Saturday, June 1, 2024

ಹಾಲಿಡೇ ಅಲ್ಲಾ ಹೋಲಿ ಡೇ !!!

ಕೆಲಸಕ್ಕೆ ಹೋಗೋರು ಭಾನುವಾರ ಅಂದರೆ ಒಂದು ರೀತಿಯ ಸಮಾಧಾನ.. ಎಲ್ಲೂ ಹೋಗೋದೂ ಬೇಡಾ ಮನೇಲಿ ಇರೋಣ ತಿಂದುಂಡು ಇರೋಣ ಅನ್ನುವುದು ಸಾಮಾನ್ಯವಾದ ಮಾತು.. 

ಕೆಲವೊಮ್ಮೆ ಅರಿವಿಲ್ಲದೆ ಹೋದಾಗ  ಬೆಟ್ಟದಷ್ಟು ಭಾರವಾಗಿದ್ದ ಮನಸ್ಸು ಒಣಗಿದ ಹತ್ತಿಯಷ್ಟು ಹಗುರಾಗುತ್ತದೆ.. 

ಹೀಗೆ ಒಂದು ಭಾನುವಾರದ ಅನುಭವ .. ಕಳೆದ ಭಾನುವಾರ ಯಲಹಂಕದ ಬಳಿಯ ಒಂದು ಫಾರ್ಮ್ ಹೌಸ್ ಆಹ್ವಾನವಿತ್ತು.. ಮನಸ್ಸಿನ ಹಾದಿಯನ್ನು ಸರಿ ಮಾಡುವ ಒಂದು ಕೇಂದ್ರ ಆರ್ ಟಿ ನಗರದ ಬ್ರಹ್ಮಕುಮಾರಿಯ ಕೇಂದ್ರದ ಶಕ್ತಿ ಅಕ್ಕ ಭುವನೇಶ್ವರಿಯವರು ಕೊಟ್ಟ ಆಹ್ವಾನ. . 

ಸೀಮಕ್ಕ ಶ್ರೀಕಾಂತಣ್ಣ ಇಬ್ಬರೂ ಬರಬೇಕು.. ಅಂತ ಆಹ್ವಾನ ಕಳಿಸಿದ್ದರು.. ನಾನು ಪ್ರಪಂಚದಲಿ ಇಬ್ಬರ ಆಹ್ವಾನವನ್ನು ಎಂದಿಗೂ ನಿರಾಕರಿಸಿಲ್ಲ.. ಒಬ್ಬರು ನನ್ನ ಮಾನಸಿಕ ಗುರುಗಳು ಶ್ರೀ ದಶವೇದ ಆಶ್ರಮದ ಶ್ರೀ ನಾಗಭೂಷಣ ಅತ್ರಿ .. ಎರಡನೆಯವರು ಭುವನೇಶ್ವರಿ ಅಕ್ಕ.. ಯಾವುದೇ ಹೊತ್ತಿನಲ್ಲೂ, ಯಾವುದೇ ದಿನದಲ್ಲೂ ಕರೆದರೂ ಇಲ್ಲ ಅನ್ನೋಕೆ ಆಗದ ಇಲ್ಲ ಅನ್ನದ ಆಹ್ವಾನ ನೀಡುವ ಮಹಾನ್ ಚೇತನಗಳು ಇವರಿಬ್ಬರು. 

ನಾವಿಬ್ಬರು ಹೋಗುವ ಹೊತ್ತಿಗೆ ಆಗಲೇ ಸುಮಾರು ಅನುಯಾಯಿಗಳು ಬಂದಿದ್ದರು.. ದೈಹಿಕ ಸ್ವಾಸ್ಥ್ಯಕ್ಕೆ ಕೆಲವು ಆಸನಗಳನ್ನುಹೇಳಿಕೊಡುತ್ತಿದ್ದರು .. ನಂತರ ಮನಸ್ಸಿಗೆ ಒಂದು ಘಂಟೆ ಯೋಗ, ಧ್ಯಾನ.. ಆಟದಲ್ಲೂ ಕಲಿಕೆ ಮಾಡಬಹುದು ಅಂತ ತೋರಿಸಿದ್ದು.. ಪಾಸಿಂಗ್ ದಿ ಬಕ್ .. ಚೆಂಡನ್ನು ಒಬ್ಬರಿಗೊಬ್ಬರು ಸಾಗಿಸೋದು.. ಹಾಡು ನಿಂತಾಗ ಯಾರ ಬಳಿ ಇರುತ್ತದೆಯೋ ಅವರು ತಮಗೆ ಬಂದ ಚಿಟ್ಟಿಯಲ್ಲಿ ಏನಿದೆಯೋ ಅದನ್ನು ಮಾಡಬೇಕು.. ಕೆಲವರಿಗೆ ತಮ್ಮ ಅನುಭವ ಹೇಳೋದು.. ಕೆಲವರಿಗೆ ಹಾಡು ಹೇಳೋದು. ಕೆಲವರಿಗೆ ನೃತ್ಯ ಮಾಡೋದು.. ಹೀಗೆ ಹತ್ತಾರು ವಿಧದಲ್ಲಿ ಒಳ್ಳೆಯ ಸಮಯ ಕಳೆಯಿತು.. 

ಊಟವಾಯಿತು.. ನಂತರ ನಿಜವಾದ ಆಟ ಶುರು.. 

ನಮ್ಮ ಸಾಧನೆಯ ಹಾದಿಯಲ್ಲಿ ಬೇಕಾದಷ್ಟು ಅಡಚಣೆಗಳು ಬರುತ್ತವೆ.. ಆದರೆ ಅದನ್ನು ಹೇಗಾದರೂ ನಿಭಾಯಿಸಿ ದಾಟಬಹುದು.. ಆದರೆ ಮನದಲ್ಲಿ ಆವರಿಸುವ ಈ ಮಾಯೆಯ ಮಾಯೆಯನ್ನು ದಾಟಬಹುದು  ಅದಕ್ಕೆ ಬೇಕಾದ ಸಿದ್ಧತೆಗಳು, ಮನದಲ್ಲಿ ಏಳುವ ಪ್ರಶ್ನೆಗಳಿಗೆ ಉತ್ತರ.. ಇದು ಈ ಆಟದ ಸೊಗಸಾಗಿತ್ತು.. 

ಎಂಟು ತಂಡವನ್ನು ಇದಕ್ಕಾಗಿ ಸಿದ್ಧಪಡಿಸಿದರು.. ಅವರಿಗೆಲ್ಲ ಒಂದು ಪರಿಸ್ಥಿತಿಯನ್ನು ಕೊಟ್ಟು.. ಅದಕ್ಕೆ ಮಾಯಾ ಒಡ್ಡುವ ಪರೀಕ್ಷೆ ಅದನ್ನು ನಿವಾರಿಸುವ ನಮ್ಮ ಮನದ ಶಕ್ತಿ.. ಇದು ಈ ಆಟದ ವೈಶಿಷ್ಠ್ಯತೆ.. 

ಮೊದಲ ಅಂಕ : 

ದೃಶ್ಯ ೧ 

ನಾವು ಬ್ರಹ್ಮಕುಮಾರಿಯ ಕೇಂದ್ರದ ಒಳಗೆ ಹೋದರೆ ಅದರ ಮೇಲ್ವಿಚಾರಕಿ..ನಮ್ಮನ್ನು ನೋಡಲು ಇಲ್ಲ.. ಮಾತಾಡಿಸಲು ಇಲ್ಲ.. ಸೇವೆಗೂ ಕರೆಯುತ್ತಿಲ್ಲ.. ಮಾಯೆಯ ಬಿರುಗಾಳಿ ಬೀಸಿದೆ.. 

ಮನಸ್ಸು ಗಲಿಬಿಲಿಯಾಗೋದು ಸಹಾಯ.. ಆದರೆ  ಬ್ರಹ್ಮಕುಮಾರಿ ಕೇಂದ್ರ ಮದುವೆಯ ಮನೆಯೂ 
ಕಾರ್ಯಕ್ರಮದ ಮಂದಿರವೂ ಅಲ್ಲ.. ಬದಲಿಗೆ ಇದು ಎಲ್ಲರ ,ಮನೆ.. ನಮ್ಮ ಮನೆಯಲ್ಲಿ ಕಾರ್ಯಕ್ರಮ ನೆಡೆದರೆ ನಮಗೆ ನಾವೇ ಆಹ್ವಾನ ಪತ್ರಿಕೆ ಕೊಟ್ಟು ಕೊಳ್ಳುತ್ತೇವೆಯೇ.. ಇದು ನಮ್ಮ ಮನೆ ಅಂದ ಮೇಲೆ.. ನಮಗೇಕೆ ಆಹ್ವಾನ ನೀಡಬೇಕು.. ಸೇವೆಗೆ ಕರೆಯಬೇಕು.. ಮನೆಯಲ್ಲಿ ಹೊಟ್ಟೆ ಹಸಿದಿದ್ದರೆ ಪಕ್ಕದ ಮನೆಯವರಿಗೆ ಊಟ ಕೊಡಿ ಅಂತ ಕೇಳೋಲ್ಲ.. ಬದಲಿಗೆ ನಮ್ಮ ಮನೆಯಲ್ಲಿ ಇರುವ ವಸ್ತುವಿನಿಂದ ಆಹಾರ ಸಿದ್ಧಪಡಿಸಿಕೊಂಡು ತಿಂದು ಹಸಿವು ನೀಗಿಸಿಕೊಳ್ಳುತ್ತೇವೆ.. ಇದು ಜ್ಞಾನದ ಹಸಿವನ್ನು ನೀಗಿಸಿಕೊಳ್ಳುವ ಕೇಂದ್ರ.. ಯಾರ ಆಹ್ವಾನವೂ ಬೇಕಿಲ್ಲ ಅದು ಸೇವೆಗೆ ಇರಬಹುದು ಅಥವ ಆಹ್ವಾನ ಇರಬಹುದು.. ಇದೆಲ್ಲದರ ಜೊತೆಗೆ ಕೇಂದ್ರವನ್ನು ನೋಡಿಕೊಳ್ಳುವ ಮೇಲ್ವಿಚಾರಕಿ ಅವರಿಗೆ ಹತ್ತಾರು ಜವಾಬ್ಧಾರಿಗಳು ಇರುತ್ತವೆ.. ಆ ಕೆಲಸಗಳ ನಡುವೆ ಬಂದ ವ್ಯಕ್ತಿಗಳನ್ನು ಗಮನಿಸುವುದು ..ಹಾಗೂ ಅವರಿಗೆ ಸ್ವಾಗತ ನೀಡುವುದರ ಕಡೆಗೆ ಗಮನ ಹರಿಸುವುದು ಕಡಿಮೆಯಾಗಿರುವ ಸಾಧ್ಯತೆಗಳೂ ಇರುತ್ತವೆ. 


ದೃಶ್ಯ ೨ 
ಚಳಿಗಾಲದ ದಿನಗಳು.. ಹೊರಗೆ ಹೋಗೋದು ಬಿಡಿ ಮನೆಯೊಳಗೇ ಗಡಗಡ ನಡುಗುವಷ್ಟು ಚಳಿ.. ಎಷ್ಟು ಹೊದ್ದಿಕೆ ಇದ್ದರೂ ಸಾಲದು.. ಅದರ ಜೊತೆ ಬೆಳಿಗ್ಗೆ ಮುರುಳಿ ಕೇಳೋಕೆ ಕೇಂದ್ರಕ್ಕೆ ಹೋಗಬೇಕು.. ಮಾಯೆ ದಪ್ಪನೆ ರಗ್ಗು, ದಪ್ಪನೆ ಸ್ವೇಟರ್ ತೆಗೆದುಕೊಂಡು ಬರುತ್ತದೆ.. 

ಚಳಿ ಅರೆ ಇದು ದೇಹಕ್ಕೆ ಮಾತ್ರ ಆಗುವ ಅನುಭವ.. ಲಕ್ಷಾಂತರ ಯೋಧರು ನಮ್ಮ ದೇಶದ ಗಡಿಭಾಗದಲ್ಲಿ ಮಳೆ ಬಿಸಿಲು ಚಳಿ ಎನ್ನದೆ ದೇಶವನ್ನು ಕಾಯುತ್ತಿದ್ದಾರೆ.. ದೇಹದ ಸಮಸ್ಯೆಯನ್ನು ಲೆಕ್ಕಿಸದೆ ಗಡಿ ಕಾಯುತ್ತಿರುವ ಯೋಧರು ಅವರಾದರೆ.. ನಾವು ನಮ್ಮ ಮನಸ್ಸಿನ ಗಾಡಿಯನ್ನು ಕಾಯುತ್ತಿರುವ ಯೋಧರು.. ನಮ್ಮ ಮನಸ್ಸು ಚೆನ್ನಾಗಿರಬೇಕಾದರೆ ಮುರುಳಿ ಎಂಬ ಜ್ಞಾನ ಭಂಡಾರವನ್ನು ಕೇಳಬೇಕು ಅದರ ಮುಖ್ಯಸಾರವನ್ನು ಬದುಕಿಗೆ ಅಳವಡಿಸಿಕೊಳ್ಳಬೇಕು.. ಬೆಚ್ಚಗೆ ಮನೆಯಲ್ಲಿ ಇರಬಹುದು.. ಆದರೆ ಅದು ದೇಹಕ್ಕೆ ತಾತ್ಕಾಲಿಕ ಸುಖವಷ್ಟೇ.. ಅದೇ ಸಮಯವನ್ನು ಕೇಂದ್ರದಲ್ಲಿ ಕಳೆದರೆ ಮನಸ್ಸು ಎಂಥಹ ಪರೀಕ್ಷೆಗೂ ಸಿದ್ಧವಾಗಿರುತ್ತದೆ .. 


ದೃಶ್ಯ ೩ 

ಮನೆಯಲ್ಲಿ ದೂರದರ್ಶನ, ಮೊಬೈಲ್ ನೋಡುತ್ತಾ ಕಾಲ ಕಳೆಯುತ್ತಿದ್ದಾರೆ.. ನಮ್ಮನ್ನು ಕರೆಯುತ್ತಾರೆ.. ಮಾಯಾ ತನ್ನ ದೊಡ್ಡ ಟ್ಯಾಬ್ ತೆಗೆದುಕೊಂಡು ಅದರಲ್ಲಿ ಒಳ್ಳೆಯ ಚಲನಚಿತ್ರವನ್ನು ಹಾಕಿ ತೋರಿಸುತ್ತಾ ಬರುತ್ತದೆ 

ದೂರದರ್ಶನದಲ್ಲಿ ಬರುವ ಕಾರ್ಯಕ್ರಮಗಳು ರೆಕಾರ್ಡ್ ಆಗಿರುವಂತದ್ದು, ಕ್ರೀಡೆ, ಲೈವ್ ಕಾರ್ಯಕ್ರಮಗಳು  ಬರುತ್ತವೆ ಆದರೂ ಅದನ್ನು ಆಮೇಲೆ ಕೂಡ ಮರುಪ್ರಸಾರ ಮಾಡುತ್ತಾರೆ.. ಅವು ಹೆಚ್ಚು ಸಮಯ ಕಾಲ ಪ್ರಸಾರವಾಗುತ್ತದೆ.. ಆದರೆ ಜ್ಞಾನ ಭಂಡಾರದ ರತ್ನಗಳಾದ ಧ್ಯಾನ, ಮುರುಳಿ ತರಗತಿಗಳು. ಅಮೃತವಾಣಿಗಳು ಬಹಳ ಕಾಲ ನಮ್ಮನ್ನು ಗಟ್ಟಿ ಮಾಡುತ್ತದೆ.. ವೈದ್ಯರು ಕೊಡುವ ಚಿಕಿತ್ಸೆ, ಮಾತ್ರೆಗಳು, ಟಾನಿಕ್ಕುಗಳು ಆ ಸಮಯದಲ್ಲಿ ತೆಗೆದುಕೊಂಡಾಗ ನಮ್ಮ ದೇಹದ ಆರೋಗ್ಯ ಚೆನ್ನಾಗಿರುತ್ತದೆ... ಹಾಗೆಯೇ ಈ ಕೇಂದ್ರದಲ್ಲಿ ಕಲಿಸುವ ಉತ್ತಮ ವಿಚಾರಗಳು ನಮ್ಮ ಮನಸ್ಸಿನ ಆರೋಗ್ಯವನ್ನು ಸದಾ ಕಾಪಾಡುತ್ತದೆ.. 

ದೃಶ್ಯ ೪ 
ಮೊಬೈಲ್ ಮಾಯಾ .. .ಎಷ್ಟೆಲ್ಲಾ ತರಗತಿಗಳು, ಜ್ಞಾನ ತುಂಬಿದ ವಿಡಿಯೋಗಳು ದಿನದ ಇಪ್ಪತ್ತನಾಲ್ಕು ಕಾಲ ಮೊಬೈಲಿನಲ್ಲಿ ಸಿಗುತ್ತಲೇ ಇರುತ್ತವೆ.. ಅದೇ ಪುರುಷಾರ್ಥ.. .. ಮಾಯಾ ಉತ್ತಮ ವಿಡಿಯೋ ತುಂಬಿದ ಪೆನ್ ಡ್ರೈವ್, ಸಿಡಿ, ಯು ಟ್ಯೂಬ್ ಲಿಂಕ್ ಕೊಡುತ್ತಾ ಮಾಯಾ ಬರುತ್ತದೆ 

ಈ ಜಗತ್ತು ತಂತ್ರಜ್ಞಾನದಿಂದ ಒಂದು ಪುಟ್ಟ ಹಳ್ಳಿಯಾಗಿದೆ.. ಇಲ್ಲಿ ಎಲ್ಲವೂ ಅಂಗೈಯಲ್ಲಿ ಸಿಗುತ್ತದೆ.. ಜ್ಞಾನ, ವಿಜ್ಞಾನ, ಯೋಗ, ಧ್ಯಾನ ಎಲ್ಲವೂ ಈ ಪುಟ್ಟ ಪುಟ್ಟ ವಿಡಿಯೋಗಳು ಕಲಿಸುತ್ತವೆ.. ನಿಜ.. 
ಹೊಟ್ಟೆ ಹಸಿದಿದೆ ಅಂತ ಅಮ್ಮನಿಗೆ ಫೋನ್ ಮಾಡಿ.."ಅಮ್ಮ ಹೊಟ್ಟೆ ಹಸೀತಾ ಇದೆ.. ಏನಾದರೂ ತಿಂಡಿ ಕೊಡು" ಅಂತ ಕೇಳಿದಾಗ.. ಅಮ್ಮ "ಮಗು ನಿನ್ನ ಮೊಬೈಲಿಗೆ ವಾಟ್ಸಾಪಿನಲ್ಲಿ ಅಕ್ಕಿ ರೊಟ್ಟಿ ಕಲಿಸಿದ್ದೀನಿ.. ತಿಂದು ಹಸಿವು ನೀಗಿಸಿಕೊ" ಅಂದರೆ.. ಹೊಟ್ಟೆ ಹಸಿವು ಹೋಗುತ್ತದೆಯೇ.. 
ಹಾಗೆ ಇದು ಕೂಡ.. ಎಲ್ಲಿ ಕೇಂದ್ರಗಳಲ್ಲಿ ಆ ಉತ್ತಮ ವೈಬ್ರೆಷನ್, ಉತ್ತಮ ಸಾಂಗತ್ಯ.. ಉತ್ತಮ ವಾತಾವರಣ ಇರುವಂತಹ ತಾಣದಲ್ಲಿ ಕಲಿತಾಗ ಬದುಕು ಸುಂದರ.. 

ದೃಶ್ಯ ೫

ಬದುಕಿನ ದುಡಿಮೆಯಲ್ಲಿ ದೊಡ್ಡ ಪಾಲು ಈ ಕೇಂದ್ರಕ್ಕೆ ಕೊಟ್ಟಿದ್ದಾರೆ.. ಆದರೆ ಕೇಂದ್ರದ ಯಾವುದೇ ಕಾರ್ಯಕ್ರಮದಲ್ಲಿಯಾಗಲಿ, ಅಥವ ಕೇಂದ್ರದಲ್ಲಿ ಅವರ ಹೆಸರು ಅವರ ದಾನದ ಹಣದ ಮೊತ್ತ.. ಅಥವ ಯಾವುದೇ ಹಾರ ತುರಾಯಿಗಳು.. ಸರ್ಟಿಫಿಕೇಟ್, ಫಲಕ ಯಾವುದೂ ಕೊಟ್ಟಿಲ್ಲ .. 

ದೇಶ ಕಾಯುವ ಯೋಧರು ಯುದ್ಧದಲ್ಲಿ ಜಯಶಾಲಿಗಳಾಗಿ ಬಂದ ಮೇಲೆ.. ಯಾರಿಂದಲೂ ಪ್ರಶಂಸೆ, ಹಾರಗಳನ್ನು ನಿರೀಕ್ಷಿಸೋದ್ದಿಲ್ಲ ಕಾರಣ ಅದು ಅವರ ಕರ್ತವ್ಯ.. ಎಲ್ಲರೂ ಯೋಧರಾಗೋಕೆ ಆಗೋಲ್ಲ.. ಯೋಧರಾದೋರು ಎಲ್ಲರ ತರಹ ಇರೋಕೆ ಆಗೋಲ್ಲ.. ಹಾಗೆಯೇ ಕೇಂದ್ರಕ್ಕೆ ಬರುವ ಪ್ರತಿಯೊಬ್ಬರೂ ತಮ್ಮ ಶಕ್ತಿಗೆಅನುಸಾರವಾಗಿ , ತಮ್ಮ ಕೈಲಾದಷ್ಟು ಹಣ ಸಹಾಯ ಮಾಡುತ್ತಾರೆ.. ಕೆಲವರು ದೇಹ ಶ್ರಮ ನೀಡುತ್ತಾರೆ... ಅವರ ಉದ್ದೇಶ ತಮ್ಮ ಕೈಲಾದಷ್ಟು ಕೇಂದ್ರದ ಉತ್ತಮ ಕಳಕಳಿಗೆ ಕೈಜೋಡಿಸೋದಷ್ಟೇ ಇರುತ್ತೆ ಹೊರತು ಪ್ರಶಂಸೆಗಳಿಗಾಗಿ ಅಲ್ಲ 

ದೃಶ್ಯ ೬

ಅಮೃತವೇಳೆ ಸಮಯದಲ್ಲಿ ಎದ್ದು ನಮಗೆ ಮಾರ್ಗದರ್ಶನ ನೀಡುವ ಶಕ್ತಿಯನ್ನು ನೆನಪಿಸಿಕೊಂಡು ಧ್ಯಾನ ಮಾಡುತ್ತಾ ಕೂಡುವ ಮನಸ್ಸು.. ಆದರೆ ಮಾಯೆಯ ಬಿರುಗಾಳಿ ಬೀಸಿಯೇ ಬಿಡುತ್ತದೆ.. 

ಅಲಾರಾಂ ಬಡಿದುಕೊಳ್ಳುತ್ತಲೇ ಇರುತ್ತದೆ.. ಮಾಯೆ ಆ ಅಲಾರಾಂ ಅನ್ನು ಬಡಿದುಸುಮ್ಮನಾಗಿಸುತ್ತದೆ ಇನ್ನೂ ಸ್ವಲ್ಪ ಕಾಲ ಮಲಗೋಣ ಅನ್ನಿಸೋದು ಸಹಜ.. ಆದರೆ ಯೋಚಿಸಿ.. ಒಂದು ಚಾರಣಕ್ಕೆ ಹೊರಟಿರುತ್ತೀರಿ ಬೆಟ್ಟದ ತುತ್ತ ತುದಿ ತಲುಪುವುದಕ್ಕೆ ಇನ್ನು ಸ್ವಲ್ಪವೇ ಹೆಜ್ಜೆ ಇರುತ್ತದೆ.. ಅಯ್ಯೋ ಆಗೋಲ್ಲ ನಾಳೆ ಹತ್ತಿದರಾಯ್ತು ಅಂದರೆ ಮತ್ತೆ ನಾಳೆಯೂ ಕೂಡ ಅಷ್ಟೇ ಎತ್ತರ.. ಅಷ್ಟೇ ದೂರ ಸಾಗಲೇ ಬೇಕಾಗುತ್ತದೆ.. ಪ್ರತಿದಿನ ಅಮೃತವೇಳೆಯ ಸಮಯದಲ್ಲಿ ಎದ್ದು ಯೋಗ, ಧ್ಯಾನ ಮಾಡಿ ದೇಹವನ್ನು, ಮನಸ್ಸನ್ನು ಹದ ಮಾಡಿಕೊಂಡು ಇರುವಾಗ ಆ ಅಭ್ಯಾಸ ತಪ್ಪಿದರೆ ಮತ್ತೆ ನಮ್ಮ ನಿಯಂತ್ರಕ್ಕೆ ಸಿಗೋದು ಕಷ್ಟ.. ವೈದ್ಯರು ಹೇಳಿದ ಔಷಧಿಯನ್ನು ಹೇಳಿದ ಸಮಯಕ್ಕೆ ಹೇಳಿದ ದಿನಗಳಿಗೆ ತೆಗೆದುಕೊಂಡಾಗ ಆರೋಗ್ಯ ಮತ್ತೆ ನಮ್ಮದಾಗುವಂತೆ.. ನಾವು ಮಾಡಿಕೊಂಡ ಅಮೃತ್ಯವೇಳೆಯ ಕಾಲದ ಅಭ್ಯಾಸವನ್ನು ಎಂದಿಗೂ ಬಿಡಬಾರದು.. 

ದೃಶ್ಯ ೭ 
ನಮ್ಮ ಬದುಕಿನಲ್ಲಿ ಶ್ರೀಮತವನ್ನು ಅನುಸರಿಸಿದ್ದೀವಿ.. ಬೇಕಾದಷ್ಟು ಸೇವೆ ಮಾಡಿದ್ದೀವಿ .. ಬದುಕಿನಲ್ಲಿ ಈ ಸಮಯದಲ್ಲಿ ದೇಹದಲ್ಲಿ ಅನಾರೋಗ್ಯ ಕಾಣಿಸಿಕೊಳ್ಳುತ್ತದೆ.. ಔಷಧಿ ತೆಗೆದುಕೊಂಡಿದ್ದೀವಿ.. ಮಾಯೆ ಆರೋಗ್ಯವನ್ನು ಕಾಡುವ ಸಿಹಿ ತಿಂಡಿಯನ್ನು ತಂದು ಬಿಡುತ್ತದೆ.. 

ಬದುಕಿನಲ್ಲಿ ಶ್ರೀಮತ ಅನುಸರಿಸಿ ಮನಸ್ಸನ್ನು ಶುದ್ಧಿಗೊಳಿಸಿಕೊಂಡಿದ್ದೀವಿ.. ಮನಸ್ಸು ಆರೋಗ್ಯಕರವಾಗಿದೆ.. ಈಗ ಬಂದಿರುವುದು ದೇಹಕ್ಕೆ ಅನಾರೋಗ್ಯ.. ಇದು ವಯೋಸಹಜ ಆರೋಗ್ಯದ ಸಮಸ್ಯೆ ಇದಕ್ಕೂ ಬದುಕಿಗೆ ಮಾರ್ಗ ತೋರಿಸಿದ ಕೇಂದ್ರಕ್ಕೂ ಸಂಬಂಧವಿಲ್ಲ.. ಕೇಂದ್ರಕ್ಕೆ ಹೋಗೋದು, ಅಲ್ಲಿ ಸೇವೆ ಮಾಡೋದು.. ಒಳ್ಳೆಯ ಸಂದೇಶಗಳನ್ನು ಅನುಸರಿಸಿ ಜೀವನ ಮಾಡೋದು ಇದನ್ನು ಬಿಡಲಾಗದು.. ದೇಹದ ಆರೋಗ್ಯ ಕಾಪಾಡೋಕೆ ವೈದ್ಯರಿದ್ದಾರೆ,ದೇವರಿದ್ದಾನೆ .. ಮನಸ್ಸಿನ ಸ್ವಾಸ್ಥತೆಯನ್ನು ಕಾಪಾಡೋದು ಈ ಕೇಂದ್ರ.. ಅದನ್ನು ಬಿಡಲಾಗದು.. 

ದೃಶ್ಯ ೮

ನಮ್ಮ ಬಂಧುಮಿತ್ರರಿಂದ ಒಳ್ಳೆಯ ಊಟೋಪಚಾರಕ್ಕಾಗಿ ಆಹ್ವಾನವಿರುತ್ತದೆ.. ಜೀವನದಲ್ಲಿ ಪಾಲಿಸಿಕೊಂಡು ಬಂದ ಶ್ರೀಮತ ಸೇರಿದ ಆಹಾರ ಪದ್ಧತಿ ಇನ್ನೊಂದು ಕಡೆ  ಬಂಧು ಮಿತ್ರರ ಪ್ರೀತಿಯ ಆಹ್ವಾನ.. ಏನು ಮಾಡೋದು.. ಮಾಯೆ ತನ್ನ ತಟ್ಟೆಯಲ್ಲಿ ಎಲ್ಲಾ ರೀತಿಯ ಆಹಾರವನ್ನು ತುಂಬಿಕೊಂಡು ಬರುತ್ತದೆ.. 

ನಾವು ನಂಬಿದ ಸಿದ್ಧಾಂತಗಳು, ನಂಬಿಕೆಗಳು ಇವುಗಳೇ ನಮಗೆ ಮಾರ್ಗದರ್ಶನ.. ಇದೆ ನಮ್ಮ ಯಶಸ್ಸಿಗೆ ಕಾರಣವಾಗೋದು.. ಇದನ್ನು  ಎಂದಿಗೂ ಬಿಡಬಾರದು.. ಕಾಡಿನಲ್ಲಿ ಶಾಖಾಹಾರಿ ಪ್ರಾಣಿಗಳಾದ ಹುಲಿ ಸಿಂಹ ಚಿರತೆ ನರಿ ತೋಳ ಮುಂತಾದವುಗಳು ಎಷ್ಟೇ ಹಸಿದಿರಲಿ ತಮ್ಮ ಆಹಾರ ಪದ್ಧತಿಯನ್ನು ಮರೆಯೋದಿಲ್ಲ.. ಹಾಗೆಯೇ ಸಸ್ಯಾಹಾರಿಗಳಾದ ಜಿಂಕೆ, ಆನೆ, ಹಸುಗಳು, ಜಿರಾಫೆ, ಕುದುರೆ, ಕತ್ತೆಗಳೂ ಕೂಡ.. ಹಾಗೆಯೇ ನಮ್ಮ ಆಹಾರ ಪದ್ಧತಿಗಳನ್ನು ಕೂಡ ನಿಭಾಯಿಸಬೇಕು.. ಅವರ ಪ್ರೀತಿ ವಿಶ್ವಾಸಗಳಿಗೆ ತಲೆ ಬಾಗೋಣ ಆದರೆ.. ನಮ್ಮ ಆಹಾರ ಪದ್ಧತಿಗಳನ್ನು ಅನುಸರಿಸೋಣ.. 

 





******
ಈ ರೀತಿಯ ಅನೇಕಾನೇಕ ಕಲಿಕೆಗಳು ಪಾಠಗಳು ಉತ್ತಮ ಸಂದೇಶಗಳು ನಮ್ಮ ಜೀವನವನ್ನು ಹಸಿರಾಗಿಸುವಷ್ಟೇ ಅಲ್ಲ.. ಬದುಕನ್ನು ಸುಂದರಗೊಳಿಸುತ್ತವೆ.. 

ಈ ರೀತಿಯ ಅದ್ಭುತ ಕಾಲವನ್ನು ಸುಂದರವಾಗಿ ನೋಡಲಿಕ್ಕೆ ಅನುಕೂಲಮಾಡಿಕೊಟ್ಟ ರವೀಂದ್ರ ನಾಥ ಠಾಗೋರ್ ನಗರ ಅರ್ಥಾತ್ ಆರ್ ಟಿ ನಗರದ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ಭುವನೇಶ್ವರಿ ಅಕ್ಕ ಮತ್ತು ಅವರ ಅತ್ಯುತ್ತಮ ತಂಡದ ಪ್ರತಿ ಸದಸ್ಯರಿಗೂ ನನ್ನ ಮನದಾಳದ ಅಭಿನಂದನೆಗಳು ಹಾಗೂ ಧನ್ಯವಾದಗಳು..!!!

Wednesday, April 17, 2024

ಇದು ರಾಮ ಮಂದಿರ ನೀ ರಾಮಚಂದಿರ!!!!

ಒಂದು  ಸಾವಿರದ ಐನೂರು ಇಸವಿಯ ಆಸುಪಾಸು.. 

ಒಂದು ಸದ್ ಕುಟುಂಬದಲ್ಲಿ ಭೀಕರ ಚರ್ಚೆ ನೆಡೆಯುತ್ತಿತ್ತು.. ಆ ಚರ್ಚೆಗೆ ಮುಖ್ಯ ಕಾರಣ.. ಪ್ರಭು ಶ್ರೀ ರಾಮ ಚಂದ್ರನ ಹುಟ್ಟಿದ ಭೂಮಿ ಎನ್ನಲಾದ.. ಶ್ರೀ ರಾಮಚಂದ್ರ ಪುಟ್ಟ ಮಗುವಿನ ಮೂರ್ತಿ ಇತ್ತು ಎನ್ನಲಾದ ದೇವಾಲಯವನ್ನು ಕೆಡವಿ ಅಲ್ಲಿ ಬೇರೆ ಧರ್ಮದ ಕಟ್ಟಡ ಎದ್ದು ನಿಂತಿದೆ ಎನ್ನುವುದು. 

"ಅಮ್ಮ ಸದಾ ರಾಮ ರಾಮ ಎನ್ನುತ್ತಿದ್ದ ಶ್ರೀ ರಾಮ ನೋಡಿದೆಯಾ ಹೇಗೆ ಕೈ ಕೊಟ್ಟು ಬಿಟ್ಟ.. ಇದು ರಾಮ ಮಂದಿರ ನೀ ರಾಮಚಂದಿರ ಎನ್ನುತ್ತಾ ಹಾಡುತ್ತಿದ್ದ ಕೋಟ್ಯಂತರ ಮಂದಿಗೆ ಎಂಥಹ ಆಘಾತ ಕೊಟ್ಟು ಬಿಟ್ಟ ನಿನ್ನ ಶ್ರೀ ರಾಮ.. ನೋಡಿದೆಯಾ?" ಎನ್ನುತ್ತಾ ಮಮ್ಮಲ ಮರುಗುತಿದ್ದ ಆ ಮಾತುಗಳನ್ನು ಕೇಳಿದಾಗ ಯಾರಿಗೆ ಆದರೂ ಹೊಟ್ಟೆಯಲ್ಲಿ ಇಲಿ ಓಡಾಡಿದ ಅನುಭವವಾಗುತ್ತಿತ್ತು.. ಅವರ ಮಾತಿನ ಉದ್ದೇಶ.. "ಶ್ರೀ ರಾಮ ಆ ದೇವಾಲಯ ಬೀಳುವಾಗ ತನ್ನನ್ನೇ ತಾನು ರಕ್ಷಣೆ ಮಾಡಿಕೊಳ್ಳಲಿಲ್ಲ ಎನ್ನುವ ಅರ್ಥ ಕೂಡಿತ್ತು.. "

ಹಲವಾರು ಶತಮಾನಗಳ ಕಾಲ ಒಂದು ತಾತ್ಕಾಲಿಕ, ದುಸ್ತರ ಸ್ಥಿತಿಯ ಪುಟ್ಟ ಪೆಟ್ಟಿಗೆಯಂಥ ಗುಡಿಯಲ್ಲಿ ನಿಂತಿದ್ದ ಬಾಲರಾಮನಿಗೆ ಭವ್ಯವಾದ ಒಂದು ಗುಡಿಯನ್ನು ಕಟ್ಟಬೇಕೆಂದು ಆ ಊರಿನ ಭಕ್ತರ ಸಮೂಹ ನಿರ್ಧಾರ ಮಾಡಿತು.. 

ಆ ನಿರ್ಧಾರ ಸುಲಭದ್ದು ಆಗಿರಲಿಲ್ಲ.. ಅನೇಕಾನೇಕ ತೊಡಕುಗಳು, ಹಿಂಸಾಚಾರಗಳು, ಬಲಿದಾನ ಎಲ್ಲವೂ ನೆಡೆದವು.. ಆದರೂ ಮನಸ್ಸು ಕುಗ್ಗಿರಲಿಲ್ಲ, ಧೈರ್ಯ ಹೆಚ್ಚಾಗುತ್ತಲೇ ಇತ್ತು.. 

ಪ್ರಭು ಶ್ರೀರಾಮನ ದರ್ಶನಕ್ಕೆ ಕಾದಿದ್ದ ಶಬರಿಯಂತೆ, ಶ್ರೀರಾಮಚಂದ್ರನ ಪಾದ ಸ್ಪರ್ಶಕ್ಕೆ ಕಾದಿದ್ದ ಅಹಲ್ಯೆಯಂತೆ ಆ ಒಂದು ಕ್ಷಣ ಬಂದೆ ಬಿಟ್ಟಿತು.. ದೇಶದಾದ್ಯಂತ ಶ್ರೀ ರಾಮಚಂದ್ರನಿಗಾಗಿ ಗುಡಿಯನ್ನು ಕಟ್ಟಬೇಕೆಂಬ ಐನೂರು ವರ್ಷಗಳಷ್ಟು ಹಿಂದಿನ ಸಂಕಲ್ಪಕ್ಕೆ ಮತ್ತೆ ಚಾಲನೆ ಸಿಕ್ಕಿತು.. 

ದೇಶದಾದ್ಯಂತ ಅದಕ್ಕೆ ಸಹಿ ಸಂಗ್ರಹ ಅಭಿಯಾನ ಶುರು ಮಾಡಿದರು.. ನನ್ನ ಮನೆಗೂ ಆ ಸಹಿ ಸಂಗ್ರಹ ಮಾಡುವ ಸೇನೆ ಬಂದಾಗ ಸಹಿ ಮಾಡಿ ಕೇಳಿದೆ "ಸಹಿ ಹಾಕುವೆ ಆದರೆ ನಿಜಕ್ಕೂ ಈ ಕಾರ್ಯ ಸಾಧ್ಯವೇ?"  ಸಿಕ್ಕ ಉತ್ತರ "ಮಂದಿರ ಅಲ್ಲೇ‌ ಕಟ್ಟುವೆವು"

ಅದಾಗಿ ದಶಕಗಳೇ ಕಳೆದವು.. ಆ ಸುವರ್ಣ ಸಮಯ ಬಂದೆ ಬಿಟ್ಟಿತು.. ನಮ್ಮ ಕಾಲಘಟ್ಟದಲ್ಲಿ ಈ ಅಭೂತ ಪೂರ್ವ ಘಟನೆಗೆ ನಮ್ಮ ಕಣ್ಣುಗಳು ಸಾಕ್ಷಿಯಾಗಿಯೇ ಬಿಟ್ಟಿತು.. 

ಶ್ರೀ ರಾಮನ ಹೆಜ್ಜೆ ಗುರುತನ್ನು ದಾಖಲಿಸಿದ ಪುಣ್ಯ ಭೂಮಿ ಅಯೋಧ್ಯೆಯಲ್ಲಿ ಭೂಮಿ ಪೂಜೆಯನ್ನು ಆಗಸ್ಟ್ ಐದು ಎರಡು ಸಾವಿರದ ಇಪ್ಪತ್ತನೇ ಇಸವಿಯಂದು ನೆರವೇರಿತು.. 

ಈ ಪುಣ್ಯ ಕಾರ್ಯಕ್ಕಾಗಿಯೇ ಹುಟ್ಟಿದ್ದಾರೇನೋ ಅನಿಸುವಂಥಹ ಅದ್ಭುತ ವ್ಯಕ್ತಿತ್ವದ ನಮ್ಮೆಲ್ಲರ ನೆಚ್ಚಿನ ನಾಯಕ ಶ್ರೀ ನರೇಂದ್ರ ಮೋದಿ ಅವರ ಕರಸೇವೆಯಲ್ಲಿ ಈ ಶುಭ ಕಾರ್ಯ ಜರುಗಿತು. 

ನಂತರ ಇಪ್ಪತ್ತೆರಡು ಜನವರಿ ಎರಡು ಸಾವಿರದ ಇಪ್ಪತ್ತನಾಲ್ಕನೇ  ಇಸವಿ ಆ ಭವ್ಯ ಮಂದಿರದಲ್ಲಿ ನಮ್ಮ ಕರುನಾಡಿನ ಜಕ್ಕಣ್ಣಚಾರಿ ಶ್ರೀ ಅರುಣ್ ಯೋಗಿರಾಜ್ ಅವರ ಪುಣ್ಯ ಮಾಡಿದ ಕರಗಳಿಂದ ನಿರ್ಮಿತವಾದ ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯ ಹಾಗೂ ದೇವಾಲಯವನ್ನು  ಲೋಕಾರ್ಪಣೆ ಮಾಡಿದ ಅಮೃತಕ್ಷಣಗಳನ್ನು ದೂರದರ್ಶನದಲ್ಲಿ ನೋಡಿ ನಮ್ಮ ಕಣ್ಣುಗಳು ಪಾವನವಾಗಿದ್ದವು.. 

ಕೃಪೆ -ಗೂಗಲೇಶ್ವರ 


ಅಂದು ದೇಶ ವಿದೇಶಗಳಲ್ಲಿ ಈ ಐತಿಹಾಸಿಕ ಕ್ಷಣಗಳನ್ನು ಸಂಭ್ರಮಿಸಿದ್ದು, ಮನೆ ಮನಗಳಲ್ಲಿ ದೀಪ ಬೆಳಗಿದ್ದು, ಇಡೀ ಭುವಿಯೇ ಅಯೋಧ್ಯೆಯ ಕಡೆ ಗಮನ ಹರಿಸಿದ್ದು ವಿಶೇಷವಾಗಿತ್ತು.. 

ಕೃಪೆ -ಗೂಗಲೇಶ್ವರ 

ಈ ಹೆಮ್ಮೆಯ ಕ್ಷಣಗಳನ್ನು ನೋಡುತ್ತಾ ನೋಡುತ್ತಾ ಆನಂದ ಪಡುತ್ತಾ "ಇದು ರಾಮಮಂದಿರ.. ನೀ ರಾಮಚಂದಿರ.. ಜೊತೆಯಾಗಿ ನೀ ಇರಲು ಬಾಳು ಸಹಜ ಸುಂದರ" ಎನ್ನುವ ಹಾಡನ್ನು ಗುನುಗುನಿಸದೆ ಇರಲು ಸಾಧ್ಯವಾಗುತ್ತಲೇ ಇರಲಿಲ್ಲ.. 

ಅಂದು ನಮ್ಮ ಮನೆಯಲ್ಲೂ ಬಾಲರಾಮನ ಪುಟ್ಟ ಸ್ವಾಗತಕ್ಕೆ ಒಂದಷ್ಟು ಸಿದ್ಧತೆಗಳು, ಆಚರಣೆ ನೆಡೆದಿತ್ತು.. ಒಂದು ಸಾರ್ಥಕ ಭಾವದಲ್ಲಿ ಮಲಗಿದ್ದೆ.. 

ಬೆಳಗಿನ ಜಾವ ಸಕ್ಕರೆ ನಿದ್ದೆಯಲ್ಲಿದ್ದೆ "ಶ್ರೀ ಶ್ರೀ" ಯಾರೋ ಕರೆದಂತೆ.. ಯಾರೋ ಬಾಣದಿಂದ ನನ್ನನ್ನು ಮುಟ್ಟಿದಂತೆ ಭಾಸವಾಯಿತು .. 

ಕೃಪೆ -ಗೂಗಲೇಶ್ವರ 

ಅರೆಗಣ್ಣು ತೆರೆದು ನೋಡಿದೆ.. ಒಂದು ಪುಟ್ಟ ಬಾಲಕ .. ಕಷಾಯ ವಸ್ತ್ರಧಾರಿ... ನಗು ನಗುತ್ತ "ಏನು ಶ್ರೀ.. ನನ್ನ ಬಗ್ಗೆ ಮಾತಾಡೋದೇ ಇಲ್ಲ.. ನನ್ನ ಬಗ್ಗೆ ಬರೆಯೋದೇ ಇಲ್ಲ.. ನನಗಿಂತ ನನ್ನ ಮುಂದಿನ ಅವತಾರ ಶ್ರೀ ಕೃಷ್ಣನೇ ನಿನಗೆ ಬಲು ಪ್ರಿಯ ಅಂತ ನೂರಾರು ಕಡೆ ಹೇಳಿದ್ದೆ.. ಇವತ್ತು ನೋಡಿದರೆ ನನ್ನನ್ನು ಸಿಂಗರಿಸಿ, ನನ್ನ ಜೀವನದ ಕೆಲವು ಚಿತ್ರಗಳನ್ನು ಪ್ರದರ್ಶಿಸಿ, ಇದು ಅದ್ಭುತ ಕ್ಷಣಗಳು ಶ್ರೀ ರಾಮಚಂದ್ರಯಾನ ಅಂತೆಲ್ಲ ಬರೆದು.. ದೊಡ್ಡದಾಗಿ ಸಂಭ್ರಮಿಸಿದ್ದೀಯಾ.. ಏನು ಸಮಾಚಾರ"

"ಪ್ರಭು ಶ್ರೀ ರಾಮಚಂದ್ರನೇ .. 
ನೀನು ನಾನು ಒಂದೇ ಏನು  
ಹೊನ್ನು ಮಣ್ಣು ಸರಿ ಸಮವೇನು 
ಎಲ್ಲಾ ಬಲ್ಲ ತಂದೆಯು ನೀನು .... ಅಲ್ಲ ಪ್ರಭುವೇ.. ನಿನ್ನ ಶಕ್ತಿ.. ನಿನ್ನ ತಾಳ್ಮೆ.. ನಿನ್ನ ಧೈರ್ಯ, ನಿನ್ನ ಮಮತೆ ಎಲ್ಲಿ ಕಾಣಲು ಸಾಧ್ಯ.. ಬದುಕಿದರೆ ಹೀಗೆ ಬದುಕುಬೇಕು ಎಂದು ರಹದಾರಿ ಹಾಕಿಕೊಟ್ಟ ಮಹಾಮಹಿಮನು ನೀನು.. ಆದರೂ ಶ್ರೀ ಕೃಷ್ಣನ ಮಾತುಗಳು.. ಆ ಕಷ್ಟಗಳನ್ನು ಎದುರಿಸಲು  ಸಲಹೆಗಳು, ಆ ಮಾಯೆ, ಆ ನಗು, ಆ ಹಿತನುಡಿಗಳು, ಸವಾಲುಗಳನ್ನು ನಗು ನಗುತ್ತಲೇ ಸೋಲಿಸುವ ಆ ಗುಣಗಳು ನನಗೆ ಮಾರ್ಗದರ್ಶಿ.. ಮತ್ತು ಸ್ಫೂರ್ತಿ ಹಾಗಾಗಿ ನನಗೆ ನಿನ್ನ ಇನ್ನೊಂದು ಅವತಾರ ಇಷ್ಟೇ.. ಆದ್ರೆ ಪ್ರತಿ ಸಂದರ್ಭದಲ್ಲೂ ರಾಮ ರಾಮ ಅಯ್ಯೋ ರಾಮ.. ಎನ್ನುವ ನನ್ನ ಮನಸ್ಸು ನಿನ್ನ ಬಗ್ಗೆಯೇ ಗುಪ್ತಗಾಮಿನಿಯ ಹಾಗೆ ಹರಿಯುತ್ತಲೇ ಇರುತ್ತದೆ.. ಅದು ನಿನಗೆ ಗೊತ್ತು.. ಕಳ್ಳ ನೀನು ನನ್ನ ಪರೀಕ್ಷೆ ಮಾಡುತ್ತಿದ್ದೆಯ ಅಷ್ಟೇ.. ಮೇಲೆ ಹಾಡಿದ ಹಾಡನ್ನೇ ಇನ್ನೊಮ್ಮೆ ವಿಭಿನ್ನವಾಗಿ ಹಾಡುತ್ತೇನೆ ನೋಡು.. 

ನೀನು ನಾನು ಒಂದೇ ಏನು  
ಹೊನ್ನು ಮಣ್ಣು ಸರಿ ಸಮವೇನು 
ಎಲ್ಲಾ ಬಲ್ಲ ಕಳ್ಳನು ನೀನು 
ನಿನಗೀ ಮಾತು ಸರಿಯೇನು" 


"ನಾನು ನೀನು ನೆಂಟರಯ್ಯ ನಮಗೆ ಭೇದ ಇಲ್ಲವಯ್ಯಾ.. "

"ಅರೆ ಶ್ರೀ ಹಾಡೋಕೆ ಶುರು ಮಾಡಿದೆ.. ನಿಜಕ್ಕೂ ನನಗೆ ಖುಷಿಯಾಗುತ್ತಿದೆ.. ನಾ ಹುಟ್ಟಿ ಬೆಳೆದ ನಾಡಿನಲ್ಲಿ ಮತ್ತೆ ನನಗೊಂದು ನೆಲೆ ಸಿಕ್ಕಿದೆ.. ಇದಕ್ಕಿಂತ ಇನ್ನೇನು ಬೇಕು.. ನೋಡು ಆ ಮೂರ್ತಿಯಲ್ಲಿ ಕಾಣುವ ಹಾಗೆ ನನ್ನ ಕಣ್ಣುಗಳು ಒದ್ದೆಯಾಗಿವೆ.. ಭರತ ಭೂಮಿ .. ಇದು ಬರಿ ಭೂಮಿಯಲ್ಲ.. ಇದು ಸ್ವರ್ಗದ ಒಂದು ತುಣುಕು.. ಭಾರತಮಾತೆಯ ವರಪುತ್ರ ನರೇಂದ್ರ ಮೋದಿ ನಾಯಕತ್ವದಲ್ಲಿ ಈ ಭವ್ಯ ಭಾರತ ಮತ್ತೆ ಸುವರ್ಣಯುಗವನ್ನು ನೋಡಿಯೇ ನೋಡುತ್ತಿದೆ.. ಎಲ್ಲರಿಗೂ ಶುಭವಾಗಲಿ.. ನನ್ನ ಜನುಮದಿನವನ್ನು ನಿಮ್ಮೆಲ್ಲರ ಜನುಮದಿನಂದಂತೆ ಆಚರಿಸುತ್ತಿರುವ ನಿಮಗೆ.. ಮತ್ತು ನಿಮ್ಮೆಲ್ಲರ ನೆಚ್ಚಿನ ನಾಯಕ ನರೇಂದ್ರ ಮೋದಿಯವರಿಗೆ ಶುಭವಾಗಲಿ.. "

"ಶ್ರೀ ಏಳಿ ಎದ್ದೇಳಿ.. ಆಫೀಸಿಗೆ ಹೋಗುವ ಸಮಯವಾಯಿತು.. ಯಾಕಿಷ್ಟು ನಿದ್ದೆ ಮಾಡುತ್ತಿದ್ದೀರಿ.. "

ಕಣ್ಣು ಬಿಟ್ಟೆ.. "ಶ್ರೀ ರಾಮಚಂದ್ರ ಬಾಲಕನಾಗಿ ಆ ಚಿತ್ರದಲ್ಲಿ ನಗುತ್ತ All the best Sri" ಅಂತ ಹೇಳಿದಂತೆ ಆಯಿತು.. 


ಮನಸ್ಸಿನಲ್ಲಿಯೇ "ಜೈ  ಶ್ರೀ ರಾಮ್" ಎಂದೇ.. ಮೊಬೈಲಿನಲ್ಲಿ ಶ್ರೀ ವಿಷ್ಣು ಸಹಸ್ರನಾಮದಲ್ಲಿನ 

"ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ | ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ" ಶ್ಲೋಕ ಬರುತ್ತಿತ್ತು.. 

ಶ್ರೀ ಕೃಷ್ಣನ ಫೋಟೋ ನೋಡಿದೆ.. ಶಭಾಷ್ ಶ್ರೀ ಎಂದಂತೆ ಆಯಿತು.. ಶ್ರೀ ರಾಮನ ಫೋಟೋ ನೋಡಿದೆ.. ಬಂಗಾರದ ಮೊಗದಲ್ಲಿ ನಸು ನಗು ಕಂಡಿತು!

Sunday, March 24, 2024

ಕಗ್ಗಂಟಿನ ಕರದಂಟು - ಡಿವಿಜಿ ಅಜ್ಜ - ೨

ಜೀವ ಜಡರೂಪ ಪ್ರಪಂಚವನದಾವುದೋ|
ಆವರಿಸಿಕೊಂಡುಮೊಳನೆರೆದುಮಿಹುದಂತೆ||
ಭಾವಕೊಳಪಡದಂತೆ ಅಳತೆಗಳವಡದಂತೆ|
ಆ ವಿಶೇಷಕ್ಕೆ ಮಣಿಯೊ - ಮಂಕುತಿಮ್ಮ|| ೨||

-ಚಿತ್ರಕೃಪೆ  ಗೂಗಲೇಶ್ವರ 

ಬಭೃವಾಹನ ಚಿತ್ರ.. ಅರ್ಜುನ ತೀರ್ಥಯಾತ್ರೆಗೆ ಹೋಗಿರುತ್ತಾನೆ.. ಅರ್ಜುನ ನದಿಯಲ್ಲಿ ಜಳಕ ಮಾಡುತ್ತಿದ್ದಾಗ ಮೋಹಿತಳಾದ ನಾಗಲೋಕದ ಕೌರವ್ಯನ  ಮಗಳು ಉಲೂಚಿ ಹಾವಿನ ರೂಪದಲ್ಲಿ ಬಂದು ಅವನನ್ನು ನಾಗಲೋಕಕ್ಕೆ ಕರೆದೊಯ್ಯುತ್ತಾಳೆ. ಅಲ್ಲಿ ಅರ್ಜುನನ ಮೈಮರೆತಿರುವಾಗ ಆತನಿಗಿಗಾಗಿ ಇನ್ನೆರೆಡು ಜೀವಗಳು ಕಾಯುತ್ತಿವೆ ಎಂದು ಶ್ರೀ ಕೃಷ್ಣ ಅರ್ಜುನನನ್ನು ಮಣಿಪುರಕ್ಕೆ ತನ್ನ ಮಾಯೆಯಿಂದ ಕರೆಸುತ್ತಾನೆ.  

ಮಣಿಪುರದ ರಾಜಕುಮಾರಿ ಚಿತ್ರಾಂಗದೆಯನ್ನು ಕಂಡು ಮೋಹಿತನಾಗಿ ಗಾಂಧರ್ವ ವಿವಾಹವಾಗುತ್ತಾನೆ. ಅಲ್ಲಿಯೂ ಅರ್ಜುನನನ್ನು ಉಳಿಯಲು ಬಿಡದೆ,  ಶ್ರೀಕೃಷ್ಣ ಲೋಕಕಲ್ಯಾಣ ಕಾರ್ಯದ ಹಾದಿಯಲ್ಲಿ ಅರ್ಜುನ ಶ್ರೀ ಕೃಷ್ಣನ ತಂಗಿ ಸುಭದ್ರೆಯನ್ನು ಮದುವೆಯಾಗಬೇಕಾಗಿರುತ್ತದೆ. ಆದ್ದರಿಂದ ಭೀಮ ಪುತ್ರ ಘಟೋತ್ಕಚನ ಮೂಲಕ ಅರ್ಜುನನನ್ನು ದ್ವಾರಕೆಗೆ ಕರೆಸಿಕೊಳ್ಳುತ್ತಾನೆ.. 

ಆದರೆ ಇತ್ತ ಅರ್ಜುನನಿಂದ ಗರ್ಭಿಣಿಯಾಗಿರುವ ಚಿತ್ರಾಂಗದೆ, ಮತ್ತು ಗಾಂಧರ್ವ ವಿವಾಹಿತೆ ಉಲೂಚಿ ಅರ್ಜುನನನ್ನು ಕಾಣದೆ ಪರಿತಪಿಸುವಾಗ ಮತ್ತು ಪ್ರಜೆಗಳು ಚಿತ್ರಾಂಗದೆ ಮತ್ತು ಉಲೂಚಿಯನ್ನು ಸಾಮಾಜಿಕ ದೃಷ್ಟಿಯಲ್ಲಿ ಕಳಂಕಿತಳು ಎಂದು ನೋಡಬಹುದು ಎಂದು ನಾಗಲೋಕದ ಅರಸು ಕೌರವ್ಯ ಮಣಿಪುರಕ್ಕೆ ಬಂದು ಎಲ್ಲಾ ರಾಜ ಮಹಾರಾಜರು,ಮಂತ್ರಿಗಳು, ಸಾಮಂತರನ್ನು,  ಪ್ರಜೆಗಳನ್ನು ಉದ್ದೇಶಿಸಿ "ಮಹಾರಾಜಾ, ಮಂತ್ರಿಗಳೇ, ಸಾಮಂತರೆ  ನಮ್ಮೆಲ್ಲರ ಜೀವನ ಸೂತ್ರವನ್ನ ಒಂದು ಮಹಾಶಕ್ತಿಯು ಹಿಡಿದು ಆಡಿಸುತ್ತಿದೆ, ಆ ಮಹಾಶಕ್ತಿಯೇ ಪಾರ್ಥನನ್ನು ಈ ಸ್ಥಳದಿಂದ ಬೇರೊಂದು ಸ್ಥಳಕ್ಕೆ ಕರೆದುಕೊಂಡು ಹೋಗಿದೆ.. ಕಾಲ ಬರುವ ತನಕ ಚಿತ್ರಾಂಗದೆ ಮತ್ತು ಉಲೂಚಿಯನ್ನುಆದರಿಸಬೇಕು ಎಂದು ಹೇಳುತ್ತಾನೆ .. 


ನಮ್ಮ ಜಗತ್ತಿನಲ್ಲೂ ನಮ್ಮ ಬದುಕಿನಲ್ಲೂ ಹಾಗೆ ಅಂದುಕೊಂಡದ್ದು ನೆಡೆಯದೆ, ಅಥವ ಫಲಿತಾಂಶ ನಿಧಾನವಾಗುತ್ತದೆ. ಊಹಿಸದ ಚಮತ್ಕಾರಗಳು ನೆಡೆಯುತ್ತವೆ.. ಆಗ ನಮಗೆ ಅಚ್ಚರಿಯಾಗುವುದು ಉಂಟು. ಆ ಮಹಾಮಹಿಮನ ಮುಂದಿನ ನೆಡೆ, ಆತ ನಮ್ಮ ಬದುಕಲ್ಲಿ ಮಾಡುವ ಚಮತ್ಕಾರಗಳು ಎಣಿಸಲಸಾಧ್ಯ, ಊಹಿಸಲಸಾಧ್ಯ.. 

ಸಕಲ ಚರಾಚರವಸ್ತುಗಳಲ್ಲಿ ಅಣುರೇಣು ತೃಣಕಾಷ್ಠಗಳಲ್ಲಿ ಆತನ ವಿಶೇಷ ಶಕ್ತಿ, ವಿಶಿಷ್ಟ ಮಾಯೆ, ಪ್ರಪಂಚದಲ್ಲಿ ನಮ್ಮ ಎಣಿಕೆಗೆ ಸಿಗದೇ ಆದರೆ ಅದು ನಮ್ಮ ಬದುಕನ್ನು ಮುನ್ನೆಡೆಸುವ ದಾರಿದೀಪವಾಗುತ್ತದೆ.. ಆ ವಿಶೇಷ ಶಕ್ತಿಗೆ ಒಂದು ನಮಸ್ಕಾರ ಹಾಕಿ  ಎಂದು ಹೇಳುವ , ಈ ವಿಷಯವನ್ನು ನಾಲ್ಕು ಸಾಲುಗಳಲ್ಲಿ ಹಿಡಿದಿಟ್ಟ ಕಗ್ಗದ ಅಜ್ಜನಿಗೆ ಒಂದು  ನಮಸ್ಕಾರ ಎನ್ನೋಣವೇ !!!

Sunday, March 17, 2024

ಕಗ್ಗಂಟಿನ ಕರದಂಟು - ಡಿವಿಜಿ ಅಜ್ಜ - ೧

ಜಗತ್ತೇ ಒಂದು ಕಗ್ಗಂಟಾಗಿರುವಾಗ ಅದರೊಳಗೆ ಮಂಕುತಿಮ್ಮ ಎಂಬ ಪಾತ್ರದ ಮೂಲಕ, ಜಗತ್ತಿನ ವಿಶೇಷಗಳನ್ನು, ವಿಶಿಷ್ಟತೆಗಳನ್ನು, ತಾವು ಓದಿದ ಪುರಾಣ, ಪುಣ್ಯಕತೆಗಳು, ಐತಿಹಾಸಿಕ ಕ್ಷಣಗಳು, ತಾವು ಕೇಳಿದ ಜನಜನಿತ ಕತೆಗಳು, ಹಾಡುಗಳು, ಸಂಗತಿಗಳು, ತಮ್ಮ ಬದುಕಿನ ಕಥೆಗಳು.. ಜಗತ್ತಿನಲ್ಲಿ ನೆಡೆಯುವ ಅನೇಕಾನೇಕ ಪವಾಡಸದೃಶ್ಯಗಳನ್ನು ನಾಲ್ಕು ಸಾಲುಗಳಲ್ಲಿ ಹಿಡಿದಿಡುತ್ತಾ, ಸಾರ್ವಕಾಲಿಕ ಸತ್ಯವಾದ ಕಗ್ಗಗಳನ್ನು ಸೃಷ್ಟಿಸಿರುವ ಕಗ್ಗದ ಅಜ್ಜನಿಗೆ ನಮಿಸುತ್ತಾ.. ಈ ಜೈತ್ರಯಾತ್ರೆಯನ್ನು ಆರಂಭಿಸುತ್ತಿದ್ದೇನೆ.. 


ಚಿತ್ರಕೃಪೆ - ಗೂಗಲೇಶ್ವರ 

ನನ್ನ ಬದುಕಿನ ಹಾದಿಗೆ ದಾರಿ ದೀಪವಾಗಿದ್ದು ಅನೇಕ ವಿಷಯಗಳು.. ಮಹಾಭಾರತ, ಇತರ ಮಹಾಭಾರತದ ಕೊಂಡಿಯಿರುವ ಪುರಾಣ ಕಥೆಗಳು, ಭಗವದ್ಗೀತೆ, ಚಾಣಕ್ಯ, ದೇವಾನುದೇವತೆಗಳ ಕಥೆಗಳು ಇವುಗಳ ಜೊತೆಯಲ್ಲಿ ಸಿನಿಮಾಗಳು ಬಹಳ ಪ್ರಭಾವ ಬೀರಿದ್ದವು.. ಹಾಗಾಗಿ ಆ ಅನುಭವಗಳ ಮೂಟೆಯನ್ನು ಹೊತ್ತು ಸಿನೆಮಾಗಳ ಅನೇಕ ಪ್ರೇರಣಾತ್ಮಕ ಸನ್ನಿವೇಶಗಳನ್ನು, ಹಾಡುಗಳನ್ನು, ಸಾಹಸ ದೃಶ್ಯಗಳನ್ನು ಕಗ್ಗದ ಕಡಲಿಗೆ ಸಮೀಕರಿಸುವ ಒಂದು ದುಸ್ಸಾಹಸಕ್ಕೆ ಕೈ ಹಾಕೋಣ ಎನಿಸಿತು.. ಬಂಧು ಮಿತ್ರರು ಪ್ರೇರೇಪಿಸಿದರು, ಹಾಗಾಗಿ ಈ ಹೆಜ್ಜೆಗಳು..  

ಇಂದು ಅವರ ಜನುಮದಿನ, ಶುಭಾರಂಭವಾಗಲಿ, ಅಜ್ಜನ ಆಶೀರ್ವಾದ ಈ ಸರಣಿಗೆ ಉಸಿರು ತುಂಬಲಿ ಎಂದು ಆಶಿಸುತ್ತಾ, .. ಈ ಪುಟ್ಟ ಪುಟ್ಟ ಹೆಜ್ಜೆಯನ್ನು ಇಡಲು ಶುರು ಮಾಡುತ್ತೇನೆ!!!

                                                                            ******

ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಲೋಲ,                                                                                          ದೇವ ಸರ್ವೇಶ ಪರಬ್ಬೊಮ್ಮನೆಂದು ಜನಂ||                                                                                            ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ|                                                                                ಆ ವಿಚಿತ್ರಕೆ ನಮಿಸೊ - ಮಂಕುತಿಮ್ಮ|| ೧||


ದಶಾವತಾರಗಳನ್ನು ತಾಳಿದ ವಿಷ್ಣು.. ಸೃಷ್ಟಿಕರ್ತ ಬ್ರಹ್ಮನ ಪಿತಾ.. ಜಗತ್ತನ್ನು ಸ್ಥಿತಿಯಲ್ಲಿಡುವ ದೈವ, ದುಷ್ಟ ಶಿಕ್ಷಕ ಶಿಷ್ಟ ರಕ್ಷಕ ಹೀಗೆ ಹತ್ತಾರು ಗುಣವಿಶೇಷಣಗಳನ್ನು ಹೊಂದಿರುವ ವಿಷ್ಣು.. ಮತ್ತು ಅವನ ಶಕ್ತಿಗೆ, ಅವನ ಯುಕ್ತಿಗೆ, ಯಾವುದೇ ಸಂದರ್ಭದಲ್ಲಿಯೂ ಕೂಡ ತಾಳ್ಮೆಯನ್ನು ಕಳೆದುಕೊಳ್ಳದೆ, ಸಮಸ್ಯೆಗಳನ್ನು ಉಪಯುಕ್ತವಾದ ರೀತಿಯಲ್ಲಿ ಬಗೆಹರಿಸುವ ಆ ವಿಶೇಷ ಶಕ್ತಿಗೆ, ವಿಚಿತ್ರ ಶಕ್ತಿಗೆ ನಮಿಸೋಣ ಎನ್ನುವ ಮಾತನ್ನು ಅಜ್ಜ ನಮಗೆ ಹೇಳುತ್ತಾರೆ. 

 ತನ್ನ ದ್ವಾರ ಪಾಲಕರಾದ ಜಯವಿಜಯರು ಶಾಪಗ್ರಸ್ತರಾಗಿ, ಮೂರು ಜನ್ಮಗಳಲ್ಲಿ ದುಷ್ಟರಾಗಿ ಜನಿಸಿ ಹರಿಯಿಂದ ಹತರಾಗಿ ಮರಳಿ ವೈಕುಂಠಕ್ಕೆ ಮರಳುವ ಹಂತಗಳಲ್ಲಿ ಮೊದಲನೆಯ ಅವತಾರ ಹಿರಣ್ಯಾಕ್ಷ-ಹಿರಣ್ಯಕಶಿಪು. 

ಹಿರಣ್ಯಾಕ್ಷ ವಿಷ್ಣುವನ್ನು ವರಾಹ ರೂಪದಲ್ಲಿ ಧರೆಗಿಳಿಸಿ ಹತನಾಗಿ ವೈಕುಂಠ ಸೇರುತ್ತಾನೆ.. ಆದರೆ ಇನ್ನಷ್ಟು ಬಲಾಢ್ಯನಾದ ಹಿರಣ್ಯಕಶಿಪು ತನ್ನ ಸುತ  ಪ್ರಹ್ಲಾದ ಹರಿಭಕ್ತನಾಗಿದ್ದರಿಂದ ಆತನನ್ನು ಅನೇಕ ಶಿಕ್ಷೆಗಳಿಗೆ ಗುರಿಪಡಿಸಿದರೂ ಅಳಿಯದ ಪ್ರಹ್ಲಾದನ ಜೊತೆ ನೆಡೆಯುವ ಅಂತಿಮ ಸಂಭಾಷಣೆ ಈ ಕಗ್ಗಕ್ಕೆ ಸಮೀಕರಿಸಬಹುದು.. 

ಹರಿಯು ಸರ್ವಾಂತರಯಾಮಿ ಎನ್ನುತ್ತಾ, ಸೃಷ್ಟಿಗೆ ಆತನೇ ಶಕ್ತಿ ಎನ್ನುತ್ತಾ.. ವಿಷ್ಣುವು ಹತ್ತು ಹಲವಾರು ಹೆಸರುಗಳಿಂದ ಕಂಗೊಳಿಸುತ್ತಿದ್ದಾನೆ ಎನ್ನುವಾಗ ಕುಪಿತಗೊಂಡ ಹಿರಣ್ಯಕಶಿಪು .. ಈ ಜಗತ್ತಿಗೆಲ್ಲ ನಾನೇ ಸರ್ವೇಶ್ವರ.. ಎಂದಾಗ ಪ್ರಹ್ಲಾದ ನೀನು ನನಗೆ ಜನ್ಮಕೊಟ್ಟವನು.. ನಿನಗೆ ಜನ್ಮಕೊಟ್ಟವರು ಯಾರು ಎಂದಾಗ.. ಕಶ್ಯಪ ಬ್ರಹ್ಮ.. ಎನ್ನುತ್ತಾನೆ.. ಅವರ ತಂದೆ ಎಂದಾಗ ಚತುರ್ಮುಖ ಬ್ರಹ್ಮ ಎನ್ನುತ್ತಾನೆ.. ಅವರ ತಂದೆ ಎಂದಾಗ ನಿರುತ್ತರನಾಗುತ್ತಾನೆ.. 



ಚತುರ್ಮುಖ ಬ್ರಹ್ಮನ ತಂದೆ ಯಾರು.. ಯಾರಾದರೂ ಇರಲೇಬೇಕಲ್ಲ ಎಂದಾಗ.. ಯಾರು ಅವರು ಎನ್ನುತ್ತಾನೆ ಹಿರಣ್ಯಕಶಿಪು.. ಆಗ ಅವನೇ ಶ್ರೀಮನ್ನಾರಾಯಣ ಎನ್ನುತ್ತಾನೆ.. 

ಹೀಗೆ ಒಂದು ಕಲ್ಲಿನ ಮೇಲೆ ಇನ್ನೊಂದು ಕಲ್ಲು.. ಅದರ ಮೇಲೆ ಇನ್ನೊಂದು.. ಹೀಗೆ ಜೋಡಿಸುತ್ತಾ ಹೋದಾಗ ಕಡೆಯಲ್ಲಿ ನಿಲ್ಲುವುದು ವಿಷ್ಣುವಿನ ಉಪಸ್ಥಿತಿ ಎನ್ನುವ ತತ್ವನ್ನು ಈ ಸಂಭಾಷಣೆ ಹೇಳುತ್ತದೆ.. 



ಮತ್ತೆ ಇನ್ನೊಂದು ಕಗ್ಗದ ಸುತ್ತಾ ಓಡಾಡೋಣ!!!

Saturday, February 3, 2024

ಅಹಲ್ಯಾಶಬರಿ ಉಪಾಖ್ಯಾನದ ಅನುಭವ.. !

ಅಣ್ಣಾವ್ರ "ನಾನೂ ನೀನೂ ನೆಂಟರಯ್ಯ .. ನಮಗೆ ಭೇದ ಇಲ್ಲವಯ್ಯಾ ವಿಠ್ಠಲ .. " ಭಕ್ತ ಕುಂಬಾರದ ಅದ್ಭುತ ಹಾಡು ಬರುತಿತ್ತು.. ಮನೆಯ ಕರೆಘಂಟೆ ಸದ್ದು ಮಾಡಿತು.. 

ಬಾಗಿಲು ತೆಗೆದರೆ ಅಹಲ್ಯೆ ಮತ್ತು ಶಬರಿ .. ಬಿಳಿ ಉಡುಪಿನಲ್ಲಿ ಆಕರ್ಷಕವಾಗಿ ಕಾಣುತ್ತಿದ್ದರು.. 

ಅರೆ ನೀವು ನನ್ನ ಮನೆಯ ಬಾಗಿಲಲ್ಲಿ.. "ವೆಲ್ಕಮ್ ವೆಲ್ಕಮ್.. "

ನಗುತ್ತಾ ಅಹಲ್ಯೆ ಮತ್ತು ಶಬರಿ ಒಳಗೆ ಬಂದರು.. ಸಾಂಪ್ರದಾಯಿಕವಾದ ಸ್ವಾಗತ ನೆಡೆಯಿತು.. ಹಣೆಯಲ್ಲಿ ಕುಂಕುಮ.. ನಿಗಿ ನಿಗಿ ಹೊಳೆಯುತ್ತಿತ್ತು.. ಒಬ್ಬರ ಪ್ರತಿರೂಪ ಒಬ್ಬರು.. ಅಚಾನಕ್ ನೋಡಿದರೆ ಅಹಲ್ಯೆ ಶಬರಿ ಇಬ್ಬರೂ ಅಕ್ಕ ತಂಗಿ ಎನ್ನಬಹುದಿತ್ತು.. ಹಾಗಿದ್ದರೂ.. ಅದೇ ರೂಪ, ಅದೇ ಮುಖ.. ಅದೇ ನಗು.. ಆದರೆ ಅಹಲ್ಯೆ ಕಣ್ಣುಗಳು ಹೊಳೆಯುತ್ತಿದ್ದವು.. ಶಬರಿ ಕಣ್ಣುಗಳು ಮಿನುಗುತ್ತಿದ್ದವು.. 

ಶಬರಿ ನಸು ನಗುತ್ತಾ ಒಳಗೆ ಕಾಲಿಟ್ಟಳು.. ಅಹಲ್ಯೆ ಹಾಯ್ ಎನ್ನುತ್ತಾ ನಗುವ ಕಂಗಳ ಜೊತೆ ಒಳಗೆ ಬಂದಳು.. ಸುಮ್ಮನೆ ಇರದ ಕ್ಯಾಮೇರಾ ಕಚ ಕಚ ಅಂತ ಫೋಟೋ ತೆಗೆಯುತಿತ್ತು.. 

ಸುಂದರ ದೃಶ್ಯ.. ಕಂಗಳು ಮಂಜಾಗಿದ್ದವು.. ಆದರೆ ಕ್ಯಾಮೆರಾ ಕಣ್ಣುಗಳು ಅಲ್ಲ.. ಆ ಕ್ಷಣಗಳನ್ನು ಆಸ್ವಾಧಿಸುವುದೇ ಒಂದು ಅದ್ಭುತ ಅನುಭವ.. 

ಉಭಯಕುಶಲೋಪರಿ ಮಾತುಗಳು ಆದವು.. ಅಹಲ್ಯೆ ಕಲ್ಲಾಗಿದ್ದವಳು ಶ್ರೀ ರಾಮನ ಪಾದ ಸ್ಪರ್ಶದಿಂದ ಮತ್ತೆ ಮರಳಿದ್ದಳು.. ಅಹಲ್ಯೆ ಶ್ರೀ ರಾಮನ ಅಂಶವಾಗಿದ್ದಳು..ಶ್ರೀ ರಾಮನನ್ನು ಅನುಕ್ಷಣವೂ ಜಪಿಸುವಂಥಹ, ನೆನಪಿಸುವಂತಹ ದಿವ್ಯ ಬದುಕಾಗಿತ್ತು.. ನೋಡುತ್ತಾ ನೋಡುತ್ತಾ ಬದುಕು ಅಹಲ್ಯೆಯ ಬದುಕು ಸುಂದರವಾಗಿತ್ತು.. ಶ್ರೀ ರಾಮನ ಸಾನಿಧ್ಯವೇ ಆಕೆಯ  ಬದುಕಿನ ಮಂತ್ರವಾಗಿತ್ತು..

ಶಬರಿ ಶ್ರೀ ರಾಮನ ಬರುವಿಕೆಗಾಗಿ ಅತ್ಯುತ್ತಮ ಹಣ್ಣುಗಳನ್ನು ಆರಿಸಿ ಆರಿಸಿ ಶ್ರೀ ರಾಮನಿಗೆ ಕೊಡಲು ಇಟ್ಟಿದ್ದು.. ಅದನ್ನು ಶ್ರೀ ರಾಮನಿಗೆ ಕೊಟ್ಟ ಮೇಲೆ ತನ್ನ ಬದುಕಿನ ಸಾರ್ಥಕ್ಯ ಕಂಡಿದ್ದು ಇದು ನಿಮಗೆಲ್ಲ ತಿಳಿದ ವಿಚಾರವೇ.. ಇಲ್ಲಿ ಸ್ವಲ್ಪ ಬದಲಾವಣೆಯಿತ್ತು.. 

ಶಬರಿ ಶ್ರೀ ರಾಮನಿಗೆ ಹಣ್ಣುಗಳನ್ನು ಕೊಡುವ ಬದಲು ಸಿಹಿ ತಂದಿದ್ದಳು.. ಶ್ರೀ ರಾಮನಿಗೆ ಅಚ್ಚರಿ, ಖುಷಿ ಎಲ್ಲವೂ ಕಣ್ಣುಗಳಲ್ಲಿ ತುಂಬಿತ್ತು.. ಮಾತುಗಳು ಆಡಲಾರದಷ್ಟು ಖುಷಿ.. ಯಾಕೆಂದರೆ.. ಶ್ರೀ ರಾಮನನ್ನು ಕಂಡು ಶಬರಿಗೆ ಖುಷಿ ಮನದಲ್ಲಿಯೇ ಮೂಡಿದ್ದರೆ.. ಶಬರಿಯ ಕಂಡು ಶ್ರೀ ರಾಮನಿಗೆ ಈ ಬಾರಿ ಧನ್ಯತಾ ಭಾವ .. ತನ್ನ ಮನೆಗೆ ಮಗಳು ಬಂದಷ್ಟು ಖುಷಿ. ... 

ಶಬರಿ ಹಣ್ಣುಗಳನ್ನು ಕಚ್ಚಿ ಒಳ್ಳೆಯ ಹಣ್ಣುಗಳನ್ನೇ ಕೊಟ್ಟ ಹಾಗೆ.. ಇಲ್ಲಿ ಶಬರಿ ತಂದಿದ್ದ ಸಿಹಿಯನ್ನು ಅವಳಿಗೆ ಒಂದು ತುಂಡು ತಿನ್ನಿಸಿ..Hope  you don't mind ಎಂದಾಗ.. ಶಬರಿಯ ಕಣ್ಣುಗಳ ಹೊಳಪನ್ನು ಕಂಡಾಗ ಅರೆ ಇದನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿಯಬಾರದಿತ್ತೇ ಅನಿಸಿದ್ದು ಸುಳ್ಳಲ್ಲ.. 

ಕೆಲವು ಅನುಭವಗಳನ್ನು ಅನುಭವಿಸೋದು ..  ಆ ಅನುಭವವನ್ನು ಅಕ್ಷರ ರೂಪದಲ್ಲಿ ಹಿಡಿದಡೋದು ಎಲ್ಲವೂ ಒಂದು ಅದ್ಭುತ ಪಯಣದ ಮೈಲಿಗಲ್ಲುಗಳು.. 

ಮಗಳು ತಾಯಿಯ ಸಮಾನ ಅಂತಾರೆ.. ತಾಯಿಯನ್ನು ಇನ್ನೊಂದು ರೂಪದಲ್ಲಿ ಕಂಡು.. ಅದರ ಸಾಕ್ಷಾತ್ಕಾರವಾಗಿ ತಣ್ಣಗೆ ಇದನ್ನೆಲ್ಲಾ ಗಮನಿಸುತ್ತಿದ್ದ ತುಷಾರ ಹಾರದವಳ ನಸು ನಕ್ಕು ಖುಷಿಪಡುತ್ತಿದ್ದಳು .. 


"ಶ್ರೀ ರಾಮ ಬಂದವ್ನೆ ಸೀತೆಯ ಕಾಣಲಿಕ್ಕೆ" ಹಾಡು ಪಡುವಾರಹಳ್ಳಿ ಪಾಂಡವರು ಚಿತ್ರದಲ್ಲಿ ಬಂದಿದ್ದಾರೆ.. "ಕಾದಿರುವಳು ಶಬರಿ ಶ್ರೀ ರಾಮ ಬರುವನೆಂದು" ಶಾಲೆಯಲ್ಲಿ ಓದಿದ ಪದ್ಯ ನೆನಪಿಗೆ ಬಂತು.. 

ಇದೊಂದು ಅದ್ಭುತ ಅನುಭವ.. ಅಹಲ್ಯೆ, ಶಬರಿ, ತುಷಾರ, ಶ್ರೀ ರಾಮ ಎಲ್ಲರೂ ಧನ್ಯತಾ ಭಾವ ಅನುಭವಿಸುತ್ತಿದ್ದರು..!!!

ಶ್ರೀ ರಾಮನಂತೂ ಈ ಖುಷಿಯ ಸಂಗತಿಗಳಿಂದ ಪುಟ್ಟ ಹುಡುಗನಾಗಿ ಬಾಲರಾಮನೇ ಆಗಿ ನಲಿಯುತಿದ್ದ!


ಇರುವ ಮನೆಯೇ ಮಂದಿರವಾಗಿ.. ಅದೇ ಭವ್ಯ ಮಹಲಾಗಿ ಪರಿವರ್ತನೆಯಾದಂತೆ ಅನುಭವ.. ಮಹಲಿನ ಪ್ರತಿ ಕಣವೂ ಬೆಳಕಿನ ಪುಂಜದಿಂದ ಹೊಳೆಯಲು ಶುರು ಮಾಡಿತು.. !

Saturday, January 13, 2024

ಗಂಗೆ - ಭೀಷ್ಮ ಮಹಾಭಾರತ ..

ನಾಲ್ಕನೇ ತರಗತಿಯಲ್ಲಿ ರನ್ನನ ಗಧಾಯುದ್ಧದ ಒಂದು ಭಾಗ "ಊರುಭಂಗ" ಪಾಠವಿತ್ತು.. ವಿದ್ಯೆ ಕಲಿಯಬೇಕೆಂಬ ಆಸೆ ಹೊತ್ತು ಗುರುಗಳ ಬಳಿಗೆ ಬಂದಾಗ 

ರನ್ನನ ಪೂರ್ವಾಪರ ವಿಚಾರ ತಿಳಿದು " ಕೊಂಡು ತಂದು ಹೊತ್ತು ಮಾರಲು ವಿದ್ಯೆಯೇನು ಬಳೆಯ ಮಲಾರವೇ!" ಎಂದು ಹೇಳುತ್ತಾರೆ.. 

ಆದರೂ ಛಲ ಬಿಡದ ರನ್ನ ವಿದ್ಯೆ ಕಲಿತು.. ಮಹಾನ್ ಕವಿಯಾಗುತ್ತಾರೆ. 

ಆ ಪಾಠ ಓದಿ, ದುರ್ಯೋಧನ ಅಲಿಯಾಸ್ ರನ್ನ ಹೆಸರಿಸುವ ಸುಯೋಧನನ ಊರುಭಂಗ ಪಾಠ ನನ್ನ ಮಹಾಭಾರತದ ಹುಚ್ಚಿಗೆ ನಾಂದಿಯಾಯಿತು.. ನಂತರ ಏಳನೇ ತರಗತಿಯಲ್ಲಿ ಸೌಗಂಧಿಕಾ ಪುಷ್ಪ ಹರಣ ಪಾಠ ಮಹಾಭಾರತದ ಹುಚ್ಚಿಗೆ ಇನ್ನಷ್ಟು ನೀರೆರೆಯಿತು.. 

ಎಂಭತ್ತರ ದಶಕದ ಅಂತ್ಯದಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ಬಿ ಆರ್ ಚೋಪ್ರಾ ಅವರ ಮಹಾಭಾರತ ಖುಷಿಕೊಟ್ಟಿತು. ಅಂದಿನಿಂದ ಇಂದಿನ ತನಕ ಮರುಪ್ರಸಾರವಾದಾಗೆಲ್ಲ ಬಹುಶಃ ಎಲ್ಲಾ ಕಂತುಗಳನ್ನು ನೋಡಿದ್ದೇನೆ ಮತ್ತು ಮುಂದೂ ನೋಡುತ್ತೇನೆ. 

ಪ್ರತಿಯೊಂದು ದೃಶ್ಯವೂ ಒಂದು ಅದ್ಭುತ ಸಂಯೋಜನೆ.. ಅಭಿನಯ, ಸೆಟ್ಟುಗಳು, ಸಂಭಾಷಣೆ, ಪಾತ್ರಧಾರಿಗಳ ಆಯ್ಕೆ (ಹ ಕೆಲವೊಂದು ಪಾತ್ರಗಳು ಬೇರೆ ಕಲಾವಿದರ ಆಯ್ಕೆ ಬೇಕು ಅನಿಸಬಹುದೇನೋ, ಆದರೆ ನನಗೆ ಓಕೆ), ಸಂಗೀತ, ಹಾಡುಗಳು ಎಲ್ಲವೂ ಅದ್ಭುತ. 

ನನಗೆ ಬಲು ಇಷ್ಟವಾದ ಅನೇಕ ದೃಶ್ಯಗಳಲ್ಲಿ ಎರಡನ್ನು ಇಲ್ಲಿ ಉಲ್ಲೇಖಿಸುತ್ತೇನೆ. 

ಒಂದನೇ ದೃಶ್ಯ 

ಭೀಷಣ ಪ್ರತಿಜ್ಞೆ ಮಾಡಿದ ದೇವವ್ರತ ತನಗೆ ಗೊಂದಲವಾದಾಗೆಲ್ಲ ತನ್ನ ತಾಯಿ ಗಂಗೆಯ ತೀರಕ್ಕೆ ಬಂದು ತಾಯಿಯನ್ನು ಕಂಡು ಮಾತಾಡಿ ಗೊಂದಲ ಪರಿಹರಿಸಿಕೊಳ್ಳುವುದು ರೂಢಿಯಾಗಿರುತ್ತದೆ. ಇದರಿಂದ ಬೇಸತ್ತ ಗಂಗೆ ಒಮ್ಮೆ ಭೀಷ್ಮನಿಗೆ ಹೇಳುತ್ತಾಳೆ "ನೀನು ಸಣ್ಣ ಮಗುವಿನ ತರಹ ಪ್ರತಿಬಾರಿಯೂ ದೂರುಗಳನ್ನು ತಂದು ನನಗೆ ಒಪ್ಪಿಸುತ್ತೀಯಾ.. ನಿನ್ನ ತಂದೆಗೆ ನೀನು ಮದುವೆಯಾಗೋಲ್ಲ ಅಂತ ಶಪಥ ಮಾಡಿದಾಗ ನನಗೆ ಹೇಳಲಿಲ್ಲ ನನ್ನ ಒಪ್ಪಿಗೆ ಪಡೆಯಲಿಲ್ಲ..  ನೀನು ಜೀವನದಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಂಡಾಗ ನನ್ನ ಕೇಳಲಿಲ್ಲ ಆದರೆ ನಿನಗೆ ಸಮಸ್ಯೆ ಬಂದಾಗ ನನ್ನ ಬಳಿ ಓಡಿ ಬರುತ್ತೀಯ" ಎಂದಾಗ ಭೀಷ್ಮ ಕಣ್ಣಲ್ಲಿ ನೀರು ತುಂಬಿಕೊಂಡು "ಸರಿ ಮಾತೆ ಇನ್ನು ನೀನಾಗೆ ಬರುವ ತನಕ ನಾ ನಿನ್ನ ಬಳಿ ಬರುವುದಿಲ್ಲ" ಎಂದು ಹೇಳುತ್ತಾನೆ ಗಂಗೆ ಮಾಯವಾಗುತ್ತಾಳೆ. 

ಇಲ್ಲಿ ಗಂಗೆ ಪಾತ್ರಧಾರಿ ಕಿರಣ್ ಜುನೇಜಾ ಅದ್ಭುತಾವಾಗಿ ಮಾತಾಡುತ್ತಾಳೆ.. ಕಣ್ಣಿನ ಹೊಳಪು ಆ ಬಿಳಿ ಪೋಷಾಕು ಅದ್ಭುತವಾಗಿ ಕಾಣುತ್ತಾಳೆ. ಹಾಗೆಯೇ ತಾಯಿಯ ಮಮತೆಪೂರ್ಣ ಮಾತುಗಳು, ಅಭಿನಯ ಗಮನಸೆಳೆಯುತ್ತದೆ. 

ಭೀಷ್ಮನ ಪಾತ್ರಧಾರಿ ಮುಖೇಶ್ ಖನ್ನಾ ಬಗ್ಗೆ ಏನು ಹೇಳುವುದು, ಭೀಷ್ಮರೇ ಧರೆಗೆ ಬಂದರೂ ಮುಖೇಶ್ ಅವರಿಗೆ ಶಭಾಷ್ ಹೇಳದೆ ಹೋಗುವುದಿಲ್ಲ. ಅಷ್ಟು ಅದ್ಭುತ ಅಭಿನಯ. ಭೀಷ್ಮನಾಗಿಯೇ ಜೀವಿಸಿದ್ದಾರೆ. 

ಅವರ ಪ್ರತಿ ಮಾತುಗಳು, ಸಂಭಾಷಣೆಯ ಏರಿಳಿತ ಅದ್ಭುತ. 

ನಾವು ತೆಗೆದುಕೊಳ್ಳುವ ನಿರ್ಧಾರ ಪರಿಣಾಮ ಎದುರಿಸುವ ಶಕ್ತಿಯೂ ನಮಗೆ ಬರಬೇಕು.. ನಮಗೆ ಇರಬೇಕು.. ನಿರ್ಧಾರ ನಮ್ಮದು ಪರಿಹಾರ ಇನ್ನೊಬ್ಬರು ಕೊಡುವುದು ಎಂದು ಕುಳಿತಾಗ ಸಮಸ್ಯೆ ಇನ್ನಷ್ಟು ಜಟಿಲವಾಗುತ್ತದೆ. ಭೀಷ್ಮ ತನ್ನ ತಂದೆಗೂ ಹೇಳದೆ ತಾಯಿಯ ಸ್ಥಾನಕ್ಕೆ ಬರಬಹುದಾದ ಸತ್ಯವತಿಯ ತಂದೆಗೆ ಕೊಡುವ ಮಾತು.. ಆದರೆ ಆ ಸಮಯದಲ್ಲಿ ಗಂಗೆಯೂ ಇರುವುದಿಲ್ಲ, ಶಾಂತನೂ ಕೂಡ ಇರುವುದಿಲ್ಲ. ಆ ಸಮಯದಲ್ಲಿ ಸರಿ ಅನಿಸುವ ನಿರ್ಧಾರ ಭೀಷ್ಮ ತಳೆಯುತ್ತಾನೆ ಆದರೆ ಅದರ ಪರಿಣಾಮ ಶರಶಯ್ಯೆಗೆ ತಂದು ನಿಲ್ಲಿಸುತ್ತದೆ. 

ಎರಡನೆಯ ದೃಶ್ಯ 

ಭೀಷ್ಮ ಇಚ್ಚಾಮರಣಿ, ಅವ ಇರುವ ತನಕ ಪಾಂಡವರು ಕುರುಕ್ಷೇತ್ರದ ಯುದ್ಧದಲ್ಲಿ ಏನೂ ಸಾಧಿಸಲಾಗದೆ ಚಿಂತಾಕ್ರಾಂತರಾಗಿರುತ್ತಾರೆ. ಆಗ ಕೃಷ್ಣನ ಮಾತಿನಂತೆ ಭೀಷ್ಮರ ಹತ್ತಿರ ಬಂದಾಗ ತಾನು ನಾರಿಯ ಮುಂದೆ ಯುದ್ಧ ಮಾಡುವುದಿಲ್ಲ  ಎಂದು ತನ್ನನ್ನು ರಣರಂಗದಿಂದ ದೂರಮಾಡುವ ಉಪಾಯ ಹೇಳಿಕೊಡುತ್ತಾನೆ. ಆಗ ರಾತ್ರಿ ಭೀಷ್ಮ ಕುರುಕ್ಷೇತ್ರಕ್ಕೆ ಬರುತ್ತಾನೆ.. ಒಂದು ಹೆಂಗಸು ಭೂಮಿಯಲ್ಲಿನ ಸಣ್ಣ ಸಣ್ಣ ಕಲ್ಲುಗಳನ್ನು ಆರಿಸುತ್ತಿರುವುದನ್ನು ಕಂಡು.. ಹತ್ತಿರ ಬಂದಾಗ ಗೊತ್ತಾಗುತ್ತದೆ ಇದು ತನ್ನ ತಾಯಿ ಗಂಗೆ ಎಂದು. 

ಅತೀವವಾದ ಖುಷಿಯಿಂದ ಹತ್ತಿರ ಬಂದು ಮಾತಾಡಿಸಿದಾಗ.. ಗಂಗೆ ಹೇಳುತ್ತಾಳೆ ನೆಲವನ್ನು ಸ್ವಚ್ಛಗೊಳಿಸುತ್ತಿದ್ದೆ.. ನೀನು ಇಲ್ಲಿ ಮಲಗಿಕೊ, ತುಂಬಾ ದಣಿದಿದ್ದೀಯ.. ನಿನಗೆ ವಿಶ್ರಾಂತಿ ಬೇಕು" ಎಂದಾಗ ಭೀಷ್ಮ ಎಲ್ಲಾ ಋಣವನ್ನು ಕೊಟ್ಟು ಮುಗಿಸಿದೆ.. ಆದರೆ ಅಂಬಾಳ ಋಣವೊಂದಿದೆ.. ನಾಳೆ ಅದನ್ನು ತೀರಿಸುತ್ತೇನೆ.."

ಬಂದು ಬಿಡು ಸ್ವರ್ಗಕ್ಕೆ ಎಂದು ಗಂಗೆ ಹೇಳಿದಾಗ.. ಹಸ್ತಿನಾಪುರ ನಾಲ್ಕು ದಿಕ್ಕುಗಳಿಂದ ಸುರಕ್ಷಾ ಸ್ಥಿತಿಯಲ್ಲಿದೆ ಎಂದು ಅರಿವಾದಾಗ ಖಂಡಿತ ಬರುತ್ತೇನೆ ಎಂದು ಹೇಳಿ ಗಂಗೆಯನ್ನು ಕಳಿಸುತ್ತಾನೆ. 


ನಿಜ ನಾವು ತೆಗೆದುಕೊಳ್ಳುವ ನಿರ್ಧಾರದ ಫಲಿತಾಂಶ ನಮಗೆ ಗೊತ್ತಾಗಿ ಬಿಟ್ಟರೆ, ನಿರ್ಧಾರ ತೆಗೆದುಕೊಳ್ಳುವ ಗಟ್ಟಿ ಮನಸ್ಸು ಪೊಳ್ಳಾಗಿಬಿಡುತ್ತದೆ. ತನ್ನ ಒಂದು ನಿರ್ಧಾರ ಕುರುಕ್ಷೇತ್ರದ ಶರಶಯ್ಯೆಯಲ್ಲಿ ಕೊನೆಗೊಳ್ಳುತ್ತದೆ ಎಂದು ತಿಳಿದಿದ್ದಿದರೆ ಭೀಷ್ಮ ಅವರ ನಿರ್ಧಾರ ಖಂಡಿತ ಅಷ್ಟೊಂದು ಭೀಷಣವಾಗಿ ಇರುತ್ತಿರಲಿಲ್ಲ ಅಲ್ಲವೇ. 

ಆ ಸಮಯಕ್ಕೆ ಸರಿ ಅನ್ನೊದು ನಾವು ನಮ್ಮ ಮನಸ್ಸಿನ ಸ್ಥಿತಿಯ ಮೇಲೆ ಅವಲಂಬಿತ. 

ಅದ್ಭುತ ಸನ್ನಿವೇಶಗಳು.. 

ಭೀಷ್ಮ ಉತ್ತರಾಯಣ ಪುಣ್ಯ ಕಾಲದಲ್ಲಿ ಈ ಭುವಿಯನ್ನು ಬಿಡುವ ನಿರ್ಧಾರ ಮಾಡಿದ ಸಮಯವಿದು.. ಸಂಕ್ರಾಂತಿ ನಮ್ಮ ಬದುಕಲ್ಲಿ ಒಂದು ಸಣ್ಣ ಕ್ರಾಂತಿಯನ್ನು ತರುವ ಒಂದು ನಿರ್ಧಾರ ನಮ್ಮದಾಗಿದೆ ಎಂದರೆ ಅದೇ ಅಲ್ಲವೇ Someಕ್ರಾಂತಿ. 

ಎಲ್ಲರಿಗೂ   ಮಕರ ಸಂಕ್ರಾಂತಿಯ ಶುಭಾಶಯಗಳು!

Friday, January 12, 2024

ಹೃದಯದಲಿ ಇದೇನಿದು ನದಿಯೊಂದು ಓಡಿದೆ!!!

 ಪುಟ್ಟ ವಯಸ್ಸಿನಲ್ಲಿಯೇ ಪಾರು ಮತ್ತೆ ಪರಮು ಅರ್ತಾತ್ ಪಾರ್ವತೀ ಮತ್ತು ಪರಮೇಶ  ತಂದೆತಾಯಿಯನ್ನು ಕಳೆದುಕೊಂಡಿದ್ದರು.. ಬಂಧು ಬಳಗ ಎಲ್ಲರೂ ಇವರನ್ನು ದೂರವಿಟ್ಟಿದ್ದರು.. ಇವರಿಬ್ಬರೂ ಒಂದೇ ಬೀದಿಯಲ್ಲಿ ಆಡಿ ಬೆಳೆದವರು.. ಪ್ರೀತಿ ಪ್ರೇಮ ಎಂಬ ಹಂಗಿಗೆ ಹೋಗಿರಲಿಲ್ಲ ಆದರೆ ಪರಿಚಯ ಚೆನ್ನಾಗಿದ್ದರಿಂದ, ಜೊತೆಯಲ್ಲಿಯೇ ಹೆಗಲಿಗೆ ಹೆಗಲು ಕೊಟ್ಟು ಬೆಳೆದರು. 

ತುಂಡು ಭೂಮಿ ಇಬ್ಬರಿಗೂ ಇತ್ತು.. ಬದುಕಲು ಆಶ್ರಯ ಕೊಡುವ ಸಣ್ಣದಾದ ಮನೆಯೊಂದಿತ್ತು.. ಹೇಗೋ ಬಂಧು ಮಿತ್ರರು ಇವರನ್ನು ದೂರವಿಟ್ಟಿದ್ದರಿಂದ, ಅಸ್ತಿ ಅದು ಇದು ಅನ್ನುವ ತಗಾದೆ ಇರಲಿಲ್ಲ.. ಎತ್ಲಾಗಾದರೂ ಹೋಗಿ ಸಾಯಲಿ ಎಂದು ಎಲ್ಲರೂ ದೂರ ಇಟ್ಟಿದ್ದು ಒಂದು ರೀತಿಯಲ್ಲಿ ಒಳ್ಳೆಯದೆ ಆಗಿತ್ತು.. 

ಚಿತ್ರಕೃಪೆ - ಗೂಗಲೇಶ್ವರ 

ಹೊಲದಲ್ಲಿ ಕಷ್ಟಪಟ್ಟು ಏನು ಸಾಧ್ಯವೋ ಅದನ್ನು ಬೆಳೆಯುತ್ತಿದ್ದರು, ಸೊಪ್ಪು, ತರಕಾರಿ, ಬೆಳೆ, ಶುಂಠಿ, ಭತ್ತ, ರಾಗಿ ಹೀಗೆ ಆ ಕಾಲಕ್ಕೆ ಏನು ಫಸಲು ಬರಲು ಸಾಧ್ಯವೋ ಅದನ್ನೇ ಆ ತುಂಡು ಭೂಮಿಯಲ್ಲಿ ಬೆಳೆಯುತ್ತಿದ್ದರು.. ಊಟಕ್ಕೆ ಮೋಸವಿರಲಿಲ್ಲ.. ಜೊತೆಗೆ ಬೆಳೆದ ಸಂಪನ್ನದಿಂದ ಅದನ್ನು ಮಾರಿ ಒಂದಷ್ಟು ದುಡ್ಡು ಕೂಡಿಡುತ್ತಿದ್ದರು.. 

ಚಿತ್ರಕೃಪೆ - ಗೂಗಲೇಶ್ವರ 

ಶಾಲೆಯಲ್ಲಿ ಓದು ಸಾಗಿತ್ತು.. ಬೆಳೆದ ನಂತರ ಮುಂದಕ್ಕೆ ಓದಬೇಕು ಎಂಬ ಇಚ್ಛೆಯಿದ್ದರೂ, ಸರಸ್ವತಿ ಕೊಂಚ ನಾಚಿಕೊಂಡು ಲಕ್ಷ್ಮಿಗೆ ದಾರಿ ಮಾಡಿ ಕೊಟ್ಟಿದ್ದಳು, ಅಂದರೆ ಜೀವನೋಪಾಯಕ್ಕೆ ದುಡಿಯಬೇಕಿದ್ದರಿಂದ, ಹೊಲದಲ್ಲಿ ದುಡಿಯುವುದೇ  ಮುಖ್ಯವಾಗಿತ್ತು.. 

ಹೀಗೆ ಬೆಳೆದಂಗೆ.. ಇವರಿಬ್ಬರ ಮಧ್ಯೆ ವಯೋಸಹಜವಾದ ಆಕರ್ಷಣೆ ಬೆಳೆಯಿತು.. ಒಂದಾಗೋಕೆ ಏನೂ ಅಡ್ಡಿಯಿರಲಿಲ್ಲ.. ಒಂದು ದಿನ ಪರಮು ಹೊಲದಲ್ಲಿ ಕೆಲಸ ಮಾಡುತಿದ್ದಾಗ "ಪಾರು ಬಾರೆ ಇಲ್ಲಿ ಒಂದು ಚೂರು ಮಾತಾಡಬೇಕು" ಎಂದ 

"ಪರಮು ಹೊಲಕ್ಕೆ  ಬಿಡ್ತಾ ಇದ್ದೀನಿ.  ಊಟದ ಸಮಾಯವಾಗ್ತಾ ಇದೆ.. ಅಲ್ಲಿ ಮಾವಿನ ಮರದ ನೆರಳಿಗೆ ಹೋಗಿ ಕೂತ್ಕೊಂಡಿರು. .ನೀರು ಬಿಟ್ಟು ಬರ್ತೀನಿ.. ಊಟ ಮಾಡ್ತಾ ಮಾತಾಡೋಣ"

ಚಿತ್ರಕೃಪೆ - ಗೂಗಲೇಶ್ವರ 
'ಸರಿ ಕಣೆ" 

ಊಟದ ಸಮಯವಾಯಿತು.. ಪಾರು ನೆಡೆದುಕೊಂಡು ಬರುತ್ತಿದ್ದನ್ನು ಕಂಡು ಅವಳನ್ನೇ ದೃಷ್ಟಿಸಿ ನೋಡಿದ.. ಎಂದೂ ಆ ರೀತಿಯಲ್ಲಿ ನೋಡಿರಲಿಲ್ಲ .. ಇಂದೇಕೋ ವಿಶೇಷ ಅನಿಸಿತು.. 

ಹತ್ತಿರ ಬಂದ ಪಾರು ತನ್ನನ್ನೇ ನೋಡುತ್ತಿದ್ದ ಪರಮುವನ್ನು "ಏನು ಸಾಹೇಬರು ನೋಡ್ತಾನೆ ಇದ್ದೀರಾ ಏನು ಸಮಾಚಾರ"

ಅಷ್ಟೊತ್ತಿಗೆ ಪರಮು ಡಬ್ಬಿಯಲ್ಲಿ ತಾನು ಮಾಡಿದ್ದ ರಾಗಿ ಮುದ್ದೆಯನ್ನು ತೆಗೆದು ಇಬ್ಬರಿಗೂ ತಟ್ಟೆಯಲ್ಲಿ ಹಾಕಿ, ಅದಕ್ಕೆ ಪಾರು ಮಾಡಿದ್ದ ಅವರೆಕಾಳಿನ ಹುಳಿ ಹಾಕಿ, ಪಕ್ಕದಲ್ಲಿ ಒಂದು ಪುಟ್ಟ ಈರುಳ್ಳಿ, ಹಸಿರು ಮೆಣಸಿನ ಕಾಯಿ ಇಟ್ಟಿದ್ದ" 

ಚಿತ್ರಕೃಪೆ - ಗೂಗಲೇಶ್ವರ 

ದಿನವೂ ಹೀಗೆ ಮಾಡ್ತಾ ಇದ್ದರು, ಒಬ್ಬರು ಒಂದು ಅಡಿಗೆ ಮಾಡಿದರೆ ಅದಕ್ಕೆ ಪೂರಕವಾಗಿ ಇನ್ನೊಬ್ಬರು ಅಡಿಗೆ ಮಾಡಿಕೊಂಡು ಬರುತ್ತಿದ್ದರು.. ಉಳಿದದ್ದು ಅನ್ನುವ ಪ್ರಶ್ನೆಯೇ ಬರುತ್ತಿರಲಿಲ್ಲ.. ಯಾಕೆ ಅಂದರೆ ಎಷ್ಟು ಬೇಕೋ ಅಷ್ಟೇ ಮಾಡಿಕೊಂಡು ಬರುತ್ತಿದ್ದರು.. ರಾತ್ರಿಗೆ ಹೊಸ ಅಡಿಗೆ.. ಹೀಗೆ ಸಾಗುತಿತ್ತು ಅವರ ಬದುಕು.. 

ಮತ್ತೆ ಕತೆಗೆ ಮರಳಿದರೆ .. ಪಾರು ಕೇಳಿದ ಪ್ರಶ್ನೆ ಕೇಳಿ ಒಮ್ಮೆ ಮೈಜಾಡಿಸಿಕೊಂಡು.. "ಪಾರು.. ಪಾರು" 

"ಪರಮು ನನ್ನ ಹೆಸರು ಪಾರು ಅಂತ ಗೊತ್ತು ..ವಿಷಯ ಹೇಳು"

"ಪಾರು ಪಾರು ಪಾರು.. ನನ್ನ ಮದುವೆ ಆಗ್ತೀಯೇನೇ"

ಕೈಯಲ್ಲಿದ್ದ ತಟ್ಟೆಯನ್ನು ಮೆಲ್ಲಗೆ ಕೆಳಗೆ ಇಟ್ಟಳು.. ಪಾರು.. ಆಕಾಶ ನೋಡುತ್ತಾ ಕೆಲವು ಕಾಲ ಹಾಗೆ ಕೂತಳು!!!

ಪರಮು ಮನಸ್ಸಲ್ಲಿ "ಹೃದಯದಲಿ ಇದೇನಿದು ನದಿಯೊಂದು ಓಡಿದೆ" ಹಾಡು ಸಾಗುತಿತ್ತು!!!

ಮುಂದೆ.......