Sunday, December 24, 2017

ಪ್ರಥಮಂ ವಕ್ರತುಂಡಂಚ ...................ಮುಂದುವರೆದಿದೆ - ನಾಲ್ಕನೇ ಭಾಗ

ಪ್ರಥಮಂ... ಮೊದಲನೇ ಭಾಗ
ದ್ವೀತೀಯಕಂ... ಎರಡನೇ ಭಾಗ
ತೃತೀಯಕಂ.. ಮೂರನೇ ಭಾಗ

ಟಿಂಗ್ ಟಾಂಗ್.. ಟಿಂಗ್ ಟಾಂಗ್... ಜರ್ಮನ್ ಭಾಷೆಯಲ್ಲಿ ನಾ ಇಳಿಯುವ ಸ್ಥಳ ಬರಲಿದೆ ಎಂದು ಹೇಳುತ್ತಿತ್ತು.. ಜೊತೆಯಲ್ಲಿ ಫಲಕವೂ ಕೂಡ ಆ ವಿವರವನ್ನು ಸಾರುತ್ತಿತ್ತು... !!!

ಮುಂದೆ.. ನನ್ನ ಜೀವದ ಗೆಳೆಯನ ಜೊತೆ ಸುಮಾರು ೬೦-೭೦ ಘಂಟೆಗಳ ಸುಮಧುರ ಸಮಯ..

ಕ್ರೀಕ್ ಕ್ರೀಕ್.. ಫ್ರಾಂಕ್ಫರ್ಟ್ ಬಂತು.. ....!!!


"ಹೇಯ್ ಶ್ರೀ.. ಹೇಗಿದ್ದೀಯಾ.. ಮಗನೆ ಈ ಬಿಸಿಲಿನಲ್ಲೂ ಜರ್ಖಿನ್ ಬೇಕಾ.. ಅಥವಾ ಸ್ಟೈಲ್ ಹೊಡಿತಾ ಇದ್ದೀಯ.. " ಎನ್ನುತ್ತಾ ಓಡಿ ಬಂದು ತಬ್ಬಿದ ಜೆಎಂ..

"ಇಲ್ಲ ಗುರು.. ಬ್ಯಾಗಿಗೆ ಒಂಭತ್ತು ತಿಂಗಳು ತುಂಬಿದೆ.. ಜಾಗವಿಲ್ಲ.. ಇನ್ನೇನೂ ಮಾಡಲಿ ಸೆಕೆ ಇದ್ದರೂ ಸ್ಟೈಲ್ ಇರಲಿ ಅಂತ ಹಾಕಿಕೊಂಡಿದ್ದೀನಿ" ಕೆಟ್ಟದಾಗಿ ಹಲ್ಲು ಬಿಟ್ಟೆ..

"ಸರಿ.. ಮನೆಗೆ ಹೋಗೋಣ.. ಅಥವಾ ಇಲ್ಲೇ ಏನಾದರೂ ತಿನ್ನೋಣವಾ.. ?"

"ಬೇಡ ಗುರು.. ಮನೆ ಊಟ ಮಾಡಿ ದಿನಗಳಾಗಿ ಹೋಗಿವೆ.. ಮನೇಲಿ ಅಡಿಗೆ ಮಾಡಿಕೊಂಡು ಬ್ಯಾಟಿಂಗ್ ಮಾಡೋಣ"

ಮುಂದಿನ ಅರ್ಧಘಂಟೆ.. ಅವನ ಮನೆಯಲ್ಲಿ..ಮೂರನೇ ಮಹಡಿ.. .. ಚಿಕ್ಕ ಚೊಕ್ಕ ಮನೆ.. ಖುಷಿಯಾಗಿತ್ತು.. ಸ್ವಲ್ಪ ಹೊತ್ತು ವಿರಮಿಸಿಕೊಂಡು.. ಬಿಸಿ ಬಿಸಿ ಕಾಫಿ ಮಾಡಿದ.. ಬಾಲ್ಕನಿಯಲ್ಲಿ ಕೂತು.. ತಣ್ಣಗೆ ಮಾತಾಡುತ್ತಾ ಕಾಫಿ ಹೀರಿದೆವು..

ಹೊಟ್ಟೆ ಹಸಿವು ಏನಾದರೂ ಕೊಡೊ ಅಂದಾಗ.. ಒಂದು ಡಬ್ಬಿಯಲ್ಲಿದ್ದ ನಿಪ್ಪಟ್ಟು ತಂದು ಕೊಟ್ಟಾ.. ಕಾಫಿ.. ನಿಪ್ಪಟ್ಟು ಸಲೀಸಾಗಿ ಹೋಯಿತು.. ಹೊರಗೆ ಗಾಳಿಯಲ್ಲಿ ಮಾತಾಡುತ್ತಾ.. ನನ್ನ ಐದು ದಿನದ ಜರ್ಮನಿ ಪ್ರವಾಸ.. ಆಫೀಸ್ ಕೆಲಸದ ಒಂದು ಪುಟ್ಟ ವರದಿ ಕೊಟ್ಟೆ..

ಮಶ್ರೂಮ್ ಫ್ರೈಡ್ ರೈಸ್ ಆಗುತ್ತೆ ತಾನೇ ಎನ್ನುತ್ತಾ ಅನ್ನಕ್ಕೆ ಇಟ್ಟಾ.. ಈ ಕಡೆ ಈರುಳ್ಳಿ, ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಎಲ್ಲವನ್ನು ತೊಳೆದು ಹೆಚ್ಚಿ ಕೊಟ್ಟೆ.. ಆವಾ ಮಸಾಲೆ ಸಿದ್ಧ ಮಾಡುತ್ತಾ.. ಮಾತಾಡುತ್ತಾ ಕೆಲಸ ಮಾಡುತ್ತಿದ್ದೆವು.. ಅಡಿಗೆ ಮನೆ ಸಿಂಕ್ ನಲ್ಲಿದ್ದ ಪಾತ್ರೆಗಳನ್ನೆಲ್ಲ ತೊಳೆದು.. ಅಡಿಗೆ ಸಿದ್ಧ ಮಾಡಲು ತೊಡಗಿದೆವು..
ನಮಗೋಸ್ಕರ ನಿದ್ದೆ ತ್ಯಾಗ ಮಾಡಿ ನಮ್ಮ ಜೊತೆ ಭಾರತದ ಸಮಯ
ಮಧ್ಯರಾತ್ರಿ ಎರಡು ಘಂಟೆ ತನಕ ಜೊತೆಗಿದ್ದ ಗೆಳೆಯ . ವೆಂಕಿ 

ಇಷ್ಟರಲ್ಲಿ ಬೆಂಗಳೂರಿನಲ್ಲಿದ್ದ ವೆಂಕಿಗೆ ಕರೆ ಮಾಡಿದೆವು.. ಅದೂ ವಿಡಿಯೋ ಕರೆ.. ನಮ್ಮ ಎಲ್ಲಾ ಮಂಗಾಟಗಳು, ಹಾಸ್ಯಗಳು ಕಾದಿದ್ದವು ಹೊರಗೆ ಬರಲು.. ಅಡಿಗೆ ಪ್ರಾರಂಭದಿಂದ.. ನಾವು ತಿಂದು ಮೆಲುಕು ಹಾಕುವವರೆಗೂ ನಮ್ಮ ಮಾತುಗಳು ಮುಂದುವರೆದಿದ್ದವು.. ಸರಿ ಸುಮಾರು ಎರಡು ಘಂಟೆಗಳ ಕಾಲ.. ವಿಡಿಯೋ ಕಾಲ್ ಮುಂದುವರೆಯಿತು.. ಸೂಪರ್ ಆಗಿತ್ತು..

ವೆಂಕಿ ರೇಗಿಸುತ್ತಿದ್ದ.. "ಜಮ್ಮು.. ಆ ಶ್ರೀಕಿ ಅನ್ನ ತಿಂದು ಎಷ್ಟು ವರ್ಷ ಆಯ್ತೋ ಅನ್ನುವ ಹಾಗೆ ತಿಂತಾ ಇದ್ದಾನೆ.. ನಿನಗೆ ಬಿಡೋ ತರಹ ಕಾಣ್ತಾ ಇಲ್ಲ.. ಕಿತ್ಕೊಳೋ ಅವನ ಬಳಿ ಇರುವ ಕುಕ್ಕರ್ನ.. "
ಭರ್ಜರಿ ಊಟಕ್ಕೆ ಸಿದ್ಧತೆ 

ಭರ್ಜರಿ ಊಟಕ್ಕೆ ಸಿದ್ಧತೆ 

ಭರ್ಜರಿ ಊಟಕ್ಕೆ ಸಿದ್ಧತೆ 

"ಇಲ್ಲ ಗುರುವೇ.. ಅವನಿಗೂ ಸ್ವಲ್ಪ ಇಟ್ಟಿದ್ದೀನಿ.. ಮಿಕ್ಕಿದ್ದು ನಾ ಖಾಲಿ ಮಾಡ್ತೀನಿ "

"ಶ್ರೀಕಿ ಪಾಪ ಸಣ್ಣ ಆಗಿದ್ದಾನೆ.. ತಿನ್ಲಿ ಬಿಡೋ ಮಗ.. "

"ಲೋ ಅವನು ಮೊದಲೇ ಬ್ಯಾಟಿಂಗ್ ಪ್ರವೀಣ.. ನಿನಗೆ ಕಡೆಯಲ್ಲಿ ಬರಿ ಪಾತ್ರೆ ಮಾತ್ರ ಸಿಗುತ್ತೆ ತೊಳೆಯೋಕೆ.. "

"ನೋಡು ಇಷ್ಟು ಮಾತಾಡ್ತಾ ಇದೀವಿ.. ಅವನು ಶ್ರೀಕಿ ನೋಡು ತಲೆ ತಗ್ಗಿಸಿಕೊಂಡು ಪಾತ್ರೆ ಖಾಲಿ ಮಾಡ್ತಾ ಇದ್ದಾನೆ.. ನಿನ್ನ ಹೊಟ್ಟೆ ಸೇದು ಹೋಗಾ.. "

ಇದೆಲ್ಲ ಮಾತುಗಳು ಕೇಳುವಾಗ.. ಛೆ ನಾವು ಐದು ಜನ ಜೀವದ ಗೆಳೆಯರು ನಮ್ಮ ಕುಟುಂಬದೊಡನೆ ಅಲ್ಲಿ ಇದ್ದಿದ್ದರೆ ಹೇಗಿರುತ್ತಿತ್ತು.. ಎನ್ನುವ ಆಲೋಚನೆ ಬಂದು ಖುಷಿಯಾಯಿತು.. ಆದರೆ.. ರೇ ರೇ..

ನಾವು ಊಟ ಮಾಡುವ ಹೊತ್ತಿಗೆ ಆಗಲೇ ಜೆರ್ಮನಿ ಸಮಯ ಹತ್ತಾಗಿತ್ತು.. ಅಂದರೆ ಭಾರತದಲ್ಲಿ ಸುಮಾರು ರಾತ್ರಿ ಒಂದು ಮೂವತ್ತು.. ವೆಂಕಿಗೆ ನಿದ್ದೆ ಎಳೆಯುತ್ತಿತ್ತು.. ಆದರೋ ನಮಗೋಸ್ಕರ ಎದ್ದು ಕುಳಿತಿದ್ದ.. ಮಧ್ಯೆ ಮಧ್ಯೆ ಮಕ್ಕಳ.. ಬಿಡ್ರೋ ನಿದ್ದೆ ಮಾಡಬೇಕು ಅಂತ ಗೋಗರೆಯುತ್ತಿದ್ದ ಆದರೂ ಬಿಡುತ್ತಿರಲಿಲ್ಲ.. ಕಡೆಗೆ.. ಭಾರತದ ಸಮಯ ಎರಡು ಘಂಟೆ ಆಗಿತ್ತು. ಹೋಗಲಿ ಪಾಪ.. ಬಡಪಾಯಿ ಎಂದು ಅವನಿಗೆ ಶುಭ ರಾತ್ರಿ ಹೇಳಿ.. ನಾವು ಅಡಿಗೆ ಮಾಡಿದ ಪಾತ್ರೆ, ತಿಂದ ತಟ್ಟೆಯನ್ನು ತೊಳೆದಿಟ್ಟೆವು.. ಮುಂದಿನ ನನ್ನ ಬದುಕಿನ ಒಂದು ಝಲಕ್ ಇಲ್ಲಿ ತೋರಿಸಿತೇ ವಿಧಿ ಗೊತ್ತಿಲ್ಲಾ...

ಶ್ರೀ ಮಲಗೋಣ ಅಥವಾ ಒಂದು ರೌಂಡ್ ಹೋಗಿ ಬರೋಣ ..

ಒಂದು ವಾರದ ಊಟ ಒಂದೇ ದಿನ ತಿಂದು ಹೆಬ್ಬಾವಿನ ತರಹ ಆಗಿದ್ದೀನಿ.. ಒಂದು ರೌಂಡ್ ಹೋಗಿ ಬರೋಣ ಅಂದ.. ರಾತ್ರಿಯಲ್ಲಿ ಜೆರ್ಮನಿಯ ಹೆದ್ದಾರಿಯಲ್ಲಿ ನೆಡೆವ ಉತ್ಸಾಹ..

ರಾತ್ರಿ ಹೊತ್ತು.. ಆಗ ತಾನೇ ಸೂರ್ಯ ಮುಳುಗಿ ಒಂದು ಘಂಟೆಯಾಗಿರಬಹುದು.. ನಸು ಬೆಳಕಿತ್ತು.. ಆರಾಮಾಗಿ ಸುಮಾರು ಒಂದು ಮೂರು ನಾಲ್ಕು ಕಿಮೀಗಳು ನೆಡೆದೆವು.. ಜೆಎಂ ಅವನ ಮಗನ ಶಾಲೆಯನ್ನು ತೋರಿಸಿದ.. ಹೆದ್ದಾರಿ... ಓಡಾಡುತ್ತಿದ್ದ ವಾಹನಗಳು.. ಹೆದ್ದಾರಿಯ ಆ ಬದಿ ಈ ಬದಿಯಲ್ಲಿ ಪಾರ್ಕಿನಲ್ಲಿ ಬೆಳೆವ ರೀತಿಯಲ್ಲಿ ಹುಲ್ಲುಗಾವಲು.. ರಸ್ತೆಯಲ್ಲಿಯೇ ಕೂತು ಒಂದು ಫೋಟೋ ತೆಗೆಸಿಕೊಳ್ಳುವ ಉತ್ಸಾಹ ಇತ್ತು.. ಆದರೆ ವಾಹನಗಳು ನೂರು ಚಿಲ್ಲರೆ ವೇಗದಲ್ಲಿ ಸಾಗುವ ಆ ರಸ್ತೆಯಲ್ಲಿ ಕೂರುವುದು.. ಉಫ್ ಎನ್ನಿಸಿತು..

ತಣ್ಣನೆ ಗಾಳಿ.. ಹಿತವಾದ ವಾತಾವರಣ.. ಇಕ್ಕೆಲಗಳಲ್ಲಿಯೂ ಹುಲ್ಲುಗಾವಲು.. ಹೊರದೇಶದ ಸೊಬಗನ್ನ ಬರಿ ಸಿನೆಮಾದಲ್ಲಿ ನೋಡಿದ್ದ ನನಗೆ.. ಅದರ ಮೊದಲ ಅನುಭವ..

ಮರುದಿನ ಬೆಳಿಗ್ಗೆ ಬೇಗನೆ ಎದ್ದು.. ಒಂದು ಚಾರಣಕ್ಕೆ ಹೋಗೋಣ ಎನ್ನುವ ನಮ್ಮ ಪ್ಲಾನ್ ಸಿದ್ಧವಾಗಿತ್ತು..

ಬೆಳಿಗ್ಗೆ ತಿಂಡಿ ಬಾರಿಸಿ.. ಬಸ್ಸಿನಲ್ಲಿ ಕೂತು ಹೋಗಬೇಕಾದ ಸ್ಥಳಕ್ಕೆ ಹೋದೆವು.. ಸುಮಾರು ಒಂದು ಘಂಟೆ ಕಾಯಬೇಕು ಮುಂದಿನ ರೈಲಿಗೆ ಅಂದಾಗ.. ಅಲ್ಲಿಯೇ ಹತ್ತಿರದಲ್ಲಿದ್ದ ನದಿಯ ಕಡೆಗೆ ವಾಕ್ ಹೋಗೋಣ ಅಂದ..

ನದಿಯ ತಟದಲ್ಲಿ ಓಡಾಡುತ್ತಾ.. ಕೆಲವು ಚಿತ್ರಗಳು ನನ್ನ ಕ್ಯಾಮೆರಾ ಹೊಟ್ಟೆಗೆ ಸೇರಿತು.. ಶ್ರೀ ನಿನ್ನ ಫೋಟೋ ತೆಗೆಯುತ್ತೇನೆ ಎಂದು ಒಂದಷ್ಟು ನನ್ನ ಚಿತ್ರಗಳನ್ನು ತೆಗೆದ..


ಸುಮಾರು ಒಂದು ಘಂಟೆಯ ರೈಲಿನ ಪಯಣ.. ಮನದಲ್ಲಿ ಹಕ್ಕಿಯ ಹಾರುವ ಭಾವ.. ಕಾಡಿನೊಳಗೆ ನೆಡೆಯುವ ಒಂದು ಸುಂದರ ಅನುಭವ.. ಜೊತೆಯಲ್ಲಿ ಎತ್ತರ ಪ್ರದೇಶದ ಮೇಲೆ ನಿರ್ಮಿಸಿದ್ದ ಪ್ರತಿಮೆಗಳು ಮನಸ್ಸೆಳೆದವು..

ಶ್ರೀ ಸುಸ್ತಾಗಿದ್ದಾರೆ ಚಾರಣ ಬೇಡ.. ಇಲ್ಲಿಂದಲೇ ವಾಪಸ್ ಹೋಗೋಣ ..

ನೋ ಚಾನ್ಸ್.. ಇಲ್ಲಿಯ ತನಕ ಬಂದಿದ್ದೇವೆ... ಆರಾಮಾಗಿ ನೆಡೆದು ಸಾಗುವ...

ನಿತ್ಯ ಹರಿದ್ವರ್ಣ ಕಾಡು.. ತಂಪಾದ ನೆರಳು.. ನಿಧಾನವಾಗಿ ಲೋಕಾಭಿರಾಮವಾಗಿ ಮಾತಾಡುತ್ತಾ.. ಕಾಡಿನ ನಾಲ್ಕು ಐದು ಕಿಮಿಗಳು ನೆಡೆದೆವು.. ಕೆಲವು ಸುಂದರ ಚಿತ್ರಗಳು ಸಿಕ್ಕವು..


ಸಂಜೆಯ ತನಕ ಅಡ್ಡಾಡಿ.. ಮತ್ತೆ ಮನೆಗೆ ಬಂದಾಗ ರಾತ್ರಿಯಾಗಿತ್ತು..

ಅನ್ನ ಮತ್ತು ಕಾಳಿನ ಸಾರು ಮಾಡುತ್ತಾ ಮತ್ತೆ ವೆಂಕಿಯನ್ನು ರೇಗಿಸೋಣ ಅಂತ ಮತ್ತೆ ಕರೆ..

"ಲೋ.. ನಿನ್ನೆಯಿಂದ ಅದೇ ಜಾಗದಲ್ಲಿ ಅದೇ ಬಟ್ಟೆಯಲ್ಲಿ ಇದ್ದೀಯ.. ವಾಸನೆ ಬರ್ತಾ ಇದೆ ಕಣೋ" ಅಂದಾಗ.. ವೆಂಕಿ ಜೋರಾಗಿ ನಗುತ್ತಾ.. ಏನೋ ಹೇಳಲು ಹೋದ.. "ಆ ಕಡೆಯಿಂದ ವೆಂಕಿಯ "ಹೆಂಡತಿ" .. ಶ್ರೀಕಾಂತ್ ಅವರೇ ಇವರ ಬಗ್ಗೆ ನಿಮಗೆ ಗೊತ್ತಿಲ್ಲವಾ.. ಹೇಗಿದೆ ಜರ್ಮನಿ.. ಸತೀಶ್ ಅವರೇ ನಮಸ್ಕಾರ.. ಹೇಗಿದ್ದೀರಾ.. "

ಮುಂದೆ ನಮ್ಮ ತರಲೆ ಮಾತುಗಳು ಮುಗಿಯುವ ಹಂತಕ್ಕೆ ಬರಲೇ.. ಇಲ್ಲ.. ಮತ್ತೆ ವೆಂಕಿಗೆ ಶಿವರಾತ್ರಿ..

"ಲೋ ಮಕ್ಕಳ.. ನಿದ್ದೆ ಬರ್ತಾ ಇದೆ.. ಬಿಡ್ರೋ" ನಾವು ದಯೆ ತೋರಿಸುವ ಹಂತವನ್ನು ದಾಟಿದ್ದೆವು..

"ಲೋ ನಾಡಿದ್ದು ನಾ ಬೆಂಗಳೂರಿಗೆ ಬರುತ್ತೇನೆ.. ಆಗ ಮಾತಾಡೋಕೆ ಅವಕಾಶ ಸಿಗುತ್ತಾ.. ಮಾತಾಡ್ಲ.. ನಿದ್ದೆ ಮಾಡೋದು ಇದ್ದೆ ಇರ್ತದೆ.. "

ಇಬ್ಬರೂ ದಬಾಯಿಸಿದಾಗ.. ಗೆಳೆತನಕ್ಕೆ ಬೆಲೆ ಕೊಟ್ಟು ನಿದ್ದೆಯನ್ನು ಕೊಂಚ ದೂರ ತಳ್ಳಿ ನಮ್ಮ ಜೊತೆ ಮಾತಿಗಿಳಿದ.. ಮತ್ತೆ ಸುಮಾರು ಎರಡು ಘಂಟೆ..

ಊಟ ಮುಗಿಸಿ.. ಇವತ್ತು ವಾಕಿಂಗ್ ಮಾಡುವ ಮೂಡ್ ಇರಲಿಲ್ಲ.. ಬದಲಿಗೆ ಟಿವಿ ಹಾಕಿ ಟೆನಿಸ್ ಮ್ಯಾಚ್ ನೋಡುತ್ತಾ ಮಾತಾಡುತ್ತ ಹಾಗೆ ಮಲಗಿದೆವು..

ಮರುದಿನ.. ಬೆಳಿಗ್ಗೆ ಎದ್ದಾಗ.. ಸ್ವಲ್ಪ ತಡವಾಗಿತ್ತು..

"ಶ್ರೀ.. ಟ್ರೈನ್ ಹಿಡಿಬೇಕಾದರೆ.. ಓಡ ಬೇಕು.. ಸ್ವಲ್ಪ ಬೇಗಾ ಬಾ.. "

ಚಕ ಚಕ ಇಬ್ಬರೂ ಓಡಿದೆವು.. ಬಸ್ಸು ತಲುಪುವ ವೇಳೆಗೆ... ನಾ ತಿಂದಿದ್ದ ತಿಂಡಿ.. ಅರಗಿ ಹೋಗಿತ್ತು :-)

ಬಸ್ಸಿನಲ್ಲಿ ಕೂತು.. ಮುಂದಿನ ರೈಲು ನಿಲ್ದಾಣಕ್ಕೆ ಬರುವ ಹೊತ್ತಿಗೆ ಒಂದು ಸಣ್ಣ ನಿದ್ದೆಯೂ ಆಗಿತ್ತು..

ಅಲುಗಾಡದೇ ಓಡುವ ರೈಲು.. ತಿಂದಿದ್ದ ತಿಂಡಿ.. ತಣ್ಣನೆ ವಾತಾವರಣ.. ಬೇಡ ಎಂದರೂ ನಿದ್ದೆಯನ್ನು ಬರ ಸೆಳೆಯುತ್ತಿತ್ತು..

ಹೈಡಲ್ ಬರ್ಗ್ ಎನ್ನುವ ಪ್ರದೇಶಕ್ಕೆ ಬಂದಿಳಿದೆವು..
ಅಣ್ಣಾವ್ರ ಶಂಕರ್ ಗುರು ಚಿತ್ರ ನೆನಪಿಸಿದ ಕೇಬಲ್ ಕುರ್ಚಿ 



ಅಲ್ಲಿನ ಒಂದು ಅಂಗಡಿಯಲ್ಲಿ ಐಸ್ ಕ್ರೀಮ್ ತಿಂದು.. ನನ್ನ ಮತ್ತು ಜೆಎಂ ನ ಹಳೆ ನೆನಪನ್ನು ಹೊರ ತಂದಿತು.. ಒಮ್ಮೆ ಕೊರಮಂಗಲದಿಂದ ಸೈಕಲ್ ನಲ್ಲಿ ಬರುವಾಗ ವಿಪರೀತ ಮಳೆ.. ಹಾಕಿದ್ದ ಬಟ್ಟೆ ಒದ್ದೆ ಮುದ್ದೆಯಾಗಿತ್ತು.. ಒಂದು ಬೇಕರಿ ಮುಂದೆ ನಿಂತಾಗ ನಮ್ಮನ್ನು ನೋಡಿದ ಬೇಕರಿಯವ.. ಬಿಸಿ ಬಿಸಿ ಹಾಲು ಕೊಡ್ಲಾ ಅಂದ.. ನಾವಿಬ್ಬರೂ ಒಂದೇ ಉಸಿರಿನಲ್ಲಿ ಸೆವೆನ್ ಅಪ್ ಕೊಡಿ.. ಚಿಲ್ಡ್ ಇರಲಿ ಅಂದೆವು..
ನಮ್ಮನ್ನು ಮಂಗಗಳ ಹಾಗೆ ನೋಡಿದ ಅವನು.. ಯಾವುದೋ ಕಾಣದ ಊರಿನ ಮಂಗಗಳು ಅಂದುಕೊಂಡು ಎರಡು ಬಾಟಲ್ ಸೆವೆನ್ ಅಪ್ ಕೊಟ್ಟಾ.. ನಾವು ಅದನ್ನು ಮುಟ್ಟಿ ನೋಡಿ.. ಸರ್ ಚಿಲ್ಡ್ ಕೊಡಿ ಸರ್.. ಬೇರೆ ಕೊಡಿ.. ಅಂದಾಗ.. ಆವಾ ಕಿಸಕ್ ಅಂತ ನಕ್ಕಿದ್ದು ನಮಗೆ ಕಾಣಲಿಲ್ಲ..

ಹಿಡಿದುಕೊಳ್ಳಲಾರದೆ.. ಕಷ್ಟ ಪಟ್ಟು ಆ ತಣ್ಣಗಿನ ಬಾಟಲ್ ಹಿಡಿದು.. ಬಾಟಲ್ ಮುಗಿಸಿದ ನೆನಪು ಮೂಡಿ ಬಂತು..



ಕೇಬಲ್ ಕಾರ್ ಪಯಣ ಸೊಗಸು 

ಕೇಬಲ್ ಕಾರಿನಲ್ಲಿ ಬೆಟ್ಟದ ಮೇಲೆ ಏರಿ ಹೋಗುವ ಅನುಭವ ಸೂಪರ್ ಇತ್ತು.. ದಾರಿಯುದ್ದಕ್ಕೂ ಹಲೋ ಹಲೋ ಎನ್ನುವ ಜರ್ಮನ್ ಪ್ರಜೆಗಳ.. ಅತಿಥಿ ಭಾವ ಇಷ್ಟವಾಗುತ್ತಿತ್ತು.. ಕೇಬಲ್ ಕಾರಿನಲ್ಲಿ ಮೇಲೆ ಹೋಗಿ ಮತ್ತೆ ಐಸ್ ಕ್ರೀಮ್.. ಜೊತೆಯಲ್ಲಿ ಚಿಕ್ಕ ಪುಟ್ಟ ತಿನಿಸು.. ಜೊತೆಯಲ್ಲಿ ಬೇಜಾನ್ ಫೋಟೋಗಳು.. ಹಿತಕರವಾದ ಭಾವ ಮೂಡಿಸಿತ್ತು..

ಬೆಟ್ಟದ ಮೇಲೆ ಒಂದು ಪುಟ್ಟ ವಾಕಿಂಗ್ ಮಾಡಿ.. ಮತ್ತೆ ಇನ್ನೊಂದು ಬಗೆಯ ಕೇಬಲ್ ಕಾರಿನಲ್ಲಿ ಇಳಿಯುವ ಮಜಾ ಒಮ್ಮೆ ಎದೆ ಝಲ್ ಎನ್ನುತ್ತಿತ್ತು.. ಚಲಿಸುವ ಚೇರಿನಲ್ಲಿ ಕೂತು ಬೆಟ್ಟವನ್ನು ಇಳಿಯುವ ಪರಿ.. ಸೂಪರ್..

ಬೆಟ್ಟವನ್ನು ಇಳಿದು ಅಲ್ಲಿಂದ ಸ್ವಲ್ಪ ಮುಂದೆ.. ಸಾಗಿದರೆ.. ಸುಮಾರು ಐದು ನೂರು ವರ್ಷಗಳ ಹಿಂದೆ ಕಟ್ಟಿದ ಒಂದು ಕಟ್ಟಡ.. ಎರಡನೇ ಮಹಾಯುದ್ಧದ ಸಮಯದಲ್ಲಿ ಕೆಲವು ಭಾಗ ಜಖಂಗೊಂಡರೂ.. ಅದನ್ನು ಸಂರಕ್ಸಿಸಿ.. ಇಟ್ಟಿರುವ ರೀತಿ ಸೊಗಸಾಗಿದೆ.. ವೈನ್ ತಯಾರಿಕೆ ಮತ್ತು ಅದನ್ನು ಸಂರಕ್ಷಿಸುವ ರೀತಿ.. ಸೋಜಿಗಗೊಳಿಸುತ್ತದೆ.... ಅದರೊಳಗೆ ಒಂದು ಸುತ್ತು.. ಇನ್ನೂ ನೋಡಬೇಕೆನ್ನುವ ಹಂಬಲವಿದ್ದರೂ.. ಮುಂದಿನ ಟ್ರೈನ್ ಹತ್ತಬೇಕಾದ್ದರಿಂದ ಸಮಯದ ಅಭಾವ. ನಮ್ಮನ್ನು ಅಲ್ಲಿಂದ ಓಡಿಸಿತು..
ಐದು ಶತಮಾನಗಳಷ್ಟು ಹಳೆಯ ಅರಮೆನೆಯ ಸಮುಚ್ಚಯ 

ವೈನ್ ಕೂಡಿ ಇಡುವ ಸ್ಥಳ 

ನಾವು ಹೋಗುವ ರೈಲು ಹೋಗಿಯಾಗಿತ್ತು.. ಮುಂದಿನ ರೈಲಿಗೆ ಕಾದು ಕೂತಿದ್ದೆವು..

ನಿರ್ಜನ ನಿಲ್ದಾಣ 
ಅನೇಕ ಹಿಂದಿ ಭಾಷೆಯ ಚಿತ್ರಗಳಲ್ಲಿ ನೋಡಿದ ರೀತಿಯ ಜನ ರಹಿತ ರೈಲು ನಿಲ್ದಾಣ.. ಸುತ್ತಲೂ ಪ್ರಕೃತಿ. . ಇಲ್ಲವೇ ಮನೆಗಳು.. ನಿರ್ಜನ ಪ್ರದೇಶ.. ಸೂಪರ್ ಅನುಭವ..

ಮಾತಾಡುತ್ತಾ.. ಮತ್ತೆ ಮನೆಗೆ ಹೊರಟೆವು..

ಶ್ರೀ... ಇವತ್ತು ಫ್ರಾಂಕ್ಫರ್ಟ್ ನಲ್ಲಿ ಊಟ ಮಾಡಿ ಮನೆಗೆ ಹೋಗೋಣ.. ಮನೆ ಊಟ ಸಾಕಾಗಿದೆ ಅಲ್ವ..

ಬೇಡ ಗುರು.. ಆದರೆ ನಿನಗೆ ಸುಸ್ತಾಗಿದ್ದಾರೆ ಇಲ್ಲಿಯೇ ತಿಂದು ಹೋಗೋಣ .. ಆಗಲೇ ತಡವಾಗಿದೆ.. ಹೋಟೆಲಿನ ಊಟ ಮಾಡೋಣ

ಸರಿ ಒಂದು ಥಾಯ್ ಹೋಟೆಲಿಗೆ ಬಂದು.. ವೆಜ್ ಫ್ರೈಡ್ ರೈಸ್ ತಿಂದು.. ಮನೆಗೆ ಹೋಗುವ ಹಾದಿಯಲ್ಲಿ ಸೂಪರ್ ಮಾರ್ಕೆಟೀಗೆ ಹೋಗಿ.. ಮನೆಗೆ ಬೇಕಾಗಿದ್ದ ದಿನಸಿ ಜೆಎಂ ಖರೀದಿಸಿದ.. ಜೊತೆಯಲ್ಲಿ ನನಗೆ ಕೆಲವು ಉತ್ತಮ ಚೊಕೊಲೇಟ್ ಖರೀದಿಸಿದ..

ಮನೆಗೆ ಬಂದು ಕಾಲು ಚಾಚಿ ಮಲಗಿದಾಗ.. ನಿದ್ದೆ ಸುಯ್ ಅಂತ ಹಾರಿ ಬಂತು..

ಬೆಳಿಗ್ಗೆ ಬೇಗನೆ ಎದ್ದು.. ಬ್ಯಾಗ್ ಎಲ್ಲವನ್ನು ಸಿದ್ಧ ಪಡಿಸಿಕೊಂಡು.... ರವಾ ಇಡ್ಲಿ ತಿಂದು ಬಸ್ಸಿನಲ್ಲಿ ಕೂತಾಗ.. ಅರೆ ಇನ್ನೂ ಒಂದೆರಡು ದಿನ ಇಲ್ಲಿದ್ದಾರೆ ಸೊಗಸಾಗಿರುತ್ತಿತ್ತು.. ಅನ್ನಿಸುತ್ತಿತ್ತು.. ಆದರೆ ರೇ ರೇ..

ಜೆಎಂನ ಬೀಳ್ಕೊಟ್ಟು... ಫ್ರಾಂಕ್ಫರ್ಟ್ ವಿಮಾನ ನಿಲ್ದಾಣಕ್ಕೆ ತಲುಪಿದಾಗ ಏನೋ ಬಿಟ್ಟು ಹೋಗುತ್ತಿದ್ದೇನೆ ಎನ್ನುವ ಭಾವ..

ಫ್ರಾಂಕ್ಫರ್ಟ್.. ದೋಹಾ.. ಬೆಂಗಳೂರು.. ಮಧ್ಯದಲ್ಲಿ ಒಂದಷ್ಟು ಚಲನ ಚಿತ್ರಗಳು.. ಭಾರವಾದ ಮನಸ್ಸು ಒಂದು ಕಡೆ.. ಮತ್ತೆ ನನ್ನ ಮನದನ್ನೆ ಮತ್ತು ಮಗಳನ್ನು ನೋಡುತ್ತಿದ್ದೇನೆ ಎನ್ನುವ ಖುಷಿ.. ಮೊದಲ ವಿದೇಶ ಪ್ರವಾಸ ಕೊಟ್ಟ ಅನುಭವ... ಎಲ್ಲವೂ ಕಣ್ಣಲ್ಲಿಯೇ ಕಟ್ಟಿಕೊಂಡು.. ಬೆಂಗಳೂರಿನಲ್ಲಿ ಇಳಿದಾಗ.... ಕಾರು ಸಿದ್ಧವಾಗಿತ್ತು.. ಕಾರಿನ ಚಾಲಕ ನನಗೆ ಪರಿಚಯವಿದ್ದವರೇ..
ಎಲ್ಲಾ ಅನುಭವಗಳನ್ನು ಮಾತಾಡುತ್ತ ಮನೆಗೆ ಬಂದಿಳಿದಾಗ.. ಮಗಳು ಮತ್ತು ಮನದನ್ನೆ ತಬ್ಬಿಕೊಂಡು ಸ್ವಾಗತಿಸಿದರು..

ಪುಟ್ಟ ನಿದ್ದೆ ಮಾಡಿ.. ಬೆಳಿಗ್ಗೆ ಆಫೀಸಿಗೆ ಕಾರಿನಲ್ಲಿ ಪಯಣ... ಆಫೀಸಿನ ಕೆಲಸದಲ್ಲಿ ಮುಳುಗಿದ್ದರೂ.. ಹಿಂದಿನ ಒಂದು ವಾರದ ಪಯಣದ ಪಕ್ಷಿನೋಟ ಮನದಲ್ಲಿಯೇ ಚಲನಚಿತ್ರವಾಗಿತ್ತು..

ಐದು ದಿನಗಳ ಬಳಿಕ.. ಅಚಾನಕ್.. ಕಲ್ಲಿಕೋಟೆಗೆ ಹೋಗಬೇಕಾದ ಅವಕಾಶ ಒದಗಿಬಂತು.. ಸವಿತಾ ಮತ್ತೆ ಹೊರಗೆ ಹೋದರೆ ಕಾಲು ಮುರೀತೀನಿ ಅಂದಳು.. ನಗುತ್ತಾ.. ಆದರೂ ಹೋಗಿ ಬನ್ನಿ ಶ್ರೀ .. ಎಂದಳು.. ಮಗಳು ಅಪ್ಪಾ ಬರುವಾಗ ಬಾಳೆಹಣ್ಣಿನ ಚಿಪ್ಸ್ ತನ್ನಿ ಮರೀಬೇಡಿ ಅಂದಳು..

ಸರಿ ಶನಿವಾರ ಬೆಳಗಿನ ಜಾವ ಮೂರು ಘಂಟೆಗೆ ಮನೆಯ ಮುಂದೆ ಕಾರು ಬಂತು.. ಮೈಸೂರಿನತ್ತ ಪಯಣ.. ಮೈಸೂರಿಗೆ ಹೋಗಿ ನನ್ನ ಅಲೆಮಾರಿಗಳು ಪ್ರವಾಸದ ಖಾಯಂ ಡ್ರೈವರ್ ಕಾಮ್ ಗೆಳೆಯ ಸುನಿಲ್ ಭೇಟಿ ಮಾಡಿ ಅವರ ಜೊತೆಯಲ್ಲಿ ತಿಂಡಿ ತಿಂದು .. ವಾಯ್ನಾಡಿನ ಹಾದಿಯಲ್ಲಿ ಕಲ್ಲಿಕೋಟೆಯ ಕಡೆಗೆ ಪಯಣಿಸಿದೆವು..

ದಾರಿಯಲ್ಲಿ ಗಜರಾಜ ದರುಶನ ನೀಡಿದ.. ಜಿಂಕೆಗಳು ಸ್ವಾಗತಿಸಿದವು.. ಅದನ್ನೆಲ್ಲ ನೋಡುತ್ತಾ ಎಡಕಲ್ಲು ಗುಡ್ಡಕ್ಕ್ಕೆ ಬಂದೆವು...
ಸುಂದರ ಪ್ರದೇಶಕ್ಕೆ ನಾಲ್ಕು ವರ್ಷದ ಹಿಂದೆ ಭೇಟಿ ಕೊಟ್ಟಿದ್ದ ನೆನಪನ್ನು ತಾಜಾ ಮಾಡಿಕೊಂಡು.. ಅಲ್ಲಿಂದ ಕಲ್ಲಿಕೋಟೆಯ ಹಾದಿ ಹಿಡಿದೆವು..

ಅದ್ಭುತ ರಸ್ತೆ.. ಘಟ್ಟವನ್ನು ಇಳಿದು ಕಡಲಿನ ತೀರವನ್ನು ಸೇರುವ ನಮ್ಮ ಪಯಣ ಸುಂದರವಾಗಿತ್ತು.. ಒಮ್ಮೆ ಮಳೆ.. ಒಮ್ಮೆ ಚಳಿ.. ಒಮ್ಮೆ ಬಿಸಿಲು.. ಘಟ್ಟಗಳ ತಿರುವಿನಲ್ಲಿ ಸ್ವಾಗತಿಸುತ್ತಿದ್ದವು.. ಒಂದು ಇಳಿಜಾರಿನಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಮುಖ್ದ ತೊಳೆದು... ಮತ್ತೆ ಪಯಣ ಆರಂಭಿಸಿ.. ಕಲ್ಲಿಕೋಟೆ ತಲುಪಿದಾಗ ಸಂಜೆಯಾಗಿತ್ತು..




ಎಡಕಲ್ಲು ಗುಡ್ಡದ ಶಿಲಾಯುಗದ ಜನರ ಕಲಾಕೃತಿ.. 

ಸಮುದ್ರದ ತೀರಕ್ಕೆ ಹೋಗಿ.. ಬಿಸಿ ಬಿಸಿ ಪಾನಿಪುರಿ ತಿಂದು.. ಸಮುದ್ರಕ್ಕೆ ಹೋದಾಗ ಮಳೆ ಬರಬೇಕು ಎನ್ನುವ ಆಸೆಯನ್ನು ಈಡೇರಿಸಿಕೊಂಡು.. ಹಾಕಿಕೊಂಡಿದ್ದ ಬಟ್ಟೆ ಒದ್ದೆ ಮುದ್ದೆಯಾದರೂ ಲೆಕ್ಕಿಸದೆ ಮಳೆಯಲ್ಲಿಯೇ ನೆನೆದು ಬಂದೆ..

ಕೆಲಸ ಮುಗಿಸಿಕೊಂಡು.. ಆ ಚಳಿಯಲ್ಲಿಯೂ ಮತ್ತೆ ಮಳೆಯಲ್ಲಿ ನೆನೆದು.. ದಾರಿಯಲ್ಲಿ ಒಂದು ಅಂಗಡಿಯಲ್ಲಿ ಬಿಸಿ ಬಿಸಿ ಇಡ್ಲಿ ತಿಂದು.. ಬಸ್ಸಿನಲ್ಲಿ ಬಂದು ಮಲಗಿದಾಗ ರಾತ್ರಿ ಒಂಭತ್ತು ಘಂಟೆ.. ಬಟ್ಟೆ ಒದ್ದೆಯಾಗಿತ್ತು.. ಬ್ಯಾಗಿನಲ್ಲಿದ ಇನ್ನೊಂದು ಬಟ್ಟೆ ಹಾಕಿಕೊಂಡು ಹೊದ್ದಿಕೆ ಹೊದ್ದು ಮಲಗಿದೆ.. ಕಣ್ಣು ಬಿಟ್ಟಾಗ ಕೆಂಗೇರಿ ಬಸ್ ನಿಲ್ದಾಣ ದಾಟಿತ್ತು..

ಮನೆಗೆ ಬಂದು... ಒಂದೆರಡು ಘಂಟೆ ಮಲಗಿದೆ..
ಜೀವನದ ಕಡಲಿನ ಅಲೆಗಳು ಏನೇ ಹೊತ್ತು  ತರಲಿ ಎದುರಿಸುವೆ
ಎನ್ನುವ ಪೋಸ್.. 
ಮುಂದೆ ಅದ್ಭುತ ತಿರುವಿನಲ್ಲಿ ಕಾಲ ಓಡುತಿತ್ತು.. ಮುಂದೇ ... !

5 comments:

  1. Wow wonderful ಲೇಖನ ಬಹಳ ಚೆನ್ನಾಗಿ ಮೂಡಿಬಂದಿದೆ ಶ್ರೀ... ನಿಮ್ಮ ಗೆಳೆಯರ ಸಂಭಾಷಣೆ ಗೆಳೆತನ ಅಡುಗೆಯ ವೈಖರಿ ಬಗ್ಗೆ ಸುಂದರವಾದ ನಿನ್ನ ಬರಹದಲ್ಲಿ ಮೂಡಿಸಿರುವೆ ಹಾಗು ಗೆಳೆಯನ ಜೊತೆ ಕಳೆದ ಕ್ಷಣಗಳನ್ನು ಕಣ್ಣಿಗೆ ಕಟ್ಟುವಂತೆ ಬರದಿರುವೆ ಅದಕ್ಕೆ ಸಾಕ್ಷಿಯಂತೆ ಕ್ಯಾಮರಾದಲ್ಲಿ ಸೆರೆ ಹಿಡಿದಿರುವ ಚಿತ್ರಗಳು ಉತ್ತಮವಾಗಿದೆ ನಮ್ಮನ್ನೇ ಜರ್ಮನಿಯ ಪ್ರವಾಸ ಮಾಡಿಸಿರುವೆ ಒಂದು ಉತ್ತಮ ಬರವಣಿಗೆ ಶ್ರೀ
    ಹೀಗೆ ಬರಹಗಳು ಸಾಗಲಿ ಎಂದು ಆಶಿಸುವೆ

    ReplyDelete
    Replies
    1. ಧನ್ಯವಾದಗಳು ಪಿಬಿಎಸ್
      ಓದುಗರು ಕುಶ್ ಅಂದರೆ ನಾವು ಕುಶ್..

      Delete
  2. ನಿಮ್ಮೊಡನೆಯೇ ಪ್ರಯಾಣ ಮಾಡಿದ ಅನುಭವ ನನ್ನದಾಯಿತು. ಚಿತ್ರಗಳು ಲೇಖನದ ಸೊಬಗನ್ನು ಹೆಚ್ಚಿಸಿವೆ...ಬಂಗಾರಕ್ಕೆ ಕುಂದಣವಿಟ್ಟಂತೆ.

    ReplyDelete
    Replies
    1. ಧನ್ಯವಾದಗಳು ಗುರುಗಳೇ ನಿಮ್ಮ ಆಶೀರ್ವಾದ ನಮಗೆ ಆನೆಯ ಬಲ ಕೊಡುತ್ತದೆ ..

      ಧನ್ಯೋಸ್ಮಿ

      Delete
  3. nimma geletana bandhavyakke vandu salaam...heege munduvareyali nimma payana...

    ReplyDelete