Monday, January 30, 2017

ಹಿಂದಕ್ಕೆ ಓಡಿದ ಗಡಿಯಾರ ಸರಿ ಹೋಯಿತು!!!

ಬೆಳಿಗ್ಗೆ ಎದ್ದೆ..ಗೋಡೆಗೆ ನೇತು ಹಾಕಿದ್ದ ಗಡಿಯಾರ ಹಿಂದಕ್ಕೆ ಓಡಲು ಶುರುಮಾಡಿತ್ತು.. ಬ್ಯಾಟರಿ ಶಕ್ತಿ ಹೀನವಾಗಿದೆ ಎನ್ನಿಸಿ ಬದಲಿಸಿದೆ.. ಊಹುಂ.. ಸ್ವಲ್ಪ ಹೊತ್ತು ಅಷ್ಟೇ ಸರಿಯಾಗಿತ್ತು.. ಮತ್ತೆ ಹಿಂದಕ್ಕೆ ಓಡಲು ಶುರುಮಾಡಿತ್ತು.. ಸರಿ ಆಫೀಸಿಗೆ ಹೋಗುವ ಹೊತ್ತಾಗಿತ್ತು... ಸಂಜೆ ನೋಡೋಣ ಅಂತ.. ಆಫೀಸಿಗೆ ಹೊರಟೆ..

ಆದರೆ ತಲೆಯಲ್ಲಿ ಒಂದು ಹುಳ ಹೊಕ್ಕಿಯೇ ಬಿಟ್ಟಿತ್ತು.. ಇಂದು ಗಡಿಯಾರ ಏತಕ್ಕೆ ಹಿಂದಕ್ಕೆ ಓಡುತ್ತಿದೆ... ? ಕೆಲವು ಪ್ರಶ್ನೆಗಳಿಗೆ ಉತ್ತರ ಹುಡುಕಬಾರದು.. ಉತ್ತರ ತಾನಾಗೇ ಬರಬೇಕು ಎನ್ನುವುದು ನನ್ನ ಸಿದ್ಧಾಂತ.. ಅಪ್ಪನಿಂದ ಕಲಿತದ್ದು.. ಸುಮ್ಮನಾದೆ.. ಆಫೀಸಿನ ಕೆಲಸಗಳಲ್ಲಿ ತಲ್ಲೀನನಾದೆ.. !

ಕೈಗಡಿಯಾರ.. ೧೧.೩೦ ಎಂದು ತೋರಿಸಿತು.. ಸರಿ ಆಫೀಸ್ ಬಾಸ್ ಗೆ ಹೇಳಿ.. ಹೊರಟೆ.. ಮಾರ್ಗ ಗೊತ್ತಿದ್ದರಿಂದ ಗೊಂದಲವಿರಲಿಲ್ಲ.. .. !

"ಸರ್.. ಮೇನ್ ಗೇಟ್ ಹೈ.. ಉದರ್ ಪಾರ್ಕ್ ಕೀಜಿಯೇ" ಸೆಕ್ಯೂರಿಟಿ ಸಿಬ್ಬಂದಿ  ಹೇಳಿದ ಹಾಗೆ ಆ ಕಡೆ ಹೋಗಿ ಇನ್ನೂ ಕಾರನ್ನು ನಿಲ್ಲಿಸಿರಲಿಲ್ಲ.. "ಶ್ರೀಕಾಂತ್ ಸರ್ ನಮಸ್ಕಾರ.. ಬನ್ನಿ ಬನ್ನಿ".. ಚಿರಪರಿಚಿತ ಎನ್ನಿಸುವಂಥ ಧ್ವನಿ.. ! ತಿರುಗಿ ನೋಡಿದೆ.. ಪ್ರಕಾಶ್ ಸರ್ ನಗುತ್ತ ನಿಂತಿದ್ದರು ಸ್ವಾಗತಿಸಲು.. !

"ಸರ್ ವಿಳಾಸ ಹುಡುಕೋಕೆ ಏನೂ ಕಷ್ಟವಾಗಲಿಲ್ಲ ಅಲ್ಲವೇ.. ಬನ್ನಿ ಹೀಗೆ ಬನ್ನಿ.. "

ಒಂದು ಹದಿನೈದು ಹೆಜ್ಜೆ ನೆಡೆದೆವು...

ಶಿಸ್ತಾಗಿ ಸಮವಸ್ತ್ರ ಧರಿಸಿದ್ದ ಶಾಲೆಯ ಬ್ಯಾಂಡ್ ಪಡೆ ನಿಂತಿತ್ತು.. ನಾ ಸುಮ್ಮನೆ ಒಂದು ನಗೆ ಕೊಟ್ಟು ಪ್ರಕಾಶ್ ಸರ್ ಜೊತೆಗೆ ಹೆಜ್ಜೆ ಇಟ್ಟೆ.. !

"ಸರ್ ಹೀಗೆ ಬನ್ನಿ ನಮ್ಮ "ಗಾರ್ಡ್ ಆಫ್ ಹಾನರ್" ಸ್ವೀಕರಿಸಿ.. " ಧ್ವನಿ ಬಂದತ್ತ ತಿರುಗಿದೆ.. ದೈಹಿಕ ಶಿಕ್ಷಣ ಅಧ್ಯಾಪಕರು ನಿಂತಿದ್ದರು ಹಸ್ತ ಲಾಘವ ನೀಡಿದರು.. ಟಿವಿಯಲ್ಲಿ ನೋಡಿದ್ದು ಗಾರ್ಡ್ ಆಫ್ ಹಾನರ್ ಹೇಗಿರುತ್ತೆ ಅಂತ..:-)

ಬ್ಯಾಂಡ್ ಪಡೆ ಲೀಲಾಜಾಲವಾಗಿ ಲಯಬದ್ಧವಾಗಿ ನುಡಿಸಿದರು.. ಸಲ್ಯೂಟ್ ಹೊಡೆದರು.. ಒಮ್ಮೆ ಮೈ ಜುಮ್ ಎಂದಿತು.. ಶಾಲಾದಿನಗಳಲ್ಲಿ ನೋಡಿದ್ದು.. !.. ಖುಷಿಯಾಯಿತು.. ಗೌರವ ರಕ್ಷೆ ಸ್ವೀಕರಿಸಿ.. ಮುಂದೆ ನೆಡೆದೆ.. ಇನ್ನೊಂದು ಗುಂಪು ವಿದ್ಯಾರ್ಥಿಗಳು ನನ್ನ ಮಧ್ಯೆ ನಿಲ್ಲಿಸಿ ಲಯಬದ್ಧವಾಗಿ ಹೆಜ್ಜೆ ಹಾಕುತ್ತ .. ನನ್ನ ಸುತ್ತಮುತ್ತಲು ರಕ್ಷಾಕವಚ ರಕ್ಷೆ ನೀಡಿದರು.. ಅಯ್ಯೋ ಮನಸ್ಸು ಹಾರುತ್ತಿತ್ತು.. ಎದೆ ಢವ ಢವ ಎನ್ನುತ್ತಿತ್ತು.. ಆದರೆ ಖುಷಿಯಾಗುತ್ತಿತ್ತು.. ಮನಸ್ಸಲ್ಲಿ ನನ್ನ ಶಾಲಾದಿನಗಳ ಗುರುಗಳಿಗೆ ನಮಿಸುತ್ತಾ.. ಗುರುಗಳೇ ಈ ಗೌರವ ನಿಮ್ಮ ಚರಣಕಮಲಗಳಿಗೆ ಅರ್ಪಿತಾ ಎಂದು ಹೇಳುತ್ತಾ ಶಾಲೆಯ ಆವರಣದೊಳಗೆ ಬಂದೆ..

"ಗುಡ್ ಆಫ್ಟರ್ ನೂನ್ ಸರ್.. ವೆಲ್ಕಮ್ ಟು ಅವರ್ ಸ್ಕೂಲ್.. ಕ್ಯಾನ್ ಐ ಟ್ಯಾಗ್ ದಿ ಬ್ಯಾಡ್ಜ್"
"ಥ್ಯಾಂಕ್ ಯು.. " ಅಂತ ಹೇಳಿ ಬ್ಯಾಡ್ಜ್ ಲಗತ್ತಿಸಿಕೊಂಡು ಹೊರಟೆ..

ಒಂದು ಸಂದರ್ಶಕರ ಕೋಣೆಗೆ ಕರೆದೊಯ್ದ ಕೂರಿಸಿದರು.. ಕುಡಿಯಲು ನೀರು ಮತ್ತು ನನ್ನ ಇಷ್ಟವಾದ ಕಾಫಿ ಬಂತು..
ಅಷ್ಟರಲ್ಲಿ ಇನ್ನಿಬ್ಬರು ಅತಿಥಿಗಳು ಬಂದರು.. ಶ್ರೀ ಅರುಣ್ ಮತ್ತು ಡಾ. ವೀಣಾ ಬಂದರು ಮತ್ತು ಅವರ ಇನ್ನೊಬ್ಬ ಗೆಳತೀ ಬಂದರು .. ಪರಿಚಯ ಮಾಡಿಕೊಂಡು ಮಾತಾಡುತ್ತಿದ್ದೆವು. ಒಬ್ಬರು ಹಿರಿಯರು ಶ್ರೀ ಪ್ರಕಾಶ್ ಅಂಬೆರ್ಕರ್ ಮತ್ತು ಶ್ರೀ ಗಂಗಾಧರ್ ಕಂಬಿಮಠ್ ಬಂದರು.. ಅವರ ಹಿಂದೆಯೇ ಕಮಾಂಡರ್ ಸಿಂಗ್ ಬಂದರು.. ಒಟ್ಟಿನಲ್ಲಿ ನಾನು ಸೇರಿ ಏಳು ಮಂದಿ ಅತಿಥಿಗಳಾಗಿ ಶಾಲೆಗೆ ಬಂದಿದ್ದೆವು.

ಅವರವರ ಕಾರ್ಯಕ್ಷೇತ್ರದಲ್ಲಿ ನುರಿತ ಪರಿಣಿತರ ಜೊತೆ ನಾ ಇದ್ದೆ ಅನ್ನೋದು ಹೆಮ್ಮೆ ಎನ್ನಿಸಿತು.. ಒಬ್ಬರೊಬ್ಬರ ಪರಿಚಯ ಮಾಡಿಕೊಂಡು ಶಾಲೆಯ ಸಭಾಂಗಣಕ್ಕೆ ಬಂದೆವು.. ವಿದ್ಯಾರ್ಥಿಗಳು ಪ್ರತಿಯೊಬ್ಬ ಅತಿಥಿಗೂ ಗೌರವ ರಕ್ಷೆ ನೀಡುತ್ತಲೇ.. ಶಾಲೆಯ ಬಗ್ಗೆ ತುಸು ಪುಟ್ಟ ವಿವರ ನೀಡಿದರು.. ಮಾತಿನಲ್ಲಿ ನಯವಿನಯ ಕಾಣುತ್ತಿತ್ತು.. ಅಧ್ಯಾಪಕ ವೃಂದ, ಕಾರ್ಯಕಾರಿಣಿ ಸಿಬ್ಬಂದಿ ಎಲ್ಲರೂ ಅಚ್ಚುಕಟ್ಟಾಗಿ ತಮ್ಮ ಕಾರ್ಯ ನಿರ್ವಹಿಸುತ್ತಿದ್ದರು...

ಅತಿಥಿಗಳ ಪುಟ್ಟ ಪರಿಚಯ.. ಕರತಾಡನಗಳೊಂದಿಗೆ ಸಭಾಂಗಣಕ್ಕೆ ಬಂದು ಕುಳಿತೆವು. ಎಲ್ಲರಿಗೂ ಒಂದು ಸಂತಸದ ಭಾವ  ತಮ್ಮ ಮೊಗದಲ್ಲಿ ಮನೆಮಾಡಿದ್ದು ಅವರನ್ನು ನೋಡಿದಾಗ ಅರಿವಾಗುತ್ತಿತ್ತು.

ಕಾರ್ಯಕ್ರಮ ಶುರುವಾಯಿತು.. ಮುಂದಿನ ಎರಡು ಘಂಟೆಗಳು ಹೇಗೆ ಕಳೆದೆವು ಅರಿವಾಗಲಿಲ್ಲ.. ಪುಟ್ಟ ಪುಟ್ಟ ಪುಟಾಣಿಗಳಿಂದ ನೆಡೆಯುತ್ತಿದ್ದ ಕಾರ್ಯಕ್ರಮ.. ಭೂತಾಯಿಯನ್ನು ರಕ್ಷಿಕೊಳ್ಳಬೇಕು ಎನ್ನುವ ಸಂದೇಶ  ಹೊತ್ತ ನೃತ್ಯಗಳು, ಹಾಡುಗಳು ಮನಸ್ಸೆಳೆದವು.. ಪ್ರತಿ ಕಾರ್ಯಕ್ರಮ ಮೂರರಿಂದ - ಐದು ನಿಮಿಷಗಳ ಒಳಗೆ ಇದ್ದರೂ.. ಅದಕ್ಕೆ ಸಿದ್ಧತೆ ಹಲವು ವಾರಗಳದ್ದು ಎಂದು ಅರಿವಾಗುತ್ತಿತ್ತು. ಎಲ್ಲಿಯೂ ಲಯತಪ್ಪದ ನಿರೂಪಣೆ, ಕಾರ್ಯಕ್ರಮದಲ್ಲಿ ರಂಗು ರಂಗಿನ ಪೋಷಾಕುಗಳಲ್ಲಿ ಸುಂದರವಾಗಿ ಕಾಣುತ್ತಿದ್ದ ಮಕ್ಕಳು, ಪುಟಿಯುವ ಉತ್ಸಾಹ.. ಮನಸ್ಸನ್ನು ಸೂರೆಗೊಂಡಿತ್ತು.

ಹಲವಾರು ವಿಭಾಗಗಳಲ್ಲಿ ವಿಜಯ ಸಾಧಿಸಿದ್ದ ಮಕ್ಕಳಿಗೆ ಬಹುಮಾನ ವಿತರಣೆ ಅತಿಥಿಗಳ ಉಪಸ್ಥಿತಿಯಲ್ಲಿ ವಿತರಿಸಿದರು. ಸ್ಪೂರ್ತಿಯ ಉತ್ತುಂಗದಲ್ಲಿದ್ದ ಮಕ್ಕಳು, ಖುಶಿಯ ಗೌರೀಶಂಕರದಲ್ಲಿದ್ದ ಆ ಮಕ್ಕಳ ತಂದೆ ತಾಯಿಯರು.. ಇದನ್ನೆಲ್ಲಾ ಕಂಡು ಅನುಭವಿಸುತ್ತಿದ್ದ ಮನಸ್ಸು ಹೇಳುತ್ತಿತ್ತು ಎಲ್ಲರೂ ಇಲ್ಲಿಗೆ ತಾವಾಗೇ ಬಂದಿಲ್ಲ.. ಬದಲಿಗೆ ಆ ದೇವನು ನಮ್ಮ ಶಾಲಾದಿನಗಳಿಗೆ ಮರಳಿ ಕರೆದೊಯ್ಯಲು ಸಿದ್ಧಪಡಿಸಿದ್ದ ಉಪಾಯ ಎಂದು ಅರಿವಾಗುತ್ತಿತ್ತು.
ರಾಷ್ಟ್ರಪಿತನಿಗೆ ಗೌರವ ಶ್ರದ್ಧಾಂಜಲಿ, ಶಾಲೆಯ ಗೀತೆ.. ಮತ್ತು ನಮ್ಮ ರಾಷ್ಟ್ರಗೀತೆ.. ಇದರಿಂದ ಈ ಸುಂದರ ಕಾರ್ಯಕ್ರಮಕ್ಕೆ ತೆರೆ ಎಳೆದರು.. ಭಾರತದ ಹಲವಾರು ಭಾಷೆಗಳಲ್ಲಿ ಸ್ವಾಗತ ಕೋರಿದ್ದು ಮತ್ತು ಧನ್ಯವಾದಗಳನ್ನು ಹೇಳಿದ್ದು ವಿಶೇಷ ಎನಿಸಿತ್ತು.

ಅತಿಥಿಗಳಿಗೆ ಲಘು ಉಪಹಾರ.. ನಂತರ..  ಬಂದ ಅತಿಥಿಗಳ ಒಟ್ಟಿಗೆ ಒಂದು ಫೋಟೋ ತೆಗೆಸಿಕೊಳ್ಳಬೇಕು ಎಂಬ ನನ್ನ ಆಸೆಗೆ ಪ್ರಕಾಶ್ ಸರ್ ಅವರು ನೆರವಾದರು. ನಮ್ಮ ಅನಿಸಿಕೆಯನ್ನು ರಿಜಿಸ್ಟರ್ ನಲ್ಲಿ ದಾಖಲಿಸಲು ಅವಕಾಶ ಕೊಟ್ಟರು.. ನಂತರ ಅತಿಥಿಗಳಿಗೆ ಕೊಟ್ಟ ನೆನಪಿನ ಕಾಣಿಕೆಯನ್ನು ಸ್ವೀಕರಿಸಲು ಸ್ವಾಗತಕಾರಿಣಿಯ ಹತ್ತಿರ ಬಂದಾಗ.. ಇನ್ನೊಂದು ವಿಶೇಷ ಕಾಯುತ್ತಿತ್ತು..

ಶಾಲಾ ಕಾರ್ಯಕಾರಿಣಿ ತಂಡ ಬಂದ ಅತಿಥಿಗಳಿಗೆ ಕೆಲವು ಪ್ರಶ್ನೆಗಳನ್ನು ಕೇಳಿದರು.. ಅದನ್ನು ಚಿತ್ರೀಕರಿಸಿಕೊಂಡರು ಕೂಡ..
ಸಂತೃಪ್ತಿಯಿಂದ ಮೂರು ಘಂಟೆಗಳನ್ನು ಕಳೆದ ಸಾರ್ಥಕತೆ ನಮ್ಮದಾದರೆ.. ನಮ್ಮನ್ನು ಆಹ್ವಾನಿಸಿ ತಮ್ಮ ಶಾಲಾ ಕಾರ್ಯಕ್ರಮಕ್ಕೆ ಒಂದು ರಂಗು ತಂದಿದ್ದೇವೆ ಎನ್ನುವ ಖುಷಿ ಶಾಲೆಯವರಿಗೆ.. ಹೂವಿಂದ ನಾರು ಸ್ವರ್ಗಕ್ಕೆ ಸೇರಿತೋ ಅಥವಾ ನಾರಿನಿಂದ ಹೂವಿಗೆ ಸಾರ್ಥಕ ಭಾವ ಸಿಕ್ಕಿತೋ.. ಆದರೆ ಎಲ್ಲರಿಗೂ ಖುಷಿ ತಂದದ್ದು ಈ ಸಮಾರಂಭದ ವಿಶೇಷವಾಗಿತ್ತು ಎಂದರೆ.. ಉತ್ಪ್ರೇಕ್ಷೆಯಲ್ಲ.. !!!!

ಹೊರಗೆ ಬಂದೆ.. ಕಾರು ಹತ್ತಿದೆ.. ದಾರಿಯಲ್ಲಿ ಬರುವಾಗ ಬೆಳಿಗ್ಗೆ ಗೋಡೆ ಗಡಿಯಾರ ಏತಕ್ಕೆ ಹಿಂದಕ್ಕೆ ಓಡುತ್ತಿತ್ತು ಎಂದು ಫಳ್ ಅಂತ ಹೊಳೆಯಿತು.. ಸರಿ ಕಾರನ್ನು ಸ್ವಲ್ಪ ಹೊತ್ತು ಬದಿಗೆ ನಿಲ್ಲಿಸಿದೆ.. ಹಾಗೆ ಆರಾಮಾಗಿ ಕೂತೆ.. ಮನಸ್ಸು ಹಕ್ಕಿಯ ಹಾಗೆ ಆಗಿತ್ತು..  ಬೆಳಿಗ್ಗೆಯಿಂದ ಇದ್ದ ಗೊಂದಲ ಪರಿಹಾರವಾಗಿತ್ತು.. !

ಶಿಸ್ತು ಬದ್ಧ ಬದುಕನ್ನು ರೂಪಿಸುವ ಈ ಶಾಲೆಗಳು ದೇಶದ ಅಭಿವೃದ್ಧಿ ಪಥವನ್ನು ನಿರ್ಧರಿಸುತ್ತದೆ
ಮಕ್ಕಳ ಸ್ಫೂರ್ತಿ, ಚಿಮ್ಮುವ ಉತ್ಸಾಹ.. ಅದರ ಹಿಂದೆ ಇದ್ದ ಅಧ್ಯಾಪಕರ ಪರಿಶ್ರಮ ಎದ್ದು ಕಾಣುತ್ತಿತ್ತು
ಎಲ್ಲಿಯೂ ಕಾರ್ಯಕ್ರಮ ಬೋರ್ ಅನ್ನಿಸಲಿಲ್ಲ
ಒಂದಾದ ಮೇಲೆ ಒಂದು ಕಾರ್ಯಕ್ರಮ ಬರುತ್ತಲೇ ಇತ್ತು..
ಸ್ವಯಂ ಸೇವಕರಾಗಿ ಪರಿಶ್ರಮಿಸುತ್ತಿದ್ದ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಸಹಕಾರ, ಮಾರ್ಗದರ್ಶನ, ಕಿರಿಯ ವಿದ್ಯಾರ್ಥಿಗಳು ಕೂಡ ಸಭಾಕಂಪನವಿಲ್ಲದೆ ಕಾರ್ಯಕ್ರಮವನ್ನು ನಿಭಾಯಿಸುತ್ತಿದ್ದ ರೀತಿ ವಾಹ್ ಎನ್ನಿಸಿತು..
ಕಡೆಯಲ್ಲಿ ರಾಷ್ಟ್ರಗೀತೆಯನ್ನು ಹಾಡುತ್ತಿದ್ದಾಗ ಕಂಡ ಶಿಸ್ತು ಇಷ್ಟವಾಯಿತು.. ಎಲ್ಲಾ ಮಕ್ಕಳು, ಅಧ್ಯಾಪಕರು, ಬಂದಿದ್ದ ಪೋಷಕರು ಎಲ್ಲರೂ ಒಕ್ಕೊರಲಿನಿಂದ ದನಿಗೂಡಿಸಿದ್ದು ರೋಮಾಂಚನದ ಅನುಭವ.. !

ಶಾಲಾ ದಿನಗಳು ಮಣ್ಣಿನ ಮುದ್ದೆಯಾಗಿದ್ದ ಮಕ್ಕಳಿಗೆ ಸರಿಯಾದ ರೂಪ, ಆಕಾರ ನೀಡುವ ಕುಂಬಾರನ ಚಕ್ರ ಎನ್ನುವುದನ್ನು ತೋರಿಸುತ್ತಿದ್ದ ಶಾಲೆಯಲ್ಲಿ.. ನಾವು ಕೂಡ ಪುಟ್ಟ ಪುಟಾಣಿಗಳಾಗಿದ್ದು ವಿಶೇಷ. ನಮಗೆ ಆ ಕ್ಷಣಕ್ಕೆ ನಮ್ಮ ಶಾಲಾದಿನಗಳಿಗೆ ಮರಳಿ ಹೋದಂತ ಅನುಭವ.. ಪಥ ಸಂಚಲನ, ಶಾಲಾ ಗೀತೆ, ನೃತ್ಯಗಳು, ರಾಷ್ಟ್ರಗೀತೆ, ಬಹುಮಾನ ವಿತರಣೆ ಮಾಡುವಾಗ ತಮ್ಮ ಸಹಪಾಠಿಗಳಿಗೆ ಬಹುಮಾನ ಸಿಕ್ಕಿದ್ದಾಗ ಪಡುವ ಸಂತಸ.. ಎಲ್ಲವೂ ಹಾಗೆ ಕಣ್ಣು ಮುಂದೆ ಬಂದಿತು..

ಇಂತಹ ಅದ್ಭುತ ರೀ-ವೈಂಡಿಂಗ್ ಕ್ಷಣಗಳಿಗೆ ನಮ್ಮನ್ನು ಕರೆದೊಯ್ಯುವಂತಹ ಅನುಭವಕ್ಕೆ ಸಾಕ್ಷಿಯಾದ ಶ್ರೀ ಪ್ರಕಾಶ್ ಜಿಂಗಾಡೆ ಅವರಿಗೂ ಮತ್ತು ರಿಯಾನ್ ಇಂಟರ್ನ್ಯಾಷನಲ್ ಶಾಲೆಯ ಆಡಳಿತ ಮಂಡಳಿ ಅವರಿಗೂ ನಮ್ಮ ಧನ್ಯವಾದಗಳು!!!

ಅಬ್ಬಾ.. ಬೆನ್ನ ಮೇಲೆ ಕೂತಿದ್ದ ಭೂತ ಹಾರಿ ಹೋದಂತ ಅನುಭವ..ಬೆಳಿಗ್ಗೆಯಿಂದಲೂ ಬೆನ್ನ ಮೇಲೆ  ಸವಾರಿ ಮಾಡುತ್ತಿದ್ದ ಪ್ರಶ್ನೆ ಎಂಬ ಭೂತ "ಗಡಿಯಾರ ಏತಕ್ಕೆ ಹಿಂದಕ್ಕೆ ಓಡುತ್ತಿತ್ತು" ಬಂದೂಕಿನಿಂದ ಹೊರಟ ಗುಂಡಿನಂತೆ ನೇರ ಉತ್ತರಸಿಕ್ಕಿದ್ದೆ ತಡ.. ನಾ ಹೋಗ್ತೀನಪ್ಪ ಅಂತ ಹಾರಿ ಹೋಯಿತು.. ಮನಸ್ಸು ಮಕ್ಕಳ ಹೆಜ್ಜೆನಾದಕ್ಕೆ ಕುಣಿಯತೊಡಗಿತ್ತು.. ಮತ್ತು ಈ ಬರಹ ಬರೆಸಿತು..

ಈ ಬರಹ ರಿಯಾನ್ ಶಾಲೆಯ ಎಲ್ಲಾ ಮಕ್ಕಳು ಮತ್ತು ಅಧ್ಯಾಪಕರಿಗೆ ಅರ್ಪಿತವಾಯಿತು!!!