Saturday, January 13, 2024

ಗಂಗೆ - ಭೀಷ್ಮ ಮಹಾಭಾರತ ..

ನಾಲ್ಕನೇ ತರಗತಿಯಲ್ಲಿ ರನ್ನನ ಗಧಾಯುದ್ಧದ ಒಂದು ಭಾಗ "ಊರುಭಂಗ" ಪಾಠವಿತ್ತು.. ವಿದ್ಯೆ ಕಲಿಯಬೇಕೆಂಬ ಆಸೆ ಹೊತ್ತು ಗುರುಗಳ ಬಳಿಗೆ ಬಂದಾಗ 

ರನ್ನನ ಪೂರ್ವಾಪರ ವಿಚಾರ ತಿಳಿದು " ಕೊಂಡು ತಂದು ಹೊತ್ತು ಮಾರಲು ವಿದ್ಯೆಯೇನು ಬಳೆಯ ಮಲಾರವೇ!" ಎಂದು ಹೇಳುತ್ತಾರೆ.. 

ಆದರೂ ಛಲ ಬಿಡದ ರನ್ನ ವಿದ್ಯೆ ಕಲಿತು.. ಮಹಾನ್ ಕವಿಯಾಗುತ್ತಾರೆ. 

ಆ ಪಾಠ ಓದಿ, ದುರ್ಯೋಧನ ಅಲಿಯಾಸ್ ರನ್ನ ಹೆಸರಿಸುವ ಸುಯೋಧನನ ಊರುಭಂಗ ಪಾಠ ನನ್ನ ಮಹಾಭಾರತದ ಹುಚ್ಚಿಗೆ ನಾಂದಿಯಾಯಿತು.. ನಂತರ ಏಳನೇ ತರಗತಿಯಲ್ಲಿ ಸೌಗಂಧಿಕಾ ಪುಷ್ಪ ಹರಣ ಪಾಠ ಮಹಾಭಾರತದ ಹುಚ್ಚಿಗೆ ಇನ್ನಷ್ಟು ನೀರೆರೆಯಿತು.. 

ಎಂಭತ್ತರ ದಶಕದ ಅಂತ್ಯದಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ಬಿ ಆರ್ ಚೋಪ್ರಾ ಅವರ ಮಹಾಭಾರತ ಖುಷಿಕೊಟ್ಟಿತು. ಅಂದಿನಿಂದ ಇಂದಿನ ತನಕ ಮರುಪ್ರಸಾರವಾದಾಗೆಲ್ಲ ಬಹುಶಃ ಎಲ್ಲಾ ಕಂತುಗಳನ್ನು ನೋಡಿದ್ದೇನೆ ಮತ್ತು ಮುಂದೂ ನೋಡುತ್ತೇನೆ. 

ಪ್ರತಿಯೊಂದು ದೃಶ್ಯವೂ ಒಂದು ಅದ್ಭುತ ಸಂಯೋಜನೆ.. ಅಭಿನಯ, ಸೆಟ್ಟುಗಳು, ಸಂಭಾಷಣೆ, ಪಾತ್ರಧಾರಿಗಳ ಆಯ್ಕೆ (ಹ ಕೆಲವೊಂದು ಪಾತ್ರಗಳು ಬೇರೆ ಕಲಾವಿದರ ಆಯ್ಕೆ ಬೇಕು ಅನಿಸಬಹುದೇನೋ, ಆದರೆ ನನಗೆ ಓಕೆ), ಸಂಗೀತ, ಹಾಡುಗಳು ಎಲ್ಲವೂ ಅದ್ಭುತ. 

ನನಗೆ ಬಲು ಇಷ್ಟವಾದ ಅನೇಕ ದೃಶ್ಯಗಳಲ್ಲಿ ಎರಡನ್ನು ಇಲ್ಲಿ ಉಲ್ಲೇಖಿಸುತ್ತೇನೆ. 

ಒಂದನೇ ದೃಶ್ಯ 

ಭೀಷಣ ಪ್ರತಿಜ್ಞೆ ಮಾಡಿದ ದೇವವ್ರತ ತನಗೆ ಗೊಂದಲವಾದಾಗೆಲ್ಲ ತನ್ನ ತಾಯಿ ಗಂಗೆಯ ತೀರಕ್ಕೆ ಬಂದು ತಾಯಿಯನ್ನು ಕಂಡು ಮಾತಾಡಿ ಗೊಂದಲ ಪರಿಹರಿಸಿಕೊಳ್ಳುವುದು ರೂಢಿಯಾಗಿರುತ್ತದೆ. ಇದರಿಂದ ಬೇಸತ್ತ ಗಂಗೆ ಒಮ್ಮೆ ಭೀಷ್ಮನಿಗೆ ಹೇಳುತ್ತಾಳೆ "ನೀನು ಸಣ್ಣ ಮಗುವಿನ ತರಹ ಪ್ರತಿಬಾರಿಯೂ ದೂರುಗಳನ್ನು ತಂದು ನನಗೆ ಒಪ್ಪಿಸುತ್ತೀಯಾ.. ನಿನ್ನ ತಂದೆಗೆ ನೀನು ಮದುವೆಯಾಗೋಲ್ಲ ಅಂತ ಶಪಥ ಮಾಡಿದಾಗ ನನಗೆ ಹೇಳಲಿಲ್ಲ ನನ್ನ ಒಪ್ಪಿಗೆ ಪಡೆಯಲಿಲ್ಲ..  ನೀನು ಜೀವನದಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಂಡಾಗ ನನ್ನ ಕೇಳಲಿಲ್ಲ ಆದರೆ ನಿನಗೆ ಸಮಸ್ಯೆ ಬಂದಾಗ ನನ್ನ ಬಳಿ ಓಡಿ ಬರುತ್ತೀಯ" ಎಂದಾಗ ಭೀಷ್ಮ ಕಣ್ಣಲ್ಲಿ ನೀರು ತುಂಬಿಕೊಂಡು "ಸರಿ ಮಾತೆ ಇನ್ನು ನೀನಾಗೆ ಬರುವ ತನಕ ನಾ ನಿನ್ನ ಬಳಿ ಬರುವುದಿಲ್ಲ" ಎಂದು ಹೇಳುತ್ತಾನೆ ಗಂಗೆ ಮಾಯವಾಗುತ್ತಾಳೆ. 

ಇಲ್ಲಿ ಗಂಗೆ ಪಾತ್ರಧಾರಿ ಕಿರಣ್ ಜುನೇಜಾ ಅದ್ಭುತಾವಾಗಿ ಮಾತಾಡುತ್ತಾಳೆ.. ಕಣ್ಣಿನ ಹೊಳಪು ಆ ಬಿಳಿ ಪೋಷಾಕು ಅದ್ಭುತವಾಗಿ ಕಾಣುತ್ತಾಳೆ. ಹಾಗೆಯೇ ತಾಯಿಯ ಮಮತೆಪೂರ್ಣ ಮಾತುಗಳು, ಅಭಿನಯ ಗಮನಸೆಳೆಯುತ್ತದೆ. 

ಭೀಷ್ಮನ ಪಾತ್ರಧಾರಿ ಮುಖೇಶ್ ಖನ್ನಾ ಬಗ್ಗೆ ಏನು ಹೇಳುವುದು, ಭೀಷ್ಮರೇ ಧರೆಗೆ ಬಂದರೂ ಮುಖೇಶ್ ಅವರಿಗೆ ಶಭಾಷ್ ಹೇಳದೆ ಹೋಗುವುದಿಲ್ಲ. ಅಷ್ಟು ಅದ್ಭುತ ಅಭಿನಯ. ಭೀಷ್ಮನಾಗಿಯೇ ಜೀವಿಸಿದ್ದಾರೆ. 

ಅವರ ಪ್ರತಿ ಮಾತುಗಳು, ಸಂಭಾಷಣೆಯ ಏರಿಳಿತ ಅದ್ಭುತ. 

ನಾವು ತೆಗೆದುಕೊಳ್ಳುವ ನಿರ್ಧಾರ ಪರಿಣಾಮ ಎದುರಿಸುವ ಶಕ್ತಿಯೂ ನಮಗೆ ಬರಬೇಕು.. ನಮಗೆ ಇರಬೇಕು.. ನಿರ್ಧಾರ ನಮ್ಮದು ಪರಿಹಾರ ಇನ್ನೊಬ್ಬರು ಕೊಡುವುದು ಎಂದು ಕುಳಿತಾಗ ಸಮಸ್ಯೆ ಇನ್ನಷ್ಟು ಜಟಿಲವಾಗುತ್ತದೆ. ಭೀಷ್ಮ ತನ್ನ ತಂದೆಗೂ ಹೇಳದೆ ತಾಯಿಯ ಸ್ಥಾನಕ್ಕೆ ಬರಬಹುದಾದ ಸತ್ಯವತಿಯ ತಂದೆಗೆ ಕೊಡುವ ಮಾತು.. ಆದರೆ ಆ ಸಮಯದಲ್ಲಿ ಗಂಗೆಯೂ ಇರುವುದಿಲ್ಲ, ಶಾಂತನೂ ಕೂಡ ಇರುವುದಿಲ್ಲ. ಆ ಸಮಯದಲ್ಲಿ ಸರಿ ಅನಿಸುವ ನಿರ್ಧಾರ ಭೀಷ್ಮ ತಳೆಯುತ್ತಾನೆ ಆದರೆ ಅದರ ಪರಿಣಾಮ ಶರಶಯ್ಯೆಗೆ ತಂದು ನಿಲ್ಲಿಸುತ್ತದೆ. 

ಎರಡನೆಯ ದೃಶ್ಯ 

ಭೀಷ್ಮ ಇಚ್ಚಾಮರಣಿ, ಅವ ಇರುವ ತನಕ ಪಾಂಡವರು ಕುರುಕ್ಷೇತ್ರದ ಯುದ್ಧದಲ್ಲಿ ಏನೂ ಸಾಧಿಸಲಾಗದೆ ಚಿಂತಾಕ್ರಾಂತರಾಗಿರುತ್ತಾರೆ. ಆಗ ಕೃಷ್ಣನ ಮಾತಿನಂತೆ ಭೀಷ್ಮರ ಹತ್ತಿರ ಬಂದಾಗ ತಾನು ನಾರಿಯ ಮುಂದೆ ಯುದ್ಧ ಮಾಡುವುದಿಲ್ಲ  ಎಂದು ತನ್ನನ್ನು ರಣರಂಗದಿಂದ ದೂರಮಾಡುವ ಉಪಾಯ ಹೇಳಿಕೊಡುತ್ತಾನೆ. ಆಗ ರಾತ್ರಿ ಭೀಷ್ಮ ಕುರುಕ್ಷೇತ್ರಕ್ಕೆ ಬರುತ್ತಾನೆ.. ಒಂದು ಹೆಂಗಸು ಭೂಮಿಯಲ್ಲಿನ ಸಣ್ಣ ಸಣ್ಣ ಕಲ್ಲುಗಳನ್ನು ಆರಿಸುತ್ತಿರುವುದನ್ನು ಕಂಡು.. ಹತ್ತಿರ ಬಂದಾಗ ಗೊತ್ತಾಗುತ್ತದೆ ಇದು ತನ್ನ ತಾಯಿ ಗಂಗೆ ಎಂದು. 

ಅತೀವವಾದ ಖುಷಿಯಿಂದ ಹತ್ತಿರ ಬಂದು ಮಾತಾಡಿಸಿದಾಗ.. ಗಂಗೆ ಹೇಳುತ್ತಾಳೆ ನೆಲವನ್ನು ಸ್ವಚ್ಛಗೊಳಿಸುತ್ತಿದ್ದೆ.. ನೀನು ಇಲ್ಲಿ ಮಲಗಿಕೊ, ತುಂಬಾ ದಣಿದಿದ್ದೀಯ.. ನಿನಗೆ ವಿಶ್ರಾಂತಿ ಬೇಕು" ಎಂದಾಗ ಭೀಷ್ಮ ಎಲ್ಲಾ ಋಣವನ್ನು ಕೊಟ್ಟು ಮುಗಿಸಿದೆ.. ಆದರೆ ಅಂಬಾಳ ಋಣವೊಂದಿದೆ.. ನಾಳೆ ಅದನ್ನು ತೀರಿಸುತ್ತೇನೆ.."

ಬಂದು ಬಿಡು ಸ್ವರ್ಗಕ್ಕೆ ಎಂದು ಗಂಗೆ ಹೇಳಿದಾಗ.. ಹಸ್ತಿನಾಪುರ ನಾಲ್ಕು ದಿಕ್ಕುಗಳಿಂದ ಸುರಕ್ಷಾ ಸ್ಥಿತಿಯಲ್ಲಿದೆ ಎಂದು ಅರಿವಾದಾಗ ಖಂಡಿತ ಬರುತ್ತೇನೆ ಎಂದು ಹೇಳಿ ಗಂಗೆಯನ್ನು ಕಳಿಸುತ್ತಾನೆ. 


ನಿಜ ನಾವು ತೆಗೆದುಕೊಳ್ಳುವ ನಿರ್ಧಾರದ ಫಲಿತಾಂಶ ನಮಗೆ ಗೊತ್ತಾಗಿ ಬಿಟ್ಟರೆ, ನಿರ್ಧಾರ ತೆಗೆದುಕೊಳ್ಳುವ ಗಟ್ಟಿ ಮನಸ್ಸು ಪೊಳ್ಳಾಗಿಬಿಡುತ್ತದೆ. ತನ್ನ ಒಂದು ನಿರ್ಧಾರ ಕುರುಕ್ಷೇತ್ರದ ಶರಶಯ್ಯೆಯಲ್ಲಿ ಕೊನೆಗೊಳ್ಳುತ್ತದೆ ಎಂದು ತಿಳಿದಿದ್ದಿದರೆ ಭೀಷ್ಮ ಅವರ ನಿರ್ಧಾರ ಖಂಡಿತ ಅಷ್ಟೊಂದು ಭೀಷಣವಾಗಿ ಇರುತ್ತಿರಲಿಲ್ಲ ಅಲ್ಲವೇ. 

ಆ ಸಮಯಕ್ಕೆ ಸರಿ ಅನ್ನೊದು ನಾವು ನಮ್ಮ ಮನಸ್ಸಿನ ಸ್ಥಿತಿಯ ಮೇಲೆ ಅವಲಂಬಿತ. 

ಅದ್ಭುತ ಸನ್ನಿವೇಶಗಳು.. 

ಭೀಷ್ಮ ಉತ್ತರಾಯಣ ಪುಣ್ಯ ಕಾಲದಲ್ಲಿ ಈ ಭುವಿಯನ್ನು ಬಿಡುವ ನಿರ್ಧಾರ ಮಾಡಿದ ಸಮಯವಿದು.. ಸಂಕ್ರಾಂತಿ ನಮ್ಮ ಬದುಕಲ್ಲಿ ಒಂದು ಸಣ್ಣ ಕ್ರಾಂತಿಯನ್ನು ತರುವ ಒಂದು ನಿರ್ಧಾರ ನಮ್ಮದಾಗಿದೆ ಎಂದರೆ ಅದೇ ಅಲ್ಲವೇ Someಕ್ರಾಂತಿ. 

ಎಲ್ಲರಿಗೂ   ಮಕರ ಸಂಕ್ರಾಂತಿಯ ಶುಭಾಶಯಗಳು!

2 comments:

  1. ಮಕರ ಸಂಕ್ರಾಂತಿಯ ಶುಭಾಶಯಗಳು. ಮಹಾಭಾರತದ ಸನ್ನಿವೇಶವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ್ದೀರಿ. ಅಭಿನಂದನೆಗಳು.

    ReplyDelete