Saturday, December 8, 2012

ಏನು ಮಾಡಲಿ ನಾನು ಏನು ಹೇಳಲಿ....ಬ್ಲಾಗಿಗರ ಜೊತೆಯಲ್ಲಿ ಕಳೆದ ಕೆಲವು ಕ್ಷಣ

ತ್ರಿ ಮೂರ್ತಿ ಚಿತ್ರದಲ್ಲಿ ಅಣ್ಣಾವ್ರು .."ಏನು ಮಾಡಲಿ ನಾನು ಏನು ಹೇಳಲಿ...".

ಹೀಗೆ ನನ್ನ ತಲೆಯಲ್ಲೂ ಸಿನಿಮಾ  ಓಡುತ್ತಿತ್ತು...ಬರೆಯಲೇ ಬೇಡವೇ...ಬರೆಯಲೇ ಬೇಡವೆ...

ಸರಿ ರಾತ್ರಿ ಸುಮಾರು ೧೦ ಘಂಟೆಗೆ ಜ್ಞಾನೋದಯವಾಯಿತು...ಒಂದು ಅಭೂತಪೂರ್ವ ದೃಶ್ಯ ಮನಪಟಲದಲ್ಲಿ ಕೂತು ಬಿಟ್ಟಿತು....ಆ ದೃಶ್ಯವನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿದು ಹೊರಗೆ ಬಂದು ಕಾರಿನಲ್ಲಿ ಕೂತಾಗ...ಹಾಡು ತೇಲಿ ಬರುತಿತ್ತು...
"ಜನುಮ ಜನುಮದ ಅನುಬಂಧ..."  ವಾರೆ ವಾಹ್ ಸಿಕ್ಕೆ ಬಿಟ್ಟಿತು ಒಂದು ಎಳೆ ಬರೆಯೋಕೆ..ಸರಿ ಮನದಲ್ಲಿದುದನ್ನು ಕೀಲಿ ಮನೆಗೆ ಇಳಿಸುವ ಹೊರತು ನಿದ್ದೆ ಬರುವುದಿಲ್ಲ ಎನಗೆ..ಸರಿ...ಶುರುವಾಯಿತು ಪರದೆ ಜಾರಿತು...ಸಿನಿಮಾ ಶುರುವಾಯಿತು...

ಹಿನ್ನೋಟ...

ಕುವೈತ್ ದೇಶದಲ್ಲಿ ನೆಲೆಸಿರುವ ಕರುನಾಡಿನ ಅಜಾದ್ ಸರ್..ಬೆಂಗಳೊರಿಗೆ ಭೇಟಿ ನೀಡಲು ಬಂದಿದ್ದರು...ಬರುವಾಗ...
ಪ ಪ ಪ ಪ ಅಂತ ಒಂದು ಕಹಳೆಯನ್ನೇ ಮಿತ್ರರ ವಾಲ್ ನಲ್ಲಿ ಊದಿಬಿಟ್ಟಿದ್ದರು..ಒಬ್ಬೊಬ್ಬರಾಗಿ ಬೆಂಗಳೂರಿನ ಇತಿಹಾಸ ಪ್ರಸಿದ್ದ ಕಹಳೆ ಬಂಡೆಯ ಹತ್ತಿರ ಇರುವ ಕಾಮತ ಬುಗಲ್ ರಾಕ್ ರೆಸ್ಟೋರಂಟ್ ಬಳಿ ಜಮಾಯಿಸಲು ಶುರುಮಾಡಿದ್ದರು...
ಬ್ಲಾಗಿಗರ ಗುಂಪು! (ಚಿತ್ರ ಕೃಪೆ - ಅಜಾದ್ ಸರ್ )

ಮೊದಲಿಗೆ "ನಿಮ್ಮೊಳಗೊಬ್ಬ ಬಾಲೂ" ಬ್ಲಾಗಿನ ಬಾಲೂ ಸರ್ , ದಾಖಲೆ ಮಾರಾಟಗೊಂಡ "ಅಮ್ಮ ಹೇಳಿದ ಎಂಟು ಸುಳ್ಳುಗಳು" ಪುಸ್ತಕ ಹಾಗು "ಹಾಡು ಹುಟ್ಟಿದ ಸಮಯ" ಹಾಗೂ ಇನ್ನು ಅನೇಕ ಪುಸ್ತಕಗಳ ಕತೃ ಮಣಿಕಾಂತ್ ಸರ್, ಸುಂದರ ನಗೆಯ ಸುಲತ ಹಾಗೂ ನಾನು ಕಾಯುತ್ತ ನಿಂತಿದ್ದೆವು. ಸಮಯ ಕಳೆಯಲೆಂದು ಕಲ್ಲಂಗಡಿ ರಸ ಕುಡಿಯುವ ಎಂದು ಚೀಟಿ ತೆಗೆದುಕೊಂಡೆವು.  ಸುಮಾರು ಅರ್ಧ ಘಂಟೆಯಾದರೂ ಪತ್ತೆ ಇಲ್ಲ...ಬಾಲೂ ಸರ್ ಏನ್ ಶ್ರೀಕಾಂತ್...ಇವರೇನು ತೋಟಕ್ಕೆ ಹೋಗಿದ್ದಾರ ಕಲ್ಲಂಗಡಿ ಬೆಳೆಯಲಿಕ್ಕೆ ಅಂದರು.....ಅಲ್ಲಿದ್ದ ಸುಂದರ (?) ತರುಣಿ ನಮ್ಮಿಬ್ಬರನ್ನೇ ನೋಡುತ್ತಾ ಕಡೆಗೆ ಬೇಜಾರಾಗಿ..ಪೋಸ್ಟ್ ಮಾರ್ಟಂ ಮಾಡುವ ರೀತಿ ಕಲ್ಲಂಗಡಿಯನ್ನ ಕೊಚ್ಚಲು (ಹಃ ಹಃ ಆಕೆ ಹೆಚ್ಚುತ್ತಾ ಇದ್ದದ್ದು ಹಾಗೆ ಇತ್ತು)..ಅಷ್ಟರಲ್ಲಿ ಆಕೆಯನ್ನು ರಕ್ಷಿಸಲು ಇನ್ನೊಬ್ಬ ಮಹನೀಯ ಬಂದು ಚಕ ಚಕಾ ಅಂತ ಜ್ಯೂಸು ಸಿದ್ಧ ಮಾಡಿಕೊಟ್ಟ....ಇನ್ನೇನು ಕುಡಿಯಬೇಕು ಅಷ್ಟರಲ್ಲಿ ಕೃಷ್ಣ-ಅರ್ಜುನರಂತೆ "ಇಟ್ಟಿಗೆ ಸಿಮೆಂಟ್ "ಬ್ಲಾಗಿನ ಪ್ರಕಾಶಣ್ಣ ಮತ್ತು "ಜಲನಯನ "ಮೇಡಂ" ಖ್ಯಾತಿಯ ಅಜಾದ್ ಸರ್ ಒಳಗೆ ಬಂದರು...ಅವರ ಹಿಂದೆಯೇ "ಛಾಯ ಕನ್ನಡಿಯ" ಪ್ರತಿಭೆ ಶಿವೂ ಸರ್ ಬಂದರು...ಸರಿ ಎಲ್ಲರೂ ಹಂಚಿಕೊಂಡು ಜ್ಯೂಸು ಕುಡಿದೆವು.

ಬದರಿನಾಥ್ ನಮ್ಮ ಜೊತೆ ಸೇರಲು ಅರ್ಧ ದಾರಿಗೆ ಬಂದಿದ್ದಾಗ ಕಚೇರಿಯಿಂದ ಮತ್ತೆ ಕರೆ ಬಂದು ಅವರು ವಾಪಸ್ ತಮ್ಮ ಕೆಲಸಕ್ಕೆ ಹೊರತು ಹೋದ ವಿಷಯ ಕೇಳಿ ಮನಸಿಗೆ ಬೇಜಾರಾಯಿತು..ಹಾಗೆಯೇ ಸಂಬಂಧಿಕರ ಅಕಾಲಿಕ ಮರಣ ಶಕುಂತಲ ಅಯ್ಯರ್ ಅವರನ್ನು ಗೈರು ಹಾಜರಿ ಹಾಕಿಸಿತು...ಶಮ್ಮಿ ಸಂಜೀವ್ ಕೆಲಸದ ಒತ್ತಡದ ಕಾರಣ ಬರಲಾಗಲಿಲ್ಲ ಎಂದು ತಿಳಿಸಿದರು.

ಅಜಾದ್ ಸರ್ ನಡೀರಿ ಮೇಲೆ ಹೋಗೋಣ ಅಂದರು...ಸುಲತ ಕಿಸಕ್ಕನೆ ನಕ್ಕು ಇಷ್ಟು ಬೇಗನಾ ..ಎಷ್ಟೋ ಕನಸುಗಳು ಬಾಕಿ ಇವೆ..ಎಂದರು...ಎಲ್ಲರು ಗೊಳ್ ಎಂದು ನಕ್ಕು..ಎರಡನೇ ಮಹಡಿಗೆ ಬಂದೆವು...

ಅಲ್ಲಿಗೆ "ಬಿಳಿಮುಗಿಲು" ಬ್ಲಾಗಿನ ರೂಪ ಸತೀಶ್, "ವಿಧ್ಯಾಇಲಾಖೆಯ" ಸುಮಾ ಮೇಡಂ, ಜ್ಯೋತಿ, "ಸ್ವಂತ ಪತ್ರಿಕೆ" ನಡೆಸುತ್ತಿರುವ ಗುರುನಾಥ್ ಬೋರಗಿ, "ಪೆನ್ನು ಪೇಪರ್" ಬ್ಲಾಗಿನ ನಾಗರಾಜ್ ಮತ್ತು ಅನಿಲ್ ಸೇರಿಕೊಂಡರು. ಒಂದು ಬಳಗವೇ ಆಯಿತು. ಎಲ್ಲರೂ ಸಂತಸ ಭರಿತರಾಗಿ ಒಂದು ಎರಡು ಬಾಳೆಲೆ ಹರಡು ಪದ್ಯವನ್ನು ನೆನೆಯುತ್ತ ಹಾಕಿದ್ದನ್ನು ಸರಿಯಾಗಿ ಬಾರಿಸಿದೆವು.  ಊಟದ ಮಧ್ಯೆ...ರಾಜಕೀಯ,  ಕಾವೇರಿ, ಬ್ಲಾಗ್ಗಳ ದುಸ್ಥಿತಿ, ನಗೆ ಚಟಾಕಿಗಳು, ಇದರ ಮಧ್ಯೆ ಛಾಯಾ ಚಿತ್ರಣ ಎಲ್ಲವು ನಡೆದಿತ್ತು...

ಇಡಿ ತಂಡದ ಒಂದು ಚಿತ್ರ ತೆಗೆದುಕೊಂಡು ಹೊರಡುವ ಅನ್ನುವಷ್ಟರಲ್ಲಿ ಮೈಸೂರಿನಿಂದ ಸತೀಶ್ ಕನ್ನಡಿಗ ಅವರು ಬಂದದ್ದು ಎಲ್ಲರಿಗೂ ಸಂತಸ ತಂದಿತು..ಅವರು ಊಟ ಮಾಡಿ ಎಲ್ಲರು ತಮ್ಮ ತಮ್ಮ ಮನೆ,  ಆಫೀಸ್ ಅಥವಾ ಬೇರೆ  ಕೆಲಸಗಳಿಗಾಗಿ ಹೊರಟರು...ಶಿವೂ ಸರ್ ತಮ್ಮ ಪ್ರಶಸ್ತಿ ವಿಜೇತ ಪುಸ್ತಕ "ವೆಂಡರ್ ಕಣ್ಣು" ಕೊಟ್ಟು ಈ ದಿನದ ಗೆಳೆಯರ ಭೇಟಿಯನ್ನು ಹಸಿರಾಗಿಸಿದರು..

ನಾನು ಸೀದಾ ಮನೆಗೆ ಬಂದು ಅಣ್ಣಾವ್ರು ಹೇಳಿದ ಹಾಡನ್ನೇ ಗುನುಗುನಿಸಿ ಕಡೆಗೆ ಏನು ಮಾಡುವುದು ಬೇಡ ಎಂದು...ಸುಮ್ಮನಾದೆ..

ಸಂಜೆ ಸುಮಾರು ಏಳುವರೆ ಘಂಟೆಗೆ ಪ್ರಕಾಶಣ್ಣ ಕರೆ ಮಾಡಿ ಬನ್ನಿ ಮನೆಗೆ ಅಂದರು. ಅವರ ಆಹ್ವಾನವನ್ನು ತಿರಸ್ಕರಿಸುವ ಮನಸಾಗಲಿಲ್ಲ...ಮಡದಿ, ಹಾಗು ನನ್ನ ಮುದ್ದಿನ ಸ್ನೇಹಿತೆ (ನನ್ನ ಮಗಳು) ತಮ್ಮ ದಂತ ಪಂಕ್ತಿಗಳನ್ನ ತೋರಿಸಿದರು. ಪರಿಣಾಮ ಸುಮಾರು ಒಂದು ತಾಸಿನ ನಂತರ ನಡೆದಾಡುವ ದೇವರು ಪ್ರಕಾಶ ಹೆಗಡೆಯವರ ತಾಯಿಯ ರೂಪದಲ್ಲಿ ಕಾಣಿಸಿದರು. ಆ ಮಾತೃ ಸ್ವರೂಪವನ್ನು ನೋಡಿ ಮನಸಿಗೆ ಆಹ್ಲಾದಕರ ಅನುಭವವಾಯಿತು. ಸುಮಾರು ಒಂದು ಘಂಟೆ ಅದು ಇದು ಅಂತ ಲೋಕಾಭಿರಾಮವಾಗಿ ಮಾತಾಡುತ್ತ ಆಶಾ ಅತ್ತಿಗೆ ಕೊಟ್ಟ ಉಪ್ಪಿಟ್ಟು, ಕಾಫಿ ಕುಡಿದು, ಪ್ರಕಾಶಣ್ಣ ಆಶೀರ್ವಾದ ಮಾಡಿ ಕೊಟ್ಟ ನನ್ನ ಮೆಚ್ಚಿನ ಲೇಖನ ಪೂರ್ಣ ಚಂದ್ರ ತೇಜಸ್ವಿ ಅವರ ಪುಸ್ತಕ, ಅಮ್ಮನ ಆಶೀರ್ವಾದ, ಹಾಗೂ ಅಮ್ಮ ಕಸೂತಿ ಮಾಡಿ ನಮಗಾಗಿ ಕೊಟ್ಟ ಸುಂದರ ಹಾಸು ತೆಗೆದುಕೊಂಡು ಮನೆಗೆ ತಲುಪಿದಾಗ  ಪ್ರಪಂಚವನ್ನೇ ಗೆದ್ದ ಸಂಭ್ರಮ..

ಮನೆ ಹತ್ತಿರ ಕಾರು ನಿಂತಾರ..ರೇಡಿಯೋದಲ್ಲಿ ಯಾವ ಜನ್ಮದ ಮೈತ್ರಿ ಈ ಜನ್ಮದಲ್ಲಿ ಬಂದು ನಮ್ಮೆಲರನ್ನು ಮತ್ತೆ ಬಂಧಿಸಿಹುದೋ ಕಾಣೆ......

ಇದಲ್ಲವೇ ಭಾಗ್ಯ...ಸುಂದರ ದಿನ ಕಳೆಯಲು ಅನುವು ಮಾಡಿಕೊಟ್ಟ ಎಲ್ಲ ಬ್ಲಾಗ್ ಪ್ರಪಂಚದ ಮಿತ್ರರಿಗೆ ಈ ಲೇಖನ ಅರ್ಪಿತ..!!!