Thursday, November 6, 2014

Life is a ಕೀಲಿ ಮಣೆ

ನಮ್ಮ ಜೀವನವೇ ಒಂದು ಕೀಲಿ ಮಣೆ.. ಹೇಗೆ ಅಂತೀರಾ.. ನಡೆಯಿರಿ ಒಂದು ಹೆಜ್ಜೆ ಹೋಗಿ ಬರೋಣ.. !

ಚಿತ್ರ ಕೃಪೆ ಅಂತರ್ಜಾಲ 

ಮೊದಲನೇ ಸಾಲು function ಕೀಲಿಗಳು... ದೇವರಿದ್ದ ಹಾಗೆ.. ಪ್ರತಿ ಕೀಲಿಗಳು ಅದರದೇ ಜವಾಬ್ಧಾರಿಗಳನ್ನು ಹೊತ್ತಿರುತ್ತವೆ 

ಅದರ  ಕೆಳಗಿನ ಸಾಲು ಸಂಖ್ಯೆಗಳು ಮತ್ತು ಚಿನ್ಹೆಗಳು .. ಮಾಡಿದ ಪಾಪ ಪುಣ್ಯಗಳಿಗೆ ತಕ್ಕ ಹಾಗೆ shift ಒತ್ತಿದರೆ ಪುಣ್ಯದ ಚಿನ್ಹೆಗಳು, ಹಾಗೆಯೇ ಒತ್ತಿದರೆ ಅಂಕೆಗೆ ಒಳಪಡಬೇಕಾದ ಸಂಖ್ಯೆಗಳು

ಇನ್ನು ಜೀವನವನ್ನು ಹೊಂದಿಸಿಕೊಂಡು ಹೋಗಬೇಕು ಎಂಬ ನೀತಿ ಸಾರುವ ಅಕ್ಷರಗಳು ಹೇಗೋ ಹೇಗೋ ಒತ್ತಿಕೊಂಡು ಒತ್ತಿಕೊಂಡು ಕೂತಿರುತ್ತವೆ. ನಮಗೆ ಬೇಕಾದ ಅಕ್ಷರಗಳನ್ನು ಒತ್ತಿ ಒತ್ತಿ ಒಂದು ಸುಂದರ ಪದಗಳನ್ನು ಮಾಡಿಕೊಂಡ ಹಾಗೆ ಸರಿಯಾದ ಭಾವನೆಯನ್ನು, ಭಾವವನ್ನು  ಜೋಡಿಸಿಕೊಂಡು ಜೀವನದ ಪದಗಳನ್ನು ಹುಡುಕಿಕೊಳ್ಳಬೇಕು

ಅದರ ಸುತ್ತ ಮುತ್ತಾ ಕ್ಯಾಪ್ಸ್ ಲಾಕ್ ಜೀವನವನ್ನು ದೊಡ್ಡದಾಗಿ ನೋಡಬೇಕು ಎಂದು ತೋರಿದರೆ, ಟ್ಯಾಬ್ ಗಳು ಸಂಕಷ್ಟಗಳು ಬಂದಾಗ ಒಂದು ಕಡೆಯಿಂದ ಇನ್ನೊಂದು ಕಡೆ ನೆಗೆ ಎಂದು ತೋರಿಸುತ್ತೆ. ಶಿಫ್ಟ್ ಕೀಲಿಗಳು ಒತ್ತಡ ಬಂದಾಗ ಸ್ವಲ್ಪ ಹೊತ್ತು ಪಕ್ಕಕ್ಕೆ ಸರಿಸಿ ಮುಂದೆ ಸಾಗು ಎಂದರೆ, ಜೀವನದ ಪಥವನ್ನು ನಿಯಂತ್ರಿಸು ಎಂದು control ಕೀಲಿ ಹೇಳುತ್ತೆ. 

ಉಪಾಯಗಳು ಸರಿಯಾಗಿ ಬಾರದೆ.. ಮುಂದೇನು ಎಂದಾಗ.. ಇನ್ನೊಂದು ಬದಲಿ ಉಪಾಯ ಹುಡುಕು ಎನ್ನುವುದನ್ನು alt ಕೀಲಿ ಕೂಗಿಹೇಳುತ್ತೆ, ದುಃಖಗಳನ್ನು delete ಮಾಡು ಅಂತ ಹೇಳುತ್ತಾ ಕೆಲವೊಮ್ಮೆ ಹಿಂದೆ ಕಲಿತ ಪಾಠವನ್ನು ನೆನಪಿಸಿಕೋ ಎಂದು backspace ಕೀಲಿ ಸಾರುತ್ತೆ.  

ಆಶಾವಾದಿಯಾಗಿರು ಎಂದು pageup ಹೇಳುತ್ತೆ.. ಏನೇ ಸುಖ ಬಂದರೂ ಅಹಂ ಕೆಳಗಿರಲಿ ಎಂದು pagedown ಹೇಳುತ್ತೆ, 

ಮನೆಯೇ ಮೊದಲು ಎಂದು home, ಸ್ನೇಹಿತರನ್ನು ಸೇರಿಸಿಕೊ ಎಂದು insert, ಕೆಟ್ಟ ಘಟನೆಗಳಿಗೆ ಮುಕ್ತಾಯ ಅಂತ end  ಹೇಳುತ್ತೆ, 

ಕೆಲವೊಮ್ಮೆ ತಲೆ ಕೆಟ್ಟ ಹುಳುವಾದರೆ... ಸ್ವಲ್ಪ ಹೊತ್ತು ಇದರಿಂದ ಹೊರಗೆ ಹೋಗು ಎಂದು esc ಕೀಲಿ ಹೇಳುತ್ತೆ. 

ಪ್ರತಿಯೊಂದಕ್ಕು, ಪ್ರತಿಯೊಬ್ಬರ ವಿಷಯದಲ್ಲೂ ಅಂತರ ಇಟ್ಟುಕೊಳ್ಳಬೇಕು ಎನ್ನುವ ಬೇಲಿಯನ್ನು spacebar ಹೇಳುತ್ತೆ. 

ಇನ್ನು ಜೀವನ ಬೆಳಗಲು, ಸುತ್ತ ಮುತ್ತ ನೋಡಲು ಎಲ್ಲಾ ದಿಕ್ಕುಗಳಲ್ಲೂ ತಿರುಗುವ ಕೀಲಿಗಳು (arrow). 

ಸುಂದರ ಜೀವನಕ್ಕೆ ರಹದಾರಿ ಎಂದು enter ಕೀಲಿ ಹೇಳಿದರೆ.. ಬೇಸರವಾದರೂ ಎಂದಿಗೂ ctrl alt del ಒತ್ತಬೇಡ ಎಂದು restart ಕೀಲಿ ಹೇಳುತ್ತೆ.. 

ಜೀವನವೇ ಒಂದು ನಾಟ್ಯ ರಂಗ.. ನಾವೆಲ್ಲಾ ಕುಣಿಯಲೇ ಬೇಕು.. ಯಾಕೆಂದರೆ mouse ಹಿಡಿದು ಓಡಾಡಿಸುವ ಸೂತ್ರಧಾರ pointer ಮೂಲಕ ನಮ್ಮನ್ನು ನಿಯಂತ್ರಿಸುತ್ತಿರುತ್ತಾನೆ. 

ಜೀವನ laptop ಅಲ್ಲಾ.. ಜೀವನ desktop ಕೂಡ ಅಲ್ಲಾ.. ಜೀವನ ಒಂದು code ಇದ್ದ ಹಾಗೆ ಅದನ್ನು decode ಮಾಡಲು program ಭಾಷೆ ಬೇಕು.. ಅದುವೇ ನಗುವಿನ ಭಾಷೆ.. ಸ್ನೇಹದ ಭಾಷೆ.. ಅಲ್ಲವೇ 

ಜೀವನದ ಸುಂದರ ಕ್ಷಣಗಳು ನಮ್ಮನ್ನು ಉಲ್ಲಸಿತವಾಗಿ ಇಡಲು ಪಣ ತೊಟ್ಟಾಗ.. ಬೇಡವಾದ ಚಿಂತೆಗಳನ್ನು, ಕಾಡುವ ಬೇಡದ ವ್ಯಸನಗಳನ್ನು ಹಿಡಿದು ಎಳೆದು ಎಳೆದು ತಂದು ಬಾಡುವ ಹೂವಾಗಿ ಏಕೆ ಮಾಡಿಕೊಳ್ಳಬೇಕು... !!!!

Sunday, September 28, 2014

ದನಿ.. ಧ್ವನಿ... ಮಾರ್ಧನಿ.. "ಜನದನಿ"

ಒಂದೂರಿನಲ್ಲಿ   ಬಹಳ ವರ್ಷಗಳ ಕಾಲ ಮಳೆ ಬಂದಿರಲಿಲ್ಲ.. ಊರಿನ ಮುಖಂಡರೆಲ್ಲ ಸೇರಿ ಸಭೆ ನಡೆಸಿ.. ಊರಿನ ಕೆಲ ಹಿರಿಯ ಧಾರ್ಮಿಕ ಅನುಯಾಯಿಗಳ ಸಲಹೆಯಂತೆ.. ಬೃಹದಾಕಾರದ ಗ್ರಾಮ ದೇವರಿಗೆ ಕ್ಷೀರಾಭಿಷೇಕ ನೆರೆವೆರಿಸಲು ತೀರ್ಮಾನಿಸಿದರು.

ಅಪಾರವಾದ ಕ್ಷೀರ ಬೇಕಾಗಿದ್ದರಿಂದ.. ಆಗಲೇ ನೀರಿಲ್ಲದೆ ಬಸವಳಿದಿದ್ದ ಗ್ರಾಮಸ್ಥರಿಗೆ ಆ ಮಟ್ಟದ ಹಾಲನ್ನು ಹೊಂದಿಸಲು ಕಷ್ಟ ಎಂದು ಅರಿತ ಮುಖಂಡರು.. ಪ್ರತಿ ಮನೆಯಿಂದ ಒಂದು ಲೋಟ ಹಾಲು ಕೊಡಬೇಕು ಮತ್ತು ಅದನ್ನು ಗ್ರಾಮದ ಮಧ್ಯೆದಲ್ಲಿ ಇಟ್ಟಿರುವ ಒಂದು ದೊಡ್ಡ ಕೊಳಗಕ್ಕೆ ಹಾಕಬೇಕು ಎಂದು ಆದೇಶಿಸಿದರು... 

ಮರುದಿನ ಬೆಳಿಗ್ಗೆಯಿಂದ ಶುರುವಾಯಿತು.. ಸರತಿಯಲ್ಲಿ ಬಂದು ಪ್ರತಿ ಮನೆಯವರು ಆ ಕೊಳಗಕ್ಕೆ ತಂದು ಹಾಕುತ್ತಾ ಬಂದರು.  ಸಂಜೆಯ ಹೊತ್ತಿಗೆ ಆ ಊರಿನ ಕಡೆಯ ಮನೆಯವನು.. ತುಂಬಾ ಹೊತ್ತು ಯೋಚಿಸಿ.. ಇಷ್ಟು ಹೊತ್ತಿಗೆ ಗ್ರಾಮದ ಎಲ್ಲರೂ ಹಾಕಿ ಕೊಳಗವನ್ನು ತುಂಬಿದ್ದಾರೆ.. ನಾನೊಬ್ಬ ಹಾಲು ಹಾಕದಿದ್ದರೆ ಏನು ಆಗುವುದಿಲ್ಲ.. ಆದರೆ ಹಾಕದೆ ಹೋದರೆ ಮುಖಂಡರ ಆಗ್ರಹಕ್ಕೆ  ತುತ್ತಾಗಬೇಕಾಗುತ್ತದೆ ಎಂದು ಹೆದರಿ.. ಒಂದು ಲೋಟ ಹಾಲಿನ ಬದಲಾಗಿ ನೀರನ್ನು ಹಾಕಿ ಹೋದನು.. 

ಪೂಜೆ ಶುರುವಾಯಿತು.. ಅಭಿಷೇಕದ ಸಮಯವಾಯಿತು.. ಆ ಕೊಳಗವನ್ನು ಕಷ್ಟಪಟ್ಟು ದೇವಾಲಯದ ಬಳಿ ತಂದು.. ಅಭಿಷೇಕಕ್ಕೆ ಸಿದ್ಧತೆ ಮಾಡಿಕೊಂಡರು.. ನೋಡಿದರೆ ಇಡಿ ಕೊಳಗದಲ್ಲಿ ಬರಿ ನೀರೆ ನೀರು.. 

ಗಾಬರಿಯಾದ ಮುಖಂಡರು ಎಲ್ಲರಿಗೂ ಜೋರಾದ ದನಿಯಲ್ಲಿ ಕೇಳಿದಾಗ.. ಒಬ್ಬೊಬ್ಬರು ನಾನೊಬ್ಬ ನೀರು ಹಾಕಿದರೆ ಯಾರಿಗೂ ತಿಳಿಯುವುದಿಲ್ಲ ಎಂದು ಯೋಚಿಸಿ ಎಲ್ಲರೂ ನೀರೆ ಹಾಕಿರುತ್ತಾರೆ,.. 

ಹೀಗೆ ನಾನೊಬ್ಬ ಏನು ಮಾಡಲು ಸಾಧ್ಯ ಎಂದು ಸುಮ್ಮನೆ ಕೂತರೆ ಯಾವ ಸಮಸ್ಯೆಯೂ ಬಗೆ ಹರಿಯುವುದಿಲ್ಲ.. ನಾ ಎಂಟನೆ ತರಗತಿಯಲ್ಲಿ ಓದಿದ ಪಾಠ "A Spark Negelected Burnt The House" ನೆನಪಿಗೆ ಬಂತು. 

ಒಂದು ಚಿಕ್ಕ ಆಂಧೋಲನ ಸಣ್ಣ ಕಿಡಿಯಂತೆ ಮಿನುಗಿ ಬೃಹತ್ ಜ್ಯೋತಿಯಾಗಿ ಬೆಳೆಯಬೇಕು.. ಬೆಳೆಯುತ್ತದೆ.. 

ಸಮಾಜದಲ್ಲಿ ನಡೆಯುತ್ತಿರುವ ಶೋಷಣೆ, ಲೈಂಗಿಕ ದೌರ್ಜನ್ಯ.. ತಾತ್ಸಾರದ ಪ್ರತಿಕ್ರಿಯೆ.. ಅಯ್ಯೋ ಹೌದಾ.. ನಮ್ಮ ಮನೆಯಲ್ಲಿ ಹಾಗಾಗುವುದು ಬೇಡಪ್ಪ ಎಂದು ಸುಮ್ಮನೆ ಬೇಡಿಕೊಳ್ಳದೆ.. ಅದನ್ನು ತೊಡೆದು ಹಾಕಲು ಸಾಧ್ಯವಾಗದಿದ್ದರೂ ಆ ವಿಚಾರಗಳ ಬಗ್ಗೆ ಜನಗಳಲ್ಲಿ ಪ್ರಜ್ಞೆ ಮೂಡಿಸಿ.. ಹೌದು ಇದರ ಬಗ್ಗೆ ತಂದೆ ತಾಯಿಗಳು ಗಮನ ಹರಿಸಬೇಕು ಎನ್ನುವ ಮಟ್ಟಕ್ಕೆ ಕರೆತರುವುದು ನಿಜಕ್ಕೂ ಶ್ಲಾಘನೀಯ ಕ್ರಮ. 

ನಮ್ಮ ಸಮಾಜ ಆಮೆಯಂತೆ ನಿಧಾನವಾಗಿ ಪ್ರಗತಿ ಪರ ಹೆಜ್ಜೆ ಹಾಕುತ್ತಿದೆ ನಿಜಾ .. ಚಂದ್ರ ಮಂಡಲಕ್ಕೆ ಕೈ ಚಾಚಿಯಾಯಿತು, ಮಂಗಳ ಗ್ರಹದಲ್ಲೂ ಹೆಜ್ಜೆ ಇಡಲು ಅನುವಾಗುತ್ತಿರುವ ಸಮಯ ಇದು.. 

ವೇಗ ಮುಖ್ಯವಲ್ಲ ಧೃಡತೆ.. ಆಮೆಯ ಚಿಪ್ಪಿನಂತೆ 

ಆದರೂ ಈ ದೌರ್ಜನ್ಯ, ಶೋಷಣೆ,  ಹಿಂಡಿ ಹಿಪ್ಪೆ ಮಾಡಲು ನಿಂತ ಪೆಡಂಭೂತದಂತ ಸಮಸ್ಯೆಗಳು ಅಷ್ಟಪದಿಯ ಹಾಗೆ ಈ ಸಮಾಜವನ್ನು ತನ್ನ ಕಬಂಧ ಬಾಹುಗಳಿಂದ ಹಿಡಿದಿಟ್ಟುಕೊಳ್ಳುತ್ತಿದೆ. 

ಅಷ್ಟಪದಿ ನಗುತ್ತಿದ್ದರೂ ಅದರ ಬಾಹುಗಳ ಒಳಗೆ ಸಿಕ್ಕಾಗ ನರಳುವುದೇ ದಾರಿ 


ಮನೆಯಲ್ಲಿ ಸೊಳ್ಳೆ ಹೆಚ್ಚಾದರೆ.. ಸೊಳ್ಳೆ ಓಡಿಸುವ ಯಂತ್ರವನ್ನು ಹಾಕಿಕೊಳ್ಳುತ್ತೇವೆ.. 

ಸ್ವಚ್ಛ ಸಮಾಜಕ್ಕಾಗಿ ಬೇಕೇ ಬೇಕು ಸೊಳ್ಳೆಗಳನ್ನು ಓಡಿಸುವ ಯಂತ್ರ 

ಹಾಗೆಯೇ ಈ ಸಮಾಜಕ್ಕೆ ಸೊಳ್ಳೆ ಓಡಿಸುವ ಯಂತ್ರ ಬೇಕು.. ಮತ್ತು ಬೇಕೇ ಬೇಕು.. ಇಂಥಹ ಸಮಯದಲ್ಲಿ ಮೂಡಿ ಬಂದಿರುವ ದನಿಯೇ ಈ "ಜನದನಿ"

ಜನದನಿ.. ದನಿಯ ಜೊತೆಯಲ್ಲಿ ಜನಗಳು !!!


ಆಗಲೇ ಚಿಕ್ಕ ಚಿಕ್ಕ ಹೆಜ್ಜೆ ಇಡುತ್ತಾ ಅನೇಕ ತಮ್ಮ ಸೀಮಿತ ಚೌಕಟ್ಟಿನಲ್ಲಿ ಈ ವಿಷಯಗಳ ಬಗ್ಗೆ ನಾಗರೀಕರಲ್ಲಿ ಪ್ರಜ್ಞೆ ಮೂಡಿಸುವ ಕಾರ್ಯ ನಡೆಸುತ್ತಾ ಬಂದಿರುವ ಶ್ರೀಮತಿ ಜಯಲಕ್ಷ್ಮಿ ಪಾಟೀಲ್ ಮೇಡಂ ಅವರು ಇದೆ ಮನಸ್ಸು ಹೃದಯ ಹೊಂದಿರುವ ತಮ್ಮ ಗೆಳೆಯ ಗೆಳತಿಯರ ಜೊತೆಗೂಡಿ ನಿಲ್ಲಿಸಿರುವ ಒಂದು ತಾಣ "ಜನದನಿ"  

ಹೀಗೆ ಅನುಸರಿಸಿದರೆ ಚನ್ನಾ 


ಈ ವಿಚಾರವನ್ನು ನಾಗರೀಕರ ಗಮನಕ್ಕೆ ತರುವ ಒಂದು ಸುಂದರ ಯತ್ನವಾಗಿ ಮೂಡಿ ಬರಲು ಇನ್ನೊಂದು ದಿಟ್ಟ ಹೆಜ್ಜೆ ಇಟ್ಟದ್ದು ಶನಿವಾರ ೨೭ನೆ ತಾರೀಕು ೨೦೧೪ ರಂದು.. ತಮ್ಮ ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜಮುಖಿಯಾಗಿ ಸಕ್ರಿಯರಾಗಿರುವ ಶ್ರೀಮತಿ ರೂಪ ಸತೀಶ್ ಅವರ "ಬ್ಲಾಸಂ" ಎಂಬ ನಾಗರಭಾವಿಯ ಶಾಲೆಯಲ್ಲಿ ಏರ್ಪಡಿಸಿದ್ದ ಒಂದು ಸಂವಾದಕ್ಕೆ ನಾನು ಹೋಗಿದ್ದೆ. 

ರೂಪು ರೇಷೆಗಳು ಸಿದ್ಧವಾಗುತ್ತಿದ್ದವು 

ದಿನ ಪತ್ರಿಕೆಗಳು, ದೃಶ್ಯ ಮಾಧ್ಯಮಗಳಲ್ಲಿ ಬರುವ ವೈಭವಿಕೃತ ಸಮೀಕ್ಷೆ, ಸಂವಾದ ಇವಕ್ಕಿಂತ ಈ ಸಂವಾದ ಹೆಚ್ಚು ವಿಚಾರವನ್ನು, ಗಮನಿಸಬೇಕಾದ ಅಂಶಗಳನ್ನು ಹೊರತಂದಿತು. ಸಂಕಟ ಬಂದಾಗ ವೆಂಕರಮಣ ಎನ್ನುವುದಕ್ಕಿಂತ ಸಂಕಟ ಬರಮಾಡಿಕೊಳ್ಳದೆ ವೆಂಕಟರಮಣ ನಮ್ಮ ರಕ್ಷಣೆಗೆ ನಿಲ್ಲಲಿ ಎನ್ನುವ ಆಶಯ ಹೊತ್ತ ಸಂವಾದ ಕಾರ್ಯಕ್ರಮ ಇದಾಗಿತ್ತು ಎಂದು ಹೇಳಲು ಇಷ್ಟ ಪಡುತ್ತೇನೆ. 

ಜೀವನ ಚಕ್ರ ಚಿತ್ರದಲ್ಲಿ ವಿಷ್ಣು ಹೇಳುತ್ತಾರೆ.. ಹುಡುಗಿ ಬೆಂಕಿನ ಕಡ್ಡಿ ಇದ್ದ ಹಾಗೆ.. ಹುಡುಗ ಬೆಂಕಿ ಪೊಟ್ಟಣ ಇದ್ದ ಹಾಗೆ.. ಬೆಂಕಿ ಹತ್ತಿಕೊಂಡಾಗ ಕಡ್ಡಿ ಉರಿಯುತ್ತದೆ.. ಹಾಳಾಗುತ್ತದೆ ಹೊರತು ಬೆಂಕಿ ಪೊಟ್ಟಣ  ಅಲ್ಲಾ.. ಪರುಷ ಪ್ರಧಾನ ಸಮಾಜವಾದರೂ 
ಸ್ತ್ರಿ, ಮಹಿಳೆ, ಬಾಲಿಕೆ, ಹುಡುಗಿ, ಹೆಂಗಸು ಹೀಗೆ ನಾನಾ ಪದಗಳಲ್ಲಿ ಹೊರಹೊಮ್ಮುವ ಸ್ತ್ರೀಲಿಂಗ ಪ್ರಭೇದವನ್ನು ರಕ್ಷಿಸುವ, ಕಾಪಾಡುವ, ಜತನ ಮಾಡುವ ಹೊಣೆಗಾರಿಕೆ ಪ್ರತಿಯೊಬ್ಬರದು, 

"ನ ಸ್ತ್ರೀ ಸ್ವಾತಂತ್ರಂ ಅರ್ಹತಿ" ಎನ್ನುವ ಮನು ಶಾಸ್ತ್ರದಲ್ಲಿ ಹೇಳಿದ್ದರೂ ಅದೇ ಶಾಸ್ತ್ರದಲ್ಲಿ "ಯತ್ರ ನಾರ್ಯಾಸ್ತು ಪೂಜ್ಯತೇ ರಮಂತೇ ತತ್ರ ದೇವತಾಃ " ಎಂದೂ ಇದೆ. 

ಜನ್ಮ ಕೊಡುವ ತಾಯಿ, ಮಮತೆ ತೋರುವ ಅಕ್ಕ ತಂಗಿ, ಪ್ರೀತಿ ತೋರುವ ವಂಶ ಬೆಳೆಸುವ ಮಡದಿ, ಮನೆ ಬೆಳಗುವ ಸೊಸೆ, ಮಗಳು ಎಲ್ಲವೂ ಸ್ತ್ರೀ ರೂಪದ ಅನೇಕ ವಿಧಗಳು.  

ಗಂಡು ಸಂತಾನವನ್ನು ನಾವು ಹೇಗೆ ಜತನ ಮಾಡುತ್ತೇವೆಯೋ ಹಾಗೆಯೇ ಜನುಮ ಕೊಡುವ, ಸಂತಾನ ಮುಂದೆ ಬೆಳೆಸುವ ಹೆಣ್ಣು ಮಗುವಿಗೂ ಅಷ್ಟೇ ರಕ್ಷಣೆ ಬೇಕು.  ಎರಡು ಪ್ರಭೇದಗಳು ನಮ್ಮ ಎರಡು ಕಣ್ಣುಗಳು ಇದ್ದಾ ಹಾಗೆ ಯಾವುದು ಹೆಚ್ಚಲ್ಲ ಯಾವುದು ಕಡಿಮೆಯಲ್ಲ.. ಒಂದು ಕಣ್ಣು ಇಲ್ಲದೆ ಹೋದರೆ ೯೦ ಡಿಗ್ರಿ ನೋಟ ಕಳೆದು ಕೊಳ್ಳುತ್ತೇವೆ.

ಇಬ್ಬರನ್ನೂ ಸಮಾನಾಗಿ ಜತನ ಮಾಡಬೇಕು. ಎರಡೂ ನಮ್ಮ ಜೀವಗಳೇ ಅಲ್ಲವೇ? ಒಂದು ಸರಿಯಿಲ್ಲದಿದ್ದರೆ ಇನ್ನೊಂದಕ್ಕೆ ಪೆಟ್ಟು ಅಥವಾ ಮೂಗು ಒಂದೇ ಆದರೂ ಅದರಲ್ಲಿನ ಒಂದು ಕಡೆ ಕಟ್ಟಿಕೊಂಡು ಬ್ಲಾಕ್ ಆದರೂ ಇನ್ನೊಂದಕ್ಕೆ ಉಸಿರು ಭಾರ, ತೊಂದರೆ...(ಈ ಮಾತುಗಳನ್ನು  ಹೇಳಿ ಲೇಖನಕ್ಕೆ ಒಂದು ಸುಂದರ ರೂಪ ಕೊಟ್ಟ ಜಯಲಕ್ಷ್ಮಿ ಪಾಟೀಲ್ ಮೇಡಂ ಅವರಿಗೆ ಧನ್ಯವಾದಗಳು)  .  

ಕಟ್ಟುಪಾಡುಗಳನ್ನು ಎರಡು ವರ್ಗಕ್ಕೂ ಸಮಾನವಾಗಿ ಹಾಕಬೇಕು. ಅದೇ ಸ್ವಾಸ್ಥ್ಯ ಸಮಾಜಕ್ಕೆ ನಾವೆಲ್ಲರೂ ಕೊಡುವ ಕೊಡುಗೆ

ಒಂದು  ಸುಂದರ ಜನಪರ ಸಂವಾದ 


ಹೌದು ಇಂಥಹ ಒಂದು ಅಪೂರ್ವ ವಿಷಯವನ್ನು ಮನತಾಕುವಂತೆ ವಿವರಿಸಿದ ಶ್ರೀಮತಿ ಜಯಲಕ್ಷ್ಮಿ ಪಾಟೇಲ್, ಅವರಿಗೆ ಸಂವಾದದಲ್ಲಿ ಸಹಕರಿಸಿದ "ಜನದನಿ" (ದನಿ ಇದ್ದವರೆಲ್ಲರೂ ಜನದನಿಯ ತಂಡದವರೇ) ತಂಡದ ಆತ್ರಾಡಿ ಸುರೇಶ ಹೆಗಡೆ, ಸುಪ್ರೀತ್, ಸುಧೀರ್, ನಾಗಾರ್ಜುನ್, ಸಂಯುಕ್ತ , ಮೇಘ, ವಿನಯ್ ಇವರೆಲ್ಲರಿಗೂ ಮನಸಾರೆ ವಂದಿಸುತ್ತೇನೆ ಈ ಬರಹದ ಮೂಲಕ.  ಇದರ ಜೊತೆಯಲ್ಲಿ ಇಡಿ ಕಾರ್ಯಕ್ರಮವನ್ನು ಆಯೋಜಿಸಿ ಸಹಕರಿಸಿದ ರೂಪ ಸತೀಶ್ ಮತ್ತು ಅವರ ತಂಡಕ್ಕೆ ಧನ್ಯವಾದಗಳು. 
ಮೊಳಗಲಿ, ಬೆಳಗಲಿ ಜನದನಿಯ ಧ್ವನಿಯು ಮಾರ್ಧನಿಯಾಗಲಿ.. !!!

ಮೊಳಗಲಿ, ಬೆಳಗಲಿ ಜನದನಿಯ ಧ್ವನಿಯು ಮಾರ್ಧನಿಯಾಗಲಿ.. !!!

Thursday, September 25, 2014

ಚಲಾವಣೆಗಾಗಿ ಬದಲಾವಣೆ V/s ಬದಲಾವಣೆಯಲ್ಲಿ ಚಲಾವಣೆ !!!

ಇಬ್ಬರೂ ಕೂತು ಹಿಂದಿ ಭಾಷೆಯ ಹಳೆಯ ಚಿತ್ರ ಗೋಲ್ ಮಾಲ್ ನೋಡುತ್ತಿದ್ದರು.. 

ಲಕ್ಕಿ ಪಾತ್ರಧಾರಿ,  ನೌಕರಿ ಕೊಡುತ್ತೇನೆ ಎಂದು ಕರೆದ ಯಜಮಾನನ ಬಳಿ ಬಂದಾಗ, ಮಾತಿಗೆ ಮಾತು ಬಂದು ಹೇಳುತ್ತಾನೆ.. ನೀವೆಲ್ಲ ಹಿರಿಯರು ಭವಿಷ್ಯ ನೋಡುವ ಬದಲು ಭೂತ ಕಾಲದಲ್ಲಿ ಇರುತ್ತೀರ ಅಷ್ಟೊತ್ತಿಗೆ ನಿಮ್ಮ ಹಿಂದೆ ಸೂರ್ಯ ಹುಟ್ಟಿ ಆಗಿರುತ್ತದೆ... ಹೆಚ್ಚು ಕಮ್ಮಿ ಇದೆ ಅರ್ಥ ಬರುವ ರೀತಿಯಲ್ಲಿ ಸಂಭಾಷಣೆ ಇದೆ.. ಒಟ್ಟಾರೆ ಅರ್ಥ.. ಜಗತ್ತಿನ ಜೊತೆಯಲ್ಲಿ ಹೆಜ್ಜೆ ಹಾಕುತ್ತಿಲ್ಲ ಎಂದು.. !

ಆ ದೃಶ್ಯವನ್ನು ನೋಡುತ್ತಾ.. "ಈಗಲಾದರೂ ಬದಲಾಗೋ... ಈ ಜಗತ್ತು ವ್ಯಾಪಾರಿ ಪ್ರಪಂಚ ಆಗಿ ಬಿಟ್ಟಿದೆ.. ಅಂತಃಕರಣ, ಪ್ರೀತಿ, ವಿಶ್ವಾಸ, ಕರುಣೆ, ಮಮಕಾರ ಬರಿ ಪುಸ್ತಕದ ಹಾಳೆಗಳಲ್ಲಿ ಭದ್ರವಾಗಿದೆ.. ನೀ ಬದಲಾಗಲೇ ಬೇಕು.. ನಿನ್ನ ಈ ಹಳೆಜಮಾನದ ಗುಣವನ್ನು ಯಾರೂ ಮೆಚ್ಚುವುದಿಲ್ಲ.. ಕೆಲವು ದಿನಗಳಷ್ಟೇ ಚೆನ್ನಾ.. ನಂತರ.. ಅಯ್ಯೋ ಬಿಡು ಇದ್ದಿದ್ದೆ ಇದು ಎನ್ನುತ್ತಾರೆ..ಇದು ವ್ಯಾಪಾರಿ ಜಗತ್ತು ಚೆನ್ನಾಗಿರುವುದನ್ನು ಮಾತ್ರ ಖರೀದಿ ಮಾಡುತ್ತಾರೆ.. " ಹೀಗೆ ಸಾಗಿತ್ತು ಬದಲಾವಣೆಯ ಕೆಲವು ನಿಯಮಗಳ ಪಾಠ!!!

ಯಾಕೋ ಮನಸ್ಸಿಗೆ ಗಲಿಬಿಲಿಗೊಂಡು..  ದೂರದರ್ಶನ ಬಂದ್ ಮಾಡಿ.. ರೇಡಿಯೋ ಹಾಕಿದರು.. "ಏನು ಮಾಡಲಿ ನಾನು ಹೇಗೆ ಹೇಳಲಿ ಕಣ್ಣುಗಳಿದ್ದು ಕುರುಡರ ಹಾಗೆ ಹಲವರು ನಡೆಯುವರು.. ಎಲ್ಲಾ ಬಲ್ಲೆನು ಎನ್ನುತ ಹೋಗಿ ಹಳ್ಳಕೆ ಬೀಳುವರು"

ಮುಸಿ ನಗುವ ಸರದಿ ಇನ್ನೊಬ್ಬನದಾಗಿತ್ತು.. ಯಾಕೋ ಮನಸ್ಸು ಮೂವತ್ತಾರು-ಮೂವತ್ತೆಂಟು ವರ್ಷಗಳ ಹಿಂದೆ ಓಡಿತು.. 


* * * * * * * * * * * * * * * * * * * * * * * * * * * * 
ವಿಶಾಲವಾದ ಕಾಂಪೌಂಡ್.. ಅನೇಕ ತೆಂಗಿನಮರಗಳ ಸಾಲುಗಳು.. ಚಪ್ಪಡಿ ಕಲ್ಲು ಬೆಂಚು.. ದೊಡ್ಡ ಚಿಕ್ಕ ಮಕ್ಕಳೆಲ್ಲ ಆಟಾಡುತ್ತಿದ್ದಾರೆ.. 

ದಬಾರ್.. ದುಡುಂ ದುಡುಂ.. ಹಾ ಹಾಂ ಹಾಂ.... ಮಗು ಜೋರಾಗಿ ಅಳುತ್ತಿದೆ.. ತಕ್ಷಣ.. ಆ ಮಗುವಿನ ಸಹೋದರಿ.. ಅಯ್ಯೋ ಬಿದ್ದೆಯ ಕಂದಾ.. ಸಮಾಧಾನ ಮಾಡಿ ಮತ್ತೆ ಕಲ್ಲು ಬೆಂಚು.. ತೆಂಗಿನ ಮರ ಮಕ್ಕಳ ಆಟ.. ಹೀಗೆ ಸಾಗಿತ್ತು.. 


ನನಗಾಗಿ ಕಾದಿದ್ದ ಬೆಂಚು (ಮೂಲ ಸ್ಥಾನದಿಂದ ಪಲ್ಲಟವಾಗಿದ್ದರೂ ನೆನಪಿಂದ ಅಲ್ಲ)

ಆ ಕಲ್ಲು ಬೆಂಚು.. ಕಲ್ಲು ಬೆಂಚಿನ ಮೇಲೆ ಮತ್ತೆ ಕೂರುವ ನೆನಪು.. ಇಲ್ಲವೇ ಕೂತಿದ್ದ ನೆನಪು ಅಚ್ಚಳಿಯದೆ ಹಾಗೆಯೇ ನಿಂತಿತ್ತು.. ಕಾರಣ ಬೇಸಿಗೆಯಲ್ಲಿ ಆ ಕಲ್ಲು ಎಷ್ಟು ಕಾಯುತ್ತಿತ್ತೋ ಅದಕ್ಕಿಂತ ಹೆಚ್ಚೇ ಬಿಸಿಯಾಗಿ ಹೊಟ್ಟೆಯು ಕಾದಿರುತ್ತಿತ್ತು!!!


ಅದೇ ಕಲ್ಲು ಬೆಂಚಿನ ಕೂತಾಗ ಮೈ ಮನ ಹಾಯ್ ಎಂದಿತು !!!

* * * * * * * * * * * * * * * * * * * * * * * * * * * * *
ಕೆಲವು ನಿವಾಸಗಳು ಅಭೂತಪೂರ್ವ ಘಟನೆಗಳಿಂದ ಮನಕ್ಕೆ ಮುದ ನೀಡಿದರೆ.. ಕೆಲವು ನಿವಾಸಗಳು ಮರೆಯಲಾರದ ಪಾಠಗಳನ್ನೂ, ಮರೆಯಬಾರದ ನೆನಪನ್ನು ಒತ್ತಿ ಬಿಟ್ಟಿರುತ್ತವೆ.. 


ಬದುಕಿಗೆ ಅರ್ಥವತ್ತಾದ ಪಾಠ ಕಳಿಸಿದ ಶಿವಮೊಗ್ಗೆಯ ಬೀದಿ!

ಅಂಥಹ ಒಂದು ನಿವಾಸ.. ಶಿವಮೊಗ್ಗೆಯ ತುಮಕೂರು ಶಾಮರಾವ್ ರಸ್ತೆಯ ಒಂದು ದೊಡ್ಡ ವಠಾರ.. ಎದುರು ಬದಿರು ನಾಲ್ಕು ನಾಲ್ಕು ಮನೆಗಳ ಕಾಂಪೌಂಡ್ ಅದು.. 


ಬದಲಾಗಿದೆ.. ಹೌದು ಆದರೆ ಅದು ತೋರಿದ್ದ ನೀತಿ ನಿಯಮ ನಿಜಾಯಿತಿ... ಹಾಗೆಯೇ ಇದೆ !!!

ಊಟ ಬಟ್ಟೆಗೆ ಅಲ್ಪ ಸ್ವಲ್ಪ ತೊಂದರೆ.. ಅದಕ್ಕಿಂತ ಹೆಚ್ಚಾಗಿ ಆ ಮೆನಯಲ್ಲಿ ನಲಿದ ಕಳೆದ ಸುಮಾರು ಒಂದೂವರೆ ಅಥವಾ ಎರಡು ವರ್ಷಗಳು ಅಬ್ಬಾ ಎನ್ನುವಂಥಹ ಪಾಠ ಕಲಿಸಿವೆ.. 


ಬಾಲ್ಯದ  ನೆನಪನ್ನು ಅರಳಿಸಿದ ರಸ್ತೆ ಮತ್ತೊಮ್ಮೆ ಕಣ್ಣ ಮುಂದೆ 

"ತುತ್ತು ಅನ್ನಾ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ ತುಂಡು ಬಟ್ಟೆ ಸಾಕು" ಎನ್ನುವ ಜಿಮ್ಮಿಗಲ್ಲಿನ ಹಾಡಿನಂತೆ ಸಾಗಿತ್ತು ಜೀವನ.. 

ಆ ಕಾಂಪೌಂಡ್ ಮಾಲೀಕನ ಮಡದಿ.. ಅಯ್ಯೋ ನೆಲದ ಮೇಲೆ ಮಲಗಿ ಬಿಟ್ಟಿದೆಯಲ್ಲಾ ಪಾಪ ತಲೆನೋವು ಬಂದು ಬಿಡುತ್ತೆ ಕಣ್ರೀ ಮೊದಲು ಊಟ ಮಾಡಿಸಿ ಎಂದು  ಮನೆಯಲ್ಲಿ ಉಳಿದ ಆಹಾರ ಕೊಡುವುದು!!!

ಅಮ್ಮನ ಬರುವಿಕೆಗಾಗಿ ಮನೆಯ ರಸ್ತೆಯ ಅಂಚಿನಲ್ಲಿದ್ದ ಅರಳಿಕಟ್ಟೆಯಲ್ಲಿ ಕಾದ ಹೊಟ್ಟೆಯನ್ನು ಮುಂದಿಟ್ಟುಕೊಂಡು ತಮ್ಮನ ಜೊತೆಯಲ್ಲಿ ಕಾಯುವುದು.. ಅದೇ ಬಣ್ಣದ ಸೀರೆ ಕಂಡರೆ ಸಾಕು ಅಮ್ಮ ಬಂದರು ತಿಂಡಿ ತಂದರು ಎನ್ನುವ ಮನದಾಳದ ತಳಮಳ ಹೊರಬರಲು ತುದಿಗಾಲಲ್ಲಿ ಕೂರುತ್ತಿತ್ತು.. !

ಇಂಥಹ ವಿಷಮ ಪರಿಸ್ಥಿತಿಯಲ್ಲೂ ಬೆಂಗಳೂರಲ್ಲಿ ಸ್ಥಿರವಾಗಿ ನೆಲೆಕಾಣಲು ಕಷ್ಟ ಪಡುತ್ತಿದ್ದ ಅಪ್ಪ ತಿಂಗಳ ಮೊದಲಲ್ಲಿ ಕಳಿಸುವ ಹಣಕ್ಕೆ ಕಾಯುತ್ತಾ ... ಅದು  ಬಂದೊಡನೆ ಕಾಫಿ ಪುಡಿ, ಸಕ್ಕರೆ, ಒಂದು ಕನ್ನಡಿ, ಒಂದು ಪೌಂಡ್ ಬ್ರೆಡ್.. ಕಾಯಂ ಆಗಿ ಬರುತ್ತಿದ್ದವು.. 

ಬ್ರೆಡ್ ಸಕ್ಕರೆ ಆ ಕಾಲದಲ್ಲಿ ಒಂದು ಹೆಮ್ಮೆಯ ಸಂಕೇತವಾಗಿದ್ದರೆ.. ಕನ್ನಡಿ ಮನೆಯ ಸುತ್ತಾ ಹಾವಳಿ ಮಾಡುತ್ತಿದ್ದ ಕಪಿರಾಯಗಳ ಚೇಷ್ಟೆಗಳಿಂದ ಪ್ರತಿ ತಿಂಗಳು ಹೊಸದನ್ನು ತರಲೆಬೇಕಿತ್ತು!!!


ಅರಳಿ ಕಟ್ಟೆ  ತನ್ನ ಮೂಲ ಸ್ವರೂಪ ಕಳೆದು ಕೊಂಡಿದೆ.. ಅದರ ಕೆಳಗೆ ಕಲಿತ ಅನುಭವ..ಹಸಿರು!* * * * * * * * * * * * * * * * * * * * * * * * * * * * *

"ಸರಿ ಈಗ ಹೇಳು ನೀ ಮುಸಿ ಮುಸಿ ನಕ್ಕಿದ್ದು ಏಕೆ.. ?"

"ನೀವು ಹೇಳಿದ್ದು ಸರಿ.. ಚಲಾವಣೆಗಾಗಿ ಬದಲಾವಣೆ.. ಹೌದು ಆದರೆ ಬದಲಾವಣೆಯಾದರೆ ಚಲಾವಣೆ ಆಗುತ್ತೆ ಎನ್ನುವ ನಂಬಿಕೆ ಏನು.. ಮತ್ತೆ ಏತಕ್ಕೆ ಬದಲಾವಣೆಯಾಗಬೇಕು ಇದು ನನ್ನ ಗೊಂದಲ"

"ಜಗತ್ತು ಒಂದು ತಿರುಗುವ ಚಕ್ರ ಇದ್ದ ಹಾಗೆ ಅದರ ಮೇಲೆ ನಿಂತರೆ ಬೀಳುವ ಸಂಭವ ಹೆಚ್ಚು.. ಅದರ ಮೇಲೆ ಅದರ ಜೊತೆಯಲ್ಲಿ ನಡೆಯುತ್ತಾ ಇಲ್ಲವೇ ಓಡುತ್ತಾ ಸಾಗಿದರೆ ಬೀಳುವ ಸಂಭವ ಹ ಹ ಹಃ ಹ ಹ... ಅಲ್ಲವೇ ಕಂದಾ!!!"

"ಹೌದು ಸರಿ.. ಆದರೆ ನಿಮಗೂ ಬದಲಾವಣೆ ಬೇಕು ಎಂದು ಅರಿತಾಗ "ನೀನು ಬೆಂಗಳೂರಿಗೆ ಹೋಗು.. ನಿನಗೂ ನಿನ್ನ ಮಕ್ಕಳಿಗೂ ಒಳ್ಳೆಯದಾಗುತ್ತೆ" ಎನ್ನುವ ಮಾತಿನ ಬೆನ್ನೇರಿ ನೀವು ಬಂದದ್ದು ಇಲ್ಲಿಗೆ.. ಆದರೆ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾದರೂ ನೀವು ನಂಬಿದ್ದ ಶ್ರದ್ಧೆ, ಭಕ್ತಿ, ಪ್ರೀತಿ ವಿಶ್ವಾಸ, ಆಚಾರ, ವಿಚಾರ, ಆಹಾರ ಪದ್ಧತಿ, ಉಡುಗೆ ತೊಡುಗೆ ಯಾವುದರಲ್ಲೂ ಬದಲಾಗಲಿಲ್ಲ.. ಅಲ್ಲವೇ ನಾವು ಕಂಡಂತೆ ನಿಮ್ಮ ವ್ಯಕ್ತಿತ್ವ ಪ್ರೀತಿ ವಿಶ್ವಾಸ.. ಒಂದು ವಿಚಾರದಲ್ಲೂ ನೀವು ಬದಲಾಗಲೇ ಇಲ್ಲ.. ಆದರೂ ನಿಮ್ಮ ಹೆಸರು ನಿಮ್ಮ ಮಾತುಗಳು ಚಲಾವಣೆಯಲ್ಲಿ ಇದೆಯಲ್ಲಾ.. ಇದಕ್ಕೆ ಏನು ಹೇಳುತ್ತೀರಿ.. ಬದಲಾದವರೂ ಕಾಲಕ್ಕೆ ಹೊಂದಿಕೊಳ್ಳುತ್ತೇನೆ ಎಂದು ನಿಮ್ಮನ್ನು ಮೂದಲಿಸಿ ಮಾತಾಡಿದವರು ಇಂದು ವಿಚಿತ್ರ ಪರಿಸ್ಥಿತಿಯಲ್ಲಿ ನಿಂತಿದ್ದಾರೆ.. ಆದರೆ ನಿಮ್ಮ ಬದಲಾಗದ ಬದಲಾವಣೆ ನಿಮ್ಮನ್ನು ಇನ್ನಷ್ಟು ಗಟ್ಟಿ ಮಾಡಿದ್ದವು ಅಲ್ಲವೇ.. ಅದೇ ಮಾರ್ಗದಲ್ಲಿ ನಾನು ಇರುವುದು ಈ ವ್ಯಾಪಾರಿ ಮನೋಭಾವ.. ಅದು ಚೆನ್ನಾಗಿಲ್ಲ ಬೇಡ ಇದು ಚೆನ್ನಾಗಿದೆ ಬೇಕು ಎನ್ನುವ ಮನೋಸ್ಥಿತಿಯಿಂದ ಹೊರಗೆ ಬಂದಿದ್ದೇನೆ.. ನಿಮ್ಮ ಹಾದಿಯಲ್ಲೇ ನಡೆಯುತ್ತಿದ್ದೇನೆ ತಪ್ಪು ಎನ್ನುತ್ತೀರಾ" ಹುಸಿ ನಗುತ್ತಾ 

"ತಪ್ಪು ಖಂಡಿತ ಇಲ್ಲ.. ಆಗಲೇ ಹೇಳಿದ ಹಾಗೆ ತಿರುಗುವ ತಟ್ಟೆಯ ಮೇಲೆ ಕೆಲವು ಕಾಲ ನಿಲ್ಲಬೇಕು. ಕೆಲವು ಕಾಲ ಓಡಲು ಬೇಕು ಕೆಲವು ಕಾಲ ಆ ತಟ್ಟೆಯಿಂದ ಇಳಿದು ಒಂದಷ್ಟು ದೂರ ಹೆಜ್ಜೆ ಹಾಕಲು ಬೇಕು.. ಅದೇ ನಿಜವಾದ ಮಾರ್ಗ.. ನೀ ನನ್ನ ಹಿಂಬಾಲಿಸುತ್ತಿರುವುದು ನಿಜಾ.. ಕೆಲವೊಮ್ಮೆ ಈ ಸಂಕುಲಗಳಿಂದ ಹೊರಗೆ ಬಾ.. ಇನ್ನಷ್ಟು ಪ್ರಜ್ವಲಿಸುತ್ತೀಯ.. "

ಕಣ್ಣು ಬಿಟ್ಟೆ.. ಬೆಳಗಿನ ಜಾವ ಆರು ಘಂಟೆಯಾಗುತ್ತಿತ್ತು.. ಗೋಡೆಯ ಮೇಲಿನ ಚಿತ್ರ ನೋಡಿ ಕೈ ಮುಗಿದೆ.. ಅದರೊಳಗಿನ ಮೂರ್ತಿ ಆಶೀರ್ವಾದ ಮಾಡಿದಂತೆ ಭಾಸವಾಯಿತು.. ಸ್ಮೃತಿ ಪಟಲದಲ್ಲಿ ದಾಖಲಾದ ಘಟನೆಗಳು ಇವರ ಜೊತೆಯಲ್ಲಿ ಬಂದು ನಿಂತು ನೀತಿ ಪಾಠವನ್ನು ಅರುಹಿ ಕೆಲ ಗೊಂದಲಗಳನ್ನು ದೂರ ಮಾಡಿತು.. !!!

ಇಂದು ಅವರ ಜನುಮದಿನ.. ತಾವು ಪಾಠ ಹೇಳದೆ ತಾವು ನಡೆದ ದಾರಿಯಲ್ಲಿ ನಮಗೆ ನಡೆಯಿರಿ ಎಂದು ಒತ್ತಡ ಹೇರದೆ ನಮಗಾಗಿ ಒಂದು ಸುಂದರ ಪಥವನ್ನು ನಿರ್ಮಿಸಿದರು ನನ್ನ ಅಪ್ಪಾ.. ತಾವು ನಂಬಿದ್ದ ಯಾವುದೇ ಸಿದ್ಧಾಂತವನ್ನು ಕೆಳಗೆ ಇರಿಸದೆ ಅದರ ಜೊತೆಯಲ್ಲಿ ಹೆಜ್ಜೆ ಹಾಕಿ ತಮ್ಮ ಬಾಳನ್ನು ಬಂಗಾರ ಮಾಡಿದ್ದೆ ಅಲ್ಲದೆ.. ನಮ್ಮ ಜೀವನದ ಕಳಶಕ್ಕು ಸುವರ್ಣ ಲೇಪನ ಮಾಡಿದ್ದು ಅವರ ಹೆಗ್ಗಳಿಕೆ.. 

ಮನಸ್ಸು ಈ ಭಾವಗಳನ್ನೆಲ್ಲ ಹೊತ್ತು ನಿಂತಿತ್ತು ಕಳೆದ ಭಾನುವಾರ ಶಿವಮೊಗ್ಗೆಯ ತುಮಕೂರು ಶಾಮರಾವ್ ರಸ್ತೆಯ ಆ ಪಾಠ ಕಳಿಸಿದ ರಸ್ತೆಗೆ ಹೋಗಿ ನಿಂತಾಗ ಅದು ಬರೋಬ್ಬರಿ ಮೂವತ್ತೈದು-ಮೂವತ್ತಾರು ವಸಂತಗಳ ನಂತರ.... !!! 


ಬದಲಾದ ಪಥ.. ಆದರೆ ಬದಲಾಗದ ಭಾವ.. !

ಅಣ್ಣಾ ಹೊಸ ಬದುಕಿನತ್ತ ಹೊರಳಲು ನಿರ್ಧಾರ ಮಾಡಿದ್ದೇನೆ.. ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ರಕ್ಷಾ ಕವಚ.. ಆಗದು ಎಂದು ಕೈ ಕಟ್ಟಿ ಕೂರದೆ.. ನಡೆ ಮುಂದೆ ನಡೆ ಮುಂದೆ ಆರಾಮಾಗಿ ಮುಂದೆ ಎನ್ನುವ ನೀತಿ ಪಾಠ ಕಲಿತಿದ್ದು ನಿಮ್ಮ ಬದುಕನ್ನು ನೋಡಿ.. 

ಹುಟ್ಟು ಹಬ್ಬದ ಶುಭಾಶಯಗಳು.. ಅಣ್ಣಾ!!! 

Tuesday, August 19, 2014

ಬಂದ ಬಂಧ .. ಬಂದ ಬಂಧ.. ತನುಬಂಧ!!!

ಬೃಹದಾಕಾರದ ಮರಕ್ಕೆ ಜೋತು ಬಿದ್ದಿದ್ದ ಬೇತಾಳ ವಿಕ್ರಮನ ಬರುವಿಕೆಗೆ ಕಾಯುತ್ತಿತ್ತು.. .. ಬೇತಾಳ ವಿಕ್ರಮನಿಗೆ ಎಷ್ಟು ಅಂಟಿಕೊಂಡಿತ್ತು ಅಂದರೆ..  ಒಂದು ದಿನ ವಿಕ್ರಮನನ್ನು ನೋಡದೆ ಹೋದರೆ.. ಅವನ ಹೆಗಲ ಮೇಲೆ ಹೋಗದೆ ಇದ್ರೆ ಏನೋ ಕಳೆದುಕೊಂಡ ಭಾವನೆ.. ಏನೋ ಆ ದಿನದಲ್ಲಿ ಒಂದೆರಡು ಘಳಿಗೆ ಉಸಿರು ನಿಂತ ಅನುಭವ..

ಎರಡು ಮಿಡಿವ ಮನಗಳ ಮಿಲನ (ಚಿತ್ರ ಕೃಪೆ ಅಂತರ್ಜಾಲ)

ವಿಕ್ರಮನಿಗೆ ತನ್ನ ರಾಜ್ಯಭಾರ, ಪ್ರಜೆಗಳ ಕಷ್ಟ ಸುಖಃ, ಪರಿವಾರದ ಯೋಗ ಕ್ಷೇಮ ಜೊತೆಯಲ್ಲಿ ಆಗಾಗ ಬಂದು ಒದಗುವ ಪರೀಕ್ಷಾ ಸಮಯಗಳು.. ರಾಜ ಮನೆತನದ ಮಕ್ಕಳಿಗೆ ಹಿತವಚನ, ಪಾಠಗಳು... ಹೀಗೆ ಒಂದಲ್ಲ ಒಂದು ರೀತಿ ಕೈ ತುಂಬಾ ಕೆಲಸ.. ಆದರೂ ಸಂಜೆ ಆಯಿತು ಎಂದರೆ ಬೇತಾಳನ ಕಥೆ ಕೇಳುವ ತವಕ.. ಆ ಕೆಲ ಘಳಿಗೆಗಳಲ್ಲಿ ಬೇತಾಳ ಹೇಳುವ ಸುಧೀರ್ಘ ಕಥೆ ಕೇಳಿ ಅದಕ್ಕೆ ಒದಗುವ ಕೆಲವು ಪ್ರಶ್ನೆಗಳಿಗೆ ಸಮಂಜಸ ಉತ್ತರ ಸಿಕ್ಕರೆ ವಿಕ್ರಮನ ಆ ದಿನ ಸಾರ್ಥಕ ಅನ್ನಿಸುವ ಭಾವ..

ಆದರೆ ಇಬ್ಬರಿಗೂ ಗೊತ್ತಿತ್ತು.. ನಂಟು  ಒಂದೇ ಆದರೂ ಜೀವನದ ಕವಲು ದಾರಿಯಲ್ಲಿ ಕೆಲವೊಮ್ಮೆ ತುಳಿಯುವ ಹಾದಿ ಎತ್ತಲೋ ಎಳೆದು ಕೊಂಡು ಹೋಗುತ್ತದೆ.. ವಿಶೇಷವಾದ ಈ ಬಂಧ ಕೆಲವೊಮ್ಮೆ ಉಸಿರುಕಟ್ಟಿಸಬಹುದು ಎಂಬ ಅರಿವಿದ್ದರೂ.. ಆ ಬೆಸದ ಭಾವ ಇಬ್ಬರನ್ನೂ ಒಂದು ಮಾಡಿತ್ತು..

ಸಂಬಂಧವೇ ಇಲ್ಲದ ದಾರಿ ಹೋಕರಾಗಬಹುದಿದ್ದ ಎರಡು ಭಾವ ಜೀವಿಗಳು ಒಂದೇ ಎನ್ನುವಂತೆ ಜೀವಿಸುತ್ತಿದ್ದವು..

ಹೀಗೆ ಒಂದು ದಿನ ಕಾಯುತ್ತ ಮರದಲ್ಲಿ ಜೋತು ಬಿದ್ದು ಕಾಯುತ್ತಾ ನೇತಾಡುವಾಗ.. ಅಚಾನಕ್ ಕೊಳಲಿನ ಗಾನ ಮಾಧುರ್ಯ ಕೇಳಿ ಬಂತು.. ಅರೆ ಏನಿದು.. ಯಾರಿದು ಎಂದು ಉಲ್ಟಾ ನೋಡುತ್ತಾ ಇದ್ದಾಗ ನವಿಲು ಗರಿ ಕಾಣಿಸಿತು.. ಮೇಘ ಶ್ಯಾಮನ ಮುರುಳಿ ಲೋಲ ನಿಧಾನವಾಗಿ ವೇಣು ನಾದ ಮಾಡುತ್ತಾ ಅಲ್ಲಿಗೆ ಬಂದಾ..

ಕೊಳಲು ಮತ್ತು ಕೃಷ್ಣ ಎರಡು ಮಿಡಿವ ಮನಗಳ ಮಿಲನ  (ಚಿತ್ರ ಕೃಪೆ ಅಂತರ್ಜಾಲ)

ಬೇತಾಳಕ್ಕೆ ಆಶ್ಚರ್ಯ.. ಶ್ರೀ ಕೃಷ್ಣನಿಗೆ ವಂದಿಸುತ್ತಾ... "ಶ್ಯಾಮ.. ಏನಿದು ಇಂದು ಈ ದಿನ.. ಇವತ್ತು.. ಹೀಗೆ.. "

"ಅರೆ ಬೇತಾಳ ಯಾಕೆ ಉದ್ವೇಗ.. ಆತಂಕ.. .. ಗಾಬರಿ ಬೇಡ.. ನಿನ್ನೆ ನೋಡಲು ಬಂದೆ... "

ತಿದ್ದಿ ತೀಡಿಸಿಕೊಂಡು ಹುಬ್ಬನ್ನು ಮತ್ತಷ್ಟು ಮೇಲಕ್ಕೆ ಏರಿಸಿ.. "ಏನಿದು ಭಗವಾನ್ ನನ್ನ ನೋಡಲು ಬರುವುದೇ.. ಏನು ಸಮಾಚಾರ?"

"ಹೌದು.. ನಿನ್ನ ವಿಕ್ರಮನ ಪರಿಚಯ ಚೆನ್ನಾಗಿ ಇದೆ.. ಜೊತೆಯಲ್ಲಿ ನೀನು ವಿಕ್ರಮನನ್ನು ಸ್ವಂತ ಮಗನು ಎಂಬ ಭಾವನೆ ನಿನ್ನದು.. ಹಾಗೆಯೇ ವಿಕ್ರಮನು ಕೂಡ ನಿನ್ನನ್ನು ಜನಕ ರೂಪದಲ್ಲಿಯೇ ನೋಡುತ್ತಾನೆ.. ಆದರೆ ಏನು ಮಾಡುವುದು ವಿಕ್ರಮನಿಗೆ ತನ್ನ ರಾಜ್ಯವನ್ನು ಸಂರಕ್ಷಿಸಬೇಕು, ಉತ್ತಮ ಆಡಳಿತ ಕೊಡಬೇಕು.. ಹೀಗೆ ನೂರೆಂಟು ತಾಪ ತ್ರಯಗಳು.. ಅದರಲ್ಲೂ ಕೊಂಚ ಬಿಡುವು ಮಾಡಿಕೊಂಡು ಭೇಟಿ ಮಾಡಲು ಬರುತ್ತಿದ್ದಾನೆ.. "

"ಹೂಂ ಹೂಂ "

"ನಿನ್ನ ಕಷ್ಟವು ನನಗೆ ಅರ್ಥವಾಗುತ್ತದೆ.. ದಿನವೂ ಅದೇ ಮರದ ಮೇಲೆ ವಾಸ.. ನಿನ್ನ ಸುತ್ತಾ  ಮುತ್ತಾ ಇರುವ ಬೇತಾಳಗಳು ತಮ್ಮ ಕತೆಗಳನ್ನು ಹೇಳಿ ಹೇಳಿ ನಿನಗೂ ಸ್ವಲ್ಪ ಬದಲಾವಣೆ ಬೇಕು ಎನ್ನಿಸುತ್ತದೆ. .. ಜೊತೆಯಲ್ಲಿ ಈ ನಡುವೆ ನಿನ್ನ ಅನೇಕ ದೈನಂದಿನ ಚಟುವಟಿಕೆಗಳಿಗೆ ಸಮಯ ಕೊಡಲು ಆಗುತ್ತಿಲ್ಲ.. ಆದ್ದರಿಂದ ನಿನಗೆ ಕೊಂಚ ಬದಲಾವಣೆ ಎಂದರೆ ವಿಕ್ರಮನ ಸಾಂಗತ್ಯ.. ಮಾತು.. ಕಥೆ.. ಸಂದೇಶ ಕೊಡುವ ಮಾತುಗಳು.. "

"ಹೂಂ ಹೂಂ ಹೂಂ"

"ತಮಾಷೆ ಗೊತ್ತಾ.. ಎಲ್ಲೋ ಹುಟ್ಟುವ ಝರಿ.. ನದಿಯಾಗಿ.. ಶರಧಿ ಸೇರುವಾಗ ಧನ್ಯತಾ ಭಾವ ಇರುತ್ತೆ ಅಲ್ಲವಾ ಹಾಗೆಯೇ ನಿಮ್ಮಿಬ್ಬರ ಬಂಧವೂ ಕೂಡ.. ನದಿಯಿಲ್ಲದೆ ಸಾಗರವಿಲ್ಲ.. ಸಾಗರವಿಲ್ಲದೆ ನದಿಯಿಲ್ಲ.. "

"ಕೃಷ್ಣ... ನನಗೆ ಅರ್ಥವಾಗುತ್ತಿದೆ.. ನಿನ್ನ ಮಾತುಗಳು ಎಲ್ಲಿ ಹೋಗುತ್ತಿದೆ ಎಂದು.. ನನಗಿರುವ ಒಂದೇ ಸಂದೇಹ ಅಂದರೆ.. ನಾನೂ ವಿಕ್ರಮನ್ನು ಇಷ್ಟೊಂದು ಹಚ್ಚಿಕೊಳ್ಳುವುದು.. ವಿಕ್ರಮನಿಗೆ ಕಷ್ಟವಾಗುತ್ತದೆಯಾ ಅಥವಾ ನಾ ಅವನ ಹೆಗೆಲೇರಿ ಕೂತು.. ಕೆಲವೊಮ್ಮೆ ಅವನ ತಲೆ ಸವರುತ್ತಾ ಅವನಿಗೆ ಕಥೆ ಹೇಳುವುದು ತಪ್ಪು ಅನ್ನಿಸುತ್ತದೆಯ.. ಇವರೆದು ಪ್ರಶ್ನೆಗಳಿಗೆ ಬೇಗ ಉತ್ತರ ಕೊಟ್ಟು ಬಿಡು ನನ್ನ ಆತ್ಮ ವಿಕ್ರಮ ಬರುವ ಸಮಯವಾಯಿತು"

"ಇಲ್ಲಾ ಮಹರಾಯ.. ತಪ್ಪು ಇಲ್ಲವೇ ಇಲ್ಲಾ.. ನಿನ್ನ ಮನಸು ಹಾಲಿನಷ್ಟೇ ಬಿಳುಪು.. ಹುಡುಕಿದರೂ ಕೆಟ್ಟ ಭಾವ ಸಿಗಲಾರದು.. ಆದರೂ ಲೋಕದ ದೃಷ್ಟಿಯಲ್ಲಿ ತಪ್ಪು ಇರಬಹುದೇ.. ಜೋತಾಡುವ ಬೇತಾಳ ಮನುಜನೊಡನೆ ಈ ಬಂಧ ಸರಿಯೇ ಎನ್ನುವ ದುಗುಡ ನಿನ್ನದು ಅಲ್ಲವೇ.. ಯೋಚನೆಯೇ ಬೇಡ.. .. ಮುಗಿಲಲ್ಲಿ ಹನಿ ಸೇರಿರುತ್ತದೆ.. ಅದೇ ಹನಿ ಆವಿಯಾಗಿ ಆಗಸ ಸೇರುತ್ತದೆ.. ಮತ್ತೆ ಭುವಿಗೆ ಪಯಣ.. ನೀವಿಬ್ಬರು ಹೃದಯದ ಬಡಿತ ಇದ್ದ ಹಾಗೆ.. ಒಮ್ಮೆ ಲಬ್ ಎಂದರೆ ಇನ್ನೊಮ್ಮೆ ಡಬ್ ಎನ್ನುತ್ತದೆ.. ಹಾಗೆ ಆದಾಗ ಮಾತ್ರ ಹೃದಯದ ಜೀವಂತವಾಗಿರುತ್ತದೆ .. "

ಒಂದು ನಗು ಹಾಗೆ ಮಿಂಚಿ ಮಾಯವಾಯಿತು ಬೇತಾಳನ ಮುಖದಲ್ಲಿ

"ಮತ್ತೆ....  ಆದ್ರೆ...  ನೀನು ಅದನ್ನು ವಿಕ್ರಮನ ಬಳಿ ಹೇಳಿಕೊಂಡದ್ದು ಸರಿ.. ಯಾಕೆ ಅಂದರೆ.. ನಿನ್ನ ಮನ ಹೇಳಿಕೊಂಡ ಮೇಲೆ ಹತ್ತಿಯಷ್ಟೇ ಹಗುರವಾಯಿತು.. ಹಾಗೆಯೇ ವಿಕ್ರಮನಿಗೂ ಕೂಡ.. ನಿನ್ನ ಕಥೆ, ಮಾತುಗಳು, ನಗು, ನಿನ್ನ ಮನದಲ್ಲಿರುವವರನ್ನು ಜತನ ಮಾಡುವ ರೀತಿ,  ಎಲ್ಲವೂ ಅವನಿಗೆ ಬಲು ಇಷ್ಟಾ.. ನೀನು ಅರಿಕೆ ಮಾಡಿಕೊಂಡ ನಿನ್ನ ಆತಂಕ ಅವನಿಗೂ ಅರ್ಥವಾಗಿದೆ.. ಹಾಗಾಗಿ ಇಬ್ಬರ ಮನಸ್ಸು ಬಿಲ್ಲು ಬಾಣದ ರೀತಿಯ ಹಾಗೆ ಆಗಿದೆ.. ಬತ್ತಳಿಕೆಯಲ್ಲಿದ್ದ ಬಾಣ ತನ್ನ ಗುರಿ ಸೇರಿದೆ.. ಆ ನೆಮ್ಮದಿ ಬಾಣಕ್ಕೆ ಸಿಕ್ಕರೆ.. ಬಿಲ್ಲಿಗೆ ಬಾಣವನ್ನು ಗುರಿ ಸೇರಿಸಿದ ತೃಪ್ತಿ.. "

ಕಪ್ಪಗಿದ್ದ ಬೇತಾಳ.. ಬೆಳ್ಳಗೆ ಕಾಣಲು ಬೂದಿಯನ್ನು ಸಿಕ್ಕಾ ಪಟ್ಟೆ ಬಳಿದು ಕೊಂಡಿತ್ತು.. ಕೃಷ್ಣ ಮಾತನ್ನು ಕೇಳಿ ಕಣ್ಣಲ್ಲಿ ಹನಿಯಾಗಿದ್ದ ಮುತ್ತುಗಳು ನಿಧಾನವಾಗಿ ಜಾರತೊಡಗಿದವು..

ವಿಕ್ರಮ ಬರುವುದನ್ನು ನೋಡಿ.. ಶ್ರೀ ಕೃಷ್ಣ ಮುಗುಳುನಗುತ್ತಾ.. "ನೋಡು ನಿನ್ನ ತನುಜಾ ಬಂದಾ ನಾ ಹೊರಟೆ.. ಎಂದು ಹೇಳಿ ಅಂತರ್ಧಾನನಾದ.. "

ಬೇತಾಳ.. ವಿಕ್ರಮನನ್ನು ಭೇಟಿ ಮಾಡಲು ಮರದ ಕೊಂಬೆಯಿಂದ ಜೋರಾಗಿ ಜೀಕತೊಡಗಿತು.... !!!

ಬೇತಾಳನ ಮುಖದಲ್ಲಿ ಪ್ರಶಾಂತತೆಯನ್ನು ಕಂಡು ವಿಕ್ರಮನ ಹೃದಯ ಮಿಡಿಯುತ್ತ..  ತನ್ನಷ್ಟಕ್ಕೆ ತಾನೇ ಹೇಳಿಕೊಂಡಿತು "ಬಂಧಗಳು ಅನುಬಂಧಗಳು ದೇವರು ಕೊಟ್ಟ ವರ.. ಕೆಲವೊಮ್ಮೆ ಅನುಮಾನ ಕಾಡಿದಾಗ ಮನದಲ್ಲೇ ಬಾವಿ ತೋಡಿಕೊಳ್ಳುವ ಬದಲು ಬೇತಾಳ ಮಾಡಿದ ಹಾಗೆ ಹೊರಗೆ ಹಾಕುವುದು ಒಳ್ಳೆಯದು.. ಹಾಗೆಯೇ ಅದನ್ನು ಅರ್ಥಮಾಡಿಕೊಂಡು ಬೇತಾಳನ ಮನಸ್ಸನ್ನು ಇನ್ನಷ್ಟು ಪ್ರೀತಿಸುವ ನಿನ್ನ ಹೃದಯವೂ ಸುಂದರ.. ಕೃಷ್ಣನ ಮಾತಿನಲ್ಲಿಯೇ ನೀ ಹೇಳಬೇಕಾದ್ದನ್ನು ಹೇಳಿಸಿಬಿಟ್ಟೆ.. ನೀನು ನಿಜವಾಗಿಯೂ ವಿಕ್ರಮನೇ.. "


Monday, August 11, 2014

ಕಾಂತೆ ಕಾಂತ ಒಂದಾದ ಮೇಲೆ

ಕಾಂತ ಮತ್ತು ಕಾಂತೆ ಬೆಟ್ಟದ ತುದಿಯಲ್ಲಿ ಕೂತು ಮಾತಾಡುತ್ತಿದ್ದರು... ಅಥವಾ ಹರಟೆ ಕೊಚ್ಚುತ್ತಿದ್ದರು..

ಇಬ್ಬರದು ಹನ್ನೆರಡು ವರ್ಷಗಳ ಸುಮಧುರ ದಾಂಪತ್ಯ.. ಇಬ್ಬರದೂ ಉತ್ತರ ಧ್ರುವಧಿಂ ದಕ್ಷಿಣ ಧ್ರುವಕೂ ಅನ್ನುವ ವಿಭಿನ್ನ ಬಿನ್ನ ರಾಶಿಯೇ ಇದ್ದರೂ ದೇವರು ಬೆಸೆದ  ಪ್ರೀತಿಯ ಹಾರವನ್ನು ತೊಟ್ಟ ಆ ದಂಪತಿಗಳು ಪ್ರೇಮಿಗಳ ಹಾಗೆ ಸದಾ ಜಗದಲ್ಲಿ ಜಗಳವಾಡುತ್ತಲೇ ಪ್ರೀತಿ ಪ್ರೇಮ ವಿಶ್ವಾಸವನ್ನು ಹಂಚಿಕೊಂಡು ನೆಂಚಿಕೊಂಡು ಬಾಳುವೆ ಮಾಡುತ್ತಿದ್ದರು.

ಕಾಂತೆ "ಕಾಂತ .. ನಿನ್ನ ಸಿನಿಮಾ ಹುಚ್ಚು ಗೊತ್ತು.. ಸಿನೆಮಾವನ್ನು ನಿನ್ನ ಪ್ರಾಣ ಎನ್ನುವಂತೆ ನೋಡುತ್ತೀಯೆ.. ಒಂದು ಚಿತ್ರದ ಗೀತೆಯನ್ನು ನಮ್ಮ ಹನ್ನೆರಡು ವರ್ಷದ ದಾಂಪತ್ಯಕ್ಕೆ ಅರ್ಪಣೆ ಮಾಡುವುದಾದರೆ ಯಾವ ಗೀತೆ ಆರಿಸುತ್ತೀಯ?"

ಕಾಂತ.. "ಕಾಂತೆ.. ಹಃ ಹಃ ಹಃ ಚಲನ ಚಿತ್ರಗಳು, ಗೀತೆಗಳು ನನ್ನ ತಾಯಿಯ ಬಸಿರಲ್ಲಿದ್ದಾಗಲೇ ಉಸಿರಾಗಿತ್ತು ಅನ್ನಿಸುತ್ತದೆ.. ಹೀಗೆ ಅಂತ ಯಾವ ಗೀತೆಯೂ ಹೇಳಲಾರೆ.."

ಹೇಳು ಕಾಂತ.. ಅಪರೂಪಕ್ಕೆ ನಾ ಏನಾದರೂ ಕೇಳುತ್ತೇನೆ.. ಅದು ಆರ್ಥಿಕ..  ಪಾರಮಾರ್ಥಿಕ ಯಾವುದೂ ಇಲ್ಲ.. ಲೌಕಿಕ.. ನಿನಗೆ ಅನ್ನಿಸಿದ ಗೀತೆಯನ್ನು ಹೇಳು.. ಪ್ಲೀಸ್sssssssss!"

ಯಾವತ್ತೂ  ಏನೂ ಕೇಳದ ಕಾಂತೆ.. ಅಪರೂಪಕ್ಕೆ ಒಮ್ಮೆ ಕೇಳಿದ ನಲ್ಲೆಗೆ ಬೇಸರ ಏಕೆ ಮಾಡಬೇಕು ಎಂದು ನೀಲಿ ಅಗಸವನ್ನೇ ನೋಡುತ್ತಾ ಕುಳಿತ.. ಹತ್ತಿಯ ಹಾಗೆ ಹಿಂಜಿ ಹಿಂಜಿ ತೇಲುತ್ತಿತ್ತು.. ಮೋಡ, ಪ್ರಕೃತಿ, ಕಣಿವೆ ಇವೆಲ್ಲಾ ಕಾಂತನಿಗೆ ಉತ್ಸಾಹ ಚಿಮ್ಮುವ ಚಿಲುಮೆಯಾಗಿತ್ತು.. ನಲ್ಲೆಯ ಒಂದು ಚಿಕ್ಕ ಆಸೆಯನ್ನು ಈಡೇರಿಸಿ ಬಿಡೋಣ ಅಂತ.. ತೋಳು ಮಡಿಸಿ.. ತನ್ನ ಹೃದಯದ ಹಾರ್ಡ್ ಡಿಸ್ಕ್ ಓಪನ್ ಮಾಡಿದ..

ಕೈಗೆ ಕಟ್ಟಿದ ಗಡಿಯಾರ ಹಿಂದಕ್ಕೆ ಓಡತೊಡಗಿತು.. ದಶಕಗಳ ಹಿಂದೆ ಚಿತ್ರ ಪರದೆಯಲ್ಲಿ ನಡುಕ ಹುಟ್ಟಿಸಿದ ನಾ ನಿನ್ನ ಬಿಡಲಾರೆ ಚಿತ್ರ ನೆನಪಿಗೆ ಬಂತು..

"ಕಾಂತೆ.. ಈ ಚಿತ್ರದ ಒಂದು ಗೀತೆಯನ್ನು ನಾ ಹಾಡುತ್ತೇನೆ.. ನೀನು ಹಾಡಬೇಕು.. ಒಂದು ವಿಚಿತ್ರ ಶಕ್ತಿ ಇದೆ ಈ ಹಾಡಲ್ಲಿ.. ಒಂದು ವಿಭಿನ್ನ ರೋಮಾಂಚನ ನೀಡುವ ಪ್ರೇಮ ಗೀತೆ ಇದು.. .. ಈ ಹಾಡನ್ನು ಹಾಡುವ ಯಾವುದೇ ಸುಮಧುರ ಎರಡು ಹೃದಯಗಳು ಒಂದಕ್ಕೊಂದು ಬೆಸೆದುಕೊಂಡು ಹೊಸ ಜೀವನದ ಹಾಡಿಗೆ ತೆರಳುತ್ತದೆ.. "

"ಹೌದಾ.. ಹಾಗಾದರೆ ನಾ ಸಿದ್ಧ" ಕೈ ಕೊಡವಿಕೊಂಡು ನಿಂತೇ ಬಿಟ್ಟಳು ಕಾಂತೆ..

ಶುರುವಾಯಿತು..

"ನಾನು ನೀನು ಒಂದಾದ ಮೇಲೆ ಹೀಗೇಕೆ ನೀ ದೂರ ಓಡುವೆ . 
ಮುತ್ತಲ್ಲೆ ನಿನ್ನ ಸಿಂಗಾರ ಮಾಡಿ ಕಣ್ ತುಂಬಾ ನಾ ನೋಡುವೆ!!!"

"ವಾವ್ ಕಾಂತ ಸೂಪರ್..ಕಾಂತ  "

"ನೀನು ಹಾಡಬೇಕು ಕಾಂತೆ"

ನಾಚಿ ಸ್ವಲ್ಪ ದೂರ ನಿಂತು "ನಾನು ನೀನು ಒಂದಾದ ಮೇಲೆ ಹೀಗೇಕೆ ನೀ ನನ್ನ ನೋಡುವೆ
ಕಣ್ಣಲ್ಲೂ ನೀನೆ ಮನದಲ್ಲೂ ನೀನೆ ಎಲ್ಲೆಲ್ಲೂ ನೀ ಕಾಣುವೆ"

ಕಾಂತ... "ಸೂಪರ್ ಸೂಪರ್"

ಕಾಂತೆ ಮುಗುಳು ನಗುತ್ತಾ.. "ಕಾಂತ . ನೀ ನನ್ನ ಉಸಿರಲ್ಲಿ ಬೆರೆತಿರುವೆ.. ಆ ಉಸಿರನ್ನು ಹಿಡಿದು ಹಾಡಲು ಸಾಧ್ಯವೇ.."

"ಪ್ರಯತ್ನ ಪಡುವೆ"

"ನನಗಾಗಿ ಹೆಣ್ಣಾಗಿ ಬಂದೆ.. ನನ್ನಲ್ಲಿ ನಿನ್ನಾಸೆ ತಂದೆ.. 
ಹಗಲಿಲ್ಲಾ ಇರುಳಿಲ್ಲಾ ನಿನ್ನಲ್ಲೇ ಮನವೆಲ್ಲ ನೆನಪಿಂದ ನಾ ಸೋತು ಹೋದೆ"... ಎಂದು ಹೇಳಿ ಕಾಂತ ಕಣ್ಣು ಹೊಡೆದ..

ಕಾಂತೆ "ಉಸಿರು ಬಿಡುತ್ತಲೇ ಇದ್ದೆ.. ನಾ  ಹಿಡಿದಿಡು ಅಂತ ಅಂದೇ.. "

"ನಿನ್ನನ್ನು ಒಂದು ನಿಮಿಷ ಹಿಡಿದಿಡಲು ನನಗೆ ಮನಸಿಲ್ಲ.. ನೀನು ಗಾಳಿಯ ಹಾಗೆ ಬೀಸುತ್ತಲೇ ಇರಬೇಕು ಪ್ರಿಯೆ.. ನಿನಗೆ ಸಾಧ್ಯವೇ.. ಹಾಡು ನೋಡೋಣ"

"ಕೈ ಕೊಡವಿ.. ಹುಬ್ಬನ್ನು ಮೇಲೇರಿಸಿ.. ಕಾಂತ ನೀ ನನಗೆ ಕಳಿಸಿಕೊಟ್ಟ ಪಾಠ ಅಸಾಧ್ಯ ಯಾವುದು ಇಲ್ಲ ಎಂದು .. ನೋಡು ನನ್ನ ಪ್ರತಾಪ....

"ಸಂಗಾತಿ ನೀನಾಗಿ ಬಂದೆ.. ಸಂತೋಷ ಬಾಳಲ್ಲಿ ತಂದೆ.. " ಈಗ ಕೇಳು ಉಸಿರಿನ ತಾಕತ್
"ಹಗಲಲ್ಲಿ ಇರುಳಲ್ಲಿ ಮನವೆಲ್ಲ ನಿನ್ನಲ್ಲಿ ನೆನಪಿಂದ ನಾ ನೊಂದು ಹೋದೆ"

ಬಿಟ್ಟ ಕಣ್ಣು ಬಿಟ್ಟಂಗೆ ಕಾಂತ ನೋಡುತ್ತಲೇ ಇದ್ದಾ.. ಕಾಂತೆ (ಹಗಲಲ್ಲಿ ಇರುಳಲ್ಲಿ ಮನವೆಲ್ಲ ನಿನ್ನಲ್ಲಿ ನೆನಪಿಂದ ನಾ ನೊಂದು ಹೋದೆ) ಈ ಸಾಲನ್ನು ಹೇಳುವಾಗ ಒಂದು ಅರೆ ಘಳಿಗೆ ಕೂಡ ನೀ ಉಸಿರನ್ನು ಒಳಗೆ ತೆಗೆದುಕೊಳ್ಳಲಿಲ್ಲ.. ಸೂಪರ್ ಕಾಂತೆ.. "

"ಇನ್ನೆಂದು ಈ ಚಿಂತೆ ನಿನಗಿಲ್ಲವೇ.. ನಾನು ನೀನು ಒಂದಾದ ಮೇಲೆ ಹೀಗೇಕೆ ನೀ ದೂರ ಹೋಗುವೆ ಮುತ್ತಲ್ಲೆ ನಿನ್ನ ಸಿಂಗಾರಮಾಡಿ ಕಣ್ ತುಂಬಾ ನಾ ನೋಡುವೆ"

"ಕಾಂತೆ ಮೊದಲ ಪಲ್ಲವಿ ನಾ ಹಾಡಿದೆ ಅದನ್ನು ನೋಡಿಕೊಂಡು ನೀ ಉಸಿರು ಬಿಗಿ ಹಿಡಿದು ಹಾಡಿದೆ.. ಈಗ ನೀನೆ ಎರಡನೇ ಪಲ್ಲವಿಯನ್ನು ನೀನೆ ಮೊದಲು ಹಾಡು ನೋಡೋಣ.. ಆಗುತ್ತಾ ನಿನಗೆ.. ನೀನು ಹಾಡಿದ್ದನ್ನು ಕೇಳಿ ನಾ ಪ್ರಯತ್ನ ಪಡುವೆ.. "

"ಓಕೆ.. ನಾ ಸಿದ್ಧ"     "ಲತೆಯಲ್ಲಿ ಹೂವಾಗಿ ನಾನು ಮರಿ ದುಂಭಿಯಂತಾಗಿ ನೀನು.. 
ಹೂವಲ್ಲಿ ಹೊರಳಾಡಿ ಜೇನಾಟ ನಾವಾಡಿ ಆನಂದ ಹೊಂದೋಣವೇನು" 

ಸುಸ್ತಾಗಿ ಬಿಟ್ಟಾ.. "ಯಪ್ಪಾ ನೀನು ಹಾಡುಗಾರಿಕೆಯಲ್ಲಿ ರಾಕ್ಷಸಿ.. ನಿನಗೆ ಎಂಟು ಶ್ವಾಸಕೋಶಗಳು ಇವೆ ಅನ್ನಿಸುತ್ತೆ.. ಇರಲಿ ನಾನು ಪ್ರಯತ್ನ ಪಡುವೆ.. "

"ಬಾನಾಡಿ ನಾವಾಗಿ ಹಾರಿ.. ಬಾನಲ್ಲಿ ಒಂದಾಗಿ ಸೇರಿ.. ಹೊಸ ಆಟ ಆಡೋಣ ಹೊಸ ನೋಟ ನೋಡೋಣ ಮುಗಿಲಿಂದ ಜಾರೋಣವೇನು.. " ನಾ ಸೋತೆ.. ನಿನ್ನ ಹಾಗೆ ನಾ ಹಾಡಲು ಸಾಧ್ಯವೇ ಇಲ್ಲ..

ಕಾಂತ ನಾವಿಬ್ಬರು ಒಂದಾದ ಮೇಲೆ ಸೋಲು ಗೆಲುವಿನ ಮಾತೆಲ್ಲಿ ಇದೆ.. ಇರು ಈ ಹಾಡನ್ನು ಪೂರ್ತಿ ಮಾಡೋಣ
"ಇನ್ನೆಂದು ನೆರಳಾಗಿ ನಾ ಬಾಳುವೆ.. ನಾನು ನೀನು ಒಂದಾದ ಮೇಲೆ ಹೀಗೇಕೆ ನನ್ನನ್ನೇ ನೋಡುವೆ.. "

ಇಬ್ಬರೂ "ಕಣ್ಣಲ್ಲೂ ನೀನೆ ಮನದಲ್ಲೂ ನೀನೆ ಎಲ್ಲೆಲ್ಲೂ ನೀ ಕಾಣುವೆ"

ಇಬ್ಬರ ಕಣ್ಣಲ್ಲೂ ಆನಂದ ಭಾಷ್ಪ ಜೋಗದ ಧಾರೆಯಾಗಿತ್ತು.. "ಹೌದು ಕಷ್ಟ ಸುಖ ದುಖಃ ಇವೆಲ್ಲವೂ ನಮ್ಮನ್ನು ಬಂಧಿಸಿಡುವ ದಾರಗಳು.. ಇವುಗಳ ಜೊತೆಯಲ್ಲಿ ಬಾಂಧ್ಯವದಲ್ಲಿ ನಾ ನಾಕ ಕಾಣಬೇಕು.. ಎನ್ನುವ ನಿನ್ನ ಮಾತು ನನಗೀಗ ಅರ್ಥವಾಗುತ್ತಿದೆ.. ಕಾಂತ.. ನೀ ನನ್ನ ಬಾಳಿನ ಬೆಳಕು.. ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರೆ ಹಸಿರು... ಕಣೋ ಕಾಂತ.. "

"ಕಾಂತೆ.. ಜೀವನದ ಹೂ ಹಾಸಿನ ಮೇಲೆ.. ಕಣ್ಣಿಗೆ ಕಾಣದ ಚಿಕ್ಕ ಚೊಕ್ಕ ಮುಳ್ಳುಗಳು ಇರುತ್ತವೆ.. ಹಾಗೆಯೇ ಕಣ್ಣಿಗೆ ಕಾಣದ ಆದರೆ ನಾಸಿಕಕ್ಕೆ ಮುದ ನೀಡುವ ಸುವಾಸನೆಯು ಇರುತ್ತದೆ.. ಮುಳ್ಳಿಗೆ ಹೆದರಿದರೆ ಸುವಾಸನೆ ಸಿಗೋಲ್ಲ.. ಸುವಾಸನೆಯಲ್ಲಿ ಮುಳ್ಳಿನ ನೋವು ಮಾಯಾ.. ಅಲ್ಲವೇ.. "

ಹೌದು ಹೌದು.. ಐ ಲವ್ ಯು ಕಾಂತ.. ಬಿಗಿದಪ್ಪಿ.. ಗಲ್ಲಕ್ಕೆ ಒಂದು ಪಪ್ಪಿ ಕೊಟ್ಟಳು.. ಮೊಬೈಲ್ ನಲ್ಲಿ "ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ಗಲ್ಲಕ್ಕೆ ಕೆನ್ನೆಗೆ ಮತ್ತೊಂದು ಕಾಂತೆ ಕೊಡುವೆಯ"

ನಾಚಿ ನೀರಾದ ಕಾಂತೆ ಆ ಹಾಡಲ್ಲಿ ಹೇಳಿದಂತೆ ............

(ಈ ಹಾಡು ಸುಮಾರು ಇಪ್ಪತ್ತೈದು ವರ್ಷಗಳಿಂದ ನನ್ನನ್ನು ಕಾಡಿತ್ತು.. ಏನೋ ಒಂದು ವಿಚಿತ್ರ ಶಕ್ತಿ ಇದೆ.. ಈ ಹಾಡಲ್ಲಿ ಎಂದು.. 
ಒಂದು ದಿನ.. ವಾಕ್ ಮ್ಯಾನ್ ನಲ್ಲಿ ಕಿವಿ ಕಿತ್ತು ಹೋಗುವ ಹಾಗೆ ಈ ಹಾಡನ್ನು ಕೇಳಿದೆ.. ನನಗೆ ಅನಿಸಿದ ಮಾತು 

ಶ್ರೀ ಎಸ್ ಪಿ ಬಾಲೂ ಹಾಗೂ ಶ್ರೀಮತಿ ಎಸ್ ಜಾನಕಿಯಮ್ಮ ಹಾಡಿದ ಶ್ರೇಷ್ಠ ಹಾಡು ಇದು.. ಎಸ್ಪಿ ಸ್ವಲ್ಪ ಉಸಿರು ಬಿಟ್ಟು ಬಿಟ್ಟು ಪಲ್ಲವಿಯನ್ನು ಹಾಡಿದರೆ.. ಜಾನಕಿಯಮ್ಮ ಒಂದೇ ಓಘದಲ್ಲಿ ಹೇಳುತ್ತಾರೆ.. ಅದರಲ್ಲೂ "ನೆನಪಿಂದ" ಎನ್ನುವ ಪದ ಹಾಡುವಾಗ ಅವರ ಧ್ವನಿ.. ಆಹಾ ಅದನ್ನು ಕೇಳಿ ನೋಡಿ.. ಈ ಹಾಡನ್ನು ನೀವು ಅಪ್ಪಿಕೊಳ್ಳುತ್ತೀರ.. 

ಈ ಹಾಡಿಗೆ ಅಭಿನಯಿಸಿದ ಅನಂತ್ ನಾಗ್ ಲಕ್ಷಿ.. ಇವರಿಬ್ಬರ ನಡುವೆ ನಾಚಿಕೆ, ತುಸು ಪ್ರೀತಿ, ತುಸು ರೋಮಾಂಚನ, ಕಣ್ಣಲ್ಲೇ ಹಾಡುವ ಪರಿ, ಒಬ್ಬರನ್ನು ಒಬ್ಬರು ಮೀರಿಸುವಂತೆ ಅಭಿನಯ.. ನಿಜವಾದ ಸತಿ ಪತಿಯರು ಅಥವಾ ಪ್ರೇಮಿಗಳು ಎನ್ನುವ ರೀತಿಯಲ್ಲಿ ಕಣ್ಣಲ್ಲೇ ಜಗಳ.. ಆಹಾ.. ಸೂಪರ್ 

ಇಂತಹ ಪ್ರಣಯ ಗೀತೆಯನ್ನು ಬರೆದ ಶ್ರೀ ಚಿ ಉದಯಶಂಕರ್.. ಅದಕ್ಕೆ ಬಂಗಾರದ ಸಂಗೀತವನ್ನು ಕೊಟ್ಟ ಶ್ರೀ ರಾಜನ್ ನಾಗೇಂದ್ರ ಜೋಡಿ.... ಹತ್ತಕ್ಕೆ ಹತ್ತು ಅಂಕಗಳು.. 

ಬಹುದಿನಗಳ ಕನಸು.. ಈ ಹಾಡಿನ ಬಗ್ಗೆ ಬರೆಯಬೇಕು ಎಂದು.. ಈ ಹಾಡನ್ನು ಕೇಳಿದಾಗೆಲ್ಲ ನೋಡಿದಾಗೆಲ್ಲ ನನಗೆ ನೆನಪಿಗೆ ಬರುವುದು ಪ್ರಕಾಶಣ್ಣ ಮತ್ತು ಆಶಾ ಅತ್ತಿಗೆ.. ಈ ಹಾಡಿನಲ್ಲಿ ಬರುವ ಪ್ರತಿ ಸಾಲುಗಳು, ಪ್ರತಿ ಅಭಿನಯ ನನಗೆ ಇವರಿಬ್ಬರನ್ನು ನೆನಪಿಗೆ ತರುತ್ತದೆ.. ಅವರ ವಿವಾಹ ದಿನಕ್ಕೆ ಬರೆಯಬೇಕು ಎಂದು ಅಂದುಕೊಂಡಿದ್ದೆ.. ಸಮಯದ ಅಭಾವ ಆಗಿರಲಿಲ್ಲ.. ಆದರೇನಂತೆ.. ಪ್ರಕಾಶಣ್ಣ ಆಶಾ ಅತ್ತಿಗೆ ಯಾವ ನಾಯಕ ನಾಯಕಿಗೆ ಕಮ್ಮಿ.. ನಮ್ಮ ಬ್ಲಾಗ್ ಲೋಕದ ಸೂಪರ್ ನಾಯಕ ನಾಯಕಿ.... ಧನ್ಯೋಸ್ಮಿ ಬ್ಲಾಗ್ ಲೋಕ.. )

Sunday, June 15, 2014

"ಸುಧಾ" ಪರಿಮಳ... ಗಾಳಿಯಲ್ಲಿ ಲೀನವಾಯಿತು

"ನಾನು ಎಂಬುದು ಅಜ್ಞಾನ, ನನ್ನದು ಎನ್ನುವುದು ಅವಿವೇಕ, ನನ್ನಿಂದಲೇ ಎನ್ನುವುದು ಅಹಂಕಾರ"

ಅಣ್ಣಾವ್ರ ಭಕ್ತ ಪ್ರಹ್ಲಾದ ಚಿತ್ರದ ಸಂಭಾಷಣೆ ವಿಪರೀತ ಕಾಡ ಹತ್ತಿತು..

ನಾ ಅದು ಮಾಡಿದೆ ನಾ ಇದು ಮಾಡಿದೆ ನಾ ಹಾಗೆ ಸಹಾಯ ಮಾಡಿದೆ ನಾ ಹೀಗೆ ಅವರನ್ನು ಕಷ್ಟದಿಂದ ಮೇಲೆತ್ತಿದೆ.. ನನಗೆ ಅದು ಕಷ್ಟ ನನಗೆ ಇದು ಕಷ್ಟ.. ಅದು ಹೀಗಿದ್ದರೆ ನಾ ಹೀಗಿರುತ್ತಿದೆ.. ಹೀಗೆ ರೆ ಪ್ರಪಂಚದಲ್ಲಿ ಹರಿಯಲಾರದ ವಿಷಯಗಳೇ ಇಲ್ಲ ಆಸೆಗಳೇ ಇಲ್ಲ..

ನನ್ನ ಸಹೃದಯ ಮಿತ್ರ.. ಶ್ರೀ ಪ್ರಕಾಶ್ ಹೆಗ್ಗಡೆಯವರು ಕಷ್ಟ ಎನ್ನುವ ಬಗ್ಗೆ ಒಂದು ಸೂಪರ್ ಲೇಖನ ಬರೆದಿದ್ದರು.. ಅದು ಇತ್ತೀಚಿಗಷ್ಟೇ ನಾಟಕದ ರೂಪವಾಗಿ ಓದುಗರ ಪ್ರೇಕ್ಷಕರ ಮನಸ್ಸನ್ನು ಸೆರೆ ಹಿಡಿದಿತ್ತು..

ಕಷ್ಟದ ಒಂದು ಮಗ್ಗಲಿನ ಬಗ್ಗೆ ಅರಿವಾಗಿದ್ದ ಹೊತ್ತು.... ತಲೆಗೆ ಇನ್ನೊಂದು ಸಮಸ್ಯೆ ಕಾಡ ಹತ್ತಿತು..

ಹೌದು.. ಕತ್ತಲೆಯ ನೆರಳಿಗಿಂತ ಕಾಡುವುದು ಯಾವುದು..?

ಜನನದಿಂದಲೇ ಮರಣವನ್ನು ಬೆನ್ನಿಗೆ ಅಂಟಿಸಿಕೊಂಡು ಬರುವ ನಾವೆಲ್ಲರೂ.. ಯಾವೊತ್ತೋ ಒಂದು ದಿನ ಅದರ ಭೇಟಿ ಆಗಿಯೇ ತೀರುತ್ತದೆ.. ಆದರೆ ಪ್ರತಿ ಕ್ಷಣವೂ ಸಾವಿನ ಅರಮನೆಯಲ್ಲಿ ಕಳೆಯುವುದು.. ಯಾವಾಗಾದರೂ ಕದ ದೂಡಿಕೊಂಡು ಬರಬಹುದು ಎನ್ನುವ ವಿಚಿತ್ರ ಕಾಯುವಿಕೆಯಲ್ಲಿ ಅಥವಾ ನಿರೀಕ್ಷೆಯಲ್ಲಿ ಸುಮಾರು ಐವತ್ತೆರಡು ವಸಂತಗಳನ್ನು ಕಳೆಯುವುದು ಒಂದು ಸವಾಲೇ ಸರಿ..

ಕೈ ಹಿಡಿದು ಜೀವನ ನೀಡಿದ ಪತಿರಾಯ.. ತನ್ನ ಕರುಳಿನ ಬಳ್ಳಿಯನ್ನು ಹಂಚಿಕೊಂಡು ವಂಶದ ಬೆಳಕಾದ ಮಗರಾಯ.. ಈ ಎರಡು ಬೆಳಕಲ್ಲಿ ತನ್ನ ಜೀವನದ ಕತ್ತಲೆಯ ಕಾಲನನ್ನು ದೂರದಿಂದಲೇ ನೋಡುತ್ತಾ.. ಒಮ್ಮೆ ಹತ್ತಿರ ಬರುವ ಇನ್ನೊಮ್ಮೆ ದೂರ ಹೋಗುವ ಆ ಜವರಾಯನ ಭೇಟಿ.. ಕಡೆಯಲ್ಲಿ ನಡೆದೆ ಹೋಯಿತು..

ಭಯ, ಆತಂಕ, ಸಂಕಟ ಈ ಪದಗಳಿಗೆ "ಸುಧಾ" (ನನ್ನ ಸೋದರತ್ತೆಯ ಮಗಳು) ಇವಳಿಗೆ ಇರಲಿಲ್ಲವೋ ಅಥವಾ ಇದ್ದರೂ ಪತಿರಾಯ ಮತ್ತು ಮಗರಾಯನ ಸಂಗಡ ಅದು ಬೆನ್ನಿನಿಂದ ಬಹು ದೂರದಲ್ಲಿ ನೆಡೆದು ಬರುತ್ತಿತ್ತೋ ಅರಿಯದು..

ಸರಿ ಸುಮಾರು ೩೪ ವಸಂತಗಳಿಂದ ಅವಳನ್ನು ನೋಡುತ್ತಾ ಬಂದಿದ್ದೆ.. ಎಂದೂ ಕೂಡ ಅವಳ ಮುಖದಲ್ಲಿ, ಮಾತಿನಲ್ಲಿ ಬೇರೆ ಲೋಕಕ್ಕೆ ಪಯಣಿಸಲು ರಹದಾರಿ ಕೈಯಲ್ಲಿ ಹಿಡಿದಿದ್ದರೂ ಒಮ್ಮೆಯೂ ಅದರ ಸುಳಿವು ಮುಖದಲ್ಲಿ ತೋರದಿದ್ದದು ಅವಳ ಅಚಲ ಆತ್ಮ ವಿಶ್ವಾಸ, ತನ್ನ ಮೇಲೆ ಇರುವ  ದೃಢ ನಂಬಿಕೆಗೆ ಒಂದು ಸಾಕ್ಷಿ..

ಒಂದು ವಸ್ತುವನ್ನು ಸುಟ್ಟಾಗ ಒಂದು ಬದಿಯಿಂದ ಅಗ್ನಿಯ ಜ್ವಾಲೆ ನುಂಗುತ್ತಾ ಬರುವ ಹಾಗೆ.. ತನ್ನ ದೇಹದಲ್ಲಿ ನುಗ್ಗುತ್ತಿರುವ ಕಾಲನ ಅತಿಕ್ರಮಣದ ಬಗ್ಗೆ ಅರಿವಾಗಿಯೂ ಕೂಡ ನಗುತ್ತ ನಗುತ್ತ ದೇಹ ದಂಡಿಸುತ್ತಾ ತನ್ನ ಕುಟುಂಬದ ಏಳಿಗೆಗೆ ತನ್ನ ಬದುಕನ್ನು ಮುದಿಪಾಗಿಟ್ಟದ್ದು ಸುಧಾಳ ಹೆಗ್ಗಳಿಕೆ..

ದೇಹದ ಪ್ರತಿ ಅಂಗಗಳು ನನಗೆ ಸಾಕಾಯ್ತು ಎನ್ನುವವರೆಗೂ ದುಡಿಸಿ.. ಅವುಗಳು ಸಾಕು ಎನ್ನುವ ಈ ಘಳಿಗೆಯಲ್ಲಿ ತಾನೂ ಹೊರಟೆ ಎಂದು ಹೇಳುತ್ತಾ ಬಾರದ ಲೋಕಕ್ಕೆ ತನ್ನ ಪೂರ್ವಜರನ್ನು ಸೇರಲು ಹೊರಟೆ ಬಿಟ್ಟಳು..

ಇನ್ನೂ ಆಕೆಯ ಪತಿರಾಯ ಶ್ರೀ ಲಕ್ಷ್ಮಿಕಾಂತ.. ಲಕ್ಷ್ಮಿಯ ಶ್ರೀಮನ್  ನಾರಾಯಣನನ್ನು ನೋಡಿಕೊಳ್ಳುವ ಹಾಗೆ.. ನಾರಾಯಣ ತನ್ನ ಮಡದಿಯನ್ನು ತನ್ನ ವಕ್ಷ ಸ್ಥಳದಲ್ಲಿ ಇಟ್ಟುಕೊಂಡು ಜೋಪಾನ ಮಾಡುವ ಹಾಗೆ.. ಕಣ್ಣಲ್ಲಿ ಕಣ್ಣಿಟ್ಟು ತನ್ನ ಮಡದಿಯನ್ನು ನೋಡಿಕೊಂಡರು.. ಯಾವ ಘಳಿಗೆಯಲ್ಲಿ ತನ್ನ ಮುದ್ದಿನ ಮಡದಿ ಇಹಲೋಕ ಬಿಡಬಹುದು ಎಂಬ ಅರಿವಿದ್ದರೂ ಗಂಧದ ಕೊರಡು ತೇಯುವ ಹಾಗೆ ತನ್ನ ಮಡದಿಯ ಶುಶ್ರೂಷೆಯಲ್ಲಿ ತಮ್ಮ ಜೀವನದ ಸಾರ್ಥಕ್ಯ ಪಡೆದುಕೊಂಡರು..

ದೇವನ ನಿಯಮ ವಿಚಿತ್ರ ಆದ್ರೆ ಸದಾ ಅನುಕರಣೀಯ.. ನ್ಯೂನತೆ ಇರುವ ಕಾಯವನ್ನು ಕೊಟ್ಟಿದ್ದರು ಆ ಕಾಯವನ್ನು ಕಾಪಾಡಲು ಸುಂದರ ಮನದ ಸಂಗಾತಿಯನ್ನು ಕೊಟ್ಟಿದ್ದ ಆ ಭಗವಂತ..

ಇನ್ನೂ ಆಕೆಯ ಸುತ.. ಸುಮುಖ ಎಂಬ ಹೆಸರಿನಂತೆ ಪಾರ್ವತಿ ದೇಹದಿಂದ ಬಂದ ಗಣಪನ ಹಾಗೆ ತನ್ನ ಮಾತೆಯ ಸೇವೆಯನ್ನು ಹಗಲು ಇರುಳು ಎಂದು ನೋಡದೆ ಮಾಡಿದ್ದು.... ಆಕೆಯ ಆರೋಗ್ಯವನ್ನು ಕಾಪಾಡಲು, ನೋಡಲು ಜೇನುಗೂಡಿನಲ್ಲಿ ಸೇವೆಮಾಡುವ ಜೇನುನೊಣದ ಹಾಗೆ ಸದಾ ಜಾಗ್ರತೆಯಿಂದ ಮಾತೆಯ ಸೇವೆ ಮಾಡಿ ಕೃತಜ್ಞತ ಭಾವ ಹೊಂದಿದ್ದು ನೋಡಿದವರಿಗೆ ಮಾತ್ರ ಅರಿವಾಗುತ್ತದೆ..

ನಿಜಾ ಒಂದು ಪದಾರ್ಥ ನಮ್ಮ ಜೊತೆ ಬಹಳ ಕಾಲ ಇರಲಾರದು ಎನ್ನುವ ಸತ್ಯ ಗೊತ್ತಿದ್ದರೂ ಅದರ ಬಗ್ಗೆ ಯೋಚಿಸದೇ ಅದನ್ನು ಜತನ ಮಾಡುವುದರ ಬಗ್ಗೆಯೇ ಯೋಚಿಸಿ ಅದನ್ನು ಕಾರ್ಯಗತ ಮಾಡಿಕೊಂಡ ಶ್ರೀ ಲಕ್ಷ್ಮಿಕಾಂತ ಹಾಗೂ ಶ್ರೀ ಸುಮುಖ ನಿಜಕ್ಕೂ ನಮ್ಮ ನಡುವೆ ಇರುವ ಶ್ರವಣ ಕುಮಾರನ ಪಡಿಯಚ್ಚು ಎಂದು ಹೇಳುತ್ತೇನೆ..

ಕೇವಲ ಎರಡು ದಿನಗಳ ಹಿಂದೆಯಷ್ಟೇ ವಿವಾಹ ಜೀವನದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ಇಂದು ಸೂತಕದ ಛಾಯೆ.. ಆದರೆ ಸುಧಾಳಿಗೆ ತನ್ನ ಮನೆಯನ್ನು ಒಂದು ದಡಕ್ಕೆ ಮುಟ್ಟಿಸಿದ ನೆಮ್ಮದಿಯಿದ್ದರೆ.. ಕುಟುಂಬದವರಿಗೆ ಕಷ್ಟಗಳು ಮಂಜಿನ ಹನಿಯಾಗಿ ಕರಗಿ ಬೆಳ್ಳಿ ಹೂವು ಅರಳುವ ಸಮಯದಲ್ಲಿ ಸುಧಾಳ ಪರಿಮಳ ಗಾಳಿಯಲ್ಲಿ ಸೇರಿದ್ದು.....

ಯಾಕೋ ಆಗುತ್ತಿಲ್ಲ.. ಇಲ್ಲಿಯೇ ನಿಲ್ಲಿಸುವೆ..

"ಸುಧಾ" ನಾ ಕಂಡ ಕಷ್ಟ ಸಹಿಷ್ಣು, ಮತ್ತು ತಾಳ್ಮೆ ಎನ್ನುವ ಪದಗಳಿಗೆ ಪರ್ಯಾಯ ಪದವೇ ನೀನು.. ನಿನ್ನ ಕುಟುಂಬ ಖಂಡಿತ ನಿನ್ನನ್ನು ಮರೆಯದು.. ಹಾಗೆಯೇ ನಾವೂ ಕೂಡ.. ಹೋಗಿಬಾ ನಿನ್ನ ಪೂರ್ವಜರು.. ನಿನ್ನ ಮಾತಾ ಪಿತೃಗಳು ನಿನಗಾಗಿ.... !!!!

Friday, June 6, 2014

ಆಸೆಯು ಕೈಗೂಡಿತು... ಆಸರೆ "ದೊರೆ"ತಾಯಿತು....!

ನೃಪತುಂಗ ರಸ್ತೆಯ ಮಾರ್ಥ ಆಸ್ಪತ್ರೆ.. ಕೊನೆ ದಿನಗಳನ್ನು ಎಣಿಸುತ್ತಿರುವ ತನ್ನ ತಾಯಿ.. ..

"ಮಂಜಣ್ಣ ಒಂದು ಲೋಟ ಹಾಲು ತಂದು ಕೊಡ್ತೀಯ... ".. ನಮ್ಮ ಅಪ್ಪನಿಗೆ ಅವರ ಅಕ್ಕ ಗೌರಿ ಹೇಳಿದಂತೆ.. "ಅದೇ ಕಡೆಯ ಆಹಾರ ನನ್ನ ಅಜ್ಜಿ ತೆಗೆದುಕೊಂಡದ್ದು.." ನಂತರ ಯಾವ ಆಹಾರ ಕೂಡ ಅವರ ದೇಹಕ್ಕೆ ತಲುಪಲಿಲ್ಲ ಎಂದು ಹೇಳುತ್ತಿದ್ದರು...

ಅದಕ್ಕಿಂತ ಹಿಂದಿನ ಕೆಲ ದಿನಗಳಲ್ಲಿ ಅಜ್ಜಿ ತನ್ನ ಸೊಸೆ ಅಂದ್ರೆ ನನ್ನ ಅಮ್ಮನಿಗೆ ಹೇಳಿದ ಕಿವಿ ಮಾತು.. ಅಮ್ಮ ಹಲವಾರು ಬಾರಿ ಹೇಳುತ್ತಿರುತ್ತಾರೆ .

"ನೋಡು ವಿಶಾಲು.. ನನ್ನ ಮಗನು ಸೇರಿ ನಿನ್ನ ನಾಲ್ಕು ಮಕ್ಕಳು ಸೇರಿ ... ನಿನಗೆ ಐದು ಮಂದಿ ಮಕ್ಕಳು..ಅವರನ್ನೆಲ್ಲ ನೀನು ಕಾಪಾಡುತ್ತೀಯ ಎಂದು ನನಗೆ ಗೊತ್ತು.. ಇಡಿ ಜಗತ್ತನ್ನೇ ನಿನ್ನ ಮನೆಯ ಕಡೆ ತಿರುಗಿ ನೋಡುವ ಹಾಗೆ ಮಾಡು.. ನನ್ನ ಆಶೀರ್ವಾದ ಸದಾ ನಿನ್ನ ತಲೆಯ ಮೇಲೆ ಇರುತ್ತದೆ .. "

ಎಲ್ಲಾ ಮಧುರ ಹೃದಯದ ಬಳಗವನ್ನು ಹೊತ್ತು ತಂದ ಸಂಭ್ರಮ.. 
ಪ್ರಾಯಶಃ ಅಪ್ಪನಿಗೆ ಸ್ಫೂರ್ತಿ ಕೊಟ್ಟದ್ದು ಅಜ್ಜಿಯ ತಾಳ್ಮೆಯ ನಡೆ.... ಅಮ್ಮನಿಗೆ ಛಲ ಕೊಟ್ಟದ್ದು ಅಜ್ಜಿಯ ಆ ಕೊನೆಯ ಮಾತುಗಳು..

ಅಲ್ಲಿಂದ ಎಂಥಹ ವಿಷಮ ಪರಿಸ್ಥಿತಿಯಲ್ಲೂ ಅಪ್ಪ ತಾಳ್ಮೆ ಕಳೆದುಕೊಳ್ಳಲಿಲ್ಲ... ಅಮ್ಮ ಎಂದೂ ಛಲದ ಗುರಿಯ ಬೆನ್ನು ಬಿಡಲಿಲ್ಲ.. ಆ ಐದು ಮಕ್ಕಳನ್ನು ಗುಬ್ಬಚ್ಚಿ ಗೂಡಿನಲ್ಲಿ ಬೆಚ್ಚಗೆ ಕಾಪಾಡುವ ಹಾಗೆ ಕಾಪಾಡಿಕೊಂಡು ಬಂದರು...

ಛಲದೊಲ್ ಸುಯೋಧನ ಅನ್ನುವಂತೆ.. ಛಲದಲ್ಲಿ ಅಮ್ಮ ನಿಂತರೆ.. ಅಮ್ಮ ನಿನ್ನಷ್ಟೇ ಛಲ ನನ್ನಲ್ಲಿದೇ.. ಅಪ್ಪನಷ್ಟೇ ತಾಳ್ಮೆ ನನ್ನಲ್ಲಿದೆ ಎಂದು ಸಾಧಿಸಿ ತೋರಿಸಿದ್ದಾಳೆ ನನ್ನ(ಮ್ಮ) ಅಕ್ಕಾ..

*********************
"ಆಸೆಯು ಕೈಗೂಡಿತು.. ಆಸರೆ ದೊರೆತಾಯಿತು.. ಚಿಂತೆ ದೂರವಾಯಿತು.. ಮನಸು ಹಗುರವಾಯಿತು.. "

ಯಾಕೋ ಇಂದು ಈ ಹಾಡು ತುಂಬಾ ಕಾಡುತ್ತಿತ್ತು.. ಅಣ್ಣಾವ್ರ ಸೂಪರ್ ಎಂಟ್ರಿ ಈ ಹಾಡಿನಲ್ಲಿ..

ಸರಿ ಸುಮಾರು ಈ ಸಿನಿಮಾ ಬಿಡುಗಡೆಯಾದ ೧೯೭೮-೭೯ ವರ್ಷದಲ್ಲಿಯೇ ಅಪ್ಪ ಬೆಂಗಳೂರಿಗೆ ಬರಬೇಕೆಂಬ ಹಂಬಲ ಹೊತ್ತಿದ್ದರು.. ಬೆಂಗಳೂರಿಗೆ ಬಂದು ಏನ್ ಮಾಡ್ತೀಯ ಎನ್ನುವ ಕಾಲೆಳೆಯುವ ಪ್ರಶ್ನೆ ಒಂದು ಕಡೆಯಾದರೆ.. ಮಂಜಣ್ಣ ಬೆಂಗಳೂರಿಗೆ ಹೋಗು.. ನಿನ್ನ ಮಕ್ಕಳು ಮುಂದೆ ಬರುತ್ತಾರೆ ಎನ್ನುವ ಸುಂದರ ಬೆನ್ನು ತಟ್ಟುವ ನುಡಿ.. ...

ಬೆನ್ನು ತಟ್ಟುವ ನುಡಿಯ ಜಾಡಲ್ಲೇ ಬೆಂಗಳೂರಿಗೆ ಬಂದು.. ಈ ಮಾಯಾನಗರಿಯಲ್ಲಿ ಕೇವಲ ಒಂದು ನೂರು ರೂಪಾಯಿಗೆ ಮನೆ ಬಾಡಿಗೆಗೆ ಕೊಡಿಸಿದವರು ಅವರ ಮಾವನ ಮಗನಾದ ಗುಂಡ ಎನ್ನುವವರು... ನಮ್ಮ ಮನೆಯ ಪ್ರತಿ ಏಳಿಗೆಯನ್ನು ನೋಡಿದ ಆ ಮಹನೀಯ ನಮ್ಮ ಮೆಚ್ಚಿನ "ಗುಂಡ ಮಾವ" ನಮ್ಮನ್ನು ಅಗಲಿ ಐದಾರು ವರ್ಷ ಆಯಿತು.. ಅವರ ಆಶೀರ್ವಾದ ನಮ್ಮ ಮನೆಯನ್ನು ಕಾಪಾಡುತ್ತಿದೆ ಎಂದರೆ ತಪ್ಪಿಲ್ಲ..
ಹಾಲಿನಂಥ ಮನಸ್ಸು ಉಕ್ಕಿದಾಗ ಸಿಗುವ ಸಂತಸ... ಆಹಾ!!!

ನನ್ನ ಅಪ್ಪನನ್ನು ಯಾವಾಗಲೂ "ದೊರೆ" ಎನ್ನುತ್ತಿದ್ದರು.. ಅವರು ಸುಮಾರು ಮೂವತ್ತು ವರ್ಷಗಳ ಹಿಂದೆ ಮಾತು ಇನ್ನೂ ನನ್ನ ಕಿವಿಯಲ್ಲಿ ಪ್ರತಿಧ್ವನಿಯಾಗುತ್ತಿರುತ್ತದೆ..

"ನೋಡು ದೊರೆ.. ಕಷ್ಟ ಬರುತ್ತೆ ಹೋಗುತ್ತೆ.. ನಿನ್ನ ಮಕ್ಕಳು ನಿನ್ನನ್ನು ದೊರೆಯ ಹಾಗೆ ನೋಡಿಕೊಳ್ಳುತ್ತಾರೆ.."

ಚದುರಿ ಹೋದ ಕಷ್ಟಗಳು ಸುಖದ ಊಟವನ್ನು ಹೊತ್ತು ತರುತ್ತವೆ.. !

ಅಜ್ಜಿ ಹೇಳಿದ ಮಾತಿನಂತೆ.. ನಮ್ಮ ಅಮ್ಮ ಅಪ್ಪ ನಮ್ಮನ್ನು ಯಾರ ಮನೆಯ ಬಾಗಿಲಿಗೂ ಹೋಗಲು ಬಿಡದೆ.. ಎಲ್ಲರೂ ನಮ್ಮ ಮನೆಯ ಕಡೆ ತಿರುಗಿನೋಡುವಂತೆ ಮಾಡಿದ್ದು ನನ್ನ ಅಪ್ಪ ಅಮ್ಮನ ಸಾಹಸವೆ ಸರಿ.. ಸೋದರ ಮಾವನ ಮಾತು ನಿಜವಾಗಿತ್ತು.. ದೊರೆಯ ಹಾಗೆ ಬಾಳಿದ ನನ್ನ ಅಪ್ಪ ಕಂಡ ಕನಸ್ಸನ್ನು ನನಸಾಗಿದ್ದನ್ನು ನೋಡಲು ನಮ್ಮೊಂದಿಗೆ ದೈಹಿಕವಾಗಿ ಇರಲಿಲ್ಲ.. ಆದರೆ ನಮ್ಮ ಮನದಲ್ಲಿ ಮನೆಮಾಡಿದ್ದರು....

ಕನಸ್ಸಿನ ಸದನ ಕಣ್ಣ ಮುಂದೆ ನಿಜವಾದಾಗ!!!

*********************

ದೇವಲೋಕದಲ್ಲಿ ಹಾಗೆಯೇ ಹವಾ ಸೇವನೆಗೆ ಹೋಗಿದ್ದ ಅಪ್ಪ.. ಸಂತಸದಿಂದ ಹಾಡಿ ಕೊಂಡು ಬರುತ್ತಿದ್ದರು..

"ಆಸೆಯು ಕೈಗೂಡಿತು.. ಆಸರೆ ದೊರೆತಾಯಿತು.. ಚಿಂತೆ ದೂರವಾಯಿತು.. ಮನಸು ಹಗುರವಾಯಿತು.. "

ಅಲ್ಲಿಯೇ ಅವರ ಅಮ್ಮ ತಡೆದು "ಏನೋ ಮಂಜಣ್ಣ.. ಸಂತಸದಲ್ಲಿ ಹಾಡುತ್ತಿದ್ದೀಯ.. ಏನಾಯಿತು..." ಅಂದರು

"ಅಮ್ಮಾ ನಿನ್ನ ಮಾತಿನಂತೆ.. ಆಯಿತಮ್ಮ.. ನನ್ನ ಸಂಸಾರ ಗೆದ್ದು ಬಿಟ್ಟಿತು.... ನಿನ್ನ ಅನುಗ್ರಹ ತುಂಬಿದ ಮಾತುಗಳು ನನ್ನ ಸದನದಲ್ಲಿ ನೆಲೆಯಾಗಿ ನಿಂತು ಬಿಟ್ಟಿದೆ.. ಅಲ್ಲಿ ನೋಡಮ್ಮ ನನ್ನ ಮುದ್ದು ಮಗಳು ಹಾಡುತ್ತಾ ಆನಂದ ಭಾಷ್ಪದಲ್ಲಿ ಮುಳುಗುತ್ತಿದ್ದಾಳೆ.. ಎಲ್ಲರಿಗೂ ನನ್ನದೇ ಚಿಂತೆ.. ಅಯ್ಯೋ ದೇವರೇ.. ಈ ಸುಂದರ ದೃಶ್ಯ ನೋಡಲು ನಾನು ಕೂಡ ಅವರ ಜೊತೆ ಇರಬಾರದಿತ್ತೆ ಅನ್ನುವಷ್ಟು ಭಾವ ಉಕ್ಕಿ ಹರಿಯುತ್ತಿದೆ..

ಆನಂದ ದುಃಖ ಎರಡರ ಮಧ್ಯದ ಹಾದಿಯಲ್ಲಿ!!!

"ನನ್ನ ಮಡದಿ ಬಿಕ್ಕುತ್ತಿದ್ದಾಳೆ, ನನ್ನ ಮಗಳು ಕಣ್ಣೀರಾಗುತ್ತಿದ್ದಾಳೆ.. ನನ್ನ ಮಗ ಸೊಸೆ ಇವರ ಜೊತೆಯಲ್ಲಿ ಭಾವುಕರಾಗಿದ್ದಾರೆ.."

ಅಮ್ಮ ಯಾಕೋ ಈ ಹಾಡು ಹೇಳಬೇಕೆನಿಸುತ್ತಿದೆ

"ಕಂದಾ ನೊಂದು ಅತ್ತಾಗ,
ಯಾರೂ ಕಾಣದಾದಾಗ
ಸಂತೈಸಲೆಂದು ಓಡೋಡಿಬರುವ ತಾಯಂತೆ ನೀನು ಬಂದೆ

ಗಾಳಿ ಬೀಸಿ ಬಂದಾಗ, ಜ್ಯೋತಿ ಹೆದರಿ ಹೋದಾಗ
 ಆ ದೀಪದಲ್ಲಿ ನೀ ಜೀವವಾಗಿ ಹೋರಾಡಲೆಂದು ಬಂದೆ
ಉಸಿರಾಡುವಾಸೆ ತಂದೆ

ಆಸೆಯು ಕೈಗೂಡಿತು ಆಸರೆ ದೊರೆತಾಯಿತು
ಚಿಂತೆ ದೂರವಾಯಿತು ಮನಸು ಹಗುರವಾಯಿತು"

ಅಪ್ಪ ದೇವಲೋಕದಲ್ಲಿ ತನ್ನ ಅಮ್ಮನಿಗೆ ಹೇಳುತ್ತಿದ್ದರು.. "ಅಮ್ಮ ನೀನೆ ನನಗೆ ಶಕ್ತಿ ಕೊಟ್ಟದ್ದು.. ನಿನ್ನ ಪದಗಳೇ ನನಗೆ ಶಕ್ತಿ"

ಇಲ್ಲಿ ಭೂಲೋಕದಲ್ಲಿ ಮಕ್ಕಳು ಹೇಳುತ್ತಿದ್ದರು.. "ಅಪ್ಪ ನಿಮ್ಮ ತಾಳ್ಮೆಯ ಶಕ್ತಿಯೇ ನಮಗೆ.. ಅಮ್ಮನ ಛಲವೇ ನಮಗೆ ಶ್ರೀ ರಕ್ಷೆ"

                                                        *********************

 ಪ್ರಿಯ ಓದುಗರೇ ಏನೇನೋ ಬರೆದೆ ಅನ್ನಿಸುತ್ತಿದ್ದೆಯೇ..

ಹೌದು ಈ ಸಮಾರಂಭ ಒಂದು ರೀತಿಯಲ್ಲಿ ನನಸಾಗಲೇ ಬೇಕು ಎಂಬ ಹಠ ಹೊತ್ತ ಕನಸ್ಸಿನ ದಾರಿಯ ಒಂದು ತಿರುವು .. !

ಕಷ್ಟಗಳನ್ನೇ ಹೂವಿನ ದಾರಿಯನ್ನಾಗಿ ಮಾಡಿಕೊಂಡರೆ!!!
ಅವಮಾನ, ತಿರಸ್ಕಾರ, ಬಡತನದ ಬಿಸಿಲ ಚಾಟಿ ಏಟು, ನಿಂದನೆ, ಇದರ ಜೊತೆಯಲ್ಲಿ ಜೀವನ ತಾನಂದುಕೊಂಡ ಹಾಗೆ ಆಗದೆ ಬೇರೆ ಮಾರ್ಗವನ್ನು ತುಳಿದಾಗ.. ಆ ಕಲ್ಲು ಮುಳ್ಳಿನ ಹಾದಿಯನ್ನೇ ಹೂವಿನ ಹಾದಿಯನ್ನಾಗಿ ಮಾಡಿಕೊಂಡ ಅಪ್ಪ ಒಂದು ಕಡೆಯಾದರೆ... ಅಪ್ಪನಿಗಿಂತ ತಾನೂ ಏನು ಕಮ್ಮಿಯಿಲ್ಲ.. ಅಮ್ಮನ ಛಲ..  ಅಪ್ಪನ ತಾಳ್ಮೆ ಎರಡನ್ನು ಮೇಳೈಸಿಕೊಂಡು..ಅಪ್ಪನ ಕನಸ್ಸನ್ನು ನನಸು ಮಾಡಿದ ಸುಂದರ ಮನದ ಅಕ್ಕ ಇನ್ನೊಂದು ಕಡೆ!!!

ಖಾಲಿ ಜಾಗವನ್ನು ಭಾವನೆಗಳಿಂದ ತುಂಬಲು ಸಿದ್ಧವಿರುವ ಸ್ಥಳ.... 

ಕೋರವಂಗಲ ರಂಗಸ್ವಾಮಿ ಮಂಜುನಾಥ ಅವರ ಕುಟುಂಬ ಭದ್ರವಾಗಿ ಈ ಮಾಯಾನಗರಿ ಬೆಂಗಳೂರಿನಲ್ಲಿ ನೆಲೆ ಊರಲು.. . ಎಲ್ಲರ ಅನುಗ್ರಹದ ಆಶೀರ್ವಾದ ಪಡೆದು ಸದನವನ್ನು "ಅನುಗ್ರಹ ಸದನ" ಮಾಡಿಕೊಂಡ ಅಪರೂಪದ ಸಂಭ್ರಮ ನನ್ನಿಂದ ಹೀಗೆಲ್ಲ ಬರೆಯಿಸಿತು.. ..

ಗುದ್ದಲಿ ಪೂಜೆಯ ಸಂಭ್ರಮದಲ್ಲಿ ಅಕ್ಕಾ

ಸ್ಫೂರ್ತಿ ಎಲ್ಲ ಕಡೆಯೂ ಇರುತ್ತದೆ... ಮನಸ್ಸಿನ ಕಣ್ಣಿಟ್ಟು ನೋಡಬೇಕು ಎಂದು ಹೇಳುತ್ತಾರೆ.. ನಿಜ ನನ್ನ ಅಕ್ಕ, ನನ್ನ ಅಪ್ಪ, ನನ್ನ ಅಮ್ಮ, ನನ್ನ ಅಣ್ಣ ಇವರ ಜೀವನದ ಏರಿಳಿತಗಳು ಕೊಡುವ ಸ್ಫೂರ್ತಿ ನಿಜಕ್ಕೂ ಅವರ್ಣನೀಯ....

ಸಾಧನೆಯ ಸಂಭ್ರಮದಲ್ಲಿ

ಅಕ್ಕಾ ನಿನಗೊಂದು ಹಾಟ್ಸ್ ಆಫ್.. ಅಪ್ಪನ ಕನಸ್ಸನ್ನು ನನಸು ಮಾಡಿ.. ನಾವಿಂದು ಹಾಡುವ ಹಾಡಿಗೆ ನೀ ಸ್ಪೂರ್ತಿಯಾಗಿರುವೆ....

"ಗಾಳಿ ಬೀಸಿ ಬಂದಾಗ, ಜ್ಯೋತಿ ಹೆದರಿ ಹೋದಾಗ
ಆ ದೀಪದಲ್ಲಿ ನೀ ಜೀವವಾಗಿ ಹೋರಾಡಲೆಂದು ಬಂದೆ 
ಉಸಿರಾಡುವಾಸೆ ತಂದೆ

ಆಸೆಯು ಕೈಗೂಡಿತು ಆಸರೆ ದೊರೆತಾಯಿತು
ಚಿಂತೆ ದೂರವಾಯಿತು ಮನಸು ಹಗುರವಾಯಿತು"

Sunday, May 4, 2014

ಕಗ್ಗ ರಸಧಾರೆಯ ಎರಡನೇ ಸಂಪುಟ!!!

ಬಸವನಗುಡಿ ಸುತ್ತಿ ಬಂದರು.. ಕಹಳೆ ಬಂಡೆಯಿಂದ  ಜಾರಿಯಾಯಿತು... ಊಹುಂ.. ಏನೋ ತಪ್ಪಿಸಿಕೊಳ್ಳುತ್ತಿದೆ.. ಯಾಕೆ ಏನಾಗುತ್ತಿದೆ..

ಕಗ್ಗ ರಸಧಾರೆಯ ಮೊದಲ ಸಂಪುಟದ ಲೇಖನ ಓದಿ ಓದಿ ಇಟ್ಟಾಯಿತು.. ಪ್ರತಿ ಪದ, ಪ್ರತಿ ಚಿನ್ಹೆಗಳು ಮನಸ್ಸಲ್ಲಿ ಕೂತು ಬಿಟ್ಟಿವೆ.. ಎರಡನೇ ಸಂಪುಟ ಯಾವಾಗ ಬಿಡುಗಡೆಯಾಗುತ್ತದೆ.. ಯೋಚಿಸಿ ಯೋಚಿಸಿ ಹಣ್ಣಾಗಿತ್ತು ಮನಸ್ಸು..

ಟಕು ಟಕು.. ಟಾಂಗಾ ಸದ್ದಾಗುತ್ತಿತ್ತು.. ಜೊತೆಯಲ್ಲಿಯೇ..

"ಮಹನೀಯರೇ ಮತ್ತು ಮಹಿಳೆಯರೇ.. "

"ಥೋ ಮತ್ತೆ ಶುರುವಾಯಿತು ಈ ಚುನಾವಣಾ ಭರಾಟೆ.. "

ಒಂದು ಚಿಳ್ಳೆ ಓಡಿ ಬಂದು.. "ಅಜ್ಜಾ ಅಜ್ಜ... ತಗೋ ತಗೋ ನಿನ್ನ ಚಿತ್ರ ಬಂದಿದೆ.. "

"ಏನಪ್ಪಾ ಅದು ನನ್ನ ಚಿತ್ರ.. ಚುನಾವಣೆಗೂ ನನಗೂ ದೂರ ಕಣಪ್ಪ"

"ಅಜ್ಜಾ.. ಚುನಾವಣಾ ಮುಗಿದು ಹೋಗಿದೆ.. ಅಬ್ಕಿ ಬಾರ್ ಮೋದಿ ಸರ್ಕಾರ್ ಅಂತ ಇಡಿ ಭಾರತ ದೇಶದಲ್ಲಿ ಮಾತಾಡುತ್ತಿದ್ದಾರೆ.. ನೀವು ಇನ್ನು ಅಲ್ಲಿಯೇ ಇದ್ದೀರಾ.. ಇದೆ ತಿಂಗಳ ಮೂರನೇ ವಾರದಲ್ಲಿ ಭಾರತ ಹಿಂದಕ್ಕೆ ಓಡುತ್ತದೆಯೋ ಅಥವಾ ಮುಂದಕ್ಕೆ ಓಡುತ್ತದೆಯೋ ಎಂದು ತಿಳಿಯುತ್ತದೆ.."

ಮತ್ತೆ ಇದೇನಪ್ಪ ಟುಕು ಟುಕು ಶಬ್ದ.. ಟಾಂಗದವ ಕಿರುಚುತ್ತಾ ಇದ್ದಾನೆ..

"ಅಜ್ಜಾ ನಿಮ್ಮ ಕಗ್ಗದ ಎರಡನೇ ಸಂಪುಟ ಶ್ರೀ ರವಿ ತಿರುಮಲೈ ಅವರು ಪ್ರಕಟಗೊಳಿಸುತ್ತಿದ್ದಾರೆ... "

"ಓಹ್ ಹೌದಾ.. ನನಗೊಂದು ಸಹಾಯ ಮಾಡುತ್ತೀಯ.. "

"ಹೇಳಿ ಅಜ್ಜಾ"

"ನಾನೇ ಸೃಷ್ಟಿಸಿದ ಪಾತ್ರ ನೀನು ಮಂಕುತಿಮ್ಮ... ದಯಮಾಡಿ ಆ ಕಾರ್ಯಕ್ರಮದ ವಿವರಣೆಯನ್ನು ನನಗಾಗಿ ಹೇಳುವೆಯ"

"ಅಜ್ಜಾ. ಬರಿ ಬೈಗುಳವಾಗಿದ್ದ ನನ್ನ ಪಾತ್ರದ ಹೆಸರನ್ನು ಲೋಕದಲ್ಲೇ ಮನ್ನಣೆ ಕೊಟ್ಟಿದ್ದು ನಿಮ್ಮ ಕಗ್ಗಗಳು.. ಆ ಕಾರ್ಯಕ್ರಮದ ವೀಕ್ಷಕ ವಿವರಣೆ ನಾನೇ ಕೊಡಬೇಕು ಅಂದರೆ.. ನಿಮಗೆ ಎಷ್ಟು ಕೃತಜ್ಞತೆ ಹೇಳಿದರು ಸಾಲದು ಅಜ್ಜಾ.. ಇಗೋ ಈಗಲೇ ಬಂದೆ.. "

****************

"ಅಜ್ಜ ಮಂಕುತಿಮ್ಮ ಉವಾಚಾ"

"ಅಜ್ಜಾ ಶ್ರೀ ರವಿ ತಿರುಮಲೈ ಅವರ ಬಂಧು ವರ್ಗ, ಮಿತ್ರ ಮಂಡಳಿ, ಫೇಸ್ ಬುಕ್ ಗೆಳೆಯರು, ಬ್ಲಾಗ್ ಲೋಕದ ಕೆಲವು ಮಣಿಗಳು ಎಲ್ಲಾರೂ ನಿಧಾನವಾಗಿ ಅಂಗಣಕ್ಕೆ ಬರುತ್ತಿದ್ದಾರೆ.. ಪ್ರತಿಯೊಬ್ಬರನ್ನು ತಪ್ಪದೆ ಸ್ವಾಗತ ಮಾಡಿ.. ಅವರ ಉ. ಕು. ಸಾಂ. ವಿಚಾರಿಸಿ, ತಿಂಡಿ ಕಾಫಿ ಟೀ ಬಗ್ಗೆ ಕೇಳುತ್ತಿದ್ದಾರೆ.. ಎಲ್ಲರೂ ಇದೊಂದು ನಮ್ಮದೇ ಸಮಾರಂಭ ಎನ್ನುತ್ತಾ ಭಾಗವಹಿಸುತ್ತಿದ್ದಾರೆ.. "

"ಶ್ರೀ ಗುಂಡಪ್ಪ ಉವಾಚ.. ಹಾ ಮುಂದೆ"

"ನಿಲ್ದಾಣದಿಂದ ಹೊರಡುವ ಬಸ್ ತನ್ನ ಪ್ರಯಾಣಿಕರೆಲ್ಲ ಹತ್ತಿದ್ದಾರ ಇಲ್ಲಾವ ಎಂದು ಪರೀಕ್ಷೆ ಮಾಡುವ ಹಾಗೆ ಶ್ರೀ ರವಿಯವರು ಬಂದ ಎಲ್ಲರನ್ನು ಗಮನಿಸುತ್ತಾ.. ಯಾರೂ ಇನ್ನು ಬಂದಿರಲಾರರು ಎಂದು ಯೋಚಿಸುತ್ತಾ ಸಂಬಂಧಪಟ್ಟವರಿಗೆ ಕರೆಗಳನ್ನು ಮಾಡುತ್ತಾ.. ಅಲ್ಲಿಯೇ ಇದ್ದ ತಮ್ಮ ಗೆಳೆಯರಿಗೆ ಅವರಿಗೆ ಕರೆ ಮಾಡಿ.. ಅವರು ಬಂದ್ರಾ.. ಇವರು ಬಂದ್ರಾ ಎಂದು ಹೇಳುತ್ತಿದ್ದರು.. "

 ಎಲ್ಲರೂ ಬಂದಿದ್ದಾರ.. ಓಹ್ ಅವರು ಬರಬೇಕಿತ್ತು ತಾಳಿ ಕರೆ ಮಾಡುವೆ!!! 

"ಶ್ರೀ ಗುಂಡಪ್ಪ ಉವಾಚ.. ಅದು ಹೇಳಿ ಇದು ಹೇಳಿ ದಾರಿ ತಪ್ಪಿಸದಿರು
                                  ಬರುವವರು ಬರದೆ ಇರಲಾರರು
                                  ಬರದಿರುವವರು ಕೂಗಿದರು ಬರಲಾರರು
                                  ಎಲ್ಲರೂ ಬಂದಿದ್ದಾರೆ ಎಂದು ನೋಡೋ ಮಂಕುತಿಮ್ಮ!!"

"ಮಂಕುತಿಮ್ಮ ಉವಾಚ.. ಅಜ್ಜ ಈ ಸಂಪುಟ ಮೊದಲ ಸಂಪುಟಕ್ಕಿಂತ ಐವತ್ತು ಕಗ್ಗಗಳು ಹೆಚ್ಚು.. ಮೊದಲ ಸಂಪುಟ ೧ - ೨೦೦ ಕಗ್ಗಗಳ ಬಗ್ಗೆ ವಿವರಣೆ ಇದ್ದರೇ.. ಎರಡನೇ ಸಂಪುಟ ೨೦೧ - ೪೫೦ ತನಕ ಇದೆ.."

"ಶ್ರೀ ಗುಂಡಪ್ಪ ಉವಾಚ .... ಸಂಖ್ಯೆಗಳು ಅಂಕೆಗಳೇ... ಅಂಕೆಗಳು ಲೆಕ್ಕಕ್ಕೆ ಸಿಕ್ಕುವವೇ
                                   ಸಿಕ್ಕ ಲೆಕ್ಕಕ್ಕೆ ಜಗತ್ತಿನ ಅಂಕೆಗಳು ನಿಲುಕುವವೇ
                                   ಅಂಕೆ ಇದ್ಡೋಡೇ ಜಗತ್ತಿಗೆ ಮಂಕೆ ಇರಲಾರದು
                                   ಈ ಸಂಪುಟದ ಬಗ್ಗೆ ಮತ್ತಷ್ಟು ಹೇಳು ಮಂಕುತಿಮ್ಮ!!"

"ಮಂಕುತಿಮ್ಮ ಉವಾಚ.. ಅಜ್ಜ ಈ ಸಂಪುಟದ ಪ್ರಕಟದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಎಸ್ ದಿವಾಕರ್ ಆಸೀನರಾಗಿದ್ದಾರೆ.. ಸರಳ ವಿರಳ ವ್ಯಕ್ತಿತ್ವದ ಶ್ರೀ ಗೋಪಾಲ ವಾಜಪೇಯಿ ಉತ್ಸುಕತೆಯಿಂದ ಕುಳಿತಿದ್ದಾರೆ .. ಮತ್ತು ಕಗ್ಗದ ತಾತ್ಪರ್ಯವನ್ನು ಹಂಚಲು ಮೊದಲ ಸಾಹಸ ಮಾಡಿ ಯಶಸ್ವಿಯಾದ ಶ್ರೀ ಶ್ರೀಕಾಂತನ್ ಬಂದಿದ್ದಾರೆ.. ಅಧ್ಯಕ್ಷತೆ ವಹಿಸಿಕೊಂಡಿರುವ ಸುಂದರ ನಗುಮೊಗದ ಶ್ರೀ ರಾಜಗೋಪಾಲ್ ಎಲ್ಲಾ ಆಸೀನರಾದ ಸಭಿಕರನ್ನು ನೋಡುತ್ತಾ ಅರೆ ಬೆಂಗಳೂರಿನಲ್ಲಿ ಭಾನುವಾರ ಬೆಳಗಿನ ಹೊತ್ತಿನಲ್ಲಿ ಇಷ್ಟೊಂದು ಮಂದಿ ಎಂದು ಆಶ್ಚರ್ಯ ಚಕಿತರಾಗಿದ್ದಾರೆ.. "


ಭಾನುವಾರದಂದು ಕೂಡ ಜಮಾಯಿಸಿದ್ದ ಆಸಕ್ತರು!

"ಶ್ರೀ ಗುಂಡಪ್ಪ ಉವಾಚ... ಮುಂದೆ"

"ಮಂಕುತಿಮ್ಮ ಉವಾಚ.. ಪ್ರತಿ ಕಾರ್ಯಕ್ರಮಕ್ಕೆ ಒಂದು ಆರಂಭ ಬೇಕು.. ಅದನ್ನ ಒದಗಿಸಿದವರು ಶಕುಂತಲ ಮೇಡಂ.. ಅದನ್ನ ಮುಂದುವರೆಸಿದರು ಶ್ರೀ ಪ್ರಸಾದ್"

ಕಾರ್ಯಕ್ರಮ ಶುರು ಮಾಡಿದ್ದು ಹೀಗೆ!!! 

"ಶ್ರೀ ಗುಂಡಪ್ಪ ಉವಾಚ.. ಆಹಾ ಎಷ್ಟು ಸೊಗಸಾಗಿದೆ ಮಂಕುತಿಮ್ಮ ನಿನ್ನ ವಿವರಣೆ.. ಅಲ್ಲಿಯೇ ಹೋಗಿ ನೋಡುತ್ತಿದ್ದೇನೆ ಅನ್ನಿಸುತ್ತಿದೆ.. ಮುಂದೆ"

"ಮಂಕುತಿಮ್ಮ ಉವಾಚ.. ಅಜ್ಜಾ ಗಣಪನಿಲ್ಲದೆ ಪೂಜೆ ಇಲ್ಲಾ.. ನಮ್ಮ ದೇಶದ ಕಾರ್ಯಕ್ರಮದಲ್ಲಿ ಹಾಡಿಲ್ಲದೆ ಗಣಪನ ಸ್ತುತಿಯಿಲ್ಲದೆ ಮುಂದೆ ಸಾಗಲು ಸಾಧ್ಯವೇ ಇಲ್ಲ.. ನಮಗಾಗಿ ವೈದ್ಯೋ ನಾರಾಯಣೋ ಹರಿಃ.. ಎನ್ನುತ್ತಲೇ ಸುಂದರವಾಗಿ ತಮ್ಮ ಸುಮಧುರ ಕಂಠದಲ್ಲಿ ಪ್ರಾರ್ಥನಾ ಗೀತೆ ಆರಂಭಿಸಿದರು ಶ್ರೀಮತಿ ಲತಾ ದಾಮ್ಲೆ ಮೇಡಂ.. ಆ ಗಾನಕ್ಕೆ ಗಾಯನಕ್ಕೆ ಮನಸೋಲದವರೇ ಇಲ್ಲಾ.. ಆ ಧ್ವನಿಯಲ್ಲಿನ ಏರಿಳಿತ.. ಪದಗಳ ಉಚ್ಚಾರ.. ಆಹಾ "

ಪ್ರಾರ್ಥನಾ ಗೀತೆ.. ಆಹಾ ಎಷ್ಟು ಇಂಪು!

"ಶ್ರೀ ಗುಂಡಪ್ಪ ಉವಾಚ.. ಹೌದು ಮಂಕುತಿಮ್ಮ.. ಗಾನ ಸುಧೆ ನನಗೂ ಕೇಳಿಸುತ್ತಿದೆ.. ಆಹಾ ನನ್ನ ಕಗ್ಗಗಳಿಗೆ ಗಾನದ ಹೊನ್ನಿನ ಹೊದಿಕೆ.. ಸುಂದರ ಅತಿ ಸುಂದರ.. ಹಾ ಮುಂದೆ"

"ಮಂಕುತಿಮ್ಮ ಉವಾಚ... ಮುಂದೆ ಒಬ್ಬೊಬ್ಬರೇ ಮಹನೀಯರು ತಮ್ಮ ತಮ್ಮ ಅನುಭವಗಳನ್ನು ಮತ್ತು ಕಗ್ಗಗಳು ತಮ್ಮ ಮೇಲೆ ಬೀರಿರುವ ಪರಿಣಾಮವನ್ನು ವಿವರಿಸುತ್ತಾ ಹೋದರು..

 ಲೋಕಾರ್ಪಣಗೊಂಡ ಸುಸುಮಯ!ಶ್ರೀ ಗೋಪಾಲ್ ವಾಜಪೇಯಿ

ಶ್ರೀ ಶ್ರೀಕಾಂತನ್ 

ಶ್ರೀ ದಿವಾಕರ್ ಎಸ್ 

ಶ್ರೀ ರಾಜಗೋಪಾಲ್ 
ಇದರ ನಡುವೆ..ಇನ್ನೊಂದು ಸಿರಿ ಕಂಠ ಇನ್ನೊಂದು ಗೀತೆಯನ್ನು ಉಲಿಯಿತು ಆ ಧ್ವನಿಯ ಒಡತಿ ಶ್ರೀಮತಿ ಅಂಜಲಿ ಹಲಿಯಾಲ್.. ಎಂಥಹ ಸುಂದರ ಧ್ವನಿ.. ಮಧುರ ಕಂಠ.. ಗೀತೆಗಳಿಗೆ ಬೇಕಾದ ಧ್ವನಿ.. ಅದರ ಕಂಪನ.. ಒಂದು ಧನ್ಯತಾ ಭಾವದ ಹಾಡನ್ನು ಎಷ್ಟು ಸುಮಧುರವಾಗಿ ಹೊರಹೊಮ್ಮಿಸಿದರು.. ಸುಂದರವಾಗಿದೆ ಅಜ್ಜಾ"

ಸುಶ್ರಾವ್ಯ ಹಾಡುಗಾರಿಕೆ.. 

"ಶ್ರೀ ಗುಂಡಪ್ಪ ಉವಾಚ.. 
ರಾಗಗಳಲ್ಲಿ ಹಲವಾರು ಅಕ್ಷರಗಳು 
ಅಕ್ಷರಗಳಲ್ಲಿ ಹಲವಾರು ಸ್ವರಗಳು 
ಸ್ವರಗಳಲ್ಲಿ ಏಳು ಕೋಣೆಗಳು 
ಆ ಏಳು ಕೋಣೆಗಳನ್ನು ಗ್ರಹಿಸಿರುವ ಇಬ್ಬರು... ಅವರೇ ಲತಾ  ಮತ್ತು ಅಂಜಲಿ ಮಂಕುತಿಮ್ಮ!!!

ಗಾನ ಸರಸ್ವತಿಯರು ..
ಲತಾ ಮೇಡಂ & ಅಂಜಲಿ ಮೇಡಂ
"ಮಂಕುತಿಮ್ಮ ಉವಾಚ .. ಅಜ್ಜಾ ಎಷ್ಟು ಸೊಗಸಾಗಿ ಹೇಳಿದಿರಿ.. ಹೌದು ಅವರಿಬ್ಬರ ಗಾಯನ.. ಮತ್ತು ಚಂದನ ವಾಹಿನಿಯ ಶ್ರೀಮತಿ ಆಶಾ ಜಗದೀಶ್ ಅವರ ಕೆಲವು ಕಗ್ಗಗಳ ಗಾಯನ ಮನಕ್ಕೆ ಮುದನೀಡಿತು"                             
              
"ಶ್ರೀ ಗುಂಡಪ್ಪ ಉವಾಚ ಹೌದು ಕಂದಾ.. ನೀ ಹೇಳಿದ ಮಾತುಗಳು ನಿಜಕ್ಕೂ ಸರಿಯಾಗಿದೆ.. ನಾನೇ ಅಲ್ಲಿ ಇದ್ದೇನೆ ಅನ್ನುವಷ್ಟು ಚಂದದ ವಿವರಣೆ ಕೊಡುತ್ತಿದ್ದೀಯ.. ಹಾ ಈ ಎರಡನೇ ಸಂಪುಟದ ಕತೃ ಶ್ರೀ ರವಿ ತಿರುಮಲೈ ಬಗ್ಗೆ ಸ್ವಲ್ಪ ಹೇಳು"
   
ಸಾರ್ಥಕ ಭಾವದಲ್ಲಿ ಶ್ರೀ ರವಿ ತಿರುಮಲೈ 
         
"ಮಂಕುತಿಮ್ಮ ಉವಾಚ ಇಡಿ ಕಾರ್ಯಕ್ರಮವನ್ನು ತಮ್ಮ ಗೆಳೆಯರ ಮುಂದಾಳತ್ವದಲ್ಲಿ ನಡೆಸಿಕೊಡಲು ಹೇಳಿ ತಾವು ಇಡಿ ಕಾರ್ಯಕ್ರಮದ ಚಂದ ಅಂದವನ್ನು ಸವಿಯುತ್ತಾ ಗಣ್ಯವ್ಯಕ್ತಿಗಳ ಜೊತೆ ಕೂತು ಅವರ ಆನಂದದ ಶರದಿಯಲ್ಲಿ ತಾನು ಮೀಯುತ್ತಾ.. ಆ ಅಭಿಮಾನ ವಿಶ್ವಾಸ ಪ್ರೀತಿ ಅಲೆಗಳ ಮೇಲೆ ತೇಲುತ್ತಾ ಸಾರ್ಥಕತೆಯ ಭಾವನೆಯನ್ನು ಅನುಭವಿಸಿದವರು ಶ್ರೀರವಿ ತಿರುಮಲೈ. ತಮ್ಮ ಚುಟುಕು ಮಾತುಗಳಲ್ಲಿ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತಾ ಗುರು ಹಿರಿಯರಿಗೆ ನಮಿಸಿ.. ಕಿರಿಯರಿಗೆ ಆಶೀರ್ವಚನಗಳನ್ನು ಕೊಡುತ್ತಾ.. ಅವರು ತಾವು ಪ್ರಕಟಿಸಿದ್ದಾ ಪುಸ್ತಕಗಳಿಗೆ ತಮ್ಮ ಅಭಿಮಾನ ಪೂರಿತ ಹಸ್ತಾಕ್ಷರ ಕೊಡುವ ದೃಶ್ಯ ನಿಜಕ್ಕೂ ಹೆಮ್ಮೆ ಎನಿಸಿತು ಅಜ್ಜಾ..."

"ಅಜ್ಜ ಒಂದು ಮಾತು.. ನೀವು ಬರೆದ ಅಷ್ಟೊಂದು ಕಗ್ಗಗಳ ಜೊತೆಯಲ್ಲಿ ಇಂದು ಕೆಲವು ಚಿಕ್ಕ ಚೊಕ್ಕ ಕಗ್ಗಗಳನ್ನು ನನ್ನ ಬಾಯಲ್ಲಿ ಹೇಳಿಸಿದ್ದೀರಲ್ಲ ಅದು ನ್ಯಾಯ ಸಮ್ಮತವೇ.. "

"ಮಂಕುತಿಮ್ಮ.. ಒಂದನ್ನು ನೋಡಿ ಇನ್ನೊಂದು ಕಲಿಯುವುದು ಈ ಕಲಿಯುಗದ ರೂಡಿ.. ನಾ ಬರೆದದ್ದು ಅನ್ನುವುದಕ್ಕಿಂತ ಆ ಬೊಮ್ಮ ಬರೆಸಿದ್ದು.. ನಾ ಬರೆದದ್ದು ಹಾಗೆಯೇ.. ಅದನ್ನ ನೋಡಿ ಇನ್ನೊಬ್ಬ ಬರೆದದ್ದು.. ತಪ್ಪಲ್ಲ.. ಸರಿಯಾಗಿದೆ.. ಮಂಕುತಿಮ್ಮ ನೀ ಬರೆದದ್ದು ನಾ ಬರೆಸಿದ್ದು ಎರಡು ಸರಿ.. "

ಅಜ್ಜ ಮತ್ತು ಮಂಕುತಿಮ್ಮ ಇಬ್ಬರೂ ಸ್ವಲ್ಪ ಹೊತ್ತು ಮೌನ .. ಆ ಮೌನದ ಕಡಲಲ್ಲಿ ಬಡಿಯುತ್ತಿದ್ದ ಅಲೆಗಳಲ್ಲಿ  ಇಬ್ಬರೂ ಮೀಯುತ್ತಿದರು.. ಸ್ವಲ್ಪ ಹೊತ್ತಾದ ನಂತರ.. ಕಣ್ಣು ಬಿಟ್ಟು ನೋಡಿದರೆ.. ಸಭಾಂಗಣ ಖಾಲಿ.. ಅಲ್ಲಿ ಯಾರೂ ಇಲ್ಲ.. ಆದರೆ ಕಗ್ಗಗಳ ಶಭ್ದಗಳ ಪ್ರತಿಧ್ವನಿ ಮಾರ್ಧನಿಯಿಡುತ್ತಿತ್ತು..

ಮಂಕುತಿಮ್ಮ ಲಗುಬಗನೆ ಆ ಅಂಗಣದಲ್ಲಿ ಕಾಲಿಟ್ಟ.. ಒಂದು ಕಟ್ಟು ಹೊಸಪುಸ್ತಕಗಳು.. ಕಾಯುತ್ತಿದ್ದವು ಅಜ್ಜನ ಚಿತ್ರದೊಂದಿಗೆ.. ಅದನ್ನು ತೆಗೆದುಕೊಂಡು ಹೊರಟ ಅಜ್ಜನ ಜೊತೆಯಲ್ಲಿ ಮತ್ತೆ ತಮ್ಮ ಸುಂದರ ಲೋಕಕ್ಕೆ..

ಅಜ್ಜ ಒಮ್ಮೆ ಹಿಂದೆ ತಿರುಗಿ ನೋಡಿದರು.. "ಮತ್ತೆ ಬರುವೆ ಕಂದಾ ಮೂರನೇ ಸಂಪುಟಕ್ಕೆ" ಎಂದು ತಮ್ಮ ಕೋಲನ್ನು ಕುಟ್ಟುತ್ತಾ ಕುಟ್ಟುತ್ತಾ ಕೂಗಿದರು.....

ಇಡಿ ಜಗತ್ತು ಕಗ್ಗ ಎಂದರೆ ಬಡವನ್ಗೀತೆ.. ಭಗವದ್ಗೀತೆ ಎಂದರೆ ಕಗ್ಗದ ಜೊತೆಯಲ್ಲಿ ನಿಲ್ಲಲು ತಾಕತ್ ಇರುವ ಇನ್ನೊಂದು ಗೀತೆ ಎಂದು ಜಗತ್ತು ಸಂಭ್ರಮಿಸಿತು!!!!
ಹೃದಯವಂತ ಮಣಿಕಾಂತ್ ಸರ್ ಅವರ ಪೋಸ್ಟರ್ನಲ್ಲಿನ ಮಕ್ಕಳು 

ಮಕ್ಕಳಿಗೆ ಅರ್ಥವಾಗುವ ಹಾಗೆ ಇದನ್ನು ಓದಿ ಮಕ್ಕಳು ನಕ್ಕು ನಲಿಯುವ ಹಾಗೆ ಮಾಡುವ ಈ ಕಾಯಕವನ್ನು ಹಮ್ಮಿಕೊಂಡದ್ದು ಕನ್ನಡ ಕಹಳೆಯನ್ನು ಮುಗಿಲಿನೆತ್ತರಕ್ಕೆ ಹಾರಿಸುವ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ!!!

ಕನ್ನಡ ಭಾಷೆ ಮುಗಿಲೆತ್ತರಕ್ಕೆ 

ಇಂತಹ ಒಂದು ಸುಂದರ ಸಂಪುಟವನ್ನು ಲೋಕಕ್ಕೆ ಅರ್ಪಿಸಿದ ಅಜ್ಜ ಶ್ರೀ ಗುಂಡಪ್ಪನವರಿಗೆ ನಮನಗಳನ್ನು ಹೇಳುತ್ತಾ ಇನ್ನೊಂದು ಸಂಪುಟಕ್ಕೆ ನಮ್ಮನ್ನು ಕಾಯುವಂತೆ ಮಾಡುತ್ತಿದ್ದಾರೆ ಸುಮಧುರ ಮನಸ್ಸಿನ ಶ್ರೀ ರವಿ ತಿರುಮಲೈ ಸರ್..

ಸರ್ ನಾವು ಕಾಯುತ್ತಿದ್ದೇವೆ ಅಜ್ಜನ ಜೊತೆಯಲ್ಲಿ!!!


Thursday, April 24, 2014

ಆಹಾ ನನ್ನ ಜನ್ಮ ಪಾವನವಾಯಿತು!!!

ನಿನ್ನೆ ರಾತ್ರಿ ತಲೆ ಓಡುತ್ತಿರಲಿಲ್ಲ..ಸಾಮಾನ್ಯ ನನಗೆ ಹಾಗೆ ಆಗುವುದಿಲ್ಲ.. ಏನಾದರು ಬರೆಯಬೇಕು ಅಂದರೆ ಅಷ್ಟೇ ಬರುತ್ತದೆ..  

ಯಾಕೋ ಅಣ್ಣಾವ್ರು ಮನದಾಳಕ್ಕೆ ಬರಲು ಸತ್ಯಾಗ್ರಹ ಮಾಡುತ್ತಿದ್ದರು ಅನ್ನಿಸುತ್ತಿತು.. 

ಬೆಳಿಗ್ಗೆ ಇದ್ದೆ.. ಬರೆಯೋಕೆ ಶುರು ಮಾಡಿದೆ.. ಮುಗಿಯಿತು.. ಆಫೀಸ್ ಗೆ ಹೋದೆ.. ಕೆಲಸ ಕಾಯಕ ನಡೆಯುತ್ತಿತು.. 

ವಾಪಸ್ ಬರುವಾಗ.. ಯಾಕೋ ಅಣ್ಣಾವ್ರ ದರ್ಶನ ಮಾಡೋಣ ಅನ್ನಿಸಿತು... ಸರಿ ಕಾರನ್ನು ನಿಲ್ಲಿಸಿ ಸೀದಾ ಹೋದೆ.. 

ಹೆಜ್ಜೆ ಇಟ್ಟೆ.. 

"ಈ ನೋಡೋ ಇವನೇ ಕಣೋ.. ಚಿತ್ರಗಳನ್ನು ಹಾಕಿ ಲೇಖನ ಮಾಡಿದ್ದು.. ಇವನೇ ಕಣೋ ಶ್ರೀಕಾಂತ್ ಅಂದ್ರೆ" ಅಂತ ಯಾರೋ ಮಾತಾಡಿದ್ದು ಕೇಳಿಸಿತು.. 

ತಿರುಗಿ ನೋಡಿದೆ ಯಾರೂ ಕಾಣಲಿಲ್ಲ.. ಮೆಲ್ಲಗೆ ಕಣ್ಣರಳಿಸಿ ನೋಡಿದೆ.. ಕಿವಿಯಾನಿಸಿದೆ.. 

ಮೆಲ್ಲಗೆ ಅಣ್ಣಾವ್ರ ಅಕ್ಕ ಪಕ್ಕದಲ್ಲಿ ನಿಂತ ಶಿಲೆಗಳ ಮಧ್ಯೆದಲ್ಲಿ ಅರಳಿ ನಿಂತಿದ್ದ ಅಣ್ಣಾವ್ರ ಚಿತ್ರದ ಪಾತ್ರಗಳು ಮಾತಾಡುತ್ತಿರುವಂತೆ ಭಾಸವಾಯಿತು.. 

ನಿಧಾನವಾಗಿ ಅಣ್ಣಾವ್ರನ್ನು ನೋಡುತ್ತಲೇ ಮುಂದಡಿ ಇಟ್ಟೆ.. ಮಾತುಗಳು ಹೆಚ್ಚಾದವು.. ಅಲ್ಲಿದ್ದ ಎಲ್ಲಾ ಪಾತ್ರಗಳು ನನ್ನ ಕಂಡು ಸಂತಸದಿಂದ ಹರಸುತ್ತಿರುವಂತೆ  ಭಾಸವಾಯಿತು.. 

ಅಯ್ಯೋ ಇದೇನು ಕನಸೋ ನನಸೋ ಎಂದು ನನ್ನ ನಾನೇ ಚಿವುಟಿಕೊಂಡೆ.. 

"ಇದುವರೆವಿಗೂ ಶಿಲೆಯಾಗಿದ್ದ ನಮ್ಮನ್ನು ಅಲ್ಲಿಂದ ಎಬ್ಬಿಸಿ ಮಾತಾಡುವಂತೆ ಮಾಡಿದ್ದು ನೀನೆ ಕಾಂತ ಶ್ರೀಕಾಂತ..." 

ಒಂದೊಂದು ಪಾತ್ರಧಾರಿಯು ಹರಸುತ್ತಿದ್ದವು ಮಾತಾಡಿಸುತ್ತಿದ್ದವು.. 

ಸಂತಸಕ್ಕೆ ಎಣೆಯಿಲ್ಲ... 

ಹಾಗೆಯೇ ಸಾಗುತ್ತಾ ಭಕ್ತ ಕುಂಬಾರದ ಚಿತ್ರದ ಹತ್ತಿರ ಬಂದೆ..ವಿಠಲ ವಿಠಲ ಪಾಂಡುರಂಗ ಅನ್ನದೆ ಕಾಂತ ಕಾಂತ ಶ್ರೀಕಾಂತ ಎಂದ ಹಾಗೆ ಭಾಸವಾಯಿತು.. ಮನದಲ್ಲೇ ವಂದಿಸಿದೆ.. 

ನಾದಮಯ ಹಾಡಿನ ಚಿತ್ರದಲ್ಲಿ ಅಣ್ಣಾವ್ರು ತಾಳ ಮುದ್ರೆಯಿಂದ ಹೊರಬಂದು.. ಸೂಪರ್ ಅನ್ನುವ ಚಿನ್ಹೆಗೆ ತಮ್ಮಬೆರಳುಗಳನ್ನು ಮಡಚಿದರು.. ತುಂಬಾ ಚೆನ್ನಾಗಿದೆ ಕಾಂತ ಎನ್ನುವಂತೆ ಅರಿವಾಯಿತು., 

ಶಬ್ಧವೇದಿ ಚಿತ್ರದಲ್ಲಿ ಧೀರರ ಹಾಗೆ ಜೀಪಿನ ಜೊತೆಯಲ್ಲಿ ಸೊಂಟದ ಮೇಲೆ ಕೈಯನ್ನು ಇಟ್ಟುಕೊಂಡು.. ಗಂಭೀರವಾಗಿ ಅಂಗ್ಲ ಭಾಷೆಯಲ್ಲಿ 

"sri .. you gave a great article...great job...come back next time.. okey"  ಅಣ್ಣಾವ್ರ ಗಂಭೀರ ಕಂಠ ಉಲಿಯಿತು.. 

ಆನಂದಭಾಷ್ಪ..  ಆನಂದಭಾಷ್ಪ.. ಆನಂದಭಾಷ್ಪ.. ಆನಂದಭಾಷ್ಪ.. 

ತಡೆಯಲಾಗಲಿಲ್ಲ.. ಶಿರಬಾಗಿ ನಮಿಸಿ ಹೊರಬಂದೆ.. 

ಇಂದು ವಿಶೇಷ ದಿನ.. ಯಾಕೆ ಅಂದ್ರೆ ತುಂಬಾ ಸಲೀಸಾಗಿ ಬರೆದ ಲೇಖನ ಓದುಗರನ್ನು ಮುಟ್ಟಿದ್ದೆ ಅಲ್ಲದೆ ನನಗೆ ಒಂದು ಭಿನ್ನ ಅನುಭವ ಕೊಟ್ಟಿತು.. 

ಜೊತೆಯಲ್ಲಿ ಕೃಷ್ಣಮೂರ್ತಿ ಸರ್ ಕೊಟ್ಟ ತಾವೇ ರಚಿಸಿದ ಅಣ್ಣಾವ್ರ ರೇಖಾ ಚಿತ್ರ.. 


ಡಾ . ಕೃಷ್ಣ ಮೂರ್ತಿ ಸರ್ ರಚಿಸಿದ ಡಾ. ರಾಜ್ ಚಿತ್ರ 
ಶ್ರೀಯುತ ವೆಂಕಟೇಶ್ ಮೂರ್ತಿ ಸರ್ ಕೊಟ್ಟ ಅಣ್ಣಾವ್ರ ಹಸ್ತಾಕ್ಷರದ ಪ್ರತಿ... 

ಅಣ್ಣಾವ್ರ ಮುದ್ದಾದ ಬರಹ.. ಶ್ರೀ ವೆಂಕಟೇಶ್ ಮೂರ್ತಿ ಕೊಡುಗೆ

ಜೊತೆಯಲ್ಲಿ ಅಣ್ಣಾವ್ರ ಪಾತ್ರಗಳು ನನ್ನೊಡನೆ ಮಾತಾಡಿದ ಒಂದು ಅನುಭವ.. 

ಅಣ್ಣಾವ್ರ ಪಾತ್ರಗಳೊಡನೆ ಒಂದು ಕ್ಷಣ

ಅಣ್ಣಾವ್ರೆ ಇದುವರೆವಿಗೂ ನಿಮ್ಮ ಪುಣ್ಯ ಭೂಮಿಯ ಮುಂದೆ ಹಾದು ಹೋಗುವಾಗ ಅರಿವಿಲ್ಲದೆ ನನ್ನ ಕಾರಿನಲ್ಲಿ ನಿಮ್ಮ ಹಾಡುಗಳೇ ಬರುತ್ತಿದ್ದವು.. ಇಂದೂ ನೀವೇ ನನ್ನೊಡನೆ ಮಾತಾಡಲು ಬಂದಿದ್ದೀರಿ.. 


ನನಗೆ ಉತ್ಸಾಹ ಕೊಡುವ ತಾಣ.. ಇಂದು ಎಂದಿನಂತೆ ಅಲ್ಲ ತುಂಬಾ ತುಂಬಾ ವಿಶೇಷ

ನಿಮ್ಮ ಶೈಲಿಯಲ್ಲಿ ... "ಆಹಾ ನನ್ನ ಜನ್ಮ ಪಾವನವಾಯಿತು.. "


ಧನ್ಯೋಸ್ಮಿ ಅಣ್ಣಾವ್ರಿಗೆ.. !!! 

Tuesday, April 8, 2014

"ಸವಿ" ನೆನಪುಗಳು ಬೇಕು "ಸವಿ"ಯಲಿ ಬದುಕು

ನನಗೆ ಮತ್ತು ರಾಜನಿಗೆ ತುಂಬಾ ಇಷ್ಟವಾದ ಪುಟ್ಟಣ್ಣ ಅವರ ಸಿನಿಮಾ ನಾಗರಹಾವು.. ಯಾಕೋ ಗೊತ್ತಿಲ್ಲ ಆ ಸಿನಿಮಾದಲ್ಲಿ ಶಿವರಾಂ ಪಾತ್ರ ಪ್ರತಿ ಸಂಭಾಷಣೆಗೂ ಸ್ಪೆಷಾಲಿಟಿ ಅಂತ ಸೇರಿಸ್ತಾ ಇರ್ತಾರೆ..

ಆ ಸಿನಿಮಾ ಎಷ್ಟು ಬಾರಿ ಬಂದರೂ ಕೆಲವು ದೃಶ್ಯಗಳಿಗಾಗಿ ಪದೇ ಪದೇ ನೋಡುತ್ತಿರುತ್ತೇನೆ.. ಒಂದು ರಾಜನ ನೆನಪಲ್ಲಿ.. ಇನ್ನೊಂದು ಪುಟ್ಟಣ್ಣ ಅವರ ಚಿತ್ರಗಳ ಗುಂಗಿನಲ್ಲಿ... 

ಅರೆ ಇದೇನೂ.. ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯುತ್ತಿದೆ ಅಂದ್ರಾ.. ಹಾಗೇನು ಇಲ್ಲ 

ನಮ್ಮದು ಒಂಥಾರ ಸ್ಪೆಷಾಲಿಟಿ.. 

ಎಂಟರ ನಂಟು ಬಿಡಿಸಲಾರದ ಗಂಟು ನಂಟು ಅನ್ನುತ್ತಾರೆ.. ನನ್ನ ಜೀವನದಲ್ಲಿ ಎಂಟು ಹೇಗೋ ಬಂದು ಆಟಕಾಯಿಸಿಕೊಳ್ಳುತ್ತದೆ.. 

ಹಿರಿಯರೆಲ್ಲ ಸಮಯ, ದಿನಾಂಕ ಗುರುತು ಮಾಡುತ್ತಿದ್ದರು. ನಾನು ಲೆಕ್ಕ ಪತ್ರದ ವಿಭಾಗದ ಕೆಲಸವಾಗಿದ್ದರಿಂದ ಮಾರ್ಚ್ ದಿನಾಂಕಗಳನ್ನು ಸಾರಾ ಸಗಟು ನಿರಾಕರಿಸಿ ಬಿಟ್ಟೆ.. ಜೂನ್ ಅಂದ್ರು...  ಅಲ್ಲಿ ತನಕ ಕಾಯುವ ತಾಳ್ಮೆ ಇರಲಿಲ್ಲ.. )..

ಏಪ್ರಿಲ್ ಅಂದ್ರೂ ಮನಸ್ಸು ಹಾರಾಡುತ್ತಿತ್ತು.. ದಿನಾಂಕ ಅಂದೇ... ಎಂಟು ಅಂದ್ರು.. ಹಿಡಿದದ್ದೇ ಗಬಕ್ ಅಂತ.. 

ಎಂಟು ಓಕೆ ಓಕೆ.. ಗೊತ್ತು ಮಾಡಿಬಿಡಿ ಅಂದೇ..  :-)

ಹೀಗೆ ನನ್ನ ಜೀವನದಲ್ಲಿನ ಎಂಟು ಅಂಕೆಯ ಬಗ್ಗೆ ಬರೆಯುತ್ತಾ ಹೋದರೆ.. ಬಿಡಿ.. ನಿಮಗೆ ತಲೆ ಬಿಸಿ ಬರುತ್ತದೆ.. ಈಗ ವಿಷಯಕ್ಕೆ ಬರೋಣ.. 

ಏಪ್ರಿಲ್ ಏಳಕ್ಕೆ ಛತ್ರಕ್ಕೆ ಹೋದೆವು.. ಬೇರೆಯವರ ಮದುವೆಗೆ ಓಡಾಡಿ.. ಅಣ್ಣಾವ್ರ "ಅಲ್ಲಿ ಇಲ್ಲಿ ನೋಡುವೆ ಏಕೆ" ಅನ್ನುತ್ತಾ "ನಿನ್ನ ಕಣ್ಣ ನೋಟದಲ್ಲಿ ನೂರು ಆಸೆ ಕಂಡೆನು" ಅಂತ ಬಂದ, ಕಂಡವರನ್ನೆಲ್ಲ ಕಣ್ಣಲ್ಲೇ ನೋಡುತ್ತಾ ಖುಷಿಸುವ ಮನ ನಮ್ಮ ಮದುವೆಯಲ್ಲಿ ಇರೋಲ್ಲ.. ಗೂಬೆಯ ತರಹ ಹಸೆ ಮಣೆಯ ಮೇಲೆ ಕೂತೆ.. ಛತ್ರದಲ್ಲಿದ್ದ ನೂರಾರು ಕಣ್ಣುಗಳು ನನ್ನ ಕ್ಷ ಕಿರಣಗಳಿಂದ ಅಳೆಯುತ್ತಿದವು.. 

ಕೆಲವರು ಅಯ್ಯೋ ಕಪ್ಪು ಬಿಳುಪು ಟಿ ವಿ ಅಂದರೆ.... ಇನ್ನು ಕೆಲವರು ನರಸಿಂಹರಾಜು ಎಲ್ಲಿ ಅಂತ ಕೇಳೋದೇ ಬೇಡ.. ಮಹಾಲಕ್ಷ್ಮಿ ಆಂಜನೇಯನ  ದೇವಸ್ಥಾನಕ್ಕೆ ಹೋಗೋದೇ ಬೇಡ.. ಹೀಗೆ ರಾಕೆಟ್ಗಳು ಹಾರುತ್ತಿದ್ದವು.. ಸ್ವಲ್ಪ ಸ್ವಲ್ಪ ನಮ್ಮ ಕಿವಿಗೂ ಬೀಳುತ್ತಿದ್ದವು.. 

ನನ್ನ ಸಿದ್ದಾಂತ ಒಂದೇ ಜೀವನದಲ್ಲಿ ಪುರುಸೊತ್ತಾಗಿದ್ದಾಗ ಈ ಮದುವೆ ಕಾರ್ಯ ಆಗಿಬಿಡಬೇಕು.... :-)  ಯಾಕೆ ಅಂದ್ರೆ ಮದುವೆ ಎನ್ನುವ ಕೆಲಸ ಮುಂದೆ ಹಾಕಿದಷ್ಟು ಸಮಸ್ಯೆಯನ್ನು ಹಿಂದಕ್ಕೆ ಎಳೆದುಕೊಂಡು ಬರುತ್ತಿರುತ್ತೇವೆ .. ಹೆಂಗೆ ನನ್ನ,,,,,,,, :-)

ಸರಿ ಭಾನುವಾರ ವ(ವಾನ)ರ ಪೂಜೆ ಆಯಿತು.. ಬೆಳಿಗ್ಗೆ ಸೋಮವಾರ ಧಾರೆ.. ತಲೆಗೆ ಬಿಗಿಗಿದ್ದ ಪೇಟ ತಲೆ ನೋವು ಕೊಡುತ್ತಿತ್ತು.. ಬೆಳಿಗ್ಗೆ ಕಾಫಿ ಸರಿಯಾಗಿ ಬಿದ್ದಿರಲಿಲ್ಲ.. ತಿಂಡಿ ಸರಿಯಾಗಿ ತಿಂದಿರಲಿಲ್ಲ (ಹೆಂಗೆ ತಿನ್ನೋಕೆ ಆಗುತ್ತೆ ನೀವೇ ಹೇಳಿ).. 

ಮಧ್ಯಾನ್ಹ ಆದರೂ ಶಾಸ್ತ್ರಗಳು ಮುಕ್ತಾಯ ಹಂತಕ್ಕೂ ಬಂದಿರಲಿಲ್ಲ.. ಭೂಮ ಸಿದ್ಧವಾಯಿತು.. ಆರು ಬಾಲಿನಲ್ಲಿ ಆರು ರನ್ ಬೇಕಾದರೆ ಇಡಿ ಕ್ರೀಡಾಂಗಣದಲ್ಲಿ ಎಲ್ಲರ ಕಣ್ಣುಗಳು ಪಿಚ್ ಮೇಲೆ ಇರುತ್ತದೆ ಅಲ್ಲವೇ.. ಹಾಗೆ ಭೂಮದೂಟದಲ್ಲಿ ನಮ್ಮ ಸುತ್ತಾ ಸುಮಾರು ಐವತ್ತು ಅರವತ್ತು ಮಂದಿ.. ವೀ ವಾಂಟ್ ಫೋರ್ .. ವೀ ವಾಂಟ್ ಸಿಕ್ಸರ್ ಅನ್ನುವ ಹಾಗೆ.. ಅದು ತಿನ್ಸು ಇದು ತಿನ್ಸು ಅಂಥಾ ಬೊಬ್ಬೆಇಡುತ್ತಿದ್ದರು .. 

ನನಗೆ ಬಿಟ್ಟಿದ್ದರೆ ಎಲ್ಲರಿಗೂ ಸರಿಯಾಗಿ ತಿನ್ನಿಸುವ ಕೋಪ ಇತ್ತು.. ಮೊದಲೇ ಹೊಟ್ಟೆ ಹಸಿವು(?).. ಜೊತೆಯಲ್ಲಿ ಬೆಳಿಗ್ಗೆ ಇಂದ.. ನನ್ನ ತಲೆಗಾಗದ ಪೇಟವನ್ನು ಬಲವಂತವಾಗಿ ಹಾಕಿ ತಲೆ ಮೇಲೆ ಬೇರೆ ಒಂದು ಬಿಟ್ಟಿದ್ದರು ಸರಿಯಾಗಿ ಪೇಟ ಕೂರಲೆಂದು.. ಅಸಾಧ್ಯ ತಲೆನೋವು.. ಹೊಟ್ಟೆ ಹಸಿವು.. ಹೋಮದ ಹೊಗೆ.. ನೂರಾರು ಕಣ್ಣುಗಳು ಬಿದ್ದು ದೃಷ್ಟಿಯಾಗಿದ್ದು (ಕಾಗೆಗೆ ದೃಷ್ಟಿಯೇ).. ಬಿಟ್ಟರೆ ಛತ್ರದಿಂದ ಓಡಿ ಹೋಗುವ ಆಸೆ.. 

ಹಾಗೂ ಹೀಗೂ ಭೂಮ ಮುಗಿಯಿತು.. ನಾನು ಮೊದಲು ಹೊಟ್ಟೆ ತುಂಬಾ ಊಟ ಮಾಡಿದ ನಂತರವೇ.. ಅಲ್ಲಿ ನೆರೆದಿದ್ದ ಅಭಿಮಾನಿ ದೇವರುಗಳ ಆಸೆ ಇಡೇರಿಸಿದ್ದು.. 

ಸರಿ ಸಂಜೆ ಆರತಕ್ಷತೆ... ಬೆಳಿಗ್ಗೆಯಿಂದ ಕೂತು ಕೂತು ಕಾಲುಗಳು ಬಾತುಕೊಂಡಿದ್ದರೆ .. ಸಂಜೆ ನಿಂತು ನಿಂತು.. ಕಾಲು ನೋಯುತ್ತಿತ್ತು.. ರಾತ್ರಿ ಹತ್ತೂವರೆ ಹನ್ನೊಂದು ಘಂಟೆಯ ತನಕ ನಡೆದ ಈ ಕಾರ್ಯಕ್ರಮ.. ಕಡೆಯಲ್ಲಿ ಸುಮಾರು ಹನ್ನೊಂದು ಘಂಟೆಗೆ.. ಛಾಯಾಚಿತ್ರಕಾರ.. (ಬಹುಷಃ ಹಿಂದಿನ ಜನ್ಮದಲ್ಲಿ ಅವನನ್ನು ಗೋಳಾಡಿಸಿದ್ದೆ ಅನ್ನಿಸುತ್ತೆ).. ಸರ್ ಸ್ವಲ್ಪ ನಕ್ಕು ಬಿಡಿ.. ಸಾರ್ ಅಷ್ಟೊಂದು ಹಲ್ಲು ಬೇಡ ಒಂದೆರಡು ಹಲ್ಲುಸಾಕು .. ಮೇಡಂ ನೀವು ಸರ್ ಭುಜದ ಮೇಲೆ ಕೈ ಹಾಕಿ.. ಹಾಗೆ .. ಹಾಗೆ ಇರೀ.. ನನಗೆ ಒಳಗೆ ಜ್ವಾಲಮುಖಿ.. ಆದ್ರೆ ಮುಖ ಮಾತ್ರ ಚಂದ್ರ(ಕಾಗೆ)ಮುಖಿ ಮಾಡಿಕೊಂಡು.. ಕೆಟ್ಟ ಕೆಟ್ಟದಾಗಿ ನಗುತ್ತಾ ಚಿತ್ರಗಳ ಮೆರವಣಿಗೆ ಮುಗಿಯಿತು.. 

"ಸಾರ್.. ವಿವಾಹ ಜೀವನ ಆನಂದಮಯವಾಗಿರಲಿ..ನಾನು ಬರುತ್ತೇನೆ ಸರ್"  ಅಂತ ಫೋಟೋಗ್ರಾಫರ್ ಹೇಳಿದಾಗ ನಾನು 

"ಗುರುಗಳೇ.. ನಿನ್ನೆಯಿಂದ ಗೋಳು ಹುಯ್ದು ಕೊಂಡಿದ್ದೀರ.. ಕೊಡಿ ಕ್ಯಾಮೆರ.. ನಾನು ನಿಮ್ಮ ಕೆಲವು ಫೋಟೋ ತೆಗೀತೀನಿ.. ಹಲ್ಲು ಬಿಡಿ.. ಅಷ್ಟೇ ಸಾಕು.. ಎರಡು ಹಲ್ಲು.. ಕೈ ಮೇಲೆ ಎತ್ತಿ  ಅಂತ.. ಪ್ರಾಣ ತಿಂದ್ರಲ್ಲ ಬನ್ನಿ" ಅಂತ ಕೈ ಎಳೆಯಲು ಶುರುಮಾಡಿದೆ.. 

ಗಾಬರಿ ಬಿದ್ದ ಆವಾ.. ಇಲ್ಲಾ ಸರ್.. ಹಾಗೇನು ಇಲ್ಲ.. ಹಿ ಹಿ" ಅಂತ ದೇಶಾವರಿ ನಗೆ ನಕ್ಕ..

ನಾ ಬಿಡಲಿಲ್ಲ.. ಬಲವಂತ ಮಾಡಿದೆ.. ಕಡೆಗೂ ಆ ಛಾಯಚಿತ್ರಕಾರನನ್ನು ಕರೆದು ಅವರ ಜೊತೆಯಲ್ಲಿ ನಿಂತು.. "ಈಗ ನಗ್ರಿ ಸರ್.. ನಾಲ್ಕು ಹಲ್ಲು ಬೇಡ ಕೇವಲ ಅರ್ಧ ಹಲ್ಲು ಸಾಕು.. ಮುರಿದ್ದಿದ್ದರು ಚಿಂತೆಯಿಲ್ಲ.. ಅಂತ ಜೋತು ಬಿದ್ದು ತೆಗೆಸಿಕೊಂಡೆ ಬಿಟ್ಟೆವು ಅವರ ಜೊತೆಗೆ ಚಿತ್ರವನ್ನು.. 

ಫೋಟೋಗ್ರಾಫರ್ ಗೆ ಫೋಟೋ!!! 


ಸರ್ ಇದುವರೆಗೂ ಯಾವುದೇ ಸಮಾರಂಭದಲ್ಲಿ ಹೀಗೆ ಆಗಿರಲಿಲ್ಲ.. ನೀವೇ ಫಸ್ಟ್ ಅಂದ್ರು.. 

ಹೌದು ಗುರುಗಳೇ... ಊರಿಗೆ ದಾರಿ ಆದ್ರೆ ಎಡವಟ್ಟನಿಗೆ ಒಂದು ದಾರಿ.. 

ಇಂತಹ ಒಂದು ಚಿತ್ರ ತೆಗೆಸಿಕೊಂಡು ಇಂದಿಗೆ ಹನ್ನೆರಡು  ವರ್ಷವಾಯಿತು.. 

ಎದೆ ತುಂಬಿ ಹಾಡುತ್ತೇನೆ.. "ಸವಿ" ನೆನಪುಗಳು ಬೇಕು "ಸವಿ"ಯಲಿ ಬದುಕು!!!!
........ ...... 
........ ...... 
........ ...... 
........ ...... 
........ ...... 
........ ...... 
........ ...... 
........ ...... 
........ ...... 
ಅಂದ ಹಾಗೆ ಸವಿತಾ ನಿಕ್ ನೇಮ್ ಅವರ ಅಮ್ಮನ ಮನೆಯ ಕಡೆಯಲ್ಲಿ "ಸವಿ"!!!!!!!
   

Monday, March 24, 2014

ಕಾಡುವ ಸುಡುಗಾಡು...... ಜೀವ ಒಡಲಿಂದ ದೂರಾದಂತೆ!!!!

"ನೀ ಇರಲು ಜೊತೆಯಲ್ಲಿ" ಒಳಗೆ ಜೀವ ಇರುವವರೆಗೂ.....

ಯಾಕೋ ಏನೋ ಗೊತ್ತಿಲ್ಲ ತುಂಬಾ ಕಾಡಲು ಹತ್ತಿತ್ತು.. ಒಂದು ಜೀವ ತಾನು ಪ್ರೀತಿಸುತ್ತಿದ್ದ ದೇಹವನ್ನು ಬಿಟ್ಟು ಹೋಗುವಾಗ ಹೇಗೆಲ್ಲ ಹಾಡುತ್ತಿರುತ್ತದೆ. ಅದರ ತಳಮಳವೇನು ತಿಳಿಯ ಬೇಕು ಎನ್ನಿಸಿತು..

ಸಹೋದ್ಯೋಗಿಯ ಪಿತ ಇಹಲೋಕದಿಂದ ಬಿಡುಗಡೆ ಪಡೆದು ಸುಂದರ ಲೋಕಕ್ಕೆ ಧಾವಿಸಿದ್ದ ಸಮಯ.. ಅಲ್ಲಿಯೇ ಕೂತಿದ್ದೆ..
ನಿರ್ಜೀವ ಎನ್ನಿಸಿಕೊಂಡ ಒಂದು ಕೃಶ ದೇಹ.. ಅದರಿಂದ ಹೊರಗೆ ನಿಂತು ಹಾಡುತ್ತಿದ್ದ ಆತ್ಮ... ಒಬ್ಬರನೊಬ್ಬರು ಅಗಲಿದ ಸಮಯ..  ಅವರಿಬ್ಬರ ಸಂಭಾಷಣೆ ಕಿವಿಗೆ ಬಡಿಯುತ್ತಿತ್ತು... !

"ನೀ ಇರಲು ಜೊತೆಯಲ್ಲಿ
ಬಾಳೆಲ್ಲ ಹಸಿರಾದಂತೆ"

ಆತ್ಮದೊಳಗೆ ಜೀವವಿದ್ದಾಗ.. ದೇಹದಲ್ಲಿ ಆತ್ಮವಿರುತ್ತದೆ.. ಆದರೆ ದೇಹ ಹೇಳುತ್ತದೆ

"ನಗುತ ನೀ ಕರೆದರೆ
ಮನದೆ ಸಂತೋಷ ಹಾಡಾದಂತೆ
ನೀ ಇರಲು ಜೊತೆಯಲ್ಲಿ
ಬಾಳೆಲ್ಲ ಹಸಿರಾದಂತೆ"

ಸುತ್ತಲು ಆ ದೇಹದ ಜೊತೆ ರಕ್ತ ಸಂಬಂಧ ಹೊಂದಿದ್ದವರು ಭಾವನಾತ್ಮಕ ಸಂಬಂಧ ಹೊಂದಿದ್ದವರು.. ಗುರುತು ಪರಿಚಯ ಇರುವವರ ಹಿಂಡೇ ನೆರೆದಿತ್ತು.. ಎಲ್ಲರ "ಮಾತಲ್ಲಿ ಏನೊ ಹೊಸತನ.. ಮಗುವನ್ನು ಹೋಲೋ ಹೂ ಮನ"

ಆತ್ಮ ತನ್ನ ಹಳೆಯ ದೇಹದ ಯಜಮಾನನಿಗೆ ಹೇಳುತ್ತಿತ್ತು.. "ರಸಕಾವ್ಯ ನಿನ್ನ ಯೌವ್ವನಾ.. ಎದೆ ತುಂಬಿ ನಿಂತೆ ಪ್ರತಿಕ್ಷಣ .. ಆಗ ಬಿಕ್ಕುತ್ತಾ ಬಿಕ್ಕುತ್ತಾ "ಹಳ್ಳಿ ಮಣ್ಣಲಿ" ಬೆರೆಯಬೇಕು ಎನ್ನುವ ಹಂಬಲ ಇತ್ತು.. ಇನ್ನಷ್ಟು ದಿನ ನೀನು ನನ್ನೊಳಗೆ ಇರಬೇಕು ಎನ್ನಿಸಿತ್ತು" ಆದರೆ "ಬಿರಿದ ಮಲ್ಲಿಗೆ" ನನ್ನ ಎದೆಯ ಮೇಲೆ ಹಾಕುತ್ತಿದ್ದಾರೆ.. ಎಲೆ ಆತ್ಮ ಬಂಧುವೇ "ಬೆರೆತೆ ಉಸಿರಲ್ಲಿ ಒಂದಾದಂತೆ" ನಾನು ನಿನ್ನೊಳಗೆ ಬೆರೆಯಲು ಸಾಧ್ಯವೇ.. ?

"ಈ ನೀಲಿ" ಆಕಾಶದಲ್ಲಿ ನನ್ನ "ಕಣ್ಣ ಬೆಳಕಲ್ಲಿ" ಏನು ಕಾಣುತ್ತಲೇ ಇಲ್ಲಾ.. "ಮನೆಯೆಲ್ಲ ಎಂದು ಬೆಳಗಲಿ" ಎಂದು ದುಡಿದ ಮನೆ ಮನ ಇಂದು ನನ್ನದಲ್ಲ.. ಆತ್ಮವೇ "ನೀ ತಂದ ಪ್ರೀತಿ ಲತೆಯಲಿ" ನನ್ನ ಜೀವನದಲ್ಲಿ "ನಗುವೆಂಬ ಹೂವು ಅರಳಲಿ" ಅಥವಾ ಮುದುಡಲಿ ಸದಾ ಗೆದ್ದೇ ಗೆಲ್ಲುವೆ ಎಂಬ ಆತ್ಮ ವಿಶ್ವಾಸ ಬೆಟ್ಟದಷ್ಟಿತ್ತು. ಸಂಕಟ ಬಂದಾಗ ಸುಂಕವೂ ಕಟ ಕಟ ಎಂದು ಬಾಗಿಲು ಬಡಿಯುತ್ತದೆ.. ಆತ್ಮವೇ "ಅಗಲಿ ನಿನ್ನನು ಬಾಳಲಾರೆನು.....  ಜೀವ ಒಡಲಿಂದ ದೂರಾದಂತೆ"  ಇಂದು ನೀನು ನನ್ನೋಳಗಿಲ್ಲ.. "ನೀ ಇರಲು ಜೊತೆಯಲ್ಲಿ" ಅಯ್ಯೋ ಇದು ಸಾಧ್ಯವೇ.. ದಾಸರ ಗಿಳಿಯು ಪಂಜರದೊಳಿಲ್ಲ ಗೀತೆ ನೆನಪಿಗೆ ಬರುತ್ತಿದೆ..

ಯಾಕೋ ಮೈಯೆಲ್ಲಾ ನಡುಗುತ್ತಿರುವಂತೆ ಭಾಸವಾಯಿತು.. ನೋಡಿದರೆ ಒಬ್ಬರಾಗಿ ಒಬ್ಬರು ಎಣ್ಣೆ ಸೀಗೆಕಾಯಿ ತಿಕ್ಕಿ ನಡು ಬೀದಿಯಲ್ಲಿ ಮಜ್ಜನ ಮಾಡಿಸುತ್ತಿದ್ದಾರೆ.. ಅಳುತ್ತಾ ಇರುವರು ಕೆಲವರು..ಅಯ್ಯೋ ಇಂದು ಇವರು ನಾಳೆ ನಾವು ಎನ್ನುವ ಸ್ಮಶಾನ ವೈರಾಗ್ಯದಲ್ಲಿ ಕೆಲವರು.. .. ದೇಹದಿಂದ ಆತ್ಮವೇಕೆ ಹೊರಕ್ಕೆ ಹೋಯಿತು ಎನ್ನುವ ಕುತೂಹಲ ತಣಿಯದ ಪ್ರಶ್ನೆಗಳಲ್ಲಿ ಮುಳುಗಿದವರು ಹಲವರು..

ಇವೆಲ್ಲದರ ಪರಿವೆ ಇಲ್ಲದೆ.. ಯಾವುದೋ ಪ್ರಾಣಿ ತನ್ನ ಚರ್ಮವನ್ನು ದಾನ ಮಾಡಿ...  ಅದರಿಂದ ಎದೆ ನಡುಗುವಂತೆ ಬಡಿಯುತ್ತಿರುವ ತಮಟೆ ಸದ್ದು.. ಅರೆ ಅರೆ ಯಾಕೆ ಹೀಗೆ ಬಡಿಯುತ್ತಿದ್ದಾರೆ.. ಬದುಕಿದ್ದವರು ಓಡಲಿ ಎಂದೇ.. ಅಥವಾ ಹೊರಗೆ ಹೋದ ಆತ್ಮ ಮತ್ತೆ ಬರಲು ರಹದಾರಿಯೇ.. ಯಾಕೆ.. ಹೀಗೆ.. ?

ನೋಡು ನೋಡುತ್ತಲೇ ಅಲ್ಲೇ ಒಬ್ಬ ಕುಳಿತಿದ್ದ ಭಾವುಕ ತದೇಕ ಚಿತ್ತದಿಂದ ತಮಟೆ ಸದ್ದನ್ನೇ ಕೇಳುತ್ತಾ.. ಬಡಕಲು ದೇಹವನ್ನೇ ನೋಡುತ್ತಿದ್ದ.. ಅವನೊಳಗೆ ಭಾವ ಸಾಗರದ ಅಲೆಗಳು ಬಡಿಯುತ್ತಾ ಬಡಿಯುತ್ತಾ ಕಣ್ಣಂಚಿಗೆ ಬಂದು ಬೀಳಲೋ ಬೇಡವೋ ಅಂತ ಅಪ್ಪಣೆ ಕೇಳುತ್ತಿದ್ದವು..!

ದೇಹಕ್ಕೆ ಮೆಲ್ಲನೆ ಬಿಸಿ ತಾಗ ತೊಡಗಿತು.. ಬೆಚ್ಚನೆ ಹೊದಿಕೆ.. ಘಮ ಘಮ ಗುಟ್ಟುವ ಹೂವಿನ ಹಾರ.. ಹಣೆಗೆ ವಿಭೂತಿ.. ಕುಂಕುಮ.. ಅಯ್ಯೋ ಈ ದೇಹಕ್ಕೆ ಬೇಕೇ.. ಇವೆಲ್ಲ ಅನ್ನುವಷ್ಟರಲ್ಲಿಯೇ.. ಹಟಾತ್ ನಾಲ್ಕೈದು ಮಂದಿ ದೇಹವನ್ನು ಎತ್ತಿ ಹೂವಿನ ಪಲ್ಲಕ್ಕಿ (?????)ಯಲ್ಲಿ ಕೂರಿಸಿದರು.. ಹೌದು ಕೂರಲು ಶಕ್ತಿಯಿಲ್ಲದೆ ಲೋಕ ಬಿಟ್ಟಿದ ದೇಹಕ್ಕೆ ವಿಪರೀತ ಮುತುವರ್ಜಿ ವಹಿಸಿ ಪಲ್ಲಕ್ಕಿ ಸಿದ್ಧಪಡಿಸಿದ್ದರು.. ಹೂವಿನ ಪರಿಮಳದ ಜೊತೆಯಲ್ಲಿ ಘಂ ಎನ್ನುವ ಗಂಧದ ಪರಿಮಳ.. ಊದುಬತ್ತಿಯ ಧೂಪ.. ಜೀವನವಿಡಿ ಹೊಗೆ ಹಾಕಿಸಿಕೊಳ್ಳದ ಈ ದೇಹಕ್ಕೆ ಇಂದು ಹೊಗೆಯಲ್ಲಿ ಅಭ್ಯಂಜನ..

 ಅಂತರಂಗದ ಅಗ್ನಿ ಬಹಿರಂಗದ ಅಗ್ನಿಯನ್ನು ಸಂಧಿಸುವ ತಾಣ!!!

ಆಫೀಸ್ಗೆ ಹೋಗಬೇಕು.. ಅಯ್ಯೋ ಬೆಳಿಗ್ಗೆಯಿಂದ ತಿಂಡಿ ತಿಂದಿಲ್ಲ.. ಬೇಗ ಮುಗಿದರೆ ಸಾಕು ಊರಿಗೆ ಹೋಗಬೇಕು.. ಬಸ್ ಎಷ್ಟೊತ್ತಿಗೆ.. ದೇಹದ ಉಸಾಭರಿಯನ್ನು  ಕೇಳುವವರೇ ಇಲ್ಲ.. ದೇಹ ಬೇಸರದಲ್ಲಿದ್ದಾಗ ಆತ್ಮ ನಗುತ್ತಾ ಹಾಡಲು ಶುರುಮಾಡಿತು... 

"ಹೆಂಡತಿ ಮಕ್ಕಳು  ಬಂಧು ಬಳಗ 
ರಾಜಯೋಗದ ವೈಭೋಗ 
ಕಾಲನು ಬಂದು ಬಾ ಎಂದಾಗ 
ಎಲ್ಲವೂ ಶೂನ್ಯ ಚಿತೆ ಏರುವಾಗ
ಎಲ್ಲಾ ಶೂನ್ಯ ಎಲ್ಲವೂ ಶೂನ್ಯ 
ಉಳಿಯುವುದೊಂದೇ ದಾನ ಧರ್ಮ ತಂದ ಪುಣ್ಯ"

ದೇಹಕ್ಕೆ ನಿಜದ ಅರ್ಥವಾಯಿತು

"ನಾನೇ ಎಂಬ ಭಾವ ನಾಶವಾಯಿತು.. ನೀನೆ ಎಂಬ ನೀತಿ ನಿಜವಾಯಿತು.. ಒಳಗಿನ ಕಣ್ಣನು ತೆರೆಸಿದೆಯೋ.. ಗೀತೆಯ ಮರ್ಮವಾ ತಿಳಿಸಿದೆಯೋ.. "


ಅರೆ ಕಣ್ಣಿಗೆ ಏನೋ ಬೀಳುತ್ತಿದ್ದೆ ಎಂದು ಮೇಲೆ ನೋಡಿತು ದೇಹ.. ಎಲ್ಲರೂ ಒಂದು ಹಿಡಿ ಮಣ್ಣನ್ನು ಹಾಕುತ್ತ ಹೋದರು.. ತಲೆಯೆಲ್ಲಾ ಮಣ್ಣು.. ಕಣ್ಣು ಬಿಡಲಾಗುತ್ತಿಲ್ಲ.. ಉಸಿರು ಸಿಕ್ಕಿಕೊಳ್ಳುತ್ತಿದೆ.. ಅರೆ ಇದೇನು ಕಣ್ಣಿಗೆ ಕಪ್ಪು ಕತ್ತಲೆ.. ಅರೆ ಅರೆ.. ಏನಾಗು.... "ಈ ದೇಹದಿಂದ ದೂರವಾದೆ ಏಕೆ ಆತ್ಮವೇ.. ಈ ಸಾವು ನ್ಯಾಯವೇ.. "

ಆತ್ಮ ಇನ್ನೊಂದು ದೇಹವನ್ನು ಹುಡುಕುತ್ತಾ.. ಹಾಡುತ್ತಾ ಸಾಗಿತು

ಇಲ್ಲಿಗೆ ಬರಲೇ ಬೇಕು !!!


"ಕಥೆ ಮುಗಿಯಿತೇ ಆರಂಭದ ಮುನ್ನಾ.. ಎಲ್ಲಿಗೆ ಪಯಣ ಯಾವುದೋ ದಾರಿ ಏಕಾಂಗಿ ಸಂಚಾರಿ.. !!!!

Thursday, March 6, 2014

ಮರೋ ಚರಿತ್ರಾ... ಕಾದು ಕಾದು ಮರೆಯಲಾರದ ಚರಿತ್ರಾ

ಕಾದು ಕುಳಿತಿವೆ..

ಅರಳಿ ಎಲೆಗಳ ನೆರಳು ಬಿಸಿಲಿನ ಆಟದ ಮಧ್ಯದಲ್ಲಿ.. 

ಮರದಲ್ಲಿದ್ದ ಹಕ್ಕಿಗಳು ತಮ್ಮಮರಿಗಳಿಗೆ ಅಲ್ಲಿ ಇಲ್ಲಿ ಹೆಕ್ಕಿ ತಂದಿದ್ದ ಕಾಳುಗಳನ್ನು ತಿನ್ನಿಸುತ್ತಿದ್ದವು..

"ಕೋಟಿ ದಂಡಾಲೋ ಶತ ಕೋಟಿ ದಂಡಾಲೋ"

ಗಣೇಶನ ಮೂರ್ತಿಯನ್ನು ಕೂರಿಸಿದ್ದ ಮಂಟಪದಿಂದ ಆಗಷ್ಟೇ ಬಿಡುಗಡೆಯಾಗಿ ಅಪಾರ ಸುದ್ಧಿ ಮಾಡಿದ್ದ "ಮರೋ ಚರಿತ್ರಾ" ಚಲನ ಚಿತ್ರದ ಹಾಡು ಕಿರುಚುತಿತ್ತು..

ಹಸಿದು ಬೆಂಡಾಗಿದ್ದ ಹಕ್ಕಿಯ ಮರಿಗಳು ತನ್ನ ತಾಯಿ ಹಕ್ಕಿ ಉಣಿಸಿದ್ದ ಕಾಳುಗಳನ್ನು ತಿಂದು ಸಂತೃಪ್ತರಾಗಿ ಹಾಡಿಗೆ ಹಿಮ್ಮೇಳದಂತೆ ಗಾನ ಸೇರಿಸುತ್ತಿದ್ದವು..

ಅಣ್ಣಾವ್ರ ಕವಿರತ್ನ ಕಾಳಿದಾಸ ಚಲನ ಚಿತ್ರ ಬರಲು ಇನ್ನು ಹಲವಾರು ವರ್ಷಗಳು ಇದ್ದವು ಇಲ್ಲ ಅಂದ್ರೆ...

"ಹೊಟ್ಟೆ ಚುರುಗುಟ್ ತಾ ಐತೆ ರಾಗಿ ಮುದ್ದೆ ತಿನ್ನೋ ಹೊತ್ತು" ಅಂತ ಹಾಡುತ್ತಿದ್ದವು ಆ ಮರದ ನೆರಳಲ್ಲಿ ಕೂತಿದ್ದರೂ ಹೊಟ್ಟೆಯ ಹಸಿವಿನ ಬೇಗೆ ತಾಳದೆ ಬಳಲುತಿದ್ದ ಎರಡು ಮುದ್ದು ಕಂದಮ್ಮಗಳು.. ತಮ್ಮ ತಾಯಿಯ ಬರುವಿಗೆ ಕಾಯುತ್ತಾ ಕುಳಿತಿದ್ದವು..

*********************************************************************************
"open it carefully..there is a surprise for you"

೧೯೯೪ ಮಾರ್ಚ್ ೨ ರಂದು ಬೆಳಿಗ್ಗೆ ಎದ್ದಾಗ ನನ್ನ ಪಕ್ಕದಲ್ಲಿ ಒಂದು ಲಕೋಟೆಯ ಮೇಲೆ ಈ ಮುದ್ದಾದ ಬರಹಗಳನ್ನು ಕಂಡು ಆಶ್ಚರ್ಯವಾಗಿತ್ತು.. ನಿಧಾನವಾಗಿ ತೆರೆದೇ..

"HMT" ಕೈಗಡಿಯಾರ ನಸು ನಗುತ್ತಿತ್ತು.. ಜೊತೆಯಲ್ಲಿ ಒಂದು ಸುಂದರ ಶುಭಾಶಯದ ಪತ್ರ "Happy Birthday Dear brother"  

ಪ್ರೀತಿಯ ಅಣ್ಣನಿಂದ ನನಗೆ ಸುಂದರ ಕೈಗಡಿಯಾರ ಮತ್ತು ಶುಭ ಹಾರೈಕೆ ಹೊತ್ತ ಗ್ರೀಟಿಂಗ್ ಕಾರ್ಡ್!

ಜೀವನದಲ್ಲಿ ಸಮಯ ನೋಡಿಕೊಳ್ಳಲು ಕೈಗೆ ಬಂದ ಮೊದಲ ನನ್ನದೇ ಅನ್ನಿಸುವ ಕೈಗಡಿಯಾರ!
*********************************************************************************
ಆಗ ತಾನೇ ಕಂಪ್ಯೂಟರ್ ಯಂತ್ರ ಕಣ್ಣು ಬಿಡುತ್ತಿದ್ದ ಸಮಯ.. ಜಗತ್ತನ್ನೆಲ್ಲ ಅದರಲ್ಲೂ ಭಾರತವನ್ನು ಈ ಕಂಪ್ಯೂಟರ್ ಎನ್ನುವ ಮಾಂತ್ರಿಕ ಶಕ್ತಿ ತನ್ನ ಕಬಂಧ ಬಾಹುಗಳಲ್ಲಿ ಸೆಳೆದುಕೊಳ್ಳಲು ಹವಣಿಸುತ್ತಿದ್ದ ಕಾಲ..

"ನೀನು ಕಂಪ್ಯೂಟರ್ ಕೋರ್ಸ್  ಗೆ ಸೇರಿಕೋ.. ಹೊಸದನ್ನು ಕಲಿ.. ನಾ ಅದಕ್ಕೆ ದುಡ್ಡು ಕೊಡುವೆ.. " ಎನ್ನುವ ೧೯೯೪-೯೫ ರಲ್ಲಿ ನಡೆದ ಈ ಮಾತುಗಳು ನನಗೆ ಒಂದು ಕ್ಷಣ ಗಾಬರಿ ಇನ್ನೊಂದು ಕಡೆ ಸಂತಸ ತಂದಿತ್ತು..

ಆಗ ಐದು ರುಪಾಯಿಗೆ ಈಗಿನ ಐವತ್ತು ರೂಪಾಯಿಯಷ್ಟು ಬೆಲೆ.. ಆಗಿನ ಕಾಲಕ್ಕೆ ಸುಮಾರು ಹದಿನೈದು ಸಾವಿರ ರೂಪಾಯಿಗಳಷ್ಟು ವ್ಯಯ ಮಾಡಿ ವಿಜಯನಗರದಲ್ಲಿನ ಕಂಪ್ಯೂಟರ್ ಪಾಯಿಂಟ್ ಎನ್ನುವ ಒಂದು ಕಲಿಕಾ ಶಾಲೆಯಲ್ಲಿ ಕಂಪ್ಯೂಟರ್ ಯಂತ್ರ ಅಂದರೆ ಏನು ಎಂದು ತಿಳಿದುಕೊಳ್ಳಲು ಸಹಾಯ ಮಾಡಿದ್ದು ನನ್ನ ಜೀವನಕ್ಕೆ ಒಂದು ಮಹತ್ತರ ತಿರುವು ನೀಡಿದ ನನ್ನ ಅಕ್ಕಾ..

ಅಲ್ಲಿಂದ ಆಚೆಗೆ ಜೀವನದಲ್ಲಿ ಮತ್ತೆ ತಿರುಗಿ ನೋಡುವ ಪ್ರಮೇಯ ಬರಲಿಲ್ಲ.. ದೇವರ ಅನುಗ್ರಹ..
*********************************************************************************
"ಬನ್ನಿ ಶ್ರೀ.. ಒಂದು ಪುಸ್ತಕ ಬಿಡುಗಡೆ ಸಮಾರಂಭ ಇದೆ.. ಹೋಗಿ ಬರೋಣ.. ".. ನನಗೆ ಈ ಸಭೆ ಸಮಾರಂಭಗಳು ಅಲರ್ಜಿ ಎನ್ನಿಸುತ್ತಿದ್ದ ಕಾಲ.. ಆದರೆ ಸ್ನೇಹಿತನ ಬಲವಂತಕ್ಕೆ ಹೋದೆ..

"ಇವರು ಶ್ರೀಕಾಂತ್ ಮಂಜುನಾಥ್ ಅಂತ.. ಬರೀತಾ ಇರ್ತಾರೆ.. "

"ಒಹ್ ಹೌದಾ ದ ನಮಸ್ಕಾರ ಚೆನ್ನಾಗಿದ್ದೀರಾ .. ಬನ್ನಿ ತಿಂಡಿ ತಿನ್ನಿ.. ಸಿಗ್ತೀನಿ ಮತ್ತೆ"

ಇದು ಪ್ರಕಾಶ್  ಹೆಗ್ಗಡೆ ಅವರನ್ನು ಮೊಟ್ಟ ಮೊದಲ ಬಾರಿ ಭೇಟಿ ಪ್ರಸಂಗ..
*********************************************************************************
ಹಾಗೆ ಸುಮ್ಮನೆ ಒಂದು ಫೇಸ್ ಬುಕ್ ಗೊಡೆಯಲ್ಲಿನ ಬರಹಕ್ಕೆ ಲೈಕ್ ಬಟ್ಟನ್ ಒತ್ತಿದೆ...

ತಕ್ಷಣ ಒಂದು ಸಂದೇಶ ಬಂದಿತು.. ಶ್ರೀಕಾಂತ್ ಮಂಜುನಾಥ್.. ನೀವು ನಿಮ್ಮ ಕುಟುಂಬದ ಸಂಗಡ ಬನ್ನಿ.. ನಾವೆಲ್ಲಾ ಒಂದು ಸುಂದರ ಜಾಗಕ್ಕೆ ಹೋಗುತ್ತಿದ್ದೇವೆ..

ಸರಿ ಸರ್ಜಿ.. ಬರುವುದಾದರೆ ಹೇಳುವೆ ಎಂದಿದ್ದೆ..

ಜೂನ್ ೨೩ ೨೦೧೨.. ಬೆಳಿಗ್ಗೆ ಆರು ಘಂಟೆಗೆ.. ಎದ್ದು ಹೊರಟಿದ್ದೆವು.. ಬಸ್ಸಲ್ಲಿ ಜನವೋ ಜನ.. ಯಾರ ಮುಖವೂ ಪರಿಚಯವಿಲ್ಲ.." ಶ್ರೀಕಾಂತ್ ಮಂಜುನಾಥ್ ಚೆನ್ನಾಗಿದ್ದೀರಾ.." ಎಂದ ಅಜಾದ್ ಸರ್.. ಕಾಂತ ಎಂದ ಮಹೇಶ್.. ಶ್ರೀಕಾಂತ್ ಮಂಜುಂಥ್ ಎಂದ ರೂಪ ಸತೀಶ್.. ಶ್ರೀಕಾಂತ್ ಎಂದ ಸಂಧ್ಯಾ ಭಟ್.. ಸುಮಧುರ ನಗೆ ನಕ್ಕ ಸುಲತ.. ಸರ್ ನಿಮ್ಮ ಕಾಮೆಂಟ್ ಗಳು ಸೂಪರ್ ಎಂದ ಸುದೇಶ್.. ಒಬ್ಬರೇ ಇಬ್ಬರೇ ಗುರುಪ್ರಸಾದ್, ಉಮೇಶ್ ದೇಸಾಯಿ ಸರ್, ನವೀನ ಮಾಸ್ಟರ್, ಗಿರೀಶ್, ಬನ್ನಿ ಸರ್ ನೀವು ಎಂದ ಶಿವೂ ಸರ್.. ಹೀಗೆ ಹೆಸರಿಸಲು ಜಾಗವೇ ಸಾಲದೇ ಕಡೆಗೆ ನನ್ನ ಎಲ್ಲರಿಗೂ ಪರಿಚಯಿಸಿದ ಪ್ರಕಾಶ್ ಹೆಗ್ಗಡೆ.. "ಇವರು ಶ್ರೀಕಾಂತ್ ಮಂಜುನಾಥ್ ಅಂತ .. ನನ್ನ ಬ್ಲಾಗ್ ನಲ್ಲಿ ಸುಂದರ ಕಾಮೆಂಟ್ ಹಾಕ್ತಾರೆ.. "...  ಹೀಗೆ ಶುರುವಾಯಿತು ಸುಮಧುರ ವ್ಯಕ್ತಿಗಳ ಪರಿಚಯ.. ಒಬ್ಬರಾದ ಮೇಲೆ ಒಬ್ಬರು ನನ್ನ ಮನಸನ್ನು ಆಕ್ರಮಿಸಿಕೊಳ್ಳುತ್ತಾ ಹೋದರು.. ಇಂದು ಬೆರಳಿಗೆ ಸಿಕ್ಕದ..  ಲೆಕ್ಕಕ್ಕೆ ಎಟುಕದಷ್ಟು ಪ್ರೀತಿ ವಿಶ್ವಾಸ ಹರಿಸುವ ಸುಮಧುರ ಹೃದಯಗಳ ಸಾಗರವೇ ನನ್ನನ್ನು ಆವರಿಸಿಕೊಂಡಿವೆ..
********************************************************************************
ಶ್ರೀಕಾಂತ್ ಜಿ ಆನೆ ನಡೆದದ್ದೇ ದಾರಿ.. ನಿಮಗೆ ಅನ್ನಿಸಿದ್ದು ನೀವು ಬರೆಯಿರಿ.. ಓದಲು ನಾವು ಇದ್ದೇವೆ.. ಇದನ್ನು ನಿಮ್ಮೊಳಗೆ ನಾನೊಬ್ಬ ಎಂದು ಆದರಿಸುವ.. ಬಾಲೂ ಸರ್.. ಬನ್ನಿ ಸರ್ ಮೈಸೂರಿಗೆ ಎಂದರು.. ಸರಿ ಹೋಗಿಯೇ ಬಿಡೋಣ ಅಂತ ಮೈಸೂರಿಗೆ ಹೋಗಿಯೇ ಬಿಟ್ಟೆವು.. . ಕೆಲವು ತಿಂಗಳ ಹಿಂದೆ ಸರ್ ಎಂದು ಮಾತಾಡುತಿದ್ದ ಸಂಧ್ಯಾ, ಸುಲತ, ಸುಷ್ಮಾ..  ಭಾಗ್ಯ.. .. ಬನ್ನಿ ಅಣ್ಣ.. ಹೋಗೋಣ ಅಂತ ತಮ್ಮ ಹೃದಯ ಸಿಂಹಾಸನದಲ್ಲಿ ಅಣ್ಣ ಎಂದು ನನಗೆ ಜಾಗ ಕೊಟ್ಟು.. ಆದರಿಸಲು ಶುರು ಮಾಡಿದರು...
********************************************************************************
ನಾನೂ.. ಕಾಮೆಂಟ್ ಹಾಕಲು ಭಯ ಪಡುತ್ತೇನೆ.. ಈ ಮಹಾನುಭಾವ ನೆಗೆಟಿವ್ ಕಾಮೆಂಟ್ ಹಾಕಿದರೆ ಸಾಕು ಎಲ್ಲಿಂದಲೋ ಫೋನ್ ಮಾಡಿ ಹೆದರಿಸುತ್ತಾರೆ ಎನ್ನುತ್ತಾ ಆತ್ಮೀಯರಾಗಿರುವ ಬದರಿ ಸರ್.. ನನ್ನನ್ನು ಲಾಫ್ಟರ್ ಚಾಂಪಿಯನ್ ಎನ್ನುವ ಪ್ರದೀಪ್.. ಕಾಂತ  ಎನ್ನುತ್ತಾ ಅಪ್ಪಿ ಕೊಳ್ಳುವ ಮಹೇಶ್.. ಹೀಗೆ ಬರೆಯುತ್ತಾ ಹೋದರೆ ಹನುಮನ ಬಾಲಕ್ಕಿಂತ ದೊಡ್ಡದಾಗುವ ದೊಡ್ಡ ಪಡೆಯೇ ಇದೆ.. ನಿಮ್ಮನ್ನು "ಶ್ರೀ" ಎನ್ನುತ್ತೇನೆ ಎನ್ನುವ ಸ್ಪೂರ್ತಿಗೆ ಹೆಸರಾದ ರೂಪ ಸತೀಶ್.. ಇವರನ್ನು ಅಕ್ಕ ಎನ್ನಲೇ, ದೇವಿ ಎನ್ನಲೇ.. ತಂಗಿ ಎನ್ನಲೇ.. ತಾಯಿ ಎನ್ನಲೇ.. ಊಹೂ ಇದಕ್ಕಿಂತ ಮಿಗಿಲು.. ಇವರನ್ನು ಶ್ರೀಮಾನ್ ಎನ್ನುತ್ತೇನೆ. ಆ ಹೆಸರು ನಾನೇ ಇಟ್ಟದ್ದು ಎನ್ನುವ ಉತ್ಸಾಹದ ಚಿಲುಮೆ ಅಜಾದ್ ಸರ್.. "ಶ್ರೀಕಾಂತ್  ಮಂಜುನಾಥ್ " ಎನ್ನುತ್ತಾ ಅಪ್ಪಿಕೊಂಡು ಪುಟ್ಟ ಕಂದನನ್ನು ಮುದ್ದು ಮಾಡುವಷ್ಟೇ ಆಪ್ತತೆಯಿಂದ ಪ್ರೀತಿಸುವ ಡಾಕ್ಟರ್ ಡಿ. ಟಿ. ಕೃಷ್ಣಮೂರ್ತಿ.. ಅಬ್ಬಾ ಒಬ್ಬರಿಗಿಂತ ಒಬ್ಬರು ಘಟಾನುಘಟಿಗಳು ತಮ್ಮ ಸ್ನೇಹದ ಸಂಕೋಲೆಯಲ್ಲಿ ನನ್ನನ್ನು ಬಂಧಿಸುವ ಇಂಥಹ ಬಳಗ ದೇವರು ಕೊಟ್ಟ ವರವೇ ಸರಿ
********************************************************************************
ಅಣ್ಣಾ ನಿಮ್ಮ ಶೈಲಿಯಲ್ಲಿ ಬರೆದಿದ್ದೇನೆ ನೋಡಿ ಎನ್ನುತ್ತಾ ಹುಟ್ಟು ಹಬ್ಬಕ್ಕೆ ಅಮೋಘ ಬರಹ ಕೊಟ್ಟ ಸತೀಶ್ ಬಿ ಕನ್ನಡಿಗ...

ಶ್ರೀ ನೀವು ಒಬ್ಬ ಉತ್ತಮಾತೀತ ಸ್ನೇಹಿತ.. ನಿಮ್ಮ ಹುಟ್ಟು ಹಬ್ಬಕ್ಕೆ ನಿಮ್ಮದೇ ಶೈಲಿಯಲ್ಲಿ ಉಡುಗೊರೆ ಕೊಡಬೇಕು ಅನ್ನಿಸಿತು.. ನನ್ನ ಅಪ್ಪನ ಹುಟ್ಟು ಹಬ್ಬದಂದೇ ನಿಮ್ಮ ಹುಟ್ಟು ಹಬ್ಬ... ಅದಕ್ಕಿಂತ ಇನ್ನೇನು ಬೇಕು ನನಗೆ.. ಎನ್ನುವ ನಿವೇದಿತ ಚಿರಂತನ್..

ಅಣ್ಣ ನಿಮ್ಮ ಹತ್ತಿರ ಮಾತಾಡುತ್ತಿದ್ದರೆ.. ನನ್ನ ಜೊತೆಯಲ್ಲಿ ಮಾತಾಡುತ್ತಿದ್ದೇನೆ ಎನ್ನಿಸುತ್ತದೆ.. ಎನ್ನುವ ಸಂಧ್ಯಾ ಪುಟ್ಟಿ..

ಅಣ್ಣಯ್ಯ ನೆಗೆಟಿವ್ ಕತೆಗೂ ಪಾಸಿಟಿವ್ ಕಾಮೆಂಟ್ ನೀಡುವ ನಿಮಗೆ ಹಾಟ್ಸ್ ಆಫ್ ಎನ್ನುತ್ತಾ ಗುಳಿ ಕೆನ್ನೆಯಲ್ಲಿ ನಗುವ ಪುಟ್ಟಿ ಸುಷ್ಮಾ

ಅಣ್ಣ ಎನ್ನಲೇ ಅಪ್ಪ ಎನ್ನಲೇ ಎಂದು ಗೊಂದಲವೇ ಕಾಣದ ಅಪ್ಪನಂತಿರೋ ಅಣ್ಣ ಎಂದು ಹೇಳುತ್ತಾಳೆ ತುಂಟ ಭಾಗ್ಯ ಪುಟ್ಟಿ..
ಸಾರೀ ಶ್ರೀ.. ನಿಮ್ಮ ತರಹ ಬರೆಯೋಕೆ ಬರೋಲ್ಲ.. ಆದರೂ ಶುಭಾಷಯ ಹೇಳುವೇ ಎನ್ನುವ ರೂಪ ಸತೀಶ್..

ಇವರ ಜೊತೆ ಮಡದಿ ಸವಿತಾ.. ಹಾಗೂ ನನ್ನ ಸ್ನೇಹಿತೆ ಕಂ ಮಗಳು ಶೀತಲ್ ಎಲ್ಲರೂ ಸೇರಿ ಹರಟಿದ್ದು ಬೆಳಗಿನ ಜಾವ ಮೂರು ಘಂಟೆಯ ತನಕ.. ಬೆಳಿಗ್ಗೆ ಎದ್ದ ಮೇಲೆ ಇನ್ನೊಮ್ಮೆ ಶುಭಾಶಯಗಳ ಜೊತೆಯಲ್ಲಿ ಕೇಕ್ ತಂದು.. ಇನ್ನೊಮ್ಮೆ ಆಚರಣೆ..

ಇತಿಹಾಸದಲ್ಲಿ ಕಂಡರಿಯದ ಈ ಶುಭಾಶಯಸಾಗರದ ಅಲೆಗಳು ಬಡಿದು ಬಡಿದು ಕಣ್ಣಲ್ಲಿ ಹಾಗೆಯೇ...

*********************************************************************************
ಇದೆಲ್ಲಾ ಸಾಧ್ಯವೇ.. ಎನ್ನುತ್ತಾ ಕಳೆದ ನಲವತ್ತೊಂದು ವರ್ಷಗಳ ಇತಿಹಾಸದ ಪುಟವನ್ನು ತಿರುವು ಹಾಕಿದರೆ... ಆಹಾ... ಯೋಚಿಸುತ್ತಾ ಕುಳಿತಿದ್ದಾಗ...

ಶ್ರೀ ಶ್ರೀ .. ಎಂದು ಯಾರೋ ಕೂಗಿದ ಹಾಗೆ ಆಯಿತು.. ಯಾರಪ್ಪ ಎಂದು ತಿರುಗಿದರೆ..

"ಅಲ್ಲಾ ಶ್ರೀ.. ನಿನಗೆ ಶುಭಾಶಯಗಳ ಮಹಾಪೂರವೇ ಹರಿಯಿತು ಅಂತ ನನ್ನನ್ನೇ ಮರೆತು ಬಿಡೋದೇ. .ಇಡಿ ರಾತ್ರಿ ಚಳಿಯಲ್ಲಿ ಒಬ್ಬನೇ ನಿಂತಿದ್ದೆ.. "

ಅಯ್ಯೋ ಗೊತ್ತಾಗಲೇ ಇಲ್ಲ ಪುಟ್ಟಾ.. ಇವರ ಪ್ರೀತಿಯ ಕಂಡು ನಾ ಮೂಕನಾಗಿ ಬಿಟ್ಟಿದ್ದೆ.. ಕಾರಣ ಇಡಿ ರಾತ್ರಿ ನನ್ನ ಪ್ರೀತಿ ಪಾತ್ರವಾದ ವಿಕ್ಟರ್ ಬೈಕನ್ನು ಗೇಟಿನ ಹೊರಗೆ ರಸ್ತೆಯಲ್ಲಿಯೇ ಮರೆತು ನಿಲ್ಲಿಸಿದ್ದೆ..

ಇಲ್ಲ ಬಿಡು ಶ್ರೀ ನನಗೆ ಅರ್ಥ ವಾಗುತ್ತೆ..  "ಅಂದು ಹೊಟ್ಟೆಗೆ  ಇಲ್ಲದೆ ತಾಯಿಯ ಬರುವನ್ನೇ ಕಾಯುತ್ತಾ ಕುಳಿತಿದ್ದಾ ಆ ಕಂದಮ್ಮ ಇಂದು ಮನಸ್ಸಿಗೆ ಹಸಿವೆ ಇಲ್ಲದಷ್ಟು ಪ್ರೀತಿ ವಿಶ್ವಾಸಗಳನ್ನು ಉಂಡು ಸಂತೃಪ್ತಿ ನಗೆಯ ಚೆಲ್ಲುವ ವ್ಯಕ್ತಿಯಾಗಿದ್ದಾನೆ ಎನ್ನುವ ಮಾತು ನಿಜವಾಗಿದ್ದರೆ ಅದಕ್ಕೆಲ್ಲ ಕಾರಣ ನಿನ್ನ ಸ್ನೇಹದ ಬಳಗ.. ಅಲ್ಲವೇ...ನೂರಕ್ಕೂ ಹೆಚ್ಚು ಶುಭಾಶಯ ಸಂದೇಶಗಳು.. ಮೆಚ್ಚುಗೆಗಳು, ಚಿತ್ರಗಳು.. ಕರೆಗಳು ಓಹ್.. ಇದೆಲ್ಲ ಒಂದು ಚರಿತ್ರೆಯೇ ಅಲ್ಲವೇ " ಎಂದಾಗ

ಅದರ ಜೊತೆಯಲ್ಲಿ ನಿಂತಿದ್ದ ನನ್ನ ರಿಟ್ಜ್  ಕಾರು.. ನಕ್ಕು ಕಣ್ಣು ಹೊಡೆದು ಸಮ್ಮತಿಸಿತು .

ಇದಕ್ಕೆಲ್ಲಾ ಕಾರಣೀಕರ್ತರು ಯಾರು ಗೊತ್ತೇ..

ನೀವೇ.. ಅಂದರೆ ಈ ಲೇಖನವನ್ನು ಓದುತ್ತಿರುವ ನನ್ನ ಕುಟುಂಬದ ಸದಸ್ಯರೇ ಆಗಿರುವ ನೀವೇ..

ಅದಕ್ಕೆ ಕಣ್ಣೊರೆಸಿಕೊಂಡು ಹೇಳುವೆ..

ಎಂದರೋ ಮಹಾನುಭಾವುಲು ಅಂದರೀಕಿ ವಂದನಮು.. !!!

 ಅದಕ್ಕೆ ಹೇಳಿದ್ದು ಮರೋ ಚರಿತ್ರ ಅಲ್ಲವೇ ಅಲ್ಲಾ ಇದು ಮರೆಯಲಾರದ ಮರೆಯಲಾಗದ ಚರಿತ್ರೆ... !!!