Friday, January 12, 2024

ಹೃದಯದಲಿ ಇದೇನಿದು ನದಿಯೊಂದು ಓಡಿದೆ!!!

 ಪುಟ್ಟ ವಯಸ್ಸಿನಲ್ಲಿಯೇ ಪಾರು ಮತ್ತೆ ಪರಮು ಅರ್ತಾತ್ ಪಾರ್ವತೀ ಮತ್ತು ಪರಮೇಶ  ತಂದೆತಾಯಿಯನ್ನು ಕಳೆದುಕೊಂಡಿದ್ದರು.. ಬಂಧು ಬಳಗ ಎಲ್ಲರೂ ಇವರನ್ನು ದೂರವಿಟ್ಟಿದ್ದರು.. ಇವರಿಬ್ಬರೂ ಒಂದೇ ಬೀದಿಯಲ್ಲಿ ಆಡಿ ಬೆಳೆದವರು.. ಪ್ರೀತಿ ಪ್ರೇಮ ಎಂಬ ಹಂಗಿಗೆ ಹೋಗಿರಲಿಲ್ಲ ಆದರೆ ಪರಿಚಯ ಚೆನ್ನಾಗಿದ್ದರಿಂದ, ಜೊತೆಯಲ್ಲಿಯೇ ಹೆಗಲಿಗೆ ಹೆಗಲು ಕೊಟ್ಟು ಬೆಳೆದರು. 

ತುಂಡು ಭೂಮಿ ಇಬ್ಬರಿಗೂ ಇತ್ತು.. ಬದುಕಲು ಆಶ್ರಯ ಕೊಡುವ ಸಣ್ಣದಾದ ಮನೆಯೊಂದಿತ್ತು.. ಹೇಗೋ ಬಂಧು ಮಿತ್ರರು ಇವರನ್ನು ದೂರವಿಟ್ಟಿದ್ದರಿಂದ, ಅಸ್ತಿ ಅದು ಇದು ಅನ್ನುವ ತಗಾದೆ ಇರಲಿಲ್ಲ.. ಎತ್ಲಾಗಾದರೂ ಹೋಗಿ ಸಾಯಲಿ ಎಂದು ಎಲ್ಲರೂ ದೂರ ಇಟ್ಟಿದ್ದು ಒಂದು ರೀತಿಯಲ್ಲಿ ಒಳ್ಳೆಯದೆ ಆಗಿತ್ತು.. 

ಚಿತ್ರಕೃಪೆ - ಗೂಗಲೇಶ್ವರ 

ಹೊಲದಲ್ಲಿ ಕಷ್ಟಪಟ್ಟು ಏನು ಸಾಧ್ಯವೋ ಅದನ್ನು ಬೆಳೆಯುತ್ತಿದ್ದರು, ಸೊಪ್ಪು, ತರಕಾರಿ, ಬೆಳೆ, ಶುಂಠಿ, ಭತ್ತ, ರಾಗಿ ಹೀಗೆ ಆ ಕಾಲಕ್ಕೆ ಏನು ಫಸಲು ಬರಲು ಸಾಧ್ಯವೋ ಅದನ್ನೇ ಆ ತುಂಡು ಭೂಮಿಯಲ್ಲಿ ಬೆಳೆಯುತ್ತಿದ್ದರು.. ಊಟಕ್ಕೆ ಮೋಸವಿರಲಿಲ್ಲ.. ಜೊತೆಗೆ ಬೆಳೆದ ಸಂಪನ್ನದಿಂದ ಅದನ್ನು ಮಾರಿ ಒಂದಷ್ಟು ದುಡ್ಡು ಕೂಡಿಡುತ್ತಿದ್ದರು.. 

ಚಿತ್ರಕೃಪೆ - ಗೂಗಲೇಶ್ವರ 

ಶಾಲೆಯಲ್ಲಿ ಓದು ಸಾಗಿತ್ತು.. ಬೆಳೆದ ನಂತರ ಮುಂದಕ್ಕೆ ಓದಬೇಕು ಎಂಬ ಇಚ್ಛೆಯಿದ್ದರೂ, ಸರಸ್ವತಿ ಕೊಂಚ ನಾಚಿಕೊಂಡು ಲಕ್ಷ್ಮಿಗೆ ದಾರಿ ಮಾಡಿ ಕೊಟ್ಟಿದ್ದಳು, ಅಂದರೆ ಜೀವನೋಪಾಯಕ್ಕೆ ದುಡಿಯಬೇಕಿದ್ದರಿಂದ, ಹೊಲದಲ್ಲಿ ದುಡಿಯುವುದೇ  ಮುಖ್ಯವಾಗಿತ್ತು.. 

ಹೀಗೆ ಬೆಳೆದಂಗೆ.. ಇವರಿಬ್ಬರ ಮಧ್ಯೆ ವಯೋಸಹಜವಾದ ಆಕರ್ಷಣೆ ಬೆಳೆಯಿತು.. ಒಂದಾಗೋಕೆ ಏನೂ ಅಡ್ಡಿಯಿರಲಿಲ್ಲ.. ಒಂದು ದಿನ ಪರಮು ಹೊಲದಲ್ಲಿ ಕೆಲಸ ಮಾಡುತಿದ್ದಾಗ "ಪಾರು ಬಾರೆ ಇಲ್ಲಿ ಒಂದು ಚೂರು ಮಾತಾಡಬೇಕು" ಎಂದ 

"ಪರಮು ಹೊಲಕ್ಕೆ  ಬಿಡ್ತಾ ಇದ್ದೀನಿ.  ಊಟದ ಸಮಾಯವಾಗ್ತಾ ಇದೆ.. ಅಲ್ಲಿ ಮಾವಿನ ಮರದ ನೆರಳಿಗೆ ಹೋಗಿ ಕೂತ್ಕೊಂಡಿರು. .ನೀರು ಬಿಟ್ಟು ಬರ್ತೀನಿ.. ಊಟ ಮಾಡ್ತಾ ಮಾತಾಡೋಣ"

ಚಿತ್ರಕೃಪೆ - ಗೂಗಲೇಶ್ವರ 
'ಸರಿ ಕಣೆ" 

ಊಟದ ಸಮಯವಾಯಿತು.. ಪಾರು ನೆಡೆದುಕೊಂಡು ಬರುತ್ತಿದ್ದನ್ನು ಕಂಡು ಅವಳನ್ನೇ ದೃಷ್ಟಿಸಿ ನೋಡಿದ.. ಎಂದೂ ಆ ರೀತಿಯಲ್ಲಿ ನೋಡಿರಲಿಲ್ಲ .. ಇಂದೇಕೋ ವಿಶೇಷ ಅನಿಸಿತು.. 

ಹತ್ತಿರ ಬಂದ ಪಾರು ತನ್ನನ್ನೇ ನೋಡುತ್ತಿದ್ದ ಪರಮುವನ್ನು "ಏನು ಸಾಹೇಬರು ನೋಡ್ತಾನೆ ಇದ್ದೀರಾ ಏನು ಸಮಾಚಾರ"

ಅಷ್ಟೊತ್ತಿಗೆ ಪರಮು ಡಬ್ಬಿಯಲ್ಲಿ ತಾನು ಮಾಡಿದ್ದ ರಾಗಿ ಮುದ್ದೆಯನ್ನು ತೆಗೆದು ಇಬ್ಬರಿಗೂ ತಟ್ಟೆಯಲ್ಲಿ ಹಾಕಿ, ಅದಕ್ಕೆ ಪಾರು ಮಾಡಿದ್ದ ಅವರೆಕಾಳಿನ ಹುಳಿ ಹಾಕಿ, ಪಕ್ಕದಲ್ಲಿ ಒಂದು ಪುಟ್ಟ ಈರುಳ್ಳಿ, ಹಸಿರು ಮೆಣಸಿನ ಕಾಯಿ ಇಟ್ಟಿದ್ದ" 

ಚಿತ್ರಕೃಪೆ - ಗೂಗಲೇಶ್ವರ 

ದಿನವೂ ಹೀಗೆ ಮಾಡ್ತಾ ಇದ್ದರು, ಒಬ್ಬರು ಒಂದು ಅಡಿಗೆ ಮಾಡಿದರೆ ಅದಕ್ಕೆ ಪೂರಕವಾಗಿ ಇನ್ನೊಬ್ಬರು ಅಡಿಗೆ ಮಾಡಿಕೊಂಡು ಬರುತ್ತಿದ್ದರು.. ಉಳಿದದ್ದು ಅನ್ನುವ ಪ್ರಶ್ನೆಯೇ ಬರುತ್ತಿರಲಿಲ್ಲ.. ಯಾಕೆ ಅಂದರೆ ಎಷ್ಟು ಬೇಕೋ ಅಷ್ಟೇ ಮಾಡಿಕೊಂಡು ಬರುತ್ತಿದ್ದರು.. ರಾತ್ರಿಗೆ ಹೊಸ ಅಡಿಗೆ.. ಹೀಗೆ ಸಾಗುತಿತ್ತು ಅವರ ಬದುಕು.. 

ಮತ್ತೆ ಕತೆಗೆ ಮರಳಿದರೆ .. ಪಾರು ಕೇಳಿದ ಪ್ರಶ್ನೆ ಕೇಳಿ ಒಮ್ಮೆ ಮೈಜಾಡಿಸಿಕೊಂಡು.. "ಪಾರು.. ಪಾರು" 

"ಪರಮು ನನ್ನ ಹೆಸರು ಪಾರು ಅಂತ ಗೊತ್ತು ..ವಿಷಯ ಹೇಳು"

"ಪಾರು ಪಾರು ಪಾರು.. ನನ್ನ ಮದುವೆ ಆಗ್ತೀಯೇನೇ"

ಕೈಯಲ್ಲಿದ್ದ ತಟ್ಟೆಯನ್ನು ಮೆಲ್ಲಗೆ ಕೆಳಗೆ ಇಟ್ಟಳು.. ಪಾರು.. ಆಕಾಶ ನೋಡುತ್ತಾ ಕೆಲವು ಕಾಲ ಹಾಗೆ ಕೂತಳು!!!

ಪರಮು ಮನಸ್ಸಲ್ಲಿ "ಹೃದಯದಲಿ ಇದೇನಿದು ನದಿಯೊಂದು ಓಡಿದೆ" ಹಾಡು ಸಾಗುತಿತ್ತು!!!

ಮುಂದೆ....... 

1 comment:

  1. ಮುಂದೆ........, ಮುಂದೆ ಏನು ಸಾರ್!

    ReplyDelete