Tuesday, August 19, 2014

ಬಂದ ಬಂಧ .. ಬಂದ ಬಂಧ.. ತನುಬಂಧ!!!

ಬೃಹದಾಕಾರದ ಮರಕ್ಕೆ ಜೋತು ಬಿದ್ದಿದ್ದ ಬೇತಾಳ ವಿಕ್ರಮನ ಬರುವಿಕೆಗೆ ಕಾಯುತ್ತಿತ್ತು.. .. ಬೇತಾಳ ವಿಕ್ರಮನಿಗೆ ಎಷ್ಟು ಅಂಟಿಕೊಂಡಿತ್ತು ಅಂದರೆ..  ಒಂದು ದಿನ ವಿಕ್ರಮನನ್ನು ನೋಡದೆ ಹೋದರೆ.. ಅವನ ಹೆಗಲ ಮೇಲೆ ಹೋಗದೆ ಇದ್ರೆ ಏನೋ ಕಳೆದುಕೊಂಡ ಭಾವನೆ.. ಏನೋ ಆ ದಿನದಲ್ಲಿ ಒಂದೆರಡು ಘಳಿಗೆ ಉಸಿರು ನಿಂತ ಅನುಭವ..

ಎರಡು ಮಿಡಿವ ಮನಗಳ ಮಿಲನ (ಚಿತ್ರ ಕೃಪೆ ಅಂತರ್ಜಾಲ)

ವಿಕ್ರಮನಿಗೆ ತನ್ನ ರಾಜ್ಯಭಾರ, ಪ್ರಜೆಗಳ ಕಷ್ಟ ಸುಖಃ, ಪರಿವಾರದ ಯೋಗ ಕ್ಷೇಮ ಜೊತೆಯಲ್ಲಿ ಆಗಾಗ ಬಂದು ಒದಗುವ ಪರೀಕ್ಷಾ ಸಮಯಗಳು.. ರಾಜ ಮನೆತನದ ಮಕ್ಕಳಿಗೆ ಹಿತವಚನ, ಪಾಠಗಳು... ಹೀಗೆ ಒಂದಲ್ಲ ಒಂದು ರೀತಿ ಕೈ ತುಂಬಾ ಕೆಲಸ.. ಆದರೂ ಸಂಜೆ ಆಯಿತು ಎಂದರೆ ಬೇತಾಳನ ಕಥೆ ಕೇಳುವ ತವಕ.. ಆ ಕೆಲ ಘಳಿಗೆಗಳಲ್ಲಿ ಬೇತಾಳ ಹೇಳುವ ಸುಧೀರ್ಘ ಕಥೆ ಕೇಳಿ ಅದಕ್ಕೆ ಒದಗುವ ಕೆಲವು ಪ್ರಶ್ನೆಗಳಿಗೆ ಸಮಂಜಸ ಉತ್ತರ ಸಿಕ್ಕರೆ ವಿಕ್ರಮನ ಆ ದಿನ ಸಾರ್ಥಕ ಅನ್ನಿಸುವ ಭಾವ..

ಆದರೆ ಇಬ್ಬರಿಗೂ ಗೊತ್ತಿತ್ತು.. ನಂಟು  ಒಂದೇ ಆದರೂ ಜೀವನದ ಕವಲು ದಾರಿಯಲ್ಲಿ ಕೆಲವೊಮ್ಮೆ ತುಳಿಯುವ ಹಾದಿ ಎತ್ತಲೋ ಎಳೆದು ಕೊಂಡು ಹೋಗುತ್ತದೆ.. ವಿಶೇಷವಾದ ಈ ಬಂಧ ಕೆಲವೊಮ್ಮೆ ಉಸಿರುಕಟ್ಟಿಸಬಹುದು ಎಂಬ ಅರಿವಿದ್ದರೂ.. ಆ ಬೆಸದ ಭಾವ ಇಬ್ಬರನ್ನೂ ಒಂದು ಮಾಡಿತ್ತು..

ಸಂಬಂಧವೇ ಇಲ್ಲದ ದಾರಿ ಹೋಕರಾಗಬಹುದಿದ್ದ ಎರಡು ಭಾವ ಜೀವಿಗಳು ಒಂದೇ ಎನ್ನುವಂತೆ ಜೀವಿಸುತ್ತಿದ್ದವು..

ಹೀಗೆ ಒಂದು ದಿನ ಕಾಯುತ್ತ ಮರದಲ್ಲಿ ಜೋತು ಬಿದ್ದು ಕಾಯುತ್ತಾ ನೇತಾಡುವಾಗ.. ಅಚಾನಕ್ ಕೊಳಲಿನ ಗಾನ ಮಾಧುರ್ಯ ಕೇಳಿ ಬಂತು.. ಅರೆ ಏನಿದು.. ಯಾರಿದು ಎಂದು ಉಲ್ಟಾ ನೋಡುತ್ತಾ ಇದ್ದಾಗ ನವಿಲು ಗರಿ ಕಾಣಿಸಿತು.. ಮೇಘ ಶ್ಯಾಮನ ಮುರುಳಿ ಲೋಲ ನಿಧಾನವಾಗಿ ವೇಣು ನಾದ ಮಾಡುತ್ತಾ ಅಲ್ಲಿಗೆ ಬಂದಾ..

ಕೊಳಲು ಮತ್ತು ಕೃಷ್ಣ ಎರಡು ಮಿಡಿವ ಮನಗಳ ಮಿಲನ  (ಚಿತ್ರ ಕೃಪೆ ಅಂತರ್ಜಾಲ)

ಬೇತಾಳಕ್ಕೆ ಆಶ್ಚರ್ಯ.. ಶ್ರೀ ಕೃಷ್ಣನಿಗೆ ವಂದಿಸುತ್ತಾ... "ಶ್ಯಾಮ.. ಏನಿದು ಇಂದು ಈ ದಿನ.. ಇವತ್ತು.. ಹೀಗೆ.. "

"ಅರೆ ಬೇತಾಳ ಯಾಕೆ ಉದ್ವೇಗ.. ಆತಂಕ.. .. ಗಾಬರಿ ಬೇಡ.. ನಿನ್ನೆ ನೋಡಲು ಬಂದೆ... "

ತಿದ್ದಿ ತೀಡಿಸಿಕೊಂಡು ಹುಬ್ಬನ್ನು ಮತ್ತಷ್ಟು ಮೇಲಕ್ಕೆ ಏರಿಸಿ.. "ಏನಿದು ಭಗವಾನ್ ನನ್ನ ನೋಡಲು ಬರುವುದೇ.. ಏನು ಸಮಾಚಾರ?"

"ಹೌದು.. ನಿನ್ನ ವಿಕ್ರಮನ ಪರಿಚಯ ಚೆನ್ನಾಗಿ ಇದೆ.. ಜೊತೆಯಲ್ಲಿ ನೀನು ವಿಕ್ರಮನನ್ನು ಸ್ವಂತ ಮಗನು ಎಂಬ ಭಾವನೆ ನಿನ್ನದು.. ಹಾಗೆಯೇ ವಿಕ್ರಮನು ಕೂಡ ನಿನ್ನನ್ನು ಜನಕ ರೂಪದಲ್ಲಿಯೇ ನೋಡುತ್ತಾನೆ.. ಆದರೆ ಏನು ಮಾಡುವುದು ವಿಕ್ರಮನಿಗೆ ತನ್ನ ರಾಜ್ಯವನ್ನು ಸಂರಕ್ಷಿಸಬೇಕು, ಉತ್ತಮ ಆಡಳಿತ ಕೊಡಬೇಕು.. ಹೀಗೆ ನೂರೆಂಟು ತಾಪ ತ್ರಯಗಳು.. ಅದರಲ್ಲೂ ಕೊಂಚ ಬಿಡುವು ಮಾಡಿಕೊಂಡು ಭೇಟಿ ಮಾಡಲು ಬರುತ್ತಿದ್ದಾನೆ.. "

"ಹೂಂ ಹೂಂ "

"ನಿನ್ನ ಕಷ್ಟವು ನನಗೆ ಅರ್ಥವಾಗುತ್ತದೆ.. ದಿನವೂ ಅದೇ ಮರದ ಮೇಲೆ ವಾಸ.. ನಿನ್ನ ಸುತ್ತಾ  ಮುತ್ತಾ ಇರುವ ಬೇತಾಳಗಳು ತಮ್ಮ ಕತೆಗಳನ್ನು ಹೇಳಿ ಹೇಳಿ ನಿನಗೂ ಸ್ವಲ್ಪ ಬದಲಾವಣೆ ಬೇಕು ಎನ್ನಿಸುತ್ತದೆ. .. ಜೊತೆಯಲ್ಲಿ ಈ ನಡುವೆ ನಿನ್ನ ಅನೇಕ ದೈನಂದಿನ ಚಟುವಟಿಕೆಗಳಿಗೆ ಸಮಯ ಕೊಡಲು ಆಗುತ್ತಿಲ್ಲ.. ಆದ್ದರಿಂದ ನಿನಗೆ ಕೊಂಚ ಬದಲಾವಣೆ ಎಂದರೆ ವಿಕ್ರಮನ ಸಾಂಗತ್ಯ.. ಮಾತು.. ಕಥೆ.. ಸಂದೇಶ ಕೊಡುವ ಮಾತುಗಳು.. "

"ಹೂಂ ಹೂಂ ಹೂಂ"

"ತಮಾಷೆ ಗೊತ್ತಾ.. ಎಲ್ಲೋ ಹುಟ್ಟುವ ಝರಿ.. ನದಿಯಾಗಿ.. ಶರಧಿ ಸೇರುವಾಗ ಧನ್ಯತಾ ಭಾವ ಇರುತ್ತೆ ಅಲ್ಲವಾ ಹಾಗೆಯೇ ನಿಮ್ಮಿಬ್ಬರ ಬಂಧವೂ ಕೂಡ.. ನದಿಯಿಲ್ಲದೆ ಸಾಗರವಿಲ್ಲ.. ಸಾಗರವಿಲ್ಲದೆ ನದಿಯಿಲ್ಲ.. "

"ಕೃಷ್ಣ... ನನಗೆ ಅರ್ಥವಾಗುತ್ತಿದೆ.. ನಿನ್ನ ಮಾತುಗಳು ಎಲ್ಲಿ ಹೋಗುತ್ತಿದೆ ಎಂದು.. ನನಗಿರುವ ಒಂದೇ ಸಂದೇಹ ಅಂದರೆ.. ನಾನೂ ವಿಕ್ರಮನ್ನು ಇಷ್ಟೊಂದು ಹಚ್ಚಿಕೊಳ್ಳುವುದು.. ವಿಕ್ರಮನಿಗೆ ಕಷ್ಟವಾಗುತ್ತದೆಯಾ ಅಥವಾ ನಾ ಅವನ ಹೆಗೆಲೇರಿ ಕೂತು.. ಕೆಲವೊಮ್ಮೆ ಅವನ ತಲೆ ಸವರುತ್ತಾ ಅವನಿಗೆ ಕಥೆ ಹೇಳುವುದು ತಪ್ಪು ಅನ್ನಿಸುತ್ತದೆಯ.. ಇವರೆದು ಪ್ರಶ್ನೆಗಳಿಗೆ ಬೇಗ ಉತ್ತರ ಕೊಟ್ಟು ಬಿಡು ನನ್ನ ಆತ್ಮ ವಿಕ್ರಮ ಬರುವ ಸಮಯವಾಯಿತು"

"ಇಲ್ಲಾ ಮಹರಾಯ.. ತಪ್ಪು ಇಲ್ಲವೇ ಇಲ್ಲಾ.. ನಿನ್ನ ಮನಸು ಹಾಲಿನಷ್ಟೇ ಬಿಳುಪು.. ಹುಡುಕಿದರೂ ಕೆಟ್ಟ ಭಾವ ಸಿಗಲಾರದು.. ಆದರೂ ಲೋಕದ ದೃಷ್ಟಿಯಲ್ಲಿ ತಪ್ಪು ಇರಬಹುದೇ.. ಜೋತಾಡುವ ಬೇತಾಳ ಮನುಜನೊಡನೆ ಈ ಬಂಧ ಸರಿಯೇ ಎನ್ನುವ ದುಗುಡ ನಿನ್ನದು ಅಲ್ಲವೇ.. ಯೋಚನೆಯೇ ಬೇಡ.. .. ಮುಗಿಲಲ್ಲಿ ಹನಿ ಸೇರಿರುತ್ತದೆ.. ಅದೇ ಹನಿ ಆವಿಯಾಗಿ ಆಗಸ ಸೇರುತ್ತದೆ.. ಮತ್ತೆ ಭುವಿಗೆ ಪಯಣ.. ನೀವಿಬ್ಬರು ಹೃದಯದ ಬಡಿತ ಇದ್ದ ಹಾಗೆ.. ಒಮ್ಮೆ ಲಬ್ ಎಂದರೆ ಇನ್ನೊಮ್ಮೆ ಡಬ್ ಎನ್ನುತ್ತದೆ.. ಹಾಗೆ ಆದಾಗ ಮಾತ್ರ ಹೃದಯದ ಜೀವಂತವಾಗಿರುತ್ತದೆ .. "

ಒಂದು ನಗು ಹಾಗೆ ಮಿಂಚಿ ಮಾಯವಾಯಿತು ಬೇತಾಳನ ಮುಖದಲ್ಲಿ

"ಮತ್ತೆ....  ಆದ್ರೆ...  ನೀನು ಅದನ್ನು ವಿಕ್ರಮನ ಬಳಿ ಹೇಳಿಕೊಂಡದ್ದು ಸರಿ.. ಯಾಕೆ ಅಂದರೆ.. ನಿನ್ನ ಮನ ಹೇಳಿಕೊಂಡ ಮೇಲೆ ಹತ್ತಿಯಷ್ಟೇ ಹಗುರವಾಯಿತು.. ಹಾಗೆಯೇ ವಿಕ್ರಮನಿಗೂ ಕೂಡ.. ನಿನ್ನ ಕಥೆ, ಮಾತುಗಳು, ನಗು, ನಿನ್ನ ಮನದಲ್ಲಿರುವವರನ್ನು ಜತನ ಮಾಡುವ ರೀತಿ,  ಎಲ್ಲವೂ ಅವನಿಗೆ ಬಲು ಇಷ್ಟಾ.. ನೀನು ಅರಿಕೆ ಮಾಡಿಕೊಂಡ ನಿನ್ನ ಆತಂಕ ಅವನಿಗೂ ಅರ್ಥವಾಗಿದೆ.. ಹಾಗಾಗಿ ಇಬ್ಬರ ಮನಸ್ಸು ಬಿಲ್ಲು ಬಾಣದ ರೀತಿಯ ಹಾಗೆ ಆಗಿದೆ.. ಬತ್ತಳಿಕೆಯಲ್ಲಿದ್ದ ಬಾಣ ತನ್ನ ಗುರಿ ಸೇರಿದೆ.. ಆ ನೆಮ್ಮದಿ ಬಾಣಕ್ಕೆ ಸಿಕ್ಕರೆ.. ಬಿಲ್ಲಿಗೆ ಬಾಣವನ್ನು ಗುರಿ ಸೇರಿಸಿದ ತೃಪ್ತಿ.. "

ಕಪ್ಪಗಿದ್ದ ಬೇತಾಳ.. ಬೆಳ್ಳಗೆ ಕಾಣಲು ಬೂದಿಯನ್ನು ಸಿಕ್ಕಾ ಪಟ್ಟೆ ಬಳಿದು ಕೊಂಡಿತ್ತು.. ಕೃಷ್ಣ ಮಾತನ್ನು ಕೇಳಿ ಕಣ್ಣಲ್ಲಿ ಹನಿಯಾಗಿದ್ದ ಮುತ್ತುಗಳು ನಿಧಾನವಾಗಿ ಜಾರತೊಡಗಿದವು..

ವಿಕ್ರಮ ಬರುವುದನ್ನು ನೋಡಿ.. ಶ್ರೀ ಕೃಷ್ಣ ಮುಗುಳುನಗುತ್ತಾ.. "ನೋಡು ನಿನ್ನ ತನುಜಾ ಬಂದಾ ನಾ ಹೊರಟೆ.. ಎಂದು ಹೇಳಿ ಅಂತರ್ಧಾನನಾದ.. "

ಬೇತಾಳ.. ವಿಕ್ರಮನನ್ನು ಭೇಟಿ ಮಾಡಲು ಮರದ ಕೊಂಬೆಯಿಂದ ಜೋರಾಗಿ ಜೀಕತೊಡಗಿತು.... !!!

ಬೇತಾಳನ ಮುಖದಲ್ಲಿ ಪ್ರಶಾಂತತೆಯನ್ನು ಕಂಡು ವಿಕ್ರಮನ ಹೃದಯ ಮಿಡಿಯುತ್ತ..  ತನ್ನಷ್ಟಕ್ಕೆ ತಾನೇ ಹೇಳಿಕೊಂಡಿತು "ಬಂಧಗಳು ಅನುಬಂಧಗಳು ದೇವರು ಕೊಟ್ಟ ವರ.. ಕೆಲವೊಮ್ಮೆ ಅನುಮಾನ ಕಾಡಿದಾಗ ಮನದಲ್ಲೇ ಬಾವಿ ತೋಡಿಕೊಳ್ಳುವ ಬದಲು ಬೇತಾಳ ಮಾಡಿದ ಹಾಗೆ ಹೊರಗೆ ಹಾಕುವುದು ಒಳ್ಳೆಯದು.. ಹಾಗೆಯೇ ಅದನ್ನು ಅರ್ಥಮಾಡಿಕೊಂಡು ಬೇತಾಳನ ಮನಸ್ಸನ್ನು ಇನ್ನಷ್ಟು ಪ್ರೀತಿಸುವ ನಿನ್ನ ಹೃದಯವೂ ಸುಂದರ.. ಕೃಷ್ಣನ ಮಾತಿನಲ್ಲಿಯೇ ನೀ ಹೇಳಬೇಕಾದ್ದನ್ನು ಹೇಳಿಸಿಬಿಟ್ಟೆ.. ನೀನು ನಿಜವಾಗಿಯೂ ವಿಕ್ರಮನೇ.. "


Monday, August 11, 2014

ಕಾಂತೆ ಕಾಂತ ಒಂದಾದ ಮೇಲೆ

ಕಾಂತ ಮತ್ತು ಕಾಂತೆ ಬೆಟ್ಟದ ತುದಿಯಲ್ಲಿ ಕೂತು ಮಾತಾಡುತ್ತಿದ್ದರು... ಅಥವಾ ಹರಟೆ ಕೊಚ್ಚುತ್ತಿದ್ದರು..

ಇಬ್ಬರದು ಹನ್ನೆರಡು ವರ್ಷಗಳ ಸುಮಧುರ ದಾಂಪತ್ಯ.. ಇಬ್ಬರದೂ ಉತ್ತರ ಧ್ರುವಧಿಂ ದಕ್ಷಿಣ ಧ್ರುವಕೂ ಅನ್ನುವ ವಿಭಿನ್ನ ಬಿನ್ನ ರಾಶಿಯೇ ಇದ್ದರೂ ದೇವರು ಬೆಸೆದ  ಪ್ರೀತಿಯ ಹಾರವನ್ನು ತೊಟ್ಟ ಆ ದಂಪತಿಗಳು ಪ್ರೇಮಿಗಳ ಹಾಗೆ ಸದಾ ಜಗದಲ್ಲಿ ಜಗಳವಾಡುತ್ತಲೇ ಪ್ರೀತಿ ಪ್ರೇಮ ವಿಶ್ವಾಸವನ್ನು ಹಂಚಿಕೊಂಡು ನೆಂಚಿಕೊಂಡು ಬಾಳುವೆ ಮಾಡುತ್ತಿದ್ದರು.

ಕಾಂತೆ "ಕಾಂತ .. ನಿನ್ನ ಸಿನಿಮಾ ಹುಚ್ಚು ಗೊತ್ತು.. ಸಿನೆಮಾವನ್ನು ನಿನ್ನ ಪ್ರಾಣ ಎನ್ನುವಂತೆ ನೋಡುತ್ತೀಯೆ.. ಒಂದು ಚಿತ್ರದ ಗೀತೆಯನ್ನು ನಮ್ಮ ಹನ್ನೆರಡು ವರ್ಷದ ದಾಂಪತ್ಯಕ್ಕೆ ಅರ್ಪಣೆ ಮಾಡುವುದಾದರೆ ಯಾವ ಗೀತೆ ಆರಿಸುತ್ತೀಯ?"

ಕಾಂತ.. "ಕಾಂತೆ.. ಹಃ ಹಃ ಹಃ ಚಲನ ಚಿತ್ರಗಳು, ಗೀತೆಗಳು ನನ್ನ ತಾಯಿಯ ಬಸಿರಲ್ಲಿದ್ದಾಗಲೇ ಉಸಿರಾಗಿತ್ತು ಅನ್ನಿಸುತ್ತದೆ.. ಹೀಗೆ ಅಂತ ಯಾವ ಗೀತೆಯೂ ಹೇಳಲಾರೆ.."

ಹೇಳು ಕಾಂತ.. ಅಪರೂಪಕ್ಕೆ ನಾ ಏನಾದರೂ ಕೇಳುತ್ತೇನೆ.. ಅದು ಆರ್ಥಿಕ..  ಪಾರಮಾರ್ಥಿಕ ಯಾವುದೂ ಇಲ್ಲ.. ಲೌಕಿಕ.. ನಿನಗೆ ಅನ್ನಿಸಿದ ಗೀತೆಯನ್ನು ಹೇಳು.. ಪ್ಲೀಸ್sssssssss!"

ಯಾವತ್ತೂ  ಏನೂ ಕೇಳದ ಕಾಂತೆ.. ಅಪರೂಪಕ್ಕೆ ಒಮ್ಮೆ ಕೇಳಿದ ನಲ್ಲೆಗೆ ಬೇಸರ ಏಕೆ ಮಾಡಬೇಕು ಎಂದು ನೀಲಿ ಅಗಸವನ್ನೇ ನೋಡುತ್ತಾ ಕುಳಿತ.. ಹತ್ತಿಯ ಹಾಗೆ ಹಿಂಜಿ ಹಿಂಜಿ ತೇಲುತ್ತಿತ್ತು.. ಮೋಡ, ಪ್ರಕೃತಿ, ಕಣಿವೆ ಇವೆಲ್ಲಾ ಕಾಂತನಿಗೆ ಉತ್ಸಾಹ ಚಿಮ್ಮುವ ಚಿಲುಮೆಯಾಗಿತ್ತು.. ನಲ್ಲೆಯ ಒಂದು ಚಿಕ್ಕ ಆಸೆಯನ್ನು ಈಡೇರಿಸಿ ಬಿಡೋಣ ಅಂತ.. ತೋಳು ಮಡಿಸಿ.. ತನ್ನ ಹೃದಯದ ಹಾರ್ಡ್ ಡಿಸ್ಕ್ ಓಪನ್ ಮಾಡಿದ..

ಕೈಗೆ ಕಟ್ಟಿದ ಗಡಿಯಾರ ಹಿಂದಕ್ಕೆ ಓಡತೊಡಗಿತು.. ದಶಕಗಳ ಹಿಂದೆ ಚಿತ್ರ ಪರದೆಯಲ್ಲಿ ನಡುಕ ಹುಟ್ಟಿಸಿದ ನಾ ನಿನ್ನ ಬಿಡಲಾರೆ ಚಿತ್ರ ನೆನಪಿಗೆ ಬಂತು..

"ಕಾಂತೆ.. ಈ ಚಿತ್ರದ ಒಂದು ಗೀತೆಯನ್ನು ನಾ ಹಾಡುತ್ತೇನೆ.. ನೀನು ಹಾಡಬೇಕು.. ಒಂದು ವಿಚಿತ್ರ ಶಕ್ತಿ ಇದೆ ಈ ಹಾಡಲ್ಲಿ.. ಒಂದು ವಿಭಿನ್ನ ರೋಮಾಂಚನ ನೀಡುವ ಪ್ರೇಮ ಗೀತೆ ಇದು.. .. ಈ ಹಾಡನ್ನು ಹಾಡುವ ಯಾವುದೇ ಸುಮಧುರ ಎರಡು ಹೃದಯಗಳು ಒಂದಕ್ಕೊಂದು ಬೆಸೆದುಕೊಂಡು ಹೊಸ ಜೀವನದ ಹಾಡಿಗೆ ತೆರಳುತ್ತದೆ.. "

"ಹೌದಾ.. ಹಾಗಾದರೆ ನಾ ಸಿದ್ಧ" ಕೈ ಕೊಡವಿಕೊಂಡು ನಿಂತೇ ಬಿಟ್ಟಳು ಕಾಂತೆ..

ಶುರುವಾಯಿತು..

"ನಾನು ನೀನು ಒಂದಾದ ಮೇಲೆ ಹೀಗೇಕೆ ನೀ ದೂರ ಓಡುವೆ . 
ಮುತ್ತಲ್ಲೆ ನಿನ್ನ ಸಿಂಗಾರ ಮಾಡಿ ಕಣ್ ತುಂಬಾ ನಾ ನೋಡುವೆ!!!"

"ವಾವ್ ಕಾಂತ ಸೂಪರ್..ಕಾಂತ  "

"ನೀನು ಹಾಡಬೇಕು ಕಾಂತೆ"

ನಾಚಿ ಸ್ವಲ್ಪ ದೂರ ನಿಂತು "ನಾನು ನೀನು ಒಂದಾದ ಮೇಲೆ ಹೀಗೇಕೆ ನೀ ನನ್ನ ನೋಡುವೆ
ಕಣ್ಣಲ್ಲೂ ನೀನೆ ಮನದಲ್ಲೂ ನೀನೆ ಎಲ್ಲೆಲ್ಲೂ ನೀ ಕಾಣುವೆ"

ಕಾಂತ... "ಸೂಪರ್ ಸೂಪರ್"

ಕಾಂತೆ ಮುಗುಳು ನಗುತ್ತಾ.. "ಕಾಂತ . ನೀ ನನ್ನ ಉಸಿರಲ್ಲಿ ಬೆರೆತಿರುವೆ.. ಆ ಉಸಿರನ್ನು ಹಿಡಿದು ಹಾಡಲು ಸಾಧ್ಯವೇ.."

"ಪ್ರಯತ್ನ ಪಡುವೆ"

"ನನಗಾಗಿ ಹೆಣ್ಣಾಗಿ ಬಂದೆ.. ನನ್ನಲ್ಲಿ ನಿನ್ನಾಸೆ ತಂದೆ.. 
ಹಗಲಿಲ್ಲಾ ಇರುಳಿಲ್ಲಾ ನಿನ್ನಲ್ಲೇ ಮನವೆಲ್ಲ ನೆನಪಿಂದ ನಾ ಸೋತು ಹೋದೆ"... ಎಂದು ಹೇಳಿ ಕಾಂತ ಕಣ್ಣು ಹೊಡೆದ..

ಕಾಂತೆ "ಉಸಿರು ಬಿಡುತ್ತಲೇ ಇದ್ದೆ.. ನಾ  ಹಿಡಿದಿಡು ಅಂತ ಅಂದೇ.. "

"ನಿನ್ನನ್ನು ಒಂದು ನಿಮಿಷ ಹಿಡಿದಿಡಲು ನನಗೆ ಮನಸಿಲ್ಲ.. ನೀನು ಗಾಳಿಯ ಹಾಗೆ ಬೀಸುತ್ತಲೇ ಇರಬೇಕು ಪ್ರಿಯೆ.. ನಿನಗೆ ಸಾಧ್ಯವೇ.. ಹಾಡು ನೋಡೋಣ"

"ಕೈ ಕೊಡವಿ.. ಹುಬ್ಬನ್ನು ಮೇಲೇರಿಸಿ.. ಕಾಂತ ನೀ ನನಗೆ ಕಳಿಸಿಕೊಟ್ಟ ಪಾಠ ಅಸಾಧ್ಯ ಯಾವುದು ಇಲ್ಲ ಎಂದು .. ನೋಡು ನನ್ನ ಪ್ರತಾಪ....

"ಸಂಗಾತಿ ನೀನಾಗಿ ಬಂದೆ.. ಸಂತೋಷ ಬಾಳಲ್ಲಿ ತಂದೆ.. " ಈಗ ಕೇಳು ಉಸಿರಿನ ತಾಕತ್
"ಹಗಲಲ್ಲಿ ಇರುಳಲ್ಲಿ ಮನವೆಲ್ಲ ನಿನ್ನಲ್ಲಿ ನೆನಪಿಂದ ನಾ ನೊಂದು ಹೋದೆ"

ಬಿಟ್ಟ ಕಣ್ಣು ಬಿಟ್ಟಂಗೆ ಕಾಂತ ನೋಡುತ್ತಲೇ ಇದ್ದಾ.. ಕಾಂತೆ (ಹಗಲಲ್ಲಿ ಇರುಳಲ್ಲಿ ಮನವೆಲ್ಲ ನಿನ್ನಲ್ಲಿ ನೆನಪಿಂದ ನಾ ನೊಂದು ಹೋದೆ) ಈ ಸಾಲನ್ನು ಹೇಳುವಾಗ ಒಂದು ಅರೆ ಘಳಿಗೆ ಕೂಡ ನೀ ಉಸಿರನ್ನು ಒಳಗೆ ತೆಗೆದುಕೊಳ್ಳಲಿಲ್ಲ.. ಸೂಪರ್ ಕಾಂತೆ.. "

"ಇನ್ನೆಂದು ಈ ಚಿಂತೆ ನಿನಗಿಲ್ಲವೇ.. ನಾನು ನೀನು ಒಂದಾದ ಮೇಲೆ ಹೀಗೇಕೆ ನೀ ದೂರ ಹೋಗುವೆ ಮುತ್ತಲ್ಲೆ ನಿನ್ನ ಸಿಂಗಾರಮಾಡಿ ಕಣ್ ತುಂಬಾ ನಾ ನೋಡುವೆ"

"ಕಾಂತೆ ಮೊದಲ ಪಲ್ಲವಿ ನಾ ಹಾಡಿದೆ ಅದನ್ನು ನೋಡಿಕೊಂಡು ನೀ ಉಸಿರು ಬಿಗಿ ಹಿಡಿದು ಹಾಡಿದೆ.. ಈಗ ನೀನೆ ಎರಡನೇ ಪಲ್ಲವಿಯನ್ನು ನೀನೆ ಮೊದಲು ಹಾಡು ನೋಡೋಣ.. ಆಗುತ್ತಾ ನಿನಗೆ.. ನೀನು ಹಾಡಿದ್ದನ್ನು ಕೇಳಿ ನಾ ಪ್ರಯತ್ನ ಪಡುವೆ.. "

"ಓಕೆ.. ನಾ ಸಿದ್ಧ"     "ಲತೆಯಲ್ಲಿ ಹೂವಾಗಿ ನಾನು ಮರಿ ದುಂಭಿಯಂತಾಗಿ ನೀನು.. 
ಹೂವಲ್ಲಿ ಹೊರಳಾಡಿ ಜೇನಾಟ ನಾವಾಡಿ ಆನಂದ ಹೊಂದೋಣವೇನು" 

ಸುಸ್ತಾಗಿ ಬಿಟ್ಟಾ.. "ಯಪ್ಪಾ ನೀನು ಹಾಡುಗಾರಿಕೆಯಲ್ಲಿ ರಾಕ್ಷಸಿ.. ನಿನಗೆ ಎಂಟು ಶ್ವಾಸಕೋಶಗಳು ಇವೆ ಅನ್ನಿಸುತ್ತೆ.. ಇರಲಿ ನಾನು ಪ್ರಯತ್ನ ಪಡುವೆ.. "

"ಬಾನಾಡಿ ನಾವಾಗಿ ಹಾರಿ.. ಬಾನಲ್ಲಿ ಒಂದಾಗಿ ಸೇರಿ.. ಹೊಸ ಆಟ ಆಡೋಣ ಹೊಸ ನೋಟ ನೋಡೋಣ ಮುಗಿಲಿಂದ ಜಾರೋಣವೇನು.. " ನಾ ಸೋತೆ.. ನಿನ್ನ ಹಾಗೆ ನಾ ಹಾಡಲು ಸಾಧ್ಯವೇ ಇಲ್ಲ..

ಕಾಂತ ನಾವಿಬ್ಬರು ಒಂದಾದ ಮೇಲೆ ಸೋಲು ಗೆಲುವಿನ ಮಾತೆಲ್ಲಿ ಇದೆ.. ಇರು ಈ ಹಾಡನ್ನು ಪೂರ್ತಿ ಮಾಡೋಣ
"ಇನ್ನೆಂದು ನೆರಳಾಗಿ ನಾ ಬಾಳುವೆ.. ನಾನು ನೀನು ಒಂದಾದ ಮೇಲೆ ಹೀಗೇಕೆ ನನ್ನನ್ನೇ ನೋಡುವೆ.. "

ಇಬ್ಬರೂ "ಕಣ್ಣಲ್ಲೂ ನೀನೆ ಮನದಲ್ಲೂ ನೀನೆ ಎಲ್ಲೆಲ್ಲೂ ನೀ ಕಾಣುವೆ"

ಇಬ್ಬರ ಕಣ್ಣಲ್ಲೂ ಆನಂದ ಭಾಷ್ಪ ಜೋಗದ ಧಾರೆಯಾಗಿತ್ತು.. "ಹೌದು ಕಷ್ಟ ಸುಖ ದುಖಃ ಇವೆಲ್ಲವೂ ನಮ್ಮನ್ನು ಬಂಧಿಸಿಡುವ ದಾರಗಳು.. ಇವುಗಳ ಜೊತೆಯಲ್ಲಿ ಬಾಂಧ್ಯವದಲ್ಲಿ ನಾ ನಾಕ ಕಾಣಬೇಕು.. ಎನ್ನುವ ನಿನ್ನ ಮಾತು ನನಗೀಗ ಅರ್ಥವಾಗುತ್ತಿದೆ.. ಕಾಂತ.. ನೀ ನನ್ನ ಬಾಳಿನ ಬೆಳಕು.. ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರೆ ಹಸಿರು... ಕಣೋ ಕಾಂತ.. "

"ಕಾಂತೆ.. ಜೀವನದ ಹೂ ಹಾಸಿನ ಮೇಲೆ.. ಕಣ್ಣಿಗೆ ಕಾಣದ ಚಿಕ್ಕ ಚೊಕ್ಕ ಮುಳ್ಳುಗಳು ಇರುತ್ತವೆ.. ಹಾಗೆಯೇ ಕಣ್ಣಿಗೆ ಕಾಣದ ಆದರೆ ನಾಸಿಕಕ್ಕೆ ಮುದ ನೀಡುವ ಸುವಾಸನೆಯು ಇರುತ್ತದೆ.. ಮುಳ್ಳಿಗೆ ಹೆದರಿದರೆ ಸುವಾಸನೆ ಸಿಗೋಲ್ಲ.. ಸುವಾಸನೆಯಲ್ಲಿ ಮುಳ್ಳಿನ ನೋವು ಮಾಯಾ.. ಅಲ್ಲವೇ.. "

ಹೌದು ಹೌದು.. ಐ ಲವ್ ಯು ಕಾಂತ.. ಬಿಗಿದಪ್ಪಿ.. ಗಲ್ಲಕ್ಕೆ ಒಂದು ಪಪ್ಪಿ ಕೊಟ್ಟಳು.. ಮೊಬೈಲ್ ನಲ್ಲಿ "ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ಗಲ್ಲಕ್ಕೆ ಕೆನ್ನೆಗೆ ಮತ್ತೊಂದು ಕಾಂತೆ ಕೊಡುವೆಯ"

ನಾಚಿ ನೀರಾದ ಕಾಂತೆ ಆ ಹಾಡಲ್ಲಿ ಹೇಳಿದಂತೆ ............

(ಈ ಹಾಡು ಸುಮಾರು ಇಪ್ಪತ್ತೈದು ವರ್ಷಗಳಿಂದ ನನ್ನನ್ನು ಕಾಡಿತ್ತು.. ಏನೋ ಒಂದು ವಿಚಿತ್ರ ಶಕ್ತಿ ಇದೆ.. ಈ ಹಾಡಲ್ಲಿ ಎಂದು.. 
ಒಂದು ದಿನ.. ವಾಕ್ ಮ್ಯಾನ್ ನಲ್ಲಿ ಕಿವಿ ಕಿತ್ತು ಹೋಗುವ ಹಾಗೆ ಈ ಹಾಡನ್ನು ಕೇಳಿದೆ.. ನನಗೆ ಅನಿಸಿದ ಮಾತು 

ಶ್ರೀ ಎಸ್ ಪಿ ಬಾಲೂ ಹಾಗೂ ಶ್ರೀಮತಿ ಎಸ್ ಜಾನಕಿಯಮ್ಮ ಹಾಡಿದ ಶ್ರೇಷ್ಠ ಹಾಡು ಇದು.. ಎಸ್ಪಿ ಸ್ವಲ್ಪ ಉಸಿರು ಬಿಟ್ಟು ಬಿಟ್ಟು ಪಲ್ಲವಿಯನ್ನು ಹಾಡಿದರೆ.. ಜಾನಕಿಯಮ್ಮ ಒಂದೇ ಓಘದಲ್ಲಿ ಹೇಳುತ್ತಾರೆ.. ಅದರಲ್ಲೂ "ನೆನಪಿಂದ" ಎನ್ನುವ ಪದ ಹಾಡುವಾಗ ಅವರ ಧ್ವನಿ.. ಆಹಾ ಅದನ್ನು ಕೇಳಿ ನೋಡಿ.. ಈ ಹಾಡನ್ನು ನೀವು ಅಪ್ಪಿಕೊಳ್ಳುತ್ತೀರ.. 

ಈ ಹಾಡಿಗೆ ಅಭಿನಯಿಸಿದ ಅನಂತ್ ನಾಗ್ ಲಕ್ಷಿ.. ಇವರಿಬ್ಬರ ನಡುವೆ ನಾಚಿಕೆ, ತುಸು ಪ್ರೀತಿ, ತುಸು ರೋಮಾಂಚನ, ಕಣ್ಣಲ್ಲೇ ಹಾಡುವ ಪರಿ, ಒಬ್ಬರನ್ನು ಒಬ್ಬರು ಮೀರಿಸುವಂತೆ ಅಭಿನಯ.. ನಿಜವಾದ ಸತಿ ಪತಿಯರು ಅಥವಾ ಪ್ರೇಮಿಗಳು ಎನ್ನುವ ರೀತಿಯಲ್ಲಿ ಕಣ್ಣಲ್ಲೇ ಜಗಳ.. ಆಹಾ.. ಸೂಪರ್ 

ಇಂತಹ ಪ್ರಣಯ ಗೀತೆಯನ್ನು ಬರೆದ ಶ್ರೀ ಚಿ ಉದಯಶಂಕರ್.. ಅದಕ್ಕೆ ಬಂಗಾರದ ಸಂಗೀತವನ್ನು ಕೊಟ್ಟ ಶ್ರೀ ರಾಜನ್ ನಾಗೇಂದ್ರ ಜೋಡಿ.... ಹತ್ತಕ್ಕೆ ಹತ್ತು ಅಂಕಗಳು.. 

ಬಹುದಿನಗಳ ಕನಸು.. ಈ ಹಾಡಿನ ಬಗ್ಗೆ ಬರೆಯಬೇಕು ಎಂದು.. ಈ ಹಾಡನ್ನು ಕೇಳಿದಾಗೆಲ್ಲ ನೋಡಿದಾಗೆಲ್ಲ ನನಗೆ ನೆನಪಿಗೆ ಬರುವುದು ಪ್ರಕಾಶಣ್ಣ ಮತ್ತು ಆಶಾ ಅತ್ತಿಗೆ.. ಈ ಹಾಡಿನಲ್ಲಿ ಬರುವ ಪ್ರತಿ ಸಾಲುಗಳು, ಪ್ರತಿ ಅಭಿನಯ ನನಗೆ ಇವರಿಬ್ಬರನ್ನು ನೆನಪಿಗೆ ತರುತ್ತದೆ.. ಅವರ ವಿವಾಹ ದಿನಕ್ಕೆ ಬರೆಯಬೇಕು ಎಂದು ಅಂದುಕೊಂಡಿದ್ದೆ.. ಸಮಯದ ಅಭಾವ ಆಗಿರಲಿಲ್ಲ.. ಆದರೇನಂತೆ.. ಪ್ರಕಾಶಣ್ಣ ಆಶಾ ಅತ್ತಿಗೆ ಯಾವ ನಾಯಕ ನಾಯಕಿಗೆ ಕಮ್ಮಿ.. ನಮ್ಮ ಬ್ಲಾಗ್ ಲೋಕದ ಸೂಪರ್ ನಾಯಕ ನಾಯಕಿ.... ಧನ್ಯೋಸ್ಮಿ ಬ್ಲಾಗ್ ಲೋಕ.. )