Thursday, December 3, 2020

ಅಮ್ಮ ಎನ್ನುವ ದೈತ್ಯ Server - ಭಾಗ ೫

ಹದಿಮೂರನೇ ದಿನವಾಗಿತ್ತು.. ಮನಸ್ಸು ಕದಡಿದ ಕೆರೆಯ ನೀರಾಗಿತ್ತು. ನಮ್ಮ ಜೊತೆಯಲ್ಲಿಯೇ ಇದ್ದ ನದಿ ಕಡಲು ಸೇರಿ ದಿನಗಳು ಉರುಳಿ ಹೋಗಿದ್ದವು.. 

ಬೈಕಿನಲ್ಲಿ ಅಮ್ಮನ ಮನೆಗೆ ಬರುತ್ತಿದ್ದೆ.. ಮನೆಯ ಹತ್ತಿರ ಬಂದು ಮಾಮೂಲಿ ಅಭ್ಯಾಸದಂತೆ ತಲೆ ಎತ್ತಿ ನೋಡಿದೆ.. ಬಾಲ್ಕನಿ / ಮೆಟ್ಟಿಲ ಹತ್ತಿರ.. ಇಲ್ಲವೇ ಅಡಿಗೆ ಮನೆಯ ಪೋರ್ಟಿಕೋದಲ್ಲಿ ಕಾಣುತಿದ್ದ ದೃಶ್ಯ ಕಾಣಲಿಲ್ಲ.. 

ಆದರೆ ಒಮ್ಮೆ ಗಾಬರಿಯಾದೆ.. ಮೈಯೆಲ್ಲಾ ಜುಮ್ ಎಂದಿತು.. ಸಣ್ಣಗೆ ಬೆವರು.. ನೋಡಿದರೆ ಅಮ್ಮ ಉಡುತಿದ್ದ ಸೀರೆಯಲ್ಲಿ ಒಂದು ಆಕೃತಿ ಓಡಾಡುತ್ತಿದ್ದ ದೃಶ್ಯ.. ಅದು ಇನ್ನೂ ಬೆಳಗಿನ ಜಾವ ಅಷ್ಟೊಂದು ಬೆಳಕು ಹರಿದಿರಲಿಲ್ಲ.. ಸಣ್ಣಗೆ ಬೆನ್ನು ಹುರಿಯಲ್ಲಿ ನಡುಕ.. ತೀಕ್ಷ್ಣವಾಗಿ ಗಮನಿಸಿದೆ.. 

ಅರೆ.. ಅಮ್ಮ ಸಾಮಾನ್ಯವಾಗಿ ಉಡುತಿದ್ದ ಸೀರೆಯಲ್ಲಿ ಅಕ್ಕ ಓಡಾಡುತಿದ್ದಳು.. ಭಗವಂತನ ಲೀಲೆಯೇ ಹಾಗೆ ಅಲ್ಲವೇ.. ಸದಾ ಅಮ್ಮ ಇರೋಕೆ ಆಗೋಲ್ಲ ಅಂತ ಅಕ್ಕನ ರೂಪದಲ್ಲಿ ಅಮ್ಮ ನಿಂತಿರುತ್ತಾಳೆ.. 

ಇದೆಲ್ಲಾ ನೆಡೆದದ್ದು ಹತ್ತು ಸೆಕೆಂಡುಗಳಲ್ಲಿ .. 

ಆಗಸದತ್ತ ನೋಡಿದೆ.. ಅಮ್ಮನ ಫೋಟೋದಲ್ಲಿರುವ ಅದೇ ನಗು ಮೊಗ ಕಾಣಿಸಿತು.. ಬಾಪ್ಪಾ ಅಂತ ಕರೆದ ಅನುಭವ.. ಕಣ್ಣು ತುಂಬಿ ಬಂದಿತ್ತು.. 

ಹಾಗೆ ಕಣ್ಣೊರೆಸಿಕೊಂಡು.. ಮುಂದಿನ ಕಾರ್ಯಗಳ ಕಡೆಗೆ ಗಮನ ಕೊಟ್ಟೆ.. 

ಹೌದು ಅಮ್ಮನ ನೆನಪು.. ಅರೆ ನೆನಪೆಲ್ಲ ಅವರ ಛಾಯೆ ಹೋಗೋಲ್ಲ.. ಹೋಗೋಕೆ ಸಾಧ್ಯವೂ ಇಲ್ಲ.. 

ಅದಕ್ಕೆ ಅಲ್ಲವೇ ಅಣ್ಣಾವ್ರ ಚಿತ್ರದಲ್ಲಿ ಹಾಡಿರುವುದು.. ಸಾವಿರ ನದಿಗಳು ಸೇರಿದರೇನೂ ಸಾಗರಕೆ ಸಮನಾಗುವುದೇನು.. ಶತಕೋಟಿ ದೇವರು ಹರಸಿದರೇನು ಅಮ್ಮನ ಹರಕೆಗೆ ಸರಿಸಾಟಿಯೇನು.. 

ನಲವತ್ತೈದು ದಿನಗಳು ಕಳೆದೆ ಹೋದವು.. ಅಮ್ಮನ ಪಯಣ ಸ್ವರ್ಗದತ್ತ ಸಾಗುತ್ತಲಿದೆ.. ತನ್ನ ಪೂರ್ವಜರನ್ನು.. ಅಲ್ಲಿರುವ ಅನೇಕ ಬಂಧು ಮಿತ್ರರರನ್ನು.. ತನಗೆ ಕುಂಕುಮ ಭಾಗ್ಯ ಕೊಟ್ಟ ಯಜಮಾನರನ್ನು ಕಾಣಲು ಹೋಗುತ್ತಿದ್ದಾರೆ.. 

ಶ್ರೀಕಾಂತ ಅಂದು ನನ್ನ ಮನೆಯಿಂದ ಹೊರಟಾಗ ಒಂದು ವಿಶೇಷ ಘಟನೆ ನೆಡೆಯಿತು.. ನಿನಗೆ ಅರ್ಥವಾಗಿದೆ.. ಅದನ್ನು ನೀನು ಬರೆಯುತ್ತೀಯ ಅಂತ ಕಾಯುತ್ತಿದ್ದೇನೆ.. 

ಅಮ್ಮ ಬರೆಯುವೆ.. ಒಂದು ವಿಶೇಷ ದಿನಕ್ಕೆ ಕಾಯುತಿದ್ದೆ.. ಇಂದಿಗೆ ನಲವತ್ತೈದು ದಿನವಾಯಿತು.. ಹಾಗೆ ಕೆಲಸ ಕಾರ್ಯಗಳ ನಡುವೆ.. ಕೊಂಚ ಬರವಣಿಗೆ ಕೂಡ ಕುಂಟುತ್ತಿತ್ತು.. ಅದಕ್ಕೆ ಇವತ್ತು ಸಮಯ ಮಾಡಿಕೊಂಡು ಬರೆಯುತ್ತಿದ್ದೇನೆ.. 

ಹಾ ಸರಿ.. ಓದಲು ಕಾಯುತ್ತಿರುವೆ.. 

*******ಆದಿತ್ಯ ಜನಿಸಿದಾಗ ಮನೆಯಲ್ಲಿ ಸಂಭ್ರಮ.. ಅಪ್ಪ ಅಮ್ಮನಿಗೆ ತಮ್ಮ ಮುಂದಿನ ಪೀಳಿಗೆಯ ಸರದಾರ ಬಂದ ಎಂಬ ಸಂಭ್ರಮ.. ನಮಗೆ ಪುಟ್ಟ ಮಗು.. ಅದರ ತುಂಟಾಟಗಳನ್ನು ನೋಡುವ ತವಕ.. ಅಪ್ಪ ಆದಿತ್ಯನನ್ನು ಎತ್ತಿಕೊಂಡ ಫೋಟೋ ಇನ್ನೂ ಹಸಿರಾಗಿದೆ.. 

ಸದಾ ತುಂಟತನಕ್ಕೆ ಹೆಸರಾಗಿದ್ದ ಆದಿತ್ಯ.. ಅಜ್ಜಿಯನ್ನು ರೇಗಿಸುತ್ತಲೇ ಇರುತಿದ್ದ.. ಬಾಲ್ಯದಿಂದಲೂ ಅಜ್ಜ ಅಜ್ಜಿಯ ಬಗ್ಗೆ ವಿಶೇಷ ಗೌರವ ಇದ್ದರೂ.. ರೇಗಿಸೋದನ್ನು ಬಿಡುತ್ತಿರಲಿಲ್ಲ.. ಹಲವಾರು ಬರಿ ಅಜ್ಜಿ ಥೂ ಹೋಗಾಚೆ ಅಂತ ಹುಸಿಮುನಿಸಿನಿಂದ ಬಯ್ದಿದ್ದರು ಮತ್ತೆ ಕೆನ್ನೆ ಹಿಂಡುವುದು, ಮೊಸರು ಹಾಕುವುದು, ಅನ್ನ ಹಾಕುವುದು, ನೀರು ಕುಡಿ ಅಜ್ಜಿ ಅಂತ ಕುಡಿಸುವುದು, ಕಾಫಿ ಕುಡಿಯಬೇಡ ಅನ್ನೋದು.. ಬಿಪಿ ಮಾತ್ರೆ ತಗೊಂಡ್ಯಾ.. ಅಂತ ಕಾಳಜಿ ವಹಿಸುವುದು ಮಾಡುತ್ತಲೇ ಇರುತ್ತಿದ್ದ.. 

ಹಲವಾರು ಬಾರಿ ಆದಿತ್ಯ ಎಷ್ಟು ಕಾಳಜಿ ತೋರಿಸುತ್ತಾನೆ ಅಂತ ನನ್ನ ಬಳಿ ಹೇಳಿದ್ದರು.... ಬಿಂದಾಸ್ ಸ್ವಭಾವದಲ್ಲೂ ಒಂದು ರೀತಿಯ ಪ್ರೀತಿ ಇರುತ್ತಿತ್ತು ಈ ಹುಡುಗನಲ್ಲಿ.. 

ಪುರೋಹಿತರು ತಮ್ಮ ಕಾರ್ಯದಲ್ಲಿ ಮಗ್ನರಾಗಿದ್ದರು.. ಎಲ್ಲವೂ ಕಡೆ ಹಂತಕ್ಕೆ ಬರುತಿತ್ತು.. ಬಂದವರೆಲ್ಲ ಅಂತಿಮ ನಮನ ಸಲ್ಲಿಸಲು ಸಿದ್ಧವಾಗಿದ್ದರು..ಅಕ್ಕ ಬಿಕ್ಕಿ ಬಿಕ್ಕಿ ಅಳುತ್ತಲೇ ತನ್ನ ಗೌರವ ಸಲ್ಲಿಸಿದರು.. 

"ಕೃಷ್ಣವೇಣಿ ಇರೋತನಕ ಚೆನ್ನಾಗಿ ನೋಡಿಕೊಂಡಿದ್ದೀಯ..ಕಳಿಸುವಾಗ ಅಳಬಾರದು.. ಎಷ್ಟು ದಿನ ಇದ್ದರೂ ಇರಬೇಕು ಅನ್ನುವಂತಹ ಪದಾರ್ಥ "ಅಮ್ಮ" ಅನ್ನೋದು ಆದರೆ ಏನು ಮಾಡೋದು.. ವಿಧಿ ಬರಹ.. ಧೈರ್ಯ ತಂದುಕೊ ಎನ್ನುತ್ತಾ ಅಮ್ಮನ ಸೋದರತ್ತೆಯ ಮಗ ಸತೀಶ ಅಕ್ಕನನ್ನು ಸಮಾಧಾನ ಪಡಿಸಿದ.. 

ಇಲ್ಲಿ ಸತೀಶನ ಬಗ್ಗೆ ಒಂದೆರಡು ಮಾತುಗಳು.. ತನ್ನ ಬಂಧು ಮಿತ್ರರ ಮನೆಯಲ್ಲಿ ಶುಭ ಅಶುಭ ಯಾವುದೇ ಕಾರ್ಯವಿದ್ದರೂ ಇವನ ಉಪಸ್ಥಿತಿ ಇದ್ದೆ ಇರುತ್ತದೆ.. ಕೊರೊನ .. ಅದು ಇದು ಎನ್ನುವುದನ್ನು ಲೆಕ್ಕಿಸುವುದೇ ಇಲ್ಲ.. ಮೊದಲು ಅವರ ಸಂತಸ ದುಃಖದ ಕ್ಷಣಗಳಲ್ಲಿ ಜೊತೆಯಾಗಿರಬೇಕು.. ಆಮೇಲೆ ಮುಂದಿನದು.. ಎನ್ನುವ ಮನೋಭಾವ ಅವನದು.. ಜೊತೆಯಲ್ಲಿ ಅವನಿಗೆ ಅಸಾಧ್ಯವಾದ ಬೆನ್ನು ನೋವು ಇದ್ದರೂ ಅದನ್ನು ಲೆಕ್ಕಿಸದೆ.. ಎಲ್ಲರಿಗೂ ಸಹಕಾರ ನೀಡುವುದು.. ನಿಜಕ್ಕೂ ಶ್ಲಾಘನೀಯ.. 

ಅದೇ ರೀತಿ ಅಮ್ಮನ ಸೋದರಮಾವನ ಮಗ.. ಶಾಮಣ್ಣ.. ನಿಮ್ಮ ಅಮ್ಮ ಅನ್ನಪೂರ್ಣೇಶ್ವರಿ ಕಣೋ ಶ್ರೀಕಾಂತ ಅನ್ನುತ್ತಿದ್ದ ಸದಾ.. ಅವನು ನಮ್ಮ ಮನೆಯ ಎಲ್ಲಾ ಕಾರ್ಯಕ್ರಮಗಳಿಗೂ ತಪ್ಪದೆ ಬರುತ್ತಾನೆ.. ಜೊತೆಯಲ್ಲಿ ಇದ್ದು ಧೈರ್ಯ ಕೊಡುತ್ತಾನೆ. 

ಇವರಿಬ್ಬರ ಬದುಕು ಸುಂದರವಾಗಿರಲಿ ಇದು ನನ್ನ ಅಮ್ಮನ ಆಶೀರ್ವಾದ.. 

ಬಂಧು ಮಿತ್ರರು ಬಂದು ಅಂತಿಮ ನಮನ ಸಲ್ಲಿಸಿ ಆಯ್ತು.. ಅಮ್ಮನನ್ನು ಆಂಬುಲೆನ್ಸ್ ನಲ್ಲಿ ಮಲಗಿಸಿದೆವು.. ಮಡಕೆ ಹಿಡಿದುಕೊಂಡ ಅಣ್ಣ .. ಅವನ ಹಿಂದೆ ಬಂದ ನಾನು. ಅಳುತ್ತಲೇ ಗಾಡಿ ಹತ್ತಿದ ತಮ್ಮ ಮುರುಳಿ.. ನಮ್ಮ ಎದುರಲ್ಲಿ ಸಾಹಸಮಯ ಬದುಕು ನಿಭಾಯಿಸಿ ನಮ್ಮನ್ನೆಲ್ಲ ಒಂದು ದಡಕ್ಕೆ ಸೇರಿಸಿ.. ಕಡೆಗೆ ಸಾಕು ಕಣೋ ಅಂತ ಹೊರಟಿದ್ದ ಅಮ್ಮ.. 

ಇನ್ನೇನು ಗಾಡಿ ಹೊರಡಬೇಕು... ಆದಿತ್ಯ ಓಡಿ ಬಂದು ಆಂಬುಲೆನ್ಸ್ ಹತ್ತಿದ.. ನಮಗೆ ಬೇಡ ಎನ್ನಲು ಮನಸ್ಸಿಲ್ಲ.. ಆದರೆ ಏನು ಹೇಳೋದು ಅಂತ ಸುಮ್ಮನೆ ಕುಳಿತಿದ್ದೆವು.. 

ಕಣ್ಣಲ್ಲಿ ನೀರು ತುಂಬಿಕೊಂಡು.. ಮೆಲ್ಲಗೆ ಅಜ್ಜಿಯ ಕೆನ್ನೆಯನ್ನು ಒಮ್ಮೆ ಹಿಂಡಿ.. ಕೆನ್ನೆಯನ್ನು ಸವರಿ ಇಳಿದು ಹೋದ.. 

ನಾನು ನಾಲ್ಕೈದು ಲೇಖನಗಳನ್ನು ಬರೆದಿರಬಹುದು.. ನಾವೆಲ್ಲರೂ ಒಂದಷ್ಟು ಕಣ್ಣೀರು ಹಾಕಿ..ಅಗಲಿದ ಆ ಹಿರಿಯ ಜೀವದ ಬಗ್ಗೆ ಒಂದಷ್ಟು ಅಭಿಮಾನದ ಮಾತುಗಳನ್ನು ಆಡಿರಬಹುದು.. ಆದರೆ ಆ ಒಂದು ಸ್ಪರ್ಶದಲ್ಲಿ ಆದಿತ್ಯ ಎಲ್ಲರ ಭಾವನೆಗಳನ್ನು ಹೊತ್ತ ಸರದಾರನಾಗಿ ಬಿಟ್ಟ.. 

ಥೋ ಸುಮ್ಮನಿರೋ ಆದಿತ್ಯ.. ಯಾಕೆ ಹಾಗೆ ಗೋಳು ಹುಯ್ಕೋತೀಯೋ ಅಂತ ಅಜ್ಜಿ ಕೂಗಿದ ಹಾಗೆ ಅನಿಸಿತು. 

***

ವಾಹ್ ಸೊಗಸಾಗಿದೆ ಶ್ರೀಕಾಂತ.. ನೀನು ಇದರ ಬಗ್ಗೆ ಯಾಕೆ ಬರೆದಿಲ್ಲ ಅಂತ ಯೋಚಿಸುತ್ತಿದ್ದೆ.. ಈಗ ಸಮಾಧಾನ ಆಯ್ತು.. ಸರಿ ನೀವುಗಳೆಲ್ಲ ಗುರುಗಳ ಆಜ್ಞಾನುಸಾರ ಕಾರ್ಯಗಳನ್ನು ಮಾಡುತ್ತಿದ್ದೀರಾ.. ನನ್ನ ಆಶೀರ್ವಾದ ಸದಾ ಇರುತ್ತೆ.. ಆದಿತ್ಯನಿಗೆ ಈ ಮೂಲಕ ಜನುಮದಿನಕ್ಕೆ ತಡವಾದ ಶುಭಾಶಯಗಳನ್ನು ತಿಳಿಸು.. ಅವತ್ತೇ ಆಶೀರ್ವಾದ ಮಾಡಬೇಕಿತ್ತು.. ಆದರೆ ನಿನ್ನ ಬರಹ ಬರಲಿ ಅಂತ ಕಾಯ್ತಾ ಇದ್ದೆ ಕಣೋ..!

ಆಗಲಿ ಅಮ್ಮ.. ಅವನಿಗೆ ಖಂಡಿತ ಆಶೀರ್ವದಿಸುತ್ತೇನೆ.. ಮೊದಲನೇ ಮೊಮ್ಮಗ.. ಅಲ್ಲವೇ.. ಪ್ರೀತಿ ತುಸು ಹೆಚ್ಚೇ.. 

ಮತ್ತೆ ಬರುವೆ.. ಹದಿನಾಲ್ಕು ದಿನಗಳ ಯಾತ್ರೆಯನ್ನೊಮ್ಮೆ ಮೆಲುಕು ಹಾಕೋಣ.. ಏನಂತೀಯಾ.. !!!

Sunday, November 15, 2020

ಅಮ್ಮ ಎನ್ನುವ ದೈತ್ಯ Server - ಭಾಗ ೪

ಮತ್ತೆ ಬರ್ತೀನಿ ಅಂದಿದ್ದೆ ಆಲ್ವಾ ಹಿಂದಿನ ಲೇಖನದಲ್ಲಿ.. ನೋಡಿ ಮತ್ತೆ ಬಂದೆ.. 

ಗರುಡ ಪುರಾಣ.. ಪಂಚಾಂಗ.. ನಮ್ಮ ಶಾಸ್ತ್ರಗಳು ಸಾವಿನಾಚೆಯ ಪ್ರಪಂಚವನ್ನು ಸೂಕ್ಷ್ಮವಾಗಿ ಹೇಳುತ್ತವೆ.. ನಿಮಗೆಲ್ಲ ಗೊತ್ತಿರುವ ಹಾಗೆ ೨೭ ನಕ್ಷತ್ರಗಳು ಮಿನುಗುತ್ತಲೇ ಮನುಷ್ಯನ ಜೀವನದ ಮೇಲೆ ಪರಿಣಾಮ ಬೀರುತ್ತಲೇ ಇರುತ್ತದೆ.. ಅದನ್ನು ಮನಸ್ಸಿಗೆ ಇಳಿಯುವಂತೆ ಸರಳವಾಗಿ ತಮ್ಮತನದ ಬಗ್ಗೆ ಉಪದೇಶ ಮಾಡದೆ ತಿಳಿ ಹೇಳುವವರೇ ಗುರುಗಳು.. 

ಹೀಗೆ ನಾ ಸಾಕು.. ಸಾಕಾಗಿದೆ.. ಸುಸ್ತಾಗಿದೆ.. ಹುಟ್ಟಿನಿಂದ ದಣಿವರಿಯದೆ ದುಡಿದಿದ್ದ ಈ ನನ್ನ ದೇಹ ಸಾಕು ವಿಶಾಲೂ... ಹೊರಡೋಣ ಅಂದಾಗ.. ಸುಮ್ಮನೆ ತಲೆಯಾಡಿಸಿದ್ದೆ.. 

ಪಂಚಾಂಗದ ಪ್ರಕಾರ ನಾ ಈ ಭೂಮಿಯಿಂದ ಹೊರಟ ದಿನ ವಿಶಾಖ ನಕ್ಷತ್ರವಿತ್ತು ಅಂತ ಹೇಳುತ್ತದೆ ಪಂಚಾಂಗ.. ಪ್ರತಿ ನಕ್ಷತ್ರವನ್ನು ದಾಟಿ ದಾಟಿ.. ದಿನಕ್ಕೊಂದರಂತೆ ನಕ್ಷತ್ರಗಳನ್ನು ಎಣಿಸುತ್ತಾ ಮತ್ತೆ ನನ್ನ ಅನುಗ್ರಹ ಸದನಕ್ಕೆ ಬಂದ ಛೆ ಎಂಥಹ ಮಾತುಗಳನ್ನು ಆಡುತ್ತಿದ್ದೇನೆ.. ನನ್ನ ದೇಹ ಮಾತ್ರ ಅನುಗ್ರಹ ಸದನ ಬಿಟ್ಟಿದೆ.. ನನ್ನ ಆತ್ಮ ಇಂದಿಗೂ, ಎಂದೆಂದಿಗೂ ಇರೋದು ಅನುಗ್ರಹ ಸದನವೇ.. ಇರಲಿ ಆ ಮಾತು 

ಮತ್ತೆ ನಾ ಅನುಗ್ರಹ ಸದನಕ್ಕೆ ಬಂದೆ.. ನಿಮಗೆ ಹಾಗೆ ನನ್ನ ಇಪ್ಪತ್ತೇಳು ದಿನದ ಪಯಣವನ್ನು ಹೇಳದೆ, ಇಪ್ಪತೇಳು ನಕ್ಶತ್ರಗಳ ಹೆಸರನ್ನೇ ತೆಗೆದುಕೊಂಡು, ಹಾಗೆ ಸುಮ್ಮನೆ ನನ್ನ ಬದುಕನ್ನು ಒಮ್ಮೆ ತಿರುಗಿ ನೋಡುವ ಪ್ರಯತ್ನ ಮಾಡುವೆ.. 

ನೋಡಿ ಮೊದಲೇ ಹೇಳಿ ಬಿಡುತ್ತೇನೆ, ನಕ್ಷತ್ರಗಳ ಹೆಸರನ್ನು ಅದಕ್ಕೆ ಅರ್ಥ ಹೊಳೆದರೆ ಅದಕ್ಕೆ ತಕ್ಕಂತೆ ಒಂದಷ್ಟು ಪದಗಳನ್ನು ಹಾಕಿ ಶ್ರೀಕಾಂತನಿಗೆ ಹೇಳಿದ್ದೀನಿ, ಅರ್ಥ ಸಿಗದೇ ಇದ್ದಾಗ, ಆ ಪದದ ಹತ್ತಿರಕ್ಕೆ ಬರುವ ಹಾಗೆ ನನಗಾಣಿಸಿದ ಮಾತನ್ನು ಹೇಳಿದ್ದೀನಿ.. ಇದಕ್ಕೂ ಜ್ಯೋತಿಶಾಸ್ತ್ರಕ್ಕೂ ಏನೂ ನಂಟಿಲ್ಲ.. ನನ್ನ ಬದುಕನ್ನು ತೆರೆದಿಡುವ ಒಂದು ಪ್ರಯತ್ನ ಅಷ್ಟೇ . !

ವಿಶಾಖ - 19.10.2020
ವಿಶಾಲೂ ಎಂದು ಎಲ್ಲರೂ ಪ್ರೀತಿಯಿಂದ ಕರೆಯುತಿದ್ದ ನನ್ನನ್ನು.. ವಿಶಾಖ ನಕ್ಷತ್ರದಂದೇ ಹೊರಟು ಬರುತ್ತೇನೆ ಎಂದು ಯಾರೂ ಅರಿತಿರಲಿಲ್ಲ... ವಿಶಾಖ ಶಾಖ ವಿಶಾಲವಾದ ನನ್ನ ಬದುಕನ್ನು ಬಿಸಿ ಮಾಡಿತ್ತು.. ಕಷ್ಟ ನಷ್ಟಗಳು ನನ್ನ ಮನಸ್ಸನ್ನು ಬಿಸಿ ಮಾಡಿದ್ದರೂ, ದೇಹ ಮಾತ್ರ ನನಗೆ ಸಾತ್ ನೀಡಿತ್ತು. ಕಷ್ಟಕೋಟಲೆಗಳನ್ನು ದಾಟುತ್ತಾ ನೆಡೆಯುವ ನನ್ನ ಮನಸ್ಸಿಗೆ ಶಾಖ ನೀಡಿದ್ದು ಈ ವಿಶಾಖ ನಕ್ಷತ್ರವೇ.. 

ಅನುರಾಧ - 20.10.2020
ಅನುದಿನವೂ ರಾಧ ಕೃಷ್ಣನನ್ನು ನೆನೆಸಿಕೊಳ್ಳುವ ಹಾಗೆ.. ನನ್ನ ಪ್ರೀತಿಯ ಬಂಧು ಬಳಗವನ್ನು, ನನ್ನ ಪ್ರೀತಿಯ ಅನುಗ್ರಹ ಸದನಕ್ಕೆ ಶುಭಕೋರುವ ಪ್ರತಿಯೊಬ್ಬರನ್ನು ಅನುಸರಿಸುತ್ತಲೇ ಇದ್ದೆ.. ಇರುತ್ತೇನೆ.. 

ಜ್ಯೇಷ್ಠ - 21.10.2020
ನಮ್ಮ ಯಜಮಾನರು ಜೇಷ್ಠ ಪುತ್ರರಾಗದಿದ್ದರೂ, ನಮ್ಮ ಭಾವನವರಾದ ಅಪ್ಪು ಅಲಿಯಾಸ್ ರಾಮಸ್ವಾಮಿ ಕೂಡ ಅಪ್ಪು ಬಂದ ಎಲ್ಲರೂ ಸುಮ್ಮನಿರಿ ಎನ್ನುವಷ್ಟು ಗೌರವ ಪಡೆದಿದ್ದರು.. ದೊಡ್ಡವರಾಗಬೇಕಾದರೆ, ದೊಡ್ಡವರೇ ಆಗಬೇಕಿಲ್ಲ.. ವ್ಯಕ್ತಿತ್ವ ದೊಡ್ಡದಾಗಿರಬೇಕು.. ಜೇಷ್ಠ ನಕ್ಷತ್ರದಂತೆ ಎಲ್ಲರಲ್ಲೂ ತಮ್ಮ ನೆಡೆ ನುಡಿಯಿಂದ ಜೇಷ್ಠರಾಗೆ ಇದ್ದ ನನ್ನ ಯಜಮಾನರನ್ನು ಅನುಸರಿಸುತ್ತಾ ಬಂದೆ 

ಮೂಲ 22.10.2020
ನಮ್ಮ ಯಜಮಾನರ ಮೂಲ ಸ್ಥಾನ ಹಾಸನದ ಬಳಿಯ ಕೋರವಂಗಲ.. ನನ್ನ ಮೂಲ ಸ್ಥಾನ ಯಾವುದೇ ಇದ್ದರೂ.. ನನ್ನ ಬದುಕಿನ ಪ್ರಕಾರ ನನ್ನ ಮೂಲ ಸ್ಥಾನ ಕಿತ್ತಾನೆ.. ಕೋರವಂಗಲಕ್ಕೆ ಒಮ್ಮೆ ನನ್ನ ಮಕ್ಕಳು ಹೋದಾಗ ವಿಜಯನನ್ನು ನೋಡಿ ನಮ್ಮ ಯಜಮಾನರನ್ನು ನೆನೆಪಿಟ್ಟುಕೊಂಡವರು.. ಮಂಜಯ್ಯನ ಮಗನಾ... ಅದೇ ಅಂದುಕೊಂಡೆ ಮಾತು, ಮುಖ ಲಕ್ಷಣ ನೋಡಿ ಮಂಜಯ್ಯನ ಮಗನೆ ಇರಬೇಕು ಅಂತ ಅನ್ನುವಷ್ಟು ಹೆಸರಾಗಿದ್ದರು ತಮ್ಮ ವ್ಯಕ್ತಿತ್ವದಿಂದ.. 

ಪೂರ್ವಾಷಾಡಾ - 23.10.2020
ನಮ್ಮ ಪೂರ್ವದ ಜೀವನ ನಮಗೆ ಬದುಕುವ ಪಾಠವನ್ನು ಕಲಿಸಿತು.. ಯಾವುದಕ್ಕೂ ಕೊರಗದೆ, ಕಷ್ಟಕ್ಕೆ ನಲುಗದೆ ಬದುಕುವ ಜೀವನವನ್ನು ನಮ್ಮ ಪೂರ್ವಶ್ರಮ ತಿಳಿಸಿಕೊಟ್ಟಿತು.. 

ಉತ್ತರಾಷಾಡಾ - 24.10.2020
ನಮ್ಮ ಬದುಕಿನ ಉತ್ತರ ಭಾಗ ಕೊಂಚ ಹಾಯ್ ಎನಿಸಿತ್ತು.. ಪಟ್ಟ ಬವಣೆ, ಬದುಕಿನ ಸಂಕಷ್ಟಗಳು ಸ್ವಲ್ಪ ಸ್ವಲ್ಪವೇ ಮರೆಯಾಗಿ ತಂಗಾಳಿ ಸುಯ್ ಎಂದು ಬರುವಂತೆ ಗಾಳಿ ಬೀಸಲು ಶುರು ಮಾಡಿತ್ತು.. 

ಶ್ರವಣ - 25.10.2020
ಅಪ್ಪ ಅಮ್ಮನಿಗೆ ಶ್ರವಣಕುಮಾರ ಸೇವೆ ಮಾಡಿದಂತೆ ಸೇವೆ ಮಾಡಬೇಕು ಎನ್ನುವ ಆಸೆಯಿತ್ತು.. ಆದರೆ ವಿಧಿ.. ಅಪ್ಪನಿಗೆ ಬೇಡವಾದ ಮಗಳಾದೆ.. ಅಮ್ಮ ಎಂದು ನಾ ಗುರುತಿಸುವ ಮೊದಲೇ ಜನ್ಮ ನೀಡಿದ ಅಮ್ಮ ಸಾಕು ಮಗಳೇ ಈ ಪ್ರಪಂಚ ಎಂದು ಹೊರಟೆ ಬಿಟ್ಟಿದ್ದರು.. ನನ್ನ ಅಜ್ಜ ಅಜ್ಜಿ, ಸೋದರ ಮಾವ ಅತ್ತೆಯರು.. ಜೊತೆಗೆ ನನ್ನ ದೊಡ್ಡಪ್ಪ ದೊಡ್ಡಮ್ಮಂದಿರನ್ನೇ ತಾಯಿ ತಂದೆ ಎಂದು ಅವರಿಗೆ ಸೇವೆ ಮಾಡಿದೆ.. ಮದುವೆಯ ನಂತರ ನನ್ನ ಅತ್ತೆ ಮಾವನೇ ನನಗೆ ಮಾತಾ ಪಿತೃಗಳಾಗಿದ್ದರು.. 

ಧನಿಷ್ಠ - 26.10.2020
ಜೀವನ ಕನಿಷ್ಟವಾಗೇನೋ ಇರೋಲ್ಲ.. ಸಂಪತ್ತುಗಳು ಧನಿಷ್ಠವಾಗೇನೋ ಇರದೇ ಇದ್ದರೂ.. ಬದುಕನ್ನು ಅತಿ ಕೆಳಮಟ್ಟದಿಂದ ಮೇಲಕ್ಕೆ ಎತ್ತಿಕೊಂಡು ಬರಲು ಸಹಕಾರ ನೀಡಿದ ನನ್ನ ಬಂಧು ಮಿತ್ರರು, ನಮ್ಮ ಅನುಗ್ರಹ ಸದನ ಧನಿಷ್ಠ ಮಟ್ಟದ ಜೀವನವನ್ನು ಕಾಣಲು ಸಹಾಯ ಮಾಡಿತು.. 

ಶತಭಿಷ - 27.10.2020
ಶತಮಾನ ಮುಟ್ಟಬೇಕೆಂಬ ಅಭಿಲಾಷೆ ಅವರಿಗೂ ಇತ್ತು, ನನಗೂ ಇತ್ತು.. ಆದರೆ ಏನು ಮಾಡುವುದು, ನೆಟ್ವರ್ಕ್ ಚೆನ್ನಾಗಿ ಇತ್ತು, ಆದರೆ ಮೊಬೈಲಿನಲ್ಲಿ ಚಾರ್ಜ್ ಇಲ್ಲದ ಸ್ಥಿತಿ ನಮ್ಮಿಬ್ಬರದಾಗಿತ್ತು.. ಹಾಗಾಗಿ ಶತಾಯುಷಿ ಆಗಬೇಕೆಂಬ ಅಭಿಲಾಷೆಯನ್ನು ಕಳಚಿ ಹೊರತು ಬಂದೆವು... 

ಪೂರ್ವಭಾದ್ರ - 28.10.2020
ನಮ್ಮ ಪೂರ್ವ ಜೀವನ ಭದ್ರಪಡಿಸಲು ಅನುಕೂಲವಾಗಿದ್ದು ಬದುಕು ಹಸಿವಿನಲ್ಲಿ ಕಲಿಸಿದ ಪಾಠ .. ಹಸಿವು, ಜೀವನದಲ್ಲಿ ಮುಂದೆ ಬರುವ ಹಪಾಹಪಿ ಎಂಥಹ ಬದುಕನ್ನು ಹಸನು ಮಾಡುತ್ತೆ.. 

ಉತ್ತರಭಾದ್ರ - 29.10.2020
ಉತ್ತರಾರ್ಧ ಬದುಕು ಸುಂದರಕಾಂಡವಾಗುವ ಎಲ್ಲಾ ಲಕ್ಷಣಗಳು ಇತ್ತು.. ಬದುಕು ಹಸನಾಗಲು ಆರಂಭವಾಗಿತ್ತು... ಮಕ್ಕಳು ಏಳಿಗೆಯನ್ನು ಕಾಣಲು ಶುರು ಮಾಡಿದ್ದರು.. ನಮಗೆ ಮಾಡಬೇಕಾದ ಎಲ್ಲಾ ಸಂಸ್ಕಾರಗಳನ್ನು ಮಾಡುತ್ತಾ ಸಾಗಿದರು ಮಕ್ಕಳು.. 

ರೇವತಿ - 30.10.2020
ಕರುಣಾ ರಸ ಸೂಸುವ ರೇವತಿ ರಾಗದಂತೆ ನನ್ನ ಬದುಕು ಸುಮಧುರವಾಗಿ ಏರಿಳಿತದ ಹಾದಿಯಲ್ಲಿ ಸಾಗಿತ್ತು.. ಜಗ್ಗದೆ ಕುಗ್ಗದೆ ಸಾಗುವ ನಮ್ಮಿಬ್ಬರ ಮನೋಭಾವವೇ ಮಕ್ಕಳಿಗೂ ಹರಡಿತ್ತು.. ಹಾಗಾಗಿ ಬದುಕು ಹಸನಾಗಿತ್ತು... !

ಅಶ್ವಿನಿ ನಕ್ಷತ್ರ - 31.10.2020
ಅಶ್ವಿನಿ ದೇವತೆಗಳು ನೋಡಲು ಸುಂದರ.. ನನ್ನ ಮಕ್ಕಳು ಸ್ಪುರದ್ರೂಪಿಯಾಗದೆ ಇದ್ದರೂ (ಮಕ್ಕಳ ಬೈಯ್ಯ ಬೇಡ್ರಪ್ಪ) ಬದುಕನ್ನು ಸುಂದರ ಮಾಡಿಕೊಂಡರು.. ಅದೇ ತಾನೇ ನಿಲ್ಲುವುದು.. ಬದುಕನ್ನು ಎತ್ತಿ ಹಿಡಿದು ನಿಲ್ಲಬೇಕು.. ಆಗಲೇ ಬದುಕಿಗೆ ಒಂದು ಸಾರ್ಥಕತೆ.. !

ಭರಣಿ - 01.11.2020
ಬಡತನದ ಬೇಗೆಯಲ್ಲಿ ಬಳಲುವಾಗ ಭರಣಿಯಲ್ಲಿ ಕೂಡಿಟ್ಟ ಅಷ್ಟೋ ಇಷ್ಟೋ ಪುಡಿಗಾಸು ಕೈ ಹಿಡಿದಿತ್ತು.. ಬೆರಣಿಯಲ್ಲಿ ಸೌದೆಯಲ್ಲಿ ಬೆಂದ ಅಡಿಗೆ.. ಭರಣಿಯಲ್ಲಿ ಕೂಡಿಟ್ಟ ಧನ ಅಂದ ಎನ್ನುವ ಹಾಗೆ .. ಎಷ್ಟೋ ವಾರಗಳನ್ನು ಹಿಡಿದಿಟ್ಟಿದ್ದು ಇದೆ ಭರಣಿಯಲ್ಲಿ ಕೂಡಿಡುವ ಅಭ್ಯಾಸ.. !

ಕೃತಿಕಾ - 02.11.2020
ಕಾರ್ತಿಕ ಮಾಸ ಬಲು ಸೊಗಸು.. ಕತ್ತಲೆಯನ್ನು ಹೊಡೆದೋಡಿಸುವ ಬೆಳಕಿನ ಹಬ್ಬ ಮೂಡುವ ಮಾಸ.. ಅದೇ ಗುಂಗಿನಲ್ಲಿ ಇರುವ ಎಲ್ಲರ ಬದುಕು.. ಕತ್ತಲೆಯಿಂದ ಬೆಳಕಿಗೆ ಬರಲೇ ಬೇಕು.. ಬಂದೆ ಬರುತ್ತದೆ.. ಅದಕ್ಕೆ ನಮ್ಮ ಬದುಕೇ ಸಾಕ್ಷಿ.. !

ರೋಹಿಣಿ - 03.11.2020
ಕೃಷ್ಣ ಹುಟ್ಟಿದ್ದು ರೋಹಿಣಿ ನಕ್ಷತ್ರದಲ್ಲಿ. ಹೆತ್ತ ಅಪ್ಪ ಅಮ್ಮನ ಮಮತೆ ಸಿಗಲಿಲ್ಲ.. ಆದರೆ ಸಾಕು ತಾಯಿ ತಂದೆಯ ಪ್ರೀತಿಯಾಮೃತವನ್ನು ಸವಿದು ಬೆಳೆದು ಬಂದ.. ನನಗೂ ಹಾಗೆ ಹೆತ್ತವರ ಪ್ರೀತಿ ಹೃದಯಕ್ಕೆ ತಾಗಲಿಲ್ಲ.. ಆದರೆ ಆ ಪ್ರೀತಿಗಿಂತ ಮಿಗಿಲಾಗಿ ನನ್ನ ಬದುಕಿಸಿದ್ದು ನನ್ನ ಪ್ರೀತಿಯ ಕಿತ್ತಾನೆಯ ಮತ್ತು ಹಾಸನದ ಕುಟುಂಬ.. 

ಮೃಗಶಿರ - 04.11.2020
ಮೃಗಕ್ಕೆ ಶಿರ ಮುಖ್ಯ ಕಾರಣ.. ಪ್ರಪಂಚವನ್ನು ನೋಡುತ್ತದೆ.. ನಮ್ಮ ಬದುಕು ಕೂಡ ಕಷ್ಟಗಳು ಬಂದಾಗ ತಲೆ ಎತ್ತಿ ಎದುರಿಸಿ, ಯಶಸ್ಸು ಬಂದಾಗ ಶಿರಬಾಗಿ ನೆಡೆದೆವು.. ಅದೇ ನಮ್ಮ ಬದುಕನ್ನು ರೂಪಿಸಿತು.. !

ಆರ್ದ್ರಾ (ಆರಿದ್ರಾ) - 05.11.2020
ಇದನ್ನು ಕೆಂಪು ಮಹಾ ನಕ್ಷತ್ರ ಅಂತ ಹೇಳ್ತಾರೆ ಅನ್ನುತ್ತೆ ಜ್ಯೋತಿಶ್ಯಾಸ್ತ್ರ... ನನಗೆ ಗೊತ್ತಿಲ್ಲ.. ಆದರೆ ಕೆಂಪು ಕೆಂಪಾಗಿ ಶುರುವಾಗಿದ್ದ ಜೀವನ ತಂಪು ತಂಪಾಗಿ ಬದಲಾಗಿದ್ದು ಅಚ್ಚರಿ ಅನಿಸಿದರೂ.. ಅದರ ಹಿಂದೆ ಅನೇಕ ಸಹಾಯಕ ಪೋಷಕರ ಕೈಗಳು ಕಾಣುವುದಿಲ್ಲ.. ಮರೆಯಲ್ಲಿಯೇ ನಿಂತು ನನ್ನ ಅನುಗ್ರಹ ಸದನವನ್ನು ಅನುಗ್ರಹಿಸಿದ್ದು ನಮ್ಮ ಬದುಕಿನ ವಿಶಿಷ್ಟ ಸಂಗತಿಗಳಲ್ಲಿ ಒಂದು.. 

ಪುನರ್ವಸು - 06.11.2020
ಈ ಹೆಸರಿನ ಒಂದು ಬಿದಿರಿನ ವರ್ಗವಿದೆ ಅಂತ ತಿಳಿಯಿತು.. ಬಿದಿರು ಒಳಗೆ ಟೊಳ್ಳಾಗಿದ್ದರೂ ಒತ್ತಡ ತಡೆದುಕೊಂಡು ಅನೇಕ ಪೀಠೋಪಕರಣಗಳಿಗೆ ಉಪಯೋಗಕ್ಕೆ ಬರುತ್ತದೆ.. ಬದುಕು ಹಾಗೆ ಅಲ್ಲವೇ ಒಳಗೆ ಹೇಗಾದರೂ ಇರಲಿ, ಎಲ್ಲರ ಉಪಯೋಗಕ್ಕೆ ಬದುಕಬೇಕು.. ಯಾವುದೇ ಕಾರ್ಯಕ್ರಮವಾದರೂ ಮೈಮುರಿಯುವಂತೆ ಕೆಲಸ ಮಾಡುತ್ತಾ, ನಮ್ಮ ಭಾಗವಹಿಸುವಿಕೆಯನ್ನು ತೋರಿಸುತ್ತಿದ್ದ ರೀತಿ ಹೀಗೆ ಇತ್ತು.. ಪುನಃ ಪುನಃ ವಸು ಅಂದರೆ ಅಭಿವೃದ್ಧಿಯಾಗುತ್ತಲೇ ಇರಲಿ ಎನ್ನುವಂತೆ ಸಾಗಿತ್ತು ಬದುಕು.. ! 

ಪುಷ್ಯ - 07.11.2020
ಪುಷ್ಯ ಮಾಸದಲ್ಲಿ ಶಾಖ ಕಡಿಮೆಯಾಗಿ ಕೊಂಚ ಚಳಿ ಹೆಚ್ಚು ಎನ್ನುತ್ತಾರೆ.. ಬದುಕು ಹಾಗೆ ಅಲ್ಲವೇ.. ಸಂಕಷ್ಟಗಳ ಬವಣೆ ದಾಟುತ್ತಾ ಹೋದ ಹಾಗೆ ಶಾಖ ಕಡಿಮೆಯಾಗಿ ತಂಪು ಹೆಚ್ಚಾಗುತ್ತದೆ.. ಬದುಕು ಒಂದು ಹೂವಿನ ಹಾಗೆ.. ನಗುವೇ ಆ ಸುಮದ ಪರಿಮಳವು ಅನ್ನುವ ಹಾಡಿನಂತೆ.. ಬದುಕಿಗೆ ತಿರುವು ಸಿಗುತ್ತಲೇ ಇರುತ್ತದೆ.. ಬೇಕಾಗಿರೋದು ಕೊಂಚ ತಾಳ್ಮೆ!

ಆಶ್ಲೇಷ - 08.11.2020
ಆಹಾ.. ಬದುಕನ್ನು ಒಂದು ಹಾವಿಗೆ ಹೋಲಿಸುವುದಾದರೆ, ಈ ಅಶ್ಲೇಷದಂತೆ ಬದುಕು ಸಾಗುತ್ತದೆ.. ಸಂಕಷ್ಟಗಳ ಪೊರೆಯನ್ನು ಕಳಚಿ ಮುಂದೆ ಹೊಸ ಬದುಕು ಎಂಬ ಪೊರೆಯನ್ನು ಬೆಳೆಸಿಕೊಳ್ಳುತ್ತಾ ಸಾಗಬೇಕು.. !

ಮಖ - 09.11.2020
ಪುಷ್ಯ ಮಾಸ ಜಾರಿ ಮಾಘ ಮಾಸ ಬಂದಾಗ ಮೆಲ್ಲಗೆ ಶಾಖವೂ ಹೆಚ್ಚುತ್ತದೆ.. ತಂಪು ತಂಪು ಹೆಚ್ಚಾದಾಗ ಕಷ್ಟದ ಅರಿವು ಬೇಕು ಎನ್ನುವ ಹಾಗೆ ಮೆಲ್ಲನೆ ಬದುಕಿನಲ್ಲಿ ಬಿಸಿ ಏರುತ್ತದೆ.. ಬದುಕಬೇಕು ಎನ್ನುವ ಹಂಬಲ ಹೆಚ್ಚಾಗಿ, ಜಡತ್ವ ತೊರೆಯಲು ಈ ಮಘಾ ಅಥವ ಮಾಘ ಮಾಸ ಸಹಕಾರಿಯಾಗುತ್ತದೆ.. ನನ್ನ ಬದುಕಿನಲ್ಲಿ ಈ ರೀತಿ ಮಾಘ ಮಾಸಗಳು ಬಂದು, ನಮ್ಮ ಬದುಕಿನ ಮಖವನ್ನು ಬದಲಿಸಿತು.. 

ಪುಬ್ಬ (ಪೂರ್ವ ಫಲ್ಗುಣಿ) - 10.11.2020
ಸಂವತ್ಸರದ ಅಂತ್ಯ ಎನ್ನುವಂತೆ ಬರುವ ಈ ಪೂರ್ವ ಫಾಲ್ಗುಣ ಮಾಸ.. ಫಲ್ಗುಣಿ ತಾರೆಯಂತೆ ಹೊಸ ಋತುವಿಗಾಗಿ ಕಾಯುತ್ತದೆ.. ಬದುಕಲ್ಲಿ ಮತ್ತೆ ವಸಂತವಾಗಲು ಇದೆ ನಾಂದಿ.. ಪುಬ್ಬೇ ಎನ್ನುವಂತೆ ಬದುಕು ಹೊಸ ಹಾದಿಗೆ ಹೊರಳುವ ಪರಿ ಸುಂದರ ಅನನ್ಯ.. !

ಉತ್ತರಾ (ಉತ್ತರ ಫಲ್ಗುಣಿ) - 11.11.2020
ಎಲ್ಲಾ ಪ್ರಶ್ನೆಗಳಿಗೂ ಉತ್ತರಾ ಕೊಡುವೆ ಎನ್ನುವ ಛಲ ಬದುಕಲ್ಲಿ ಬಂದಾಗ ಪ್ರತಿ ಕ್ಷಣವೂ ಸುಂದರ ಎನ್ನುವುದನ್ನು ಈ ಉತ್ತರಾ ಫಾಲ್ಗುಣದಲ್ಲಿ ಕಲಿಯುವ ಅವಕಾಶ ನನ್ನ ಬದುಕಿನಲ್ಲಿ ಹಲವಾರು ಬಾರಿ ಬಂದಿತು.. !

ಹಸ್ತ - 12.11.2020
ಸಂಕಷ್ಟಗಳು ಬದುಕನ್ನು ಹಣ್ಣು ಹಣ್ಣು ಮಾಡಲು ಹಾತೊರೆಯುವಾಗ.. ಹಸ್ತವನ್ನು ತಲೆಯ ಮೇಲೆ ಇಟ್ಟುಕೊಳ್ಳದೆ, ಅದೇ ಹಸ್ತದಲ್ಲಿ ಬದುಕೆಂಬ ಶಿಲೆಯನ್ನು ಕೆತ್ತುವ ಶಿಲ್ಪಿಯಾಗಬೇಕು ನಾವು.. ಅದೇ ಹಾದಿಯಲ್ಲಿ ಸಾಗಿದಾಗ ಬದುಕು ಹಸನಾಗಿದ್ದು ಕಂಡು ಮನಸ್ಸಿಗೆ ಹಾಯ್ ಎಂದಿತು.. !

ಚಿತ್ತಾ - 13.11.2020
ಬದುಕಲೇ ಬೇಕು ಎಂಬ ಆಶಯ, ಛಲ ಚಿತ್ತದೊಳಗೆ ಬಂದರೆ ಸಾಕು, ಅಡೆ ತಡೆಗಳು ಹೂವಿನ ಸರವಾಗುತ್ತದೆ.. ಬದುಕುವ ಛಲವೆಂಬುದು, ಹರಿಯುವ ನೀರಿನಂತೆ, ಒಮ್ಮೆ ಹರಿಯಲು ಶುರು ಮಾಡಿದ ನದಿ, ಯಾವುದೇ ಅಡೆ ತಡೆಗಳಿಗೆ ಜಗ್ಗದೆ ಸಾಗುವ ಹಾಗೆ, ಬದುಕಿಗೆ ಹಾದಿಯನ್ನು ಹುಡುಕುತ್ತಾ ಮುನ್ನುಗ್ಗಬೇಕು.. ಇದೆ ನಾ ಕಂಡುಕೊಂಡ ಯಶಸ್ಸಿನ ಸೂತ್ರ!

ಸ್ವಾತಿ - 14.11.2020
ಈ ಸ್ವಾತಿ ಮುತ್ತಿನ ಹನಿಗಳು ಮುತ್ತನ್ನು ಮಾಡುತ್ತದೆ ಎನ್ನುತ್ತಾರೆ.. ದೇಹಕ್ಕೂ ಮನಸ್ಸಿಗೂ ಈ ಸ್ವಾತಿ ಮಳೆಯ ಹನಿಗಳು ಒಳ್ಳೆಯದು ಎಂದು ಎಲ್ಲೋ ಕೇಳಿದ್ದ ನೆನಪು.. ಇರಲಿ, ಮುತ್ತಾಗುವ ಈ ಹನಿಗಳು, ಬದುಕನ್ನೇ ಬದಲಿಸುತ್ತವೆ ಎನ್ನುವುದು ಮಾತ್ರ ಸುಳ್ಳಲ್ಲ. 

ವಿಚಿತ್ರ ಅನ್ನಿಸುತ್ತೆ ಅಲ್ವೇ ಈ ಲೇಖನ.. ಮನುಕುಲದ ಬದುಕೇ ಒಂದು ವಿಚಿತ್ರ ಪುಸ್ತಕ..ಅದರಲ್ಲಿ ನನ್ನ ಬದುಕಿನ ಕೆಲವು ಪುಟಗಳು ನಿಮಗಾಗಿ.. ಅಷ್ಟೇ.. 

ಮತ್ತೆ ಸಿಗುವೆ.. !

Sunday, November 1, 2020

ಅಮ್ಮ ಎನ್ನುವ ದೈತ್ಯ Server - ಭಾಗ ೩

ಜಗದಗಲದ ಹೃದಯದ ವಿಶಾಲುವಿನ ಸ್ವಗತ ಮಾತುಗಳು !!!

ಸಗ್ಗದಿಂದ ಸಗ್ಗಕ್ಕೆ  ನನ್ನ ಪಯಣದ ಹಾದಿಯಲ್ಲಿ ಬಂದ  ಹೂವಿನ ಪಥದಷ್ಟೆ ಕಲ್ಲಿನ ಏರು ಪೇರುಗಳ ಹಾದಿಯೂ ಕೂಡಿತ್ತು...!

ಸಗ್ಗ ಅಂದೇ ಅಲ್ವೇ...ಹೌದು ನಾ ಸುಮ್ಮನೇ ಹೇಳಿಲ್ಲ...ಕಿತ್ತಾನೆ ಎಂಬ ಸ್ವರ್ಗದಲ್ಲಿ ಹುಟ್ಟಿ ಬೆಳೆದ ನನಗೆ..ತಾತಾ ಬೊಬ್ಬೆ ರಾಮಯ್ಯ..ಅಜ್ಜಿ ಲಕ್ಷ್ಮಿ ದೇವಿ..ದೊಡ್ಡ ಮಾವ..ಸಣ್ ಮಾವ..ಅತ್ತೆಯಂದಿರು..ಎಲ್ಲರೂ  ನನಗೆ ಪ್ರೀತಿಯನ್ನು ಉಣ ಬಡಿಸಿದವರೇ..

ಅವರ ಮುಂದಿನ ಜನಾಂಗ ಕೂಡಾ..ವಿಶಾಲೂ ಎಂದರೆ ಸಾಕು ..ಮೊಗವರಳುತ್ತಿತ್ತು..ಅದೇನು ಪುಣ್ಯ ಮಾಡಿದ್ದೆನೋ...ನನ್ನ ಕಂಡರೆ ಹುಣ್ಣಿಮೆಯಲ್ಲಿ ಸಾಗರ ಉಕ್ಕುವ ಹಾಗೆ ಅವರ ಹೃದಯ ತುಂಬಿ ಬರುತ್ತಿತ್ತು..

ನಾ ಎಷ್ಟೇ ಜನ್ಮವೆತ್ತಿದರೂ ಈ ಋಣವನ್ನು ತೀರಿಸಲಾರೆ..

ಕಿತ್ತಾನೆಯ ಬೊಬ್ಬೆರಾಮಯ್ಯನವರ ವಂಶದ ಪ್ರತಿಯೊಬ್ಬರಿಗೂ ನನ್ನ ಶಿರಸಾ ನಮಾಮಿ..

ಇದಕ್ಕೆಲ್ಲಾ ಕಳಸವಿಟ್ಟಂತೆ ಹೋದ ವರ್ಷ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ನನ್ನನ್ನು ಸತ್ಕರಿಸಿ...ಗೌರವಿಸಿ ಅವರ ಅಭಿಮಾನದ ಕಿರೀಟವನ್ನು ತೊಡಿಸಿದ್ದು ನನ್ನ ಜೀವನದ ಸಾರ್ಥಕತೆಯ ಕ್ಷಣಗಳು...!

ಆ ಸಗ್ಗದಲ್ಲಿ ಬೆಳೆದು ..ಆಲೆಮನೆಯ ಕಬ್ಬಿನ ಹಾಲು..ತೋಟದ ಎಳನೀರು..ಗೆಡ್ಡೆ ಗೆಣಸುಗಳು ನನ್ನ ಬಾಲ್ಯವನ್ನು ಬೆಳೆಸಿತು!

ಪ್ರಾಯಕ್ಕೆ ಬರುವ ತನಕ..ನನಗೆ ತಾಯಿ ಇಲ್ಲ ಎನ್ನುವುದೇ ತಿಳಿದಿರಲಿಲ್ಲ...ನನಗೆ ಎರಡು ವರ್ಷವಿದ್ದಾಗಲೇ ಅಸುನೀಗಿದರು ಎಂಬ ಸತ್ಯ ಗೊತ್ತಾಗುವಷ್ಟರಲ್ಲಿ ಚಿಕ್ಕಮ್ಮ ಬಂದಾಗಿತ್ತು...

ಮುಂದಿನ ಬದುಕಿಗೆ ಪ್ರೀತಿ ಧಾರೆಯೆರೆದು ಹೆಮ್ಮರವಾಗಿಸಿದ್ದು ಶಂಖದ ಕುಟುಂಬ..ನನ್ನ ಪ್ರೀತಿಯ ರಾಮಣ್ಣ, ಕಿಟ್ಟಣ್ಣ, ಅನಂತ..ಹಾಗೂ ನನ್ನ ತವರು ಮನೆ ಮತ್ತು ಅವರ ಕುಟುಂಬದವರು ನನ್ನ ಬದುಕಿಗೆ ಇನ್ನಷ್ಟು ಹೊಳಪನ್ನು ನೀಡಿತು..

ನನ್ನ ಸೋದರತ್ತೆಯರಾದ ಕೌಶಿಕದ ಗೌರಮ್ಮ..ಹೊಳಲಕೆರೆಯ ಪುಟ್ಟಿ ಅಂತಾನೇ ಜನಜನಿತವಾಗಿದ್ದರು..ಕಿತ್ತಾನೆಯ ಅನ್ನಪೂರ್ಣೆ..ಸದ್ಯಕ್ಕೆ ವಯೋಸಹಜವಾಗಿ ಕೆಲವು ಹೆಸರುಗಳು ನನ್ನ ಮಾತಲ್ಲಿ ಇಲ್ಲದಿದ್ದರೂ..ನನ್ನ ಮನೆ ಮನದೊಳಗೆ ಸದಾ ಹಸಿರಾಗಿದ್ದಾರೆ...

ಕಿತ್ತಾನೆ, ಹಾಸನ, ಪಾಳ್ಯ, ಕೌಶಿಕ, ಶಿವಮೊಗ್ಗ, ಮೊಸಳೆ, ಕೋರವಂಗಲ..ಬೆಂಗಳೂರು..ಅದರ ಅಕ್ಕ ಪಕ್ಕದ ಊರುಗಳು ಎಲ್ಲೆಡೆ ಪಸರಿಸಿದ್ದ ನನ್ನ ಬಂಧುಮಿತ್ರರ ಸಹೃದಯತೆಗೆ ಮನಸ್ಸು ಕರಗಿ ನೀರಾಗಿತ್ತು!

ಮುಂದಿನ ಪೀಳಿಗೆ ಕೂಡಾ ತಮ್ಮ ಹೃದಯದೊಳಗೆ ವಿಶಿಷ್ಟವಾದ ಸ್ಥಾನ ನೀಡಿದರು..

ಕಿತ್ತಾನೆಯ ಗಿರಿಜಾ, ಮಂಗಳ,ಅನುಸೂಯ,ಪದ್ಮ, ಗಾಯಿತ್ರಿ, ಚಂದ್ರ, ಶ್ರೀರಾಮ,ಸತ್ಯನಾರಾಯಣ..ಮಂಜು..ಉಮೇಶ ದೇವರಸ್ವಾಮಿ,ಗೋಪಾಲ, ವಸಂತ..ಶ್ಯಾಮಲಾ ಕುಮಾರಿ..ಶಾಮಣ್ಣ..ಸೂರಾ..ಶ್ರೀಧರ ..ಮತ್ತುಅವರೆಲ್ಲರ ಕುಟುಂಬ ನನ್ನ ಉಡಿಯನ್ನು ತುಂಬಿಸಿಕೊಟ್ಟ ಪ್ರೀತಿಗೆ ಬೆಲೆಕಟ್ಟಲಸಾಧ್ಯ

ಒಂದೇ ತಾಯಿಯ ಮಕ್ಕಳಲ್ಲದಿದ್ದರೂ..ಒಡಹುಟ್ಟಿದವಳಿಗಿಂತ ಹೆಚ್ಚು ಪ್ರೀತಿ ತೋರಿಸಿದ ಗೋಪಾಲ..ಶಂಕರ..ರಾಜಾ..ಸರೋಜ ಇವರ ಪ್ರೀತಿಯನ್ನು ಹೇಗೆ ಮರೆಯಲಿ..ಅವರ ಕುಟುಂಬ ಮತ್ತು ಮಕ್ಕಳು ಕೂಡ ನನ್ನನ್ನು ಅಷ್ಟೇ ಅಕ್ಕರೆಯಿಂದ ನೋಡಿಕೊಂಡರು... 

ನನ್ನ ದೊಡ್ಡಪ್ಪ ಚಿಕ್ಕಪ್ಪನ ಮಕ್ಕಳಾದ ವಿಶ್ವ, ಅಣ್ಣಯ್ಯ, ರಾಜು..ಸರಸ್ವತಿ.. ಉಮಾ..ಗುಂಡಾ..ಕಮಲ..ಶೈಲಾ..ಮಣಿ... ಗೀತಾ..ಶಾರದ..ವೀಣಾ...ತ್ರಿವೇಣಿ..ಮತ್ತು ಅವರ ಕುಟುಂಬದವರ ಪ್ರೀತಿ ನನ್ನ ಮೂಖನನ್ನಾಗಿಸಿತು...

ಬಾಳ ಸಂಗಾತಿಯಾಗಿ ನನ್ನ ಬದುಕಿಗೆ ಹಾಲು ಜೇನು ಉಣಬಡಿಸಿದ ನನ್ನ ಯಜಮಾನರನ್ನು ಹೇಗೆ ಮರೆಯಲಿ..!

ಮಂಜಿನಂತಹ ತಣ್ಣಗಿನ ವ್ಯಕ್ತಿತ್ವ..ಮೃದು ಮಾತು..ಗುರಿ ಸಾಧಿಸುವ ಛಲ..ಕುಹಕಗಳು ಹಾದಿಯಲ್ಲಿ ಬಂದರೂ ತಲೆ ಕೆಡಿಸಿಕೊಳ್ಳದೇ ತಾನು ನಂಬಿದ್ದ ಹಾದಿಯನ್ನು ಬಿಡದೇ ನನ್ನನ್ನು ಅದೇ ಮಾರ್ಗದಲ್ಲಿ ನೆಡೆಸಿದ..ನನ್ನ ಪತಿರಾಯರ ಸಂಗವೇ ಸಗ್ಗವಾಗಿತ್ತು!

ಅವರು ಕೊಟ್ಟ ನಾಲ್ಕು ಮುದ್ದಿನ ಮಣಿಗಳು .. ನಮಗೆ ಯೋಗ್ಯತೆಯಿತ್ತೋ .ಮಕ್ಕಳಿಗೆ ಯೋಗವಿತ್ತೋ ಅರಿಯೆನು.. ಆದರೆ  ನಮಗೆ ಸಲ್ಲಬೇಕಾದ ಪ್ರತಿ ಸಂಸ್ಕಾರವನ್ನೂ ಮಾಡಿದರು ..ಅರವತ್ತನೇ ವರ್ಷದ ಶಾಂತಿ..ಎಪ್ಪತ್ತನೇ ವರ್ಷದ ಶಾಂತಿ ಭರ್ಜರಿಯಾಗಿ ನೆಡೆಸಿದರು..ನಮ್ಮ ಮದುವೆಯಾಗಿ ಐವತ್ತು ವರ್ಷಗಳ ಸಂಭ್ರಮವನ್ನು ಅದ್ದೂರಿಯಾಗಿ ಮಾಡಿದರು.. 

ಎಪ್ಪತ್ತನೇ ವರ್ಷದ ಶಾಂತಿ ಮಾಡಿದಾಗ ಬೆಂಗಳೂರಿಗೆ ಬರಲು ಪ್ರೇರೇಪಿಸಿದ ಶಿವಮೊಗ್ಗದ ಶೋಮಿ (ಅರ್ಥಾತ್ ನಾಗರತ್ನ ಮಗ ಸೋಮಶೇಖರ್) ಹೇಳಿದ್ದು.. ಮಂಜಣ್ಣ ಇಂತಹ ಮಕ್ಕಳನ್ನು ಪಡೆದ ನೀನೆ ಧನ್ಯ.. ಎಂದಾಗ ನನ್ನ ಯಜಮಾನರ ಕಣ್ಣಲ್ಲಿ ಸಾರ್ಥಕತೆ ಜಿನುಗಿತ್ತು.. 

ಶಿವಮೊಗ್ಗದ ಕಷ್ಟದ ದಿನಗಳಲ್ಲಿ ಸಹಾಯಕ್ಕೆ ನಿಂತಿದ್ದ ಕಿತ್ತಾನೆಯ ಸುರೇಶನನ್ನು ಮರೆಯಲಾರೆ.. 

ಬೆಂಗಳೂರಿಗೆ ಬಂದಾಗ "ದೊರೆ ನೀನು ನೆಲೆ ನಿಂತು ನಂತರ ನಿನ್ನ ಪರಿವಾರವನ್ನು ಕರೆದುಕೊಂಡು ಬಾ" ಎಂದು ಹುರಿದುಂಬಿಸಿ.. ನೆರಳಾಗಿ ನಿಂತ ನನ್ನ ಯಜಮಾನರ ಸೋದರತ್ತೆ ಮಗ ಗುಂಡನ ಸಹಾಯವನ್ನು ಸದಾ ನೆನಪಲ್ಲಿ ಇಟ್ಟುಕೊಂಡಿದ್ದೆ.. 

ಮಕ್ಕಳು ಸಹಸ್ರ ಚಂದ್ರ ದರ್ಶನ ಮಾಡಬೇಕಿತ್ತು ಅಂತ ಪ್ಲಾನ್ ಮಾಡಿದ್ದರು ..ಸಾಕು ಕಣೇ ಅಂತ ಅವರು ಹೊರಟು ಬಿಟ್ಟರು.. ನನಗೆ ಮಾಡಬೇಕು ಅಂತ ಮಕ್ಕಳು ಪ್ಲಾನ್ ಮಾಡಿದರು..ಮಕ್ಕಳೇ ನನಗೆ ಸಾಕು ದಣಿವಾಗಿದೆ ಅಂತ ನಾನೂ ಹೊರಟು ಬಿಟ್ಟೆ...!

ನನ್ನತ್ತೆ ತಾಯಿ ಪ್ರೀತಿ ತೋರಿಸಿದರು..ಸುಬ್ಬನರಸಮ್ಮನನ್ನು ನರಸು ಅಂತ ಮದುವೆಗೆ ಮುಂಚೆ ಕರೆಯುವಷ್ಟು ಸಲುಗೆ ಇತ್ತು..ನಾಗರತ್ನ..ಜಯ..ಸುಬ್ಬಲಕ್ಷಮ್ಮ ಎಲ್ಲರೂ ನನ್ನ ಪ್ರೀತಿಸಿದರು‌...ಆಶೀರ್ವದಿಸಿದರು!

ನನ್ನ ಅತ್ತೆ ಮಾವನ ಜೊತೆ..ನನ್ನ ಭಾವ..ಮೈದುನರಾದ ಅಪ್ಪು..ಕೃಷ್ಣ..ಕುಮಾರ..ನಾಗರಾಜ..ಮತ್ತು ಅವರ ಪತ್ನಿಯರಾದ ಸರಸ್ವತಿ..ರಾಧ..ಉಷಾ..ಪದ್ಮ..ಎಲ್ಲರ ಪ್ರೀತಿ ಗೌರವಗಳು ಅವರ ಮಕ್ಕಳ ಪರಂಪರೆಯಲ್ಲೂ ಮುಂದುವರೆಯಿತು!  

ನನ್ನ ಯಜಮಾನರ ಜೊತೆ ಬೆರೆತು..ಹಾಸನ ..ಶಿವಮೊಗ್ಗದಲ್ಲಿ..ಬೆಳೆಸಿದ ನನ್ನ ಸಂಸಾರ ಮಾಯನಗರಿಯಲ್ಲಿ ತಮ್ಮ ಅಸ್ತಿತ್ವ ಕಂಡುಕೊಂಡಿದ್ದು ನನಗೆ ಬಹಳ ನೆಮ್ಮದಿ ನೀಡಿತು..

ಕೃಷ್ಣವೇಣಿ ಹೋರಾಟದ ಬದುಕು ಕಂಡು..ಮನೆ ಮಾಡಿದಳು..ವಿಜಯ ಅಪ್ಪ ಹಾಕಿದ ಆಲದ ಮರದಿಂದಲೇ ಸಾಧನೆಯ ಹಾದಿಯಲ್ಲಿ ಹೆಜ್ಜೆಯಿಟ್ಟು ಮನೆ ಕಟ್ಟಲು ಅಣಿಯಾಗಿದ್ದಾನೆ...ಶ್ರೀಕಾಂತನ ಬದುಕು ಹಠಾತ್ ತಿರುವು ಕಂಡರೂ ಅದನ್ನು ಎದುರಿಸಿ ಮತ್ತೆ ಬದುಕು ಕಟ್ಟಿಕೊಂಡಿದ್ದಾನೆ ...ಮುರುಳಿಯ ಬದುಕು ಶೀಘ್ರದಲ್ಲಿಯೇ ಹಸನಾಗುತ್ತದೆ...

ನನ್ನ ಸೊಸೆಯರಾದ ವಿಜಯನ ಮಡದಿ ವಾಣಿ, ಸ್ವರ್ಗದಲ್ಲಿರುವ ಶ್ರೀಕಾಂತನ ಸವಿತಾ.. ಮತ್ತೆ ಅವನ ಬದುಕನ್ನು ಹಸನು ಮಾಡಿದ ಸೀಮಾ.. ಮೊಮ್ಮಕ್ಕಳು ಆದಿತ್ಯ, ವರ್ಷ, ಶೀತಲ್, ವಿಷ್ಣು, ಐಶ್ವರ್ಯ ಎಲ್ಲರೂ ನನ್ನ ಕುಟುಂಬವನ್ನು ಬೆಳೆಸಿದ್ದಾರೆ.. 

ನನ್ನ ಅನುಗ್ರಹ ಸದನ ಸದಾ ಸಂತಸದಿಂದ ತುಂಬಿರುತ್ತೆ.. ಇದು ನನ್ನ ಆಶೀರ್ವಾದ.. 

ವಿಶಾಲವಾದ ಜಗದಲ್ಲಿ ನನ್ನ ಕುಟುಂಬಕ್ಕೂ ಜಾಗಕೊಟ್ಟ ಈ ಜಗಕ್ಕೆ ವಂದಿಸುತ್ತಾ..ಹೊರಟಿದ್ದೇನೆ ..ನನ್ನ ಕುಟುಂಬವನ್ನು ಹರಸಿ ..ಬೆಳೆಸಿ..!

ಎಂದರೋ ಮಹಾನುಭಾವುಲು ಅಂದರೀಕಿ ವಂದನಮು!!

ಮತ್ತೆ....... ಹೋಗಿ ಬರಲೇ!

Saturday, October 24, 2020

ನಾನು ನನ್ನ ಪರ್ಪಲ್ ರೈನ್ ಕೋಟ್... ಸಿಬಿ ಜನುಮದಿನದ ಶುಭಾಶಯಗಳು

 ಇದೊಂದು ವಿಚಿತ್ರ ರೀತಿಯ ಹುಚ್ಚು ಸರಿ ಸುಮಾರು ಎರಡು ವರ್ಷಗಳ ಹಿಂದೆ ಒಂದು ಕವಿತೆಯ ಸ್ಪೂರ್ತಿಯಿಂದ ಬರೆದ ಬರಹವನ್ನು ಮುಂದುವರೆಸೋದು.. 

ಹಲವಾರು ಈ ರೀತಿಯ ಹುಚ್ಚೇ ಮನಸ್ಸಿನ ನಿರ್ವಾತವನ್ನು ತುಂಬುವುದು.. ಮತ್ತು ಬದುಕಿಗೆ ಇನ್ನಷ್ಟು ಹುಮ್ಮಸ್ಸು ತುಂಬುವುದು.. 

ನಾನು ನನ್ನ ಪರ್ಪಲ್ ರೈನ್ ಕೋಟ್... !

ಹಿಂದಿನ ಸಂಚಿಕೆಯಲ್ಲಿ  (ಹಿಂದಿನ ಸಂಚಿಕೆ ಹ ಹ ಹ.. ಕಳೆದ ಶತಮಾನದ್ದು ಅನ್ನಿ) ಅರ್ಪಿತಾ ಮತ್ತು ಮನು ಬೆಟ್ಟದ ತುದಿಯಲ್ಲಿ ಚಳಿಗಾಳಿಗಳ ನಡುವೆ ಒಂದಷ್ಟು ಫೋಟೋ ತೆಗೆದು.. ಬೋಂಡ, ಅಂಬೊಡೆಯನ್ನು ಮೆಲ್ಲುತ್ತಿದ್ದಾಗ.. ಆ ಬೋಂಡಾ ಸುತ್ತಿದ್ದ ಕಾಗದದಲ್ಲಿ ಒಂದು ಪುಟ್ಟ ಕವಿತೆ ಅರ್ಪಿತಾಳ ಮನಸ್ಸನ್ನು ಕಲಕಿತ್ತು.. ಮನು ಕೂಡ ಸುಮ್ಮನೆ ಈ ಕವಿತೆಯೊಳಗೆ ಏನೋ ಇದೆ ಅನ್ನುವ ದೇಶಾವರಿ ಮಾತನ್ನು ಸ್ವಲ್ಪ ಸೀರಿಯಸ್ ಆಗಿಯೇ ಅರ್ಪಿತಾ ತೆಗೆದುಕೊಂಡಿದ್ದಳು.. ಆ ಕವಿತೆಯನ್ನು ಮತ್ತೆ ಮತ್ತೆ ಓದುತ್ತಲೇ ಇದ್ದಳು.. 

​"ಆ ಕಣಿವೆಯ ತುದಿಯಲ್ಲಿದ್ದಾನಂತೆ ಜಾದೂಗಾರ
ನೊಂದ ಹೃದಯಕೆ ಮುಲಾಮು ಹಚ್ಚುವ ಕನಸುಗಾರ
ಕನಸಿನಾ ಮೊಗ್ಗಲು ಮಗಚುವಾಗ ನೆನಪಾದ ಅವನಂದು
ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ಹುಡುಕಿ ಹೊರಟೆವು ನಾವಿಂದು
ನಾನು ನನ್ನ ಪರ್ಪಲ್ ರೈನ್ ಕೋಟ್"

 ಕವಿತೆಯನ್ನು ಬರೆದವರ ಹೆಸರು ಹೇಮಂತ್ ಮತ್ತು ದಿನಾಂಕ ೨೪. ೧೦. ೨೦೧೭ ಅಂತ ಇತ್ತು ... 

ಅರ್ಪಿತಾಳ ಪುಟ್ಟ ತಲೆಯಲ್ಲಿ ನೂರಾರು ಪ್ರಶ್ನೆಗಳು ಓಡುತ್ತಿದ್ದವು.. ಆ ದಿನಾಂಕ ತುಸು ಗೊಂದಲಗೀಡು ಮಾಡಿತ್ತು.. ಬೈಕಿನಲ್ಲಿ ಸುಮ್ಮನೆ ಕೂತಿದ್ದರು.. ತಲೆ ಮಾತ್ರ ವಾಯುವೇಗದಲ್ಲಿ ಯೋಚಿಸುತ್ತಿತ್ತು.. ಈ ದಿನಾಂಕಕ್ಕೂ ಹೇಮಂತ್ ಕಾಣೆಯಾಗಿದ್ದಕ್ಕೂ ಏನೋ ಲಿಂಕ್ ಇದೆ.. ಮನುಗೆ ಹೇಳಿದರೆ.. ಅವನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳದಿದ್ದದ್ದು ಅರ್ಪಿತಾಳಿಗೆ ಕೊಂಚ ಯೋಚನೆಯಾದರೂ.. ಮನುವಿನ ಬಗ್ಗೆ ಚೆನ್ನಾಗಿ ಗೊತ್ತಿದ್ದ ಕಾರಣ ಏನೂ ಮಾತಾಡದೆ ತನ್ನ ಪಾಡಿಗೆ ಯೋಚಿಸತೊಡಗಿದಳು.. 

ಹೇಮಂತ್.. ಅರ್ಪಿತಾ ಮತ್ತು ಮನುವಿನ ಆಪ್ತ ಗೆಳೆಯ.. ಎಲ್ಲಿ ಹೋದರೂ ಜೊತೆಗಿರಲೇಬೇಕಿತ್ತು.. ಆದರೆ ಆ ಮೇಲೆ ಹೇಳಿದ ದಿನಾಂಕದ ನಂತರ ಹೇಮಂತ್ ಅಚ್ಚರಿಯ ರೀತಿಯಲ್ಲಿ ಕಾಣ ಸಿಕ್ಕಿರಲಿಲ್ಲ... ಮೊಬೈಲಿಗೆ ಕರೆ.. ವಾಟ್ಸಾಪ್ ಸಂದೇಶ.. ಎಸ್ ಎಂ ಎಸ್ ಗಳಿಗೆ ಪ್ರತಿಕ್ರಿಯೆ ಇರಲಿಲ್ಲ.. ಇಮೇಲ್ ಕೂಡ ನಿರುತ್ತರ ಕಂಡಿತ್ತು.. ಪೋಲೀಸು ಅದು ಇದು ಬೇಡ ಎಂದು ಅವರ ಮನೆಯವರು ಸುಮ್ಮನಿದ್ದರು.. ಕಾರಣ ಹೇಮಂತ್ ಕೆಲಸ ಮಾಡುತ್ತಿದ್ದ ಆಫೀಸ್ ತುಂಬಾ ಗುಪ್ತವಾಗಿತ್ತು.. ಯಾವುದೋ ಪ್ರಾಜೆಕ್ಟ್ ಮೇಲೆ ಆವ ಕೆಲಸ ಮಾಡುತ್ತಿದ್ದ... ಅದು ಮನೆಯವರಿಗೂ ಗೊತ್ತಿರಲಿಲ್ಲ.. ತನ್ನ ಆಪ್ತ ಗೆಳೆಯರಿಗೂ ಗೊತ್ತಿರಲಿಲ್ಲ... ಆದರೆ ಗೆಳೆತನವನ್ನು ಮತ್ತು ಅವರ ಜೊತೆಗಿನ ಒಡನಾಟವನ್ನು ಎಂದೂ ದೂರಮಾಡಿರಲಿಲ್ಲ.. 

ಒಂದೆರಡು ದಿನವಾದ ಮೇಲೆ.. ಅರ್ಪಿತಾ ಮನುವಿಗೆ ಒಂದು ಮೆಸೇಜ್ ಕಳಿಸಿ.. "ಮನು ನಾನು ಒಂದೆರಡು ದಿನ ನಮ್ಮ ಊರಿಗೆ ಹೋಗಿ ಬರುವೆ.. ಸರಿಯಾಗಿ ಎರಡು ದಿನವಾದ ಮೇಲೆ ನನ್ನ ಮೊಬೈಲಿಗೆ ಕರೆ ಮಾಡು.. ಉತ್ತರ ಬರಲಿಲ್ಲ ಅಂದರೆ.. ಸೀದಾ ನಮ್ಮೂರಿಗೆ ಬಂದು ಬಿಡು.. " 

ಅರ್ಪಿತಾಳ ಸಾಹಸ ಪ್ರವೃತ್ತಿ ಗೊತ್ತಿದ್ದ ಮನುವಿಗೆ ಸರಿ ಅನ್ನದೆ ಬೇರೆ ಉತ್ತರವಿರಲಿಲ್ಲ.. ಜೊತೆಯಲ್ಲಿ ಅವನಿಗೆ ಗೊತ್ತಿತ್ತು.. ಅವಳು ಒಂದು ಕೆಲಸಕ್ಕೆ ಕೈ ಹಾಕಿದರೆ.. ತುಂಬಾ ಸೂಕ್ಷ್ಮವಾಗಿ ಅದರ ಸಾಧಕ ಬಾಧಕಗಳನ್ನು ಯೋಚಿಸಿ.. ತುಂಬಾ ಸುರಕ್ಷತೆಯಿಂದ ಕೆಲಸ ನಿಭಾಯಿಸುತ್ತಾಳೆ.. ಮತ್ತೆ ಅಪಾಯ ಅನ್ನುವಂತಹ ಸಂದರ್ಭದಲ್ಲಿ ತನ್ನ ಸಹಾಯ ಪಡೆಯದೇ ಇರೋಲ್ಲ ಅಂತ.. ಹಾಗಾಗಿ ಸರಿ ಕಣೆ ಹುಷಾರು ಅಂತ ಪ್ರತಿಕ್ರಿಯೆ ಕೊಟ್ಟಿದ್ದ.. 

ಅವಳು ಹೇಳಿದ ಹಾಗೆ ಎರಡು ದಿನ ಆಗಿತ್ತು.. ಇರಲಿ ಇನ್ನೊಂದು ದಿನ ಬೆಳಿಗ್ಗೆ ಕರೆ ಮಾಡುವೆ ಎಂದು ಮನು ಮಾನಸಿಕವಾಗಿ ಸಿದ್ಧವಾಗಿದ್ದ.. 

ಮೂರನೇ ದಿನ.. ಅರ್ಪಿತಾಳ ಸಂದೇಶ.. "ಮನು.. ಮಿಷನ್ ಕಂಪ್ಲೇಟಿಡ್.. ಕಮ್" 

ಮನು ತನ್ನ ಬುಲೆಟ್ ತೆಗೆದುಕೊಂಡು ಹೊರಟ.. ದಾರಿಯುದ್ದಕ್ಕೂ ಅವನ ತಲೆ ಯೋಚಿಸಿ ಭಾರವಾಗಿತ್ತು... ಮೊಬೈಲಿನ ಹಾಡುಗಳು ಅವನ ಮನಸ್ಸನ್ನು ಆಹ್ಲಾದಕರವಾಗಿಟ್ಟಿತ್ತು.. ತಣ್ಣಗಿನ ವಾತಾವರಣ.. ತಂಗಾಳಿ.. ಹಸಿರು ಸೀರೆಯುಟ್ಟ ಪ್ರಕೃತಿ ಎಲ್ಲವೂ ಅವನ ಬ್ಯುಸಿ ಕೆಲಸಕ್ಕೆ ಅಲ್ಪವಿರಾಮ ಕೊಟ್ಟಿತ್ತು.. 

ಊರೊಳೊಗೆ ಹೋದ..... ಸಾಲು ಸಾಲು ಕಂಬದ ಮನೆ..ಸುಮಾರು ನೂರು ವರ್ಷ ದಾಟಿದ ಮನೆ.. ಸುಸ್ಥಿತಿಯಲ್ಲಿತ್ತು.. ಮನೆ ಮುಂದೆ ಎತ್ತಿನ ಗಾಡಿ.. ಎತ್ತುಗಳು ಹುಲ್ಲನ್ನು ಮೇಯುತಿತ್ತು.. ಹಸುಗಳು ಅಲ್ಲಿಯೇ ಮಲಗಿದ್ದವು.. ಮನೆ ಹಿಂದಿನ ಹಿತ್ತಲಿನಿಂದ ಹೊಗೆ ಬರುತಿತ್ತು.. ಮನಸ್ಸಿಗೆ ಮುದ ಕೊಡುವ ಪ್ರಕೃತಿಯ ಮಧ್ಯೆ ಅರ್ಪಿತಾಳ ಮನೆ.. 

ಬೇವಿನ ಕಡ್ಡಿಯಿಂದ ಹಲ್ಲನ್ನು ಉಜ್ಜುತ್ತಾ ಒಂದು ಆಕೃತಿ ಬಂತು.. ಗಡ್ಡ ನೀಳವಾಗಿತ್ತು..ದೇಹ ಕೊಂಚ ಕೃಶವಾಗಿತ್ತು.. ಕಣ್ಣುಗಳ ಹೊಳಪು ಕಡಿಮೆಯಾಗಿರಲಿಲ್ಲ.. ಕಡ್ಡಿಯನ್ನು ಅತ್ತ ಬಿಸಾಡಿ.. ಬಾಯಿಗೆ ನೀರು ಹಾಕಿಕೊಂಡು ಗಳಗಳ ಮಾಡಿ.. ಆ ಆಕೃತಿ ಓಡಿ ಬಂದು ಮನುವನ್ನು ತಬ್ಬಿಕೊಂಡಿತು.. 

ಮನುವಿಗೆ ಒಂದು ಕ್ಷಣ ಗಾಬರಿ ... ತಬ್ಬಿಕೊಂಡ ವ್ಯಕ್ತಿ ಯಾರು ಅಂತ ತಿಳಿದಾಗ.. ಗಾಬರಿ ದೂರವಾಗಿತ್ತು.. ಮನಸ್ಸಿಗೆ ಸಂತೋಷವಾಗಿತ್ತು.. "ಹೇಮು .. ಹೇಗಿದ್ದೀಯೋ.. ಎಷ್ಟು ದಿನ ಆಯಿತು ನಿನ್ನ ನೋಡಿ.. ಎಲ್ಲಿದ್ದೆ ಇಲ್ಲಿ ತನಕ.. " ಪ್ರಶ್ನೆಗಳ ಸರಮಾಲೆಯನ್ನೇ ಪೋಣಿಸಿದ್ದ.. 

ಅರ್ಪಿತಾ ಬಿಸಿ ಬಿಸಿ ಕಾಫಿಯನ್ನು ತಂದು.. ಇಬ್ಬರಿಗೂ ಕೊಟ್ಟು "ಹೇಮುವಿಗೆ ತೊಂದರೆ ಕೊಡಬೇಡ ಮನು.. ನಾನು ಹೇಳುವೆ.. " ಎಂದು ಹೇಮಂತನ ಕಡೆ ಕಣ್ಣು ಹೊಡೆದು ಶುರುಮಾಡಿದಳು.. 

​"ಆ ಕಣಿವೆಯ ತುದಿಯಲ್ಲಿದ್ದಾನಂತೆ ಜಾದೂಗಾರ
ನೊಂದ ಹೃದಯಕೆ ಮುಲಾಮು ಹಚ್ಚುವ ಕನಸುಗಾರ
ಕನಸಿನಾ ಮೊಗ್ಗಲು ಮಗಚುವಾಗ ನೆನಪಾದ ಅವನಂದು
ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ಹುಡುಕಿ ಹೊರಟೆವು ನಾವಿಂದು
ನಾನು ನನ್ನ ಪರ್ಪಲ್ ರೈನ್ ಕೋಟ್"

"ಮನು ಈ ಕವಿತೆಯನ್ನು ಓದಿ.. ಓದಿ.. ಅದರ ಒಳಾರ್ಥ ತಿಳಿದುಕೊಳ್ಳುವುದಕ್ಕೆ ಪ್ರಯತ್ನ ಮಾಡಿದೆ.. ... 

ಕಣಿವೆಯ ತುದಿಯಲ್ಲಿ ಕೂತಿದ್ದಾನೆ.. ತನ್ನ ಪ್ರಾಜೆಕ್ಟನ್ನು ನಿಭಾಯಿಸುವುದಕ್ಕೆ ಎಲ್ಲರಿಂದ ದೂರ ಬಂದು ನಿಂತಿದ್ದಾನೆ.. ತನ್ನ ಕನಸ್ಸಿನ ಪ್ರಾಜೆಕ್ಟ್ ಯಾವಾಗಲೂ ಕಣ್ಣ ಮುಂದೆ ಇದ್ದುದರಿಂದ ಅದನ್ನು ಪೂರ್ಣ ಮಾಡದೆ ಆವ ಮಗ್ಗುಲು ಬದಲಿಸುವುದಿಲ್ಲ ಎಂದು ಅರಿವಾಯಿತು.. ಅವನು ಸದಾ ಇಷ್ಟ ಪಡುತಿದ್ದ ಪರ್ಪಲ್ ರೈನ್ ಕೋಟು ನನಗೆ ದಾರಿ ತೋರಿಸಿತು.. 

ಕಣಿವೆಯ ಪ್ರದೇಶಕ್ಕೆ ಹೋದಾಗ.. ಅಲ್ಲಿ ರೈನ್ ಕೋಟು ಬಿದ್ದಿತ್ತು.. ಆಗ ಅರಿವಾಯಿತು.. ಹೇಮು ಇಲ್ಲೇ ಎಲ್ಲೋ ಇದ್ದಾನೆ ಅಂತ.. ಅದೇ ಹಾದಿಯಲ್ಲಿ ಸಾಗಿದಾಗ ಕೆಲವು ದೃಢವಾದ ಹೆಜ್ಜೆಗಳ ಗುರುತು.. ನನ್ನನ್ನು ಕಣಿವೆಯ ತುತ್ತ ತುದಿಗೆ ತಂದಿತ್ತು.. ಮೊದಲೇ ನಿರ್ಧಾರ ಮಾಡಿಕೊಂಡು ಬಂದದ್ದರಿಂದ.. ಬೆಚ್ಚನೆಯ ಉಡುಪು.. ಆಹಾರ ಸಾಮಗ್ರಿ ಎಲ್ಲವನ್ನು ಹೊತ್ತು ತಂದಿದ್ದೆ..ಝರಿಗಳು ಹೇರಳವಾಗಿದ್ದರಿಂದ ನೀರಿನ ಬರ ಇರಲಿಲ್ಲ.. ಕಣಿವೆಯ ತುತ್ತ ತುದಿಯಲ್ಲಿ ಒಂದು ಗುಹೆಯಿತ್ತು.. ಆ ಗುಹೆಯ ಬಾಗಿಲಲ್ಲಿ ಒಂದು ಆಕೃತಿ ಮಲಗಿದ್ದು ಕಾಣಿಸಿತು.. ದೇಹ ಕೃಶವಾಗಿತ್ತು.. ತಲೆಗೂದಲು, ಗಡ್ಡ ನೀಳವಾಗಿ ಬೆಳೆದಿತ್ತು.. ಸರಿ ಸುಮಾರು ಒಂದು ವರ್ಷ ಆಗಿತ್ತು.. ಹೇಮು ನಮ್ಮ ಕಣ್ಣಿನಿಂದ ದೂರವಾಗಿ.. ಆವ ಬರೆದಿದ್ದ ಕವಿತೆಯ ಪುಸ್ತಕದ ಹಾಳೆಗಳು ಹಾದಿಯಲ್ಲಿ ಬಿದ್ದು ಹೋಗಿ.. ದನಕಾಯುವ ಹುಡುಗರಿಂದ ಬೋಂಡದ ಅಂಗಡಿ ಸೇರಿತ್ತು.. ಹಾಗಾಗಿ ಈ ಕವಿತೆಯ ಹಾಳೆ ಅರ್ಪಿತಾಳ ಕೈ ಸೇರಿದ ಮೇಲೆ.. ಹುಡುಕಾಟದಲ್ಲಿ ಹೇಮು ಸಿಕ್ಕಿದ್ದ.. 

ಹೇಮುವಿನ ಪ್ರಾಜೆಕ್ಟ್ ತುಂಬಾ ಗುಪ್ತವಾಗಿದ್ದರಿಂದ.. ಅದರ ವಿವರ ಅವನು ಹೇಳಲಿಲ್ಲ.. ನಾನೂ ಕೇಳಲಿಲ್ಲ.. ಆದರೆ ತುಂಬಾ ಮುಖ್ಯವಾದ ಮಾಹಿತಿಗೆ ಕಾಯುತಿದ್ದ.. ಮತ್ತು ಆ ಮಾಹಿತಿಯನ್ನು ಹೊತ್ತು ತರಬೇಕಾದವ ಇನ್ನೂ ಬಂದಿರಲಿಲ್ಲ.. ಅವನು ಬರದೇ.. ಇವ ಆ ಜಾಗವನ್ನು ಬಿಟ್ಟು ಬರುವ ಹಾಗಿರಲಿಲ್ಲ.. ಹಾಗಾಗಿ ತನ್ನ ಬಳಿಯಿದ್ದ ಆಹಾರ ಸಾಮಗ್ರಿಯನ್ನು, ಕಣಿವೆಯಲ್ಲಿ ಸಿಗುವ ಹಣ್ಣುಗಳನ್ನು ತಿಂದು ಬದುಕಿದ್ದಾನೆ.. ನಿನ್ನೆ ಊರಿಗೆ ಬಂದ ಮೇಲೆ ಒಂದು ವರ್ಷದ ದಿನಪತ್ರಿಕೆಯನ್ನು ಓದಿದ.. ತಡಕಾಡಿದ.. ನಂತರ ತಿಳಿದದ್ದು.. ಮಾಹಿತಿ ತರಬೇಕಾದವ ಕಾಡಿನ ನಡುವಿನ ಒಂದು ಜಲಪಾತದಲ್ಲಿ ಬಿದ್ದು ಘಾಸಿಗೊಂಡು.. ಪಟ್ಟಣದ ಆಸ್ಪತ್ರೆಗೆ ದಾಖಲಾಗಿದ್ದ.. ಮತ್ತು ಬಿದ್ದಿದ್ದ ಪೆಟ್ಟಿಗೆ ನೆನಪಿನ ಶಕ್ತಿ ಎಲ್ಲವನ್ನು ಕಳೆದುಕೊಂಡಿದ್ದಾನೆ.. ಅವನಿಗೆ ಮಾತ್ರ ಗೊತ್ತಿತ್ತಂತೆ ಹೇಮು ಎಲ್ಲಿದ್ದಾನೆ ಎಂದು.. ಅವನಿಗೆ ನೆನಪಿನ ಶಕ್ತಿ ಇಲ್ಲ.. ಇವನು ಅವನು ಬರೋ ತನಕ ಜಾಗ ಬಿಟ್ಟು ಬರುವ ಹಾಗಿಲ್ಲ.. ಇದು ಹೇಮುವಿನ ಕತೆ.. "

"ಯಪ್ಪಾ ಛಲಗಾರ್ತಿ ಕಣೆ ಅರ್ಪಿ.. ಒಬ್ಬಳೇ ಈ ರೀತಿಯ ಸಾಹಸ ಮಾಡಿದೆಯಲ್ಲಾ. ಶಭಾಷ್.. ಅಲ್ಲ ಕಣೆ.. ನನಗೆ ಒಮ್ಮೆ ಹೇಳಬಾರದಿತ್ತೇ.. ನಮ್ಮ ಆತ್ಮೀಯ ಹೇಮುವನ್ನು ಹುಡುಕುವುದಕ್ಕೆ ನಾನು ಬರುತ್ತಿದ್ದೆ.. "

"ಹಾಗಲ್ಲ ಕಣೋ ಮನು.. ನಿನ್ನ ಮನೆಯಿಂದ ಅಷ್ಟು ಸುಲಭವಾಗಿ ಬಿಡೋಲ್ಲ.. ಜೊತೆಗೆ ನನಗೆ ಖಾತ್ರಿ ಇತ್ತು ಇದು ಹೇಮುವಿನ ಕವಿತೆ.. ಮತ್ತು ಅವನ ಕವಿತೆ ಹುಚ್ಚು ಅವನು ಇರೋ ತಾಣವನ್ನು ಗುಟ್ಟಾಗಿ ಬಿಚ್ಚಿಟ್ಟಿದ್ದಾನೆ ಎಂದು.. ಮತ್ತೆ ಅವನ ಕೆಲಸವೇ ಗುಟ್ಟು ಎಂದಾಗ.. ಅವನನ್ನು ಹುಡುಕುವ ಕೆಲಸವೂ ಕೂಡ ಗುಟ್ಟಾಗಿರಲೇ ಬೇಕಲ್ವಾ.. " ಎನ್ನುತ್ತಾ ಇಬ್ಬರ ಕಡೆ ಕಣ್ಣು ಮಿಟುಕಿಸಿದಳು.. 

ಹೇಮು ಮತ್ತು ಮನು ಇಬ್ಬರೂ.. ಅರ್ಪಿತಾಳನ್ನು ಆಲಂಗಿಸಿದರು.. ಮೂವರಿಗೂ ಸಮಾಧಾನ ಮತ್ತೆ ಗೆಳೆತನ ಮುಂದುವರೆಯುತ್ತಿದೆ ಎಂದು.. !

******

ವಿಚಿತ್ರ ಅಲ್ಲವೇ.. ಎರಡು ವರ್ಷಗಳ ಹಿಂದಿನ ಬರಹವನ್ನು ಮುಂದುವರೆಸಿ... ಅದಕ್ಕೊಂದು ತಾರ್ಕಿಕ ಅಂತ್ಯ ಕೊಡಲು ಪ್ರಯತ್ನ ಪಟ್ಟಿದ್ದೇನೆ... 

ಇದಕ್ಕೆ ಕಾರಣ ನನ್ನ ಅದ್ಭುತ ಗೆಳತೀ ನಿವೇದಿತಾ ಚಿರಂತನ್ ಅವರ ಪುಟ್ಟ ಕವಿತೆ.. ಮತ್ತು ಅವರೇ ಸೃಷ್ಟಿ ಮಾಡಿದ ಪಾತ್ರ ಅರ್ಪಿತಾ.. 

ಇವರೆಡರ ಸಮಾಗಮ.. ಈ ಕಥಾನಕ.. 

ಇಂದು ನಿವೇದಿತಾ ಅವರ ಜನುಮದಿನ.. ಅದಕ್ಕೊಂದು ಬರಹ ಕೊಡೋಣ ಅಂತ ಮನಸ್ಸಿಗೆ ಬಂದಾಗ.. ಅರೆ ಅವರ ಕವಿತೆಯನ್ನು ಇಟ್ಟುಕೊಂಡು ಬರೆದಿದ್ದ ಬರಹಕ್ಕೆ ಮುಂದುವರೆದ ರೂಪ ಕೊಡೋಣ ಅನ್ನಿಸಿತು.. ಅದರ ಫಲಿತಾಂಶ ಈ ಬರಹ.. 

ಸಿಬಿ ನಿಮ್ಮೆಲ್ಲ ಆಸೆಗಳು ಈಡೇರಲಿ.. ಜನುಮದಿನ ಸುಂದರವಾಗಿರಲಿ.. 

ಜನುಮದಿನದ ಶುಭಾಶಯಗಳು!

Friday, October 23, 2020

ಅಮ್ಮ ಎನ್ನುವ ದೈತ್ಯ Server - ಭಾಗ ೨

 ಸುಮ್ಮನೆ ಉರಿದು ಬೂದಿಯಾಗಿದ್ದ ಕಟ್ಟಿಗೆಯ ರಾಶಿಯನ್ನು ನೋಡುತಿದ್ದೆ... ಎರಡು ದಿನದ ಹಿಂದಷ್ಟೇ ಜೀವ ತುಂಬಿದ್ದ ಶರೀರ ಇಂದು ಕಟ್ಟಿಗೆಯ ಜೊತೆಯಲ್ಲಿ ಉರಿದು ಅಸ್ಥಿ ಬಿಟ್ಟುಕೊಂಡು.. ಬೂದಿಯಾಗಿ ಚೆಲ್ಲಾಡಿತ್ತು.. 

ಕಿತ್ತಾನೆಯಿಂದ ಜನ್ಮ ತಳೆದ ಈ ಪುಟ್ಟ ಜೀವ.. ಸಂಸಾರಗಳ ಕಷ್ಟ ನಷ್ಟ ಸುಖ ದುಃಖಗಳನ್ನು ಹೀರಿಕೊಂಡು ಬೆಳೆದು ನಿಂತಿದ್ದ ಈ ಜೀವ ಇಂದು ಒಂದು ಮಡಿಕೆಯಲ್ಲಿ ತುಂಬಬಹುದಾದಷ್ಟು ಗಾತ್ರಕ್ಕೆ ಕುಗ್ಗಿದ್ದು.. ಮನುಜನ ದೇಹ ದೊಡ್ಡದಲ್ಲ.. ಜೀವನ ದೊಡ್ಡದು ಎನ್ನುವ ಮಾತನ್ನು ನಿಜ ಎಂದು ಸಾರಿತು.. 

ಅಪ್ಪನ ಕೆಲಸ ಮಾಡುವಾಗಲೂ.. ಸವಿತಾಳ ದೇಹದ ಪಳೆಯುಳಿಕೆಗಳನ್ನು ನೋಡಿದಾಗಲೂ ಆಗದ ಒಂದು ವಿಚಿತ್ರ ಸಂಕಟ ಅಂದು ನಮ್ಮನ್ನು ಕಾಡಿತು.. 

ಮನುಜನ ಅಸ್ತಿತ್ವವನ್ನು ಅಸ್ಥಿಗಳ ಮಧ್ಯೆ ಹುಡುಕುವ ಪರಿ ನಿಜಕ್ಕೂ ಘೋರ.. ಆದರೆ ಅದೇ ಸತ್ಯ.. 

ನಮ್ಮ ಮನವನ್ನು ಪೂಜಾ ಸಂಸ್ಕಾರ ಮಾಡಿಸಲು ಬಂದಿದ್ದ ಗುರುಗಳು ಗಮನಿಸಿದರೋ ಏನೋ ಎನ್ನುವಂತೆ... ಆ ಮಡಿಕೆಯಲ್ಲಿ ತುಂಬಿಕೊಳ್ಳಿ.. ಬೆಳ್ಳಗೆ ಇರೋದನ್ನ ಆರಿಸಿಕೊಳ್ಳಿ.. ತಲೆಯ ಭಾಗದಿಂದ ಶುರು ಮಾಡಿ ಎಂದರು.. ಬಿಸಿ ಇರುತ್ತೆ.. ನೀರನ್ನು ಚೆನ್ನಾಗಿ ಚುಮುಕಿಸಿ ದಪ್ಪ ದಪ್ಪನಾದ ಬೆಳ್ಳಗೆ ಇರುವ ಅಸ್ಥಿಯನ್ನು ತುಂಬಿಕೊಳ್ಳಿ.. ನೀವು ನಿಮ್ಮ ಅಣ್ಣನಿಗೆ ಸಹಾಯ ಮಾಡಿ ಅಂದರು.. 

ನಮ್ಮನ್ನು ಎತ್ತಾಡಿಸಿ, ಸಾಕಿ, ಬೆಳೆಸಿದ ಅಮ್ಮ ಇಂದು ಬೂದಿಗಳ ನಡುವೆ ಮಲಗಿದ್ದರು.. 

ಅಪ್ಪನ ಹಾಗೂ ಸವಿತಾಳ ಅಂತ್ಯ ಸಂಸ್ಕಾರ ವಿದ್ಯುತ್ ಚಿತಾಗಾರಗಳಲ್ಲಿ ನೆಡೆದಿದ್ದರಿಂದ.. ರುದ್ರಭೂಮಿಯವ ಒಂದು ಮಡಿಕೆಯಲ್ಲಿ ತುಂಬಿಕೊಟ್ಟಿದ್ದನ್ನು ಶ್ರದ್ಧಾ ಭಕ್ತಿಯಿಂದ ಸಂಚಯನ ಕಾರ್ಯ ಮಾಡಿದ್ದೆವು... ಆದರೆ ಅಮ್ಮನ ದೇಹದ ಅಂತ್ಯಸಂಸ್ಕಾರ ಕಟ್ಟಿಗೆಗಳ ನಡುವೆ ಚಿತೆಯಾಗಿ ಬೆಂದಿದ್ದು .. ನಂತರದ ದೃಶ್ಯ ಮನಕಲಕುವಂತೆ ಕಣ್ಣ ಮುಂದೆ ನೆಡೆದಿತ್ತು.. 

ಅಲ್ಲಿಯವರೆಗೂ ಅಸ್ಥಿ ಸಂಚಯನ ಅಂದರೆ.. ಸಿನೆಮಾಗಳಲ್ಲಿ ತೋರಿಸುವ ಹಾಗೆ ಬರಿ ಬೂದಿಯನ್ನು ಪುಣ್ಯ ಕ್ಷೇತ್ರಗಳಲ್ಲಿ ನದಿ ನೀರಿಗೆ ಸೇರಿಸಬೇಕು ಎಂದು ತಿಳಿದಿದ್ದ ನನಗೆ.. ತಾಯಿ ಲೀನವಾದ ಮೂರನೇ ದಿನ ರುದ್ರಭೂಮಿಯಲ್ಲಿ ಅಸ್ಥಿಗಳನ್ನು ನಮ್ಮ ಕೈಯಾರೆ ಮಡಿಕೆಯಲ್ಲಿ ತುಂಬುತ್ತಿದ್ದದ್ದು ಒಂದು ರೀತಿಯ ಅನನ್ಯ ಅನುಭವ. 

ಪ್ರತಿಯೊಂದು ಅಸ್ಥಿಯನ್ನು ಹೆಕ್ಕುವಾಗ ಅಮ್ಮನ ದನಿ "ಕಂದಮ್ಮಗಳ ನನ್ನ ಉಳಿದ ಭಾಗಗಳನ್ನು ನಿಧಾನವಾಗಿ ಎತ್ತಿಕೊಳ್ಳಿ.. ಬಿಸಿ ಇರುತ್ತೆ.. ಅಸ್ಥಿಯ ಚೂಪಾದ ಭಾಗ ಕೈಗೆ ಚುಚ್ಚಬಹುದು.. ಮೆಲ್ಲನೆ ಆರಿಸಿಕೊಳ್ಳಿ ಧಾವಂತ ಬೇಡ" ಎಂದು ಹೇಳಿದ ಹಾಗೆ ಭಾಸವಾಯಿತು.. 

ರುದ್ರಭೂಮಿಯಲ್ಲಿ ನೆಡೆಯಬೇಕಿದ್ದ ಪೂಜಾ ವಿಧಾನಗಳನ್ನು ಗುರುಗಳು ಸಂಯಮದಿಂದ ಮಾಡಿಸಿದರು.. ಹಾಗೆಯೇ ತುಸು ಅರ್ಥ ವಿಸ್ತಾರವನ್ನು ಹೇಳಿದರು.. ಮನಸ್ಸಿನ ಕಡಲಿಗೆ ಸಮಾಧಾನದ ಅಲೆಗಳು ಬಡಿಯುತ್ತಿದ್ದವು.. 

ಜೀವನ ಬದುಕಿದಾಗ ಮಾತ್ರವಲ್ಲ.. ಆಳಿದ ಮೇಲೆಯೂ ಜೀವನ ಇರುತ್ತದೆ.. ಇದು ನನ್ನ ಅಭಿಪ್ರಾಯ.. ಇರೋತನಕ ಚೆನ್ನಾಗಿ ನೋಡಿಕೊಂಡು ಅಂತ್ಯ ಸಂಸ್ಕಾರವನ್ನು ಅಷ್ಟೇ ಶ್ರದ್ದೆಯಿಂದ ನೆರವೇರಿಸಿದಾಗ ಮನಸ್ಸಿಗೆ ನೆಮ್ಮದಿ.. 

ಅಮ್ಮ ಚಿಕ್ಕವರಾಗಿದ್ದಾಗ ಕಿತ್ತಾನೆಯಲ್ಲಿ ಹಿರಿಯರೊಬ್ಬರ ಸಾವಿನ ನಂತರ ಕೇಳಿದ್ದ ಗರುಡ ಪುರಾಣದಲ್ಲಿನ ಕೆಲವು ಘಟನೆಗಳನ್ನು ನನಗೆ ಆಗಾಗ ಹೇಳುತ್ತಿದ್ದರು.. ವೈತರಣೀ ನದಿಯನ್ನು ದಾಟಿಕೊಂಡು ಬಿರು ಬಿಸಿಲ ಮರಳುಗಾಡಿನಲ್ಲಿ ಹೋಗುವಾಗ.. ಯಮಕಿಂಕಕರು ಎಳೆದೊಯ್ಯುವ ಜೀವಿಯನ್ನು ಕೇಳುತ್ತಾರಂತೆ.. ನಿನ್ನ ಮಕ್ಕಳು ನಿನಗೆ ಬಾಯಾರಿಕೆಗೆ ನೀರು ಕೊಟ್ಟಿದ್ದಾರೆಯೇ... ಬಿಸಿಲು ಎಂದು ಛತ್ರಿ ಕೊಟ್ಟಿದ್ದಾರೆಯೇ.. ಸುಡುವ ಕಾಲಿಗೆ ಪಾದರಕ್ಷೆಯನ್ನು ಕೊಟ್ಟಿದ್ದಾರೆಯೇ .. ಊಟಕ್ಕೆ ಪಿಂಡವನ್ನು ಕೊಟ್ಟಿದ್ದಾರೆಯೇ .. ಎಳ್ಳು ನೀರನ್ನು ಕೊಟ್ಟಿದ್ದಾರೆಯೇ... ದಣಿವಾರಿಸಿಕೊಳ್ಳೋಕೆ ಚಾಪೆಯನ್ನು ನೀಡಿದ್ದಾರೆಯೇ.. ಇದಕ್ಕೆಲ್ಲ ಉತ್ತರ ಹೌದು ಎಂದಾದರೆ ನೀವು ಪುಣ್ಯ ಮಾಡಿದ್ದೀರಾ... ಮತ್ತೆ ನಿಮ್ಮ ಪಯಣ ಸುಖಕರವಾಗಿರುತ್ತೆ ಎನ್ನುತ್ತಾ ಪಾಪ ಪುಣ್ಯಗಳ ವಿಶ್ಲೇಷಣೆಗೆ ಯಮಾಲಯಕ್ಕೆ ಕರೆದೊಯ್ಯುತ್ತಾರಂತೆ ... 

ಸಾವಿನ ನಂತರವೂ ಜೀವನವಿದೆ ಎನ್ನುವುದನ್ನು ಗರುಡ ಪುರಾಣ ಓದಿ ತಿಳಿಯಬೇಕು ಎಂದು ಹೇಳಿದ್ದರು.. ಈ ಕುತೂಹಲದ ವಿಚಾರದ ಆಳಕ್ಕೆ ಇಳಿದು.. ಅಪ್ಪ ನಮ್ಮನ್ನು ಬಿಟ್ಟು ಹೋದಾಗ.. ಪುಸ್ತಕದ ಅಂಗಡಿಗಳನ್ನು ತಡಕಾಡಿ ಪ್ರೇತ ಕಾಂಡ ಭಾಗವನ್ನು ತಂದು ಒಬ್ಬನೇ ಓದಿದ್ದೆ.. ಮೈ ಜುಮ್ ಎಂದಿತ್ತು.. 

ಇಂದು ಅಮ್ಮನ ಅಸ್ಥಿ ಸಂಚಯನ ಮಾಡುವಾಗ ಅದೆಲ್ಲಾ ನೆನಪಿಗೆ ಬಂತು.. 

ಅಣ್ಣ ಅಮ್ಮನ ಅಸ್ಥಿಯನ್ನು ಮಡಕೆಯಲ್ಲಿ ಇಟ್ಟುಕೊಂಡು ಪಶ್ಚಿಮವಾಹಿನಿಯ ದಡದಲ್ಲಿ ಕೂತಾಗ.. ಕಣ್ಣು ಮನಸ್ಸು ತುಂಬಿ ಬಂತು..ಕರುನಾಡಿನ ಜೀವನದಿ ತುಂಬಿ ಹರಿಯುತ್ತಿದ್ದಳು... ಅದಕ್ಕೆ ಸರಿ ಸಮಾನವಾಗಿ ನಮ್ಮ ಕಣ್ಣುಗಳು.. ಮನಸ್ಸು ತುಂಬಿ ತುಳುಕುತ್ತಿತ್ತು... 

"ನೋಡಿ ಸರ್.. ಮಡಕೆಯನ್ನು ಭುಜದ ಮೇಲೆ ಇಟ್ಟುಕೊಂಡು.. ಇವರು ತೆಪ್ಪದಲ್ಲಿ ನದಿಯ ಮಧ್ಯಭಾಗಕ್ಕೆ ಕರೆದುಕೊಂಡು ಹೋಗುತ್ತಾರೆ.. ಅಲ್ಲಿ ಸದ್ದು ಮಾಡದ ಹಾಗೆ ಮಡಕೆಯನ್ನು ನೀರಿನಲ್ಲಿ ಮುಳುಗಿಸಿ.. ಆ ಸದ್ದು ನಿಮಗೆ ಕೇಳಿಸದಂತೆ ಕಿವಿ ಮುಚ್ಚಿಕೊಳ್ಳಿ .. ಮತ್ತೆ ಆ ಕಡೆ ತಿರುಗಿ ನೋಡದೆ.. ನಾರಾಯಣ ನಾರಾಯಣ ಎನ್ನುತ್ತಾ ವಾಪಸ್ಸು ಬಂದು ಬಿಡಿ.." ಎಂದರು..

ಹಾಗೆ ಮಾಡಿದೆವು.. 

ಎಪ್ಪತೊಂಭತ್ತು ವಸಂತಗಳು ಈ ಭೂಮಿಯ ಮೇಲೆ ಓಡಾಡಿದ್ದ ನಮ್ಮ ಮನೆಯ ಜೀವನಾಡಿ ಕರುನಾಡಿನ ಜೀವನದಿಯಲ್ಲಿ ಲೀನವಾಗಿ ಹೋದರು.. 

ಅಮ್ಮ ಎನ್ನುವುದು ಜೀವವಲ್ಲ.. ವಸ್ತುವಲ್ಲ.. ಅದೊಂದು ಅದ್ಭುತ ಅನುಭವ.. ಅದ್ಭುತ ಕಡಲು.. ಬಂದಷ್ಟು ಅಲೆಗಳೇ... ಹೆಕ್ಕಿದಷ್ಟು ನೆನಪುಗಳೇ.. 

ಕಿತ್ತಾನೆಯಿಂದ ಶುರುವಾದ ಪಯಣ.. ಹಾಸನ.. ಶಿವಮೊಗ್ಗ.. ಬೆಂಗಳೂರಿನಲ್ಲಿ ಹರಡಿ.. ತನ್ನ ಕಡೆಯ ತಾಣವನ್ನು ಕಂಡುಕೊಂಡಿದ್ದು ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ.. 

                        ಚಿತ್ರಕೃಪೆ ... ಗೂಗಲೇಶ್ವರ

ಅಲ್ಲಿಯ ತನಕ ಅಮ್ಮ  ಅಲ್ಲಿದ್ದಾರೆ.. ಇಲ್ಲಿದ್ದಾರೆ ಎನಿಸುತಿದ್ದ ಮನಸ್ಸಿಗೆ ಬಂದದ್ದು.. ಅಮ್ಮ ಎನ್ನುವ ದೈತ್ಯ ಶಕ್ತಿ ನಮ್ಮೊಳಗೇ ಮೆಲ್ಲನೆ ಪ್ರವೇಶಿಸುತ್ತಿದ್ದಾರೆ ಎಂದು...ಅರಿವಾದ ಕ್ಷಣವದು!

Monday, October 19, 2020

ಅಮ್ಮ ಎನ್ನುವ ದೈತ್ಯ Server ಲಾಗ್ ಆಫ್ ಆದ ದಿನ

ಬರ್ತಾ ಇದ್ದೀನಿ.. ಅಂದ ಅಣ್ಣ.. 

ನಾನೂ ಹೊರಟೆ ಅಂದೇ ನಾನು... 

ಮನೆ ಹತ್ತಿರ ಬೈಕ್ ನಿಲ್ಲಿಸಿ ಲಗುಬಗೆಯಿಂದ ಮನೆಯೊಳಗೇ ಓಡಲು ಶುರು ಮಾಡಿದೆ.. ಮೆಟ್ಟಿಲು ಹತ್ತಿರಾನೇ ಮುರುಳಿ ಕಂಡು ತಲೆ ಅಲ್ಲಾಡಿಸಿದ.. 

ಮನದೊಳಗೆ ಒಂದು ತಂತಿ ಸಣ್ಣಗೆ ಮಿಡಿಯಿತು.. ಏನೋ ಅನಾಹುತವಾಗಿದೆ ಅಂತ ಅರಿವಾಯಿತು.. 

ಭಾರವಾದ ಹೆಜ್ಜೆಗಳಿಂದ ಮೊದಲನೇ ಮಹಡಿಗೆ ಬಂದೆ.. 

ಹೃದಯ ಒಡೆದು ಹೋಗುವಂತಹ ಅಳು.. ಅಕ್ಕ ಆ ರೀತಿ ಎಂದೂ ಅತ್ತಿದ್ದು ನೋಡಿರಲಿಲ್ಲ.. ಕೇಳಿರಲಿಲ್ಲ.. ತಾಯಿಯನ್ನು ತಾಯಿಯಂತೆ  ನೋಡಿಕೊಂಡಿದ್ದ ಅಕ್ಕನ ಮನಸ್ಸು ಅಕ್ಷರಶಃ ಕಣ್ಣೀರಾಗಿ, ಅಳುವಾಗಿ ಹೊರಬರುತ್ತಿತ್ತು.. 

ಅಲ್ಲಿ ನಿಲ್ಲಲಾರದೆ ಕೆಳಗೆ ಆಂಬುಲೆನ್ಸ್ ಬಳಿ ಬಂದೆ.. ಅಲ್ಲಿಂದ ಮೆಲ್ಲಗೆ ಮಂಚದ ಮೇಲೆ ಮಲಗಿಸಲು ಎತ್ತಿ ತರುವಾಗ ಅಮ್ಮನ ಕೈಗಳು ಅಚಾನಕ್ ಚಲನೆ ಬಂದ ಹಾಗೆ ಭಾಸವಾಯಿತು.. 

ಅದೇ ಉತ್ಸಾಹಭರಿತ ಮುಖ.. ಆದರೆ ಅಲ್ಲಿ ಜೀವ ಮಾತ್ರ ಇರಲಿಲ್ಲ.. 

ತಾನು ಇಷ್ಟಪಡುತ್ತಿದ್ದ ಹಿರಿಯರನ್ನು, ಕಿತ್ತಾನೆಯ  ಕಿರಿ ಹಿರಿಯರನ್ನು,  ತನ್ನ ಪತಿರಾಯನನ್ನು, ತನಗೆ ಎರಡನೇ ತಾಯಿ ಎನಿಸಿಕೊಂಡಿದ್ದ ತನ್ನ ಅತ್ತೆಯನ್ನು ಸೇರಲು ಹೊರಟೇಬಿಟ್ಟಿದ್ದರು.. 

ಅಮ್ಮ ಎನ್ನುವ ಪದದ ಅರ್ಥ ನನಗೆ ಅರ್ಥವಾದದ್ದು ಬಾಲ್ಯದಲ್ಲಿ.. ಹೊಟ್ಟೆ ಹಸಿದು, ನೆಲಕ್ಕೆ ಹೊಟ್ಟೆ ತಾಗಿಸಿಕೊಂಡು ಹಸಿವನ್ನು ಮರೆಮಾಚುವ ಪ್ರಯತ್ನ ಮಾಡುತಿದ್ದಾಗ, ಹಸಿದ ಹೊಟ್ಟೆಗೆ ಒಂದಷ್ಟು ತಿಂಡಿ ತರುತ್ತಾರೆ ಎನ್ನುವ ಕಾಯುವಿಕೆಯಲ್ಲಿ.. 

ಸಾಹಸ, ಛಲದ ಜೀವನ, ವಿಧಿಯ ಆಟಕ್ಕೆ ತಲೆಬಾಗದೆ.. ತನ್ನ ಪತಿರಾಯನ ಹೆಗಲಿಗೆ ಹೆಗಲು ಕೊಟ್ಟು ತನ್ನ ನಾಲ್ಕು ಮಕ್ಕಳನ್ನು ಯಾರ ಹಂಗು ಇಲ್ಲದಂತೆ ಬೆಳೆಸಿ.. ತನ್ನ ಅತ್ತೆ ಅರ್ಥಾತ್ ತನ್ನ ಪತಿದೇವರ ಅಮ್ಮನ ಹೇಳಿದಂತೆ.. ನನ್ನ ಮಗನನ್ನು ನನ್ನ ಮೊಮ್ಮಕ್ಕಳನ್ನು ಯಾರ ಮನೆ ಬಾಗಿಲಿಗೂ ಕಳಿಸದೆ ಸಾಕಬೇಕು ಎಂದು ಹೇಳಿದ ಮಾತು.. ವಿಶಾಲೂ ನನ್ನ ಮಗನೂ ಸೇರಿದಂತೆ ನಿನಗೆ ಐದು ಮಕ್ಕಳು..  ಅವರ ಜವಾಬ್ಧಾರಿ ನಿನದು ಎಂದು ಭಾಷೆ ತೆಗೆದುಕೊಂಡಿದ್ದನ್ನು ಅಮ್ಮ ಸದಾ ಹೇಳುತ್ತಿದ್ದರು.. 

ಸಾಹಸ ಎಂದರೇನು, ಬದುಕು ಎಂದರೇನು.. ಇದನ್ನು ನಾ ನೋಡಿ ಕಲಿತದ್ದು ಅಮ್ಮನಿಂದ.. ಜೀವನದಲ್ಲಿ ಕಿರುಚಾಡದೆ, ಕೂಗಾಡದೆ.. ಎಲ್ಲರ ಮುಂದೆ ತಲೆ ಎತ್ತಿ ನಿಲ್ಲುವುದನ್ನು ಕಲಿಸಿದ ಅಮ್ಮ ಎಂದು ಗಗನತಾರೆಯಾಗಿದ್ದಾರೆ.. 

ಚಾಮರಾಜಪೇಟೆಯ ಟಿ ಆರ್ ಮಿಲ್ ರುದ್ರಭೂಮಿಯಲ್ಲಿ ಚಿತೆಯನ್ನು ಸಿದ್ಧಪಡಿಸಿ ಅಂತ್ಯ ಸಂಸ್ಕಾರ ನೆರೆವೇರಿಸಿದೆವು.. ಚಿತೆ ಧಗ ಧಗ ಉರಿಯುತ್ತಿತ್ತು.. ಹಾಗೆ ಉರಿಯುತ್ತಿದ್ದ ಚಿತೆಯನ್ನು ನೋಡುತ್ತಾ  ಸ್ವಲ್ಪ ಹೊತ್ತು ನಿಂತಿದ್ದೆ.. 

ಚಿತೆಯೊಳಗೆ ಮಲಗಿದ್ದ ಅಮ್ಮ.. "ಶ್ರೀಕಾಂತಾ ಇದು ಬೆಂಕಿಯಲ್ಲ.. ನನ್ನ ಬಾಲ್ಯದಿಂದಲೂ ಹತ್ತಿ ಉರಿಯುತ್ತಿರುವ ಉತ್ಸಾಹದ ಜ್ಯೋತಿಯಿದು.. ಈ ಬೆಳಕಿನಲ್ಲಿ ನನ್ನ ಬದುಕನ್ನು ನಿನ್ನ ಅಪ್ಪನ ಜೊತೆ ಹೆಜ್ಜೆ ಹಾಕುತ್ತಾ ಸಾಗಿದೆ.. ಇಂದು ಆ ಜ್ಯೋತಿ ಜ್ವಾಲೆಯಾಗಿ ನನ್ನ ಭೌತಿಕ ಶರೀರವನ್ನು ದಹಿಸುತ್ತಿರಬಹುದು.. ಆದರೆ ಇದು ನನ್ನ ಸುಡುತ್ತಿಲ್ಲ.. ಬದಲಿಗೆ ನಿಮ್ಮ ಜೀವನದ ಹಾದಿಗೆ ಬೆಳಕಾಗಿರುತ್ತದೆ.. 


"ಒಂದೆರಡು ಕಣ್ಣೀರ ಹನಿಗಳು ಜಾರಬಹುದು.. ಆದರೆ ಈ ಜ್ಯೋತಿ ಎಂದಿಗೂ ನಂದಿ ಹೋಗದು.." 

"ನನ್ನ ಆಶೀರ್ವಾದ ಅನುಗ್ರಹ ಸದನದ ಮೇಲೆ ಸದಾ ಇರುತ್ತದೆ.. ನನ್ನ ಎಲ್ಲಾ ಮಕ್ಕಳೂ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದೀರಾ ನಿಮಗೆ ಸದಾ   ಒಳ್ಳೆಯದೇ ಆಗುತ್ತದೆ.. "

ತಲೆ ಎತ್ತಿ ಆಗಸ ನೋಡಿ.. ನಕ್ಷತ್ರದ ಬೆಳಕಲ್ಲಿ ನಾ ಇರುತ್ತೇನೆ ಎಂದು ಹೇಳುತ್ತಾ ಆ ಜ್ಯೋತಿಯಲ್ಲಿ ಜ್ವಾಲೆಯಾಗಿ ಆಗಸಕ್ಕೆ ಸಾಗಿದರು.. !

ಅಮ್ಮ.. ನಿನ್ನ ತ್ಯಾಗಕೆ ಸರಿಸಾಟಿ ಯಾರೂ ಇಲ್ಲ ಎಂದಿತು ಒಂದು ಧ್ವನಿ.. 

ಸಾವಿರ ನದಿಗಳು ಸೇರಿದರೇನು ಸಾಗರಕೆ ಸಮನಾಗುವುದೇನು.. 

ಶತಕೋಟಿ ದೇವರ ಪೂಜಿಸಿದರೇನು ಅಮ್ಮನ ಹರಕೆಗೆ ಸರಿಸಾಟಿಯೇನು.. 

ತಾಯಿಗೆ ಆನಂದ ತಂದರೆ ಸಾಕು ಬೇರೆ ಪೂಜೆ ಏತಕೆ ಬೇಕು.. 

ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ ಬಾಳಲೆ ಬೇಕು ಈ ಮನೆ ಬೆಳಕಾಗಿ!!!!

Sunday, October 11, 2020

ಯಶಸ್ಸಿಗೆ ಇನ್ನೊಂದು ಹೆಸರೇ ವಿಜಯ್...

 ಸಿನೆಮಾಗಳ ಟೈಟಲ್ ಕಾರ್ಡಿನಿಂದ ನೋಡುವ ಆಸೆ ಅರಿವಿಲ್ಲದೆ ಸಣ್ಣ ವಯಸ್ಸಿನಿಂದ ಹತ್ತಿತ್ತು ಟೈಟಲ್ ಕಾರ್ಡಿನಿಂದ ಸಿನಿಮಾ ನೋಡದೆ ಹೋದರೆ ಅದೇನೋ ಕಳೆದುಕೊಂಡ ಅನುಭವ.. ಈಗಲೂ ಅಷ್ಟೇ ಟಿವಿಯಲ್ಲಿಯೇ ಆಗಲಿ ಟಾಕೀಸಿನಲ್ಲಿ ಆಗಲಿ.. ಬಿಳಿ ಪರದೆಯಿಂದ ಬಿಳಿ ಪರದೆಯ ತನಕ ನೋಡಿದರೇನೇ ಸಮಾಧಾನ.. 

ನನ್ನ ಸಿನಿಮಾ ಹುಚ್ಚಿನ ಆರಂಭದ ದಿನಗಳಲ್ಲಿ ಹೀಗೆ ಮನಸೆಳೆದದ್ದು ಪುಟ್ಟಣ್ಣ ಕಣಗಾಲ್, ದೊರೈ ಭಗವಾನ್, ಹುಣುಸೂರು ಕೃಷ್ಣಮೂರ್ತಿ, ಜೊತೆಯಲ್ಲಿ ಇನ್ನೊಂದು ಹೆಸರೇ ವಿಜಯ್... 


ಮೇಲೆ ಹೇಳಿದ ನಿರ್ದೇಶಕರು ಒಬ್ಬರಿಗಿಂತ ಒಬ್ಬರು ಭಿನ್ನ ವಿಭಿನ್ನ.. ಒಬ್ಬರ ಸಿನಿಮಾ ಛಾಯೆ ಇನ್ನೊಬ್ಬರ ಮೇಲೆ ಇರಲಿಲ್ಲ .. 

ವಿಜಯರೆಡ್ಡಿ ಅಂತ ಹೆಸರಿದ್ದರೂ ವಿಜಯ್ ಎಂದೇ ಪ್ರಖ್ಯಾತರಾಗಿದ್ದ ನಿರ್ದೇಶಕರು ಇವರು... ಹೆಸರಲ್ಲಿ ಒಂದು ರೀತಿಯ ನಮ್ಮ ಮನೆಯವರು ಎನ್ನುವಂತಹ ಆತ್ಮೀಯತೆ ಕಾಣುತಿತ್ತು.. 

ಈ ಮಹಾ ನಿರ್ದೇಶಕ ಕನ್ನಡ ಚಿತ್ರರಂಗಕ್ಕೆ ಕೊಟ್ಟ ಅದ್ಭುತ ರತ್ನಗಳು ಅನೇಕಾನೇಕ.. ಸಾಮಾನ್ಯ ಹೇಳುತ್ತಾರೆ ಯಾವುದೇ ಕಲೆ ನಿಧಾನವಾಗಿ ಪ್ರಗತಿಯ ಪಥವೇರುತ್ತದೆ.. ಈ ಮಾತು ನಿಜವಾದರೂ ಈ ಮಹನೀಯರು ಮೊದಲ ಮೆಟ್ಟಿಲಿನಿಂದಲೇ ಯಶಸ್ಸಿನ ತೀವ್ರಗತಿ ಕಂಡವರು. 

ಅಣ್ಣಾವ್ರ ಸಿನಿಮಾಗಳು, ಅಣ್ಣಾವ್ರ ಚಿತ್ರ ತಂಡ ಸೇರುವುದು ಸಾಮಾನ್ಯದ ಮಾತಾಗಿರಲಿಲ್ಲ.. ಚಿನ್ನವನ್ನು ಓರೇ ಹಚ್ಚಿ ನೋಡುವ ದೊಡ್ಡ ತಂಡವೇ ಅಲ್ಲಿತ್ತು.. 

ಅಣ್ಣಾವ್ರು, ಅವರ ತಮ್ಮ ವರದಪ್ಪ, ಪಾರ್ವತಮ್ಮ, ಚಿ ಉದಯಶಂಕರ್.. ಇವರಿಗೆಲ್ಲ ಒಪ್ಪಿಗೆಯಾದರೆ ಮಾತ್ರ ತಂಡದೊಳಗೆ ಪ್ರವೇಶ ಅನ್ನುವಂತಹ ಸ್ಥಿತಿ.. 

ಅಂತಹ ಪರಿಸ್ಥಿತಿಯಲ್ಲಿ ತಮ್ಮ ನಿರ್ದೇಶನದ ನಾಲ್ಕನೇ ಪ್ರಯತ್ನವೇ ಕರುನಾಡಿನ ಮನೆಮಾತಾದ ಗಂಧದ ಗುಡಿ ಎಂದರೆ ಇವರ ಅಗಾಧವಾದ ಪ್ರತಿಭೆಯ ಅರಿವಾಗುತ್ತದೆ.. 

ಬರೋಬ್ಬರಿ ಒಂಭತ್ತು ಅಣ್ಣಾವ್ರ ಚಿತ್ರರತ್ನಗಳನ್ನು ಕೊಟ್ಟ ನಿರ್ದೇಶಕರು ಇವರು.. 

ಗಂಧದ ಗುಡಿ - ಅರಣ್ಯದ ಹಿನ್ನೆಲೆಯ  ಕಳಕಳಿಯ ಚಿತ್ರ 

ಶ್ರೀ ಶ್ರೀನಿವಾಸ ಕಲ್ಯಾಣ - ಪೌರಾಣಿಕ ಚಿತ್ರ 

ಮಯೂರ .. ಐತಿಹಾಸಿಕ ಚಿತ್ರ 

ನಾ ನಿನ್ನ ಮರೆಯಲಾರೆ .. ಸಾಮಾಜಿಕ ಪ್ರೇಮ ಕಥೆ 

ಬಡವರ ಬಂಧು .. ಸಾಮಾಜಿಕ ತಂದೆ ಮಗನ ಸಂಬಂಧದ ಚಿತ್ರ 

ಸನಾದಿ ಅಪ್ಪಣ್ಣ .. ಸಂಗೀತ ಕಲಾವಿದನ ಅದ್ಭುತ ಚಿತ್ರಣ 

ಹುಲಿಯ ಹಾಲಿನ ಮೇವು .. ಕೊಡಗಿನ ವೀರನ ಕಥಾನಕ 

ನೀ ನನ್ನ ಗೆಲ್ಲಲಾರೆ .. ಗೆದ್ದು ಸಾಧಿಸುವ ಸಾಮಾಜಿಕ ಕಥಾನಕ 

ಭಕ್ತ ಪ್ರಹ್ಲಾದ .. ಪೌರಾಣಿಕ ಚಿತ್ರ 

ಪ್ರತಿಯೊಂದು ಚಿತ್ರವೂ ವಿಭಿನ್ನ.. ಅಣ್ಣಾವ್ರ ಬಹುಮುಖ ಪ್ರತಿಭೆಯನ್ನು ಇನ್ನಷ್ಟು ಹೊಳಪಿಗೆ ತಂದ ಚಿತ್ರಗಳಿವು. 

ತೆಲುಗು ಮಾತೃಭಾಷೆಯಾದರೂ ಕನ್ನಡಲ್ಲಿ ಸುಮಾರು ನಲವತ್ತಕ್ಕೂ ಹೆಚ್ಚಿನ ಚಿತ್ರಗಳನ್ನು ನಿರ್ದೇಶಿಸಿದರು. ಶಂಕರ್  ನಾಗ್ ಅವರಿಗೆ ಮರು ಜೀವ ಕೊಟ್ಟ ಚಿತ್ರ ಆಟೋ ರಾಜ, ವಿಷ್ಣುವಿನ ಸಾಹಸದ ಮಜಲಿಗೆ ಇನ್ನಷ್ಟು ಹೊಳಪು ಕೊಟ್ಟ ವೀರಾಧಿವೀರ, ದೇವಾ, ಅಂಬಿಗೆ ರೆಬೆಲ್ ಇಮೇಜ್ ಬರುವಂತೆ ಮಾಡಿದ ಅನೇಕ ಚಿತ್ರಗಳಲ್ಲಿ ಖದೀಮ ಕಳ್ಳರು ಕೂಡ ಒಂದು.. ಹಾಗೆ ದೆವ್ವ ಭೂತದ ಕಾಡುವ ಕತೆಯನ್ನು, ದೆವ್ವದ ಶಕ್ತಿಯ ಮೇಲೆ ದೇವರ ಶಕ್ತಿ ಗೆಲ್ಲುವ ಅನಂತ್ ನಾಗ್ ಅವರ ನಾ ನಿನ್ನ ಬಿಡಲಾರೆ.. ಎಲ್ಲವೂ ಸುಂದರ .. ಪ್ರಭಾಕರ್... ಹೊಸ ಪೀಳಿಗೆಯ ಚರಣ್ ರಾಜ್, ಹೀಗೆ ಅನೇಕ ನಟ ನಟಿಯರಿಗೆ ಹೊಸ ಚಿತ್ರ ಬದುಕು ಕೊಟ್ಟವರು.. 


ಇವರ ಮೊದಲ ಸಿನೆಮಾದಿಂದ ಕಡೆಯ ಸಿನೆಮಾದವರೆಗೂ ಹಾಡುಗಳು, ಮತ್ತು ಚಿತ್ರ ಸಂಗೀತ ಅಸಾಧಾರಣವಾಗಿತ್ತು.. ಅದ್ಭುತ ಯಶಸ್ಸಿಗೆ ಹಾಡುಗಳು ಎಷ್ಟು ಕಾರಣವೋ.. ಹಾಗೆ ಅಶ್ಲೀಲತೆ ಇಲ್ಲದೆ ಮನೆ ಮಂದಿಯೆಲ್ಲಾ ಕೂತು ನೋಡಬಹುದಾದ ಚಿತ್ರಗಳನ್ನು ಕೊಟ್ಟಿದ್ದು ಇವರ ಹೆಗ್ಗಳಿಕೆ. 

ನನಗರಿವಿಲ್ಲದೆ ಇಂದಿನ ಶುಭನುಡಿಯನ್ನು ಇವರ ನಿರ್ದೇಶಕನ ಪ್ರತಿಭೆಗೆ ಅರ್ಪಿಸಿದೆ. 

ಕತೆ..ಚಿತ್ರಕತೆ..ಸಂಭಾಷಣೆ..ಸಾಹಿತ್ಯ.. ಹೀಗೆ ಹಲವಾರು ವಿಭಾಗಗಳಲ್ಲಿ ಕೆಲಸ ಮಾಡಿಕೊಡುತ್ತಾರೆ...ಇವರನ್ನೆಲ್ಲಾ ಸರಿಯಾಗಿ ತೂಗಿಸಿಕೊಂಡು ತನ್ನ ಕಲ್ಪನಾ ಶಕ್ತಿ ಮತ್ತು ಕ್ರಿಯಾತ್ಮಕ ಕಲೆಯನ್ನು ಉಪಯೋಗಿಸಿಕೊಂಡು ಉತ್ತಮ ಚಿತ್ರ ನಿರೂಪಿಸುವುದು ನಿರ್ದೇಶಕನ ಕೆಲಸ!

ನಮ್ಮ ಬದುಕಿನ ನಿರ್ದೇಶಕರು ನಾವೇ!

ಶುಭದಿನ!

ನಂತರ ನನ್ನ ನೆಚ್ಚಿನ ಸಹೋದರ ಸತೀಶ್ ಕನ್ನಡಿಗ ಸಂದೇಶ ಕಳಿಸಿದರು.. ಅಣ್ಣ ನಿರ್ದೇಶಕ ವಿಜಯ್ ಅವರ ಬಗ್ಗೆ ಒಂದು ಲೇಖನ ಬರಲಿ.. ನಿಮ್ಮ ಬರವಣಿಗೆಯಲ್ಲಿ ಅವರನ್ನು ಕಾಣುವ ಆಸೆ ಅಂತ.. 

ಆ ಹರಿವಿನಲ್ಲಿಯೇ ಮೂಡಿಬಂದದ್ದು ಈ ಲೇಖನ.. 

ನಿರ್ದೇಶಕ ವಿಜಯ್ ಅವರ ಎಕ್ಸಿಟ್ ನಿಂದ ಕನ್ನಡ ಚಿತ್ರರಂಗ ಬಡವಾಗಿದೆ, ತುಂಬಲಾರದ ನಷ್ಟ ಎಂಬ ಸವಕಲು ಮಾತುಗಳನ್ನು ಹೇಳೋಕೆ ಇಷ್ಟಪಡೋಲ್ಲ.. 

ಅವರು ತಮ್ಮ ಪ್ರತಿಭೆಯನ್ನೆಲ್ಲಾ ಧಾರೆಯೆರೆದು ಚಿತ್ರಗಳನ್ನು ಕೊಟ್ಟಿದ್ದಾರೆ, ಅದನ್ನು ನೋಡಿ ಆನಂದಿಸಿವುದೇ ನಮ್ಮ ಕೆಲಸ.. ಮತ್ತು ಅದೇ ಅವರನ್ನು ಸದಾ ನೆನಪಿಸಿಕೊಳ್ಳುವಂತೆ ಮಾಡುವುದು.. 

ವಿಜಯ್ ಸರ್.. ನೀವು ಕೊಟ್ಟ ಚಿತ್ರಗಳು ಅದ್ಭುತ,ಅಮೋಘ .... ಪ್ರತಿ ಚಿತ್ರದಲ್ಲೂ ನೀವು ಜೀವಂತವಾಗಿದ್ದೀರಾ.. 

ಭಕ್ತ ಅಂಬರೀಷ ಅಣ್ಣಾವ್ರ ನಟನೆಯಲ್ಲಿ ನಿಮ್ಮ ನಿರ್ದೇಶನದಲ್ಲಿ ಮೂಡಿ ಬಂದಿದ್ದರೆ ಖಂಡಿತ ಅದೊಂದು ಅದ್ಭುತ ಚಿತ್ರವಾಗುತ್ತಿತ್ತು.. ಆದರೆ ಅಣ್ಣಾವ್ರ ಮಂಡಿ ನೋವು.. ಹಾಗೂ ಸಾಹಿತ್ಯ ರತ್ನ ಚಿ ಉದಯಶಂಕರ್ ಅವರ ಅನುಪಸ್ಥಿತಿ ಈ ಚಿತ್ರವನ್ನು ಮೇಲೆತ್ತಲು ಸಾಧ್ಯವಿಲ್ಲ ಎನ್ನುವ ಸತ್ಯ ಬಹುಶಃ ಆ ದೇವರಿಗೂ ಅರಿವಾಗಿ ಚಿತ್ರೀಕರಣವಾಗಲೇ ಇಲ್ಲ ಅನ್ನಿಸುತ್ತದೆ .. 


ಇರಲಿ ಕತೆಯನ್ನು ಹೊಳಪಾಗುವಂತೆ ಮಾಡುವ ವರದಪ್ಪ, ಸಾಹಿತ್ಯವನ್ನು ಕೊಡುವ ಚಿ ಉದಯಶಂಕರ್, ಸಂಗೀತವನ್ನು ವಿಜೃಂಭಿಸುವಂತೆ ಮಾಡುವ ಎಂ ರಂಗರಾವ್,  ಟಿಜಿ ಲಿಂಗಪ್ಪ, ಛಾಯಾಗ್ರಾಹಕ ಎಸ್ ವಿ ಶ್ರೀಕಾಂತ್ ಅಲ್ಲೇ ಇದ್ದಾರೆ.. ಇವರೆಲ್ಲ ಜೊತೆಯಲ್ಲಿ ನಿರ್ಮಾಪಕಿ ಪಾರ್ವತಮ್ಮನವರು ಇದ್ದಾರೆ.. ಖಂಡಿತ ಒಂದು ಒಳ್ಳೆ ಚಿತ್ರವನ್ನು ಅಲ್ಲಿ ಚಿತ್ರೀಕರಿಸಿ ತೆರೆಗೆ ತನ್ನಿ.. !

ನಿಮ್ಮ ಹೆಸರು ಮತ್ತು ಚಿತ್ರಗಳು ಸದಾ ಹಸಿರು... !!!