Thursday, July 23, 2026

ಸಂಭ್ರಮದ ...ವಸಂತಗಳು... ಆರಮ್ಮ

ಪಾಪು ರಿಷಬ್ ಮದುವೆಯ....ಸಮಯದಲ್ಲಿ ಇಬ್ಬರೂ ಹೇಳಿದ್ದು madness & comfort ಅಂತ.. ನನ್ನ ಮನಸ್ಸು ಚಕ್ ಅಂತ ಹಿಂದಕ್ಕೆ ಓಡಿತು.. ನನ್ನ ಬದುಕಿನಲ್ಲಿ madness ಬಂದ ಕ್ಷಣಕ್ಕೆ ಮನಸ್ಸು ಹಿಂದೆ ಓಡಿತು.. 

ಹೌದು ಈ madness ಜನನಿ ನನ್ನ ಮನದನ್ನೆಯಾಗಿದ್ದಳು.. ಇವಳ ಜೊತೆಯಲ್ಲಿ ನಾನು ಮಾಡಲು ಹಿಂಜರಿಯುವ ಹುಚ್ಚುತನವನ್ನೆಲ್ಲ ಮಾಡಲು ಸ್ಪೂರ್ತಿಯಾದವಳು ಇವಳು.. 

ಸೆಲ್ಫಿ ಹುಚ್ಚಿರಲಿಲ್ಲ .. ಹತ್ತಿತು 

ಬೈಕಿನಲ್ಲಿ ದೂರ ದೂರ ಪಯಣ ಮಾಡುವ ಹುಚ್ಚಿತ್ತು.. ಅದು ಹೆಚ್ಚಾಗಿದ್ದದ್ದು ಇವಳು ಬಂದ ಮೇಲೆ 

ಫೋಟೋ ತೆಗೆಯುವ ಹುಚ್ಚಿತ್ತು.. ಆದರೆ ಭಾವಚಿತ್ರ ತೆಗೆಯುವ ಹುಚ್ಚು ಇರಲಿಲ್ಲ.. ಅದು ಹೆಚ್ಚಿದ್ದು ಇವಳು ಬಂದ ಮೇಲೆ 

ಸಿನಿಮಾಗಳನ್ನು ನೋಡುವ ಹುಚ್ಚು ತುಸು ಹೆಚ್ಚೇ ನನಗೆ.. ಆದರೆ ಮರಾಠಿ ಚಿತ್ರಗಳನ್ನು ತೋರಿಸುವ ಸಾಹಸ ಮಾಡಿದಳು.. 

ಕಾರಿನಲ್ಲಿ ಇಂಪಾದ ಸಂಗೀತ ಕೇಳುತ್ತಿದ್ದೆ.. ಇವಳು ಬಂದ ಮೇಲೆ ಡಮಾಲ್ ಡಿಮಿಲ್ ಹಾಡುಗಳು ಬಂದವು.. 

ಸಾಮಾನ್ಯವಾದ ಬಟ್ಟೆ ಅಂದ್ರೆ ಟೀ ಶರ್ಟ್ ಜೀನ್ಸ್ ಪ್ಯಾಂಟಿನಾಚೆ ನಾ ಹೋಗಿರಲಿಲ್ಲ.. ಒಪ್ಪುವಂತಹ ಆಕರ್ಷಕ ಉಡುಪುಗಳನ್ನು ಹಾಕಿಕೊಳ್ಳುವಂತೆ ಮಾಡಿದ್ದು ಇವಳೇ 

ಸುಮ್ಮನೆ ಹಾಗೆ ಹೀಗೆ ಇದ್ದವನನ್ನು ಹೀಗೋ ಇರಬಹುದು ಅಂತ ತೋರಿಸಿದವಳು ಇವಳು.. 

ಎಷ್ಟೋ ವಿಷಯಗಳಲ್ಲಿ ನನ್ನದೇ ಶೈಲಿ, ನನ್ನದೇ ಸ್ಟೈಲ್ ಕೂಡಿದ್ದ ನನ್ನ ಮನೋಭಾವವನ್ನು ಬದಲಾಗಿರುವ ದುನಿಯಾಗೆ ಹೊಂದಿಕೊಳ್ಳುವ ಹಾಗೆ ಮಾಡಿದ್ದು ಇವಳು.. 

ಇದೇನಪ್ಪ ವಿಷ್ಣುಸಹಸ್ರನಾಮದಂತೆ ಹರಿಕಥೆ ಅಂದುಕೊಂಡ್ರಾ ಇಲ್ಲ.. ಇಲ್ಲ.. 

madness ಒಂದು ಮಟ್ಟಿಗೆ ಇರಬೇಕು.. ಇಲ್ಲದೆ ಹೋದರೆ ಬದುಕು ನೀರಸ ಅನ್ನಿಸುತ್ತೆ.. ಇದಕ್ಕೆ ಉತ್ತಮ ಉದಾಹರಣೆ ಅಂದರೆ.. 

ನನಗೆ ಈಜು ಬರೋಲ್ಲ.. ನೀರು ಅಂದರೆ ದಡದಲ್ಲಿಯೇ ಆಟವಾಡುವ ಎಚ್ಚರಿಕೆಯ ಮನುಷ್ಯ ನಾನು.. ನನ್ನ  ಗೆಳೆಯರ ಜೊತೆ ದುಬಾರೆಗೆ ಹೋಗಿದ್ದೆವು.. ಮಾಮೂಲಿ ಅಲ್ಲಿ ರಾಫ್ಟಿಂಗ್ ಇತ್ತು.. ಯಥಾಪ್ರಕಾರ ಲೈಫ್ ಜಾಕೆಟ್.. ಹುಟ್ಟು ಹೇಗೆ ಹಾಕಬೇಕು.. ಹೇಗೆ ಆ ಕೋಲನ್ನು ಹಿಡಿದುಕೊಳ್ಳಬೇಕು.. ನೀರು ಹೆಚ್ಚಾದರೆ ಏನು ಮಾಡಬೇಕು ಹಾಗೆ ಹೀಗೆ ಅಂತ ಹತ್ತಾರು ಸೂಚನೆಗಳು ಕೇಳಿದರೂ.. ನೀರಿನ ಮೇಲೆ ತೇಲುವ ಆ ಸಂತಸಮಯ ಕ್ಷಣಗಳಲ್ಲಿ ಆವ ಹೇಳಿದ್ದು ಎಲ್ಲವೂ ನೀರಿನ ಮೇಲಿನ ಗುಳ್ಳೆಗಳಾಗಿದ್ದವು.. 

ರಾಫ್ಟಿಂಗ್ ಕೊಂಚ ನದಿಯ ಮಧ್ಯಕ್ಕೆ ಹೋಯಿತು.. ಬೋಟಿನವ.. ಸರ್ ಜಿಗಿಯಿರಿ ನೀರಿಗೆ.. ಜಾಕೆಟ್ ಇದೆ.. ಮುಳುಗೋಲ್ಲ.. ನಾ ಇದ್ದೀನಿ ಎನ್ನುವ ಅವನ ಮಾತು ಯಾರಿಗೂ ಕೇಳಿಸುತ್ತಾ ಇರಲಿಲ್ಲ.. ಎಲ್ಲರೂ ಕ್ಲೋಸ್ ಅಪ್ ಹಲ್ಲು ಬಿಟ್ಟೆವು ಆದರೆ ಯಾರೂ ಇಳಿಯಲಿಲ್ಲ.. ನನ್ನ ಮಡದಿ ನನ್ನ ಮೊಗ ನೋಡಿದಳು .. ಇವಳ ನೀರಿನ ಹುಚ್ಚು ಗೊತ್ತಿದ್ದ ನಾನು ಅವಳ ಮೊಗ ನೋಡಿದರೆ ನನ್ನ ಫಿಕ್ಸ್ ಮಾಡ್ತಾಳೆ ಅಂತ.. ಆಗಸ, ನೀರು, ಗಿಡ, ಮರ ಅಂತ ನೋಡುತ್ತಿದ್ದೆ.. 

ಬೋಟಿನವನ ಒತ್ತಡ ಜಾಸ್ತಿ ಆಯ್ತು..  ಎಲ್ಲರೂ ಒಬ್ಬರ ಮುಖ ಒಬ್ಬರು ನೋಡ್ತಾ ಇದ್ರೂ.. 

ಏನೂ ಹೆದರಬೇಡಿ.. ನಾನಿದ್ದೀನಿ.. ಲೈಫ್ ಜಾಕೆಟ್ ಇದೆ.. ಅಂತ ಹುರಿದುಂಬಿಸುತ್ತಲೇ ಇದ್ದ.. 

ಅದೇನು ಜೋಶ್ ಬಂತೋ.. ಬೋಟಿನವ ಹೇಳಿದಂತೆ. ಹಗ್ಗ ಹಿಡಿದುಕೊಂಡು ನೀರಿಗೆ ಧುಮುಕಿದೆ..ಆವ ಬಿಡಿ ಸರ್ ಹಗ್ಗ ಬಿಡಿ ಸರ್ ಅಂತ ಹೇಳಿ.. ಹರಿಗೋಲಿನಿಂದ ನನ್ನನ್ನು ತಳ್ಳಿದ.. ನೀರಿನಲ್ಲಿ ತೇಲಾಡಲು ಶುರು ಮಾಡಿದೆ.. ಅದ್ಭುತ ಅನುಭವ.. ಈಜು ಬರುವ.. ನೀರಿಗೆ ಹೆದರದ ನನ್ನ ಮಡದಿ.. ಯೋಚಿಸುವ ಮುಂಚೆಯೇ ನಾ ನೀರಿಗೆ ಧುಮುಕಿದ್ದೆ.. ಸೂಪರ್ ಸೂಪರ್ ಆಗಿತ್ತು.. ನಂತರ ಅವಳು ನೀರಿಗೆ ಬಿದ್ದಳು.. ಇನ್ನೂ ಮಜಾ ಬಂತು..ನಂತರ ನನ್ನ ಮಗಳು ಶೀತಲ್.. ಹೀಗೆ ಬೋಟಿನಲ್ಲಿರುವ ಇತರರು ಬಿದ್ದರು.. ಆದರೆ ಇದಕ್ಕೆ ಸ್ಫೂರ್ತಿ ನೀಡಿದ್ದು  ಸೀಮಾಳ ಅದ್ಭುತ madness ಅಂದ್ರೆ ತಪ್ಪಿಲ್ಲ.. 

ಮಡಿಕೇರಿಯಲ್ಲಿ ಜಿಪ್ ಲೈನ್ ಇತ್ತು.. ಯಥಾ ಪ್ರಕಾರ.. ನಾ ಇಲ್ಲ ಅವನಿಲ್ಲ ಅಂತ ಎಲ್ಲರೂ ಕೈ ಎತ್ತುತ್ತಿದ್ದರು.. ನಾ ಮತ್ತೆ ಮೊದಲು ನಿಂತೇ.. ಜಾಕೆಟ್ ಹಾಕಿಕೊಂಡು.. ಜಿಪ್ ಲೈನ್ ಸುಮಾರು ಆರು-ಏಳು ನೂರು ಮೀಟರುಗಳು.. ಗಾಳಿಯಲ್ಲಿ ತೇಲಿದ ಅನುಭವ.. ಮತ್ತೆ ಅವಳಿಗೆ ಹೇಳಿದರೆ.. ನಾ ಒಳ್ಳೆ ಎಂದಳು.. 

ಒಮ್ಮೆ ಹಾಸನಕ್ಕೆ ಹೋಗಬೇಕಿತ್ತು.. ಲಗೇಜು ತೆಗೆದುಕೊಂಡು ಬಂದು ಕಾರಿನತ್ತ ಬಂದರೆ.. ಎರಡು ಚಕ್ರ ಪಂಚರ್ ಆಗಿತ್ತು.. ಹೋಗಲೇ ಬೇಕು ಎನ್ನುವ ನಿರ್ಧಾರವಾಗಿತ್ತು.. ಆಯ್ಕೆ ಇದ್ದದ್ದು ಎರಡು.. ಒಂದು ಬಸ್ಸಿನಲ್ಲಿ ಹೋಗೋದು.. ಅದು ನಮಗಿಬ್ಬರಿಗೂ ಇಷ್ಟವಿರಲಿಲ್ಲ.. ಎರಡನೇ ಆಯ್ಕೆಯೇ ಮೊದಲನೇ ಆಯ್ಕೆ ಆಗಿತ್ತು.. 

ಹಾಸನದ ದಾರಿಯಲ್ಲಿ ಬೈಕಿನಲ್ಲಿ ಸಾಗಿತ್ತು ನಮ್ಮ ಪಯಣ.. ಕುಣಿಗಲ್ ದಾಟಿ ಸ್ವಲ್ಪ ದೂರ ಸಾಗಿದ್ದೆವು.. ಅನೇಕಾನೇಕ ಬೈಕು ಕಾರುಗಳು ನಿಂತಿದ್ದವು..ಅಯ್ಯೋ ಏನಾಯಿತು ಎಂದು ಕೊಂಡರೆ.. ಮಳೆಗಾಲ ಆಗಿದ್ದರಿಂದ.. ಕೆರೆ ಕೋಡಿ ಬಿದ್ದು ಹೆಚ್ಚಿನ ನೀರು ಕಟ್ಟೆಯಿಂದ ಧುಮುಕುತಿತ್ತು.. ಬೈಕ್ ನಿಲ್ಲಿಸಿ ಸೂಪರ್ ಆಗಿದೆ ಸೀಮ್ಸ್ ಎನ್ನುವಷ್ಟರಲ್ಲಿ..ಇವಳು ಆಗಲೇ ಬೈಕಿನಿಂದ ಇಳಿದು.. ಆ ಕಟ್ಟೆಯ ಬಳಿ ಹೋಗಿ ಆಗಲೇ ಬಟ್ಟೆಯನ್ನು ನೆನೆಸಿಕೊಂಡು ಆಗಿತ್ತು.. ವಿಧಿಯಿಲ್ಲದೇ ನಾನೂ ನೀರಿಗೆ ಮೈಯೊಡ್ಡಿದೆ..

ಹಾಸನಕ್ಕೆ ಹೋಗುವ ಹೊತ್ತಿಗೆ ಮೈಮೇಲಿನ ಬಟ್ಟೆ ಒಣಗಿತ್ತು.. ನಮ್ಮ ಸಾಹಸ ಕಂಡು.. ಊರಿನವರೆಲ್ಲ ಹೇಳಿದ್ದು. .. ಭಲೆಜೋಡಿ.. ಅಂತ.. 

ನ್ಯಾಷನಲ್ ಕಾಲೇಜು ಮೈದಾನದಲ್ಲಿ ಗಣಪತಿ ಉತ್ಸವ ಪ್ರತಿ ವರ್ಷ ನೆಡೆಯೋದು ಎಲ್ಲರಿಗೂ ಗೊತ್ತು.. ಒಂದು ವರ್ಷ ಆ ಮೈದಾನದಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯ ಘೋಷಾಲ್ ಸಂಗೀತ ಸಂಜೆ ಇತ್ತು.. ಮೆಟ್ರೋನಲ್ಲಿ ಹೋದೆವು.. ಹಾಡು ಶುರುವಾಗಿತ್ತು.. ಜೊತೆಯಲ್ಲಿ ಮಳೆಯೂ ಕೂಡ.. ನೂರಾರು ಮಂದಿ ಆಗಲೇ ಜಮಾಯಿಸಿದ್ದರು.. ಶಾಮಿಯಾನದ ಒಳಗೆ ಮಳೆಯಿಂದ ರಕ್ಷಣೆ ಪಡೆದು ನೋಡುತ್ತಿದ್ದರು.. ಆದರೆ ತಡವಾಗಿ ಹೋಗಿದ್ದ ನಮಗೆ ಪೂರ್ಣ ಒಳಗೆ ಹೋಗಲಾಗಿರಲಿಲ್ಲ.. ಅಲ್ಲಿಯೇ ಹಾಕಿದ್ದ ದೊಡ್ಡ ಪರದೆಯಲ್ಲಿ ನೋಡುತ್ತಿದ್ದೆವು. ಮೆಲ್ಲನೆ ಶುರುವಾಗಿದ್ದ ಮಳೆ.. ಜೋರಾಗಿ ಚಚ್ಚತೊಡಗಿತು.. ಅತ್ತ ಮಳೆಯೂ ಬಿಡುತ್ತಿಲ್ಲ.. ಇತ್ತ ಶ್ರೇಯ ಘೋಷಾಲ್ ಕೂಡ ಒಂದಾದ ಮೇಲೆ ಒಂದರಂತೆ ಅದ್ಭುತವಾಗಿ ಹಾಡುತ್ತಿದ್ದರು.. ಅಲ್ಲಿದ್ದವರೆಲ್ಲರ ಕಾಲಿಗೆ ಗೆಜ್ಜೆ ಕಟ್ಟಿದಂತೆ.. ಎಲ್ಲರೂ ಕುಣಿಯುತ್ತಿದ್ದರು.. ಇಂತಹ ಸನ್ನಿವೇಶದಲ್ಲಿ.. ನೀರು, ಸಂಗೀತ ಮತ್ತು ನೃತ್ಯ ಎಂದರೆ ಅಧಿಕವಾಗಿ ಅಮಲೇರುವ ಸೀಮಾ ಬಿಡುತ್ತಾಳೆಯೇ.. ಮಳೆಯಲ್ಲಿ ನೆಂದು ನೃತ್ಯ ಮಾಡತೊಡಗಿದಳು. ಇವಳನ್ನು ನೋಡಿ ಇನ್ನಷ್ಟು ತರುಣಿಯರು ಮಳೆಯಲ್ಲಿ ನೆನೆಯುತ್ತ ಕುಣಿಯಲು ಶುರು ಮಾಡಿದಳು.. ಸುಮಾರು ಒಂದು ಘಂಟೆಗೂ ಹೆಚ್ಚಿನ ವೇಳೆ ಮಳೆಯಲ್ಲಿ ನೆಂದು ಕುಣಿದಾಡಿದ್ದಳು.. 

ಮುಂದಿನ ಸವಾಲು ಇದ್ದದ್ದು ಮೆಟ್ರೋನಲ್ಲಿ ಹೋಗೋದು.. ಅಲ್ಲಿ ಎಲ್ಲರೂ ಮಳೆ ಮತ್ತು ಸಂಗೀತದಲ್ಲಿ ಅಭಿಷೇಕವಾಗಿದ್ದರಿಂದ.. ಮೆಟ್ರೋ ಸಿಬ್ಬಂಧಿ ಎಲ್ಲರನ್ನೂ ನಗು ನಗುತ್ತಾ ಒಳಗೆ ಕಳಿಸಿದರು.. 

ನಾ ಒಳಗೆ ಒಳಗೆ ನಕ್ಕು ನಕ್ಕು ನೀರಾಗಿದ್ದೆ.. ಈ ರೀತಿಯ ಅನುಭವ ಬದುಕಲ್ಲಿ ಅದೇ ಮೊದಲು.. ಅದರ ಕಾರಣಕರ್ತೆ ಈ madness ರಾಣಿ ನನ್ನ ಸೀಮಾ.. 

ಹೌದು ಈ ರೀತಿಯ ಘಟನೆಗಳನ್ನು ಬರೆಯುತ್ತ ಹೋದಷ್ಟು ಕಡಲಿನ ಅಲೆಗಳಂತೆ ಬರುತ್ತಲೇ ಇರುತ್ತದೆ.. 

ಇಂದು ಈ madness ನನ್ನ ಬದುಕಿಗೆ ಬಂದು ಆರು ವರ್ಷಗಳಾದವು.. ಇಷ್ಟು ಬರೆದ ಮೇಲೆ ಅವಳು ಹೇಳೋದು.. ಶ್ರೀ ನೀವು ಜೊತೆಯಿದ್ದರೆ ಸಾಕು ನನಗೆ ಆರಾಮು.. ನನಗೆ comfort ಎನ್ನುತ್ತಾಳೆ.. 

ಈಗ ಗೊತ್ತಾಯಿತೇ.. madness ಕಂಫರ್ಟ್ ಉಗಮಸ್ಥಾನ.. 

ಸಂಭ್ರಮದ ಆರು ವಸಂತಗಳು.. 
ಬರುತ್ತಲೇ ಇರಲಿ.. 
ಶುಭ ತರುತ್ತಲೇ ಇರಲಿ.. 
ಶುಭಾಶಯಗಳು ಸೀಮು!


 

No comments:

Post a Comment