Tuesday, July 31, 2012

ಓಹ್ ಸಾವೇ ನೀನೆಷ್ಟು ಅನಪೇಕ್ಷಿತ ಅತಿಥಿ.


ಓಹ್ ಸಾವೇ ನೀನೆಷ್ಟು ಅನಪೇಕ್ಷಿತ ಅತಿಥಿ..

ಸಂಭ್ರಮ, ಸಂತಸ, ಸುಖ ಎಲಾವನ್ನು ಹೊತ್ತು ತರುವ ತಿರುವಿನಲ್ಲಿ ನೀನು ಬಂದು ನಿಂತಾಗ...ಸಿಗುವ ನೋವು, ತುಮುಲಗಳು ಕೊಡುವ ಆಘಾತ...ಪ್ರಪಾತಕಿಂತಲೂ ಆಳ...

ಕೇವಲ ಎರಡು ಘಂಟೆಗಳು ಒಂದು ಸುಮಧುರ ಹಿರಿಯ ಚೇತನದ ಜೀವನದಲ್ಲಿನ ಎರಡು ಪುಟಗಳು ಸಿಕ್ಕವು..

ನನ್ನ ತಂಗಿ ಅಂದ್ರೆ ತಾಯಿಯ ತಂಗಿಯ ಮಗಳು ನಿಶ್ಚಿತಾರ್ಥ ಆಗಸ್ಟ್ ೧೨ ನೆ ತಾರೀಕು ಅಂತ ಕರೆ ಬಂದಾಗ ಬಹಳ ಖುಷಿ ಆಯಿತು..ಸರಿ ನನ್ನ ತಾಯಿಯ ತವರೂರಿನ ದರುಶನ ಅಂತ ಮನಸು ಹಾರಾಡಿತು..

ಅದರ ಬೆನ್ನಲ್ಲೇ ಬಂದಿತು ಇನ್ನೊಂದು ಆಘಾತಕಾರಿ ಸುದ್ದಿ..ಆ ಹುಡುಗಿಯ ಅಪ್ಪ ಅರ್ಥಾತ್ ನನ್ನ ಚಿಕ್ಕಪ್ಪ ಆಸ್ಪತ್ರೆಯಲ್ಲಿ ವಿಧಿವಶರಾದ ಸುದ್ದಿ ಬಂತು..

ಸರಳ ಸಜ್ಜನಿಕೆಯ ಸಂಕೋಚ ಸ್ವಭಾವದ ನನ್ನ ಚಿಕ್ಕಪ್ಪನ ನಂಟು ನಮಗೆ ಚಿರಪರಿಚಿತ...

ಅವರ ಮಾತುಗಳು, ಹಾಸ್ಯ ಸಂಭಾಷಣೆ ಸೂಜಿ ಮೊನಚಂತೆ ಕಂಡರೂ ಕೂಡ ಅಪಾರ ಅಭಿಮಾನದ ತೀವ್ರತೆ ಅವರಲ್ಲಿ ಕಾಣುತಿತ್ತು..ಪ್ರತಿಸಾರಿ ಸಿಕ್ಕಾಗೂ ಕೂಡ "ಏನಯ್ಯ ನಮ್ಮನೆಗೆ ಬರೋಲ್ವಾ ನೀನು..ಈ ಸಾರಿ ಬರಲೇಬೇಕು"..ಅಂತ ಪ್ರತಿಸಾರಿಯೂ ಬಲವಂತವಾಗಿ ಕರೆಯುತಿದ್ದರು..ಸಮಯದ ಅಭಾವ..ಆಗಿರಲಿಲ್ಲ..

ಕಳೆದ ಅಕ್ಟೋಬರ್ ನಲ್ಲಿ ಬಲವಂತಾಗಿ ನಾನೇ ಸಮಯ ಮಾಡಿಕೊಂಡು ಅವರ ಜೊತೆ ಕೆಲ ಘಂಟೆಗಳು ಕಳೆದ ಸಂತೃಪ್ತಿ ನನಗಿದೆ...

ಪ್ರೀತಿಯ ಚಿಕ್ಕಪ್ಪ..ನನ್ನ ತಾಯಿಯ ತವರನ್ನು ಬೆಳಗಿದವರು...

ನಮ್ಮೆಲ್ಲರ ಕಡೆಯಿಂದ ಒಂದು ನುಡಿ ನಮನ ನಿಮಗೆ...

Monday, July 30, 2012

ಬಾಳೆ ಎಲೆ ಊಟ


ಶಾಲೆಯಲಿದ್ದಾಗ ಹೇಳಿಕೊಟ್ಟ ಹಾಡಿನ ಊಟದ ಪಾಠ...
  
ಒಂದು ಎರಡು.... ಬಾಳೆಲೆ ಹರಡು
ಮೂರು ನಾಕು.... ಅನ್ನ ಹಾಕು 
ಐದು ಆರು.... ಬೇಳೆ ಸಾರು
ಏಳು ಎಂಟು.... ಪಲ್ಯಕೆ ದಂಟು
ಒಂಭತ್ತು  ಹತ್ತು... ಎಲೆ ಮುದುರೆತ್ತು
ಒಂದರಿಂದ ಹತ್ತು.... ಹೀಗಿತ್ತು..
ಊಟದ ಆಟವು ....ಮುಗಿದಿತ್ತು..

ಎಷ್ಟು ಸೊಗಸಾಗಿ ಆಟ, ಪಾಠ, ಊಟ ಕಲೆಸಿದ್ದರು ಒಂದು ಚಿಕ್ಕ ಹಾಡಿನ ಕವಿತೆಯಲ್ಲಿ..

ಬಾಳೆ ಎಲೆಯಲ್ಲಿ ಊಟ ಮಾಡುವಾಗೆಲ್ಲ..ಬಗೆ ಬಗೆಯ ತಿನಿಸುಗಳನ್ನು ಬಡಿಸುವ ವಿಧಾನ, ಒಂದೊಂದಾಗಿ ಬಡಿಸಿ, ಕಡೆಗೆ ತುಪ್ಪ, ತೊವ್ವೆ  ಹಾಕುವ ತನಕ ಕಾದಿದ್ದು..ನಂತರ ಒಂದೊಂದಾಗಿ ತಿಂದು ಮುಗಿಸಿ, ಮುಂದಿನ ಅಡಿಗೆ ಪದಾರ್ಥಗಳಿಗೆ ಕಾಯುತ್ತ, ಎಲೆಯಲ್ಲಿ ಜಾಗ ಮಾಡಿಕೊಂಡು ಕಾಯುತ್ತಿದ್ದುದು ಎಷ್ಟು ಚಂದ..... 


ಎಲ್ಲ 31 ಬಗೆಯಾ ಅಡಿಗೆ ಬಡಿಸಿದ ಎಲೆಯಾ ಚಿತ್ರ ಸಿಗಲಿಲ್ಲ.ಹಾಗಾಗಿ ಸಿಕ್ಕ ಚಿತ್ರವನ್ನು ಮಾತ್ರ ಹಾಕಿದ್ದೀನಿ..ಬೇಸರ ಬೇಡ..ಹ. ಹ. ಹ 

ಅದನ್ನೆಲ್ಲ ಗಮನಿಸುತ್ತ..ಕಳೆದ ವರುಷಗಳು ಹತ್ತಿರ ಹತ್ತಿರ ನಾಲ್ಕು ದಶಕಗಳು ...

ಎಂತಹ ಸುಲಭ ಸಮೀಕರಣವನ್ನು ನಮ್ಮ ಹಿರಿಯರು, ಪೂರ್ವಜರು ನಮಗೆ ಬಿಟ್ಟು ಹೋಗಿದ್ದಾರೆ ಅಂತ ಆಲೋಚಿಸುತ್ತ ಇದ್ದಾಗ ಯಾಕೆ ಇದರ ಬಗ್ಗೆ ಒಂದಷ್ಟು ಪದಗಳನ್ನು ಬರೆಯಬಾರದು ಎನ್ನಿಸಿತು..ಇಗೋ.....ತಗೊಳ್ಳಿ..ನಿಮ್ಮ ಮುಂದೆ...

ಅನ್ನ, ಸಾರು ಬರುವಷ್ಟರಲ್ಲಿ ಹೊಟ್ಟೆಯೊಳಗೆ..ಇಲಿಗಳು ಕಬಡ್ಡಿ ಆಡುತಿದ್ದವು..ನಂತರ ತೊವ್ವೆ..ಕಡೆಗೆ ತುಪ್ಪ, ..ಸುತ್ತ ಮುತ್ತಲು ನೋಡಿ... ಉಪನಯನ ಆದವರು ಪರಿಷಿಂಚನ ಮಾಡಿ ತಲೆ ಆಡಿಸಿದಾಗ..ಓಹ್ ಬ್ಯಾಟಿಂಗ್ ಗೆ ಅನುಮತಿ ಸಿಕ್ಕಿತು ಅಂತ ಬಾರಿಸೋಕೆ ಶುರು ಮಾಡುತಿದ್ದೆವು... 

ಅನ್ನ ಸಾರು ನಮ್ಮ ಗುರಿ ಇದ್ದರು ಕೂಡ, ಅದರ ಸುತ್ತಲು ಪರಿವಾರ ದೇವತೆಗಳಂತೆ ಕುಳಿತಿದ್ದ ಅನೇಕ ಭಕ್ಷ್ಯಗಳು ಹೊಟ್ಟೆ ಸೇರಲು ತವಗುಡುತಿದ್ದದ್ದು ಗೊತ್ತಾಗುತ್ತಿತ್ತು..ನಂತರ ಬರುವ, ಸಿಹಿ, ಖಾರ, ಬೋಂಡ, ಬಜ್ಜಿ,ಹಪ್ಪಳ, ಎಲ್ಲವನ್ನು ತಿಂದು..ಕಡೆಗೆ ಮಜ್ಜಿಗೆ ಅನ್ನ ತಿನ್ನುವಷ್ಟರಲ್ಲಿ ಹೊಟ್ಟೆ ಕನ್ನಂಬಾಡಿ ಕಟ್ಟೆ ಆಗಿರುತಿತ್ತು..

ಎಷ್ಟು ನಿಯಮ ಬದ್ದವಾಗಿ ಎಲ್ಲ ತರಹದ ಪದಾರ್ಥಗಳನ್ನು ಬಡಿಸಿ, ತಿನ್ನಿಸಿ, ಹೊಟ್ಟೆಗೆ ಏನು ಅಡಚಣೆಯಾಗದಂತೆ ಕಡೆಗೆ ಮಜ್ಜಿಗೆ ಅನ್ನ..ಎಲ್ಲವನ್ನು ಎಷ್ಟು ಚಂದೊಬದ್ದವಾಗಿ ಜೋಡಿಸಿ ಬಡಿಸುತ್ತಾರೆ..ಇದನ್ನ ನೋಡಿದಾಗ ನನಗನಿಸಿದ್ದು...

ಅನ್ನ ಪರಮ ಭಕ್ಷ್ಯವಾದರು ಕೂಡ ಅದಕ್ಕೆ ಸಹಕಾರಿಯಾಗಿ ಬರುವ ಉಪ್ಪಿನಕಾಯಿ, ಕೋಸಂಬರಿ, ಪಲ್ಯ, ಚಿತ್ರಾನ್ನ, ಪಾಯಸ, ಬೋಂಡ, ಸಿಹಿ, ಹುಳಿ, ಮಜ್ಜಿಗೆ, ಗೊಜ್ಜು ಮುಂತಾದ ಪದಾರ್ಥಗಳು  ...ಅನ್ನವನ್ನು ಸರಿಯಾದ ಪ್ರಮಾಣದಲ್ಲಿ, ಮತ್ತು ಸರಿಯಾದ ಕ್ರಮದಲ್ಲಿ ಭುಂಜಿಸಲು ಅನುವು ಮಾಡಿಕೊಡುತ್ತದೆ..

ಹಾಗೆಯೇ ನಾನೊಬ್ಬನೇ ಪ್ರಪಂಚದಲ್ಲಿ ಈಜಲು ಆಗುವುದಿಲ್ಲ..ಅಪ್ಪ-ಅಮ್ಮಂದಿರಿಂದ ಹಿಡಿದು ಅನೇಕ ಗೆಳಯರು, ಗೆಳತಿಯರು, ಸಹೋದ್ಯೋಗಿಗಳು, ಬಂಧು-ಬಳಗ, ಎಷ್ಟೋ ಅನಾಮಿಕರು, ಅನಾಮಧೇಯರು ಬಾಳಿನಲ್ಲಿ ಬಂದು ಸಹಾಯ ಮಾಡುತ್ತಾರೆ..

ಮಾನವ ಸಂಘ ಜೀವಿ ಎನ್ನುವದಕ್ಕೆ ಉತ್ತಮ ಉದಾಹರಣೆ..ಬಾಳೆ ಎಲೆ ಊಟ...!!!!

Thursday, July 26, 2012

ಪುಸ್ತಕದ ಮನೆ ಪರಿಚಯ...ದೂರದರ್ಶನ ಚಂದನದಲ್ಲಿ ಬಿತ್ತರವಾಯಿತು.


ಇಂದು ಮುಂಜಾನೆ ಕಛೇರಿಗೆ ಹೋಗುವ ತರಾತುರಿಯಲ್ಲಿದ್ದೆ.....(೨೬.೦೭.೨೦೧೨ ಬೆಳಿಗ್ಗೆ ೭.೦೦ - ೭.೩೦)

ಅವಸರ ಅವಸರವಾಗಿ ಹೊರಡುವ ತಯಾರಿ ನಡೆದಿತ್ತು...

ಹಿಂದಿನ ರಾತ್ರಿ ಒಂದು ಸಮಾರಂಭಕ್ಕೆ ಹೋಗಿ ಬಂದಿದ್ದು ರಾತ್ರಿ ಹನ್ನೆರಡಾಗಿತ್ತು..ಹಾಗಾಗಿ ಬೆಳಿಗ್ಗೆ ಎದ್ದದ್ದು ತಡವಾಗಿ ಕಛೇರಿಯ
ವಾಹನ ತಪ್ಪಿಸಿಕೊಂಡಿದ್ದರಿಂದ..ಹೊರಡುವ ಆತುರ ಇನ್ನು ಹೆಚ್ಚಿತ್ತು..

ಅಷ್ಟರಲ್ಲಿ..."ಅಪ್ಪಾಆಆಆ...ಅಪ್ಪಾಆಆಆಆಆಆ" ಮಗಳು ಕೂಗಿದಳು (ಕಿರುಚಿದಳು ಅಂದ್ರು ಪರವಾಗಿಲ್ಲ)
"ಏನು ಪಾಪ?"..ಅಂತ ಸಿದ್ದವಾಗುತ್ತ ಆ ಎಳೇ ಸ್ವರಕ್ಕೆ ಪೈಪೋಟಿಯಾಗಿ  ಕರ್ಕಶವಾಗಿಯೇ ನಾನು ಕಿರುಚಿದೆ..ಹೊರಡುವ

ಆತುರ... ಸಮಯ ಕಳೆದಂತೆ.... ಬಂಗಾರದ ದರದಂತೆ ಏರುತಿತ್ತು...

"ಅಪ್ಪ..ನಾವು ಬಸ್ಸಿನಲ್ಲಿ ಪುಸ್ತಕ ನೋಡೋಕೆ ಹೋಗಿದ್ದೆವಲ್ಲ ಅದು ಬರ್ತಾ ಇದೆ..."

ನನಗೆ ಅರ್ಥ ಆಗ್ಲಿಲ್ಲ..ಯಾವುದೋ  ಅರ್ಥವಾಗದ ಭಾಷೆಯ ಚಿತ್ರಗೀತೆ ಕೇಳಿದಂತೆ ಭಾಸವಾಯಿತು..

"ಯಾವುದು ಪಾಪ...?"

ಅಷ್ಟರಲ್ಲಿ..ನನ್ನ ಮುದ್ದಿನ (?) ಮಡದಿ.."ರೀ..ಬಾಲು ಸರ್, ಪ್ರಕಾಶ ಹೆಗ್ಗಡೆ ಅವರ ಜೊತೆ ಹೋಗಿದ್ದೆವಲ್ಲ.....ಅಂಕೆ ಗೌಡರ ಬಗ್ಗೆ ಟಿ.ವಿ. ಲಿ ಬರ್ತಾ ಇದೆ..."

ಭರದಿಂದ ಟಿ.ವಿ. ಮುಂದೆ ನಿಂತೇ...
ದೂರದರ್ಶನ ಚಂದನ ವಾಹಿನಿಯಲ್ಲಿ ಶ್ರೀ.ಅಂಕೆ ಗೌಡರ ಸಂದರ್ಶನ  ಬಿತ್ತರ ಆಗ್ತಾ ಇತ್ತು...
ನನ್ನ ವ್ಯಾವಹಾರಿಕ ಪ್ರಪಂಚದಿಂದ ಹೊರಗೆ ಬಂದು..ಅದರಲ್ಲೇ ಲೀನವಾದೆ..ಸುಮಾರು ಅರ್ಧ ಘಂಟೆ ಕಾರ್ಯಕ್ರಮ..ಸಮಯವಿರಲಿಲ್ಲ..ಆದ್ರೆ ಮನಸು ಬಿಡಲಿಲ್ಲ..

ಅರೆ..ನಾವು ನೋಡಿದ, ಓಡಾಡಿದ ಸ್ಥಳದ ಬಗ್ಗೆ ಎಲ್ಲಿಯಾದರೂ ನೋಡಿದರೆ..ಒಂದು ಹಿರಿಮೆ, ಗರಿಮೆ ಮನದಲ್ಲಿ ಮೂಡುತ್ತದೆ..ಆ ಭಾವ..ಬೇರೆ ಪರಿವೆಯನ್ನು ಬರಗೊಡದೆ...ತಡೆಯುತ್ತದೆ..

ಸಂದರ್ಶನ ಮುಗಿದಾಗ ಮನಸಿಗೆ ಸಂತೋಷ ವಾಯಿತು..ಮಕ್ಕಳಿಗೆ ಈ ಮಹಾನುಭಾವರ ಸಾಧನೆ, ಶ್ರಮ ತಲುಪುತ್ತಿದೆ ಅಂದ್ರೆ..ಅದು ಒಂದು ಮೆಟ್ಟಿಲಿನ ಗೆಲುವು ಅನ್ನಿಸಿತು....

ಬಹಳ ಉಪಯುಕ್ತ ಸಂದರ್ಶನ...ಅವರ ಪುಸ್ತಕದ ಮನೆ ಬೆಳಕಿಗೆ ಬರುತಿದೆ ಅನ್ನುವದಕಿಂತ..ಅದು ಅವಾಗಿನಿಂದಲೂ ಇತ್ತು...ನಮಗೆ ಅವರ ಬಗ್ಗೆ ಇತ್ತೀಚಿಗೆ ತಿಳಿದುದರಿಂದ..ನಮ್ಮ ಆಸಕ್ತಿ ಅಲ್ಲಿಗೆ ಸೆಳೆಯುತ್ತದ ಎನ್ನುವುದು ಸತ್ಯ...ಮಾಮೂಲಿ ದಿನದಲ್ಲಿ ಅಯ್ಯೋ ಬಿಡು ಅದೊಂದು ತಲೆನೋವಿನ ಸಂದರ್ಶನ ಎಂದು ಬೇರೆ ಚಾನೆಲ್ ಹಾಕುವ ಪ್ರವೃತ್ತಿಯಿಂದ..ಅರೆ..ನಾವು ಇದನ್ನ ನೋಡಿದ್ದೇವೆ..ಪೂರ ಸಂದರ್ಶನ ನೋಡಿಯೇ ಬಿಡೋಣ ಅನ್ನುವ ಮನಸ್ಥಿತಿ ತಲುಪಿದ್ದಕ್ಕೆ ಕಾರಣ..ಅಲ್ಲಿಗೆ ಭೇಟಿ ನೀಡಿದ್ದರಿಂದ ಅಲ್ಲವೇ...

ಸಂದರ್ಶನದಲ್ಲಿ ಬಹಳ ಅಚ್ಚುಕಟ್ಟಾಗಿ ಮಾತಾಡಿದರು ಶ್ರೀಮಾನ್ ಅಂಕೆ ಗೌಡರು..ಸಮಯದ ಪರಿಮಿತಿ ಅವರ ಉತ್ಸಾಹಕ್ಕೆ ತಡೆಯೊಡ್ದುತಿತ್ತು  ...ಅವರ ಅಗಾಧ ಹುಮ್ಮಸ್ಸು, ಮತ್ತು ತನ್ನ ಪುಸ್ತಕದ ಮನೆ ನಾಡಿನ ಮೂಲೆ ಮೂಲೆಗೂ ತಲುಪಬೇಕು..ಎಲ್ಲರಿಗೂ ಸಹಾಯವಾಗಬೇಕು ಅನ್ನುವ ಕಳಕಳಿ, ತವಕ ಅವರ ಮಾತಿನಲ್ಲಿ ಗೋಚರವಾಗುತಿತ್ತು..

ಇಂತಹ ಅಮೋಘ ಸ್ಥಳಕ್ಕೆ  ನನ್ನನ್ನು ಪರಿಚಯಿಸಿದ ಬಾಲು ಸರ್, ಪ್ರಕಾಶ್ ಹೆಗ್ಗಡೆ ಮತ್ತು ಬ್ಲಾಗಿಗರ ಗುಂಪು..ಎಲ್ಲರಿಗೂ ನನ್ನ ಅನಂತಾನಂತ ವಂದನೆಗಳು...

Sunday, July 15, 2012

ನನ್ನ ಸೋದರತ್ತೆ ಗೌರಿ ಅತ್ತೆಯಾ ಒಂದು ವರ್ಷದ ನೆನಪು


ಶ್ರೀಕಾಂತ...ಈಗ ನೀನು ನೋಡಬಹುದು...!!!!

ಯಾರದು ಈ ಧ್ವನಿ ಎಂದು ತಿರುಗಿ ನೋಡಿದಾಗ..ನಾಗರಾಜ ಚಿಕ್ಕಪ್ಪ..ಹೇಳಿದ ಮಾತಿದು...

ಹಾಗೆ ತಲೆ ಎತ್ತಿ ಗೌರಿ ಅತ್ತೆ ಫೋಟೋ ನೋಡಿದೆ...ಚಿಕ್ಕಪ್ಪ ಹೇಳಿದ್ದು ನಿಜ ಎನ್ನಿಸಿತು..

ಗೌರಿ ಅತ್ತೆ ಅವರ ಭಾವ ಚಿತ್ರದ ಮುಖೇನ ಹೇಳಿದ ಮಾತು ಹಾಗೆ ತೇಲಿ ಬಂತು...

ಕೋರವಂಗಲದ ಎಲ್ಲ ಸದಸ್ಯರಿಗೂ ನನ್ನ ಆಶೀರ್ವಾದಗಳು...
ನಾನು ಇಂದು ನಿಮ್ಮನ್ನು ಅಗಲಿ ಸರಿ ಸುಮಾರು ಒಂದು ವರುಷ ಆಯಿತು...
ನನ್ನನ್ನು ಪ್ರೀತಿಸುವ ಕೆಲ ಹೃದಯಗಳಿಂದ..ನನ್ನ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಿತು...
ನನ್ನ ಅಪ್ಪ, ಅಮ್ಮ, ನನ್ನ ಯಜಮಾನರು, ನನ್ನ ಮಗಳು, ಅಳಿಯ, ತಂಗಿಯ ಗಂಡ, ಇಬ್ಬರು ತಮ್ಮಂದಿರು ಇವರೆನಲ್ಲ ಸೇರುತಿದ್ದೇನೆ ಎಂದು ಒಂದು ಕಡೆ ಸಂತೋಷ..

ಇನ್ನೊಂದು ಕಡೆ ನಿಮ್ಮನೆಲ್ಲ ಬಿಟ್ಟು ಬಂದೆನಲ್ಲ ಇನ್ನು ಭಾರವಾದ ಮನಸು..ಏನು ಮಾಡುವುದು..
ಜಾತಸ್ಯ ಮರಣ ಧ್ರುವಂ...
ಹುಟ್ಟಿದವರು ಒಂದು ದಿನ ಹೋಗಲೇಬೇಕು..ಹೋದವರು ತಿರುಗಿ ಬರಲೇ ಬೇಕು...

ಕಾರ್ಯಕರಮವು ಅಚ್ಚುಕಟ್ಟಾಗಿ ನೆರವೇರಿತು...
ನನ್ನ ತಮ್ಮಂದಿರು, ಅವರ ಪತ್ನಿಯರು, ಅವರ ಮಕ್ಕಳು ಬಂದಿದ್ದು ಬಹಳ ಖುಷಿಯಾಯಿತು...
ನಿಮ್ಮೆಲ್ಲರ ಅಭಿಮಾನಕ್ಕೆ ನನ್ನ ಆಶೀರ್ವಾದಗಳು...
ಇನ್ನೇನು ಕೆಲ ತಿಂಗಳಲ್ಲಿ ಮಂಜಣ್ಣ ಬರುತ್ತಿದ್ದಾನೆ ಎನ್ನುವ ವಿಷಯ ತಿಳಿದು ದುಃಖವಾಯಿತು..

ನಿಮ್ಮೆಲ್ಲರಿಗೂ ನನ್ನ ಆಶೀರ್ವಾದಗಳು..ಜೀವನದಲ್ಲಿ ನೀವು ಕಾಣುವ ಕನಸುಗಳು, ಇಟ್ಟುಕೊಂಡಿರುವ ಗುರಿ ಎಲ್ಲವು ನೆರವೇರಲಿ ಎಂದು ಆಶಿಸುತ್ತೇನೆ..ಹಾಗು ಹಾರೈಸುತ್ತೇನೆ...ಮತ್ತೆ ಬರುತ್ತೇನೆ...

ಇಂತಿ ನಿಮ್ಮ ಗೌರಿ ಅಕ್ಕ (ಅತ್ತೆ, ಅಜ್ಜಿ, ಅತ್ತಿಗೆ, ಹೀಗೆ ನೂರಾರು ಭಾವನೆ ಬೆಸೆಯುವ ಬಾಂಧವ್ಯಗಳು)

Wednesday, July 4, 2012

"ಅರಳಿ"ದ ಎಲೆ ಪಾಠ

ಧಾರ್ಮಿಕ ದೃಷ್ಟಿಯಿಂದ ತ್ರಿಮೂರ್ತಿಗಳ ವಾಸಸ್ಥಾನ ಈ ಅರಳಿ ಮರ..

"ಮೂಲತೋ ಬ್ರಹ್ಮ ರೂಪಾಯ, ಮಧ್ಯತೋ ವಿಷ್ಣು ರುಪಿಣೆ, ಅಗ್ರತಃ 
ಶಿವರೂಪಾಯ ವೃಕ್ಷರಾಜಾಯತೇ ನಮಃ" 

ಅದರ ಎಲೆಗಳು  ಒಂದಕ್ಕೊಂದು ಅಂಟಿಕೊಂಡಿರುವುದಿಲ್ಲ..ಪ್ರತಿ ಎಲೆಯಲ್ಲೂ ಕೂಡ ಅದರ ಸರಕು ಸಾಗಣೆಯ ದಾರಿಯನ್ನು ನೋಡಬಹುದು...ಎಲ್ಲ ಸಸ್ಯದ ಎಲೆಗಳಲ್ಲು ಇದು ಇರುತ್ತದಾದರೂ ಅರಳಿ ಎಲೆ ತನ್ನದೇ ಒಂದು ವಿಶಿಷ್ಟ ಪಾಠವನ್ನು ಸಾರುತ್ತದೆ..
ಎಲೆಯು  ಆರಂಭದಲ್ಲಿ  ಹಾಗೂ ಅಂತ್ಯದಲ್ಲಿ  ಸಣ್ಣದಾಗಿರುತ್ತದೆ...ಮಧ್ಯೆ ನೇರವಾದ ಸಣ್ಣ ಹಾದಿ ...ಅದರ ಎಡ ಬಲದಲ್ಲಿ ನೂರಾರು ಕವಲುಗಳು..ಆ ಕವಲುಗಳು ಮತ್ತೆ ಮತ್ತೆ ಒಡೆದು ಅನೇಕ ಕವಲುಗಳು..ಹೀಗೆಯೇ ಸಾಗುತ್ತದೆ..ಅಂಚಿಗೆ ಬರುತ್ತಾ ಬರುತ್ತಾ...ಅದರ ಹಾದಿ ಇನ್ನೂ ಕಡಿದಾಗುತ್ತ ಸಾಗುತ್ತದೆ...ಕಡೆಗೆ ಬಿಂದುವಾಗಿ ನಿಲ್ಲುತದೆ..ಅದು ಅದರ ಗುರಿ..

ನಾವು ಕೂಡ ಪ್ರತಿ ದಿನ ಪ್ರತಿ ಕ್ಷಣ ನೂರಾರು ಮಂದಿಯನ್ನು ಭೇಟಿ ಮಾಡುತ್ತೇವೆ, ಪ್ರತಿ ಒಬ್ಬರದು ವಿಭಿನ್ನ ಹಾದಿ, ವಿಭಿನ್ನ ಜೀವನ, ವಿಭಿನ್ನ ಗುರಿ..ಅಡೆತಡೆಗಳನ್ನು ದಾಟಿ ಬಂದ ಮೇಲೆ ಮಾತ್ರ ಗುರಿ ನಮ್ಮನ್ನ ಅಲಂಗಿಸಿಕೊಳ್ಳುತ್ತೆ

ನಾವು ಹಾಗೆಯೇ..ಒಂದು ಸಣ್ಣ ಎಳೆ ಹಿಡಿದು ನಮ್ಮ ಕೆಲಸ ಶುರು ಮಾಡುತ್ತೇವೆ..ನಮ್ಮ ಗುರಿ ಕೂಡ ದೊಡ್ಡದೇ  ಇದ್ದರೂ  ಕೂಡ  ಅದು ದೂರದಿಂದ ಒಂದು ಸಣ್ಣ ಬಿಂದುವಾಗಿರುತ್ತದೆ..ಹಾದಿ ಕಠಿಣ, ದುರ್ಗಮ, ಕಡಿದು ಇರುತ್ತದೆ. ಅದರ ಉದ್ದಕ್ಕೂ..ನೂರಾರು ಅಡ-ತಡೆಗಳು, ಕವಲೊಡೆದ ಭಾವನೆಗಳು, ಸಾಗುವ ಆಸೆ ಆಕಾಂಕ್ಷೆಗಳು..

ಆದರೆ ಇವುಗಳು ನಮ್ಮನ್ನು  ಧೃತಿಗೆಡಿಸಬಾರದು..ನಾವು ನಂಬಿರುವ ಮೌಲ್ಯ, ನಂಬಿಕೆ ಹಾಗೂ ಛಲ ಇವನ್ನು ಹಿಡಿದು ಸಾಗಿದಾಗ ಮಾತ್ರ ಗುರಿ ನಮ್ಮ ಕಣ್ಣ ಮುಂದೆಯೇ ಇರುತ್ತದೆ...ಹಾಗು ಕಣ್ಣು ಮಿಟುಕಿಸಿ ಸಂತಸ ಪಡುತ್ತದೆ..