Sunday, March 24, 2024

ಕಗ್ಗಂಟಿನ ಕರದಂಟು - ಡಿವಿಜಿ ಅಜ್ಜ - ೨

ಜೀವ ಜಡರೂಪ ಪ್ರಪಂಚವನದಾವುದೋ|
ಆವರಿಸಿಕೊಂಡುಮೊಳನೆರೆದುಮಿಹುದಂತೆ||
ಭಾವಕೊಳಪಡದಂತೆ ಅಳತೆಗಳವಡದಂತೆ|
ಆ ವಿಶೇಷಕ್ಕೆ ಮಣಿಯೊ - ಮಂಕುತಿಮ್ಮ|| ೨||

-ಚಿತ್ರಕೃಪೆ  ಗೂಗಲೇಶ್ವರ 

ಬಭೃವಾಹನ ಚಿತ್ರ.. ಅರ್ಜುನ ತೀರ್ಥಯಾತ್ರೆಗೆ ಹೋಗಿರುತ್ತಾನೆ.. ಅರ್ಜುನ ನದಿಯಲ್ಲಿ ಜಳಕ ಮಾಡುತ್ತಿದ್ದಾಗ ಮೋಹಿತಳಾದ ನಾಗಲೋಕದ ಕೌರವ್ಯನ  ಮಗಳು ಉಲೂಚಿ ಹಾವಿನ ರೂಪದಲ್ಲಿ ಬಂದು ಅವನನ್ನು ನಾಗಲೋಕಕ್ಕೆ ಕರೆದೊಯ್ಯುತ್ತಾಳೆ. ಅಲ್ಲಿ ಅರ್ಜುನನ ಮೈಮರೆತಿರುವಾಗ ಆತನಿಗಿಗಾಗಿ ಇನ್ನೆರೆಡು ಜೀವಗಳು ಕಾಯುತ್ತಿವೆ ಎಂದು ಶ್ರೀ ಕೃಷ್ಣ ಅರ್ಜುನನನ್ನು ಮಣಿಪುರಕ್ಕೆ ತನ್ನ ಮಾಯೆಯಿಂದ ಕರೆಸುತ್ತಾನೆ.  

ಮಣಿಪುರದ ರಾಜಕುಮಾರಿ ಚಿತ್ರಾಂಗದೆಯನ್ನು ಕಂಡು ಮೋಹಿತನಾಗಿ ಗಾಂಧರ್ವ ವಿವಾಹವಾಗುತ್ತಾನೆ. ಅಲ್ಲಿಯೂ ಅರ್ಜುನನನ್ನು ಉಳಿಯಲು ಬಿಡದೆ,  ಶ್ರೀಕೃಷ್ಣ ಲೋಕಕಲ್ಯಾಣ ಕಾರ್ಯದ ಹಾದಿಯಲ್ಲಿ ಅರ್ಜುನ ಶ್ರೀ ಕೃಷ್ಣನ ತಂಗಿ ಸುಭದ್ರೆಯನ್ನು ಮದುವೆಯಾಗಬೇಕಾಗಿರುತ್ತದೆ. ಆದ್ದರಿಂದ ಭೀಮ ಪುತ್ರ ಘಟೋತ್ಕಚನ ಮೂಲಕ ಅರ್ಜುನನನ್ನು ದ್ವಾರಕೆಗೆ ಕರೆಸಿಕೊಳ್ಳುತ್ತಾನೆ.. 

ಆದರೆ ಇತ್ತ ಅರ್ಜುನನಿಂದ ಗರ್ಭಿಣಿಯಾಗಿರುವ ಚಿತ್ರಾಂಗದೆ, ಮತ್ತು ಗಾಂಧರ್ವ ವಿವಾಹಿತೆ ಉಲೂಚಿ ಅರ್ಜುನನನ್ನು ಕಾಣದೆ ಪರಿತಪಿಸುವಾಗ ಮತ್ತು ಪ್ರಜೆಗಳು ಚಿತ್ರಾಂಗದೆ ಮತ್ತು ಉಲೂಚಿಯನ್ನು ಸಾಮಾಜಿಕ ದೃಷ್ಟಿಯಲ್ಲಿ ಕಳಂಕಿತಳು ಎಂದು ನೋಡಬಹುದು ಎಂದು ನಾಗಲೋಕದ ಅರಸು ಕೌರವ್ಯ ಮಣಿಪುರಕ್ಕೆ ಬಂದು ಎಲ್ಲಾ ರಾಜ ಮಹಾರಾಜರು,ಮಂತ್ರಿಗಳು, ಸಾಮಂತರನ್ನು,  ಪ್ರಜೆಗಳನ್ನು ಉದ್ದೇಶಿಸಿ "ಮಹಾರಾಜಾ, ಮಂತ್ರಿಗಳೇ, ಸಾಮಂತರೆ  ನಮ್ಮೆಲ್ಲರ ಜೀವನ ಸೂತ್ರವನ್ನ ಒಂದು ಮಹಾಶಕ್ತಿಯು ಹಿಡಿದು ಆಡಿಸುತ್ತಿದೆ, ಆ ಮಹಾಶಕ್ತಿಯೇ ಪಾರ್ಥನನ್ನು ಈ ಸ್ಥಳದಿಂದ ಬೇರೊಂದು ಸ್ಥಳಕ್ಕೆ ಕರೆದುಕೊಂಡು ಹೋಗಿದೆ.. ಕಾಲ ಬರುವ ತನಕ ಚಿತ್ರಾಂಗದೆ ಮತ್ತು ಉಲೂಚಿಯನ್ನುಆದರಿಸಬೇಕು ಎಂದು ಹೇಳುತ್ತಾನೆ .. 


ನಮ್ಮ ಜಗತ್ತಿನಲ್ಲೂ ನಮ್ಮ ಬದುಕಿನಲ್ಲೂ ಹಾಗೆ ಅಂದುಕೊಂಡದ್ದು ನೆಡೆಯದೆ, ಅಥವ ಫಲಿತಾಂಶ ನಿಧಾನವಾಗುತ್ತದೆ. ಊಹಿಸದ ಚಮತ್ಕಾರಗಳು ನೆಡೆಯುತ್ತವೆ.. ಆಗ ನಮಗೆ ಅಚ್ಚರಿಯಾಗುವುದು ಉಂಟು. ಆ ಮಹಾಮಹಿಮನ ಮುಂದಿನ ನೆಡೆ, ಆತ ನಮ್ಮ ಬದುಕಲ್ಲಿ ಮಾಡುವ ಚಮತ್ಕಾರಗಳು ಎಣಿಸಲಸಾಧ್ಯ, ಊಹಿಸಲಸಾಧ್ಯ.. 

ಸಕಲ ಚರಾಚರವಸ್ತುಗಳಲ್ಲಿ ಅಣುರೇಣು ತೃಣಕಾಷ್ಠಗಳಲ್ಲಿ ಆತನ ವಿಶೇಷ ಶಕ್ತಿ, ವಿಶಿಷ್ಟ ಮಾಯೆ, ಪ್ರಪಂಚದಲ್ಲಿ ನಮ್ಮ ಎಣಿಕೆಗೆ ಸಿಗದೇ ಆದರೆ ಅದು ನಮ್ಮ ಬದುಕನ್ನು ಮುನ್ನೆಡೆಸುವ ದಾರಿದೀಪವಾಗುತ್ತದೆ.. ಆ ವಿಶೇಷ ಶಕ್ತಿಗೆ ಒಂದು ನಮಸ್ಕಾರ ಹಾಕಿ  ಎಂದು ಹೇಳುವ , ಈ ವಿಷಯವನ್ನು ನಾಲ್ಕು ಸಾಲುಗಳಲ್ಲಿ ಹಿಡಿದಿಟ್ಟ ಕಗ್ಗದ ಅಜ್ಜನಿಗೆ ಒಂದು  ನಮಸ್ಕಾರ ಎನ್ನೋಣವೇ !!!

8 comments:

  1. Very true....nice

    ReplyDelete
  2. Unknown Power - Divine Energy. Very nice Sri...

    ReplyDelete
  3. ತುಸು ಕ್ಲಿಷ್ಟವಾದ ಕಗ್ಗದ ಸಾರವನ್ನು ತಮ್ಮ ವಿಭಿನ್ನ ಶೈಲಿಯಿಂದ ಅರ್ಥ ಮಾಡಿಸುವ ಕಲೆ ನೆಚ್ಚಿಗೆಯಾಯಿತು.

    ReplyDelete
  4. ಕಗ್ಗದಲ್ಲಿ ಅಡಗಿದ ಕವನವನ್ನು ಸುಂದರವಾಗಿ ತಿಳಿಸುತ್ತಿರುವ ನಿಮಗೆ ಧನ್ಯವಾದಗಳು.

    ReplyDelete