Sunday, October 11, 2020

ಯಶಸ್ಸಿಗೆ ಇನ್ನೊಂದು ಹೆಸರೇ ವಿಜಯ್...

 ಸಿನೆಮಾಗಳ ಟೈಟಲ್ ಕಾರ್ಡಿನಿಂದ ನೋಡುವ ಆಸೆ ಅರಿವಿಲ್ಲದೆ ಸಣ್ಣ ವಯಸ್ಸಿನಿಂದ ಹತ್ತಿತ್ತು ಟೈಟಲ್ ಕಾರ್ಡಿನಿಂದ ಸಿನಿಮಾ ನೋಡದೆ ಹೋದರೆ ಅದೇನೋ ಕಳೆದುಕೊಂಡ ಅನುಭವ.. ಈಗಲೂ ಅಷ್ಟೇ ಟಿವಿಯಲ್ಲಿಯೇ ಆಗಲಿ ಟಾಕೀಸಿನಲ್ಲಿ ಆಗಲಿ.. ಬಿಳಿ ಪರದೆಯಿಂದ ಬಿಳಿ ಪರದೆಯ ತನಕ ನೋಡಿದರೇನೇ ಸಮಾಧಾನ.. 

ನನ್ನ ಸಿನಿಮಾ ಹುಚ್ಚಿನ ಆರಂಭದ ದಿನಗಳಲ್ಲಿ ಹೀಗೆ ಮನಸೆಳೆದದ್ದು ಪುಟ್ಟಣ್ಣ ಕಣಗಾಲ್, ದೊರೈ ಭಗವಾನ್, ಹುಣುಸೂರು ಕೃಷ್ಣಮೂರ್ತಿ, ಜೊತೆಯಲ್ಲಿ ಇನ್ನೊಂದು ಹೆಸರೇ ವಿಜಯ್... 


ಮೇಲೆ ಹೇಳಿದ ನಿರ್ದೇಶಕರು ಒಬ್ಬರಿಗಿಂತ ಒಬ್ಬರು ಭಿನ್ನ ವಿಭಿನ್ನ.. ಒಬ್ಬರ ಸಿನಿಮಾ ಛಾಯೆ ಇನ್ನೊಬ್ಬರ ಮೇಲೆ ಇರಲಿಲ್ಲ .. 

ವಿಜಯರೆಡ್ಡಿ ಅಂತ ಹೆಸರಿದ್ದರೂ ವಿಜಯ್ ಎಂದೇ ಪ್ರಖ್ಯಾತರಾಗಿದ್ದ ನಿರ್ದೇಶಕರು ಇವರು... ಹೆಸರಲ್ಲಿ ಒಂದು ರೀತಿಯ ನಮ್ಮ ಮನೆಯವರು ಎನ್ನುವಂತಹ ಆತ್ಮೀಯತೆ ಕಾಣುತಿತ್ತು.. 

ಈ ಮಹಾ ನಿರ್ದೇಶಕ ಕನ್ನಡ ಚಿತ್ರರಂಗಕ್ಕೆ ಕೊಟ್ಟ ಅದ್ಭುತ ರತ್ನಗಳು ಅನೇಕಾನೇಕ.. ಸಾಮಾನ್ಯ ಹೇಳುತ್ತಾರೆ ಯಾವುದೇ ಕಲೆ ನಿಧಾನವಾಗಿ ಪ್ರಗತಿಯ ಪಥವೇರುತ್ತದೆ.. ಈ ಮಾತು ನಿಜವಾದರೂ ಈ ಮಹನೀಯರು ಮೊದಲ ಮೆಟ್ಟಿಲಿನಿಂದಲೇ ಯಶಸ್ಸಿನ ತೀವ್ರಗತಿ ಕಂಡವರು. 

ಅಣ್ಣಾವ್ರ ಸಿನಿಮಾಗಳು, ಅಣ್ಣಾವ್ರ ಚಿತ್ರ ತಂಡ ಸೇರುವುದು ಸಾಮಾನ್ಯದ ಮಾತಾಗಿರಲಿಲ್ಲ.. ಚಿನ್ನವನ್ನು ಓರೇ ಹಚ್ಚಿ ನೋಡುವ ದೊಡ್ಡ ತಂಡವೇ ಅಲ್ಲಿತ್ತು.. 

ಅಣ್ಣಾವ್ರು, ಅವರ ತಮ್ಮ ವರದಪ್ಪ, ಪಾರ್ವತಮ್ಮ, ಚಿ ಉದಯಶಂಕರ್.. ಇವರಿಗೆಲ್ಲ ಒಪ್ಪಿಗೆಯಾದರೆ ಮಾತ್ರ ತಂಡದೊಳಗೆ ಪ್ರವೇಶ ಅನ್ನುವಂತಹ ಸ್ಥಿತಿ.. 

ಅಂತಹ ಪರಿಸ್ಥಿತಿಯಲ್ಲಿ ತಮ್ಮ ನಿರ್ದೇಶನದ ನಾಲ್ಕನೇ ಪ್ರಯತ್ನವೇ ಕರುನಾಡಿನ ಮನೆಮಾತಾದ ಗಂಧದ ಗುಡಿ ಎಂದರೆ ಇವರ ಅಗಾಧವಾದ ಪ್ರತಿಭೆಯ ಅರಿವಾಗುತ್ತದೆ.. 

ಬರೋಬ್ಬರಿ ಒಂಭತ್ತು ಅಣ್ಣಾವ್ರ ಚಿತ್ರರತ್ನಗಳನ್ನು ಕೊಟ್ಟ ನಿರ್ದೇಶಕರು ಇವರು.. 

ಗಂಧದ ಗುಡಿ - ಅರಣ್ಯದ ಹಿನ್ನೆಲೆಯ  ಕಳಕಳಿಯ ಚಿತ್ರ 

ಶ್ರೀ ಶ್ರೀನಿವಾಸ ಕಲ್ಯಾಣ - ಪೌರಾಣಿಕ ಚಿತ್ರ 

ಮಯೂರ .. ಐತಿಹಾಸಿಕ ಚಿತ್ರ 

ನಾ ನಿನ್ನ ಮರೆಯಲಾರೆ .. ಸಾಮಾಜಿಕ ಪ್ರೇಮ ಕಥೆ 

ಬಡವರ ಬಂಧು .. ಸಾಮಾಜಿಕ ತಂದೆ ಮಗನ ಸಂಬಂಧದ ಚಿತ್ರ 

ಸನಾದಿ ಅಪ್ಪಣ್ಣ .. ಸಂಗೀತ ಕಲಾವಿದನ ಅದ್ಭುತ ಚಿತ್ರಣ 

ಹುಲಿಯ ಹಾಲಿನ ಮೇವು .. ಕೊಡಗಿನ ವೀರನ ಕಥಾನಕ 

ನೀ ನನ್ನ ಗೆಲ್ಲಲಾರೆ .. ಗೆದ್ದು ಸಾಧಿಸುವ ಸಾಮಾಜಿಕ ಕಥಾನಕ 

ಭಕ್ತ ಪ್ರಹ್ಲಾದ .. ಪೌರಾಣಿಕ ಚಿತ್ರ 

ಪ್ರತಿಯೊಂದು ಚಿತ್ರವೂ ವಿಭಿನ್ನ.. ಅಣ್ಣಾವ್ರ ಬಹುಮುಖ ಪ್ರತಿಭೆಯನ್ನು ಇನ್ನಷ್ಟು ಹೊಳಪಿಗೆ ತಂದ ಚಿತ್ರಗಳಿವು. 

ತೆಲುಗು ಮಾತೃಭಾಷೆಯಾದರೂ ಕನ್ನಡಲ್ಲಿ ಸುಮಾರು ನಲವತ್ತಕ್ಕೂ ಹೆಚ್ಚಿನ ಚಿತ್ರಗಳನ್ನು ನಿರ್ದೇಶಿಸಿದರು. ಶಂಕರ್  ನಾಗ್ ಅವರಿಗೆ ಮರು ಜೀವ ಕೊಟ್ಟ ಚಿತ್ರ ಆಟೋ ರಾಜ, ವಿಷ್ಣುವಿನ ಸಾಹಸದ ಮಜಲಿಗೆ ಇನ್ನಷ್ಟು ಹೊಳಪು ಕೊಟ್ಟ ವೀರಾಧಿವೀರ, ದೇವಾ, ಅಂಬಿಗೆ ರೆಬೆಲ್ ಇಮೇಜ್ ಬರುವಂತೆ ಮಾಡಿದ ಅನೇಕ ಚಿತ್ರಗಳಲ್ಲಿ ಖದೀಮ ಕಳ್ಳರು ಕೂಡ ಒಂದು.. ಹಾಗೆ ದೆವ್ವ ಭೂತದ ಕಾಡುವ ಕತೆಯನ್ನು, ದೆವ್ವದ ಶಕ್ತಿಯ ಮೇಲೆ ದೇವರ ಶಕ್ತಿ ಗೆಲ್ಲುವ ಅನಂತ್ ನಾಗ್ ಅವರ ನಾ ನಿನ್ನ ಬಿಡಲಾರೆ.. ಎಲ್ಲವೂ ಸುಂದರ .. ಪ್ರಭಾಕರ್... ಹೊಸ ಪೀಳಿಗೆಯ ಚರಣ್ ರಾಜ್, ಹೀಗೆ ಅನೇಕ ನಟ ನಟಿಯರಿಗೆ ಹೊಸ ಚಿತ್ರ ಬದುಕು ಕೊಟ್ಟವರು.. 


ಇವರ ಮೊದಲ ಸಿನೆಮಾದಿಂದ ಕಡೆಯ ಸಿನೆಮಾದವರೆಗೂ ಹಾಡುಗಳು, ಮತ್ತು ಚಿತ್ರ ಸಂಗೀತ ಅಸಾಧಾರಣವಾಗಿತ್ತು.. ಅದ್ಭುತ ಯಶಸ್ಸಿಗೆ ಹಾಡುಗಳು ಎಷ್ಟು ಕಾರಣವೋ.. ಹಾಗೆ ಅಶ್ಲೀಲತೆ ಇಲ್ಲದೆ ಮನೆ ಮಂದಿಯೆಲ್ಲಾ ಕೂತು ನೋಡಬಹುದಾದ ಚಿತ್ರಗಳನ್ನು ಕೊಟ್ಟಿದ್ದು ಇವರ ಹೆಗ್ಗಳಿಕೆ. 

ನನಗರಿವಿಲ್ಲದೆ ಇಂದಿನ ಶುಭನುಡಿಯನ್ನು ಇವರ ನಿರ್ದೇಶಕನ ಪ್ರತಿಭೆಗೆ ಅರ್ಪಿಸಿದೆ. 

ಕತೆ..ಚಿತ್ರಕತೆ..ಸಂಭಾಷಣೆ..ಸಾಹಿತ್ಯ.. ಹೀಗೆ ಹಲವಾರು ವಿಭಾಗಗಳಲ್ಲಿ ಕೆಲಸ ಮಾಡಿಕೊಡುತ್ತಾರೆ...ಇವರನ್ನೆಲ್ಲಾ ಸರಿಯಾಗಿ ತೂಗಿಸಿಕೊಂಡು ತನ್ನ ಕಲ್ಪನಾ ಶಕ್ತಿ ಮತ್ತು ಕ್ರಿಯಾತ್ಮಕ ಕಲೆಯನ್ನು ಉಪಯೋಗಿಸಿಕೊಂಡು ಉತ್ತಮ ಚಿತ್ರ ನಿರೂಪಿಸುವುದು ನಿರ್ದೇಶಕನ ಕೆಲಸ!

ನಮ್ಮ ಬದುಕಿನ ನಿರ್ದೇಶಕರು ನಾವೇ!

ಶುಭದಿನ!

ನಂತರ ನನ್ನ ನೆಚ್ಚಿನ ಸಹೋದರ ಸತೀಶ್ ಕನ್ನಡಿಗ ಸಂದೇಶ ಕಳಿಸಿದರು.. ಅಣ್ಣ ನಿರ್ದೇಶಕ ವಿಜಯ್ ಅವರ ಬಗ್ಗೆ ಒಂದು ಲೇಖನ ಬರಲಿ.. ನಿಮ್ಮ ಬರವಣಿಗೆಯಲ್ಲಿ ಅವರನ್ನು ಕಾಣುವ ಆಸೆ ಅಂತ.. 

ಆ ಹರಿವಿನಲ್ಲಿಯೇ ಮೂಡಿಬಂದದ್ದು ಈ ಲೇಖನ.. 

ನಿರ್ದೇಶಕ ವಿಜಯ್ ಅವರ ಎಕ್ಸಿಟ್ ನಿಂದ ಕನ್ನಡ ಚಿತ್ರರಂಗ ಬಡವಾಗಿದೆ, ತುಂಬಲಾರದ ನಷ್ಟ ಎಂಬ ಸವಕಲು ಮಾತುಗಳನ್ನು ಹೇಳೋಕೆ ಇಷ್ಟಪಡೋಲ್ಲ.. 

ಅವರು ತಮ್ಮ ಪ್ರತಿಭೆಯನ್ನೆಲ್ಲಾ ಧಾರೆಯೆರೆದು ಚಿತ್ರಗಳನ್ನು ಕೊಟ್ಟಿದ್ದಾರೆ, ಅದನ್ನು ನೋಡಿ ಆನಂದಿಸಿವುದೇ ನಮ್ಮ ಕೆಲಸ.. ಮತ್ತು ಅದೇ ಅವರನ್ನು ಸದಾ ನೆನಪಿಸಿಕೊಳ್ಳುವಂತೆ ಮಾಡುವುದು.. 

ವಿಜಯ್ ಸರ್.. ನೀವು ಕೊಟ್ಟ ಚಿತ್ರಗಳು ಅದ್ಭುತ,ಅಮೋಘ .... ಪ್ರತಿ ಚಿತ್ರದಲ್ಲೂ ನೀವು ಜೀವಂತವಾಗಿದ್ದೀರಾ.. 

ಭಕ್ತ ಅಂಬರೀಷ ಅಣ್ಣಾವ್ರ ನಟನೆಯಲ್ಲಿ ನಿಮ್ಮ ನಿರ್ದೇಶನದಲ್ಲಿ ಮೂಡಿ ಬಂದಿದ್ದರೆ ಖಂಡಿತ ಅದೊಂದು ಅದ್ಭುತ ಚಿತ್ರವಾಗುತ್ತಿತ್ತು.. ಆದರೆ ಅಣ್ಣಾವ್ರ ಮಂಡಿ ನೋವು.. ಹಾಗೂ ಸಾಹಿತ್ಯ ರತ್ನ ಚಿ ಉದಯಶಂಕರ್ ಅವರ ಅನುಪಸ್ಥಿತಿ ಈ ಚಿತ್ರವನ್ನು ಮೇಲೆತ್ತಲು ಸಾಧ್ಯವಿಲ್ಲ ಎನ್ನುವ ಸತ್ಯ ಬಹುಶಃ ಆ ದೇವರಿಗೂ ಅರಿವಾಗಿ ಚಿತ್ರೀಕರಣವಾಗಲೇ ಇಲ್ಲ ಅನ್ನಿಸುತ್ತದೆ .. 


ಇರಲಿ ಕತೆಯನ್ನು ಹೊಳಪಾಗುವಂತೆ ಮಾಡುವ ವರದಪ್ಪ, ಸಾಹಿತ್ಯವನ್ನು ಕೊಡುವ ಚಿ ಉದಯಶಂಕರ್, ಸಂಗೀತವನ್ನು ವಿಜೃಂಭಿಸುವಂತೆ ಮಾಡುವ ಎಂ ರಂಗರಾವ್,  ಟಿಜಿ ಲಿಂಗಪ್ಪ, ಛಾಯಾಗ್ರಾಹಕ ಎಸ್ ವಿ ಶ್ರೀಕಾಂತ್ ಅಲ್ಲೇ ಇದ್ದಾರೆ.. ಇವರೆಲ್ಲ ಜೊತೆಯಲ್ಲಿ ನಿರ್ಮಾಪಕಿ ಪಾರ್ವತಮ್ಮನವರು ಇದ್ದಾರೆ.. ಖಂಡಿತ ಒಂದು ಒಳ್ಳೆ ಚಿತ್ರವನ್ನು ಅಲ್ಲಿ ಚಿತ್ರೀಕರಿಸಿ ತೆರೆಗೆ ತನ್ನಿ.. !

ನಿಮ್ಮ ಹೆಸರು ಮತ್ತು ಚಿತ್ರಗಳು ಸದಾ ಹಸಿರು... !!!

1 comment:

  1. ವಾಹ್ !!!! ಅದ್ಭುತ ಬರಹ ಶ್ರೀ !!! ನಿಜವಾಗಿ ವಿಜಯ್ ಅಸಾಧಾರಣ ನಿರ್ದೇಶಕರು 😊

    ReplyDelete