Friday, October 2, 2026

ಕಗ್ಗಂಟಿನ ಕರದಂಟು - ಡಿವಿಜಿ ಅಜ್ಜ - ೧೦

ಏನು ಪ್ರಪಂಚವಿದು! ಏನು ಧಾಳಾಧಾಳಿ! |
ಏನದ್ಭುತಾಪಾರಶಕ್ತಿನಿರ್ಘಾತ! ||
ಮಾನವನ ಗುರಿಯೇನು? ಬೆಲೆಯೇನು? ಮುಗಿವೇನು? |
ಏನರ್ಥವಿದಕೆಲ್ಲ? – ಮಂಕುತಿಮ್ಮ || ಕಗ್ಗ 10 ||


ಜಂಗಲ್ ರಾಜ್ಯ ಅನ್ನುವಂತೆ.. ಅಪಾರ ಶಕ್ತಿಶಾಲಿ ಅಸ್ತ್ರ ಶಸ್ತ್ರಗಳನ್ನು ರಕ್ಷಣೆ ಮಾಡಿಕೊಳ್ಳಲು ಉಪಯೋಗಿಸುವ ಬಳಸದೆ ಇನ್ನೊಬ್ಬರನ್ನು ಹಾಳು ಮಾಡೋದು ಅಥವ ನಿರ್ನಾಮ ಮಾಡುವ ಮನುಷ್ಯನ ಗುಣವನ್ನು ಪ್ರಶ್ನಿಸುವ ಪ್ರಶ್ನೆ ಈ ಕಗ್ಗದಲ್ಲಿದೆ.. 

ಸುಂದರವಾಗಿರುವ ಪ್ರಪಂಚವನ್ನು ಅಣ್ವಸ್ತ್ರಗಳಿಂದ ವಿನಾಶ ಮಾಡಿ.. ಎಲ್ಲೆಡೆಯೂ ಹಾಹಾಕಾರ ನಿರ್ಮಿಸುವ ಮನುಷ್ಯನ ಗುರಿ ಏನು ಎಂಬ ಪ್ರಶ್ನಾರ್ಥಕ ಚಿನ್ಹೆ ಇರುವ ಪ್ರಶ್ನೆಗೆ ಸಮಾಧಾನಕರ ಉತ್ತರವೆಂದರೆ ಚಂದವಳ್ಳಿಯ ತೋಟ ಚಿತ್ರ.. 

ತಮ್ಮ ಇತಿಮಿತಿಯಲ್ಲಿ ಸುಸಮೃದ್ಧವಾಗಿ ಬದುಕುತಿದ್ದ ನಂಜೇಗೌಡನ ಪಾತ್ರ.. ಅದಕ್ಕೆ ಒತ್ತಾಸೆಯಾಗಿ ನಾ ಕೆಟ್ಟರೂ ನೀನು ಕೆಡಬಾರದು ಅಂತ ಸರ್ಪ ಸಂಪತ್ತನ್ನು ಕಾಯುವಂತೆ ತನ್ನ ಗೆಳೆಯನನ್ನು ಕಾಯುವ ನರಹರಿಯ ಪಾತ್ರ.. ಇವೆರಡೂ ಕುಟುಂಬಗಳು ಮನವೊಂದು ಮನೆಯೆರಡು ಎನ್ನುವಂತೆ ಬಾಳುತ್ತಿರುತ್ತಾರೆ.. 

ಅಂತಹ ಊರಿಗೆ ಪೂಜೆ ಪುನಸ್ಕಾರ ಮಾಡಿಕೊಂಡು ಇರುವ ಪುರೋಹಿತನ ಕುಟುಂಬದ ಗಂಡ ಹೆಂಡತಿ ಅದೇ ಊರಿನ ಉಡಾಳ ಕರಿಯಪ್ಪನ ಜೊತೆ ಸೇರಿ ನಂಜೇಗೌಡನ ಸಂಸಾರವನ್ನು ನಿರ್ನಾಮ ಮಾಡಿ ಕಡೆಯಲ್ಲಿ ನಂಜೇಗೌಡನಿಗೆ ಹುಚ್ಚು ಹಿಡಿಯುವಂತೆ ಮಾಡುವಲ್ಲಿ ನೆಡೆಯುತ್ತಾರೆ.. ಕಡೆಯಲ್ಲಿ ಕೋರ್ಟಿನಲ್ಲಿ ಪುರೋಹಿತನ ಕುಟುಂಬ ಹಾಗೂ ಕರಿಯಪ್ಪನಿಗೆ ಶಿಕ್ಷೆಯಾಗುತ್ತದೆ.. ಆದರೆ ಒಂದು ಅದ್ಭುತ ಕುಟುಂಬವನ್ನು ಹಾಳು ಮಾಡಿದ ಆ ಮೂವರು ಮನೆಮುರುಕರಿಗೆ ಕೊಟ್ಟ ಶಿಕ್ಷೆ ಕಡಿಮೆ.. 

ಚಂದವಳ್ಳಿಯ ತೋಟ 

ಅದಕ್ಕೆ ಆ ಚಿತ್ರದ ಕಡೆಯಲ್ಲಿ ಊರಿನ ಪಂಚಾಯತಿ ಕಟ್ಟೆಯ ಪ್ರಮುಖ ಹೇಳೋದು "ಮನೆ ಮನೆ ಒಂದಾಗಿದ್ದಾರೆ.. ಊರು ಒಂದಾಗಿರುತ್ತೆ.. ಊರು ಊರು ಒಂದಾಗಿದ್ದಾರೆ ನಾಡು ಒಂದಾಗಿರುತ್ತದೆ.. ನಾಡು ಒಂದಾಗಿದ್ದಾರೆ.. ಪ್ರಪಂಚದ ಯಾವ ಶಕ್ತಿಯೂ ಏನೂ ಮಾಡೋಕೆ ಆಗೋಲ್ಲ.. 

ಅಂದಿನ ಕಗ್ಗದ ತಿರುಳಿಗೂ ಅಂದಿನ ಪ್ರಪಂಚದ ಸ್ಥಿತಿಗೂ ಇಂದಿನ ಪ್ರಪಂಚದ ಸ್ಥಿತಿಗೂ ಏನೂ ವ್ಯತ್ಯಾಸವಿಲ್ಲ.. ನಮ್ಮಗಳ ಮನೋಭಾವ ಬದಲಾಗಬೇಕು ಅಷ್ಟೇ! ಇದೆ ಕಗ್ಗದ ಆಶಯ ಕೂಡ!

ಕಗ್ಗಂಟಿನ ಕರದಂಟು - ಡಿವಿಜಿ ಅಜ್ಜ - ೯

ಏನು ಭೈರವಲೀಲೆಯೀ ವಿಶ್ವವಿಭ್ರಮಣೆ! |
ಏನು ಭೂತಗ್ರಾಮನರ್ತನೋನ್ಮಾದ! ||
ಏನಗ್ನಿ ಗೋಳಗಳು! ಏನಂತರಾಳಗಳು! |
ಏನು ವಿಸ್ಮಯ ಸೃಷ್ಟಿ? – ಮಂಕುತಿಮ್ಮ || ಕಗ್ಗ 9 ||

ನಗುವ ಹೂವು ಇದು ಒಂದು ಅಪರೂಪದ ಚಿತ್ರ.. ವೈದ್ಯಕೀಯ ಪ್ರಪಂಚದಲ್ಲಿ ಕಾನ್ಸರ್ ಎಂಬ ಮಹಾಮಾರಿ ಉಂಟು ಮಾಡುವ ಉಪದ್ರವಗಳ ಬಗ್ಗೆ ಒಂದು ಅರ್ಥಪೂರ್ಣ ಚಿತ್ರ.. 

ಅದರಲ್ಲಿ ಆರಂಭಿಕ ದೃಶ್ಯಗಳಲ್ಲಿ ಕಾನ್ಸರಿಗೆ ತುತ್ತಾಗಿರುವ ಪಾತ್ರದಲ್ಲಿ ಬಾಲಣ್ಣ ಅರ್ಥಾತ್ ನಟ ಬಾಲಕೃಷ್ಣ ಅದ್ಭುತ ಅಭಿನಯ ನೀಡಿದ್ದಾರೆ.. ಅವರಿಗೆ ಸಿಗರೇಟ್ ಮತ್ತು ಇಸ್ಪೀಟು ಪ್ಯಾಕಿನ ಮೇಲೆ ಹುಚ್ಚು.. ಅದರ ಬಗ್ಗೆ ಕೇಳುವ ಡಾಕ್ಟರಿಗೆ ಬಾಲಣ್ಣ ಕೊಡುವ ಉತ್ತರ.. ಬಹುಶಃ ಈ ಕಗ್ಗದ ಅರ್ಥವಿಸ್ತಾರವನ್ನು ಹೆಚ್ಚಿಸುತ್ತದೆ ಅನ್ನುವ ನಂಬಿಕೆ ನನ್ನದು.. 

ಡಾಕ್ಟರ್ : "ಯಾಕೆ ಇಸ್ಪೀಟಿನ ಇಷ್ಟು ಹುಚ್ಚು"

ಬಾಲಣ್ಣ: ನೋಡಿ ಡಾಕ್ಟ್ರೇ ಇದು ಬರಿ ಇಸ್ಪೀಟು ಎಲೆ ಅಲ್ಲ .. ಇದರಲ್ಲಿ ಪುರಾಣ, ಪಂಚಾಂಗ ಅಡಗಿದೆ.. 

ಡಾಕ್ಟರ್ : ಅದು ಹೇಗೆ?
ಆಗ ಬಾಲಣ್ಣ ಒಂದೊಂದೇ ಕಾರ್ಡ್ ತೆಗೆದು ತೋರಿಸುತ್ತಾ ಅದನ್ನು ವಿವರಿಸುತ್ತಾರೆ 

ಬಾಲಣ್ಣ : ಡಾಕ್ಟ್ರೇ 
ಒಂದು - ದೇವರೊಬ್ಬನೇ ಅಂತ ಹೇಳುತ್ತೆ 
ಎರಡು - ಪ್ರಕೃತಿ ಪುರುಷನನ್ನ ತೋರಿಸುತ್ತೆ 
ಮೂರು - ತ್ರಿಮೂರ್ತಿಗಳನ್ನು ಜ್ಞಾಪಕ ಪಡಿಸುತ್ತೆ 
ನಾಲ್ಕು - ಚತುರ್ವೇದಗಳನ್ನು ನೆನಪಿಗೆ ತರುತ್ತೆ 
ಐದು - ಪಂಚೇಂದ್ರಿಯಗಳನ್ನು ಗೆಲ್ಲು ಅನ್ನುತ್ತೆ 
ಆರು - ಅರಿಷಡ್ವರ್ಗಗಳನ್ನು ಸೋಲಿಸು ಅನ್ನುತ್ತೆ 
ಏಳು  - ಸಪ್ತರ್ಷಿಗಳನ್ನು ಪರಿಚಯ ಮಾಡಿಕೊಡುತ್ತೆ 
ಎಂಟು - ಅಷ್ಟ ದಿಕ್ಪಾಲಕರನ್ನು ಸೂಚಿಸುತ್ತೆ 
ಒಂಭತ್ತು - ನವಗ್ರಹಗಳನ್ನು ಜ್ಞಾಪಕ ತರುತ್ತದೆ 
ಹತ್ತು - ವಿಷ್ಣುವಿನ ದಶಾವತಾರದ ಪ್ರತಿರೂಪ 

ಡಾಕ್ಟರ್ : ಇನ್ನೂ ಮೂರು ಕಾರ್ಡು ಇದೆಯಲ್ಲ

ಬಾಲಣ್ಣ : 
ಕಿಂಗ್ - ಶ್ರೀಮನ್ ಮಹಾವಿಷ್ಣು 
ಕ್ವೀನ್ - ಮಹಾಲಕ್ಷ್ಮಿ 
ಜಾಕ್ - ಆ ಮಹಾಲಕ್ಷ್ಮಿಯನ್ನು ಕಬ್ಬಿಣದ ಬೀಗದಲ್ಲಿ ಬಚ್ಚಿಡು ಎಂದು ಆಸೆ ಉಟ್ಟಿಸುವ ಸೈತಾನ

ಡಾಕ್ಟರ್ : ಪುರಾಣ ಆಯಿತು.. ಪಂಚಾಂಗ ಹೇಗೆ 

ಬಾಲಣ್ಣ : ೫೨ ಎಲೆಗಳು ೫೨ ವಾರಕ್ಕೆ ಒಂದೊಂದು 
                   ೪ ರಂಗುಗಳು - ಒಂದೊಂದು ಸೀಸನ್ನಿಗೆ ಒಂದೊಂದು ರಂಗು 
                   ಒಟ್ಟು ಜೋಕರ್ ಸೇರಿಸಿಕೂಡಿಸಿದರೆ ೩೬೫ ..ಅಂದರೆ ಒಂದು ವರ್ಷ ೩೬೫ ದಿನಗಳು ಅಲ್ವೇ 

ನಗುವ ಹೂವು 

ಅಜ್ಜ ನಗುತ್ತಿದ್ದರು.. ಈ ಕಗ್ಗದ ತಿರುಳನ್ನು ಈ ಸಿನಿಮಾ ಸಂಭಾಷಣೆಯಾಗಿ ಎಷ್ಟು ಚೆನ್ನಾಗಿ ಅಳವಡಿಸಿದ್ದಾರೆ.. ಆ ಸಂಭಾಷಣಕಾರನಿಗೊಂದು ನಮಸ್ಕಾರ ಅಂದರು.. 

ಕಗ್ಗ ನಮ್ಮ ಮನೋದೊಳಗೆ ಪ್ರಶ್ನೆ ಹುಟ್ಟಿಸುತ್ತದೆ.. ಏನಿದು ಶಿವಲೀಲೆ.. ಅಗ್ನಿ ಗೋಲಗಳು.. ತಿರುಗುವ ಉಂಡೆಗಳು.. ಎಂಥಹ ಸೃಷ್ಟಿಯಿದು.. ಅನ್ನುವ ಕಗ್ಗದ ಪ್ರಶ್ನೆಗೆ.. ಅನೇಕ ಕಗ್ಗಗಳಲ್ಲಿ ಉಲ್ಲೇಖವಾಗಿರುವ ಪ್ರಕೃತಿಯ ರಚನೆಯ ತಿರುಳನ್ನು ಸಿನೆಮಾ ಸಂಭಾಷಣೆಯೊಳಗೆ ಇಳಿಸಿದ್ದಾರೆ.. !

ಕಗ್ಗಂಟಿನ ಕರದಂಟು - ಡಿವಿಜಿ ಅಜ್ಜ - ೮

ಕ್ರಮವೊಂದು ಲಕ್ಷ್ಯವೊಂದುಂಟೇನು ಸೃಷ್ಟಿಯಲಿ? | 
ಭ್ರಮಿಪುದೇನಾಗಾಗ ಕರ್ತೃವಿನ ಮನಸು? || 
ಮಮತೆಯುಳ್ಳವನಾತನಾದೊಡೀ ಜೀವಗಳು | 
ಶ್ರಮಪಡುವುವೇಕಿಂತು? – ಮಂಕುತಿಮ್ಮ || ಕಗ್ಗ 8 ||

ಭಗವಂತನ ಲೀಲೆಗೆ ಏನಾಸ್ದರೂ ಕ್ರಮವಿದೆಯೇ.. ಒಂದು ಲಕ್ಶ್ಯವಿದೆಯೇ.. ಏನಾದರೂ ಭ್ರಮೆಯಲ್ಲಿದ್ದಾಗ ಈ ರೀತಿಯ ರಚನೆ ಸಾಧ್ಯವೇ.. ಅವನ ಸೃಷ್ಟಿಯ ಈ ಜೀವಿಗಳು ಏಕೆ ಈ ರೀತಿ ಶ್ರಮ ಪಡುತ್ತವೆ ಎಂಬ ಭಾವಕ್ಕೆ ಬೆಳಕು ಚೆಲ್ಲುವ ಕಗ್ಗವನ್ನು ಓದುತ್ತಿದ್ದಾಗ ಮನಸ್ಸು ಪರಿಪರಿಯಾಗಿ ಯೋಚಿಸಿತು.. ಇದೆ ರೀತಿಯ ಭಾವಪೂರಿತ ಪ್ರಸಂಗ ಭಕ್ತ ಕುಂಬಾರ ಚಿತ್ರದಲ್ಲಿ ನೋಡಿದ್ದೇನೆ ಅನಿಸಿತು.. 

ಭಕ್ತಿಯ ರಸದಲ್ಲಿ ಮೈಮರೆತಿದ್ದ ಗೋರ... ತನಗೆ ಅರಿವಿಲ್ಲದೆ ತನ್ನ ಮಗುವನ್ನು ಮಣ್ಣಿನಲ್ಲಿ ತುಳಿದು ಅದರ ಅಂತ್ಯಕ್ಕೆ ಕಾರಣನಾಗುತ್ತಾನೆ.. ಈತನ ಪಾಂಡುರಂಗನ ಮೇಲಿನ ಭಕ್ತಿಯ ಪರಾಕಾಷ್ಠೆಯಿಂದ ಕುಪಿತಳಾಗಿದ್ದ ಮಡದಿ.. ಈ ಮನೆಯಲ್ಲಿ ಪಾಂಡುರಂಗನ ಪೂಜೆ ಸಲ್ಲದು ಅಂತ ದೇವರಕೋಣೆಯಿಂದ ಪಾಂಡುರಂಗನ ಮೂರ್ತಿಯನ್ನು ತೆಗೆಯಲು ಹೋದಾಗ ವ್ಯಗ್ರನಾದ ಗೋರನ ಅವತಾರ ಕಂಡು.. ನನ್ನ ಮುಟ್ಟಿದರೆ ಪಾಂಡುರಂಗನ ಮೇಲೆ ಆಣೆ ಎನ್ನುತ್ತಾಳೆ.. ಆ ಆಣೆಯಿಂದ ಆತ ತನ್ನ ಮಡದಿಯಿಂದ ದೂರವಿರುತ್ತಾನೆ.. ಮುಂದೆ ತನ್ನ ಸಂಸಾರಕ್ಕೆ ವಾರಸುದಾರ ಬೇಕು ಎನ್ನುವ ಆಸೆಯಿಂದ ತನ್ನ ತಂಗಿಯನ್ನೇ ತನ್ನ ಗಂಡನಿಗೆ ಮದುವೆ ಮಾಡಿಸಿದರೂ ಕೂಡ.. ಆತ ತನ್ನ ಮೊದಲ ಮಡದಿಯನ್ನು ಹೇಗೆ ನೋಡಿಕೊಂಡಿದ್ದಾನೋ ಅದೇ ರೀತಿ ಎರಡನೇ ಹೆಂಡತಿಯನ್ನು ನೋಡಿಕೊಳಬೇಕು ಎನ್ನುವ ಆತನ ಹೆಣ್ಣು ಕೊಟ್ಟ ಮಾವ ಹೇಳಿದ ಮಾತಿನಿಂದ ಆಕೆಯನ್ನು ಕೂಡ ದೂರವಿಡುತ್ತಾನೆ.. 

ಒಂದು ವಿಷಾದನೀಯ ಸನ್ನಿವೇಶದಲ್ಲಿ ಇಬ್ಬರೂ ಮಡದಿಯರ ಸ್ಪರ್ಶದಿಂದ ಕುಪಿತನಾಗಿ ತನ್ನ ಕೈಯನ್ನು ಕಡಿದುಕೊಳ್ಳುತ್ತಾನೆ.. ಆ ಸಂದರ್ಭದಲ್ಲಿ ವಿಠಲನೇ ಗೋರನ ಮನೆಗೆ ಮನೆಯಾಳಾಗಿ ಬಂದು ಸೇವೆ ಮಾಡಲು ಶುರು ಮಾಡುತ್ತಾನೆ.. 

ಇಷ್ಟೆಲ್ಲಾ ಸೇವೆ ಮಾಡಿದರು  ತಮ್ಮ ಜೀವನದಲ್ಲಿ ಕಷ್ಟಗಳ ಮಳೆಯನ್ನು ಸುರಿಸುತ್ತಿರುವ ಆ ಪಾಂಡುರಂಗನ ಮೇಲೆ ಕೋಪಗೊಂಡು "ಅತಿಥಿಯಾಗಿರುವ ನಿನ್ನಿಂದ ದುಡಿಸಿಕೊಂಡು ತಿನ್ನುತ್ತಿರುವೆವು.. ಇದಕ್ಕೆಲ್ಲ ಕಾರಣ ಅವನೇ..ಯಾಕೆ ಹೀಗೆಲ್ಲ ನಮ್ಮನ್ನು ಗೋಳು ಹುಯ್ಕೋತಾ ಇದ್ದಾನೆ.. "  ಎಂದಾಗ ಆತ "ಇಲ್ಲ ಅಕ್ಕ.. ಕರ್ಮ ಅನ್ನೊದು ಒಂದು ಇರುತ್ತಲ್ಲ ಅದರಿಂದ ಹೀಗೆ ಆಗುತ್ತದೆ" ಎನ್ನುತ್ತಾನೆ.. 

ಭಕ್ತ ಕುಂಬಾರ


ಅಜ್ಜನ ಕಗ್ಗದ ಬರವಣಿಗೆ ಬಲು ತೀಕ್ಷ್ಣ ಮತ್ತು ಆಳ.. ಇಲ್ಲಿ ಮೇಲ್ನೋಟಕ್ಕೆ ಕಗ್ಗ ಪ್ರಶ್ನೆಯಾಗಿ ಅಥವ ಇದೊಂದು ಒಗಟಾಗಿ ಕಂಡು ಬಂದರು.. ಅದರ ಒಳಾರ್ಥವನ್ನು ಅರ್ಥೈಸಿಕೊಂಡು, ಅದಕ್ಕೆ ಒಂದು ಅರ್ಥವನ್ನು ಕಂಡುಕೊಂಡಾಗ ಹೊಳೆಯುವಂಥಹ ಚಕ್ರವ್ಯೂಹದಂತಹ ಕಗ್ಗವಿದು.. ಅದರೊಳಗೆ ಉತ್ತರವಿದು.. ಅಂದರೆ ಪ್ರಶ್ನೆಯನ್ನು ಹೊದ್ದುಕೊಂಡು ಕೂತಿರುವ ಉತ್ತರದ ಕಗ್ಗವಿದು.. !



ಕಗ್ಗಂಟಿನ ಕರದಂಟು - ಡಿವಿಜಿ ಅಜ್ಜ - ೭

ಬದುಕಿಗಾರ್ ನಾಯಕರು; ಏಕನೊ ಅನೇಕರೋ? | 
ವಿಧಿಯೊ ಪೌರುಷವೊ ಧರುಮವೊ ಅಂಧಬಲವೋ? || 
ಕುದುರುವುದದೆಂತು ಈಯವ್ಯವಸ್ಥೆಯ ಪಾಡು? | 
ಅದಿಗುದಿಯೆ ಗತಿಯೇನೊ? – ಮಂಕುತಿಮ್ಮ || ಕಗ್ಗ 7 ||

ಪಟ್ಟಣದಲ್ಲಿ ವಿದ್ಯಾಭ್ಯಾಸ ಮುಗಿಸು ಮರಳಿ ಹಳ್ಳಿಗೆ ಬರುವ ರಾಜೀವ.. ಕಂಡದ್ದು ತನ್ನನ್ನು ಪೋಷಿಸಿ, ಸಾಕಿ ಬೆಳೆಸಿದ ತನ್ನ ಭಾವನ ಕಳೇಬರವನ್ನು.. ಅಲ್ಲಿದ್ದ ಆತನ ಅಕ್ಕ.. "ರಾಜೀವ.. ನನ್ನ ಸೌಭಾಗ್ಯ ಹೊರಟು ಹೋಯಿತು.. " ಅಂತ ಅಳುವಾಗ.. ಆಕೆಯ ಮಕ್ಕಳು ಮಾವ ಅಂತ ರಾಜೇವನನ್ನು ತಬ್ಬಿಕೊಂಡಾಗ.. ರಾಜೀವನ ಮನದಲ್ಲಿ ಬಹುಶಃ ಇದೆ ಪ್ರಶ್ನೆ ಉದ್ಭವಿಸಿರುತ್ತೆ.. 

ಮುರಿದು ಬಿದ್ದ ತನ್ನ ಅಕ್ಕನ ಸಂಸಾರವನ್ನು ಮತ್ತೆ ಎತ್ತಿ ನಿಲ್ಲಿಸುವ ಛಲ ಹೊತ್ತು ಆ ಹಳ್ಳಿಯ ಪ್ರಮುಖ ರಾಚೂಟಪ್ಪನವರ ಮನೆಗೆ ಬಂದಾಗ.. ರಾಚೂಟಪ್ಪನವರು ಕೂಡ ಈ ಕಗ್ಗದ ತಿರುಳು ಇರುವಂತಹ ಮಾತುಗಳನ್ನೇ ಆಡುತ್ತಾರೆ.. 

ನಿಜ ಬಂಗಾರದ ಮನುಷ್ಯ ಚಿತ್ರದಲ್ಲಿ ಈ ದೃಶ್ಯ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿರುವುದಕ್ಕೆ ಕಾರಣ.. ಆ ನೋಡುಗರ ಮನಸ್ಸಿನಲ್ಲಿಯೂ ಕೂಡ ಹೌದು.. ಈ ವ್ಯವ್ಯಸ್ಥೆಗೆ ಯಾರು ನಾಯಕರು.. ಹೇಗೆ ಈ ಸಂಸಾರ ಎದ್ದು ನಿಲ್ಲುತ್ತದೆ.. ಎನ್ನುವ ಸಂದೇಹ ನಮ್ಮ ಮನದಲ್ಲೂ ಮೂಡುತ್ತದೆ.. 

ರಾಚೂಟಪ್ಪನವರು "ರಾಜೀವಪ್ಪ... ಮುಂದೇನು ಮಾಡ್ಬೇಕು ಅಂತ ಇದ್ದೀರಾ ರಾಜೇವಪ್ಪ" ಅಂದಾಗ ರಾಜೇವ "ರಾಚೂಟಪ್ಪನವರೇ.. ಮುರಿದು ಬಿದ್ದಿರುವ ನನ್ನ ಅಕ್ಕನ ಸಂಸಾರವನ್ನು ಎತ್ತಿ ನಿಲ್ಲಿಸಬೇಕು.. ಮಕ್ಕಳನ್ನು ಓದಿಸಬೇಕು.. ನನ್ನ ಭಾವನವರ ಕನಸ್ಸನ್ನು ನನಸು ಮಾಡಬೇಕು.. ಇದೆ ನನ್ನ ಗುರಿ "  ಎನ್ನುತ್ತಾರೆ.. 

ಆಗ ರಾಚೂಟಪ್ಪನವರು "ನಿಜ ರಾಜೀವಪ್ಪ .. ನಾವು ನಾಲ್ಕು ಜನಕ್ಕೆ ಸಹಾಯ ಮಾಡಿದರೆ ನಾಲ್ಕು ಮಂದಿ ನಮಗೆ ಸಹಾಯ ಮಾಡುತ್ತಾರೆ ಎನ್ನುವ ಮಾತು ನಿಜ"


ಅಲ್ಲವೇ.. ಬದುಕಿಗೆ ಯಾರು ನಾಯಕರು ಎನ್ನುವ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ.. ಆದರೆ ನಮ್ಮ ಬದುಕಿಗೆ ನಾವೇ ನಾಯಕರು ಎನ್ನುವ ಮಾತು ಎಲ್ಲರೂ ಒಪ್ಪುತ್ತಾರೆ..  ವಿಧಿಲಿಖಿತ ಅದು ಪೂರ್ವ ನಿರ್ಧರಿತ..ಪೌರುಷ ಅದು ಸ್ವಯಾರ್ಜಿತ.. ಧರ್ಮ ಅದು ಸಮಾಜದಲ್ಲಿರುತ್ತದೆ.. ಅಂಧಬಲ .. ಅದು ನಮ್ಮ ಮನೋ ವಿಶ್ವಾಸದ ಮೇಲೆ ನಿಂತಿರುತ್ತದೆ.. ಬದುಕಿಗೆ ಯಾರು ನಾಯಕರು ಎನ್ನುವ ಸಂದೇಹವನ್ನು ಅಳಿಸಿ ಹಾಕಬೇಕಾದವರು ನಾವೇ.. ನಮ್ಮ ಬದುಕಿಗೆ ನಾವೇ ನಾಯಕರು.. 

ಓದುಗರ ಮನದ ಕಡಲಲ್ಲಿ ಸಂದೇಹ ಎನ್ನುವ ಅಲೆಗಳನ್ನು ತೇಲಿಸಿ, ನಂತರ ಅದಕ್ಕೊಂದು ಪರಿಹಾರವನ್ನು ಕಂಡುಕೊಳ್ಳುವಂಥಹ ನೌಕೆಯನ್ನು ಕೂಡ ಅದರಲ್ಲಿ ತೇಲಿಸುವ ಜಾಣ್ಮೆ ಕಗ್ಗದ ಅಜ್ಜನದು.. ! 

ಕಗ್ಗಂಟಿನ ಕರದಂಟು - ಡಿವಿಜಿ ಅಜ್ಜ - ೬

ಒಗಟೆಯೇನೀ ಸೃಷ್ಟಿ? ಬಾಳಿನರ್ಥವದೇನು? |
ಬಗೆದು ಬಿಡಿಸುವರಾರು ಸೋಜಿಗವನಿದನು? ||
ಜಗವ ನಿರವಿಸಿದ ಕೈಯೊಂದಾದೊಡೇಕಿಂತು |
ಬಗೆಬಗೆಯ ಜೀವಗತಿ? – ಮಂಕುತಿಮ್ಮ || ಕಗ್ಗ 6 ||

ಈ  ಜಗತ್ತನ್ನು ನಿರ್ಮಿಸಿದ ಕೈಯಲ್ಲಿ ಎಷ್ಟೊದು ಬಗೆ ಬಗೆಯ ಜೀವಿಗಳು.. ಒಂದು ಇನ್ನೊಂದರ ಭಾವವನ್ನು ಹೋಲುವುದಿಲ್ಲ.. ವಿಭಿನ್ನ ಮನಸ್ಥಿತಿ.. ಈ ಕಗ್ಗದ ಆಂತರ್ಯವನ್ನು ಅರ್ಥ ಮಾಡಿಕೊಳ್ಳುತ್ತ ಕೂತಿದ್ದಾಗ ಹೊಳೆದದ್ದು 

ರಾಜಕುಮಾರ್ ಅವರ ದಾರಿ ತಪ್ಪಿದ ಮಗ ಚಿತ್ರ.. ಒಂದೇ ತಾಯಿ ಹೆತ್ತ ಇಬ್ಬರು ಮಕ್ಕಳು.. ಪರಿಸ್ಥಿತಿ, ಪಾಲನೆ, ಪೋಷಣೆ, ವಾತಾವರಣ.. ಒಬ್ಬನನ್ನು ಮರೆಗುಳಿಯಾದರೂ ವಿದ್ಯಾವಂತ ಕಾಲೇಜು ಶಿಕ್ಷಕನನ್ನಾಗಿ ಮಾಡಿದರೆ.. ಇನ್ನೊಬ್ಬ ಕಳ್ಳಕಾಕರ ಗುಂಪಿನಲ್ಲಿ ಅವರ ನಾಯಕನಾಗಿ ಸಮಾಜದಲ್ಲಿ ಕಳ್ಳತನ ದಂಧೆಯಲ್ಲಿ ಬಹುದೂರ ಸಾಗಿರುತ್ತಾನೆ. 

ಇಲ್ಲಿ ಅಜ್ಜನ ಕಗ್ಗದಂತೆ ನನ್ನ ಮನದಲ್ಲೂ ಪ್ರಶ್ನೆ ಮೊಳಕೆ ಒಡೆಯಿತು.. ಒಂದೇ ತಾಯಿ, ಅದೇ ರಕ್ತ, ಅದೇ ಭಾವ.. ಆದರೆ ಒಂದು ಸಮಾಜವನ್ನು ಉತ್ತಮವಾಗಿ ಮುನ್ನೆಡೆಸುವ ವಿದ್ಯಾರ್ಥಿಗಳನ್ನು ತಯಾರು ಮಾಡುವ ಶಿಕ್ಷಕ.. ಇನ್ನೊಬ್ಬ ಆ ಉತ್ತಮ ಸಮಾಜದಲ್ಲಿನ ಹುಳುಕುಗಳನ್ನು ತನ್ನ ಉಪಯೋಗಕ್ಕೆ ಬಳಸಿಕೊಂಡು ದರೋಡೆ ಮಾಡುವ ನಾಯಕ.. 

ಅಂತಹ ವೈರುದ್ಯ ವ್ಯಕ್ತಿ ಚಿತ್ರಣ.. ಇಲ್ಲಿ ಭಗವಂತನ ಕೈವಾಡವೇ ಅಂದರೆ ಇಲ್ಲ ಇಲ್ಲ.. ಅದು ಬೆಳೆದ ಅಥವ ಬೆಳೆಸಿದ ವಾತಾವರಣ.. 

ಕಗ್ಗದಲ್ಲಿ ಹೇಳಿದಂತೆ.. ಇದು ಒಂದು ಒಗಟೇ ಹೌದು.. ಬಾಳಿನ ಅರ್ಥವನ್ನು ಹುಡುಕುವ ಮನಸ್ಸಿದ್ದರೂ, ಸೋಜಿಗ ಅನಿಸಿದರೂ.. ಇದಕ್ಕೆ ಉತ್ತರ ಸಿಗುತ್ತದೆಯೇ ಅಂದರೆ ಮತ್ತೆ ನಮ್ಮ ಮುಂದೆ ನಿಲ್ಲುವುದು ಪ್ರಶ್ನಾರ್ಥಕ ಚಿನ್ಹೆ!

ಅಜ್ಜನ ಕಗ್ಗಗಳು ಮನಸ್ಸಿನ ಒಳ ಹೊಕ್ಕು ಮನವನ್ನು ಮಂಥನ ಮಾಡುವ ಒಂದು ಕಡಗೋಲು.. !

ದಾರಿ ತಪ್ಪಿದ ಮಗ - ದ್ವಿಪಾತ್ರ