Sunday, October 13, 2019

ಪ್ರೀತಿಯ ಸಾಕ್ಷಾತ್ಕಾರ...!

ದಟ್ಟಡವಿ.. ಸೂರ್ಯನೇ ಒಳಗೆ ಬರಲು ಬೆವರು ಸುರಿಸಬೇಕಾದ ಪರಿಸ್ಥಿತಿ.. ಎತ್ತರೆತ್ತರ ಮರಗಳು.. ತಬ್ಬಿ ಹಿಡಿಯಲಾಗದಷ್ಟು ಅಗಾಧವಾದ ಕಾಂಡ.. ಮರದ ಎಲೆಗಳು.. ಹೇ ನಾ ನಿಮ್ಮನ್ನು ಬಿಟ್ಟಿರಲಾರೆ ಕಣೋ ಎನ್ನುತ್ತಾ ಒಂದಕ್ಕೊಂದು ಹೆಣೆದುಕೊಂಡಂತೆ ಎಲೆಗಳ ಅಂಬರವನ್ನೇ ಸೃಷ್ಟಿಸಿದ್ದವು.. ಚೀವ್ ಚೀವ್.. ಜಿಯ್ ಜಿಯ್.. ಕೂ ಕೊ.. ಗ್ರ್ ಗ್ರ್ ಹೀಗೆ ಕೇಳಿರದೆ ಇದ್ದ ಅನೇಕ ಸದ್ದ್ದುಗಳು ಬರುತ್ತಲೇ ಇದ್ದವು.. ಆ ಕಡೆ ನೋಡಿದರೆ.. ಈ ಕಡೆಯಿಂದ ಬಂದಂತೆ.. ಈ ಕಡೆ ನೋಡಿದರೆ ಆ ಕಡೆ ಕೇಳಿದಂತೆ.. ಭ್ರಮೆ ಸೃಷ್ಟಿಸುತ್ತಿತ್ತು..

ಅಭಿಜಿತ್ ಒಬ್ಬನೇ ಹೆಜ್ಜೆ ಹಾಕುತ್ತಿದ್ದ.. ಎಲ್ಲಿಗೆ ಹೋಗಬೇಕು ಗೊತ್ತಿಲ್ಲ.. ದಾರಿ ಯಾವುದು ಗೊತ್ತಿಲ್ಲ.. ಬೆನ್ನಿನ ಮೇಲೆ ಹೊರೆ.. ಕಾಲುಗಳು ಪದ ಹೇಳುತ್ತಿದ್ದವು.. ಆದರೂ ವಿಧಿಯಿಲ್ಲದೇ ನೆಡೆಯುತ್ತಲೇ ಇರಬೇಕಿತ್ತು.. ಬ್ಯಾಕ್ ಪಾಕ್ನಲ್ಲಿದ್ದ ಯಾವುದೇ ಪದಾರ್ಥಗಳು ಖಾಲಿಯಾಗಿರಲಿಲ್ಲ.. ಇದು ಅವನ ಮೊದಲ ಚಾರಣ.. ಅರಿವಿಲ್ಲದೆ ಬೇಕಾದಷ್ಟು ತಿಂಡಿ ತಿನಿಸುಗಳು ಹೊತ್ತು ತಂದಿದ್ದ.. ಸುಮಾರು ಹೊತ್ತು ನೆಡೆದು ನೆಡೆದು ಸುಸ್ತಾಗಿತ್ತು.. ಒಂದು ಮರದ ಕೆಳಗೆ ಕೂತು ಸುತ್ತಲೂ ಮತ್ತೊಮ್ಮೆ ನೋಡಿದ..ಇಂದು ಬೆಳಿಗ್ಗೆಯಿಂದ ನೋಡುತ್ತಿದ್ದ ಅದೇ ಕಾಡು.. ಅದೇ ಮರಗಳು.. ಅದೇ ಪರಿಸರ.. ಇದೇನು ಅದೇ ದೃಶ್ಯಗಳೇ ಪುನರಾವರ್ತನೆ ಆಗುತ್ತಿದಿಯೇನೋ ಅನ್ನುವ ಹಾಗೆ.. ಗುರುತು ಇಟ್ಟುಕೊಳ್ಳಲು ಸಾಧ್ಯವೇ ಇಲ್ಲದಂತಹ ದೃಶ್ಯಗಳು.. ಬ್ಯಾಗಿನಲ್ಲಿದ್ದ ಅವನಿಷ್ಟದ  ಖಾರವಿದ್ದ ಕೋಡುಬಳೆ ತೆಗೆದುಕೊಂಡು ಒಂದೆರಡು ತಿಂದು.. ಹಾಗೆ ಮರಕ್ಕೆ ಒರಗಿ ಕೂತಿದ್ದ..

ಕೂತವನಿಗೆ.. ಹಾಗೆ ನಿದ್ದೆ ಬಂದಿತ್ತು.. ಮತ್ತೆ ಎಚ್ಚರವಾದಾಗ.. ನಿಧಾನಕ್ಕೆ ಕತ್ತಲು ಶುರುವಾಗುವ ಸಂಭ್ರಮದಲ್ಲಿತ್ತು.. ಹತ್ತು ನಿಮಿಷ ಅಂತ ಮಲಗಿದವನಿಗೆ ಅರಿವಿಲ್ಲದೆ ಸುಮಾರು ಘಂಟೆಗಳೇ ನಿದ್ದೆ ಮಾಡಿದ್ದ.. ಕಣ್ಣು ಬಿಟ್ಟು.. ಸುತ್ತಲೂ ನೋಡಲು ಪ್ರಯತ್ನ ಮಾಡಿದ. ಕತ್ತಲು ಆವರಿಸುತ್ತಿತ್ತು.. ಮೊದಲೇ ಸೂರ್ಯ ರಶ್ಮಿ ಒಳಗೆ ಬರಲಾದಷ್ಟು ದಟ್ಟವಾಗಿದ್ದ ಕಾಡು.. ಹಗಲೋ ರಾತ್ರಿಯೋ ಒಂದೇ ರೀತಿಯಲ್ಲಿ ಕಾಣ ಹತ್ತಿತ್ತು..

ಸರಿ.. ಪೂರ್ಣ ಕತ್ತಲಾಗುವ ತನಕ ಒಂದಷ್ಟು ದೂರ ನೆಡೆದು ಆಮೇಲೆ ಒಂದು ಕಡೆ ಕೂರುವ ಎಂದು ಬಿರ ಬಿರನೇ ಹೆಜ್ಜೆ ಹಾಕತೊಡಗಿದ ..ದೂರದಲ್ಲಿ ಒಂದು ದೊಡ್ಡ ಮರ.. ಅದಕ್ಕೆ ಒರಗಿಕೊಂಡಂತೆ ಒಂದು ದೊಡ್ಡ ಹೆಬ್ಬಂಡೆ ತರಹ ಕಾಣುತಿತ್ತು. ಹತ್ತಿರದಲ್ಲಿಯೇ ಒಂದು ನೀರಿನ ಒರತೆ ಹರಿಯುವ ಸದ್ದು.. ಕತ್ತಲಲ್ಲಿ ನೆಡೆದು ದಾರಿ ತಪ್ಪಿಸಿಕೊಳ್ಳುವುದಕ್ಕಿಂತ (ದಾರಿ ತಪ್ಪಿಸಿಕೊಳ್ಳುವುದೇನೋ... ದಾರಿ ತಪ್ಪಿಸಿಕೊಂಡದ್ದಕ್ಕೆ ಹೀಗಾಗಿರುವುದು ಅಲ್ಲವೇ.. ತನಗೆ ತಾನೇ ನಕ್ಕ) ಇಲ್ಲಿಯೇ ಉಳಿಯುವುದು ಉತ್ತಮ ಎಂದು.. ನಿರ್ಧರಿಸಿ.. ತನ್ನ ಬಳಿ ಇದ್ದ ಟೆಂಟ್.. ತೆಗೆದ.. ಜೋಡಿಸಲು ಬರುತ್ತಿರಲಿಲ್ಲ.. ಅದರಲ್ಲಿ ಕೊಟ್ಟಿದ್ದ ವಿವರಗಳ ಮೂಲಕ ಮೆಲ್ಲಗೆ ಒಂದೊಂದಾಗಿ ಜೋಡಿಸ ಹತ್ತಿದ.. ಮೊದಲ ಬಾರಿಗೆ ಮಾಡುತ್ತಿದ್ದರಿಂದ.. ತ್ರಾಸದಾಯಕವಾಯಿತು.. ಸುಮಾರು ಹೊತ್ತುಗಳು ಕಳೆದ ಮೇಲೆ.. ಟೆಂಟ್ ಸಿದ್ಧವಾಯಿತು.. ತನ್ನ ಬ್ಯಾಗ್ ಒಳಗೆ ಹಾಕಿ.. ಹಾಕಿಕೊಂಡಿದ್ದ ಜಾಕೆಟ್, ಹ್ಯಾಂಡ್ ಗ್ಲೋವ್ಸ್.. ಟೋಪಿ, ಶೂಗಳು ಎಲ್ಲವನ್ನು ಕಳಚಿ.. ನಿರಾಳವಾಗಿ ಸುಮ್ಮನೆ ಕೂತ.. ಹೊಟ್ಟೆಗೆ ಸಮಸ್ಯೆ ಇರಲಿಲ್ಲ.. ಬಟ್ಟೆಗಳು ಇದ್ದವು.. ಆದರೆ ಕಾಡಿನಲ್ಲಿ ಒಬ್ಬನೇ ಇರಬೇಕು ಎನ್ನುವ ಭಾವ ಆಗಾಗ ಹೆದರಿಕೆ ತರಿಸುತ್ತಿತ್ತು..

ಚಳಿಗಾಲವಾದ್ದರಿಂದ ಮಳೆಯ ಸಮಸ್ಯೆ ಇರಲಿಲ್ಲ.. ಅಲ್ಲಿಯೇ ಇದ್ದ ಸಣ್ಣ ಪುಟ್ಟ, ಕಟ್ಟಿಗೆ, ಒಣಗಿದ ಎಲೆಗಳು ಇವುಗಳನ್ನು ಒಟ್ಟುಮಾಡಿ.. ಬೆಂಕಿ ಹಚ್ಚಿದ.. ಇತ್ತ ಚಳಿಕಾಯಿಸಿಕೊಳ್ಳಲು ಆಗುತ್ತಿತ್ತು.. ಅತ್ತ ಪ್ರಾಣಿಗಳಿಂದ ರಕ್ಷಣೆಯೂ ಕೂಡ.. ಮೈ ಬೆಚ್ಚಗಾಯಿತು.. ಹಾಗೆ ತರಗೆಲೆಗಳ ಮೇಲೆ ಮೈಯೊಡ್ಡಿ ಮಲಗಿದ.. ಮತ್ತೆ ಗಾಢವಾದ ನಿದ್ದೆ ಆವರಿಸಿತು.. ಬೆಂಕಿ ಉರಿಯುತ್ತಲೇ ಇತ್ತು..ತಲೆ ಮೇಲೆ ಏನೋ ಆಡಿಸಿದಂತ ಆಯಿತು.. ಭುಜವನ್ನು ಮತ್ತೆ ಯಾರೋ ಮುಟ್ಟಿದಂತೆ.. ರೀ ರೀ ಎಂದು ಕೂಗಿದಂತೆ.. ಚಾರಣಕ್ಕೆ ಬರುವ ಮುನ್ನ ಅನೇಕ ಕಾಡಿನ ಕತೆಗಳ ಬ್ಲಾಗ್ ಓದಿದ್ದರಿಂದ.. ದೆವ್ವ.. ಅತೀಂದ್ರಿಯ ಶಕ್ತಿಗಳ ಕೋಟಲೆಗಳು ಇರಬಹುದು ಎನ್ನುವ ಬರಹಗಳು ದಿಗ್ಗನೆ ನೆನಪಿಗೆ ಬಂದವು.. ರಪ್ ಅಂತ ಎದ್ದು ಕೂತ.. ಎದುರಿಗೆ ಒಂದು ಹುಡುಗಿ.. ಆ ಬೆಂಕಿಯ ಬೆಳಕಿನಲ್ಲಿ ಆಕೆಯ ಮುಖ ಸ್ಪಷ್ಟವಾಗಿ ಕಾಣುತ್ತಿತ್ತು.. ಗಾಬರಿಯಿಂದ ತಲೆಯಿಂದ ಕಾಲಿನ ತನಕ ಸುಯ್ ಎಂದು ಭಯದ ಬೆವರು ಹರಿಯಿತು..

"ಯಾರ್ರೀ ನೀವು.. ಇಲ್ಲಿ ಯಾಕೆ.. " ನಾಲಿಗೆಯ ಪಸೆ  ಆರಿತು.. ಸುಮ್ಮನೆ ಅವಳನ್ನೇ ನೋಡುತ್ತಾ ಮತ್ತೆ ಅದೇ ಪ್ರಶ್ನೆ ಕೇಳಲು ಬಾಯಿ ತೆರೆದ. ಭಯದಿಂದ ಮಾತುಗಳು ಹೊರ ಬರಲಿಲ್ಲ..

"ನಾನು ನಂದಿನಿ.. ಚಾರಣಕ್ಕೆ ಬಂದಿದ್ದೆ.. ನನ್ನ ಸ್ನೇಹಿತರ ಗುಂಪಿನಿಂದ ಬೇರೆಯಾಗಿ ಬಿಟ್ಟೆ.. ದೊಡ್ಡ ಗುಂಪು.. ಅವರ ಜೊತೆ ಇದ್ದೀನಿ.. ಇವರ ಜೊತೆ ಇದ್ದೀನಿ ಅಂತ ನನ್ನ ಬಿಟ್ಟು ಹೋಗಿದ್ದಾರೆ.. ದಾರಿ ಗೊತ್ತಿಲ್ಲ... ನಾ ದೆವ್ವ ಅಲ್ಲ ಕಣ್ರೀ.. ಕಷ್ಟ ಪಟ್ಟು ಸಾಗುತ್ತಿದ್ದ ಹಾದಿಯಲ್ಲಿ ನೆಡೆದು ಬರುತ್ತಿದ್ದೆ.. ಸುಟ್ಟ ವಾಸನೆ.. ಬೆಂಕಿಯ ಬೆಳಕು ನನ್ನನ್ನು ಇಲ್ಲಿ ಕರೆ ತಂದಿತು.. ನೀವೇನು ಒಬ್ಬರೇ ಚಾರಣಕ್ಕೆ ಬಂದಿದ್ದೀರಾ.. ಸಕತ್ ಧೈರ್ಯ ಕಣ್ರೀ ನಿಮಗೆ"

ಪೀಠಿಕೆ ಇಲ್ಲದೆ ಸರಳವಾಗಿ ತನ್ನ ಕತೆ ಹೇಳಿಕೊಂಡ ನಂದಿನಿಯ ಬಗ್ಗೆ ನಂಬಿಕೆ ಮೂಡಿತು.. "ಇಲ್ಲ ನಂದಿನಿ.. ನಂದು ಹೆಚ್ಚು ಕಡಿಮೆ ನಿಮ್ಮದೇ ಕತೆ.. ಒಂದು ಸಣ್ಣ ದಾರಿ.. ಮೊದಲು ನಾ ನುಗ್ಗಿದೆ.. ಮಿಕ್ಕವರು.. ಅಭಿ ನೀ ಆ ಕಡೆ ಹೋಗು.. ಮುಂದೆ ಇದೆ ದಾರಿಯಲ್ಲಿ ನಾವು ಸಿಗುತ್ತೇವೆ ಎಂದರು.. ಕಡೆಗೆ ಅವರು ಸಿಗಲೇ ಇಲ್ಲ.. ನಾ ಬೇರೆ ಹಾದಿ ತುಳಿದಿದ್ದೆ.. ಧೈರ್ಯನೂ ಇಲ್ಲ.. ಏನೂ ಅಲ್ಲ.. ತಪ್ಪಿಸ್ಕೊಂಡು ಅಲೆಯುತಿದ್ದೇನೆ ಅಷ್ಟೇ.. "

ಅಲ್ಲಿಯೇ ಇದ್ದ ಎಲೆಗಳನ್ನು ಸರಿಸಿ.. ಕೂರಲು ಬೆಂಕಿಯ ಹತ್ತಿರವೇ ಜಾಗ ಮಾಡಿಕೊಟ್ಟು.. ಇಲ್ಲಿಯೇ ಕೂತುಕೊಳ್ಳಿ ಎಂದು ಕೈ ತೋರಿಸಿದ..


ನಂದಿನಿ ತನ್ನ ಬ್ಯಾಗು.. ಸರಂಜಾಮು ಎಲ್ಲವನ್ನು ಇಳಿಸಿ.. ಸ್ವಲ್ಪ ಹಗುರಾದಳು.. " ಅಭಿ. ತಿನ್ನೋಕೆ ಏನಾದರೂ ಸಿಗುತ್ತಾ.. ಹೊಟ್ಟೆ ತುಂಬಾ ಹಸಿಯುತ್ತ ಇದೆ.. "

ಕೇಳಿದ ತಕ್ಷಣ.. ಟೆಂಟಿನೊಳಗೆ ನುಗ್ಗಿ.. ಒಂದಷ್ಟು ತಿಂಡಿ ತಿನಿಸುಗಳು. ತಂದು.. "ಇಲ್ಲಿಯೇ ಕೂತಿರಿ.. ಇಲ್ಲಿಯೇ ಪಕ್ಕದಲ್ಲಿ ನೀರಿನ ಒರತೆ ಇದೆ.. ನೀರು ತರುವೆ.. ನಿಮ್ಮ ಹತ್ತಿರ ಬಾಟಲ್ ಇದ್ದರೆ ಕೊಡಿ.. ಅದಕ್ಕೂ ತುಂಬಿಸಿಕೊಂಡು ಬರುವೆ.. "

"ಅಭಿ ನಾ ಒಬ್ಬಳೇ ಇಲ್ಲಿ ಇರೋದಾ.. ನಾನು ಬರುತ್ತೇನೆ ಇರಿ" ಎಂದಿದ್ದೆ.. ಅವನು ಕೊಟ್ಟ ಕೋಡುಬಳೆಯನ್ನು ಮುರಿದು.. ಕರಮ್ ಕುರಂ ಎಂದು ತಿನ್ನುತ್ತಾ.. ಅವನ ಹಿಂದೆಯೇ ಹೊರಟಳು..

ಒಂದು ನೂರು ಮೀಟರ್ ದೂರವಷ್ಟೇ.. .. ನೀರು ಕುಡಿದು.. ಬಾಟಲುಗಳಲ್ಲಿ ತುಂಬಿಸಿಕೊಂಡು.. ಇಬ್ಬರೂ ಮತ್ತೆ ಟೆಂಟಿನತ್ತ ಹೆಜ್ಜೆ ಹಾಕಿದರು.. ದಾರಿಯಲ್ಲಿ ತಮ್ಮ ತಮ್ಮ  ಚಾರಣದಲ್ಲಿ ತಪ್ಪಿಸಿಕೊಂಡ ಕತೆಗಳನ್ನು ಹೇಳಿಕೊಂಡು ದಾರಿ ಸಾಗಿಸಿದರು... ಅವರ ಕತೆ ಇಷ್ಟೇ.. ಸ್ನೇಹಿತರ ಜೊತೆಯಲ್ಲಿ ಬಂದಿದ್ದ ದೊಡ್ಡ ಚಾರಣದ ಗುಂಪಿನಲ್ಲಿ .. ಬರು ಬರುತ್ತಾ ಯಾವುದೋ ಒಂದು ಘಟ್ಟದಲ್ಲಿ ಗುಂಪಿನಿಂದ ಬೇರೆಯಾಗಿದ್ದರು..

ನಂದಿನಿ ತಪಕ್ ಅಂತ ಅಭಿಯ ಮೇಲೆ ಬೀಳುವ ಹಾಗೆ ಆಯ್ತು.. ಒಂದು ಪುಟ್ಟ ಹಳ್ಳದಲ್ಲಿ ಕಾಲಿಟ್ಟರಿಂದ ಕಾಲು ಉಳುಕಿ ಬೀಳುವ ಹಾಗೆ ಆಯ್ತು.. ಕಾಲು ವಿಪರೀತ ನೋಯುತ್ತಿತ್ತು.. ಅಭಿ ಅವಳ ಭುಜ ಹಿಡಿದು.. ಮೆಲ್ಲನೆ ನೆಡೆಸಿಕೊಂಡು ಬಂದ.. "ನಿಧಾನವಾಗಿ ಹೆಜ್ಜೆ ಹಾಕಿ.. ಟೆಂಟಿನಲ್ಲಿ ಮೂವ್ ಇದೆ.. ಸ್ಪ್ರೇ ಮಾಡುವೆ.. "

ಮೆಲ್ಲನೆ ಬಂದು.. ಮೂವ್ ಸ್ಪ್ರೆ ಮಾಡಿ.. ಅವಳಿಗೆ ಸ್ವಲ್ಪ ಸಮಾಧಾನ ಆಗಿದೆ ಎಂದು ಅರಿವಾದ ಮೇಲೆ.. ತಾನು ಆ ಕಡೆ ಕೂತು.. "ಏನ್ರಿ ನಂದಿನಿ.. ನಿಮಗೂ ಧೈರ್ಯ.. ಇಡೀ ದಿನ ಕಾಡಿನಲ್ಲಿ ಒಬ್ಬರೇ ಅಡ್ಡಾಡಿದಿರಲ್ಲ.. ನಿಮ್ಮ ಕತೆ ಏನು.. ಏನು ಮಾಡುತ್ತಿದ್ದೀರಾ.. "

"ಅಭಿ.. ನಾ ಬಹುರಾಷ್ಟ್ರೀಯ ಕಂಪನಿಯಲ್ಲಿ ಅಕೌಂಟ್ಸ್  ಮ್ಯಾನೇಜರ್ ಆಗಿದ್ದೀನಿ.. ಅಪ್ಪ ಅಮ್ಮ ಯಾರೂ ಇಲ್ಲ.. ನಾಲ್ಕು ವರ್ಷಗಳ ಹಿಂದೆ ಆಕ್ಸಿಡೆಂಟಿನಲ್ಲಿ ಹೋಗಿಬಿಟ್ಟರು.. ನಾ ಒಬ್ಬಳೇ ಮಗಳು.. ಮದುವೆಯಾಗಿತ್ತು .. ಎರಡು ವರ್ಷಗಳ ಹಿಂದೆ. ವಿಮಾನ ಅಪಘಾತದಲ್ಲಿ ನನ್ನನ್ನು ಒಂಟಿ ಮಾಡಿಬಿಟ್ಟು ಹೋದರು.. ಈಗ ನಾ ಪಿಜಿಯಲ್ಲಿ ಇದ್ದೀನಿ.. ಕೈತುಂಬಾ ಕೆಲಸ.. ತಲೆ ತುಂಬಾ ಯೋಚನೆಗಳು.. ಅದಕ್ಕೆ ಸ್ವಲ್ಪ ರಿಲಾಕ್ಸ್ ಆಗೋಣ ಅಂತ ನಮ್ಮ ಕಂಪನಿಯ ಚಾರಣದ ಗುಂಪಿನಲ್ಲಿ ನಾ ಸೇರಿಕೊಂಡೆ.. ನಮ್ಮ ಬಂಧುಗಳು ಸಂಪರ್ಕವಿಲ್ಲ.. ಯಾವುದೋ ಕಾರ್ಯಕ್ರಮದಲ್ಲಿ ಹೋದಾಗ ಮಾತಾಡುತ್ತಾರೆ.. ಮಾತಾಡಿಸುತ್ತಾರೆ ಅಷ್ಟೇ.. ಅದು ಬಿಟ್ಟು.. ನಾ ಒಂದು ತರಹ ಒಂಟಿ ಜೀವಿ.. ಸಹೋದ್ಯೋಗಿಗಳು, ಸ್ನೇಹಿತರು ಅಷ್ಟೇ ನನ್ನ ಪ್ರಪಂಚ.. " ಮಂಜಾದ ಕಣ್ಣುಗಳನ್ನು ಒಮ್ಮೆ ಒತ್ತಿಕೊಂಡು.. ಸುಮ್ಮನೆ ಕೂತಳು..

"ಸಾರಿ ನಂದಿನಿ.. ಹಳೆಯದೆಲ್ಲ ನೆನಪು ಮಾಡಿಕೊಳ್ಳುವ ಹಾಗೆ ಮಾಡಿದೆ.. "

"ಇಲ್ಲ ಅಭಿ.. ಮರೆತಿದ್ದರೆ ತಾನೇ ನೆನಪು, ನೋವು ಎಲ್ಲ.. ನನಗೆ ಪ್ರತಿ ಕ್ಷಣವೂ, ಪ್ರತಿ ಘಟನೆಗಳು ಮನದಲ್ಲಿ ಅಚ್ಚು ಹೊತ್ತು ಕೂತಿವೆ.. ಹಾಗಾಗಿ ಅದರ ಬಗ್ಗೆ ಮಾತಾಡಿದಷ್ಟು ಹಗುರಾಗುತ್ತೇನೆ.. "

"ಅದು ಕಣ್ರೀ.. ಸ್ಪೂರ್ತಿಯ ಜೀವನ ಅಂದ್ರೆ.. "

"ನಿಮ್ಮ ಕತೆ ಏನು ಅಭಿ.. "

"ನಿಮ್ಮದಕ್ಕಿಂತ ಭಿನ್ನವೇನಿಲ್ಲ ನಂದು" (ಅರಿವಿಲ್ಲದೆ ನಂದು ಅಂದರೆ ನನ್ನದು, ತನ್ನದು ಎನ್ನುವ ಅರ್ಥದಲ್ಲಿ ಅಭಿ ಹೇಳಿದ)

"ವಾಹ್. ಅಭಿ.. ನನಗೆ ತುಂಬಾ ಹತ್ತಿರದವರು ಮಾತ್ರ ನನ್ನ ಹೆಸರನ್ನು "ನಂದು" ಅಂತ ಕರೆಯೋದು . ತುಂಬಾ ಖುಷಿ ಆಯ್ತು.. ಅಭಿ ಮುಂದೆ ಹೇಳು.."..

ಶುಗರ್ ಕೋಟೆಡ್ ಅನಿಸಿದರೂ.. ನಂದಿನಿಯ ಮಾತುಗಳು.. ಏಕವಚನದ ಸಂಬೋಧನೆ ಅಭಿಯ ಬರಗಾಲದಂತಹ ಬದುಕಲ್ಲಿ ಮಳೆಯ ಸಿಂಚನ ಮೂಡಿದಂತೆ ಆಯ್ತು..

"ಹಾ ನಂದು.. ನನ್ನದು ಕೂಡ ಇದೆ ಕತೆ.. ಆದರೆ ಅಪ್ಪ ಅಮ್ಮ ಅಣ್ಣ ತಮ್ಮ ಎಲ್ಲರೂ ಇದ್ದಾರೆ ತುಂಬು ಕುಟುಂಬ ನನ್ನದು.. ಎಲ್ಲರೂ ಬದುಕಲ್ಲಿ ಸೆಟಲ್ ಆಗಿದ್ದಾರೆ.. ನಾ ಕೂಡ ಬಹುರಾಷ್ಟ್ರೀಯ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದೀನಿ.. ಚಾರಣ ನನಗೆ ಬಲು ಇಷ್ಟ.. ಕಾಲ ಕೂಡಿರಲಿಲ್ಲ.. ನನಗೂ ಮದುವೆಯಾಗಿತ್ತು.. ಆದರೆ ಆ ಹುಡುಗಿ ತಾನು ಮೊದಲು ಪ್ರೀತಿಸುತ್ತಿದ್ದ ಹುಡುಗನ ಜೊತೆಯಲ್ಲಿಯೇ ಹೋಗುತ್ತೇನೆ ಎಂದು ಮದುವೆಯ ಮೊದಲ ರಾತ್ರಿಯೇ ಹೇಳಿದ್ದರಿಂದ.. ಮರು ಮಾತಾಡದೆ ಅವಳ ಮನೆಯವರ ಜೊತೆಯಲ್ಲಿ ಮಾತಾಡಿ ಸುಮಾರು ಒಂದು ವರ್ಷವಾದ ಮೇಲೆ ಡೈವೋರ್ಸ್ ತೆಗೆದುಕೊಂಡು ಅವಳನ್ನು ಕಳಿಸಿದೆ.. ಈಗ ಅವಳ ಪ್ರಿಯಕರನ ಜೊತೆಯಲ್ಲಿ ಮದುವೆಯಾಗಿ.. ಒಂದು ಮಗುವಾಗಿ ಆರಾಮಾಗಿದ್ದಾಳೆ.. ತಿಂಗಳಿಗೊಮ್ಮೆ ಸಿಗುತ್ತೇವೆ.. ಅವಳ ಮನೆಗೆ ನಾ ಹೋಗಿ ಬರುತ್ತೇನೆ.. ಅವಳ ಗಂಡನ ಕಂಪನಿಯ ಚಾರಣದ ಗುಂಪಿಗೆ ನಾ ಸೇರಿಕೊಂಡದ್ದು.. ಅವಳು ಬಂದಿದ್ದಾಳೆ.. ಯಾವುದೇ ಕಲ್ಮಶವಿಲ್ಲದೆ ನಾವು ಸ್ನೇಹಿತರಾಗಿದ್ದೇವೆ.. ಸಿನಿಮಾ ಕತೆ ಇದ್ದ ಹಾಗೆ ಇದೆ ಅಲ್ವ.. Live and let live ಪಾಲಿಸಿ ನನ್ನದು.. ಅವಳು ಖುಷಿಯಾಗಿದ್ದಾಳೆ ."


ನಂದಿನಿ ಅಭಿಯ ಮುಖವನ್ನೊಮ್ಮೆ ನೋಡಿದಳು.. ಆ ಬೆಂಕಿಯ ಬೆಳಕಿನಲ್ಲಿ ಅಭಿ ಯೋಗಿಯ ಹಾಗೆ ಕಂಡ.. ಇಷ್ಟು ನಿರ್ಲಿಪ್ತತೆ.. ಸಾಧ್ಯವೇ.. !

ಹೀಗೆ ಸುಮಾರು ಹೊತ್ತು ಮಾತಾಡುತ್ತಲೇ ಕೂತಿದ್ದರು.. ಬ್ಯಾಗಿನಲ್ಲಿದ್ದ ಒಂದೊಂದೇ ತಿಂಡಿ ತಿನಿಸುಗಳು ಹೊಟ್ಟೆಯೊಳಗೆ ಸೇರುತ್ತಿದ್ದವು.. ಯಥೇಚ್ಛವಾಗಿ ನೀರು ಕುಡಿದರು.. ನಂದಿನಿಯೂ ಕೂಡ ಸಿಹಿ, ಖಾರ ಅಂತ ನಾನಾ ಪದಾರ್ಥಗಳನ್ನು ತಂದಿದ್ದಳು, ಆದರೆ ತಿಂಡಿ ಇದೆ ಅನ್ನೋದೇ ಮರೆತು ಹೋಗಿದ್ದಳು.. .. ಇಬ್ಬರ ಬ್ಯಾಗು ಹಗುರಾಗುತ್ತಿದ್ದವು.. ಹೊಟ್ಟೆ ಭಾರವಾಗುತ್ತಿದ್ದವು..ಮಾತಾಡುತ್ತಲೇ ಇದ್ದರಿಂದ ಅವರಿಬ್ಬರ ಮನಗಳು ಹತ್ತಿರವಾಗಿ ಹಗುರಾಗುತ್ತಿದ್ದವು.. 

"ನಂದು.. ನೀ ಟೆಂಟಿನೊಳಗೆ ಮಲಗು.. ನಾ ಇಲ್ಲಿಯೇ ಬೆಂಕಿಯ ಬಳಿ ಸ್ಲೀಪಿಂಗ್ ಬ್ಯಾಗಿನಲ್ಲಿ ಮಲಗುವೆ.. ಬೆಂಕಿ ಉರಿಯುತ್ತಲೇ ಇದ್ದರೇ ಒಳ್ಳೆಯದು.. ಪ್ರಾಣಿಗಳಿಂದ ಮತ್ತು ಚಳಿಯಿಂದ ರಕ್ಷಣೆ ಸಿಗುತ್ತದೆ.. "

ಆ ಟೆಂಟ್ ಇಬ್ಬರಿಗೆ ಸಾಕಾಗುವಷ್ಟಿತ್ತು.. ಆದರೆ ಇಬ್ಬರ ಬ್ಯಾಗು, ಶೂ, ಜಾಕೆಟ್ ಅದು ಇದು ಅಂತ ತುಂಬಿ ಹೋಗಿತ್ತು.. ಜೊತೆಯಲ್ಲಿ ಹುಡುಗಿ ಇದ್ದಾಗ ಸಭ್ಯತೆ ದೃಷ್ಟಿಯಿಂದ ಹೊರಗೆ ಮಲಗುವುದು ಉತ್ತಮ ಜೊತೆಯಲ್ಲಿ ಬೆಂಕಿಯನ್ನು ಆರದೆ ಇರುವಂತೆ ನೋಡಿಕೊಳ್ಳಬೇಕಿತ್ತು. ಹಾಗಾಗಿ ಚರ್ಚೆಗೆ ಅವಕಾಶವಿಲ್ಲದಂತೆ.. ಅಭಿ ಹೊರಗೆ ಮಲಗಿದ.. ಬೇರೆ ದಾರಿಯಿಲ್ಲದೆ ನಂದಿನಿ ಟೆಂಟ್ ಒಳಗೆ ಮಲಗಿದಳು..

ಬೆಳಿಗ್ಗೆ ಚೀವ್ ಚೀವ್ ಎನ್ನುವ ಸದ್ದು.. ಸೂರ್ಯ ನಾ ಬಂದೆ ಎನ್ನುವ ಸೂಚನೆ.. ಅಭಿ.. ನೀರಿನ ಬಳಿ  ಹೋಗಿ ಮತ್ತಷ್ಟು ನೀರು ತುಂಬಿಕೊಂಡು ಬಂದು.. "ನಂದು.. ನಂದು.. ಏಳಪ್ಪ.. ಬೆಳಗಾಯಿತು.. ಗುಡ್ ಮಾರ್ನಿಂಗ್ ನಂದು"

ಅವನ ಸಿಹಿ ದನಿಯನ್ನ ಕೇಳಿ ಕಣ್ಣು ಬಿಟ್ಟು .. "ಗುಡ್ ಮಾರ್ನಿಂಗ್ ಅಭಿ".. ಎಂದು ಕಣ್ಣುಜ್ಜಿಕೊಂಡು ಟೆಂಟಿನಿಂದ ಹೊರಗೆ ಬಂದಳು..

ಕಾಡಿನ ಸೌಂದರ್ಯ.. ಮನೆಸೆಳೆಯುತ್ತಿತ್ತು.. "ನಂದು ನೀರನ್ನು ಹಿಡಿದು ತಂದಿದ್ದೇನೆ.. ಇಲ್ಲಿಯೇ ಮುಖ ತೊಳೆಯುತ್ತೀಯಾ.. ಅಥವಾ ನೀರಿನತ್ತರ ಹೋಗಬೇಕಾ.. "

"ಅಭಿ.. ನೀರಿನತ್ತರ ಹೋಗೋಣ.. ಒಂದು ವಾಕ್ ಆಗುತ್ತೆ. ಫ್ರೆಶ್ ಆಗುತ್ತೆ.. "

ಇಬ್ಬರೂ ಬರಿಗಾಲಿನಲ್ಲಿ ನೀರಿನತ್ತ ಹೆಜ್ಜೆ ಹಾಕಿದರು.. ನೀರಿನ ಹತ್ತಿರ ಕೂತು ಕೈಕಾಲು ಮುಖ ತೊಳೆದು ಸುಮಾರು ಹೊತ್ತು ಮಾತಾಡುತ್ತಾ ಕೂತರು.. ಅವರ ಬದುಕಿನ ಎಲ್ಲಾ ಮಗ್ಗಲುಗಳು ಮಾತಿನಲ್ಲಿ ಹೊರಬಂದವು.. ಒಬ್ಬರ ಮನೆಯ ಕತೆ ಇನ್ನೊಬ್ಬರಿಗೆ ಅರಿವಾಯಿತು.. ಇಬ್ಬರ ಬದುಕಿನಲ್ಲಿ ವಿಧಿಯು ಆಟವಾಡಿದ್ದರಿಂದ .. ಕಷ್ಟ ನಷ್ಟಗಳ ಪದರ ದಾಟಿ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಹಾದಿಯಲ್ಲಿ ಇದ್ದರು.. ಏನೋ ಒಂದು ರೀತಿಯ ಆಹ್ಲಾದಕರ ಬಂಧ ಅವರಿಬ್ಬರನ್ನು ಬೆಸೆಯಲು ಶುರು ಮಾಡಿತ್ತು.. ಅವರಿಬ್ಬರ ನಡುವೆ ಮುಚ್ಚಿಡಬಹುದಾದ ಯಾವ ವಿಷಯಗಳು ಇರಲೇ ಇಲ್ಲ.. ಅಷ್ಟು ಹೊತ್ತು ಮಾತಾಡುತ್ತಲೇ ಇದ್ದರು.. .. ವಾಚ್ ನೋಡಿಕೊಂಡಾಗ ಆಗಲೇ ಹನ್ನೆರಡು ಘಂಟೆಯಾಗಿತ್ತು.. ಆರುಘಂಟೆಗಳು ಮಿಗಿಲಾಗಿ ಮಾತಾಡುತ್ತ ತಮ್ಮ ಬದುಕಿನ ಪ್ರತಿ ಪುಟಗಳನ್ನೂ ತೆಗೆದಿಟ್ಟುಕೊಂಡಿದ್ದರು.. 

"ಹೋಗೋಣ ನಂದು"

"ಸರಿ ಅಭಿ"

ಟೆಂಟಿನ ಕಡೆಗೆ ಹೆಜ್ಜೆ ಹಾಕಿದರು.. ಬರುವಾಗ.. ಹಳ್ಳದಲ್ಲಿ ಕಾಲಿಟ್ಟು ಎಡವಿ ಬೀಳುವ ಹಾಗಾಯಿತು..  ನಂದಿನಿಯ ಕೈಯನ್ನು ಬಲವಾಗಿ ಹಿಡಿದು ಅವಳು ಬೀಳದಂತೆ ತಡೆ ಹಿಡಿದ..

"ಅಭಿ ನನ್ನ ಕೈಯನ್ನು ಹೀಗೆ ಹಿಡಿದುಕೊಳ್ಳಲು ಸಾಧ್ಯವೇ.. "

ಅವಳ ಕಣ್ಣಿನಲ್ಲಿದ್ದ ಹೊಳಪು ಕಂಡು ಅಭಿ ಮಾತಾಡಲಿಲ್ಲ... "ನಂದು ನಿನ್ನ ಇಷ್ಟ ನನ್ನ ಇಷ್ಟ... ಆದರೆ..... "

"ಏನು ಅಭಿ .. ಆದರೆ.. "

"ಮೊದಲು ಈ ಕಾಡಿನಿಂದ ಹೊರಗೆ ಹೋಗಲು ದಾರಿ ಸಿಕ್ಕಿದರೆ.. ನಮ್ಮಿಬ್ಬರ ಬಾಳಿಗೆ .ದಾರಿ ಸಿಕ್ಕೇ
ಸಿಗುತ್ತದೆ.. "

ಇಬ್ಬರೂ ಜೋರಾಗಿ ನಕ್ಕರು.. ನಂದಿನಿ ಅಭಿಯ ಹೆಗಲಿಗೆ ಒರಗಿದಳು.. ಅವಳ ಹೆಗಲ ಸುತ್ತಾ ಕೈ ಬಳಸಿ.. ಅವಳ ತಲೆಗೂದಲನ್ನು ನೇವರಿಸುತ್ತಾ

"ವೆಲ್ಕಮ್ ಟು ಮೈ ವರ್ಲ್ಡ್ ನಂದು"