Wednesday, September 12, 2018

ನಾನು ನನ್ನ ಪರ್ಪಲ್ ರೈನ್ ಕೋಟ್... !

​"ಆ ಕಣಿವೆಯ ತುದಿಯಲ್ಲಿದ್ದಾನಂತೆ ಜಾದೂಗಾರ
ನೊಂದ ಹೃದಯಕೆ ಮುಲಾಮು ಹಚ್ಚುವ ಕನಸುಗಾರ
ಕನಸಿನಾ ಮೊಗ್ಗಲು ಮಗಚುವಾಗ ನೆನಪಾದ ಅವನಂದು
ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ಹುಡುಕಿ ಹೊರಟೆವು ನಾವಿಂದು
ನಾನು ನನ್ನ ಪರ್ಪಲ್ ರೈನ್ ಕೋಟ್"

ಕೈಯಲ್ಲಿದ್ದ ಆ ಚೀಟಿಯನ್ನು ಮತ್ತೊಮೆ ಓದಿಕೊಂಡಳು ಅರ್ಪಿತಾ.. ಕುಳಿರ್ಗಾಳಿ.. ಕತ್ತಿಗೆ ಸುತ್ತಿದ್ದ ಮಫ್ಲರ್ ಚಳಿಯನ್ನು ಸ್ವಲ್ಪ ಮಟ್ಟಿಗೆ ಕಮ್ಮಿ ಮಾಡಿತ್ತಾದರೂ ಆ ಪರ್ವತದ ತಪ್ಪಲಿನ ನಿತ್ಯ ಹರಿದ್ವರ್ಣ ಕಾಡಿನ ಆ ಪುಟ್ಟ ಹಳ್ಳಿಯಲ್ಲಿ ಚಳಿ ಅಂದರೆ ಮೈಮೂಳೆಯನ್ನು ಕೊರೆಯುವಷ್ಟು ..

ಬೆಳಿಗ್ಗೆ ಹತ್ತು ಘಂಟೆಯಾಗಿದ್ದರೂ ದಿನಕರ ಇವತ್ತು ರಜಾ ಎನ್ನುವಂತೆ ಇಣುಕಿಯೇ ಇರಲಿಲ್ಲ.. ಇಡೀ ರಾತ್ರಿ ಸುರಿದ ಮಳೆಯಿಂದ ಮಣ್ಣಿನ ವಾಸನೆ ಘಮ್ ಎನ್ನುತ್ತಿತ್ತು... ಮರಗಿಡಗಳ ಎಲೆಗಳ ತುದಿಯಿಂದ ಬೀಳುತ್ತಿದ್ದ ಹನಿಗಳು ಸುಂದರವಾಗಿ ಕಾಣುತ್ತಿದ್ದವು ಜೊತೆಯಲ್ಲಿ ಒದ್ದೆಯಾದ ಎಲೆಗಳ ಭಾರವಾಗಿ ಬೀಳುವಾಗ ಮೂಡಿಸುತ್ತಿದ್ದ ಸದ್ದು ಕಿವಿಗೆ ಆಪ್ತವಾಗಿರುತ್ತಿತ್ತು..
ಚಿತ್ರ ಕೃಪೆ : ಗೂಗಲೇಶ್ವರ 

ಅರ್ಪಿತಾ ಕೈಯಲ್ಲಿದ್ದ ವಾಚ್ ನೋಡಿಕೊಂಡಳು ಹತ್ತೂವರೆಯಾಗಿತ್ತು.. ಸಮಯ ಕಳೆಯಲು ಕೈಯಲ್ಲಿದ್ದ ಕ್ಯಾಮೆರಾ ಹಿಡಿದು ಆ ನೀರಿನ ಬಿಂದುಗಳನ್ನು ಸೆರೆಹಿಡಿಯತೊಡಗಿದಳು ..ಫೋಟೋಗ್ರಫಿ ಅಂದರೆ ಹುಚ್ಚು.. ಎಂಥಹ ಪರಿಸ್ಥಿತಿಯಲ್ಲಿಯೂ ಕೈಗೆ ಕ್ಯಾಮೆರಾ ಕೊಟ್ಟರೆ ಸಾಕು.. ಜಾದೂ ಮಾಡಿಸುತ್ತಿದ್ದಳು ಅವಳು.. ಸುತ್ತಮುತ್ತಲಿನ ಪರಿಸರ ಅವಳಿಗೆ ಹುಚ್ಚೇ ಹಿಡಿಸುತ್ತಿತ್ತು.. ತನ್ನ ಮನು ಬರುವುದು ಇನ್ನೂ ಸ್ವಲ್ಪ ತಡವಾಗುತ್ತೆ ಎನ್ನುವ ವಾಟ್ಸಾಪ್ ಸಂದೇಶ ಕೊಂಚ ಬೇಸರ  ತಂದಿದ್ದರೂ.. ಕೈಯಲ್ಲಿದ್ದ ಕ್ಯಾಮೆರಾ ಅವಳಿಗೆ ಬೋರ್ ಆಗುವುದನ್ನು ತಡೆದಿತ್ತು.. ಮ್ಯಾಕ್ರೋ, ಮೈಕ್ರೋ ಎಲ್ಲವೂ ಮುಗಿದಿತ್ತು ..ಆಗಲೇ ೮ ಜಿಬಿ ಕಾರ್ಡ್ ತಿಂದಾಗಿತ್ತು ಆ ಫೋಟೋಗಳು..
ಚಿತ್ರಕೃಪೆ : ಗೂಗಲೇಶ್ವರ 
ಊರಿನಲ್ಲಿ ಚಿರಪರಿಚಿತರಾಗಿದ್ದರಿಂದ ಮತ್ತು ಎಲ್ಲರ ಕಣ್ಣಿನ ಬೊಂಬೆಯಾಗಿದ್ದರಿಂದ ಅರ್ಪಿತಾಳಿಗೆ ಪರಿಚಿತರು ನಕ್ಕು ನಮಸ್ಕಾರ ಹೊಡೆಯುವುದು. .ಹಾಯ್ ಎನ್ನುವುದು ನೆಡೆದಿತ್ತು.. ಇವಳ ಬುದ್ದಿಮತ್ತೆ ಮತ್ತು ಕಲಾವಿದ ಹೃದಯಕ್ಕೆ ಮಾರು ಹೋಗಿದ್ದ ಅವಳ ಊರಿನ ಜನ.. ಅವಳಿಗೆ ಕಲಾ ಸರಸ್ವತಿ ಎಂದು ಬಿರುದನ್ನೂ ಅನಧಿಕೃತವಾಗಿ ಕೊಟ್ಟಿದ್ದರು.

ಫೇಮ್ ಫೇಮ್.. ಬುಲೆಟ್ ಬೈಕಿನ ವಿಚಿತ್ರ ಹಾರ್ನ್ ಮತ್ತು ಆ ಸದ್ದಿಗೆ ಮತ್ತೆ ರಸ್ತೆಗೆ ಬಂದು ನಿಂತಿದ್ದಳು ಅರ್ಪಿತಾ.. ಮನು ಇವಳಿಗೆ ಇಷ್ಟವಾದ  ಬಿಸ್ಕತ್ ಬಣ್ಣದ ಟೀ ಶರ್ಟ್ ಮತ್ತು ಕಡು ನೀಲಿ ಬಣ್ಣದ ಜೀನ್ಸ್ ತೊಟ್ಟಿದ್ದ .. ಮತ್ತೆ ಕಂದು ಬಣ್ಣದ ಕನ್ನಡಕದಲ್ಲಿ ಸೊಗಸಾಗಿ ಕಾಣುತ್ತಿದ್ದ.. ಬಂದವನೇ ಒಂದು ಹಗ್ ಕೊಟ್ಟು.. ಕಮಾನ್ ಅಂದ.. ಹುಸಿಮುನಿಸು ತೋರುತ್ತ ಅವನ ಹೆಲ್ಮೆಟ್ ಹಾಕಿದ ತಲೆಗೆ ಒಂದು ಪಟ್ ಅಂತ ಏಟು ಕೊಟ್ಟು.. ಬೈಕ್ ಏರಿದಳು..

"ಸರಿಯಾಗಿ ಗೊತ್ತು ತಾನೇ.. ಸುಮ್ಮನೆ ಅಲೆಸಬೇಡ"

"ಗೊತ್ತು ಕಣೋ... ನಾ ಸ್ಕೆಚ್ ಹಾಕಿದ್ದೀನಿ ಅಂದರೆ ಅದು ಪಕ್ಕಾ ಇರುತ್ತೆ.. ತಲೆ ಕೆಡಿಸಿಕೊಳ್ಳಬೇಡ.. ಹೊಡಿ ಗಾಡಿ"

ಮನು ಮತ್ತು ಅರ್ಪಿತಾ ಬಾಲ್ಯದ ದಿನಗಳಿಂದ ಒಡನಾಟವಿದ್ದವರು.. ಇಬ್ಬರಿಗೂ ಸಮಾನ ಅಭಿರುಚಿ ಇತ್ತು... ಊಟ ತಿಂಡಿ... ಉಡುಗೆ ತೊಡುಗೆ.. ಛಾಯಾಗ್ರಹಣ.. ಟ್ರೆಕಿಂಗ್. ಪ್ರವಾಸ ಯಾವುದು ಹೆಚ್ಚಿರಲಿಲ್ಲ ಕಡಿಮೆ ಇರಲಿಲ್ಲ.. ಅಕ್ಕಸಾಲಿಗನ ತಕ್ಕಡಿಯಲ್ಲಿ ಏರುಪೇರಾಗುತ್ತಿತ್ತೇನೋ ಆದರೆ ಇವರ ಅಭಿರುಚಿಗಳಲ್ಲಿ ಒಂದಷ್ಟು ವ್ಯತ್ಯಾಸವಿರಲಿಲ್ಲ..

ಮನೆಯವರಿಗೂ ಇವರಿಬ್ಬರ ಬಗ್ಗೆ ಗೊತ್ತಿದ್ದರಿಂದ.. ಇವರ ಸ್ವಾತಂತ್ರ್ಯಕ್ಕೆ ಅಡ್ಡಿ ಇರಲಿಲ್ಲ.. ಇಬ್ಬರೂ ತಮ್ಮ ತಮ್ಮ ಇತಿಮಿತಿಗಳಲ್ಲಿ ಜೊತೆಯಾಗಿದ್ದರು..

ಒಮ್ಮೆ ಹೀಗೆ ಮಳೆಯಲ್ಲಿ ಫೋಟೋ ತೆಗೆಯಲು ಇಬ್ಬರೂ ಹೋಗಿದ್ದರು.. ಬರುವಾಗ ಒಂದು ತಿರುವಿನ ಬಳಿ ಮಳೆ ನಿಲ್ಲಲು ಕಾಯುತ್ತಾ ನಿಂತಿದ್ದರು.. ಹೊಟ್ಟೆ ಹಸಿಯುತ್ತಿತ್ತು.. ಬೋಂಡಾದ ಪರಿಮಳ ಕೈಬೀಸಿ ಕರೆದು.. ಇನ್ನಷ್ಟು ಹಸಿವನ್ನು ಹೆಚ್ಚು ಮಾಡಿತ್ತು.. ಅಂಗಡಿಯವ ಮಾಡಿದ್ದ ಬಿಸಿ ಬಿಸಿ ಆಲೂ ಬೋಂಡಾ. ಮೆಣಸಿನಕಾಯಿ ಬೋಂಡಾ.. ಆಂಬೊಡೆ ಎಲ್ಲವನ್ನು ಇಬ್ಬರೂ ಸರಿಯಾಗಿ ಮೇಯುತ್ತಿದ್ದರು.. ಅಲ್ಲಿಂದ ಇನ್ನೂ ೨೦ ಕಿಮಿ ಸಾಗಿ ಗುಡ್ಡದ ಮೇಲಿಂದ ಫೋಟೋ ತೆಗೆಯುವ ಕಾರ್ಯಕ್ರಮ ಇದ್ದದರಿಂದ ಮತ್ತು ಮತ್ತೆ ಹೊಟ್ಟೆಗೆ ಕಾಡಬಾರದು ಎಂದು.. ಒಂದಷ್ಟು ಬೋಂಡಗಳನ್ನು ಕಟ್ಟಿಸಿಕೊಂಡು ಹೊರಟರು..

ಗುಡ್ಡ ತಲುಪಿ.. ಚಿತ್ರಗಳನ್ನು ತೆಗೆದು.. ಇಬ್ಬರೂ ತಮ್ಮ ತಮ್ಮ ಕ್ಯಾಮೆರಾಗಳಲ್ಲಿ ಒಮ್ಮೆ ನೋಡಿ.. "ಅರ್ಪಿ ಅದು ಹೀಗೆ ಇರಬೇಕಿತ್ತು ಕಣೆ.. ಮನು ಇಲ್ಲ ಕಣೋ.. ಈ ಆಂಗಲ್ ತುಂಬಾ ಚೆನ್ನಾಗಿದೆ.. ನಿನ್ನ ಕೈಚಳಕ ಸೂಪರ್ ಕಣೋ .. ಅರ್ಪಿ ವಾಹ್ ಎಷ್ಟು ಚೆನ್ನಾಗಿದೆಯೇ ಈ ಚಿತ್ರ .. ಸೂಪರ್ ಕಣೆ.. ನಿನ್ನ ಕಣ್ಣುಗಳು ಮಾತ್ರವಲ್ಲ ನೀ ಕಣ್ಣಿನ ಮೂಲಕ ನೋಡುವ ದೃಶ್ಯವೂ ಸೂಪರ್ ಆಗಿ ಕಾಣುತ್ತೆ..ಬೊಂಬಾಟ್ ಕಣೆ.. " ಹೀಗೆ ಒಬ್ಬರಿಗೊಬ್ಬರು ಶಭಾಷ್ ಗಿರಿ ಕೊಡುತ್ತಾ.. ಫೋಟೋಗಳನ್ನು ಆನಂದಿಸುತ್ತಿದ್ದರು.. ಆಗಲೇ ಸಂಜೆ ೪ ಆಗಿತ್ತು.. ಸೂರ್ಯ ಮುಳುಗುವ ಲಕ್ಷಣ ತೋರುತ್ತಿದ್ದ.. ಕಾರಣ ಚಳಿಗಾಲದ ಹೊತ್ತು. ಭಾಸ್ಕರ ಕೂಡ ಮನೆಗೆ ಬೇಗನೆ ಹೋಗಬೇಕಲ್ಲವೇ.. :-)..

"ಅರ್ಪಿ ಬೋಂಡಾ ತೆಗೆ.. ತಿನ್ನೋಣ.. ತಿಂದು ನೀರು ಕುಡಿದು ಹೊರಡೋಣ ಕಣೆ.. "

ಅಂಗಡಿಯವ ಕೊಟ್ಟಿದ್ದ ಬೋಂಡಾದ ಪೊಟ್ಟಣ ತೆಗೆದು ತಿನ್ನತೊಡಗಿದರು.. ಆ ಚಳಿಗೆ.. ಈ ಸ್ವಲ್ಪ ಬೆಚ್ಚಗಿನ ಖಾರವಾಗಿದ್ದ ಬೋಂಡಗಳು.. . ಚಳಿಯನ್ನು ದೂರವಿಟ್ಟಿತ್ತು.. ತಿನ್ನುತ್ತಾ ತಿನ್ನುತ್ತಾ ಅರ್ಪಿತಾ ಯಾಕೋ ಆ ಪೊಟ್ಟಣದ ಕಾಗದ ನೋಡಿದಳು ಅವಳ ಕಣ್ಣುಗಳು ಅರಳಿದವು..  ..ಓದುತ್ತಾ ಓದುತ್ತಾ ಹೋದ ಹಾಗೆ ಅವಳ ಪುಟ್ಟ ತಲೆಯೊಳಗೆ ರೈಲು  ಓಡತೊಡಗಿತು.. ಅವಳಿಗೆ ಸಂತಸ ತಡೆಯಲಾಗದೆ ಪಕ್ಕದಲ್ಲೇ ಇದ್ದ ಮನುವನ್ನು ಒಂದು ಮೈಲಿ ಕೇಳುವ ಹಾಗೆ..

"ಮನು .. ಇಲ್ಲಿ ಬಾರೋ  ... ನೋಡು ಇದು.. ಸೂಪರ್ ಆಗಿದೆ ಆಲ್ವಾ"
"ಒಯೆ ನಾ ಇಲ್ಲಿಯೇ ಇದ್ದೀನಿ ಅದ್ಯಾಕೆ ಹಂಗೆ ಕಿರುಚಿದೆ.. ಏನಿದೆ.. ?"
"ನೋಡು ನೋಡು.. " ಫುಲ್ ಖುಷಿಯಿಂದ ಆ ಬೋಂಡಾದ ಪೊಟ್ಟಣದ ಹಾಳೆಯನ್ನು ಕೊಟ್ಟಳು..

​"ಆ ಕಣಿವೆಯ ತುದಿಯಲ್ಲಿದ್ದಾನಂತೆ ಜಾದೂಗಾರ
ನೊಂದ ಹೃದಯಕೆ ಮುಲಾಮು ಹಚ್ಚುವ ಕನಸುಗಾರ
ಕನಸಿನಾ ಮೊಗ್ಗಲು ಮಗಚುವಾಗ ನೆನಪಾದ ಅವನಂದು
ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ಹುಡುಕಿ ಹೊರಟೆವು ನಾವಿಂದು
ನಾನು ನನ್ನ ಪರ್ಪಲ್ ರೈನ್ ಕೋಟ್"

ತುಸು ಜೋರಾಗಿಯೇ ಆ ಕಾಗದದಲ್ಲಿದ್ದ ಬರಹವನ್ನು ಓದಿದ.. ಅವನಿಗೆ ಸಾಮಾನ್ಯ ಅನಿಸಿತು.. ಯಾವನೋ ಅಥವಾ ಯಾವಳೋ ಕಾಲೇಜು ಹುಡುಗ/ಹುಡುಗಿಗೆ ಗೀಚಿದ ಒಂದು ಪುಟ್ಟ ಕವಿತೆ ಅನ್ನಿಸುವ ಹಾಗಿತ್ತು .. ಇದರಲ್ಲಿ ಅಂತಹ ವಿಶೇಷತೆ ಅಥವಾ ಅರ್ಪಿತಾ ಕಿರುಚಿದ ಹಾಗೆ ಏನೋ ಇದೆ ಅನ್ನಿಸಲಿಲ್ಲ..

"ಅರ್ಪಿ ಇದು ಕವಿತೆ ಕಣೆ ಚೆನ್ನಾಗಿದೆ.. "

"ಮನು.. ಈ ಕವಿತೆಯನ್ನು ಬರೆದವನ ಹೆಸರು ನೋಡು.. ಬರೆದ ದಿನಾಂಕ ನೋಡು.. ಜೊತೆಯಲ್ಲಿ ಇವುಗಳನ್ನು ಸೇರಿಸಿಕೊಂಡು ಮತ್ತೆ ಓದು ಇನ್ನೊಮ್ಮೆ ಪ್ಲೀಸ್.. "

ಇವಳ ಕಾಟ ತಡೆಯಲಾಗದೆ ಮತ್ತೆ ಅವಳು ಹೇಳಿದ ಹಾಗೆ ಓಡತೊಡಗಿದ.. ಮತ್ತೆ ಮತ್ತೆ ಓದಿದ.. ಕಣ್ಣುಗಳು ಅರಳಲು ಶುರುವಾಯಿತು.. "ಅರ್ಪಿ.. ಹೌದು ಕಣೆ.. ಏನೋ ಇದೆ ಇದರಲ್ಲಿ.. "

ಮತ್ತೆ ಮತ್ತೆ ಆ ಕವಿತೆಯನ್ನು ಜೋರಾಗಿ ಓದಿದ.. ಸುತ್ತಲೂ ಯಾರೂ ಇಲ್ಲದ್ದರಿಂದ.. ಏನೂ ತೊಂದರೆ ಇರಲಿಲ್ಲ.. ತುಸು ಜೋರಾಗಿಯೇ..

​"ಆ ಕಣಿವೆಯ ತುದಿಯಲ್ಲಿದ್ದಾನಂತೆ ಜಾದೂಗಾರ
ನೊಂದ ಹೃದಯಕೆ ಮುಲಾಮು ಹಚ್ಚುವ ಕನಸುಗಾರ
ಕನಸಿನಾ ಮೊಗ್ಗಲು ಮಗಚುವಾಗ ನೆನಪಾದ ಅವನಂದು
ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ಹುಡುಕಿ ಹೊರಟೆವು ನಾವಿಂದು
ನಾನು ನನ್ನ ಪರ್ಪಲ್ ರೈನ್ ಕೋಟ್"

ಅರ್ಪಿತಾಳನ್ನು ಒಮ್ಮೆ ಆಲಂಗಿಸಿ.. "ಸರಿ ನೆಡೆ ಹೋಗೋಣ.. ಆಗಲೇ ಹೊತ್ತಾಗುತ್ತಿದೆ.. "

ಆ ಕಾಗದವನ್ನು ಮಾಡಿಸಿ ತನ್ನ ಪ್ಯಾಂಟ್ ಜೀಬಿಗೆ ತುರುಕಲು ಹೊರಟವನನ್ನು ತಡೆದು.. "ಮನು.. ನಿನ್ನ ಜೇಬಿಗೆ ಹೋದರೆ ಅದರ ಪೋಸ್ಟ್ ಮಾರ್ಟಮ್ ಮಾಡೋಕೆ ಏನೂ ಇರಲ್ಲ.. ಕೊಡು ಇಲ್ಲಿ" ಎಂದು ಕೊಂಚ ಬಲವಂತವಾಗಿಯೇ ಕಸಿದುಕೊಂಡು.. ಜೋಪಾನವಾಗಿ ಮಡಚಿ ತನ್ನ ಪರ್ಸ್ ನಲ್ಲಿಟ್ಟು.. "ಮನು ಮುಂದಿನ ವಾರ ಇದೆ ಕೆಲಸ" ಅಂದವಳೇ ಕಣ್ಣು ಹೊಡೆದಳು.. 

ಮನುಗೆ ತಲೆ ಗಿರ್ ಅಂದಿತು.. "ಅರ್ಪಿ ಏನಾಯಿತು.. ಎಲ್ಲಿಗೆ ಹೋಗೋದು.. ಅದು ಬರಿ ಕವಿತೆ ಕಣೆ"

"ಮನು ನೀನೂ ಹೇಳಿದೆ ಏನೋ ಇದೆ ಇದರಲ್ಲಿ ಅಂತ.. ಹುಡುಕಿಯೇ ಬಿಡೋಣ.. ಒಂದು ವಾರದಲ್ಲಿ ಒಂದಷ್ಟು ಮಾಹಿತಿ ಸಂಗ್ರಹಿಸುತ್ತೇನೆ.. ಹೊರಟೆ ಬಿಡೋಣ.. ಓಕೆ .. ಥ್ಯಾಂಕ್ ಯು ಮನು ಮೈ ಲವ್" ಎನ್ನುತ್ತಾ ಹಗ್ ಕೊಟ್ಟಳು... 

ಮನುಗೆ ಮುಂದಿನ ವಾರದ ಬಗ್ಗೆ ಕೊಂಚವೂ ಕುತೂಹಲವಿರಲಿಲ್ಲ.. ಕವಿತೆ ಓದಿದ ಮೇಲೆ ಏನೋ ಇದೆ ಇದರಲ್ಲಿ ಅನ್ನೋದು ಗೊತ್ತಾಗಿತ್ತು.. ಆದ್ರೆ ಅದಕ್ಕಾಗಿ ದಿನವೆಲ್ಲ ವ್ಯಯ ಮಾಡೋದು ಇಷ್ಟವಿರಲಿಲ್ಲ.. ಆದರೆ ವಿಧಿಯಿಲ್ಲ ಅರ್ಪಿತಾ ಬಿಡೋಲ್ಲ ಅಂತ ಗೊತ್ತಿತ್ತು.. 

ಅರ್ಪಿತಾಳ ಬೊಗಸೆ ಕಂಗಳಲ್ಲಿ ಮುಂದಿನ ವಾರದ ಸಾಹಸ ಪರದೆಯ ಮೇಲಿನ ಸಿನೆಮಾದಂತೆ ಕಾಣ ತೊಡಗಿತ್ತು.. !!!

ಮುಂದುವರೆಯುತ್ತದೆ..... 


(ಬ್ಲಾಗ್ ಗೆಳತೀ ನಿವೇದಿತಾ ಚಿರಂತನ್  ಅವರ ಒಂದು ಪುಟ್ಟ ಕವಿತೆ  ಈ ಲೇಖನಕ್ಕೆ ಸ್ಫೂರ್ತಿ ನೀಡಿತು..  ಆರಂಭದಲ್ಲಿ ಕಾಣಿಸಿಕೊಳ್ಳುವ ಕವಿತೆಯ ಕತೃ ಇವರೇ.. ಈ ಲೇಖನ ಕೌತುಕತೆ ಹುಟ್ಟಿಸುವ ಅವರ ಕವಿತೆಗೆ ಮತ್ತು ಅವರ ಪ್ರತಿಭೆಗೆ "ಅರ್ಪಿತ"ವಾಗುತ್ತಿದೆ)



4 comments:

  1. ಶ್ರೀಕಾಂತರೆ, ಸುರುವಾಯಿತು ಶೆರ್ಲಾಕ್ ಹೋಮ್ಸನ ಸಾಹಸಯಾತ್ರೆ. ನನ್ನ ಕಣ್ಣುಗಳಿಗೆ ಕಾಣದ ರಹಸ್ಯ, ಹೋಮ್ಸನಿಗೆ ಕಾಣುತ್ತದೆ ಎನ್ನುವ ಭರವಸೆ ನನಗಿದೆ. ಕುತೂಹಲದಿಂದ ಕಾಯುತ್ತಿರುವೆ, ಮುಂದಿನ ಸುಂದರ ಶೈಲಿಯ ಸಂಚಿಕೆಗಾಗಿ.

    ReplyDelete
    Replies
    1. ಹ ಹ ಹ .. .ಗುರುಗಳೇ ಏನು ಹೇಳಲಿ ನಿಮ್ಮ ಮಾತಿಗೆ

      ಧನ್ಯವಾದಗಳು.. ನೋಡೋಣ.. ಆ ಶೆರ್ಲಾಕ್ ಹೋಮ್ಸ್ ಹೇಗೆ ಕಥೆಯನ್ನು ಬೆಳೆಸುತ್ತಾನೆ.. ಮುಗಿಸುತ್ತಾನೆ ಎಂದು..

      ಧನ್ಯವಾದಗಳು ಗುರುಗಳೆ

      Delete
  2. Adbhuta...finger crossed for next episode

    ReplyDelete