಾಡಿದ್ದೀರಾ.. ನಿಮಗೆ ಅರಿವಿಲ್ಲದೆ ನಿಮ್ಮ ಪೀಳಿಗೆ ಮತ್ತು ಮುಂದಿನ ಪೀಳಿಗೆಯನ್ನು ಈ ಅದ್ಭುತ ಲೋಕಕ್ಕೆ ಪರಿಚಯಿಸಿ ಅವರೂ ಕೂಡ ಸಾರ್ಥಕತೆ ಪಡೆಯುವಂತೆ ಮಾಡಿದ್ದೀರಾ.. ಇದಕ್ಕಿಂತ ಇನ್ನೇನೂ ಸಾರ್ಥಕತೆ ಇದೆ ....!

ಒಂದು ದೀಪ ಹಚ್ಚಿದರೆ ಸಾಕು ಅದು ಅನೇಕಾನೇಕ ದೀಪಗಳನ್ನು ಹಚ್ಚಲು ಸಹಾಯ ಮಾಡುತ್ತದೆ.. ಅಂಧಕಾರವನ್ನು ಮರೆ ಮಾಡುತ್ತದೆ.. 

ಇದೆ ಅಲ್ಲವೇ ನೀವು ಕೂಡ ಮಾಡಿದ್ದು.. 

************
ಅಜ್ಜ ನಾನು ಹೊರಡುವಾಗ ನೀನು ನಕ್ಕಿದ್ದು ಏಕೆ ಅಂತ ಗೊತ್ತಾಯಿತು.. ಹೌದು ಅವರು ಹೋದರು ಅನ್ನುವ ಶಾಕ್ ಗಿಂತ ಅವರಿಲ್ಲ ಎನ್ನುವ ಶಾಕ್ ದೊಡ್ಡದು ಎನ್ನುವ ಆ ಕ್ಷಣದ ಮಾತು ನಿಜವಾಯಿತು.. 

ನಿನ್ನ ತಾಳಕ್ಕೆ ಕುಣಿಯಾದವರಾರು ಇದ್ದಾರೆ ಅಜ್ಜ!


***********

Sunday, February 8, 2026

ಯಾತ್ರೆ ....ಅಂತಿಮವೋ...ಆರಂಭವೋ

ಚಿತಾಗಾರದ ಒಳಗೆ ಕಾಲಿಟ್ಟೆ...

ಅಲ್ಲಿನ ಸಿಬ್ಬಂದಿ ಚಿತಾಗಾರದ ಬಾಗಿಲು ತೆರೆದರು..

ಛಾವಣಿಯ ಸಣ್ಣ ಕಿಂಡಿಯಿಂದ ಬೆಳಕಿನ ಕೋಲು ಕಾಣಿಸಿತು..ಆ ಬೆಳಕಿನ ಕೋಲಿನಲ್ಲಿ ಕೆಲವು ಕಣಗಳು ಮೇಲಕ್ಕೇರುತ್ತಿದ್ದರೆ..ಕೆಲವು ಕೆಳಕ್ಕೆ ಇಳಿಯುತ್ತಿದ್ದವು..


ಅಚ್ಚರಿಯಿಂದ ಅದನ್ನೇ ನೋಡುತ್ತಿದ್ದೆ...

ಕಿರಣಗಳು ಮೆಲ್ಲನೆ ಮಾಯವಾಗುತ್ತಿತ್ತು..ಅಂದೇ ಸಂದೇಶ ವಾಹಕರ ಕೆಲಸ ಮುಗಿಯುತ್ತಿತ್ತು...

ಸಂಪೂರ್ಣ ಸಾರ್ಥಕತೆ ಅನುಭವಿಸಿದ ಕಣಗಳು ಪರಂಧಾಮ ಸೇರುತ್ತಿದ್ದರೆ..ಪರಂಧಾಮದಿಂದ ಸಾರ್ಥಕತೆ ಅನುಭವಿಸೋಕೆ ಕಣಗಳು ಅವಿರ್ಭವಿಸುತ್ತಿದ್ದವು..

ಅಬ್ಬಬ್ಬ ಬದುಕಿನ ಆರಂಭವೋ..ಅಂತ್ಯವೋ ಅನ್ನುವುದಕ್ಕೆ ಉತ್ತರ ಸಿಕ್ಕಿದ ಕ್ಷಣವದು..

ಬದುಕೇ ಹೀಗೆ ಕಣದಿಂದ ಕಣದ ತನಕ...ಕಿರಣಗಳೇ ಇದಕ್ಕೆ ವಾಹಕಗಳು..

ನನ್ನ ಶಾಲಾದಿನದ ಗೆಳತಿ ..ಜೊತೆಯಲ್ಲಿ ಓದಿದ್ದು ಅಂತ ಅವಳು ಹೇಳಿದರೂ ಆ ದಿನಗಳ ನೆನಪು ಕರಗುವ ಮೊಂಬತ್ತಿಯ ಮೇಣದ ಹಾಗೆ ಸ್ಷಪ್ಟ ಇರಲಿಲ್ಲ..ಆದರೆ ಅವಳು ಬೇರೆ ಸೆಕ್ಷನ್ ಅಂತ ಗೊತ್ತಾದ ಮೇಲೆ ನಾನು ಗಜನಿಯಲ್ಲ ಅಂತ ಸಂತಸವಾಗಿತ್ತು..

ಹೀಗೆ ಒಂಭತ್ತು ವರ್ಷಗಳ ಒಂದು ಸುಂದರ ಮುಂಜಾವಿನಲ್ಲಿ ಶಾಲಾದಿನಗಳ ಸಹಪಾಠಿಗಳು ಲಾಲ್ ಬಾಗಿನಲ್ಲಿ ಭೇಟಿಯಾದೆವು..ಅಲ್ಲಿಂದ ಶುರುವಾಯಿತು ನಮ್ಮ ಗೆಳೆತನ..

ಇವಳು ಗೆಳತಿಯಲ್ಲ ನನ್ನ ಸಹೋದರಿಯಾದಳು..ಒಂದೇ ನಕ್ಷತ್ರ ..ಒಂದೇ ರಾಶಿ..ನಮ್ಮನ್ನು ಇನ್ನಷ್ಟು ಹತ್ತಿರ ತಂದಿತು..ದೇವಾಲಯದಲ್ಲಿ ಸಂಕಲ್ಪ ಮಾಡಿಸುವಾಗ ನನ್ನ ಹೆಸರು ತರುತ್ತಿದ್ದಳು..ಅಷ್ಟು ಮಮತೆ ಈ ಅಣ್ಣನ ಮೇಲೆ..

ಯೋಚಿಸುತ್ತಿದ್ದೆ ಇದೆಲ್ಲಾ ಕನಸೋ..ನನಸೋ ಹೇಗೆ ಸಾಧ್ಯ ಅಂತ..

ಒಮ್ಮೆ ಅವಳ‌ ಮನೆಯ ಕಾರ್ಯಕ್ರಮಕ್ಕೆ ನನ್ನ ಆಹ್ವಾನಿಸಿದ್ದಳು..ಆಗ ಅವಳ ಅಮ್ಮನನ್ನು ಕಂಡಿದ್ದೆ..ಆಗ ಅರಿವಾಯಿತು ಇವಳ ಸ್ವಭಾವ ಹೀಗೆ ಅಂತ..ಅವಳ ಅಪ್ಪನ ಬಗ್ಗೆ ಹತ್ತಾರು ಮಾತುಗಳಲ್ಲಿ ಹೇಳಿದಾಗ ಇವಳ ವ್ಯಕ್ತಿವಕ್ಕೆ ಬುನಾದಿ ಇವಳ ಮಾತಾ ಪಿತೃಗಳು ಅಂತ.

ಇವಳ‌‌ ಮಕ್ಕಳ ವಾಟ್ಸಾಪ್ ಸ್ಟೇಟಸ್ ನೋಡುತ್ತಲೇ ಇರುತ್ತೇನೆ..ತಾತಾ ಅಜ್ಜಿಯರನ್ನು ಎಷ್ಟು ಆಳವಾಗಿ ಪ್ರೀತಿಸುತ್ತಾರೆ ಅಂತ ಅರಿವಾಯಿತು..

ಅಂತಹ ಅದ್ಭುತ ವ್ಕಕ್ತಿತ್ವವುಳ್ಳ ಆ ಹಿರಿಯರ ಸಾನಿಧ್ಯ ಭಗವಂತನಿಗೆ ಬೇಕಾಗಿತ್ತು ಅಂತ‌‌‌ ಶನಿವಾರ ರಾತ್ರಿ ಸುಮಾರು ಹತ್ತು ಘಂಟೆಗೆ ತನ್ನ ಚೈತನ್ಯ ರಥವನ್ನು ಭುವಿಗೆ ಕಳಿಸಿಯೇ ಬಿಟ್ಟ.

ಸುಂದರ ಸಂಸಾರದ ಯಜಮಾನರಾಗಿ..ಪ್ರೀತಿಯ ಮಡದಿಗೆ ರಕ್ಷಕರಾಗಿ..ಮುದ್ದಾದ ಮಕ್ಕಳಿಗೆ ಪಿತರಾಗಿ..ಅತೀವವಾಗಿ ಪೂಜಿಸುವ ಅಳಿಯನಿಗೆ ಮಾವನಾಗಿ..ಕನಸ್ಸಲ್ಲೂ ತಾತಾ ಅಂತ ಕನವರಿಸುವ ಮೊಮ್ಮಕ್ಕಳಿಗೆ ತಾತಾನಾಗಿ..ಅನೇಕ ಬಂಧು ಮಿತ್ರರಿಗೆ ಪ್ರೀತಿಸುವ ಜೀವವಾಗಿ ಬದುಕಲ್ಲಿ ಸಂಸ್ಕಾರ..ಶಿಸ್ತು..ಸಂಪ್ತದಾಯ..ಗುರು ಹಿರಿಯರಲ್ಲಿ ಭಕ್ತಿ ಗೌರವ.. ಎಂದೂ ಬಿಡದ ದೇಶ ಭಾಷೆಗಳ ಮೇಲಿನ ಪ್ರೀತಿ.. ಇವುಗಳನ್ನು ಆಸ್ತಿ ಮಾಡಿ ಭುವಿಯಲ್ಲಿನ ತನ್ನ ಬಳಗಕ್ಕೆ ಧಾರೆಯೆರೆದು ಶೇಷ ಭಾಗವನ್ನು ಭಗವಂತನಿಗೆ ಅರ್ಘ್ಯದ ಮೂಲಕ ಕೊಡಲು ಭಗವಂತ ಕಳಿಸಿದ ಚೈತನ್ಯ ರಥವನ್ನು ಹತ್ತಿ ಹೊರಟೇ ಬಿಟ್ಟರು..





ನೋಡಿದವರ..ಭೇಟಿ ಮಾಡಿದವರ..ಮಾತಾಡಿಸಿದವರ ಬಗ್ಗೆ ಒಂದೆರೆಡು ಮಾತುಗಳು ಹೇಳೋದು..ಬರೆಯೋದು ಸುಲಭ..

ಆದರೆ ಇನ್ನೊಬ್ಬರ ಕಣ್ಣಿನಿಂದ ನೋಡಿದ ವ್ಯಕ್ತಿತ್ವದ ಬಗ್ಗೆ ಬರೆಯೋದು ಕಷ್ಟ..ಆದರೆ ಅದನ್ನು ಸಾಧ್ಯ ಮಾಡಿಸಿದ್ದು ಈ‌ ಕೀರ್ತಿಶೇಷರು..

ನಿಮ್ಮ ಸುಂದರ ಬದುಕಿಗೊಂದು ಸಾಷ್ಟ್ರಾಂಗ ಪ್ರಣಾಮಗಳು...!

ಪುನರಪಿ ಜನನಂ
ಪುನರಪಿ‌ ಮರಣಂ