Saturday, June 1, 2024

ಹಾಲಿಡೇ ಅಲ್ಲಾ ಹೋಲಿ ಡೇ !!!

ಕೆಲಸಕ್ಕೆ ಹೋಗೋರು ಭಾನುವಾರ ಅಂದರೆ ಒಂದು ರೀತಿಯ ಸಮಾಧಾನ.. ಎಲ್ಲೂ ಹೋಗೋದೂ ಬೇಡಾ ಮನೇಲಿ ಇರೋಣ ತಿಂದುಂಡು ಇರೋಣ ಅನ್ನುವುದು ಸಾಮಾನ್ಯವಾದ ಮಾತು.. 

ಕೆಲವೊಮ್ಮೆ ಅರಿವಿಲ್ಲದೆ ಹೋದಾಗ  ಬೆಟ್ಟದಷ್ಟು ಭಾರವಾಗಿದ್ದ ಮನಸ್ಸು ಒಣಗಿದ ಹತ್ತಿಯಷ್ಟು ಹಗುರಾಗುತ್ತದೆ.. 

ಹೀಗೆ ಒಂದು ಭಾನುವಾರದ ಅನುಭವ .. ಕಳೆದ ಭಾನುವಾರ ಯಲಹಂಕದ ಬಳಿಯ ಒಂದು ಫಾರ್ಮ್ ಹೌಸ್ ಆಹ್ವಾನವಿತ್ತು.. ಮನಸ್ಸಿನ ಹಾದಿಯನ್ನು ಸರಿ ಮಾಡುವ ಒಂದು ಕೇಂದ್ರ ಆರ್ ಟಿ ನಗರದ ಬ್ರಹ್ಮಕುಮಾರಿಯ ಕೇಂದ್ರದ ಶಕ್ತಿ ಅಕ್ಕ ಭುವನೇಶ್ವರಿಯವರು ಕೊಟ್ಟ ಆಹ್ವಾನ. . 

ಸೀಮಕ್ಕ ಶ್ರೀಕಾಂತಣ್ಣ ಇಬ್ಬರೂ ಬರಬೇಕು.. ಅಂತ ಆಹ್ವಾನ ಕಳಿಸಿದ್ದರು.. ನಾನು ಪ್ರಪಂಚದಲಿ ಇಬ್ಬರ ಆಹ್ವಾನವನ್ನು ಎಂದಿಗೂ ನಿರಾಕರಿಸಿಲ್ಲ.. ಒಬ್ಬರು ನನ್ನ ಮಾನಸಿಕ ಗುರುಗಳು ಶ್ರೀ ದಶವೇದ ಆಶ್ರಮದ ಶ್ರೀ ನಾಗಭೂಷಣ ಅತ್ರಿ .. ಎರಡನೆಯವರು ಭುವನೇಶ್ವರಿ ಅಕ್ಕ.. ಯಾವುದೇ ಹೊತ್ತಿನಲ್ಲೂ, ಯಾವುದೇ ದಿನದಲ್ಲೂ ಕರೆದರೂ ಇಲ್ಲ ಅನ್ನೋಕೆ ಆಗದ ಇಲ್ಲ ಅನ್ನದ ಆಹ್ವಾನ ನೀಡುವ ಮಹಾನ್ ಚೇತನಗಳು ಇವರಿಬ್ಬರು. 

ನಾವಿಬ್ಬರು ಹೋಗುವ ಹೊತ್ತಿಗೆ ಆಗಲೇ ಸುಮಾರು ಅನುಯಾಯಿಗಳು ಬಂದಿದ್ದರು.. ದೈಹಿಕ ಸ್ವಾಸ್ಥ್ಯಕ್ಕೆ ಕೆಲವು ಆಸನಗಳನ್ನುಹೇಳಿಕೊಡುತ್ತಿದ್ದರು .. ನಂತರ ಮನಸ್ಸಿಗೆ ಒಂದು ಘಂಟೆ ಯೋಗ, ಧ್ಯಾನ.. ಆಟದಲ್ಲೂ ಕಲಿಕೆ ಮಾಡಬಹುದು ಅಂತ ತೋರಿಸಿದ್ದು.. ಪಾಸಿಂಗ್ ದಿ ಬಕ್ .. ಚೆಂಡನ್ನು ಒಬ್ಬರಿಗೊಬ್ಬರು ಸಾಗಿಸೋದು.. ಹಾಡು ನಿಂತಾಗ ಯಾರ ಬಳಿ ಇರುತ್ತದೆಯೋ ಅವರು ತಮಗೆ ಬಂದ ಚಿಟ್ಟಿಯಲ್ಲಿ ಏನಿದೆಯೋ ಅದನ್ನು ಮಾಡಬೇಕು.. ಕೆಲವರಿಗೆ ತಮ್ಮ ಅನುಭವ ಹೇಳೋದು.. ಕೆಲವರಿಗೆ ಹಾಡು ಹೇಳೋದು. ಕೆಲವರಿಗೆ ನೃತ್ಯ ಮಾಡೋದು.. ಹೀಗೆ ಹತ್ತಾರು ವಿಧದಲ್ಲಿ ಒಳ್ಳೆಯ ಸಮಯ ಕಳೆಯಿತು.. 

ಊಟವಾಯಿತು.. ನಂತರ ನಿಜವಾದ ಆಟ ಶುರು.. 

ನಮ್ಮ ಸಾಧನೆಯ ಹಾದಿಯಲ್ಲಿ ಬೇಕಾದಷ್ಟು ಅಡಚಣೆಗಳು ಬರುತ್ತವೆ.. ಆದರೆ ಅದನ್ನು ಹೇಗಾದರೂ ನಿಭಾಯಿಸಿ ದಾಟಬಹುದು.. ಆದರೆ ಮನದಲ್ಲಿ ಆವರಿಸುವ ಈ ಮಾಯೆಯ ಮಾಯೆಯನ್ನು ದಾಟಬಹುದು  ಅದಕ್ಕೆ ಬೇಕಾದ ಸಿದ್ಧತೆಗಳು, ಮನದಲ್ಲಿ ಏಳುವ ಪ್ರಶ್ನೆಗಳಿಗೆ ಉತ್ತರ.. ಇದು ಈ ಆಟದ ಸೊಗಸಾಗಿತ್ತು.. 

ಎಂಟು ತಂಡವನ್ನು ಇದಕ್ಕಾಗಿ ಸಿದ್ಧಪಡಿಸಿದರು.. ಅವರಿಗೆಲ್ಲ ಒಂದು ಪರಿಸ್ಥಿತಿಯನ್ನು ಕೊಟ್ಟು.. ಅದಕ್ಕೆ ಮಾಯಾ ಒಡ್ಡುವ ಪರೀಕ್ಷೆ ಅದನ್ನು ನಿವಾರಿಸುವ ನಮ್ಮ ಮನದ ಶಕ್ತಿ.. ಇದು ಈ ಆಟದ ವೈಶಿಷ್ಠ್ಯತೆ.. 

ಮೊದಲ ಅಂಕ : 

ದೃಶ್ಯ ೧ 

ನಾವು ಬ್ರಹ್ಮಕುಮಾರಿಯ ಕೇಂದ್ರದ ಒಳಗೆ ಹೋದರೆ ಅದರ ಮೇಲ್ವಿಚಾರಕಿ..ನಮ್ಮನ್ನು ನೋಡಲು ಇಲ್ಲ.. ಮಾತಾಡಿಸಲು ಇಲ್ಲ.. ಸೇವೆಗೂ ಕರೆಯುತ್ತಿಲ್ಲ.. ಮಾಯೆಯ ಬಿರುಗಾಳಿ ಬೀಸಿದೆ.. 

ಮನಸ್ಸು ಗಲಿಬಿಲಿಯಾಗೋದು ಸಹಾಯ.. ಆದರೆ  ಬ್ರಹ್ಮಕುಮಾರಿ ಕೇಂದ್ರ ಮದುವೆಯ ಮನೆಯೂ 
ಕಾರ್ಯಕ್ರಮದ ಮಂದಿರವೂ ಅಲ್ಲ.. ಬದಲಿಗೆ ಇದು ಎಲ್ಲರ ,ಮನೆ.. ನಮ್ಮ ಮನೆಯಲ್ಲಿ ಕಾರ್ಯಕ್ರಮ ನೆಡೆದರೆ ನಮಗೆ ನಾವೇ ಆಹ್ವಾನ ಪತ್ರಿಕೆ ಕೊಟ್ಟು ಕೊಳ್ಳುತ್ತೇವೆಯೇ.. ಇದು ನಮ್ಮ ಮನೆ ಅಂದ ಮೇಲೆ.. ನಮಗೇಕೆ ಆಹ್ವಾನ ನೀಡಬೇಕು.. ಸೇವೆಗೆ ಕರೆಯಬೇಕು.. ಮನೆಯಲ್ಲಿ ಹೊಟ್ಟೆ ಹಸಿದಿದ್ದರೆ ಪಕ್ಕದ ಮನೆಯವರಿಗೆ ಊಟ ಕೊಡಿ ಅಂತ ಕೇಳೋಲ್ಲ.. ಬದಲಿಗೆ ನಮ್ಮ ಮನೆಯಲ್ಲಿ ಇರುವ ವಸ್ತುವಿನಿಂದ ಆಹಾರ ಸಿದ್ಧಪಡಿಸಿಕೊಂಡು ತಿಂದು ಹಸಿವು ನೀಗಿಸಿಕೊಳ್ಳುತ್ತೇವೆ.. ಇದು ಜ್ಞಾನದ ಹಸಿವನ್ನು ನೀಗಿಸಿಕೊಳ್ಳುವ ಕೇಂದ್ರ.. ಯಾರ ಆಹ್ವಾನವೂ ಬೇಕಿಲ್ಲ ಅದು ಸೇವೆಗೆ ಇರಬಹುದು ಅಥವ ಆಹ್ವಾನ ಇರಬಹುದು.. ಇದೆಲ್ಲದರ ಜೊತೆಗೆ ಕೇಂದ್ರವನ್ನು ನೋಡಿಕೊಳ್ಳುವ ಮೇಲ್ವಿಚಾರಕಿ ಅವರಿಗೆ ಹತ್ತಾರು ಜವಾಬ್ಧಾರಿಗಳು ಇರುತ್ತವೆ.. ಆ ಕೆಲಸಗಳ ನಡುವೆ ಬಂದ ವ್ಯಕ್ತಿಗಳನ್ನು ಗಮನಿಸುವುದು ..ಹಾಗೂ ಅವರಿಗೆ ಸ್ವಾಗತ ನೀಡುವುದರ ಕಡೆಗೆ ಗಮನ ಹರಿಸುವುದು ಕಡಿಮೆಯಾಗಿರುವ ಸಾಧ್ಯತೆಗಳೂ ಇರುತ್ತವೆ. 


ದೃಶ್ಯ ೨ 
ಚಳಿಗಾಲದ ದಿನಗಳು.. ಹೊರಗೆ ಹೋಗೋದು ಬಿಡಿ ಮನೆಯೊಳಗೇ ಗಡಗಡ ನಡುಗುವಷ್ಟು ಚಳಿ.. ಎಷ್ಟು ಹೊದ್ದಿಕೆ ಇದ್ದರೂ ಸಾಲದು.. ಅದರ ಜೊತೆ ಬೆಳಿಗ್ಗೆ ಮುರುಳಿ ಕೇಳೋಕೆ ಕೇಂದ್ರಕ್ಕೆ ಹೋಗಬೇಕು.. ಮಾಯೆ ದಪ್ಪನೆ ರಗ್ಗು, ದಪ್ಪನೆ ಸ್ವೇಟರ್ ತೆಗೆದುಕೊಂಡು ಬರುತ್ತದೆ.. 

ಚಳಿ ಅರೆ ಇದು ದೇಹಕ್ಕೆ ಮಾತ್ರ ಆಗುವ ಅನುಭವ.. ಲಕ್ಷಾಂತರ ಯೋಧರು ನಮ್ಮ ದೇಶದ ಗಡಿಭಾಗದಲ್ಲಿ ಮಳೆ ಬಿಸಿಲು ಚಳಿ ಎನ್ನದೆ ದೇಶವನ್ನು ಕಾಯುತ್ತಿದ್ದಾರೆ.. ದೇಹದ ಸಮಸ್ಯೆಯನ್ನು ಲೆಕ್ಕಿಸದೆ ಗಡಿ ಕಾಯುತ್ತಿರುವ ಯೋಧರು ಅವರಾದರೆ.. ನಾವು ನಮ್ಮ ಮನಸ್ಸಿನ ಗಾಡಿಯನ್ನು ಕಾಯುತ್ತಿರುವ ಯೋಧರು.. ನಮ್ಮ ಮನಸ್ಸು ಚೆನ್ನಾಗಿರಬೇಕಾದರೆ ಮುರುಳಿ ಎಂಬ ಜ್ಞಾನ ಭಂಡಾರವನ್ನು ಕೇಳಬೇಕು ಅದರ ಮುಖ್ಯಸಾರವನ್ನು ಬದುಕಿಗೆ ಅಳವಡಿಸಿಕೊಳ್ಳಬೇಕು.. ಬೆಚ್ಚಗೆ ಮನೆಯಲ್ಲಿ ಇರಬಹುದು.. ಆದರೆ ಅದು ದೇಹಕ್ಕೆ ತಾತ್ಕಾಲಿಕ ಸುಖವಷ್ಟೇ.. ಅದೇ ಸಮಯವನ್ನು ಕೇಂದ್ರದಲ್ಲಿ ಕಳೆದರೆ ಮನಸ್ಸು ಎಂಥಹ ಪರೀಕ್ಷೆಗೂ ಸಿದ್ಧವಾಗಿರುತ್ತದೆ .. 


ದೃಶ್ಯ ೩ 

ಮನೆಯಲ್ಲಿ ದೂರದರ್ಶನ, ಮೊಬೈಲ್ ನೋಡುತ್ತಾ ಕಾಲ ಕಳೆಯುತ್ತಿದ್ದಾರೆ.. ನಮ್ಮನ್ನು ಕರೆಯುತ್ತಾರೆ.. ಮಾಯಾ ತನ್ನ ದೊಡ್ಡ ಟ್ಯಾಬ್ ತೆಗೆದುಕೊಂಡು ಅದರಲ್ಲಿ ಒಳ್ಳೆಯ ಚಲನಚಿತ್ರವನ್ನು ಹಾಕಿ ತೋರಿಸುತ್ತಾ ಬರುತ್ತದೆ 

ದೂರದರ್ಶನದಲ್ಲಿ ಬರುವ ಕಾರ್ಯಕ್ರಮಗಳು ರೆಕಾರ್ಡ್ ಆಗಿರುವಂತದ್ದು, ಕ್ರೀಡೆ, ಲೈವ್ ಕಾರ್ಯಕ್ರಮಗಳು  ಬರುತ್ತವೆ ಆದರೂ ಅದನ್ನು ಆಮೇಲೆ ಕೂಡ ಮರುಪ್ರಸಾರ ಮಾಡುತ್ತಾರೆ.. ಅವು ಹೆಚ್ಚು ಸಮಯ ಕಾಲ ಪ್ರಸಾರವಾಗುತ್ತದೆ.. ಆದರೆ ಜ್ಞಾನ ಭಂಡಾರದ ರತ್ನಗಳಾದ ಧ್ಯಾನ, ಮುರುಳಿ ತರಗತಿಗಳು. ಅಮೃತವಾಣಿಗಳು ಬಹಳ ಕಾಲ ನಮ್ಮನ್ನು ಗಟ್ಟಿ ಮಾಡುತ್ತದೆ.. ವೈದ್ಯರು ಕೊಡುವ ಚಿಕಿತ್ಸೆ, ಮಾತ್ರೆಗಳು, ಟಾನಿಕ್ಕುಗಳು ಆ ಸಮಯದಲ್ಲಿ ತೆಗೆದುಕೊಂಡಾಗ ನಮ್ಮ ದೇಹದ ಆರೋಗ್ಯ ಚೆನ್ನಾಗಿರುತ್ತದೆ... ಹಾಗೆಯೇ ಈ ಕೇಂದ್ರದಲ್ಲಿ ಕಲಿಸುವ ಉತ್ತಮ ವಿಚಾರಗಳು ನಮ್ಮ ಮನಸ್ಸಿನ ಆರೋಗ್ಯವನ್ನು ಸದಾ ಕಾಪಾಡುತ್ತದೆ.. 

ದೃಶ್ಯ ೪ 
ಮೊಬೈಲ್ ಮಾಯಾ .. .ಎಷ್ಟೆಲ್ಲಾ ತರಗತಿಗಳು, ಜ್ಞಾನ ತುಂಬಿದ ವಿಡಿಯೋಗಳು ದಿನದ ಇಪ್ಪತ್ತನಾಲ್ಕು ಕಾಲ ಮೊಬೈಲಿನಲ್ಲಿ ಸಿಗುತ್ತಲೇ ಇರುತ್ತವೆ.. ಅದೇ ಪುರುಷಾರ್ಥ.. .. ಮಾಯಾ ಉತ್ತಮ ವಿಡಿಯೋ ತುಂಬಿದ ಪೆನ್ ಡ್ರೈವ್, ಸಿಡಿ, ಯು ಟ್ಯೂಬ್ ಲಿಂಕ್ ಕೊಡುತ್ತಾ ಮಾಯಾ ಬರುತ್ತದೆ 

ಈ ಜಗತ್ತು ತಂತ್ರಜ್ಞಾನದಿಂದ ಒಂದು ಪುಟ್ಟ ಹಳ್ಳಿಯಾಗಿದೆ.. ಇಲ್ಲಿ ಎಲ್ಲವೂ ಅಂಗೈಯಲ್ಲಿ ಸಿಗುತ್ತದೆ.. ಜ್ಞಾನ, ವಿಜ್ಞಾನ, ಯೋಗ, ಧ್ಯಾನ ಎಲ್ಲವೂ ಈ ಪುಟ್ಟ ಪುಟ್ಟ ವಿಡಿಯೋಗಳು ಕಲಿಸುತ್ತವೆ.. ನಿಜ.. 
ಹೊಟ್ಟೆ ಹಸಿದಿದೆ ಅಂತ ಅಮ್ಮನಿಗೆ ಫೋನ್ ಮಾಡಿ.."ಅಮ್ಮ ಹೊಟ್ಟೆ ಹಸೀತಾ ಇದೆ.. ಏನಾದರೂ ತಿಂಡಿ ಕೊಡು" ಅಂತ ಕೇಳಿದಾಗ.. ಅಮ್ಮ "ಮಗು ನಿನ್ನ ಮೊಬೈಲಿಗೆ ವಾಟ್ಸಾಪಿನಲ್ಲಿ ಅಕ್ಕಿ ರೊಟ್ಟಿ ಕಲಿಸಿದ್ದೀನಿ.. ತಿಂದು ಹಸಿವು ನೀಗಿಸಿಕೊ" ಅಂದರೆ.. ಹೊಟ್ಟೆ ಹಸಿವು ಹೋಗುತ್ತದೆಯೇ.. 
ಹಾಗೆ ಇದು ಕೂಡ.. ಎಲ್ಲಿ ಕೇಂದ್ರಗಳಲ್ಲಿ ಆ ಉತ್ತಮ ವೈಬ್ರೆಷನ್, ಉತ್ತಮ ಸಾಂಗತ್ಯ.. ಉತ್ತಮ ವಾತಾವರಣ ಇರುವಂತಹ ತಾಣದಲ್ಲಿ ಕಲಿತಾಗ ಬದುಕು ಸುಂದರ.. 

ದೃಶ್ಯ ೫

ಬದುಕಿನ ದುಡಿಮೆಯಲ್ಲಿ ದೊಡ್ಡ ಪಾಲು ಈ ಕೇಂದ್ರಕ್ಕೆ ಕೊಟ್ಟಿದ್ದಾರೆ.. ಆದರೆ ಕೇಂದ್ರದ ಯಾವುದೇ ಕಾರ್ಯಕ್ರಮದಲ್ಲಿಯಾಗಲಿ, ಅಥವ ಕೇಂದ್ರದಲ್ಲಿ ಅವರ ಹೆಸರು ಅವರ ದಾನದ ಹಣದ ಮೊತ್ತ.. ಅಥವ ಯಾವುದೇ ಹಾರ ತುರಾಯಿಗಳು.. ಸರ್ಟಿಫಿಕೇಟ್, ಫಲಕ ಯಾವುದೂ ಕೊಟ್ಟಿಲ್ಲ .. 

ದೇಶ ಕಾಯುವ ಯೋಧರು ಯುದ್ಧದಲ್ಲಿ ಜಯಶಾಲಿಗಳಾಗಿ ಬಂದ ಮೇಲೆ.. ಯಾರಿಂದಲೂ ಪ್ರಶಂಸೆ, ಹಾರಗಳನ್ನು ನಿರೀಕ್ಷಿಸೋದ್ದಿಲ್ಲ ಕಾರಣ ಅದು ಅವರ ಕರ್ತವ್ಯ.. ಎಲ್ಲರೂ ಯೋಧರಾಗೋಕೆ ಆಗೋಲ್ಲ.. ಯೋಧರಾದೋರು ಎಲ್ಲರ ತರಹ ಇರೋಕೆ ಆಗೋಲ್ಲ.. ಹಾಗೆಯೇ ಕೇಂದ್ರಕ್ಕೆ ಬರುವ ಪ್ರತಿಯೊಬ್ಬರೂ ತಮ್ಮ ಶಕ್ತಿಗೆಅನುಸಾರವಾಗಿ , ತಮ್ಮ ಕೈಲಾದಷ್ಟು ಹಣ ಸಹಾಯ ಮಾಡುತ್ತಾರೆ.. ಕೆಲವರು ದೇಹ ಶ್ರಮ ನೀಡುತ್ತಾರೆ... ಅವರ ಉದ್ದೇಶ ತಮ್ಮ ಕೈಲಾದಷ್ಟು ಕೇಂದ್ರದ ಉತ್ತಮ ಕಳಕಳಿಗೆ ಕೈಜೋಡಿಸೋದಷ್ಟೇ ಇರುತ್ತೆ ಹೊರತು ಪ್ರಶಂಸೆಗಳಿಗಾಗಿ ಅಲ್ಲ 

ದೃಶ್ಯ ೬

ಅಮೃತವೇಳೆ ಸಮಯದಲ್ಲಿ ಎದ್ದು ನಮಗೆ ಮಾರ್ಗದರ್ಶನ ನೀಡುವ ಶಕ್ತಿಯನ್ನು ನೆನಪಿಸಿಕೊಂಡು ಧ್ಯಾನ ಮಾಡುತ್ತಾ ಕೂಡುವ ಮನಸ್ಸು.. ಆದರೆ ಮಾಯೆಯ ಬಿರುಗಾಳಿ ಬೀಸಿಯೇ ಬಿಡುತ್ತದೆ.. 

ಅಲಾರಾಂ ಬಡಿದುಕೊಳ್ಳುತ್ತಲೇ ಇರುತ್ತದೆ.. ಮಾಯೆ ಆ ಅಲಾರಾಂ ಅನ್ನು ಬಡಿದುಸುಮ್ಮನಾಗಿಸುತ್ತದೆ ಇನ್ನೂ ಸ್ವಲ್ಪ ಕಾಲ ಮಲಗೋಣ ಅನ್ನಿಸೋದು ಸಹಜ.. ಆದರೆ ಯೋಚಿಸಿ.. ಒಂದು ಚಾರಣಕ್ಕೆ ಹೊರಟಿರುತ್ತೀರಿ ಬೆಟ್ಟದ ತುತ್ತ ತುದಿ ತಲುಪುವುದಕ್ಕೆ ಇನ್ನು ಸ್ವಲ್ಪವೇ ಹೆಜ್ಜೆ ಇರುತ್ತದೆ.. ಅಯ್ಯೋ ಆಗೋಲ್ಲ ನಾಳೆ ಹತ್ತಿದರಾಯ್ತು ಅಂದರೆ ಮತ್ತೆ ನಾಳೆಯೂ ಕೂಡ ಅಷ್ಟೇ ಎತ್ತರ.. ಅಷ್ಟೇ ದೂರ ಸಾಗಲೇ ಬೇಕಾಗುತ್ತದೆ.. ಪ್ರತಿದಿನ ಅಮೃತವೇಳೆಯ ಸಮಯದಲ್ಲಿ ಎದ್ದು ಯೋಗ, ಧ್ಯಾನ ಮಾಡಿ ದೇಹವನ್ನು, ಮನಸ್ಸನ್ನು ಹದ ಮಾಡಿಕೊಂಡು ಇರುವಾಗ ಆ ಅಭ್ಯಾಸ ತಪ್ಪಿದರೆ ಮತ್ತೆ ನಮ್ಮ ನಿಯಂತ್ರಕ್ಕೆ ಸಿಗೋದು ಕಷ್ಟ.. ವೈದ್ಯರು ಹೇಳಿದ ಔಷಧಿಯನ್ನು ಹೇಳಿದ ಸಮಯಕ್ಕೆ ಹೇಳಿದ ದಿನಗಳಿಗೆ ತೆಗೆದುಕೊಂಡಾಗ ಆರೋಗ್ಯ ಮತ್ತೆ ನಮ್ಮದಾಗುವಂತೆ.. ನಾವು ಮಾಡಿಕೊಂಡ ಅಮೃತ್ಯವೇಳೆಯ ಕಾಲದ ಅಭ್ಯಾಸವನ್ನು ಎಂದಿಗೂ ಬಿಡಬಾರದು.. 

ದೃಶ್ಯ ೭ 
ನಮ್ಮ ಬದುಕಿನಲ್ಲಿ ಶ್ರೀಮತವನ್ನು ಅನುಸರಿಸಿದ್ದೀವಿ.. ಬೇಕಾದಷ್ಟು ಸೇವೆ ಮಾಡಿದ್ದೀವಿ .. ಬದುಕಿನಲ್ಲಿ ಈ ಸಮಯದಲ್ಲಿ ದೇಹದಲ್ಲಿ ಅನಾರೋಗ್ಯ ಕಾಣಿಸಿಕೊಳ್ಳುತ್ತದೆ.. ಔಷಧಿ ತೆಗೆದುಕೊಂಡಿದ್ದೀವಿ.. ಮಾಯೆ ಆರೋಗ್ಯವನ್ನು ಕಾಡುವ ಸಿಹಿ ತಿಂಡಿಯನ್ನು ತಂದು ಬಿಡುತ್ತದೆ.. 

ಬದುಕಿನಲ್ಲಿ ಶ್ರೀಮತ ಅನುಸರಿಸಿ ಮನಸ್ಸನ್ನು ಶುದ್ಧಿಗೊಳಿಸಿಕೊಂಡಿದ್ದೀವಿ.. ಮನಸ್ಸು ಆರೋಗ್ಯಕರವಾಗಿದೆ.. ಈಗ ಬಂದಿರುವುದು ದೇಹಕ್ಕೆ ಅನಾರೋಗ್ಯ.. ಇದು ವಯೋಸಹಜ ಆರೋಗ್ಯದ ಸಮಸ್ಯೆ ಇದಕ್ಕೂ ಬದುಕಿಗೆ ಮಾರ್ಗ ತೋರಿಸಿದ ಕೇಂದ್ರಕ್ಕೂ ಸಂಬಂಧವಿಲ್ಲ.. ಕೇಂದ್ರಕ್ಕೆ ಹೋಗೋದು, ಅಲ್ಲಿ ಸೇವೆ ಮಾಡೋದು.. ಒಳ್ಳೆಯ ಸಂದೇಶಗಳನ್ನು ಅನುಸರಿಸಿ ಜೀವನ ಮಾಡೋದು ಇದನ್ನು ಬಿಡಲಾಗದು.. ದೇಹದ ಆರೋಗ್ಯ ಕಾಪಾಡೋಕೆ ವೈದ್ಯರಿದ್ದಾರೆ,ದೇವರಿದ್ದಾನೆ .. ಮನಸ್ಸಿನ ಸ್ವಾಸ್ಥತೆಯನ್ನು ಕಾಪಾಡೋದು ಈ ಕೇಂದ್ರ.. ಅದನ್ನು ಬಿಡಲಾಗದು.. 

ದೃಶ್ಯ ೮

ನಮ್ಮ ಬಂಧುಮಿತ್ರರಿಂದ ಒಳ್ಳೆಯ ಊಟೋಪಚಾರಕ್ಕಾಗಿ ಆಹ್ವಾನವಿರುತ್ತದೆ.. ಜೀವನದಲ್ಲಿ ಪಾಲಿಸಿಕೊಂಡು ಬಂದ ಶ್ರೀಮತ ಸೇರಿದ ಆಹಾರ ಪದ್ಧತಿ ಇನ್ನೊಂದು ಕಡೆ  ಬಂಧು ಮಿತ್ರರ ಪ್ರೀತಿಯ ಆಹ್ವಾನ.. ಏನು ಮಾಡೋದು.. ಮಾಯೆ ತನ್ನ ತಟ್ಟೆಯಲ್ಲಿ ಎಲ್ಲಾ ರೀತಿಯ ಆಹಾರವನ್ನು ತುಂಬಿಕೊಂಡು ಬರುತ್ತದೆ.. 

ನಾವು ನಂಬಿದ ಸಿದ್ಧಾಂತಗಳು, ನಂಬಿಕೆಗಳು ಇವುಗಳೇ ನಮಗೆ ಮಾರ್ಗದರ್ಶನ.. ಇದೆ ನಮ್ಮ ಯಶಸ್ಸಿಗೆ ಕಾರಣವಾಗೋದು.. ಇದನ್ನು  ಎಂದಿಗೂ ಬಿಡಬಾರದು.. ಕಾಡಿನಲ್ಲಿ ಶಾಖಾಹಾರಿ ಪ್ರಾಣಿಗಳಾದ ಹುಲಿ ಸಿಂಹ ಚಿರತೆ ನರಿ ತೋಳ ಮುಂತಾದವುಗಳು ಎಷ್ಟೇ ಹಸಿದಿರಲಿ ತಮ್ಮ ಆಹಾರ ಪದ್ಧತಿಯನ್ನು ಮರೆಯೋದಿಲ್ಲ.. ಹಾಗೆಯೇ ಸಸ್ಯಾಹಾರಿಗಳಾದ ಜಿಂಕೆ, ಆನೆ, ಹಸುಗಳು, ಜಿರಾಫೆ, ಕುದುರೆ, ಕತ್ತೆಗಳೂ ಕೂಡ.. ಹಾಗೆಯೇ ನಮ್ಮ ಆಹಾರ ಪದ್ಧತಿಗಳನ್ನು ಕೂಡ ನಿಭಾಯಿಸಬೇಕು.. ಅವರ ಪ್ರೀತಿ ವಿಶ್ವಾಸಗಳಿಗೆ ತಲೆ ಬಾಗೋಣ ಆದರೆ.. ನಮ್ಮ ಆಹಾರ ಪದ್ಧತಿಗಳನ್ನು ಅನುಸರಿಸೋಣ.. 

 





******
ಈ ರೀತಿಯ ಅನೇಕಾನೇಕ ಕಲಿಕೆಗಳು ಪಾಠಗಳು ಉತ್ತಮ ಸಂದೇಶಗಳು ನಮ್ಮ ಜೀವನವನ್ನು ಹಸಿರಾಗಿಸುವಷ್ಟೇ ಅಲ್ಲ.. ಬದುಕನ್ನು ಸುಂದರಗೊಳಿಸುತ್ತವೆ.. 

ಈ ರೀತಿಯ ಅದ್ಭುತ ಕಾಲವನ್ನು ಸುಂದರವಾಗಿ ನೋಡಲಿಕ್ಕೆ ಅನುಕೂಲಮಾಡಿಕೊಟ್ಟ ರವೀಂದ್ರ ನಾಥ ಠಾಗೋರ್ ನಗರ ಅರ್ಥಾತ್ ಆರ್ ಟಿ ನಗರದ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ಭುವನೇಶ್ವರಿ ಅಕ್ಕ ಮತ್ತು ಅವರ ಅತ್ಯುತ್ತಮ ತಂಡದ ಪ್ರತಿ ಸದಸ್ಯರಿಗೂ ನನ್ನ ಮನದಾಳದ ಅಭಿನಂದನೆಗಳು ಹಾಗೂ ಧನ್ಯವಾದಗಳು..!!!

1 comment:

  1. ನೀವು ಹೇಳಿದಂತೆ ಇದು ನಿಜವಾಗಿಯೂ holy-day! ಸುಖಕರವಾದ, ಪವಿತ್ರ ಪರಿಸರದಲ್ಲಿ ಸಮಯವನ್ನು ಕಳೆಯುತ್ತಿದ್ದೀರಿ. ನಿಮಗೆ ಖಂಡಿತವಾಗಿಯೂ ಶುಭವಾಗುತ್ತದೆ.

    ReplyDelete