Thursday, December 27, 2018

ತಾಯಿ ನಿಮಿಷಾಂಬಾ ...ನಿಮಿಷಾಂಬೆಯ ಸನ್ನಿದಿಯಲ್ಲಿ ಪದಗಳ "ನೆರೆ"

"ಮಹೇಶ ನನಗೊಂದು ಟವಲು ಹಾಕಿಬಿಡಿ.."
"ಅಣ್ಣ ಆಗಲೇ ಹಾಕಾಯ್ತು.. "
"ಅರೆ ನಾ ಈಗ ತಾನೇ ಹೇಳಿದ್ದು!!!"
"ನಿಮಗೋಸ್ಕರ ಟವಲ್ ಅಲ್ಲಿ ಹಾಕಿಬಿಟ್ಟಿದ್ದೇನೆ.." ಜೋರಾದ ನಗು..

ನನ್ನ  ಪಾಲಿಗೆ ಹೀಗೆ ಶುರುವಾಗಿದ್ದು.. ಪದಕಮ್ಮಟದ ನಾಲ್ಕನೇ ಆವೃತ್ತಿ..

ಚುಮುಚುಮು ಚಳಿಯಲ್ಲಿ ನಾಯಂಡಹಳ್ಳಿ ಮೆಟ್ರೋ ನಿಲ್ದಾಣದ ಹತ್ತಿರ ನಾನು ಗುರು, ಮತ್ತೆ ಗುರು ಜೂನಿಯರ್ ನಿಂತಿದ್ವಿ.. ನಾಗ್ ಅಲಿಯಾಸ್ ನಾಗೇಂದ್ರ ಬಂದ್ರು.. ಉಮೇಶ್ ಸರ್ ಬಂದ್ರು.. ಸಮರ್ಥ್ ನಮಗೆ ಕೊಂಚ ಮುಂಚೆ ಸಿಕ್ಕಿದ್ರು.. ಮಹೇಶ ಇದ್ದ ಟೆಂಪೋ ಟ್ರಾವೆಲ್ಲರ್ ನಮ್ಮ ಬಳಿ ಬಂದು ನಿಲ್ತು.. ಉಭಯಕುಶಲೋಪರಿ ಸಾಂಪ್ರತ ಮಾಡುತ್ತಲೇ.. ಒಳಗೆ ನುಗ್ಗಿದೆವು..

ಶ್ರೀ ರಾಜಕುಮಾರ್ ಅವರು ಆಗಲೇ ಆಸೀನರಾಗಿದ್ದರು.. ಪರಿಚಯವಾದ ನಂತರ ನಮ್ಮ ಬಂಡಿ ಹೊರಟಿತು.. ಇನ್ನೊಂದು ಬಂಡಿಯಲ್ಲಿ ಪ್ರವೀಣ್ ಭಟ್ ಸಂಪ, ಮಲ್ಲೇಶ, ಶ್ರೀನಿಧಿ ಸರ್, ಮೇಡಂ ಒಬ್ಬರು, ಚೌಡಯ್ಯ ಇದ್ದರು.. ಶ್ರೀರಂಗಪಟ್ಟಣದಲ್ಲಿ ಸಿಗೋಣ ಅಂತ ಗಾಡಿ ಬರ್ ಅಂತ ಹೊರಟೆ ಬಿಟ್ಟಿತು..

ಮಾತು ಮಾತು ಮಾತು ಬರಬಿಡದೆ ಸಾಗಿತ್ತು ಮಾತಿನ ಲಹರಿ.. ನಾಲ್ಕು ದಿನದ ಹಿಂದಷ್ಟೇ ಬಿಡುಗಡೆಯಾಗಿ ಬಾರಿ ಸದ್ದು ಮಾಡುತ್ತಿದ್ದ ಕೆ.ಜಿಎಫ್ ಚಿತ್ರದಿಂದ ಮಾತು ಆರಂಭವಾಯಿತು.. ಪ್ರಪಂಚದ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ, ಹಾಸ್ಯ ಸಾಗಿತ್ತು..

ರಾಹುಲ್ ದ್ರಾವಿಡ್ ನನ್ನ ಇಷ್ಟದ ಆಟಗಾರ.. ಯಾವ ಪಿಚ್ ಇರಲಿ, ಯಾವುದೇ ಬೌಲರ್ ಇರಲಿ, ತಾಳ್ಮೆಯಿಂದ ಅದಕ್ಕೆ ತಕ್ಕ ಆಟವಾಡುತ್ತಿದ್ದರು.. ನಮ್ಮ ಬಂಡಿಯಲ್ಲಿದ್ದ ರಾಜಕುಮಾರ್ ಕೂಡ ಹಾಗೆ.. ಕ್ರಿಕೆಟ್, ಸಿನಿಮಾ, ಚುನಾವಣೆ, ರಾಜಕೀಯ, ಸಾಮಾನ್ಯ ವಿಷಯ ಯಾವುದೇ ಇರಲಿ ಅದ್ಭುತವಾಗಿ ಮಾತಾಡುತ್ತಿದ್ದರು.. ನಾನೂ ಮಾತಾಡುತ್ತಲೇ ಯೋಚಿಸುತ್ತಿದ್ದೆ ಯಾವ ವಿಷಯ ಮಾತಾಡೋಣ ಅಂತ.. ಶ್ರೀರಂಗ ಪಟ್ಟಣ ಬರುವ ತನಕ ಯೋಚಿಸುತ್ತಲೇ ಇದ್ದೆ.. ಕಾರಣ ಅಂಬರದ ಕೆಳಗೆ ಯಾವ ವಿಷಯವೇ ಆದರೂ ಅದ್ಭುತವಾಗಿ ಮಾಹಿತಿ ನೀಡುತ್ತಿದ್ದರು..

ಪದಕಮ್ಮಟದ ತಾಣಕ್ಕೆ ಬಂದೆವು.. ಆಗಲೇ ಬಿರುಸಿನ ಚಟುವಟಿಕೆ ನೆಡೆದಿತ್ತು..
ಪದಕಮ್ಮಟದ ತಾಣ 
ಸೊಗಸಾದ ಇಡ್ಲಿ, ವಡೆ, ಮತ್ತು ಪೊಂಗಲ್. .ಆಹಾ ಖಾರವಾದ ಚಟ್ನಿ.. ಸೂಪರ್ ಇತ್ತು.. ಆ ಚಳಿಗೆ ಮೆಣಸು ಸಿಗುತ್ತಿದ್ದ ಪೊಂಗಲ್ ಎರಡು ರೌಂಡ್ ಬಾರಿಸಿದೆವು..
ಚಳಿಗೆ ರುಚಿಕರವಾದ ತಿನಿಸು 
ಅಲ್ಲಿ ನೆಡೆಯುತ್ತಿದ್ದ ಸಿದ್ಧತೆಗಳಿಗೆ ನಾವು ಒಂದಷ್ಟು ಕೈಜೋಡಿಸಿದೆವು.. ಬಂದವರು ಸ್ವಾಗತ ಕಟ್ಟೆಯಲ್ಲಿ ನೋಂದಣಿ ಮಾಡಿಕೊಂಡು ಕಿರುಹೊತ್ತಿಗೆ, ಲೇಖನಿಗಳನ್ನ ತೆಗೆದುಕೊಂಡು ಆಸೀನರಾಗುತ್ತಿದ್ದರು ..ಬಂದವರ ಜೊತೆ ಮಾತು, ಒಂದು ಸೆಲ್ಫಿ.. ನಗು, ಹಾಸ್ಯ ಸಾಗಿತ್ತು..

ಆಲ್ವಾ.. ವಿಶ್ವಾಸವೇ ಪ್ರಗತಿಯ ಕಿರಣ!!!


ಸ್ವಾಗತ ಕಟ್ಟೆ 

ಬಂದ ಗೆಳೆಯರು

ಗುರುತಿನ ಬಿಲ್ಲೆ ಲಗತ್ತಿಸಿದ ಸಮಯ 
ಹಿರೇಮಗಳೂರಿನಿಂದ ಶ್ರೀ ಕಣ್ಣನ್ ಅವರು ಬರುವವರಿದ್ದರು.. ಅವರ ಬರುವಿಕೆಗಾಗಿ ಎಲ್ಲರೂ ಎದುರು ನೋಡುತ್ತಿದ್ದರು.. ಆ ಕ್ಷಣ ಬಂದೆ ಬಿಟ್ಟಿತು.. ಎಲ್ಲರೂ ಅವರನ್ನು ಸ್ವಾಗತಿಸಿ ಆಜಾದ್ ಸರ್ ಪದಕಮ್ಮಟದ ನೆನಪಿನ ಬಿಲ್ಲೆಯನ್ನು ಅವರ ಕೋಟಿಗೆ ಸಿಕ್ಕಿಸಿದಾಗ ಕಾರ್ಯಕ್ರಮಕ್ಕೆ ಒಂದು ಮಿಂಚಿನ ಗತಿ ಬಂದಿತು..

ಬಾಲು ಸರ್ ಅವರ ಸ್ಫೂರ್ತಿಯುತ ಸಿದ್ಧತೆ, ಮತ್ತು ಅದಕ್ಕೆ ಬೇಕಾದ ಸಲಕರಣೆಗಳು ಮತ್ತು ಸಹಾಯ ಹಸ್ತ ನೀಡುವವರು ಇದ್ದದರಿಂದ ಎಲ್ಲವೂ ಸುಗವಾಗಿ ಸಾಗಿತ್ತು.. ವೇದಿಕೆಗೆ ಮುಖ್ಯ ಅತಿಥಿಗಳನ್ನು ಸ್ವಾಗತಿಸಿದರು.. ಸುಸ್ವರದ ಗಾಯಕರಿಂದ ನಾಡಗೀತೆಯೊಂದಿಗೆ ಪದಕಮ್ಮಟದ ನಾಲ್ಕನೇ ಆವೃತ್ತಿ ಆರಂಭವಾಯಿತು.. ಶ್ರೀಮತಿ ವಾಣಿ ಅವರಿಂದ ಪ್ರಾರ್ಥನೆ ಗೀತೆ ಸೊಗಸಾಗಿತ್ತು..
ಪ್ರಾರ್ಥನೆ ಗೀತೆ - ಶ್ರೀಮತಿ ವಾಣಿ ಅವರಿಂದ 
ಸಭಾಂಗಣ ತುಂಬುತ್ತಲೇ ಇತ್ತು.. ಸ್ವಾಗತ ಕಟ್ಟೆಯಲ್ಲಿ ನೋಂದಣಿ ಮಾಡಿಕೊಳ್ಳುವವರ ಸಂಖ್ಯೆ ಏರುತ್ತಲೇ ಇತ್ತು.. ತಿಂಡಿ ಕಾಫಿ ಸಾಗಿತ್ತು.. ಜ್ಯೋತಿಯ ಬೆಳಗುವ ಮೂಲಕ ಸಾಂಕೇತಿಕವಾಗಿ ಶುರುವಾದ ಕಮ್ಮಟ ಸರಾಗವಾಗಿ ಸಾಗಿತು..
ದೀಪಂ ಜ್ಯೋತಿ ಪರಬ್ರಹ್ಮ 
ಶ್ರೀ ಜೆಬಿಆರ್ ಸರ್ ಅವರಿಂದ ಪ್ರಾಸ್ತಾವಿಕ ಭಾಷಣ ಮತ್ತು ಶ್ರೀ ನಾಗೇಂದ್ರ ಅವರಿಂದ ನಿರೂಪಣೆ ಒಳಗೊಂಡಿತ್ತು
ನಾಗ್ ಅಲಿಯಾಸ್ ನಾಗೇಂದ್ರ ನಿರೂಪಣೆಯಲ್ಲಿ 

ಜೆಬಿಆರ್ ಸರ್.. ಸುಂದರ ಮಾತಿನ ಶುರುವಾತು
ಶ್ರೀ ಕಣ್ಣನ್  ಅವರ ಜಲಲ ಜಲಲ ಧಾರೆಯ ನೆರೆ ಆ ಅಂಗಣವನ್ನು ತುಂಬಿತ್ತು.. ಸುಮಾರು ಒಂದು ಒಂದೂವರೆ ಘಂಟೆಗಳ ಕಾಲ ಅದ್ಭುತವಾಗಿ ಮಾತಾಡಿದ ಮಹನೀಯರು.. ಸುಮಾರು ಎರಡು ಸಾವಿರ ವರ್ಷಗಳ ಕಾಲಕ್ಕೆ ನಮ್ಮನ್ನು ಹಾಸ್ಯ ಬಂಡಿಯಲ್ಲಿ ಕೊಂಡೊಯ್ದದ್ದೆ ಅಲ್ಲದೆ.. ಕರುನಾಡಿನ ಭಾಷೆಯ ಎಲ್ಲೆಗಳನ್ನು ಪರಿಚಯಿಸಿದರು.. ಆಡು ಭಾಷೆ, ಗ್ರಾಮ್ಯ ಭಾಷೆ, ಶುದ್ಧ ಭಾಷೆ ಹೀಗೆ ಹತ್ತಾರು ವಿಧಗಳನ್ನು ಘಟನೆಗಳ ಆಧಾರದ ಮೇಲೆ ಹೇಳಿದ್ದು, ಅದಕ್ಕೆ ಹಾಸ್ಯ ಲೇಪನ ಬೆರೆಸಿದ್ದು ಸೊಗಸಾಗಿತ್ತು.. ಅಕ್ಷರಶಃ ಮಂತ್ರ ಮುಗ್ಧರಾಗಿ ಕೂತಿದ್ದವರೆಲ್ಲ ಮಾತು ಮುಗಿದಾಗ ಜೋರಾದ ಚಪ್ಪಾಳೆ ತಟ್ಟಬೇಕೆಂದು ಮರೆತುಹೋಗುವಷ್ಟು ತನ್ಮಯತೆಯಿಂದ ಇದ್ದರು.. ನಾ ಇಲ್ಲಿಗೆ ಮಾತು ಮುಗಿಸುತ್ತಿದ್ದೇನೆ.. ಶುಭವಾಗಲಿ ಎಂದಾಗಲೇ ಅರೆ ಮಾತು ಇಷ್ಟು ಬೇಗ ಮುಗಿದು ಹೋಯಿತೇ ಎಂದು ಅಚ್ಚರಿಪಡುವ ಹಾಗೆ ಆಗಿತ್ತು..

ಪದಗಳ ನೆರೆ
ಪದಗಳ ಪ್ರವಾಹ
ಪದಗಳ ಬಿರುಗಾಳಿ
ಪದಗಳ ಮಳೆಯನ್ನೇ ಹರಿಸಿದ ಆ ಸಮಯ ಅದ್ಭುತ ಎನ್ನಬಹುದು..

ಪದಕಮ್ಮಟದ ಸ್ಮರಣಿಕೆಯನ್ನು ಬಿಡುಗಡೆ ಮಾಡಿ ಎಲ್ಲರಿಗೂ ಹಂಚಿದರು... ಆ ಸ್ಮರಣಿಕೆಯನ್ನು ಸಿದ್ಧಪಡಿಸಿದ ಸಹಾಯ ಹಸ್ತಗಳಿಗೆ ನಮನ ಸಲ್ಲಿಸುತ್ತಾ ರಕ್ಷಾಪುಟವನ್ನು ಸಿದ್ಧಪಡಿಸಿದ ಸೃಷ್ಟಿಕರ್ತರಿಗೆ ಒಂದು ಸಲಾಂ ಹೇಳಿ ಕಾರ್ಯಕ್ರಮಕ್ಕೆ ತಿರುವು ನೀಡಿದರು..
ಸ್ಮರಣಿಕೆ ಬಿಡುಗಡೆ ಮಾಡಿದ ಸಮಯ 
ಅಲ್ಲಿಂದ ಶ್ರೀ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರಿಂದ ಭಾಷೆ ವಿನಿಯೋಗ.. ... ಭಾಷೆ ಬೆಳೆದು ಬಂದಂತ ಹಾದಿ, ಅದಕ್ಕೆ ಇನ್ನೊಂದು ರೂಪ.. ಹೀಗೆ ತಮ್ಮ ಮೂಸೆಯಲ್ಲಿದ್ದ ವಿಷಯಗಳನ್ನು ಬಂದಿದ್ದವರಿಗೆ ತಲುಪಿಸಿದರು.. ಸೊಗಸಾದ ಕಾರ್ಯಕ್ರಮ ಹಂತಹಂತವಾಗಿ ಮೇಲೇರುತ್ತಿತ್ತು.. ಯಶ್ವಸಿಯಾಗುತ್ತಿತ್ತು..
ಶ್ರೀ ಶಂಕರ್ ನಾರಾಯಣ ಅವರ ಮಾತುಗಳು ಸೊಗಸು 
ಪ್ರಶ್ನೆ ಉತ್ತರಗಳ ಸಂವಾದ ನೆಡೆಯಿತು.. ತಮ್ಮ ಸಂದೇಹಗಳಿಗೆ ಉತ್ತರದ ಪೋಷಾಕುಗಳನ್ನು ಹೊದ್ದಿಸಿ ಸಂತಸ ಪಟ್ಟರು.

ಮುಂದೆ ಇದ್ದದ್ದು ಇದುವರೆಗೂ ಉತ್ತರ ಪ್ರದೇಶಕ್ಕೆ ಹೋಗಿದ್ದ ನಾವೆಲ್ಲರೂ ಮಧ್ಯ ಪ್ರದೇಶದ ಕರೆಗೆ ಓಗೊಟ್ಟು.. ಬಿಸಿ ಬೇಳೆ ಬಾತು, ಮೊಸರನ್ನ, ಉಪ್ಪಿನಕಾಯಿ, ಲಾಡುಗಳನ್ನು ಬೇಸರಿಸದೆ ಅದಕ್ಕೆ ದಾರಿ ತೋರಿಸಿದೆವು..
ಪುಷ್ಕಳ ಭೋಜನ 

ಇದರ ಮಧ್ಯೆ .. ಬಂದಿದ್ದವರ ಸ್ವ ಪರಿಚಯ ನೆಡೆಯಿತು.. ಊಟವಾದ ಮೇಲೆ. ... ನಾವು ಹೊರಟಿದ್ದು ಗಮಕದ ಶಾಲೆಗೇ.. ಶ್ರೀಮತಿ ವಿಜಯಮಾಲ ರಂಗನಾಥ್ ಅವರ ದನಿಯಲ್ಲಿ ಗಮಕದ ವಾತಾವರಣಕ್ಕೆ ಜಾರಿದೆವು..
ಗಮಕಿ ಮೇಡಂ ವಿಜಯಮಾಲ ರಂಗನಾಥ್ 

ಶ್ರೀ ಅನಾರ್ಕಲಿ ಸಲೀಮ್ ಅವರ ಮಾತುಗಳು.. ಅವರ ಪರಿಶ್ರಮ ಪದಕಮ್ಮಟದ ಯಶಸ್ಸಿಗೆ ಒಂದು ಕಾರಣ..

ಅನಾರ್ಕಲಿ ಸಲೀಂ ಮಾತುಗಳು ಸೂಪರ್ 

ಮಾಧ್ಯಮದ ಪ್ರತಿನಿಧಿಗಳು ಇಡೀ ದಿನ ನಮ್ಮ ಜೊತೆ ಇದ್ದದ್ದು ವಿಶೇಷವಾಗಿತ್ತು..
ಸುದ್ದಿಗಳು ಪಸರಿಸುವುದೇ ಇವರಿಂದ ಅಲ್ಲವೇ 

ಪುಸ್ತಕಗಳ ಸಾಮ್ರಾಟ್ ಎಂದೇ ಹೆಸರಾದ ಪುಸ್ತಕದ ಮನೆಯ ಶ್ರೀ ಅಂಕೇಗೌಡರು ಆಗಮಿಸಿದ್ದು ಪದಕಮ್ಮಟಕ್ಕೆ ಭೂಷಣವೆನಿಸಿತು. ಹತ್ತಲ್ಲ, ನೂರಲ್ಲ, ಸಾವಿರವಲ್ಲ, ಲಕ್ಷಗಟ್ಟಲೆ ಪುಸ್ತಕಗಳನ್ನು ಹೊಂದಿರುವ ಇವರು ನಿಜಕ್ಕೂ ಸರಸ್ವತಿ ಪುತ್ರರೇ ಹೌದು..
ಶ್ರೀ ಅಂಕೇಗೌಡರು 

ಹ ಹ ಹ.. ಕಾರ್ಯಕ್ರಮದ ಪಟಗ್ರಾಹಿಗಳು (ಅಜಾದ್ ಸರ್ ಮಾತಿನಲ್ಲಿ)

ಅಧ್ಯಕ್ಷತೆ ವಹಿಸಿದ್ದ ಶ್ರೀ ವಸಂತ್ ಕುಮಾರ್ ಪೆರ್ಲ ಅವರಿಂದ ಪದಕಮ್ಮಟಕ್ಕೆ ಶುಭನುಡಿಗಳು .. ಇಡೀ ದಿನದ ಕಾರ್ಯಕ್ರಮವನ್ನು ತಮ್ಮ ಅನುಭವದ ಮೂಸೆಯಲ್ಲಿ ರೂಪಿಸಿದ್ದು ಸೊಗಸಾಗಿತ್ತು..  ಅತಿಥಿಗಳ ಜೊತೆಯಲ್ಲಿ ಮಾತುಕತೆ, ಸಂವಾದ ಕಾರ್ಯಕ್ರಮದಲ್ಲಿ ಉತ್ತಮವಾಗಿ ತೊಡಗಿಸಿಕೊಂಡಿದ್ದ ಅಧ್ಯಕ್ಷರಿಗೆ ಧನ್ಯವಾದಗಳು.
ಶ್ರೀ ವಸಂತ್ ಕುಮಾರ್ ಪೆರ್ಲ ಸರ್ 

ಶ್ರೀ ಆಜಾದ್ ಅವರಿಂದ ಪದಕಮ್ಮಟದ ಬಗ್ಗೆ ಒಂದು ಸಿಂಹಾವಲೋಕನ.. ಮತ್ತೆ ಈ ಕಾರ್ಯಕ್ರಮಕ್ಕೆ ಸಹಾಯ ಹಸ್ತಗಳನ್ನು ನೀಡಿದ ಎಲ್ಲರಿಗೂ ಒಂದು ನೆನಪಿನ ಕಾಣಿಕೆ ಕೊಟ್ಟು ಗೌರವಿಸುವುದರಿಂದ ಈ ಕಾರ್ಯಕ್ರಮ ಸಂಪನ್ನವಾಯಿತು...
ಶಕ್ತಿ ಅಜಾದ್ ಸರ್ 


ಸಭಾಂಗಣದ ನೋಟ 

ಸಭಾಂಗಣದ ನೋಟ 
ಇದರ ಮಧ್ಯದಲ್ಲಿ ಬಾಲು ಸರ್ ಈ ಕಾರ್ಯಕ್ರಮದ ಯಶಸ್ಸಿಗೆ ಮತ್ತು ಅತಿಥಿಗಳನ್ನು ಆಹ್ವಾನಿಸುವ ಜವಾಬ್ಧಾರಿ ಹೊತ್ತಿದ್ದ ಸಹಾಯ ಹಸ್ತಗಳಿಗೆ ಅಭಿನಂದನೆ ಹಾಗೂ ಧನ್ಯವಾದಗಳನ್ನು ಸಲ್ಲಿಸಿದರು.. ಹಾಗೆಯೇ ಸಾಮಾಜಿಕ ಜಾಲತಾಣಗಳನ್ನು ಹೇಗೆ ಉಪಯುಕ್ತವಾಗಿ  ಸಮಾಜಕ್ಕೆ ಒಂದು ಕೊಡುಗೆಯಾಗಿ ನೀಡಬಹುದು ಮತ್ತು ಭಾಷೆಯ ಉಪಯುಕ್ತತೆಯನ್ನು ಹೇಗೆ ತಲುಪಿಸಬಹುದು ಎನ್ನುವುದನ್ನು ತಿಳಿಸಿದರು..
ಕಾರ್ಯಕ್ರಮದ ಸಜ್ಜಿಕೆಯ ರೂವಾರಿ ಮತ್ತು ಶಕ್ತಿ 
ಬಂದವರನ್ನೆಲ್ಲ ಒಂದು ಚೌಕಟ್ಟಿನಲ್ಲಿ ಬಂಧಿಸಬೇಕೆಂಬ ನಮ್ಮೆಲ್ಲರ ಹಂಬಲಕ್ಕೆ ತಲೆಬಾಗಿ ವೇದಿಕೆಯನ್ನು ಆಕ್ರಮಿಸಿಕೊಂಡೆವು.. ಒಂದು ಸುಂದರ ಗುಂಪಿನ ಸೊಗಸಾದ ಚಿತ್ರ ನಮ್ಮೆಲ್ಲರ ಕಣ್ಮನಗಳಲ್ಲಿ ದಾಖಲಾಯಿತು..
ಒಂದು ಗುಂಪು.. ಪದಕಮ್ಮಟದ ಗುಂಪು 

ಸಪ್ಪೆ ಎನಿಸಿತಾ.. ಇರಿ ಸರ್.. ಇದು ಪದಕಮ್ಮಟದ ಕಾರ್ಯಕ್ರಮ ವಿವರ..

ಮುಂದೈತೆ ತಮಾಸೆ ಅಬ್ಬಾ!!!

ತುಂಟ ಸದಸ್ಯರ ಗುಂಪೇ ಇರುವಾಗ ಹಾಸ್ಯಕ್ಕೆ ಕೊರತೆಯೇ.. ಮಲೆನಾಡಿನಲ್ಲಿ ಸಿಕ್ಕ ಸಿಕ್ಕಲ್ಲೆ ಹೊರಹುಮ್ಮುವ ನೀರಿನ ಒರತೆಯಂತೆಯೇ ಕ್ಷಣ ಕ್ಷಣಕ್ಕೂ ಹಾಸ್ಯದ ಝರಿ ಉಗಮವಾಗುತ್ತಲೇ ಇತ್ತು..
ಮಹಿಷಾಸುರ 

ಬಕಾಸುರಾಸ್ 

ಕಸ್ತೂರಿ ನಿವಾಸದವರು 

ಒಂದೇ ತಟ್ಟೆ ಮೂರು ಬಾಯಿ

ಎತ್ತಿಕೋ ಚಳುವಳಿ 

ಕಷ್ಟ ಪಟ್ಟು ಎತ್ತಿಕೋ ಚಳುವಳಿ 

ಅಪ್ಪ ಮಗನ ಜುಗಲ್ ಬಂದಿ 

ಲೆಕ್ಕ ಬಿಡಿಸಿದ ಪ್ರವೀಣ್ ಮಾಸ್ತರು 

ಬಿಡಿಸಿದ ಲೆಕ್ಕವನ್ನು ವಿವರಿಸಿದ ಮಲ್ಲೇಶ್ ಸಾರು 

ಎಷ್ಟೋ ಬಾರಿ ನಮ್ಮ ಅಬ್ಬರದ ನಗು ಕಾರ್ಯಕ್ರಮದ ಲಹರಿಗೆ ಅಡಚಣೆಯಾಗಿ. ಅಲ್ಲಿದ್ದವರು ಕೈಯೆತ್ತಿ.. ಸನ್ನೆ ಮಾಡಿ ನಿಶ್ಯಬ್ಧ ಎಂದು ಹೇಳಿದ್ದುಂಟು.. ಆದರೆ ಹರಿಯುವ ನೀರಿಗೆ ಯಾರು ಹೊಣೆ.. ಹಾರುವ ಹಕ್ಕಿಗೆ ಎಲ್ಲಿ ಮನೆ.. ಎಂಥ ಮರುಳಯ್ಯ ಇದು ಎಂಥಾ ಮರುಳು ಎನ್ನುವ ಹಾಗೆ ಆ ಕ್ಷಣಕ್ಕೆ ಸುಮ್ಮನಾದರೂ.. ಮತ್ತೆ ನಲ್ಲಿಯ ನೀರು ಜೋರಾಗಿ ನುಗ್ಗಿ ಬರುವ ಹಾಗೆ ಮತ್ತೆ ಶುರುವಾಗುತ್ತಿತ್ತು ನಮ್ಮ ತರಲೆಗಳು..

ಅಲ್ಲಿದ್ದ ಫಲಕಗಳು ಹಾಸ್ಯಕ್ಕೆ ಅಡಿಪಾಯ ಹಾಕಿದ್ದವು.. ಅದನ್ನೇ ಪ್ರಾಪರ್ಟಿಯಾಗಿ ಉಪಯೋಗಿಸಿಕೊಂಡು ಹಲ್ಲು ಬಿಡಲು ನೂರಾರು ಕಾರಣಗಳು ಸಿಕ್ಕಿದವು.. ಊಟ ಮಾಡುವಾಗ ತರಲೆ, ಕೂತಿದ್ದಾಗ ತರಲೆ..ಹೀಗೆ ಸಾಗಿತ್ತು ನಮ್ಮ ಪಯಣ..

ನಿಮಿಷಾಂಬ ದೇವಾಲಯ ಹತ್ತಿರದಲ್ಲಿಯೇ ಇದೆ.. ಹೋಗಿ ಬರೋಣ ಅಂತ ಹೊರಟೆವು.. ಆದರೆ ಆ ತಾಯಿ ತನ್ನ ಒಡಲಲ್ಲಿ ಈ ಭಕ್ತರಿಗೆ ಇಟ್ಟುಕೊಂಡಿದ್ದ ಪ್ರಸಾದ ನಮಗೆ ಕಂಡಿರಲಿಲ್ಲ..

ದೇವಸ್ಥಾನಕ್ಕೆ ಹೋದೆವು. ದರುಶನ ಪಡೆದೆವು.. ತಾಯಿಗೆ ನಮಿಸಿ.. ಮನದಲ್ಲಿದ್ದ ಅರ್ಜಿಗಳನ್ನು ಗುಜರಾಯಿಸಿ.. ಹೊರಕ್ಕೆ ಬಂದೆವು. .. ಅಲ್ಲೊಬ್ಬ Voot ಅಪ್ಲಿಕೇಶನ್ ನಲ್ಲಿ ಬಿಗ್ ಬಾಸ್ ನೋಡುತ್ತಿದ್ದವ ಅಚಾನಕ್ ಆಗಿ.. ಲೋ ಓಡ್ರಪ್ಪ.. ತಮಿಳುನಾಡಿನಲ್ಲಿ ಪ್ರವಾಹ ಬತ್ತೈತಂತೆ ಅಂದಾಗ.. ನಾವು ಸುಮ್ಮನೆ ಅಯ್ಯೋ ತಲೆ ಕೆಟ್ಟಿರಬೇಕು ಆತನಿಗೆ ಅಂದು ಕೊಂಡೆವು....ತಮಿಳುನಾಡಿನಲ್ಲಿ ಪ್ರವಾಹ ಬಂದರೆ ನಾವ್ಯಾಕೆ ಓಡಬೇಕು ಎನ್ನುವುದು ನಮ್ಮ ಲಾಜಿಕ್!!!

ನದಿ ಹತ್ತಿರ ಒಂದು ಸೆಲ್ಫಿ ಅಂತ ನಿರ್ಧಾರಮಾಡಿದೆವು..

ಸರಿ ಎಲ್ಲರೂ ನದಿಯ ಕಡೆಗೆ ನೆಡೆದೆವು.. ಮೊಬೈಲ್ ನೋಡುತ್ತಿದ್ದವ.. ಬ್ಯಾಡ ಕನ್ರಲಾ.. ನೆರೆ ಬತ್ತೈತೆ.. ಕಾವೇರಿ ನದಿಯಲ್ಲಿ ಪ್ರವಾಹ ಬತ್ತೈತೆ... ಅಂದಾಗಲೂ ನಾವು ತಲೆ ಕೆಡೆಸಿಕೊಳ್ಳದೆ.. ಮಳೆ ಇಲ್ಲ ಮುಸುಡಿ ಇಲ್ಲ.. ಪ್ರವಾಹ ಎಲ್ಲಿ ಬತ್ತೈತೆ ಎಂದುಕೊಂಡು .. ಸಮಯವಿದ್ದಿದ್ದರೆ ತೆಪ್ಪದಲ್ಲಿ ಒಂದು ಸುತ್ತು ಹೋಗಬಹದಿತ್ತು ಅಂದು ಕೊಂಡೆವು ಆದರೆ ಸಮಯವಿರಲಿಲ್ಲ..

ಅಚಾನಕ್ ಆಗಿ ನೀರಿನ ಮಟ್ಟ ಏರಿತು.. ನಮ್ಮ ಮಲ್ಲೇಶ ಮತ್ತು ನಾಗರಾಜ್ ಜೊತೆಯಲ್ಲಿ ಪ್ರವೀಣ್ ನದಿಯಿಂದ ಒಬ್ಬರನ್ನು ಎಳೆದು ದಡಕ್ಕೆ ತಂದರು..

ಯಾರವಳು.. ಯಾರವಳು?
ಆ ವೀರ ವನಿತೆ ಆ ಲಕ್ಷ್ಮವ್ವ
ನಿಮಿಶಾಂಬ ಮರೆಯದ ಲಕ್ಷಮ್ಮವ್ವ
ಕನ್ನಡ ನಾಡಿನ ವೀರ ರಮಣೀಯ
ಪದಕಮ್ಮಟದ ಸ್ವಾಗತಕಾರಣಿಯ ಚರಿತೆಯ ನಾನು ಹಾಡುವೆ..
ನೋಯದೆ ನೆಂದ ತಂಡ 
ತಲೆ ಮೇಲೆ ಏನೋ ಬಿತ್ತು.. ನೋಡಿದರೆ ತನ್ನ ಬಟ್ಟೆಯಂತೆ ಮುಖವನ್ನು ಕೆಂಪಗೆ ಮಾಡಿಕೊಂಡಿದ್ದ ಲಕ್ಷ್ಮಿಪ್ರಿಯ ಅಲಿಯಾಸ್ ಡಿಟಿಪಿ ಒನಕೆ ಓಬವ್ವನಿಗಿಂತ ರುದ್ರವ್ವ ಆಗಿದ್ದಳು ಎಂಬಲ್ಲಿಗೆ ಪದಕಮ್ಮಟದ ಈ ಲೇಖನ ಸಮಾಪ್ತಿಯಾಯಿತು!!!

Wednesday, December 19, 2018

ಆಹ್ಲಾದ ಕೊಟ್ಟ ಒಂದು ದಿನ 16-Dec-2018!!!

"ಶ್ರೀಕಾಂತಾ ಭಾನುವಾರ ಹೀಗಿದೆ ಒಂದು ಕಾರ್ಯಕ್ರಮ.. ಬಾ ನೀನು ನಿನಗೆ ಇಷ್ಟವಾಗುತ್ತದೆ.. " ನನ್ನ ಸಹೋದರ ರಜನೀಶನ ಕರೆಗೆ ಒಪ್ಪಿಕೊಂಡಿದ್ದೆ..

ಕೆಲವು ಬಾರಿ ಹೀಗಾಗುತ್ತದೆ.. ಯಾವ ಕಾರ್ಯಕ್ರಮ, ಏನು ಅದರ ವಿಶೇಷ, ಯಾರ್ಯಾರು ಬರ್ತಾರೆ ಏನೂ ಗೊತ್ತಿರೋಲ್ಲ / ಗೊತ್ತುಮಾಡಿಕೊಳ್ಳುವ ಪ್ರಯತ್ನ ನಾ ಮಾಡೋಲ್ಲ..ಸುಮ್ಮನೆ ಆ ಕ್ಷಣವನ್ನು ಸುಖಿಸುವ ಮನಸ್ಥಿತಿ ಹೊತ್ತು ಹೋಗುತ್ತೇನೆ.. ಭಾನುವಾರ ಕಿಕ್ಕಿರಿದು ಸೇರಿಕೊಂಡಿದ್ದ ಎರಡು ಕಾರ್ಯಕ್ರಮಗಳು ಒಂದು ರಜನೀಶ ಹೇಳಿದ ಕಾರ್ಯಕ್ರಮ (ಇನ್ನೂ ಹೇಳಿಲ್ಲ ಆಲ್ವಾ ನಾನು :-) ) ಇನ್ನೊಂದು ನನ್ನ ನೆಚ್ಚಿನ ೩ಕೆ ತಂಡದಿಂದ ಆಚರಿಸುವ ರಾಜ್ಯೋತ್ಸವ.. ೩ಕೆ ಕಾರ್ಯಕ್ರಮದ ಬಗ್ಗೆ ನಿಮಗೆಲ್ಲಾ ಕಿವಿ ತೂತಾಗುವಷ್ಟು ಹೇಳಿದ್ದೇನೆ.. ಹಾಗಾಗಿ ಮತ್ತೆ ನಿಮಗೆಲ್ಲ ಬೋರ್ ಹೊಡೆಸೋಲ್ಲ

ಅಕ್ಕ ಬರ್ತೀನಿ ಅಂದ್ಲು, ಅಣ್ಣ ಬರ್ತೀನಿ ಅಂದ.. ನಮ್ಮ ಚಿಕ್ಕಪ್ಪ ಬರ್ತಾ ಇದ್ದೀನಿ ಅಂದ್ರು, ನನ್ನ ಸಹೋದರ ಮಡದಿ ಸುಮಾ ಮಾತೆ ಬರ್ತೀನಿ ಅಂದಿದ್ರು.. ಆ ಕಾರ್ಯಕ್ರಮದ ಸ್ಥಳಕ್ಕೆ ಅಕ್ಕನ ಜೊತೆಯಲ್ಲಿ ಹೋದಾಗ , ಅಣ್ಣ, ಚಿಕ್ಕಪ್ಪ, ಸುಮಾ ಮಾತೆ, ಮತ್ತು ರಜನೀಶ ಸಿಕ್ಕಿದರು..

ಭಾನುವಾರದ ಚಳಿ ಚಳಿ... ಬಿಸಿಬಿಸಿ ರುಚಿ ರುಚಿ ಉಪ್ಪಿಟ್ಟು.. ಕೇಸರಿಬಾತ್ ವಾಹ್.. ರುಚಿಯಾಗಿತ್ತು.. ಮಾತಾಡುತ್ತಾ ಕೆಲವು ಆತ್ಮೀಯರ ಪರಿಚಯ ಮಾಡಿಕೊಂಡು.. ಒಂದು ಕೋಣೆಯೊಳಗೆ ಸೇರಿಕೊಂಡಾಗ ಕಾರ್ಯಕ್ರಮದ ಪೂರ್ಣ ವಿವರ ಸಿಕ್ಕಿತು..

ಶಾಲಾ ಮಕ್ಕಳಿಗೆ ನಮ್ಮ ಭವ್ಯ ಗ್ರಂಥಗಳಾದ ಶ್ರೀ ಮಹಾಭಾರತ ಮತ್ತು ಶ್ರೀ ರಾಮಾಯಣದ ಬಗ್ಗೆ ಅರಿವು ಮೂಡಿಸುವ ಸಲುವಾಗಿ  ಪರೀಕ್ಷೆಗಳನ್ನು ಏರ್ಪಡಿಸುತ್ತಾರೆ.. ಆ ಮಕ್ಕಳು ಉತ್ಸಾಹದಿಂದ ಬರೆದ ಉತ್ತರ ಪತ್ರಿಕೆಯ ಮೌಲ್ಯಮಾಪನ ಮಾಡುವ ಕಾಯಕಕ್ಕೆ ಅಳಿಲು ಸೇವೆ ಮಾಡೋದು ನಮ್ಮ ಕೆಲಸವಾಗಿತ್ತು.. ಕರ್ನಾಟಕದಿಂದ ಸುಮಾರು ೬೦-೬೫ ಸಾವಿರ ವಿದ್ಯಾರ್ಥಿಗಳು ಬರೆದ ಉತ್ತರಪತ್ರಿಕೆಯನ್ನು ಅಂಕ ಎನ್ನುವ ಕಲ್ಲಿಗೆ ಒರೆ ಹಚ್ಚುವ ಕೆಲಸ..

ಶಾಲಾದಿನಗಳಲ್ಲಿ ನಾವು ಓದಿರಲಿ ಓದದೇ ಪರೀಕ್ಷೆ ಬರೆದಿರಲಿ.. ಅಂಕಗಳು ಕಡಿಮೆ ಬಂದಾಗ.. ಮೇಷ್ಟ್ರು ಯಾವುದೋ ಕೆಟ್ಟ ಮನಸ್ಥಿತಿಯಲ್ಲಿ ಅಂಕ ಕೊಟ್ಟಿದ್ದಾರೆ ಇನ್ನೊಂದು ಹತ್ತು ಅಂಕ ಕೊಟ್ಟಿದ್ದಾರೆ ಅವರ ಆಸ್ತಿಯೇನು ಕರಗುತ್ತಿತ್ತೇ. .ಹೀಗೆ ಅನೇಕ ರೀತಿಯ ಯೋಚನೆಗಳು ಮಾತಾಗಿ ಹೊರಬರುವುದು ಸರ್ವೇಸಾಮಾನ್ಯ.. ಅಂದು ನಾವು ಆ ಚಾಲಕನ ಕುರ್ಚಿಯಲ್ಲಿ ಕೂತಾಗ ಅರಿವಾಗಿತ್ತು.. ಆ ಕಷ್ಟದ ಪರಿ.. :-)

ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬರೆದ ಉತ್ತರ ಪತ್ರಿಕೆಗಳು.. ಅದಕ್ಕೆ ಮಾದರಿ ಉತ್ತರ ಹೊಂದಿದ್ದ ಪ್ರಶ್ನೆ ಪತ್ರಿಕೆ.. ಅಂಕ ಪಟ್ಟಿ.. ಪ್ರಶ್ನೆ ಪತ್ರಿಕೆ ಇವೆಲ್ಲವನ್ನೂ ಕೊಟ್ಟು ಜೊತೆಗೆ ಕೆಂಪು ಬಣ್ಣದ ಲೇಖನಿಯನ್ನು ಕೊಟ್ಟು ಶ್ರೀ ಸತೀಶ್ ಅವರು ಹೇಗೆ ಮೌಲ್ಯಮಾಪನ ಮಾಡಬೇಕು ಎನ್ನುವ ಒಂದು ಪುಟ್ಟ ತಿಳುವಳಿಕೆ ಕೊಟ್ಟರು..

ಆಯ್ಕೆ ನಮ್ಮದಾಗಿತ್ತು ಭಾರ ಹೊರಬಹುದಾದ ಮಹಾಭಾರತವೋ ಅಥವಾ ನಮ್ಮ ಬದುಕಿನ ರಾಮಾಯಣದ ಜೊತೆಗೆ ಶ್ರೀ ರಾಮಾಯಣವೋ..

ನನಗೂ ಒಂದು ಪುಟ್ಟ ಕವರ್ ಕೊಟ್ಟರು.. ನಾ ಶುರು ಮಾಡಿದೆ.. ಕೊನೆಯಲ್ಲಿ ಲಘುವಾಗಿ ನಗು, ಹಾಸ್ಯದ ಜೊತೆಗೆ ಮೌಲ್ಯ ಮಾಪನ ಶುರುವಾಯಿತು.. ವಿದ್ಯಾರ್ಥಿಗಳು ಉತ್ತರಿಸಿದ ರೀತಿ ಕೆಲವೊಮ್ಮೆ ನಗು ತಂದರೂ ಅವರ ಕ್ರಿಯಾಶೀಲತೆಗೆ ಉದಾಹರಣೆಯಾಗಿತ್ತು.. ಜೊತೆಯಲ್ಲಿ ನಮ್ಮ ಧರ್ಮಗ್ರಂಥಗಳು ಎಂದು ಪ್ರಪಂಚವೇ ಒಪ್ಪುವ ಈ ಪೌರಾಣಿಕ ಕಥೆಗಳನ್ನು ಸಮಾಜದ ಮೂಲೆ ಮೂಲೆಗೂ ತಲುಪಿಸಿ ಇನ್ನಷ್ಟು ಹೆಚ್ಚಿನ ಅರಿವು ಮೂಡಿಸಬೇಕು ಎನ್ನುವ ಅಂಶವೂ ಹೊಳೆಯಿತು..

ನನಗೆ ತುಂಬಾ ಇಷ್ಟವಾದ ಉತ್ತರ :
ಗಾಂಧಾರಿಗೆ ಆ ಹೆಸರು ಬರಲು ಕಾರಣವೇನು?
ಆಕೆ ಗಂಧ ಹಚ್ಚಿಕೊಳ್ಳುತ್ತಿದ್ದರಿಂದ ಗಾಂಧಾರಿ ಎಂದು ಹೆಸರು ಬಂತು.. !

ಇನ್ನೊಬ್ಬರು ಮೇಡಂ ಹೇಳುತ್ತಿದ್ದರು.. : ರಾಮಾಯಣದ ಒಂದು ಪ್ರಶ್ನೆಗೆ ಹುಡುಗ ಬರೆದ ಉತ್ತರ
(ಆ ಹುಡುಗನಿಗೆ ಏನು ಬರೆಯಬೇಕು ಎಂಬ ಗೊಂದಲವಿತ್ತು ಅನ್ನಿಸುತ್ತೆ) ಇದು ಯಾರು ಬರೆದ ಕಥೆಯೋ ನನಗಾಗಿ ಬಂಡ ವ್ಯಥೆಯೋ :-)

ಸುಂದರ ಸಮಾಗಮದ ದಿನ.. ಒಂದು ವಿಭಿನ್ನ ಅನುಭವ ಕೊಟ್ಟ ದಿನವಾಗಿತ್ತು.. ಜೊತೆಯಲ್ಲಿ ಫೇಸ್ಬುಕ್ ಪರಿಚಯದ ಸ್ವರ್ಣ ಪುಟ್ಟಿ ಅಲ್ಲಿ ಸಿಕ್ಕಿದ್ದು ಮಾತಾಡಿದ್ದೂ ವಿಶೇಷ..

ಊಟ ಸೊಗಸಾಗಿತ್ತು.. ಬಿಸಿಬೇಳೆ ಬಾತ್, ಮೊಸರನ್ನ, ಉದ್ದಿನ ವಡೆ, ಖಾರವಾದ ಚಟ್ನಿ, ಪಾಯಸ .. ಆಹಾ ಏನೋ ಹೇಳೋದು.. ಸೊಗಸು ಸೊಗಸು.. ಭಾನುವಾರದ ಅರ್ಧ ದಿನವನ್ನು ಸಾರ್ಥಕವಾಗಿ ವಿಭಿನ್ನ ಅನುಭವದೊಂದಿಗೆ ಕಳೆದ ಖುಷಿ ನನ್ನದಾಗಿತ್ತು..

ಅಲ್ಲಿಂದ ನೆಡೆದದ್ದು ೩ಕೆ ರಾಜ್ಯೋತ್ಸವಕ್ಕೆ (ಬೆಚ್ಚಿ ಬೀಳದಿರಿ.. ಮತ್ತೆ ಅದನ್ನೇ ಹೇಳಿ ಕೊರೆಯೋಲ್ಲ)

ಬಹುರಾಷ್ಟ್ರೀಯ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿರುವ ಶ್ರೀಕಾಂತ್ ಮಂಜುನಾಥ್ ಈ ಚಿತ್ರದ ಬಗ್ಗೆ ಹೇಳುವ ಕವನವನ್ನು ಅವರ ಬಾಯಲ್ಲಿಯೇ ಕೇಳೋಣ ಎಂದು ನನ್ನ ಗೆಳೆಯ ನೂತನ್ ಹೇಳಿದಾಗ ಕೈಲಿದ್ದ ಕ್ಯಾಮೆರಾ ನನ್ನ ಮಗಳಿಗೆ ಕೊಟ್ಟು ಆರಾಮಾಗಿ ವೇದಿಕೆ ಹತ್ತಿದೆ..

"ಎಲ್ಲರಿಗೂ ನಮಸ್ಕಾರ" (ಗಂಟಲು ಕೆಳಗೆ ಕೂತಿತ್ತು,  ಸರಿ ಮಾಡಿಕೊಂಡು)
ನಮ್ಮ ಮನ ಮನೆಯಲ್ಲಿ ಸದಾ ನೆಲೆಸಿರುವ ಹರಿಣಿ ಮೇಡಂ ಯಾವಾಗಲೂ ಹೇಳುತ್ತಿದ್ದರು .. ಶ್ರೀಕಾಂತ ಪೀಠಿಕೆ ಇಲ್ಲದೆ ನೀನು ಏನೂ ಹೇಳೊಲ್ಲ.. ಅದೇ ಅಪವಾಧ, ಆಪಾದನೆ,  ಪ್ರಶಂಸೆ ಹೊತ್ತು ಶುರು ಮಾಡುತ್ತೇನೆ .. ನನಗೆ ಬಂದ ಭಾವಕ್ಕೆ ಒಂದಷ್ಟು ವಿಚಿತ್ರ ಪದಗಳನ್ನು ಸೇರಿಸಿ ಇದನ್ನು ಮಾಡಿದ್ದೇ, ನೀವು ಅದನ್ನೇ ಮಾಡಿ, ಕೇಳಿ, ನೋಡಿ....


ಮೊದಲಿಗೆ ಶಶಿಕಿರಣ್ ಮುಲ್ಲೂರು ಸೆರೆ ಹಿಡಿದ ಈ ಚಿತ್ರ ತುಂಬಾ ಮನಸ್ಸಿಗೆ ತಾಕೀತು.. ಈ ಚಿತ್ರದಲ್ಲಿ ಏನೋ ಇದೆ ಎನ್ನುವ ವಿಚಾರಗಳು ಮನದಲ್ಲಿ ಮೂಡಿದವು.. ರವಿ ಕಾಣದ್ದನ್ನು ಕವಿ ಕಂಡ.. ಕವಿ ಕಾಣದನ್ನು ಈ ಕಪಿ ಕಂಡ .. ಕಪಿ ಅಂದರೆ ಕನ್ಯಾ ಪಿತೃ ನನ್ನ ಮಗಳಿಗೆ ತಂದೆ..

(ಕಿಸಿಕಿಸಿ ನಕ್ಕರು ಅಲ್ಲಿದ್ದವರು)

ಕಾನೂನು ಬಲ್ಲವರು..
ಕಾನೂನಿನ ಸಲಹೆಗಾರರು
ಸುಮ್ಮನೆ ಕುಳಿತಿಹರೆ?
ಇಲ್ಲಾ ಇಲ್ಲಾ .. !

(ಖಂಡಿತ ಇಲ್ಲ.. ಸುಮ್ಮನೆ ಕೂತಿಲ್ಲ)

ಗೋಡೆ ಶಿಥಿಲವಾಗಿದೆ,
ಬಾಗಿಲು ಹಳೆಯದಾಗಿದೆ,
ಅದಕ್ಕೆ ತಗಲಾಕಿದ ಬೀಗ ಪುಟ್ಟದಾಗಿದೆ!

(ಗೋಡೆ ಶಿಥಿಲವಾಗಿದೆ, ಬಾಗಿಲು ಹಳೆಯದು ಆದರೂ ಅಲ್ಲೊಂದು ಆಶಾ ಭಾವವಿದೆ.. ಬಾಗಿಲಿಗೆ ಹಾಕಿದ ಬೀಗ ಪುಟ್ಟದಾಗಿದೆ ಅಂದರೆ.. ಸಮಸ್ಯೆಗಳು ದೊಡ್ಡದಾಗಿರಬಹುದು ಆದರೆ ಅದಕ್ಕೆ ಪರಿಹಾರ ಪುಟ್ಟದಾಗಿರುತ್ತದೆ ಎನ್ನುವ ಭಾವನೆ ನನಗೆ ಕಾಣಿಸಿತು)

ಬಾಗಿಲುಗಳು ಅಳಕವಾಗಿದೆ,
ಹಾಕಿದ ಬೀಗದ ಹಂಗಿಲ್ಲ,
ಚಿಲಕ ನಿಲ್ಲೋಲ್ಲ !

(ಬಾಗಿಲುಗಳು ಸಡಿಲವಾಗಿದೆ, ಬೀಗದ ಹಂಗಿಲ್ಲ.. ಚಿಲಕವಿಲ್ಲದಿದ್ದರೆ ಬೀಗಕ್ಕೆ ಬೆಲೆಯಿಲ್ಲ)

ಕಾನೂನು ಬಲ್ಲವರು..
ಕಾನೂನಿನ ಸಲಹೆಗಾರರು
ಸುಮ್ಮನೆ ಕುಳಿತಿಹರೆ?
ಇಲ್ಲಾ ಇಲ್ಲಾ .. !

(ಖಂಡಿತ ಇಲ್ಲ ಎಂದು ಹೇಳುತ್ತೇನೆ)

ಅಲ್ಲೊಂದು ಆಶಾಭಾವವಿದೆ
ಅಲ್ಲೊಂದು ಉತ್ಸಾಹವಿದೆ
ಅಲ್ಲೊಂದು ಚೈತನ್ಯವಿದೆ!

ಬಾಗಿಲಿಗೆ ಸಿಕ್ಕಿಸಿದ ಅಂಚೆ ಪೆಟ್ಟಿಗೆ,
ಬಾಗಿಲ ಕೊನೆಯಲ್ಲಿ ಅರಳುತ್ತಿರುವ ಗಿಡ,
ಗೋಡೆ, ಬಾಗಿಲುಗಳನ್ನ ಕಾಯುತ್ತಿರುವ ಕಂಡೂ ಕಾಣದಂತಿರುವ ಚಾವಣಿ!

(ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲೊಂದು ಪುಟ್ಟ ಗಿಡ ಅರಳುತ್ತಿದೆ.. )

ಕಾನೂನು ಬಲ್ಲವರು..
ಕಾನೂನಿನ ಸಲಹೆಗಾರರು
ಸುಮ್ಮನೆ ಕುಳಿತಿಹರೆ?
ಇಲ್ಲಾ ಇಲ್ಲಾ .. !

(ಖಂಡಿತ ಇಲ್ಲ ಇಲ್ಲ ಎಂದು ಹೇಳುತ್ತೇನೆ)

ಅಂಚೆ ಡಬ್ಬದ ಕೇಸರಿ ಬಣ್ಣ,
ಬಾಗಿಲ ಕೊನೆಯಲ್ಲಿ ಹಸಿರು ವರ್ಣ,
ಗೋಡೆಗೆ ಬಳಿದಿರುವ ಬಿಳಿ ರಂಗು,
ಮಾಸಲಾಗಿದ್ದರೂ ಕಾಣುವ ನೀಲಿ,
ನಮ್ಮ ಧ್ವಜವನ್ನೇ ಹೋಲುತ್ತದೆ ಅಲ್ಲವೇ!

(ಇಷ್ಟಾದ ಮೇಲೆ.. ಅಂಚೆ ಡಬ್ಬದ ಬಣ್ಣ ಕೇಸರಿ, ಗಿಡ ಬಣ್ಣ ಹಸಿರು, ಗೋಡೆಯ ಬಣ್ಣ ಬಿಳಿ, ನೀಲಿ ಬಣ್ಣವಿದೆ.. ಇದೆಲ್ಲ ನೋಡಿದಾಗ ೧೯೪೭ ಇಂದ ನಮಗೆ ಗೊತ್ತಿರೋದು ಈ ಬಣ್ಣಗಳು ನಮ್ಮ ಧ್ವಜದ ಸಂಕೇತ.. )

ಕಾನೂನು ಬಲ್ಲವರು..
ಕಾನೂನಿನ ಸಲಹೆಗಾರರು
ಸುಮ್ಮನೆ ಕುಳಿತಿಹರೆ?
ಇಲ್ಲಾ ಇಲ್ಲಾ .. !

(ಖಂಡಿತ ಇಲ್ಲ ಇಲ್ಲ)

ಶಿಥಿಲವಾದದನ್ನು ಬಿಗಿ  ಮಾಡುತ್ತಿದ್ದಾರೆ
ನಮ್ಮ ಧ್ವಜದ ಮತ್ತೆ ಹಾರಾಡಲು ಸಿದ್ಧವಾಗುತ್ತಿದೆ
ನಮ್ಮ ದೇಶದ ಪ್ರಗತಿಯ ಪಥದಿ ಸಾಗುತ್ತಿದೆ
ಎಂಬ ಭಾವವನ್ನು ಬಿತ್ತರ ಮಾಡುತ್ತಿದ್ದಾರೆ
(Present condition ಗಮನಿಸಿದಾಗ ಬೆಳವಣಿಗೆಯ ಹಾದಿಯಲ್ಲಿದೆ.. ಇದು political agenda ಅಲ್ಲ.. ನಮ್ಮ ದೇಶ ಸಾಗುತ್ತಿರುವ ಹಾದಿ ಎಂದು ಹೇಳುತ್ತೇನೆ)

ಕಾನೂನು ಬಲ್ಲವರು..
ಕಾನೂನಿನ ಸಲಹೆಗಾರರು
ಸುಮ್ಮನೆ ಕುಳಿತಿಲ್ಲ
ಸುಭದ್ರ ಭಾರತಕ್ಕೆ ಅಡಿಪಾಯ ಹಾಕುತ್ತಿದ್ದಾರೆ!!!

(ಖಂಡಿತ ಸುಮ್ಮನೆ ಕುಳಿತಿಲ್ಲ ಬದಲಿಗೆ ಇನ್ನಷ್ಟು ಭದ್ರ ಪಡಿಸುತ್ತಿದ್ದಾರೆ.. ಇದು ನನ್ನ ಕವಿತೆಯ ಆಶಯ..)

(ಪುಟ್ಟ ಚಪ್ಪಾಳೆಗಳು ಬಂದವು)

೩ಕೆ ತಂಡಕ್ಕೆ ಒಂದು ಸಲಾಂ !!!

ಕೊನೆಯ ಮಾತು.. ಈ ಚಿತ್ರವನ್ನು ನೋಡಿದಾಗ Law Associates board ನೋಡಿದಾಗ ಮನಸ್ಸಿಗೆ ಬಂದದ್ದು ..

೧) ಕಳೆದ ವರ್ಷ (೨೦೧೭) ನನಗೆ ಕಾನೂನಿನ ಮಾರ್ಗದರ್ಶನ ಬೇಕಿದ್ದಾಗ ಸಹಾಯ ಮಾಡಿದ ನನ್ನ ಹೈಸ್ಕೂಲ್ ಗೆಳೆಯ
     ​ಕೃಷ್ಣೋಜಿ‌ ರಾವ್, ವೃತ್ತಿಯಲ್ಲಿ ವಕೀಲ.
೨) ನನ್ನ ಅದ್ಭುತ ಗೆಳತಿ ನಿವೇದಿತಾ ಚಿರಂತನ್,  ಕಾನೂನು ಪದವೀಧರರು.
೩) ೩ಕೆ ತಂಡದ ಜೆವಿಎಂ ನಾಯ್ಡು, ಇವರು ನನ್ನ ಸ್ನೇಹಿತರು ಹಾಗೂ ವೃತ್ತಿಯಲ್ಲಿ ವಕೀಲರು..

ಈ ಮೂವರು ಅದ್ಭುತ ಗೆಳೆಯರಿಗೆ ನನ್ನ ಕವನವನ್ನು ಅರ್ಪಿಸುತ್ತಿದ್ದೇನೆ.. ಮತ್ತು ಈ ಅವಕಾಶ ನೀಡಿದ ೩ಕೆ ತಂಡಕ್ಕೆ ಒಂದು ಸಲಾಂ ಎಂದು ಹೇಳಿ ಮಾತು ಮುಗಿಸಿದೆ..!


ಮನದೊಳಗೆ ಇದ್ದ ಭಯ ಎಂಬ ಭೂತವನ್ನು ಅಟ್ಟಿ ಹೊರಹಾಕಿದ ಖುಷಿ ಮನದಲ್ಲಿ ಮೂಡಿತ್ತು.. !!!

ರಾತ್ರಿ ಮನೆಗೆ ಹೋದಾಗ.. ಒಂದು ಸುಂದರ ಭಾನುವಾರವನ್ನು ಭಾವನೆಗಳ ಕಣಜದಲ್ಲಿ ಹೊತ್ತು ಓಡಾಡಿದ ಸಾರ್ಥಕ ಭಾವ ಮೂಡಿತ್ತು.. !!!