Friday, May 24, 2013

.......... ಹಾಕಿದ ಆಲದ ಮರ

ನನ್ನ ಮೆಚ್ಚಿನ ಚಿತ್ರಗಳಲ್ಲಿ ಅಮಿತಾಭ್ ಬಚ್ಚನ್ ಅವರ ಲಾವಾರಿಸ್ ಚಿತ್ರ ಕೂಡ ಒಂದು. ಅ ಚಿತ್ರದಲ್ಲಿ ಬಚ್ಚನ್
ಜೀನತ್ ಅಮನ್ ಗೆ  ಹೇಳುವ ಸಂಭಾಷಣೆ

"ಬಡತನದ ಬಗ್ಗೆ  ನಿಮಗೆ ಏನು ಗೊತ್ತು?...ಬಾಲ್ಯದಲ್ಲಿ ತಿನ್ನಲು ರೊಟ್ಟಿಯ ಬದಲು ಮೂದಲಿಕೆ, ತೆಗಳಿಕೆ, ಬಡತನವನ್ನು ಲೇವಡಿ ಮಾಡುವವರು ಸಿಕ್ಕಾಗ...ಮೇಲೇರಲು ಪ್ರಯತ್ನ ಪಟ್ಟಾಗೆಲ್ಲ ಸಮಾಜ ಅವರನ್ನು ಕಡೆಗಣಿಸಿ ನೋಡುವಾಗ ಆಗುವುದೇ ಲಾವಾರಿಸ್"

ಯಾಕೋ ಏನೋ ಈ ಸಂಭಾಷಣೆ ಈ ದಿನ ತುಂಬಾ ಕಾಡಿತ್ತು.

ಸಹನೆಗೆ ಹೆಸರಾಗಿದ್ದ ಅಪ್ಪ.. ಛಲಕ್ಕೆ ಎರಡನೇ ಹೆಸರಾಗಿದ್ದ ಅಮ್ಮ...  ಇಬ್ಬರೂ ಬಡತನದ ಬೇಗೆಯಲ್ಲಿ ನರಳುತ್ತಿದ್ದಾಗ ಮೂಡಿದ ಎರಡು ಕುಸುಮಗಳು ನನ್ನ ಅಕ್ಕ ಹಾಗೂ ಅಣ್ಣ.  ಬಡತನದ ಬೇಗೆಯಲ್ಲಿ ಅಪ್ಪ ಅಮ್ಮನ ಜೊತೆಯಲ್ಲಿ ನರಳಿ ಅವಮಾನದ ತಟ್ಟೆಯಲ್ಲಿ ನಿತ್ಯ ಊಟ ಮಾಡುತ್ತಾ,   ತಾತ್ಸಾರದ ಲೋಟದಲ್ಲಿ ನೀರು ಕುಡಿಯುತ್ತಾ ಶಿವಮೊಗ್ಗದ ಕೋಟೆ ಆಂಜನೇಯನ ಕೃಪಾಶಿರ್ವಾದದಲ್ಲಿ ಬೆಂಗಳೂರಿಗೆ ಬಂದ ಮೇಲೆ...  ಅಪ್ಪ ಹಾಕಿದ ಆಲದ ಮರದ ನೆರಳಲ್ಲಿ ಲತೆಯಾಗಿ ಹಬ್ಬುತ್ತ ಮರವನ್ನು ತಬ್ಬಿ ಹಿಡಿದು ತಮ್ಮ ಕಾಲ ಮೇಲೆ ತಾವು ನಿಂತು ಉತ್ಸಾಹ ತುಂಬಿದ ನನ್ನ ಅಕ್ಕ ಹಾಗೂ ಅಣ್ಣನ ಬಾಳಿನಲ್ಲಿ ಕಳೆದ ಹದಿನೈದು ದಿನಗಳು ಉಲ್ಲಾಸದ ಹೂ ಮಳೆಯನ್ನೇ ಸುರಿಸಿದ ಘಳಿಗೆಗಳು.

ತನ್ನ ಜೀವನ ಅಂಕು ಡೊಂಕಿನ ಹಾದಿಯಲ್ಲಿ ಸಾಗಿದರೂ... ಛಲದಲ್ಲಿ ಅಮ್ಮನಂತೆ ತನ್ನ ಕಾಲ ಮೇಲೆ ನಿಂತು ಇತರರಿಗೆ ಮಾರ್ಗದರ್ಶಿಯಾಗಿ ನಿಂತ ಅಕ್ಕ.. ಬೆಂಗಳೂರಿನಲ್ಲಿ ಅಂಗೈ ಅಗಲ ಜಾಗಕ್ಕೂ ಪರದಾಡಬೇಕಾದ ಸ್ಥಿತಿಯಲ್ಲಿ ಕಷ್ಟ ಪಟ್ಟು ಗಳಿಸಿ ಉಳಿಸಿದ ಹಣದಲ್ಲಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಖರೀದಿ ಮಾಡಿದ್ದ ಒಂದು ನಿವೇಶನದಲ್ಲಿ ಕಳೆದ ಮೇ ಹದಿಮೂರನೇ ದಿನ ಸಾಂಪ್ರದಾಯಿಕವಾಗಿ ಗುದ್ದಲಿ ಪೂಜೆ ಮಾಡಿದಾಗ ಅಮ್ಮನ ಕಣ್ಣಲ್ಲಿ ಆನಂದ ಭಾಷ್ಪಗಳು ಮೂಡಿದವು. ನಮ್ಮ ಅಪ್ಪನ ಕನಸನ್ನು ನನಸು ಮಾಡುವ ಮೊದಲ ಹೆಜ್ಜೆ ಈ ಗುದ್ದಲಿ ಪೂಜೆಯಾಗಿತ್ತು. ದೈಹಿಕವಾಗಿ ಅಪ್ಪ ಇಲ್ಲದೆಯೂ ನಮ್ಮ ಮನದಲ್ಲಿ ಕೂತು ತಲೆಯ ಮೇಲೆ ಅಭಯ ಆಶೀರ್ವಾದದ ಹಸ್ತ ಸದಾ ನೀಡುತ್ತ ಹರಸಿದ ಆ ಕ್ಷಣ ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣಗಳು. ಇಡೀ ಕುಟುಂಬ ಅಂದು ಅಲ್ಲಿ ನೆರೆದಿತ್ತು. ಸಂತಸ ಭರಿತ ಕ್ಷಣಗಳ ಚಿತ್ರಗಳು ನಿಮಗಾಗಿ.

ಹಸುವಿನ ಮನಸ್ಸಿನ ಅಪ್ಪ ಹಸುವಾಗಿ ಆಶೀರ್ವದಿಸಲು ಬಂದ ಕ್ಷಣ... ಪೂಜೆಯ  ಆರಂಭಕ್ಕೆ ಬಂದು
ಪೂಜೆ ಮುಗಿಯುವವರೆಗೂ ಇದ್ದದ್ದು ವಿಶೇಷ ! 

ಹಿರಿಯರು ಮನೆ ಕಟ್ಟಲು ಹೊರಟರೇ ಪುಟಾಣಿಗಳು ಆಸರೆಗೆ ಗಿಡ ನೆಡುತ್ತಿರುವ ಕ್ಷಣ 

ಅಡಿಪಾಯದ ಕಲ್ಲಿಗೆ ಪೂಜಿಸುತ್ತಿರುವ ನಮ್ಮ ಮನೆಯ ಶಕ್ತಿ  ಅಕ್ಕ 

ಮನೆಗೆ ಆಧಾರ ಹಿರಿಯಣ್ಣ 
ಗುದ್ದಲಿ ಪೂಜೆ ಯಶಸ್ಸಿನ ಮೊದಲ ಮೆಟ್ಟಿಲು

ಭೂರಮೆಗೆ ಹಾಲು ಹಾಕಿ ಸಂತೈಸುತ್ತಿರುವ ಕ್ಷಣ 
 
ಸುಂದರ ಕ್ಷಣಗಳಲ್ಲಿ ಜೊತೆ ನಿಂತ ಮನೆ ಮಂದಿ 
ಅಪ್ಪ ತಮ್ಮ ಜೀವನದಲ್ಲಿ ಕೂಡಿಸಿದ್ದು ಸ್ನೇಹ, ಪ್ರೀತಿ,  ವಿಶ್ವಾಸ ಎಂಬ ಗಂಟನ್ನು.... ಕಳೆದದ್ದು... ತಮಗಿಷ್ಟವಾಗದ ತಮ್ಮ ಸಿದ್ಧಾಂತಕ್ಕೆ ವಿರುದ್ಧವಾದ ಕೆಲವು ಬೇಡದ ಕ್ಷಣಗಳನ್ನು... ಅಪ್ಪ ಹಾಕಿದ ಆಲದ ಮರದಲ್ಲೇ ಜೋತಾಡುತ್ತಾ ಕೂಡಿ-ಕಳೆಯುವ ಅಕೌಂಟ್ ವೃತ್ತಿಯನ್ನೇ ಸ್ವೀಕರಿಸಿ ಇಂದು ಆ ವೃತ್ತಿಯಲ್ಲಿ ಅಪಾರ ಹೆಸರು, ಕೀರ್ತಿಯನ್ನು ಗಳಿಸಿರುವ ಅಣ್ಣ ಇಂದು ತನ್ನ ಜೀವನದ ಒಂದು ಕನಸಾದ ವಾಹನವನ್ನು ಮನೆಯ ಮುಂದೆ ನಿಲ್ಲಿಸಿದಾಗ.. ಅಮ್ಮ ಒಂದು ಬಾರಿ ತಮ್ಮ ಯಜಮಾನರ ಭಾವ ಚಿತ್ರವನ್ನು ದಿಟ್ಟಿಸಿ ನೋಡಿದರು. ವಿಶಾಲು ನಾವು ಗೆದ್ದೆವು ಕಣೆ "ನಮ್ಮ ಮಕ್ಕಳು ಸೂಪರ್ ನನ್ಮಕ್ಕಳು" ಎನ್ನುವ ಭಾವ ಚಿತ್ರದಲ್ಲಿತ್ತು.
ಕಷ್ಟದ ದಿನಗಳಿಂದ ಸಾಧನೆಯ ಹಾದಿಯ ಸಂತಸದಲ್ಲಿ ಅಣ್ಣ 
ಇದಕ್ಕಿಂತ ಬೇರೆ ಏನು ಬೇಕು. ಅವಿರತ  ೫೧ ತುಂಬು ವೈವಾಹಿಕ ಜೀವನ ನಡೆಸಿದ ದಂಪತಿಗಳಿಗೆ ಇಂದು (ಮೇ ತಿಂಗಳ ೨೩ನೇ ದಿನ) ಅವರ ೫೩ನೆ ವಾರ್ಷಿಕ ಮಹೋತ್ಸವ.   ಮಕ್ಕಳ ಏಳಿಗೆಗಿಂತ ಉತ್ತಮ ಉಡುಗೊರೆ ಬೇರೆ ಬೇಕೇ ಎಂದುಕೊಂಡ  ಅಮ್ಮನಿಗೆ ಆದ ಖುಷಿಗೆ ಎಣೆಯೇ ಇಲ್ಲ!!!

ಅನುಗ್ರಹ ಸದನದ ಮುಂದೆ ಅನುಗ್ರಹಿತ ವಾಹನ 

ಬೆಳ್ಳಂ ಬೆಳಕಿನಲ್ಲಿ!

ಸಾಧನೆಯ ಹುಮ್ಮಸ್ಸಿನ ಹೆಮ್ಮೆಯಲ್ಲಿ ಅಣ್ಣ ಅತ್ತಿಗೆ 

ಅನುಗ್ರಹಿತ ಪರಿವಾರದೊಂದಿಗೆ ಹೊಸ ಸದಸ್ಯನ ಆಗಮನ 
ನನ್ನ ತಮ್ಮನ ಕೈಯಲ್ಲಿ ಸುಂದರವಾದ ಆಧುನಿಕ ತಂತ್ರಜ್ಞಾನದ ಹೊಸ ಮೊಬೈಲು ಬಂದಿದ್ದು ಇದಕ್ಕೆಲ್ಲ ಕಳಶ ಇಟ್ಟಂತೆ ಆಯಿತು!

ಹೊಸ ಹೊಸ ದಿಕ್ಕಿನಲ್ಲಿ ಯಶಸ್ಸಿನ ಹಾದಿಯಲ್ಲಿ ಬೆಳೆಯುತ್ತಿರುವ ಕುಟುಂಬದ ರೆಂಬೆ ಕೊಂಬೆಗಳನ್ನು ನೋಡಿದ ಅಪ್ಪನ ಮನಸ್ಸು...  ತನ್ನ ಕುಟುಂಬದ ಯಶಸ್ಸಿನ ದಿಕ್ಕಿಗೆ ಕಾರಣರಾದ ಎಲ್ಲರಿಗೂ ಹೇಳಿದ್ದು ಒಂದೇ ಮಾತು "ಸಕಲ ಕಾರ್ಯ ಕಾರಣಗೆ ವಂದನೆ ಅಭಿವಂದನೆ... ನನ್ನ ಅನುಗ್ರಹದ ಸದನ ಸದಸ್ಯರಿಗೆ ಶುಭಾನುಗ್ರಹ ಹೀಗೆ ಸದಾ ಇರಲಿ"

Wednesday, May 8, 2013

ಕೌಶಿಕದ ಅಜ್ಜಯ್ಯ - ಉಸಿರಲ್ಲಿ ಹಸಿರಾದ ಜೀವನ


ದಿನವೂ ಚಂದ್ರನನ್ನು ಕಾಣುವ ಹಂಬಲ ಇದ್ದೆ ಇರುತ್ತೆ 

ಬಾಲ್ಯದಲ್ಲಿ ನಲಿಯುತ್ತಾ ತಾಯಿಯ ಮಡಿಲಲ್ಲಿ ಆಡುತ್ತಾ ನಲಿವ ಮಗುವಿಗೆ ಚಂದಮಾಮನೇ ಜೊತೆಗಾರ 

ಬಾಲ್ಯಾವಸ್ಥೆ ತಲುಪುವ ಹೊತ್ತಿಗೆ ಚಂದಮಾಮನ ಜೊತೆ ತಾಯಿಯ ತುತ್ತು ತಿನ್ನುತ್ತಾ ನಲಿಯುವ ಭಾಗ್ಯ 

ಯೌವನಕ್ಕೆ ಬಂದಾಗ ಜೀವನದ ಆಸೆ ಆಕಾಂಕ್ಷೆಗಳನ್ನು ಗುರಿಯನ್ನು ಚಂದಮಾಮನ ಜೊತೆ ಹಂಚಿಕೊಂಡು ನಲಿಯುವ ಹುಮ್ಮಸ್ಸು 

ದಾಂಪತ್ಯಕ್ಕೆ ಕಾಲಿಟ್ಟಾಗ ಜೀವನದ ಸುಖ ದುಃಖಗಳನ್ನೂ ಚಂದಮಾಮನ ಜೊತೆ ಸಮೀಕರಿಸಿಕೊಳ್ಳುತ್ತಾ ಸುಂದರ ಜೀವನದ ಹೆಜ್ಜೆ ಗುರುತು ಮೂಡಿಸುವ ನೈಪುಣ್ಯತೆ 

ಸಹಸ್ರ ಚಂದ್ರ ದರ್ಶನ ಮಕ್ಕಳ ಕಣ್ಣಲ್ಲಿ ಕಂಡ ಒಂದು ಸುಂದರ ಸರಳ ಜೀವಿ


ಸಹಸ್ರಚಂದ್ರ ದರ್ಶನದ  ಕರೆಯೋಲೆ

ಇವೆಲ್ಲ ಬ್ರಹ್ಮನ ಸುಂದರ ಕಲಾಕೃತಿಯ ಬಗ್ಗೆ ಮನದಾಳದಲ್ಲಿ ಹುಟ್ಟಿದ ಮಾತು!


ಕಳೆದ ಆಗಸ್ಟ್ ತಿಂಗಳಲ್ಲಿ ಭೇಟಿ ಮಾಡಿದಾಗ - ಕೌಶಿಕದ ಅಜ್ಜಯ್ಯ 

ಮೃದುಭಾಷಿ, ಸುಂದರ ಮನಸ್ಸು, ಸುಂದರ ವ್ಯಕ್ತಿತ್ವ, ಮಕ್ಕಳ, ಮೊಮ್ಮಕ್ಕಳ, ಮರಿಮೊಮ್ಮಕ್ಕಳ ಸುಂದರ ಪೀಳಿಗೆಯನ್ನು ಕಂಡ ಸುಮಾರು ತೊಂಭತ್ತೈದು ನವ ಚಿಗುರಿನ ಚೈತ್ರ ಮಾಸವನ್ನು ಕಂಡು ಭೂಮಿತಾಯಿ ಕೂಡಾ ಹೆಮ್ಮೆ ಪಡುವಂತೆ ಸಹನಮೂರ್ತಿಯಾಗಿದ್ದ ಕೌಶಿಕದ ಅಜ್ಜಯ್ಯ ಎಂದೇ ಹೆಸರಾಗಿದ್ದ ಶ್ರೀ ಸೋಮೇಶ್ವರ ಭಟ್ಟ (ಚಿಂತಾಮಣಿ) ಅವರು ತನ್ನ ಮಾತಾ ಪಿತೃಗಳಿಗೂ ಆತ್ಮೀಯ ಸುತರಾಗಿದ್ದರು, ಹಾಗೆಯೇ ಬಂಧು-ಮಿತ್ರರಿಗೆ ಮಾರ್ಗದರ್ಶಕರಾಗಿದ್ದರು. 


ಕ್ಲಾಸಿಕ್ ಚಿತ್ರ .. ತಾರುಣ್ಯದಲ್ಲಿ ಶಂಖದ ದೇವರಭಟ್ಟರ ಮಗ ಶ್ರೀ ಕಿಟ್ಟಣ್ಣ ಅವರ ಜೊತೆಯಲ್ಲಿ 
ಇಂದು ಸಂಜೆ ಸುಮಾರು  ನಾಲ್ಕು ಘಂಟೆ ಆಸು ಪಾಸಿನಲ್ಲಿ ನಮ್ಮೆಲ್ಲರ ಮನಸ್ಸಲ್ಲಿ ಹಸಿರಾಗಿ ಉಳಿದುಕೊಂಡು, ತಮ್ಮ ಉಸಿರನ್ನು ನಮ್ಮ ಜೀವನದ ನಂದನವನಕ್ಕೆ ಪ್ರಾಣವಾಯುವನ್ನಾಗಿಸಿ , ತಮ್ಮ ಹೆಸರನ್ನು, ಗುರುತನ್ನು ಭೂರಮೆಯಲ್ಲಿ ಉಳಿಸಿ ಹೊರಟು ಬಿಟ್ಟರು.

ನನ್ನ ಅಣ್ಣನ ಮಗಳ ಮೊದಲ ವರ್ಷದ ಸಂಭ್ರಮದಲ್ಲಿ ಅನೀರೀಕ್ಷಿತವಾಗಿ ಬಂದು ನನ್ನ ಅಪ್ಪ ಅಮ್ಮನನ್ನು ಹರಸಿದ್ದು ಕಣ್ಣಿಗೆ ಕಟ್ಟಿದಂತಿದೆ. ಕೆಲವು ತಿಂಗಳ ಹಿಂದೆ ನಮ್ಮ ಮನೆಯ ಪರಿವಾರ ಅಜ್ಜಯ್ಯನನ್ನು ಕಂಡು ಮಾತಾಡಿಸಿ ಆಶೀರ್ವಾದ ಪಡೆದ ನೆನಪು ಇನ್ನು ಬೆಟ್ಟದ ತಪ್ಪಲಲ್ಲಿ ಬೆಳೆದ ಹುಲ್ಲಿನಂತೆಯೇ ಹಸಿರಾಗಿದೆ.


ನಮ್ಮ ಕುಟುಂಬ ಅವರೊಡನೆ ಕಳೆದ ಒಂದು ಸುವರ್ಣ ನೆನಪು 
ಅವರ ಮಾರ್ಗದರ್ಶನ, ಅವರು ಜೀವನ ಸಾಗಿಸಿದ ಹಾದಿಯಲ್ಲಿ ನೆಡೆದು ಹಸಿರಾದ ತರುಲತೆಗಳಲ್ಲಿ ನಮ್ಮ ಜೀವನದ ಸಾರ್ಥಕತೆ ಕಾಣುವುದು ಅವರಿಗೆ ನಾವು ಸಲ್ಲಿಸುವ ಭಾವಪೂರ್ಣ ಶ್ರದ್ದಾಂಜಲಿ.