Thursday, December 28, 2017

ಪ್ರಥಮಂ.. ವಕ್ರ ತುಂಡಂ ಚ ...................ಮುಂದುವರೆದಿದೆ - ಅಂತಿಮಭಾಗ

ಪ್ರಥಮಂ... ಮೊದಲನೇ ಭಾಗ
ದ್ವೀತೀಯಕಂ... ಎರಡನೇ ಭಾಗ
ತೃತೀಯಕಂ.. ಮೂರನೇ ಭಾಗ
ಚತುರ್ಥಕಮ್...ನಾಲ್ಕನೇ ಭಾಗ

ಪಂಚಮಂ - ಅಂತಿಮ ಭಾಗ .. ಮುಂದಕ್ಕೆ ಓದಿ.. :-)

ಕೆಲಸ ಮುಗಿಸಿಕೊಂಡು.. ಆ ಚಳಿಯಲ್ಲಿಯೂ ಮತ್ತೆ ಮಳೆಯಲ್ಲಿ ನೆನೆದು.. ದಾರಿಯಲ್ಲಿ ಒಂದು ಅಂಗಡಿಯಲ್ಲಿ ಬಿಸಿ ಬಿಸಿ ಇಡ್ಲಿ ತಿಂದು.. ಬಸ್ಸಿನಲ್ಲಿ ಬಂದು ಮಲಗಿದಾಗ ರಾತ್ರಿ ಒಂಭತ್ತು ಘಂಟೆ.. ಬಟ್ಟೆ ಒದ್ದೆಯಾಗಿತ್ತು.. ಬ್ಯಾಗಿನಲ್ಲಿದ ಇನ್ನೊಂದು ಬಟ್ಟೆ ಹಾಕಿಕೊಂಡು ಹೊದ್ದಿಕೆ ಹೊದ್ದು ಮಲಗಿದೆ.. ಕಣ್ಣು ಬಿಟ್ಟಾಗ ಕೆಂಗೇರಿ ಬಸ್ ನಿಲ್ದಾಣ ದಾಟಿತ್ತು..

ಮನೆಗೆ ಬಂದು... ಒಂದೆರಡು ಘಂಟೆ ಮಲಗಿದೆ.

ಮುಂದೆ ಅದ್ಭುತ ತಿರುವಿನಲ್ಲಿ ಕಾಲ ಓಡುತಿತ್ತು.. ಮುಂದೇ ... !

"ಶೀತಲ್ ಅಪ್ಪ ಕೇರಳದಿಂದ ನಿನಗಿಷ್ಟವಾದ ಬಾಳೆಕಾಯಿ ಚಿಪ್ಸ್ ತಂದಿದ್ದಾರೆ ಏಳು.. " ಮಲಗಿದ್ದ ಮಗಳನ್ನು ಎಬ್ಬಿಸುವ ಕಾರ್ಯದಲ್ಲಿ ನಿರತಳಾಗಿದ್ದಳು ಸವಿತಾ..

ಆ ಚಳಿಗೆ ಏಳಲು ಮನಸ್ಸು ಬಾರದೆ.. ಏಳದಿದ್ದರೆ ಕಾರ್ಯಕ್ರಮಕ್ಕೆ ಹೋಗಲಾಗೋಲ್ಲ ಅನ್ನುವ ಅರಿವಿದ್ದರಿಂದ ಬೇಸರದಿಂದಲೇ.. ಎದ್ದಳು ಮಗಳು..

ಗಡಿಬಿಡಿಯಲ್ಲಿ ಎದ್ದು ತಯಾರಿ ನೆಡೆಸಿದೆ .. ಕ್ಯಾಮೆರದ ಮೆಮೊರಿ ಕಾರ್ಡ್  ಫೋಟೋಸ್ ಕಂಪ್ಯೂಟರಿಗೆ ಹಾಕಿ.. ಪ್ರಾತಃವಿಧಿ ಮುಗಿಸಿ.. ಮನದನ್ನೆ ಮತ್ತು ಮಗಳ ಜೊತೆ ಹೊರಟೆ.. ಎಲ್ಲಿಗೆ ಅಂದಿರಾ..ಜೀವನದ ಒಂದು ಉತ್ತಮ ಮಜಲಿಗೆ..

ಅಪ್ಪ ಎನ್ನುವ ಶಕ್ತಿ ನನ್ನ ಆವರಿಸಿದ್ದು.. ಅವರ ಶಕ್ತಿಯ ಸ್ಫೂರ್ತಿಯಲ್ಲಿ ಲೇಖನಗಳನ್ನು ಬರೆದಿದ್ದು ನಿಮಗೆಲ್ಲ ಗೊತ್ತೇ ಇದೆ.. ಆದರೆ ಅವರ ಬಗ್ಗೆ ಒಂದು ಲೇಖನವನ್ನು "ಎಲ್ಲರಂತಲ್ಲ ನನ್ನ ಅಪ್ಪ" ಎನ್ನುವ ಕಥಾ ಮಾಲಿಕೆಗೆ ಬರೆದು ಕಳಿಸಿದ್ದೆ .. ಸಂಪಾದಕರು ನನ್ನ ಮೂಲಕ ಅಪ್ಪ ಬರೆಸಿದ ಬರಹವನ್ನು ಆಯ್ಕೆ ಮಾಡಿದ್ದರು.. ೩೭ ಲೇಖಕರ ಭಾವುಕ ಪೂರ್ಣ ಲೇಖನವನ್ನು ಒಂದು ಹೊತ್ತಿಗೆ ಮಾಡಿ ಅದರ ಬಿಡುಗಡೆಯನ್ನು ದಿನಾಂಕ ೦೨.೦೭. ೨೦೧೭ ರಂದು ಸಹಕಾರನಗರದ ಸಂಭಾಗಣದಲ್ಲಿ ನಿಗದಿಪಡಿಸಿದ್ದರು..

ಅಲ್ಲಿಗೆ ಹೋಗುತ್ತಿದ್ದೆವು.. ನನಗೆ ಸಂತೃಪ್ತಿ.. ಅಪ್ಪನ ಬಗೆಗಿನ ಲೇಖನ ಮುದ್ರಣ ಕಾಣುತ್ತಿದೆ.. ಮತ್ತು ಅದನ್ನು ಹಲವಾರು  ಓದುಗರನ್ನು ತಲುಪುತ್ತದೆ ಎಂದು.. ಸವಿತಾಳಿಗೂ ಖುಷಿ.. ಇಂತಹ ಭಾವಪೂರ್ಣ ಸಮಾರಂಭದಲ್ಲಿ ತಾನೂ ಜೊತೆಯಾಗಿರುವುದು .. ಕಾಲ ಏನೂ ನಿರ್ಧರಿಸುತ್ತೋ ಯಾರಿಗೆ ಗೊತ್ತು ಅಲ್ಲವೇ ..

ಎಲೆಯಲ್ಲಿ ಸುತ್ತಿ ಬೇಯಿಸಿದ ಕೊಟ್ಟೆ ಕಡಬು, ಖಾರ ಖಾರವಾಗಿದ್ದ ಚಟ್ನಿ.. ಆ ಚಳಿಗೆ ಹೇಳಿಮಾಡಿಸಿದ ಹಾಗಿತ್ತು.. ತಿಂದದ್ದು ಸಂತೃಪ್ತಿಯಾಗಿತ್ತು .. ನನಗೆ ಇನ್ನೊಂದು ಅಚ್ಚರಿ ಕಾದಿತ್ತು.. ನನ್ನ ಪ್ರಾಥಮಿಕ ಶಾಲಾದಿನಗಳ ಸ್ನೇಹಿತ ಸತೀಶ ಅಂದು ಪುಣೆಗೆ ವಿಮಾನ ನಿಲ್ದಾಣಕ್ಕೆ ಹೋಗುವ ಹಾದಿಯಲ್ಲಿ ಈ ಕಾರ್ಯಕ್ರಮವೂ ಇದ್ದದರಿಂದ.. ಶುಭಾಶಯ ತಿಳಿಸಿ ಹೋಗಲು ಬಂದಿದ್ದ..ಖುಷಿಯಾಗಿತ್ತು ನನಗೆ ..

ಫೋಟೋಗಳನ್ನು ತೆಗೆಯುತ್ತಿದ್ದೆ .. ಅಚ್ಚುಕಟ್ಟಾದ ಸರಳ ಸಮಾರಂಭ. ನಮ್ಮೆಲ್ಲರ ನೆಚ್ಚಿನ ಗುರುಗಳಾದ ಶ್ರೀ  ಗೋಪಾಲ ವಾಜಪೇಯಿ ಅವರ ನೆನಪಿನಲ್ಲಿ ವೇದಿಕೆಗೆ ಅವರ ಹೆಸರನ್ನೇ ಇಟ್ಟಿದ್ದರು.. ಹಾಗೂ ಅವರಿಗೆ ಗೌರವ ಪೂರ್ವಕ ನಮನಗಳನ್ನು ಸಲ್ಲಿಸಿದ್ದರು..

ಕಾರ್ಯಕ್ರಮದ ನಿರೂಪಣೆ ಸುಂದರವಾಗಿತ್ತು..  ಈ ಕಾರ್ಯಕ್ರಮಕ್ಕೆ ಚಲನಚಿತ್ರ ನಟ, ನಿರ್ದೇಶಕ ಶ್ರೀ ಸುರೇಶ ಹೆಬ್ಳಿಕರ್ ಬಂದದ್ದು ವಿಶೇಷವಾಗಿತ್ತು . ಆಗಂತುಕ ಎನ್ನುವ ಅದ್ಭುತ  ಸಿನಿಮಾದಲ್ಲಿ ಸುಂದರವಾದ ಯಾಣವನ್ನು ತೆರೆಯ ಮೇಲೆ ತೋರಿಸಿದ್ದು ಇವರೇ.. ಅದನ್ನ ಅವರ ಬಳಿ ಮಾತಾಡುವಾಗ ಖುಷಿ ಪಟ್ಟಿದ್ದು ಅರಿವಾಯಿತು.. ಶೀತಲ್ ಮತ್ತು ಸವಿತಾ ನಾ
ಶ್ರೀ ಸುರೇಶ ಹೆಬ್ಳಿಕರ್ ಜೊತೆಯಲ್ಲಿ ಮಾತಾಡುತ್ತಿದ್ದಾಗ ಸಂಭ್ರಮಪಡುತ್ತಿದ್ದರು..

ಕಾರ್ಯಕ್ರಮ ಮುಂದುವರೆಯಿತು.. ಪುಸ್ತಕ ಬಿಡುಗಡೆಯಾಯಿತು.. ವೇದಿಕೆಯಲ್ಲಿದ್ದ ಅತಿಥಿಯೊಬ್ಬರು.. ಪುಸ್ತಕದ ಕೆಲವು ಲೇಖನಗಳ ಬಗ್ಗೆ ಹೇಳುತ್ತಿದ್ದರು.. ನಾ ಫೋಟೋ ತೆಗೆಯುತಿದ್ದೆ ... ಅಷ್ಟರಲ್ಲಿ ಈ ಪುಸ್ತಕದ ಸಂಪಾದಕರಾದ ಶ್ರೀ ಗುರುಪ್ರಸಾದ್ ಕುರ್ತಕೋಟಿಯವರು ಇವರೇ ಅದನ್ನು  ಬರೆದದ್ದು ಎಂದು ನನ್ನ ಹೆಸರು ಹೇಳಿದಾಗ..  ಆಶ್ಚರ್ಯ ಮತ್ತು ಗಾಬರಿ..  ಏನಾಗುತ್ತಿದೆ ಎಂದು ಕೇಳಿದಾಗ.. ಅವರು ನಿಮ್ಮ ಬರಹದ ಬಗ್ಗೆ ಹೇಳುತ್ತಿದ್ದಾರೆ ಎಂದರು .




ಹೃದಯದ ಬಡಿತ ತಾರಕಕ್ಕೆ ಏರಿತ್ತು ..

ಸರಳ ಸಮಾರಂಭದ ಸಂಭ್ರಮವನ್ನು ಹೊತ್ತು ಕೆಳಗೆ ಕಾರಿನತ್ತ ಬಂದಾಗ.. ನಮ್ಮ ಅದ್ಭುತ ಗೆಳೆಯರು ಸೇರಿ  ಮತ್ತೊಮ್ಮೆ ನಮ್ಮ ನಮ್ಮ ಪುಸ್ತಕವನ್ನು ಬಿಡುಗಡೆ ಮಾಡಿಕೊಂಡೆವು.. ಸರಿ ಎಲ್ಲರಿಗೂ ಬೀಳ್ಕೊಟ್ಟು... ಹೊರಬಿದ್ದೆವು..


ಅಲ್ಲಿಂದ ತುಮಕೂರು ರಸ್ತೆಯ ಡಾಬಸ್ ಪೇಟೆ ಬಳಿಯಲ್ಲಿ ಸ್ನೇಹಲೋಕ ತಂಡ ತನ್ನ ಜನುಮದಿನವನ್ನುಆಚರಿಸಿಕೊಳ್ಳುತ್ತಿತ್ತು .. ಈ ತಂಡದ ಹಲವಾರು ಕಾರ್ಯಕ್ರಮಗಳನ್ನು ನೋಡಿದ್ದೇ..ಜೊತೆಯಾಗಿದ್ದೆ .. ಹಾಗಾಗಿ ಬರಲೇ ಬೇಕೆಂಬ ಪ್ರೀತಿ ಪೂರ್ವಕ ಒತ್ತಾಯವಿತ್ತು ..

ಸ್ನೇಹಲೋಕದ ಕಾರ್ಯಕ್ರಮ ನಾವು ಹೋಗುವ ಹೊತ್ತಿಗೆ ಮುಗಿದಿತ್ತು.. ಎಲ್ಲರೂ ಊಟ ಸವಿಯುವ ಹಂತಕ್ಕೆ ಬಂದಿದ್ದರು.. ತಡವಾಗಿದ್ದರೂ.. ನಾವು ಬಂದದ್ದು ಕಂಡು ಖುಷಿಪಟ್ಟರು .. ಅವರ ಜೊತೆಯಲ್ಲಿ ಒಂಧಷ್ಟು ಚಿತ್ರಗಳು.. ಅವರ ಜೊತೆಯಲ್ಲಿ ಊಟ,ಹರಟೆ  ಹಾಸ್ಯ.. .  ಸಂಭ್ರಮದ ಮೇಲೆ ಸಂಭ್ರಮ..  ಒಮ್ಮೆ ಆ ದೇವರು ಕೂಡ ಏನಪ್ಪಾ ಇಷ್ಟೊಂದು ಸಂಭ್ರಮ ಪಡುತ್ತಿದ್ದೀಯ ಅಂತ ಅನ್ನಿಸುವಷ್ಟು ..

ಆದರೆ ಆ ದೇವಾ ಎಂದಿಗೂ ಕಣ್ಣು ಹಾಕುವುದಿಲ್ಲ.. ಎಂದಿಗೂ ಅಸೂಯೆ ಪಡುವುದಿಲ್ಲ.. ಆದರೆ ಅವನ ಪುಸ್ತಕದಲ್ಲಿ ನೆಡೆಯಬೇಕಾದ್ದು ನೆಡೆಯಲೇ ಬೇಕು ಅಲ್ಲವೇ..

ಪ್ರೀತಿಯಿಂದ ಸ್ನೇಹಲೋಕದ ಬಳಗಕ್ಕೆ ಶುಭಾಶಯಗಳನ್ನು ಸಲ್ಲಿಸಿ.. ಎಲ್ಲಾ ಮಿತ್ರವೃಂದಕ್ಕೆ ತಿಳಿಸಿ ಹೊರಟೆವು..

"ಶ್ರೀ".. ... ದಬಕ್ ಟಪಾಕ್ ... ಡಬ್..

ಮುಂದೆ.. ಕಾಣದ ಕಡಲನ್ನು ಈಜುವ ಕಾಯಕದಲ್ಲಿ ಒಂಟಿಯಾದೆ..

ಸತಿ ಸಾವಿತ್ರಿಯ ಬಗ್ಗೆ ಕೇಳಿದ್ದೆ.. ಓದಿದ್ದೆ.. ಆದರೆ ಆ ಅನುಭವ ಅನುಭವಿಸಿರಲಿಲ್ಲ ..

ಭಗವಂತ ಸವಿತಾಳ ಮುಂದೆ  ಮೂವರಲ್ಲಿ ಒಬ್ಬರು ಎನ್ನುವ ಆಯ್ಕೆ ಇಟ್ಟಾಗ.. ಅವಳು ಆಯ್ದುಕೊಂಡದ್ದು ತನ್ನನ್ನೇ. ಐದು ದಿನಗಳ ಜೊತೆ ಆ ದೇವರ ಜೊತೆ ಗುದ್ದಾಡಿ .. ತಾನು ಅಳಿದು.. ನನ್ನ ಮತ್ತು ಮಗಳನ್ನು ಉಳಿಸಿದ ದೇವತೆಯಾಗಿ ಗಗನದ ತಾರೆಯಾದಳು ..

ಆನೆ ಇದ್ದರೂ ಲಕ್ಷ.. ಇಲ್ಲದೆ ಇರುವಾಗಲೂ ಲಕ್ಷ ಎನ್ನುವ ಹಾಗೆ.. ತಾನು ಅಳಿದು ನಮ್ಮಿಬ್ಬರನ್ನು ಮಾತ್ರ ಉಳಿಸದೆ.. ತನ್ನ ಅಮೂಲ್ಯ ದೇಹದ ಅಂಗಗಳನ್ನು ದಾನ ಮಾಡಿ ಏಳು ಕುಟುಂಬಗಳ ಬೆಳಕನ್ನು ಹಚ್ಚಿದ ಸವಿತಾ ಎಂದೂ ಮನದಲ್ಲಿ ಅಮರಳಾಗಿದ್ದಾಳೆ..


ಪ್ರಥಮಂ ವಕ್ರತುಂಡಂಚ..ಪದಗಳು .. ತಾನೇ ತಾನೇ ದೂರವಾಗಿ.. ವಕ್ರವಾಗಿ ನನ್ನ ಜೀವನವನ್ನು ಭಗವಂತನ ಅಣತಿಯ ಪ್ರಕಾರ ತುಂಡು ತುಂಡು ಮಾಡಿತು.. ಅದಕ್ಕಾಗಿ ಶೀರ್ಷಿಕೆ ವಿಚಿತ್ರವಾಗಿದೆ..

ಪ್ರಥಮ ಬಾರಿ ವಿದೇಶ ಪ್ರವಾಸ
ಪ್ರಥಮ ಬಾರಿ ಗೆಳೆಯನನ್ನ ಹೊರದೇಶದಲ್ಲಿ ಭೇಟಿ ಮಾಡಿ ಅವನೊಡನೆ ಸುತ್ತಾಡಿದ್ದು
ಪ್ರಥಮ ಬಾರಿ ಅಪ್ಪನ ಬಗ್ಗೆ ಒಂದು ಬರಹ ಪುಸ್ತಕದ ರೂಪದಲ್ಲಿ
ಪ್ರಥಮ ಬಾರಿ @#@#$%#$%#$#$

ಎಲ್ಲವೂ ಪ್ರಥಮ.. !!!

14 comments:

  1. ಮನಮಿಡಿದ ಬರೆಹ ಶ್ರೀಮನ್... ಆ ದಿನ ನನಗೂ ನೆನಪಿದೆ..ಜೀವನವನ್ನು ಹೀಗೆ ಕಾಣು ಎಂದು ಕಲಿಸುವುದೇ ನಮ್ಮ ನಮ್ಮ ಜೀವನ ಸಂಗಾತಿಯರು...

    ReplyDelete
  2. ನಿನ್ನ ಎಲ್ಲಾ ಬರಹಕ್ಕೆ ಏನಾದರೊಂದು ಕಾಮೆಟ್ ಹಾಕುತ್ತಿದ್ದೆ ಆದರೆ ಈ ಬರಹಕ್ಕೆ ಏನು ಅಂತ ಕಾಮೆಟ್ ಮಾಡಲಿ ಶ್ರೀ ಮನಸ್ಸು ತುಂಬ ಭಾರವಾಗುತ್ತಾ ಇದೆ ಪದಗಳು ಹುಡುಕುವ ಹಾಗಿದೆ ಕೀಲಿಮಣೆ ಮಬ್ಬಾಗಿ ಕಾಣುತಿದೆ ಹೀಗೊಂದು ದುರಂತದ ಅವಶ್ಯಕತೆ ಬೇಕಿತ್ತ ದೇವರು ನನ್ನ ಅಣ್ಣನಿಗೆ ಮೋಸ ಮಾಡಿದ ಹಾಗೆ ಮಾಡಬಾರದಿತ್ತು ಅನ್ಯಾಯವಾಯಿತು ಜೀವನದ ಒಂದು ತುಂಬಲಾರದ ದುಃಖ ನಷ್ಟ ಕಣೋ.......ಇನ್ನು ನಿನ್ನ. ಮುಂದಿನ ಜೀವನ ಶೀತಲ್ ಗೆ ಹಾಗು ಅವಳಿಗಾಗಿ ..................

    ReplyDelete
  3. ನಿನ್ನ ಉದಾಹರಣೆಯನ್ನಿಟ್ಡುಕೊಂಡು ಜೀವನದಲ್ಲಿ ಕಣ್ಣೀರು ಹಾಕಬಾರದೆಂದಿದ್ದೆ. ಸಾಧ್ಯವಿಲ್ಲ ಶ್ರೀ. ಭಾರವಾದ ಮನಸಿಗೆ ಅದೊಂದೆ ಅಸರೆ. ನಿನ್ನ ಬರಹ ಯಾವಾಗಲೂ ಅದ್ಬುತ.

    ReplyDelete
  4. ನಿಶ್ಯಬ್ದ ಕೂಡ ಒಂದು ಮೆಸೇಜ್

    ReplyDelete
  5. Devara lekka heladhe ella kodtane kottu keladhe thagothane vidhi niyama haage mathe ella olledhe kodtahogtane

    ReplyDelete
  6. ಶ್ರೀ ......ತಡವಾದರೂ ಸರಿ ನಿನ್ನ ಈ ಬರಹಕ್ಕೆ ಉತ್ತರಿಸುತ್ತಿದ್ದೇನೆ.
    'ಕಾಣದ ಕಡಲನು ಈಜುವಲ್ಲಿ ಒಂಟಿಯಾದೆ 'ಈ ಪದ ಜೋಡನೆ ನನ್ನ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ ಶ್ರೀ... ನಿನಗೆ ಅನ್ಯಾಯ ಮಾಡಿದ ಆ ದೇವರನ್ನು ಹೊಗಳುವ ನಿನ್ನ ಪರಿಶುದ್ಧ ಮನಸ್ಥಿತಿಯನ್ನು ಕಂಡು, ನಿನ್ನಂತೆ ನಾವು ಜೀವನವನ್ನು ರೂಢಿಸಿಕೋಳ್ಳಬೇಕು ಅನಿಸಿದೆ.
    ನೀನು ಶೀತಲ್ ಗೆ ಅಪ್ಪ ಅಮ್ಮ ಎರಡೂ ಆಗಿರು.ಮಗಳ ಏಳಿಗೆಯನ್ನು ಕಂಡು ಸಂತೋಷ ಪಡು ಗೆಳೆಯ.

    ReplyDelete
  7. ಎಷ್ಟು ಸಂತೋಷದಿಂದ ಓದುತ್ತಲಿದ್ದೆ. ನಿಶ್ಶಬ್ದವಾಗಿ ಸಿಡಿದ ಬಾಂಬಿನಂತೆ ಕೊನೆಗೆ ವಜ್ರಾಘಾತವಾಯ್ತು.

    ReplyDelete