Sunday, June 23, 2013

ಹತ್ತು ಜನರಿಂದ ಒಂದೊಂದು ತುತ್ತು....!....ಒಂದು ಸುಂದರ ಅನುಭವ

"ಅರೆ  ಅರ್ಜುನ ಇದೇನು ನಾರುಮುಡಿಯುಟ್ಟು ಸ್ವಾಗತಿಸುತ್ತಿದ್ದೀಯ.. ? ರಾಜೋಚಿತ ಉಡುಪುಗಳು ಎಲ್ಲಿ? ಅರೆ ಕರ್ಣನು ಕೂಡ ಸಿದ್ಧವಾಗಿದ್ದಾನೆ.. ಏನು ಸಮಾಚಾರ ಪಾರ್ಥ.. ನೀನು ಎಲ್ಲಿಗೆ ಹೋಗುತ್ತಿದ್ದೀಯ ದಾನ ಶೂರ ಕರ್ಣ?" ಪ್ರಶ್ನೆಗಳ ಮಳೆಯನ್ನೇ ಸುರಿಸಿದ ಕೃಷ್ಣ ಪರಮಾತ್ಮ..!

ಕೊಳಲು ಹಿಡಿದ ಪರಮಾತ್ಮ 
ಅರ್ಜುನ ಹೇಳಿದ "ವಾಸುದೇವ.. ನಾನು ತೀರ್ಥ ಯಾತ್ರೆಗೆ ಹೊರಟಿದ್ದೆ.. ಏತಕ್ಕೆ ಎನ್ನುವುದು ನಿನಗೆ ಚೆನ್ನಾಗಿ ಗೊತ್ತು.. ಹೊರಟು ನಿಂತಿದ್ದೆ..  ಕರ್ಣನ ಹಾಗೆ ಇನ್ನೊಬ್ಬರಿಗೆ ಸಹಾಯ ಮಾಡುವ ಒಂದು ಸುಂದರ ಕಾರ್ಯಕ್ರಮ ನಡೆಯುತ್ತಿದೆ ಎಂಬ  ಒಂದು ವಿಷಯ ತಿಳಿಯಿತು.. ಕರ್ಣನಿಗೆ ಹೇಳಿದೆ.. ಅವಶ್ಯವಾಗಿ ನಾನು ಅದನ್ನು ನೋಡಿ ಬರುತ್ತೇನೆ ಹಾಗೆಯೇ ನಿನಗೆ ತೀರ್ಥಯಾತ್ರೆಗೆ ಸ್ವಲ್ಪ ದಾರಿ ಜೊತೆಯಾಗಿ ಬರುತ್ತೇನೆ ಎಂದು ಇಬ್ಬರು ಹೊರಟೆವು!"

"ಸರಿ ಹಾಗಾದರೆ.. ಹೋಗಿ ಬನ್ನಿ... ಅಲ್ಲಿನ ಕಾರ್ಯಕ್ರಮದ ಕೊಂಡಿಯನ್ನು ನನಗೆ ಮೇಲ್ ಮಾಡಿ" ಎಂದು ಕೃಷ್ಣ ಹೇಳಿ  ಪಾರ್ಥನಿಗೆ ಆಶೀರ್ವದಿಸುತ್ತಾ

"ಕಲ್ಯಾಣವಾಗಲಿ"
ಕಲ್ಯಾಣ ಬರಲಿ
ಕಲ್ಯಾಣ ಸಿಗಲಿ"  ಎಂದ!

ಪಾರ್ಥನಿಗೆ ಆಶ್ಚರ್ಯ... "ಅರೆ ಕಲ್ಯಾಣಮಸ್ತು ಕಲ್ಯಾಣಮಸ್ತು ಕಲ್ಯಾಣಮಸ್ತು ಅಂತ ಮೂರು ಸಲ ಆಶೀರ್ವದಿಸುತ್ತೀಯ ಎಂದು ತಿಳಿದಿದ್ದೆ.. ಇದೇನು ಪರಮಾತ್ಮ ಈ ಪರಿ ಆಶೀರ್ವಾದ" ಎಂದ.

ನೀನು ಆ ಕಾರ್ಯಕ್ರಮಕ್ಕೆ ಹೋಗು ಪಾರ್ಥ.. ! ನಿನಗೆ ತಿಳಿಯುತ್ತೆ ಅಂತ ಕೊಳಲು ನುಡಿಸುತ್ತಾ ಹೊರಟೆ ಬಿಟ್ಟಾ ಪರಮಾತ್ಮ!

ಸರಿ ಇನ್ನೇನು ಮಾಡುವುದು ಎಂದು ಕರ್ಣಾರ್ಜುನರು ಕೃಷ್ಣನ ಅಣತಿಯಂತೆ ಹೊರಟರು!
------------------------------------------------------------------------------------------------------------
ಮೈಸೂರು ರಸ್ತೆಯಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಕಾರಿನಲ್ಲಿ "ಅರರರೆ  ತುಂತುರು ತಂತು ಋತು... ಅರರರೆ  ತುಂತುರು ತಂತು ಋತು... " ಹಾಡು ಬರುತಿತ್ತು.. "ತುಂತುರು ಅಲ್ಲಿ ನೀರ ಹಾಡು" ಎಂದು ಶುರುವಾಯಿತು.
ಮೈಮನ ಪುಳಕಗೊಳ್ಳುತಿತ್ತು. ಆ ನಾದಕ್ಕೆ ಮೈಮರೆಯುತ್ತಿದ್ದಂತೆ "ಮನಸೇ ಮನಸೇ ಎಂಥಾ ಮನಸೇ" ಸುಮಧುರ ಗಾನ.. ಕರ್ಣಾರ್ಜುನರಿಗೆ ಆಶ್ಚರ್ಯ... ಕೇಳುತ್ತಾ ಮೈಮರೆತಿದ್ದರು..

"ಸಿಹಿಗಾಳಿ ಸಿಹಿಗಾಳಿ ಸಹಿ ಹಾಕಿದೆ ಮನಸ್ಸಿನಲ್ಲಿ
ಒಂದು ತುತ್ತು ಒಂದು ತುತ್ತು
ಎತ್ತಿಟ್ಟರೆ ಸಾಕು.. ಹಸಿದ ಹೊಟ್ಟೆಯನ್ನು ತುಂಬುವುದು ..... "
ಅಚಾನಕ್ಕಾಗಿ ಕಣ್ಣು ಬಿಟ್ಟ ಅರ್ಜುನ.. "ಕರ್ಣ ಈ ಹಾಡಿನಲ್ಲಿ ಏನೋ ವ್ಯತ್ಯಾಸ ಇದೆ.. ನಾ ಕೇಳಿದ ಹಾಡು ಬೇರೆ.. " ಎಂದ

ಕರ್ಣ "ಅರ್ಜುನನ ಭುಜ ತಟ್ಟಿ ಅಲ್ಲಿ ನೋಡು" ಎಂದ... ಅರ್ಜುನ ಕಣ್ಣರಳಿಸಿ ನೋಡಿ ಹೂವಿನ ನಗೆಬಾಣವನ್ನು ಬಿಟ್ಟಾ!
------------------------------------------------------------------------------------------------------------
ಕರುನಾಡಿನಲ್ಲಿ ಪ್ರೇಮಕವಿ ಎಂದೇ ಹೆಸರಾದ ಶ್ರೀ ಕಲ್ಯಾಣ್ ಅವರು ಪಕ್ಕದ ಕಾರಿನಿಂದ ಇಳಿದು ಸೀದಾ "ಹಂಸ" ನಡಿಗೆಯಲ್ಲಿ,   ಮೈಸೂರು ರಸ್ತೆಯ ಕುಂಬಳಗೋಡು ಗ್ರಾಮದ ಸರಹದ್ದಿನಲ್ಲಿರುವ ಒಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಡೆ ಹೆಜ್ಜೆ ಹಾಕಿ, ಮುಖ್ಯ ಅತಿಥಿಯಾಗಿ ತಮ್ಮ ಆಸನ ಸ್ವೀಕರಿಸಿದರು.

ಹಂಸ ನಡಿಗೆ ಇಡುತ್ತಾ ಬಂದರು ಸರಳ ಪ್ರೇಮ ಕವಿ ಶ್ರೀ ಕಲ್ಯಾಣ್ 
ಅಂದು ಕೆಲವು ಆಯ್ದ ಶಾಲೆಗಳ ಮಕ್ಕಳಿಗೆ ಪಾದರಕ್ಷೆಗಳನ್ನು,  ನೋಟ್ ಬುಕ್ ಗಳನ್ನೂ, ಟೈ, ಬೆಲ್ಟ್ ಗಳನ್ನು ವಿತರಿಸುವ ಸತೀಶ್ ಬಿ ಕನ್ನಡಿಗ ಅವರ ಒಂದು ಸುಂದರ ಪರಿಶ್ರಮಕ್ಕೆ ಯಶಸ್ಸಿನ ಹಂತ ಮುಟ್ಟುವ ಕಾರ್ಯಕ್ರಮ ನಡೆಯಲು ವೇದಿಕೆ ಸಜ್ಜುಗೊಂಡಿತ್ತು, ಅದಕ್ಕೆ ಹೆಗಲು ಕೊಟ್ಟು 3K ತಂಡದ ನಾಯಕಿ ರೂಪ ಸತೀಶ್, ಎಲ್ಲರ ನೆಚ್ಚಿನ ವಿಜ್ಞಾನಿ, ಹೃದಯವಂತ ಗೆಳೆಯ ಆಜಾದ್ ಸರ್, ನಮ್ಮೆಲ್ಲರ ನಗೆ ಬುಗ್ಗೆ ಪ್ರಕಾಶಣ್ಣ , ಮತ್ತು ಮುಖ್ಯೋಪಾಧ್ಯಾಯಿನಿ ಆಸೀನರಾದರು.

ಪ್ರತಿಭಾವಂತರ ದಂದು ವೇದಿಕೆಯಲ್ಲಿ 
ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಶುರುವಾಯಿತು, ಯಕ್ಷಗಾನದ ತುಣುಕು, ವೀರಾವೇಶದ ಹಾಡಿಗೆ ನೃತ್ಯ, ಜಾನಪದ ಗೀತೆಗಳಿಗೆ ನೃತ್ಯ, ಅರಳುತಿದ್ದ ಮಕ್ಕಳ ಕಡೆಯಿಂದ ಶ್ಲೋಕಗಳು,  ಹಾಡುಗಳು, ನೃತ್ಯ, ಸಾಧನೆಯ ಹಂಬಲ ಹೊತ್ತ ಸಾಹಸಿಯ ಯೋಗಾಸನ ಒಂದೇ ಎರಡೇ ಸಾಲು ಸಾಲು ಕಾರ್ಯಕ್ರಮಗಳು ಮನಸನ್ನು ಸೂರೆಗೊಂಡವು. ಇದರ ನಡುವೆ ಮಕ್ಕಳಿಗೆ ವೇದಿಕೆಯಲ್ಲಿ ಆಸೀನರಾಗಿದ್ದ ಮಹಾನೀಯರಿಂದ ಮಕ್ಕಳಿಗೆ ನೋಟ್ ಬುಕ್ ವಿತರಣೆಯಾಯಿತು. ಮಿಕ್ಕ ಪುಸ್ತಕಗಳನ್ನು, ಟೈ ಬೆಲ್ಟ್, ಪಾದರಕ್ಷೆಗಳನ್ನು ಆಯಾ ಶಾಲೆಯ ಉಪಾಧ್ಯಾಯರಿಗೆ ವಿತರಿಸಿದರು. ಮುಖ್ಯ ಅತಿಥಿ ಶ್ರೀ ಕಲ್ಯಾಣ್ ಅವರು ಮಕ್ಕಳಿಗೆ ಹಿತನುಡಿ ನುಡಿದು ಆಶೀರ್ವದಿಸಿದರು.


ದೊಡ್ಡವರು ಮಾತ್ರ ಜಾಣರಲ್ಲ ! 

ಹೃದಯ ಸಮುದ್ರದ ಸುಂದರ ನೃತ್ಯ ಶೈಲಿ 

ಸುಂದರ ನೃತ್ಯ ಮಾಡಿದ ಬಾಲಕಿ 

ಸಾಧನೆಗೆ ಪರಿಶ್ರಮ ಅಗತ್ಯ ಎಂದು ನಿರೂಪಿಸಿದ ಸಾಹಸಿ 

ವೇದಿಗೆಕೆ ಹೆಜ್ಜೆ ಇಡಲು ಬೇಕಾದ್ದು ಆತ್ಮಸ್ಥೈರ್ಯ ಎಂದು ತೋರಿಸಿದ ಪುಟಾಣಿ 

ಸಕ್ಕರೆಯಂತ ಅಕ್ಕರ ಪದ್ಯ ಉಳಿದ ಪ್ರಕಾಶಣ್ಣ 

ಹಮ್ಮು ಬಿಮ್ಮು ಇಲ್ಲದೆ ಮಕ್ಕಳಿಗೆ ಹಿತ ನುಡಿ ಹೇಳಿದ ಅಜಾದ್ ಸರ್ 

ಅಪೂರ್ವ ಸಾಧನೆ ಮಾಡಿದರೂ ನಾವು ಕಂಡ ಅತ್ಯಂತ ಸರಳ ಜೀವಿ, ಹಮ್ಮು ಬಿಮ್ಮು ಇಲ್ಲದೆ ಎಲ್ಲರ ಜೊತೆಯಲ್ಲಿ ಬೆರೆಯುವ ಸರಳ ಗುಣ ನಮ್ಮೆಲ್ಲರ ಮೆಚ್ಚಿನ ಪ್ರೇಮಕವಿ ಶ್ರೀ ಕಲ್ಯಾಣ್ ಅವರದ್ದು. ಅವರ ಜೊತೆಯಲ್ಲಿ ಆಡಿದ ಕೆಲ ಮಾತುಗಳು, ಕಳೆದ ಕೆಲ ಸಮಯ ಜೀವನದ ಉತ್ತಮ ಕ್ಷಣಗಳಲ್ಲಿ ಒಂದು ಎನ್ನಬಹುದು.  ಈ ಕ್ಷಣಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ಕೊಟ್ಟಿತು.

ಪ್ರೇಮಕವಿಗೆ ಪ್ರೀತಿಯ ಕಾಣಿಕೆ 

ಮಕ್ಕಳ ಜೊತೆಯಲ್ಲಿ ಕಾರ್ಯಕ್ರಮಕ್ಕೆ  ಬಂದವರು ಮಕ್ಕಳಾಗಿ ಒಬ್ಬರನ್ನೊಬ್ಬರು ತಮಾಷೆಮಾಡುತ್ತಾ, ನಗುತ್ತಾ, ನಗಿಸುತ್ತಾ ಸುಂದರ ಕ್ಷಣಗಳನ್ನು ಕಳೆದರು. ತಿಂಡಿ ಕೊಡುವ ಸಮಯ, ಊಟ ಮಾಡುವ ಸಮಯ ಎಲ್ಲವಕ್ಕೂ ನಗೆಯೇ ಸಿಹಿ ತಿಂಡಿಯಾಗಿತ್ತು. ತಿಂದದ್ದು, ನಕ್ಕಿದ್ದು ಎಲ್ಲವೂ ಸೇರಿ ಎಲ್ಲರ ಹೊಟ್ಟೆ ಉಬ್ಬಿದ್ದಂತು ನಿಜ.

ನಗಲು ಇನ್ನಷ್ಟು ಹೂರಣ ಸಿಕ್ಕಿದ್ದು ಸತೀಶ್ ನಾಯಕ್ ಅವರ ಸುಮಧುರ ನಿರೂಪಣೆ, ಪ್ರಕಾಶ ಹೆಗಡೆಯವರ ಶಾಲೆಯಲ್ಲಿ ಕಲಿತಿದ್ದ  "ಒಂದು ಎರಡು ಬಾಳೆಲೆ ಹರಡು" ಪದ್ಯ, ಬಾಲೂ ಸರ್ ಅವರ ಹಾಸ್ಯ, ನಡುವೆ ಉತ್ತಮ ಸಂದೇಶ ಕೊಟ್ಟ ಅಜಾದ್ ಸರ್ ಅವರ ಕಿವಿ ಮಾತುಗಳು, ಸ್ನೇಹಲೋಕ ತಂಡದ ನೃತ್ಯ, ಜೊತೆಗೆ ಕಾರ್ಯಕ್ರಮದ ಅಂತಿಮ ಹಂತದಲ್ಲಿ ಎಲ್ಲರ ಜೊತೆಯಲ್ಲಿ ಒಂದು ಚೆಂದದ ಫೋಟೋ ಕಾರ್ಯಕ್ರಮದ ಯಶಸನ್ನು ಸಾರಿ ಸಾರಿ ಹೇಳುತಿತ್ತು.

ಸುಂದರ ಲೋಕ ಈ ನಮ್ಮೆಲ್ಲರ ಸ್ನೇಹಲೋಕ 
ಈ ಕಾರ್ಯಕ್ರಮದ ರೂವಾರಿ ಸತೀಶ್ ಬಿ ಕನ್ನಡಿಗ ಅವರ ಪರಿಶ್ರಮ ಈ ಸುಂದರ ಕಾರ್ಯಕ್ರಮ. ನಾನು ನನ್ನ ಕುಟುಂಬ ಅನ್ನುವ ಈ ಕಾಲದಲ್ಲಿ ತತ್ವ, ಆದರ್ಶಗಳನ್ನೂ ಪಾಲಿಸುತ್ತಾ, ಜನರಿಂದ ಜನರಿಗಾಗಿ ಎನ್ನುವ ತಮ್ಮ ತತ್ವವನ್ನು ಆಚರಣೆಗೆ ತಂದು,  ತಮ್ಮ ಸುತ್ತಮುತ್ತಲ ಪರಿಸರ, ಕುಟುಂಬಗಳ ಕಾಳಜಿವಹಿಸುವ ಇವರ ವ್ಯಕ್ತಿತ್ವಕ್ಕೆ ಒಂದು ಸಲಾಂ ಹೇಳಬೇಕು. ಧಣಿವರಿಯದ ಇವರ ಕೆಲಸ ಸಾಧನೆಗಳ ಬಗ್ಗೆ ಹೆಮ್ಮೆಯಾಗುತ್ತದೆ. ತಮ್ಮ ಪಾಡಿಗೆ ತಾವು ನಂಬಿರುವ ಆದರ್ಶಗಳನ್ನು ಪಾಲಿಸುತ್ತಾ ತೆರೆಮರೆಯಲ್ಲೇ ಇವರು ಮಾಡುತ್ತಿರುವ ಕೆಲಸಗಳು ನಿಜಕ್ಕೂ ಶ್ಲಾಘನೀಯ.

ಪ್ರಕಾಶಣ್ಣನಿಂದ ಅಭಿಮಾನದ ಅಪ್ಪುಗೆ!
ಸತೀಶ್ ಅವರು ಒಂದು ಸುಂದರ ತಂಡ ಕಟ್ಟಿ ತಮ್ಮ ತಲೆಯಲ್ಲಿ ಬಂದ ಆಲೋಚನೆ ಎನ್ನುವ ಬಂಡೆಗೆ ಒಂದು ಸುಂದರ ಮೂರ್ತಿಯ ರೂಪ ಕೊಟ್ಟು, ತಾವು ಸಕ್ರಿಯರಾಗಿರುವ ಗುಂಪುಗಳಾದ ಹತ್ತು ಜನರಿಂದ ಒಂದೊಂದು ತುತ್ತು, ವಾತ್ಸಲ್ಯ ಕುಟುಂಬ, ಸ್ನೇಹಲೋಕ, 3K-ಕನ್ನಡ ಕವಿತೆ ಕವನ, ಶ್ರೀ ಸಾಯಿ ಕಾಮಧೇನು ಫೌಂಡೇಶನ್, ಶಂಕರ್ ನಾಗ್ ಭಕ್ತರು ಮುಂತಾದ ತಂಡಗಳ ಸಹ ಪ್ರಾಯೋಜತ್ವದಲ್ಲಿ ಒಂದು ಸರಳ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿಭಾಯಿಸಿ ನಡೆಸಿಕೊಟ್ಟರು. ಸತೀಶ್ ಅವರಿಗೆ ಹೆಗಲು ಕೊಟ್ಟು ಈ ಕಾರ್ಯಕ್ರಮವನ್ನು ಯಶಸ್ಸಿನ ಹಾದಿಯಲ್ಲಿ ಕೊಂಡೊಯ್ದ ಎಲ್ಲರಿಗೂ ಅಭಿನಂದನೆಗಳು.

ಹುರ್ರಾ  ಕಾರ್ಯಕ್ರಮ ಯಶಸ್ವೀ ಆಯಿತು!
-----------------------------------------------------------------------------------------------------------
"ಅರ್ಜುನ... ಪಾರ್ಥ... ಮಧ್ಯಮ ಪಾಂಡವ... "

"ಆ ಹಾ ಆಅ ಆಅ... ಹಾ ಕರ್ಣ.. ಒಂದು ಕ್ಷಣ ರೋಮಾಂಚನವಾಗುತ್ತೆ  ಈ ಕಾರ್ಯಕ್ರಮವನ್ನು ನೋಡಿದಾಗ.. ಇರು ಕೃಷ್ಣನಿಗೆ ಈ ಕಾರ್ಯಕ್ರಮದ ಬಗ್ಗೆ ಒಂದು ಮೇಲ್ ಕಳಿಸಿ ಬಿಡ್ತೀನಿ.. "

"ಸರಿ ಅರ್ಜುನ.. ನೀನು ಹೊರಡು ತೀರ್ಥಯಾತ್ರೆಗೆ.. ಶುಭವಾಗಲಿ ... ಹಾಗೆಯೇ  ಈ ಕಾರ್ಯಕ್ರಮದ ಒಂದು ಪ್ರತಿಯನ್ನು ನನಗೂ ಕಳಿಸಿಬಿಡು"

"ಆಗಲಿ ಕರ್ಣ... ಶುಭವಾಗಲಿ ನಿನ್ನ ಯಾತ್ರೆ .."

ಅರ್ಜುನ  ವಾಯುದೇವನನ್ನು ಸ್ಮರಿಸಿ ಒಂದು ಬಾಣ ಹೂಡಿದನು.. ಆ ಬಾಣಕ್ಕೆ
srikrishna@mathura.com,
daanaveerakarna@angaraja.com
ಮೇಲ್ ಅಡ್ರೆಸ್ ಹಾಕಿ ಬಿಲ್ಲನ್ನು ಹೆದೆಗೆರಿಸಿ ಅದಕ್ಕೆ ಒಂದು ಕೊಂಡಿಯನ್ನು  ತಾಕಿಸಿ ಬಾಣ ಬಿಟ್ಟನು... !

ಸರ್ವಂ ಕೃಷ್ಣಾರ್ಪಣಮಸ್ತು!
------------------------------------------------------------------------------------------------------------

Monday, June 10, 2013

ಹಳ್ಳಿಯಾವ "ಕಳಿಸಿ"ಕೊಟ್ಟ ಪಾಠ

(ಈ  ಲೇಖನವನ್ನು ಪ್ರಕಟಿಸಿದ ಪಂಜು ತಂಡಕ್ಕೆ ಧನ್ಯವಾದಗಳು ಪಂಜುವಿನಲ್ಲಿ)

ಹಾಗೆಯೇ ಈ ಲೇಖನವನ್ನು ಓದಿ ಮೆಚ್ಚಿ ಪತ್ರಿಕೆಗೆ ಕಳಿಸಿ ಎಂದು ಹುರಿದುಂಬಿಸಿದ ಶ್ರೀ ಪ್ರಕಾಶ್ ಹೆಗಡೆ ಅವರಿಗೆ ಧನ್ಯವಾದಗಳು)

ನಾಗರೀಕ ಸಮಾಜ ಎಂದು ಬೀಗುವ ಪಟ್ಟಣದಲ್ಲಿ ಸಂಸ್ಕೃತಿ ಮರೆತು ಹೇಗೆ ಆಡುತ್ತೇವೆ ಅನ್ನುವ ಭಾವ ಇರುವ ಒಂದು ಕಿರು ಲೇಖನ.

ಗುಡ್ಡ-ಗಾಡುಗಳನ್ನು ಸುತ್ತಿ ಬಸವಳಿದಿದ್ದ ಒಂದು ಗುಂಪು, ತುಂಬಾ ದಿನಗಳಾದ ಮೇಲೆ, ಒಂದೇ ಛಾವಣಿಯಡಿಯಲ್ಲಿ ಸೇರಿದ್ದವು. ಹೊರಗಡೆ ಬಿಸಿಲು ಚೆನ್ನಾಗಿ ಕಾದಿತ್ತು, ಒಳಗೆ ಹೊಟ್ಟೆ ಹಸಿವಿನಿಂದ ಕುದಿಯುತ್ತಿತ್ತು. ಏನು ಸಿಕ್ಕಿದರು ತಿಂದು ತೇಗಿಬಿಡುವ ಧಾವಂತದಲ್ಲಿದ್ದರು.

ಸುಮಾರು ಎಂಟು ಮಂದಿಯಿದ್ದ ಗುಂಪಾದ್ದರಿಂದ ಹೋಟೆಲ್ನಲ್ಲಿ ಒಂದೇ ಟೇಬಲ್ ನಲ್ಲಿ ಜಾಗ ಸಿಗುವುದು ಕಷ್ಟವಾಗಿತ್ತು. ಅಲ್ಲಿದ್ದ ಮೇಲ್ವಿಚಾರಕರು "ಸರ್ ಸ್ವಲ್ಪ ಹೊತ್ತು ಕೂತುಕೊಳ್ಳಿ.. ಆ ಟೇಬಲ್ ಖಾಲಿಯಾಗುತ್ತೆ" ಅಂತ ಒಂದು ಟೇಬಲ್ ಕಡೆ ಕೈತೋರಿಸಿ ಹೇಳಿದರು.

ನಾವೆಲ್ಲರೂ, ಅರ್ಜುನ ಮತ್ಸ್ಯ ಯಂತ್ರ ಭೇದಿಸುವಾಗ, ಆತ ನೀರಿನಲ್ಲಿ ಬರಿ ಮೀನಿನ ಕಣ್ಣನ್ನೇ ನೋಡುತ್ತಾ ಪ್ರಪಂಚದಲ್ಲಿ ಬೇರೇನೂ ಇಲ್ಲವೇನೋ ಅನ್ನುವಷ್ಟು ತಾದ್ಯಾತ್ಮನಾಗಿ ನೋಡುವವನಂತೆ,  ಆ ಟೇಬಲ್ಲಿನ ಮೇಲೆ ಕಣ್ಣಿಟ್ಟುಕೊಂದು ಕೂತಿದ್ದೆವು.

ಮಧ್ಯೆ ಮಧ್ಯೆ ಹಾಸ್ಯ ಚಟಾಕಿಗಳು ಹಾರಾಡುತಿದ್ದವು. ಅವರಲ್ಲಿ ಒಬ್ಬ ಹೇಳುತಿದ್ದ ಈ ತರಹದ ಭೇಟಿಗಳು ನನ್ನೊಳಗಿರುವ ಅನೇಕ ಬೀಗಗಳನ್ನೆಲ್ಲ ತೆಗೆದುಬಿಡುತ್ತದೆ!

ಕೆಲ ಸಮಯದ ನಂತರ ಮೇಲ್ವಿಚಾರಕರು ನಮ್ಮನ್ನು ಕರೆದು "ಸಾರ್ ಈಗ ಖಾಲಿಯಾಗಿದೆ, ನೀವು ಅಲ್ಲಿ ಕೂರಬಹುದು" ಎಂದರು.

"ಹೊಟ್ಟೆ ಚುರುಗುಟ್ತೈತೆ…… ರಾಗಿ ಮುದ್ದೆ ತಿನ್ನೋ ಹೊತ್ತು!" ಅಂತ ಅಣ್ಣಾವ್ರು ಹಾಡಿದ ಹಾಡು ನೆನಪಿಗೆ ಬಂತು. ಸರಿ ಊಟಕ್ಕೆ ದೈಹಿಕವಾಗಿ ಮಾನಸಿಕವಾಗಿ ಸಿದ್ಧವಾದೆವು. ಬಾಳೇ ಎಲೆ ಬಂತು. ಎಲೆಯ ಮೇಲೆ ಬಗೆ ಬಗೆಯ ಭಕ್ಷ್ಯಗಳು ಬಂದು ನೆಲೆಸುತ್ತಿದ್ದವು. ಇನ್ನೇನು ತಿನ್ನಬೇಕು ಅಷ್ಟರಲ್ಲಿ,

"@#@$# ಡಬ್ಲ್ಯೂ#ಡಬ್ಲ್ಯೂ$ @#$@#ಆ#@$ @#$@!!#$" ಯಾರೋ ವಿದೇಶೀಯ ದೊಡ್ಡ ಧ್ವನಿ ಆ ಮಹಡಿಯಲ್ಲಿದ್ದ ಎಲ್ಲರನ್ನು ಚಕಿತಗೊಳಿಸಿತು!. ಯಾರಪ್ಪಾ ಇದು ಎಂದು ಎಲ್ಲರೂ ಧ್ವನಿ ಬಂದತ್ತ ಕತ್ತನ್ನು ತಿರುಗಿಸಿದರು.

ಅಂದು ಶ್ರೀ ಭಗತ್ ಸಿಂಗ್, ಶ್ರೀ ರಾಜಗುರು, ಶ್ರೀ ಸುಖದೇವ್ ತಾಯಿನಾಡಿನ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಮಾತೆಗೆ ಅರ್ಪಣೆ ಮಾಡಿದ "ನಿಜ ಹುತಾತ್ಮರ" ದಿನವಾಗಿತ್ತು …. ಇಂತಹ ಸುದಿನದಲ್ಲಿ ಇವರಾರಪ್ಪ ಇಷ್ಟು ದೊಡ್ಡ ಧ್ವನಿಯಲ್ಲಿ ಮಾತಾಡುತ್ತಿರುವವರು (ಕಿರುಚುತ್ತಿರುವವರು) ಅಂತ ಆಶ್ಚರ್ಯವಾಯಿತು!

ಎಲ್ಲರೂ ಅ ಧ್ವನಿ ಬಂದತ್ತ ತಿರುಗಿ ನೋಡಿದರೆ ಅರ್ಧ ಚಣ್ಣ ಹಾಕಿಕೊಂಡು, ಇಳಿ ಬೀಳುತ್ತಿದ್ದ ಅಂಗಿ ಹಾಕಿಕೊಂಡು, ತಲೆಕೂದಲನ್ನು ಕರೆಂಟ್ ಹೊಡೆಸಿಕೊಂಡವನಂತೆ ನೆಟ್ಟಗೆ ನಿಲ್ಲಿಸಿಕೊಂಡಿದ್ದ, ಕಣ್ಣಿಗೆ ಹಾಕಿಕೊಳ್ಳುವ ಕಪ್ಪು ಕನ್ನಡಕವನ್ನು ತಲೆಗೆ ಏರಿಸಿಕೊಂಡಿದ್ದ… ಒಂಥರಾ ವಿಚಿತ್ರ ಪ್ರಾಣಿಯ ಹಾಗಿದ್ದ   ಒಂದು ಜೀವಿ ಕಂಡಿತು! ಜೊತೆಯಲ್ಲಿ ಒಂದಷ್ಟು ವಿಚಿತ್ರ ಧಿರುಸಿನಲ್ಲಿದ್ದ ಹೆಣ್ಣು ಹೈಕಳು. ಇವನ ಮಂಗಾಟಕ್ಕೆ ಇನ್ನಷ್ಟು ತುಪ್ಪವನ್ನು ಹುಯ್ಯುತ್ತಿದ್ದವು!

ಅಲ್ಲಿದ್ದ ನಾಗರೀಕರು "ಏನೋ…  ಮಂಗಗಳು" ಎಂದು ಮನದಲ್ಲೇ ಬಯ್ದುಕೊಳ್ಳುತ್ತಾ..ಛೆ ಕಾಲ ಕೆಟ್ಟು ಹೋಗಿದೆ ಅಂತ ಏನು ಮಾಡಲಾಗದೆ ಬಾಯಲ್ಲಿ ತ್ಸ್ಚು ತ್ಸ್ಚು ಎಂದು ಸದ್ದು ಮಾಡುತ್ತಾ ಸುಮ್ಮನೆ ಕೂತಿದ್ದರು!

ಅಷ್ಟರಲ್ಲಿ…. ಅಲ್ಲೇ ಊಟ ಮಾಡುತಿದ್ದ ಒಬ್ಬ ಹಳ್ಳಿಯವ ಊಟವನ್ನು ಅರ್ಧಕ್ಕೆ ನಿಲ್ಲಿಸಿ ನಿಧಾನವಾಗಿ ಹೆಜ್ಜೆ ಹಾಕುತ್ತ ಆ ವಿಚಿತ್ರಜೀವಿಯ ಹತ್ತಿರ ಹೋಗಿ,

"ಯಾರಪ್ಪ ನೀನು?"

ಆಗ ಆ ವಿಚಿತ್ರ ಪ್ರಾಣಿ "who are you dude? what do you want?"

"ಯಾಕಪ್ಪ ಈಟು ಜೋರಾಗಿ ಮಾತಾಡುತ್ತಿದ್ದೀಯ.. ಸಾನೆ ವೊಟ್ಟೆ ಅಸೀತ ಇದ್ಯಾ"

"oye!…  what you are talking? get lost from here. you country brute!"

ಹಳ್ಳಿಯವನಿಗೆ ಅವನೇನಂದ ಎಂದು ಪೂರ್ತಿ ತಿಳಿಯಲಿಲ್ಲ.  ಆದರೆ ಕೋಪ ನೆತ್ತಿಗೆ ಏರಿತು  "ಕಂತ್ರಿ ಗಿಂತ್ರಿ ಅಂದ್ರೆ ಸಂದಾಗಿರಕ್ಕಿಲ್ಲ.  ಮೈ ಮ್ಯಾಗೆ ನಿಗಾ ಮಡಕ್ಕಂಡು ಮಾತಾಡು"

"who the hell are you? how dare you to shout at me?"

ಹಳ್ಳಿಯವನಿಗೆ ಅರ್ಥವಾಯಿತು.  ತಾನು ಮುಂದೆ ಏನು ಮಾಡಬೇಕೆಂದು. ಸೀದಾ ಅವನ ತಲೆಯ ಹಿಂಬದಿಗೆ ತನ್ನ ಎಡಗೈಯಿಂದ ಪಟಾರ್ ಅಂತ ಬಲವಾಗಿ ಹೊಡೆದ!

ವಿಚಿತ್ರ ಜೀವಿ "ಅಮ್ಮಾ" ಎಂದು ಚೀರಿ ಕೆಳಕ್ಕೆ ಬಿದ್ದ.. ಹಳ್ಳಿಯವ ಅವನ ಹತ್ತಿರ ಹೋಗಿ

"ಓಹ್ ಕನ್ನಡ ಬತ್ತೈತೆ"

"ಹೂಂ ಬತ್ತದೆ" ಅಂತು ಆ ವಿಚಿತ್ರ ಜೀವಿ!

"ಏನ್ಲಾ ಬಡ್ದತ್ತದೆ… ಯಾವ್ದು ಊರೂ?

"ತ್ಯಾಮಗೊಂಡ್ಲು"

"ಎಲ್ಲಿ ಓದಿದ್ದು"

"ಅಲ್ಲೇ ಒಂದು ಸರ್ಕಾರಿ ಸ್ಕೂಲ್ನಲ್ಲಿ"

"ಓಹ್ ನಮ್ಮೂರಿನವನೇ … ಮತ್ತೆ ಯಾಕಲಾ…. ಇಂಗ್ಯಾಕೆ ಮಂಗನ ತರಹ ಇದ್ದೀಯ… ಏನ್ಲಾ ನಿನ್ನವತಾರ… ಯಾಕಲೇ ಹಿಂಗ್ ಮಾತಾಡ್ತೀಯಾ?"

"ಏನಿಲ್ಲ ಕಣಣ್ಣ.. ಆಫೀಸಿಂದ ಅಮೆರಿಕಾಕ್ಕೆ ಒಂದೀಟು ದಿನ ಕಳಿಸಿದ್ರು.. ಬಂದ್ ಮ್ಯಾಕೆ ಹಿಂಗಾಡಿದ್ರೆ… ಹಿಂಗಿದ್ರೆ… ಚನ್ನ ಅಂತ ಅನ್ನಿಸ್ತು ..ಅಲ್ಲೆಲ್ಲ ಇಂಗೇಯ ಕಣಣ್ಣ .ಅದ್ಕೆ ಅಂಗೆ ಆಗ್ಬುಟ್ಟೆ"

"ಅಲ್ಲಾ ಕಣಲೇ.. ಹಸೂನ ಪರಂಗಿ ದೇಶಕ್ಕೆ ತಗೊಂಡೋಗ್ಬಿಟ್ರೇ…. ಅದು ಹುಲ್ಲು ತಿನ್ನದ್ ಬಿಟ್ಟು ಅದೇನೋ ಕುಟು ಕುಟು ಅಂತ ಕುಟ್ಟತೀರಲ್ಲ ಕಂಪೂಟರ್ ಅಂತ..... ಅದನ್ನ ತಿಂದಾತ !!! .. ಆಟು ಬುದ್ದಿ ಬ್ಯಾಡ್ವ ನಿಂಗೆ?.ಅದು ಸರಿ…  ಅಪ್ಪ ಅಮ್ಮ ಏನು ಯೋಳ್ಳಿಲ್ವಾ ನಿಂಗೆ?"

"ಯೋಳಿದ್ರು… ಆ ಮುದಿಗೊಡ್ಡುಗಳ ಮಾತೇನೂ ಕೇಳಾದು ಅಂತ ಅವ್ರ್ಗೆ ಸಂದಾಕೆ ಬಯ್ದು ಕೂರ್ಸಿದ್ದೀನಿ"

"ಅಯ್ಯೋ ಮಂಗ್ಯಾ.. ನಮ್ಮ ಸಂಸ್ಕಾರ ಕಣ್ಲಾ…  ನಮ್ಮನ್ನ ಕಾಪಾಡೋದು… ಯಾರೋ ಕುಣುದ್ರು ಅಂತ ನೀನು ಕುಣಿಯಾಕೆ ಹೊಂಟೀಯಾ! ಮಂಗ ಮುಂಡೇದೆ ಎಂಗ್ ಲಾಗ ಹಾಕಿದ್ರೂ ಕಾಲ್ ಕೆಳ್ಗೆ ಇರ್ಬೇಕು…ತಿಳ್ಕಾ … ಇಲ್ಲಾಂದ್ರೆ ಪಲ್ಟಿ ಹೊಡೀತೀಯ"

"ಸರಿ ಕಣಣ್ಣ.. ಅರ್ಥವಾಯಿತು.. ಇನ್ನು ಹೀಗೆಲ್ಲ ಆಡಕ್ಕಿಲ್ಲ… ತುಂಬಾ ಉಪಕಾರವಾಯಿತು ಕಣಣ್ಣ… ಮುಚ್ಚಿದ್ದ ಕಣ್ಣು ತೆರೆಸಿದೆ ನೀನು"

"ಅಯ್ಯೋ ಮಂಗ್ಯಾ  .. ಅಪ್ಪ ಅಮ್ಮ ಹೇಳೋದಿಕ್ಕಿಂತಾನ ನನ್ನ ಮಾತು….. ಅವ್ರ ಮಾತು ಕೇಳು ಜೀವನದಲ್ಲಿ ಉದ್ದಾರವಾಯ್ತೀಯ.. ಸರಿ ಹೋಗ್ಬಾ ಅಪ್ಪ ಅಮ್ಮನ್ನ ಮಾತು ಕೇಳು….  ಸಂದಾಗಿ ನೋಡ್ಕೋ ಅವ್ರನ್ನಾ… ಸರಿ ನನ್ನ ಊಟ ಅಲ್ಲೇ ಅಯ್ತೆ… ನಾ ಉಣ್ಣಾಕೆ ಹೊಯ್ತೀನಿ"

ಅಲ್ಲಿದ್ದ ಎಲ್ಲರ ಕಣ್ಣಲ್ಲೂ ಕಣ್ಣೀರು… ಹಾಗೆ ಅವರಿಗಿಲ್ಲದೆ ಎಂಜಲು ಕೈ ಅಂತ ಕೂಡ ನೋಡದೆ ಕೈ ನೋಯುವ ತನಕ ಚಪ್ಪಾಳೆ ತಟ್ಟಿದರು ..ಸುಂದರವಾದ ಮಾತುಗಳನ್ನು ಹೇಳಿ ಹುಲ್ಲನ್ನು ಹಿಡಿದು ಆಕಾಶದಲ್ಲಿದ್ದೀನಿ ಎನ್ನುವ ಭ್ರಮೆಯಲ್ಲಿದ್ದ ಹುಡುಗನಿಗೆ ಸರಿಯಾದ ಮಾರ್ಗ ತೋರಿದ, ಹಳ್ಳಿಯವನಿಗೆ ತಮ್ಮ ಅಭಿನಂದನೆಯನ್ನು ಸಲ್ಲಿಸಿದರು.

ಆಗ ವಿಚಿತ್ರ ಜೀವಿ ಅಲ್ಲಿದ್ದ ಮೇಲ್ವಿಚಾರಕರನ್ನು ಕರೆದು "ಅಣ್ಣ ಬನ್ನಿ ಅಣ್ಣ… ನನ್ನ ಕಣ್ಣ ತೆರೆಸಿದ ಈ ಅಣ್ಣನಿಗೆ ಇವತ್ತು ನನ್ನ ಕಡೆಯಿಂದ ಊಟ.  ಇವರ ಬಿಲ್ಲನ್ನು ನಾನು ಕೊಡುವೆ"

ಮೇಲ್ವಿಚಾರಕರು ಹೇಳಿದರು "ಸರ್ ಈಗ ನೀವು ಮನುಜರಾದಿರಿ!!!"