Sunday, August 15, 2021

ಪ್ಯಾರಡೈಸ್ ನಲ್ಲಿ ಸ್ವಾತಂತ್ರ್ಯ

 ಕಾಲಚಕ್ರ ಉರುಳಿದ ಹಾಗೆ ಬದಲಾವಣೆ ಅರಿವಿಲ್ಲದೆ ನಮ್ಮೊಳಗೇ ಇಳಿಯುತ್ತದೆ.. 

ಕಳೆದ ವರ್ಷ ಈ ಸ್ವರ್ಗಕ್ಕೆ ಆಗ ತಾನೇ ಕಾಲಿಟ್ಟಿದ್ದೆ.. ಗೃಹಪ್ರವೇಶವಾದ ಸಂಭ್ರಮ ಇನ್ನೂ ಮನದಲ್ಲಿ ಸ್ಟ್ರಾಂಗ್ ಕಾಫೀ ನಾಲಿಗೆಯ ಮೇಲೆ ರುಚಿಯಿದ್ದಂತೆ ಸ್ಟ್ರಾಂಗ್ ಆಗಿತ್ತು.. 

ಕೆಲವರ ಪರಿಚಯ ಮಾತ್ರವಿತ್ತು.. ಹಾಗಾಗಿ ಸುಮ್ಮನೆ ನನ್ನ ಮೂರನೇ ಕಣ್ಣು ಹಿಡಿದು ಮನಸ್ಸಿಗೆ ಇಷ್ಟ ಬಂದಂತ ಚೌಕಟ್ಟುಗಳನ್ನು ಜೋಡಿಸುತ್ತಿದ್ದೆ.. 

ಒಂದು ವರ್ಷ ಕಳೆಯಿತು.. ಗೃಹಪ್ರವೇಶ ಸಂಭ್ರಮಕ್ಕೆ ಒಂದು ವರ್ಷದ ಸಂತಸ.. ಆಗ ನನ್ನ ಮನೆ ಸವಿತಾರ್ಥಕತೆ ನನ್ನ ಜೊತೆ ಮಾತಾಡಿತು.. 

"ಶ್ರೀ ಈ ಪಂಚಮುಖಿ ಸ್ವರ್ಗಕ್ಕೆ ಬಂದು ಒಂದು ವರ್ಷವಾಯಿತು... ನಿನಗನ್ನಿಸಿದ ಎರಡು ಮಾತು ಹೇಳು.. "

"ಒಂದು ಪುಟ್ಟ ಕತೆ ಹೇಳುವೆ.. ಕೇಳು"

"ಹಾ"

******

ಅದೊಂದು ಸುಂದರವಾದ ಊರು.. ಅಲ್ಲಿ ಒಂದು ಅಚ್ಚುಕಟ್ಟಾದ ಪುಟ್ಟ ಪುಟ್ಟ ಮನೆಗಳು.. ಎಲ್ಲರಲ್ಲೂ ಒಗ್ಗಟ್ಟಿತ್ತು.. ಹರಿಯುವ ಝರಿ.. ಹಸಿರು ಹುಲ್ಲಿನ ಹಾಸು.. ಹೂವುಗಳು ಬಿಡುವ ಗಿಡಗಳು.. ಮರಗಳು.. ಚಿಲಿಪಿಲಿಗುಟ್ಟುವ ಪಾರಿವಾಳಗಳು, ಹಕ್ಕಿಗಳು.. ಒಂದು ಸುಂದರ ಕೊಳ.. ಸ್ವರ್ಗ ಎನ್ನುವ ಮಾತಿಗೆ ಅನ್ವರ್ಥವಾಗಿತ್ತು.. 

ಶ್ರೀನಿವಾಸನ ಕೃಪೆಯಿಂದ.. ಸೂರ್ಯನ ಕಿರಣಗಳು.. ಮಯೂರ ನರ್ತನ ಮಾಡುತ್ತಾ.. ಸಮೀರವಾಗಿ.. ರಾಗ ತಾಳ ಪಲ್ಲವಿಗಳ ಮಮತೆಯಲ್ಲಿ ಈ ಸ್ವರ್ಗದ ಪಂಚಮುಖಿ ವಂಶಿಗಳನ್ನು.. ಎಲ್ಲದಕ್ಕೂ ಸೈಯದ್ ಎನ್ನುವ ನಿಮ್ಮೆಲ್ಲರಲ್ಲಿ ನನ್ನ ರಾ"ಜೀವ" ಎನ್ನುತ್ತಾ  ಕೋಮಲ ಲತೆಗಳ ಜೊತೆಯಲ್ಲಿ ಐಸಿರಿ ಶ್ರೀಕಾರವಾಗಿತ್ತು..

ಇಂತಹ ಸ್ವರ್ಗಕ್ಕೆ ಜಗತ್ತನ್ನು ಕಾಡಿಸುತ್ತಿದ್ದ ಕಣ್ಣಿಗೆ ಕಾಣದ ಒಂದು ಪುಟ್ಟ ಜೀವಿ  ತೊಂದರೆ ಕೊಡಲು ಬಂದಾಗ.. ಆ ಜೀವಿಗೆ ಅಂತಿಮ ಹಾದಿ ತೋರಿಸುವ ಪದಕಿ ಜೋಡಿ ಬಂದು..ದೇವೆಂದ್ರ ಇಳೆಗೆ ವರ್ಷಧಾರೆ ಸುರಿಸಿ ಭುವಿಯನ್ನು ಕಾಪಾಡುವಂತೆ.. ಕಾಲ ಕಾಲಕ್ಕೆ ಸುರಕ್ಷತಾ ಕೋಟೆಯನ್ನು ಕಟ್ಟಿದರು.. 

ಇಂತಹ ಒಂದು ಸುಂದರ ನಾಕದಲ್ಲಿ ಇಂದು ಎಪ್ಪತ್ತೈದನೇ ವರ್ಷದ ಸಂತಸವನ್ನು ಬಿತ್ತರಿಸಿಕೊಂಡಿದ್ದು ಹೀಗೆ.. 

ಹೆಣ್ಣು ಮಕ್ಕಳು ಆರಂಭ ಕೊಟ್ಟರೆ ಸಾಕು ಎಲ್ಲಾ ಕಾರ್ಯಕ್ರಮಗಳು ಸುಗಮವೇ.. ರಂಗೋಲಿ ನೆಲವನ್ನು ಅಲಂಕರಿಸಿತ್ತು.. ನಮ್ಮ ದೇಶದ ಹೆಮ್ಮೆ ಹೂಗಳ ಪಕಳೆಗಳನ್ನು ಉಡಿಯಲ್ಲಿ ಇಟ್ಟುಕೊಂಡು ಹರಸಲು ಸಿದ್ಧವಾಗಿತ್ತು... ಅಧ್ಯಕ್ಷರಾದ ಶ್ರೀನಿವಾಸ್ ಧ್ವಜರೋಹಣ ಮಾಡಿದ ತಕ್ಷಣ.. ಹೂವಿನ ಮಂದಹಾಸ ಎಲ್ಲೆಡೆಯೂ ಪಸರಿಸಿತು.. 

ಸಮೀರ್ ಅವರಿಂದ ಶುರುವಾದ ರಾಷ್ಟ್ರಗೀತೆ ಎಲ್ಲರ ಕಂಠದಲ್ಲಿ ಇನ್ನಷ್ಟು ಜೋರಾಗಿ, ರಾಷ್ಟ್ರ ಭಕ್ತಿದ್ಯೋತಕವಾಗಿ ಮೊಳಗಿತು.. ವಂದೇಮಾತರಂ, ಜೈ ಹಿಂದ್, ಭಾರತ್ ಮಾತಾ ಕಿ ಜೈ.. ಈ ನುಡಿಗಳು, ಘೋಷಗಳು ಎಲ್ಲೆಡೆಯೂ ಪ್ರತಿಧ್ವನಿಸಿತು.. 

ಸಮೀರ್ ಅವರ ಚುಟುಕಾದ ದೇಶಭಕ್ತಿ ಗೀತೆ  ಸೊಗಸಾಗಿತ್ತು.. ಪುಟಾಣಿಗಳು ಕರತಾಡನ ಮಾಡಿದವು.. ಹಿರಿಯರು ನಲಿದರು.. ಹೆಂಗಳೆಯರು ಈ ಸಂಭ್ರಮದಲ್ಲಿ ಭಾಗಿಯಾಗಿ ತಮ್ಮ ನೆರೆಹೊರೆಯವರ ಜೊತೆಯಲ್ಲಿ ಸಂತಸ ಹಂಚಿಕೊಂಡರು.. 

ವೈದ್ಯರಾದ ದೇವೇಂದ್ರ ನಾಯಕ್ ಅವರ ಪುಟ್ಟ ಸ್ವಗತ ಮಾತುಗಳು.. ಶ್ರೀಮತಿ  ಪದಕಿ ಅವರ ಹಿತನುಡಿಗಳು.. ಈ ಕಾಣದ ಪುಟ್ಟ ಜೀವಿಗಳಿಂದ ಸುರಕ್ಷಿತವಾಗಿ ಇರಬೇಕು ಎನ್ನುವ ಸುರಕ್ಷತಾ ಮಾತುಗಳು ಇಷ್ಟವಾದವು.. 

ಅನೀರೀಕ್ಷಿತ ಎನ್ನುವಂತೆ ಹೌದು ಮೇಡಂ ನೀವೇ ನೀವೇ ಎನ್ನುತ್ತಾ ಸ್ವಾಗತಿಸಿಕೊಂಡು ವೈದ್ಯಕೀಯ ವೃತ್ತಿಯಲ್ಲಿರುವ ಸೀಮಾ ಅವರ ಕೃತಜ್ಞತಾ ಪೂರ್ವಕ ಮಾತುಗಳು ಈ ಕಾರ್ಯಕ್ರಮಕ್ಕೆ ನಾಂದಿ ಹಾಡಿದವು.. 

ಈ ಸ್ವರ್ಗದ ಅದ್ಭುತ ಗೆಳತಿಯರು ಪಲ್ಲವಿ ಮತ್ತು ಮಮತಾ ಅಲ್ಲಿ ನೆರೆದಿದ್ದವರಿಗೆಲ್ಲಾ ಸಿಹಿ ತಿನಿಸಾದ ಬೇಸನ್ ಲಾಡು ಹಂಚಿ ಸಂತಸ ಪಟ್ಟರು.. 

ಇದೊಂದು ಚುಟುಕು ಕಾರ್ಯಕ್ರಮವಾದರೂ..  ಪ್ರಮಾಣ ಕಡಿಮೆಯಿದ್ದರೂ ಈ ಕೊರೊನ ಮಹಾಮಾರಿಯಿಂದ ರಕ್ಷಿಸುವ  ಲಸಿಕೆಯಂತೆ.. ಪುಟ್ಟದಾದರೂ ಈ ಸ್ವರ್ಗದ ಜನತೆಯನ್ನು ಒಟ್ಟಾಗಿ ಸೇರಿಸುವ ಕಾರ್ಯಕ್ರಮವಾಗಿತ್ತು.. 

ಸ್ವಾತಂತ್ರ ಈ ಪದದ ಅರ್ಥ ಹಸಿದವರಿಗೆ ಊಟದ ಮಹತ್ವ ಗೊತ್ತಿರುವ ಹಾಗೆ.. ಅದನ್ನು ಕಳೆದುಕೊಂಡವರಿಗೆ ಮಾತ್ರ ಅರ್ಥವಾಗುತ್ತೆ ಎನ್ನುವಂತಹ ಮಾತುಗಳಿಂದ ಅಧ್ಯಕ್ಷ ಭಾಷಣದಲ್ಲಿ ಹೇಳಿದ ಶ್ರೀನಿವಾಸ್ ಅವರ ಮಾತುಗಳನ್ನು ಇನ್ನೊಮ್ಮೆ ಮೆಲುಕು ಹಾಕಬೇಕಾಗುತ್ತದೆ.. 

ಭಾರತ ಸಂಪದ್ಭರಿತ ನಾಡು.. ಇಲ್ಲಿಯ ವೈವಿಧ್ಯತೆಯೇ ವಿಶೇಷತೆ.. ಕನಕದಾಸರು ಹೇಳಿದ ಹಾಗೆ "ನಾ" ಹೋದರೆ ಹೋದೆನು .. ಇದ್ದರೇ ಇದ್ದೇನು.. ಅರ್ಥಾತ್ ನಾನು ಎನ್ನುವ ಪದವೇ ಈ ಸ್ವರ್ಗದಲ್ಲಿ ಕಾಣ ಬರುತ್ತಿಲ್ಲ ಬದಲಾಗಿ ನಾವು ನಾವು ನಾವು ಎನ್ನುವ ಪದವೇ ಪ್ರತಿಧ್ವನಿಸುತ್ತದೆ ಪ್ರತಿ ಮಾತಿನಲ್ಲಿ.. ಪ್ರತಿ ಕಾರ್ಯದಲ್ಲಿ.. 

ಜೈ ಭಾರತಾಂಭೆ ಎನ್ನುತ್ತಾ ಸ್ವತಂತ್ರ ದಿನಾಚರಣೆಗೆ ಒಂದು ಪುಟ್ಟ ಘಟನೆ ಹೇಳಿದೆ

*****

ಸವಿತಾರ್ಥಕತೆ:ನಿಜಕ್ಕೂ ಇದೊಂದು ಅದ್ಭುತ ತಾಣ.. ಈ ತಾಣ ಸದಾ ಹಸಿರಾಗಿರಲಿ.. ಹೆಸರಾಗಿರಲಿ.. ಎಲ್ಲರಿಗೂ ಮತ್ತೊಮ್ಮೆ ನನ್ನ ಕಡೆಯಿಂದ ಶುಭಾಶಯಗಳು ಶ್ರೀ.. 

ಶ್ರೀ: ಖಂಡಿತ ನಿನ್ನ ಶುಭಾಶಯಗಳನ್ನು ಎಲ್ಲರಿಗೂ ತಿಳಿಸುತ್ತೇನೆ ಮತ್ತು ಈ ಸುಂದರ ಕ್ಷಣಗಳು ಸೆರೆಯಾದದ್ದು ಹೀಗೆ..