Sunday, March 17, 2024

ಕಗ್ಗಂಟಿನ ಕರದಂಟು - ಡಿವಿಜಿ ಅಜ್ಜ - ೧

ಜಗತ್ತೇ ಒಂದು ಕಗ್ಗಂಟಾಗಿರುವಾಗ ಅದರೊಳಗೆ ಮಂಕುತಿಮ್ಮ ಎಂಬ ಪಾತ್ರದ ಮೂಲಕ, ಜಗತ್ತಿನ ವಿಶೇಷಗಳನ್ನು, ವಿಶಿಷ್ಟತೆಗಳನ್ನು, ತಾವು ಓದಿದ ಪುರಾಣ, ಪುಣ್ಯಕತೆಗಳು, ಐತಿಹಾಸಿಕ ಕ್ಷಣಗಳು, ತಾವು ಕೇಳಿದ ಜನಜನಿತ ಕತೆಗಳು, ಹಾಡುಗಳು, ಸಂಗತಿಗಳು, ತಮ್ಮ ಬದುಕಿನ ಕಥೆಗಳು.. ಜಗತ್ತಿನಲ್ಲಿ ನೆಡೆಯುವ ಅನೇಕಾನೇಕ ಪವಾಡಸದೃಶ್ಯಗಳನ್ನು ನಾಲ್ಕು ಸಾಲುಗಳಲ್ಲಿ ಹಿಡಿದಿಡುತ್ತಾ, ಸಾರ್ವಕಾಲಿಕ ಸತ್ಯವಾದ ಕಗ್ಗಗಳನ್ನು ಸೃಷ್ಟಿಸಿರುವ ಕಗ್ಗದ ಅಜ್ಜನಿಗೆ ನಮಿಸುತ್ತಾ.. ಈ ಜೈತ್ರಯಾತ್ರೆಯನ್ನು ಆರಂಭಿಸುತ್ತಿದ್ದೇನೆ.. 


ಚಿತ್ರಕೃಪೆ - ಗೂಗಲೇಶ್ವರ 

ನನ್ನ ಬದುಕಿನ ಹಾದಿಗೆ ದಾರಿ ದೀಪವಾಗಿದ್ದು ಅನೇಕ ವಿಷಯಗಳು.. ಮಹಾಭಾರತ, ಇತರ ಮಹಾಭಾರತದ ಕೊಂಡಿಯಿರುವ ಪುರಾಣ ಕಥೆಗಳು, ಭಗವದ್ಗೀತೆ, ಚಾಣಕ್ಯ, ದೇವಾನುದೇವತೆಗಳ ಕಥೆಗಳು ಇವುಗಳ ಜೊತೆಯಲ್ಲಿ ಸಿನಿಮಾಗಳು ಬಹಳ ಪ್ರಭಾವ ಬೀರಿದ್ದವು.. ಹಾಗಾಗಿ ಆ ಅನುಭವಗಳ ಮೂಟೆಯನ್ನು ಹೊತ್ತು ಸಿನೆಮಾಗಳ ಅನೇಕ ಪ್ರೇರಣಾತ್ಮಕ ಸನ್ನಿವೇಶಗಳನ್ನು, ಹಾಡುಗಳನ್ನು, ಸಾಹಸ ದೃಶ್ಯಗಳನ್ನು ಕಗ್ಗದ ಕಡಲಿಗೆ ಸಮೀಕರಿಸುವ ಒಂದು ದುಸ್ಸಾಹಸಕ್ಕೆ ಕೈ ಹಾಕೋಣ ಎನಿಸಿತು.. ಬಂಧು ಮಿತ್ರರು ಪ್ರೇರೇಪಿಸಿದರು, ಹಾಗಾಗಿ ಈ ಹೆಜ್ಜೆಗಳು..  

ಇಂದು ಅವರ ಜನುಮದಿನ, ಶುಭಾರಂಭವಾಗಲಿ, ಅಜ್ಜನ ಆಶೀರ್ವಾದ ಈ ಸರಣಿಗೆ ಉಸಿರು ತುಂಬಲಿ ಎಂದು ಆಶಿಸುತ್ತಾ, .. ಈ ಪುಟ್ಟ ಪುಟ್ಟ ಹೆಜ್ಜೆಯನ್ನು ಇಡಲು ಶುರು ಮಾಡುತ್ತೇನೆ!!!

                                                                            ******

ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಲೋಲ,                                                                                          ದೇವ ಸರ್ವೇಶ ಪರಬ್ಬೊಮ್ಮನೆಂದು ಜನಂ||                                                                                            ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ|                                                                                ಆ ವಿಚಿತ್ರಕೆ ನಮಿಸೊ - ಮಂಕುತಿಮ್ಮ|| ೧||


ದಶಾವತಾರಗಳನ್ನು ತಾಳಿದ ವಿಷ್ಣು.. ಸೃಷ್ಟಿಕರ್ತ ಬ್ರಹ್ಮನ ಪಿತಾ.. ಜಗತ್ತನ್ನು ಸ್ಥಿತಿಯಲ್ಲಿಡುವ ದೈವ, ದುಷ್ಟ ಶಿಕ್ಷಕ ಶಿಷ್ಟ ರಕ್ಷಕ ಹೀಗೆ ಹತ್ತಾರು ಗುಣವಿಶೇಷಣಗಳನ್ನು ಹೊಂದಿರುವ ವಿಷ್ಣು.. ಮತ್ತು ಅವನ ಶಕ್ತಿಗೆ, ಅವನ ಯುಕ್ತಿಗೆ, ಯಾವುದೇ ಸಂದರ್ಭದಲ್ಲಿಯೂ ಕೂಡ ತಾಳ್ಮೆಯನ್ನು ಕಳೆದುಕೊಳ್ಳದೆ, ಸಮಸ್ಯೆಗಳನ್ನು ಉಪಯುಕ್ತವಾದ ರೀತಿಯಲ್ಲಿ ಬಗೆಹರಿಸುವ ಆ ವಿಶೇಷ ಶಕ್ತಿಗೆ, ವಿಚಿತ್ರ ಶಕ್ತಿಗೆ ನಮಿಸೋಣ ಎನ್ನುವ ಮಾತನ್ನು ಅಜ್ಜ ನಮಗೆ ಹೇಳುತ್ತಾರೆ. 

 ತನ್ನ ದ್ವಾರ ಪಾಲಕರಾದ ಜಯವಿಜಯರು ಶಾಪಗ್ರಸ್ತರಾಗಿ, ಮೂರು ಜನ್ಮಗಳಲ್ಲಿ ದುಷ್ಟರಾಗಿ ಜನಿಸಿ ಹರಿಯಿಂದ ಹತರಾಗಿ ಮರಳಿ ವೈಕುಂಠಕ್ಕೆ ಮರಳುವ ಹಂತಗಳಲ್ಲಿ ಮೊದಲನೆಯ ಅವತಾರ ಹಿರಣ್ಯಾಕ್ಷ-ಹಿರಣ್ಯಕಶಿಪು. 

ಹಿರಣ್ಯಾಕ್ಷ ವಿಷ್ಣುವನ್ನು ವರಾಹ ರೂಪದಲ್ಲಿ ಧರೆಗಿಳಿಸಿ ಹತನಾಗಿ ವೈಕುಂಠ ಸೇರುತ್ತಾನೆ.. ಆದರೆ ಇನ್ನಷ್ಟು ಬಲಾಢ್ಯನಾದ ಹಿರಣ್ಯಕಶಿಪು ತನ್ನ ಸುತ  ಪ್ರಹ್ಲಾದ ಹರಿಭಕ್ತನಾಗಿದ್ದರಿಂದ ಆತನನ್ನು ಅನೇಕ ಶಿಕ್ಷೆಗಳಿಗೆ ಗುರಿಪಡಿಸಿದರೂ ಅಳಿಯದ ಪ್ರಹ್ಲಾದನ ಜೊತೆ ನೆಡೆಯುವ ಅಂತಿಮ ಸಂಭಾಷಣೆ ಈ ಕಗ್ಗಕ್ಕೆ ಸಮೀಕರಿಸಬಹುದು.. 

ಹರಿಯು ಸರ್ವಾಂತರಯಾಮಿ ಎನ್ನುತ್ತಾ, ಸೃಷ್ಟಿಗೆ ಆತನೇ ಶಕ್ತಿ ಎನ್ನುತ್ತಾ.. ವಿಷ್ಣುವು ಹತ್ತು ಹಲವಾರು ಹೆಸರುಗಳಿಂದ ಕಂಗೊಳಿಸುತ್ತಿದ್ದಾನೆ ಎನ್ನುವಾಗ ಕುಪಿತಗೊಂಡ ಹಿರಣ್ಯಕಶಿಪು .. ಈ ಜಗತ್ತಿಗೆಲ್ಲ ನಾನೇ ಸರ್ವೇಶ್ವರ.. ಎಂದಾಗ ಪ್ರಹ್ಲಾದ ನೀನು ನನಗೆ ಜನ್ಮಕೊಟ್ಟವನು.. ನಿನಗೆ ಜನ್ಮಕೊಟ್ಟವರು ಯಾರು ಎಂದಾಗ.. ಕಶ್ಯಪ ಬ್ರಹ್ಮ.. ಎನ್ನುತ್ತಾನೆ.. ಅವರ ತಂದೆ ಎಂದಾಗ ಚತುರ್ಮುಖ ಬ್ರಹ್ಮ ಎನ್ನುತ್ತಾನೆ.. ಅವರ ತಂದೆ ಎಂದಾಗ ನಿರುತ್ತರನಾಗುತ್ತಾನೆ.. 



ಚತುರ್ಮುಖ ಬ್ರಹ್ಮನ ತಂದೆ ಯಾರು.. ಯಾರಾದರೂ ಇರಲೇಬೇಕಲ್ಲ ಎಂದಾಗ.. ಯಾರು ಅವರು ಎನ್ನುತ್ತಾನೆ ಹಿರಣ್ಯಕಶಿಪು.. ಆಗ ಅವನೇ ಶ್ರೀಮನ್ನಾರಾಯಣ ಎನ್ನುತ್ತಾನೆ.. 

ಹೀಗೆ ಒಂದು ಕಲ್ಲಿನ ಮೇಲೆ ಇನ್ನೊಂದು ಕಲ್ಲು.. ಅದರ ಮೇಲೆ ಇನ್ನೊಂದು.. ಹೀಗೆ ಜೋಡಿಸುತ್ತಾ ಹೋದಾಗ ಕಡೆಯಲ್ಲಿ ನಿಲ್ಲುವುದು ವಿಷ್ಣುವಿನ ಉಪಸ್ಥಿತಿ ಎನ್ನುವ ತತ್ವನ್ನು ಈ ಸಂಭಾಷಣೆ ಹೇಳುತ್ತದೆ.. 



ಮತ್ತೆ ಇನ್ನೊಂದು ಕಗ್ಗದ ಸುತ್ತಾ ಓಡಾಡೋಣ!!!

6 comments:

  1. Super.. very nice honey.. have covered major and important incidence of ethology..which helps to implement in day to day life..thank u..

    ReplyDelete
  2. ವ್ಯಕ್ತಿತ್ವ ವಿಕಸನ ಮತ್ತು ಚೈತನ್ಯ ತುಂಬುವ ಸಕಾರಾತ್ಮಕ ಬರಹಗಳು ಶ್ರೀಮಾನ್ ಹೆಚ್ಚುಗಾರಿಕೆ.

    ಈ ಹೊಸ ಸರಣಿ ಖಂಡಿತ ಜನ ಮಾನ್ಯವಾಗಿತ್ತದೆ.
    ಡಿ.ವಿ.ಜಿ ಕಗ್ಗಗಳು ನಮಗೆ caleidoscope ಇದ್ದ ಹಾಗೆ, ನೋಡಿದ - ಅರ್ಥೈಸಿಕೊಂಡ ಪ್ರತಿ ಬಾರಿ ಹೊಸ ದಿಶೆಯನ್ನೇ ತೋರುತ್ತವೆ.

    ಸರಳವಾಗಿ ತೆರೆದಿಟ್ಟಿದ್ದೀರ ಸಾರ್. ಶುಭವೇ ಆಗಲಿ.

    ReplyDelete
    Replies
    1. Arey waaha.. super super explanation Badari Sir..thank you so much

      Delete
  3. ಸುಂದರವಾದ ದೃಶ್ಯಕ್ಕೆ ಅಷ್ಟೇ ಸುಂದರವಾದ ನಿರೂಪಣೆಯನ್ನು ಕೊಟ್ಟಿರುವಿರಿ. ಧನ್ಯವಾದಗಳು, ಶ್ರೀಕಾಂತ!

    ReplyDelete