Saturday, October 24, 2020

ನಾನು ನನ್ನ ಪರ್ಪಲ್ ರೈನ್ ಕೋಟ್... ಸಿಬಿ ಜನುಮದಿನದ ಶುಭಾಶಯಗಳು

 ಇದೊಂದು ವಿಚಿತ್ರ ರೀತಿಯ ಹುಚ್ಚು ಸರಿ ಸುಮಾರು ಎರಡು ವರ್ಷಗಳ ಹಿಂದೆ ಒಂದು ಕವಿತೆಯ ಸ್ಪೂರ್ತಿಯಿಂದ ಬರೆದ ಬರಹವನ್ನು ಮುಂದುವರೆಸೋದು.. 

ಹಲವಾರು ಈ ರೀತಿಯ ಹುಚ್ಚೇ ಮನಸ್ಸಿನ ನಿರ್ವಾತವನ್ನು ತುಂಬುವುದು.. ಮತ್ತು ಬದುಕಿಗೆ ಇನ್ನಷ್ಟು ಹುಮ್ಮಸ್ಸು ತುಂಬುವುದು.. 

ನಾನು ನನ್ನ ಪರ್ಪಲ್ ರೈನ್ ಕೋಟ್... !

ಹಿಂದಿನ ಸಂಚಿಕೆಯಲ್ಲಿ  (ಹಿಂದಿನ ಸಂಚಿಕೆ ಹ ಹ ಹ.. ಕಳೆದ ಶತಮಾನದ್ದು ಅನ್ನಿ) ಅರ್ಪಿತಾ ಮತ್ತು ಮನು ಬೆಟ್ಟದ ತುದಿಯಲ್ಲಿ ಚಳಿಗಾಳಿಗಳ ನಡುವೆ ಒಂದಷ್ಟು ಫೋಟೋ ತೆಗೆದು.. ಬೋಂಡ, ಅಂಬೊಡೆಯನ್ನು ಮೆಲ್ಲುತ್ತಿದ್ದಾಗ.. ಆ ಬೋಂಡಾ ಸುತ್ತಿದ್ದ ಕಾಗದದಲ್ಲಿ ಒಂದು ಪುಟ್ಟ ಕವಿತೆ ಅರ್ಪಿತಾಳ ಮನಸ್ಸನ್ನು ಕಲಕಿತ್ತು.. ಮನು ಕೂಡ ಸುಮ್ಮನೆ ಈ ಕವಿತೆಯೊಳಗೆ ಏನೋ ಇದೆ ಅನ್ನುವ ದೇಶಾವರಿ ಮಾತನ್ನು ಸ್ವಲ್ಪ ಸೀರಿಯಸ್ ಆಗಿಯೇ ಅರ್ಪಿತಾ ತೆಗೆದುಕೊಂಡಿದ್ದಳು.. ಆ ಕವಿತೆಯನ್ನು ಮತ್ತೆ ಮತ್ತೆ ಓದುತ್ತಲೇ ಇದ್ದಳು.. 

​"ಆ ಕಣಿವೆಯ ತುದಿಯಲ್ಲಿದ್ದಾನಂತೆ ಜಾದೂಗಾರ
ನೊಂದ ಹೃದಯಕೆ ಮುಲಾಮು ಹಚ್ಚುವ ಕನಸುಗಾರ
ಕನಸಿನಾ ಮೊಗ್ಗಲು ಮಗಚುವಾಗ ನೆನಪಾದ ಅವನಂದು
ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ಹುಡುಕಿ ಹೊರಟೆವು ನಾವಿಂದು
ನಾನು ನನ್ನ ಪರ್ಪಲ್ ರೈನ್ ಕೋಟ್"

 ಕವಿತೆಯನ್ನು ಬರೆದವರ ಹೆಸರು ಹೇಮಂತ್ ಮತ್ತು ದಿನಾಂಕ ೨೪. ೧೦. ೨೦೧೭ ಅಂತ ಇತ್ತು ... 

ಅರ್ಪಿತಾಳ ಪುಟ್ಟ ತಲೆಯಲ್ಲಿ ನೂರಾರು ಪ್ರಶ್ನೆಗಳು ಓಡುತ್ತಿದ್ದವು.. ಆ ದಿನಾಂಕ ತುಸು ಗೊಂದಲಗೀಡು ಮಾಡಿತ್ತು.. ಬೈಕಿನಲ್ಲಿ ಸುಮ್ಮನೆ ಕೂತಿದ್ದರು.. ತಲೆ ಮಾತ್ರ ವಾಯುವೇಗದಲ್ಲಿ ಯೋಚಿಸುತ್ತಿತ್ತು.. ಈ ದಿನಾಂಕಕ್ಕೂ ಹೇಮಂತ್ ಕಾಣೆಯಾಗಿದ್ದಕ್ಕೂ ಏನೋ ಲಿಂಕ್ ಇದೆ.. ಮನುಗೆ ಹೇಳಿದರೆ.. ಅವನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳದಿದ್ದದ್ದು ಅರ್ಪಿತಾಳಿಗೆ ಕೊಂಚ ಯೋಚನೆಯಾದರೂ.. ಮನುವಿನ ಬಗ್ಗೆ ಚೆನ್ನಾಗಿ ಗೊತ್ತಿದ್ದ ಕಾರಣ ಏನೂ ಮಾತಾಡದೆ ತನ್ನ ಪಾಡಿಗೆ ಯೋಚಿಸತೊಡಗಿದಳು.. 

ಹೇಮಂತ್.. ಅರ್ಪಿತಾ ಮತ್ತು ಮನುವಿನ ಆಪ್ತ ಗೆಳೆಯ.. ಎಲ್ಲಿ ಹೋದರೂ ಜೊತೆಗಿರಲೇಬೇಕಿತ್ತು.. ಆದರೆ ಆ ಮೇಲೆ ಹೇಳಿದ ದಿನಾಂಕದ ನಂತರ ಹೇಮಂತ್ ಅಚ್ಚರಿಯ ರೀತಿಯಲ್ಲಿ ಕಾಣ ಸಿಕ್ಕಿರಲಿಲ್ಲ... ಮೊಬೈಲಿಗೆ ಕರೆ.. ವಾಟ್ಸಾಪ್ ಸಂದೇಶ.. ಎಸ್ ಎಂ ಎಸ್ ಗಳಿಗೆ ಪ್ರತಿಕ್ರಿಯೆ ಇರಲಿಲ್ಲ.. ಇಮೇಲ್ ಕೂಡ ನಿರುತ್ತರ ಕಂಡಿತ್ತು.. ಪೋಲೀಸು ಅದು ಇದು ಬೇಡ ಎಂದು ಅವರ ಮನೆಯವರು ಸುಮ್ಮನಿದ್ದರು.. ಕಾರಣ ಹೇಮಂತ್ ಕೆಲಸ ಮಾಡುತ್ತಿದ್ದ ಆಫೀಸ್ ತುಂಬಾ ಗುಪ್ತವಾಗಿತ್ತು.. ಯಾವುದೋ ಪ್ರಾಜೆಕ್ಟ್ ಮೇಲೆ ಆವ ಕೆಲಸ ಮಾಡುತ್ತಿದ್ದ... ಅದು ಮನೆಯವರಿಗೂ ಗೊತ್ತಿರಲಿಲ್ಲ.. ತನ್ನ ಆಪ್ತ ಗೆಳೆಯರಿಗೂ ಗೊತ್ತಿರಲಿಲ್ಲ... ಆದರೆ ಗೆಳೆತನವನ್ನು ಮತ್ತು ಅವರ ಜೊತೆಗಿನ ಒಡನಾಟವನ್ನು ಎಂದೂ ದೂರಮಾಡಿರಲಿಲ್ಲ.. 

ಒಂದೆರಡು ದಿನವಾದ ಮೇಲೆ.. ಅರ್ಪಿತಾ ಮನುವಿಗೆ ಒಂದು ಮೆಸೇಜ್ ಕಳಿಸಿ.. "ಮನು ನಾನು ಒಂದೆರಡು ದಿನ ನಮ್ಮ ಊರಿಗೆ ಹೋಗಿ ಬರುವೆ.. ಸರಿಯಾಗಿ ಎರಡು ದಿನವಾದ ಮೇಲೆ ನನ್ನ ಮೊಬೈಲಿಗೆ ಕರೆ ಮಾಡು.. ಉತ್ತರ ಬರಲಿಲ್ಲ ಅಂದರೆ.. ಸೀದಾ ನಮ್ಮೂರಿಗೆ ಬಂದು ಬಿಡು.. " 

ಅರ್ಪಿತಾಳ ಸಾಹಸ ಪ್ರವೃತ್ತಿ ಗೊತ್ತಿದ್ದ ಮನುವಿಗೆ ಸರಿ ಅನ್ನದೆ ಬೇರೆ ಉತ್ತರವಿರಲಿಲ್ಲ.. ಜೊತೆಯಲ್ಲಿ ಅವನಿಗೆ ಗೊತ್ತಿತ್ತು.. ಅವಳು ಒಂದು ಕೆಲಸಕ್ಕೆ ಕೈ ಹಾಕಿದರೆ.. ತುಂಬಾ ಸೂಕ್ಷ್ಮವಾಗಿ ಅದರ ಸಾಧಕ ಬಾಧಕಗಳನ್ನು ಯೋಚಿಸಿ.. ತುಂಬಾ ಸುರಕ್ಷತೆಯಿಂದ ಕೆಲಸ ನಿಭಾಯಿಸುತ್ತಾಳೆ.. ಮತ್ತೆ ಅಪಾಯ ಅನ್ನುವಂತಹ ಸಂದರ್ಭದಲ್ಲಿ ತನ್ನ ಸಹಾಯ ಪಡೆಯದೇ ಇರೋಲ್ಲ ಅಂತ.. ಹಾಗಾಗಿ ಸರಿ ಕಣೆ ಹುಷಾರು ಅಂತ ಪ್ರತಿಕ್ರಿಯೆ ಕೊಟ್ಟಿದ್ದ.. 

ಅವಳು ಹೇಳಿದ ಹಾಗೆ ಎರಡು ದಿನ ಆಗಿತ್ತು.. ಇರಲಿ ಇನ್ನೊಂದು ದಿನ ಬೆಳಿಗ್ಗೆ ಕರೆ ಮಾಡುವೆ ಎಂದು ಮನು ಮಾನಸಿಕವಾಗಿ ಸಿದ್ಧವಾಗಿದ್ದ.. 

ಮೂರನೇ ದಿನ.. ಅರ್ಪಿತಾಳ ಸಂದೇಶ.. "ಮನು.. ಮಿಷನ್ ಕಂಪ್ಲೇಟಿಡ್.. ಕಮ್" 

ಮನು ತನ್ನ ಬುಲೆಟ್ ತೆಗೆದುಕೊಂಡು ಹೊರಟ.. ದಾರಿಯುದ್ದಕ್ಕೂ ಅವನ ತಲೆ ಯೋಚಿಸಿ ಭಾರವಾಗಿತ್ತು... ಮೊಬೈಲಿನ ಹಾಡುಗಳು ಅವನ ಮನಸ್ಸನ್ನು ಆಹ್ಲಾದಕರವಾಗಿಟ್ಟಿತ್ತು.. ತಣ್ಣಗಿನ ವಾತಾವರಣ.. ತಂಗಾಳಿ.. ಹಸಿರು ಸೀರೆಯುಟ್ಟ ಪ್ರಕೃತಿ ಎಲ್ಲವೂ ಅವನ ಬ್ಯುಸಿ ಕೆಲಸಕ್ಕೆ ಅಲ್ಪವಿರಾಮ ಕೊಟ್ಟಿತ್ತು.. 

ಊರೊಳೊಗೆ ಹೋದ..... ಸಾಲು ಸಾಲು ಕಂಬದ ಮನೆ..ಸುಮಾರು ನೂರು ವರ್ಷ ದಾಟಿದ ಮನೆ.. ಸುಸ್ಥಿತಿಯಲ್ಲಿತ್ತು.. ಮನೆ ಮುಂದೆ ಎತ್ತಿನ ಗಾಡಿ.. ಎತ್ತುಗಳು ಹುಲ್ಲನ್ನು ಮೇಯುತಿತ್ತು.. ಹಸುಗಳು ಅಲ್ಲಿಯೇ ಮಲಗಿದ್ದವು.. ಮನೆ ಹಿಂದಿನ ಹಿತ್ತಲಿನಿಂದ ಹೊಗೆ ಬರುತಿತ್ತು.. ಮನಸ್ಸಿಗೆ ಮುದ ಕೊಡುವ ಪ್ರಕೃತಿಯ ಮಧ್ಯೆ ಅರ್ಪಿತಾಳ ಮನೆ.. 

ಬೇವಿನ ಕಡ್ಡಿಯಿಂದ ಹಲ್ಲನ್ನು ಉಜ್ಜುತ್ತಾ ಒಂದು ಆಕೃತಿ ಬಂತು.. ಗಡ್ಡ ನೀಳವಾಗಿತ್ತು..ದೇಹ ಕೊಂಚ ಕೃಶವಾಗಿತ್ತು.. ಕಣ್ಣುಗಳ ಹೊಳಪು ಕಡಿಮೆಯಾಗಿರಲಿಲ್ಲ.. ಕಡ್ಡಿಯನ್ನು ಅತ್ತ ಬಿಸಾಡಿ.. ಬಾಯಿಗೆ ನೀರು ಹಾಕಿಕೊಂಡು ಗಳಗಳ ಮಾಡಿ.. ಆ ಆಕೃತಿ ಓಡಿ ಬಂದು ಮನುವನ್ನು ತಬ್ಬಿಕೊಂಡಿತು.. 

ಮನುವಿಗೆ ಒಂದು ಕ್ಷಣ ಗಾಬರಿ ... ತಬ್ಬಿಕೊಂಡ ವ್ಯಕ್ತಿ ಯಾರು ಅಂತ ತಿಳಿದಾಗ.. ಗಾಬರಿ ದೂರವಾಗಿತ್ತು.. ಮನಸ್ಸಿಗೆ ಸಂತೋಷವಾಗಿತ್ತು.. "ಹೇಮು .. ಹೇಗಿದ್ದೀಯೋ.. ಎಷ್ಟು ದಿನ ಆಯಿತು ನಿನ್ನ ನೋಡಿ.. ಎಲ್ಲಿದ್ದೆ ಇಲ್ಲಿ ತನಕ.. " ಪ್ರಶ್ನೆಗಳ ಸರಮಾಲೆಯನ್ನೇ ಪೋಣಿಸಿದ್ದ.. 

ಅರ್ಪಿತಾ ಬಿಸಿ ಬಿಸಿ ಕಾಫಿಯನ್ನು ತಂದು.. ಇಬ್ಬರಿಗೂ ಕೊಟ್ಟು "ಹೇಮುವಿಗೆ ತೊಂದರೆ ಕೊಡಬೇಡ ಮನು.. ನಾನು ಹೇಳುವೆ.. " ಎಂದು ಹೇಮಂತನ ಕಡೆ ಕಣ್ಣು ಹೊಡೆದು ಶುರುಮಾಡಿದಳು.. 

​"ಆ ಕಣಿವೆಯ ತುದಿಯಲ್ಲಿದ್ದಾನಂತೆ ಜಾದೂಗಾರ
ನೊಂದ ಹೃದಯಕೆ ಮುಲಾಮು ಹಚ್ಚುವ ಕನಸುಗಾರ
ಕನಸಿನಾ ಮೊಗ್ಗಲು ಮಗಚುವಾಗ ನೆನಪಾದ ಅವನಂದು
ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ಹುಡುಕಿ ಹೊರಟೆವು ನಾವಿಂದು
ನಾನು ನನ್ನ ಪರ್ಪಲ್ ರೈನ್ ಕೋಟ್"

"ಮನು ಈ ಕವಿತೆಯನ್ನು ಓದಿ.. ಓದಿ.. ಅದರ ಒಳಾರ್ಥ ತಿಳಿದುಕೊಳ್ಳುವುದಕ್ಕೆ ಪ್ರಯತ್ನ ಮಾಡಿದೆ.. ... 

ಕಣಿವೆಯ ತುದಿಯಲ್ಲಿ ಕೂತಿದ್ದಾನೆ.. ತನ್ನ ಪ್ರಾಜೆಕ್ಟನ್ನು ನಿಭಾಯಿಸುವುದಕ್ಕೆ ಎಲ್ಲರಿಂದ ದೂರ ಬಂದು ನಿಂತಿದ್ದಾನೆ.. ತನ್ನ ಕನಸ್ಸಿನ ಪ್ರಾಜೆಕ್ಟ್ ಯಾವಾಗಲೂ ಕಣ್ಣ ಮುಂದೆ ಇದ್ದುದರಿಂದ ಅದನ್ನು ಪೂರ್ಣ ಮಾಡದೆ ಆವ ಮಗ್ಗುಲು ಬದಲಿಸುವುದಿಲ್ಲ ಎಂದು ಅರಿವಾಯಿತು.. ಅವನು ಸದಾ ಇಷ್ಟ ಪಡುತಿದ್ದ ಪರ್ಪಲ್ ರೈನ್ ಕೋಟು ನನಗೆ ದಾರಿ ತೋರಿಸಿತು.. 

ಕಣಿವೆಯ ಪ್ರದೇಶಕ್ಕೆ ಹೋದಾಗ.. ಅಲ್ಲಿ ರೈನ್ ಕೋಟು ಬಿದ್ದಿತ್ತು.. ಆಗ ಅರಿವಾಯಿತು.. ಹೇಮು ಇಲ್ಲೇ ಎಲ್ಲೋ ಇದ್ದಾನೆ ಅಂತ.. ಅದೇ ಹಾದಿಯಲ್ಲಿ ಸಾಗಿದಾಗ ಕೆಲವು ದೃಢವಾದ ಹೆಜ್ಜೆಗಳ ಗುರುತು.. ನನ್ನನ್ನು ಕಣಿವೆಯ ತುತ್ತ ತುದಿಗೆ ತಂದಿತ್ತು.. ಮೊದಲೇ ನಿರ್ಧಾರ ಮಾಡಿಕೊಂಡು ಬಂದದ್ದರಿಂದ.. ಬೆಚ್ಚನೆಯ ಉಡುಪು.. ಆಹಾರ ಸಾಮಗ್ರಿ ಎಲ್ಲವನ್ನು ಹೊತ್ತು ತಂದಿದ್ದೆ..ಝರಿಗಳು ಹೇರಳವಾಗಿದ್ದರಿಂದ ನೀರಿನ ಬರ ಇರಲಿಲ್ಲ.. ಕಣಿವೆಯ ತುತ್ತ ತುದಿಯಲ್ಲಿ ಒಂದು ಗುಹೆಯಿತ್ತು.. ಆ ಗುಹೆಯ ಬಾಗಿಲಲ್ಲಿ ಒಂದು ಆಕೃತಿ ಮಲಗಿದ್ದು ಕಾಣಿಸಿತು.. ದೇಹ ಕೃಶವಾಗಿತ್ತು.. ತಲೆಗೂದಲು, ಗಡ್ಡ ನೀಳವಾಗಿ ಬೆಳೆದಿತ್ತು.. ಸರಿ ಸುಮಾರು ಒಂದು ವರ್ಷ ಆಗಿತ್ತು.. ಹೇಮು ನಮ್ಮ ಕಣ್ಣಿನಿಂದ ದೂರವಾಗಿ.. ಆವ ಬರೆದಿದ್ದ ಕವಿತೆಯ ಪುಸ್ತಕದ ಹಾಳೆಗಳು ಹಾದಿಯಲ್ಲಿ ಬಿದ್ದು ಹೋಗಿ.. ದನಕಾಯುವ ಹುಡುಗರಿಂದ ಬೋಂಡದ ಅಂಗಡಿ ಸೇರಿತ್ತು.. ಹಾಗಾಗಿ ಈ ಕವಿತೆಯ ಹಾಳೆ ಅರ್ಪಿತಾಳ ಕೈ ಸೇರಿದ ಮೇಲೆ.. ಹುಡುಕಾಟದಲ್ಲಿ ಹೇಮು ಸಿಕ್ಕಿದ್ದ.. 

ಹೇಮುವಿನ ಪ್ರಾಜೆಕ್ಟ್ ತುಂಬಾ ಗುಪ್ತವಾಗಿದ್ದರಿಂದ.. ಅದರ ವಿವರ ಅವನು ಹೇಳಲಿಲ್ಲ.. ನಾನೂ ಕೇಳಲಿಲ್ಲ.. ಆದರೆ ತುಂಬಾ ಮುಖ್ಯವಾದ ಮಾಹಿತಿಗೆ ಕಾಯುತಿದ್ದ.. ಮತ್ತು ಆ ಮಾಹಿತಿಯನ್ನು ಹೊತ್ತು ತರಬೇಕಾದವ ಇನ್ನೂ ಬಂದಿರಲಿಲ್ಲ.. ಅವನು ಬರದೇ.. ಇವ ಆ ಜಾಗವನ್ನು ಬಿಟ್ಟು ಬರುವ ಹಾಗಿರಲಿಲ್ಲ.. ಹಾಗಾಗಿ ತನ್ನ ಬಳಿಯಿದ್ದ ಆಹಾರ ಸಾಮಗ್ರಿಯನ್ನು, ಕಣಿವೆಯಲ್ಲಿ ಸಿಗುವ ಹಣ್ಣುಗಳನ್ನು ತಿಂದು ಬದುಕಿದ್ದಾನೆ.. ನಿನ್ನೆ ಊರಿಗೆ ಬಂದ ಮೇಲೆ ಒಂದು ವರ್ಷದ ದಿನಪತ್ರಿಕೆಯನ್ನು ಓದಿದ.. ತಡಕಾಡಿದ.. ನಂತರ ತಿಳಿದದ್ದು.. ಮಾಹಿತಿ ತರಬೇಕಾದವ ಕಾಡಿನ ನಡುವಿನ ಒಂದು ಜಲಪಾತದಲ್ಲಿ ಬಿದ್ದು ಘಾಸಿಗೊಂಡು.. ಪಟ್ಟಣದ ಆಸ್ಪತ್ರೆಗೆ ದಾಖಲಾಗಿದ್ದ.. ಮತ್ತು ಬಿದ್ದಿದ್ದ ಪೆಟ್ಟಿಗೆ ನೆನಪಿನ ಶಕ್ತಿ ಎಲ್ಲವನ್ನು ಕಳೆದುಕೊಂಡಿದ್ದಾನೆ.. ಅವನಿಗೆ ಮಾತ್ರ ಗೊತ್ತಿತ್ತಂತೆ ಹೇಮು ಎಲ್ಲಿದ್ದಾನೆ ಎಂದು.. ಅವನಿಗೆ ನೆನಪಿನ ಶಕ್ತಿ ಇಲ್ಲ.. ಇವನು ಅವನು ಬರೋ ತನಕ ಜಾಗ ಬಿಟ್ಟು ಬರುವ ಹಾಗಿಲ್ಲ.. ಇದು ಹೇಮುವಿನ ಕತೆ.. "

"ಯಪ್ಪಾ ಛಲಗಾರ್ತಿ ಕಣೆ ಅರ್ಪಿ.. ಒಬ್ಬಳೇ ಈ ರೀತಿಯ ಸಾಹಸ ಮಾಡಿದೆಯಲ್ಲಾ. ಶಭಾಷ್.. ಅಲ್ಲ ಕಣೆ.. ನನಗೆ ಒಮ್ಮೆ ಹೇಳಬಾರದಿತ್ತೇ.. ನಮ್ಮ ಆತ್ಮೀಯ ಹೇಮುವನ್ನು ಹುಡುಕುವುದಕ್ಕೆ ನಾನು ಬರುತ್ತಿದ್ದೆ.. "

"ಹಾಗಲ್ಲ ಕಣೋ ಮನು.. ನಿನ್ನ ಮನೆಯಿಂದ ಅಷ್ಟು ಸುಲಭವಾಗಿ ಬಿಡೋಲ್ಲ.. ಜೊತೆಗೆ ನನಗೆ ಖಾತ್ರಿ ಇತ್ತು ಇದು ಹೇಮುವಿನ ಕವಿತೆ.. ಮತ್ತು ಅವನ ಕವಿತೆ ಹುಚ್ಚು ಅವನು ಇರೋ ತಾಣವನ್ನು ಗುಟ್ಟಾಗಿ ಬಿಚ್ಚಿಟ್ಟಿದ್ದಾನೆ ಎಂದು.. ಮತ್ತೆ ಅವನ ಕೆಲಸವೇ ಗುಟ್ಟು ಎಂದಾಗ.. ಅವನನ್ನು ಹುಡುಕುವ ಕೆಲಸವೂ ಕೂಡ ಗುಟ್ಟಾಗಿರಲೇ ಬೇಕಲ್ವಾ.. " ಎನ್ನುತ್ತಾ ಇಬ್ಬರ ಕಡೆ ಕಣ್ಣು ಮಿಟುಕಿಸಿದಳು.. 

ಹೇಮು ಮತ್ತು ಮನು ಇಬ್ಬರೂ.. ಅರ್ಪಿತಾಳನ್ನು ಆಲಂಗಿಸಿದರು.. ಮೂವರಿಗೂ ಸಮಾಧಾನ ಮತ್ತೆ ಗೆಳೆತನ ಮುಂದುವರೆಯುತ್ತಿದೆ ಎಂದು.. !

******

ವಿಚಿತ್ರ ಅಲ್ಲವೇ.. ಎರಡು ವರ್ಷಗಳ ಹಿಂದಿನ ಬರಹವನ್ನು ಮುಂದುವರೆಸಿ... ಅದಕ್ಕೊಂದು ತಾರ್ಕಿಕ ಅಂತ್ಯ ಕೊಡಲು ಪ್ರಯತ್ನ ಪಟ್ಟಿದ್ದೇನೆ... 

ಇದಕ್ಕೆ ಕಾರಣ ನನ್ನ ಅದ್ಭುತ ಗೆಳತೀ ನಿವೇದಿತಾ ಚಿರಂತನ್ ಅವರ ಪುಟ್ಟ ಕವಿತೆ.. ಮತ್ತು ಅವರೇ ಸೃಷ್ಟಿ ಮಾಡಿದ ಪಾತ್ರ ಅರ್ಪಿತಾ.. 

ಇವರೆಡರ ಸಮಾಗಮ.. ಈ ಕಥಾನಕ.. 

ಇಂದು ನಿವೇದಿತಾ ಅವರ ಜನುಮದಿನ.. ಅದಕ್ಕೊಂದು ಬರಹ ಕೊಡೋಣ ಅಂತ ಮನಸ್ಸಿಗೆ ಬಂದಾಗ.. ಅರೆ ಅವರ ಕವಿತೆಯನ್ನು ಇಟ್ಟುಕೊಂಡು ಬರೆದಿದ್ದ ಬರಹಕ್ಕೆ ಮುಂದುವರೆದ ರೂಪ ಕೊಡೋಣ ಅನ್ನಿಸಿತು.. ಅದರ ಫಲಿತಾಂಶ ಈ ಬರಹ.. 

ಸಿಬಿ ನಿಮ್ಮೆಲ್ಲ ಆಸೆಗಳು ಈಡೇರಲಿ.. ಜನುಮದಿನ ಸುಂದರವಾಗಿರಲಿ.. 

ಜನುಮದಿನದ ಶುಭಾಶಯಗಳು!

Friday, October 23, 2020

ಅಮ್ಮ ಎನ್ನುವ ದೈತ್ಯ Server - ಭಾಗ ೨

 ಸುಮ್ಮನೆ ಉರಿದು ಬೂದಿಯಾಗಿದ್ದ ಕಟ್ಟಿಗೆಯ ರಾಶಿಯನ್ನು ನೋಡುತಿದ್ದೆ... ಎರಡು ದಿನದ ಹಿಂದಷ್ಟೇ ಜೀವ ತುಂಬಿದ್ದ ಶರೀರ ಇಂದು ಕಟ್ಟಿಗೆಯ ಜೊತೆಯಲ್ಲಿ ಉರಿದು ಅಸ್ಥಿ ಬಿಟ್ಟುಕೊಂಡು.. ಬೂದಿಯಾಗಿ ಚೆಲ್ಲಾಡಿತ್ತು.. 

ಕಿತ್ತಾನೆಯಿಂದ ಜನ್ಮ ತಳೆದ ಈ ಪುಟ್ಟ ಜೀವ.. ಸಂಸಾರಗಳ ಕಷ್ಟ ನಷ್ಟ ಸುಖ ದುಃಖಗಳನ್ನು ಹೀರಿಕೊಂಡು ಬೆಳೆದು ನಿಂತಿದ್ದ ಈ ಜೀವ ಇಂದು ಒಂದು ಮಡಿಕೆಯಲ್ಲಿ ತುಂಬಬಹುದಾದಷ್ಟು ಗಾತ್ರಕ್ಕೆ ಕುಗ್ಗಿದ್ದು.. ಮನುಜನ ದೇಹ ದೊಡ್ಡದಲ್ಲ.. ಜೀವನ ದೊಡ್ಡದು ಎನ್ನುವ ಮಾತನ್ನು ನಿಜ ಎಂದು ಸಾರಿತು.. 

ಅಪ್ಪನ ಕೆಲಸ ಮಾಡುವಾಗಲೂ.. ಸವಿತಾಳ ದೇಹದ ಪಳೆಯುಳಿಕೆಗಳನ್ನು ನೋಡಿದಾಗಲೂ ಆಗದ ಒಂದು ವಿಚಿತ್ರ ಸಂಕಟ ಅಂದು ನಮ್ಮನ್ನು ಕಾಡಿತು.. 

ಮನುಜನ ಅಸ್ತಿತ್ವವನ್ನು ಅಸ್ಥಿಗಳ ಮಧ್ಯೆ ಹುಡುಕುವ ಪರಿ ನಿಜಕ್ಕೂ ಘೋರ.. ಆದರೆ ಅದೇ ಸತ್ಯ.. 

ನಮ್ಮ ಮನವನ್ನು ಪೂಜಾ ಸಂಸ್ಕಾರ ಮಾಡಿಸಲು ಬಂದಿದ್ದ ಗುರುಗಳು ಗಮನಿಸಿದರೋ ಏನೋ ಎನ್ನುವಂತೆ... ಆ ಮಡಿಕೆಯಲ್ಲಿ ತುಂಬಿಕೊಳ್ಳಿ.. ಬೆಳ್ಳಗೆ ಇರೋದನ್ನ ಆರಿಸಿಕೊಳ್ಳಿ.. ತಲೆಯ ಭಾಗದಿಂದ ಶುರು ಮಾಡಿ ಎಂದರು.. ಬಿಸಿ ಇರುತ್ತೆ.. ನೀರನ್ನು ಚೆನ್ನಾಗಿ ಚುಮುಕಿಸಿ ದಪ್ಪ ದಪ್ಪನಾದ ಬೆಳ್ಳಗೆ ಇರುವ ಅಸ್ಥಿಯನ್ನು ತುಂಬಿಕೊಳ್ಳಿ.. ನೀವು ನಿಮ್ಮ ಅಣ್ಣನಿಗೆ ಸಹಾಯ ಮಾಡಿ ಅಂದರು.. 

ನಮ್ಮನ್ನು ಎತ್ತಾಡಿಸಿ, ಸಾಕಿ, ಬೆಳೆಸಿದ ಅಮ್ಮ ಇಂದು ಬೂದಿಗಳ ನಡುವೆ ಮಲಗಿದ್ದರು.. 

ಅಪ್ಪನ ಹಾಗೂ ಸವಿತಾಳ ಅಂತ್ಯ ಸಂಸ್ಕಾರ ವಿದ್ಯುತ್ ಚಿತಾಗಾರಗಳಲ್ಲಿ ನೆಡೆದಿದ್ದರಿಂದ.. ರುದ್ರಭೂಮಿಯವ ಒಂದು ಮಡಿಕೆಯಲ್ಲಿ ತುಂಬಿಕೊಟ್ಟಿದ್ದನ್ನು ಶ್ರದ್ಧಾ ಭಕ್ತಿಯಿಂದ ಸಂಚಯನ ಕಾರ್ಯ ಮಾಡಿದ್ದೆವು... ಆದರೆ ಅಮ್ಮನ ದೇಹದ ಅಂತ್ಯಸಂಸ್ಕಾರ ಕಟ್ಟಿಗೆಗಳ ನಡುವೆ ಚಿತೆಯಾಗಿ ಬೆಂದಿದ್ದು .. ನಂತರದ ದೃಶ್ಯ ಮನಕಲಕುವಂತೆ ಕಣ್ಣ ಮುಂದೆ ನೆಡೆದಿತ್ತು.. 

ಅಲ್ಲಿಯವರೆಗೂ ಅಸ್ಥಿ ಸಂಚಯನ ಅಂದರೆ.. ಸಿನೆಮಾಗಳಲ್ಲಿ ತೋರಿಸುವ ಹಾಗೆ ಬರಿ ಬೂದಿಯನ್ನು ಪುಣ್ಯ ಕ್ಷೇತ್ರಗಳಲ್ಲಿ ನದಿ ನೀರಿಗೆ ಸೇರಿಸಬೇಕು ಎಂದು ತಿಳಿದಿದ್ದ ನನಗೆ.. ತಾಯಿ ಲೀನವಾದ ಮೂರನೇ ದಿನ ರುದ್ರಭೂಮಿಯಲ್ಲಿ ಅಸ್ಥಿಗಳನ್ನು ನಮ್ಮ ಕೈಯಾರೆ ಮಡಿಕೆಯಲ್ಲಿ ತುಂಬುತ್ತಿದ್ದದ್ದು ಒಂದು ರೀತಿಯ ಅನನ್ಯ ಅನುಭವ. 

ಪ್ರತಿಯೊಂದು ಅಸ್ಥಿಯನ್ನು ಹೆಕ್ಕುವಾಗ ಅಮ್ಮನ ದನಿ "ಕಂದಮ್ಮಗಳ ನನ್ನ ಉಳಿದ ಭಾಗಗಳನ್ನು ನಿಧಾನವಾಗಿ ಎತ್ತಿಕೊಳ್ಳಿ.. ಬಿಸಿ ಇರುತ್ತೆ.. ಅಸ್ಥಿಯ ಚೂಪಾದ ಭಾಗ ಕೈಗೆ ಚುಚ್ಚಬಹುದು.. ಮೆಲ್ಲನೆ ಆರಿಸಿಕೊಳ್ಳಿ ಧಾವಂತ ಬೇಡ" ಎಂದು ಹೇಳಿದ ಹಾಗೆ ಭಾಸವಾಯಿತು.. 

ರುದ್ರಭೂಮಿಯಲ್ಲಿ ನೆಡೆಯಬೇಕಿದ್ದ ಪೂಜಾ ವಿಧಾನಗಳನ್ನು ಗುರುಗಳು ಸಂಯಮದಿಂದ ಮಾಡಿಸಿದರು.. ಹಾಗೆಯೇ ತುಸು ಅರ್ಥ ವಿಸ್ತಾರವನ್ನು ಹೇಳಿದರು.. ಮನಸ್ಸಿನ ಕಡಲಿಗೆ ಸಮಾಧಾನದ ಅಲೆಗಳು ಬಡಿಯುತ್ತಿದ್ದವು.. 

ಜೀವನ ಬದುಕಿದಾಗ ಮಾತ್ರವಲ್ಲ.. ಆಳಿದ ಮೇಲೆಯೂ ಜೀವನ ಇರುತ್ತದೆ.. ಇದು ನನ್ನ ಅಭಿಪ್ರಾಯ.. ಇರೋತನಕ ಚೆನ್ನಾಗಿ ನೋಡಿಕೊಂಡು ಅಂತ್ಯ ಸಂಸ್ಕಾರವನ್ನು ಅಷ್ಟೇ ಶ್ರದ್ದೆಯಿಂದ ನೆರವೇರಿಸಿದಾಗ ಮನಸ್ಸಿಗೆ ನೆಮ್ಮದಿ.. 

ಅಮ್ಮ ಚಿಕ್ಕವರಾಗಿದ್ದಾಗ ಕಿತ್ತಾನೆಯಲ್ಲಿ ಹಿರಿಯರೊಬ್ಬರ ಸಾವಿನ ನಂತರ ಕೇಳಿದ್ದ ಗರುಡ ಪುರಾಣದಲ್ಲಿನ ಕೆಲವು ಘಟನೆಗಳನ್ನು ನನಗೆ ಆಗಾಗ ಹೇಳುತ್ತಿದ್ದರು.. ವೈತರಣೀ ನದಿಯನ್ನು ದಾಟಿಕೊಂಡು ಬಿರು ಬಿಸಿಲ ಮರಳುಗಾಡಿನಲ್ಲಿ ಹೋಗುವಾಗ.. ಯಮಕಿಂಕಕರು ಎಳೆದೊಯ್ಯುವ ಜೀವಿಯನ್ನು ಕೇಳುತ್ತಾರಂತೆ.. ನಿನ್ನ ಮಕ್ಕಳು ನಿನಗೆ ಬಾಯಾರಿಕೆಗೆ ನೀರು ಕೊಟ್ಟಿದ್ದಾರೆಯೇ... ಬಿಸಿಲು ಎಂದು ಛತ್ರಿ ಕೊಟ್ಟಿದ್ದಾರೆಯೇ.. ಸುಡುವ ಕಾಲಿಗೆ ಪಾದರಕ್ಷೆಯನ್ನು ಕೊಟ್ಟಿದ್ದಾರೆಯೇ .. ಊಟಕ್ಕೆ ಪಿಂಡವನ್ನು ಕೊಟ್ಟಿದ್ದಾರೆಯೇ .. ಎಳ್ಳು ನೀರನ್ನು ಕೊಟ್ಟಿದ್ದಾರೆಯೇ... ದಣಿವಾರಿಸಿಕೊಳ್ಳೋಕೆ ಚಾಪೆಯನ್ನು ನೀಡಿದ್ದಾರೆಯೇ.. ಇದಕ್ಕೆಲ್ಲ ಉತ್ತರ ಹೌದು ಎಂದಾದರೆ ನೀವು ಪುಣ್ಯ ಮಾಡಿದ್ದೀರಾ... ಮತ್ತೆ ನಿಮ್ಮ ಪಯಣ ಸುಖಕರವಾಗಿರುತ್ತೆ ಎನ್ನುತ್ತಾ ಪಾಪ ಪುಣ್ಯಗಳ ವಿಶ್ಲೇಷಣೆಗೆ ಯಮಾಲಯಕ್ಕೆ ಕರೆದೊಯ್ಯುತ್ತಾರಂತೆ ... 

ಸಾವಿನ ನಂತರವೂ ಜೀವನವಿದೆ ಎನ್ನುವುದನ್ನು ಗರುಡ ಪುರಾಣ ಓದಿ ತಿಳಿಯಬೇಕು ಎಂದು ಹೇಳಿದ್ದರು.. ಈ ಕುತೂಹಲದ ವಿಚಾರದ ಆಳಕ್ಕೆ ಇಳಿದು.. ಅಪ್ಪ ನಮ್ಮನ್ನು ಬಿಟ್ಟು ಹೋದಾಗ.. ಪುಸ್ತಕದ ಅಂಗಡಿಗಳನ್ನು ತಡಕಾಡಿ ಪ್ರೇತ ಕಾಂಡ ಭಾಗವನ್ನು ತಂದು ಒಬ್ಬನೇ ಓದಿದ್ದೆ.. ಮೈ ಜುಮ್ ಎಂದಿತ್ತು.. 

ಇಂದು ಅಮ್ಮನ ಅಸ್ಥಿ ಸಂಚಯನ ಮಾಡುವಾಗ ಅದೆಲ್ಲಾ ನೆನಪಿಗೆ ಬಂತು.. 

ಅಣ್ಣ ಅಮ್ಮನ ಅಸ್ಥಿಯನ್ನು ಮಡಕೆಯಲ್ಲಿ ಇಟ್ಟುಕೊಂಡು ಪಶ್ಚಿಮವಾಹಿನಿಯ ದಡದಲ್ಲಿ ಕೂತಾಗ.. ಕಣ್ಣು ಮನಸ್ಸು ತುಂಬಿ ಬಂತು..ಕರುನಾಡಿನ ಜೀವನದಿ ತುಂಬಿ ಹರಿಯುತ್ತಿದ್ದಳು... ಅದಕ್ಕೆ ಸರಿ ಸಮಾನವಾಗಿ ನಮ್ಮ ಕಣ್ಣುಗಳು.. ಮನಸ್ಸು ತುಂಬಿ ತುಳುಕುತ್ತಿತ್ತು... 

"ನೋಡಿ ಸರ್.. ಮಡಕೆಯನ್ನು ಭುಜದ ಮೇಲೆ ಇಟ್ಟುಕೊಂಡು.. ಇವರು ತೆಪ್ಪದಲ್ಲಿ ನದಿಯ ಮಧ್ಯಭಾಗಕ್ಕೆ ಕರೆದುಕೊಂಡು ಹೋಗುತ್ತಾರೆ.. ಅಲ್ಲಿ ಸದ್ದು ಮಾಡದ ಹಾಗೆ ಮಡಕೆಯನ್ನು ನೀರಿನಲ್ಲಿ ಮುಳುಗಿಸಿ.. ಆ ಸದ್ದು ನಿಮಗೆ ಕೇಳಿಸದಂತೆ ಕಿವಿ ಮುಚ್ಚಿಕೊಳ್ಳಿ .. ಮತ್ತೆ ಆ ಕಡೆ ತಿರುಗಿ ನೋಡದೆ.. ನಾರಾಯಣ ನಾರಾಯಣ ಎನ್ನುತ್ತಾ ವಾಪಸ್ಸು ಬಂದು ಬಿಡಿ.." ಎಂದರು..

ಹಾಗೆ ಮಾಡಿದೆವು.. 

ಎಪ್ಪತೊಂಭತ್ತು ವಸಂತಗಳು ಈ ಭೂಮಿಯ ಮೇಲೆ ಓಡಾಡಿದ್ದ ನಮ್ಮ ಮನೆಯ ಜೀವನಾಡಿ ಕರುನಾಡಿನ ಜೀವನದಿಯಲ್ಲಿ ಲೀನವಾಗಿ ಹೋದರು.. 

ಅಮ್ಮ ಎನ್ನುವುದು ಜೀವವಲ್ಲ.. ವಸ್ತುವಲ್ಲ.. ಅದೊಂದು ಅದ್ಭುತ ಅನುಭವ.. ಅದ್ಭುತ ಕಡಲು.. ಬಂದಷ್ಟು ಅಲೆಗಳೇ... ಹೆಕ್ಕಿದಷ್ಟು ನೆನಪುಗಳೇ.. 

ಕಿತ್ತಾನೆಯಿಂದ ಶುರುವಾದ ಪಯಣ.. ಹಾಸನ.. ಶಿವಮೊಗ್ಗ.. ಬೆಂಗಳೂರಿನಲ್ಲಿ ಹರಡಿ.. ತನ್ನ ಕಡೆಯ ತಾಣವನ್ನು ಕಂಡುಕೊಂಡಿದ್ದು ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ.. 

                        ಚಿತ್ರಕೃಪೆ ... ಗೂಗಲೇಶ್ವರ

ಅಲ್ಲಿಯ ತನಕ ಅಮ್ಮ  ಅಲ್ಲಿದ್ದಾರೆ.. ಇಲ್ಲಿದ್ದಾರೆ ಎನಿಸುತಿದ್ದ ಮನಸ್ಸಿಗೆ ಬಂದದ್ದು.. ಅಮ್ಮ ಎನ್ನುವ ದೈತ್ಯ ಶಕ್ತಿ ನಮ್ಮೊಳಗೇ ಮೆಲ್ಲನೆ ಪ್ರವೇಶಿಸುತ್ತಿದ್ದಾರೆ ಎಂದು...ಅರಿವಾದ ಕ್ಷಣವದು!

Monday, October 19, 2020

ಅಮ್ಮ ಎನ್ನುವ ದೈತ್ಯ Server ಲಾಗ್ ಆಫ್ ಆದ ದಿನ

ಬರ್ತಾ ಇದ್ದೀನಿ.. ಅಂದ ಅಣ್ಣ.. 

ನಾನೂ ಹೊರಟೆ ಅಂದೇ ನಾನು... 

ಮನೆ ಹತ್ತಿರ ಬೈಕ್ ನಿಲ್ಲಿಸಿ ಲಗುಬಗೆಯಿಂದ ಮನೆಯೊಳಗೇ ಓಡಲು ಶುರು ಮಾಡಿದೆ.. ಮೆಟ್ಟಿಲು ಹತ್ತಿರಾನೇ ಮುರುಳಿ ಕಂಡು ತಲೆ ಅಲ್ಲಾಡಿಸಿದ.. 

ಮನದೊಳಗೆ ಒಂದು ತಂತಿ ಸಣ್ಣಗೆ ಮಿಡಿಯಿತು.. ಏನೋ ಅನಾಹುತವಾಗಿದೆ ಅಂತ ಅರಿವಾಯಿತು.. 

ಭಾರವಾದ ಹೆಜ್ಜೆಗಳಿಂದ ಮೊದಲನೇ ಮಹಡಿಗೆ ಬಂದೆ.. 

ಹೃದಯ ಒಡೆದು ಹೋಗುವಂತಹ ಅಳು.. ಅಕ್ಕ ಆ ರೀತಿ ಎಂದೂ ಅತ್ತಿದ್ದು ನೋಡಿರಲಿಲ್ಲ.. ಕೇಳಿರಲಿಲ್ಲ.. ತಾಯಿಯನ್ನು ತಾಯಿಯಂತೆ  ನೋಡಿಕೊಂಡಿದ್ದ ಅಕ್ಕನ ಮನಸ್ಸು ಅಕ್ಷರಶಃ ಕಣ್ಣೀರಾಗಿ, ಅಳುವಾಗಿ ಹೊರಬರುತ್ತಿತ್ತು.. 

ಅಲ್ಲಿ ನಿಲ್ಲಲಾರದೆ ಕೆಳಗೆ ಆಂಬುಲೆನ್ಸ್ ಬಳಿ ಬಂದೆ.. ಅಲ್ಲಿಂದ ಮೆಲ್ಲಗೆ ಮಂಚದ ಮೇಲೆ ಮಲಗಿಸಲು ಎತ್ತಿ ತರುವಾಗ ಅಮ್ಮನ ಕೈಗಳು ಅಚಾನಕ್ ಚಲನೆ ಬಂದ ಹಾಗೆ ಭಾಸವಾಯಿತು.. 

ಅದೇ ಉತ್ಸಾಹಭರಿತ ಮುಖ.. ಆದರೆ ಅಲ್ಲಿ ಜೀವ ಮಾತ್ರ ಇರಲಿಲ್ಲ.. 

ತಾನು ಇಷ್ಟಪಡುತ್ತಿದ್ದ ಹಿರಿಯರನ್ನು, ಕಿತ್ತಾನೆಯ  ಕಿರಿ ಹಿರಿಯರನ್ನು,  ತನ್ನ ಪತಿರಾಯನನ್ನು, ತನಗೆ ಎರಡನೇ ತಾಯಿ ಎನಿಸಿಕೊಂಡಿದ್ದ ತನ್ನ ಅತ್ತೆಯನ್ನು ಸೇರಲು ಹೊರಟೇಬಿಟ್ಟಿದ್ದರು.. 

ಅಮ್ಮ ಎನ್ನುವ ಪದದ ಅರ್ಥ ನನಗೆ ಅರ್ಥವಾದದ್ದು ಬಾಲ್ಯದಲ್ಲಿ.. ಹೊಟ್ಟೆ ಹಸಿದು, ನೆಲಕ್ಕೆ ಹೊಟ್ಟೆ ತಾಗಿಸಿಕೊಂಡು ಹಸಿವನ್ನು ಮರೆಮಾಚುವ ಪ್ರಯತ್ನ ಮಾಡುತಿದ್ದಾಗ, ಹಸಿದ ಹೊಟ್ಟೆಗೆ ಒಂದಷ್ಟು ತಿಂಡಿ ತರುತ್ತಾರೆ ಎನ್ನುವ ಕಾಯುವಿಕೆಯಲ್ಲಿ.. 

ಸಾಹಸ, ಛಲದ ಜೀವನ, ವಿಧಿಯ ಆಟಕ್ಕೆ ತಲೆಬಾಗದೆ.. ತನ್ನ ಪತಿರಾಯನ ಹೆಗಲಿಗೆ ಹೆಗಲು ಕೊಟ್ಟು ತನ್ನ ನಾಲ್ಕು ಮಕ್ಕಳನ್ನು ಯಾರ ಹಂಗು ಇಲ್ಲದಂತೆ ಬೆಳೆಸಿ.. ತನ್ನ ಅತ್ತೆ ಅರ್ಥಾತ್ ತನ್ನ ಪತಿದೇವರ ಅಮ್ಮನ ಹೇಳಿದಂತೆ.. ನನ್ನ ಮಗನನ್ನು ನನ್ನ ಮೊಮ್ಮಕ್ಕಳನ್ನು ಯಾರ ಮನೆ ಬಾಗಿಲಿಗೂ ಕಳಿಸದೆ ಸಾಕಬೇಕು ಎಂದು ಹೇಳಿದ ಮಾತು.. ವಿಶಾಲೂ ನನ್ನ ಮಗನೂ ಸೇರಿದಂತೆ ನಿನಗೆ ಐದು ಮಕ್ಕಳು..  ಅವರ ಜವಾಬ್ಧಾರಿ ನಿನದು ಎಂದು ಭಾಷೆ ತೆಗೆದುಕೊಂಡಿದ್ದನ್ನು ಅಮ್ಮ ಸದಾ ಹೇಳುತ್ತಿದ್ದರು.. 

ಸಾಹಸ ಎಂದರೇನು, ಬದುಕು ಎಂದರೇನು.. ಇದನ್ನು ನಾ ನೋಡಿ ಕಲಿತದ್ದು ಅಮ್ಮನಿಂದ.. ಜೀವನದಲ್ಲಿ ಕಿರುಚಾಡದೆ, ಕೂಗಾಡದೆ.. ಎಲ್ಲರ ಮುಂದೆ ತಲೆ ಎತ್ತಿ ನಿಲ್ಲುವುದನ್ನು ಕಲಿಸಿದ ಅಮ್ಮ ಎಂದು ಗಗನತಾರೆಯಾಗಿದ್ದಾರೆ.. 

ಚಾಮರಾಜಪೇಟೆಯ ಟಿ ಆರ್ ಮಿಲ್ ರುದ್ರಭೂಮಿಯಲ್ಲಿ ಚಿತೆಯನ್ನು ಸಿದ್ಧಪಡಿಸಿ ಅಂತ್ಯ ಸಂಸ್ಕಾರ ನೆರೆವೇರಿಸಿದೆವು.. ಚಿತೆ ಧಗ ಧಗ ಉರಿಯುತ್ತಿತ್ತು.. ಹಾಗೆ ಉರಿಯುತ್ತಿದ್ದ ಚಿತೆಯನ್ನು ನೋಡುತ್ತಾ  ಸ್ವಲ್ಪ ಹೊತ್ತು ನಿಂತಿದ್ದೆ.. 

ಚಿತೆಯೊಳಗೆ ಮಲಗಿದ್ದ ಅಮ್ಮ.. "ಶ್ರೀಕಾಂತಾ ಇದು ಬೆಂಕಿಯಲ್ಲ.. ನನ್ನ ಬಾಲ್ಯದಿಂದಲೂ ಹತ್ತಿ ಉರಿಯುತ್ತಿರುವ ಉತ್ಸಾಹದ ಜ್ಯೋತಿಯಿದು.. ಈ ಬೆಳಕಿನಲ್ಲಿ ನನ್ನ ಬದುಕನ್ನು ನಿನ್ನ ಅಪ್ಪನ ಜೊತೆ ಹೆಜ್ಜೆ ಹಾಕುತ್ತಾ ಸಾಗಿದೆ.. ಇಂದು ಆ ಜ್ಯೋತಿ ಜ್ವಾಲೆಯಾಗಿ ನನ್ನ ಭೌತಿಕ ಶರೀರವನ್ನು ದಹಿಸುತ್ತಿರಬಹುದು.. ಆದರೆ ಇದು ನನ್ನ ಸುಡುತ್ತಿಲ್ಲ.. ಬದಲಿಗೆ ನಿಮ್ಮ ಜೀವನದ ಹಾದಿಗೆ ಬೆಳಕಾಗಿರುತ್ತದೆ.. 


"ಒಂದೆರಡು ಕಣ್ಣೀರ ಹನಿಗಳು ಜಾರಬಹುದು.. ಆದರೆ ಈ ಜ್ಯೋತಿ ಎಂದಿಗೂ ನಂದಿ ಹೋಗದು.." 

"ನನ್ನ ಆಶೀರ್ವಾದ ಅನುಗ್ರಹ ಸದನದ ಮೇಲೆ ಸದಾ ಇರುತ್ತದೆ.. ನನ್ನ ಎಲ್ಲಾ ಮಕ್ಕಳೂ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದೀರಾ ನಿಮಗೆ ಸದಾ   ಒಳ್ಳೆಯದೇ ಆಗುತ್ತದೆ.. "

ತಲೆ ಎತ್ತಿ ಆಗಸ ನೋಡಿ.. ನಕ್ಷತ್ರದ ಬೆಳಕಲ್ಲಿ ನಾ ಇರುತ್ತೇನೆ ಎಂದು ಹೇಳುತ್ತಾ ಆ ಜ್ಯೋತಿಯಲ್ಲಿ ಜ್ವಾಲೆಯಾಗಿ ಆಗಸಕ್ಕೆ ಸಾಗಿದರು.. !

ಅಮ್ಮ.. ನಿನ್ನ ತ್ಯಾಗಕೆ ಸರಿಸಾಟಿ ಯಾರೂ ಇಲ್ಲ ಎಂದಿತು ಒಂದು ಧ್ವನಿ.. 

ಸಾವಿರ ನದಿಗಳು ಸೇರಿದರೇನು ಸಾಗರಕೆ ಸಮನಾಗುವುದೇನು.. 

ಶತಕೋಟಿ ದೇವರ ಪೂಜಿಸಿದರೇನು ಅಮ್ಮನ ಹರಕೆಗೆ ಸರಿಸಾಟಿಯೇನು.. 

ತಾಯಿಗೆ ಆನಂದ ತಂದರೆ ಸಾಕು ಬೇರೆ ಪೂಜೆ ಏತಕೆ ಬೇಕು.. 

ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ ಬಾಳಲೆ ಬೇಕು ಈ ಮನೆ ಬೆಳಕಾಗಿ!!!!

Sunday, October 11, 2020

ಯಶಸ್ಸಿಗೆ ಇನ್ನೊಂದು ಹೆಸರೇ ವಿಜಯ್...

 ಸಿನೆಮಾಗಳ ಟೈಟಲ್ ಕಾರ್ಡಿನಿಂದ ನೋಡುವ ಆಸೆ ಅರಿವಿಲ್ಲದೆ ಸಣ್ಣ ವಯಸ್ಸಿನಿಂದ ಹತ್ತಿತ್ತು ಟೈಟಲ್ ಕಾರ್ಡಿನಿಂದ ಸಿನಿಮಾ ನೋಡದೆ ಹೋದರೆ ಅದೇನೋ ಕಳೆದುಕೊಂಡ ಅನುಭವ.. ಈಗಲೂ ಅಷ್ಟೇ ಟಿವಿಯಲ್ಲಿಯೇ ಆಗಲಿ ಟಾಕೀಸಿನಲ್ಲಿ ಆಗಲಿ.. ಬಿಳಿ ಪರದೆಯಿಂದ ಬಿಳಿ ಪರದೆಯ ತನಕ ನೋಡಿದರೇನೇ ಸಮಾಧಾನ.. 

ನನ್ನ ಸಿನಿಮಾ ಹುಚ್ಚಿನ ಆರಂಭದ ದಿನಗಳಲ್ಲಿ ಹೀಗೆ ಮನಸೆಳೆದದ್ದು ಪುಟ್ಟಣ್ಣ ಕಣಗಾಲ್, ದೊರೈ ಭಗವಾನ್, ಹುಣುಸೂರು ಕೃಷ್ಣಮೂರ್ತಿ, ಜೊತೆಯಲ್ಲಿ ಇನ್ನೊಂದು ಹೆಸರೇ ವಿಜಯ್... 


ಮೇಲೆ ಹೇಳಿದ ನಿರ್ದೇಶಕರು ಒಬ್ಬರಿಗಿಂತ ಒಬ್ಬರು ಭಿನ್ನ ವಿಭಿನ್ನ.. ಒಬ್ಬರ ಸಿನಿಮಾ ಛಾಯೆ ಇನ್ನೊಬ್ಬರ ಮೇಲೆ ಇರಲಿಲ್ಲ .. 

ವಿಜಯರೆಡ್ಡಿ ಅಂತ ಹೆಸರಿದ್ದರೂ ವಿಜಯ್ ಎಂದೇ ಪ್ರಖ್ಯಾತರಾಗಿದ್ದ ನಿರ್ದೇಶಕರು ಇವರು... ಹೆಸರಲ್ಲಿ ಒಂದು ರೀತಿಯ ನಮ್ಮ ಮನೆಯವರು ಎನ್ನುವಂತಹ ಆತ್ಮೀಯತೆ ಕಾಣುತಿತ್ತು.. 

ಈ ಮಹಾ ನಿರ್ದೇಶಕ ಕನ್ನಡ ಚಿತ್ರರಂಗಕ್ಕೆ ಕೊಟ್ಟ ಅದ್ಭುತ ರತ್ನಗಳು ಅನೇಕಾನೇಕ.. ಸಾಮಾನ್ಯ ಹೇಳುತ್ತಾರೆ ಯಾವುದೇ ಕಲೆ ನಿಧಾನವಾಗಿ ಪ್ರಗತಿಯ ಪಥವೇರುತ್ತದೆ.. ಈ ಮಾತು ನಿಜವಾದರೂ ಈ ಮಹನೀಯರು ಮೊದಲ ಮೆಟ್ಟಿಲಿನಿಂದಲೇ ಯಶಸ್ಸಿನ ತೀವ್ರಗತಿ ಕಂಡವರು. 

ಅಣ್ಣಾವ್ರ ಸಿನಿಮಾಗಳು, ಅಣ್ಣಾವ್ರ ಚಿತ್ರ ತಂಡ ಸೇರುವುದು ಸಾಮಾನ್ಯದ ಮಾತಾಗಿರಲಿಲ್ಲ.. ಚಿನ್ನವನ್ನು ಓರೇ ಹಚ್ಚಿ ನೋಡುವ ದೊಡ್ಡ ತಂಡವೇ ಅಲ್ಲಿತ್ತು.. 

ಅಣ್ಣಾವ್ರು, ಅವರ ತಮ್ಮ ವರದಪ್ಪ, ಪಾರ್ವತಮ್ಮ, ಚಿ ಉದಯಶಂಕರ್.. ಇವರಿಗೆಲ್ಲ ಒಪ್ಪಿಗೆಯಾದರೆ ಮಾತ್ರ ತಂಡದೊಳಗೆ ಪ್ರವೇಶ ಅನ್ನುವಂತಹ ಸ್ಥಿತಿ.. 

ಅಂತಹ ಪರಿಸ್ಥಿತಿಯಲ್ಲಿ ತಮ್ಮ ನಿರ್ದೇಶನದ ನಾಲ್ಕನೇ ಪ್ರಯತ್ನವೇ ಕರುನಾಡಿನ ಮನೆಮಾತಾದ ಗಂಧದ ಗುಡಿ ಎಂದರೆ ಇವರ ಅಗಾಧವಾದ ಪ್ರತಿಭೆಯ ಅರಿವಾಗುತ್ತದೆ.. 

ಬರೋಬ್ಬರಿ ಒಂಭತ್ತು ಅಣ್ಣಾವ್ರ ಚಿತ್ರರತ್ನಗಳನ್ನು ಕೊಟ್ಟ ನಿರ್ದೇಶಕರು ಇವರು.. 

ಗಂಧದ ಗುಡಿ - ಅರಣ್ಯದ ಹಿನ್ನೆಲೆಯ  ಕಳಕಳಿಯ ಚಿತ್ರ 

ಶ್ರೀ ಶ್ರೀನಿವಾಸ ಕಲ್ಯಾಣ - ಪೌರಾಣಿಕ ಚಿತ್ರ 

ಮಯೂರ .. ಐತಿಹಾಸಿಕ ಚಿತ್ರ 

ನಾ ನಿನ್ನ ಮರೆಯಲಾರೆ .. ಸಾಮಾಜಿಕ ಪ್ರೇಮ ಕಥೆ 

ಬಡವರ ಬಂಧು .. ಸಾಮಾಜಿಕ ತಂದೆ ಮಗನ ಸಂಬಂಧದ ಚಿತ್ರ 

ಸನಾದಿ ಅಪ್ಪಣ್ಣ .. ಸಂಗೀತ ಕಲಾವಿದನ ಅದ್ಭುತ ಚಿತ್ರಣ 

ಹುಲಿಯ ಹಾಲಿನ ಮೇವು .. ಕೊಡಗಿನ ವೀರನ ಕಥಾನಕ 

ನೀ ನನ್ನ ಗೆಲ್ಲಲಾರೆ .. ಗೆದ್ದು ಸಾಧಿಸುವ ಸಾಮಾಜಿಕ ಕಥಾನಕ 

ಭಕ್ತ ಪ್ರಹ್ಲಾದ .. ಪೌರಾಣಿಕ ಚಿತ್ರ 

ಪ್ರತಿಯೊಂದು ಚಿತ್ರವೂ ವಿಭಿನ್ನ.. ಅಣ್ಣಾವ್ರ ಬಹುಮುಖ ಪ್ರತಿಭೆಯನ್ನು ಇನ್ನಷ್ಟು ಹೊಳಪಿಗೆ ತಂದ ಚಿತ್ರಗಳಿವು. 

ತೆಲುಗು ಮಾತೃಭಾಷೆಯಾದರೂ ಕನ್ನಡಲ್ಲಿ ಸುಮಾರು ನಲವತ್ತಕ್ಕೂ ಹೆಚ್ಚಿನ ಚಿತ್ರಗಳನ್ನು ನಿರ್ದೇಶಿಸಿದರು. ಶಂಕರ್  ನಾಗ್ ಅವರಿಗೆ ಮರು ಜೀವ ಕೊಟ್ಟ ಚಿತ್ರ ಆಟೋ ರಾಜ, ವಿಷ್ಣುವಿನ ಸಾಹಸದ ಮಜಲಿಗೆ ಇನ್ನಷ್ಟು ಹೊಳಪು ಕೊಟ್ಟ ವೀರಾಧಿವೀರ, ದೇವಾ, ಅಂಬಿಗೆ ರೆಬೆಲ್ ಇಮೇಜ್ ಬರುವಂತೆ ಮಾಡಿದ ಅನೇಕ ಚಿತ್ರಗಳಲ್ಲಿ ಖದೀಮ ಕಳ್ಳರು ಕೂಡ ಒಂದು.. ಹಾಗೆ ದೆವ್ವ ಭೂತದ ಕಾಡುವ ಕತೆಯನ್ನು, ದೆವ್ವದ ಶಕ್ತಿಯ ಮೇಲೆ ದೇವರ ಶಕ್ತಿ ಗೆಲ್ಲುವ ಅನಂತ್ ನಾಗ್ ಅವರ ನಾ ನಿನ್ನ ಬಿಡಲಾರೆ.. ಎಲ್ಲವೂ ಸುಂದರ .. ಪ್ರಭಾಕರ್... ಹೊಸ ಪೀಳಿಗೆಯ ಚರಣ್ ರಾಜ್, ಹೀಗೆ ಅನೇಕ ನಟ ನಟಿಯರಿಗೆ ಹೊಸ ಚಿತ್ರ ಬದುಕು ಕೊಟ್ಟವರು.. 


ಇವರ ಮೊದಲ ಸಿನೆಮಾದಿಂದ ಕಡೆಯ ಸಿನೆಮಾದವರೆಗೂ ಹಾಡುಗಳು, ಮತ್ತು ಚಿತ್ರ ಸಂಗೀತ ಅಸಾಧಾರಣವಾಗಿತ್ತು.. ಅದ್ಭುತ ಯಶಸ್ಸಿಗೆ ಹಾಡುಗಳು ಎಷ್ಟು ಕಾರಣವೋ.. ಹಾಗೆ ಅಶ್ಲೀಲತೆ ಇಲ್ಲದೆ ಮನೆ ಮಂದಿಯೆಲ್ಲಾ ಕೂತು ನೋಡಬಹುದಾದ ಚಿತ್ರಗಳನ್ನು ಕೊಟ್ಟಿದ್ದು ಇವರ ಹೆಗ್ಗಳಿಕೆ. 

ನನಗರಿವಿಲ್ಲದೆ ಇಂದಿನ ಶುಭನುಡಿಯನ್ನು ಇವರ ನಿರ್ದೇಶಕನ ಪ್ರತಿಭೆಗೆ ಅರ್ಪಿಸಿದೆ. 

ಕತೆ..ಚಿತ್ರಕತೆ..ಸಂಭಾಷಣೆ..ಸಾಹಿತ್ಯ.. ಹೀಗೆ ಹಲವಾರು ವಿಭಾಗಗಳಲ್ಲಿ ಕೆಲಸ ಮಾಡಿಕೊಡುತ್ತಾರೆ...ಇವರನ್ನೆಲ್ಲಾ ಸರಿಯಾಗಿ ತೂಗಿಸಿಕೊಂಡು ತನ್ನ ಕಲ್ಪನಾ ಶಕ್ತಿ ಮತ್ತು ಕ್ರಿಯಾತ್ಮಕ ಕಲೆಯನ್ನು ಉಪಯೋಗಿಸಿಕೊಂಡು ಉತ್ತಮ ಚಿತ್ರ ನಿರೂಪಿಸುವುದು ನಿರ್ದೇಶಕನ ಕೆಲಸ!

ನಮ್ಮ ಬದುಕಿನ ನಿರ್ದೇಶಕರು ನಾವೇ!

ಶುಭದಿನ!

ನಂತರ ನನ್ನ ನೆಚ್ಚಿನ ಸಹೋದರ ಸತೀಶ್ ಕನ್ನಡಿಗ ಸಂದೇಶ ಕಳಿಸಿದರು.. ಅಣ್ಣ ನಿರ್ದೇಶಕ ವಿಜಯ್ ಅವರ ಬಗ್ಗೆ ಒಂದು ಲೇಖನ ಬರಲಿ.. ನಿಮ್ಮ ಬರವಣಿಗೆಯಲ್ಲಿ ಅವರನ್ನು ಕಾಣುವ ಆಸೆ ಅಂತ.. 

ಆ ಹರಿವಿನಲ್ಲಿಯೇ ಮೂಡಿಬಂದದ್ದು ಈ ಲೇಖನ.. 

ನಿರ್ದೇಶಕ ವಿಜಯ್ ಅವರ ಎಕ್ಸಿಟ್ ನಿಂದ ಕನ್ನಡ ಚಿತ್ರರಂಗ ಬಡವಾಗಿದೆ, ತುಂಬಲಾರದ ನಷ್ಟ ಎಂಬ ಸವಕಲು ಮಾತುಗಳನ್ನು ಹೇಳೋಕೆ ಇಷ್ಟಪಡೋಲ್ಲ.. 

ಅವರು ತಮ್ಮ ಪ್ರತಿಭೆಯನ್ನೆಲ್ಲಾ ಧಾರೆಯೆರೆದು ಚಿತ್ರಗಳನ್ನು ಕೊಟ್ಟಿದ್ದಾರೆ, ಅದನ್ನು ನೋಡಿ ಆನಂದಿಸಿವುದೇ ನಮ್ಮ ಕೆಲಸ.. ಮತ್ತು ಅದೇ ಅವರನ್ನು ಸದಾ ನೆನಪಿಸಿಕೊಳ್ಳುವಂತೆ ಮಾಡುವುದು.. 

ವಿಜಯ್ ಸರ್.. ನೀವು ಕೊಟ್ಟ ಚಿತ್ರಗಳು ಅದ್ಭುತ,ಅಮೋಘ .... ಪ್ರತಿ ಚಿತ್ರದಲ್ಲೂ ನೀವು ಜೀವಂತವಾಗಿದ್ದೀರಾ.. 

ಭಕ್ತ ಅಂಬರೀಷ ಅಣ್ಣಾವ್ರ ನಟನೆಯಲ್ಲಿ ನಿಮ್ಮ ನಿರ್ದೇಶನದಲ್ಲಿ ಮೂಡಿ ಬಂದಿದ್ದರೆ ಖಂಡಿತ ಅದೊಂದು ಅದ್ಭುತ ಚಿತ್ರವಾಗುತ್ತಿತ್ತು.. ಆದರೆ ಅಣ್ಣಾವ್ರ ಮಂಡಿ ನೋವು.. ಹಾಗೂ ಸಾಹಿತ್ಯ ರತ್ನ ಚಿ ಉದಯಶಂಕರ್ ಅವರ ಅನುಪಸ್ಥಿತಿ ಈ ಚಿತ್ರವನ್ನು ಮೇಲೆತ್ತಲು ಸಾಧ್ಯವಿಲ್ಲ ಎನ್ನುವ ಸತ್ಯ ಬಹುಶಃ ಆ ದೇವರಿಗೂ ಅರಿವಾಗಿ ಚಿತ್ರೀಕರಣವಾಗಲೇ ಇಲ್ಲ ಅನ್ನಿಸುತ್ತದೆ .. 


ಇರಲಿ ಕತೆಯನ್ನು ಹೊಳಪಾಗುವಂತೆ ಮಾಡುವ ವರದಪ್ಪ, ಸಾಹಿತ್ಯವನ್ನು ಕೊಡುವ ಚಿ ಉದಯಶಂಕರ್, ಸಂಗೀತವನ್ನು ವಿಜೃಂಭಿಸುವಂತೆ ಮಾಡುವ ಎಂ ರಂಗರಾವ್,  ಟಿಜಿ ಲಿಂಗಪ್ಪ, ಛಾಯಾಗ್ರಾಹಕ ಎಸ್ ವಿ ಶ್ರೀಕಾಂತ್ ಅಲ್ಲೇ ಇದ್ದಾರೆ.. ಇವರೆಲ್ಲ ಜೊತೆಯಲ್ಲಿ ನಿರ್ಮಾಪಕಿ ಪಾರ್ವತಮ್ಮನವರು ಇದ್ದಾರೆ.. ಖಂಡಿತ ಒಂದು ಒಳ್ಳೆ ಚಿತ್ರವನ್ನು ಅಲ್ಲಿ ಚಿತ್ರೀಕರಿಸಿ ತೆರೆಗೆ ತನ್ನಿ.. !

ನಿಮ್ಮ ಹೆಸರು ಮತ್ತು ಚಿತ್ರಗಳು ಸದಾ ಹಸಿರು... !!!