Saturday, October 24, 2020

ನಾನು ನನ್ನ ಪರ್ಪಲ್ ರೈನ್ ಕೋಟ್... ಸಿಬಿ ಜನುಮದಿನದ ಶುಭಾಶಯಗಳು

 ಇದೊಂದು ವಿಚಿತ್ರ ರೀತಿಯ ಹುಚ್ಚು ಸರಿ ಸುಮಾರು ಎರಡು ವರ್ಷಗಳ ಹಿಂದೆ ಒಂದು ಕವಿತೆಯ ಸ್ಪೂರ್ತಿಯಿಂದ ಬರೆದ ಬರಹವನ್ನು ಮುಂದುವರೆಸೋದು.. 

ಹಲವಾರು ಈ ರೀತಿಯ ಹುಚ್ಚೇ ಮನಸ್ಸಿನ ನಿರ್ವಾತವನ್ನು ತುಂಬುವುದು.. ಮತ್ತು ಬದುಕಿಗೆ ಇನ್ನಷ್ಟು ಹುಮ್ಮಸ್ಸು ತುಂಬುವುದು.. 

ನಾನು ನನ್ನ ಪರ್ಪಲ್ ರೈನ್ ಕೋಟ್... !

ಹಿಂದಿನ ಸಂಚಿಕೆಯಲ್ಲಿ  (ಹಿಂದಿನ ಸಂಚಿಕೆ ಹ ಹ ಹ.. ಕಳೆದ ಶತಮಾನದ್ದು ಅನ್ನಿ) ಅರ್ಪಿತಾ ಮತ್ತು ಮನು ಬೆಟ್ಟದ ತುದಿಯಲ್ಲಿ ಚಳಿಗಾಳಿಗಳ ನಡುವೆ ಒಂದಷ್ಟು ಫೋಟೋ ತೆಗೆದು.. ಬೋಂಡ, ಅಂಬೊಡೆಯನ್ನು ಮೆಲ್ಲುತ್ತಿದ್ದಾಗ.. ಆ ಬೋಂಡಾ ಸುತ್ತಿದ್ದ ಕಾಗದದಲ್ಲಿ ಒಂದು ಪುಟ್ಟ ಕವಿತೆ ಅರ್ಪಿತಾಳ ಮನಸ್ಸನ್ನು ಕಲಕಿತ್ತು.. ಮನು ಕೂಡ ಸುಮ್ಮನೆ ಈ ಕವಿತೆಯೊಳಗೆ ಏನೋ ಇದೆ ಅನ್ನುವ ದೇಶಾವರಿ ಮಾತನ್ನು ಸ್ವಲ್ಪ ಸೀರಿಯಸ್ ಆಗಿಯೇ ಅರ್ಪಿತಾ ತೆಗೆದುಕೊಂಡಿದ್ದಳು.. ಆ ಕವಿತೆಯನ್ನು ಮತ್ತೆ ಮತ್ತೆ ಓದುತ್ತಲೇ ಇದ್ದಳು.. 

​"ಆ ಕಣಿವೆಯ ತುದಿಯಲ್ಲಿದ್ದಾನಂತೆ ಜಾದೂಗಾರ
ನೊಂದ ಹೃದಯಕೆ ಮುಲಾಮು ಹಚ್ಚುವ ಕನಸುಗಾರ
ಕನಸಿನಾ ಮೊಗ್ಗಲು ಮಗಚುವಾಗ ನೆನಪಾದ ಅವನಂದು
ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ಹುಡುಕಿ ಹೊರಟೆವು ನಾವಿಂದು
ನಾನು ನನ್ನ ಪರ್ಪಲ್ ರೈನ್ ಕೋಟ್"

 ಕವಿತೆಯನ್ನು ಬರೆದವರ ಹೆಸರು ಹೇಮಂತ್ ಮತ್ತು ದಿನಾಂಕ ೨೪. ೧೦. ೨೦೧೭ ಅಂತ ಇತ್ತು ... 

ಅರ್ಪಿತಾಳ ಪುಟ್ಟ ತಲೆಯಲ್ಲಿ ನೂರಾರು ಪ್ರಶ್ನೆಗಳು ಓಡುತ್ತಿದ್ದವು.. ಆ ದಿನಾಂಕ ತುಸು ಗೊಂದಲಗೀಡು ಮಾಡಿತ್ತು.. ಬೈಕಿನಲ್ಲಿ ಸುಮ್ಮನೆ ಕೂತಿದ್ದರು.. ತಲೆ ಮಾತ್ರ ವಾಯುವೇಗದಲ್ಲಿ ಯೋಚಿಸುತ್ತಿತ್ತು.. ಈ ದಿನಾಂಕಕ್ಕೂ ಹೇಮಂತ್ ಕಾಣೆಯಾಗಿದ್ದಕ್ಕೂ ಏನೋ ಲಿಂಕ್ ಇದೆ.. ಮನುಗೆ ಹೇಳಿದರೆ.. ಅವನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳದಿದ್ದದ್ದು ಅರ್ಪಿತಾಳಿಗೆ ಕೊಂಚ ಯೋಚನೆಯಾದರೂ.. ಮನುವಿನ ಬಗ್ಗೆ ಚೆನ್ನಾಗಿ ಗೊತ್ತಿದ್ದ ಕಾರಣ ಏನೂ ಮಾತಾಡದೆ ತನ್ನ ಪಾಡಿಗೆ ಯೋಚಿಸತೊಡಗಿದಳು.. 

ಹೇಮಂತ್.. ಅರ್ಪಿತಾ ಮತ್ತು ಮನುವಿನ ಆಪ್ತ ಗೆಳೆಯ.. ಎಲ್ಲಿ ಹೋದರೂ ಜೊತೆಗಿರಲೇಬೇಕಿತ್ತು.. ಆದರೆ ಆ ಮೇಲೆ ಹೇಳಿದ ದಿನಾಂಕದ ನಂತರ ಹೇಮಂತ್ ಅಚ್ಚರಿಯ ರೀತಿಯಲ್ಲಿ ಕಾಣ ಸಿಕ್ಕಿರಲಿಲ್ಲ... ಮೊಬೈಲಿಗೆ ಕರೆ.. ವಾಟ್ಸಾಪ್ ಸಂದೇಶ.. ಎಸ್ ಎಂ ಎಸ್ ಗಳಿಗೆ ಪ್ರತಿಕ್ರಿಯೆ ಇರಲಿಲ್ಲ.. ಇಮೇಲ್ ಕೂಡ ನಿರುತ್ತರ ಕಂಡಿತ್ತು.. ಪೋಲೀಸು ಅದು ಇದು ಬೇಡ ಎಂದು ಅವರ ಮನೆಯವರು ಸುಮ್ಮನಿದ್ದರು.. ಕಾರಣ ಹೇಮಂತ್ ಕೆಲಸ ಮಾಡುತ್ತಿದ್ದ ಆಫೀಸ್ ತುಂಬಾ ಗುಪ್ತವಾಗಿತ್ತು.. ಯಾವುದೋ ಪ್ರಾಜೆಕ್ಟ್ ಮೇಲೆ ಆವ ಕೆಲಸ ಮಾಡುತ್ತಿದ್ದ... ಅದು ಮನೆಯವರಿಗೂ ಗೊತ್ತಿರಲಿಲ್ಲ.. ತನ್ನ ಆಪ್ತ ಗೆಳೆಯರಿಗೂ ಗೊತ್ತಿರಲಿಲ್ಲ... ಆದರೆ ಗೆಳೆತನವನ್ನು ಮತ್ತು ಅವರ ಜೊತೆಗಿನ ಒಡನಾಟವನ್ನು ಎಂದೂ ದೂರಮಾಡಿರಲಿಲ್ಲ.. 

ಒಂದೆರಡು ದಿನವಾದ ಮೇಲೆ.. ಅರ್ಪಿತಾ ಮನುವಿಗೆ ಒಂದು ಮೆಸೇಜ್ ಕಳಿಸಿ.. "ಮನು ನಾನು ಒಂದೆರಡು ದಿನ ನಮ್ಮ ಊರಿಗೆ ಹೋಗಿ ಬರುವೆ.. ಸರಿಯಾಗಿ ಎರಡು ದಿನವಾದ ಮೇಲೆ ನನ್ನ ಮೊಬೈಲಿಗೆ ಕರೆ ಮಾಡು.. ಉತ್ತರ ಬರಲಿಲ್ಲ ಅಂದರೆ.. ಸೀದಾ ನಮ್ಮೂರಿಗೆ ಬಂದು ಬಿಡು.. " 

ಅರ್ಪಿತಾಳ ಸಾಹಸ ಪ್ರವೃತ್ತಿ ಗೊತ್ತಿದ್ದ ಮನುವಿಗೆ ಸರಿ ಅನ್ನದೆ ಬೇರೆ ಉತ್ತರವಿರಲಿಲ್ಲ.. ಜೊತೆಯಲ್ಲಿ ಅವನಿಗೆ ಗೊತ್ತಿತ್ತು.. ಅವಳು ಒಂದು ಕೆಲಸಕ್ಕೆ ಕೈ ಹಾಕಿದರೆ.. ತುಂಬಾ ಸೂಕ್ಷ್ಮವಾಗಿ ಅದರ ಸಾಧಕ ಬಾಧಕಗಳನ್ನು ಯೋಚಿಸಿ.. ತುಂಬಾ ಸುರಕ್ಷತೆಯಿಂದ ಕೆಲಸ ನಿಭಾಯಿಸುತ್ತಾಳೆ.. ಮತ್ತೆ ಅಪಾಯ ಅನ್ನುವಂತಹ ಸಂದರ್ಭದಲ್ಲಿ ತನ್ನ ಸಹಾಯ ಪಡೆಯದೇ ಇರೋಲ್ಲ ಅಂತ.. ಹಾಗಾಗಿ ಸರಿ ಕಣೆ ಹುಷಾರು ಅಂತ ಪ್ರತಿಕ್ರಿಯೆ ಕೊಟ್ಟಿದ್ದ.. 

ಅವಳು ಹೇಳಿದ ಹಾಗೆ ಎರಡು ದಿನ ಆಗಿತ್ತು.. ಇರಲಿ ಇನ್ನೊಂದು ದಿನ ಬೆಳಿಗ್ಗೆ ಕರೆ ಮಾಡುವೆ ಎಂದು ಮನು ಮಾನಸಿಕವಾಗಿ ಸಿದ್ಧವಾಗಿದ್ದ.. 

ಮೂರನೇ ದಿನ.. ಅರ್ಪಿತಾಳ ಸಂದೇಶ.. "ಮನು.. ಮಿಷನ್ ಕಂಪ್ಲೇಟಿಡ್.. ಕಮ್" 

ಮನು ತನ್ನ ಬುಲೆಟ್ ತೆಗೆದುಕೊಂಡು ಹೊರಟ.. ದಾರಿಯುದ್ದಕ್ಕೂ ಅವನ ತಲೆ ಯೋಚಿಸಿ ಭಾರವಾಗಿತ್ತು... ಮೊಬೈಲಿನ ಹಾಡುಗಳು ಅವನ ಮನಸ್ಸನ್ನು ಆಹ್ಲಾದಕರವಾಗಿಟ್ಟಿತ್ತು.. ತಣ್ಣಗಿನ ವಾತಾವರಣ.. ತಂಗಾಳಿ.. ಹಸಿರು ಸೀರೆಯುಟ್ಟ ಪ್ರಕೃತಿ ಎಲ್ಲವೂ ಅವನ ಬ್ಯುಸಿ ಕೆಲಸಕ್ಕೆ ಅಲ್ಪವಿರಾಮ ಕೊಟ್ಟಿತ್ತು.. 

ಊರೊಳೊಗೆ ಹೋದ..... ಸಾಲು ಸಾಲು ಕಂಬದ ಮನೆ..ಸುಮಾರು ನೂರು ವರ್ಷ ದಾಟಿದ ಮನೆ.. ಸುಸ್ಥಿತಿಯಲ್ಲಿತ್ತು.. ಮನೆ ಮುಂದೆ ಎತ್ತಿನ ಗಾಡಿ.. ಎತ್ತುಗಳು ಹುಲ್ಲನ್ನು ಮೇಯುತಿತ್ತು.. ಹಸುಗಳು ಅಲ್ಲಿಯೇ ಮಲಗಿದ್ದವು.. ಮನೆ ಹಿಂದಿನ ಹಿತ್ತಲಿನಿಂದ ಹೊಗೆ ಬರುತಿತ್ತು.. ಮನಸ್ಸಿಗೆ ಮುದ ಕೊಡುವ ಪ್ರಕೃತಿಯ ಮಧ್ಯೆ ಅರ್ಪಿತಾಳ ಮನೆ.. 

ಬೇವಿನ ಕಡ್ಡಿಯಿಂದ ಹಲ್ಲನ್ನು ಉಜ್ಜುತ್ತಾ ಒಂದು ಆಕೃತಿ ಬಂತು.. ಗಡ್ಡ ನೀಳವಾಗಿತ್ತು..ದೇಹ ಕೊಂಚ ಕೃಶವಾಗಿತ್ತು.. ಕಣ್ಣುಗಳ ಹೊಳಪು ಕಡಿಮೆಯಾಗಿರಲಿಲ್ಲ.. ಕಡ್ಡಿಯನ್ನು ಅತ್ತ ಬಿಸಾಡಿ.. ಬಾಯಿಗೆ ನೀರು ಹಾಕಿಕೊಂಡು ಗಳಗಳ ಮಾಡಿ.. ಆ ಆಕೃತಿ ಓಡಿ ಬಂದು ಮನುವನ್ನು ತಬ್ಬಿಕೊಂಡಿತು.. 

ಮನುವಿಗೆ ಒಂದು ಕ್ಷಣ ಗಾಬರಿ ... ತಬ್ಬಿಕೊಂಡ ವ್ಯಕ್ತಿ ಯಾರು ಅಂತ ತಿಳಿದಾಗ.. ಗಾಬರಿ ದೂರವಾಗಿತ್ತು.. ಮನಸ್ಸಿಗೆ ಸಂತೋಷವಾಗಿತ್ತು.. "ಹೇಮು .. ಹೇಗಿದ್ದೀಯೋ.. ಎಷ್ಟು ದಿನ ಆಯಿತು ನಿನ್ನ ನೋಡಿ.. ಎಲ್ಲಿದ್ದೆ ಇಲ್ಲಿ ತನಕ.. " ಪ್ರಶ್ನೆಗಳ ಸರಮಾಲೆಯನ್ನೇ ಪೋಣಿಸಿದ್ದ.. 

ಅರ್ಪಿತಾ ಬಿಸಿ ಬಿಸಿ ಕಾಫಿಯನ್ನು ತಂದು.. ಇಬ್ಬರಿಗೂ ಕೊಟ್ಟು "ಹೇಮುವಿಗೆ ತೊಂದರೆ ಕೊಡಬೇಡ ಮನು.. ನಾನು ಹೇಳುವೆ.. " ಎಂದು ಹೇಮಂತನ ಕಡೆ ಕಣ್ಣು ಹೊಡೆದು ಶುರುಮಾಡಿದಳು.. 

​"ಆ ಕಣಿವೆಯ ತುದಿಯಲ್ಲಿದ್ದಾನಂತೆ ಜಾದೂಗಾರ
ನೊಂದ ಹೃದಯಕೆ ಮುಲಾಮು ಹಚ್ಚುವ ಕನಸುಗಾರ
ಕನಸಿನಾ ಮೊಗ್ಗಲು ಮಗಚುವಾಗ ನೆನಪಾದ ಅವನಂದು
ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ಹುಡುಕಿ ಹೊರಟೆವು ನಾವಿಂದು
ನಾನು ನನ್ನ ಪರ್ಪಲ್ ರೈನ್ ಕೋಟ್"

"ಮನು ಈ ಕವಿತೆಯನ್ನು ಓದಿ.. ಓದಿ.. ಅದರ ಒಳಾರ್ಥ ತಿಳಿದುಕೊಳ್ಳುವುದಕ್ಕೆ ಪ್ರಯತ್ನ ಮಾಡಿದೆ.. ... 

ಕಣಿವೆಯ ತುದಿಯಲ್ಲಿ ಕೂತಿದ್ದಾನೆ.. ತನ್ನ ಪ್ರಾಜೆಕ್ಟನ್ನು ನಿಭಾಯಿಸುವುದಕ್ಕೆ ಎಲ್ಲರಿಂದ ದೂರ ಬಂದು ನಿಂತಿದ್ದಾನೆ.. ತನ್ನ ಕನಸ್ಸಿನ ಪ್ರಾಜೆಕ್ಟ್ ಯಾವಾಗಲೂ ಕಣ್ಣ ಮುಂದೆ ಇದ್ದುದರಿಂದ ಅದನ್ನು ಪೂರ್ಣ ಮಾಡದೆ ಆವ ಮಗ್ಗುಲು ಬದಲಿಸುವುದಿಲ್ಲ ಎಂದು ಅರಿವಾಯಿತು.. ಅವನು ಸದಾ ಇಷ್ಟ ಪಡುತಿದ್ದ ಪರ್ಪಲ್ ರೈನ್ ಕೋಟು ನನಗೆ ದಾರಿ ತೋರಿಸಿತು.. 

ಕಣಿವೆಯ ಪ್ರದೇಶಕ್ಕೆ ಹೋದಾಗ.. ಅಲ್ಲಿ ರೈನ್ ಕೋಟು ಬಿದ್ದಿತ್ತು.. ಆಗ ಅರಿವಾಯಿತು.. ಹೇಮು ಇಲ್ಲೇ ಎಲ್ಲೋ ಇದ್ದಾನೆ ಅಂತ.. ಅದೇ ಹಾದಿಯಲ್ಲಿ ಸಾಗಿದಾಗ ಕೆಲವು ದೃಢವಾದ ಹೆಜ್ಜೆಗಳ ಗುರುತು.. ನನ್ನನ್ನು ಕಣಿವೆಯ ತುತ್ತ ತುದಿಗೆ ತಂದಿತ್ತು.. ಮೊದಲೇ ನಿರ್ಧಾರ ಮಾಡಿಕೊಂಡು ಬಂದದ್ದರಿಂದ.. ಬೆಚ್ಚನೆಯ ಉಡುಪು.. ಆಹಾರ ಸಾಮಗ್ರಿ ಎಲ್ಲವನ್ನು ಹೊತ್ತು ತಂದಿದ್ದೆ..ಝರಿಗಳು ಹೇರಳವಾಗಿದ್ದರಿಂದ ನೀರಿನ ಬರ ಇರಲಿಲ್ಲ.. ಕಣಿವೆಯ ತುತ್ತ ತುದಿಯಲ್ಲಿ ಒಂದು ಗುಹೆಯಿತ್ತು.. ಆ ಗುಹೆಯ ಬಾಗಿಲಲ್ಲಿ ಒಂದು ಆಕೃತಿ ಮಲಗಿದ್ದು ಕಾಣಿಸಿತು.. ದೇಹ ಕೃಶವಾಗಿತ್ತು.. ತಲೆಗೂದಲು, ಗಡ್ಡ ನೀಳವಾಗಿ ಬೆಳೆದಿತ್ತು.. ಸರಿ ಸುಮಾರು ಒಂದು ವರ್ಷ ಆಗಿತ್ತು.. ಹೇಮು ನಮ್ಮ ಕಣ್ಣಿನಿಂದ ದೂರವಾಗಿ.. ಆವ ಬರೆದಿದ್ದ ಕವಿತೆಯ ಪುಸ್ತಕದ ಹಾಳೆಗಳು ಹಾದಿಯಲ್ಲಿ ಬಿದ್ದು ಹೋಗಿ.. ದನಕಾಯುವ ಹುಡುಗರಿಂದ ಬೋಂಡದ ಅಂಗಡಿ ಸೇರಿತ್ತು.. ಹಾಗಾಗಿ ಈ ಕವಿತೆಯ ಹಾಳೆ ಅರ್ಪಿತಾಳ ಕೈ ಸೇರಿದ ಮೇಲೆ.. ಹುಡುಕಾಟದಲ್ಲಿ ಹೇಮು ಸಿಕ್ಕಿದ್ದ.. 

ಹೇಮುವಿನ ಪ್ರಾಜೆಕ್ಟ್ ತುಂಬಾ ಗುಪ್ತವಾಗಿದ್ದರಿಂದ.. ಅದರ ವಿವರ ಅವನು ಹೇಳಲಿಲ್ಲ.. ನಾನೂ ಕೇಳಲಿಲ್ಲ.. ಆದರೆ ತುಂಬಾ ಮುಖ್ಯವಾದ ಮಾಹಿತಿಗೆ ಕಾಯುತಿದ್ದ.. ಮತ್ತು ಆ ಮಾಹಿತಿಯನ್ನು ಹೊತ್ತು ತರಬೇಕಾದವ ಇನ್ನೂ ಬಂದಿರಲಿಲ್ಲ.. ಅವನು ಬರದೇ.. ಇವ ಆ ಜಾಗವನ್ನು ಬಿಟ್ಟು ಬರುವ ಹಾಗಿರಲಿಲ್ಲ.. ಹಾಗಾಗಿ ತನ್ನ ಬಳಿಯಿದ್ದ ಆಹಾರ ಸಾಮಗ್ರಿಯನ್ನು, ಕಣಿವೆಯಲ್ಲಿ ಸಿಗುವ ಹಣ್ಣುಗಳನ್ನು ತಿಂದು ಬದುಕಿದ್ದಾನೆ.. ನಿನ್ನೆ ಊರಿಗೆ ಬಂದ ಮೇಲೆ ಒಂದು ವರ್ಷದ ದಿನಪತ್ರಿಕೆಯನ್ನು ಓದಿದ.. ತಡಕಾಡಿದ.. ನಂತರ ತಿಳಿದದ್ದು.. ಮಾಹಿತಿ ತರಬೇಕಾದವ ಕಾಡಿನ ನಡುವಿನ ಒಂದು ಜಲಪಾತದಲ್ಲಿ ಬಿದ್ದು ಘಾಸಿಗೊಂಡು.. ಪಟ್ಟಣದ ಆಸ್ಪತ್ರೆಗೆ ದಾಖಲಾಗಿದ್ದ.. ಮತ್ತು ಬಿದ್ದಿದ್ದ ಪೆಟ್ಟಿಗೆ ನೆನಪಿನ ಶಕ್ತಿ ಎಲ್ಲವನ್ನು ಕಳೆದುಕೊಂಡಿದ್ದಾನೆ.. ಅವನಿಗೆ ಮಾತ್ರ ಗೊತ್ತಿತ್ತಂತೆ ಹೇಮು ಎಲ್ಲಿದ್ದಾನೆ ಎಂದು.. ಅವನಿಗೆ ನೆನಪಿನ ಶಕ್ತಿ ಇಲ್ಲ.. ಇವನು ಅವನು ಬರೋ ತನಕ ಜಾಗ ಬಿಟ್ಟು ಬರುವ ಹಾಗಿಲ್ಲ.. ಇದು ಹೇಮುವಿನ ಕತೆ.. "

"ಯಪ್ಪಾ ಛಲಗಾರ್ತಿ ಕಣೆ ಅರ್ಪಿ.. ಒಬ್ಬಳೇ ಈ ರೀತಿಯ ಸಾಹಸ ಮಾಡಿದೆಯಲ್ಲಾ. ಶಭಾಷ್.. ಅಲ್ಲ ಕಣೆ.. ನನಗೆ ಒಮ್ಮೆ ಹೇಳಬಾರದಿತ್ತೇ.. ನಮ್ಮ ಆತ್ಮೀಯ ಹೇಮುವನ್ನು ಹುಡುಕುವುದಕ್ಕೆ ನಾನು ಬರುತ್ತಿದ್ದೆ.. "

"ಹಾಗಲ್ಲ ಕಣೋ ಮನು.. ನಿನ್ನ ಮನೆಯಿಂದ ಅಷ್ಟು ಸುಲಭವಾಗಿ ಬಿಡೋಲ್ಲ.. ಜೊತೆಗೆ ನನಗೆ ಖಾತ್ರಿ ಇತ್ತು ಇದು ಹೇಮುವಿನ ಕವಿತೆ.. ಮತ್ತು ಅವನ ಕವಿತೆ ಹುಚ್ಚು ಅವನು ಇರೋ ತಾಣವನ್ನು ಗುಟ್ಟಾಗಿ ಬಿಚ್ಚಿಟ್ಟಿದ್ದಾನೆ ಎಂದು.. ಮತ್ತೆ ಅವನ ಕೆಲಸವೇ ಗುಟ್ಟು ಎಂದಾಗ.. ಅವನನ್ನು ಹುಡುಕುವ ಕೆಲಸವೂ ಕೂಡ ಗುಟ್ಟಾಗಿರಲೇ ಬೇಕಲ್ವಾ.. " ಎನ್ನುತ್ತಾ ಇಬ್ಬರ ಕಡೆ ಕಣ್ಣು ಮಿಟುಕಿಸಿದಳು.. 

ಹೇಮು ಮತ್ತು ಮನು ಇಬ್ಬರೂ.. ಅರ್ಪಿತಾಳನ್ನು ಆಲಂಗಿಸಿದರು.. ಮೂವರಿಗೂ ಸಮಾಧಾನ ಮತ್ತೆ ಗೆಳೆತನ ಮುಂದುವರೆಯುತ್ತಿದೆ ಎಂದು.. !

******

ವಿಚಿತ್ರ ಅಲ್ಲವೇ.. ಎರಡು ವರ್ಷಗಳ ಹಿಂದಿನ ಬರಹವನ್ನು ಮುಂದುವರೆಸಿ... ಅದಕ್ಕೊಂದು ತಾರ್ಕಿಕ ಅಂತ್ಯ ಕೊಡಲು ಪ್ರಯತ್ನ ಪಟ್ಟಿದ್ದೇನೆ... 

ಇದಕ್ಕೆ ಕಾರಣ ನನ್ನ ಅದ್ಭುತ ಗೆಳತೀ ನಿವೇದಿತಾ ಚಿರಂತನ್ ಅವರ ಪುಟ್ಟ ಕವಿತೆ.. ಮತ್ತು ಅವರೇ ಸೃಷ್ಟಿ ಮಾಡಿದ ಪಾತ್ರ ಅರ್ಪಿತಾ.. 

ಇವರೆಡರ ಸಮಾಗಮ.. ಈ ಕಥಾನಕ.. 

ಇಂದು ನಿವೇದಿತಾ ಅವರ ಜನುಮದಿನ.. ಅದಕ್ಕೊಂದು ಬರಹ ಕೊಡೋಣ ಅಂತ ಮನಸ್ಸಿಗೆ ಬಂದಾಗ.. ಅರೆ ಅವರ ಕವಿತೆಯನ್ನು ಇಟ್ಟುಕೊಂಡು ಬರೆದಿದ್ದ ಬರಹಕ್ಕೆ ಮುಂದುವರೆದ ರೂಪ ಕೊಡೋಣ ಅನ್ನಿಸಿತು.. ಅದರ ಫಲಿತಾಂಶ ಈ ಬರಹ.. 

ಸಿಬಿ ನಿಮ್ಮೆಲ್ಲ ಆಸೆಗಳು ಈಡೇರಲಿ.. ಜನುಮದಿನ ಸುಂದರವಾಗಿರಲಿ.. 

ಜನುಮದಿನದ ಶುಭಾಶಯಗಳು!

1 comment:

  1. ಜನುಮದಿನದ ಶುಭಾಶಯಗಳು ನನ್ನಿಂದಲೂ ಸಹ. ಕಥೆಯ ಎರಡನೆಯ ಭಾಗವನ್ನು ಓದಿ ಸಂತೋಷವಾಯಿತು. ಪರ್ಪಲ್ ಕೋಟ್ ಕೊನೆಗೂ ಸಿಕ್ಕಿತಲ್ಲ!

    ReplyDelete