Sri-Parpancha
Come and fall in the creative world of words. This blog will be all about dear ones, inspirational engines, who are/were engineering the track of my life.
Sunday, February 7, 2021
Some Stories Are Real!
Tuesday, January 26, 2021
ಪಂಚಮುಖಿಯ ಸಗ್ಗದಲ್ಲಿ ಗಣರಾಜ್ಯ ... !
Thursday, January 21, 2021
ಗೆಳತೀ ಜನುಮದಿನದ ಶುಭಾಶಯಗಳು ನಿನಗೆ
ಅಪ್ಪ...
ಹಾ...
ಅಪ್ಪಅಅಅಅ
ಹಾ ಪಾಪಾ
ನನ್ನದೊಂದು ಪ್ರಶ್ನೆ..
ಒಂದೇನು ಹತ್ತು ಕೇಳು ಸಾವಿರ ಕೇಳು ಪಾಪಾ
ಸರಿ.. ಮೊದಲನೆಯದು
೧) ನೀವು ಎಮೋಷನಲ್ ಮನುಷ್ಯ ನಾನು ಪಕ್ಕ ಪ್ರಾಕ್ಟಿಕಲ್ ಹುಡುಗಿ.. ಅದು ಹೇಗೆ ಇಬ್ಬರದೂ ಒಂದೇ ರೀತಿಯ ಮನಸ್ಸು?
೨) ಮುಂಚೆ ಯಾರದಾದರೂ ಜನುಮದಿನ ಅಂದರೆ ಸರಿಯಾಗಿ ಮಧ್ಯರಾತ್ರಿ ಒಂದು ಬ್ಲಾಗ್ ಬರೆದು ಹಾಕ್ತಿದ್ರಿ... ಆ ಅಭ್ಯಾಸ ಯಾಕೆ ಬಿಟ್ರಿ.. ಜನ ಓದ್ತಾರೋ ಇಲ್ಲವೋ.. ನೀವು ಬದಲಾಗಬೇಡಿ ಅಪ್ಪ... !
೩) ಜೀವನದಲ್ಲಿ ಕೊಟ್ಟ ತಿರುವನ್ನು ಪಾಠ ಅಂತ ತಿಳಿದು ಮುಂದೆ ಹೆಜ್ಜೆ ಇಟ್ಟಿರಿ.. ನನಗೂ ಆ ಪಾಠ ಹೇಳದೆ ಕಲಿಸಿ ಕೊಟ್ರಿ.. ನನಗಾಗಿ ಏನಾದರೂ ಒಂದು ಸಂದೇಶ ಕೊಡಿ ಅಪ್ಪ.. ನನಗೆ ನೀವು ಗುರು!
ಇಷ್ಟೇ ಅಪ್ಪ. ಈ ಮೂರು ಪ್ರಶ್ನೆಗೆ ಉತ್ತರ ಕೊಡಿ..
ಪಾಪಾ ಮೊದಲಿಗೆ ತಾರುಣ್ಯದ ಹಂತಕ್ಕೆ ಕಾಲಿಡುತ್ತಿರುವ ನಿನಗೆ ಜನುಮದಿನದ ಶುಭಾಶಯಗಳು... ಟೀನೇಜ್ ಅನ್ನುವ ಈ ಹಂತವನ್ನು ಇನ್ನೊಂದು ವರ್ಷ ಅಷ್ಟೇ ಆಮೇಲೆ ಜೀವನದ ಹೈ ಸ್ಪೀಡಿಗೆ ಬಂದು ಬಿಡ್ತೀಯ.. ಅದಕ್ಕೆ ನಿನಗೆ ಶುಭಾಶಯಗಳ ಜೊತೆಯಲ್ಲಿ ಒಂದು ಮಾತು ಕೂಡ.. ನೀನು ನನಗೆ ಮಗಳಿಗಿಂತ ಸ್ನೇಹಿತೆಯಾಗಿಯೇ ಹೆಚ್ಚಾಗಿ ನೋಡಿದ್ದು.. ಹಾಗಾಗಿ ಆ ಸಲುಗೆಯಿಂದ ಹೇಳುತ್ತೇನೆ..
ಜೀವನದಲ್ಲಿ ಎಮೋಷನಲ್ ಆಗಿ ಇರಬೇಕು ಪಾಪಾ.. ಅದು ಗಿಡಕ್ಕೆ ಹಾಕುವ ನೀರು ಗೊಬ್ಬರ ಇದ್ದಂತೆ.. ಎಮೋಷನಲ್ ವ್ಯಕ್ತಿಗಳು ಘಾಸಿಗೊಳಗಾಗಬಹುದು ಆದರೆ ಅದನ್ನು ತಡೆದು ಹಿಮ್ಮೆಟ್ಟಿಸುವ ಸಾಮರ್ಥ್ಯ ಇರುತ್ತದೆ.. ಪ್ರಾಕ್ಟಿಕಲ್ ಆಗಿ ಈ ವ್ಯಾಪಾರಿ ಪ್ರಪಂಚದಲ್ಲಿ ಇರಬೇಕು ನಿಜ.. ಆದರೆ ಎಲ್ಲವನ್ನು ತಕ್ಕಡಿಯಲ್ಲಿ ತೂಗು ಹಾಕುವೆ ಎಂದು ಹೆಜ್ಜೆ ಹಾಕಬಾರದು..
ಹಲವಾರು ಬಾರಿ.. ನಾ ಕಮಿಟ್ ಆಗಿಲ್ಲ.. ಕಮಿಟ್ ಆಗೋಲ್ಲ.. ನನಗೆ ಇವರು ಬೇಡ ಅವರು ಬೇಡ ಅನ್ನೋಕ್ಕಿಂತ.. ಎಲ್ಲರೂ ಬೇಕು ಎಲ್ಲರೊಳಗೆ ನಾನು ಅಂತ ಹೆಜ್ಜೆ ಹಾಕಬೇಕು. ಹೌದು ಕೆಲವೊಮ್ಮೆ ಕೆಲವು ವ್ಯಕ್ತಿಗಳು ಬೇಡ ಅನ್ನಿಸುತ್ತೆ.. ಆದರೆ ಅವರನ್ನು ದೂರ ಇಡುವ ಬದಲು.. ಮನದೊಳಗೆ ಜಾಗ ಕೊಟ್ಟು ಆ ವ್ಯಕ್ತಿಗೆ ಬೆಲೆ ಕೊಡು.. ಆಗ ಚಿಪ್ಪಿನೊಳಗೆ ಮುತ್ತು ಸೇರಿ ಭದ್ರವಾದಂತೆ ಮನಸ್ಸು ಭದ್ರವಾಗುತ್ತದೆ..
ಯೌವ್ವನಕ್ಕೆ ಕಾಲಿಡುತ್ತಿರುವ ನಿನಗೆ ಇದೆ ನಾ ಗುರುವಾಗಿ ಹೇಳುವ ಮಾತು.. !
ಇನ್ನೂ ಎರಡನೇ ಪ್ರಶ್ನೆ.. ಇದೆ ಪ್ರಶ್ನೆಯನ್ನು ನಾ ನಿನಗೆ ಕೇಳುತ್ತೇನೆ.. ಈ ದಿಢೀರ್ ಯಶಸ್ಸು, ದಿಢೀರ್ ಗುರುತಿಸುವಿಕೆಯಿಂದ ಖುಷಿ ಸಿಕ್ಕರೂ ಅದು ನೀರಿನ ಗುಳ್ಳೆಯಂತೆ. ವಾಟ್ಸಾಪ್, ಇನ್ಸ್ಟಾಗ್ರಾಮ್, ಆ ಗ್ರಾಂ, ಈ ಗ್ರಾಂ ಒಳ್ಳೆಯದೇ. ಆದರೆ ಮನದ ಯೋಚನೆಗಳಿಗೆ ರೆಕ್ಕೆ ಕಟ್ಟಿ ಹಾರಿ ಬಿಡುವ ಬ್ಲಾಗ್ ಸದಾ ದೇವಾಲಯದಲ್ಲಿ ಬೆಳಗುವ ನಂದಾ ದೀಪದಂತೆ.. ನಿನ್ನ ಬ್ಲಾಗ್ ಬರಹಗಳನ್ನು ಮುಂದುವರೆಸು..
ಹಾ ಹೌದು.. ಕೆಲ ಕಾಲ ಮಧ್ಯರಾತ್ರಿ ಪೋಸ್ಟ್ ಮಾಡುತ್ತಿದ್ದ ಆ ಬ್ಲಾಗ್ ಬರಹಗಳನ್ನು ನಿಲ್ಲಿಸಿದ್ದೆ.. ನಿನ್ನ ಜನುಮದಿನದಿಂದಲೇ ಶುರು ಮಾಡುತ್ತೇನೆ.. ಮತ್ತೆ ಶುರುವಾಗುತ್ತೆ ನನ್ನ ಮಿಡ್ ನೈಟ್ ಜನುಮದಿನದ ಬ್ಲಾಗ್ ಬರಹಗಳು.... !
ಮೂರನೆಯ ಪ್ರಶ್ನೆಗೆ ಉತ್ತರ ನಿನ್ನ ಪ್ರಶ್ನೆಯಲ್ಲಿಯೇ ಇದೆ.. ಜೀವನದ ತಿರುವುಗಳು ಭಗವಂತ ಕೊಟ್ಟ ಪಾಠದ ಅಧ್ಯಾಯಗಳು... ಜೀವನವನ್ನು ನಿಂತ ನೀರಾಗಿಸದೆ... ಹೆಜ್ಜೆ ಹಾಕುತ್ತಾ.. ಕಲ್ಲು ಬಂಡೆಗಳನ್ನು ಸೀಳಿಕೊಂಡು, ಜಲಧಾರೆಯಾಗಿ ಧುಮುಕಿ ಯಶಸ್ಸು ಎಂಬ ಸಾಗರದತ್ತ ಹರಿಯುತ್ತಾ ಸಾರ್ಥಕತೆಯ "ಸೀಮಾ" ರೇಖೆಯನ್ನು ದಾಟಿ "ಸವಿತಾ"ರ್ಥಕತೆಯನ್ನು ಪಡೆಯಬೇಕು.. !
ಅಪ್ಪ ಸೂಪರ್ ಅಪ್ಪ... ಕಡೆಯ ಸಾಲು ಸೂಪರ್.. ಹಾಗೆ ನಿಮ್ಮ ಮೂರು ಪ್ರಶ್ನೆಗಳ ಉತ್ತರವೂ ಸೂಪರ್.. ಖಂಡಿತ ನಿಮ್ಮ ಜೊತೆಯಲ್ಲಿ ನಿಮ್ಮ ಮನದ ಜೊತೆಯಲ್ಲಿಯೇ ಹೆಜ್ಜೆ ಹಾಕುವೆ... ಬ್ಲಾಗ್ ಶುರು ಮಾಡುವೆ.. ಮನದ ಮಾತುಗಳನ್ನು ಬರಹದಲ್ಲಿ ಕಾಣಿಸುವ ಪ್ರಯತ್ನ ಮಾಡುವೆ.. ಹಾಗೆ ನಿಮ್ಮ ನೂರು ಮೆಟ್ಟಿಲುಗಳನ್ನು ಇಡುವ ಬ್ಲಾಗ್ ತರಹ ನನ್ನ ನೂರು ಆಶಯಗಳನ್ನು ಸಾಧನೆಗಳ ಕಡೆ ಹೆಜ್ಜೆ ಇಡುವ ಪಟ್ಟಿಯನ್ನು ಬರೆಯುವೆ.. ಇದು ನಾ ನಿಮಗೆ ಕೊಡುತ್ತಿರುವ ಭರವಸೆ.. !
ಗುಡ್ ಪಾಪಾ... ಜನುಮದಿನ ಸುಂದರವಾಗಿಇರಲಿ .. ಸುಂದರವಾಗಿಯೇ ಸದಾ ನಳ ನಳಿಸಲಿ.. !
Saturday, December 26, 2020
ಬ್ಲಾಗ್ ಲೋಕವೇ ಕಲ್ಲು ಸಕ್ಕರೆ ಕಾಣಿರೋ ... !
ಕಲ್ಲು ಸಕ್ಕರೆ ಕೊಳ್ಳಿರೋ ನೀವೆಲ್ಲರೂ
ಬ್ಲಾಗ್ ಲೋಕವೇ ಕಲ್ಲು ಸಕ್ಕರೆ ಕಾಣಿರೋ
ಒಮ್ಮೆ ನನಗೆ ನಾನೇ ಚುಗುಟಿಕೊಂಡೇ.. ಅರೆ ಇದು ಕನಸೋ.. ನನಸೋ ಅರಿವಾಗಲಿಲ್ಲ.. ಮೆಲ್ಲಗೆ ನನ್ನ ಕನಸನ್ನು ಜೂಮ್ ಮಾಡಿದೆ.. ಆಗ ಗೊತ್ತಾಯಿತು.. ಅದು ಅಜಾದ್ ಸರ್ ಅವರು ಅಕ್ಷರ ಮಾರುಕಟ್ಟೆಯಲ್ಲಿ ಹೇಳುತ್ತಿದ್ದ ಹಾಡು..
ನಿಜ.. ಟೆಸ್ಟ್ ಕ್ರಿಕೆಟ್ ಎಂದೂ ಸೊರಗೋದಿಲ್ಲ.. ತಿಳಿಯಾದ ಊಟದ ಮುಂದೆ.. ಪಾನಿ ಪುರಿ ಎಂದಿಗೂ ಸದಾ ನಿಲ್ಲೋಲ್ಲ.. ಈ ತಂತ್ರಜ್ಞಾನದ ಮಾಯಾಜಾಲದ ಲೋಕದಲ್ಲಿ ದಿಢೀರ್ ಯಶಸ್ಸು.. ದಿಢೀರ್ ಹೆಸರುಗಳು ಏನೇ ಬಂದರೂ ಬ್ಲಾಗ್ ಎಂಬ ಮಾಯಾ ಅಕ್ಕರೆಯ ಅಕ್ಕರದ ಕಾನನದಲ್ಲಿ ಮತ್ತೆ ಗಜರಾಜ ಗೀಳಿಟ್ಟು ಎಲ್ಲರನ್ನೂ ಕರೆಯುವಂತೆ.. ಬ್ಲಾಗ್ ಲೋಕದ ಧೃವತಾರೆಗಳನ್ನು ಮತ್ತೆ ಸೇರಿಸುವ ಸಾಹಸ ಮಾಡಿದ್ದಾರೆ..
ಶ್ರೀಮನ್ ಶ್ರೀಮನ್ ಯಾರೋ ಕೂಗಿದ ಹಾಗೆ ಕೇಳಿಸಿತು..
ತಿರುಗಿ ನೋಡಿದೆ... ಅಜಾದ್ ಸರ್.. ಕೂಗಿದರು..
ಶ್ರೀಮನ್ ಈ ಬ್ಲಾಗ್ ಲೋಕದ ಮಾಯಾಲೋಕವನ್ನು ಬಡಿದು ಬಡಿದು ತಟ್ಟಿ ಎಬ್ಬಿಸುತಿದ್ದದ್ದು ಬದರಿ .. ಬ್ಲಾಗ್ ಬ್ಯಾಡರಿ ಅನ್ನೋರನ್ನೆಲ್ಲ ಮತ್ತೆ ಮತ್ತೆ ಕರೆ ಕೊಡುತ್ತಿದ್ದದ್ದು ಅವರೇ.. ಈ ಬ್ಲಾಗ್ ಕೂಟಕ್ಕೆ ಅಧಿಕೃತ ಚಾಲನೆಗೆ ಗೇರ್ ಹಾಕಿದ್ದು.. ಹಾಗಾಗಿ ಯಶಸ್ಸಿನ ಕಿರೀಟ ಅವರಿಗೆ ಸಲ್ಲಬೇಕು.. ನಾನೂರು x ನಾನೂರು ರಿಲೇ ಓಟದಲ್ಲಿ ಬ್ಯಾಟನ್ ಕೊಡುವಂತೆ ನನಗೆ ಕೊಟ್ಟರು ನಾನು ಓಡುತ್ತಿದ್ದೇನೆ ಅಷ್ಟೇ ಶ್ರೀಮನ್ ಎಂದರು..
ಆಗಲಿ ಸರ್..ಹಾಗೆ ಹೇಳುತ್ತೇನೆ ಎಂದು ಮತ್ತೆ ಕೂತೆ..
ಟನ್ ಟನ್ ಅಂತ ಸದ್ದಾಯಿತು.. !
*****
ಒಂದು ಆಲದ ಮರ.. ಅದರ ಸುತ್ತಾ ಒಂದು ಕಟ್ಟೆ .. ಅಲ್ಲಿ ಗುರುಗಳಾದ ಸುನಾಥ್ ಕಾಕಾ ಕೂತಿದ್ದರು..ಬ್ಲಾಗ್ ಲೋಕದ ಬರಹಗಾರರು ಎಲ್ಲರೂ ಕೂತಿದ್ದರು...
ನೋಡ್ರಪ್ಪಾ ಬ್ಲಾಗ್ ಲೋಕ ಅನ್ನೋದು ಒಂದು ತಪಸ್ಸಿದ್ದಂತೆ... ಅಕ್ಷರಗಳೇ ಅಲ್ಲಿ ಧ್ಯಾನಕ್ಕೆ ಬೇಕಾಗುವ ಮಂತ್ರಗಳು. .. ಶಾರದಾ ದೇವಿಯೇ ಈ ಬರಹಗಾರರನ್ನು ಪೊರೆಯುವ ತಾಯಿ. ಬೇಂದ್ರೆ ಶರೀಫ ಇವರ ಬರಹಗಳನ್ನು ಓದುತ್ತಾ ಬೆಳೆದ ನನಗೆ.. ನೀವುಗಳು ಬರೆಯುವ ಕಥಾನಕಗಳು ಅಚ್ಚರಿ ಮೂಡಿಸುತ್ತವೆ.. ಆಗಲಿ ನನಗೆ ತಿಳಿದಷ್ಟು... ಅನುಭವ ಪಾಕದಲ್ಲಿ ಸಿಕ್ಕ ಒಂದೆರಡು ಹನಿಗಳನ್ನು ಹಂಚಿಕೊಳ್ಳುವ ಪ್ರಯತ್ನ ಮಾಡುತ್ತೇನೆ..
ನೋಡ್ರಪ್ಪಾ ಬರಹ ಅನ್ನುವ ಒಂದು ಪ್ರಯತ್ನ ನೀವುಗಳು ಬಾವಿ ತೆಗೆದಂತೆ.. ನೆಲ ಕೊರೆದಷ್ಟು ಶುದ್ಧ ನೀರು ಸಿಗುವಂತೆ... ಬರೆಯುತ್ತಾ ಹೋದಂತೆ ಮನದೊಳಗೆ ಇನ್ನಷ್ಟು ಸುವಿಚಾರಗಳು ತುಂಬಿಕೊಳ್ಳುತ್ತಾ ಹೋಗುತ್ತದೆ... ಹಾಗಾಗಿ ಬರೆಯೋದನ್ನು ನಿಲ್ಲಿಸಬೇಡಿ.. ಜೊತೆಗೆ ಫೇಸ್ಬುಕ್ ವಾಟ್ಸಾಪ್ ಇನ್ಸ್ಟಾಗ್ರಾಮ್... ಇವೆಲ್ಲಾ ನಿಮ್ಮನ್ನು ಹೊರಜಗತ್ತಿಗೆ ಪರಿಚಯಿಸುತ್ತದೆ..
ಜಿಮ್ನಾಸ್ಟಿಕ್ಸ್ ನಲ್ಲಿ ಒಂದು ಮೆತ್ತನೆಯ ಹಾಸು ಅಥವಾ ಸ್ಪ್ರಿಂಗ್ ಇರುವ ಹಾಸಿನ ಮೇಲೆ ಒಮ್ಮೆ ಚಿಮ್ಮಿ ಎತ್ತರಕ್ಕೆ ಏರುವಂತೆ.. ಈ ಜಾಲತಾಣದಲ್ಲಿ ಗುರುತಿಸುಕೊಂಡು ಆ ಗುರುತಿಸುವಿಕೆಯನ್ನು ಬರಹವನ್ನು ಮೊನಚುಗೊಳಿಸಲು ಉಪಯೋಗಿಸಿಕೊಳ್ಳಿ..
ಇಷ್ಟೇ ನನ್ನ ಪುಟ್ಟ ಪುಟ್ಟ ಮಾತುಗಳು!
****
ಅರೆ ಗುರುಗಳೇ ಎಷ್ಟು ಚುಟುಕಾಗಿ.. ಅಗಸ್ತ್ಯರು ಒಂದು ಬೊಗಸೆಯಲ್ಲಿ ಶರಧಿಯನ್ನೇ ಆಪೋಶನ ಮಾಡಿದಂತೆ.. ಎಷ್ಟು ಸರಳವಾಗಿ ಮನಮುಟ್ಟುವಂತೆ ಹೇಳಿಬಿಟ್ಟಿರಿ.. ಧನ್ಯವಾದ ಗುರುಗಳೇ ಎನ್ನುತ್ತಾ ಸುತ್ತಲೂ ನೋಡಿದೆ..
ಅಲ್ಲಿ ಶಿವ ಪಾರ್ವತಿಯರು ಸುಬ್ರಮಣ್ಯ ಮತ್ತು ಗಣಪನಿಗೆ ಒಂದು ಪರೀಕ್ಷೆ ಇಟ್ಟಿದ್ದರು... ಮೂರು ಲೋಕವನ್ನು ಸುತ್ತಿ ಸರಸ್ವತಿಯ ದರ್ಶನ ಮಾಡಿ ಎಂದರು..
ಸುಬ್ರಮಣ್ಯ ಹಿಂದೆ ಇದೆ ರೀತಿ ಮಾಡಿದಂತೆ ಮಾಡದೆ.. ಸೀದಾ ಅಪ್ಪ ಅಮ್ಮನನ್ನು ಸುತ್ತಿ ಮೂರು ಲೋಕ ಸುತ್ತಿ ಬಂದೆ.. ನೀವೇ ನನಗೆ ಮೂಲೋಕ.. ನೀವೇ ನನಗೆ ಅಕ್ಷರ ಕಳಿಸಿದ ಗುರುಗಳು ಅಂದಾಗ.. ಯಥಾ ಪ್ರಕಾರ ಗಣಪ.. ವಿಶಿಷ್ಟ ರೀತಿಯ ಆಕಾರಕ್ಕೆ ಅಷ್ಟೇ ಅಲ್ಲದೆ ವಿಶಿಷ್ಟ ಚಿಂತನೆಗೂ ಹೆಸರಾದ ಹಾಗೆ.. ತಕ್ಷಣ ಬ್ಲಾಗ್ ಲೋಕದ ವಾಟ್ಸಾಪ್ ಗ್ರೂಪ್ ನೋಡಿ.. ಅಜಾದ್ ಸರ್ ಅವರು ಕೊಟ್ಟ ಜೂಮ್ ಕೊಂಡಿ ಒತ್ತಿದ ತಕ್ಷಣ.. ಪ್ರಪಂಚದ ನಾನಾ ಮೂಲೆಯಿಂದ ಅಕ್ಷರಗಳ ನುಡಿಯರ್ಚನೆ ಮಾಡುತ್ತಿರುವ ಅನೇಕ ಬರಹಗಳ ಸಮೂಹವೇ ಸಿಕ್ಕಿತು.. ಇವರೇ ಅಲ್ಲವೇ ಅಕ್ಷರ ಪುತ್ರರು ಎಂದು ಗಣಪ ಅದನ್ನೇ ಕಂಡು ನಮಿಸಿದಾಗ.. ಸುಬ್ರಮಣ್ಯಾದಿಯಾಗಿ ಶಿವ ಶಕ್ತಿಯರ ಜೊತೆಯಲಿ ಇಡೀ ದೇವ ಪರಪಂಚವೆ ನಮಿಸಿತು.. !
**
ಹೌದು ಇದು ಉತ್ಪ್ರೆಷೆಯಲ್ಲ.. ಇದೊಂದು ಅದ್ಭುತ ಲೋಕ.. ಈ ಬ್ಲಾಗ್ ಲೋಕದ ಕಾನನದಲ್ಲಿ ಅರಳಿದ ಸುಮಗಳು ಒಂದುಗೂಡಿ ಅಕ್ಷರೋದ್ಯಾನದಲ್ಲಿ ಮತ್ತೆ ಅರಳುತ್ತಿರುವ ಸುಂದರ ಸಮಯ.
ಎಲ್ಲರೂ ಕಿವಿಗೊಟ್ಟು ಕೇಳಿದರು..
ಸಂತಸ ಅರಳುವ ಸಮಯ.. ಮರೆಯೋಣ ಚಿಂತೆಯ (ಇದು ಬ್ಲಾಗ್ ಲೋಕದ) ಇದು ರಮ್ಯಾ ಚೈತ್ರ ಕಾಲ ಇದು ಬ್ಲಾಗ್ ಚೈತ್ರ ಕಾಲ
ಬನ್ನಿ ಮತ್ತೆ ಬ್ಲಾಗಿಸೋಣ.. ಬ್ಲಾಗಿಸೋಣ.. !
****
ಈ ಲೋಕಕ್ಕೆ ದಾಂಗುಡಿಯಿಟ್ಟ
ಸುನಾಥ್ ಕಾಕಾ
ಅಜಾದ್ ಸರ್
ಮಾಧವ್
ಶ್ರೀನಿಧಿ
ಅಮಿತ ರವಿಕಿರಣ್
ದಿನಕರ್
ಗುರು ಪ್ರಸಾದ್
ರಂಗಸ್ವಾಮಿ ಜೆ ಬಿ
ಜಯಲಕ್ಷ್ಮಿ ಪಾಟೀಲ್
ಮಹಿಮಾ
ಪ್ರದೀಪ್
ರಮಾನಾಥ್
ರೂಪ ಸತೀಶ್
ಸವಿತಾ
ಸುಗುಣ
ಮಹೇಶ್
ವನಿತಾ
ಈ ಸುಮಗಳ ಜೊತೆಯಲ್ಲಿ ಉದ್ಯಾನವನದಲ್ಲಿ ನಲಿದ ಸುಂದರ ಅನುಭವ ನನ್ನದು..
ಕಿರುಪರಿಚಯ.. ಅವರುಗಳು ರಚಿಸಿದ ಕವನಗಳು, ಅನುಭವಗಳು ಎಲ್ಲವೂ ದೊಡ್ಡ ಬಾಳೆಯೆಲೆಯಲ್ಲಿ ಬಡಿಸಿದ ಮೃಷ್ಟಾನ್ನ ಭೋಜನದಂತೆ ಸೊಗಸಾಗಿತ್ತು.. ಆನ್ಲೈನ್ ಆಗಿದ್ದರಿಂದ ಚಿತ್ರಗಳು ಇರಲಿಲ್ಲ.. ಆದರೆ ಭಾಗವಹಿಸಿದ ಹೆಸರುಗಳು ಮನದಲ್ಲಿಯೇ ಅಚ್ಚಳಿಯದ ಅನುಭವವನ್ನು ಮೂಡಿಸಿದೆ..
ಎಂದರೋ ಮಹಾನುಭಾವುಲು ಅಂದರೀಕಿ ವಂದನಮು... !
Friday, December 11, 2020
ಗುಂಡ ಮಾವ ಎನ್ನುವ ನನ್ನ ಬದುಕಿನ ಅದ್ಭುತ ವ್ಯಕ್ತಿ..!
ಏನೋ ಶ್ರೀಕಾಂತ ಇದು...ಹೀಗಾಗಿ ಬಿಡ್ತು..
ಹೌದು ಕಣಮ್ಮ..ಈ ವರ್ಷದ ಮೇಲೆ ಜುಗುಪ್ಸೆ ಬರೋ ಹಾಗೆ ಆಗೋಯ್ತು...
ನನಗೆ ಗೊತ್ತು ನಿನ್ನ ಮನದಲ್ಲಿ ಓಡುತ್ತಿರುವ ಪದಗಳು..ನಾ ಹೇಳ್ತೀನಿ...ನೀ ಬರೀ..
ಅದ್ನೇ ಅಲ್ವಾ ನಾ ಯಾವಾಗಲೂ ಮಾಡೋದು..ನೀವುಗಳು ಹೇಳೊದನ್ನ ಬರೆಯೋದೆ ಕೆಲಸ ನನ್ನದು..!
****
ಅಮ್ಮ ನಾನು ಸೀಮಾಳನ್ನು ಮದುವೆಯಾಗುವ ನಿರ್ಧಾರ ಮಾಡಿದ್ದೀನಿ..ಶೀತಲ್ ಒಪ್ಪಿದ್ದಾಳೆ..ಮುಂದಿನ ಕಾರ್ಯಕ್ರಮ ನಿನಗೆ ಒಪ್ಪಿಸ್ಸಿದ್ದೀನಿ ಅಂದಾಗ..ನನ್ನ ತಲೆಯಲ್ಲಿ ಮಿಂಚಿನ ಯೋಚನೆಗಳು ಮೂಡಿದವು..
ಧಾರೆ ಎರೆಸಿಕೊಳ್ಳೋಕೆ ನಿನ್ನ ಅಣ್ಣ ಅತ್ತಿಗೆ ಇದ್ದಾರೆ..ಧಾರೆ ಎರೆದು ಕೊಡೋಕೆ ಸೀಮಾಳ ಅಪ್ಪ ಅಮ್ಮ ಈ ಹಾಳಾದ್ದು ಕೊರೊನಾ ಸಲುವಾಗಿ ಬರೋಕೆ ಆಗ್ತಾ ಇಲ್ಲ..ಏನು ಮಾಡೋದು..ಅಂತ ಯೋಚಿಸಿದೆ..
ತಕ್ಷಣ ನೆನಪಿಗೆ ಬಂದದ್ದು ಗುಂಡ..ಅವನನ್ನು ಕೇಳು ಅಂದೆ..ತಕ್ಷಣ ...ಓಕೆ ಓಕೆ..ನೀನೆ ಬರೀ...ನಿನ್ನ ಬರಹ ಓದೋಕೆ ಚೆನ್ನಾ ಅಂತ ಅಮ್ಮ ನಿಲ್ಲಿಸಿದರು..
ಮುಂದೆ ಡ್ರೈವರ್ ಸೀಟಿನಲ್ಲಿ ನಾ ಕುಳಿತೆ..
ಮದುವೆ ಹುಡುಗ ಹುಡುಗಿ..ಸ್ಥಳ..ಪುರೋಹಿತರು..ಊಟ ತಿಂಡಿಯ ವ್ಯವಸ್ಥೆ ಇವೆಲ್ಲವೂ ಸಿದ್ದವಾಗಿತ್ತು..ಮುಖ್ಯ ಧಾರೆ ಎರೆದು ಕೊಡುವ ಎರಡು ಸುಮಧುರ ಮನಸ್ಸುಗಳು ಬೇಕಿತ್ತು..
ಆಗ ಒಂದು ಕರೆ..ಚಟಾಪಟ ಮಾತಾಡುವ ಸುಧಾ ಅತ್ತೆ..ನಾನೂ ನಿನ್ನ ಮಾವ..ಡ್ರೆಸ್ ರೆಡಿ ಮಾಡ್ಕೋತೀವಿ...ನಮ್ಮನ್ನು ಕರೆದುಕೊಂಡು ಬಂದು ಕಳಿಸಿಕೊಡುವ ಜವಾಬ್ದಾರಿ ನಿನ್ನದು ಅಂದರು..
ನನ್ನ ಅಮ್ಮನ ಮೇಲೆ..ನಮ್ಮ ಮನೆಯ ಸದಸ್ಯರ ಮೇಲೆ ಗುಂಡ ಮಾವನಿಗೆ ಇರುವ ಅಭಿಮಾನ ಆ ಮಟ್ಟದ್ದು..
ಎರಡನೇ ಮಾತೇ ಇಲ್ಲ..ತಮಗೆ ಅಷ್ಟು ಹುಷಾರಿಲ್ಲದೇ ಹೋದರು ನನ್ನ ಬದುಕಿನ ತಿರುವಿಗೆ ಸಾಕ್ಷಿಯಾಗಿ ನಿಂತವರು ಗುಂಡ ಮಾವ..
ಸದಾ ಬಿರುಸು ಮಾತಿನಲ್ಲೇ ಬೈದರೂ ಅದರ ಹಿಂದೆ ಅಪಾರ ಪ್ರೀತಿ ಮಮಕಾರವಿತ್ತು..
ನಿಮಗೆ ಮನೆ ಬರೋಕೆ ಕರೆ ಕಳಿಸಬೇಕಾ..ಸುಮ್ಮನೆ ಬಂರ್ರೋ ಅಂತಾ ಸದಾ ಅಭಿಮಾನ ತುಂಬಿದ ಮಾತುಗಳ ಸರದಾರ ಗುಂಡ ಮಾವ..
ಫೇಸ್ಬುಕ್ ನಲ್ಲಿ ಅವರ ಆಹ್ವಾನ ಬಂದಾಗ..ಅವರ ನಿಜ ಹೆಸರೇ ಮರೆತು ಹೋಗಿದ್ದ ನನಗೆ ಅರೇ ಯಾರಿದು ಎಸ್ ಎ ನಾಗೇಶ್ ಅಂತ ಅವರಿಗೆ ಮೆಸೇಜ್ ಮಾಡಿ ಕೇಳಿದೆ..
ನನಗೆ ನೀವು ಹೇಗೆ ಗೊತ್ತು ಅಂದೆ..
ನಿಮ್ಮ ಮನೆಯವರೆಲ್ಲಾ ಗೊತ್ತು ನನಗೆ ಅಂದರು..
ಯಾವಾಗಿಂದ ಅಂದೆ
ನೀನು ಹುಟ್ಟುವುದಕ್ಕಿಂತ ಮೊದಲಿಂದಲೂ ಅಂದ್ರು..
ಆಗ ಪರಸ್ಪರ ಸ್ನೇಹಿತರ ಪಟ್ಟಿ ನೋಡಿದಾಗ ಗೊತ್ತಾಯಿತು..
ಅರೇ ಗುಂಡ ಮಾವ...ಕ್ಷಮಿಸಿ ಅಂತ ಕೆಟ್ಟದಾಗಿ ಹಲ್ಲು ಬಿಟ್ಟೆ..
ನಂತರ ಯಾವುದೋ ಒಂದು ಕಾರ್ಯಕ್ರಮದಲ್ಲಿ ಸಿಕ್ಕಾಗ..ನನ್ನ ನೋಡಿ ಜೋರಾಗಿ ನಕ್ಕರು..ನಾನು ಅವರನ್ನ ತಬ್ಬಿಕೊಂಡು ಹಲ್ಲು ಬಿಟ್ಟಿದ್ದೆ..
ನಮ್ಮ ಮನೆಯ ಯಾವುದೇ ಕಾರ್ಯಕ್ರಮವಾಗಲಿ ಗುಂಡಮಾವ ಸದಾ ಬರುತ್ತಿದ್ದರು..ನಮಗೆ ಮಾರ್ಗದರ್ಶನ ನೀಡುತ್ತಿದ್ದರು.
ನನನ ಬದುಕಿನ ತಿರುವಿಗೆ ಸಾಕ್ಷಿಯಾಗಿ ಜೊತೆಯಾಗಿ ನಿಂತಿದ್ದ ಗುಂಡ ಮಾವನ ಆಶೀರ್ವಾದ ಸದಾ ಹಸಿರಾಗಿರುತ್ತದೆ..!
**""
ಚಂದ ಕಣೋ ಶ್ರೀಕಾಂತ ಹೇಳಬೇಕಾದ್ದು ಸರಿಯಾಗಿದೆ..ಗುಂಡ ಜೀವನದಲ್ಲಿ ಕಷ್ಡ ಪಟ್ಟು ಮೇಲೆ ಬಂದವನು..ಆದರೆ ಗರ್ವ ಎಂದಿಗೂ ಅವನ ಸುತ್ರಾ ಸುಳಿಯಲಿಲ್ಲ..
ವಿಶಾಲು.. ಭಾವ ..ಅಂತ ಸದಾ ಪ್ರೀತಿ ತೋರಿಸುತ್ತಿದ್ದ ಗುಂಡನನ್ನು ನನ್ನ ಕಡೆ ದಿನಗಳಲ್ಲಿ ನೋಡಲಾಗಲಿಲ್ಲ..ಆದರೆ ಈಗ ಇಲ್ಲಿಗೆ ಬರುತ್ತಿರುವುದು ನನಗೆ ತಡೆಯಲಾಗದಷ್ಡು ನೋವು ಕೊಡುತ್ತಿದೆ..
ಇಲ್ಲಿಗೆ ಬರುವ ವಯಸ್ಸಲ್ಲಾ..ತನ್ನ ಮಕ್ಕಳ ಏಳಿಗೆಯನ್ನು ಕಂಡು..ಮೊಮ್ಮಕ್ಕಳ ಜೊತೆಯಲ್ಲಿ ಮಡದಿಯ ಜೊತೆಯಲ್ಲಿ..ಇನ್ಮಷ್ಟು ವರ್ಷ ಇರಬೇಕಾದವನು ಹೀಗೆ ತಟಕ್ ಅಂತ ಹೊರಟಿದ್ದಾನೆ...ಆ ದೇವನ ಇಚ್ಚೆಯೇನೋ ಯಾರು ಬಲ್ಲರು..
****
ಗುಂಡ ಮಾವ..ಎಲ್ಲೇ ಇರಿ ಹೇಗೆ ಇರಿ ..ನಮ್ಮನ್ನೆಲ್ಲಾ ಸದಾ ಹರಸುತ್ತಿರಿ..!
Thursday, December 3, 2020
ಅಮ್ಮ ಎನ್ನುವ ದೈತ್ಯ Server - ಭಾಗ ೫
ಹದಿಮೂರನೇ ದಿನವಾಗಿತ್ತು.. ಮನಸ್ಸು ಕದಡಿದ ಕೆರೆಯ ನೀರಾಗಿತ್ತು. ನಮ್ಮ ಜೊತೆಯಲ್ಲಿಯೇ ಇದ್ದ ನದಿ ಕಡಲು ಸೇರಿ ದಿನಗಳು ಉರುಳಿ ಹೋಗಿದ್ದವು..
ಬೈಕಿನಲ್ಲಿ ಅಮ್ಮನ ಮನೆಗೆ ಬರುತ್ತಿದ್ದೆ.. ಮನೆಯ ಹತ್ತಿರ ಬಂದು ಮಾಮೂಲಿ ಅಭ್ಯಾಸದಂತೆ ತಲೆ ಎತ್ತಿ ನೋಡಿದೆ.. ಬಾಲ್ಕನಿ / ಮೆಟ್ಟಿಲ ಹತ್ತಿರ.. ಇಲ್ಲವೇ ಅಡಿಗೆ ಮನೆಯ ಪೋರ್ಟಿಕೋದಲ್ಲಿ ಕಾಣುತಿದ್ದ ದೃಶ್ಯ ಕಾಣಲಿಲ್ಲ..
ಆದರೆ ಒಮ್ಮೆ ಗಾಬರಿಯಾದೆ.. ಮೈಯೆಲ್ಲಾ ಜುಮ್ ಎಂದಿತು.. ಸಣ್ಣಗೆ ಬೆವರು.. ನೋಡಿದರೆ ಅಮ್ಮ ಉಡುತಿದ್ದ ಸೀರೆಯಲ್ಲಿ ಒಂದು ಆಕೃತಿ ಓಡಾಡುತ್ತಿದ್ದ ದೃಶ್ಯ.. ಅದು ಇನ್ನೂ ಬೆಳಗಿನ ಜಾವ ಅಷ್ಟೊಂದು ಬೆಳಕು ಹರಿದಿರಲಿಲ್ಲ.. ಸಣ್ಣಗೆ ಬೆನ್ನು ಹುರಿಯಲ್ಲಿ ನಡುಕ.. ತೀಕ್ಷ್ಣವಾಗಿ ಗಮನಿಸಿದೆ..
ಅರೆ.. ಅಮ್ಮ ಸಾಮಾನ್ಯವಾಗಿ ಉಡುತಿದ್ದ ಸೀರೆಯಲ್ಲಿ ಅಕ್ಕ ಓಡಾಡುತಿದ್ದಳು.. ಭಗವಂತನ ಲೀಲೆಯೇ ಹಾಗೆ ಅಲ್ಲವೇ.. ಸದಾ ಅಮ್ಮ ಇರೋಕೆ ಆಗೋಲ್ಲ ಅಂತ ಅಕ್ಕನ ರೂಪದಲ್ಲಿ ಅಮ್ಮ ನಿಂತಿರುತ್ತಾಳೆ..
ಇದೆಲ್ಲಾ ನೆಡೆದದ್ದು ಹತ್ತು ಸೆಕೆಂಡುಗಳಲ್ಲಿ ..
ಆಗಸದತ್ತ ನೋಡಿದೆ.. ಅಮ್ಮನ ಫೋಟೋದಲ್ಲಿರುವ ಅದೇ ನಗು ಮೊಗ ಕಾಣಿಸಿತು.. ಬಾಪ್ಪಾ ಅಂತ ಕರೆದ ಅನುಭವ.. ಕಣ್ಣು ತುಂಬಿ ಬಂದಿತ್ತು..
ಹಾಗೆ ಕಣ್ಣೊರೆಸಿಕೊಂಡು.. ಮುಂದಿನ ಕಾರ್ಯಗಳ ಕಡೆಗೆ ಗಮನ ಕೊಟ್ಟೆ..
ಹೌದು ಅಮ್ಮನ ನೆನಪು.. ಅರೆ ನೆನಪೆಲ್ಲ ಅವರ ಛಾಯೆ ಹೋಗೋಲ್ಲ.. ಹೋಗೋಕೆ ಸಾಧ್ಯವೂ ಇಲ್ಲ..
ಅದಕ್ಕೆ ಅಲ್ಲವೇ ಅಣ್ಣಾವ್ರ ಚಿತ್ರದಲ್ಲಿ ಹಾಡಿರುವುದು.. ಸಾವಿರ ನದಿಗಳು ಸೇರಿದರೇನೂ ಸಾಗರಕೆ ಸಮನಾಗುವುದೇನು.. ಶತಕೋಟಿ ದೇವರು ಹರಸಿದರೇನು ಅಮ್ಮನ ಹರಕೆಗೆ ಸರಿಸಾಟಿಯೇನು..
ನಲವತ್ತೈದು ದಿನಗಳು ಕಳೆದೆ ಹೋದವು.. ಅಮ್ಮನ ಪಯಣ ಸ್ವರ್ಗದತ್ತ ಸಾಗುತ್ತಲಿದೆ.. ತನ್ನ ಪೂರ್ವಜರನ್ನು.. ಅಲ್ಲಿರುವ ಅನೇಕ ಬಂಧು ಮಿತ್ರರರನ್ನು.. ತನಗೆ ಕುಂಕುಮ ಭಾಗ್ಯ ಕೊಟ್ಟ ಯಜಮಾನರನ್ನು ಕಾಣಲು ಹೋಗುತ್ತಿದ್ದಾರೆ..
ಶ್ರೀಕಾಂತ ಅಂದು ನನ್ನ ಮನೆಯಿಂದ ಹೊರಟಾಗ ಒಂದು ವಿಶೇಷ ಘಟನೆ ನೆಡೆಯಿತು.. ನಿನಗೆ ಅರ್ಥವಾಗಿದೆ.. ಅದನ್ನು ನೀನು ಬರೆಯುತ್ತೀಯ ಅಂತ ಕಾಯುತ್ತಿದ್ದೇನೆ..
ಅಮ್ಮ ಬರೆಯುವೆ.. ಒಂದು ವಿಶೇಷ ದಿನಕ್ಕೆ ಕಾಯುತಿದ್ದೆ.. ಇಂದಿಗೆ ನಲವತ್ತೈದು ದಿನವಾಯಿತು.. ಹಾಗೆ ಕೆಲಸ ಕಾರ್ಯಗಳ ನಡುವೆ.. ಕೊಂಚ ಬರವಣಿಗೆ ಕೂಡ ಕುಂಟುತ್ತಿತ್ತು.. ಅದಕ್ಕೆ ಇವತ್ತು ಸಮಯ ಮಾಡಿಕೊಂಡು ಬರೆಯುತ್ತಿದ್ದೇನೆ..
ಹಾ ಸರಿ.. ಓದಲು ಕಾಯುತ್ತಿರುವೆ..
*******ಆದಿತ್ಯ ಜನಿಸಿದಾಗ ಮನೆಯಲ್ಲಿ ಸಂಭ್ರಮ.. ಅಪ್ಪ ಅಮ್ಮನಿಗೆ ತಮ್ಮ ಮುಂದಿನ ಪೀಳಿಗೆಯ ಸರದಾರ ಬಂದ ಎಂಬ ಸಂಭ್ರಮ.. ನಮಗೆ ಪುಟ್ಟ ಮಗು.. ಅದರ ತುಂಟಾಟಗಳನ್ನು ನೋಡುವ ತವಕ.. ಅಪ್ಪ ಆದಿತ್ಯನನ್ನು ಎತ್ತಿಕೊಂಡ ಫೋಟೋ ಇನ್ನೂ ಹಸಿರಾಗಿದೆ..
ಸದಾ ತುಂಟತನಕ್ಕೆ ಹೆಸರಾಗಿದ್ದ ಆದಿತ್ಯ.. ಅಜ್ಜಿಯನ್ನು ರೇಗಿಸುತ್ತಲೇ ಇರುತಿದ್ದ.. ಬಾಲ್ಯದಿಂದಲೂ ಅಜ್ಜ ಅಜ್ಜಿಯ ಬಗ್ಗೆ ವಿಶೇಷ ಗೌರವ ಇದ್ದರೂ.. ರೇಗಿಸೋದನ್ನು ಬಿಡುತ್ತಿರಲಿಲ್ಲ.. ಹಲವಾರು ಬರಿ ಅಜ್ಜಿ ಥೂ ಹೋಗಾಚೆ ಅಂತ ಹುಸಿಮುನಿಸಿನಿಂದ ಬಯ್ದಿದ್ದರು ಮತ್ತೆ ಕೆನ್ನೆ ಹಿಂಡುವುದು, ಮೊಸರು ಹಾಕುವುದು, ಅನ್ನ ಹಾಕುವುದು, ನೀರು ಕುಡಿ ಅಜ್ಜಿ ಅಂತ ಕುಡಿಸುವುದು, ಕಾಫಿ ಕುಡಿಯಬೇಡ ಅನ್ನೋದು.. ಬಿಪಿ ಮಾತ್ರೆ ತಗೊಂಡ್ಯಾ.. ಅಂತ ಕಾಳಜಿ ವಹಿಸುವುದು ಮಾಡುತ್ತಲೇ ಇರುತ್ತಿದ್ದ..
ಹಲವಾರು ಬಾರಿ ಆದಿತ್ಯ ಎಷ್ಟು ಕಾಳಜಿ ತೋರಿಸುತ್ತಾನೆ ಅಂತ ನನ್ನ ಬಳಿ ಹೇಳಿದ್ದರು.... ಬಿಂದಾಸ್ ಸ್ವಭಾವದಲ್ಲೂ ಒಂದು ರೀತಿಯ ಪ್ರೀತಿ ಇರುತ್ತಿತ್ತು ಈ ಹುಡುಗನಲ್ಲಿ..
ಪುರೋಹಿತರು ತಮ್ಮ ಕಾರ್ಯದಲ್ಲಿ ಮಗ್ನರಾಗಿದ್ದರು.. ಎಲ್ಲವೂ ಕಡೆ ಹಂತಕ್ಕೆ ಬರುತಿತ್ತು.. ಬಂದವರೆಲ್ಲ ಅಂತಿಮ ನಮನ ಸಲ್ಲಿಸಲು ಸಿದ್ಧವಾಗಿದ್ದರು..ಅಕ್ಕ ಬಿಕ್ಕಿ ಬಿಕ್ಕಿ ಅಳುತ್ತಲೇ ತನ್ನ ಗೌರವ ಸಲ್ಲಿಸಿದರು..
"ಕೃಷ್ಣವೇಣಿ ಇರೋತನಕ ಚೆನ್ನಾಗಿ ನೋಡಿಕೊಂಡಿದ್ದೀಯ..ಕಳಿಸುವಾಗ ಅಳಬಾರದು.. ಎಷ್ಟು ದಿನ ಇದ್ದರೂ ಇರಬೇಕು ಅನ್ನುವಂತಹ ಪದಾರ್ಥ "ಅಮ್ಮ" ಅನ್ನೋದು ಆದರೆ ಏನು ಮಾಡೋದು.. ವಿಧಿ ಬರಹ.. ಧೈರ್ಯ ತಂದುಕೊ ಎನ್ನುತ್ತಾ ಅಮ್ಮನ ಸೋದರತ್ತೆಯ ಮಗ ಸತೀಶ ಅಕ್ಕನನ್ನು ಸಮಾಧಾನ ಪಡಿಸಿದ..
ಇಲ್ಲಿ ಸತೀಶನ ಬಗ್ಗೆ ಒಂದೆರಡು ಮಾತುಗಳು.. ತನ್ನ ಬಂಧು ಮಿತ್ರರ ಮನೆಯಲ್ಲಿ ಶುಭ ಅಶುಭ ಯಾವುದೇ ಕಾರ್ಯವಿದ್ದರೂ ಇವನ ಉಪಸ್ಥಿತಿ ಇದ್ದೆ ಇರುತ್ತದೆ.. ಕೊರೊನ .. ಅದು ಇದು ಎನ್ನುವುದನ್ನು ಲೆಕ್ಕಿಸುವುದೇ ಇಲ್ಲ.. ಮೊದಲು ಅವರ ಸಂತಸ ದುಃಖದ ಕ್ಷಣಗಳಲ್ಲಿ ಜೊತೆಯಾಗಿರಬೇಕು.. ಆಮೇಲೆ ಮುಂದಿನದು.. ಎನ್ನುವ ಮನೋಭಾವ ಅವನದು.. ಜೊತೆಯಲ್ಲಿ ಅವನಿಗೆ ಅಸಾಧ್ಯವಾದ ಬೆನ್ನು ನೋವು ಇದ್ದರೂ ಅದನ್ನು ಲೆಕ್ಕಿಸದೆ.. ಎಲ್ಲರಿಗೂ ಸಹಕಾರ ನೀಡುವುದು.. ನಿಜಕ್ಕೂ ಶ್ಲಾಘನೀಯ..
ಅದೇ ರೀತಿ ಅಮ್ಮನ ಸೋದರಮಾವನ ಮಗ.. ಶಾಮಣ್ಣ.. ನಿಮ್ಮ ಅಮ್ಮ ಅನ್ನಪೂರ್ಣೇಶ್ವರಿ ಕಣೋ ಶ್ರೀಕಾಂತ ಅನ್ನುತ್ತಿದ್ದ ಸದಾ.. ಅವನು ನಮ್ಮ ಮನೆಯ ಎಲ್ಲಾ ಕಾರ್ಯಕ್ರಮಗಳಿಗೂ ತಪ್ಪದೆ ಬರುತ್ತಾನೆ.. ಜೊತೆಯಲ್ಲಿ ಇದ್ದು ಧೈರ್ಯ ಕೊಡುತ್ತಾನೆ.
ಇವರಿಬ್ಬರ ಬದುಕು ಸುಂದರವಾಗಿರಲಿ ಇದು ನನ್ನ ಅಮ್ಮನ ಆಶೀರ್ವಾದ..
ಬಂಧು ಮಿತ್ರರು ಬಂದು ಅಂತಿಮ ನಮನ ಸಲ್ಲಿಸಿ ಆಯ್ತು.. ಅಮ್ಮನನ್ನು ಆಂಬುಲೆನ್ಸ್ ನಲ್ಲಿ ಮಲಗಿಸಿದೆವು.. ಮಡಕೆ ಹಿಡಿದುಕೊಂಡ ಅಣ್ಣ .. ಅವನ ಹಿಂದೆ ಬಂದ ನಾನು. ಅಳುತ್ತಲೇ ಗಾಡಿ ಹತ್ತಿದ ತಮ್ಮ ಮುರುಳಿ.. ನಮ್ಮ ಎದುರಲ್ಲಿ ಸಾಹಸಮಯ ಬದುಕು ನಿಭಾಯಿಸಿ ನಮ್ಮನ್ನೆಲ್ಲ ಒಂದು ದಡಕ್ಕೆ ಸೇರಿಸಿ.. ಕಡೆಗೆ ಸಾಕು ಕಣೋ ಅಂತ ಹೊರಟಿದ್ದ ಅಮ್ಮ..
ಇನ್ನೇನು ಗಾಡಿ ಹೊರಡಬೇಕು... ಆದಿತ್ಯ ಓಡಿ ಬಂದು ಆಂಬುಲೆನ್ಸ್ ಹತ್ತಿದ.. ನಮಗೆ ಬೇಡ ಎನ್ನಲು ಮನಸ್ಸಿಲ್ಲ.. ಆದರೆ ಏನು ಹೇಳೋದು ಅಂತ ಸುಮ್ಮನೆ ಕುಳಿತಿದ್ದೆವು..
ಕಣ್ಣಲ್ಲಿ ನೀರು ತುಂಬಿಕೊಂಡು.. ಮೆಲ್ಲಗೆ ಅಜ್ಜಿಯ ಕೆನ್ನೆಯನ್ನು ಒಮ್ಮೆ ಹಿಂಡಿ.. ಕೆನ್ನೆಯನ್ನು ಸವರಿ ಇಳಿದು ಹೋದ..
ನಾನು ನಾಲ್ಕೈದು ಲೇಖನಗಳನ್ನು ಬರೆದಿರಬಹುದು.. ನಾವೆಲ್ಲರೂ ಒಂದಷ್ಟು ಕಣ್ಣೀರು ಹಾಕಿ..ಅಗಲಿದ ಆ ಹಿರಿಯ ಜೀವದ ಬಗ್ಗೆ ಒಂದಷ್ಟು ಅಭಿಮಾನದ ಮಾತುಗಳನ್ನು ಆಡಿರಬಹುದು.. ಆದರೆ ಆ ಒಂದು ಸ್ಪರ್ಶದಲ್ಲಿ ಆದಿತ್ಯ ಎಲ್ಲರ ಭಾವನೆಗಳನ್ನು ಹೊತ್ತ ಸರದಾರನಾಗಿ ಬಿಟ್ಟ..
ಥೋ ಸುಮ್ಮನಿರೋ ಆದಿತ್ಯ.. ಯಾಕೆ ಹಾಗೆ ಗೋಳು ಹುಯ್ಕೋತೀಯೋ ಅಂತ ಅಜ್ಜಿ ಕೂಗಿದ ಹಾಗೆ ಅನಿಸಿತು.
***
ವಾಹ್ ಸೊಗಸಾಗಿದೆ ಶ್ರೀಕಾಂತ.. ನೀನು ಇದರ ಬಗ್ಗೆ ಯಾಕೆ ಬರೆದಿಲ್ಲ ಅಂತ ಯೋಚಿಸುತ್ತಿದ್ದೆ.. ಈಗ ಸಮಾಧಾನ ಆಯ್ತು.. ಸರಿ ನೀವುಗಳೆಲ್ಲ ಗುರುಗಳ ಆಜ್ಞಾನುಸಾರ ಕಾರ್ಯಗಳನ್ನು ಮಾಡುತ್ತಿದ್ದೀರಾ.. ನನ್ನ ಆಶೀರ್ವಾದ ಸದಾ ಇರುತ್ತೆ.. ಆದಿತ್ಯನಿಗೆ ಈ ಮೂಲಕ ಜನುಮದಿನಕ್ಕೆ ತಡವಾದ ಶುಭಾಶಯಗಳನ್ನು ತಿಳಿಸು.. ಅವತ್ತೇ ಆಶೀರ್ವಾದ ಮಾಡಬೇಕಿತ್ತು.. ಆದರೆ ನಿನ್ನ ಬರಹ ಬರಲಿ ಅಂತ ಕಾಯ್ತಾ ಇದ್ದೆ ಕಣೋ..!
ಆಗಲಿ ಅಮ್ಮ.. ಅವನಿಗೆ ಖಂಡಿತ ಆಶೀರ್ವದಿಸುತ್ತೇನೆ.. ಮೊದಲನೇ ಮೊಮ್ಮಗ.. ಅಲ್ಲವೇ.. ಪ್ರೀತಿ ತುಸು ಹೆಚ್ಚೇ..
ಮತ್ತೆ ಬರುವೆ.. ಹದಿನಾಲ್ಕು ದಿನಗಳ ಯಾತ್ರೆಯನ್ನೊಮ್ಮೆ ಮೆಲುಕು ಹಾಕೋಣ.. ಏನಂತೀಯಾ.. !!!