Wednesday, March 24, 2021

ಬೈಲಹಳ್ಳಿಯ ಅದ್ಭುತ ಶಕ್ತಿ ... 

 ಎರಡು ತಿಂಗಳ ಹಿಂದೆ ಭೇಟಿಯಾಗಿದ್ದಾಗ ಅತ್ತೆ ಆಡಿದ ಮಾತು..

 "ವಯಸ್ಸಾಯ್ತು.. ಇನ್ನೆಷ್ಟು ದಿನ.. ನೆಡೆದಂಗೆ ಆಗುತ್ತೆ ಶ್ರೀಕಾಂತ"

ಬದುಕು ಒಡ್ಡಿದ ಸವಾಲುಗಳನ್ನು ಕೊಂಚವೂ ಮರುಗದೆ.. ನಿಭಾಯಿಸಿದ ಗಟ್ಟಿಗಿತ್ತಿ ನನ್ನ ಸೋದರತ್ತೆ.. ಅರ್ಥಾತ್ ಅಪ್ಪನ ಅಕ್ಕ.. 


ಕಣ್ಣಮುಂದೆಯೇ ಪತಿರಾಯನನ್ನು ಕಳೆದುಕೊಂಡರು..  ಬೆಳೆದುನಿಂತ ಮಗಳನ್ನು ಕಳೆದುಕೊಂಡರು.. ತುಂಬು ಜೀವನ ನೆಡೆಸಿದ ಇನ್ನೊಬ್ಬ ಮಗಳು ಅನಾರೋಗ್ಯಕ್ಕೆ ತುತ್ತಾಗಿ ಅಸುನೀಗಿದರು ಧೈರ್ಯಗೆಡಲಿಲ್ಲ..  ತನ್ನ ಮಗ ಬೂದಿಯಿಂದ ಎದ್ದು ಬಂದ ಫೀನಿಕ್ಸ್ ಹಕ್ಕಿಯಂತೆ.. ಇಂದು ಬೆಳೆದು ಹೆಮ್ಮರವಾಗಿ ನೂರಾರು ಕುಟುಂಬಗಳನ್ನು ನೆಮ್ಮದಿಯಿಂದ ಬದುಕುವುದಕ್ಕೆ ಮಾರ್ಗದರ್ಶನ ನೀಡುತ್ತಿರುವ ನಾಗಭೂಷಣನನ ತಾಯಿಯಾಗಿ.. ಅವನ ಬೆನ್ನಿಗೆ ಶಕ್ತಿಯಾಗಿ ನಿಂತಿದ್ದು ಇವರ ಸಾಧನೆ.. 

ನಾಗಭೂಷಣ ಮತ್ತು ಮುರುಳಿ ಅತ್ತೆಯ ಎರಡು ಕಣ್ಣುಗಳಾಗಿ.. ಅವರಿಬ್ಬರ ಏಳಿಗೆಯನ್ನು ಕಣ್ಣಲ್ಲಿ ತುಂಬಿಕೊಂಡು.. ಮರಿಮೊಮ್ಮಕ್ಕಳ ಜೊತೆ ತಾನೂ ಮಗುವಾಗಿ ಇಂದು ಕೊರವಂಗಲದ ಹಿರಿ ಕಿರಿಯರನ್ನು ಭೇಟಿ ಮಾಡಲು ಹೊರಟೆ ಬಿಟ್ಟರು.. 

ಕಚೇರಿಯ ಕೆಲವು ನಿರ್ಬಂಧಗಳು ಇಲ್ಲದೆ ಇದ್ದಿದ್ದರೆ ಈ ಮಹಾನ್ ಶಕ್ತಿಯ ಭುವಿಯಲ್ಲಿನ ಕಡೆಯ ಯಾತ್ರೆಯನ್ನು ನೋಡಬಹುದಿತ್ತು... ಆದರೆ ಅವರ ನಗುಮೊಗ.. ಶ್ರೀಕಾಂತ ಎನ್ನುವ ಆ ಆಪ್ತ ಸ್ವರ.. ಕಣ್ಣಾಲಿಗಳು ತುಂಬಿಕೊಂಡ ಅವರ ಮಮತಾಮಯಿ  ಮಾತುಗಳನ್ನು ಇತ್ತೀಚಿಗಷ್ಟೇ, ಕೇಳಿದ್ದೇನೆ ಅವರ ಚರಣ ಸ್ಪರ್ಶ ಮಾಡಿ ಆಶೀರ್ವಾದ ಪಡೆದಿದ್ದೇನೆ ಎನ್ನುವ ಆತ್ಮ ತೃಪ್ತಿ ನನಗಿದೆ.. 

***

ಏನ್ ಅತ್ಗೆಮ್ಮ ನೀವು ಬಂದು ಬಿಟ್ಟಿರಿ.. 

ಇನ್ನೇನು ಮಾಡೋದು ವಿಶಾಲೂ.. ನನ್ನ ಕಣ್ಣ ಮುಂದೆಯೇ ಹಿರಿಕಿರಿಯರೆಲ್ಲ ಜಾಗ ಖಾಲಿ ಮಾಡುತ್ತಿರುವಾಗ ನಾನು ಅಲ್ಲಿಯೇ ಇದ್ದು ಜಾಗ ಯಾಕೆ ತುಂಬಿಕೊಂಡಿರಲಿ.. ಇನ್ನೊಬ್ಬರಿಗೆ ಜಾಗ ಮಾಡಿಕೊಡಬೇಕು ಅಲ್ಲವೇ.. ಅದಕ್ಕೆ ಬಂದೆ.. ಅಮ್ಮ, ಅಪ್ಪ, ಗೋಪಾಲ, ಮಂಜಣ್ಣ, ಗೌರಿ, ಅಪ್ಪು, ವೀಣಾ, ನನ್ನ ಅಳಿಯ (ಗಿರಿಜನ ಗಂಡ), ಸುನಂದಾ, ಶ್ರೀಕಾಂತನ ಮಡದಿ ಸವಿತಾ, ಇತ್ತೀಚಿಗಷ್ಟೇ ನೀನು ಬಂದು ಬಿಟ್ಟೆ.. ಇನ್ನೇನು ಮಾಡಲಿ ಸಾಕು ಅನ್ನಿಸಿತು.. ಹೊರಟೆ ಬಿಟ್ಟೆ ಕಣೆ.. 

ಹೌದು ಅತ್ಗೆಮ್ಮ ಎಷ್ಟು ದಿನವಿದ್ದರೂ ಇರಬೇಕು ಅನ್ನಿಸುತ್ತದೆ.. ಆದರೆ ಏನು ಮಾಡೋದು.. ಜವರಾಯ ಇದ್ದಾನಲ್ಲ.. ಬನ್ರಪ್ಪ ಸಾಕು ಅಂತ ಕರೆದುಕೊಂಡು ಹೊರಟೆ ಬಿಡ್ತಾನೆ.. ಬನ್ನಿ.. ಎಲ್ಲರನ್ನು ನೋಡುವಿರಂತೆ.. 

ವಿಶಾಲೂ ಹೌದು ಕಣೆ.. ತುಂಬಾ ವರ್ಷಗಳೇ ಆಗಿತ್ತು.. ನಡಿ.. ಹೋಗೋಣ.. 

(ಇದು ನನ್ನ ಅಮ್ಮ ಮತ್ತು ನನ್ನ ಅತ್ತೆ ಸ್ವರ್ಗದ ಹಾದಿಯಲ್ಲಿ ಮಾತಾಡಿಕೊಂಡು  ಕಾಲ್ಪನಿಕ ಸಂಭಾಷಣೆ.. )

****

ವಯಸ್ಸು ದೇಹಕಷ್ಟೆ ಮನಸ್ಸಿಗಲ್ಲ.. ಅಕ್ಷರಶಃ ಈ ಮಾತು ಇವರಿಗೆ ಅನ್ವಯಿಸುತ್ತದೆ.. ಕೋರವಂಗಲದ ಇತಿಹಾಸವನ್ನು ನನ್ನ ಕಣ್ಣೆದೆರು ಒಮ್ಮೆ ತೆಗೆದಿಟ್ಟ ಪರಿ.. ಅದ್ಭುತ ಅನಿಸುತ್ತದೆ.. ಅವರ ಆ ಮಾತುಗಳನ್ನು ಕೇಳುತ್ತಾ ಕೋರವಂಗಲದ ಅದ್ಭುತ ವೈಭವೋಪೇತ ಜೀವನದ ಸಂಭಮವನ್ನು ಕಿವಿಯಾರೆ ಕೇಳಿ ಪುನೀತನಾದ ಭಾವ ನನ್ನದು.. 

ಊಟ ತಿಂಡಿ, ವಸ್ತ್ರ ಒಡವೆ.. ಆಳು ಕಾಳು ಯಾವುದಕ್ಕೂ ಕಡಿಮೆಯಿಲ್ಲದಂತೆ ಅಕ್ಷರಶಃ ಒಂದು ಅರಮನೆಯಂತಹ ಸದನದಲ್ಲಿ ಜೀವನ ಕಂಡ ಜೀವಿ ನನ್ನ ಅತ್ತೆ.. 

ಪ್ಲೇಗ್/ಕಾಲರಾ ತರಹದ ಯಾವುದೋ ಸಾಂಕ್ರಾಮಿಕ ರೋಗ ಬಂದು ಊರನ್ನೇ ಆವರಿಸಿದಾಗ, ಅದನ್ನು ನಿವಾರಿಸಿಕೊಂಡು ಕಳೆದ ವರ್ಷ ಲಾಕ್ ಡೌನ್ ಅನ್ನುವ ಯುಗವನ್ನು ನೆನೆಪಿಸಿದ ಪರಿ ಸೊಗಸಾಗಿತ್ತು.. ಕಣ್ಣ ಮುಂದೆ ನೆಡೆದಿದಿಯೇನೋ ಅನ್ನುವಷ್ಟು ನಿಖರತೆ ಅವರ ಮಾತುಗಳಲ್ಲಿತ್ತು.. 

ಸುಮಾರು ಇಪ್ಪತೈದು ವರ್ಷಗಳ ಹಿಂದೆ ಅವರು ಕೈಗೊಂಡ ಅಮರನಾಥ ಮತ್ತು ನೇಪಾಳದ ಪ್ರವಾಸದ ಕ್ಷಣಗಳನ್ನು ಕಣ್ಣಿಗೆ ಕಟ್ಟುವಂತೆ ಅವರು ವಿವರಿಸಿದ್ದು ಇಂದಿಗೂ ಕಣ್ಣ ಮುಂದೆ ಇದೆ.. ನನ್ನ ಅಣ್ಣ ವಿಜಯನ ಮದುವೆಯ ಸಮಯದಲ್ಲಿ ನಮ್ಮ ಮನೆಯಲ್ಲಿಯೇ ಹಲವಾರು ದಿನಗಳಿದ್ದು, ಅವರ ಪ್ರವಾಸದ ಅನುಭವಗಳನ್ನು ಹಂಚಿಕೊಂಡದ್ದು ಅದ್ಭುತ.. 

ವಿಜಯನ ಗೆಳೆಯ ಗೋಪಿ ಎಂದರೆ ನನ್ನ ಅತ್ತೆಗೆ  ಅಚ್ಚು ಮೆಚ್ಚು ಹಾಗೆ ಗೋಪಿಗೂ ಕೂಡ.. ನಿಮ್ಮ ಅತ್ತೆ ಹತ್ರ ಮಾತಾಡತಾ ಇದ್ರೆ ಅವರ ಜೊತೆ ಪ್ರವಾಸಕ್ಕೆ ಹೋದ ಅನುಭವ ಆಗುತ್ತೆ ಕಣೋ ಅನ್ನೋರು.. 

ನನಗೆ ರಣಧೀರ ಚಿತ್ರದ ನಾಯಕಿ ಖುಷ್ಭೂ ಅಂದರೆ ಅಂದಿಗೂ ಇಂದಿಗೂ ಎಂದೆಂದಿಗೂ ಹುಚ್ಚು.. ಅವಳ ಫೋಟೋ ಕಲೆಹಾಕಿ ಒಂದು ಆಲ್ಬಮ್ ಮಾಡಿದ್ದೆ.. ಅದನ್ನು ನೋಡಿದ್ದರು.. ಅವರಿಗೆ ನೆನಪಿಗೆ ಬಂದಾಗೆಲ್ಲ ಎಲ್ಲರ ಮುಂದೆ ಹೇಳೋರು... ಶ್ರೀಕಾಂತನಿಗೆ ಖುಶ್ಭೂ ಅಂದರೆ ಹುಚ್ಚು ಬಹಳ ಇಷ್ಟ ಅವನಿಗೆ ಅಂತ.. 

ಶೀತಲ್ ಅಪ್ಪನ ಹಾಗೆ ಜಾಣೆ ಕಣೆ ನೀನು.. ಸವಿತಾ ನೀನು ಬಿಡವ್ವಾ ಹಮ್ಮೀರಿ ಏನು ಕೆಲಸ ಆದರೂ ಸರಿ ಮಾಡೇ ಬಿಡ್ತೀಯ ಅನ್ನೋರು.. 

ಜೀವನ ತಿರುವು ಕೊಟ್ಟು ಸೀಮಾಳನ್ನು ವಿವಾಹ ಮಾಡಿಕೊಂಡು ಅವರ ಮುಂದೆ ನಿಲ್ಲಿಸಿದಾಗ..ತುಂಬು ಹೃದಯದಿಂದ ಆಶೀರ್ವದಿಸಿ, ಅವನ ಕೋಟೆಗೆ ನೀನೆ ರಾಣಿ ಅಂತ ಅರ್ಥ ಬರುವ ಮಾತುಗಳನ್ನು ಹೇಳಿದ್ದರು.. 

ಇದೆಲ್ಲ ಯಾಕೆ ಅವರ ಬಗ್ಗೆ ಹೇಳಿದೆ ಅಂದರೆ.. ಎಲ್ಲರ ವಯೋಮಾನಕ್ಕೆ ತಕ್ಕಂತೆ ಮಾತಾಡುವ ಅವರ ಗುಣ.. ನೀರಿನ ಹಾಗೆ ಎಲ್ಲರ ಜೊತೆ ಬೆರೆಯುತ್ತಾ.. ತಾನು ಹಿರಿಯೆ ಎನ್ನುವ ಯಾವುದೇ ಹಮ್ಮು ಬಿಮ್ಮು ತೋರದೆ.. ಎಲ್ಲರ ಜೊತೆ ಬೆರೆಯುವ ಆ ಗುಣ ನಿಜಕ್ಕೂ ಮಾದರಿ.. 

ಕೋರವಂಗಲದ ಪ್ರತಿಯೊಬ್ಬರ ಬಗ್ಗೆ ಭಂಡಾರದಷ್ಟು ಮಾಹಿತಿ ತುಂಬಿಕೊಂಡಿದ್ದರು.. ಪ್ರತಿಯೊಬ್ಬರ ಬಗ್ಗೆ ನಿಖರವಾದ ಮಾಹಿತಿ ಇದ್ದೆ ಇರುತ್ತಿತ್ತು.. ಅವರನ್ನು ಭೇಟಿ ಮಾಡದೆ ಹಲವಾರು ತಿಂಗಳು, ವರ್ಷಗಳಾಗಿದ್ದರೂ ಯಾರನ್ನೂ ಮರೆಯುತ್ತಿರಲಿಲ್ಲ.. 

ತನ್ನ ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು, ಅಳಿಯ, ತಮ್ಮಂದಿರು, ಸೊಸೆಯಂದಿರು, ಅವರ ಮಕ್ಕಳು ಹೀಗೆ ಯಾರ ಬಗ್ಗೆ ಒಮ್ಮೆ ಕೇಳಿದರೂ, ನಮಗೆ ಅಚ್ಚರಿ ಬರುವಷ್ಟು ಮಾಹಿತಿ ನೀಡುತ್ತಿದ್ದರು.. 

ಸೂರ್ಯ ಬೆಳಗುತ್ತಾನೆ, ಸಂಜೆ ಅಸ್ತಮಿಸುತ್ತಾನೆ.. ಆದರೆ ಈ ಕೋರವಂಗಲದ ಮಮತಾಮಯಿ ಸೂರ್ಯ ಇಂದಿಗೂ ಅಸ್ತಮಿಸುವುದಿಲ್ಲ... ಸದಾಬೆಳಗುತ್ತಲೇ ಇರುತ್ತಾರೆ.. 


ಹೋಗಿ ಬನ್ನಿ ಅತ್ತೆ ಸುಮಾರು ತೊಂಭತ್ತೆರೆಡು ವಸಂತಗಳನ್ನು ಈ ಭುವಿಯಲ್ಲಿ ಅಕ್ಷರಶಃ ಜೀವಿಸಿ, ಹಲವಾರು ಕುಟುಂಬಗಳಿಗೆ ಆಸರೆಯಾಗುವಂಥಹ ಆಶ್ರಮವನ್ನು ಕಟ್ಟಿ ಬೆಳೆಸುತ್ತಿರುವ ನಾಗಭೂಷಣನಿಗೆ ಶಕ್ತಿಯಾಗಿರುವ ನಿಮ್ಮ ಆಶೀರ್ವಾದ ಸದಾ ಹಸಿರಾಗಿರಲಿ..!!!