Thursday, April 24, 2014

ಆಹಾ ನನ್ನ ಜನ್ಮ ಪಾವನವಾಯಿತು!!!

ನಿನ್ನೆ ರಾತ್ರಿ ತಲೆ ಓಡುತ್ತಿರಲಿಲ್ಲ..ಸಾಮಾನ್ಯ ನನಗೆ ಹಾಗೆ ಆಗುವುದಿಲ್ಲ.. ಏನಾದರು ಬರೆಯಬೇಕು ಅಂದರೆ ಅಷ್ಟೇ ಬರುತ್ತದೆ..  

ಯಾಕೋ ಅಣ್ಣಾವ್ರು ಮನದಾಳಕ್ಕೆ ಬರಲು ಸತ್ಯಾಗ್ರಹ ಮಾಡುತ್ತಿದ್ದರು ಅನ್ನಿಸುತ್ತಿತು.. 

ಬೆಳಿಗ್ಗೆ ಇದ್ದೆ.. ಬರೆಯೋಕೆ ಶುರು ಮಾಡಿದೆ.. ಮುಗಿಯಿತು.. ಆಫೀಸ್ ಗೆ ಹೋದೆ.. ಕೆಲಸ ಕಾಯಕ ನಡೆಯುತ್ತಿತು.. 

ವಾಪಸ್ ಬರುವಾಗ.. ಯಾಕೋ ಅಣ್ಣಾವ್ರ ದರ್ಶನ ಮಾಡೋಣ ಅನ್ನಿಸಿತು... ಸರಿ ಕಾರನ್ನು ನಿಲ್ಲಿಸಿ ಸೀದಾ ಹೋದೆ.. 

ಹೆಜ್ಜೆ ಇಟ್ಟೆ.. 

"ಈ ನೋಡೋ ಇವನೇ ಕಣೋ.. ಚಿತ್ರಗಳನ್ನು ಹಾಕಿ ಲೇಖನ ಮಾಡಿದ್ದು.. ಇವನೇ ಕಣೋ ಶ್ರೀಕಾಂತ್ ಅಂದ್ರೆ" ಅಂತ ಯಾರೋ ಮಾತಾಡಿದ್ದು ಕೇಳಿಸಿತು.. 

ತಿರುಗಿ ನೋಡಿದೆ ಯಾರೂ ಕಾಣಲಿಲ್ಲ.. ಮೆಲ್ಲಗೆ ಕಣ್ಣರಳಿಸಿ ನೋಡಿದೆ.. ಕಿವಿಯಾನಿಸಿದೆ.. 

ಮೆಲ್ಲಗೆ ಅಣ್ಣಾವ್ರ ಅಕ್ಕ ಪಕ್ಕದಲ್ಲಿ ನಿಂತ ಶಿಲೆಗಳ ಮಧ್ಯೆದಲ್ಲಿ ಅರಳಿ ನಿಂತಿದ್ದ ಅಣ್ಣಾವ್ರ ಚಿತ್ರದ ಪಾತ್ರಗಳು ಮಾತಾಡುತ್ತಿರುವಂತೆ ಭಾಸವಾಯಿತು.. 

ನಿಧಾನವಾಗಿ ಅಣ್ಣಾವ್ರನ್ನು ನೋಡುತ್ತಲೇ ಮುಂದಡಿ ಇಟ್ಟೆ.. ಮಾತುಗಳು ಹೆಚ್ಚಾದವು.. ಅಲ್ಲಿದ್ದ ಎಲ್ಲಾ ಪಾತ್ರಗಳು ನನ್ನ ಕಂಡು ಸಂತಸದಿಂದ ಹರಸುತ್ತಿರುವಂತೆ  ಭಾಸವಾಯಿತು.. 

ಅಯ್ಯೋ ಇದೇನು ಕನಸೋ ನನಸೋ ಎಂದು ನನ್ನ ನಾನೇ ಚಿವುಟಿಕೊಂಡೆ.. 

"ಇದುವರೆವಿಗೂ ಶಿಲೆಯಾಗಿದ್ದ ನಮ್ಮನ್ನು ಅಲ್ಲಿಂದ ಎಬ್ಬಿಸಿ ಮಾತಾಡುವಂತೆ ಮಾಡಿದ್ದು ನೀನೆ ಕಾಂತ ಶ್ರೀಕಾಂತ..." 

ಒಂದೊಂದು ಪಾತ್ರಧಾರಿಯು ಹರಸುತ್ತಿದ್ದವು ಮಾತಾಡಿಸುತ್ತಿದ್ದವು.. 

ಸಂತಸಕ್ಕೆ ಎಣೆಯಿಲ್ಲ... 

ಹಾಗೆಯೇ ಸಾಗುತ್ತಾ ಭಕ್ತ ಕುಂಬಾರದ ಚಿತ್ರದ ಹತ್ತಿರ ಬಂದೆ..ವಿಠಲ ವಿಠಲ ಪಾಂಡುರಂಗ ಅನ್ನದೆ ಕಾಂತ ಕಾಂತ ಶ್ರೀಕಾಂತ ಎಂದ ಹಾಗೆ ಭಾಸವಾಯಿತು.. ಮನದಲ್ಲೇ ವಂದಿಸಿದೆ.. 

ನಾದಮಯ ಹಾಡಿನ ಚಿತ್ರದಲ್ಲಿ ಅಣ್ಣಾವ್ರು ತಾಳ ಮುದ್ರೆಯಿಂದ ಹೊರಬಂದು.. ಸೂಪರ್ ಅನ್ನುವ ಚಿನ್ಹೆಗೆ ತಮ್ಮಬೆರಳುಗಳನ್ನು ಮಡಚಿದರು.. ತುಂಬಾ ಚೆನ್ನಾಗಿದೆ ಕಾಂತ ಎನ್ನುವಂತೆ ಅರಿವಾಯಿತು., 

ಶಬ್ಧವೇದಿ ಚಿತ್ರದಲ್ಲಿ ಧೀರರ ಹಾಗೆ ಜೀಪಿನ ಜೊತೆಯಲ್ಲಿ ಸೊಂಟದ ಮೇಲೆ ಕೈಯನ್ನು ಇಟ್ಟುಕೊಂಡು.. ಗಂಭೀರವಾಗಿ ಅಂಗ್ಲ ಭಾಷೆಯಲ್ಲಿ 

"sri .. you gave a great article...great job...come back next time.. okey"  ಅಣ್ಣಾವ್ರ ಗಂಭೀರ ಕಂಠ ಉಲಿಯಿತು.. 

ಆನಂದಭಾಷ್ಪ..  ಆನಂದಭಾಷ್ಪ.. ಆನಂದಭಾಷ್ಪ.. ಆನಂದಭಾಷ್ಪ.. 

ತಡೆಯಲಾಗಲಿಲ್ಲ.. ಶಿರಬಾಗಿ ನಮಿಸಿ ಹೊರಬಂದೆ.. 

ಇಂದು ವಿಶೇಷ ದಿನ.. ಯಾಕೆ ಅಂದ್ರೆ ತುಂಬಾ ಸಲೀಸಾಗಿ ಬರೆದ ಲೇಖನ ಓದುಗರನ್ನು ಮುಟ್ಟಿದ್ದೆ ಅಲ್ಲದೆ ನನಗೆ ಒಂದು ಭಿನ್ನ ಅನುಭವ ಕೊಟ್ಟಿತು.. 

ಜೊತೆಯಲ್ಲಿ ಕೃಷ್ಣಮೂರ್ತಿ ಸರ್ ಕೊಟ್ಟ ತಾವೇ ರಚಿಸಿದ ಅಣ್ಣಾವ್ರ ರೇಖಾ ಚಿತ್ರ.. 


ಡಾ . ಕೃಷ್ಣ ಮೂರ್ತಿ ಸರ್ ರಚಿಸಿದ ಡಾ. ರಾಜ್ ಚಿತ್ರ 
ಶ್ರೀಯುತ ವೆಂಕಟೇಶ್ ಮೂರ್ತಿ ಸರ್ ಕೊಟ್ಟ ಅಣ್ಣಾವ್ರ ಹಸ್ತಾಕ್ಷರದ ಪ್ರತಿ... 

ಅಣ್ಣಾವ್ರ ಮುದ್ದಾದ ಬರಹ.. ಶ್ರೀ ವೆಂಕಟೇಶ್ ಮೂರ್ತಿ ಕೊಡುಗೆ

ಜೊತೆಯಲ್ಲಿ ಅಣ್ಣಾವ್ರ ಪಾತ್ರಗಳು ನನ್ನೊಡನೆ ಮಾತಾಡಿದ ಒಂದು ಅನುಭವ.. 

ಅಣ್ಣಾವ್ರ ಪಾತ್ರಗಳೊಡನೆ ಒಂದು ಕ್ಷಣ

ಅಣ್ಣಾವ್ರೆ ಇದುವರೆವಿಗೂ ನಿಮ್ಮ ಪುಣ್ಯ ಭೂಮಿಯ ಮುಂದೆ ಹಾದು ಹೋಗುವಾಗ ಅರಿವಿಲ್ಲದೆ ನನ್ನ ಕಾರಿನಲ್ಲಿ ನಿಮ್ಮ ಹಾಡುಗಳೇ ಬರುತ್ತಿದ್ದವು.. ಇಂದೂ ನೀವೇ ನನ್ನೊಡನೆ ಮಾತಾಡಲು ಬಂದಿದ್ದೀರಿ.. 


ನನಗೆ ಉತ್ಸಾಹ ಕೊಡುವ ತಾಣ.. ಇಂದು ಎಂದಿನಂತೆ ಅಲ್ಲ ತುಂಬಾ ತುಂಬಾ ವಿಶೇಷ

ನಿಮ್ಮ ಶೈಲಿಯಲ್ಲಿ ... "ಆಹಾ ನನ್ನ ಜನ್ಮ ಪಾವನವಾಯಿತು.. "


ಧನ್ಯೋಸ್ಮಿ ಅಣ್ಣಾವ್ರಿಗೆ.. !!! 

Tuesday, April 8, 2014

"ಸವಿ" ನೆನಪುಗಳು ಬೇಕು "ಸವಿ"ಯಲಿ ಬದುಕು

ನನಗೆ ಮತ್ತು ರಾಜನಿಗೆ ತುಂಬಾ ಇಷ್ಟವಾದ ಪುಟ್ಟಣ್ಣ ಅವರ ಸಿನಿಮಾ ನಾಗರಹಾವು.. ಯಾಕೋ ಗೊತ್ತಿಲ್ಲ ಆ ಸಿನಿಮಾದಲ್ಲಿ ಶಿವರಾಂ ಪಾತ್ರ ಪ್ರತಿ ಸಂಭಾಷಣೆಗೂ ಸ್ಪೆಷಾಲಿಟಿ ಅಂತ ಸೇರಿಸ್ತಾ ಇರ್ತಾರೆ..

ಆ ಸಿನಿಮಾ ಎಷ್ಟು ಬಾರಿ ಬಂದರೂ ಕೆಲವು ದೃಶ್ಯಗಳಿಗಾಗಿ ಪದೇ ಪದೇ ನೋಡುತ್ತಿರುತ್ತೇನೆ.. ಒಂದು ರಾಜನ ನೆನಪಲ್ಲಿ.. ಇನ್ನೊಂದು ಪುಟ್ಟಣ್ಣ ಅವರ ಚಿತ್ರಗಳ ಗುಂಗಿನಲ್ಲಿ... 

ಅರೆ ಇದೇನೂ.. ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯುತ್ತಿದೆ ಅಂದ್ರಾ.. ಹಾಗೇನು ಇಲ್ಲ 

ನಮ್ಮದು ಒಂಥಾರ ಸ್ಪೆಷಾಲಿಟಿ.. 

ಎಂಟರ ನಂಟು ಬಿಡಿಸಲಾರದ ಗಂಟು ನಂಟು ಅನ್ನುತ್ತಾರೆ.. ನನ್ನ ಜೀವನದಲ್ಲಿ ಎಂಟು ಹೇಗೋ ಬಂದು ಆಟಕಾಯಿಸಿಕೊಳ್ಳುತ್ತದೆ.. 

ಹಿರಿಯರೆಲ್ಲ ಸಮಯ, ದಿನಾಂಕ ಗುರುತು ಮಾಡುತ್ತಿದ್ದರು. ನಾನು ಲೆಕ್ಕ ಪತ್ರದ ವಿಭಾಗದ ಕೆಲಸವಾಗಿದ್ದರಿಂದ ಮಾರ್ಚ್ ದಿನಾಂಕಗಳನ್ನು ಸಾರಾ ಸಗಟು ನಿರಾಕರಿಸಿ ಬಿಟ್ಟೆ.. ಜೂನ್ ಅಂದ್ರು...  ಅಲ್ಲಿ ತನಕ ಕಾಯುವ ತಾಳ್ಮೆ ಇರಲಿಲ್ಲ.. )..

ಏಪ್ರಿಲ್ ಅಂದ್ರೂ ಮನಸ್ಸು ಹಾರಾಡುತ್ತಿತ್ತು.. ದಿನಾಂಕ ಅಂದೇ... ಎಂಟು ಅಂದ್ರು.. ಹಿಡಿದದ್ದೇ ಗಬಕ್ ಅಂತ.. 

ಎಂಟು ಓಕೆ ಓಕೆ.. ಗೊತ್ತು ಮಾಡಿಬಿಡಿ ಅಂದೇ..  :-)

ಹೀಗೆ ನನ್ನ ಜೀವನದಲ್ಲಿನ ಎಂಟು ಅಂಕೆಯ ಬಗ್ಗೆ ಬರೆಯುತ್ತಾ ಹೋದರೆ.. ಬಿಡಿ.. ನಿಮಗೆ ತಲೆ ಬಿಸಿ ಬರುತ್ತದೆ.. ಈಗ ವಿಷಯಕ್ಕೆ ಬರೋಣ.. 

ಏಪ್ರಿಲ್ ಏಳಕ್ಕೆ ಛತ್ರಕ್ಕೆ ಹೋದೆವು.. ಬೇರೆಯವರ ಮದುವೆಗೆ ಓಡಾಡಿ.. ಅಣ್ಣಾವ್ರ "ಅಲ್ಲಿ ಇಲ್ಲಿ ನೋಡುವೆ ಏಕೆ" ಅನ್ನುತ್ತಾ "ನಿನ್ನ ಕಣ್ಣ ನೋಟದಲ್ಲಿ ನೂರು ಆಸೆ ಕಂಡೆನು" ಅಂತ ಬಂದ, ಕಂಡವರನ್ನೆಲ್ಲ ಕಣ್ಣಲ್ಲೇ ನೋಡುತ್ತಾ ಖುಷಿಸುವ ಮನ ನಮ್ಮ ಮದುವೆಯಲ್ಲಿ ಇರೋಲ್ಲ.. ಗೂಬೆಯ ತರಹ ಹಸೆ ಮಣೆಯ ಮೇಲೆ ಕೂತೆ.. ಛತ್ರದಲ್ಲಿದ್ದ ನೂರಾರು ಕಣ್ಣುಗಳು ನನ್ನ ಕ್ಷ ಕಿರಣಗಳಿಂದ ಅಳೆಯುತ್ತಿದವು.. 

ಕೆಲವರು ಅಯ್ಯೋ ಕಪ್ಪು ಬಿಳುಪು ಟಿ ವಿ ಅಂದರೆ.... ಇನ್ನು ಕೆಲವರು ನರಸಿಂಹರಾಜು ಎಲ್ಲಿ ಅಂತ ಕೇಳೋದೇ ಬೇಡ.. ಮಹಾಲಕ್ಷ್ಮಿ ಆಂಜನೇಯನ  ದೇವಸ್ಥಾನಕ್ಕೆ ಹೋಗೋದೇ ಬೇಡ.. ಹೀಗೆ ರಾಕೆಟ್ಗಳು ಹಾರುತ್ತಿದ್ದವು.. ಸ್ವಲ್ಪ ಸ್ವಲ್ಪ ನಮ್ಮ ಕಿವಿಗೂ ಬೀಳುತ್ತಿದ್ದವು.. 

ನನ್ನ ಸಿದ್ದಾಂತ ಒಂದೇ ಜೀವನದಲ್ಲಿ ಪುರುಸೊತ್ತಾಗಿದ್ದಾಗ ಈ ಮದುವೆ ಕಾರ್ಯ ಆಗಿಬಿಡಬೇಕು.... :-)  ಯಾಕೆ ಅಂದ್ರೆ ಮದುವೆ ಎನ್ನುವ ಕೆಲಸ ಮುಂದೆ ಹಾಕಿದಷ್ಟು ಸಮಸ್ಯೆಯನ್ನು ಹಿಂದಕ್ಕೆ ಎಳೆದುಕೊಂಡು ಬರುತ್ತಿರುತ್ತೇವೆ .. ಹೆಂಗೆ ನನ್ನ,,,,,,,, :-)

ಸರಿ ಭಾನುವಾರ ವ(ವಾನ)ರ ಪೂಜೆ ಆಯಿತು.. ಬೆಳಿಗ್ಗೆ ಸೋಮವಾರ ಧಾರೆ.. ತಲೆಗೆ ಬಿಗಿಗಿದ್ದ ಪೇಟ ತಲೆ ನೋವು ಕೊಡುತ್ತಿತ್ತು.. ಬೆಳಿಗ್ಗೆ ಕಾಫಿ ಸರಿಯಾಗಿ ಬಿದ್ದಿರಲಿಲ್ಲ.. ತಿಂಡಿ ಸರಿಯಾಗಿ ತಿಂದಿರಲಿಲ್ಲ (ಹೆಂಗೆ ತಿನ್ನೋಕೆ ಆಗುತ್ತೆ ನೀವೇ ಹೇಳಿ).. 

ಮಧ್ಯಾನ್ಹ ಆದರೂ ಶಾಸ್ತ್ರಗಳು ಮುಕ್ತಾಯ ಹಂತಕ್ಕೂ ಬಂದಿರಲಿಲ್ಲ.. ಭೂಮ ಸಿದ್ಧವಾಯಿತು.. ಆರು ಬಾಲಿನಲ್ಲಿ ಆರು ರನ್ ಬೇಕಾದರೆ ಇಡಿ ಕ್ರೀಡಾಂಗಣದಲ್ಲಿ ಎಲ್ಲರ ಕಣ್ಣುಗಳು ಪಿಚ್ ಮೇಲೆ ಇರುತ್ತದೆ ಅಲ್ಲವೇ.. ಹಾಗೆ ಭೂಮದೂಟದಲ್ಲಿ ನಮ್ಮ ಸುತ್ತಾ ಸುಮಾರು ಐವತ್ತು ಅರವತ್ತು ಮಂದಿ.. ವೀ ವಾಂಟ್ ಫೋರ್ .. ವೀ ವಾಂಟ್ ಸಿಕ್ಸರ್ ಅನ್ನುವ ಹಾಗೆ.. ಅದು ತಿನ್ಸು ಇದು ತಿನ್ಸು ಅಂಥಾ ಬೊಬ್ಬೆಇಡುತ್ತಿದ್ದರು .. 

ನನಗೆ ಬಿಟ್ಟಿದ್ದರೆ ಎಲ್ಲರಿಗೂ ಸರಿಯಾಗಿ ತಿನ್ನಿಸುವ ಕೋಪ ಇತ್ತು.. ಮೊದಲೇ ಹೊಟ್ಟೆ ಹಸಿವು(?).. ಜೊತೆಯಲ್ಲಿ ಬೆಳಿಗ್ಗೆ ಇಂದ.. ನನ್ನ ತಲೆಗಾಗದ ಪೇಟವನ್ನು ಬಲವಂತವಾಗಿ ಹಾಕಿ ತಲೆ ಮೇಲೆ ಬೇರೆ ಒಂದು ಬಿಟ್ಟಿದ್ದರು ಸರಿಯಾಗಿ ಪೇಟ ಕೂರಲೆಂದು.. ಅಸಾಧ್ಯ ತಲೆನೋವು.. ಹೊಟ್ಟೆ ಹಸಿವು.. ಹೋಮದ ಹೊಗೆ.. ನೂರಾರು ಕಣ್ಣುಗಳು ಬಿದ್ದು ದೃಷ್ಟಿಯಾಗಿದ್ದು (ಕಾಗೆಗೆ ದೃಷ್ಟಿಯೇ).. ಬಿಟ್ಟರೆ ಛತ್ರದಿಂದ ಓಡಿ ಹೋಗುವ ಆಸೆ.. 

ಹಾಗೂ ಹೀಗೂ ಭೂಮ ಮುಗಿಯಿತು.. ನಾನು ಮೊದಲು ಹೊಟ್ಟೆ ತುಂಬಾ ಊಟ ಮಾಡಿದ ನಂತರವೇ.. ಅಲ್ಲಿ ನೆರೆದಿದ್ದ ಅಭಿಮಾನಿ ದೇವರುಗಳ ಆಸೆ ಇಡೇರಿಸಿದ್ದು.. 

ಸರಿ ಸಂಜೆ ಆರತಕ್ಷತೆ... ಬೆಳಿಗ್ಗೆಯಿಂದ ಕೂತು ಕೂತು ಕಾಲುಗಳು ಬಾತುಕೊಂಡಿದ್ದರೆ .. ಸಂಜೆ ನಿಂತು ನಿಂತು.. ಕಾಲು ನೋಯುತ್ತಿತ್ತು.. ರಾತ್ರಿ ಹತ್ತೂವರೆ ಹನ್ನೊಂದು ಘಂಟೆಯ ತನಕ ನಡೆದ ಈ ಕಾರ್ಯಕ್ರಮ.. ಕಡೆಯಲ್ಲಿ ಸುಮಾರು ಹನ್ನೊಂದು ಘಂಟೆಗೆ.. ಛಾಯಾಚಿತ್ರಕಾರ.. (ಬಹುಷಃ ಹಿಂದಿನ ಜನ್ಮದಲ್ಲಿ ಅವನನ್ನು ಗೋಳಾಡಿಸಿದ್ದೆ ಅನ್ನಿಸುತ್ತೆ).. ಸರ್ ಸ್ವಲ್ಪ ನಕ್ಕು ಬಿಡಿ.. ಸಾರ್ ಅಷ್ಟೊಂದು ಹಲ್ಲು ಬೇಡ ಒಂದೆರಡು ಹಲ್ಲುಸಾಕು .. ಮೇಡಂ ನೀವು ಸರ್ ಭುಜದ ಮೇಲೆ ಕೈ ಹಾಕಿ.. ಹಾಗೆ .. ಹಾಗೆ ಇರೀ.. ನನಗೆ ಒಳಗೆ ಜ್ವಾಲಮುಖಿ.. ಆದ್ರೆ ಮುಖ ಮಾತ್ರ ಚಂದ್ರ(ಕಾಗೆ)ಮುಖಿ ಮಾಡಿಕೊಂಡು.. ಕೆಟ್ಟ ಕೆಟ್ಟದಾಗಿ ನಗುತ್ತಾ ಚಿತ್ರಗಳ ಮೆರವಣಿಗೆ ಮುಗಿಯಿತು.. 

"ಸಾರ್.. ವಿವಾಹ ಜೀವನ ಆನಂದಮಯವಾಗಿರಲಿ..ನಾನು ಬರುತ್ತೇನೆ ಸರ್"  ಅಂತ ಫೋಟೋಗ್ರಾಫರ್ ಹೇಳಿದಾಗ ನಾನು 

"ಗುರುಗಳೇ.. ನಿನ್ನೆಯಿಂದ ಗೋಳು ಹುಯ್ದು ಕೊಂಡಿದ್ದೀರ.. ಕೊಡಿ ಕ್ಯಾಮೆರ.. ನಾನು ನಿಮ್ಮ ಕೆಲವು ಫೋಟೋ ತೆಗೀತೀನಿ.. ಹಲ್ಲು ಬಿಡಿ.. ಅಷ್ಟೇ ಸಾಕು.. ಎರಡು ಹಲ್ಲು.. ಕೈ ಮೇಲೆ ಎತ್ತಿ  ಅಂತ.. ಪ್ರಾಣ ತಿಂದ್ರಲ್ಲ ಬನ್ನಿ" ಅಂತ ಕೈ ಎಳೆಯಲು ಶುರುಮಾಡಿದೆ.. 

ಗಾಬರಿ ಬಿದ್ದ ಆವಾ.. ಇಲ್ಲಾ ಸರ್.. ಹಾಗೇನು ಇಲ್ಲ.. ಹಿ ಹಿ" ಅಂತ ದೇಶಾವರಿ ನಗೆ ನಕ್ಕ..

ನಾ ಬಿಡಲಿಲ್ಲ.. ಬಲವಂತ ಮಾಡಿದೆ.. ಕಡೆಗೂ ಆ ಛಾಯಚಿತ್ರಕಾರನನ್ನು ಕರೆದು ಅವರ ಜೊತೆಯಲ್ಲಿ ನಿಂತು.. "ಈಗ ನಗ್ರಿ ಸರ್.. ನಾಲ್ಕು ಹಲ್ಲು ಬೇಡ ಕೇವಲ ಅರ್ಧ ಹಲ್ಲು ಸಾಕು.. ಮುರಿದ್ದಿದ್ದರು ಚಿಂತೆಯಿಲ್ಲ.. ಅಂತ ಜೋತು ಬಿದ್ದು ತೆಗೆಸಿಕೊಂಡೆ ಬಿಟ್ಟೆವು ಅವರ ಜೊತೆಗೆ ಚಿತ್ರವನ್ನು.. 

ಫೋಟೋಗ್ರಾಫರ್ ಗೆ ಫೋಟೋ!!! 


ಸರ್ ಇದುವರೆಗೂ ಯಾವುದೇ ಸಮಾರಂಭದಲ್ಲಿ ಹೀಗೆ ಆಗಿರಲಿಲ್ಲ.. ನೀವೇ ಫಸ್ಟ್ ಅಂದ್ರು.. 

ಹೌದು ಗುರುಗಳೇ... ಊರಿಗೆ ದಾರಿ ಆದ್ರೆ ಎಡವಟ್ಟನಿಗೆ ಒಂದು ದಾರಿ.. 

ಇಂತಹ ಒಂದು ಚಿತ್ರ ತೆಗೆಸಿಕೊಂಡು ಇಂದಿಗೆ ಹನ್ನೆರಡು  ವರ್ಷವಾಯಿತು.. 

ಎದೆ ತುಂಬಿ ಹಾಡುತ್ತೇನೆ.. "ಸವಿ" ನೆನಪುಗಳು ಬೇಕು "ಸವಿ"ಯಲಿ ಬದುಕು!!!!
........ ...... 
........ ...... 
........ ...... 
........ ...... 
........ ...... 
........ ...... 
........ ...... 
........ ...... 
........ ...... 
ಅಂದ ಹಾಗೆ ಸವಿತಾ ನಿಕ್ ನೇಮ್ ಅವರ ಅಮ್ಮನ ಮನೆಯ ಕಡೆಯಲ್ಲಿ "ಸವಿ"!!!!!!!