ಸುಮ್ಮನೆ ಉರಿದು ಬೂದಿಯಾಗಿದ್ದ ಕಟ್ಟಿಗೆಯ ರಾಶಿಯನ್ನು ನೋಡುತಿದ್ದೆ... ಎರಡು ದಿನದ ಹಿಂದಷ್ಟೇ ಜೀವ ತುಂಬಿದ್ದ ಶರೀರ ಇಂದು ಕಟ್ಟಿಗೆಯ ಜೊತೆಯಲ್ಲಿ ಉರಿದು ಅಸ್ಥಿ ಬಿಟ್ಟುಕೊಂಡು.. ಬೂದಿಯಾಗಿ ಚೆಲ್ಲಾಡಿತ್ತು..
ಕಿತ್ತಾನೆಯಿಂದ ಜನ್ಮ ತಳೆದ ಈ ಪುಟ್ಟ ಜೀವ.. ಸಂಸಾರಗಳ ಕಷ್ಟ ನಷ್ಟ ಸುಖ ದುಃಖಗಳನ್ನು ಹೀರಿಕೊಂಡು ಬೆಳೆದು ನಿಂತಿದ್ದ ಈ ಜೀವ ಇಂದು ಒಂದು ಮಡಿಕೆಯಲ್ಲಿ ತುಂಬಬಹುದಾದಷ್ಟು ಗಾತ್ರಕ್ಕೆ ಕುಗ್ಗಿದ್ದು.. ಮನುಜನ ದೇಹ ದೊಡ್ಡದಲ್ಲ.. ಜೀವನ ದೊಡ್ಡದು ಎನ್ನುವ ಮಾತನ್ನು ನಿಜ ಎಂದು ಸಾರಿತು..
ಅಪ್ಪನ ಕೆಲಸ ಮಾಡುವಾಗಲೂ.. ಸವಿತಾಳ ದೇಹದ ಪಳೆಯುಳಿಕೆಗಳನ್ನು ನೋಡಿದಾಗಲೂ ಆಗದ ಒಂದು ವಿಚಿತ್ರ ಸಂಕಟ ಅಂದು ನಮ್ಮನ್ನು ಕಾಡಿತು..
ಮನುಜನ ಅಸ್ತಿತ್ವವನ್ನು ಅಸ್ಥಿಗಳ ಮಧ್ಯೆ ಹುಡುಕುವ ಪರಿ ನಿಜಕ್ಕೂ ಘೋರ.. ಆದರೆ ಅದೇ ಸತ್ಯ..
ನಮ್ಮ ಮನವನ್ನು ಪೂಜಾ ಸಂಸ್ಕಾರ ಮಾಡಿಸಲು ಬಂದಿದ್ದ ಗುರುಗಳು ಗಮನಿಸಿದರೋ ಏನೋ ಎನ್ನುವಂತೆ... ಆ ಮಡಿಕೆಯಲ್ಲಿ ತುಂಬಿಕೊಳ್ಳಿ.. ಬೆಳ್ಳಗೆ ಇರೋದನ್ನ ಆರಿಸಿಕೊಳ್ಳಿ.. ತಲೆಯ ಭಾಗದಿಂದ ಶುರು ಮಾಡಿ ಎಂದರು.. ಬಿಸಿ ಇರುತ್ತೆ.. ನೀರನ್ನು ಚೆನ್ನಾಗಿ ಚುಮುಕಿಸಿ ದಪ್ಪ ದಪ್ಪನಾದ ಬೆಳ್ಳಗೆ ಇರುವ ಅಸ್ಥಿಯನ್ನು ತುಂಬಿಕೊಳ್ಳಿ.. ನೀವು ನಿಮ್ಮ ಅಣ್ಣನಿಗೆ ಸಹಾಯ ಮಾಡಿ ಅಂದರು..
ನಮ್ಮನ್ನು ಎತ್ತಾಡಿಸಿ, ಸಾಕಿ, ಬೆಳೆಸಿದ ಅಮ್ಮ ಇಂದು ಬೂದಿಗಳ ನಡುವೆ ಮಲಗಿದ್ದರು..
ಅಪ್ಪನ ಹಾಗೂ ಸವಿತಾಳ ಅಂತ್ಯ ಸಂಸ್ಕಾರ ವಿದ್ಯುತ್ ಚಿತಾಗಾರಗಳಲ್ಲಿ ನೆಡೆದಿದ್ದರಿಂದ.. ರುದ್ರಭೂಮಿಯವ ಒಂದು ಮಡಿಕೆಯಲ್ಲಿ ತುಂಬಿಕೊಟ್ಟಿದ್ದನ್ನು ಶ್ರದ್ಧಾ ಭಕ್ತಿಯಿಂದ ಸಂಚಯನ ಕಾರ್ಯ ಮಾಡಿದ್ದೆವು... ಆದರೆ ಅಮ್ಮನ ದೇಹದ ಅಂತ್ಯಸಂಸ್ಕಾರ ಕಟ್ಟಿಗೆಗಳ ನಡುವೆ ಚಿತೆಯಾಗಿ ಬೆಂದಿದ್ದು .. ನಂತರದ ದೃಶ್ಯ ಮನಕಲಕುವಂತೆ ಕಣ್ಣ ಮುಂದೆ ನೆಡೆದಿತ್ತು..
ಅಲ್ಲಿಯವರೆಗೂ ಅಸ್ಥಿ ಸಂಚಯನ ಅಂದರೆ.. ಸಿನೆಮಾಗಳಲ್ಲಿ ತೋರಿಸುವ ಹಾಗೆ ಬರಿ ಬೂದಿಯನ್ನು ಪುಣ್ಯ ಕ್ಷೇತ್ರಗಳಲ್ಲಿ ನದಿ ನೀರಿಗೆ ಸೇರಿಸಬೇಕು ಎಂದು ತಿಳಿದಿದ್ದ ನನಗೆ.. ತಾಯಿ ಲೀನವಾದ ಮೂರನೇ ದಿನ ರುದ್ರಭೂಮಿಯಲ್ಲಿ ಅಸ್ಥಿಗಳನ್ನು ನಮ್ಮ ಕೈಯಾರೆ ಮಡಿಕೆಯಲ್ಲಿ ತುಂಬುತ್ತಿದ್ದದ್ದು ಒಂದು ರೀತಿಯ ಅನನ್ಯ ಅನುಭವ.
ಪ್ರತಿಯೊಂದು ಅಸ್ಥಿಯನ್ನು ಹೆಕ್ಕುವಾಗ ಅಮ್ಮನ ದನಿ "ಕಂದಮ್ಮಗಳ ನನ್ನ ಉಳಿದ ಭಾಗಗಳನ್ನು ನಿಧಾನವಾಗಿ ಎತ್ತಿಕೊಳ್ಳಿ.. ಬಿಸಿ ಇರುತ್ತೆ.. ಅಸ್ಥಿಯ ಚೂಪಾದ ಭಾಗ ಕೈಗೆ ಚುಚ್ಚಬಹುದು.. ಮೆಲ್ಲನೆ ಆರಿಸಿಕೊಳ್ಳಿ ಧಾವಂತ ಬೇಡ" ಎಂದು ಹೇಳಿದ ಹಾಗೆ ಭಾಸವಾಯಿತು..
ರುದ್ರಭೂಮಿಯಲ್ಲಿ ನೆಡೆಯಬೇಕಿದ್ದ ಪೂಜಾ ವಿಧಾನಗಳನ್ನು ಗುರುಗಳು ಸಂಯಮದಿಂದ ಮಾಡಿಸಿದರು.. ಹಾಗೆಯೇ ತುಸು ಅರ್ಥ ವಿಸ್ತಾರವನ್ನು ಹೇಳಿದರು.. ಮನಸ್ಸಿನ ಕಡಲಿಗೆ ಸಮಾಧಾನದ ಅಲೆಗಳು ಬಡಿಯುತ್ತಿದ್ದವು..
ಜೀವನ ಬದುಕಿದಾಗ ಮಾತ್ರವಲ್ಲ.. ಆಳಿದ ಮೇಲೆಯೂ ಜೀವನ ಇರುತ್ತದೆ.. ಇದು ನನ್ನ ಅಭಿಪ್ರಾಯ.. ಇರೋತನಕ ಚೆನ್ನಾಗಿ ನೋಡಿಕೊಂಡು ಅಂತ್ಯ ಸಂಸ್ಕಾರವನ್ನು ಅಷ್ಟೇ ಶ್ರದ್ದೆಯಿಂದ ನೆರವೇರಿಸಿದಾಗ ಮನಸ್ಸಿಗೆ ನೆಮ್ಮದಿ..
ಅಮ್ಮ ಚಿಕ್ಕವರಾಗಿದ್ದಾಗ ಕಿತ್ತಾನೆಯಲ್ಲಿ ಹಿರಿಯರೊಬ್ಬರ ಸಾವಿನ ನಂತರ ಕೇಳಿದ್ದ ಗರುಡ ಪುರಾಣದಲ್ಲಿನ ಕೆಲವು ಘಟನೆಗಳನ್ನು ನನಗೆ ಆಗಾಗ ಹೇಳುತ್ತಿದ್ದರು.. ವೈತರಣೀ ನದಿಯನ್ನು ದಾಟಿಕೊಂಡು ಬಿರು ಬಿಸಿಲ ಮರಳುಗಾಡಿನಲ್ಲಿ ಹೋಗುವಾಗ.. ಯಮಕಿಂಕಕರು ಎಳೆದೊಯ್ಯುವ ಜೀವಿಯನ್ನು ಕೇಳುತ್ತಾರಂತೆ.. ನಿನ್ನ ಮಕ್ಕಳು ನಿನಗೆ ಬಾಯಾರಿಕೆಗೆ ನೀರು ಕೊಟ್ಟಿದ್ದಾರೆಯೇ... ಬಿಸಿಲು ಎಂದು ಛತ್ರಿ ಕೊಟ್ಟಿದ್ದಾರೆಯೇ.. ಸುಡುವ ಕಾಲಿಗೆ ಪಾದರಕ್ಷೆಯನ್ನು ಕೊಟ್ಟಿದ್ದಾರೆಯೇ .. ಊಟಕ್ಕೆ ಪಿಂಡವನ್ನು ಕೊಟ್ಟಿದ್ದಾರೆಯೇ .. ಎಳ್ಳು ನೀರನ್ನು ಕೊಟ್ಟಿದ್ದಾರೆಯೇ... ದಣಿವಾರಿಸಿಕೊಳ್ಳೋಕೆ ಚಾಪೆಯನ್ನು ನೀಡಿದ್ದಾರೆಯೇ.. ಇದಕ್ಕೆಲ್ಲ ಉತ್ತರ ಹೌದು ಎಂದಾದರೆ ನೀವು ಪುಣ್ಯ ಮಾಡಿದ್ದೀರಾ... ಮತ್ತೆ ನಿಮ್ಮ ಪಯಣ ಸುಖಕರವಾಗಿರುತ್ತೆ ಎನ್ನುತ್ತಾ ಪಾಪ ಪುಣ್ಯಗಳ ವಿಶ್ಲೇಷಣೆಗೆ ಯಮಾಲಯಕ್ಕೆ ಕರೆದೊಯ್ಯುತ್ತಾರಂತೆ ...
ಸಾವಿನ ನಂತರವೂ ಜೀವನವಿದೆ ಎನ್ನುವುದನ್ನು ಗರುಡ ಪುರಾಣ ಓದಿ ತಿಳಿಯಬೇಕು ಎಂದು ಹೇಳಿದ್ದರು.. ಈ ಕುತೂಹಲದ ವಿಚಾರದ ಆಳಕ್ಕೆ ಇಳಿದು.. ಅಪ್ಪ ನಮ್ಮನ್ನು ಬಿಟ್ಟು ಹೋದಾಗ.. ಪುಸ್ತಕದ ಅಂಗಡಿಗಳನ್ನು ತಡಕಾಡಿ ಪ್ರೇತ ಕಾಂಡ ಭಾಗವನ್ನು ತಂದು ಒಬ್ಬನೇ ಓದಿದ್ದೆ.. ಮೈ ಜುಮ್ ಎಂದಿತ್ತು..
ಇಂದು ಅಮ್ಮನ ಅಸ್ಥಿ ಸಂಚಯನ ಮಾಡುವಾಗ ಅದೆಲ್ಲಾ ನೆನಪಿಗೆ ಬಂತು..
ಅಣ್ಣ ಅಮ್ಮನ ಅಸ್ಥಿಯನ್ನು ಮಡಕೆಯಲ್ಲಿ ಇಟ್ಟುಕೊಂಡು ಪಶ್ಚಿಮವಾಹಿನಿಯ ದಡದಲ್ಲಿ ಕೂತಾಗ.. ಕಣ್ಣು ಮನಸ್ಸು ತುಂಬಿ ಬಂತು..ಕರುನಾಡಿನ ಜೀವನದಿ ತುಂಬಿ ಹರಿಯುತ್ತಿದ್ದಳು... ಅದಕ್ಕೆ ಸರಿ ಸಮಾನವಾಗಿ ನಮ್ಮ ಕಣ್ಣುಗಳು.. ಮನಸ್ಸು ತುಂಬಿ ತುಳುಕುತ್ತಿತ್ತು...
"ನೋಡಿ ಸರ್.. ಮಡಕೆಯನ್ನು ಭುಜದ ಮೇಲೆ ಇಟ್ಟುಕೊಂಡು.. ಇವರು ತೆಪ್ಪದಲ್ಲಿ ನದಿಯ ಮಧ್ಯಭಾಗಕ್ಕೆ ಕರೆದುಕೊಂಡು ಹೋಗುತ್ತಾರೆ.. ಅಲ್ಲಿ ಸದ್ದು ಮಾಡದ ಹಾಗೆ ಮಡಕೆಯನ್ನು ನೀರಿನಲ್ಲಿ ಮುಳುಗಿಸಿ.. ಆ ಸದ್ದು ನಿಮಗೆ ಕೇಳಿಸದಂತೆ ಕಿವಿ ಮುಚ್ಚಿಕೊಳ್ಳಿ .. ಮತ್ತೆ ಆ ಕಡೆ ತಿರುಗಿ ನೋಡದೆ.. ನಾರಾಯಣ ನಾರಾಯಣ ಎನ್ನುತ್ತಾ ವಾಪಸ್ಸು ಬಂದು ಬಿಡಿ.." ಎಂದರು..
ಹಾಗೆ ಮಾಡಿದೆವು..
ಎಪ್ಪತೊಂಭತ್ತು ವಸಂತಗಳು ಈ ಭೂಮಿಯ ಮೇಲೆ ಓಡಾಡಿದ್ದ ನಮ್ಮ ಮನೆಯ ಜೀವನಾಡಿ ಕರುನಾಡಿನ ಜೀವನದಿಯಲ್ಲಿ ಲೀನವಾಗಿ ಹೋದರು..
ಅಮ್ಮ ಎನ್ನುವುದು ಜೀವವಲ್ಲ.. ವಸ್ತುವಲ್ಲ.. ಅದೊಂದು ಅದ್ಭುತ ಅನುಭವ.. ಅದ್ಭುತ ಕಡಲು.. ಬಂದಷ್ಟು ಅಲೆಗಳೇ... ಹೆಕ್ಕಿದಷ್ಟು ನೆನಪುಗಳೇ..
ಕಿತ್ತಾನೆಯಿಂದ ಶುರುವಾದ ಪಯಣ.. ಹಾಸನ.. ಶಿವಮೊಗ್ಗ.. ಬೆಂಗಳೂರಿನಲ್ಲಿ ಹರಡಿ.. ತನ್ನ ಕಡೆಯ ತಾಣವನ್ನು ಕಂಡುಕೊಂಡಿದ್ದು ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ..
ಚಿತ್ರಕೃಪೆ ... ಗೂಗಲೇಶ್ವರ |
ಅಲ್ಲಿಯ ತನಕ ಅಮ್ಮ ಅಲ್ಲಿದ್ದಾರೆ.. ಇಲ್ಲಿದ್ದಾರೆ ಎನಿಸುತಿದ್ದ ಮನಸ್ಸಿಗೆ ಬಂದದ್ದು.. ಅಮ್ಮ ಎನ್ನುವ ದೈತ್ಯ ಶಕ್ತಿ ನಮ್ಮೊಳಗೇ ಮೆಲ್ಲನೆ ಪ್ರವೇಶಿಸುತ್ತಿದ್ದಾರೆ ಎಂದು...ಅರಿವಾದ ಕ್ಷಣವದು!
While Reading ಮೈ ಜುಮ್ ಎಂದಿತು.. Hats off to ur blog
ReplyDeleteಹಿರಿಯರ ಆತ್ಮಕ್ಕೆ ಶಾಂತಿ ಸಿಗಲಿ..ಇದರ ದುಃಖವನ್ನು ಭರಿಸುವ ಶಕ್ತಿ ಆ ಭಗವಂತ ನಿಮ್ಮ ಕುಟುಂಬಕ್ಕೆ ಕೊಡಲಿ.. ಸಮಾಧಾನ ಮಾಡಿಕೋ ಗೆಳೆಯ...
ReplyDeleteಅಮ್ಮನ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ ಸಾರ್ ನಿಮ್ಮ ತಾಯಿ ಯವರ ಆತ್ಮ ಕ್ಕೆ ಶಾಂತಿ ಸಿಗಲಿ
ReplyDeleteವಿಶಾಲ ಮನದ ವಿಶಾಲೂ ಹುಟ್ಟಿನಿಂದ ಇಹಲೋಕದ ವರೆಗಿನ ಜೀವನ ಪಯಣದ ಘಟನೆಗಳನ್ನು ಎಳೆಎಳೆಯಾಗಿ ಬಿಡಿಸಿರುವೆ.ನಿಜಕ್ಕೂಅರ್ಥಪೂರ್ಣ,
ReplyDeleteಮನುಷ್ಯನಾದವನು ಇದನ್ನರಿತು ಬಾಳಿದರೆ ಆದರ್ಶ ಮಾನವನಾಗ ಬಹುದೆಬುದನ್ನು ಅರ್ಥವತ್ತಾಗಿ ಬರೆದಿರುವೆ. ಮನುಜನ ಅಸ್ತಿತ್ವವನ್ನು ಆಸ್ತಿಯಲ್ಲಿ ಹುಡುಕು, ಆಹಾ ಎಷ್ಟು ಅಮೂಲ್ಯ, ಅರ್ಥಪೂರ್ಣ ನುಡಿ, ಹೀಗೇ ಮುಂದುವರಿಯುತ್ತಾ ಗರುಡ ಪುರಾಣ ದಿಲ್ಲಿ ಬರುವ ವರ್ಣನೆ ಪ್ರತಿಯೊಂದು ಅಂಶವೂ ಮಹತ್ವಪೂರ್ಣತೆ ಸಾರುವ ಅಂಶಗಳನ್ನು ಒಳಗೊಂಡಿದೆ.
ವಸ್ತು ಹೋದಮೇಲೆ ಅದರ ಮೌಲ್ಯ, ಮಹತ್ವ ತಿಳಿಸುವ ಸಾರವನ್ನು ಸವಿಸ್ತಾರವಾಗಿ ವಿವರಣೆ ಮಾಡಿ ವಿಶಾಲು ಸದಾ ನೆನಪಿನಲ್ಲಿ ಉಳಿಯುವಂತೆ ವರ್ಣಿಸಿದ್ದೀಯ. ಅರ್ಥಪೂರ್ಣ ಲೇಖನ
ರಾಮು ಂ
ಶ್ರೀ! ಏನೂ ಹೇಳಲಾರೆ!!!
ReplyDeleteದೊಡ್ಡಮ್ಮನ ಆತ್ಮಕ್ಕೆ ಶಾಂತಿ ಸದ್ಗತಿ ನಿಃಸಂಶಯವಾಗಿ ಸಿಕ್ಕಿರುತ್ತದೆ. ನಮೋ ನಮಃ.
Sadhgati
ReplyDeleteಹುಟ್ಟು ಸಾವಿನ ನಡುವೆ ಹರಡಿಕೊಳ್ಳುವ ಜೀವನದ ವಿಸ್ತಾರವೇ ಅಗಾಧ.. ಅಮ್ಮ ಎನ್ನುವ ಶಕ್ತಿ ಈಗ ನಿಮ್ಮಲ್ಲಿ ಸಂಚಯನವಾದ ಘಳಿಗೆಯನ್ನು ಹೃದಯ ಮುಟ್ಟುವಂತೆ ಹೇಳಿದ್ದೀರಿ..
ReplyDeleteದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ.. ದೇವರಂತಹ ಅಮ್ಮನಿಗೆ ಸದ್ಗತಿ ಸಿಗಲಿ.. ಓಂ ಶಾಂತಿ 🙏
ಶ್ರೀಕಾಂತ, ಅಮ್ಮ ಹಾಗು ಮಗು ಬೇರೆ ಅಲ್ಲವೇ ಅಲ್ಲ. ನಮ್ಮ ಬದುಕು ಕೇವಲ ಹಿರಿಯರ ಬದುಕಿನ continuity. ನಿಮ್ಮ ಲೇಖನ ನನ್ನ ಮನಸ್ಸಿನಲ್ಲಿ ಅನೇಕ ಅಲೆಗಳನ್ನು ಎಬ್ಬಿಸಿತು.
ReplyDelete